ಸೂಚನೆ: ಓಗರದ ಪುಳ್ಗಿಯೋಗರದ ಪಲತೆಱದ ಪಾ |
ಲೋಗರದ ಕಟ್ಟೋಗರದ ಸೊಗಸುವಡೆದ ನೀ |
ರೋಗರದ ಮಿಸುಗುವಂಬಲಿಯ ವಿಧಮಂ ವಧೂಜನವಱಿವತೆಱದಿನೊರೆವೆಂ ||

ಹೊತ್ತುವುದು ಸಱಿಯಹುದು ನನೆಗುದಿಯಹುದು ತವುಡು |
ಹತ್ತಿಹುದು ಮಿಲಿಗಿಹುದು ವೊಡೆದಿಹುದು ನಸುಗಂಜಿ |
ಸುತ್ತಿಹುದು ವೊಣಗಿಹುದು ದೋಷವಶನಕ್ಕೆಂಟುತೆಱನಪ್ಪುದದನು ಕಳೆದು ||
ಮೆತ್ತನಪ್ಪಂತೆಯುದುರುದುರುಮಪ್ಪಂತೆ ಬೆ |
ಳ್ವೊತ್ತರಿಸುವಂತೆ ಮಗಮಗಿಪಂತೆ ಪಾಕಗೆ |
ಯ್ದುತ್ತಮದ ರಾಜಾನ್ನದಕ್ಕಿಯಶನಂ ಧರಾಧೀಶರೂಟಕ್ಕೆ ಯೋಗ್ಯಂ || ೧ ||

ಚಳಿಸಿ ರಾಜಾನ್ನದಕ್ಕಿಯನು ನಾಲ್ಕೈದು ಸೂಳ್‌ |
ತೊಳೆದು ಜಾವದ ಮೇಲೆಯಕ್ಕಿಗಚ್ಚಂ ಬಸಿದು |
ತಿಳಿನೀರನೊಲೆಗೆತ್ತಿ ಕಾಸಿಯಕ್ಕಿಯ ಹಾಕಿ ಬೇವಾಗ ಕಳಿಯನೆಱಿದು ||
ಬಳಿಕ ಬೇವಾಗ ಗಂಜಿಯ ಬಸಿದುಕೊಂಡು ಮು |
ಚ್ಚುಳನಿಕ್ಕಿ ಘಟ್ಟಿಪಾವಡೆಗಟ್ಟಿ ತಱಿಗೆಂಡ |
ದೊಳಗೆ ಹೊಂಗಿಸಿಕೊಂಡು ಮೃದುವಾಗಿ ಮಾಡಿದುದು ತಾ ಶುದ್ಧಮಪ್ಪೋದನಂ || ೨ ||

ಮೆತ್ತನಪ್ಪಂತು ಪಾಕಂ ಮಾಡಿಯೋದನ |
ಕ್ಕುತ್ತಮದ ಬೆಣ್ಣೆಯಂ ಹಸಿಯಡಕೆಯನಿತಿಕ್ಕಿ |
ಮತ್ತೆ ಯಾಲೋಡಿಸಿದ ಬಳಿಕ ಗಂಜಿಯ ಬಸಿಯಲದುವೆನವನೀತೊದನಂ ||
ಮತ್ತೊಂದು ಸೆಖೆಯಳಗೆಯೊಳು ನೀರನೆಱೆದೊಲೆಯೊ |
ಳೆತ್ತಿ ಪಾವಡೆಗಟ್ಟಿ ನನಸಿದಕ್ಕಿಯನು ಮಡ |
ಗುತ್ತ ಮೇಲೊಂದು ಮಡಕೆಯ ಮುಚ್ಚಿಯಡಲಂಬುವಿರಹಿತೋದನವಾದುದು || ೩ ||

ಎರಡು ಮಾನುದಕಕೊಮ್ಮಾನ ವಿದಳವ ಹಾಕಿ |
ಯರೆ ಬೆಂದ ಸಮಯದೊಳು ಸರಿಯಕ್ಕಿಯಂ ಹೊಯಿವು |
ತರಿಸಿನವನಿಕ್ಕಿಯುಪ್ಪುಳ್ಳಿಮೆಂತೆಯಮಿಕ್ಕಿ ತೆಂಗಾಯನು ||
ಹೆರೆದದಱ ಮೇಲಿಕ್ಕಿ ಕಲ್ಲಮುಚ್ಚುಳ ಮುಚ್ಚಿ |
ಯಿರಿಸಿಯಾರಿಸಿಕೊಂಡು ಮೇಲಿದ್ದ ತೆಂಗಾಯ |
ತುರುವಲಂ ತೆಗೆದುಮತ್ತಾ ವಿದಳಹುಗ್ಗಿಯೆಂದೊಲಿದು ಹೆಸರಂ ಕರೆವುದು || ೪ ||

ಹಿರಿದು ಮೃದುವಾಗಿ ನನದಕ್ಕಿಯೊಳಗರಿಸಿನವ |
ಪೊರೆಯೊತ್ತಿ ಮುಗುಳ್ವದದಿ ಬೆಂದ ವಿದಳಗಳನೊಡೆ |
ವೆರಸಿ ಸೆಖೆಯಳಗೆಯಱುವೆಯ ಮೇಲೆ ಮಡಗಿ ಮೇಲೊಂದು ಕಳಸಿಗೆಯ ಕವಿಸಿ ||
ಇರಿಸಿ ಸರಿ ಬೇವ ಸಮಯದೊಳುಪ್ಪು ಮೆಂತೆಯದ |
ತರಿಯಿಕ್ಕಿ ಹೆರೆದ ತೆಂಗಿನಕಾಯ ಮಡಗಿ ರುಚಿ |
ಕರಮಪ್ಪ ತೆಱದಿ ಪಾಕಂ ಮಾಡಿ ತೆಂಗಾಯ ತೆಗೆಯ ತಾ ಹಸನಪ್ಪುದು || ೫ ||

ತಿಳಿನೀರಿನದಱ ನಾಲ್ಮಡಿ ತಱುಪಿನೆಮ್ಮೆ ಹಾ |
ಲೊಳಗೆಱಿದೊಲೆಯೊಳೆತ್ತಿ ಎಂಟಱೊಳಗೊಂದುಮಡಿ |
ಬಿಳುಪಾಗೆ ಬೆಳತಿಗಕ್ಕಿಯ ತಳಿಸಿ ಚೆನ್ನಾಗಿ ತೊಳೆದದಱೊಳಿಳಿಯಬಿಟ್ಟು ||
ತೊಳಸಿ ಬಲುವದನಾಗಿ ಪಾಕವಾದದುದನು ತಂ |
ದಿಳುಹಿ ಹದನಱಿದುಪ್ಪನಿಕ್ಕಿ ಯಾಲಕ್ಕಿಯಂ |
ತಳಿದು ಮಾಡಿದ ಪಾಯಸಂ ದೇವತಾರ್ಚನೆಗೆ ತಾನೆ ಪಾವನಮಾದುದು || ೬ ||

ಪರಡಿ ಗೌವಲೆಯಪ್ಪೆ ಮಣಿ ಸಣ್ಣಗೋಧೂಮ |
ಸರವಳಿಗೆ ದೊಡ್ಡಸೇವೆಗೆ ಕಡುಬು ಉಂಡಲಿಗೆ |
ಬೆರಲಸೇವಗೆಯಾದಿಯಾಗಿಯಡವಾದ ಕಜ್ಜಾಯಗಳ ತೆಗೆದುಕೊಂಡು ||
ಹಿರಿದಾಗಿ ಸಿಹಿವಡೆದು ಕಾಯ್ದೆಮ್ಮೆವಾಲಿನೊಳ |
ಗಿರಿದಿಳಿಯಬಿಟ್ಟು ಪಾಕಂ ಮಾಡಿಕೊಂಡು ಸ |
ಕ್ಕರೆಯಿಕ್ಕಿ ಯೇಲಕ್ಕಿಗೂಡಿ ಮತ್ತಱವಱ ಹೆಸರ ಪಾಯಸವೆಂಬುದು || ೭ ||

ಬಿಳಿಯುಳಿಯಂ ಹುರಿದು ಹಿಂದು ಮುಂದುಂ ಚಿವುಟಿ |
ಹೊಳಚಿ ನಡುವಣ ದಿಂಡ ತೆಗೆದು ಸಾಲಿಯ ವಸ್ತ್ರ |
ದೊಳಗೆ ಪೊಟ್ಟಣಗಟ್ಟಿ ಕಳಿಯೆಱಿದು ಬೇವ ಜೋಳದ ಕೂಳೊಳಟ್ಟು ತೆಗೆದು ||
ತೊಳೆದು ಹಾಲೊಳು ಕುದಿಸಿ ಮತ್ತೆರಡು ನೀರಿಂದ |
ತೊಳದರ್ಧವಿಂಗಿ ಕಡು ಹಸನಾಗಿ ಕಾದ ಹಾ |
ಲೊಳಗಿಳುಹಿ ಸಕ್ಕರೆಯನಿಕ್ಕಿ ಯಾಲಕ್ಕಿಯಂ ತಳಿಯಲುಳ್ಳಿಯಪಾಯಸಂ || ೮ ||

ಹೊಸ ಸುಣ್ಣದುದಕದೊಳು ಮಾದಲದ ತನಿವಣ್ಣ |
ಕುಸುರಿಗಳನಿರುಳಿರಿಸಿಯುದಕದೊಳಗಾ ಸುಣ್ಣ |
ದೆಸರನೊಲೆಯೊಳಗೆತ್ತಿಕೊಂಡದಂ ಹಾಕಿ ಹುಳಿ ಹೋಹಂತೆ ಕುದಿಸಿಕೊಂಡು ||
ಬಸಿದು ನೀರಿನಿಂದ ತೊಳೆದೆಮ್ಮೆವಾಲಂ ಕಾಸಿ |
ಕುಸುರಿಗಳನಿಕ್ಕಿ ಯಾಲಕ್ಕಿ ಸಕ್ಕರೆಯನೊಂ |
ದಿಸಿ ಮಾತುಂಗ ಕೇಸರದುದಕಪಾಕವೆಂದೊಸೆದು ಹೆಸರಂ ಕರೆವುದು || ೯ ||

ಈ ರೀತಿಯ ನಿಂಬೆ ಕಿತ್ತೀಳೆ ನಾರಂಗ |
ಹೇರೀಳಿ ಕಂಚಿ ನಿಂಬೆಯಕಾಯ ಕುಸುರೆಗಳ |
ನಾರಸವೊಡೆಯದಂತೆ ಹುಳಿದೆಗೆದು ಬಟ್ಟವಾಲೊಳಗೆ ಪಾಯಸಮಾಳ್ಪುದು ||
ನಾರು ಬಲಿಯದ ಹುಣಿಸೆಕಾಯ ಮಾವಿನಕಾಯ |
ನಾರೈದು ಕೆತ್ತಿ ಕಿಱಿದಾಗಿ ಹೋಳಿಸಿ ಸುಣ್ಣ |
ನೀರಿಂದೆ ಹುಳಿಯ ತೆಗೆದಟ್ಟಪಾಯಸಮವಱ ಹೆಸರ ಪಾಯಸಮಾದುದು || ೧೦ ||

ಉದಕದೊಳು ನನೆಹಿ ಮರ್ದಿಸಿದ ಸೊಜ್ಜಿಗೆಯ ಹಾ |
ಲದಱ ಸರಿ ಬಲಿದ ತೆಂಗಿನಕಾಯ ಬಟ್ಟವಾ |
ಲದಱ ಸರಿ ಚಿಲುಪಾಲ ಕೂಡಿಯೊಂದಿನಿಸಕ್ಕಿವಿಟ್ಟುಮಂ ಕೂಡಿಕೊಂಡು ||
ಅದನಂತರದೊಳು ನೇತ್ರದ ದೊನ್ನೆಯೊಳಗಿರಿಸಿ |
ಹದನಱೆದು ಅಟ್ಟಿಳುಹಿ ಮಿಸುಮಿಲ್ಲಿಯಂ ಕುಯಿದು |
ಚದುಱಿಂದ ಘಟ್ಟಿವಾಲೊಳು ಹಾಕಿ ಪರಿಮಳಿಸೆ ತಾನೆ ಬೆಣ್ಣೆಯ ಪಾಯಸ || ೧೧ ||

ಬೆರಳುದ್ದಮಾದ ನಾರಳದಂಟ ಕತ್ತರಿಸಿ |
ಪಿರುದು ಮಘಮಘಿಪ ತಿಳಿದುಪ್ಪಮಂ ಹೊಯಿದು ಕೊಂ |
ಡಿರುಳಿಬ್ಬನಿಯೊಳಿರಿಸಿ ಘಟ್ಟಿ ಹಱೆಯಾದುದಂ ತಂದು ಕೊಳವೆಗಳನೊಡೆದು ||
ಸರಿಯಾಗಿ ಕಾಯ್ದಾಱೆದೆಮ್ಮೆವಾಲೊಳಗೆ ಮುಱಿ |
ದಿರಿಸಿ ಹೊಸಸಕ್ಕರೆಯು ಹಾಕಿ ಪರಿಮಳಗಳಂ |
ಪೊರೆಯಿಕ್ಕಿದದುವೆ ತುಪ್ಪದಪಾಯಸಂ ಪೊಡವಿಯೆಱೆಯರೂಟಕ್ಕೆ ಯೋಗ್ಯಂ || ೧೨ ||

ತೆಳುಪು ತೆಂಗಿನಕಾಯ ದೊಡ್ಡಸೇವಗೆಯಂದ |
ದೊಳಗೆ ಸಂಪಳಿಸಿ ನೆಱೆ ಬಲಿದ ತೆಂಗಾಯ ಹಾ |
ಲೊಳಗಿನಿಸು ಸೊಜ್ಜಿಗೆಯ ಹಾಲಿಕ್ಕಿ ನಸುದುಪ್ಪವೆಱಿದೊಲೆಯೊಳೆತ್ತಿಕಾಸಿ ||
ತೊಳಸಿ ಸಟ್ಟುಗ ಹತ್ತುವಾಗ ಹದನ ಕಂಡಿಳಿಹಿ |
ಬಳಿಕ ತೆಂಗಿನ ದೋಸೆಕಾಯ ಸೇವಗೆಯಿಕ್ಕಿ |
ಬಿಳಿಯ ಸಕ್ಕರೆಗೂಡಿ ಮಾಡಿದುದು ನಾಳಿಕೇರಕ್ಷೀರ ರುಚಿಯಾದುದು || ೧೩ ||

ಹಸನಾಗಿ ನಾಲ್ಕೊಂದೆನಿಸಿ ಕಾಸಿಕೊಂಡಿಳುಹಿ |
ಬಿಸಿಯಾನಾಱಿಸಿದ ಹಾಲೊಳು ಬಟ್ಟವಾಲ್ಕೆನೆಯ |
ಹಸಿಯವರೆಯಂತೆ ಕತ್ತರಿಸಿ ಹಾಕಲು ತಾನು ಕೆನೆಯ ಪಾಯಸಮಾದುದು ||
ಮಿಸುಗುವ ಸುಗಂಧವಾಳೆಯ ಹಣ್ಣ ಕತ್ತರಿಸಿ |
ಹೊಸ ತುಪ್ಪಮಂ ಕೂಡಿ ಮತ್ತಮಾ ಹಾಲೊಳಗೆ |
ಹೊಸೆದದಂ ಹಾಕೆ ಕದಳೀಪಕ್ವಫಲಸಾರಪಾಯಸವೆನಿಸಿಕೊಂಬುದು || ೧೪ ||

ಹಸನಾಗಿಯುದುರುದುರುವಂತಟ್ಟ ಕೂಳನಾ |
ಱಿಸಿ ಹಲವು ಭಾಗೆಯಂ ಮಾಡಿ ತನಿವಾಲ ಕೆನೆ |
ಮೊಸರ ಕೆನೆಯುಪ್ಪುಳ್ಳಿ ಹಸಿಯಲ್ಲ ಯೇಲಕ್ಕಿಯಿಕ್ಕುವುದು ಮತ್ತೊಂದಕೆ ||
ಮೊಸರುಪ್ಪು ಸದೆ ಮೆಣಸು ನೀರುಳ್ಳಿಯೇಲಕ್ಕಿ |
ಹಸಿಯಲ್ಲವಿಕ್ಕಿ ಮಾವಿನಕಾಯ ಚಿತ್ತಳಿಸಿ |
ವೊಸೆದದಂ ಹಾಕಿ ಮಾವಿನಕಾಯಕಲಸುಗೂಳೆಂದು ಹೆಸರಂ ಕರೆವುದು || ೧೫ ||

ಇದಱಂತೆ ನೆಲ್ಲಿ ಹಿಪ್ಪಲಿ ಕರಂಜಿಗೆ ಬೆಲ್ಲ |
ವುದಿ ಬೆಲ್ಲವತ್ತ ಮಾಗುಳಿ ಬಿದಿರಕಳಿಲೆ ಪೊಸ |
ತದುಕಂಬಟೆಯ ಕಾಯ್ಗಳಿಂದ ಸಮೆದೊಪ್ಪುವುಪ್ಪಿನಕಾಯ್ಗಳಿಂ ಮಾಳ್ಪುದು ||
ಉದುರುದುರು ಓಗರಕೆ ನಸು ಬಿಸಿಯ ಹಾಲನೆಱೆ |
ದದಱೊಳಗೆ ಮಜ್ಜಿಗೆಯ ಹೆಪ್ಪ ಹದನಱಿದಿಕ್ಕಿ |
ಯದಕೆ ನೀರುಳ್ಳಿಯೇಲಕ್ಕಿ ಹಸಿಯಲ್ಲಮಂ ಹಾಕಿ ಕಟ್ಟುವುದು ಕೂಳಂ || ೧೬ ||

ಉತ್ತಮದ ತುಪ್ಪಮಂ ಕಲಸಿಕೊಂಡೋಗರವ |
ಹತ್ತೆಂಟು ಬಗೆ ಮಾಡಿ ಒಂದಕ್ಕೆ ಹಪ್ಪಳವ |
ನೊತ್ತಿ ನುಱುಗಿಸಿ ಹಾಕಿಯೊಂದಕ್ಕೆ ಹುರಿಯಕ್ಕಿ ಹುರಿಗಡಲೆಗಲ ಹುಡಿಯನು ||
ಒತ್ತರಿಸಿ ಮತ್ತವೊಂದಕ್ಕೆ ತಿಳಿದುಪ್ಪದೊಳು |
ಹೊತ್ತದಂದದಿ ಹುರಿದ ಬಡಗಸಂಡಗೆಯ ತುಮು |
ರಿತ್ತು ಬಿಳಿಯುಪ್ಪುಳ್ಳಿಯಿಕ್ಕಿ ಪರಿಮಳವಿಕ್ಕಿ ಕಟ್ಟಶನಮಂ ಮಾಳ್ಪುದು || ೧೭ ||

ಮತ್ತುಳಿದ ತುಪ್ಪೋಗರಕ್ಕೆ ನಱುವಲು ಚಕ್ಕ |
ವತ್ತ ಕುಯಿಕೀರೆ ಕೆಂಪಿನ ಹಱುವೆಯಾದಿಯಾ |
ಗುತ್ತಮದ ಸೊಪ್ಪಿನೆಸಱಂ ಬಸಿದುಕೊಂಡು ಹಸನಾಗುವಂದದೊಳು ಕಲಸಿ ||
ಕತ್ತರಿಸಿದೆಳೆಯಲ್ಲ ನೀರುಳ್ಳಿ ಬಿಳಿಯುಳ್ಳಿ |
ಯೊತ್ತರಿಸಿ ಏಲಕ್ಕಿ ಮೊದಲಾದ ಪರಿಮಳವ |
ನಿತ್ತು ಮತ್ತವಱವಱ ಹೆಸರ ಕಟ್ಟಶನವೆಂದೊಸೆದು ಹೆಸರಂ ಕೊಡುವುದು || ೧೮ ||

ಒಂದು ಮಾನೆಣ್ಣೆಯೊಳು ಹುಣಿಸೆವಣ್ಣಿನ ಹುಳಿಯ |
ನೊಂದಿಸಿಯದನು ಒಲೆಯೊಳಿಂಗು ಸಹಿತಂ ಕಾಸಿ |
ಗಂಧಶಾಲಿಯ ತಳಿಸಿದಕ್ಕಿಯೈಮಾನಮಂ ಕೂಳಟ್ಟು ಬಿಸಿಯಾಱಿಸಿ ||
ಅಂದವಡೆದುಳ್ಳಿಯುದ್ದಿನ ಚೂರ್ಣ ಶುಂಠಿಗಳ |
ನೊಂದಾಗಿ ಹಾಕಿ ಬಿಳಿಯುಪ್ಪಿಟ್ಟು ಕಲಸಿ ಮನ |
ಸಂದು ಹಸಗೆಯ್ದೆಣ್ಣೆಯೋಗರಂ ವಸುಧಾವರರ್ಗೆ ಪ್ರಿಯತರಮಾದುದು || ೧೯ ||

ಸಣ್ಣನಪ್ಪಂತರೆದು ಸಾಸುವೆಯ ಹೊಸನಿಂಬೆ |
ಹಣ್ಣ ಹುಳಿಯಂ ಹಿಂಡಿಯರಿಸಿನವ ಬೆರಸಿ ಹೊಂ |
ಬಣ್ಣಮಂ ಮಾಡಿ ಜೀರಿಗೆ ಮೆಂತೆಯಂ ಶುಂಠಿ ನೀರುಳ್ಳಿಯಿಕ್ಕಿಯಿನಿಸು ||
ಎಣ್ಣೆಯಿಂಗಿಕ್ಕಿಯೊಗ್ಗರಿಸಿಯಾಱಿಸಿಕೊಂಡು |
ಎಣ್ಣೆಯೊಳು ಮೊದಲು ಕಲಸಿದ ಬೋನದೊಳಗಿಕ್ಕಿ |
ಬಣ್ಣಿಸಿಯದಂ ಕಲಸಿ ಬಿಳಿಯುಪ್ಪನಿಕ್ಕಲದು ಸಾಸುವೆಯ ಕಟ್ಟೋಗರ || ೨೦ ||

ಮೊದಲು ಬೆಱಿಣ್ಣೆಯಿಂಗಂ ಕೂಡಿ ಕಾಸಿಕೊಂ |
ಡದನಾಱಿದೋಗರದೊಳಿಕ್ಕಿ ಪಲಭಾಗೆಯಂ |
ಮುದದಿಂದೆ ಮಾಡಿಯೊಂದಕ್ಕುಪ್ಪು ನೆಲ್ಲಿಯೆಸರೊಂದಕ್ಕೆ ಹುಳಿಇಂಡಿಯಾ ||
ಉದುರೆ ಮತ್ತೊಂದಕ್ಕೆ ಹೊಸ ನೆಲ್ಲಿಯೆಳೆಗಾಯ |
ವುದಕವೊಂದಕ್ಕೆ ಮಾಗುಳಿಯೆಸರು ಬೆಲ್ಲವ |
ತ್ತದ ಕಾಯಿ ಮೊದಲಾದ ಕಾಯ ರಸಗಳನಿಕ್ಕಿ ಕಟ್ಟಶನಮಂ ಮಾಳ್ಪುದು || ೨೧ ||

ಅರೆಯಿಂಗಿ ಕಾದ ಹಾಲಂ ಮಾದಲದ ಹಣ್ಣ |
ನೆರಡಾಗಿ ಕೊಯಿದು ಕುಸುರೆಯ ತೆಗೆದವಕೆ ತುಂಬಿ |
ಸರಿಯಿರುಳಿನಲ್ಲಿ ಹಾರುಗೂಳಾ ಬೋನದೊಳು ಹಾಕಿದಾ ಕಟ್ಟಶನಕೆ ||
ತುರುವಲಂ ಮಾಡಿದೆಳೆಯಲ್ಲ ನೀರುಳ್ಳಿಯಂ |
ಬೆರಸಿ ಮೆಣಸಿನ ಬಿಳಿಯ ಬೇಳೆಯಂ ಹಾಕಿದೋ |
ಗರ ರಾಜಯೋಗ್ಯ ಸೌಗಂಧಿಕಾಸಹಿತ ರುಚಿರೋಗರವೆನಸಿಕೊಂಬುದು || ೨೨ ||

ತನಿವಾಲ ಕೆನೆ ತುಪ್ಪ ತವರಾಜ ಬಲಿದ ತೆಂ |
ಗಿನಕಾಯ ಸಣ್ಣ ಶುಂಠಿಯ ತುಮುರುಗಳ ಹಾಕಿ |
ಯನುವಾಗಿ ಉದುರುದುರು ಓಗರಕೆ ಕಲಸಿದಡೆ ನಾಳಿಕೇರೋದನಕರಣಾ ||
ಇನಿತು ತೆಱನಾಗಿ ಪೃವಣ್ಣಿಂದೆ ಕಟ್ಟುವುದು |
ವಿನುತ ಜಿಹ್ವಾಮೃತವೆಸರು ಶಾಸ್ತ್ರದೊಳಗೆ ಸಂ |
ಜನಿಸಿತ್ತು ಮತ್ತಮೃತ ಕಟ್ಟೋಗರದ ವಿಧಂ ಪ್ರಭುರಾಜ ನಿರ್ಮಿಸಿದನು || ೨೩ ||

ಬಿಳಿಯ ರಾಜನ್ನದಕ್ಕಿಯನು ಬಿಸಿನೀರಿನಿಂದ |
ತೊಳೆದೊಂದು ಜಾವ ನನೆಯಿಕ್ಕಿಕೊಂಡೊಲೆಯೊಳಗೆ |
ಕಳಿಯೊಂದು ಮಡಿಯುದಕಮೆರಡು ಮಡಿ ಎಸರೆತ್ತಿ ಅಕ್ಕಿಯನು ಹಾಕಿಕೊಂಡು ||
ತೊಳಸಿ ಮುಚ್ಚಳದೆಗೆಯದಿನಿಸು ಮೃದುವಾಗಿ ಅ |
ಟ್ಟಿಳಿಹಿ ಗಂಜಿಯನು ಬಸಿದದಕೆ ಮತ್ತೊಮ್ಮೆ ಪೊಸ |
ತಿಳಿನೀರೆಱೆದು ಬಸಿದು ತೆಗೆದುದಕದೊಳೆ ಹಾಕಲಾಕೂಳು ಬಿಱಿಸಪ್ಪುದು || ೨೪ ||

ನೀರಿನೊಳಗಳ ಕೂಳಿನೊಳಗೊಂದಿಸ ತೆಗೆದು |
ನೀರೊಂದು ಸೆರೆ ಮುಚ್ಚೆರೆಯ ಮೊಸರಿನೊಳಗಿಕ್ಕಿ |
ಕಾರಗೆಣಸುಳ್ಳಿ ಯಾಲಕ್ಕಿಯುಪಿಕ್ಕಲದು ತಾ ಶುದ್ಧಕಳಲೋದನಂ ||
ನೀರು ಮಜ್ಜಿಗೆಯ ಸವಿಮಾಡಿ ಸೋದಿಸಿಕೊಂಡು |
ನೀರುಳ್ಳಿ ಹಸಿಯಲ್ಲಮಂ ತೊಕ್ಕ ತೆಗೆದಗುಳ |
ತೋರದೊಳು ಕತ್ತರಿಸಿ ಹಾಕೆಯಾ ಕೂಳು ಕಲಸೋಗರಂ ತಾನಾಯಿತು || ೨೫ ||

ಉದಕಮಂ ಸರಿಗೂಡಿ ಕಡೆದ ಪೊಸ ಮೊಸರಿನೊಳು |
ಹದನಱಿದುಪ್ಪಳ್ಳಿ ಯಾಕಲಕ್ಕಿಯೆಂಬಿವಂ |
ಸದಗುಟ್ಟಿ ಹಾಕಿ ಸೋದಿಸಿ ಮಾವಿನೆಳೆಗಾಯಿ ಮಾದಲದ ಕಾಯನಿಕ್ಕಿ ||
ಅದಱೊಳಗೆ ನೀರೋಗರವ ಹಾಕಿ ಹಸಮಾಡ |
ಲದು ಭೋಜನಾಂಕಿಕವೆನಿಸಿದ ತಕ್ರೋದನಂ |
ಚದುರರದಕುತ್ತಮದ ಕಂಪ ಮಾಗುಳಿಯಬೇರಿನೊಳುವೊಡೆವೆರಸಿಡುವುದು || ೨೬ ||

ಸರಿನೀರು ಸರಿಮೊಸರು ಶುಂಠಿ ನೀರುಳ್ಳಿಗಳ |
ತುರುವಲೇಲಕ್ಕಿ ತದುಕಿನ ಚಿಗುರ ಕಿಱುಗಟ್ಟು |
ವೆರಸಿ ನೀರೋಗರವ ಹಾಕಲದು ತ್ರೈಲೋಕ್ಯಪೂಜ್ಯ ತಕ್ರೋದನ ಕಣಾ ||
ಅರೆದ ಸಾಸುವೆಯ ಶುಂಠಿಯಿನಿಕ್ಕಿವೊಚ್ಚೆರೆ ಮೊ |
ಸರಿನಲ್ಲಿ ಮುಚ್ಚೆರೆಯ ನೀರ ಕದಡಿ ಮೋದವ |
ನಿರದೆ ನರೆಗೊಟ್ಟು ನೀರೋಗರವನಿಕ್ಕಲು ಸುಗಂಧತಕ್ರೋದನ ಕಣಾ || ೨೭ ||

ಎರಡು ಮೊಗೆಯುದಕದೊಳಗೊಂದು ಹಲ ಶುಂಠಿ ಮ |
ತ್ತರೆವಲ ಮಡಣಸನಿಕ್ಕಿಯೊಂದು ಮೊಗೆಯಾಗುವಂ |
ತಿರಲವಂ ಕಾಸಿಯುದಱೊಳಗೊಂದು ಭಾಗೆ ಮೊಸರಿನಿಸು ಶುಂಠಿಯ ರಸವನು ||
ಬೆರೆಸಿ ಸೋದಿಸಿಯುಳ್ಳ ಶುಂಠಿ ಕೇದಗೆಯ ಹೂ |
ಹುರಿದ ಕರಿಬೇವು ಮಾದಲದ ಸೊಪ್ಪಿಕ್ಕಿಯೋ |
ಗರವ ನೀರಿಂದ ತೆಗೆದಿಕ್ಕಿತಾಭುಕ್ತಿಕಾಂಚಿಕಮೆಂಬ ತಕ್ರೋದನಂ || ೨೮ ||

ಅಳೆಯೊಳೇಲಕ್ಕಿ ಸೈಂಧವ ಬೆಲ್ಲವತ್ತ ಮಾ |
ಗುಳಿಯಲ್ಲ ಕರಿಬೇವು ಸವೆದ ಸಾಸುವೆ ಮಾವಿ |
ನೆಳಗಾಯಿಕೊತ್ತುಂಬರಿಯನಿಕ್ಕಿ ನೀರೊಳಗಣೋಗರವ ಹಾಕಿಕೊಂಡು ||
ಬಳಿಕೊಂದು ಬೆಸಳಿಗೆಗೆ ಕಾದೋಡನಿರಿಸಿಯದ |
ಱೊಳಗೆ ಮುದದಿ ನರೆಯಂ ಕೊಟ್ಟು ಮಾಡಿದೊಡೆ ಹಸಿ |
ಯಳೆಯಸವನವೆಂದು ಹೆಸರಾಗಿ ಕಡುಪಿರಿದು ಸೊಗಸಂತಳೆದು ಹಿತಮಪ್ಪುದು || ೨೯ ||

ತಿಳಿಮಜ್ಜಿಗೆಯೊಳ್ಳುಳ್ಳಿ ಶುಂಠಿ ಸೈಂಧವನಿಕ್ಕಿ |
ಕಳಸಿಗೆಯ ಕಾಸಿ ಜೀರಿಗೆ ಸಾಸುವೆಯನಿಕ್ಕಿ |
ಬಳಿಕದಂ ಹುಯ್ದು ಒಗ್ಗರಿಸಿಯಿಂಗಂ ಕುದಿಸಿ ಇಳುಹಿ ತಣ್ಣನೆಯಾಱಿಸಿ ||
ಎಳೆಯಲ್ಲ ನೀರುಳ್ಳಿ ಬೆಲ್ಲವತ್ತದಕಾಯಿ |
ಬಿಳಿಯುಪ್ಪನಿಕ್ಕಿ ನೀರೋಗರಕೆ ಹಾಕಿ ಸಿಡಿ |
ಯಳೆಯ ಕೂಲಾಯಿತಿದಱಂತೆ ಉಪ್ಪಿನಕಾಯ್ಗಳೊಳು ಪಲವಗೆಯ ಮಾಳ್ಪುದು || ೩೦ ||

ಹುಳಿಮಜ್ಜಿಗೆಯನೊಡೆದ ತಿಳಿಗುಪ್ಪು ನೀರುಳ್ಳಿ |
ಎಳೆಯಲ್ಲ ತದುಕು ಮಾದಲದೆಳೆಯ ಚಿಗುರು ಮಾ |
ಗುಳಿಯ ಬೇರಿಕ್ಕಿಯೆರಡು ಭಾಗೆಯ ಮಾಡಿಯದಱೊಳೊಂದಕೆ ನೀರಶನವ ||
ಇಳುಹಿದೊಡೆ ಶಿವರಸೋದನವಾಯ್ತು ಮತ್ತಮೊಂ |
ದಳಗಯೊಳು ಮೋದವನಿರಿಸಿ ನರೆಯ ಕೊಟ್ಟು ನೀ |
ರೊಳಗಣೋಗರಮಿಕ್ಕಲಾಮೋದಶಿವರಸೋದನವೆಂಬ ಹೆಸರಾದುದು || ೩೧ ||

ಹುಳಿಯಳೆಯೊಳುಪ್ಪು ಜೀರಿಗೆ ಶುಂಠಿ ಕರಿಬೇವು |
ಎಳೆಯಲ್ಲ ಮಾದಲದ ಸೊಪ್ಪು ಸಾಸುವೆಯಿಕ್ಕಿ |
ಯಳಗೆಯೊಳಗೆಣ್ಣೆಯೆಂ ಬಿಟ್ಟು ಒಗ್ಗರಿಸಿಯದ ಮುಕ್ಕುದಿಯ ಬರಿಸಿಕೊಂಡು ||
ಇಳುಹಿ ಕೇದಗೆಯ ಹೂವುಗಳ ಹಾಕಿ ಪರಿ |
ಮಳವ ಬರಿಸಿದೊಡೆಯದು ನಿಜತಕ್ರಸಾರಶಿವರಸವೆಸರ ಕೂಳಾದುದು || ೩೨ ||

ತಿಳಿಪಿನಂಬಿಲಕುಪ್ಪ ನೀರುಳ್ಳಿ ಹಸಿಯಲ್ಲ |
ಗಳನು ಸೋಧಿಸಿ ಹಾಕಿಯರೆದ ಸಾಸುವೆಯಿಕ್ಕಿ |
ತಿಳಿಯಣ್ಣೆಯಿಂದ ಒಗ್ಗರಿಸಿಯಾಱಿಸಿ ಹಲವು ಬಗೆ ಮಾಡಿದೊಂದೊಂದಕೆ ||
ಎಳೆಯ ಮಾವಿನಕಾಯಿ ಬೆಲ್ಲವತ್ತದ ಕಾಯಿ |
ಗಳ ಹೋಳು ಮಾದಲದ ಕಾಯಿಗಳ ಹೋಳುಗಳ |
ನಿಳುಹಿಕೊಂಡಾಕಾತ ಹೆಸರ ಕಾಂಚಿಕಭಾತು ಎಂದು ನಾಮವನಿಡುವುದು || ೩೩ ||

ಒಂದು ಮಡಕೆಯೊಳರ್ಧ ಮಡಕೆ ನೀರಂ ಹೊಯ್ದು |
ಒಂದು ಮಾನುಪ್ಪೊಂದು ಮಾನ ಸಾಸುವೆಯ ಹುಡಿ |
ಯೊಂದಾಗಿ ಹಾಕಿ ನೀರುಳ್ಳಿ ಮಾಂಗಾಯಿ ಹಸಿಯಲ್ಲಮಂ ಬೆರೆಸಿಕೊಂಡು ||
ಒಂದಿಸಿದ ಬಳಿಕ ನೀರೋಗರವನದಱೊಳಗೆ |
ತಂದಿಕ್ಕಿಯದನು ಮಾದಲದ ತದಿಕಿನ ಸೊಪ್ಪಿ |
ನಿಂದ ಪರಿಮಳಗೊಳಿಸಿ ಸರ್ಷಪಸಮೇತಾಂಬುಭಾತುವೆಸರಂ ಕೆರವುದು || ೩೪ ||

ಒಂದು ಮಡಕೆಯ ನೀರ ನಾಲ್ಕೈದು ಬಗೆ ಮಾಡಿ |
ಒಂದಕ್ಕೊಂದೊಂದು ಹೂವಿನ ಪರಿಮಳಂಗಳಂ |
ತಂದಿಕ್ಕಿಯವಕೆಯುಪ್ಪಿಟ್ಟು ಒಂದಕ್ಕೆ ಹುಳಿಯುಳ್ಳಿ ಶುಂಠಿಗಳನಿಕ್ಕಿ ||
ಒಂದಕ್ಕೆ ಕರ್ಪೂರ ಒಂದಕ್ಕೆ ಕಸ್ತೂರಿ |
ಒಂದಕ್ಕೆ ಲಾಮಂಚ ಒಂದಕ್ಕೆ ಮಾಂಗಾಯಿ |
ಒಂದಕ್ಕೆ ಯಾಲಕ್ಕಿಯಿಕ್ಕಿ ನೀರಶನಮಂ ಹಾಕಲವು ಪಾಣಿಭಾತು || ೩೫ ||

ಬೆಳಕಿಯಕ್ಕಿಯ ನೆನಹಿ ಕುಟ್ಟಿಯಂಬಿಲಕರ್ಧ |
ತಿಳಿಯುದಕದರ್ಧಮ ಕದಡಿ ಜೀರಿಗೆಯುಳ್ಳಿ |
ಯಳೆಯಲ್ಲಮಿಕ್ಕಿಯೊಲೆಗೆತ್ತಿ ಸಟ್ಟುಗದಿ ಹದನಪ್ಪಂತೆ ಇಂಗಲಟ್ಟು ||
ಇಳುಹಿದಂಬಲಿಯನಿತ್ತೆಱ ಮಾಡಿ ಒಂದಕ್ಕೆ |
ಕಳಲು ಮತ್ತೊಂದಕ್ಕೆ ಗುಳುಮಜ್ಜಿಗೆಯನಿಕ್ಕಿ |
ಬಳಿಕವಂ ಪಲವು ತೆಱ ಮಾಡಿ ನಾನಾ ಬಗೆಯ ಪರಿಮಳಂಗಳನಿಡುವುದು || ೩೬ ||

ಬಿಸಿಲಕ್ಕಿಯಂ ತೊಳೆದು ನೀರಂಬಿಲದಯೆಸಱ |
ನೊಸೆದು ಒಲೆಗೆತ್ತಿಯಕ್ಕಿಯ ಹಾಕಿ ನೀರುಳ್ಳಿ |
ಹಸಿಯಲ್ಲ ಕರಿಬೇವು ಕೊತ್ತುಂಬರಿಯನಿಕ್ಕಿ ಜೀರ್ಣಮಪ್ಪಂತೆಯಟ್ಟು ||
ಬಿಸಿಯನಾಱಿಸಿ ಹಿಟ್ಟಿನಂಬಲಿಯ ಮಾಡುವ ತೆಱದಿ |
ಹಸನಾಗಿ ಮಾಡಿ ಮತ್ತೆ ಶೈತ್ಯಂಗೊಳಿಸಿ ಪಲವು ಪರಿಮಳಗಳನಿಡುವುದು || ೩೭ ||

ಮತ್ತಮಾ ಅಂಬಿಲಕೆ ಹೊಸ ಮೊಸರು ಸರಿ ಹಾಲ |
ನಿತ್ತುಪ್ಪನಿಕ್ಕಿ ಕರಿಬೇವು ಹಸಿಯಲ್ಲ |
ಕೊತ್ತುಂಬರಿಯನಿಕ್ಕಿ ಹೂಗಂಪ ಪೊರೆಯೊತ್ತಿ ಮಾಡಿದೊಡೆ ಸಿಹಿಯಂಬಲಿ ||
ಮತ್ತಮೊಂದಕ್ಕೆ ಮಜ್ಜಿಗೆಯೆಱಿದು ಕರಿಬೇವು |
ಕೊತ್ತಂಬರಿಯನಿಕ್ಕಿ ನೀರುಳ್ಳಿ ಶುಂಠಿಗಳ |
ಚಿತ್ತಳಿಸಿ ಹಾಕಿಯಂತದವೊಗ್ಗರಣೆ ಮಾಡಿ ಪರಿಮಳವ ಪೊರೆಯಿಡುವುದು || ೩೮ ||

ಈ ವಿಧದಿನಂಬಲಿಯ ಹಲವು ಬಗೆಯ ಮಾಡಿ |
ಸೇವಂತಿಯಿರವಂತಿ ಲಾಮಂಚ ಮೊಲ್ಲೆ ನಂ |
ದ್ಯಾವರ್ತ ಬಕುಲ ಸುರಹೊನ್ನೆ ಸಂಪಗೆ ಜಾಜಿಯದಿರ್ಗಂತಿ ಮರುಗ ದವನ ||
ಬಾವನ್ನ ಬಕ್ಕಯೆಳೆಗಾಯಿ ಕಣಿಗಿಲೆಯೀಳೆ |
ಈವೂವು ಮುಡಿವಾಳ ಹೊಂಬಾಳೆ ಪಚ್ಚೆಯಿವ |
ನೋವಿ ಭಾವನೆಗೊಟ್ಟು ಮಡಕೆಯೊಳು ತೀವಿ ಶೈತ್ಯಂಗೊಳಿಸಿ ಹಸ ಮಾಳ್ಪುದು || ೩೯ ||

ತೊಳೆದ ಗೋಧುವೆಗೆ ಜೀರಿಗೆಯೆರಡಪೊರೆಯೊತ್ತಿ |
ಕಳಿಯರ್ಧ ನೀರರ್ಧವಾದೆಸಱನೆತ್ತಿಯದ |
ಱೊಳಗಿಕ್ಕಿ ಮಿಲುಗಿ ನೀರಿಂಗುವಂದದಿನಟ್ಟುಕೊಂಡಿಳುಹಿಯಾಱಲೊಡನೆ ||
ಬಿಳಿಯಱುವೆಯಿಂದೆ ಸೋದಿಸಿ ಪಲಪಸುಗೆ ಮಾಡಿ |
ಕೊಳುತೊಂದಕರ್ಧ ಹಾಲಿಕ್ಕಿ ಸಕ್ಕರೆಯಿಕ್ಕಿ |
ಕುಳಿರ್ದ ಪನಿನೀರು ಕರ್ಪೂರವಿಕ್ಕಲದು ಹಾಲಗೋಧುವೆಯಂಬಲಿ ಕಣಾ || ೪೦ ||

ಉಳಿದ ಗೋಧುವೆಯ ಅಂಬಲಿಯೊಳಗೆಯೊಂದಕ್ಕೆ |
ಕಳಲುಪ್ಪುವೊಂದಕ್ಕೆ ಸರಿಪಾಲು ಸರಿಮೊಸರ |
ಕಳಲು ಮತ್ತೊಂದಕ್ಕೆ ಹಸನಾಗಿ ಮಾಡಿ ಸೋಧಿಸಿದ ಮಜ್ಜಿಗೆಯನೆಱಿದು ||
ಬಿಳಿಯುಪ್ಪು ನೀರುಳ್ಳಿ ಯಾಲಕ್ಕಿ ಕರಿಬೇವು |
ಎಳೆಯಲ್ಲ ಮಾದಲದಕಾಯಿ ಮಾಗುಳಿಯಿಕ್ಕಿ |
ತಳಿದು ಸಿರಪಚ್ಚೆಯಂ ಹಲವು ಹೂವಿನ ಪರಿಮಳಂಗಳಂ ಪೊರೆಯಿಡುವುದು || ೪೧ ||

ಇದು ಹರುಷದಿಂದ ಲಾಲಿಸಿ ಕೇಳ್ವೆನೆಂದೆಂಬ |
ಸುದತಿಯರ ಕಿವಿಗೆ ನವಮಾಣಿಕದ ಮಿಂಚೋಲೆ |
ಇದು ಕಲಿವೆನೆಂದೋದುವಬಲೆಯರ ಬಾಯ್ದೆರೆಗೆ ನವಸುಧಾರಸದ ಪಿಂಡ ||
ಇದು ಪಾಕಮಂ ಮಾಳ್ಪೆನೆಂದುಜ್ಜುಗಂ ಮಾಳ್ಪ |
ಚದುರೆಯರ ಕೈಗೆ ನವರತ್ನಮುದ್ರಿಕೆಯೆನಿಸಿ |
ತಿಳಿಱೊಳಗೆ ಸಲೆ ಸೊಗಸುವಡೆದ ಕಳಮಾನ್ನಪಾಕಾಧ್ಯಾಯಮುಂ ಸಮಾಪ್ತಂ ೪೨ ||