ಸೂಚನೆ: ಕ್ಷೀರ ಪಂಚಕ ಪಾಕರಸ ರಸಾಯನ ಪಾಕ |
ದಾರುಣ ನಿದಾಘದುಬ್ಬೆಯನು ಭಂಜಿಸುವ ಕುಡಿ |
ನೀರು ಮೊದಲಾದ ನಾನಾ ಪಾನಭೇದಮಂ ಸತಿಯರಱೆವಂತುಸಿರ್ವೆನು ||

ಉತ್ತಮದ ತಱುಪಿನೆಮ್ಮೆಯ ಹಾಲನೊಲೆಯ ಮೇ |
ಲೆತ್ತಿ ಸೋದಿಸಿಕೊಂಡು ಬಲುಗಿಚ್ಚನೇಳಿಸದೆ |
ಹೊತ್ತದಂದದೊಳು ಸಟ್ಟುಗವಿಡಿದು ತೊಳಸಿ ನಾಲ್ಕೈದು ಕುದಿಗೊಳಿಸಿ ಕಾಸಿ ||
ಮತ್ತದಂ ಪೊಗೆ ಹೋದ ತಱೆಗೆಂಡದೊಳಗೆ ನಡು |
ಜೊತ್ತಾಗುವನ್ನೆವರ ಮುಚ್ಚಳಂ ಮುಚ್ಚಿರಿಸಿ |
ಬಿತ್ತರದಿ ಕೆನೆಗಟ್ಟಲಾ ಹಾಲು ಮೊಸರು ಮಜ್ಜಿಗೆ ಬೆಣ್ಣೆಗತಿಪಾವನ || ೧ ||

ಒಂದೆರಡು ಕುದಿಗೊಮ್ಮೆವೊಂದೊಂದಳಗೆಗೆಱೆದು |
ಒಂದು ಹವಣಾಗಿ ಹೊಗೆಯಿಲ್ಲದಿಹ ದೀಪಾಗ್ನಿ |
ಯಿಂದಮೊಂದದೊಳು ಸಟ್ಟುಗವಿಡಿದು ತೊಳಸಿ ತಱುಪಿನೆಮ್ಮೆಯ ಹಾಲನು ||
ಒಂದಿನಿಸು ಹೊತ್ತಿಸದೆ ನಾಲ್ಕೊಂದೆನಿಸಿ ಕಾಸ |
ಲೊಂದು ತೆಱನಾಱೊಂದೆನಿಸಿ ಕಾಸಿಯಾಱಿಸಲ |
ದೊಂದು ತೆಱನೆಂಟೊಂದೆನಿಸಿ ಕಾಸಿ ಮಡಗಿದೊಡೆ ತಾನೊಂದು ತೆಱನಾದುದು || ೨೨ ||

ಬಟ್ಟವಾಲ್‌ ತೆರಟುವಾಲ್‌ ಚಿಲುಪಾಲುವೆಸರನದ |
ಕಿಟ್ಟು ಹಸಮಾಡುವುದು ಹಸಿಯ ತೊಂಡೆಯ ಬೇರ |
ಕಟ್ಟಿ ತೊಳಸಿದೊಡೆ ಬಿಳುಪಹುದು ತುಱುವೆಯ ಬೇರು ಮಾದಲದ ಕಡ್ಡಿಗಳನು |
ಇಟ್ಟು ತೊಳಸಿದೊಡೆ ನಿಮಿಷಕೆ ಗಟ್ಟಿಯಹುದೊಲೆಯೊ |
ಳಿಟ್ಟು ಸೆಕೆಯಳಯೊಳು ಗಂಗಳವನಿರಿಸಲ್ಲಿ |
ಅಟ್ಟವಾಲೆರೌಎದುಕೊಂಡಾ ಬೇರಿನಿಂ ತೊಳಸೆ ಹಿಟ್ಟಿನಂದದೊಳಪ್ಪುದು || ೩ ||

ಬಿಸಿಯನಾರಿಸಿ ಹಾಲ ಕಲುಕರದಾ ಬೇರ |
ರಸಮಿಕ್ಕಿ ಮತ್ತೊಮ್ಮೆ ಬಿಸಿಮಾಡಿಯಾ ಬೇರ |
ರಸಮಿಕ್ಕಿಯಾ ತೆಱದಿ ಮೂಱುಸೂಳಿಕ್ಕಲಾ ಹಾಲು ಕಡುಗಟ್ಟಿಯಹುದು ||
ಹೊಸತಾದ ಹೊನ್ನಗನ್ನೆಯ ಬೇರ ಸದೆಗುಟ್ಟಿ |
ಹಸಿಯ ಹಾಲೊಳಗಿಕ್ಕಿ ಕಡಗೋಲಿನಿಂದ ಮ |
ರ್ದಿಸಲು ಕಡುಹಸನಾಗಿ ಬೆಣ್ಣೆ ಬಹುದದ ತೆಗೆದು ಭುಂಜಿಸಲು ಹಿತಮಪ್ಪುದು || ೪ ||

ಒಡೆವ ಸಮಯದೊಳು ಹಾಲೊಳಗೆ ಸುಣ್ಣದ ತಿಳಿಯ |
ಬಿಡಲು ಜುಮ್ಮನೆ ತಿಳಿವುದದು ತಿಳಿಯದಿರ್ದೊಡಾ |
ಒಡೆದ ನೀರಂ ಹಿಂಡಿ ಬಿಸುಟು ಮಡಕೆಯೊಳು ಪಾವಡೆಗಟ್ಟಿಯಾದದ್ದನು ||
ಮಡಗಿಯಿನಿಸು ಬಿಸಿನೀರಿಕ್ಕಿ ಕೈಯಿಂದ |
ಬಿಡದದಂ ಚಾರಿಸಲು ತೆಳ್ಳತೆಳ್ಳನೆ ಮಡಕೆ |
ಯಡಿಯೊಳೆ ಬಿಳ್ದು ಹಳೆಯಂತೆ ಹಾಲಹುದದಂ ಬಿಸಿಮಾಡಿ ಕೈಕೊಂಬುದು || ೫ ||

ತನಿವಾಲ ಕಾಸಿ ಕೆಂಡದೊಳಿರಿಸಿಯಿನಿಸಿನಿಸು |
ಕೆನೆಗಟ್ಟುವಾಗ ಸೊಜ್ಜಿಗೆಯ ಹಿಟ್ಟಂ ತಳಿದು |
ಕೆನೆಯ ದಪ್ಪವ ಮಾಡಿ ತೆಗೆಯಲಾ ಹಾಲು ಬಡಕೆನೆಯಪ್ಪುದು ||
ಅನಿತಱೊಳು ಮತ್ತೊಮ್ಮೆ ಸೊಜ್ಜಿಗೆಯ ಹಿಟ್ಟಿಕ್ಕಿ |
ಕೆನೆದೆಗೆವುದೀ ತೆಱದಿನೈದಾಱು ಸೂಳ್ವರಂ |
ಕೆನೆದೆಗೆವುದದನೊಂದು ಹಾಲಿಗೈದಾಱು ಕೆನೆಯೆಂದು ಹೆಸರಂ ಹೇಳ್ವುದು || ೬ ||

ಉದಯದೊಳು ಕಾದ ಹಾಲಂ ಸಂಜೆ ಮುಟ್ಟ ಕೆಂ |
ಡದೊಳಿರಿಸಿಯಸ್ತಮಯವಾದ ಜಾವದ ಮೇಲೆ |
ಹದನಱೆದು ಹೆಪ್ಪನಿಡೆ ಮೊಸರು ಕಡುಗೆಂಪಹುದು ಮಾದಲದ ಹಣ್ಣ ಸೀಳಿ ||
ಅದಱಕೇಸರದೆಗೆದು ನಸುಬಿಸಿಯ ಹಾಲನೆಱೆ |
ದದಕೊಂದು ಹನಿ ಮಜ್ಜಿಗೆಯ ಹೆಪ್ಪನಿಕ್ಕಲಂ |
ತದು ಮಾತುಳಂಗರಂಜಿತದಧಿವೆಸರನಾಂತು ಹಿರಿದು ಸವಿಯಂ ಹಡೆದುದು || ೭ ||

ಮಾವಿನಿನಿವಣ್ಣ ಸೊಗಯಿಪ ರಸದಿ ಮೂಱುಸೂಳ್‌ |
ಭಾವನೆಯ ಕೊಟ್ಟು ಮಡಕೆಗೆ ನಸುಬಿಸಿಯ ಹಾಲ |
ತೀವಿ ಹೆಪ್ಪಿಡೆ ಚೂತಫಲಸಾರದಧಿಯಾಯ್ತು ಮತ್ತೊಂದು ಹಾಲಿನೊಳಗೆ ||
ಓವಿ ಕುಂಕುಮದ ಹೂವಂ ಹಾಕಿ ಹೆಪ್ಪನಿಡೆ |
ಮಾವಿನಾರಸವರ್ಣವಂ ಪೋಲ್ತದಂ ತೆಗೆದು |
ಪಾವಡೆಯೊಳಿಟ್ಟು ಶೋಧಿಸಿಕೊಂಡು ಕುಂಕುಮದ ಸಾರದಧಿವೆಸರಿಡುವುದು || ೮ ||

ಹಾಲಳಗೆಯಂಚಿನೊಳು ಸುಣ್ಣದ ಕುಱುಹನಿಕ್ಕಿ |
ಮೇಲೆ ಹೆಪ್ಪಂ ಬಿಟ್ಟು ಹಿಂಜಾವದೊಳಗೆಯಾ |
ಹಾಲು ನಸು ಹೆಱೆಯಾಗಲಾ ಹೆಪ್ಪ ತೆಗೆದೆರಡು ಬಗೆಮಾಡಿ ಮತ್ತೊಂದಕೆ ||
ಯಾಲಕ್ಕಿ ಶುಂಠಿ ಸಕ್ಕರೆಯಿಕ್ಕಲಂತದು ರ |
ಸಾಲದಧಿಯಾಯ್ತು ಮತ್ತೊಂದಕ್ಕೆ ನೀರುಳ್ಳಿ |
ಯಾಲಕ್ಕಿಯಿಕ್ಕಲಾ ಮೊಸರೆರಡು ಮೂಱುದಿನ ಸಿಹಿಗೆಡದೆ ಸವಿಯಪ್ಪುದು || ೯ ||

ನಸುಬಿಸಿಯ ಹಾಲೊಳಗೆ ಹೊಸತುಪ್ಪಮಂ ಬೆರಸಿ |
ಹಸನಾಗಿ ಹೆಪ್ಪನಿಡೆ ಘೃತಸಾರದಧಿಯೆಂಬ |
ಹೆಸರಾಯಿತಾಮೊಸರ ಕಡೆಯಲಾ ತುಪ್ಪಮೆಲ್ಲಂ ಬಿಳಿಯ ಬೆಣ್ಣೆಯಹುದು ||
ಬಿಸಿಲುವುದಿಸದ ಮುನ್ನ ಹೆಪ್ಪನೆಱೆದಾಹಾಲ |
ನೊಸೆದು ಹಿಂಬಗಲಿನೊಳು ತೆಗೆಯಲದು ಹೊಗೆ ಹಾಲ |
ಮೊಸರೆಂಬ ಹೆಸರಾಯ್ತು ಸಗ್ಗದವರೂಟಕ್ಕೆ ಸರಿಮಿಗಿಲೆನಿಸಿಕೊಂಡುದು || ೧೦ ||

ಹೆತ್ತ ಹಾಲಿನ ಕೆನೆಯ ತೆಗೆದದಂ ಕೈಯೊಳಗೆ
ಒತ್ತಿ ಮರ್ದಿಸಿಕೊಂಡು ಬಿಱುಸಾದುದಂ ತೆಗೆದು |
ಕತ್ತರಿಸಿದಲ್ಲ ನೀರುಳ್ಳಿ ಯಾಲಕ್ಕಿಯಿಡೆ ತಾನೆ ಕೆನೆಮೊಸರಾದುದು ||
ಮತ್ತೊಂದು ಮೊಸರಕೆನೆಯಂ ಹಣವಿನಗಲದೊಳು |
ಕತ್ತರಿಸಿಯದಱ ಸರಿ ಮೊಸರೊಳಗೆ ಕಲಸುವುದು |
ಮತ್ತೊಂದು ಮೊಸರಕೆನೆಯೊಳಗರ್ಧ ಹಾಲಕೆನೆಯಂ ಕೂಡಿ ಪರಿಮಳಿಪುದು || ೧೧ ||

ಬೆಳವ ಹಣ್ಣಿನನಾರ ಬಿಸುಟು ತಿರುಳಂ ಮೊಸರಿ |
ನೊಳಗಿಕ್ಕಿ ಯಾಲಕ್ಕಿಯುಪ್ಪನಿಕ್ಕಿಯೆ ಹುಡಿಯ |
ತಳಿದುಕೊಂಡಾ ಮೊಸರೊಳೇಳೆಂಟು ಭಾವನೆಯ ಕೊಟ್ಟು ನಳಲೊಳಗೊಣಗಿಸಿ ||
ಬಳಿಕ ಹುಡಿಮಾಡಿಕೊಂಡಾ ಹುಡಿಯ ಬಿಸಿನೀರಿ |
ನೊಳು ಕದಡಿ ಕಳಲಾಗಿ ಮಾಡಿ ಕರಿಬೇವುಳ್ಳಿ |
ಯಳೆಯಲ್ಲಮಿಕ್ಕಿಕೊಂಡದ ಬಿಲ್ವಫಲ ಸಾರದಧಿಯೆಂದು ಹೆಸರಿಡುವುದು || ೧೨ ||

ಕೆನೆಯ ತೆಗೆಯದೆ ಕಡೆದ ಕಳಲು ಗೋಳಕಮಾಯ್ತು |
ಕೆನೆದೆಗೆದು ನೀರಿಡದೆ ಪೊಸೆದುದೇ ಮಥಿತವೆಂ |
ದೆನಿಸಿತ್ತು ಮೊಸರ ನಾಲ್ಕಱೊಳೊಂದು ಭಾಗೆ ನೀರೆಱೆದುಕೊಂಡದನು ಕಡೆದು ||
ಅನುಮಾಡೆ ಸಿಂಧುವೆಸರಾಯ್ತು ಸರಿಭಾಗೆ ಮೊಸ |
ರಿನೊಳು ಸರಿನೀರೆಱೆದು ಕಡೆಯಲದು ತಕ್ರವೆಂ |
ದೆನಿಸಿತ್ತು ಮತ್ತದಕೆ ನೀರುಳ್ಳಿ ಹಸಿಯಲ್ಲಮಂ ಹಾಕಿ ಹಸಮಾಳ್ಪುದು || ೧೩ ||

ಕಡೆದ ಮಜ್ಜಿಗೆಯ ಸೋದಿಸಿಕೊಂಡು ಬಿಳಿಯುಪ್ಪು |
ಪುಡಿಯಿಕ್ಕಿ ನಾಲ್ಕೈದು ಬಗೆ ಮಾಡಿ ಮಾವಿನೆಳೆ |
ಮಿಡಿ ಮಾದಲದ ಕಾಯ ತೊಕ್ಕು ಕರಿಬೇವು ನೀರುಳ್ಳಿ ಹಸಿಯಲ್ಲಗಳನು ||
ಕಡಿದಿಕ್ಕಿ ಹುಳಿಯ ಹಿಂಡುವುದು ಮತ್ತುಳಿದುದಕೆ |
ಕಡುಗಂಪಿತಪ್ಪಕಾಯ್‌ ಸೊಪ್ಪುಗಳ ಬೇಱೆಬೇ |
ಱೆಡುತ ಶೈತ್ಯಂಗೊಳಿಸಿ ಭೋಜನಾಂತ್ಯದೊಳು ಮನಮೊಸೆದು ಪಾನಂಗೊಡುವುದು || ೧೪ ||

ತೆಳುಪಾದ ಮಜ್ಜಿಗೆಗೆಯಿನಿಸು ಸಾಸುವೆಯಿಕ್ಕಿ |
ಯೆಳೆಯಲ್ಲವುಳ್ಳಿ ಸಹಿತವೊಗ್ಗರಣೆಯ ಮಾಡಿ |
ಯಿಳುಹಿಯಾಱೆಸಿ ಕೇದಗೆಯ ಹೂವನಿಡಲೊಂದು ತೆಱ ಕೆಂಪುವಡೆದ ಮೊಸರ ||
ತಿಳಿಯ ಕಡೆದದಕೆ ಪರಿಮಳಿಸಲದುವೊಂದು ತೆಱ |
ಬಿಳಿಯ ಮಜ್ಜಿಗೆಯನೊಡೆದುದಕದೊಳು ಬಿಳಿಯುಪ್ಪು |
ಹುಳಿ ಶುಂಠಿ ನೀರುಳ್ಳಿ ಕರಿಬೇವು ತದುಕಿನ ಮಿಡಿಯನಿಕ್ಕಲೊಂದುತೆಱನು || ೧೫ ||

ಒಡೆದ ಹುಳಿಮಜ್ಜಿಗೆಯ ತಿಳಿಯುಮಂ ಚಿಲ್ಲಿ ಪಾ |
ವಡೆಯಲ್ಲಿ ಹಿಂಡಿ ಕಡುಗಟ್ಟಿಯಾದುದ ತೆಗೆದು |
ಮಡಕೆಯೊಳು ಹೊಯ್ದು ಬಿಸಿನೀರೆಱೆದು ಹಸನಾಗಿ ಕಡೆಗೋಲಿನಿಂದ ಕಡೆದು ||
ಮಡಗಲದು ಸಿಹಿಕಳಲು ಮಜ್ಜಿಗೆಯುಮಹುದು ಮಾ |
ಮಿಡಿ ಕಾರಗೆಣಸು ನೀರುಳ್ಳಿಯುಪ್ಪುಮನವಱೊ |
ಳೊಡೆವೆರಸಿಯತಿ ಶೈತ್ಯಮಂ ಮಾಡಿ ಕೇದಗೆಯ ಹೂವಿಂದ ಭಾವಿಸುವುದು || ೧೬ ||

ನಡುಗಂತಿಯಾದ ಹಸತಿಗೆಯ ಹಸುವಿನ ಮೊಸರು |
ಕಡೆದ ಹೊಸ ಬೆಣ್ಣೆಯಂ ಸೋದಿಸಿ ಒಲೆಯೊಳೆತ್ತಿ |
ಕಡುಗಿಚ್ಚನೇಳಿಸದೆ ಹವಣನಱೆದುಪ್ಪ ಹುಯಿದುಕ್ಕಿಸದೆ ಸಟ್ಟುಗವನು ||
ಹಿಡಿದು ಹದನಱೆದು ಕಿಱುನೊಱೆ ಹುಟ್ಟಿಯದಱದನಿ |
ಯಡಗುವನ್ನಬರ ಸಲೆ ಕಾಸಿ ಬಳಿಕಿಳುಹಿಕೊಂ |
ಡೊಡನೆ ಗುಳವಿಟ್ಟು ಮತ್ತೊಂದು ಹಾಡಕ್ಕೆಱೆದು ತುಪ್ಪಮಂ ಹಸಮಾಳ್ಪುದು || ೧೭ ||

ವರುಷದಿಂದೊಳಗಾದ ಹತ್ತಿಯಹರಳ ರಸವ |
ಬೆರಸಿ ಕಾಸಿದೊಡೆ ಹೆಪ್ಪಿಗೆ ಕಾಯ್ದ ಹಾಲಿನೊಳ |
ಗಿರದೆಱೆದು ಹೆಪ್ಪಿಕ್ಕಿಯಾಮೊಸರ ಕಡೆದು ಬೆಣ್ಣೆಯನು ತೆಗೆದಾಬೆಣ್ಣೆಯಂ ||
ಕರಗಿಸುತ ಸುಣ್ಣನೀರೆಳ್ಳೆಣ್ಣೆಯಂ ಕೂಡಿ |
ಬೆರಸಿ ನೀರಿಂಗುವಂದದಿ ಕಾಸಿಕೊಂಡಿಳುಹೆ |
ಹಿರಿದು ನಾಱುವ ತುಪ್ಪ ಸದ್ಯೋಘೃತದ ತೆಱದಿ ಹಸನಾಗಿ ಸವಿಯಪ್ಪುದು || ೧೮ ||

ನೀರಿನೊಳು ತುಪ್ಪವೆಱೆದದ ಮರಳುವೊಲು ಕಾಸಿ |
ನೀರಾಱಿಸಿಯೆ ಮೇಎಲ ಹೆತ್ತತುಪ್ಪವ ತೆಗೆದು |
ಚಾರಿಸಿದ ನಿಂಬೆಹುಳಿಯಣ್ಣೆ ಸುಣ್ಣವ ಕದಡಿ ಕಾಸಿ ಹಂಬಿನ ತುಱಚನಾ ||
ಬೇರು ಸಸಿಗುಪ್ಪೆ ಕೊತ್ತುಂಬರಿಯ ಬೀಜವೊಣ |
ಕಾರಗೆಣಸರಿಸಿನಂ ಹತ್ತಿಹರಳರಸಮಂ |
ಪೂರೈಸಿ ಕಾಸಿ ಕೆಮ್ಮಣ್ಣಳೆಯ ಗುಳುಗಬಿಡಲದಱ ನಾತಂ ಕೆಡುವುದು || ೧೯ ||

ತಿಳಿದುಪ್ಪದೊಳಗೆ ಯಾಲಕ್ಕಿಯನರೆದು ಕುಡಿಕೆ |
ಯೊಳಗೆ ತೊಡೆದಿರಿಸಿವೊಪ್ಪಲಜೇನ ಹೊಸಮೇಣ |
ದೊಳಗದಱನಾಲ್ಮಡಿಯ ಬೆರಕೆಯಿಲ್ಲದ ಕುಸುಬೆಯೆಣ್ಣೆಯಂ ಕಾಸಿಕೊಂಡು ||
ಇಳುಹಿಯಾಮಡಕೆಯಾಮೊಗದಿ ಪಾವಡೆಗಟ್ಟಿ |
ಬಳಿಕಿಳಿವನುಣ್ಣಿತ್ತು ಹೆಱೆದುಪ್ಪವಿರಿಸಲದು |
ಒಳಸೋರಿಯಾತುಪ್ಪ ಮೆಚ್ಚಿ ಭೋಜನವ ಮಾಳ್ಪರಿಗೆ ಪಾವನಮಾದುದು || ೨೦ ||

ಬೆಟ್ಟದಾವರೆಯ ಹೂವಂ ತಂದು ನೆಳಲೊಳೊಣ |
ಗಿಟ್ಟು ಚೂರ್ಣಂ ಮಾಡಿಕೊಂಡು ಬಳಿಕೈಮಾನ |
ಬಟ್ಟವಾಲೊಳಗದಂ ವರ್ಣ ಬರ್ಪಂದದೊಳು ಕದಡಿಯದನೊಲೆಯ ಮೇಲೆ ||
ಅಟ್ಟು ಬಳಿಕರೆಮಾನ ಕಾದತುಪ್ಪದೊಳಿಳಿಯ |
ಬಿಟ್ಟು ಮತ್ತೊಮ್ಮೆ ಕಾಸಿದೊಡೆ ಚೆನ್ನಾಗಿ ಹೆಱೆ |
ಗಟ್ಟಿ ಮತ್ತಾ ತುಪ್ಪವೊಂದುವರೆದಿನಮಿರ್ದು ಕಡುಹಸನ ಪಡೆದಿರ್ಪುದು || ೨೧ ||

ಹೊಸ ಹಾಲು ಸುಣ್ಣಸರಿ ನೀರು ಸರಿಯಂತದಂ |
ಬಿಸಿಮಾಡಿಯದಱನಿತು ಕಾದ ತುಪ್ಪವ ಬೆರಸಿ |
ವೊಸೆದದಂ ಕಾಸಿದೊಡಮಾ ತುಪ್ಪ ಚೆನ್ನಹುದು ಸುಣ್ಣ ನೀರಂ ಮೊಗೆಯನು ||
ಹೆಸರಕಟ್ಟರೆಮೊಗೆಯು ಕೂಡಿಕೊಂಡದಱ ಸರಿ |
ಮಿಸುಪ ತುಪ್ಪವ ಕೂಡಿ ಪಾಕವಂ ಮಾಡಿ ಸೊಗ |
ಯಿಸುವ ಪೇಯನ ಬಾಳೆಹಣ್ಣನಿನಿಸಂ ಕೂಡಿ ತುಪ್ಪವಂ ಹಸಗೆಯ್ವುದು || ೨೨ ||

ಬಿಳಿದಾಗಿ ತೊಳದೆಳ್ಳ ಕಪ್ಪನೆಲ್ಲವ ತೆಗೆದು |
ಹಳಚಿಕೆಯ ಮಾಡಿ ಗಾಣದೊಳಿಟ್ಟ ಕಣೆಯದೊಳು |
ಎಳನೀರು ಸಹಿತ ಹುಯಿದಾಡಿಸುತ್ತಾ ಎಣ್ಣೆಯಂ ತೆಗೆದು ಬೈಚಿಡುವುದು ||
ಉಳಿದ ಹಿಂಡಿಯ ದೊಡ್ಡ ಕಳಸಿಗೆಯೊಳಗೆ ಹೊಯ್ದು |
ತಿಳಿನೀರ ತುಂಬಲೆಱಠಿ ದದನು ಕೈಯೊಳು ಕಿವುಚಿ |
ಕೆಳಗೆ ಮತ್ತಾಹಿಟ್ಟ ನಿಲ್ವಂತೆ ತಿಳಿಯಿಕ್ಕಿಯಾಹಿಂಡಿಯೊಳಗಳೆಣ್ಣೆ || ೨೩ ||

ಬಳಿಕಮಾ ನೀರೊಳಗೆ ಹೋಹಂತದಂ ಬಸಿದು |
ಉಳಿದ ಹಿಟ್ಟವನು ನಾಲ್ಕೈದು ಸೂಳೀ ತೆಱದಿ |
ತೊಳೆದು ಬಸಿದೊಡೆ ಹಿಂಡಿಯೊಳಗೆನಿಸೆಣ್ಣೆಯಿರದದನು ಹುಳಿಯುಪ್ಪನಿಕ್ಕಿ ||
ಬಿಳಿಯ ಸಂಡಗೆಗಳಂ ಮಾಡೂದು ಕೆಲವಕ್ಕೆ |
ತೊಳಗುವರಿಸಿನದಲ್ಲದಾಸವಣಮಂ ತೀವಿ |
ನೆಳಲೊಳಗೆಯಿಕ್ಕಿ ಮಾಡೂದೀ ತೆಱದಿನೆಳ್ಳತೊಳೆದರೆಂದು ಹಸಮಾಳ್ಪುದು || ೨೪ ||

ರಸಾಯನಗಳು

ಉದಕದೊಳಗರ್ಧ ಸಕ್ಕರೆಯಿಕ್ಕಿ ಕರಗಿಸುತ |
ಹದನಱೆದು ದಾಳಿಂಬ ಮಾದಲದ ಹುಳಿಯಿಕ್ಕಿ |
ಸದಕಿದೇಲಕ್ಕಿ ಹಸಿಯಲ್ಲಮಂ ಹಾಕಿ ಬೆಂಡೆಯ ಬೇರಿನಿಂದ ತಿರುಹಿ ||
ಕದಡಿ ಪನಿನೀರ ಸೇವಂತಿಗೆಯ ಹೂವಿಕ್ಕಿ |
ಅದನು ಸೇವಂತಿಯಂ ಪೊರೆದ ಮಡಕೆಯೊಳಿರಿಸಿ |
ಚದುರರಂತದಕೆ ಸಲೆ ಸೊಗಯಿಪ ಹಿಮಾಂಬುಪಾನಕಮೆಂದು ಪೆಸರಿಡುವುದು || ೨೫ ||

ತಿಳಿನೀರಿಗರ್ಧ ಸಕ್ಕರೆಯಿಕ್ಕಿ ಸದಗುಟ್ಟಿ |
ದೆಳೆಯಲ್ಲ ಹಾಲು ಮಜ್ಜಿಗೆಯ ಹದನಱಿದಿಕ್ಕಿ |
ಬಳಿಕ ಹುಣಿಸೆಯಹಣ್ಣ ಸುಟ್ಟ ಹುಳಿಯಂ ಹಾಕಿ ಬೆಂಡೆಯೊಳನಾರಿನಿಂದೆ ||
ತಿಳಿಹಿ ಸೋದಿಸಿ ಪಾದರಿಯಹೂವಿನಿಂದೆ ನೆಱೆ |
ಪಳಗಿಸಿದ ಮಡಕೆಯೊಳಗೆಱೆದು ಮತ್ತಾ ಹೂವು |
ಗಳನು ಹೊರೆಯಿಟ್ಟದಕೆ ಪಾಟಳಿರಸಾಯನವೆಸರನೊಲವಿನಿಂ ಕೊಡುವುದು || ೨೬ ||

ಒಂದು ಪಡಿ ಸಕ್ಕರೆಯ ನಾಲ್ಕುಪಡಿ ನೀರನೆಱೆ |
ದೊಂದು ಸೆರೆ ನಿಂಬೆಹುಳಿವೊಂದು ಸೆರೆ ಸಿಹಿಮೊಸರ |
ನೊಂದಿಸಿದ ಬಳಿಕ ಪಳಗಿದ ಮಡಕೆಯೊಳಗಿಕ್ಕಿ ಒಲೆಗೆತ್ತಿ ಕಿಚ್ಚುನುರುಹಿ ||
ಒಂದು ಕುದಿಗೊಂದು ಪಡಿಯುಮನೆರಡು ಕುದಿಗೆ ಮ |
ತ್ತೊಂದು ಪಡಿಯಂ ಮೂಱನೆಯ ಕಡೆಯ ಕುದಿಗೆ ಮ |
ಮತ್ತೊಂದು ಪಡಿಯಂ ತೆಗೆವುದು ಮಿಕ್ಕುದತಿ ಮಂದಮಾಗಿ ರಜಿಸುತಿರ್ಪುದು || ೨೭ ||

ಮತ್ತಮಾ ಮಂದನೆಯ ರಸಕಮೃತಸಾರವೆಸ |
ರಿತ್ತಿದಂ ಕಜ್ಜಾಯಗಳ ಕೆಲರಿಗಿಕ್ಕೂದು |
ಮತ್ತೆ ಮೊದಲೊಳಗೆ ಪೇಳ್ದಾ ಮೂಱುತೆಱ ರಸಾಯನಗಳಂ ಸಣ್ಣಗೊಳಿಸಿ ||
ಹತ್ತೆಂಟು ಮಡಕೆಯೊಳು ತೆಗೆತೆಗೆದು ಬೇಱವಕೆ |
ಉತ್ತಮದ ಹಲವು ಹೂವಿನ ಪರಿಮಳವನು ಪೊರೆ |
ಯೊತ್ತಿ ನಾನಾ ತೆಱದ ಹಣ್ಣಿಕ್ಕಿಯವಱವಱ ಹೆಸರ ಪಾನಕವೆಂಬುದು || ೨೮ ||

ಗಱುಗುಳ್ಳ ಬಿಳಿಯು ಹೊಸಬೆಲ್ಲಮಂ ಮಡಕೆಯೊಳು |
ಕರಗಿಸಿಯೆರಡು ಭಾಗೆಯಂ ಮಾಡಿಯೊಂದಕ್ಕೆ |
ಹುರಿದ ಹುಣಿಸೆಯನೊಂದಕಚ್ಚ ನಿಂಬೆಯ ಹುಳಿಯನಿಕ್ಕಿ ತನಿವಾಲೆಳೆಯನು ||
ಬೆರಸಿ ಬೆಂಡೆಯನಿಕ್ಕಿ ಪಾವಡೆಯ ಜೋಲಿನೊಳ |
ಗರದಿಕ್ಕಿ ತಿಳಿಹಿ ಪಳಗಿದ ಮಡಕೆಯೊಳಗೆಱೆದು |
ಪರಿಮಳವನಿಕ್ಕಿ ಶೈತ್ಯಂಗೊಳಿಸಿ ಗುಡಪಾಕವೆಂದು ಹೆಸರಂ ಕರೆವುದು || ೨೯ ||

ರಸದಾಳಿ ಹೈತಿಗೆ ಬಿಳಿಯ ಕರಿಯ ಮರಗಬ್ಬಿ |
ನೊಸರ್ವ ರಸಮಂ ಹಿಳಿದು ಬೇಱೆ ಬೇಱವನಿಕ್ಕಿ |
ಹಸನಾಗಿ ಸೋದಿಸಿದ ಬಳಿಕ ಶೈತ್ಯಂಗೊಳಿಸಿಯಚ್ಚನಿಂಬೆಯ ಹಣ್ಣಿನಾ ||
ನಸು ಹುಳಿಯುಮಂ ಹಿಂಡಿ ಪಲತೆಱದ ಪರಿಮಳವ |
ಹಸನಾಗಿ ಪೊರೆಯೊತ್ತಿ ನಾನಾ ತೆಱದ ಹಣ್ಣ |
ನೊಸೆದಿಕ್ಕಿಯಿಕ್ಷುಸಾರರಸಾಯನಗಳೆಂದು ಮುದದಿ ಹೆಸರಂ ಕರೆವುದು || ೩೦ ||

ಬಿಸಿಲಹೊಡೆಯಿಂದ ಕಂದದೆ ದೋಸೆವದದಿ ಸೊಗ |
ಯಿಸುವ ಸಕ್ಕರೆಗಳೆಳನೀರ ಕುಯಿದಿಳುಪಿ ತ |
ಸಣ್ಣಸವಾದ ತಾಣದೊಳಗಿರಿಸಿ ಮಱುದಿನ ಮೊಗಳ ಕಳೆದು ನಿಂಬೆಯ ಹಣ್ಣಿನಾ ||
ಹೊಸ ಹುಳಿಯ ಹಿಳಿದುಕೊಂಬುದು ಕೆಲವು ದೊನ್ನೆಯೊಳು |
ಬಸಿದು ಸಿರಿಪಚ್ಚೆ ಹೊಱತಾದ ಪರಿಮಳವಿಕ್ಕಿ |
ಹಸನಾಗಿ ಮಾಡಿದುದು ನಾಳಿಕೇರರಸಾಯನಗಳೆಂಬ ಹೆಸರಾದವು || ೩೧ ||

ಬಾಳೆ ದೀಪದ್ರಾಕ್ಷೆಯನೇಱೆಲಿಮ್ಮಾವು |
ದಾಳಿಂಬ ಬೇಲ ಖರ್ಜೂರ ಸಿಹಿವಲಸುಕಿ |
ತ್ತೀಳೆಗಳ ಪಕ್ವಫಲಮುಮನವುಕಿದಾ ಮುಖದಿ ಹಿಳಿದುಕೊಂಡವಱ ಸವಿಯಾ ||
ಮೇಳಗಳನಱೆದು ಸಕ್ಕರೆಯಿಕ್ಕಿ ಬಳಿಕ ಸುಲಿ |
ಹಾಳೆಗಳ ದೊನ್ನೆಯೊಳಗಿಟ್ಟಱವಱ ಹೆಸರ |
ಹೇಳಿದ ರಸಾಯನಗಳೆಂದು ಕರೆದತಿಚತುರಜನಕೆ ಪಾನಂಗೊಡುವುದು || ೩೨ ||

ಇನಿವಣ್ಗಳಾವಾವವುಂಟವಱವಱ ರಸಮ |
ನನುವಾಗಿ ಹಿಳಿದು ಹಂಜಿಯ ಅರಲೆಯೊಳಗೂಡಿ |
ಯಿನಿಸು ಮುಗ್ಗದ ತೆಱದಿ ನೆಳಲೊಳೊಣಗಿಸಿ ಬೇಕುಬೇಕಾದ ಕಾಲಂಗಳಾ ||
ದಿನದಲ್ಲಿ ತೆಗೆದು ನೀರೊಳು ನನಹಿ ಹಿಳಿದವಕೆ |
ಸೊನೆಗಳೆದ ನಿಂಬೆಹುಳಿ ಕೆಲವಕ್ಕೆ ಸಕ್ಕರೆಯ |
ನನುವಱೆದು ಕೂಡಿ ಮತ್ತವಱವಱ ಹೆಸರ ಪಾನಕವೆಂದು ಹೆಸರಿಡುವುದು || ೩೩ ||

ಎಳೆಯ ಬಾಳೆಯ ಕಾಯಿ ಚಿತ್ರ ಮೂಲಂ ಗಱೆಕೆ |
ಕಳಿಲೆವಿದಿರಿನ ನಾರು ಚಿಂಚಕುಸುಮಂ ಮೆಣಸು |
ಬೆಳುಗಾರದರಳುತ್ತರಣೆಯ ಪೊಸ ಚೂರ್ಣ ಜಾದಿಯ ಸೊಪ್ಪು ಮರೆ ನೇಱಿಲ ||
ತಳಿರು ಮತ್ತಿವರ ತೊಕ್ಕವಱೊಳಗೆಯೊಂದೊಂದ |
ಕಳಿತ ಬಾಳೆಯ ಹಣ್ಣಿನೊಳು ಕಲಸಿ ಬಲು ಬಿಸಿಲಿ |
ನೊಸಗಿರಿಸೆ ತಾಂ ದ್ರವಿಸಿ ರಸಮೊಸರೆ ಪಾನಕಕ್ಕತಿ ಸೊಗಸುವಡೆದಿರ್ಪುದು || ೩೪ ||

ಅರನೇಱೆಲೆಳೆಯ ಕೊನರೆಳ್ಳೆಣ್ಣೆ ಹೇರೀಳೆ |
ಯರಲುತ್ತರಣೆಯ ಕಾಯ್ಗೊನೆ ಸುಟ್ಟ ಬೆಳುಗಾರ |
ದರಳು ಕರ್ಪುರ ಮೆಣಸೆವಕ್ಷಾರ ಸೈಂಧವಮ ಕಳಿತ ಹಲಸಿನ ತೊಳೆಯೊಳು ||
ಬೆರಸಿ ಪಾವಡೆಯ ಜೋಲಿಯೆ ಕಟ್ಟಿ ನಡುವಿಸಿಲೊ |
ಳಿರಿಸಿ ಹಸನಾಗಿ ವೊಸರಿದ ಮಾಡಿದುದು ತಾ ರಾಜಯೋಗ್ಯವಹುದು || ೩೫ ||

ಬೆಳುಗಾರ ಸೈಂಧವ ಯವಕ್ಷಾರ ಮುತ್ತುಗದ |
ಫಲಮುಮಂ ಮೆಣಸು ಕರ್ಪೂರ ಕನಕದಬೀಜ |
ಎಳೆಯ ಜಾಜಿಯ ಸೊಪ್ಪುಗಳನರೆದುಕೊಂಡು ನೇಱಲು ವಾಳೆ ಮಾವು ಹಲಸು ||
ಬೆಳಲ ದಾಡಿಮವಣ್ಗಳಾದಿಯಾದಾ ಪಕ್ವ |
ಫಲದೊಳಗೆ ಕಲಸಿ ಬಿಸಿಲೊಳಗಿಕ್ಕಿ ರಸದೆಗೆದು |
ಬಳಿಕ ದೊನ್ನಯೊಳಿಕ್ಕಿ ಪರಿಮಳಂಗಳನಿಕ್ಕಿ ಹಿರಿದಾಗಿ ಹಸಮಾಳ್ಪುದು || ೩೬ ||

ಹದನಾಗಿ ರಸವಡೆದ ನಿಂಬೆಹಣ್ಣಿನ ಹುಳಿಯ |
ನದಱಸಿಪ್ಪೆಯ ಸುಟ್ಟ ಬೂದಿಯಾಗಲಿ ಸುಣ್ಣ |
ದುದಕವಾಗಲಿ ಕೂಡಿ ಚೆನ್ನಾಗಿ ಕಾಸಿದೊಡೆ ಹುಳಿ ಹೋಗಿ ಸಪ್ಪೆಯಹುದು ||
ಅದಕೆ ಸಕ್ಕರೆಯಿಕ್ಕಿ ಯಾಲಕ್ಕಿ ಹುಡಿಯುಮಂ |
ಪುದುಗಿಸುವುದುತ್ತರಣೆಯಂ ಸುಟ್ಟ ಬೂದಿಯಂ |
ಮಿದಿಡಿಕೊಳುತಂ ಲೋಯಿಸರದ ಹಳುಕಿನ ರಸವ ತೆಗೆದು ಸಕ್ಕರೆಯಿಡುವುದು || ೩೭ ||

ಎಳೆನೀರೊಳಿನಿಸು ಸಕ್ಕರೆಯಿಕ್ಕಿ ನೇಱಿಲೆಳೆ |
ದಳಿರುಮಂ ಕುಡಿಯುಮಂ ಚಿತ್ತಳಿಸಿ ಹಾಕಿ ಪರಿ |
ಮಳ ಬರಲು ಕರಿಯ ಹತ್ತಿಯ ಹೂವನರೆದಿಕ್ಕಿ ನೆಲದೊಳಗೆ ಸೊನೆಯ ನುದ್ದಿ ||
ಕಳೆದು ಬಿಸಿನೀರೊಳಗೆ ತೊಳೆದ ನಿಂಬೆಯ ಹಣ್ಣ |
ಹುಳಿಯನೊಂದೆರಡು ಹನಿಯಂ ವರ್ಣ ಬರ್ಪಂತೆ |
ಹಿಳಿದು ಸೋದಿಸಿಯದನಕಾಲನೇಱಿಲಹಣ್ಣ ರಸಮೆಂದು ಹೆಸರಿಡುವುದು || ೩೮ ||

ಎಳೆಯ ಮಾವಿನಕಾಯ ಸೊನೆಯ ಹಂಜಿಯ ಅರಳೆ |
ಯೊಳಗೂಡಿ ಮತ್ತೆ ಕೆಲಕಾಯ ಸಿಲಬೆಯ ತೆಱದಿ |
ತೆಳುಪಾಗಿ ಕೆತ್ತಿ ನೆಳಲೊಳಗೊಣಗಲಿಕ್ಕಿ ಚೂರ್ಣಂ ಮಾಡಿ ಮುಗ್ಗದಂತೆ ||
ಲಳಿಗೆಯೊಳಗಿಕ್ಕಿ ಹದಿನೈದು ದಿವಸಕ್ಕೊಮ್ಮೆ |
ಬಿಳಿಯ ಪಾವಡೆಯೊಳೊಣಗಿಸಿ ತನಗೆ ಬೇಕಾದ |
ಬಳಿಕ ಮಡಕೆಯೊಳು ನೀರೆಱೆದು ತೆಂಗಿನಕಾಯನರೆದಿಕ್ಕಿಯಪ್ಪ ಹಾಕಿ || ೩೯ ||

ಎಳೆಯ ಕರಿಬೇವು ಕೊತ್ತುಂಬರಿಯ ಹಾಕಿ ಹ |
ಪ್ಪಳಮಿಕ್ಕಿ ಹುರಿದ ಸೊಜ್ಜಿಗೆಯುಮಂ ಬೆರಸಿ ಕಂ |
ಗೊಳಿಸಿ ಶೈತ್ಯಂ ಮಾಡಿಕೊಂಡು ಸೋದಿಸಿ ಹಂಜಿಯೊಳಗೆಯೂಡಿದ ಸೊನೆಯನು ||
ಇಳಿಯ ಬಿಟ್ಟಾ ಕಾಯ ಚೂರ್ಣಮಂ ಹಾಕಿ ಕಂ |
ಗೊಳಿಸುವಂದದಿ ಸೋದಣಿಯ ಮಾಡಿ ಮಾವಿನೆಳೆ |
ದಳಿರ ಮುಱಿದಿಕ್ಕಿ ಕೊಡಲು ತಾನಕಾಲಮಾವಿನಕಾಯರಸಮಾದುದು || ೪೦ ||

ಹನಿ ಹೊತ್ತಿನೊಳು ತಂದ ನೀರ ಕಳಸಿಗೆಯೊಳಾ |
ದಿನದ ಹಗಲಿರುಳು ಮಾಳಿಗೆಯ ಮಚ್ಚಿನೊಳು ಮಱು |
ದಿನದುದಯದಲ್ಲಿರಿಸಿ ಜಾಳಂಧರದ ಮೇಲುಮಾಳಿಗೆಯೊಳಾಲಿಗೊಳಿಸಿ ||
ತನಿಗಂಪು ಹೂವುಗಳ ಪೊರೆಯೊತ್ತಿ ತಂಗರಗ |
ಕನುವಾಗಿ ತುಂಬು ತೂಗಂ ಹಾಕಿ ಬಿಜ್ಜಣಿಗೆ |
ಯನಿಲನಿಂ ಬೀಸಿ ಮಾಡಿದುದು ಹಂಸೋದಕಂ ಮತ್ತದುವೆ ರಾಜಯೋಗ್ಯಂ || ೪೧ ||

ಘಳಿಗೆವಟ್ಟಲ ತೆಱದಿ ಚಿದ್ರಿಸದ ಮಡಕೆಯೊಳ |
ಗೆಳೆವಗಲಿನೊಳು ತಂದ ನೀರೀಂಟಿದಂ ನೆಱೆದು |
ಕೆಳಗೊಂದು ಕಳಸಿಗೆಯನಿರಿಸಿ ಮಚ್ಚಿನ ಮೇಲೆ ದಿವರಾತ್ರೆ ಮಡಗಿಕೊಂಡು ||
ಬಳಿಕುದಯದೊಳು ತೆಗೆದು ಹಂಸೋದಕದ ತೆಱದಿ |
ಹಳಹಳಚನೆಸೆವಂತು ಮಾಡಿ ನವಪರಿಮಳಂ |
ಗಳನಿಕ್ಕಲಂತದುವೆ ಧಾರಾಂಬುವೆಂದೆನಿಸಿ ಕಡುಸೊಗಸುದಳೆದಿರ್ಪುದು || ೪೨ ||

ಹಗಳಿನೊಳು ತಂದ ಪೊಸನೀರನಾಕ್ಷಣದೊಳಗೆ |
ಮಿಗೆ ಸೋದನೆಯ ಮಾಡಿ ತಣ್ಗರಗದೊಳು ತುಂಬಿ |
ಮೊಗಳೊಳಱುವೆಯ ತಿತ್ತಿಯಿಕ್ಕಿ ಮತ್ತೊಂದು ಭಾಗೆಯ ನೀರಿನಲ್ಲಿಯದನು ||
ಅಗುಳುವಂದದೊಳೊಂದೆರಡು ಘಳಿಗೆಯಿರಿಸಿಯದ |
ತೆಗೆದು ಕರ್ಪೂರ ಕಸ್ತೂರಿ ಮೊದಲಾದ ಮಗ |
ಮಗಿಪ ಪರಿಮಳವನಿಕ್ಕಲದು ನವ್ಯೋದಕಂ ಬಾಯಱಿಕೆಯಂ ಕೆಡಿಪುದು || ೪೩ ||

ಮಾವಿನ ಸೊನೆಯ ಹದದ ಕಾಯ್ಗಳಂ ಕುಯಿದಿಳಿಪಿ |
ದಾವುದಕದಲ್ಲಿ ಮಾದಲ ನೇಱಿಲಿಳಿಹಿ ಕರಿ |
ಬೇವು ಮೊದಲಾದ ಕಂಪುಳ್ಳ ಮರಗಳ ತಳಿರು ಕಾಯಿಗ ಕೊಯಿದಿಳಿಪಿದ ||
ಆವುದಕದಲ್ಲಿ ಮತ್ತವಱವಱ ರಸಗಂಧ |
ದಾ ವಿವರವಱಿದು ಹುಳಿ ಶುಂಠಿ ನೀರುಳ್ಳಿಯಂ |
ತೀವಿಯವಱವಱ ಹೆಸರಂ ಹೇಳಿ ಬೇಸಗೆಯೊಳದನು ಪಾನಂಗೊಡುವುದು || ೪೪ ||

ತಿಳಿಯಕ್ಕಿಗಚ್ಚನನುವಾಗಿ ಸೋದಿಸಿಕೊಂಡು |
ಹುಳಿಶುಂಠಿಯುಳ್ಳಿ ಕರಿಬೇವು ಕೊತ್ತುಂಬರಿಯ |
ನಿಳಿಪಿ ಬಿಳಿಯುಪ್ಪಿಕ್ಕಿ ಮಾಡುವುದು ಸೊಜ್ಜಿಗೆಯ ತನಿವಾಲನೀ ತೇಱದೊಳು ||
ಕಳಿಯನೀ ತೆಱದೊಳೊಡಯಿಸಿಕೊಂಡ ಮಜ್ಜಿಗೆಯ |
ತಿಳಿಯನೀ ತೆಱದೊಳತಿರುಚಯಪ್ಪವೊಲು ಮಾಡಿ |
ಪಳಗಿಸಿದ ಮಡಕೆಯೊಳು ತುಂಬಿ ಬೇಸಗೆಯನೀಗುವುದು ಭೋಗನಿಕಾಯರು || ೪೫ ||

ಅಳೆಯೊಡೆದ ತಿಳಿ ಹಾಲನೊಡೆದ ತಿಳಿ ಸಿಪ್ಪೆಯಂ |
ಕಳೆಯದೆ ಒಡೆದ ವಿದಳವಾವಾವ ಸೊಪ್ಪು ಕಾ |
ಯ್ಗಳನುಕ್ಕರಿಸಿದೆಸಱುಮಂ ಬಸಿದು ಬೇಱೆ ಬೇಱೊಲೆಗೆತ್ತಿ ಸವಿಯನಱಿದು ||
ಬಳಿಕ ಮಜ್ಜಿಗೆಯ ಹುಳಿಯಚ್ಚನಿಂಬೆಯ ಹಣ್ಣ |
ಹುಳಿಯಿಕ್ಕಿ ಸೊಪ್ಪಿಸಿದ ಮೆಣಸುಪ್ಪುನೀರುಳ್ಳಿ |
ಯೆಳೆಯಲ್ಲಮಿಕ್ಕಿ ಚೆನ್ನಾಗಿ ಕಾಯಿಸೆ ಮಾವೆರಸವೆಂಬ ಪೆಸರ್ವಡೆದುದು || ೪೬ ||

ಹದಹುಳಿಯ ಮಜ್ಜಿಗೆಯೊಳರೆದು ಸಂಭಾರಮಂ |
ಕದಡಿ ಸೊಜ್ಜಿಗೆಯಾಗಲಕ್ಕಿಯಾಗಲಿಯಿಕ್ಕಿ |
ಯದ ವಗ್ಗರಿಸಿದ ಮಡಕೆಯೊಳೆಱಿದು ಚೆನ್ನಾಗಿ ಒಡೆಯದಂದದೊಳು ಕಾಸಿ ||
ಅದನು ನಾಲ್ಕೈದು ಬಗೆ ಮಾಡಿ ಮಾದಲ ಮಾವು |
ತದಿಕಿನೆಳೆಗಾಯಿಕ್ಕಿ ಒಗ್ಗರಿಸಿಯರ್ಧಮಂ |
ಬಿದಿರ ನಳಿಗೆಯೊಳಿಕ್ಕಿಯರ್ಧಮಂ ನೇತ್ರದೊಳು ಕಟ್ಟಿ ಶೈತ್ಯಂ ಮಾಳ್ಪುದು || ೪೭ ||

ಒಮ್ಮಾನ ಮಜ್ಜಿಗೆಯ ಮರೆಗೆ ನೆಳಲಂ ತೆಗೆದು |
ಒಮ್ಮಾನ ತಿಳಿಯಂಬಿಲವನಿಕ್ಕಿ ಮತ್ತಲ್ಲಿ |
ಒಮ್ಮಾನ ಶೋಧಿಸಿದ ನೀರಿಟ್ಟು ಸುಗಮವಹ ಸಕಲ ಸಂಭಾರಂಗಳ ||
ಅಮ್ಮಿಕಲ್ಲೊಳಗರೆದು ನುಱುಗುವಂದದಿ ಕಾಸಿ |
ಕಮ್ಮನೆಯ ತುಪ್ಪದೊಳು ಪೊಡ್ಡಣಿಗೆಯಂ ಕೊಟ್ಟು |
ಚಿಮ್ಮಿಯಂದೆಂಬ ಹೆಸರಂ ಕೊಟ್ಟು ನವಪರಿಮಳವನು ಭಾವನೆಗೊಡುವುದು || ೪೮ ||

ಒಂದು ಮೊಗೆಯಕ್ಕಿಗಚ್ಚೊಂದು ಮೊಗೆ ಮಜ್ಜಿಗೆಯ |
ನೊಂದಾಗಿ ಬೆರಸಿಯೊಲೆಗೆತ್ತಿ ಒಡೆಯಿಸಿಕೊಂಡು |
ಬಂದ ತಿಳಿಯಲ್ಲಿ ಸಂಭಾರಮಂ ಕದಡಿ ಸರಿಯಪ್ಪಂತೆ ಕಾಸಿಕೊಂಡು ||
ನಿಂದುದಂ ಪಲಭಾಗ ಮಾಡಿ ಪೊಡ್ಡಣಿಗೆಗೊ |
ಟ್ಟೊಂದೊಂದಕೊಂದೊಂದು ತೆಱದ ಸವಿಗಾಯ್ಗಳಂ |
ತಂದಿಕ್ಕಿ ವಗ್ಗರಿಸಿ ನಳೀಗೆ ನೇತ್ರದೊಳಿಕ್ಕಿ ಕೆಲವನಾರಿಸಿಕೊಂಬುದು || ೪೯ ||

ಇದು ಹರುಷದಿಂದ ಲಾಲಿಸಿ ಕೇಳ್ವೆನೆಂದೆಂಬ |
ಸುದತಿಯರ ಕಿವಿಗೆ ಪೊಸಮಾಣಿಕದ ಮಿಂಚೋಲೆ |
ಇದು ಕಲಿವೆನೆಂದೋದುವಬಲೆಯರ ಬಾಯ್ದೆರೆಗೆ ನವಸುಧಾರಸದ ಪಿಂಡ |
ಇದು ಪಾಕಮಂ ಮಾಳ್ಪೆನೆಂದುಜ್ಜುಗಂ ಮಾಳ್ಪ |
ಚದುರೆಯರ ಕೈಗೆ ನವರತ್ನಮುದ್ರಿಕೆಯೆನಿಸಿ |
ದಿದಱೊಳಗೆ ಕಡಿದಿರಿದು ಸೊಗಯಿಸುವ ನವಪಾನಕಾಧ್ಯಾಯಮಿದು ಸಮಾಪ್ತಂ || ೫೦ ||