ಸೂಚನೆ : ಕಳಿಲೆ ಹಾಗಲ ನೆಲ್ಲಿ ಮೂಲಂಗಿ ಹಾಲು ಕಂ |
ಗೊಳಿಪ ಮೊಸರೊಡೆ ಪತ್ರದೊಡೆ ಕಣಿಕ ಪಲತೆಱದ |
ಬಿಳಿಯವದಳದ ಹೋಳಿಗೆಯ ಶಾಕಪಾಕಮಂ ಸತಿಯರಱೆವಂತೊಱೆವೆನು ||

ಕಳಿಲೆಯೆಳೆಮೊಳೆಯನುತ್ತರಿಸಿ ಸುಣ್ಣದ ನೀರ |
ತಿಳಿಯನಿನಿಸಂ ನೀರೊಳೆಱೆದು ಬೇಯಿಸಿಕೊಂಡು |
ಹಿಳಿದದಱ ನೀರ ಮತ್ತೊಮ್ಮೆ ಬಿಸಿ ನೀರೆಱೆದು ಚೆನ್ನಾಗಿ ಕಿವುಚಿಕೊಂಡು ||
ತೊಳೆದು ನೀರಂ ಹಿಂಡಿ ಗೌರಾಗುವೊಲು ತುಪ್ಪ |
ದೊಳಗೆ ಬೇಯಿಸಿಕೊಂಡು ಕೊಣಬುದಾಳಿಲಪುಡೆಹ |
ಗಳನು ನಾನಾ ಸವಿಯನಿಕ್ಕಿ ಹಸನಂ ಮಾಡಿ ಪಾಕಮಂ ಸಲೆ ಮಾಳ್ಪುದು || ೧

ಮೆತ್ತನುಕ್ಕರಿಸಿಕೊಂಡೆಳೆಯ ಕಳಿಲೆಯ ಕುಡಿಯ |
ನೊತ್ತಿ ಶತಛಿದ್ರವಾಗುವ ತೆಱದಿ ಕದುಕಿಱಿದು |
ಹತ್ತೆಂಟು ಭಾಗೆಯಂ ಮಾಡಿ ನಸುಮೆಣಸುಪ್ಪನಿಕ್ಕಿ ತುಪ್ಪದೊಳಗಟ್ಟು ||
ಉತ್ತಮದ ಸಂಭಾರಮಂ ಹಲವು ರುಚಿ ಮಾಡಿ |
ಮತ್ತದಕೆ ಚೆನ್ನಾಗಿ ಪೂರೈಸಿ ಪೊಡ್ಡಣಿಗೆ |
ಯಿತ್ತು ನರೆಯಂ ಕೊಟ್ಟು ಪರಿಮಳವನಿಕ್ಕಲದು ಚುಚ್ಚುಗಳಿಲೆವೆಸರು ಕಣಾ || ೨ ||

ಬೆರಲದಪ್ಪದೊಳು ಬಟುವಾಗಿ ಕಳಿಲೆಯನ್ನು |
ತ್ತರಿಸಿಕೊಂಡದಱ ಒಗರನು ಹೋಹ ತೆಱದನು |
ಕ್ಕರಿಸಿ ನೀರಂ ಹಿಂಡಿ ಹೊಸ ತುಪ್ಪದೊಳು ಹುರಿದು ನಾಲ್ಕೈದು ಭಾಗೆ ಮಾಡಿ ||
ಹಿರಿದು ಹಸನಾಗಿ ನಾನಾ ತೆಱದ ಸವಿಗಳಂ |
ಧರಿಯಿಸಿದ ಸಂಭಾರಮಂ ಬೇಱೆ ಬೇಱಿಕ್ಕಿ |
ಪರಿಮಳವನಿಕ್ಕಿ ಒಗ್ಗರಿಸಲವು ಗಾರಿಗೆಗಳಿಲೆಯೆಂಬ ಹೆಸರಾದುವು || ೩ ||

ಕಳಿಲೆಯಂ ನಾಲ್ಕೈದು ಬಗೆಯಾಗುವಂತೆ ಸಂ |
ಬಳಸಿಕೊಂಡೆರಡುದಿನ ನೀರೊಳಗಗುಳಲಿಕ್ಕಿ |
ಹುಳಿಯಾಗೆ ತೆಗೆದು ಬಿಸಿನೀರಿನಿಂದ ತೊಳೆದವನು ನಾಲ್ಕೈದು ಭಾಗೆ ಮಾಡಿ ||
ಬಳಿಕ ಹಸನಾಗಿ ತಾಳಿಸಿ ಕೆಲವ ಪಲ ಕೊಣಬಿ |
ನೊಳಗೆ ಬಿಡುವುದು ಕೆಲವ ಸಾಸವೆಯೊಳರೆದ ಸಿಡಿ |
ಯಳೆಯೊಳಿಕ್ಕುವುದು ಕೆಲವಂ ಸಕಲ ಸಂಭಾರವಿಟ್ಟು ತಾಳಿಸಿಕೊಂಬುದು || ೪ ||

ಒಗರು ಹೋಹಂತುಕ್ಕರಿಸಿದ ಕಳಿಲೆಯ ಕುಡಿಯ |
ಮಿಗೆ ಸಣ್ಣನಾಗಿ ಕತ್ತರಿಸಿ ಮೆಣಸುಪ್ಪಿಕ್ಕಿ |
ಮಗಮಗಿಪ ತುಪ್ಪದೊಳು ಹುರಿದು ಪಲಭಾಗೆಯಂ ಮಾಡಿಕೊಂಡೊಂದೊಂದಕೆ ||
ಸೊಗಯಿಸುವ ಹಾಲದುದ್ದೇಳಹುಡಿ ಬಡಗಸಂ |
ಡಗೆ ಹೆರೆದ ತೆಂಗಾಯ ಸೊಜ್ಜಿಗೆಯ ಕೂಳುಮಂ |
ಬಗೆಯಱಿದು ತುಪ್ಪದೊಳು ಹುರಿದಿಕ್ಕಿ ಒಗ್ಗರಿಸಿ ಪರಿಮಳಂಗಳನಿಡುವುದು || ೫ ||

ಮತ್ತೊಂದು ತೆಱದ ಕಳಿಲೆಯ ರವೆಗೆ ಸಂಭಾರ |
ಮಿತ್ತು ಕಾವಿಯ ಕಲ್ಲನರೆದು ಬಣ್ಣವನಿಕ್ಕಿ |
ಉತ್ತಮದ ತುಪ್ಪದಿಂದೊಗ್ಗರಿಪುದೊಂದಕ್ಕೆ ನಸುಹುಳಿಯ ಪೊರೆಯಿಡುವುದು ||
ಕತ್ತರಿಸಿದೆಳೆಯಲ್ಲ ನೀರುಳ್ಳಿ ಕರಿಬೇವು |
ಕೊತ್ತುಂಬರಿಯ ಸೊಪ್ಪನಿಕ್ಕಿ ಹೊಸ ಪರಿಮಳವ |
ನಿತ್ತು ಪೊಡ್ಡಣಿಗೆಯಂ ಕೊಟ್ಟರಿಸಿನದ ತಱಗಿನೊಳು ಕಟ್ಟಿ ಹಸಮಾಳ್ಪುದು || ೬ ||

ಮತ್ತೊಂದು ಹುಡಿಮಾಡಿಕೊಂಡೆಳೆಯ ಕಳಿಲೆಯೊಳು |
ಕೊತ್ತುಂಬರಿಯ ಸಣ್ಣ ಶುಂಠಿ ನೀರುಳ್ಳಿಗಳ |
ಚಿತ್ತಳಿಯ ಹಾಕಿಯದಱರ್ಧ ತೆಂಗಿನ ಹೂವನಿಕ್ಕಿ ಬಿಳಿಯುಪ್ಪ ತಳಿದು ||
ಮತ್ತದಕೆ ಹಾಲು ನೀರೆಱೆದು ಸಂಪಳೆಗಲಸಿ |
ಎತ್ತರದ ಮೇಲೆ ದೊನ್ನೆಯನಿರಿಸಿ ತುಪ್ಪವಂ |
ಹತ್ತದಂದದಿ ತೊಡೆದು ಹುಯಿದುಕೊಂಡದನಿಡ್ಡಲಿಗೆಯಂತೆ ಬೇಯಿಸುವುದು || ೭ ||

ಬೆಂದ ಕಳಿಲೆಯ ಹಿಟ್ಟನಿಳಿಯಾಱಸಿ ಹಲವು |
ಚಂದದ ಹಸುರುಗಾಯ ತೆಱದಿನುತ್ತರಿಸಿಕೊಂ |
ಡೊಂದು ಬೆಸಳಿಗೆಗೆ ಕಮ್ಮನೆ ಕಾದ ಹಾಲ ಹುಯಿದದಱೊಳಗೆ ಹದನನಱಿದು ||
ಒಂದನಿಸು ತಪ್ಪಿಲ್ಲದೆಸೆವ ಸಂಭಾರಗಳ |
ನೊಂದಿಸಿಯೆ ಕಾಸಿದ ಕೋನಬಿನಲ್ಲಿ ಮಿಂಚೊಂದು |
ವಂದದಿಂ ಬೆಣ್ಣೆಯಂ ಹಾಕಿ ಒಗ್ಗರಿಸಿ ಕೆಂಡದಿಂಧೂಪವನಿಡುವುದು || ೮ ||

ಅದಱೊಳಗೆ ಬೆಂದ ಕಳಿಲೆಯ ಹೋಳಿಗೆಯ ಹೋಳ |
ನೊದವಿಸಿದ ಬಳಿಕ ಒಗ್ಗರಣೆಯಂ ಮಾಡುವುದು |
ಮೊದಲು ಬೇಯಿಸಿದ ಕಳಿಲೆಯ ಹಿಟ್ಟ ಕೆಲವು ಪುಡೆಯವನು ಚೆನ್ನಾಗಿ ಮಾಡಿ ||
ಅದನು ಪರಿಪರಿ ಮಾಡಿಯೊಂದೊಂದಕೊಂದೊಂದು |
ವಿಧದ ಸಂಭಾರಮಂ ಕಲಸಿ ನವಪರಿಮಳವ |
ಹುದುಗಿ ಪೊಡ್ಡಣಿಗೆಯಂ ಕೊಟ್ಟು ಮೋದವ ತೋಱಿ ಹಿರಿದು ಹಸನಂ ಮಾಳ್ಪುದು || ೯ ||

ಎಳೆಯ ಕಳಿಲೆಯ ಕುಡಿಯೊನೊರು ಹೋಹಂತೆ ಕುದಿ |
ಗೊಳಿಸಿಯೊರಳೊಳು ತುಳಿದು ನೀರುಳ್ಳಿ ಕರಿಬೇವು |
ಎಳೆಯಲ್ಲಮಿಕ್ಕಿಯಿಂಗಂ ಬೆರಸಿ ನೀರಿಂದಲಟ್ಟುಕೊಂಡಾ ವಡೆಯನು ||
ಬಳಿಕುದುರೆಯಂ ಮಾಡಿ ತೆಂಗಾಯ ಹಸಿಯಕ್ಕಿ |
ಬಿಳಿಯುದ್ದನಿಕ್ಕಿ ಹಾಲೆಱೆದರೆದ ಸಂಪಳೆಯ |
ತಿಳಿದುಪ್ಪದೊಳಗೊಡೆಯನಟ್ಟು ತಾಳಿಲಗೊಣಬು ಪುಡೆಯುಮಂ ಹಸಮಾಳ್ಪದು || ೧೦ ||

ಕಳಿಲೆಯ ಕುಡಿಯನಿಕ್ಕುವಂತೆ ಮರನಂ ಕಡಿದು |
ಕಳಿಲೆಯುಂ ಸೊಜ್ಜಿಗೆಯು ತನಿವಾಲನಿಟ್ಟರೆದು |
ಬಿಳಿಯ ಸಂಭಾರಮಂ ಕೂಡಿಕೊಂಡಾ ಕಳಿಲೆಯಕ್ಕಿಯೊಳು ಬೆಣ್ಣೆದೊಡೆದು ||
ಬಳಿಕದಂ ತುಂಬಿಯತ್ತರದಿ ಪಾಕಂ ಮಾಡಿ |
ಇಳಿಹಿ ತುಪ್ಪದೊಳು ತಾಳಿಸಿ ಸಕ್ಕರೆಯ ಪಾಕ |
ದೊಳು ಹಾಲು ಮೊಸರು ಕೊಣಬಿನೊಳು ಸಱಿಯಂ ಹಾಕಿ ಸಱಿಯತಾಳಿಲ ಮಾಳ್ಪುದು || ೧೧ ||

ಕೆಲವು ಕುದಿಸಿದ ಕಳಿಲೆಗಳನು ಸೊಪ್ಪಿಸಿಕೊಂಡು |
ಹಲಸವಿಯ ಸಂಭಾರಮಿಟ್ಟು ತುಪ್ಪದೊಳು ತಾ |
ಳಿಲವ ಮಾಡುವುದೋಲೆಯಂತೆ ಕೆಲವಂ ಕುಯಿದು ನಾನಾಪರಿಯೊಳಪಡುವುದು ||
ಕೆಲವು ಕಳಿಲೆಯ ಕುಡಿಯ ಅರುಗು ಹಱಿಯದೆ ತೋಡಿ |
ಸಲೆಗಂಪಿತಪ್ಪ ತುಪ್ಪದೊಳು ಕಳಿಲೆಯ ಹುಡಿಯ |
ಕಲಸಿ ಸಂಭಾರಮಂ ಭಿನ್ನರುಚಿ ಮಾಡಿಕ್ಕಿ ಪೂರೈಸಿಯೊಗ್ಗರಿಪುದು || ೧೨ ||

ಪುಳಿಚಾರು ಪೂರ್ಣವಟಿ ಭುಕ್ತ ಭಂಜಿತ ಶಾಕ |
ತುಳುವ ದಾಳಿಲ ಶಾಕವಂಗಿ ಶೂಲ್ಯಕ ಮನಂ |
ಗೊಳಿಪ ದಧಿಸಾರಿಕೆ ವಿಚಿತ್ರಪಾಕಂ ಕಹರಿಯಡಕೆತಾಳಿಲವೆಸರನು ||
ತಳೆದ ಪಾಕಂಗಳಾವಾವುಂಟವಱಂತೆ |
ಕಳಿಲೆಯೆಳೆಗುಡಿಯಂತರವ ಕಳೆದು ನೀರೊಳಗೆ |
ತುಳಿದು ಸರಿಮಜ್ಜಿಗೆಯ ಬೆರಸಿಕೊಂಡಱೊಳಗೆ ಕಿವುಚಿ ಸುಣ್ಣದ ನೀರನು || ೧೩ ||

ಸೇರಿಸಿದ ಬಳಿಕದನು ಬೇಯಿಸಿದ ಮೇಲದಱ |
ನೀರನುಱೆ ಬಸಿದುಕೊಂಡದಕೆ ಮತ್ತೊಮ್ಮೆ ಬಿಸಿ |
ನೀರನೆಱೆಕೊಂಡದನು ಕೈಯಿಂದ ಚೆನ್ನಾಗಿ ಕಿವುಚಿ ಸಲೆ ತೊಳೆದು ಬಸಿದು ||
ನೀರೊಳಗೆ ಕದಡಿಯವಱೊಳು ಹಾಕಿ ಕಿವುಚಿಯಾ |
ನೀರ ಬಸಿದೊಗರು ಹೋದುದನಱಿದು ಬಳಿಕೊಮ್ಮೆ |
ನೀರಿನಿಂದ ತೊಳೆದು ತೆಗೆದದನು ಪುಡೆಯದ ಶಾಕಪಾಕಕ್ಕೆ ಹಸಮಾಳ್ಪುದು || ೧೪ ||

ಕಡು ಸಣ್ಣನಂ ಮಾಡಿಕೊಂಡ ನೆಲ್ಲಿಯಕಾಯ |
ಪುಡೆಯದೊಳು ನೀರುಳ್ಳಿ ಹಸಿಯಲ್ಲ ಬಿಳಿಯಪ್ಪ |
ನೊಡೆಗಲಸಿ ತುಪ್ಪದೊಳು ಹುರಿದು ಪಲತೆಱನಾಗಿ ಮಾಡಿಕೊಂಡದಱೊಂದಕೆ ||
ಒಡೆಯ ರವೆ ಸಕ್ಕರೆಯನಿಕ್ಕುವುದು ಒಂದಕ್ಕೆ |
ಒಡೆದ ಹಾಲಂ ತುಪ್ಪದೊಳು ಹುರಿದುಕೊಂಡು ಮ |
ತ್ತೊಡನೆ ಬೆರಸುವುದು ಮತ್ತೊಂದಕ್ಕೆ ಸೂಸಲಂ ಬೆರಸಿ ಹಸನಂ ಮಾಳ್ಪುದು || ೧೫ ||

ಉಳಿದ ನೆಲ್ಲಿಯಕಾಯ ಪುಡೆಯದೊಳು ಸಂಭಾರ |
ಗಳನು ನಾನಾ ತೆಱದ ಸವಿಗಳಂ ಮಾಡಿ ಪರಿ |
ಮಳ ಸಹಿತ ಕಲಸಿ ಒಗ್ಗರಣೆಯಂ ಹಸನಾಗಿ ಮಾಡಿ ಮೋದವನೆ ತೋಱಿ ||
ಬಳಿಕ ಹೂವಿಂದ ಭಾವಿಸಿದ ಕಡಲೆಯ ಹಿಟ್ಟ |
ತಳಿದುಕೊಂಡರಿಸಿನದ ತಱಗೆಲೆಯೊಳಿಕ್ಕಿ ಸೆಖೆ |
ಗೊಳಿಸಿ ಪುಡಿಯಂ ಮಾಡಿದುದಾಮಳಚೂರ್ಣಮೆಂದೆಂಬ ಹೆಸರಂ ಪಡೆದುದು || ೧೬ ||

ಕಡು ಹಸಂಬಡೆದ ಹಾಲೊಳಗೆ ನೆಲ್ಲಿಯಕಾಯ |
ಪುಡೆಯಮಂ ಹುಯಿದು ವಡಯಿಸಿ ನೀರುಮಂ ಬಸಿವು |
ತಡಕೆಯಂದದೊಳುಂಡೆಯಂ ಮಾಡಿ ಹಾಲೊಳಗೆ ಅಕ್ಕಿ ತೆಂಗಾಯುದ್ದನು ||
ಒಡಗೂಡಿಯರೆದುಕೊಂಡಾವುಂಡೆಗಳನವಱೊ |
ಳೊಡೆಗಲಸಿ ತಿಳಿದುಪ್ಪದೊಳು ಹುರಿದುಕೊಂಡವಂ |
ಗುಡಪಾಕ ಕೊಣಬು ಹುರುಳಿಯ ಹಾಲೊಳಿಕ್ಕುವುದು ಕೆಲವ ತಾಳಿಸಿಕೊಂಬುದು || ೧೭ ||

ನೆಲ್ಲಿಯ ಬಲಿದ ಕಾಯ ಎಣ್ಣೆಯೊಳು ಹುರಿದು ಹೊಸ |
ಬೆಲ್ಲವಂ ಲೇಹ್ಯಪಾಕವ ಮಾಡಿ ಹಪ್ಪಳವ |
ನಲ್ಲಿ ಮುಱಿದಿಕ್ಕಿಯಾ ಕಾಯ ಹೋಳಂ ಹಾಕಲದು ಗುಡಾಮಳಕವಾಯ್ತು ||
ಚೆಲ್ಲಿಸಿದ ನೀರುಳ್ಳಿ ನಿಂಬೆಹುಳಿ ಮೆಣಸು ಹಸಿ |
ಯಲ್ಲ ಸಕ್ಕರೆ ಹುಳಿಯ ಬೆರಸಿ ಪಾಕಂ ಮಾಡಿ |
ನೆಲ್ಲಿಯಾ ಕಾಯ ಹಾಕಲು ಸಿತಾಮಳಕವೆಂದೆಂಬ ಹೆಸರಂ ಪಡೆದುದು || ೧೮ ||

ಹುಳಿಯೊಳುಂಟಾಗಿ ಮೆಣಸರೆದು ಸಾಸುವೆಯಿಕ್ಕಿ |
ಎಳೆಯಲ್ಲ ನೀರುಳ್ಳಿ ಮೆಂತೆಯದ ಚೂರ್ಣಮಂ |
ತಳಿದೆಣ್ಣೆಯಿಂಗೆಱೆದು ಕೆಂಡಧೂಪವ ಕೊಟ್ಟು ಹುರಿದ ನೆಲ್ಲಿಯಕಾಯನು ||
ಬಳಿಕದಱೊಳಿಕ್ಕಿ ಒಗ್ಗರಿಸಿ ಪರಿಮಳವ ಹೊರೆ |
ಗೊಳಿಸಿ ಮಾಡುವುದು ಮತ್ತೊಂದು ತೆಂಗಾಯ ಹೂ ಸಕ್ಕರೆಯನಿಡುವುದು || ೧೯ ||

ಉದಕದೊಳು ಹಿಟ್ಟುನೆಲ್ಲಿಯ ಕಾಯ್ಗಳಂ ಹಾಕಿ |
ಕುದಿಗೊಳಿಸಿ ಬಸಿದು ಮತ್ತೊಮ್ಮೆಯುದಕವನೆಯೆಱೆ |
ದದಕೆ ಕೊತ್ತುಂಬರಿಯ ಗಂಟಿಕ್ಕಿ ಬಿಳಿಯುಪ್ಪು ಹಾಕಿ ಮೃದುಗೊಳಿಸಿಯಟ್ಟು ||
ಉದಕಮಂ ಸರಿದೆಗೆವುಳಿದ ಕಾಯೊಳು ಮೆಂತೆ |
ಯದ ಚೂರ್ಣ ಸಹಿತ ಸಾಸುವೆಗೆಯರಿಸಿನವಿಕ್ಕಿ |
ಹದನಾಗಿಯರೆದದಂ ಕಲಸಿ ಎಣ್ಣೆಯ ಬಿಡಲು ಹಿರಿದಾಗಿ ಸವಿ ವಡೆದುದು || ೨೦ ||

ಉಕ್ಕರಿಸಿ ಬಸಿದು ನೆಲ್ಲಿಯಕಾಯ ಮೊಸರೊಳಗೆ |
ಸಕ್ಕರೆಯ ಬೆರಸಿ ಸೋದಿಸಿ ಪರಿಮಳದ ಚೂರ್ಣ |
ವಿಕ್ಕಿಯದಱೊಳು ಬಲಿದ ಹಾಲನವರೆಯ ತೋರದೊಳಗೆ ಕತ್ತರಿಸಿ ಹಾಕಿ ||
ಚೊಕ್ಕಟಂ ಮಾಡಿ ಮತ್ತಂ ಕೆಲವು ಕಾಯ್ಗಳೊಳು |
ಸಕ್ಕರೆಯ ಬಿಸಿಯನಾರಿಸಿಕೊಂಡು ಸವಿವಾಲೊ |
ಳಿಕ್ಕಿ ಬೆರಸುವುದು ನಾನಾ ತೆಱದ ಕೊಣಬಿನೊಳು ಕೆಲವು ಕಾಯ್ಗಳನಿಡುವುದು || ೨೧ ||

ಉಳಿದ ನೆಲ್ಲಿಯ ಸುಣ್ಣನೀರಿಟ್ಟು ಕುದಿಗೊಳಿಸಿ |
ಹುಳಿಯಂ ಕಳೆದು ಸಪ್ಪೆಯಾದ ತೆಱನಱೆದು ಬಳಿ |
ಕಿಳುಹಿ ನೀರಂ ಬಸಿದು ತುಪ್ಪದೊಳು ಗೌರಾಗುವಂದದಿಂ ಹುರಿದುಕೊಂಡು ||
ಬಳಿಕ ಪಲ ತೆಱದ ತಾಳಿಲಗಳಂ ಮಾಡುವುದು |
ಎಳೆಯ ಹುಣಿಸೆಯ ಕಾಯ್ಗಳನು ಕಮ್ಮನೆಯ ತುಪ್ಪ |
ದೊಳು ಹುರಿದು ಹಾಕಿ ಮತ್ತದನು ಹಸನಾಗಿಯೊಗ್ಗರಿಸಿ ಪರಿಮಳವಿಡುವುದು || ೨೨ ||