ಸೂಚನೆ ||
ಹಸ್ತಿನಾವತಿಯಿಂ ತಳರ್ದು ಭದ್ರಾವತಿಯ |
ವಿಸ್ತಾರಮಂ ತೋರಿದಂ ಸವಿಪದ ಗಿರಿಯ |
ಮಸ್ತಕದೊಳಿರ್ದನಿಲಸಂಭವಂ ಕರ್ಣತನಯಂಗೆ ಸಂಪ್ರೀತಿಯಿಂದೆ ||

ಭೂವಧೂರಮಣ ಕೇಳೈ ಮುಂದೆ ನಡೆವ ಸುಕ |
ಥಾವಿಸ್ತರವನಿನ್ನು ಪಯಣಗತಿಯಿಂದೆ ಭ |
ದ್ರಾವತೀದೇಶಮಂ ಪೊಕ್ಕರನಿಲಜ ವೃಷಧ್ವಜ ಘಟೋತ್ಕಚತನುಜರು ||
ಅವಗಂ ನಿರ್ಮಲಶ್ರೀಕರಗ್ರಾಹಿ ಮ |
ತ್ತಾವಗಂ ಪ್ರಣುತವನಮಾಲಾ ಸುಶೋಭಿ ತಾ |
ನಾವಗಂ ಮನ್ಮಥೋದ್ಭವಕಾರಿ ಹರಿವೊಲಾನೆಂಬ ಪೆಂಪಿಂದೆಸೆದುದು ||೧||

ಎಲ್ಲಿಯುಂ ಪರಿವ ಪೆರ್ದೊರೆಯಿಂದೆ ಕೆರೆಯಿಂದೆ |
ಯೆಲ್ಲಿಯುಂ ಕುಸುಮದಾಗರದಿಂದೆ ಸರದಿಂದೆ |
ಯೆಲ್ಲಿಯುಂ ರತ್ನಮಯದಿಳೆಯಿಂದೆ ಬೆಳೆಯಿಂದೆ ಮಣಿಕೃತಕ ಶೈಲದಿಂದೆ ||
ಎಲ್ಲಿಯುಂ ಸುಳಿವ ಗೋವ್ರಜದಿಂದೆ ಗಜದಿಂದೆ |
ಯೆಲ್ಲಿಯುಂ ಕತ್ತುರಿಯ ಮೃಗದಿಂದೆ ಖಗದಿಂದೆ |
ಯೆಲ್ಲಿಯುಂ ವಿದಚಿತ ಭವನದಿಂದೆ ಜನದಿಂದೆಯಾನಾಡ ಸಿರಿ ಮೆರೆದುದು ||೨||

ಅಂಚೆವಿಂಡಾಡದಕೊಳಂ ಕೊಳಗಳೊಳು ಸಲೆ ಪ |
ಳಂಚಿ ಸುಳಿಯದ ಗಾಳಿ ಗಾಳಿಗಳ ಬಳಿವಿಡಿದು |
ಸಂಚರಿಸದೆಳದುಂಬಿ ತುಂಬಿಗಳ ಬಿಡಯಕಿಂಪೆನಿಸಚ್ಚಲರಲರ್ಗಳ ||
ಗೊಂಚಲೆರಗಿಸದ ಲತೆ ಲತೆಗಳಡರದತಳ್ಕಿ |
ನಿಂ ಚಿಗುರದಿಮ್ಮಾವು ಮಾವುಗಳ ಚೆಂದಳಿರ್ |
ಮಿಂಚದ ಬನಂ ಬನಗಳಿಂ ಬಳಸದೂರುರ್ಗಳಿಲ್ಲದೆಡೆಯಿಲ್ಲಿಳೆಯೊಳು ||೩||

ಬೆಳೆಯದ ಪೊಲಂಗಳಂ ಬೆಳ್ದಾವರೆಗಳಲ |
ರ್ದಳೆಯದಕೊಳಂಗಳಂ ಮಣಿಶಿಲಾ ರೋಚಿಯಿಂ |
ಪೊಳೆಯದಚಲಂಗಳಂ ತರುಣಾರುಣ ಪ್ರಭಾಲಕ್ಷ್ಮಿಯಂ ನಗುವಂತಿರೆ ||
ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ |
ಕಳೆಯದ ಸೊನಂಗಳಂ ಮನಕನವರತಸುಖಂ |
ಮೊಳೆಯದ ಜನಂಗಳಂ ಮುಳಿದರಸಲಾಂ ಕಾಣೆನಾಮಹೀಮಂಡಲದೊಳು ||೪||

ಉರ್ವರೆಯ ಶಾಲಿಗಳ ಪಾಲ್ದೆನೆಗೆ ನಭದಿಂ ಮು |
ಸುರ್ವ ಗಿಳಿಏಂಡುಗಳನುಲಿಯಿಂದೆ ಪಾಮರಿಯ |
ರೆರ್ವಿಸಿದೊಡಿರದೆ ಬಾಂದಳಕೆ ಮುಗುಳೇಳ್ವವೊಲ್ ಕಲಮಂಗಳಿಕ್ಕೆದೊಳು ||
ಕೊರ್ವಿ ನಳನಳಿಸಿ ನೀಲ್ದುರೆ ಬೆಳೆದ ರಸದಾಳಿ.
ಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ |
ಪರ್ವುತಿಹುದಾನಾಡೊಳೆಲ್ಲಯುಂ ದಾರಿಗರ ಕಣ್ಗೆ ಕೌತುಕಮಾಗಲು ||೫||

ತಂಬೆಲರ ಸೊಗಸಿಂಗೆ ತಲೆದೂಗುವಂತೆ ತಳೆ |
ದಂಬುಜದ ಪರಿಮಳಕ್ಕೆ ಶಿರವನೊಲೆವಂತೆ ಮರಿ |
ದುಂಬಿಗಳ ಗಾನಕ್ಕೆ ಕೊರಲನೊಲೆದಾಡುವಂತೊಯ್ಯೊಯ್ಯನೊಲೆದಾಡುವ ||
ಪೊಂಬಣ್ಣಮೆಸೆವ ಕಳಮಶ್ರೀಯ ಪರಿಚರ‍್ಯೆ |
ಯಂ ಬಿಡದೆ ಮಾಳ್ಪ ಕೆಳದಿಯರೆನಲ್ ಕೀರ ನಿಕು |
ರುಂಬಮಂ ಸೋವಲೆಂದಲ್ಲಿರ್ದ ಪಾಮರಿಯರಧ್ವಗರ ನಡೆಗೆಡಿಪರು ||೬||

ಪಾಲ್ದೆನೆಯೊಳಂಡಿಸಿದ ಗಿಳಿವಿಂಡಬನಬಲೆಯರ್ |
ಕಾಲ್ದೆಗೆಯಲಾರ್ದು ಕೈಪರೆಗುಟ್ಟು ವಂಡಲೆಗೆ |
ತೇಲ್ದು ಮೇಲುದು ಜಾರೆ ತೋರ್ಪ ಪೊಂಗೊಡಮೊಲೆಯನಂಬುಜದ ಮುಕುಳಮೆಂದು ||
ಸೋಲ್ದೆರಗಿ ತಿರುತಿರುಗಿ ಬರುತಿರ್ಪ ತುಂಬಿಗಳ |
ಸಾಲ್ದಿವಿಜಗಿರಿಯ ಬಳಸುವ ತಮೋರಾಜಿಯಂ |
ಪೋಲ್ದು ಸಲೆ ಕಂಗೊಳಿಸುತಿರ್ಪುದಾ ಭೂತಲದೊಳೇನೆಂಬೆನಚ್ಚರಿಯನು ||೭||

ಶಾಲಿಗಳ ಕೈಗಂಪ ಪೊಲಗಾವ ಪಾಮರಿಯ |
ರೊಳಿಗಳ ಮೈಗಂಪ ಸತತ ಕುಸುಮಿತ ತರು ಲ|
ತಾಳಿಗಳ ಪೂಗಂಪ ತಿಳಿಗೊಳಂಗಳೊಳಲರ್ದ ಪೊಚ್ಚಪೊಂದಾವರೆಗಳ ||
ಧೂಳಿಗಳ ತನಿಗಂಪುನುಂಡು ಮಿಂಡೆದ್ದ ಭೃಂ |
ಗಾಳಿಗಳ ಬಳಗಂ ಪರಿಯಲೊಡನೆ ಸುಳಿವ ತಂ |
ಗಾಳಿಗಳ ಕಡುಗಂಪ ಸೇವಿಸುತೆ ಪಥಿಕರಾಸರ್ಗಳೆವರಾನಾಡೊಳು ||೮||

ಬಟ್ಟೆಬಟ್ಟೆಯೊಳೆಲ್ಲಿಯುಂ ಕುಳಿರ್ವೆರಸಿದರ |
ವಟ್ಟಿಗೆಯ ಸದನಂಗಳಿಂದೆ ಬಾಗಿಲ್ಗೆ ಪೊರ |
ಮಟ್ಟು ಕಲಶಮನೆತ್ತಿ ನೀರೆರೆವ ಕಾಮಿನಿಯರುಬಾಹುಮೂಲದೆಡೆಗೆ ||
ದಿಟ್ಟಿ ಪರಿಪರಿದು ಮೊಗಮೊರ್ಗುಡಿಸೆ ಸರಿಸಕಳ |
ವಟ್ಟಜಲಧಾರೆ ಪೊರಸೂಸೆ ಬಯಲಿಗೆ ಬಾಯ |
ಬಿಟ್ಟು ನಗಿಸುವರಲ್ಲಿ ತೃಷೆಯಿಂದ ಬಂದ ಪಥಿಕರ್ಕಳಾ ಬಾಲೆಯರನು ||೯||

ಸ್ವಾದು ಸ್ವಚ್ಛತೆ ಶೈತ್ಯಮಾಮೋದಮೊಂದಿ ಸೊಗ |
ಸಾದ ಲಲಿತಾಂಗಿಯರ ಕರತಳದ ವಿಮಲ ಕಲ |
ಶೋದಕವನನೊಲಿದೀಂಟುತಿರ್ದೊಡಂ ಮನದಣಿಯದಧ್ವಗರ‍್ಗಾ ಹೆಂಗಳ ||
ಮಾದಳಿರ ಪಳಿವ ಚೆಂದುಟಿಯ ಸವಿಗೆಳನಗೆಯೊ |
ಳಾದರಿಪ ಕಡೆಗನ್ಣ ನಿಚ್ಚಳಕೆ ಪೀವರಪ |
ಯೋಧರದ್ವಯವನಪ್ಪುವ ತಂಪಿಗೆಸೆವ ಮೈಗಂಪಿಂಗೆ ಬಯಸಿ ಬಯಸಿ |೧೦|

ತಳಿರೆಡೆಯೊಳಿರ್ದ ಮಾವಿನ ತೋರ ತನಿವಣ್ಣ |
ಗಿಳಿ ಕರ್ದುಂಕಿದೊಡೆ ರಸಮೊಸರಿ ಸೋರ್ವಂತೆ ಹೆಂ |
ಗಳ ಕರತಳದ ಪೊಂಗಳಸದ ಜುಳಿಗೆಯೊಳಿಟ್ಟ ಬೆರಲಂ ತೆಗೆದು ಬಿಡಲ್ಕೆ ||
ಲಲಿತ ಚಂಪಕ ತನುಚ್ಛಾಯೆಯಿಂ ಕೆಂಪಿಡಿದ |
ಜಳಧಾರೆ ಕಂಗೊಳಿಸುತಿರ್ಪುದಧ್ವಶ್ರಮಂ |
ಗಳನಾಂತು ಬಂದ ಪಥಿಕರ್ಕಳೀಂಟುವ ಸಮಯದೊಳ್ ಪ್ರಪಾಶಾಲೆಗಳೊಳು ||೧೧||

ಲಲಿತ ಕರತಳದೊಳ್ ಪಿಡಿದ ಚಂದ್ರಕಾಂತಕೃತ |
ಕಲಶಮಾಸ್ಯೇಂದುಮಂಡಲರುಚಿಗೊಸರ್ವ ನಿ |
ರ‍್ಮಲ ಜಲಮಿದೆಂಬಂದದಿಂದೆ ಸೊಗಯಿಸುವ ಶೀತಾಂಬುಧಾರೆಯನೀಂಟುತೆ ||
ಲಲನೆಯರ ಕೋಮಲಾವಯವ ಲಾವಣ್ಯಮಂ |
ಸಲೆಕಂಡು ಮೆಚ್ಚಿ ಮನಮುಳುಗಿದಾನಂದದಿಂ |
ತಲೆದೂಗುವರ್ ಪಥಿಕರಾನೀರ್ಗೆ ತಣಿವ ನೆದಿಂದಮಾ ಜನಪದದೊಳು ||೧೨||

ಏಂ ತಾಳ್ದುದೋ ಚೆಲ್ವನೀದೇಶಮೆಂದು ನಲ |
ವಾಂತು ಮುಂದಲೆಯುತಿರೆ ಕಂಡರವರಾ ಪುರ |
ಪ್ರಾಂತದೊಳ್ ಸನ್ನೆಗೈದಿನಿಯರಂ ಬರಿಸಿ ನವರತಿಕಲಾಪ್ರೌಢಿಯಿಂದೆ ||
ಸ್ವಾಂತಸುಖಮಂ ಪಡೆವ ಪೌರನಾರಿಯರ ವಿ |
ಶ್ರಾಂತಿಗಮರಿದ ರನ್ನವಾಸರೆಗಳಿಂದೆ ಶಶಿ |
ಕಾಂತಶಿಲೆಗಳ ಕಂದರಂಗಳಿಂದತಿಮನೋಹರಮಾದ ಗಿರಿಯೊಂದನು ||೧೩||

ಆ ಗಿರಿಯ ಮಸ್ತಕವನಡರಲ್ಕದರ ಪೂರ್ವ |
ಭಾಗದೊಳ್ ಮೆರೆವ ಭದ್ರಾವತಿಯ ಸಿರಿಗೆ ತಲೆ |
ದೂಗುತೆ ವೃಕೋದರಂ ನುಡಿದನೆಲೆ ವೃಷಕೇತು ನೋಡಿದೈ ಕೌತುಕವನು ||
ಈಗಳೀ ನಗರಂ ಮಹೀಲಲನೆಗಾಸ್ಯಾಬ್ಜ |
ಮಾಗಿರ್ಪುದೆತ್ತಲುಂ ಗಗನದೆಡೆಗೇಳ್ವ ಬಹು |
ಯಾಗಧೂಮಂಗಳೆಂಬಾಲೋಲನೀಲಾಕಾವಳಿಯ ಚೆಲ್ವಿನಿಂದೆ ||೧೪||

ಎನಿಸು ಜನಮಿರ್ದೊಡಂ ತ್ರಿದಶಜನಕಾವಾಸ |
ಮೆನಿಪುದಮರಾವತೀಪತ್ತನಂ ಮೂಜಗದೊ |
ಳೆನಿಸು ಜಸವಡೆದೊಡಂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ ||
ಎನಿಸುಜನಮಿರಲೆನಿಸುಜಸವಡೆಯಲದರಿಂದೆ |
ತನಗಿನಿಸು ಕುಂದಿಲ್ಲಮೆಂಬ ಪೆಂಪಿಂದೆ ಪುರ |
ವನಿತೆ ಗಹಗಹಿಸಿ ನಗುವಂತೆಸೆವ ಸೌಧಂಗಳ ಮೌರೀಚಿ ನೋಡೆಂದನು ||೧೫||

ಶ್ವೇತಾದ್ರಿಶಿಖರದೊಳ್ ಕಂಗೊಳಿಸುವುಜ್ಜ್ವಲ |
ಜ್ಯೋತಿರ್ಲತೆಯೊ ಮೇಣು ಸಲ್ಲಲಿತ ಶುಭ್ರ ಜೀ |
ಮೂತದೊಡ್ಡಿನ ಮೇಲೆ ಪೊಳೆವ ಸೌದಾಮಿನಿಯೊ ಶಿವನ ಮಸ್ತಕದೊಳೆಸೆವ ||
ಶೀತಾಂಶುರೇಖೆಯೋ ಬಗೆವೊಡೀನಗರದ ವಿ |
ನೂತನ ಪ್ರಾಸಾದದಗ್ರದೊಳ್ ಸುಳಿವಂಬು |
ಜಾತನಯನೆಯರ ತನುವಲ್ಲರಿಯ ಕಾಂತಿಯೋ ಕರ್ಣಸುತ ನೋಡೆಂದನು ||೧೬||

ನಳನಳಿಪ ತರುಣತೆಯ ಸೊಂಪುವೆತ್ತರುಣತೆಯ |
ತಳೀರಿಡಿದ ತೋರಣದ ಚೆಲ್ವನಾಂತೋರಣದ |
ತೊಳಪ ಕಳಸದ ಗುಡಿಯ ಸಾಲ್ದಳೆದ ಕನ್ನಡಿಯ ಸೆಳೆಯ ಸೀಗುರಿ ಚಮರಿಯ ||
ಚಲಿತ ಲೀಲಾಸ್ಯದ ಪತಾಕೆಗಳ ಲಾಸ್ಯದ ಪ |
ವಳದ ಮುತ್ತುಗಳ ಗೊಂಚಲ್ಗಳೊತ್ತುಗಳ ಗೊಂ |
ದಳದ ಬಗೆ ಕಂಗಳಿಂಬಿಗೆ ಕೌತುಕಂಗಳಿಂ ಬೀದಿಗಳೊಳೆಸೆದಿರ್ಪುವು ||೧೭||

ಒತ್ತರಿಸಿದುನ್ನತ ಪ್ರಾಸಾದದಬಲೆಯರ |
ವೃತ್ತವದನೇಂದು ಮಂದಸ್ಮೇರಚಂದ್ರಿಕೆಯೊ |
ಳುತ್ತುಂಗ ದೇವಾಲಯದ ಗೋಪುರದ ಮಾಣಿಕದ ಕಲಶದೆಳವಿಸಿಲೊಳು ||
ಕತ್ತಲೆ ಪರಿವುದಲ್ಲದೀ ನಗರದೊಳ್ ಬೇರೆ |
ಮತ್ತೇ ಸೋಮಾದಿತ್ಯ ಕಿರಣಂಗಳೈದುವೊಡೆ |
ಸುತ್ತಲುಂ ಮುಗಿಲ ಮುಟ್ಟಿದ ಕೋಟೆಗಳ ವಳಯವಣುಗ ನೋಡಚ್ಚರಿಯನು ||೧೮||

ಕುಸಿದು ಪಾತಾಳದೊಳಗಿರ್ದು ಪಲಕಾಲಮಂ |
ದ್ವಿಸಹಸ್ರ ನಯನಂಗಳಿಂದೆ ನೋಡಿದೊಡೆ ಕಾ |
ಣಿಸಿ ಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು ||
ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚ |
ಳಿಸಿ ಬಳೆದ ಫಣಿಪತಿಯ ಮಣಿವೆಡೆಯ ಸಾಲಿವೆನ |
ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾ ದೆಸೆಯೊಳು ||೧೯||

ವಾಯುಪಾಶಂ ಪರಿಯೆ ಧರೆಗುರುಳ್ದಪೆವಿದಕು |
ಪಾಯಮಿನ್ನೇನೆಂದು ನವರತ್ನ ಖಚಿತ ಕಮ |
ನೀಯ ಕಾಂಚನಮಯೋನ್ನತ ದೃಢಕಾರದೊತ್ತುಗೊಂಡಲ್ಲಲ್ಲಿಗೆ ||
ದಾಯ ಮಿಗೆ ನಿಲಿಸಿದರೊ ಖೇಚರರ್ ತಮ್ಮ ಶೋ |
ಭಾಯಮಾನಾಲಯಂಗಳನೆನಲ್ ಕಣ್ಗೆ ರಮ |
ಣೀಯಮಾಗಿವೆ ಕರ್ಣತನಯ ನೋಡೀಪುರದ ಮುಗಿಲಟ್ಟಳೆಯ ಸಾಲ್ಗಳು ||೨೦||

ಮೇಲೆ ನಿಚ್ಚಂ ಪರಿವ ದಿನಮಣಿಯ ಮಣಿರಥದ |
ಗಾಲಿಗಳ ನೇಮಗಳ ಪೊಯ್ಲಿಂದ ಪುಡಿವಡೆದ |
ಸಾಲ ಹೊಂಗೋಟೆದೆಗೊನೆಗಳಿಂದೇಳ್ವ ಧೂಳಲ್ಲಿಗಲ್ಲಿಗೆ ನಭದೊಳು ||
ಸ್ಥೂಲದಂಡಾಕೃತಿಯನಾಂವೋಲ್ ಪ್ರಾಕಾರ |
ಜಾಲಮಂ ವಿರ್ವ ಹೇಮದ ಡೆಂಕಣಿಯ ಕೈಗ |
ಳಾಲಿಗಚ್ಚರಿಯೆನಿಸಿ ತೋರುತಿವೆ ತನಯ ನೋಡೀ ನಗರದೆಣ್ದೆಸೆಯೊಳು ||೨೧||

ಈ ನಗರವಧು ತನ್ನಡೆಯೊಳಾವಗಂ ಬಾಳ್ವ |
ಮಾನಿಸರ್ಗೆಯ್ದೆ ಸೌಖ್ಯಂ ಪೆರ್ಚ್ಚಲೆಂದೊಮ್ಮೆ |
ತಾನಿಷ್ಟದೇವತೆಯ ಬೇಡಿಕೊಳುತಿರ್ದೊಡಾ ಪರಕೆ ಕೈಗೂಡಲೊಡನೆ ||
ಸಾನುರಾಗದೊಳುಟ್ಟ ಪಸುರುಡಿಗೆಯೆನೆ ಧರಾ |
ಮಾನಿನಿಯ ಮೊಗದಾವರೆಯ ಮುಸುಕಿಕೊಂಡಿಹ ನ |
ವೀನಪತ್ರಾವಳಿಗಳೆನೆ ನಗರಮಂ ಬಳಸಿದುಪವನಂಗಳ್ ಮೆರೆವುವು ||೨೨||

ಅವಗಂ ಪುಷ್ಪಿಣಿಯರಾಗಿರ್ಪರಿಲ್ಲಿಯ ಲ |
ತಾವಧುಗಳಿವರ ಸೋಂಕಲೆ ಬಾರದೆಂದು ರಾ |
ಜೀವಮಿತ್ರಂ ತನ್ನ ನಿರ್ಮಲ ಕರಂಗಳಂ ಪೆರದೆಗೆದನೆಂಬಂತಿರೆ ||
ಅವೆಡೆಯೊಳಂ ಛಿದ್ರಮಿಲ್ಲೆನಿಸಿ ವಿವಿಧದ್ರು |
ಮಾವಳಿಯ ನಿಬಿಡಪತ್ರಚ್ಛಾಯೆಗಳ ಸೊಂಪು |
ದೀವಿದಾರಾಮಂಗಳೆಂದುವಿ ಪುರಜನರ‍್ಗೇಂ ವಿಲಾಸವನೀವುವೋ ||೨೩||

ನಿಚ್ಚಳದೊಳೆಸೆವ ತಿಳಿಗೊಳನ ಕಲಕಾಡಿ ಬಿರಿ |
ದಚ್ಚಲರ ಧೂಲಿಗಳ ಚೆಲ್ಲಾಡಿ ಸಲೆ ಮದಂ |
ವೆಚ್ಚೆ ತರುಲತೆಯನಣಿದಾಡಿ ಮರಿದುಂಬಿಗಳ ಕೂಡಿಕೊಂಡೀಬನದೊಳು ||
ನಿಚ್ಚಮಲೆವೆಲರೆಂಬ ಸೊಕ್ಕಾನೆ ತಾನೆ ತ !
ನ್ನಿಚ್ಚೆಯಿಂ ತಿರುಗುತಿದೆ ತೊಲತೊಲಗಿ ವಿರಹಿಗಳ್ |
ಚೆಚ್ಚರದೊಳೆಂದೆತ್ತಲುಂ ಪುಯ್ಯಲಿಡುವಂತೆ ಕೂಗುತಿವೆ ಕೋಗಿಲೆಗಳು ||೨೪||

ಮಿಗೆ ಮುತ್ತಿ ಮೊರೆವ ತುಂಬಿಗಳ ತಿಂತಿಣಿಯನೇ |
ಮುಗಿಲೆಂದು ಸುಳಿವ ಗಾಳಿಗೆ ಬಿಡದೆ ನರ್ತಿಪ ಲ |
ತೆಗಳ ಕುಡಿಗೊನರ ನುಣ್ಬೊಗರನೇ ಮಿಂಚೆಂದು ಸೊಗಯಿಸುವ ಪೂಗಳಿಂದೆ ||
ಉಗುವ ಮಕರಂದ ಬಿಂದುಗಳನೇ ಮಳೆಗಳೆಂ |
ದೊಗೆದಸಂತಸದೊಳಾವಗಮೆಯ್ದೆ ಕುಣಿವ ಸೋ |
ಗೆಗಳ ಬಳಗಂಗಳಂ ಮಗನೆ ಕಂಡೈ ತಳೀತ ನಗರೋಪವನದೆಡೆಯೊಳು ||೨೫||

ಪೂಗಳ ಪರಾಗಮೊಕ್ಕಿರ್ದಿಳೆಯ ಮೇಲೆ ಹಂ |
ಸೀಗಣಂ ನಡೆಯಲದರಡಿವಜ್ಜೆ ಪತ್ತಿ ಸಾ |
ಲಾಗಿರಲ್ಕೀ ಬನವ ವಿರಹಿಗಳ್ ಪುಗದಂತೆ ಮನ್ಮಥಂ ಬರೆದಿರಿಸಿದ ||
ನಾಗರದ ಯಂತ್ರದಕ್ಕರಗಳೆಂಬಂದದಿಂ |
ದಾಗೆ ತಮಗಿರುಳಹ ವಿಯೋಗಮಂ ನೆನೆದಂಜಿ |
ಬೇಗುದಿಂ ತೊಡೆವಂತೆ ಪೊರಳ್ದು ರತಿಗೈವ ಕೋಕಂಗಳಂ ನೋಡೆಂದನು ||೨೬||

ನಸುಗುಳಿ ಸಂಧಿಸೆ ಕೆದರ್ದ ಪೋಂಬಾಳೆಗಳ |
ಕುಸುರಿಗಳ್ ತಳಿವಕ್ಷತೆಗಳಮಲಮಂಜರಿಯ |
ಕುಸುಮಂಗಳಾಂತ ಪುಷ್ಪಾಂಜಲಿಗಳೊಂದಿ ಕಿಕ್ಕಿರಿದ ಪೆರ್ಗೊನೆಗಳಿಂದೆ ||
ಎಸೆವ ಚೆಂದೆಂಗಾಯ್ಗಳೊಂದೊಂದನೊಡೆಯುತ್ತ |
ಲೊಸರಿ ಸೋರ್ವೆಳನೀರ್ಗಳರ್ಘ್ಯಂಗಳಾಗೆ ರಂ |
ಜಿಸುವ ಬನದೇವಿ ಭೂದೇವತೆಯನರ್ಚಿಪವೊಲಿದೆ ಕುವರ ನೋಡೆಂದನು ||೨೭||

ತರುಣ ಪಲ್ಲರ ವಿಸ್ತಾರದಿಂ ನೇರದಿಂ |
ಸರಗೈವ ಕಲಪಿಕೋಚ್ಚಾರದಿಂ ಸಾರದಿಂ |
ಸುರಿವ ಪೊದೊಂಗಲ ತುಷಾರದಿಂ ಸ್ವೈರದಿಂ ಸಲ್ಲಾಪಕೆಳಸಿ ಬಳಸಿ ||
ಮೊರೆವ ತುಂಬಿಗಳ ಝಂಕಾರದಿಂ ತೋರದಿಂ |
ಪರಿಪಕ್ವಮಾದ ಫಲಭಾರದಿಂ ಕೀರದಿಂ |
ಕರಮೆಸೆಯುತಿರ್ಪ್ಪ ಸಹಕಾರದಿಂ ತೀರದಿಂಪೆಲ್ಲಿಯುಂ ನಂದನದೊಳು ||೨೮||

ಎಮ್ಮಂತೆ ಕೂರ್ಪರಂ ಬಿಡದಪ್ಪೆಕೊಂಡಿರದೊ |
ಡೊಮ್ಮೆಯುಂ ನಿಲಲೀಯನೀ ಬನದೊಳಂಗೋದ್ಭ |
ವಮ್ಮೋಹಿಗಳನೆಂದು ದೃಷ್ಟಾಂತಮಂ ತೋರಿ ಭೋಗಿಸುವ ಮಾನವರ್ಗೆ ||
ತಮ್ಮಿಂದ ವಸ್ತುವಂ ಪಡೆಯಲ್ಕೆ ಸಂಯೋಗ |
ವಮ್ಮಾಳ್ಪವೊಲ್ ನಾಗವಲ್ಲಿಗಳ್ ಫಲಭಾರ |
ದಿಮ್ಮೆರೆವ ಪೂಗವೃಕ್ಷಂಗಳಂ ಪರ್ವಿ ಕಂಗೊಳಿಸುತಿವೆ ನೋಡೆಂದನು ||೨೯||

ಭೂತಳದ ಭೋಗಿಸಂಕುಲಕೆ ಬಹುವಿಧ ಸುಗಂ |
ಧಾತಿಶಯ ಸೌಖ್ಯದಿಂ ನೆರೆತಣಿಸಿ ಬಳಿಕ ಸಂ |
ಪ್ರೀತಿಯಿಂದತಳದ ಮಹಾಭೋಗಿಚಯ ಕೊಂದುಬಗೆಯ ಕಂಪಿನ ಸೊಂಪನು ||
ಏತಕುಣೀಸದೆ ಬಿಡುವಳೀ ವನಾಂಗನೆಯೆಂಬ |
ರೀತಿಯಿಂ ಬೇರ‍್ವರಿದ ಮುಡಿವಾಳಮಿರಲಳಿ|
ರಾತಮರಿಯದೆ ತಿರುಗುತಿದೆ ನಿಧಾನವನಭಾಗ್ಯಂ ಕಾಣದಿರ್ಪ್ಪಂತಿರೆ ||೩೦||

ಕುದ್ದಾಲಹತಿಯನುರೆ ತಾಳ್ದೆಮ್ಮನಿನ್ನೆಗಂ |
ಮುದ್ದುಗೈದೀ ವಸುಧೆ ಬೆಳೆಯಿಸಿದಳೆಂದು ತುರು |
ಗಿದ್ದ ತನಿವಣ್ಣಳಿಂದೆಸೆವ ಪೆರ್ಗೊನೆಗಳಂ ಸಲೆ ಸಮರ್ಪಿಸಲೊಡರ್ಚಿ ||
ಎದ್ದಿರದೆ ಬಾಗಿದುವೊ ಕದಳಿಗಳ್ ಧರಣಿಗೆನ |
ಲಿದ್ದಪರೆ ಮರೆದು ಪುರುಷಾರ್ಥಮಂ ಮಾಡಿದರ |
ನುದ್ದಾಮಗುಣಮುಳ್ಳ ಜೀವಿಗಳ್ ತನುಜ ನೋಡೆಂದನಾ ಪವನಸೂನು ||೩೧||

ಕಡುಗೆಂಪೆಸೆವ ತಳಿರ ತನಿಗೆಂಡಮಂ ಕಲಕಿ |
ನಡೆದು ಮೊನೆಮುಗುಳ ಶಸ್ತ್ರಂಗಳಂ ಪಾಯ್ದು ಮಾ |
ಮಿಡಿದು ಜೊಂಪದ ವಜ್ರಮುಷ್ಟಿಯಂ ಜಡಿದು ಲತೆಗಳ ಕೊನರ ಚಾಟಿಯಿಂದೆ ||
ಬಡಿದು ಕೋಗಿಲೆಯ ನಿಡುಸರದ ಬೊಬ್ಬೆಯಾಳಾರ್ದು |
ಬಿಡದೆ ವನದೇವಿಯೊಳಗದೊಳುತ್ಸವದಿಂದ |
ಮಡಿಗಡಿಗೆ ತೂಣಗೊಂಡವನಂತೆಸೆವ ಮಂದಮಾರುತನ ನೋಡೆಂದನು ||೩೨||

ಬಕುಳ ಮಂದಾರ ಪಾದರಿ ಕರ್ಣಿಕಾರ ಚಂ |
ಪಕ ಕೋವಿದಾರ ಪ್ರಿಯಂಗು ಕರಪೀರ ಕುರ |
ವಕ ತಿಲಕ ಸುರಗಿ ನಂದ್ಯಾವರ್ತ ಮೇರು ಸೇವಂತಿಗೆ ಶಿರೀಷಮೆಂಬ ||
ಸಕಲ ತರುನಿಚಯಂಗಳಂಗಜನ ವಿವಿಧ ಸಾ |
ಯಕದ ಮೂಡಿಗೆಗಳಂತೆಸೆವ ನವಕುಸುಮಸ್ತ |
ಬಕದಿಂದಮೊಪ್ಪುತಿವೆ ಕುಂದಮಾಲತಿಮಲ್ಲಿಕಾದಿಪೂವಲ್ಲಗೂಡಿ ||೩೩||

ಸಾಲಸಾಲಂಗಳಿಂ ಬಕುಳ ಕುಳದಿಂದೆ ಹಿಂ |
ತಾಲತಾಲಂಗಳಿಂ ಮಾದಲದಲರ್ಗಳಿಂ ತ |
ಮಾಲಮಾಲತಿಗಳಿಂ ಸಂರಂಭರಂಭದಿಂ ಮಂದಮಂದಾರದಿಂದ ||
ಜಾಲಜಾಲಂಗಳಿಂ ಸುರಹೊನ್ನೆ ಹೊನ್ನೆ ಬಗೆ |
ಪಾಲ ಪಾಲಾಶತರು ತರುಣಾಮ್ರಚಯ ಕಿಂಕಿ |
ಲಾಲಿ ಲಾಲಿತ ನವಾಶೋಕದಿಂದುದ್ಯದುದ್ಯಾನಮೇಂ ಚೆಲ್ವೆನಿಪುದೋ ||೩೪||

ಬಗೆವೊಡಿವು ಮುನ್ನಮಾಡಿರ್ದ ದೈವದ್ರೋಹ |
ದಘದಿಂದೆ ಪೊರವಳಯದೊಳ್ ಬಹುಕುಂಟ |
ಕಿಗಳಾಗಿ ಬಂದು ಸಂಭವಿಸಿರಲ್ ತಳಿತ ಹೊಂಗೇದಗೆಗಳವರೊಳಾಡಿ ||
ಮಿಗೆ ಮಲಿನವಾಯ್ತು ಸರ್ವಾಂಗಮುಂ ಭ್ರಮರಾವ |
ಳಿಗೆ ತಮಗದರ ಸಂಗಮೇಕೆಂದು ಪೂತ ಸಂ |
ಪಗಗಳತಿಶುಚಿಗಳಂತೆಸೆಯುತಿವೆ ನೋಡು ನಂದನ ಪುರದ ನಂದನದೊಳು ||೩೫||

ಮುಡಿವಾಳ ಲಾಮಂಚಗಳ ಬೇರ್ಗಳಿಂ ಬೇರ್ಗ |
ಳಿಡಿದಗರುಚಂದನಂಗಳ ಕೊಂಬಿನಿಂ ಕೊಂಬು |
ತೊಡರಿದಚ್ಚೆಸಳು ಮಲ್ಲಿಗೆ ಜಾಜಿಗಳ ಪೂಗಳಿಂ ಪೂಗಳೊಂದುಗೂಡಿ ||
ಕಡುಗಂಪುವಡೆದುವಾಮೂಲಾಗ್ರವಿ ಬನದ |
ನಡುವೆ ಪುಟ್ಟಿದ ಕಾಳ್ಮರಂಗಳೆಲ್ಲಂ ಸೋಂಕಿ |
ದೊಡೆ ತಂಬೆಲರ್ಗೆ ಪರಿಮಳವನೀಯದ ಕುಜಂ ನಂದನದೊಳೊಂದಿಲ್ಲೆನೆ ||೩೬||

ಈ ವನದ ನಡುನಡುವೆ ತೊಳತೊಳಗುತಿರುತಿಹ ಸ |
ರೋವರವರದೊಳೆ ದಳೆದಳೆದು ಬೆಳೆಬೆಳೆದು ರಾ |
ಜೀವದಲರಲರ ತುಳಿತುಳಿದಿಡಿದಿಡಿದ ಬಂಡನೊಡನೊಡನೆ ಸವಿದು ಸವಿದು ||
ಅವಗಮಗಲದೆ ಯುಗಯುಗಮಾಗಿ ನೆರೆನೆರೆದು |
ಕಾವ ಸೊಗಸೊಗಸಿನಲಿ ನಲಿದು ಮೊರೆಮೊರೆವ ಭೃಂ |
ಗಾವಳಿಯ ಗಾವಳಿಯ ಕಳಕಳಂಗಳ ನೋಡುನೋಡು ರವಿತನಯತನಯ ||೩೭||

ಸಗ್ಗದಾಣ್ಮನ ವಜ್ರಹತಿಯಿಂದೆ ಸಾಗರಕೆ |
ಮುಗ್ಗವ ಕುಲಾದ್ರಿಗಳ ಮರಿಗಳ ಸಮೂಹಮೆನ |
ಲೊಗ್ಗಿನಿಂ ಪೆರ್ಗಡಲ ನೀರ್ಮೊಗೆಯಲಿಳಿದ ಕಾರ್ಮುಗಿಲ ಬಳಗಂಗಳೆನಲು ||
ದಿಗ್ಗಜಮನೇಕಂಗಳಾದುವೆನೆ ಕರಿಘಟೆಯ |
ಮೊಗ್ಗರಂ ತಿಳಿಗೊಳಂಗಳ ಸಲಿಲಪಾನಕಿಳೆ |
ನೆಗ್ಗಿದಲ್ಲದೆ ಮಾಣದೆಂಬಿನಂ ಪೊಳಲ ಪೊರಮಟ್ಟು ಬಂದಪುದೆಂದನು ||೩೮||

ಖಳರ ಪುರುಷಾರ್ಥಮಂ ಕಾಮಿಸುವ ಯಾಚಕಾ |
ವಳಿಯಂತೆ ಪೊಳಲಿಂದೆ ಪೊರಮಟ್ಟು ಸರಸಿಯೊಳ್ |
ಮುಳುಗುತಿರ್ಪ್ಪಾನೆಗಳ ದಾನಾಭಿಲಾಷೆಯಂ ಬಿಟ್ಟಳಿಕುಳಂ ತೊಲಗಲು ||
ಕಳಕಳಿಸಿ ನಗುವ ಸಜ್ಜನರವೊಲ್ ಸರಸ ಪರಿ |
ಮಳದ ಮಕರಂದಮಂ ಭ್ರಮರಾವಳಿಗೆ ಮಾಜ |
ದೊಲಿದಿತ್ತು ಮೆರೆವ ಬೆಳ್ದಾವರೆಯ ಬಿಚ್ಚಲರ್ಗಳ ಪೆರ್ಚ ನೋಡೆಂದನು ||೩೯||

ಕಾರ್ಗಾಲದಭ್ರಮಾಲೆಗಳಮರಸರಣಿಯೊಳ್ |
ತಾರ್ಗೂಡುತೆತ್ತಲುಂ ನಿಬಿಡಮಪ್ಪಂದದಿಂ |
ನೀರ್ಗುಡಿಯೆ ಪೊಳಲ ಪೆರ್ಬಾಗಿಲ್ಗಳಿಂದೆ ಪೊರಮಾಡುವ ವರಸರಸಿಯಿಂದೆ ||
ಊರ್ಗೆ ಮರಳುವ ತೇಜಿಗಳ ಸಾಲ್ಗಳಾ ಮಧ್ಯ |
ಮಾರ್ಗದೊಳ್ ತವೆ ತೀವಿ ಸಂದಣಿಸುತಿವೆ ನೃಪರೊ |
ಳಾರ್ಗಿವನ ಸೌಭಾಗ್ಯಮುಂಟಮಮ ಪೊಗಳ್ವೆನೆಂತುಣುಗ ನೋಡಚ್ಚರಿಯನು ||೪೦||

ಬೇರೆಬೇರಿನಿತೆಲ್ಲಮಂ ಕರ್ಣತನಯಂಗೆ |
ತೋರುತಿರ್ದಂ ಭೀಮನನ್ನೆಗಂ ಬಿಸಿಯ ಬಿಸಿ |
ಲೇರಿದುದು ಭದ್ರಾವತಿಯೊಳುಳ್ಳ ತೇಜಿಗಳ ಚಪಲತೆಯ ಸೌರಂಭದೆ ||
ವಿರಿದ ಜವಂಗಳಂ ಕಂಡು ಕಾಲ್ಗೆಟ್ಟೆಯ |
ಲಾರದೊಯ್ಯನೆ ನಡೆವ ತೇರ್ಗುದುರೆಯಂ ಕಂಡು |
ನೂರೆಲೆಗೆಳೆಯನುಗ್ರಕೋಪದಿಂದುರಿಯನುಗುಳದೆ ಮಾಣನೆಂಬಂತಿರೆ ||೪೧||

ಭಾನು ಮಧ್ಯಾಹ್ನಗತನಾದನೀ ಕುದುರೆಗಳೂ |
ಳಾನುತ್ತಮಾಶ್ವಮಂ ಕಂಡುದಿಲ್ಲದರಿಂದ |
ಮೇನದಂ ಪೊರಮಡಿಸರೋ ಪೊಳಲೊಳಿಲ್ಲವೋ ಕಣ್ಗೆ ಗೋಚರಮಾಗದೋ ||
ಈ ನಿದಾನವನರಿವೊಡೆಂತುಟೆಮಗೆಲೆ ಕರ್ಣ |
ಸೂನು ಪೇಳೆಂದು ಚಿಂತಾವಿಷ್ಟನಾಗಿ ಪರ್ವ |
ಮಾನಜಂ ಚಿತ್ತದೊಳ್ ದೇವಪುರ ಲಕ್ಷ್ಮೀಶನಂಘ್ರಿಯಂ ಧ್ಯಾನಿಸಿದನು ||೪೨||