ಕರ್ನಾಟಕ ರಾಜ್ಯದಲ್ಲಿ ಹಲವಾರು ಋಷಿಗಳು, ಮುನಿಗಳು, ಗುರುಗಳು, ಶರಣರು, ಸಂತರೂ, ಮಹಾಮಹಿಮರು, ದಾಸರು ಆಗಿ ಹೋಗಿದ್ದಾರೆ. ಅವರೆಲ್ಲರೂ ಮಾನವ ಜನಾಂಗದ ಉನ್ನತಿಗಾಗಿ, ಏಳಿಗೆಗಾಗಿ ತಮ್ಮದೆ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ನಾವು ನಡೆದರೆ ನಮ್ಮ ಬಾಳು ಪಾವನವಾಗುವುದು.

ಹನ್ನೆರಡನೇ ಶತಮಾನದ ಪ್ರಾರಂಭ ಕಾಲದಲ್ಲಿದ್ದ ಮಹಾಮಹಿಮರು ವಿಶ್ವಬ್ರಾಹ್ಮಣ ಗುರುಪೀಠಾಧಿಕಾರಿಗಳೂ ಆದ ಚಿಕ್ಕೇಶ್ವರ ಚರಿತ್ರೆ ಇದು. ಹಲವಾರು ಶಾಸನಗಳಲ್ಲಿ ಸ್ತುತಿಸಲ್ಪಟ್ಟಿರುವ ಇವರು ‘ಅಬ್ಬಲೂರು ಚರಿತೆ’ ಕಾವ್ಯದ ನಾಯಕರೂ ಹೌದು. ನನ್ನ ಈ ಮೂರುಜಾವಿ ದೇವರ ಪರಂಪರೆ ಲೇಖನಕ್ಕೆ ಮೂಲ ಆಕರ ಗ್ರಂಥ “ಮೂರು ಜಾವಿ ದೇವರ ಚರಿತೆ” ಇದು ವಿ.ಜಿ. ದೀಕ್ಷಿತ ಮತ್ತು ಜಿ. ಜ್ಞಾನಾನಂದ ಅವರ ಸಂಪಾದನೆ ಕೃತಿಯಾಗಿದೆ. ಈ ಕೃತಿಯು ಮೂರು ಜಾವಿ ದೇವರ ಚರಿತ್ರೆ ಸವಿವರವಾಗಿ ವಿವರಿಸಿದ್ದಾರೆ.

ಕರ್ನಾಟಕದಲ್ಲಿ ವೀರಶೈವ ಧರ್ಮ ನೆಲೆಗೊಳ್ಳಲು ಬಲವಾದ ಒತ್ತಾಸೆ ನೀಡಿದ ಹಲವು ಮಹನೀಯರಲ್ಲಿ ಚಿಕ್ಕೇಶ್ವರು ಅತ್ಯಂತ ಪ್ರಮುಖರು. ಏಕಾಂತರಾಮಯ್ಯನು ತನ್ನ ತಲೆಯನ್ನು ಕತ್ತರಿಸಿಕೊಂಡು ಮತ್ತೆ ಶಿವನ ಪ್ರಸಾದದಿಂದ ಜೀವಂತವಾಗುವ ಪಣವನ್ನು ಸ್ವೀಕರಿಸಿದ. ಈ ಪಣದಲ್ಲಿ ಗೆಲ್ಲಲು ಸೂರ್ಯನನ್ನು ಮೂರನೆಯ ಜಾವದಲ್ಲಿಯೇ ನಿಲ್ಲಿಸಿ ಏಕಾಂತ ರಾಮಯ್ಯನಿಗೆ ಜೀವ ಎರದ ಸಾಕ್ಷಾತ ಶಿವಮೂರ್ತಿಯಾದ ಚಿಕ್ಕೇಶ್ವರರು ‘ಮೂರು ಜಾವಿ ದೇವ’ರೆಂದೇ ಹೆಸರಾದರು. ಇದೇ ಹೆಸರೇ ಅವರ ಪೀಠಕ್ಕೂ ಅನ್ವಯವಾಯಿತು. ಇವರು ಶಿವಾವತಾರಿಗಳೆಂದೇ ಜನಪ್ರಿಯರಾಗಿದ್ದರು. ಇಂತಹ ಮಹಾಮಹಿಮರ ಜೀವನ ಸಾಧನೆ, ವ್ಯಕ್ತಿತ್ವ ಸ್ಮರಣೆ ಇಂದಿಗೂ ಅವಶ್ಯಕ. ಈ ರೀತಿಯ ಯುಗಪುರುಷರನ್ನು ಸ್ಮರಿಸುವುದರಿಂದ ವ್ಯಕ್ತಿಯ ಋಷಿ ಋಣವನ್ನು ಸಲ್ಲಿಸುವುದರಲ್ಲಿ ನೆರವಾಗುತ್ತದೆ.

ಮೂರುಜಾವಿ ದೇವರ ಪರಂಪರೆ ಹಿನ್ನೆಲೆ

ಒಂಭತ್ತನೆಯ ಶತಮಾನದ ಪ್ರಾರಂಭದಲ್ಲಿ ಆಚಾರ್ಯ ಶಂಕರರು ಕಾಶಿಗೆ ಬಂದಿದ್ದರು. ಆಗ ಅವರು ಕಾಶಿಯ ಅರಸನೂ ಅತ್ಯಂತ ಶ್ರೇಷ್ಠ ಕಾಂಸ್ಯ ಶಿಲ್ಪಿಯೂ ಆಗಿದ್ದ ಧರ್ಮಪಾಲಾಚಾರ್ಯರ ಆತಿಥ್ಯವನ್ನು ಸ್ವೀಕರಿಸಲು ಅವರ ಅರಮನೆಯಲ್ಲಿ ಕೆಲವು ಕಾಲ ತಂಗಿದ್ದರು. ಧರ್ಮಪಾಲಾಚಾರ್ಯರ ಆಡಳಿತ ದಕ್ಷತೆ ಲೋಕೋಪಕಾರದ ದೃಷ್ಟಿಯಿಂದ ಅವರು ಭಾರತದ ಎಲ್ಲಾ ರಾಜ್ಯಗಳಿಗೂ ಕಾಂಸ್ಯ ವಸ್ತುಗಳನ್ನು ತಯಾರಿಸಿ ವಿತರಣೆ ಮಾಡುತ್ತಿದ್ದರು. ಅವರ ನೈಪುಣ್ಯವನ್ನು ಗಮನಿಸಿದ್ದರು. ಪ್ರಸ್ತಾವಿಕವಾಗಿ ಶ್ರೀ ಶಂಕರಾಚಾರ್ಯರು ಹೀಗೆ ಹೇಳಿದರು.

ತಮ್ಮ ಕಾಂಸ್ಯ ಶಿಲ್ಪಿಗಳೂ ಉತ್ತರಾಪಥದಲ್ಲಿ ಬಹುವಾಗಿವೆ. ಇವುಗಳಿಂದ ಶ್ರೀಸಾಮಾನ್ಯನು ತುಂಬಾ ಅನುಕೂಲಗಳನ್ನು ಪಡೆದುಕೊಳ್ಳುತ್ತಿದ್ದಾನೆ. ದಕ್ಷಿಣಾಪಥದಲ್ಲಿ ತಾವು ತಯಾರಿಸುವ ರನ್ನಗನ್ನಡಿಯಾಗಲಿ, ಕಂಚಿನ ಪೂಜಾಪಾತ್ರೆಗಳ ವಸ್ತುಗಳಾಗಲಿ ಈ ಮಟ್ಟದಲಿಲ್ಲ. ಕಾಂಚಿನಗರ ಪಾಲಕರಾಗಿರುವ ಚೋಳಪಾಲರು ಶಿವಭಕ್ತ ಪಾರಾಯಣರು ಶಾಕ್ತೋಪಾಸನಾಸಿದ್ದರು. ಅವರ ರಾಝ್ಯದ ಪ್ರಜೆಗಳಿಗೂ ನಿಮ್ಮ ಕಾಂಸ್ಯ ಶಿಲ್ಪಗಳ ಪ್ರಯೋಜನ ಲಭಿಸುವಂತಾದರೆ ಜನತೆಗೆ ಒಳಿತಾಗುತ್ತದೆ.

ಈ ಮಾತುಗಳಿಂದ ಪ್ರೇರಿತನಾದ ಅರಸ ಧರ್ಮಪಾಲಾಚಾರ್ಯರು ಬಹುಮಂದಿ ಶಿಲ್ಪಿಗಳನ್ನು ದಕ್ಷಿಣಾಪಥದ ವಿವಿಧ ಭಾಗಗಳಲ್ಲಿ ಕಳುಹಿಸಿದನು. ಅರಸನ ಕುಲಗುರುಗಳಾಗಿದ್ದ ಕಾಳಹಸ್ತಾಚಾರ್ಯರು ಕಾಶಿಯಲ್ಲಿಯೇ ಇದ್ದುದರಿಂದ ಅವರ ಕರಕಮಲ ಸಂಜಾತರಾದ ಗುರುಸ್ವಾಮಿಗಳನ್ನು ದಕ್ಷಿಣಾಪಥದಲ್ಲಿದ್ದ ಶಿಲ್ಪಿಗಳಿಗೆ ಗುರುವಾಗಿ ಕಳುಹಿಸಿದರು. ಅವರಿಗಾಗಿ ಗುರುಪೀಠವನ್ನು ಸ್ಥಾಪಿಸಬೇಕೆಂದು ಪ್ರಾರ್ಥಿಸಿದರು. ಅದಕ್ಕಾಗಿ ಕಾಳಹಸ್ತಾಚಾರ್ಯರು ಶಿವಭಕ್ತಿ ಗುರುಸ್ವಾಮಿಗಳನ್ನು ದಕ್ಷಿಣಾಪಥಕ್ಕೆ ಕಳುಹಿಸಿಕೊಟ್ಟರು. ಯೋಗಸಿದ್ಧರೂ ಯತೀಶ್ವರರೂ ಆಗಿದ್ದ ಶಿವಭಕ್ತಿ ಗುರುಗಳನ್ನು ಹಸ್ತಿನಾವತಿಯಲ್ಲಿ ಪ್ರಸ್ತುತ ಆನೆಗೊಂದಿ ತುಂಗಭದ್ರಾ ನದಿಯ ತಟದ ಮೇಲೆ ತಮ್ಮ ಪೀಠವನ್ನು ಸ್ಥಾಪಿಸಿ ದಕ್ಷಿಣಾ ಪಥದ ಅಶೇಷ ವಿಶ್ವಬ್ರಾಹ್ಮ ಶಿಲ್ಪಾಚಾರ್ಯರ ಗುರುಗಳಾಗಿದ್ದರು.

ಇವರ ಪರಂಪರೆಯಲ್ಲಿ ಬಸವಾಚಾರ್ಯ ಗುರುಸ್ವಾಮಿಗಳು, ಇಮ್ಮಡಿ ಕಾಳ ಹಸ್ತಾಚಾರ್ಯ ಸ್ವಾಮಿಗಳು, ಭೂಬಲಾರಾಧ್ಯ ಗುರುಸ್ವಾಮಿಗಳು, ರೂಢಾಚಾರ್ಯ ಸ್ವಾಮಿಗಳು ಗುರುಪಟ್ಟಾಧಿಕಾರವನ್ನು ವಹಿಸಿಕೊಂಡು ನಿರ್ವಹಿಸಿದರು. ರೂಢಾಚಾರ್ಯರು ಚಾಲುಕ್ಯರ ಕರದ ಅಧಿಕಾರಿಗಳಿಗೆ ಕರ ನೀಡುವುದಿಲ್ಲ. ಏಕೆಂದರೆ ನಾವು ಲೋಕಕಲ್ಯಾಣ ಕಾರ್ಯ ಮಾಡುವವರು ಎಂದು ಹೇಳಿದಾಗ ಅಧಿಕಾರಿಗಳು ಕೇಳದಿದ್ದಾಗ ತಮ್ಮ ಪಾದುಕೆಗಳ ಮಹಿಮೆಯಿಂದ ಆನೆಕುಂದಿ ಹೋಗುವ ಪ್ರಸಂಗ ಜನರ ನಾಲಿಗೆಯ ಮೇಲೆ ಆನೆಗೊಂದಿ ಎಂದು ರೂಢಿಗೆ ಬಂತು. ಇವರಿಗೆ ಆಗಮ ವಿಚಕ್ಷಣರೆಂದು ಗೌರವಿಸಲಾಗಿತ್ತು.

ರೂಢಾಚಾರ್ಯರು ಸದಾ ಅಧ್ಯಾಪನಶೀಲರಾಗಿದ್ದು ವೇದಾಗಮಗಳನ್ನು, ಪುರಾಣಾದಿಗಳನ್ನು ತಮ್ಮ ಗುರುವರ್ಯರಾದ ಕಾಳಹಸ್ತಾಚಾರ್ಯರು ರಚಿಸಿದ್ದ ವಿಶ್ವಕರ್ಮ ಪುರಾಣವನ್ನು, ಅಮರಸಿಂಹನ ಮೂಲಸ್ತಂಭ ಪುರಾಣವನ್ನು ಅರ್ಥೈಸಿ ಅವುಗಳ ವೈಶಿಷ್ಟ್ಯಗಳನ್ನು, ಅಂತರಾರ್ಥಗಳನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಈ ರೀತಿಯ ವಿಚಾರ ಬೋಧನೆಯಿಂದ ಆಗಿನ ಪಂಡಿತರೂ ಲಾಭ ಪಡೆದು ‘ಆಗಮಶಾಸ್ತ್ರ ವಿಚಕ್ಷಣ’ರೆಂದು ರೂಢಾಚಾರ್ಯರನ್ನು ಗೌರವಿಸುತ್ತಿದ್ದರು.

ಈ ಗುರುಗಳ ಕೃಪಾಶೀರ್ವಾದದಿಂದ ಚಿಕ್ಕೇಶ್ವರರು ಈ ರೀತಿಯ ಪಾಂಡಿತ್ಯವನ್ನು ತಮ್ಮ ಆಟಪಾಟಗಳಲ್ಲಿಯೇ ಕಲಿತಿದ್ದರು. ಪ್ರತಿನಿತ್ಯ ಸತ್ಸಂಗ ಅವರ ದಿನದ ಅಂಗವಾಗಿತ್ತು. ಅವರಿಗೆ ವೇದ ಮತ್ತು ಆಗಮಗಳ ಬಗ್ಗೆ ಅಪಾರ ಜ್ಞಾನವಿತ್ತು.

ಶಿವನ ಮುಖದಿಂದ ಹೊರಬಂದು ಪರಾಶಕ್ತಿಯ ಕರ್ಣ ಪುಟಗಳ ಮೇಲೆ ಬಿದ್ದು ಪ್ರಪಂಚದಲ್ಲಿ ವ್ಯಾಪಕಗೊಂಡು ಶಿವಭಕ್ತಕ ಮತವಾಗಿರುವುದು ಆಗಮವೆಂದು ಒಂದು ವಿತರಣೆ ಇದೆ.

ಆಗತಂ ಶಿವ ವಕ್ತೇಭ್ಯಃ ಗತಂ ಚಗಿರಿಜಾಮುಖೇ |
ಮತಂ ಶಿವ ಭಕ್ತಾನಂ ಆಗಮಂ ಚೇತಿ ಕತ್ಯತೇ ||

ಆ-ಗ-ಮ ಈ ಅಕ್ಷರಗಳಿಗೆ ಆಗತಂ (ಸೃಷ್ಟಿಗೊಂಡು) ಗತಂ (ಹೋಗುವ) ಮತಂ (ಮತವಾಗಿ) ಪರಂಪರೆಯಿಂದ ರೂಢಿಯಲ್ಲಿರುವ ಮತ ಎಂದು ಅರ್ಥವನ್ನು ತಿಳಿಸುತ್ತದೆ. ಈ ವಿವರಣೆ. ಆಗಮ ಎಂದರೆ ಪಡೆದುಕೊಂಡಿದ್ದು ಎಂದು ಅರ್ಥ. ತರ್ಕಶಾಸ್ತ್ರದಲ್ಲಿ ಆಗಮವೆಂದರೆ ಆಪ್ತವೆಂದು ಶಬ್ದ ಪ್ರಮಾಣವೆಂದು ಮೂರನೆಯ ಪ್ರಮಾಣವಗಿ ಹೇಳಲಾಗುತ್ತದೆ. ‘ಪ್ರತ್ಯಕ್ಷ’ ಸ್ವಯಂ ಕಂಡದ್ದು. ‘ಅನುಮಾನ’ ಇತರ ಅಂಶಗಳನ್ನು ಪರಿಶೀಲಿಸಿ ಕೈಗೊಂಡಿರುವ ತೀರ್ಮಾನ. ‘ಆಗಮ’ ಎಂದರೆ ಶಾಸ್ತ್ರ ಪ್ರಮಾಣದಿಂದ ಅಂಗೀಕರಿಸುವಿಕೆ.

ಇವನ್ನು ಭಾರತೀಯ ದರ್ಶನ ಶಾಸ್ತ್ರದ ಎಲ್ಲಾ ವಿಭಾಗಗಳೂ ಪ್ರಮಾಣವೆಂದು ಅಂಗೀಕರಿಸುತ್ತವೆ. ಆಗಮದ ಅಧ್ಯಯನ ಮತ್ತು ಅದರ ಆಚರಣೆಯಿಂದ ಆತ್ಮನು ಲೌಖಿಕ ಕರ್ಮ ಬಂಧನದಿಂದ ಮುಕ್ತನಾಗಿ, ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದುಕೊಂಡು ಕೊನೆಗೆ ಮೋಕ್ಷವನ್ನು ಗಳಿಸಿಕೊಳ್ಳುತ್ತಾನೆ. ಆದ್ದರಿಂದಲೇ ಆ ಎಂದರೆ ಜ್ಞಾನ, ಗ ಎಂದರೆ ಬಂಧನದಿಂದ ಬಿಡಿಸಿ ಮ ಎಂದರೆ ಮೋಕ್ಷವನ್ನು ಕರುಣಿಸುವುದು ಎಂದು ಹೇಳುತ್ತಾರೆ.

ಆಗಮಗಳಲ್ಲಿ ಶೈವ, ವೈಷ್ಣವ, ಶಾಕ್ತಾಗಮಗಳು ಇವೆ. ನಂತರ ಕಾಲಗಳಲ್ಲಿ ಕೆಲವು ವಿದ್ವಾಂಸರು ಆಗಮ ಎಂಬ ಪದವನ್ನು ಕೇವಲ ಶೈವಾಗಮಗಳಿಗೂ, ಸಂಹಿತೆ ಎಂಬುದನ್ನು ವೈಷ್ಣವ ಆಗಮಗಳಿಗೂ, ತಂತ್ರ ಎಂಬುದು ಶಾಕ್ತ ಆಗಮಗಳಿಗೂ ಪ್ರತ್ಯೇಕವಾಗಿ ಹೇಳಿದ್ದಾರೆ. ಆದರೆ ಇನ್ನು ಕೆಲವರು ಉಪ ಆಗಮಗಳನ್ನು ಸಂಹಿತೆಗಳೆಂದು ಕರೆದಿದ್ದರೆ, ಇನ್ನೂ ಕೆಲವರು ಅವನ್ನು ತಂತ್ರಗಳೆಂದು ಹೇಳಿದ್ದಾರೆ. ಆದರೆ ವ್ಯಾಪಕವಾಗಿ ಆಗಮ ಮತ್ತು ತಂತ್ರ ಇವೆರಡನ್ನೂ ಪರ್ಯಾಯ ಪದಗಳಾಗಿ ಸ್ವೀಕರಿಸಿರುವುದು ಕಂಡು ಬರುತ್ತದೆ. ಆದರೆ ಶೈವ-ವೈಷ್ಣವ ಆಗಮಗಳೆಂದು ಶಾಕ್ತ ತಂತ್ರಗಳೆಂದು ರೂಢಿಯಲ್ಲಿವೆ.

ಸದಾಶಿವನ ಸದ್ಯೋಜಾತ, ವಾಮದೇವ, ಅಘೋರ ತತ್ಪರುಷ ಮತ್ತು ಈಶಾನ ಎಂಬ ಐದು ಮುಖಗಳಿಂದ ಇಪ್ಪತ್ತೆಂಟು ಶೈವಾಗಮಗಳು ರೂಪಗೊಂಡವು ಎಂದು ಹೇಳಲಾಗುತ್ತದೆ. ಸದ್ಯೋಜಾತ ಮುಖದಿಂದ ಕಾಮಿಕ, ಯೋಗಜ, ಚಿಂತ್ಯ, ಕರಣ ಮತ್ತು ಅಜಿತ ಆಗಮಗಳು, ವಾಮದೇವ ಮುಖದಿಂದ ದೀಪ್ತ, ಸೂಕ್ಷ್ಮ, ಸಹಸ್ರ, ಅಂಶುಮತ್‌, ಸುಪ್ರಭೇದ ಆಗಮಗಳು, ಅಘೋರ ಮುಖದಿಂದ ವಿಜಯ, ನಿಶ್ವಾಸ, ಸ್ವಾಯಂಭುವ ಆಜ್ಞೇಯ (ಅನಲ), ವೀರ ಆಗಮಗಳು, ತತ್ಪುರುಷ ಮುಖದಿಂದ ಕೌರವ, ಮಕುಟ, ವಿಮಲ, ಚಂದ್ರಜ್ಞಾನ ಮುಖಬಿಂಬ(ಬಿಂಬ) ಆಗಮಗಳು, ಈಶಾನ ಮುಖದಿಂದ ಪ್ರೋದ್ಗೀತ, ಲಲಿತ, ಸಿದ್ಧ, ಶಾಂತ ಸರ್ವೋಕ್ತ ಪರಮೇಶ್ವರ, ಕಿರಣ ಮತ್ತು ವಾತುಲ ಆಗಮ ಹೀಗೆ ಇಪ್ಪತ್ತೆಂಟು ಆಗಮಗಳು ಪಂಚವದನಗಳ ಮುಖಾಂತರ ದೊರೆತವು.

ಈ ಆಗಮಶಾಸ್ತ್ರಗಳಲ್ಲಿರುವುದೇನು? ಆಗಮಶಾಸ್ತ್ರದ ಅಧ್ಯಯನದಿಂದ ಸೃಷ್ಟಿಯಲ್ಲಿರುವ ವಸ್ತುವಿನ ಗುಣವನ್ನು ಅರಿತು, ತನ್ಮೂಲಕ ಸೃಷ್ಟಿಯ ರಹಸ್ಯವನ್ನು ವ್ಯಕ್ತಿಯ ಅಂತರಂಗವನ್ನು ಗ್ರಹಿಸಿ ಮಾಯಾವರಣದಿಂದ ಆವೃತ್ತವಾಗಿರುವುದನ್ನು ಈ ಬಂಧನಗಳಿಂದ ಮುಕ್ತಗೊಳಿಸಿ ಪರಮಾತ್ಮನಲ್ಲಿ ಐಕ್ಯತೆಯನ್ನು ಪಡೆದುಕೊಳ್ಳುವಂತೆ ಮಾಡುವುದು. ಸಾಧನಾ ಪಥದಲ್ಲಿ ಪ್ರಗತಿಯನ್ನು ಗಳಿಸಿದ್ದ ಸಂಸ್ಕೃತಗೊಂಡ ಆತ್ಮಗಳಿಗೆ ಶಿವನು ಆಗಮಶಾಸ್ತ್ರಗಳನ್ನು ನೀಡಿ ಅವರು ಜನನ-ಮರಣದ್ದ ಕರ್ಮಚಕ್ರವನ್ನು ಒಡೆಯುವಂತೆ ಮಾಡಿದ್ದಾನೆ. ಈ ಕ್ರಿಯೆಯು ಆಗಮಗಳಲ್ಲಿ ನಾಲ್ಕು ಹಂತಗಳಲ್ಲಿ ಸಾಗುತ್ತದೆ. ಇವೇ ಆಗಮಶಾಸ್ತ್ರದ ನಾಲ್ಕು ಪಾದಗಳು-ಜ್ಞಾನ, ಯೋಗ, ಕ್ರಿಯೆ ಮತ್ತು ಚರ್ಯೆ. ಇವುಗಳಲ್ಲಿ ಕ್ರಿಯೆ ಮತ್ತು ಯೋಗ ಇವೆರಡಕ್ಕೂ ಪ್ರಧಾನವಾದ ಸ್ಥಾನವಿದೆ.

ಜ್ಞಾನ ಪಾದವನ್ನು ವಿದ್ಯಾಪಾದವೆಂದೂ ಕರೆಯುತ್ತಾರೆ. ಇಲ್ಲಿ ಆಗಮಶಾಸ್ತ್ರದ ಆಧ್ಯಾತ್ಮ ತಳಹದಿಯನ್ನು ವಿವರಿಸಲಾಗುತ್ತದೆ. ಈ ಶಾಸ್ತ್ರದಲ್ಲಿ ಹುದುಗಿರುವ ಆಧ್ಯಾತ್ಮ ಸತ್ಯಗಳನ್ನು ಅನಾವರಣಗೊಳಿಸಿ ಅವುಗಳ ಪ್ರಾರಂಭವನ್ನು, ಗುರಿಯನ್ನು ತಿಳಿಸುತ್ತದೆ. ಆಗಮಗಳು ವೇದಗಳನ್ನೇ ತಳಹದಿಯನ್ನಾಗಿರಿಸಿಕೊಂಡು ಅವುಗಳ ಮೇಲೆಯೇ ಇದರ ತತ್ವಗಳು ಆಧರಿಸಿರುವುದರಿಂದ ವೇದಾಂತವೇ ಆಗಮಗಳ ತತ್ವ. ಸರ್ವಶಕ್ತನಾದ ಸೃಷ್ಟಿಕರ್ತೃವಾದ ಪರಮಾತ್ಮ ಒಬ್ಬನೇ. ಅವನೇ ಶಿವನು. ಸಾಧಾರಣವಾಗಿ ಎಲ್ಲಾ ಆಗಮಗಳು ಪತಿ (ಪರಮಾತ್ಮ), ಪಶು (ಜೀವಾತ್ಮ), ಪಾಶ ಲೌಖಿಕಬಂಧನಗಳು ಇವುಗಳ ಪರಸ್ಪರ ಬಾಂಧವ್ಯಗಳ ಬಗ್ಗೆ ವಿವರವಾಗಿ ತಿಳಿಸುತ್ತವೆ. ಪಶುವು ಪಾಶದಿಂದ ಹೇಗೆ ಮುಕ್ತಿಯನ್ನು ಪಡೆದುಕೊಂಡು ಪತಿಯಲ್ಲಿ ಐಕ್ಯವಾಗುತ್ತದೆ ಎಂಬುದನ್ನು ವಿವರಿಸುತ್ತದೆ.

ಕ್ರಿಯಾಪಾದವು ಮನುಷ್ಯನನ್ನು ಏಕಾಂಗಿಯನ್ನಾಗಿ ಗ್ರಹಿಸದೆ ಅವನನ್ನು ಸಮಾಜದ ಒಂದು ಅಂಗವಾಗಿ ಗ್ರಹಿಸುತ್ತದೆ. ಮನುಷ್ಯನು ಸುತ್ತಲಿನ ಸಮಾಜದ ಬಗ್ಗೆ ಆಸಕ್ತಿಯನ್ನೂ, ಆಸೆಯನ್ನೂ ಇರಿಸಿಕೊಂಡು ಸಮಾಜದಲ್ಲಿ ಪ್ರವೇಶಿಸುತ್ತಾನೆ. ಇವುಗಳ ವ್ಯಕ್ತಿರೂಪವೇ ದೇವಾಲಯ. ಒಬ್ಬನ ಯೋಚನೆಗಳು, ಬಯಕೆಗಳು, ಗುರಿ ಸಮಾಜದ ಇನ್ನೊಬ್ಬರನ್ನು ಪ್ರೇರಿಸುತ್ತದೆ. ಸಮಾಜದಲ್ಲಿ ಒಂದು ಘಟಕವಾಗಿ ಉಳಿಯಲು ಅದರಲ್ಲಿ ಸಾಮಾನ್ಯವಾಗಿ ಅದರಲ್ಲಿಯವನು ತಮ್ಮದೆಂದು ಗುರ್ತಿಸಿಕೊಳ್ಳುವಂತಹ ಚಿಂತನೆ, ಗುರಿ ಮತ್ತು ಚಟುವಟಿಕೆಗಳು ಇರಬೇಕು. ಸಮಾಜವು ಅಮೂರ್ತವೂ ಕೇವಲ ಬೌದ್ಧಿಕವೂ ಅವನ ಭಾವನೆಗಳಿಂದ, ವಿಚಾರಗಳಿಂದ, ತತ್ತ್ವಗಳಿಂದ, ಆಕರ್ಷಿತವಾಗುವುದಿಲ್ಲ. ಅವರು ಆಚಾರ, ಪೂಜಾ ಪದ್ಧತಿಗಳು, ಉತ್ಸವಗಳು, ಯಾತ್ರೆಗಳು ಇತ್ಯಾದಿಗಳಿಂದ ನಿಜವಾಗಿಯೂ ಆಕರ್ಷಿತರಾಗುತ್ತಾರೆ. ಇವುಗಳಲ್ಲಿ ಅವರು ದೈಹಿಕವಾಗಿ ಭಾಗವಹಿಸುವುದರಿಂದ ಈ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಸಮಾಜವನ್ನು ಉತ್ಸವಾದಿಗಳು ಮಾತ್ರವೇ ಅಲ್ಲದೆ ಬಲವಾಗಿ ಒಂದು ಗೂಡಿಸುವುದರಲ್ಲಿ ಸಾಮೂಹಿಕ ಪೂಜೆಗಳ ಪಾತ್ರವು ತುಂಬಾ ಮಹತ್ವವಾದದ್ದು. ಆದ್ದರಿಂದಲೇ ಆಗಮವು ಭಾವನಾತ್ಮಕವಾಗಿರುವ, ಕಲಾಪೂರ್ಣವಾದ ಸಮಗ್ರಾಹ್ಯವಾದ ರೀತಿಯಲ್ಲಿ ಈ ಸಾಮಾಜಿಕ ಪೂಜೆಗೆ ಬುನಾದಿ ಹಾಕಿ ಸಮಾಜವು ಒಡೆಯದಂತೆ ಭದ್ರಗೊಳಿಸುತ್ತದೆ. ಈ ಪೂಜೆಯಲ್ಲಿಯ ಎಲ್ಲಾ ಸಂಕೇತಗಳು ವ್ಯಕ್ತಿಯ ಅಂತರಂಗವನ್ನು ಅರಿತುಕೊಳ್ಳುವುದರಲ್ಲಿ ನೆರವಾಗುತ್ತದೆ. ಇದರಿಂದ ವ್ಯಕ್ತಿಗೂ, ಸಮಾಜಕ್ಕೂ ಪುಷ್ಠಿ ದೊರೆಯುತ್ತದೆ. ಈ ಭಾಗವು ವೇದಗಳ ಯಜ್ಞಗಳಿಗೆ ಸಮಾನಾಂತರದಲ್ಲಿರುವ ಕ್ರಿಯೆ. ಅದಕ್ಕೆಂದೇ ದೇವಾಲಯಗಳಲ್ಲಿ ಯಾಗಶಾಲೆಗಳಿದ್ದು ಈ ರೀತಿಯ ಉತ್ಸವಗಳ ಪ್ರಾರಂಭವನ್ನು ಯಜ್ಞದಿಂದಲೇ ಪ್ರಾರಂಭಿಸಲಾಗುತ್ತದೆ. ಆದರೆ ಇವ್ಯಾವೂ ಆಗಮಶಾಸ್ತ್ರದಲ್ಲಿ ಉಕ್ತವಾದುವಲ್ಲ. ಸೂತ್ರ ಗ್ರಂಥಗಳಿಗೆ ಸೇರಿದವು.

ಸಾಧಕನಾದವನು ಬೌದ್ಧಿಕವಾಗಿ ಜ್ಞಾನ ಪಾದದ ದರ್ಶನವನ್ನು ತನ್ನದಾಗಿಸಿಕೊಳ್ಳಲು ಸಿದ್ಧನಾಗಬೇಕಾದುದರಿಂದ ಈ ಆಧ್ಯಾತ್ಮಿಕ ಸಾಧನೆಗೆ ದೇವಾಲಯದ ಆರಾಧನೆ, ಹಬ್ಬ ಹರಿದಿನಗಳ ಆಚರಣೆ, ಪೂಜಾ ಪದ್ಧತಿಗಳು ನೆರವಾಗುತ್ತವೆ. ಇದಕ್ಕೆ ವ್ಯಕ್ತಿಯ ಬಹಿರಂಗ ಮತ್ತು ಪರಿಸರದ ನೆರವು ಅವಶ್ಯಕ. ಆದ್ದರಿಂದ ವ್ಯಕ್ತಿಯಾದವನ ನಡತೆ, ನಿಯಮ, ವರ್ತನೆ ಅವನ ಕ್ರಿಯೆ ಇವುಗಳನ್ನೆಲ್ಲಾ ಶಿಸ್ತಿಗೆ ಒಳಪಡಿಸಬೇಕಾದದ್ದು ಅನಿವಾರ್ಯ. ಈ ನಿಯಮಗಳನ್ನು ವಿವರಿಸುವುದೇ ಚರ್ಯ ಪಾದ. ಈ ಹಂತದಲ್ಲಿ ಸಾಧಕನಾದವನನ್ನು ಶುದ್ಧಗೊಳಿಸಿ ಅವನು ದೇವರನ್ನು ಕಂಡುಕೊಳ್ಳುವ ಹಾದಿಯಲ್ಲಿ ಸಾಗಲು ಅವನನ್ನು ಅಣಿಗೊಳಿಸುವುದೇ ಈ ಎಲ್ಲಾ ನಿಯಮಗಳ ಪ್ರಧಾನವಾದ ಗುರಿ.

ಈ ರೀತಿಯ ಸಾಧಕನಾದವನು ಎಲ್ಲರ ದೃಷ್ಟಿಗಳ ಕೇಂದ್ರವಾಗಿರುತ್ತಾನೆ. ಈ ಸಾಧಕನು ತನ್ನ ವ್ಯಕ್ತಿಗತ ಜೀವನ, ಸಂಬಂಧಗಳು, ವರ್ತನೆ, ನಡತೆ, ಆಚಾರ-ವಿಚಾರಾದಿಗಳಿಂದ ಸಮಾಜಕ್ಕೆ ಆದರ್ಶವಾಗಿ ನಿಲ್ಲುತ್ತಾನೆ.

ಇಂತಿದ್ದರೂ ಚರ್ಯ ಪಾದದ ನಿಯಮಗಳಲ್ಲಿ ಸ್ವಲ್ಪಮಟ್ಟಿನ ಸಡಿಲತೆ ಇದೆ. ಆದರೆ ಕ್ರಿಯಾಪಾದದಲ್ಲಿ ಆ ರೀತಿ ಯಾವುದೇ ಸಡಿಲತೆ ಇರದೆ ಎಲ್ಲಾ ನಿಯಮಗಳನ್ನು ಕಠೋರವಾಗಿ ಪಾಲಿಸುವುದು ಅನಿವಾರ್ಯ.

ಯೋಗಪಾದವು ಜ್ಞಾನಪಾದದ ನಂತರ ಬರುತ್ತದೆ. ಇದರಲ್ಲಿ ಪಾತಂಜಲ ಯೋಗದಂತೆ ಕೇವಲ ದೈಹಿಕ ನಿಯಮಗಳನ್ನು ಪಾಲಿಸಿ ನಿಯಂತ್ರಣವನ್ನು ಪಾಲಿಸಿ ನಿಯಂತ್ರಣವನ್ನು ಗಳಿಸಿಕೊಳ್ಳುವುದರೊಂದಿಗೆ ಸಾಧಕನ ಬದುಕನ್ನು ಶುದ್ಧಿಗೊಳಿಸಿ ಜ್ಞಾನದಿಂದ ಗಳಿಸಿಕೊಂಡ ಸತ್ಯವನ್ನು ತನ್ನ ನಿಯಮಬದ್ಧ ಜೀವನಕ್ಕೆ ಅಳವಡಿಸಿ ಅದನ್ನು ಆದರ್ಶೀಕರಣಗೊಳಿಸುವ ಪ್ರಯತ್ನ ನಡೆಯುತ್ತದೆ. ಸಾಧಾರಣ ಜನರ ದೃಷ್ಟಿಯಿಂದ ಈ ಪಾದಗಳು ಮೊದಲಿಗೆ ಸರಳವಾದ ಚರ್ಯಪಾದ, ನಂತರ ಕಠಿಣವಾದ ಕ್ರಿಯಾಪಾದ ತರುವಾಯ ಮನಸ್ಸನ್ನು ನಿಯಂತ್ರಿಸಬಲ್ಲ ಯೋಗ ಪಾದ. ಅಂತಿಮವಾಗಿ ಜ್ಞಾನ ಪಾದವಿರಬೇಕು ಎನಿಸಿದರೂ ಆಗಮಗಳಲ್ಲಿ ಈ ರೀತಿಯಾಗಿ ವಿವರಿಸಿಲ್ಲ.

ಆಗಮಗಳಲ್ಲಿ ಪ್ರತ್ಯೇಕವಾದ ತತ್ತ್ವವಿದೆ. ಇದನ್ನು ವಿಶಿಷ್ಟವೆಂದು ಗುರುತಿಸುತ್ತಾರೆ.

ಈ ವಿಷಯದ ಬಗ್ಗೆ ನಮ್ಮ ಇಂದಿನ ಚರ್ಚೆ ಮುಗಿಸುವ ಮೊದಲು ಕ್ರಿಯಾ ಪಾದದಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ನಾವು ತಿಳಿಯಲೇಬೇಕೆಂದು ಮೂರು ಜಾವಿ ದೇವರು ಹೇಳಿದರು. ಅದೇನೆಂದರೆ ಇದರಲ್ಲಿ ಜ್ಯೋತಿಷ್ಯ ಶಾಸ್ತ್ರದ ಕೆಲವು ಭಾಗಗಳು ಇವೆ. ಭೂ ಪರೀಕ್ಷಣ ಸೂಕ್ತ ಭೂಮಿಯ ಆಯ್ಕೆ, ಆ ಭೂಮಿಯನ್ನು ಉಳುವುದು, ಉಳುಮೆಗೆ ಬಳಸುವ ಗೋವುಗಳ ಗುಣಲಕ್ಷಣಗಳು, ನಗರ ಯೋಜನೆ. ಶಿವ-ವಿಷ್ಣು ಮುಂತಾದ ದೇವಾಲಯಗಳ ಸ್ಥಾನ, ನಗರದಲ್ಲಿ ಆಯಾ ಭಾಗಗಳಲ್ಲಿ ವಾಸಿಸುವವರ ಗುಣ ಧರ್ಮಗಳಿಂದ ಅಗ್ರಹಾರ, ಗ್ರಾಮ, ನಗರ, ಪಟ್ಟಣ ಸೇನಾ ಸ್ಥಾನ ಮುಂತಾಗಿ ಹೆಸರುಗಳು ಬರುತ್ತವೆ. ಈ ಪಾದದಲ್ಲಿ ವಾಸ್ತುಶಿಲ್ಪವನ್ನು ವಿಪುಲವಾಗಿ ವಿವರಿಸಲಾಗುತ್ತದೆ.

ದೇವಾಲಯಗಳು, ಅರಮನೆಗಳು, ಕೋಟೆಗಳು ಮಾತ್ರವಲ್ಲದೆ ಶ್ರೀ ಸಾಮಾನ್ಯರ ನಿವಾಸಗಳ ಬಗ್ಗೆಯೂ ಇಲ್ಲಿ ಹೇಳಲಾಗುತ್ತದೆ. ಮಂಟಪ, ಪ್ರಾಕಾರ, ವಿಮಾನ, ಗೋಪುರಗಳನ್ನು ಬುನಾದಿಯಿಂದ ಶಿಖರದ ತನಕ ವಿವರವಾಗಿ ಹೇಳಲಾಗಿದೆ.

ಈ ಪಾದದಲ್ಲಿ ವಿವರವಾಗಿ ಹೇಳಲಾಗಿರುವ ಇನ್ನೊಂದು ಅಂಶವೆಂದರೆ ಪ್ರತಿಮಾ ಶಿಲ್ಪ. ಶಿಲೆ ಹಾಗೂ ಲೋಹದ ಎರಡು ರೀತಿಯ ಮೂರ್ತಿಗಳ ಕಾಲಮಾನ, ಎತ್ತರ, ಮೂರ್ತಿಗಳ ಪ್ರತಿಷ್ಠೆ ಇತ್ಯಾದಿಗಳು ಒಂದು ಭಾಗವಾದರೆ, ವಿವಿಧ ಮೂರ್ತಿಗಳ ಧ್ಯಾನ ಶ್ಲೋಕಗಳು, ರೂಪಗಳು, ವಾಹನಗಳು, ಆರಾಧನಾ ಕ್ರಮಗಳು ವಿವರವಾಗಿ ಹೇಳಲಾಗಿದೆ.

ಈ ಪಾದದಲ್ಲಿ ವಿವರವಾಗಿ ಹೇಳಲಾಗಿರುವ ಇನ್ನೊಂದು ಅಂಶವೆಂದರೆ ಪ್ರತಿಮಾ ಶಿಲ್ಪ. ಶಿಲೆ ಹಾಗೂ ಲೋಹದ ಎರಡು ರೀತಿಯ ಮೂರ್ತಿಗಳ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ಅವುಗಳ ಕಾಲಮಾನ, ಎತ್ತರ, ಮೂರ್ತಿಗಳ ಪ್ರತಿಷ್ಠೆ ಇತ್ಯಾದಿಗಳು ಒಂದು ಭಾಗವಾದರೆ, ವಿವಿಧ ಮೂರ್ತಿಗಳ ಧ್ಯಾನ ಶ್ಲೋಕಗಳು, ರೂಪುಗಳು, ವಾಹನಗಳು, ಆರಾಧನಾ ಕ್ರಮಗಳು ವಿವರವಾಗಿ ದೊರೆಯುತ್ತವೆ.

ಇದಿಷ್ಟು ಆಗಮಗಳ ಬಗ್ಗೆ ವಿವರಗಳನ್ನು ತಮ್ಮ ಪ್ರವಚನದಲ್ಲಿ ಮೂರು ಜಾವಿ ದೇವರು ವಿವರಿಸಿದರು. ಇವರು ಆಗಮಗಳು ಜನಜೀವನದಲ್ಲಿ ಐಕ್ಯತೆ, ಸಹಕಾರಗಳನ್ನು ಬಿತ್ತುತ್ತವೆ. ವೇದಗಳು ಕೇವಲ ದ್ವಿಜರಿಗೆ ಮಾತ್ರವೇ ವೇದಾಧ್ಯಯನದ ಹಕ್ಕನ್ನು ಕೊಡುತ್ತದೆ ಎಂದು ವಿವರಿಸುತ್ತಾ ಆಗಮಗಳು ಎಲ್ಲರ ಏಳಿಗೆಗೆ ಎಂಬುದನ್ನು ಸಾರಿದರು.

ಮೂರುಜಾವಿ ಪಂಥ ಬಹುಪಂಥಿಯ ಅನುಸಂಧಾನ

. ಲಾಕುಳಶೈವ

ನಾಗಾರ್ಜುನ ಕೃತ ‘ಕಕ್ಷಪುಟ’ ಎಂಬ ಗ್ರಂಥವೊಂದು ಬೆಳಗಾವಿ ಅಬಾಜಿ ರಾಮಚಂದ್ರ ಸಾವಂತರ ಶ್ರೀರಾಮ ತತ್ವ ಪ್ರಕಾಶ ಅಚ್ಚುಕೂಟದಲ್ಲಿ ಕ್ರಿ.ಶ. ೧೮೧೯ರಲ್ಲಿ ಅಚ್ಚಾಗಿದೆ. ಭಾಷೆ ಸಂಸ್ಕೃತ ಅದರಲ್ಲಿ ಅಥರ್ವಣ ವೇದೋಕ್ತ ಮಂತ್ರ ಸಾಧನ ಅಂದರೆ ಚಾರಣ, ಮಾರಣ, ಉಚ್ಛಾಟನ, ಸ್ತಂಭನ, ಮಕೋಹನ, ವಶೀಕರಣ, ಜಲಸ್ತಂಭನ ಸೇನಾ ಸ್ತಂಭನ, ಅನೇಕ ರೂಪಧಾರಣ, ಯಕ್ಷಿಣಿ, ವಿದ್ಯಾ ಸಾಧನ, ಚೇಟಕ, ಅಂಜನ, ದಿವ್ಯದೃಷ್ಟಿ, ಅದೃಶ್ಯವಾಗುವುದು, ಪಾದುಕಾ ಸಾಧನ, ಗುಟಿಕಾ ಧಾರಣ, ಅಂತರಿಕ್ಷ ಗಮನ, ಇಂದ್ರ ಜಾಲವಿದ್ಯಾ, ಕ್ಷುತ್ಪಿಪಾಸಾನಿವಾರಣ, ಅಮೃತ ಸಂಜೀವನೀ ವಿದ್ಯಾ, ಶಾಬರ ಮಂತ್ರ ಇತ್ಯಾದಿ ಗುಹ್ಯ ವಿಷಯಗಳಿವೆ.

ಗ್ರಂಥಕಾರನು ಯಾವ ಕಾಲದ ನಾಗಾರ್ಜುನನೋ ತಿಳಿಯದು. “ಯದುಕ್ತಂ ಹಿ ಶಾಸ್ತ್ರೆಷು ತತ್ಸರ್ವಮಮಲೋಕಿತಂ “ಇತ್ಯೈವಮಾ ಗಮೋಕ್ತಂ” ಎಂದಿರುವುದರಿಂದ, ಈ ತಂತ್ರ ಗ್ರಂಥಗಳಿಗೆ ಶಾಸ್ತ್ರವೆಂದೂ ಆಗಮಗಳೆಂದೂ ಕರೆದಿದ್ದಾನೆ. ಈ ತಂತ್ರಶಾಸ್ತ್ರಗಳಲ್ಲಿ “ಲಾಕುಳವು” ಒಂದಾಗಿದೆ. ಇದರಿಂದ ಲಾಕುಲಾಗಮವು ಸ್ವತಂತ್ರ ಆಗಮವಿದ್ದಂತೆ ತೋರುವುದು.

ಹರಪನಹಳ್ಳಿ ತಾಲೂಕಿನ ಗಡಿಹಳ್ಳಿಯ ಶಾಸನದಲ್ಲಿ (SI. Inscriptions Madras No. 128-1065) ಶ್ರೀ ಪರ್ವತದ ಅಗಸ್ತೇಶ್ವರ ಸಂತತಿ ಮಠದ ತಪೋಧನರಾದ ದಿವ್ಯ ಶಕ್ತಿ ಪಂಡಿತ ಮತ್ತು ವಾಮಶಕ್ತಿ ಪಂಡಿತ ದೇವರನ್ನು ವರ್ಣಿಸುವಾಗ “ಲಾಕುಳ ದೇವಾಗಮದೀಲೋಕ ಜನ ಸ್ತುತ್ಯಮಾಗೆ” ಎಂದಿರುವುದರಿಂದಲೂ ಲಕುಳೀಶ್ವರನಿಂದ ಹೇಳಲ್ಪಟ್ಟ ತಂತ್ರಕ್ಕೆ ಶಾಸ್ತ್ರವೆಂದೂ, ಲಾಕುಳಾಗಮವೆಂದೂ ಎನ್ನುವ ರೂಢಿಯಿದ್ದಿತೆಂದು ಕಂಡು ಬರುವುದು.

ಕರ್ನೂಲ, ನಂದಿಕೊಟ್ಟೂರದ ಶಾಸನದಲ್ಲಿ (SI. Inscriptions Madras No. 134-1064) ಶ್ರೀಪರ್ವತದ ಮಾಸಂಗಿಯ ಬ್ರಹ್ಮೇಶ್ವರದಾಚಾರ್ಯ ಗಂಗರಶಿ ಭಟ್ಟಾರಕರ ಶಿಷ್ಯರಾದ ಸುರೇಶ್ವರ ಪಂಡಿತರನ್ನು ಕಾಳಾಮುಖ ಸಮಯ ಸರೋವರ ರಾಜಹಂಸರ್, ಲಾಕುಳಸಿದ್ಧಾಂತ ನೈಯಾಯಿಕ, ನಳಿನಿ ದಿವಾಕರರ್ ಮಧ್ಯಾಹ್ನದ ಕಳ್ಪ ವೃಕ್ಷರ್, ಗುರುಕುಳ ಸಮುದ್ಧರಣರ್, ಶ್ರೀಶೈಲ ಪಶ್ಚಿಮ ದ್ವಾರ ತೋರಣರ್ ಶ್ರೀ ಮಲ್ಲಿಕಾರ್ಜುನ ದೇವ ದರ್ಶನ ಕಾರಣ ಪುರುಷರ್ ಮುಂತಾಗಿ ವರ್ಣಿಸಲಾಗಿದೆ (ಸೊರಬ ನಂ. ೨೭೫) ಶಾಸನದಲ್ಲಿ ಶ್ರೀ ಸ್ವಯಂ ಭೂ ಕೋಟಿನಾಥ ದಿವ್ಯ ಶ್ರೀಪಾದ ಪದ್ಮಾರಾಧಕರಾದ ರುದ್ರಶಕ್ತಿ ದೇವರಿಗೆ ಎಕ್ಕೋಟಿ ಸಮಯ ಚಕ್ರವರ್ತಿ ಎನ್ನಲಾಗಿದೆ.

ಒಟ್ಟಿನ ಮೇಲೆ ಲಾಕುಳಶಾಸ್ತ್ರ, ಲಾಕುಳಾಗಮ, ಲಾಕುಳ ಸಿದ್ಧಾಂತ, ಲಾಕುಳ ಸಮಯ, ಎಕ್ಕೋಟಿ ಸಮಯ ಇವೆಲ್ಲ ಒಂದೇ ಸಂಪ್ರದಾಯದ ಪರ್ಯಾಯ ನಾಮಗಳೆಂದು ಶಾಸನ ಅಭ್ಯಾಸದಿಂದ ಕಂಡು ಬರುತ್ತದೆ. ಈ ಲಾಕುಳ ಸಂಪ್ರದಾಯವು ಕಾಳಾಮುಖ ಸಮಯವನ್ನು ಒಳಗೊಂಡಿದೆ. ಸುಮಾರು ಕ್ರಿ.ಶ. ೧೨೦೦ ರಿಂದ ಈ ಸಂಪ್ರದಾಯದಲ್ಲಿ ಪರಿವರ್ತನೆಯಾದಂತೆ ಕಂಡು ಬರುತ್ತದೆ. ಅದಕ್ಕಾಗಿ ವಾಗಿಲಾಕುಳ ಸಮಯ, ವಾಗಿಲಾಕುಳ ಹೊಸ ಸಮಯವೆಂದೂ, ಶಾಸನಗಳಲ್ಲಿ ಉಕ್ತವಾಗಿದೆ.

ಕಾಳಾಮುಖ

ಲಾಕುಳ ಸಿದ್ಧಾಂತಗಳಲ್ಲಿ ಎಲ್ಲರೂ ಕಾಳಾಮುಖರಲ್ಲ; ಕೆಲವರಿಗೆ ಮಾತ್ರ ಕಾಳಾಮುಖರೆಂದು ವರ್ಣನೆ ಬರುವುದು. ಹಗರಟೆಗೆ ನಾಗೇಶ್ವರ ದೇವರ ಕುಂದಜೀಯವರ ಪುತ್ರ ಪದ್ಮಶಿವ ಪಂಡಿತರ ಶಿಷ್ಯ ಕಾಳಾಮುಖ ಪ್ರತಿಬದ್ಧ ನಾಗರಾಶಿಯ ಶಿಷ್ಯ ಮಾದಜೀಯ (ಅರಸಿಕೆರೆ, ನಂ. ೬೮, ೧೧೭೬) ಮತ್ತು ಕಾಳಾಮುಖ ಪ್ರತಿಬದ್ಧ ರುಮಪ್ಪ ನಾಗರಾಶಿ ಪಂಡಿತರ ಶಿಷ್ಯ, ಶಿವಶಕ್ತಿ ದೇವರ ಶಿಷ್ಯ ದೇವರ ಶಿಷ್ಯ ಕಲ್ಯಾಣ ಶಕ್ತಿ ಪಂಡಿತರು (ಅರಸಿಕೆರೆ, ನಂ. ೪೮-೧೧೨೯) ಕಾಳಾಮುಖ ದೀಕ್ಷಿತರಪ್ಪ ಶ್ರೀಮತು ಜಗತೇಶ್ವರ ಪಂಡಿತರು (ಅರಸಿಕೆರೆ ನಂ. ೪೨-೧೦೯೫) ಎಂದು ಬಂದಿರುವುದರಿಂದ ಕಾಳಾಮುಖ ದೀಕ್ಷಿತ, ಕಾಳಾಮುಖ ಪ್ರತಿಬದ್ಧ ಎಂಬೀ ಪ್ರಶಸ್ತಿಗಳು ವಿಶಿಷ್ಟ ದೀಕ್ಷೆ ಪಡೆದವನು ಬ್ರಾಹ್ಮಣಾಧಮನಾಗುವನೆಂದು ನಿಂದಿಸಲಾಗಿದೆ. ಲಾಕುಳ ಸಿದ್ಧಾಂತದ ಆ ವಿಶಿಷ್ಟ ದೀಕ್ಷೆಯ ಸ್ವರೂಪವೆನಿತ್ತೋ ಈಗ ತಿಳಿದುಕೊಳ್ಳಲು ಸಾಧ್ಯವಿಲ್ಲ. ಲಾಕುಳಾಗಮವು ದೊರೆತಾಗ ಮಾತ್ರ ಅದನ್ನು ತಿಳಿಯಬಹುದು. ಸೊರಬದ (ನಂ. ೨೭೫) ಶಾಸನದಲ್ಲಿ “ನಿತ್ಯ ಜ್ಞಾನಾನಂದ ಪರಶಿವ ಸ್ವರೂಪಾವಲೋಕನ ತತ್‌ಸ್ವರೂಪರುಂ ಯತಿ ಸಾರ್ವಭೌಮರುಂ, ಯಕ್ಕೋಟೆ ಸಮಯ ಚಕ್ರವರ್ತಿ ಸಪ್ತಾಹತರಿ ಸ್ಥಾನಚಾರ್ಯರಾದ ಕಾಳಾಮುಖ ವ್ರತಾನ್ವಯ ಶೀಲಗುಣಂ, ಶಿವಕಥಾದ್ಯನೇಕ ಸ್ಮೃತರ್ಥಾಳಂಕಾರ ಸುವಕ್ಯಪಾಳಿತ, ಸಜ್ಜನವಿನುತಯತಿ ಸರ್ವೇಶಂ” ಎಂಬುದಾಗಿರುವುದರಿಂದ ಕಾಳಾಮುಖ ಸಮಯಕ್ಕೇನೆ ಎಕ್ಕೋಟೆ-ಸಮಯ ಎಂದು ಕರೆಯಲಾಗಿದೆ.

ಕಾಳಾಮುಖ ವ್ರತಾನ್ವಯವೆಂದರೆ, ಕಾಳಾಮುಖವೆಂಬ ವಿಶಿಷ್ಟ ದೀಕ್ಷೆ ಹೊಂದಿ ವ್ರತವನ್ನು ಆಚರಿಸುತ್ತಿರುವುದು ಎಂಬುದು ಸ್ಪಷ್ಟವಿದೆ. ಇಂಥವರು ಯತಿಗಳಾಗಿಯೂ ವ್ರತಿಗಳಾಗಿಯೂ ಇರುತ್ತಿದ್ದುದರಿಂದ ಇಂತಹವರಿಗೆ ಮುನಿಗಳೆಂದೂ, ಮುನೀಂದ್ರರೆಂದೂ ಕರೆಯಲಾಗಿದೆ. ಶಾಸನಗಳ ಫಲಶ್ರುತಿಯಲ್ಲಿ ಏಳ್ಕೋಟಿಯ ಮುನೀಂದ್ರ ಕೊಂದ ದೋಷವನ್ನು ಹೇಳುವಾಗ ಇಂಥ ಕಾಳಾಮುಖ ಯತಿಗಳಾದ ಮುನಿಗಳೆಂದೇ ಅರ್ಥವು. ಎಕ್ಕೋಟಿ ಸಮಯ ಚಕ್ರವರ್ತಿ ಎಂದಲ್ಲಿ ಸಮಯ ಶಬ್ದವು ಸಂಪ್ರದಾಯ ಎಂಬರ್ಥದಲ್ಲಿದೆ. ಏಳುಕೋಟೆ ಮಂತ್ರಗಳನ್ನು ಮಂತ್ರೇಶ್ವರರನ್ನೂ ಪ್ರತಿಪಾದಿಸುವ ಸಮಯ ಅಥವಾ ಸಂಪ್ರದಾಯವು ಇದಾಗಿದೆ.

ಈಗಿನ ಶೈವ ಸಿದ್ಧಾಂತದಲ್ಲೂ ಈ ಪ್ರಕ್ರಿಯೆಗಳುಂಟು. ಇಂತಹ ಲಾಕುಳಯತಿಗಳಿಗೆ ವ್ರತಿ, ಮಹಾವ್ರತಿ, ಮುನಿಗಳು, ಗೊರವರ್ ಎಂದು ಹೆಸರು ಬರುತ್ತದೆ. ಶಾಸನಗಳಲ್ಲಿ ಲಾಕುಳ ಸಿದ್ಧಾಂತದ ಅನುಯಾಯಿಗಳಾದ ಶೈವ ಗುರುಗಳ ಪಂಗವೊಂದಿದ್ದ ಆ ಪಂಗಡದವರಲ್ಗಲಿಯೇ ಯತಿ, ಮುನಿ, ಮಹಾವ್ರತಿಗಳಾಗುತ್ತಿದ್ದರು.

ಶ್ರೀ ವಿ.ಜಿ. ದೀಕ್ಷಿತರು ಕಾಳಾಮುಖ ರಾಜಗುರು “ವಾಮಶಕ್ತಿ ಪಂಡಿತ” ಎಂಬ ವಿಶ್ವಕರ್ಮ ಸಮಾಜ ದರ್ಶನ – ವಾರ್ಷಿಕ ವಿಶೇಷಾಂಕ ೧೯೯೮ರ ವಿಶೇಷಾಂಕ ಲೇಖನದಲ್ಲಿ ಕಾಳಾಮುಖ ರಾಜ ಗುರುಗಳ ಕುರಿತು ಸಂಶೋಧನ ಲೇಖನ ಸಾರ ಹೀಗಿದೆ.

ಕರ್ನಾಟಕದ ಮಧ್ಯಯುಗದ ಇತಿಹಾಸದಲ್ಲಿ ವಿಶ್ವಬ್ರಾಹ್ಮಣರ ವಂಶ ವೈಭವವು ಹೇಗೆ ಪ್ರಜ್ವಲಿಸಿ ಕರಗುತ್ತ ಬಂದಿತ್ತೆಂಬುದು ಕಾಳಾಮುಖ ರಾಜಗುರುಗಳ ಮಹಿಮೆ, ವಿದ್ಯೆ, ತಪಸ್ಸು, ಲೋಕಕಲ್ಯಾಣ ಕಾರ್ಯಗಳಿಂದ ವಿಧಿತವಾಗುತ್ತದೆ. ಈ ಗುರು ಪರಂಪರೆಯು ಇಂದಿಗೂ ಅಸ್ತಿತ್ವದಲ್ಲಿದ್ದರೂ ಸಹ ಬಹು ಜನರಿಗೆ ಆ ವಿಷಯವು ತಿಳಿದಿರುವುದಿಲ್ಲ. ಕರ್ನಾಟಕದ ಸುಮಾರು ಒಂದು ಸಾವಿರ ವರ್ಷಗಳ ಶಿಲಾಶಾಸನಗಳನ್ನು ನಾವು ಪರಿಶೀಲಿಸಿದರೆ ಈ ಮಹತ್ತರ ತಪಸ್ಸಿನ ತೇಜ, ಮಹಿಮೆ ಕಣ್ಣು ಕುಕ್ಕಿಸುವಂಥದಿದ್ದು ಹದಿನೈದನೇ ಶತಮಾನದ ನಂತರ ಈ ಗುರುಪರಂಪರೆಯಲ್ಲಿ ಮಾಯವಾಯಿತು ಎನ್ನುವಷ್ಟರವರೆಗೆ ಪ್ರಭಾವವು ಇಳಿಮುಖವಾಗಿ ಎಷ್ಟೋ ಜನರು ಈ ಕಾಳಾಮುಖ ರಾಜಗುರುಗಳೇ ಇತಿಹಾಸದಿಂದ ಮಾಯವಾಗಿ ಹೋದರೆಂದು ತಪ್ಪಾಗಿ ಬರೆಯುತ್ತಿದ್ದಾರೆ. ಆದರೆ ದುರ್ದೈವದಿಂದ ಆ ಅನ್ಯಮತೀಯ ವಿದ್ವಾಂಸರಿಗೆ ಕಾಳಾಮುಖ ಸಂಪ್ರದಾಯ ಯಾವೆಂದರೆ ಯಾರದು ಮತ್ತು ವಂಶಸ್ಥರು ಏನಾಗಿದ್ದಾರೆಂಬುದು ಕೊಂಚವು ತಿಳಿಯುವುದಿಲ್ಲ. ಕಾಳಾಮುಖ ಗುರುಗಳ ಪರಂಪರೆಯತು ವಿಶ್ವಬ್ರಾಹ್ಮಣ ಧರ್ಮ ಗುರುಗಝಳ ಪರಂಪರೆಯೇ ಆಗಿದೆ.

ಕರ್ನಾಟಕದ ಮಹಾಮಹಾವಿದ್ವಾಂಸರು ಇವರ ಬಗ್ಗೆ ಚರ್ಚಿಸುವಾಗ ಈ ಸಂಪ್ರದಾಯ ವಿಶ್ವಕರ್ಮರದು ಎಂದು ಹೇಳದೇ ಹೋಗುವುದು ಅತ್ಯಂತ ದುರ್ದೈವದ ವಿಷಯವಾಗಿದೆ. ಕೆಲ ಪಂಡಿತರಿಗೆ ಇದು ಗೊತ್ತಿದ್ದರೂ ಇರಬಹುದು. ಆದರೆ ಅಲ್ಪಸಂಖ್ಯಾತರ ಸಣ್ಣ ಸಮಾಜವಾಗಿರುವ ವಿಶ್ವಕರ್ಮರ ಇಂದಿನ ಸ್ಥಿತಿಯನ್ನು ನೋಡಿ ಬಹುಶಃ ಇಂಥಾ ಉದಾತ್ತ ಪರಂಪರೆ ಇವರಿಗೇನಿದ್ದೀತು ಎಂಬ ಅಲಕ್ಷತನದಿಂದಲೂ, ಕಡೆಗಣಿಸಿರಲೂಬಹುದು. ಕಾಳಾಮುಖ ರಾಜಗುರುಗಳ ಲೋಕ ವಿಖ್ಯಾತವಾದ ವಿದ್ಯೆ, ತಪಸ್ಸು ಸದಾಚಾರ ಮಹಿಮೆಗಳು ಅಗಾಧವಾಗಿದ್ದವು. ತಪಸ್ಸು ಸದಾಚಾರ, ಮಹಿಮೆಗಳು ಅಗಾಧವಾಗಿದ್ದವು. ಅವರು ಪ್ರತಿಯೊಂದು ಊರಿನ ಈಶ್ವರ ದೇವಾಲಯದ ಅರ್ಚಕರಾಗಿಯೂ, ಧರ್ಮಾಧಿಕಾರಿಗಳಾಗಿಯು, ರಾಜಗುರುಗಳಾಗಿಯೂ ಮೆರೆದು ತಮ್ಮ ಅಲೌಕಿಕ ಮಹಿಮಾತಿಶಯದಿಂದ ಜನಜೀವನದಲ್ಲಿ ಪೂಜ್ಯ ಹಾಗೂ ಗುರುವಿನ ಸ್ಥಾನವನ್ನು ಪಡೆದಿದ್ದರು. ಸ್ಥಾಪತಿಗಳೆಂಬ ಶ್ರೇಷ್ಠ ಬಿರುದನ್ನು ಪಡೆದಿದ್ದ ಈ ಮಹಾತ್ಮರು ೬೪ ವಿದ್ಯೆಗಳಲ್ಲಿ ಪಾರಂಪಗತವಾಗಿದ್ದರು. ದೇವಾಲಯದ ಅಂಗಭೋಗ, ರಂಗಭೋಗಗಳಿಗೆ ಹಾಗೂ ಜೀರ್ಣೋದ್ಧಾರಕ್ಕೆ ರಾಜ ಮಹಾರಾಜರಿಂದ ದತ್ತಿಗಳನ್ನು ಪಡೆದು ಸದ್ವಿನಿಯೋಗ ಮಾಡುತ್ತಿದ್ದರು. ರಾಜಮಹಾರಾಜರು ಅವರ ಪಾದಗಳನ್ನು ತೊಳೆದು ಭೂಮಿಗಳನ್ನು ದತ್ತಿ ಬಿಡುತ್ತಿದ್ದರು. ದೇವರ ಅರ್ಚನೆಯನ್ನು ಮಾಡಿ ರೋಗಗಳ ಹಾವಳಿಯನ್ನೂ, ಭೂತ-ಪಿಶಾಚಿಗಳ ಹಾವಳಿಯನ್ನು ಮಂತ್ರ-ತಂತ್ರಗಳಿಂದ ರಕ್ಷಿಸುತ್ತಿದ್ದರು. ಎಲ್ಲ ರೋಗಗಳಿಗೆ ಔಷಧವನ್ನು ಕೊಡುತ್ತಿದ್ದರು. ವಿದ್ಯಾರ್ಥಿಗಳಿಗೆ ಔಷಧವನ್ನು ಕೊಡುತ್ತಿದ್ದರು. ವಿದ್ಯಾರ್ಥಿಗಳಿಗೆ ಅನ್ನ ಛತ್ರಗಳನ್ನಿಟ್ಟು, ವಿದ್ಯಾಲಯಗಳನ್ನು ನಡೆಯಿಸಿ ವಿದ್ಯಾದಾನ ಮಾಡುತ್ತಿದ್ದರು.

ಭಿಕ್ಷುಕರಿಗೆ, ಅಸಹಾಯಕರಿಗೆ ಅನ್ನದಾನವನ್ನು ಮಾಡುತ್ತಿದ್ದರು. ಜೀವನದಲ್ಲಿ ನಿರಾಶರಾದವರಿಗೆ ದಾರಿಯನ್ನು ತೋರಿಸುತ್ತಿದ್ದರು. ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆಯನ್ನು ತಮ್ಮ ತಪಃಶಕ್ತಿಯ ಪ್ರಭಾವದಿಂದ ಶಾಪ ಅನುಗ್ರಹ ಶಕ್ತಿಯುಳ್ಳವರಾಗಿ ಸಮಾಜದಲ್ಲಿ ಸದಾಚಾರ, ನೀತಿಗಳು ಉಳಿಯುವಂತೆ ಪ್ರಯತ್ನಿಸುತ್ತಿದ್ದರು. ಆದ್ದರಿಂದಲೇ ಸರ್ವರೂ ಅವರಿಗೆ ಭಯ ಭಕ್ತಿಗಳಿಂದ ನಡೆದುಕೊಳ್ಳುತ್ತಿದ್ದರು. ಇಂಥ ಕಾಳಮುಖ ರಾಜಗುರುಗಳ ಸಂತತಿಯವರು ಇಂದಿಗೂ ಇದ್ದಾರೆ. ಈ ಸಂತತಿಯ ಗುರುಗಳು ಮೂರುಝೂವಾದ ಸ್ವಾಮಿಗಳೆಂದೂ, ಕಾಳಹಸ್ತಾಚಾರ್ಯ ವಂಶಜರಾದ ಆನೆಗುಂದಿ ಪೀಠಾಧಿಕಾರಿಗಳೆಂದೂ ಕರೆಯಲ್ಪಡುತ್ತಿದ್ದು, ಇಂದಿಗೂ ಅಲ್ಲಲ್ಲಿ ಮಠಗಳಲ್ಲಿ ಇದ್ದಾರೆ. ಆದರೆ ಇವರೆಲ್ಲರೂ ಸಂಸಾರಿಗರೆಂಬುದು ಮರೆಯುವಂತಿಲ್ಲ. ಈ ಗುರುಗಳು ಸನ್ಯಾಸಿಗಳಾಗದೇ ಸಂತತಿಯನ್ನು ಮುಂದುವರೆಸುತ್ತ ತಮ್ಮ ಪೀಠದ ಪರಂಪರೆಯನ್ನು ಮುಂದುವರೆಸಿದ್ದಾರೆ. ವಿಶ್ವಕರ್ಮ ಸಮಾಜವು ದಿನದಿನಕ್ಕೆ ಅಲ್ಪಸಂಖ್ಯಾತರದ್ದಾಗುತ್ತ ನಡೆದಿರುವುದರಿಂದ ಈ ಮಠಗಳೂ ರಾಜಾಶ್ರಯವಿಲ್ಲದೆ, ಶೂರರ, ವಿಚಾರವಂತರ ಆಶ್ರಯವಿಲ್ಲದೇ ತನ್ನ ಮೊದಲಿನ ವೈಭವದ ತೇಜವನ್ನು ಕಳೆದುಕೊಳ್ಳುತ್ತ ನಡೆದಿವೆ. ಇದು ವಿಶ್ವಕರ್ಮರ ವಂಶ ವೈಭವದ ಅವನತಿಯನ್ನೂ, ದುರುವಸ್ಥೆಯನ್ನು ತೋರಿಸುತ್ತದೆ. ಆದರೆ ಇಂದಿಗೂ ಈ ಸಂಪ್ರದಾಯದ ಗುರುಗಳು ಸಕಲ ವಿದ್ಯೆಗಳನ್ನು, ತಪಶ್ಯಕ್ತಿಯನ್ನು ಪಡೆದು ಪವಾಡ ಪುರುಷರಾಗಿದ್ದು ಸಮಾಜದ ಪ್ರಚಾರವಿಲ್ಲದ ಬೂದಿ ಮುಚ್ಚಿದ ಕೆಂಡದಂತೆ ಅಜ್ಞಾತರಾಗಿದ್ದಾರೆ.

ವಿಶ್ವಕರ್ಮರಲ್ಲಿಯೇ ಮಹಾತ್ಮರು ಬಹುಸಂಖ್ಯೆಯಲ್ಲಿ ಏಕೆ ಹುಟ್ಟಿ ಬಂದರೆಂಬುದಕ್ಕೆ ಈ ಕಾಳಾಮುಖ ಗುರುಗಳ ಉದಾತ್ತ ಪರಂಪರೆಯೇ ಕಾರಣವೆನ್ನಬಹುದು. ಇಂದಿನ ವಿಶ್ವಕರ್ಮರು ಪೂರ್ವದ ಸಂಪತ್ತನ್ನು ಕಳೆದುಕೊಂಡಿರಬಹುದು. ಆದರೆ ಕೆಲವರಾದರೂ ಸದಾಚಾರಿಗಳಾಗಿರುವುದರಿಂದಲೇ ಮಹಾತ್ಮರು ಹುಟ್ಟುತ್ತಲೇ ಬಂದಿದ್ದಾರೆ. ಸಚ್ಚಾರಿತ್ರ್ಯ, ಲೋಕ ಕಲ್ಯಾಣಗಳಿಂದಲೇ ಈ ಸಮಾಜವು ವೈಭವದಿಂದ ಮೆರೆದಿದ್ದಿತು. ಬರಬರುತ್ತ ಅವು ಕಡಿಮೆ ಆಗಿರುವುದರಿಂದಲೇ ನಮಗೆ ದುರವಸ್ಥೆ ಬಂದಿದೆ.

ಕರ್ನಾಟಕದ ಮಧ್ಯಯುಗದ ಶಾಸನಗಳಲ್ಲಿ ಕಾಳಾಮುಖ ರಾಜಗುರುಗಳು ಬರಬರುತ್ತ ತಮ್ಮತನವನ್ನು ಮರೆತು ವೈಯಕ್ತಿಕ ಸ್ವಾರ್ಥಕ್ಕಾಗಿ ತಮ್ಮ ತಮ್ಮಲ್ಲಿ ಹೊಡೆದಾಡಿದ ವಿವರಗಳೂ ಸಹ ದೊರೆಯುತ್ತವೆ. ೧೨ನೆಯ ಶತಮಾನದಲ್ಲಿ ಕಿತ್ತೂರಿನ ಶಿಲಾಶಾನ (ಬೆಳಗಾವಿ ಜಿಲ್ಲೆ) ಮತ್ತು ಹಂಪೆಯ ಕೃಷ್ಣದೇವರಾಯನ ಕ್ರಿ.ಶ. ೧೫೨೦ರಲ್ಲಿ ಬರೆಯಲ್ಪಟ್ಟ ತಾಮ್ರಶಾಸನ ಪ್ರಮುಖವಾಗಿವೆ. ಬರಬರುತ್ತ ಈ ಗುರುಗಳು ಲೌಖಕಿಕ ಭೋಗಗಳಿಗೆ ಬಲವಿದ್ದು, ಡಂಭಾಚಾರಕ್ಕೆ ತಮ್ಮ ತಮ್ಮಲ್ಲಿ ಬಡಿದಾಡಿ, ಆಸ್ತಿಪಾಸ್ತಿಯನ್ನು ಮಾರಿ ಅಧೋಗತಿ ಗಿಳಿದಿರು. ೧೫ನೆಯ ಶತಮಾನದಲ್ಲಿ ವೀರಶೈವರು ತಮ್ಮ ಧರ್ಮ ಪ್ರಚಾರ ಮಾಡುವಾಗ್ಗೆ ನೂರಾರು ಪ್ರಸಿದ್ಧ ಕಾಳಾಮುಖ ಮಠಗಳು ವೀರಶೈವ ಮಠಗಳಾಗಿ ಪರಿವರ್ತನೆ ಹೊಂದಿದವು. ಈ ಮಾತನ್ನು ಡಾ. ಚಿದಾನಂದಮೂರ್ತಿಯವರು ತಮ್ಮ “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” ಗ್ರಂಥದಲ್ಲಿ ವಿವೇಚಿಸಿದ್ದಾರೆ. ಇತ್ತೀಚೆಗೆ ಇನ್ನೂ ಅನೇಕ ಮಠಗಳು ಹಸ್ತಾಂತರಗೊಂಡವೆಂದು ತಿಳಿದುಬರುತ್ತದೆ. ಗದಗ, ನರಗುಂದ, ಹೂಲಿ, ಅಮ್ಮಿನ ಭಾವಿ ಮೊದಲಾದ ಊರುಗಳಲ್ಲಿರುವ ಮಠಗಳು ವಿಶ್ವಕರ್ಮರ ಒಂದು ಧರ್ಮ ಪೀಠವಾದ ಮೂರುಝಾವದ ಶಾಖಾ ಪೀಠಗಳೆಂದು ತಿಳಿದುಬಂದಿದೆ. ಮೂರುಝಾವದ ಮೂಲಪೀಠವು ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿ ಎಂಬ ಊರಿನಲ್ಲಿ ಇಂದಿಗೂ ಇದೆ. ಈ ಊರಿಗೆ ಅಗ್ಗಳೆಯೆಂದೂ, ಗೌತಮಪುರವೆಂದು ಕರೆಯುತ್ತಿದ್ದರು. ಗೌತಮ ಋಷಿಯು ತಪಸ್ಸು ಮಾಡುತ್ತಿದ್ದನು. ಅವನ ವಂಶದರೇ ಈ ಗುರುಗಳು. ಇವರು ಶಿವಮೊಗ್ಗ ಜಿಲ್ಲೆಯ ಬಳ್ಳೇಗಾವಿಯಲ್ಲಿ ಪ್ರಸಿದ್ಧವಾದ ಕೋಡಿ ಮಠವನ್ನು ಸ್ಥಾಪಿಸಿ ಅನೇಕ ತಲೆಮಾರುಗಳವರೆಗೆ ಧರ್ಮ ಗುರುಗಳಾಗಿದ್ದರು. ಇದೇ ಊರಿನಲ್ಲಿ ವಿಶ್ವಕರ್ಮರು ೫ ಮಠಗಳನ್ನು ಸ್ಥಾಪಿಸಿದ್ದರೆಂದೂ, ರುದ್ರಸೇನ, ಭದ್ರಸೇನ ಎಂಬ ಮಹಾರಾಜರು (ಕಂಚುಗಾರರು) ರಾಜ್ಯವಾಳುತ್ತಿದ್ದರೆಂದೂ ಕ್ಷೇತ್ರ ಮಹಾತ್ಮೆಯಿಂದ ತಿಳಿದುಬರುತ್ತದೆ. ಈ ಕೋಡಿ ಮಠವೂ ಮೂರು ಜಾವದ ಗುರುಗಳಾಗಿದ್ದು ಅನೇಕ ಗುರುಗಳು ಗೌತಮ ಋಷಿಯಿಂದ ಪರಂಪರೆಯಾಗಿ ಸಚ್ಚಾರಿತ್ರ್ಯದಿಂದ ಮಹಿಮೆಯಿಂದ ಬಾಳಿದವರೆಂದು ಅಲ್ಲಿಯ ಒಂದು ಶಿಲಾಶಾಸನವು ಸಾರುತ್ತದೆ. ಈ ಕೋಡಿ ಮಠವು ಮೂರು ಜಾವದ ಗುರುಗಳ ಶಾಖಾ ಮಠವೆಂಬುದನ್ನು ಶಾಸನಾಧಾರಗಳಿಂದ ೧೯೭೫ರಲ್ಲಿ ವ್ಹಿ.ಜಿ. ದೀಕ್ಷಿತರು ಬರೆದ “ಅಗ್ಗಳೆಯ ದೇವರಸ ಮೂರು ಜಾವಧೀಶ್ವರ” ಎಂಬ ಪ್ರಬಂಧದಲ್ಲಿ ವಿವರಿಸಿದ್ದಾರೆ.

ಈ ಮೂರು ಜಾವದ ಗುರುಗಳು ೧೯ ಪ್ರಸಿದ್ಧ ದೇವಾಲಯಗಳಿಗೆ ಗುರುಗಳಾಗಿದ್ದರೆಂದು ಅಂತರವಳ್ಳಿಯ ಗುರು ಪ್ರಶಸ್ತಿ ಪದ್ಯದಿಂದ ತಿಳಿದು ಬರುವುದು. ಕರ್ನಾಟಕದಲ್ಲಿ ಕೇದಾರೇಶ್ವರ (ಕೋಡಿ ಮಠದ ಹತ್ತಿರದ ಪ್ರಸಿದ್ಧ ದೇವಾಲಯ) ರಟ್ಟಿಹಳ್ಳಿಯ ಕಂದಬೇಶ್ವರ, ಐಹೊಳೆಯ ಈಶ್ವರ ದೇವಾಲಯ, ಗದುಗಿನ ತ್ರಿಕೋಟೇಶ್ವರ, ಶಿರಸಂಗಿಯ ಶ್ರೀ ಕಾಳಿಕಾ ದೇವಾಲಯಗಳಿಗೆ ಅವರು ಅರ್ಚಕರಾಗಿದ್ದರೆಂದು ಇತ್ತೀಚೆಗೆ ವ್ಹಿಜಿ. ದೀಕ್ಷಿತ ಅವರು ಗುರುತಿಸಿದ್ದಾರೆ.

ಈ ಗೌತಮ್ಮ ವಂಶಜರು ವಿರ್ಶವಕರ್ಮರ ಅಹಭೂನ ಗೋತ್ರದವರು, ಕಂಚುಗಾರರು.

ಈ ಗೌತಮ ವಂಶದಲ್ಲಿ ಪ್ರಸಿದ್ಧನಾದ ೨ನೆಯ ವಾಮಶಕ್ತಿ ಪಂಡಿತನು ೧೨ನೆಯ ಶತಮಾನದಲ್ಲಿ ಕೋಡಿಮಠಕ್ಕೆ ಧರ್ಮಾಧಿಕಾರಿಯಾಗಿದ್ದನು. ಕೋಡಿಮಠದಲ್ಲಿ ಕ್ರಿ.ಶ.೧೧೬೨೩ರಲ್ಲಿ ಬರೆಯಲ್ಪಟ್ಟ ಶಿಲಾಶಾಸನದಲ್ಲಿ ಈ ವಾಮಶಕ್ತಿ ಪಂಡಿತನನ್ನು, ಕೋಡಿಮಠವನ್ನೂ ಅನನ್ಯವಾಗಿ ಹೊಗಳಲಾಗಿದೆ.

ಶಿರಸಂಗಿಯ ಕಾಳಮ್ಮನದೇವತೆಯ ಗುಡಿಯಲ್ಲಿ ನಿಂತಿರುವ ಕ್ರಿ.ಶ. ೧೧೮೬ನೇ ಇಸವಿಯಲ್ಲಿ ಬರೆಯಲ್ಪಟ್ಟ ಶಿಲಾಶಾಸನದಲ್ಲಿ ಶ್ರ ಈ ವಾಮಶಕ್ತಿ ದೇವನ ವಿಷಯ ಬಂದಿರುತ್ತದೆ. ಈ ಶಾಸನವು ಕಲ್ಯಾಣ ಚಾಲುಕ್ಯ ೪ನೆಯ ಸೋಮೇಶ್ವರ ರಾಜನ ಕಾಲದಲ್ಲಿ ಬರೆಯಲ್ಪಟ್ಟಿದೆ. ಈ ಶಾಸನದಲ್ಲಿ ಹೆಬ್ಬೆಯ ನಾಯಕನು ಹೆಬ್ಬೇಶ್ವರ ಲಿಂಗ ಪ್ರತಿಷ್ಠೆಯನ್ನು ಮಡಿ ಹೆಬ್ಬೇಶ್ವರತ ದೇವಾಲಯದ ಸ್ಥಾನಾಚಾರ್ಯರಾದ ಶ್ರೀ ವಾಮಶಕ್ತಿ ಪಂಡಿತರು ಕಾಲುಗಳನ್ನು ತೊಳೆದು ೪ ಮತ್ತರು ಭೂಮಿಯನ್ನು ದೇವಾಲಯಕ್ಕೆ ದತ್ತಿಬಿಟ್ಟ ವಿಷಯವೂ ಹಾಗೂ ಇನ್ನಿತರ ಗೌಡರ ವರ್ಣನೆಯೂ ಬಂದಿರುತ್ತದೆ.

ಮಹಾತಪಸ್ವಿ ವಾಮಶಕ್ತಿ ಪಂಡಿತ ಹಾಗೂ ಉಳಿದ ನೂರಾರು ಕಾಳಾಮುಖ ರಾಜಗುರುಗಳು ವಿಶ್ವಬ್ರಾಹ್ಮಣ ಮಹಾತ್ಮರಾಗಿದ್ದು ತಮ್ಮ ಸದಾಚಾರ, ಅತಿಶಯ ಮಹಿಮೆಗಳಿಂದ ಬಾಳಿ ಬೆಳಗಿ ಅವರ ಚರಿತ್ರೆಗಳು ಕಾಲನ ತುಳಿತಕ್ಕೆ ಒಳಗಾಗಿ, ಅನ್ಯರ ವಶವಾಗಿ ಇತಿಹಾಸದ ಕಾಲಗರ್ಭದಲ್ಲಿ ಮುಳುಗಿ ಹೋದವು. ವಿಶ್ವಕರ್ಮರಿಗೆ ಇದಕ್ಕಿಂತ ದುರ್ದೈವದ ಸಂಗತಿ ಯಾವುದಿದೆ?

ಒಟ್ಟಿನಲ್ಲಿ ವಾಮಶಕ್ತಿ ಪಂಡತಿನು ಅಗಾಧ ಮಹಿಮಾ ಶಾಲಿಯೂ, ವಿದ್ಯೆ, ತಪಗಳಲ್ಲಿ ಅಸಾಮಾನ್ಯನೂ ಅಪಾರ ಮಹಾತ್ಮನಾಗಿದ್ದನೆಂದೂ, ಅವನು ಅನೇಕ ದೇವಾಲಯಗಳಿಗೆ ಸ್ಥಾನಚಾರ್ಯನಾಗಿ ರಾಜಮಹಾರಾಜರಿಂದ ದೇವಾಲಯಗಳ ಅಂಗಭೋಗ, ರಂಗಭೋಗ, ಜೀರ್ಣೀದ್ಧಾರಗಳಿಗೆ ಭೂಮಿಯನ್ನು ದತ್ತಿಯಾಗಿ ಪಡೆದನೆಂದೂ ತಿಳಿದು ಬರುತ್ತದೆ. ಈ ಆಚಾರ್ಯರ ಮಹಿಮಾತಿಶಯವನ್ನು ಅನೇಕ ದೇವಾಲಯಗಳಲ್ಲಿರುವ ಶಾಸನಗಳು ಸಾರಿ ಸಾರಿ ಹೊಗಳುತ್ತವೆ. ಅವನೊಬ್ಬ ಅದ್ವಿತೀಯ ವ್ಯಕ್ತಿಯೂ ಆಗಿದ್ದನೆಂದು ವಿಧಿತವಾಗುತ್ತದೆ. ಇಂದಿನ ವಿಶ್ವಿಕರ್ಮರು ೬೪ ಕಲೆಗಳಲ್ಲಿ ನಿಷ್ಣಾತನಾದ ಈ ರಾಜ ಗುರುವಿನ ಮಹಿಮೆಯನ್ನು ತಿಳಿದುಕೊಂಡು ತಾವೂ ಸಹ ಸಕಲ ಕಲೆಗಳನ್ನು ಕರಗತ ಮಾಡಿಕೊಂಡು ಲೋಕಕಲ್ಯಾಣವನ್ನು ಮಾಡಿ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ವ್ಹಿ.ಜಿ. ದೀಕ್ಷಿತ ಅವರ ಸದಾಶಯವಾಗಿದೆ ಜೊತೆಗೆ ನನ್ನ ಸದಾಶಯವು ಆಗಿದೆ.