ಅದನುಬ್ಬೆತಾಕದಂದದೊಳು ಮಡಗಿಸಿಕೊಂಡ |
ಡದು ನೇತ್ರಗರ್ಭಿತ ಪನಸಪಾಕ ರಸಮಾಯಿ |
ತದಱಂತೆ ಬಾಳೆ ಸೊರೆ ಹೀರೆ ಕತ್ತರಿಗುಳ್ಳ ಹಡಲ ಹಾಗಲ ಕೂಗರಿ ||
ಬದನೆ ಮೊದಲಾದ ಕಾಯ್ಗಳ ರಸಂಗಳ ತೆಗೆದು |
ಹದಪಡಿಸಿಯತ್ತರದೊಳಿರಿಸಿ ಪರಿಮಳಗೊಳಿಸ |
ಲದು ಪಾರ್ವತೀಮತದ ರಸಪಾಕವೆಂದೆನಿಸಿ ಹಿರಿದು ಸವಿಯಂ ಹಡೆದುದು || ೪೧ ||

ಕಡುಮೆತ್ತನುಕ್ಕರಿಸಿಕೊಂಡ ಹಲಸಿನಕಾಯ |
ಕಡಲೆಯಂದದೊಳು ಕತ್ತರಿಸಿಯುಪ್ಪಿಂಗು ಹುಳಿ |
ಯೊಡನೆ ತುಪ್ಪವನೆಱೆದು ತಾಳಿಸಿಯವರೆಯಂತೆ ಕತ್ತರಿಸಿ ಬದಲಿ ಹಾಲ |
ಬಡಗಸಂಡಗೆಯುಳ್ಳಿ ತೆಂಗಾಯಿ ಶುಂಠಿಗಳ |
ಹುಡಿಯಿವೆಲ್ಲವನು ತುಪ್ಪದಿ ಹುರಿದು ಹದ ಮೆಣಸ |
ಜಡಿದ ಮೊಸರಂ ಕಲಸಿ ತುಪ್ಪದೊಳಗಟ್ಟು ಒಗ್ಗರಿಸಿ ಪುಡೆಹವ ಮಾಳ್ಪುದು || ೪೨ ||

ಉಂಡೆ ಹಲಸಿನ ಕಾಯ ಮೇಲಣೋಟೆಯ ಕೆತ್ತಿ |
ಗುಂಡಿ ಬೆಸಳಿಗೆಯ ಮಧ್ಯದೊಳು ಹಗಱಂ ಹರಹಿ |
ಕೊಂಡದಂ ಮಡಗಿ ಸರಿನೀರು ಸರಿಯಕ್ಕಿಗಚ್ಚಂ ಹುಯಿದು ಪಾಕಮಾಡಿ ||
ಹಿಂಡಿಕೊಂಡಾ ನೀರ ಕರ್ಬೊನ್ನ ಸಲಿಗೆಯೊಳು |
ದಿಂಡು ಮುಟ್ಟುವ ತೆಱದಿ ಹಸನಾಗಿ ಮುಳ್ಳಿಱೆದು |
ಕೊಂಡದಕೆ ಮೊಸರ ಸಂಭಾರಮಂ ತುಂಬಿ ಮತ್ತದಱೊಳಗೆ ಹೊದಡಿಕೊಂಡು || ೪೩ ||

ಅದಕೆ ಹೊಸಕಣಿಕದಂಗಾರ ಹೋಳಿಗೆಗಳಂ |
ಹೊದಿಸಿ ಕೋಲಂ ಮುಚ್ಚಿ ತರಿಗೆಂಡದೊಳಗೆ ಕೆಂ |
ಪೊದಗುವಂದದಿ ಕಾಸಿಯಾ ಹೋಳಿಗೆಯ ತೆಗೆದು ಮೆಣಸುಳ್ಳಿ ಜೀರಿಗೆಗಳ ||
ಉದುರೆಯಂ ಹೊರಸಿ ಮತ್ತೊಮ್ಮೆ ತುಪ್ಪವನೆಱೆದು |
ಮೃದುವಪ್ಪ ತೆಱದಿ ಪಾಕಂ ಮಾಡಿಕೊಂಡು ಮ |
ತ್ತದಖಂಡತರ ಪನಸ ಫಲಪಾಕವೆಂದು ಹೆಸರಂ ಕರೆದು ಪರಿಮಳಿಪುದು || ೪೪ ||

ಉರುಳೆವಲಸಿನಕಾಯ ಕೆತ್ತಿ ಬೇಯಿಸಿಕೊಂಡು |
ಹಿರಿದಾಗಿ ಮುಳ್ಳಿಱೆದು ಮೊಸರು ಸೊಜ್ಜಿಗೆಯ ಹಾ |
ಲರಿಸಿನಕೆ ಕೂಡಿ ಚಾತುರ್ಜಾತಕವನು ಮತ್ತಾಬೆಂದಕಾಯ ಮೇಲೆ ||
ಹೊರಸಿ ತುಪ್ಪವನೆಱೆದು ಸಲಗೆಯಿಂದವೆ ಚುಚ್ಚಿ |
ಅರಳುಗೆಂಡದೊಳು ಹಿಡಿದಿಡಿದು ಗೌರಂ ಮಾಡಿ |
ಪರಿಯಣಕೆ ತೆಗೆದುಕೊಂಡಾಕಾಯ ತೊಟ್ಟಿನೊಳು ಸೀಳಿ ದಿಂಡಂ ತೆಗೆವುದು || ೪೫ ||

ಮತ್ತಮಾ ದಿಂಡುಮಂ ತೆಗೆದು ಕಾಯೊಳಮೈಗೆ |
ಮೆತ್ತನೆಯ ಮಂಡಗೆಯ ಚೂರ್ಣ ತನಿವಾಲ ಕೆನೆ |
ಯುತ್ತಮದ ತೆಂಗಾಯ ಹೂವುಪ್ಪು ಮೆಣಸು ಹಲಸಿನಕಾಯ ಪುಡೆಯಗಳನು ||
ಒತ್ತರಿಸಿ ಪರಿಮಳದ ಚೂರ್ಣಮಂ ತಳಿದದಕೆ |
ಮತ್ತೆ ಕವೆಗೋಲಿಂದೆ ಕಟ್ಟಿ ಕೆಂಡಕೆ ಹಿಡಿದು |
ಹೊತ್ತದಂದದೊಳಗಟ್ಟು ಪೂರಣಪನಸಫಲಸುಪಾಕ ಹೆಸರಂ ಕರೆವುದು || ೪೬ ||

ಎಳೆಯ ಬಕ್ಕೆಯ ಕಾಯ ಮುಳ್ಳನೆಲ್ಲವ ಕೆತ್ತಿ |
ಕಳಿಯ ಬೇಯಿಸಿ ಎರಡು ಹೋಳಾಗಿ ಸಮದಿ ಸಂ |
ಬಳಿಸಿದಾ ಹೋಳುಗಳ ತಿರುಳನೆಲ್ಲವನು ತೆಗೆದೈದಾಱು ಬಗೆಯ ಮಾಡಿ ||
ಬಳಿಕ ಪಲಸವಿಯ ಸಂಭಾರವನವಕೆ ತುಂಬಿ |
ತಿಳಿದುಪ್ಪವೆಱೆದು ನಾರಂ ಸುತ್ತಿ ಮಾದಲದ |
ತಳಿರಪುಲ್ಲಿಗೆಗಳಂ ಹೊದಿಸಿ ನೆಲದೊಳಗೆ ಪುಟವಿಕ್ಕಿ ಬಿಸಿಯಂ ಮಾಳ್ಪುದು || ೪೭ ||

ನೆಲದ ಸೆಖೆಯಿಂದ ಬೆಂದಾಕಾಯ ತೆಗೆದು ಪುದಿ |
ದೆಲೆಯ ಪುಲ್ಲಿಗೆಯುಮಂ ಬಿಸುಟು ತಿಳಿದುಪ್ಪಮಂ |
ಸಲೆ ತಳಿದು ಚೆನ್ನಾಗಿ ತರಿಗೆಂಡದೊಳು ಕಾಸಿ ಕೆಂಪಾದ ಬಳಿಕ ತೆಗೆದು ||
ಬಲಿದ ತೆಂಗಿನಕಾಯ ತನಿವಾಲ ತಳಿದು ಪರಿ |
ಮಳವಿಕ್ಕಿ ಪಾಕಮಂ ಮಾಡಿ ಹೊಸ ಹೊರಣದ |
ಹಲಸುಗಾಯೆಂದು ಹೆಸರಂ ಕೊಟ್ಟೊಡದು ಭೂಭಜರ್ಗೆ ಪಾವನಮಾದುದು || ೪೮ ||

ಹುಡಿಯಾಗುವಂತೆ ಎಳೆವದದ ಹಲಸಿನ ಕಾಯ |
ಕಡಿದು ಉಕ್ಕರಿಸಿ ತಿಳಿದುಪ್ಪದಿಂ ಹುರುದಿಕೊಂ |
ಡೊಡವೆರಸಿ ಮೆಣಸುಪ್ಪ ನಾಲ್ಕೈದು ಬಗೆ ಮಾಡಿಯೊಂದೊಂದಕೊಂಡು ತೆಱದ ||
ಕಡುಸವಿಯ ಸಂಭಾರಮಂ ಬಗೆಯಱಿದು ಕೂಡಿ |
ಕಡುಗಂಪಿತಪ್ಪ ತುಪ್ಪದೊಳು ಪೊಡ್ಡಣಿಗೆಯಂ |
ಕೊಡುತ ಪರಿಮಳವಿಕ್ಕಿಯರಿಸಿನದ ತಱಗಿನೊಳು ಕಟ್ಟಿ ಪುಡೆಯವ ಮಾಳ್ಪುದು || ೪೯ ||

ಪುಡೆಯಮಂ ಮಾಡಿ ಎಳೆವದದ ಹಲಸಿನಕಾಯ |
ನೊಡೆವೆರಸಿ ಸಂಭಾರವಂ ತುಪ್ಪವೆಱೆದಟ್ಟಿ |
ಬಡಗಸಂಡಗೆಯಂತೆ ಉರುಳಿಯಂ ಮಾಡಿಯುದ್ದಿನ ಸಂಪಳಯೊಳದ್ದಿ ||
ಕಡುಗಂಪಿತಾದ ತುಪ್ಪದೊಳು ಕೆಂಪಾಗುವಂ |
ತಡಿಗೆಯಂ ಮಾಡಿ ಹುರುಳಿಯ ಹಾಲಿನೊಳಗಿಳಿಯ |
ಬಿಡುತ ಒಗ್ಗರಿಸಿನರೆಯಂ ಕೊಟ್ಟು ನಸು ಹುಳಿಯನಿಕ್ಕಿ ಪರಿಮಳವಿಡುವುದು || ೫೦ ||

ಸುತ್ತೋಲೆಯಂತೆ ಎಳೆವದದ ಬಕ್ಕೆಯ ಕಾಯ |
ಕತ್ತರಿಸಿ ಮೊದಲು ಹೇಳಿದ ತೆಱದಿನುಕ್ಕರಿಸಿ |
ಒತ್ತಿ ನೀರಂ ಹಿಂಡಿ ಕದುಕಿಱಿದು ಕೆಲಹೋಳುಗಳ ತುಪ್ಪಗಾಯ ಮಾಡಿ ||
ಮತ್ತೆ ಕೆಲಹೋಳ ದಧಿಸಾರಿಕೆಯವೊಲು ಮಾಡಿ |
ಉತ್ತಮದ ಸಕಲ ಸಂಭಾರಮಂ ಕೆಲಹೋಳಿ |
ಗಿತ್ತು ಕೆಲವಕ್ಕೆ ಸಿಹಿಯಿಕ್ಕಿ ಒಗ್ಗರಿಸಿ ಹದನಾಗಿ ಪರಿಮಳವಿಡುವುದು || ೫೧ ||

ಇನ್ನು ಕೆಲವೆಳೆಯ ಹಲಸಿನಕಾಯ ಹೋಳುಗಳ |
ಮುನ್ನ ಬದನೆಯಕಾಯ ಬೂದಿಬಾಳೆಯ ಹೂವ |
ಉನ್ನತಿಕೆವಡೆದ ಕಗ್ಗುಂಬಳದ ಕಾಯನಡಹೇಳಿಯವಱೊಳಗೆ ಕೆಲವ ||
ಬಿನ್ನಣದಿನವಱಂತೆ ಪಾಕಮಂ ಹಸಮಾಡಿ |
ಭಿನ್ನಪರಿಮಳವಿಕ್ಕಿ ಮತ್ತವಱ ಹೆಸರಂತೆ ಹೆಸರನೊಲವಿಂ ಕರೆವುದು || ೫೨ ||

ದೋರೆವಲಸಿನಕಾಯ ಬಿತ್ತ ಬಿಸುಟಾ ತೊಳೆಯ |
ನೀರಕ್ಕಿಗಚ್ಚಿನಿಂದುಕ್ಕರಿಸಿ ಸಕಲ ಸಂ |
ಭಾರಮಂ ಮೊಸರೊಳಗೆ ಕಲಸಿ ಕೊಣಬಂ ಕಾಸಿ ಮತ್ತಮಾ ಹೋಳ ಹಾಕಿ ||
ನೀರುಳ್ಳಿ ಶುಂಠಿಯಂ ಚಿತ್ತಳಿಸಿ ಬೆರಸಿಯಂ |
ಗಾರ ಧೂಪವ ತೋಱಿ ಒಗ್ಗರಣೆಯಂ ಮಾಡಿ |
ಪೂರಯಿಸಿ ಪರಿಮಳವ ಪನಸಭಂಜಿತಶಾಕವೆಂದು ಹೆಸರಂ ಕರೆವುದು || ೫೩ ||

ಕಡಲೆಯಂದದೊಳು ಹಲಸಿನ ತೊಳೆಯನುತ್ತರಿಸಿ |
ಹುಡಿಮೆಣಸು ಶುಂಠಿ ಯಾಲಕ್ಕಿಯಂ ಮೊಸರ ಕೆನೆ |
ಯೊಡನಿಕ್ಕಿ ಮತ್ತೆ ಕೆಲವುಕ್ಕರಿಸಿಕೊಂಡ ತೊಳೆಯೊಳಗವಂ ತುಂಬಿಕೊಂಡು ||
ಕಡುಗಂಪಿತಪ್ಪಂತೆ ತುಪ್ಪದೊಳು ಪೊಡ್ಡಣಿಗೆ |
ಗೊಡುತ ಕೇದಗೆಯ ಹೂವ ಪನಿನೀರು ಕರ್ಪೂರದ |
ಹುಡಿಯಿಕ್ಕಿಯಂತವ ಕದಂಬಭರ್ಜಿತಪನಸಫಲಶಾಕವೆಸರಿಡುವುದು || ೫೪ ||

ಸಕ್ಕರೆಯ ಪಾಕದೊಳು ನಸುಮೆಣಸಿನುದುರೆ ಯಾ |
ಲಕ್ಕಿಕೇದಗೆಯ ಹೂ ಪನಿನೀರು ಕರ್ಪೂರ |
ಮಿಕ್ಕಿಯುಕ್ಕರಿಸಿದಾ ದೋರೆವಲಸಿನ ತೊಳೆಯನೊಡಗಲಸಿ ಪರಿಮಳಿಪುದು ||
ಮಿಕ್ಕ ತೊಳೆಯವನು ಕಡಲೆ ತೋರದೊಳು ಕಡಿದು |
ಚೊಕ್ಕಟದ ಸಂಭಾರಮಂ ಕಲಸಿ ತುಪ್ಪದೊಳ |
ಗಿಕ್ಕಿ ತಾಳಿಸಿ ಪುಡೆಯುಮಂ ಮಾಡಿ ಪರಿಮಳವನಿಕ್ಕಿ ನೆರೆಯಂ ಕೊಡುವುದು || ೫೫ ||

ಕೆಲವು ಹೊಸದೋರೆವಲಸಿನ ತೊಳೆಯನುಕ್ಕರಿಸಿ |
ಪಲಭಾಗೆಯಂ ಮಾಡಿ ತಾಳಿದಂಗಳನಟ್ಟು |
ಕೆಲವಕ್ಕೆ ಹುಳಿ ಮತ್ತೆ ಕೆಲವಕ್ಕೆ ತವರಾಜ ಕೆಲವಕ್ಕೆ ಹಾಲದುದ್ದು ||
ಕೆಲವಕ್ಕೆ ಹುರಿದ ಕಡಲೆಯ ಚೂರ್ಣಮಂ ತಳಿದು |
ಸಲೆಗಂಪಿತಾದ ತುಪ್ಪದೊಳು ಒಗ್ಗರಿಸಿ ಪರಿ |
ಮಳವಿಕ್ಕಿ ಹುಣಿಸೆಯೆಳೆಗಾಯ ತುಪ್ಪದಿ ಹುರಿದು ಹಾಕಿ ಹಸನಂ ಮಾಳ್ಪುದು || ೫೬ ||

ಕಳಿದ ಹಲಸಿನ ಹಣ್ಣ ತೊಳೆಗಳಂ ಸಲೆ ಕಿವುಚಿ |
ಹಿಳಿದ ರಸದಲ್ಲಿ ಮತ್ತಾ ತೊಳೆಯ ಹಾಕಿ ಪರಿ |
ಮಳಿಸುವುದು ಕೆಲವು ತೊಳೆಗಳ ರವೆಗೆ ಸಕ್ಕರೆಯನಿಕ್ಕುವುದವನಿಕ್ಕುವುದು ||
ತೊಳೆಯೊಳಗೆ ಮತ್ತೆ ಕೆಲತೊಳೆದು ಕಡಿದಿಕ್ಕಿ ಸಿಹಿ |
ಗೊಳಿಸುವುದು ಪೊಸತಾದ ಜೇನತುಪ್ಪದೊಳು ಕೆಲ |
ತೊಳೆಯನಿಕ್ಕುವುದು ಕೆಲವುಂ ತೊಳೆಯ ಪಲತೆಱದಿ ಕೀಕರಣೆಗಳ ಮಾಳ್ಪುದು || ೫೭ ||

ಹಳೆಯಕ್ಕಿಗಚ್ಚಿನೊಳು ನೀರುಪಲಸಿನಕಾಯ |
ಕಳಿಯ ಬೇಯಿಸಿ ಬಸಿದು ಕದುಕಿಱಿದು ನೀರುಮಂ |
ಹಿಳಿದುಪ್ಪು ಶುಂಠಿ ನೀರುಳ್ಳಿ ಕೊತ್ತುಂಬರಿಯ ರಸ ಮೆಣಸು ಜೀರಿಗೆಯನು |
ಕಳಲೊಳಗೆಯಿಕ್ಕಿಯರಿಸಿನ ಸಹಿತ ಸಮೆದು ಹಸ |
ಗೊಳಿಪ ಕಲ್ಕದೊಳು ಹೊರಳಿಸಿಕೊಂಡದನು ಕಾಸಿ |
ಬಳಿಕ ತುಪ್ಪವನೆಱೆದು ಬೇಯಿಸಲು ಭಕ್ತಫಲನೀರಪನಸಮದಾದುದು || ೫೮ ||

ಕುದಿಗೊಳಿಸಿ ನೀರಹಲಸಿನಕಾಯ ಚುಚ್ಚಿಕೊಂ |
ಡದಕೆ ತೆಂಗಿನ ಹಾಲು ಸೊಜ್ಜಿಗೆಯ ರಸ ಹಾಲು |
ವುದುರೆವಡೆದುಪ್ಪು ಶುಂಠಿಯ ಸಾರ ತಿಳಿದುಪ್ಪವೆಱೆದಱೆದು ಕೋಲ ಚುಚ್ಚಿ ||
ಮೃದುಗೊಳಿಸಿ ಕೆಂಡದೊಳು ಹಿಡಿದು ಬೇಯಿಸಿಕೊಂಡು |
ಹದಗೊಳಿಸಿ ಪುಡಿಮೆಣಸನಿಕ್ಕಿ ತಿಳಿದುಪ್ಪವೆಱೆ |
ದದನು ಬೇಯಿಸಲು ತಾಂ ಕ್ಷೀರಪಾಕದ ಪನಸಫಲವೆಂಬ ಹೆಸರಾದುದು || ೫೯ ||

ಮೃದುಮಾಡಿಯುಕ್ಕರಿಸಿ ನೀರ ಪಲಸಿನಕಾಯ |
ಕದುಕಿಱಿದು ನೀರುಮಂ ಹಿಳಿದದನು ಕತ್ತರಿಸಿ |
ಹದಮಾಡಿ ಹುಳಿಯುಪ್ಪು ಶುಂಠಿ ನೀರುಳ್ಳಿ ಕೊತ್ತುಂಬರಿಯನರೆದುಕೊಂಡು ||
ಕುದಿಯಿಸಿದ ಕಲ್ಕದೊಳು ಹೊದಟಿ ದ್ರವವಿಂಗುವಂ |
ತದನು ತರಿಗೆಂಡದೊಳು ಕಾಸುವುದು ಬೆಸಣಿಗೆಯೊ |
ಳೊದವಿಸಿದ ತಿಳಿದುಪ್ಪಮೆಱೆದು ಒಗ್ಗರಿಸಿಯಂಗಾರಧೂಪವನೆ ತೋಱಿ || ೬೦ ||

ಅವಱೊಳಗೆ ತುಂಬಿ ಹೋಳಂ ಹುದುಗಿ ಚೆನ್ನಾಗಿ
ಸವೆದ ಬಿಳಿಯುದ್ದಿನ ಸರಿಯನಿಕ್ಕಿಕೊಂಡವಂ |
ಕವೆಗೋಲಿನೊಳು ಕಟ್ಟಿ ಬೆಣ್ಣೆಗಾಸಿದ ತುಪ್ಪವಂ ಮೇಲೆ ತಳಿದುಕೊಂಡು ||
ದ್ರವವಿಂಗುವಂತಟ್ಟ ಬದನೆಗಾಯಿಗಳ ಕುಯಿ |
ದವನು ಬಟುಕುಂ ಮಾಡಿ ಮೆಣಸುಹುಡಿಯಂ ಕೂಡಿ |
ಸವಿವಡೆದ ಪನಸಕವನಿಕ್ಕಿ ವೃಂತಾಕಪನಸಶಲಾಕವೆಸರಿಡುವುದು || ೬೧ ||

ಉಕ್ಕರಿಸಿದೀರಪಲಸಿನಕಾಯ ಸಂಭಾರ |
ಮಿಕ್ಕಿ ಕವೆಗೋಲಿಂದ ಬೇಯಿಸುವುದೊಂದು ತೆಱ |
ಸಕ್ಕರೆಯ ಹುರಿದ ಸೊಜ್ಜಿಗೆಯೊಳೊಡಗಲಸಿ ತೆಂಗಿನಕಾಯ ಹೂವ ಹುರಿದು ||
ಇಕ್ಕಿ ತುಪ್ಪದೊಳು ಬೇಯಿಸಲೊಂದು ತೆಱಹುಳಿಯ |
ನಿಕ್ಕಿ ಸಿಹಿಗೂಡಿ ಸಂಭಾರವನು ಬೆರಸಿ ಯಾ |
ಲಕ್ಕಿಯಂ ತಳಿದು ತುಪ್ಪವನೆಱೆದು ಬೇಯಿಸುವುದೊಂದು ತೆಱನಾಯಿತು ಕಣಾ || ೬೨ ||

ಮೆತ್ತನುಕ್ಕರಿಸಿಕೊಂಡೀರಪಲಸಿನಕಾಯ |
ನೊತ್ತಿ ಹಿಡಿದದನು ಕದುಕಿಱಿದು ಕಿಱಿಕಿಱಿದಾಗಿ |
ಕತ್ತರಿಸಿ ಹಾಲುಪ್ಪು ಶುಂಠಿಯಂ ಹಾಕಿ ಬಱನಾಗಿ ಬೆಂದುದನೆ ತೆಗೆದು ||
ಮತ್ತೆ ತಿಳಿದುಪ್ಪವೆಱೆದಟ್ಟು ತೆಂಗಿನ ಹಾಲ |
ನುತ್ತಮದ ಹಾಲೊಳಗೆ ಬೆರಸಿ ಸಂಭಾರಗಳ |
ನೊತ್ತರಿಸಿ ಕದಡಿ ಸೋದಿಸಿಯೊಲೆಯೊಳೊತ್ತಿ ಚೆನ್ನಾಗಿ ಪಾಕವನೆ ಮಾಡಿ || ೬೩ ||

ಸಟ್ಟುಗವ ಹತ್ತುವಂತಾಗೆ ತಿಳಿದುಪ್ಪವಂ |
ಬಿಟ್ಟುಳ್ಳಿಯಿಂಗು ಕರಿಬೇವು ಕೆಂಡದಿ ಧೂಪ |
ವಿಟ್ಟು ಒಗ್ಗರಿಸಿ ತೆಂಗಿನಕಾಯ ಹಾಲನೆಱೆದಾ ಕಾಯ ಹೋಳುಗಳನು ||
ಇಟ್ಟು ಮಾಡುವುದೊಂದು ತೆಱನಾ ಕೊಣಬಿನೊಳಗೆ |
ಗಟ್ಟಿ ಬೆಲ್ಲದ ಚೂರ್ಣವಿಕ್ಕಿ ಪೊಡ್ಡಣಿಗೆಯಂ |
ಕೊಟ್ಟು ಪರಿಮಳವಿಕ್ಕಿ ಮಾಡುವುದು ಮತ್ತೊಂದು ತೆಱದೀರಪಲಸುಗಾಯಿ || ೬೪ ||

ಈರಪಲಸಿನಕಾಯ ಕುದಿಸಿ ಮುಳ್ಳಿಱಿದು ಹುಳಿ |
ಜೀರಗೆಯ ಮೆಣಸುಳ್ಳಿಯರಿಸಿನವನರೆದುದಕೆ |
ಪೂರೈಸಿ ಕವೆಗೋಲಿನಿಂ ಕಟ್ಟಿ ತಿಳಿದುಪ್ಪವೆಱೆದೆಱೆದು ಕೆಂಡದೊಳಗೆ ||
ಗೌರಾಗುವಂತಟ್ಟು ನಡುದಿಂಡ ತೆಗೆದು ಸಂ |
ಭಾರಮಂ ತುಂಬಿ ಹಾಲೆಱೆದದಕೆ ಕಣಿಕವಂ |
ಗಾರವಳಿಗೆವದೆನಿಸಿ ತುಪ್ಪವೆಱೆದದಕೆ ಕಣಿಕವಂ |
ಗಾರವಳಿಗೆವದೆನಿಸಿ ತುಪ್ಪವೆಱೆದಡಲು ಗೋಧೂಮಪುಡಿಪನಸಮಾಯ್ತು || ೬೫ ||

ಕತ್ತರಿಸಿದೀರಪಲಸಿನಕಾಯ ತುಪ್ಪದೊಳ |
ಗಿತ್ತು ತಾಳಿಸಿಯುಪ್ಪು ಮೆಣಸುಳ್ಳಿ ಕರಿಬೇವು |
ಕೊತ್ತುಂಬರಿಯ ರಸವ ಮೊಸರೊಳಗೆ ಕೂಡಿ ನಸುಹುಳಿಯಿಕ್ಕಿ ಕಾಯ ಕಲಸಿ ||
ಉತ್ತಮದ ಬೆಣ್ಣೆಗಾಸಿದ ತುಪ್ಪಮಂ ತಳಿದು |
ಮತ್ತಮಾದ್ರವವನಿಂಗಿಸುತಿನಿಸು ಪರಿಮಳವ |
ನಿತ್ತು ಮಾಡಿದುದು ತಾನೊಂದು ತೆಱದೀರಪಲಸಿನಕಾಯ ಪಾಕಮಾಯ್ತು || ೬೬ ||

ಪಿರಿದಾಯುಕ್ಕರಿಸಿದೀರಪಲಸಿನಕಾಯ |
ನಿರಿಸಿಯಯ್ದಾಱ ಮಡಕೆಯೊಳುಳ್ಳಿ ಹಸಿಯಲ್ಲ |
ಕರಿಬೇವ ತುಪ್ಪದೊಳು ಹುರಿದಿಕ್ಕಿ ಮೆಣಸುಪ್ಪು ತೆಂಗಾಯಿ ಜೀರಿಗೆಯನು ||
ಅರೆದು ಮೊಸರೊಳು ಕದಡಿಯಾಕಾಯ ಹೋಳುಗಳ |
ಬೆರಸಿ ಸಟ್ಟುಗ ಹತ್ತವಂತಟ್ಟು ಪಾವಡೆಯೊ |
ಳಿರಿಸಿಕೊಂಡಾ ತಾಳಿಲವ ನೇತ್ರದೊಳಗಿಕ್ಕಿ ಕಟ್ಟಿದಾ ಪೊಟ್ಟಣವನು || ೬೭ ||

ಎಳೆಯಲ್ಲಯಿಂಗುಳ್ಳಿ ಕರಿಬೇವು ಮಾದಲದ |
ತಳಿರು ಮಾವಿನಕಾಯಿ ಕೇದಗೆಯ ಹೂವಿಕ್ಕಿ |
ಪಳಿಗರ್ಪುರವ ತಳಿದು ಕಸ್ತೂರಿಯನು ಬೆರಸಿ ಪನಿನೀರ ಹೊಯ್ದುಕೊಂಡು |
ತಿಳಿನೀರ ಸೆಖೆಯಗೆಗೆಱೆದು ಹಾಳೆಯ ಕಟ್ಟಿ |
ಬಳಿಕದಂ ಮಡಗಿ ಚೆನ್ನಾಗಿ ಪಾಕವ ಮಾಡಿ |
ಇಳಿಹಿ ವಡಿಸಣದೋಱಲಂತದುವೆ ತಾನೊಂದು ತೆಱದೀರಪನಸಪಾಕ || ೬೮ ||

ಮೆತ್ತನುಕ್ಕರಿಸಿಕೊಂಡೀರಪಲಸಿನಕಾಯ |
ನೊತ್ತಿ ಹಿಳಿದದನು ಚಗತಳಿ ಮಾಡಿ ಹುಳಿಯುಪ್ಪು |
ಕೊತ್ತುಂಬರಿಯ ಸಾರ ಮೊಸರರಿಸಿನದೊಳಿಕ್ಕಿ ತುಪ್ಪದೊಳು ಕಲಸಿಯಟ್ಟು ||
ಚಿತ್ತಳಿಯ ಮಾಡಿ ತೆಂಗಿನಕಾಯನವರೆಯಂ |
ತುತ್ತರಿಸಿ ನೆಱೆ ಬಲಿದ ಹಾಲನದಱಂದದೊಳು |
ಕತ್ತರಿಸಿ ಶುಂಠಿ ಮೆಣಸುಳ್ಳಿಯಂ ಹಾಕಿ ತನಿವಾಲ ಕೆನೆಯೊಳಡುವುದು || ೬೯ ||

ಇಳುಹಿ ಕರ್ಪೂರ ಕಸ್ತೂರಿ ಯಾಲಕ್ಕಿಯಂ |
ತಳಿದು ಮಾವಿನಕಾಯ ಹೋಳು ನೆಲ್ಲಿಯಕಾಯಿ |
ಗಳ ಹಾಕಿ ಸಣ್ಣ ನೇತ್ರದೊಳು ಪುಡೆಯುವ ಕಟ್ಟಿಯತ್ತರದೊಳಟ್ಟುಕೊಂಡು ||
ಇಳುಹಿದಡೆ ನೇತ್ರವೇಷ್ಟಿತ ಪನಸಪುಡೆಯಮಾ |
ಯ್ತುಳಿದ ಪುಡೆಯಕ್ಕೆ ಸಕ್ಕರೆ ಸೂಸಲರ್ದವಕೆ |
ಹುಳಿ ಬೆಲ್ಲ ಮತ್ತೆ ಕೆಲವಕ್ಕೆ ನಾನಾ ಸವಿಯನಿಕ್ಕಿ ಹಸನಂ ಮಾಳ್ಪುದು || ೭೦ ||

ಬೆರಲ ತೋರದೊಳು ನಾಲ್ವೆರಲುದ್ದದೊಳಗೆ ಕ |
ತ್ತರಸಿಕೊಂಡೀರಪಲಸಿನಕಾಯ ಹುಳಿಯುಪ್ಪು |
ವೆಱೆದು ಮೊಸರಂ ಕಲಸಿ ಬರನಾಗುವಂತಟ್ಟು ಮತ್ತೆ ತಿಳಿದುಪ್ಪವೆಱೆದು ||
ಹುರಿದು ಕಣಿಕದ ನಾರ ಸುತ್ತಿ ಸಿಹಿಗೊಣಬಟ್ಟು |
ಪರಿಮಳಿಸಿ ಮೊದಲು ತಾಳಿಸಿದ ಹೋಳಿಕ್ಕಿಯು |
ಕ್ಕರಿಸಿ ಕರಿಬೇವು ಕೊತ್ತುಂಬರಿಯ ಸಣ್ಣನಂ ಹಾಕಿ ಹಸನಂ ಮಾಳ್ಪುದು || ೭೧ ||

ಹಸುರಡಗದೀರಪಲಸಿನಕಾಯ ಕತ್ತರಿಸಿ |
ಮೊಸರುಳ್ಳಿ ಶುಂಠಿ ಕರಿಬೇವು ಕೊತ್ತುಂಬರಿಯ |
ರಸದಿಂ ಕಂದಿಸುತಮಾ ದ್ರವವನಿಂಗಿಸಿ ತುಪ್ಪದೊಳು ಗೌರುಮಾಡಿಯಟ್ಟು ||
ಕುಸುರಿಯಂ ಮಾಡಿ ಕತ್ತರಿಸಿ ಹುಡಿಮೆಣಸುಪ್ಪು |
ಹಸಿಯಲ್ಲ ಕೊತ್ತುಂಬರಿಯ ಚೂರ್ಣಮಂ ತಳಿದು |
ಪೊಸಸೊಜ್ಜಿಗಯೊಳಗಂಗರವಳಿಗೆಯಂ ಮಾಡಿ ಸುಟ್ಟುದಂ ಚೂರ್ಣ ಮಾಡಿ || ೭೨ ||

ಮತ್ತದಱೊಳೊಡಗೂಡಿ ಮೊಸರೊಳಗದಂ ಕಲಸಿ |
ಯುತ್ತಮದ ತಪ್ಪದಿಂದೊಗ್ಗರಿಸಿ ಪರಿಮಳವ |
ನಿತ್ತು ಹಸಿಯಡಕೆಯಂದವ ಮಾಡಿ ಕಣಿಕಮಂ ಚಣಕ ಪ್ರಮಾಣ ಮಾಡಿ ||
ಒತ್ತಿ ಲತೆಯಿಱಿದೀರಪಲಸಿನುಂಡೆಯನದಱೊ |
ಳಿತ್ತು ಮೇಲೊಂದು ಕಣಿಕದ ಬಟ್ಟಲಂ ಮುಚ್ಚಿ |
ಸುತ್ತಣರುಗಂ ಹುದುಗಿ ಮೊಸರೊಳಗೆ ಮೆಣಸುಪ್ಪು ಮೊದಲಾದ ಸಂಭಾರವ || ೭೩ ||

ಕದಡಿಯೊಲೆಗೆತ್ತಿ ಸಟ್ಟುಗಂಹತ್ತುವ ತೆಱದ |
ಹದನಾಗಲಿಳುಹಿಕೊಂಡಾವುಂಡೆಗಳ ಹಾಕಿ |
ಕುದಿಗೊಳಿಸಿ ಬಳಿಕ ಮತ್ತೊಂದು ಬೆಸಣಿಗೆಯೊಳಗೆ ಕಮ್ಮನೆಯತುಪ್ಪವೆಱೆದು ||
ಅದನು ಒಗ್ಗರಿಸಿ ಕರ್ಪೂರಮಂ ಹುದುಗಿ ಸೆಕೆ |
ಗದನೊದವಿ ಯಡಗದಂದದೊಳಿರಿಸಿಕೊಂಡುದಂ |
ತದುವೆ ತಾ ನೀರಪಲಸಿನ ಚಿತ್ರಪಾಕವೆಂದೆಂಬ ಹೆಸರಂ ಪಡೆದುದು || ೭೪ ||

ಇದು ಹರುಷದಿಂದ ಲಾಲಿಸಿ ಕೇಳ್ವೆನೆಂದೆಂಬ |
ಸುದತಿಯರ ಕಿವಿಗೆ ಪೊಸಮಾಣಿಕದ ಮಿಂಚೋಲೆ |
ಇದು ಕಲಿವೆನೆಂದೋದುವಬಲೆಯರ ಬಣ್ಣವಾಯ್ದೆರೆಗೆ ಕರ್ಪುರದಂಬುಲ ||
ಇದು ಪಾಕಮಂ ಮಾಳ್ಪೆನೆಂದುಜ್ಜುಗಂ ಮಾಳ್ಪ |
ತಿದಱೊಳಗೆ ಹೀರೆ ಕುಂಬಳ ಪನಸಫಲ ಶಾಕಪಾಕ ವಿಧಮುಂ ಸಮಾಪ್ತಂ || ೭೫ ||