ಸೂಚನೆ: ಹೀರೆಕುಂಬಳ ಹಾಲುಗುಂಬಳ ಪನಸಫಲದ |
ಸಾರತರ ಶಾಕಭೇದವ ನಾನು ಬಲ್ಲನಿತ |
ಚಾರ ಚಂದ್ರಾನನೆಯರಱೆವಮಾಳ್ಕೆಯೊಳಾನುರಾಗದಿಂದವೆಯುಸುರ್ವೆನು ||

ಹೀರೆಯೆಳೆಗಾಯ ಕುಯಿದಾಕ್ಷಣದಿ ತಂದದಱ |
ಧಾರೆಯಂ ಕೆತ್ತಿ ಸಂಬಳಿಸಿ ಸೆರೆದುಪ್ಪ ಸೆರೆ |
ನೀರುಪ್ಪು ನೀರುಳ್ಳಿ ಕರಿಬೇವು ಕೊತ್ತುಂಬರಿಯನಿಕ್ಕಿ ಒಲೆಯೊಳೆತ್ತಿ ||
ನೀರಿಂಗಿ ತುಪ್ಪವುಣ್ಣುವವೊಲುಕ್ಕರಿಸಿ ಸಂ |
ಭಾರಮಂ ಪರಿಪರಿಯ ಸವಿಮಾಡಿಕೊಂಡವಕೆ |
ಪೂರೈಸಿ ಪೊಡ್ಡಣಿಗೆಯಂ ಕೊಟ್ಟು ಪರಿಮಳವನಿಕ್ಕಿ ಹಸನಂ ಮಾಳ್ಪುದು || ೧ ||

ಎಳೆವದದ ಧಾರೆ ಹೀರೆಯ ಕಾಯನುಕ್ಕರಿಸಿ |
ಬಳಿಕವಱ ತೊಟ್ಟಿನ ಬಳಿಯ ತೋಡಿಯಾ ತಿರುಳ |
ಕಳೆದು ನಾಲ್ಕೈದು ಭಾಗೆಯ ಮಾಡಿಯೊಂದಕ್ಕೆ ಬೆಲ್ಲ ಸೂಸಲನು ತುಂಬಿ ||
ತಿಳಿದುಪ್ಪದೊಳು ಹುರಿದು ತೆಂಗಾಯ ಸಕ್ಕರೆಯ |
ನೆಳೆಯಲ್ಲ ಸಹಿತಮೊಂದಕೆ ತುಂಬಿ ಸಂಭಾರ |
ಗಳನೆಲ್ಲವಂ ಕಲಸಿವೊಂದಕ್ಕೆ ತುಂಬಿ ಮುಗುಳ್ವದನಾದ ಸೊಜ್ಜಿಗೆಯೊಳು || ೨ ||

ಸಕ್ಕರೆಯ ಬೆರಸಿಯೊಂದಕ್ಕೆ ತುಂಬಿ ಮತ್ತೊಂ |
ದಕ್ಕೆ ಹೀರೆಯಕಾಯಪುಡಿಯುಮಂ ಪೊಡ್ಡಣಿ |
ಯಿಕ್ಕಿ ಪೂರೈಸಿ ಮತ್ತೊಂದಕ್ಕೆ ಸಬ್ಬಸೀಗೆಯ ಸೊಪ್ಪ ಸಲೆ ತಾಳಿಸಿ ||
ಇಕ್ಕಿ ಮತ್ತೊಂದಕ್ಕೆ ಒಡೆದ ಹಾಲಿನ ದುದ್ದ |
ನಿಕ್ಕಿಯುದ್ದಿನಚೂರ್ಣ ನಸುಬೆಲ್ಲವಂ ತುಂಬಿ |
ಚೊಕ್ಕಟಂಬಡೆದ ತುಪ್ಪದೊಳು ಒಗ್ಗರಿಸಿ ಪರಿಮಳಂಗಳ ಪೊರೆಯಿಡುವುದು || ೩ ||

ಹಸನಾಗಿ ಶೋಧಿಸಿದ ಸಬ್ಬಸೀಗೆಯ ಸೊಪ್ಪ |
ಹಸಿಯಲ್ಲ ನೀರುಳ್ಳಿಯಿಕ್ಕಿ ತಾಳಿಸಿಕೊಂಡು |
ಹೊಸತುಪ್ಪ ನೀರಿಂದಲುಕ್ಕರಿಸಿಕೊಂಡು ಹೀರೆಯಕಾಯ ಹೋಳುಗಳನು ||
ಕುಶಲಮಂ ಮಾಡಿ ಚೆನ್ನಾಗಿ ಸಂಭಾರಮಿ |
ಟ್ಟೊಸೆದವಱೊಳೊಡಗಲಸಿ ಪೊಡ್ಡಣಿಗೆಯಂ ಕೊಟ್ಟು |
ಬಿಸಿಯಾಱದಂತೆ ಸೆಖೆಯಳಗೆಯೊಳಗಿರಿಸಿ ಪರಮಳದಿಂದ ಭಾವಿಸುವುದು || ೪ ||

ಮತ್ತಳೆಯ ಹೀರೆಗಾಯಂ ತಾಳಿಸಿಯೆ ಕೊಂಡು |
ಹತ್ತೆಂಟು ಬಗೆಯ ಕೊಣಬಂ ಕಾಸಿ ಪೊಡ್ಡಣಿಗೆ |
ಯಿತ್ತು ಮತ್ತವಱೊಳಗೆ ಹಾಕಿ ಮತ್ತೊಮ್ಮೆ ಸಮತಳವಿಕ್ಕಿ ನರೆಯಕೊಟ್ಟು ||
ಉತ್ತಮದ ಹೂವಿಂದ ಹುರಿದು ಹಸನಾಗಿ ಪೊರೆ |
ಯೊತ್ತಿ ಕಂಪೆಸೆವ ಕಡಲೆಯ ಸಣ್ಣ ಹಿಟ್ಟನೊಸೆ |
ದಿತ್ತವಱ ಹೆಸರ ಕೊಣಬಿನ ಹೀರೆಗಾಯೆಂದು ಹೆಸರಿಟ್ಟು ಹಸಗೆಯ್ವುದು || ೫ ||

ನಾರು ಬಲಿಯದ ಹೀರೆಯೆಳೆಗಾಯ್ಗಳಂ ತಂದು |
ಧಾರೆಯಂ ಕೆತ್ತಿ ಕಡಿಯಕ್ಕಿಯುದ್ದವರೆಗಳ |
ತೋರದೊಳು ಕತ್ತರಿಸಿ ತುಪ್ಪ ನೀರುಪ್ಪು ನೀರುಳ್ಳಿ ಶುಂಠಿಗಳನಿಕ್ಕಿ ||
ನೀರು ಬತ್ತು ತೆಱದಿ ಹುರಿದು ಬೇರ್ಪಡಿಸಿ ಸಂ |
ಭಾರಮ ಪಲಬಗೆ ಸವಿಯ ಮಾಡಿಯೊಂದಕ್ಕೆ |
ಪೂರೈಸಿ ಬಳಿಕ ಪೊಡ್ಡಣಿಗೆಯಂ ಕೊಟ್ಟು ಬಾಳೆಯ ತಱಗಿನೊಳಗಿಡುವುದು || ೬ ||

ಕೆಲವ ದಧಿಸಾರಿಕೆಯ ಕೆಲವ ಸಕ್ಕರೆಗಾಯ |
ಕೆಲವ ಭಂಜಿತ ಶಾಕಮಂ ಕೆಲವ ಮುಗುಳ್ಗಾಯ |
ಕೆಲವ ನವಜಿಹ್ವೆಯ ಸೊದೆಯ ಕೆಲವ ತುಳುವಗಾಯಂ ಕೆಲವ ಶೂಲ್ಯಕವನು ||
ಕೆಲವ ಸಂಪೂರ್ಣವಟ್ಟಿಯ ಕೆಲವ ಕಹರಿಯಂ |
ಕೆಲವ ಪೊಸ ಪಲ ತೆಱದ ಶಾಕವಂಗಿಯ ಮಾಡಿ |
ಹಲವು ಚಂದದೊಳು ಹೀರೆಯಕಾಯ ಪಾಕಮಂ ಹಿರಿದಾಗಿ ಹಸ ಮಾಳ್ಪುದು || ೭ ||

ತಿಳಿನೀರಿಗಕ್ಕಿಗಚ್ಚಂ ಪೊಯ್ದು ಬಲಿದ ಕುಂ |
ಬಳದ ಕಾಯನು ಗಾತ್ರಮಾಗಿ ಕುದಿಯಿಕ್ಕಿಯದ |
ಱೊಳಗಿನಿಸು ಹಾಲನೆಱಿದಿನಿಸಕ್ಕಿಯಿನಿಸು ತೆಂಗಿನ ಕಾಯಿ ಸುಣ್ಣವಿನಿಸು ||
ಬಿಳಿಯ ಸೊಜ್ಜಿಗೆಯುಪ್ಪು ಕರಿಬೇವು ಮಾದಲದ |
ತಳಿರು ಜೀರಿಗೆ ಮೆಂತೆಯದ ಚೂರ್ಣಮಿಕ್ಕಿ ಮು |
ಚ್ಚುಳನು ತೆಗೆಯದೆ ಉಕ್ಕಬಿಡದೆ ಚೆನ್ನಾಗಿ ಹದನಱಿದುಕ್ಕರಿಸಿಕೊಂಬುದು || ೮ ||

ಮೊಸರೊಳಗೆಯುಪ್ಪು ಮೆಣಸಿನ ಬೇಳೆಯಂ ಹಾಕಿ |
ನಸುಹುಳಿಯ ಹಿಂಡಿ ಹಪ್ಪಳದ ಹುಡಿ ತೆಂಗಾಯ |
ಕುಸುರೆಯನರೆದು ಸಣ್ಣ ಕರಿಬೇವು ಕೊತ್ತುಂಬರಿಯನಿಕ್ಕಿ ಜಡಿದುಕೊಂಡು ||
ಹೊಸ ತಾಳಹೂವಿನೊಂದೆಸಳುಮಂ ಹಾಕಿ ಕಡು |
ಹಸನಾಗಿ ಮೊದಲು ಬೆಂದ ಕುಂಬಳದ ಕಾಯನು |
ಬಸಿದುಕೊಂಡದಱೊಳಗೆಹಾಕಿ ಒಂದೆರಡು ಕುದಿಗೊಳಿಸಿ ಬೇಯಿಸಿಕೊಂಬುದು || ೯ ||

ಮತ್ತೊಂದು ಬೆಸಳಿಗೆಯ ತೊಳೆದುಕೊಂಡದಕೆ ನರೆ |
ಯಿತ್ತದಂ ಪೊಯ್ದು ಕರಿಬೇವು ಮಾದಲವಿಕ್ಕಿ |
ಕೊತ್ತುಂಬರಿಯ ಗಂಟು ಸುಟ್ಟ ಹಪ್ಪಳದ ಮುಱಿಯೆಳೆಯಲ್ಲ ನೀರುಳ್ಳಿಯ ||
ಚಿತ್ತಳಿಯ ಹಾಕಿ ಮೇಲೊಂದು ಬೆಸಳಿಗೆಯುಮಂ |
ಮತ್ತದಕೆ ಮುಚ್ಚಿ ಪಾವಡೆಗಟ್ಟಿ ಸೀಱುಮ |
ಣ್ಣಿತ್ತು ಸೆಖೆಗೊಳಿಸಲದು ತಾ ಜಿಹ್ವೆಸೊದೆಯೆಂಬ ಕೂಷ್ಮಾಂಡಪಾಕವಾಯ್ತು || ೧೦ ||

ಬಲಿದ ಕುಂಬಳಕಾಯ ಸಿಪ್ಪೆಯಂ ಕಡಿದಿರಿಸಿ |
ಯಿಲುಮುಚಿಯ ತೋರದೊಳು ಕತ್ತರಿಸಿಸುರಿಗೆಯೊಳು |
ಬಳಿಕ ಬೆಸಳಿಗೆಯೊಳು ಪಸರಗೆಯ್ದು ಕೆಂಪಾಗುವಂದದಿಂ ಕಾಸಿಕೊಂಡು ||
ಸಿಲುಪಾದ ಮೊಸರಿನೊಳು ಹುಳಿ ಮೆಣಸು ಕರಿಬೇವಿ |
ನೆಲೆಯರಿಸಿನವನಿಕ್ಕಿಕೊಂಡದಂ ಮತ್ತೊಮ್ಮೆ |
ಬಲುಗೆಂಡದೊಳು ಕಾಸಿ ತುಪ್ಪಮಿಡೆ ಕೂಷ್ಮಾಂಡಖಂಡಶೂಲ್ಯಕಮೆನಿಸಿತು || ೧೧ ||

ಮಿಗೆ ಬಲಿದ ಕಗ್ಗುಂಬಳದ ಕಾಯ ಗೇಣು ಗೇ |
ಣಗಲದಲಿ ಕತ್ತರಿಸಿಕೊಂಡದಱ ಪಚ್ಚೆಯಂ |
ತೆಗೆಯದಾಬೀಜಮಂ ಬಿಸುಟು ಚಲ್ಲಿಸಿಯಳೆಯೊಳುದಕಮಂ ಬೆರಸಿಕೊಂಡು ||
ಮಗಮಗಿಪ ಮೆಂತೆಯದ ಚೂರ್ಣ ಕರಿಬೇವು ಜೀ |
ರಗರಯರಿಸಿನವನಿಕ್ಕಿ ಮೊದಲು ಚಲ್ಲಿಸಿದ ಹೋ |
ಳಿಗೆ ಹಾಕಿ ಮೈದುವಪ್ಪ ತೆಱದಿನುಕ್ಕರಿಸಿ ಬಸಿದಾದ್ರವವ ಹಿಂಡಿಕೊಂಡು || ೧೨ ||

ಕಡಲೆಯ ಬಿಳಿಯ ಬೇಳೆಯಿಂದ ಹಸನಾಗಿಯ |
ಟ್ಟೊಡೆಯನಾ ಬೇಳೆಯಂದದಿ ಕುಯಿದು ತೆಂಗಾಯ |
ಕಡಿವ ತೆಱದಿಂದ ಮತ್ತವನು ತುಪ್ಪದಿ ಹಾಕಿ ನೀರುಳ್ಳಿ ಹಸಿಯಲ್ಲದ ||
ಹುಡಿಯ ತುಪ್ಪದಿ ಹುರಿದು ಮತ್ತಮಾಹೋಳುಗಳ |
ನಡುವಳಿಯ ಕತ್ತಿಯೋಳು ಸೀಳಿಕೊಂಡಾಪದರಿ |
ಗಿಡಿದು ಕರಿಬೇವು ಕೊತ್ತುಂಬರಿಯ ಸೊಪ್ಪಿಕ್ಕಿ ನಾರಿಂದವಂ ಬಿಗಿವುದು || ೧೩ ||

ಪಿರಿದಾದ ನೀರುಳ್ಳಿಯಂ ಕುಂಬಳದ ಕಾಯ |
ಮರಿಯಾದೆಯೊಳು ಅಟ್ಟು ಮತ್ತೊಮ್ಮೆ ತುಪ್ಪದೊಳು |
ಹುರಿದಿರಿಸಿ ತೆಂಗಾಯಿ ಮೆಣಸುಳ್ಳಿ ಹಾಲದುದ್ದಕ್ಕಿಗಳನರೆದುಕೊಂಡು ||
ಬೆರಸಿ ಮೊಸರೊಳಗೆ ನಸು ಹುಳಿಯಿಕ್ಕಿ ಕೊಣಬಟ್ಟು |
ಹೆಱಿದುಪ್ಪಮಿಕ್ಕಿ ಹಪ್ಪಳ ಶುಂಠಿ ನೀರುಳ್ಳಿ |
ಕರಿಬೇವು ಕೊತ್ತುಂಬರಿಯನಿಕ್ಕಿ ಚೆನ್ನಾಗಿ ನರೆಯಿತ್ತು ಜಡಿದುಕೊಂಡು || ೧೪ ||

ಮತ್ತೊಂದು ಮಡಕೆಯಂ ಲೋಭಾನ ಧೂಪದಿಂ |
ದೊತ್ತರಿಸಿ ಉತ್ತಮದ ಮಾದಲ ಲವಂಗಗಳ |
ನಿತ್ತೊಳಗೆ ಚೆಂಗಣಿಗಿಲೆಯ ಎಳೆಯ ಕೋಷ್ಠಕಗಳನರೆದುಕೊಂಡದಕೆ ತೊಡೆದು ||
ಕತ್ತುರಿಯ ಧೂಳು ಕರ್ಪುರದಪುಡಿ ಪನಿನೀರ |
ನೊತ್ತರಿಸಿ ತುಪ್ಪಮಂ ತೊಡೆದು ಕೇದಗೆಯ ಹೂ |
ಕೊತ್ತುಂಬರಿಯನಿಕ್ಕಿ ಮೊದಲು ಕಾಸಿದ ಕೊಣಬನಾ ಮಡಕೆಯೊಳಗೆ ಹೊಯಿದು || ೧೫ ||

ಬಳಿಕಮದಱೊಳಗೆ ತಾಳಿಸಿಕೊಂಡು ನೀರುಳ್ಳಿ |
ಗಳನು ಕಗ್ಗುಂಬಳದ ಹಾಸುಗಾಯ್ಗಳನು ತಂ |
ದಿಳಿಹಿ ಸಮನಾದ ಕಂದಲ ಮುಚ್ಚಿಯೆರಡಂಚುಗಳ ಸೀಱುಮಣ್ಣುಗೊಂಡು ||
ಅಳಿಗೆಂಡದೊಳಗಿರಿಸಿಕೊಂಡು ಒಂದಿನಿಸು ಸೆಖೆ |
ಗೊಳಿಸಿ ಪಾಕಂ ಮಾಡೆ ಹಸನಾದ ಕೂಷ್ಮಾಂಡ |
ಫಲಶಾಕ ಮಡಕೆ ಮಾದಲವೆಂಬ ಪೆಸರ್ವಡೆದು ಪಿರಿದೆನಿಸಿ ಸವಿಯಾದುದು || ೧೬ ||

ಒಂದು ಪಡಿ ಬೇವ ಕಂದಲ ಬಾಯ ಕಿಱಿದಾಗಿ |
ಚಂದವೆನಲೈದಾಱ ಮಾಡಿಸಿಯವಂ ತೊಳೆದು |
ಒಂದಿನಿಸು ನೀರು ಹುಯಿದುಕ್ಕರಿಸಿ ತೊಳೆದು ಲೋಭಾನಧೂಪವನೆ ತೋಱಿ ||
ಒಂದೊಂದಕೊಂದೊಂದು ತೆಱದ ಹೂವಿನಕಂಪಿ |
ನಿಂದವಂ ಪೊರೆಯನಿಟ್ಟಾ ಪರಿಮಳಂ ಪೋಗ |
ದಂದದೊಳು ನೇತ್ರಮಂ ಕಟ್ಟಿ ಮಡಿಪಾವಡೆಯ ಮುಚ್ಚಿ ಮಡಗುವುದು ಬೇಱಿ || ೧೭ ||

ಕುಂಬಳಕಾಯ ನಾಲ್ವೆರಳಗಲ ಚೋಟುದ್ದ |
ವೆಂಬಂತೆ ಸಂಬಳಿಸಿ ಮೇಲಣೋಟೆಯ ಕೆತ್ತಿ |
ತುಂಬಿರ್ದ ಬೀಜಮಂ ಮತ್ತದಱ ದುದ್ದುಮಂ ಚೆನ್ನಾಗಿ ತೆಗೆದು ಹಾಕಿ ||
ಇಂಬುಳ್ಳ ಬೆಸಳಿಗೆಗೆ ನಸುಹಾಲು ತುಪ್ಪ ಕೊ |
ತ್ತುಂಬರಿಯ ಸೊಪ್ಪು ಜೀರಿಗೆ ಮಂತೆಯದ ಚೂರ್ಣ |
ಮೆಂಬಿವಂ ಹಾಕಿ ಕರಿಬೇವುಮಂ ಹಾಕಿ ಮುಗುಳ್ವದನಾಗುವಂತಡುವುದು || ೧೮ ||

ಬಳಿಕಮಾಕಾಯನಾಱಿಸಿ ಪಾವಡೆಯೊಳೊತ್ತಿ |
ಹಿಳಿದವಱ ನೀರ ತೆಗೆದಿರಿಸಿ ತೆಂಗಿನಕಾಯಿ |
ಬಿಳಿಯುಳ್ಳಿ ಬಿಳಿಯ ಮೆಣಸೊಡೆದ ಹಾಲಿನ ದುದ್ದು ಬಿಳಿಯುದ್ದು ಜೀರಿಗೆಯನು ||
ತಿಳಿನೀರು ಬಿಟ್ಟರೆದು ಕದಡಿ ಕೊಣಬಂ ಕಾಸಿ |
ಎಳೆಯಲ್ಲ ಉಳ್ಳಿಗಳ ಸಣ್ಣನಂ ಹೊಸತುಪ್ಪ |
ದೊಳು ಹುರಿದುಕೊಂಡಿಕ್ಕಿಯದಱೊಳಗೆ ಬೆಣ್ಣಗಾಸಿದ ತುಪ್ಪಮಂ ಹೊಯ್ವುದು || ೧೯ ||

ಮತ್ತದಂ ಮಾದಲದ ಹೊಸತಳಿರು ಕರಿಬೇವು |
ಕೊತ್ತುಂಬರಿಯ ಸೊಪ್ಪು ಶುಂಠಿ ನೀರುಳ್ಳಿಗಳ |
ಚಿತ್ತಳಿಸಿ ತುಪ್ಪದೊಳು ಹುರಿದು ಪರಿಮಳಗೊಳಿಸಿ ಪೊಡ್ಡಣಿಗೆಯನು ಮಾಡುತಾ ||
ಮುತ್ತೆಱನ ಮಾಡಿಯೊಂದಕ್ಕೆ ಹುಳಿಯೊಂದಕ್ಕೆ |
ಯುತ್ತಮದ ಸಿಹಿ ಹುರಿದ ಕಡಲೆಪುಡಿಯೊಂದಕ್ಕೆ |
ಒತ್ತರಿಸಿಯಿರಿಸಿ ಮುನ್ನವೆ ಪಾಕಮಾಡಿದಾ ಹೋಳ ಹೊಸತುಪ್ಪದೊಳಗೆ || ೨೦ ||

ಎಳೆಯಲ್ಲವುಳ್ಳಿಯಂ ಹಾಕಿ ತಾಳಿಸಿ ಕೊಣಬಿ |
ನೊಳಗವಂ ಹಾಕಿರಿಸಿ ಹೂವ ಕಟ್ಟಿದ ಕಂದ |
ಲೊಳಗೆ ಪನಿನೀರು ಕರ್ಪೂರಯೇಲಕ್ಕಿಯಂ ಭಿನ್ನಪರಿಮಳವನಿಕ್ಕಿ ||
ಒಳಗೆ ತುಪ್ಪವ ಹೊಯ್ದುಯೆಲ್ಲೆಡೆ ತಿರುಹುರಳಿಸಿ |
ಬಳಿಕವಱೊಳವ ಹುಯಿದು ಹಿರಿದು ಹಪ್ಪಳ ಶುಂಠಿ |
ಗಳ ಚೂರ್ಣವಿಕ್ಕಿ ಮುಚ್ಚುಳನಿಕ್ಕಿ ಸಣ್ಣಸುಳಿ ಹಾಳೆಗಳನವಕೆ ಮುಚ್ಚಿ || ೨೧ ||

ಪರಿಮಳಂ ಪೋಗದಂದದಿ ಸೀಱುಮಣ್ಣುಗೊಡ |
ಲುರಿಗೆಂಡದಾ ಮೇಲೆ ಹೊತ್ತದಂದದೊಳವಂ |
ತಿರುಹಿ ಓರೆಯ ಹದನಱಿದು ಹಸನಾಗಿಯಿರಿಸಿ ಪಾಕಂ ಮಾಡಿದ ||
ಸರಸ ಕೂಷ್ಮಾಂಡ ಫಲವಡಕೆದಾಳಿಲವೆಸರ |
ಧರಿಯಿಸಿತು ಮತ್ತಮೀ ತೆಱದಿ ಬಾಳೆಯ ಹೊಡೆಯ |
ಹಿರಿದು ಹಸನಾಗಿ ಪಾಕಂ ಮಾಡಿಯದಱಡಕೆದಾಳಿಲವೆಸರ ಕರೆವುದು || ೨೨ ||

ಉಂಡೆಗುಂಬಳಕಾಯ ಮೇಲಣ ಹಸುರ ಕೆತ್ತಿ |
ಕೊಂಡು ಕರ್ಬೊನ್ನ ಸಲಿಗೆಯೊಳದಂ ಕದುಕಿಱಿದು |
ಗುಂಡಿಬೆಸಣಿಗೆಯಲ್ಲಿ ನೀರ ಹೊಯಿದದನಿರಿಸಿ ಕುದಿಸಿ ಬಸಿದಱುವೆಯಿಂದ ||
ಹಿಂಡಿ ಬಿಸುಟಾನೀರ ತೊಟ್ಟಿನ ಬಳಿಯ ತೋಡಿ |
ಗುಂಡಿಯ ಮಾಡಿ ಸೆರೆಗತ್ತಿಯೊಳು ಮತ್ತದಱ |
ದಿಂಡುಮಂ ಪೂರಿಸಿದ ಬಿತ್ತಮಂ ಸೆರೆದದಱೊಳಿನಿಸಿಲ್ಲದಂತೆ ತೆಗೆದು || ೨೩ ||

ಅರೆದ ಮೆಣಸರೆದ ಜೀರಿಗೆಯರೆದ ಹಸಿಯೆಳ್ಳು |
ಹಿರುದ ಮೆಂತೆಯದ ಹುಡಿಯರೆದ ತೆಂಗಿನಕಾಯ |
ನರಿಸಿನಂ ಬೆರಸು ಮೊಸರೊಳು ಜಡಿದುಯುಂಟಾಗಿ ತುಪ್ಪವನದಕ್ಕೆ ಹುಯ್ದು ||
ಕರಿಬೇವು ಮಾದಲಂ ಕೇದಗೆಯ ಹೂವಿಕ್ಕಿ |
ಎರಡು ಕುದಿ ಬಪ್ಪಂದದೊಳು ಕಾಸಿಕೊಂಡದಕೆ |
ಹುರಿದ ಸಂಭಾರಮಂ ಹಾಕಿ ಕೆಂಡಮನಿಟ್ಟು ಒಗ್ಗರಣೆಯಂ ಮಾಳ್ಪುದು || ೨೪ ||

ಕುದಿದಿಳಿಹಿಕೊಂಡು ಸಂಭಾರಮಂ ಹಸಮಾಡಿ |
ಯದಱೊಳಗೆ ಹೊಱಗೆ ಹೊಗುವಂತೆ ಸಲಗೆಯೊಳದಂ |
ಕದುಕಿಱಿದು ತುಂಬಿ ನೀರುಳ್ಳಿ ಶುಂಠಿಯನಿಕ್ಕಿಯಾಕಾಯಿ ಸುಕ್ಕದಂತೆ ||
ಅದಕೆ ಬಾಳೆಯ ಪಟ್ಟಿಯಂ ತುಂಬಿ ಸಂಭಾರ |
ವುದುರದಂದದೊಳು ನಾರ ಸುಪಟ್ಟೆಯಂ ಸುತ್ತಿ |
ದುದನುದಕ ಬೋನ ನೆಲಹಿನೊಳಿಕ್ಕಿ ಕಟ್ಟಿ ಹಸನಾಗಿ ಒಲೆಯಂ ಮಾಳ್ಪುದು || ೨೫ ||

ಬಳಿಕಮಾಗೂಡ ಬಿಸಿಮಾಡಿ ಮತ್ತದಱೊಳಗೆ |
ತಳಲುಗೆಂಡವ ಹಾಕಿ ಅದಱ ಮಧ್ಯದೊಳೊಂದು |
ಕಳಸಿಗೆಯನಿರಿಸಿ ನೀರಂ ಹೊಯ್ದು ಕಾಯ ಕಟ್ಟಿದ ನೆಲಹನೊಲೆಯ ಮೇಲೆ ||
ಇಳುಹಿಯದ ಬೀಳದಂದದೊಳಡ್ಡಗೋಲಿಕ್ಕಿ |
ತೊಳೆದು ಗೋಣಿಯ ಪಟ್ಟೆಯಂ ಮುಚ್ಚಿ ಕೆಮ್ಮಣ್ಣ |
ಬಳಿದುಕೊಂಡಾ ಕಾಯನರೆಜಾವ ಪರಿಯಂತರನುವಾಗಿ ಬೇಯಿಸುವದು || ೨೬ ||

ಉದಕಬಿಟ್ಟಾ ಕಾಯಿಬೆಂದು ಕಡುಗೌರಾದ |
ಹದನನಱಿದಿಳುಹಿ ಹಲಗೆಯೊಳಿರಿಸಿಕೊಂಡು ಸು |
ತ್ತಿದನಾರ ತೆಗೆದು ಮೂಱುಂ ಬಗೆಯ ಮಾಡಿಕೊಂಡೊಂದಕ್ಕೆ ತುಪ್ಪದೊಳಗೆ ||
ಮಿದುಡಿಸಿದ ಹುರಿಯೆಳ್ಳು ಹುರಿದ ಹಾಲಿನ ದುದ್ದಿ |
ನುದುರೆ ಹಪ್ಪಳದ ಹುಡಿ ಬಡಗಸಂಡಗೆ ಮುಗು |
ಳ್ವದದ ಸೊಜ್ಜಿಗೆ ಹುರಿದ ತೆಂಗಾಯ ಕುಸುರೆಯಂ ಪುದಿದಿಕ್ಕಿ ಮತ್ತೊಂದಕೆ || ೨೭ ||

ಹುಳಿಯನಿನಿಸಿಟ್ಟು ಸಂಭರಮುನನೊಂದಱೊಳು |
ಬಿಳಿಯ ಸಕ್ಕರೆಯಿಟ್ಟು ಸಂಭಾರವೊಂದಱೊಳ |
ಗಿಳಿಹಿ ಮತ್ತದಕೆ ನಾರಂ ಸುತ್ತಿ ಮೊದಲು ಪಾಕಂ ಮಾಡಿದಂತೆಯೆರಡು ||
ಘಳಿಗೆ ಗೂಡಿನೊಳಿಕ್ಕಿ ಪಾಕವಂ ಮಾಡಿಕೊಂ |
ಡಿಳಿಹಿ ನಾರಂ ತೆಗೆದು ಪರಿಮಳವ ಪೊರೆಯೊತ್ತಿ |
ಬಳಿಕ ಕಂದುರಿ ಕುಂಬಳದ ಕಾಯ ಪಾಕಮೆಂದೆಂಬ ಹೆಸರಂ ಕರೆವುದು || ೨೮

ನೆಱಿ ಸಣ್ಣನಾಗಿ ಕುಂಬಳಕಾಯನುತ್ತರಿ |
ಯಱುವೆಯಿಂದದಱ ನೀರಂ ಹಿಂಡಿ ನಸುನೀರು |
ನಱುಗಂಪಿತಪ್ಪ ತುಪ್ಪದೊಳು ನೀರುಳ್ಳಿ ಜೀರಿಗೆಯಿಕ್ಕಿ ಕೆಂಪಾಗುವ ||
ತೆಱದಿ ಹುರಿದುಪ್ಪುಮಂ ಮೆಣಸ ಮತ್ತದಱ ಹದ |
ನಱಿದಿಕ್ಕಿ ಪಲಪಸುಗೆಯಂ ಮಾಡಿಯೊಂದೊಂದು |
ತೆಱದ ಸವಿಯಾದ ಸಂಭರಮಂ ತಳಿದು ಒಗ್ಗರಿಸಿ ಪುಡೆಯವ ಮಾಳ್ಪುದು || ೨೯ ||

ಉತ್ತರಿಸಿ ಕುಂಬಳದ ಕಾಯ ಮೇಲಣ ಹಸುರ |
ಕೆತ್ತಿ ಹಲ್ಲೆಯ ಮಾಡಿ ಕುಯಿದು ಪಾವಡೆಯಿಂದ |
ವೊತ್ತಿನೀರಂ ಹಿಂಡಿ ಕಟ್ಟಿ ಬಿಗುಹಿಕ್ಕಿ ಕಾವಲಿಯೊಳಗೆ ತುಪ್ಪವೆಱಿದು ||
ಮತ್ತದಂ ತಿರುತಿರುಹಿ ಕಾಸಿ ಕೆಂಪಂ ಮಾಡಿ |
ಯುತ್ತಮದ ಸಕ್ಕರೆಯ ಲೇಹ್ಯಪಾಕದೊಳಗವ |
ನಿತ್ತು ಪರಿಮಳವಿಕ್ಕಿ ಮಂಡಿಸಿದ ಕೂಷ್ಮಾಂಡವೆಂಬ ಹೆಸರಂ ಕರೆವುದು || ೩೦ ||

ಅಗುಹಿಕ್ಕಿದಾ ಕುಂಬಳದ ಕಾಯ ಹೋಳುಗಳ |
ಚಗತಳಿಯ ಸಂಡಗೆಗಳನು ಕೆಲವ ಸಣ್ಣ ಸೇ |
ವಗೆಯಂತೆ ಕೆಲವನನುಮಾಡಕ್ಕಿಯಾ ಹಿಟ್ಟಿನೊಳಗದ್ದಿವೊಣಗ ಹಾಕಿ ||
ತೆಗೆದು ತುಪ್ಪದೊಳು ಗೌರಾಗುವಂದದಿ ಹುರಿದು |
ಸೊಗಯಿಸುವ ಬೆಲ್ಲ ತೆಂಗಿನ ಹೂವು ಮೆಣಸುಪ್ಪು |
ಬಗೆಯನಱಿದಿಕ್ಕಿ ಮಾಡಿದುದಮೃತಕೂಷ್ಮಾಂಡವೆಸರಾಗಿ ಸವಿವಡೆದುದು || ೩೧ ||

ಬೆಂದ ಕುಂಬಳದ ಕಾಯ್ಗಳ ಪಲವು ತೆಱ ಮಾಡಿ |
ಯೊಂದು ಪುಳಿಚಾರಾಗಿಯೊಂದು ಸಿಹಿಗಾಯಾಗಿ |
ಯೊಂದು ದಧಿಸಾರಿಕೆಯುಮಾಗಿ ಮತ್ತೊಂದು ದುಸ್ಸಾಯಭಂಗಿಯನೆ ಮಾಡಿ ||
ಒಂದು ಪಲಸಂಭಾರಗಾಯಾಗಿ ಮಾಡಿ ಮ |
ತ್ತೊಂದು ಭಂಜಿತ ಪಾಕಮಂ ಮಾಡಿ ಬಳಿಕೊಂದ |
ಕೊಂದೊಂದು ತೆಱದ ಪರಿಮಳವಿಕ್ಕಿ ಪೊಡ್ಡಣಿಗೆಯಂ ಕೊಟ್ಟು ಹಸಮಾಳ್ಪುದು || ೩೨ |

ತೊಕ್ಕು ಸಹವಾಗಿ ಕುಂಬಳಕಾಯ ಹೋಳುಗಳ |
ನುಕ್ಕರಿಸಿಯದನೆರಡು ಭಾಗೆಯಂ ಮಾಡಿಯೊಂ |
ದಕ್ಕೆ ತೆಂಗಿನಕಾಯ ತುರಿಹದೊಳು ಸಂಭಾರಮಿಕ್ಕಿ ಪೂರಿಸಿಯಡುವುದು ||
ಮಿಕ್ಕ ಹೋಳಂ ಮಧ್ಯದೊಳು ಸೀಳಿ ಪದರಿನೊಳು |
ಚೊಕ್ಕಟಂಬಡೆದ ಸಂಭಾರಮಂ ಹದನನಱಿ |
ದಿಕ್ಕಿ ನಾರಂ ಸುತ್ತಿ ನಸುಬೆಲ್ಲಮಂ ಹಾಕಿ ಪೊಡ್ಡಣಿಗೆಯಂ ಮಾಳ್ಪುದು || ೩೩ ||

ಹಲವು ಬಗೆಯಂ ಮಾಡಿ ಬೆಂದ ಕುಂಬಳಕಾಯ |
ಕೆಲವ ನಾಲ್ಕೆಂಟು ಮಾಟದ ಕೊಣಬ ಮಾಡುವುದು |
ಕೆಲವ ಹುಡಿಮಾಡಿಯುದಕವ ಹಿಂಡಿಯವನಿಕ್ಕಿ ತುಪ್ಪದೊಳು ಹುರಿದುಕೊಂಡು ||
ತಳಿದು ಪರಿಮಳಚೂರ್ಣ ಮೆಣಸು ಕೊತ್ತುಂಬರಿಯ |
ಕಲಸಿ ವೊಗ್ಗರಣೆಯಂ ಮಾಡುವುದು ಕೆಲವಕ್ಕೆ |
ಪಲತೆಱದ ಸಂಭಾರಗಳನಿತ್ತು ಬಳಿಕ ಪರಿಮಳಂಗಳ ಪೊರೆಯಿಡುವುದು || ೩೪ ||

ಸೊರೆಯ ಎಳೆಗಾಯ ಮೇಲಣ ಸಿಪ್ಪೆಯಂ ಕೆತ್ತಿ |
ತುರಿಹಮಂ ಮಾಡಿ ಕತ್ತರಿಸಿಯುದಕವ ಹಿಂಡಿ |
ಕರಿಬೇವು ಕೊತ್ತುಂಬರಿಯ ಸೊಪ್ಪು ಬಿಳಿಯುಪ್ಪು ಜೀರಿಗೆ ಮೆಂತೆಗಳನಿಕ್ಕಿ ||
ಹುರಿದು ತುಪ್ಪದೊಳು ನಾಲ್ಕೈದು ಬಗೆಯ ಮಾಡಿ |
ಪರಿಪರಿಯ ಸಂಭಾರಮಂ ಬೇಱೆ ಬೇಱೆಕ್ಕಿ |
ಹಿರಿದು ಹಸನಾಗಿ ಒಗ್ಗರಿಸಿ ಪರಿಮಳವಿಕ್ಕಿ ಕಟ್ಟುವುದು ಪುಡೆಯಗಳನು || ೩೫ ||

ಎಳೆಯ ಹಲಸಿನಕಾಯ ಸಿಪ್ಪೆಯಂ ತೆಗೆದು ಸಂ |
ಬಿಳಸಿಯವಕಿನಿಸು ಯವಕ್ಷಾರಮಂ ತಡಹಿಯವ |
ತಿಳಿನೀರಿನಲ್ಲಿ ಸುಣ್ಣದ ನೀರುಮಂ ಬೆರಸಿ ಚೆನ್ನಾಗಿ ಪಾಕದೊಳಗೆ ||
ಇಳಿಹಿ ನೀರಂ ಹಿಂಡಿ ಮತ್ತೊಮ್ಮೆ ತಿಳಿದುಪ್ಪ |
ದೊಳಗೆ ನಸು ನೀರುಪ್ಪನಿಕ್ಕಿ ಬೇಯಿಸಿಕೊಂಡು |
ಬಳಿಕ ತಾಳಿಲ ಕೊಣಬುಪುಡೆಯ ಮುಂತಾದ ಮೇಲೋಗರವನನುಮಾಳ್ಪುದು || ೩೬ ||

ಚಿಟ್ಟಿಯೊಳು ಹೊಸತುಪ್ಪವೆಱೆದು ಉಳ್ಳಿಯ ಹಾಕಿ |
ಘಟ್ಟಿ ಮೆಣಸುಪ್ಪರೆದ ತೆಂಗಾಯ ಹಾಲುಮಂ |
ಬಟ್ಟವಾಲೊಳು ಬೆರಸಿ ಮುನ್ನವುಕ್ಕರಿಸಿದಾ ಹಲಸಿನೆಳೆಗಾಯ ಹೋಳ |
ಚಿಟ್ಟುಮಂ ಹತ್ತರಸವೆನೆ ಕಾಸಿ ವೊಡ್ಡಣಿಗೆ |
ಗೊಟ್ಟು ಮತ್ತದಕೆ ತೆಂಗಿನಕಾಯ ಕುಸುರಿಯಮ |
ನಿಟ್ಟು ಪರಿಮಳಿಸಲದು ತಾ ಸ್ವಾದುತರ ಪನಸಫಲವಾಕವೆಸರಾದುದು || ೩೭ ||

ಮೊದಲು ಬೇಯಿಸಿದ ಹಲಸಿನಕಾಯ ಹೋಳುಗಳ |
ಮೃದುವಾಗಿ ಮುಳ್ಳಿಱಿದುಕೊಂಡರಿಸಿನವರೆದು |
ಕದಡಿ ಜೀರಿಗೆಯುಳ್ಳಿ ಶುಂಠಿಯಂ ಕೂಡಿ ಮತ್ತಾ ಹೋಳ ಹಾಕಿಯಟ್ಟು ||
ಅದಱೊಳಾ ದ್ರವನಿಂಗಿಸಿಕೊಂಡು ಮೊಸರೊಳಗೆ |
ಯದಕೆ ಪರಿಮಳವಿಕ್ಕಿನರೆಗೊಡಲು ತಾನೊಂದು ಪಸಲುಗಾಯ್‌ಕೊಣಬಾದುದು || ೩೮ ||

ಕುದಿಸಿ ಮೃದುವಾದ ಹಲಸಿನಕಾಯನಡಕೆಯಂ |
ದದೊಳು ಸಂಬಳಿಸಿ ಮೊಸರಿನೊಳರಿಸಿನವನಿಕ್ಕಿ |
ಹದನಱೆದದಕೆಯಿಂಗ ಬೆರಸಿಕೊಂಡಾ ಹೋಳ ಹೊರಟಿ ತುಪ್ಪದೊಳು ಹಾಕಿ ||
ಅದನು ಕೆಂಪಾಗುವಂತಟ್ಟಿಳಿಹಿ ದರ್ವಿಲೇ |
ಪದ ಹವಣಿನಲ್ಲಿಮಾಡಿದ ಮೊಸರ ಕೊಣಬಿನೊಳ |
ಗೊದವಿಸಿ ಬಳಿಕ ಕೆಂಡವಿನಿಸಿಕ್ಕಿ ಚೆನ್ನಾಗಿ ಒಗ್ಗರಣೆಯಂ ಮಾಳ್ಪುದು || ೩೯ ||

ಮತ್ತೊಂದು ಬೆಸಳಿಗೆಗೆ ತುಪ್ಪವನೆಱೆದು ಕಾಸಿ |
ಯುತ್ತಮದ ನೇತ್ರಮನದಱೊಳಿಕ್ಕಿ ಕೊಣಬಿನೊಳ |
ಗೊತ್ತರಿಸಿದಾ ಕಾಯ ತೆಗೆದುಕೊಂಡಾ ಕೊಣಬ ಘಟ್ಟಿಪಾವಡೆಯೊಳೆಱೆದು ||
ಒತ್ತಿ ಶೋಧಿಸಿ ಶುಂಠಿ ಕರಿಬೇವು ನೀರುಳ್ಳಿ |
ಕೊತ್ತುಂಬರಿಯ ಗಂಟು ಮಾಗಾಯಿ ಪನಿನೀರ
ನಿತ್ತು ವಾಸಿಸಿಕೊಂಡು ನೇತ್ರಮಂ ಪೊಟ್ಟಣವ ಕಟ್ಟಿ ಹಸನಂ ಮಾಳ್ಪುದು || ೪೦ ||