ಸೂಚನೆ : ಭೂಕಾಂತರಂ ಮನಂಗೊಳಿಪ ಸವಿವಡೆದ ವೃ |
ತಾಕಫಲಪಾಕ ಕದಳೀನಾಳ ಕುಸುಮಫಲ |
ಪಾಕಮಂ ಪಲ್ಲವಾಧರೆಯರಱಿವಂದಮಂ ಪೇಳ್ವೆನೆನ್ನಱಿವನಿತನು ||

ಹುರಿಯಕ್ಕಿಯೆಳ್ಳು ಜೀರಿಗೆ ಮೆಣಸು ತೆಂಗಾಯ |
ತುರುವಲುದ್ದಲ್ಲ ತುಪ್ಪದಿ ಹುರಿದ ಹಾಲದು |
ದ್ದೆಎಡುಳ್ಳಿ ಮುಗುಳ್ವದದಿ ಬೆಂದ ಬೇಳೆಯ ಹೆಸರು ಪುಲ್ಲ ಸೊಜ್ಜಿಗೆಯ ಕೂಳು ||
ಕರಿಬೇವು ಬಡಗಸಂಡಗೆಯಿಂಗು ಕಡವಿಲೆ |
ಟ್ಟರಿಸಿನದಿ ಹುಂಡಿ ಕೆಂಡಬೆಂದ ತೆಂಗಾಯೋಟೆ |
ಹುರುಳಿ ಸಾಸುವೆ ಮೆಂತೆಯದ ಚೂರ್ಣ ಹಪ್ಪಳಂ ಸಂಭಾರ ವಸ್ತುವಹವು || ೧ ||

ಎಳೆಯ ಬದನೆಕಾಯಿ ಕೊಯಿದಾ ಕ್ಷಣದೊಳು ಸಂ |
ಬಳಿಸಿ ಬೆಸಳಿಗೆಯಲ್ಲಿ ಸೆರೆ ನೀರು ಸೆರೆ ತುಪ್ಪ |
ವಿಳುಹಿ ನೀರುಳ್ಳಿ ಹಸಿಯಲ್ಲಮಂ ಹಾಕಿ ಬೇಯ್ಸುವುದು ಮುಚ್ಚುಳದೆಗೆಯದೆ ||
ಉಳಿದುದಕದಿನನ್ನಿ ತಿಳಿದುಪ್ಪ ತೆಗೆವ ಸಮಯದಿ |
ಬಿಳಿಯುಪ್ಪ ತಳಿದಟ್ಟುಕೊಂಡಿಳುಹಿ ಪಲಭಾಗೆ |
ಗಳ ಮಾಡಿ ಬಳಿಕ ತಾಳಿಲಪುಡಿಯುಮಂ ತಳಿದು ಶಾಕಪಾಕವ ಮಾಳ್ಪದು || ೨ ||

ಉಕ್ಕರಿಸಿಕೊಂಡ ಬದನೆಯ ಕಾಯ್ಗೆ ಮೆಣಸುಪ್ಪ |
ನಿಕ್ಕಿ ಪಲಬಗೆಯ ಭಾಗೆಯ ಮಾಡಿ ಮುಂಪೇಳ್ದ |
ಚೊಕ್ಕಟಂಬಡೆದು ಸಂಭಾರಮಂ ಬಗೆಯನಱಿದೊಡವರೆಸಿ ಕಲಸಿಯವಕೆ ||
ಇಕ್ಕುವುದು ತದಿಕು ಮಾದಲ ಮಾವಿನೆಳೆಗಾಯ |
ನಿಕ್ಕುವುದು ಕೆಲವಕ್ಕೆ ನಸು ಬಿಳಿಯ ಸಕ್ಕರೆಯ |
ನಿಕ್ಕುವುದು ಕೆಲವಕ್ಕೆ ಸೂಸಲ ಬಳಿಕ್ಕೆ ಹಸನಾಗಿ ಸಮತಲಗೊಡುವುದು || ೩ ||

ಚಿಟ್ಟಿ ಮಡಕೆಗಳೊಳಗೆ ಭಿನ್ನ ಪರಿಮಳಗಳಂ |
ಕಟ್ಟಿಕೊಂಡಲ್ಲಿ ಮೇಲೋಗರವನಿರಿಸುವುದು |
ಕಟ್ಟಾಱುವಂತೆ ಕಳವೆಯನೊಣಗಲಿಕ್ಕಿ ಬೇಳೆಯ ಮಾಡಿ ಬೀಸಿಕೊಂಡು ||
ಹಿಟ್ಟ ಹಲಬಗೆ ಮಾಡಿ ಪಲತೆಱದಿ ಪರಿಮಳವ |
ನಿಟ್ಟು ತಳಿವುದು ಮತ್ತಮಲ್ಲದೊಡೆ ಹೂವ ಹೊರೆ |
ಯಿಟ್ಟು ನೀರಂ ಬಿಸಿಯ ಮಾಡಿ ಕೊಣಬಿನೊಳಿಕ್ಕಿಕೊಂಡು ಹಸನಂ ಮಾಳ್ಪದು || ೪ ||

ಉದಕದೊಳು ಹುಣಿಸೆಯ ಹುಳಿಯ ಹಾಕಿ ಸಲೆ ಕಿವುಚಿ |
ಹದನಱಿದು ಸಕ್ಕರೆಯನಿಕ್ಕಿ ಶುಂಠಿಯ ಹಾಕಿ |
ಅದಕೆಳ್ಳು ಮೆಣಸು ಜೀರಿಗೆಯ ಮರ್ದಿಸಿ ಕದಡಿಯೊಲೆಯ ಮೇಲೆತ್ತಿ ಕಾಸಿ ||
ಕುದಿಯಿಸಿದ ಬಳಿಕ ಸೋದಿಸಿ ಸುಂಠಿಯಾಲಕ್ಕಿ |
ಯುದುರೆಯಂ ಹಾಕಿ ಶೇವಗೆಯ ಗಾತ್ರದ ತೆಱದಿ |
ಮಿದುವು ತೆಂಗಿನಕಾಯ ಕುದಿಯಿಕ್ಕಿ ಹಸನಾಗಿ ಮಾಡಿದಾ ಕೊಣಬಿನೊಳಗೆ || ೫ ||

ಮೊದಲು ತುಪ್ಪದೊಳುಕ್ಕರಿಸಿ ಸವಿಯುಮಂ ಹಡೆದ |
ಬದನೆಯೆಳೆಗಾಯ ಹೋಳಂ ಹಾಕಿಕೊಂಡು ತು |
ಪ್ಪದೊಳು ಪರಿಮಳವಿಕ್ಕಿ ಪೊಡ್ಡಣಿಗೆಯಂ ಕೊಟ್ಟು ಸೆಖೆ ಹೋಗದಂತಿರಿಸಲು ||
ಅದುವೆ ಪುಳಿಚಾರು ಬದನೆಯಕಾಯಿ ಕನ್ನಡಿಗ |
ರದನು ಸಕ್ಕರೆಬದನೆಗಾಯೆಂದು ಹೆಸರಿಡುವ |
ರದನು ಮತ್ತಾನಾರಿಯರು ದುಸ್ಸಾಯಿಬಂಗಿಯೆಂದೊಸೆದು ಹೆಸರಂ ಕರೆವರು || ೬ ||

ತುರಿದ ತೆಂಗಿನಕಾಯ ಹಾಲೆಮ್ಮೆ ವಾಲುಮಂ |
ಸರಿಗೂಡಿ ಬಿಳಿಯ ಮೆಣಸುಳ್ಳಿ ಜೀರಿಗೆಯನರೆ |
ದಿರದೊಂದು ಪಿಂಡ ಬೆಣ್ಣೆಯನಿಕ್ಕಿ ಕಾಸಲದು ನೀರಿಂಗಿ ಪೊಸಗಿಣ್ಣಿನ ||
ಪರಿಯಾಗಲಂತಲ್ಲಿ ಮೊದಲು ತುಪ್ಪದೊಳುವು |
ಕ್ಕರಿಸಿ ಹದನಾದ ಬದನೆಯಕಾಯ ಹೊದಟಿಯ |
ಗ್ಗರಣೆಯಂ ಮಾಡಿ ಪರಿಮಳವಿಕ್ಕಲದು ತುಳುವ ಬದನೆಕಾಯ್ವೆಸರಾದುದು || ೭ ||

ತಿಳಿದುಪ್ಪಮಂ ಕಾಸಿಯಿಂಗು ಜೀರಿಗೆಯಿಕ್ಕಿ |
ಬಳಿಕ ತಾಳಿಲವ ಮಾಡುವುದೊಂದು ತೆಱನುದ್ದ |
ಬಿಳಿಯುಳ್ಳಿ ಮೆಣಸು ಸಕ್ಕರೆಯಿಕ್ಕಿಯೊಗ್ಗರಿಪುದೊಂದು ತೆಱ ಹುರಿ ಹುಣಿಸೆಯ ||
ಎಳೆಗಾಯನಿಕ್ಕಿ ತನಿವಾಲುಮಂ ಮೊಸರ ಕೆನೆ |
ಗಳನಿಕ್ಕಿ ಹುಡಿ ಮೆಣಸುವುಳ್ಳಿ ಶುಂಠಿಯನಿಳುಹಿ |
ಬಳಿಕವೊಗ್ಗರಿಸಿ ದಧಿಸಾರ ಬದನೆಯಕಾಯ ಮಾಡುವುದು ಒಂದು ತೆಱನು || ೮ ||

ಅಸಿದಾದ ಬದನೆಯೆಳೆವದದ ಕಾಯ್ಗಳನು ನಾ |
ಲ್ಕೆಸಳಾಗಿ ಕುಯಿದು ತುಪ್ಪದೊಳಗುಕ್ಕರಿಸಿಯವು |
ಹಿಸಿಯದಂದದಿ ಹಿಕ್ಕಿಯಾ ನಾಲ್ಕು ಹೋಳುಗಳೊಳೊಂದೊಂದಕೊಂದು ತಱದ ||
ಹಸನಾಗಿ ಸವಿಯಾದ ಸಂಭಾರಮಿಕ್ಕಿಯವು |
ಮಸಕದಂದದಿ ನೇತ್ರಮಂ ಕಟ್ಟಿ ವೊಗ್ಗರಿಸಿ |
ಹೊಸ ಪರಿಮಳವನಿಕ್ಕಲವು ತಾನೆ ಭಿನ್ನರುಚಿ ವೃಂತಾಕವೆಸರಾದವು || ೯ ||

ಹಿಟ್ಟು ನೆಲ್ಲಿಯ ಸಮದ ಬದನೆಯೆಳೆಗಾಯ್ಗಳಂ |
ತೊಟ್ಟುದೆಗೆಯದೆ ಸೀಳಿ ತುಪ್ಪವೀರರಿಸಿನವ |
ನಿಟ್ಟುಕರಿಸಿ ತಾಳಿಲವ ಮಾಡಿ ತುಪ್ಪದೊಳು ಹುರಿದ ಸೊಗಯಿಪ್ಪ ನೆಲ್ಲಿಯ ||
ಚಟ್ಟಿಗರಿಸಿನ ಮೆಣಸು ತೆಂಗಾಯಿ ಬಿಳಿಯೆಳ್ಳ |
ನಿಟ್ಟರೆದು ಕಾಸಿಕೊಂಡಾ ಕೊಣಬಿಮೊಳಗೆಯದ |
ನಿಟ್ಟು ಒಗ್ಗರಿಸಿ ನಸುಹುಳಿಯಿಕ್ಕಲದು ನೆಲ್ಲಿಬದನೆಗಾಯ್ವೆಸರಾದುದು || ೧೦ ||

ಘಟ್ಟಿ ಮೆಣಸುಳ್ಳಿ ಜೀರಿಗೆಯುದ್ದು ತೆಂಗಾಯ |
ನಿಟ್ಟು ಚೆನ್ನಾಗಿ ತಾಳಿಲ ಮಾಡಿ ಒಗ್ಗರಣೆ |
ಗೊಟ್ಟು ಬದನೆಯಕಾಯ ಹೋಳುಗಳ ಹತ್ತರಸಮಾಗಿ ಕಾಸಿದ ಹುರುಳಿಯ ||
ಕಟ್ಟಿಗಿಂಗಿಕ್ಕಿ ಬಳಿಕಮೊಂದಿನಿಸು ನೆಲ್ಲಿಯ ಹುಳಿಯ |
ಬಿಟ್ಟದಱೊಳಕ್ಕಿ ಸರಿಯಂಗೊಟ್ಟು ಮಾಡಿದುದು ತಾ ಬದನೆಹುರುಳಿಗಾಯಿ || ೧೧ ||

ತೋರವಡೆದೆಳೆವದದಿನೆಸೆವ ಬದನೆಯಕಾಯ |
ನೋರಣದಿನಿಪ್ಪೋಳು ಮಾಡಿ ಬೇಯಿಸಿಯದಱ |
ಸಾರವಹ ತಿರುಳನಾ ತೋಟು ಹಱಿಯದೆ ತೋಡಿ ಪಲಪಸುಗೆ ಮಾಡಿಯವಱ ||
ನಾರನೆಲ್ಲವ ತೆಗೆದುದೊಂದೊಂದಕೊಂದು ಸಂ |
ಭಾರಮ ತುಪ್ಪದೊಳು ಒಗ್ಗರಿಸಿಯೋಟೆಯೊಳು |
ಪೂರೈಸಿ ಪೊಡ್ಡಣಿಗೆಗೊಟ್ಟೊಡವು ತಾ ತುಂಬುಬದನೆಕಾಯ್ವೆಸರಾದುದು || ೧೨ ||

ಬಟ್ಟ ಬದನೆಯ ಕಾಯ ನಸುನೀರ ತಿಳಿದುಪ್ಪ |
ವಿಟ್ಟುಕ್ಕಱಿಸಿಯಾಱಿಸಿ ಮತ್ತಮಾ ಕಾಯ |
ತೊಟ್ಟು ಬೀಳದ ತೆಱದಿ ಶತಛಿದ್ರಮಂ ಮಾಡಿ ಮತ್ತಲ್ಲಿ ಸಂಭರವ ||
ನಿಟ್ಟೆರಡುಣಿಸ ತುಂಬಿಯುಂಟಾಗಿ ತುಪ್ಪಮಂ |
ಬಿಟ್ಟು ಪೊಡ್ಡಣಿಗೆಗೊಡೆ ತುಪ್ಪಗಾಯಾಯಿತಂ |
ತಟ್ಟೆಣ್ಣೆಯೊಳಗೆ ಒಗ್ಗರಿಸಲವು ತಾವೆಣ್ಣೆಬದನೆಗಾಯ್ವೆಸರಾದುದು || ೧೩ ||

ಅತ್ತರದ ಮೇಲುಂಡೆಬದನೆಗಾಯ್ಗಳನಿಟ್ಟು |
ಮೆತ್ತನಪ್ಪಂತು ಬೇಯಿಸಿ ತುಪ್ಪ ಹುಳಿಯಲ್ಲ ||
ಕೊತ್ತುಂಬರಿ ರಸಮಂ ತುಪ್ಪದೊಳಗಿಕ್ಕಿ ಮತ್ತೊಮ್ಮೆಯಾಕಾಯನಟ್ಟು ||
ಮತ್ತಮಾ ಕಾಯ್ಗಳಂ ಸೀಳಿಕೊಂಡವಱಲ್ಲಿ |
ಉತ್ತಮದ ಸಂಭಾರಮಿಕ್ಕಿ ತಾಳಿಸಿ ಕೆಲವ |
ಹತ್ತರಸಮಾದ ಕೊಣಬಿನೊಳಿಕ್ಕಿ ಒಗ್ಗರಿಸೆ ಮಧುರವೃಂತಾಕಪಾ || ೧೪ ||

ಬದನೆಯೆಳೆಗಾಯ್ಗೆ ಕರಿಬೇವು ಹೊಸ ತುಪ್ಪಯಿನಿ |
ಸುದಕ ನೀರುಳ್ಳಿಯಿಟ್ಟುದಕವಿಂಗುವ ತೆಱದಿ |
ಹದನಾಗಿಯುಕ್ಕಱಿಸಿ ಏಲಕ್ಕಿಯಂ ತಳಿದು ಮೆಣಸುಪ್ಪನಿಕ್ಕಿಕೊಂಡು ||
ಅದನು ಕರಿಬೇವು ಜೀರಿಗೆಯಿಂಗು ಸಾಸುವೆಯ |
ನೊದವಿಸಿದ ಬಳಿಕ ತುಪ್ಪದೊಳೊಗ್ಗರಿಸಲ್ಕ |
ತದು ತಿಗುಳಿನೊಳು ಪುಳಿಚ್ಚುತಬದನೆಗಾಯೆಂದು ಪೆಸರನೊಲವಿಂ ಕರೆವುದು || ೧೫ ||

ಮೃದು ಮಾಡಿಯತ್ತರದೊಳಟ್ಟ ಬದನೆಯಕಾಯ |
ಹದನಱಿದು ತುಪ್ಪದೊಳಗುಳ್ಳಿಯಲ್ಲದ ರಸವ |
ಹುದುಗಿ ಬೇಯಿಸಿ ಸೀಳಿ ಕೇರೆ ನಱುವಲು ಚಕ್ಕವತ್ತ ಸೊಲೆ ಸಬ್ಬಸೀಗೆ ||
ಮೊದಲಾದ ಸೊಪ್ಪುಗಳ ಬೇಱಿ ಬೇಱುಕ್ಕರಿಸಿ |
ದುದುರೆಯಂ ತುಪ್ಪದೊಳು ಹುರಿದ ಹೋಳುಗಳೊಳಗೆ |
ಹುದುಗಿ ಕೆಲವಂ ತಾಳಿಸಿದೊಡಮವು ತಾ ಶಾಕವಂಗಿಹೆಸರಂ ಪಡೆದವು || ೧೬ ||

ಬದನೆಯಳಗಾಯನಿದ್ದಂತೆಯುಕ್ಕರಿಸಿ ತೆಗೆ |
ದದನೊಲೆಯ ಮೇಲೆ ಕರ್ಬೊನ್ನ ಹಗಱಂ ಹರಹಿ |
ಯದಱ ಮೇಲಾ ಕಾಯನಿರಿಸಿ ಕೆಂಪಂ ಮಾಡಿ ಮುಳ್ಳಿಱಿದು ತುಪ್ಪವೆಱಿದು ||
ಅದಕೆ ಮೊಸರೆಱಿದು ಮೆಣಸುಳ್ಳಿ ಜೀರಿಗೆಗಳಂ |
ಹುದುಗಿಯಾದ್ರವವಿಂಗಲುಂ ಕಾಸಿ ಮತ್ತೊಮ್ಮೆ |
ಕದುಕಿಱಿದು ತುಪ್ಪವನೆಱಿದು ಕಾಸಲದು ಭುಕ್ತವೃಂತಾಕ ಪೆಸರಾದುದು || ೧೭ ||

ಒಲೆಯೊಳಗೆ ಕರ್ಬೊನ್ನ ಹಗಱಂ ಹರಹಿಯಲ್ಲಿ |
ಎಳೆಯ ಬದನೆಕಾಯ್ಗಳಂ ಪಾಕಮಂ ಮಾಡಿ |
ಸಲಗೆಯಿಂ ತಿವಿದು ತುಪ್ಪವ ಬಿಟ್ಟು ಗೌರಾಗುವಂದದಿಂ ಕಾಸಿಯದಕೆ ||
ನೆಲೆಗೊಳಿಸಿಯುಪ್ಪು ಮೆಣಸಂ ಪರಿಮಳವನಿಕ್ಕಿ |
ಚಿಲುಪಾಲಿನೊಳಗುಪ್ಪು ಮೆಣಸುಳ್ಳಿ ತುಪ್ಪಮಂ |
ಕಲಸಿ ತುಪ್ಪದಿ ಮತ್ತೆ ಕಾಸಲದು ದುಗ್ಧವೃಂತಾಕಮಾಯಿತು ಧರೆಯೊಳೆ || ೧೮ ||

ತೊಟ್ಟಿನ ಬಳಿಯೊಳು ಬದನೆಯ ಹಸಿಯ ಕಾಯ್ಗಳಂ |
ಬೊಟ್ಟಿನ ಸಮದೊಳು ಛಿದ್ರಿಸಿ ತೋಡಿ ತಿರುಳನು ಬಿ |
ಸುಟ್ಟು ಬಲಿಯಿಸಿದ ಹಾಲಂ ಕಡಲೆಯಂತೆ ಕತ್ತರಿಸಿ ತೆಂಗಾಯ ಹುರಿದು ||
ಘಟ್ಟಿ ಮೆಣಸುಳ್ಳಿ ಮೊದಲಾದ ಸಂಭಾರಗಳ |
ನಿಟ್ಟು ತಾಳಿಸಿದ ಪುಡಿಗಳನದಱೊಳುಱಿ ತುಂಬ |
ಲಿಟ್ಟು ವೆಜ್ಜವ ಮುಚ್ಚಿ ವಗ್ಗರಿಸೆ ಹೂರಣದ ವೃಂತಾಕ ವೆಸರಾದುದು || ೧೯ ||

ಮತ್ತೆ ತಿರುಳಂ ತೋಡಿದಾ ಬದನೆಕಾಯೊಳಗೆ |
ಯುತ್ತಮದ ಕಡಲೆ ಹೆಸರುದ್ದು ತೆಂಗಿನತುರುವೆ |
ಮೆತ್ತನೆಯ ಸೊಜ್ಜಿಗೆಯ ಕೂಳು ನೀರುಳ್ಳಿ ಬಿಳಿ ಮೆಣಸು ಸಕ್ಕರೆಯನಿಕ್ಕಿ ||
ಒತ್ತಿ ಪೂರೈಸಿ ಪೊಸ ತುಪ್ಪದೊಳು ಪೊಡ್ಡಣಿಗೆ |
ಯಿತ್ತು ಕೊತ್ತುಂಬರಿಯನಿಕ್ಕಿ ಪರಿಮಳವ ಪೊರೆ |
ಯೊತ್ತಿ ಪೂರಣಪಾತವೃಂತಾಕಫಲವೆಂದು ಹೆಸರ ನಲವಿಂ ಕರೆವುದು || ೨೦ ||

ಮತ್ತೆ ಕೆಲವಕ್ಕೆ ಬದನೆಯ ಬಜ್ಜಿ ಕೆಲವಕ್ಕೆ |
ಕತ್ತರಿಸಿದೆಳೆ ಕೇರೆ ಚಿಲುಕೆ ನರುವಲು ಚಕ್ಕ |
ವತ್ತ ಮೊದಲಾದ ಸೊಪ್ಪಂ ತುಪ್ಪದೊಳಗೆ ಚೆನ್ನಾಗಿ ತಾಳಿಸಿ ಕೆಲವಕೆ ||
ಉತ್ತಮದ ಹೂವು ಕಾಯ್ ಗೆಣಸುಗಳ ಹೊಸ ಪೊಡೆಯ |
ಮತ್ತುಳಿದವಕ್ಕೆ ಹಸ ಮಾಡಿ ಬಟ್ಟತ್ರಿವದ |
ನಿತ್ತು ಒಗ್ಗರಿಸಿಕೊಂಡವಱವಱ ಹೆಸರ ಹೂರಣಬದನೆಗಾಯೆಂಬುದು || ೨೧ ||

ಕಡಿಯಕ್ಕಿಯಂತೆ ಕತ್ತರಿಸಿ ಬದನೆಯಕಾಯ |
ಕಡುಗಂಪಿತಪ್ಪ ತುಪ್ಪದೊಳು ನೀರುಳ್ಳಿಯಂ |
ಕಡಿದಿಕ್ಕಿ ಹುರಿದು ಮೃದುಮಾಡಿ ಹದನಱಿದು ಬಿಳಿಯುಪ್ಪು ನಸು ಮೆಣಸನಿಟ್ಟು ||
ಪುಡಿಯುಮಂ ಹತ್ತೆಂಟು ಬಗೆ ಮಾಡಿಯೊಂದಕ್ಕೆ |
ಬಡಗಸಂಡಗೆಯ ಪುಡಿಯೊಂದಕ್ಕೆ ಹುರಿದೆಳ್ಳ |
ಪುಡಿ ಸೂಸಲೊಂದಕ್ಕೆ ತವರಾಜಮೊಂದಕ್ಕೆ ಶುಂಠಿಯ ತುರವಲೊಂದಕೆ || ೨೨ ||

ಒಂದಕ್ಕೆ ಹುರಿದ ಕಡಲೆಯ ಚೂರ್ಣ ಮುಗುಳ್ವದದಿ |
ಬೆಂದ ಸೊಜ್ಜಿಗೆಯ ಕೂಳೊಂದಕ್ಕೆ ನೀರುಳ್ಳಿ |
ಯೊಂದಕ್ಕೆ ತುಪ್ಪದೊಳು ಹುರಿದ ಹಾಲಿನದುದ್ದು ತೆಂಗಾಯಿ ಹಾಲೊಂದಕೆ ||
ಒಂದಕ್ಕೆ ಹುಳಿಯಿಕ್ಕಿ ಪೊಡ್ಡಣಿಗೆಯಂ ಕೊಟ್ಟು |
ಒಂದೊಂದು ತೆಱಪ ಕಂಪಿಕ್ಕಿಯರಿಸಿನದಿ ತಱ |
ಗಿಂದವಂ ಕಟ್ಟಿ ಬಿಸಿಯಾಱದಂತಿರಿಸಲವು ಪೂಡೆವೆಸರಂ ಪಡೆದವು || ೨೩ ||

ಸುಟ್ಟ ಕಾಯ್ಗಳ ನಡುವೆ ಸೀಳಿ ಪಸರಿಸಿಯುಪ್ಪ |
ನಿಟ್ಟು ಮೆಣಸುಳ್ಳಿ ಕಂಬಳದ ಸಂಡಗೆಯೆಳ್ಳ |
ಹಿಟ್ಟು ತುಪ್ಪದಿ ಹುರಿದ ಹಾಲದುದ್ದುಗಳ ತುಪ್ಪದೊಳು ಗೌರಾಗುವಂತೆ ||
ಅಟ್ಟೆರಡು ಭಾಗೆಯಂ ಮಾಡುಳ್ಳಿ ಸಕ್ಕರೆಯ |
ನಿಟ್ಟು ಪಸರಿಸಿದ ಹೋಳೊಳು ತುಂಬಿ ತುಪ್ಪದೊಳ |
ಗಟ್ಟು ಕೆಂಪಂ ಮಾಡಿ ನರೆಗೊಡಲು ಗೌರನದನೆಯಕಾಯಿ ವೆಸರಾದವು || ೨೪ ||

ಸುಡುಗಾಯ ಹದದ ಬದನೆಯಕಾಯಿಗೆಣ್ಣಯಂ |
ತಡಹಿ ಕೆಂಡದಿ ಸುಟ್ಟು ಸಿಪ್ಪೆದೆಗೆದುಳ್ಳಿ ಹುಳಿ |
ಹುಡಿಯುಪ್ಪು ಶುಂಠಿ ಕೊತ್ತುಂಬರಿಯ ರಸಕಿಂಗು ತುಪ್ಪ ವಿಟ್ಟಾ ಕಾಯನು ||
ಮಡಗಿ ಬೇಯಿಸಿವುಳ್ಳಿ ಮೆಣಸು ಜೀರಿಗೆ ಶುಂಠಿ |
ಹುಡಿಯಿಕ್ಕಿ ಮತ್ತೆ ಬಿಸಿಮಾಡಿ ಸಂಭಾರಮಂ |
ತೊಡೆದು ವೊಗ್ಗರಿಸಿ ಹಪ್ಪಳವಿಕ್ಕಲವು ಬಟ್ಟತ್ರಿಕಬದನೆಕಾಯಾದವು || ೨೫ ||

ಪ್ರಾಸಕವ ಮಾಡಿ ಬದನೆಯ ಕಾಯ್ಗಳಂ ಕಿವುಚಿ |
ಸಾಸುವೆಯನಿಕ್ಕಿ ಸಮತಳಗೊಡುವುದೊಂದು ತೆಱ |
ಸೂಸಲಂ ತಳಿದು ವೊಗ್ಗರಣೆಯಂ ಮಾಡುವುದದೊಂದು ತೆಱ ಹುಳಿಯನದಕೆ ||
ಪೂಸಿ ಮೆಣಸಿಕ್ಕಿ ನಱಿಯಂ ಕೊಡುವುದೊಂದು ತೆಱ |
ವಾಸಿಸಿ ಸುಪರಿಮಳವನೊಗ್ಗರಿಪುದೊಂದು ತೆಱ |
ವೀ ಸಮದಿ ಹಲವು ರುಚಿಮಾಡಿ ನೀರುಳ್ಳಿ ಶುಂಠಿಯನಿಕ್ಕಿ ಹದ ಮಾಳ್ಪುದು || ೨೬ ||

ಉತ್ತರಿಸಿದೆಳೆಯ ಬದನೆಯ ಕಾಯ ಕತ್ತರಿಸಿ |
ಹತ್ತೆಂಟು ಬಗೆ ಮಾಡಿಯಿಂಗೆಣ್ಣೆಯಂ ತಾಳಿ |
ಸುತ್ತುಳ್ಳಿ ಶುಂಠಿಗರಿಸಿಮಿಕ್ಕಿಯಿಳುಹಿಯಾರಿಸಿ ಸಾಸುವೆಗೆ ಹುಳಿಯನು ||
ಇತ್ತರೆದುಯುಪ್ಪಿಕ್ಕಿಯಾ ಹೋಳುಗಳ ಹಾಕಿ |
ಕೊತ್ತುಂಬರಿಯ ಗಂಟನಿಕ್ಕಿ ಪರಿಮಳದ ಪೊರೆ |
ಯೊತ್ತಿ ಜೀರಿಗೆ ಮೆಂತೆಯವನಿಕ್ಕಲದುವೆ ಸಾಸುವೆಬದನೆಗಾಯಾದುದು || ೨೭ ||

ಅರೆದುಳ್ಳಿ ಶುಂಠಿಗಳ ಮೊಸರು ಸಕ್ಕರೆಯೊಳೊಡ |
ವೆರಸಿಯುಪ್ಪಿಕ್ಕಿ ಸೋದಿಸುತ ಯಾಲಕ್ಕಿ ಕ |
ರ್ಪುರವ ತಳಿದದಱೊಳಗೆ ತುಪ್ಪದೊಳ್‌ ತಾಳಿಸಿದ ಕೆಲವು ಬದನೆಯಕಾಯನು ||
ಇರಿಸುವುದು ಕೆಲವು ಕಾಯ್ಗಳ ಸಾಸುವೆಯೊಳು ಸ |
ಕ್ಕರೆಯಿಕ್ಕಿ ಹಾಕುವುದು ಮತ್ತೆ ಕೆಲಕಾಯ್ಗಳಂ |
ಹುರಿದ ಹುಣಿಸೆಯಾ ಹಣ್ಣು ಬೆಲ್ಲದೊಳಗಿಕ್ಕಿ ಹಸನಾಗಿ ಪರಿಮಳವಿಡುವುದು || ೨೮ ||

ಬೆಲ್ಲ ಸಾಸುವೆ ಹುರಿದ ಹುಣಿಸೆವಣ್ಣುಗಳ ಹುಳಿ |
ಯಲ್ಲಿ ವೊಡಗೂಡಿ ತಾಳಿಸಿದ ಬದನೆಯಕಾಯ |
ಚಲ್ಲಿಸಿದ ನೀರುಳ್ಳಿ ಶುಂಠಿ ಸಹಿತಿಕ್ಕುವುದು ಮತ್ತೆ ಕೆಲಕಾಯಿಗಳನು ||
ಅಲ್ಲಯುಳ್ಳಿಯ ರಸಕೆ ನಸುಬೆಲ್ಲಮಿಕ್ಕಿ ಅದ |
ಱಲ್ಲಿ ಹಾಕುವುದು ಮತ್ತೀ ತೆಱದಿ ಭಿನ್ನರುಚಿ |
ಯಲ್ಲಿ ಮಾಡಿದ ಹಸಿಯ ಕೊಣಬಿನೊಳು ಹಾಕಿರಿಸಿ ಯೊಗ್ಗರಣೆಯಂ ಮಾಳ್ಪುದು || ೨೯ ||

ಬದನೆಯ ಬಲಿದ ಹಣ್ಣ ಕುಯಿದು ತಿಳಿದುಪ್ಪದೊಳ |
ಗುದಕಮಂ ಕೂಡಿಯೊಗ್ಗರಿಸಿ ತಾಳಿಲ ಮಾಡಿ |
ಯದನು ನಾಲ್ಕೈದು ಬಗೆ ಮಾಡಿ ಹುಣಿಸೆಯಹಣ್ಣ ಕೊಣಬಿನೊಳು ಕೆಲವು ಹೋಳ ||
ಹುದುಗಿ ಸಾಸುವೆಯ ಸಿಕರಣೆ ಮೊಸರ ಸಿಕರಣೆಯೊ |
ಳೊದವಿಸಿ ಕೆಲವನು ಸಾಸುವೆಯೊಳೆಯೊಳಗೆ ಕೆಲವ |
ನೊದವಿಸಿದ ಬಳಿಕ ಪಲತೆಱದಿ ವಾಸಿಸೆ ಪಕ್ವಫಲದ ವೃಂತಾಕಪಾಕ || ೩೦ ||

ಗುಳ್ಳದೆಳೆಗಾಯ ಸೊಪ್ಪಿಸಿಯದಱ ಗೀಜುಮಂ |
ಮುಳ್ಳುಮಂ ತೊಟ್ಟುಮಂ ಬಿಡದಾಯ್ದು ತೆರೆದದಱೊ |
ಳುಳ್ಳೂಗರು ಹೋಹಂತೆಯುಕ್ಕರಿಸಿ ಮತ್ತೊಮ್ಮೆಯುಪ್ಪು ತುಪ್ಪದೊಳು ಹುರಿದು ||
ಎಳ್ಳು ಜೀರಿಗೆ ಮೆಣಸು ಬಿಡಗಸಂಡಗೆ ಶುಂಠಿ |
ಯುಳ್ಳಿ ಮೊದಲಾದ ಸಂಭಾರಮಂ ಪೂರೈಸಿ |
ಯೊಳ್ಳಿತೆನಿಸಿದ ತುಪ್ಪದೊಳಗೆಯೊಗ್ಗರಿಸಿ ಹುಳಿ ಸಿಹಿಯಿಕ್ಕಿ ಪರಿಮಳಿಪುದು || ೩೧ ||

ಮತ್ತೆ ಕೆಲವಂ ಗುಳ್ಳದೆಳೆಗಾಯ ಹರಳಂತೆ |
ಕತ್ತರಿಸಿಯೊಗರು ಹೋಹಂತುಕ್ಕರಿಸಿಕೊಂಡು |
ಮೆತ್ತನಪ್ಪಂತುಪ್ಪ ನೀರುಳ್ಳಿಯಂ ಹಾಕಿ ಹಸನಾಗಿ ಮಾಡಿಕೊಂಡು ||
ಉತ್ತಮದ ಸಂಭಾರಮಿಕ್ಕಿ ನಾಲ್ಕೆಂಟು ರುಚಿ |
ವೆತ್ತ ಕೊಣಬಂ ಕಾಸಿಕೊಂಡವಱೊಳರೆ ಹೋಳ |
ನಿತ್ತು ವೊಗ್ಗರಣೆಯಂ ಮಾಡಿ ಪರಿಮಳವ ಪೊಱೆಯಿಕ್ಕಿ ಹಸನಂ ಮಾಳ್ಪುದು || ೩೨ ||

ಸೊರೆ ಹೀರೆ ಸವುತೆ ಕುಂಬಳ ತೊಂಡೆ ಹಲಸು ಕೂ |
ಗರಿ ಹಡಲ ಬಾಳೆ ಮೊದಲಾದ ಕಾಯ್‌ ಸಸಿಕುಪ್ಪಿ |
ಸೊರೆ ಬಸಲೆ ನುಗ್ಗೆ ಕುಯಿಕೀರೆ ನಱುವಲು ಹರುಹೆ ಮೊದಲಾದ ಹಸುರು ಸೊಪ್ಪ ||
ಕರಮೆಸೆವ ಬಾಳೆ ಮೊದಲಾದ ಪೂಗಳನು ಉ |
ಕ್ಕರಿಸಿ ಬಸಿದೆಸಱನೆಲ್ಲವ ಬೇಱೆ ಬೇಱೆ ಕಡು |
ವಿರಿದು ಹಸನಾಗಿ ಕೊಣಬಂ ಕಾಸಿ ತಾಳಿಸಿ ಬದನೆಗಾಯಿಗಳನಿಡುವುದು || ೩೩ ||

ಎಳೆಯ ಕನ್ನಡಿಯೆಲೆಯೊಳಿರ್ದ ಬಾಳೆಯ ಹೊಡೆಯ |
ನಳಗೆಯೆಡೆ ನಡುವೆ ಕಟ್ಟಿಗೆಗಳಂ ಹರಹಿಯ |
ಟ್ಟಳೆಯಿಕ್ಕಿಯದಱ ಮೇಲಾ ಹೂವನಿರಿಸಿ ಸರಿನೀರು ಸರಿಯಕ್ಕಿಗಚ್ಚ ||
ಮುಳುಗುವಂದದಿ ಹುಯಿದು ಮೃದುಮಾಡಿ ಮಿಗೆ ಪಾಕ |
ಗೊಳಿಸಿಯಿಳುಹಿದ ಬಳಿಕ ಬಸಿದದಱ ನೀರುಮಂ |
ಹಿಳಿದು ತಾಳಿಲಮುಮಂ ಕೊಣಬುಮಂ ಪುಡೆಯಮನತಿರುಚಿಯೆನೆ ಹಸಮಾಳ್ಪುದು || ೩೪ ||

ಮೊದಲು ಬೇಯಿಸಿದ ಬಾಳೆಯ ಹೂವನೊಂದಿನಿಸು |
ಕದುಕಿಱಿದು ತಿಳಿದುಪ್ಪ ಶುಂಠಿ ಬಿಳಿಯುಳ್ಳಿಯರೆ |
ದುದಕದೊಳು ಮೆಣಸು ಜೀರಿಗೆಯರೆದ ಕಲ್ಕದೊಳು ಹಾಕಿ ಯಾದ್ರವವಿಂಗುವ ||
ಹದನನಱಿದಟ್ಟು ತುಪ್ಪದೊಳು ತಾಳಿಸಿ ತೆಗೆದು |
ಮೃದುಮಾಡಿ ಮತ್ತೆ ಮುಳ್ಳಿಱಿದು ಮಸೆದೆಲೆಯ ತೆಗೆ |
ದದಕೆ ಸಿರಪಚ್ಚೆ ಸಕ್ಕರೆಯನಾಯೆಸಳ ಪದರೊಳಗೆ ಮುನ್ನಾಗಿಡುವುದು || ೩೫ ||

ಘಟ್ಟಿ ಮಜ್ಜಿಗೆಗೆ ಹಸನಾದ ಸಂಭಾರಗಳ |
ನಿಟ್ಟರೆದು ಒಲೆಗೆತ್ತಿ ಒಡೆಯದಂದದಿ ಕಾಸಿ |
ಸಟ್ಟುಗದ ಹದವಾಗಲಿಳುಹಿ ಶೋಧಿಸಿದ ಕೊಣಬಿನೊಳು ಬಾಳೆಯ ಹೂವನು ||
ಇಟ್ಟಿಱಿದು ಶುಂಠಿಯುಳ್ಳಿಯ ತೋರಮಂ ಹಾಕಿ |
ಚಟ್ಟಿಯೊಳು ತುಪ್ಪವೆಱೆದಿಂಗಿಕ್ಕಿ ವೊಗ್ಗರಣೆ |
ಗೊಟ್ಟು ನರೆಯಿಕ್ಕಿ ಪರಿಮಳಗೊಡಲು ತಕ್ರರಂಭಾಕುಸುಮಪಾಕಮಾಯ್ತು || ೩೬ ||

ಅತ್ತರದಿ ಬೆಂದ ಬಾಳೆಯ ಮುಗುಳ ಕಿಱಿದಾಗಿ |
ಕತ್ತರಿಸಿಯದಕೆ ಬಲಿಯಿಸಿ ಕೊಂಡ ಹಾಲಪುಡಿ |
ಚಿತ್ತಳಿಸಿದಲ್ಲ ನೀರುಳ್ಳಿ ಮೆಣಸಿನ ಚೂರ್ಣ ಹುರಿದ ತೆಂಗಾಯ ಕುಸುರಿ ||
ಇತ್ತು ಚಾತುರ್ಜಾತಕವನು ಪನಿನೀರೆಱೆದು |
ಕೊತ್ತುಂಬರಿಯ ಸಣ್ಣಗಳನಿಕ್ಕಿ ಕರ್ಪೂರ |
ವಿತ್ತು ಮೊಸರೊಳು ಕಲಸಿ ತಿಳಿದುಪ್ಪವೆಱೆದಿಂಗನಿಕ್ಕಿ ಕರಿಬೇವ ಹಾಕಿ || ೩೭ ||

ಬಳಿಕ ಕೆಂಪಂ ಮಾಡಿ ಹುರಿದು ತಾಳಿಸಿಕೊಂಡು |
ಇಳುಹಿ ಪೊಡ್ಡಣಿಗೆಯಂ ಕೊಟ್ಟು ಬಾಳೆಯ ತಱಗಿ |
ನೊಳಗಿಕ್ಕಿ ಮೊದಲದೆಲೆಯ ಹಾಕಿ ಕರಿಬೇವಿನೆಲೆಯಿತ್ತು ನಾರ ಸುತ್ತಿ ||
ಅಳಗೆಯತ್ತಳದ ಮೇಲಿಕ್ಕಿ ಬಿಸಿಯಂ ಮಾಡಿ |
ಕೊಳುತ ಹೂವಿಂದ ಭಾವಿಸಿದ ಚೆಟ್ಟಿಯೊಳು ಮು |
ಚ್ಚುಳವಿಕ್ಕಿ ಮಡಗಿದರೆ ತಾನಮೃತರಂಭಾಕುಸುಮಪಾಕವೆಸರಾದುದು || ೩೮ ||

ಕೆದಱಿದೆಸಳಂ ಮುಗುಳು ಮಾಡಿ ನಾರಂ ಸುತ್ತಿ |
ಅದನು ತುಪ್ಪದೊಳು ಮತ್ತೊಮ್ಮೆ ತಾಳಿಸಿಯಿಳಿಹಿ |
ದುದ ನಾರ ತೆಗೆದು ಪಾವಡೆಯೊಳದ ತೊಡೆದು ಹಾಲೊಳಗೆ ಸಕ್ಕರೆ ಪುಡಿಯನು ||
ಕದಡಿಯಾಱಿಸಿಯದಱೊಳಾ ಹೂವನಿಕ್ಕಿ ಕಂ |
ಪೊದವಿದಲರಂ ಭಾವನೆಯ ಕೊಟ್ಟು ಮಡಗಲಂ |
ತದು ತಾಂ ಕ್ಷತಕ್ಷೀರರಂಭಾಕುಸುಮಪಾಕಮೆಂಬ ಹೆಸರಂ ಪಡೆದುದು || ೩೯ ||

ಬೆಂದ ಬಾಳೆಯ ಹೂವ ಕದುಕಿಱಿದುದಂ ಮುನ್ನಿ |
ನಂದದೊಳು ಕುದಿಸಿ ಬಳಿಕುದಕಮಂ ಹಿಂಡಿ ನಾ |
ರಿಂದ ಬಿಗಿದುಪ್ಪು ಹುಳಿ ಶುಂಠಿ ಜೀರಿಗೆ ಮೆಣಸನರೆದುದಂ ಕೊಣಬುಗಾಸಿ |
ಒಂದಿಸಿಯದಱೊಳು ಪಾಕಂ ಮಾಡಿಕೊಂಡದ |
ಕ್ಕೊಂದಿನಿಸು ತಿಳಿದುಪ್ಪವೆಱೆದಾ ದ್ರವಂ ಬತ್ತು |
ವಂದದಿಂ ತಾಳಿಸಿ ಬಳಿಕ್ಕಿಳುಹಿಕೊಂಡುದಱ ಬಿಸಿಯೆಲ್ಲನಾಱೆಸುವುದು || ೪೦ ||

ಅದಕೆ ತೆಂಗಿನಹಾಲು ತನಿವಾಲು ನೀರುಪ್ಪು |
ಹದನಾಗಿ ಹುರಿದ ಸಂಭಾರವನರೆದು ಕೂಡಿ |
ಕದಡಿಯಟ್ಟಾ ಕೊಣಬಿನಾಪದರಿನೊಳು ತುಂಬಿಯದಱೊಳಗೆ ಪಾಕಮಾಡಿ |
ಪುದಿದ ನಾರಂ ಬಿಟ್ಟುಯಿಂಗುಳ್ಳಿ ಕರಿಬೇವು |
ಮೊದಲಾದುವಂ ತುಂಬಿ ತುಪ್ಪದೊಳು ಒಗ್ಗರಿಸಿ |
ಯುದುರೆ ಕರ್ಪುರವಿಕ್ಕಿ ಮಿಶ್ರರಂಭಾಕುಸುಮವೆಂದು ಹೆಸರಂ ಕರೆವುದು || ೪೧ ||

ಮೊಸರು ಮಜ್ಜಿಗೆ ಹಾಲ ಸರಿಗೂಡಿ ಮೆಣಸುಳ್ಳಿ |
ಹಸಿಯ ಜೀರಿಗೆ ಶುಂಠಿಯರೆದು ಕೊಣಬಂ ಕಾಸಿ |
ಹಸನಾಗಿ ಬೆಂದ ಬಾಳೆಯ ಹೂವನಿಕ್ಕಿ ಮೃದುಗೊಳಿಸಿ ಕತ್ತರಿಸಿದುಳ್ಳಿ ||
ಹೊಸಶುಂಠಿ ಮೆಣಸು ಕೊತ್ತುಂಬರಿಯ ಹುಡಿಯನದ |
ನೆಸರಿನೊಳು ತುಂಬಿ ಕೊಣಬಿನೊಳಿಟ್ಟು ಒಗ್ಗರಿಸಿ |
ಕುಸುರಿ ತೆಂಗಾಯಿಕ್ಕಿ ದಧಿಸಾರಿಕಾಕೋಚಕುಸುಮವೆಸರಂ ಕರೆವುದು || ೪೨ ||

ಹದನನಱಿದುಪ್ಪು ಮೆಣಸುಳ್ಳಿ ತೆಂಗಾಯರೆದು |
ಕದಡಿ ಹಾಲೊಳಗೊಂದು ಮುದ್ದೆ ಬೆಣ್ಣೆಯನಿಕ್ಕಿ |
ಯದನೊಲೆಯ ಮೇಲೆತ್ತಿ ನೀರನಿಂಗಿಸಿಕೊಂಡು ಬೆಂದ ಬಾಳೆಯ ಹೂವನು ||
ಕದುಕಿಱಿದುಕೊಂಡಿಕ್ಕಿ ಮೇಲೆ ತುಪ್ಪವೆನೆಱೆದು |
ಮೃದುಮಾಡಿಯಟ್ಟು ತೆಂಗಾಯ ತುಱುವಲ ಹಾಲ |
ನದಱ ಮೇಲಿಕ್ಕಿ ಒಗ್ಗರಿಸಿ ಪರಿಮಳವೀಯಲದು ತಾನು ರಾಜಯೋಗ್ಯ || ೪೩ ||

ಉಕ್ಕರಿಸಿಕೊಂಡ ಬಾಳೆಯ ಹೂವ ಕದುಕಿಱೆದು |
ದಕ್ಕೆ ನಾರಂ ಸುತ್ತಿ ಬಟ್ಟವಾಲೊಳು ತುಪ್ಪ |
ವಿಕ್ಕಿ ಜೀರಿಗೆ ಶುಂಠಿಯುಳ್ಳಿ ಕೊತ್ತುಂಬರಿಯ ರಸವೆಱೆದು ಹೂವಿನೆಸಳ ||
ಹಿಕ್ಕಿಯದಱೊಳು ಹಾಕಿ ಹಾಲಿಂಗುವಂದದೊಳು |
ಚೊಕ್ಕಟದಿನಟ್ಟು ಹುರಿಮೆಣಸು ಹುರಿಯೆಳ್ಳು ಹುರಿ |
ಯಕ್ಕಿ ತುಪ್ಪದಿ ಹುರಿದ ತೆಂಗಾಯಿಹೂ ಉದ್ದು ಜೀರಿಗೆಯ ಹುಡಿಯಿಡುವುದು || ೪೪ ||

ಎಳೆಯ ಬದನೆಯಕಾಯ ಸುಟ್ಟು ಬಜ್ಜಿಯೊಳುಪ್ಪು |
ಹುಳಿ ಶುಂಠಿಯಿಕ್ಕಿ ಸಾಸುವೆಗೂಡಿ ಹೊಸಬೆಣ್ಣೆ |
ಯೊಳಗೆ ಒಗ್ಗರಿಸಿ ಬಾಳೆಯ ಹೂವಿನೊಳಗಿಕ್ಕಿಕೊಂಡು ಒಗ್ಗರಣೆ ಮಾಡಿ ||
ಇಳುಹಿ ಪರಿಮಳವಿಕ್ಕಿ ನಾರನದಱೊಳು ಸುತ್ತಿ |
ಬಳಿಕಮತ್ತರದ ಮೇಲದನು ನಸು ಬಿಸಿಮಾಡಿ |
ಕೊಳುತ ವೃಂತಾಕರಂಭಾಕುಸುಮಪಾಕವೆಂದೆಂಬ ಹೆಸರಂ ಕರೆವುದು || ೪೫ ||