ಹಿರಿದಾಗಿಯದ ಹಿಸಿದು ನಾರುವದನಂ ಮಾಡಿ |
ಅರಗಿನಂದದೊಳು ಸರಿಗೆಯ ಮಾಡಿಕೊಂಡು ಕ |
ತ್ತರಿಸುವುದು ಕಿಱಿದು ಪಾಕವನು ಬಾಳೆಯಹಣ್ಣಿನವೊಲು ಹಲಸಿನ ಹಣ್ಣಿನ ||
ಪರಿಯಾಗಿ ಮಾಡುವುದು ಕೆಲವ ನಾನಾ ಹಣ್ಣ |
ದೊರೆಯಾಗಿ ಮಾಡಿ ಪರಿಮಳದ ಚೂರ್ಣವ ತಳಿದು
ಯಿರಿಸಲದು ತಾನೆ ಸಕ್ಕರೆಯ ಕಜ್ಜಾಯಮೆಂದೆಂಬ ಹೆಸರಂ ಪಡೆದುದು || ೪೧ ||

ಬಿಳಿಯ ಸೊಜ್ಜಿಗೆಯ ಹುಡಿ ಬೀಸಿದಕ್ಕಿಯ ಹಿಟ್ಟು |
ಗಳನು ಸೋದಿಸಿಯವಂ ಸರಿಗೂಡಿ ಬಿಸಿಯುದಕ |
ದೊಳು ಕದಡಿ ಬೆಣ್ಣೆಯಂ ಜಡಿದರಿಸಿನವಯಿಕ್ಕಿ ಉಳ್ಳಿ ಸುಂಟಿಗಳ ಹಾಕಿ |
ಬಳಿಕ ಬೆರಳುಗಳನದ್ದಲು ಕದಿರ ತೋರದೊಳ |
ಗೆಳೆಯಾಗಲಾಯೆಳೆಗಳಂ ಕಾಯ್ವ ತಿಳಿದುಪ್ಪ |
ದೊಳಗೆಜ ನಾಲ್ಕೈದು ಸೂಳ್‌ ಬಿಡೆ ಗೀಜಗನ ಗೂಡಿನಂತೆ ಸುಪ್ಪವುಗಾದುದು || ೪೨ ||

ಹದನಾಗಿ ನೀರನಿರುಳೆಱೆದಿರಿಸಿ ಸೊಜ್ಜಿಗೆಯ |
ನುದಯದೊಳು ಮಿದುಡಿದಾರಸವ ನಾಲ್ಕೊಂದೆನಿಸಿ |
ಹದನಾಗಿ ಕಾದಹಾಲೊಳು ಬೆರಸಿ ಸಕ್ಕರೆಯನಿಟ್ಟೆರಡು ಭಾಗೆ ಮಾಡಿ |
ಅದಱೊಳೊಂದಂ ತೆಗೆದು ಒಲೆಗತ್ತಿ ಹಾಲುಂಡೆ |
ಹದದಲ್ಲಿ ತೊಳಸಿ ಹಲ್ಲೆಯ ಚೌಕದೊಳು ಕೊಯಿದು |
ಮೊದಲ ರಸದೊಳು ಇಳಿಯ ಬಿಡಲಮೃತಪಾನವೆಸರಂ ಧರಿಸಿ ಸವಿವಡೆದುದು || ೪೩ ||

ಸವೆದ ಗೋದುವೆಯ ಬಟ್ಟಂ ಸಣ್ಣಸಿಬೆಲೆಗಳ |
ಸವನಾಗಿ ಹಪ್ಪಳದಗಲದಲ್ಲಿ ಲತೆಯಿಱಿದು |
ಅವಕೆ ಹುರಿದೆಳ್ಳು ಸಕ್ಕರೆಯಿಕ್ಕಿ ಒಂದನಿಮ್ಮಡಿಸಿ ತುಪ್ಪದೊಳಗಡಲು ||
ಅವು ಕರಂಜಿಗೆಯಾದವವಱೆರಡು ಹಲ್ಲೆಯೊಳು |
ನವಸಕ್ಕರೆಯನಿಕ್ಕಿ ಹುದುಗಿ ಬೇಯಿಸಿ ತೆಗೆಯ |
ಲವು ಮಿಸುಪ ಸಕ್ಕರೆಯ ಬುರುಡೆಯೆನೆ ನೃಪಯೊಳಗೆ ತಡಹಿಕೊಂಡು || ೪೪ ||

ಸಣ್ಣ ಗೋದುವೆಯ ಹದನಾಗಿ ಹಿಟ್ಟಂ ಮಾಡಿ |
ಎಣ್ಣೆಯೊಳು ಕಲಸಿ ಹಪ್ಪಳದಂತೆ ಲತೆಯಿಱಿದು |
ಬೆಣ್ಣೆಯಂ ಬೆರಸಿದಕ್ಕಿಯ ಹಿಟ್ಟನವಱೆರಡು ಮೈಯೊಳಗೆ ತಡಹಿಕೊಂಡು ||
ನುಣ್ಣಿತಂ ಮಾಡಿಯಾ ಹಲ್ಲೆಯಂ ಸಲೆ ಸುರಳಿ |
ಬೆಣ್ಣೆವಿಟ್ಟಂ ತೊಡೆದು ಬೆರಳುದ್ದದೊಳು ಕೊಯ್ದು |
ಬೆಣ್ಣೆಗಾಸಿದ ತುಪ್ಪದೊಳು ಪಾಕಮಾಡೆ ಗುಜ್ಜರಿವೇಣಿವೆಸರಾದುದು || ೪೫ ||

ಬೆಳತಿಗಕ್ಕಿಯ ಹಿಟ್ಟ ಹೊಸ ಬೆಣ್ಣೆಯಿಂ ಕಲಸಿ |
ಬಿಳಿಯ ಕಣಿಕವನು ಸಮಗೂಡಿ ತೆಳುವಾಗಿ ಹ |
ಪ್ಪಳದಂತೆ ಲತೆಯಿಱೆದು ಬೆರಳಗಲದೊಳು ಕೊಯ್ದು ಹಿಟ್ಟಿಂಗೆ ಬೆಣ್ಣೆದಡವಿ ||
ಬಳಿಕ ಬಿಚ್ಚೋಲೆಯಂದದಿ ಸುತ್ತಿ ಹುಡಿಹಿಟ್ಟಿ |
ನೊಳಗದ್ದಿ ಲತೆಯಿಱೆದು ಸರಿಬೆಣ್ಣೆ ಸರಿದುಪ್ಪ |
ದೊಳಗೆ ಪಾಕವ ಮಾಡಿ ಪದರಿನೊಳು ಸಕ್ಕರೆಯನಿಡಲದುವೆ ಪೇಣಿಯಹುದು || ೪೬ ||

ಹದನಾಗಿ ನಾರುಹಱೆವಂತೆ ಕಣಿಕವ ಕುಟ್ಟಿ |
ಅದಱರ್ಧ ಬೆಣ್ಣೆ ಹೆಱೆದುಪ್ಪವ ಬೆರಸಿ ಮಿದಿವು |
ತದನು ಸೇವಗೆಯಂತೆ ಹೊಸೆದು ಸಣ್ಣಕ್ಕಿವಿಟ್ಟಿನೊಳು ಬೆಣ್ಣೆಯನು ಕಲಿಸಿ ||
ಅದಕಿಕ್ಕಿ ತಗಡಂತೆಯೊತ್ತಿ ಬಿಚ್ಚೋಲೆಯಂ |
ದದಿ ಸುತ್ತಿ ಮತ್ತೊಮ್ಮೆ ಬೆಣ್ಣೆವಿಟ್ಟಂತೊಡವು |
ತಡನೆರಡು ಸೀಳಾಗಿ ಕೊಯ್ದು ಸೀಱಱುವೆಯೊಳಗಿರಿಸಿ ಎಣ್ಣೆಯ ಬಿಡುವುದು || ೪೭ ||

ಬಳಿಕಮಾ ಹೋಳಿಂಗೆ ಸೀಱಱುವೆಯಂ ಕವಿಸಿ |
ಬಿಳಿಯಕ್ಕಿವಿಟ್ಟ ಸೋದಿಸಿ ಮತ್ತೆ ಹರಿಯಾಣಕೆ |
ತಳಿದುಕೊಂಡಾವುಂಡೆಯಂ ಕೊಯಿದು ಮುಖವ ಮೇಲಾಗುವಂತಿರಿಸಿಕೊಂಡು ||
ನಳಿಗೆಯಂದದಿ ತಿರಿಹಿ ತಿರಿಹಿ ಮುಖಗೆಡದೆ ಹ |
ಪ್ಪಳವನೊತ್ತುವ ಹಾಗೆಯೊತ್ತಿಯೊತ್ತಿದ ಮುಖಂ |
ತಳಗಾಗದಂತೆ ಮತ್ತೊಂದು ಸೀರೆಯ ಮೇಲೆಯಿರಿಸುವುದು ಹಂತಿಯಾಗಿ || ೪೮ ||

ಮತ್ತಮಾಲತೆಯಿಱಿದ ಪೇಣಿಗಳ ನಡುವನೊಳ |
ಗೆತ್ತಿ ಹೊಸ ತುಪ್ಪಮಂ ಸಲೆ ಕಾಯ್ವ ಬಾಳೆಲೆಯೊ |
ಳೊತ್ತಿದ ಮುಖಂ ಕಾಣ್ಬ ತೇಱದಲ್ಲಿ ಹಾಕಿ ತೆಂಗಾಯ ಗಪೆಯೆರಡ ಹಿಡಿದು ||
ಹತ್ತಿಗೆಯ ಬಿಡಿಸಿ ಕೆದಱೆಸಿ ಬಿದಿರ ಸಟ್ಟಗವ |
ನಿತ್ತಟ್ಟಿನೊಳು ಬೆಂದುದಂ ಹಿಡಿದು ತೆಗೆದಿರಿಸಿ |
ಯುತ್ತಮದ ಸಕ್ಕರೆಯನದಱ ಪದರೊಳು ತುಂಬಲದು ಬಿಚ್ಚುಪೇಣಿಯಾಯ್ತು || ೪೯ ||

ಬೆಟ್ಟ ತೋರದೊಳು ಪೊಸೆದಾಕಣಿಕಮಂ ಮೂಱು |
ಬೆಟ್ಟಗಲವಾಗುವಂದದಿನೊತ್ತಿಯದನೊಂದು |
ಬೆಟ್ಟಗಲ ತಟ್ಟಿ ಮುಪ್ಪಾಲಾಗಿ ಸೀಳಿಯಂತದಕೆ ಬೆಣ್ಣೆಯ ಬೆರಸಿದ |
ಹಿಟ್ಟುಮಂ ತೊಡೆದು ನೂಲುಂಡೆಯಂದದಿ ಸುತ್ತಿ |
ಸಟ್ಟಿಯೊಳಗೊತ್ತಿ ಪೇಣಿಯ ಮಾಡಿ ಬಾಳೆಲೆಯೊ |
ಳಿಟ್ಟು ಘೃತದೊಳು ಬಿಚ್ಚುಪೇಣಿಯಡುವಂದದೊಳಡಲು ಚೀರಪೇಣಿಯಾಯ್ತು || ೫೦ ||

ಕುಟ್ಟಿ ಕಣಿಕವನು ಹೆಬ್ಬೆಟ್ಟಂತೆ ಹೊಸೆದು ಮೂ |
ವೆಟ್ಟಗಲದೊಳಗೊತ್ತಿಯಂತದಕೆ ಹೊಸಬೆಣ್ಣೆ |
ವಿಟ್ಟುಮಂ ತೊಡೆದು ತೆಂಗಾಯ ಸಮದೊಳು ಸುತ್ತಿಯಿಪ್ಪೋಳು ಮಾಡಿ ಕೊಯಿದು ||
ತೊಟ್ಟನೆಯದಂ ಪರಿಯಣದೊಳೊತ್ತಿ ಲತೆಯಿಱೆದು |
ಕಟ್ಟಗಲವಾದ ಕೊಪ್ಪರಿಗೆಯೊಳು ತುಪ್ಪಮಂ |
ಬಿಟ್ಟು ಹರಿಯಣಸಹಿತಮಿರಿಸಿ ಬೇವಾಗದಱ ಸಮದ ಸಟ್ಟುಗವ ಹಿಡಿದು || ೫೧ ||

ಅದು ಮೇಲಕುಬ್ಬೆ ಸಟ್ಟುಗದಿ ಹಿಡಿದಿಱಿದಿಱಿದು |
ಪದರ ಪಸರಿಸಿಕೊಂಡು ಪೇಣಿಯಗಲಕ್ಕೆರಡು |
ಬಿದಿರ ಸಟ್ಟುಗವ ಮಾಡಿಸಿ ಕೀಳು ಮೇಲಿನೊಳು ಹಿಡಿದದಂ ತಿರುಹಿ ||
ಹದನಾಗಿ ಬೇಯಲಿಕ್ಕುಳದಲ್ಲಿಯದ ತೆಗೆವು |
ತದಱಗಲದೊಂದು ಚಿಬ್ಬಿಲಿನಲ್ಲಿ ತೆಗೆದಿರಸಿ |
ಪದರಿನೊಳು ಸಕ್ಕರೆಯನಿಕ್ಕಿ ಗಜಪೇಣಿಯೆಂದೆಂಬ ಪೆಸರಂ ಕರೆವುದು || ೫೨ ||

ಕುಂಬಳದ ಕಾಯ ಕೈಸೇವೆಗೆಯ ಸಮವಾಗಿ |
ಸಂಬಳಿಸಿಕೊಂಡೊಣಗಲಿಕ್ಕಿ ತಯಪ್ಪದೊಲಗಿಳಿ |
ಯಂ ಬಿಟ್ಟು ಹುರಿದು ಸಕ್ಕರೆಯ ಹೊಸ ಪಾಕದೊಳು ಕಟ್ಟುವುದು ಲಡ್ಡುಗೆಯನು ||
ಕುಂಬಳದ ಬಿತ್ತಿನೊಳಗಣ ತಿರುಳ ತುಪ್ಪದೊಳ |
ಗಿಂಬಾಗಿ ಹುರಿದು ಸಕ್ಕರೆಯ ನವಪಾಕಮಂ |
ತುಂಬಿ ಕಟ್ಟುವುದು ಮೆತ್ತನೆ ಹುರಿದು ಕಡೆಲೆಯಂ ಕಟ್ಟುವುದು ಲಡ್ಡುಗೆಯನು || ೫೩ ||

ಸೇವಂತಿಯೆಸಳನಕ್ಕಿಯ ಹಿಟ್ಟಿನೊಳು ನನಹಿ |
ಕಾವ ತುಪ್ಪದೊಳಟ್ಟು ಕಟ್ಟುವುದು ಲಡ್ಡುಗೆಯ |
ನಾವಾದ ಹೂ ಕಾಯನೀ ತೆಱದಿ ಹಸಮಾಡಿ ಕಟ್ಟುವುದು ಲಡ್ಡುಗೆಯನು ||
ಈ ವಿಧದಿ ಪರಡಿಗಹ್ವಲೆ ಸಣ್ಣಸರವಳಿಗೆ |
ಸೇವೆಗೆಯ ತುಪ್ಪದೊಳು ಹುರಿದು ಸಿತಪಾಕಮಂ |
ತೀವಿ ಕಟ್ಟುವುದು ಹೊಸ ಬತ್ತದರಳಿಂದೆ ಲಡ್ಡುಗೆಗಳಂ ಹಸಮಾಳ್ಪುದು || ೫೪ ||

ಒಡೆದ ಹಾಲಿನ ದುದ್ದು ನನೆಯಕ್ಕಿ ತೆಂಗಾಯ |
ನೊಡಗೂಡಿ ಕಡು ಸಣ್ಣವಾಗುವಂದದಿಯರೆದು |
ಕಡಲೆ ಕಡಲಡಯ ತೋರದುಂಡೆಯಂ ಮಾಡಿ ತುಪ್ಪದೊಳು ಹದನಾಗುವಂತೆ ||
ಅಡುಗೆಯಂ ಮಾಡಿ ಪರಿಮಳಂಗಳ ಪೊರೆಯ |
ಲಿಡುವ ಲಡ್ಡುಗೆಗಳಂ ಹಸನಾಗುವಂದದೊಳ್‌ ಕಟ್ಟಿ ಚತುರರ್ಗೀವುದು || ೫೫ ||

ಬಿಳಿಯ ಕಡಲೆಯ ಸಣ್ಣಹಿಟ್ಟ ಸೋದಿಸಿ ಹಾಲಿ |
ನೊಳಗಿಕ್ಕಿ ಸಂಪಳವ ಮಾಡಿ ತೆಂಗಿನ ಕರಟ |
ದೊಳಗೆ ಕಿಱುವೆರಲಗಾತ್ರದ ವೆಜ್ಜವಂ ಮಾಡಿ ತುಂಬಿ ತುಪ್ಪವನು ಕಾಸಿ ||
ಇಳಿಯಬಿಡೆ ಬುರುಬುರನೆ ಬೆಂದು ಹದನಾದುಂಡೆ |
ಗಳಿಗೆ ಸಕ್ಕರೆಯ ಪಾಕವ ಹೊಯ್ದು ನವ್ಯಪರಿ |
ಮಳವನಿಕ್ಕಿ ಕಟ್ಟಿ ಪೊಎರಯಲಡ್ಡುಗೆಗಳೆಂದು ಹೆಸರನೊಲವಿಂ ಕರೆವುದು || ೫೬ ||

ವಡೆಗೆ ಕಲಸುವ ತೆಱದಿ ಕಸಿದುದ್ದಿನ ಹಿಟ್ಟ |
ಕಡಲೆಯಂದದೊಳಗುಂಡೆಯ ಮಾಡಿ ತುಪ್ಪದೊಳು |
ಬಿಡುತ ಬೇಯಿಸಿ ಸಕ್ಕರೆಯ ಪಾಕದೊಳಗಿಕ್ಕಿ ಕಟ್ಟುವುದು ಲಡ್ಡುಗೆಯನು ||
ಕಡು ಬಿಳಿದು ಮಾಡಿದೆಳ್ಳಂ ಹುರಿದು ಹಸನಾದ |
ಗುಡಪಾಕದಲ್ಲಿ ಯಾಲಕ್ಕಿ ನವಕರ್ಪೂರ |
ವಿಡುತ ಲಡ್ಡುಗೆಗಳಂ ಕಟ್ಟಿ ಹಸನಂ ಮಾಡಿ ಭೋಗಿಜನಕೊಲಿದೀವುದು || ೫೭ ||

ತಱುಪಿನೆಮ್ಮಯ ಹಾಲ ನಾಲ್ಕೊಂದೆನಿಸಿ ಕಾಸಿ |
ನೆಱೆ ಸಣ್ಣನಾದಕ್ಕಿಹಿಟ್ಟಿನಿನಿಸಂ ಹೊಯ್ದು |
ನುಱುಗುವಪ್ಪಂತೆ ಹಿಟ್ಟಂ ತೊಳಸಿಯುಂಡಲಿಗೆವದನಾಗಲಿಳುಹಿಕೊಂಡು ||
ಕಿಱುಬಟ್ಟ ಮಾಡಿ ಸಕ್ಕರೆದುಪ್ಪವಂ ಕಲಸಿ |
ತುಱುಗಿಸಿಯವಂ ಮಡಿದು ಕರ್ಪುರಂ ಮೊದಲಾದ |
ನಱುಗಂಪ ಪೊರೆಯೊತ್ತಿ ಹಾಲಹೂರಣಗಡುಬುವೆಸರಾಂತು ಸವಿವಡೆದುದು || ೫೮ ||

ಹದನಾಗಿ ಕಾಯ್ದ ಹಾಲಿನ ಗಟ್ಟಿ ಕೆನೆದೆಗೆವು |
ತದನೊಂದು ತಳಿಗೆಯೊಳಗೆಱೆದೊಲೆಯೊಳೆತ್ತಿ ಕಾ |
ಯ್ದುದಕದಳಗೆಯ ಮೇಲೆ ಮಡಗಿ ತುಱುವೆಯ ಬೇರಿನಿಂ ತೊಳಸೆ ಮುದ್ದೆಯಬಹುದು ||
ಅದನಾತಳಿಗೆಯೊಳಗೆ ಹರಹಿಕೊಂಡರ್ಧಮಂ |
ಮಿದುಡಿ ಕಜ್ಜಾಯಮಂ ಮಾಡುವುದು ಮತ್ತೆಹುಳಿ |
ದುದ ಗಾಳಿಗಿರಿಸಿ ಸಕ್ಕರೆ ಹುಯಿದದಕೆ ಸೂಸಲು ಸಕ್ಕರೆವೆಸರಿಡುವುದು || ೫೯ ||

ಹೆಸರು ತಡಗುಣಿ ಕಡಲೆ ತೊಗರಿಗಳ ಬೇಳೆಯಂ |
ಹೊಸಬೆಲ್ಲವಿಕ್ಕಿ ಬೇಯಿಸಿಯರೆದುಕೊಂಡದಂ |
ಹಸಿಯಕ್ಕಿಯುದ್ದಿಟ್ಟ ಸರಿಗೂಡಿದಾ ಸಂಪಳೆಯೊಳುಳ್ಳಿ ಶುಂಠಿಯಿಕ್ಕಿ ||
ಹಸನಾಗಿ ಜಡಿದು ತುಪ್ಪವ ಕಾಸುತೊಂದೊಂದು |
ಮಿಸುಪ ಚೊಟ್ಟೆಯೊಳು ಬಿಡೆ ಬುಱುಬುಱನೆಯುಬ್ಬುವುದು |
ರಸಿಕರೂಟಕ್ಕೆ ಪಿರಿದುಂ ಯೋಗ್ಯವಾಗಿಮಾಬೋನವೆಸರಂ ತಳೆದುದು || ೬೦ ||

ತನಿವಾಲೊಳುಕ್ಕರಿಸಿದಕ್ಕಿ ತಣ್ಣೀರೊಳಗೆ |
ನನೆದಕ್ಕಿಯಿವನು ಸರಿಗೂಡಿ ಹಾಲೊಳಗರೆದ |
ದನು ಹರಿಯಣಕೆ ತಡಹಿ ಕಾಯ್ದಿರ್ದಳಗೆಯ ಮೇಲದ ಜೋಕೆಯಿಂದ ಕವಿಸಿ |
ಕೆನೆಯಂತಿರಾದವಕೆ ಕೆಲವಕ್ಕೆಯರೆದ ತೆಂ |
ಗಿನಕಾಯ ಹಾಲು ಕೆಲವಕ್ಕೆ ನೆಱೆಕಾಯ್ದ ಹಾ |
ಲನೆ ತೊಡೆದು ಸಕ್ಕರೆಯನಿಕ್ಕಿ ತವರಾಜನೆಂದೆಂಬ ಪೆಸರಂ ಕರೆವುದು || ೬೧ ||

ತಣ್ಣೀರಿನಿಂದ ತೊಳದಕ್ಕಿಯನು ಹಾಲೊಳಗೆ |
ಸಣ್ಣನಪ್ಫಂತರೆದು ಕದಡಿಯೊಳೆಯೊಳು ತೊಳಸಿ |
ಬೆಣ್ಣೆಯಂ ಹಾಕಿಯುಂಡಲಿಗೆವದದೊಳು ಇಳುಹಿ ಹಲ್ಲೆಗಡುಬುಗಳ ಮಾಡಿ ||
ನುಣ್ಣನೆಸೆವಾ ಕಡುಬನೊಲೆಗೆತ್ತಿ ಕಾಯ್ದು ಕುದಿ |
ವಣ್ಣೆವಾಲೊಳು ಮುಳುಗಲಿಕ್ಕಿ ಬೇಯಿಸಿ ತೆಗೆದು |
ಬೆಣ್ಣೆಗಡುಬೆಂದು ಹೆಸರಂ ಕೊಟ್ಟು ಸಿರಿಪಚ್ಚೆ ಯಾಲಕ್ಕಿಯಂ ತಳಿವುದು || ೬೨ ||

ತಳಿಸಿದಕ್ಕಿಯ ನನೆಹಿ ಕುಟ್ಟಿ ಸೋದಿಸಿಕೊಂಡು |
ತಿಳಿದುಪ್ಪದಿಂ ಕಲಸಿದುದ ನಾಲ್ಕಱೊಳಗೊಂದು |
ಬಿಳಿದು ಮಾಡಿದ ಹೆಸರಬೇಳೆಯಂ ಮುಗುಳ್ವದದಿನಟ್ಟರೆದು ಕಲಸಿಕೊಂಡು ||
ತಳಿಗೆಯೊಳಗಿರಿಸಿ ಹಾಲಂ ತಳಿದು ಕೆನೆಬೆಣ್ಣೆ |
ಗಳನಿಕ್ಕಿ ಮಿದುಡಿ ದುಗ್ಗಾಣಿಯಂದದಿ ಹಲ್ಲೆ |
ಗಳ ಮಾಡಿ ಕಾಯ್ದುಪ್ಪದೊಳಗಿಕ್ಕೆ ಬೆಂದು ಬುಱುಬುಱನುಬ್ಬಿದದುವೆ ಹದನು || ೬೩ ||

ಅದು ಬೇಯದದುದುರಿದೊಡೆ ಮತ್ತೊಮ್ಮೆ ಚೆನ್ನಾಗಿ |
ಮಿದುಡಿ ಗೋಳಕಗಳಂ ಮಾಡಿ ತುಪ್ಪದೊಳು ಸುಡ |
ಲದು ತಾನೆ ನಕ್ಷತ್ರಪೇನಹೆಱೆಯಂದದೊಳು ಮಾಡಿದುದದೆ ಚಂದ್ರಪೇನ |
ಅದನು ಬಳಿಕಂಗೈಯವೊಲು ಮಾಡಿ ಸುಡಲು ಬುದು |
ಬುದಫೇನ ಕರಜಿಗೆಯವೊಲು ಮಾಡಿ ಬೇಯಿಸಿದೊ |
ದಡು ಕರಜಿಗೆಫೇನಮಿಂತಿವಕೆ ತುಪ್ಪ ಸಕ್ಕರೆಯಿಕ್ಕಿ ಹಸಮಾಳ್ಪುದು || ೬೪ ||

ತಿಳಿದುಪ್ಪದೊಳು ಹುರಿದ ತೆಂಗಾಯ ಹುಡಿ ಬೆಂದ |
ಬಿಳಿಯ ಸೊಜ್ಜಿಗೆಯಿವಕೆ ಸಕ್ಕರೆಯ ಬೆರಸಿ ಪರಿ |
ಮಳವ ಪೊರೆಯೊತ್ತಿ ಸೊಪ್ಪಿಸಿವ ಮೆಣಸುಳ್ಳಿ ಶುಂಠಿಯನಿಟ್ಟು ಹೂರಣವನು ||
ಬಿಳಿಯುದ್ದಿನಿಂದ ಚಾರಿಸಿಕೊಂಡ ಸಣ್ಣ ಸಂ |
ಪಳೆಯೊಳಗೆ ತುಂಬಿ ತುಪ್ಪದೊಳು ಪಾಕಂ ಮಾಡಿ |
ಇಳುಹಿದುದು ತಾನೆ ಹೂರಣದೊಡೆಯೆನಿಸಿಕೊಂಡು ಹಿರಿದು ಸವಿಯಂ ಹಡೆದುದು || ೬೫ ||

ಉದ್ದಿನಿಂದರೆದ ಹೂರಣವ ಹೊಸ ಬೆಣ್ಣೆಯಂ |
ಮರ್ದಿಸಿದ ಕಣಿಕದುಂಡೆಯೊಳಿಟ್ಟು ತುಪ್ಪದೊಳ |
ಗದ್ದಿ ಬೇಯಿಸಲದಕೆ ಚಿತ್ರದೊಡೆಯೆಂಬ ಹೆಸರಾಯ್ತರೆದ ಕಡಲೆ ಹೆಸರು ||
ಉದ್ದ ಸರಿಗೂಡಿ ಸದೆಮೆಣಸುಳ್ಳಿಶುಂಠಿಗಳ |
ನುದ್ದಿಟ್ಟ ಹೂರಣಕ್ಕಾಕಣಿಕದೊಡೆಯುಮಂ |
ಹೊದ್ದಿಸಿಯವಂ ತುಪ್ಪದೊಳು ಪಾಕಮಾಡೆ ದಿಡ್ಡಣಿಗೆಯೊಡೆವೆಸರಾದುದು || ೬೬ ||

ವಡೆಯ ಬೇಯಿಸಿಕೊಂಡು ಚೆನ್ನಾಗಿ ನುಱುಕಿಸಿದ |
ಪುಡಿಯುಮಂ ತುಪ್ಪದೊಳು ಹುರಿದು ಹಾಲೊಡಪಿನಿಂ |
ದೊಡೆವೆರಸಿ ನೀರುಳ್ಳಿ ಶುಂಠಿಯಂ ಹಾಕಿ ಹೆಱೆದುಪ್ಪದೊಳು ಕಲಸಿಕೊಂಡು ||
ವಡೆಯಂತೆ ತಟ್ಟಿ ಕಣಿಕದ ಸಣ್ಣಬಟ್ಟಲುಮ |
ನಡಿಮೇಲೆ ಪರಿಮಳಂ ಬೆರಸಿ ಹುದುಗಿಸಿಯದಂ |
ಕಡುಗಂಪಿತಪ್ಪ ತುಪ್ಪದೊಳು ಪಾಕಂ ಮಾಡಲದು ಮುಸುಕಿನೊಡೆಯಾದುದು || ೬೭ ||

ಮೃದುವಾಗಿ ಪಾಕಮಾಡಿಡ್ಡಲಿಗೆಯಂ ಮೆಲ್ಲ |
ನುದುರಿಸಿದ ಬಳಿಕ ಮೆಣಸುಳ್ಳಿ ಕೊತ್ತಂಬರಿಯ |
ನದಱೊಳಗೆ ಹಾಕಿ ಹೆಱೆದುಪ್ಪದಿಂದವೆ ಬೆರಸಿ ವಡೆಯಂತೆ ತಟ್ಟಿಕೊಂಡು ||
ಅದಕೆ ಕರ್ಪೂರ ಮೊದಲಾದ ಪರಿಮಳಗಳನು |
ಹುದುಗಿ ಕಣಿಕದ ಬಟ್ಟಲಂ ಮುಚ್ಚಿ ತುಪ್ಪದೊಳು |
ಹದನಾಗಿ ಪಾಕಮಾಡಿಡ್ಡಲಿಗೆವಡೆಯೆಂದು ಪೆಸರಂ ಬುಧರು ಕರೆವುದು || ೬೮ ||

ಬಿಳಿಯುದ್ಧನೊಣಗಿಕ್ಕಿ ತರಿಮಾಡಿ ಬಿಸಿಯ ಹಾ |
ಲೊಳಗೆ ಕಲಸದಱ ಸರಿ ಕಣಿಕವನು ಬೆರಸೆಣ್ಣೆ |
ಯೊಳು ಕೂಡಿದಕ್ಕಿವಿಟ್ಟಂ ಕಣಿಕದರ್ಧವನು ಕೂಡಿ ಕೆನೆಬೆಣ್ಣೆಯಿಕ್ಕಿ ||
ಬಳಿಕ ಮಾಡಿದ ವಡೆಯುಮಂ ನೆಯಿದ ಬಿದಿರಗಪೆ |
ಯೊಳಗಿರಿಸಿಕೊಂಡು ಎಮ್ಮೆಯ ಬೆಣ್ಣೆಯಂ ಕಾಸಿ |
ಕೊಳುತ ಬಾಳೆಲೆಯ ತುಪ್ಪದೊಳು ತಳಮುಟ್ಟದಂತಡಲು ಗೌರೊಡೆಯಾದುದು || ೬೯ ||

ತಿಳಿದುಪ್ಪದಿಂದ ಬೆಂದೊಡೆಯನೆಮ್ಮೆಯ ಹಾಲಿ |
ನೊಳಗೆ ಬೇಯಿಸೆ ಹಾಲಿನೊಡೆಯಾಯ್ತು ಮೊಸರ ನೀ |
ರೊಳಗಟ್ಟು ಮೊಸರಿನೊಳಗಿಕ್ಕೆ ಮೊಸರೊಡೆಯೆಂಬ ಹೆಸರಾಯ್ತು ನೆಱೆಕಾಸಿದ ||
ಅಳಗೆಯೊಳಗಟ್ಟ ಪಳದೆಯೊಳು ಪಾಕಂ ಮಾಡಿ |
ಯಿಳಿಪೆ ಕಡಿವಡೆಯೆಂದೆನಿಸಿತು ಸಕ್ಕರೆಯುದಕ |
ದೊಳಗೆ ಹಸನಾಗಿ ಬೇಯಿಸಿಕೊಂಡು ಮಡಗಿದುದು ಸಿತಪಾಕದೊಡೆಯಾದುದು || ೭೦ ||

ಎರಡು ಸೂಳ್‌ ಪೊಸ ಬೆಣ್ಣೆಯಿಂ ಹಸಿಯ ಹಾಲಿನಿಂ |
ಪೊರೆಯೊತ್ತಿದುದ್ದಿನ ಬಿಳಿಯ ಬೇಳೆಯಂ ಕಲ್ಲೊ |
ಳರೆದು ಮತ್ತದಱ ಸರಿಬಸಿದಕ್ಕಿಹಿಟ್ಟು ಸರಿ ಕುದುಪಲಕ್ಕಿಯ ಹಿಟ್ಟನು ||
ಬೆರಸಿಕೊಂಡಾ ಕುದುಪಲಕ್ಕಿವಿಟ್ಟಿನೊಳುಳಿದ |
ತರಿಯ ನುಚ್ಚೋಗರದ ತೆಱದಿನೆಟ್ಟಿಱೆದು ಕ |
ತ್ತರಿಸಿದೆಳೆಯಲ್ಲ ನೀರುಳ್ಳಿ ಜೀರಿಗೆಯಿಕ್ಕಿಯಿರುಳು ಸಂಪಳೆ ಮಾಳ್ಪುದು || ೭೧ ||

ಉದಯದೊಳು ಸೆಕೆಯಳಗೆಯಲ್ಲಿ ಪಾವಡೆಗಟ್ಟಿ |
ಯದಱೊಳಗೆ ಸುಳಿವಾಳೆಯಂ ಹರಹಿ ಸಂಪಳೆಯ |
ನೊದಗಾಗಿಯೆಱೆದು ಮಡಕೆಯ ಮುಚ್ಚಿಯಟ್ಟೊಡುದ್ದಿನಕಡುಬುವೆಸರ ಹಡೆದು ||
ಬಿದಿರ ಕಿಱುಗೂಡೆಗಳನಿರಿಸಿ ಸಂಪಳೆಯನೆಱೆ |
ದವಕೆ ಮುಚ್ಚುಳ ಕಿಸಿ ಪಾಕವಂ ಮಾಡಲಿಡ್ಡಲಿಗೆವೆಸರಂ ಪಡೆದುದು || ೭೨ ||

……………………………………………………
……………………………………………………
…………………………………………………..
ಮೆತ್ತನಪ್ಪಂತು ಬೇಯಿಸಿ ತೆಗೆದು ಪರಿಮಳವ |
ನೊತ್ತರಿಸಿ ತೆಗೆದುಕೊಂಡಾ ಹೂರಣದ ಹೆಸರು |
ವೆತ್ತುದ್ದಿನಿಡ್ಡಲಿಗೆಯೆಂದು ನಾಮವನಿಟ್ಟು ತುಪ್ಪಸಕ್ಕರೆಯಿಡುವುದು || ೭೩ ||

ಹಿರಿದು ಹಸನಾದಿಡ್ಡಲಿಗೆಯ ಪಾಕಕ್ಕೆಂದು |
ಬೆರಸಿದಾ ಸಂಪಳೆಯನೊಲೆಯೊಳಗೆ ಕಾವಲಿಯ |
ನಿರಿಸಿ ತಿಳಿದುಪ್ಪಮಂ ತಡಹಿ ಚೊಟ್ಟೆಯೊಳದಂ ಗೇಣುಗೇಣಗಲ ಮಾಡಿ ||
ಬೆರದಪ್ಪದೋಳೆರಷೆದು ಬೆಂದ ಬಳಿಕಂತದಂ |
ತಿರಿಹಿ ದೋಸೆಯ ಬೇಯಿಸುವುದು ಮತ್ತೀ ತೆಱದಿ |
ಹುರುಳಿ ಕಡಲೆ ತಡಗುಣಿ ಹೆಸರಿನಿಂದಂ ದೋಸೆಯನು ಪಾಕಮಂ ಮಾಳ್ಪುದು || ೭೪ ||

ಬಿಳಿಯಕ್ಕಿಯುದ್ದಿಟ್ಟ ಸಣ್ಣ ಸಂಪಳೆಯೊಳಗೆ |
ಯೆಳೆಯಲ್ಲ ನೀರುಳ್ಳಿಯುಪ್ಪುಜೀರಿಗೆಯಿಕ್ಕಿ |
ಯಳಗೆಯೊಳ್‌ ನೀರನೆಱೆದದಱ ಮೊಗಳೊಳಗೆ ನುಂಪೆಸೆವ ಪರಿಯಣಮನಿರಿಸಿ ||
ಬಳಿಕದಂ ದೋಸೆಯಂದದಿ ಹುಯ್ದು ಮೇಲೊಂದು |
ಕಳಸಿಗೆಯ ಮುಚ್ಚಿ ಪಾಕಂ ಮಾಡಿ ಚಂದ್ರಮಂ |
ಡಲವೆಂದು ಹೆಸರಿಟ್ಟು ಬಟ್ಟವಾಲ್ತುಪ್ಪಸಕ್ಕರೆಯಿಕ್ಕಿ ಹಸಮಾಳ್ಪುದು || ೭೫ ||

ಅರೆದಕ್ಕಿಯುದ್ದಿಟ್ಟ ಸಂಪಳೆಯನೊಕ್ಕಣ್ಣ |
ಕರಟದೊಳ್ ತುಂಬಿ ಕೆಲವಂ ಕಾಯ್ದ ತುಪ್ಪದೊಳ |
ಗುರುಳಿಯಪ್ಪಂತು ಬಿಡೆ ಪೀಯೂಷಪಿಂಡಮಾದುದು ಕೆಲವ ಲತೆಯಂತಿರೆ ||
ಹರಿದುಬಿಡಲಮೃತವಲ್ಲರಿಯೆಂಬ ಹೆಸರಾಯ್ತು |
ಕರತಳದಲಪ್ಪದೊಲ್‌ ಬಿಡೆ ಜೇನುಕೊಡವೆಸರ |
ಧರಿಯಿಸಿಯೊಳಗೋಗುವಡೆದವು ಮತ್ತದಕೆ ಸಕ್ಕರೆಯ ಪಾಕವನಿಡುವುದು || ೭೬ ||

ಬಳಿಕಮಾಯಿಡ್ಡಲಿಗೆಗೆಂದು ಹಸಗೆಯ್ದ ಸಂ |
ಪಳೆಯೊಳಗೆ ವರ್ಣವಪ್ಪಂತರಿಸಿನವನಿಕ್ಕಿ |
ಬಿಳಿಯ ಬೆಲ್ಲವ ಬೆರಸಿ ಗುಳಿಯಾದ ಕಾವಲಿಯ ಕಲ್ಲಲಡಲೊಂದು ತೆಱನು ||
ತಿಳಿದುಪ್ಪಮಂ ಕಾಸಿದೊಕ್ಕಣ್ಣ ಕರಟದಿಂ |
ದಿಳಿಯಬಿಡಲೊಂದು ತೆಱ ನಿಲುಮಿಚಿಯ ಹಣ್ಣಂದ |
ದೊಳು ಮಾಡಿಯಡಲೊಂದು ತೆಱನಿಂತುಟೆಲ್ಲವಂ ವಿದಳದಿಂದನುಮಾಳ್ಪುದು || ೭೭ ||

ಇದು ಹರುಷದಿಂ ಲಾಲಿಸಿಕೇಳ್ವೆನೆಂದೆಂಬ |
ಸುದತಿಯರ ಕಿವಿಗೆ ಪೊಸಮಾಣಿಕದ ತಾಟಂಕ |
ಮಿದು ಕಲಿವೆನೆಂದೋದುವಬಲೆಯರಬಣ್ಣವಾಯ್ದೆರೆಗೆ ಪೀಯೂಷಪಿಂಡ ||
ಇದು ಪಾಕ ಮಾಳ್ಪೆನೆಂದುಜ್ಜುಗವ ಮಾಳ್ಪ |
ಚದುರೆಯರ ಕೈಗೆ ನವರನ್ನಮುದ್ರಿಕೆಯೆನಿಸಿ |
ತಿದಱೊಳಗೆ ರಾಜಹಿತಮಾದ ಬಹುಪಿಷ್ಟಪಾಕಾಧ್ಯಾಯಮಿದು ಸಮಾಪ್ತಂ || ೭೮ ||