ಕಾಪಾಲಿಕರು

ಶೈವಧರ್ಮದ ಒಂದು ಶಾಖೆ ವಾಮಾಚಾರ ಪದ್ಧತಿಯ ಕಾಪಾಲಿಕರದು. ಇವರು ಶ್ರೀಶೈಲದಲ್ಲಿದ್ದರೆಂಗೂ ಇವರಲ್ಲಿ ಒಬ್ಬನಾದ ಗೋರಕ್ಷನನ್ನು ವಾದದಲ್ಲಿ ಅಲ್ಲಮಪ್ರಭು ಸೋಲಿಸಿದನೆಂದೂ ಪ್ರಭುಲಿಂಗಲೀಲೆ ಹೇಳುತ್ತದೆ (ಅಲ್ಲಮಪ್ರಭು ಸಂಧಿಸಿದ ಗೋರಕ್ಷ ಇನ್ನೂ ಸಮಸ್ಯಾತ್ಮಕ ವ್ಯಕ್ತಿಯಾಗಿಯೇ ಉಳಿದಿದ್ದಾನೆ). ಕರ್ನಾಟಕದಲ್ಲಿ ಇವರು ಪ್ರಬಲರಾಗಿರಲಿಲ್ಲವೆಂದೇ ತೋರುತ್ತದೆ. ಉತ್ತರ ಭಾರತದಲ್ಲಿ ಇವರು ತಕ್ಕಮಟ್ಟಿನ ಸಂಖ್ಯೆಯಲ್ಲಿದ್ದರೆಂಬುದನ್ನು ಕೆಲವು ಶಾಸನಗಳೂ, ಕಾವ್ಯನಾಟಕಗಳೂ ಸೂಚಿಸುತ್ತವೆ.

ಏಳನೆಯ ಶತಮಾನದ ತಾಮ್ರಪಟಗಳಿಂದ ಕಾಪಾಲಿಕರು ಇದ್ದರೆಂಬುದಾಗಿ ತಿಳಿದು ಬರುತ್ತದೆ. ಅದೇ ಕಾಲದ ಪಲ್ಲವ ದೊರೆ ಮಹೇಂದ್ರ ವಿಕ್ರಮನ ಮತ್ತವಿಲಾಸ ಪ್ರಹಸನದಲ್ಲಿ, ಹ್ಯೂಯೆನ್‌ತ್ಯಾಂಗನ ಪ್ರವಾಸ ಕಥನದಲ್ಲಿ ಕಾಪಾಲಿಕರ ಪ್ರಸ್ತಾಪವಿದೆ. ಕೃಷ್ಣ ಮಿಶ್ರನ ಪ್ರಬೋಧ ಚಂದ್ರೋದಯದ ಕಾಪಾಲಿಕನು ಮಹಾಭೈರವನ ಆರಾಧಕನಾಗಿದ್ದು, ಅದೇ ತಾನೇ ಕಡಿದ ನರಮುಂಡಗಳ ರಕ್ತದಿಂದ ಭೈರವನನ್ನು ತೃಪ್ತಿಪಡಿಸಬೇಕು ಎನ್ನುತ್ತಾನೆ. ಆನಂದಗಿರಿಯ ಶಂಕರ ವಿಜಯದಲ್ಲಿ ಉನ್ಮತ್ತ ಭೈರವನು ಕಾಪಾಲಿಕರ ಗುರುವೆಂದೂ, ಅವನು ಶಂಭು, ಭೈರವ ಮತ್ತು ಕಾಲೀಸರ ಸ್ಮರಣೆ ಮಾಡುತ್ತಿದ್ದನೆಂದೂ ಹೇಳಿದೆ. ಶಂಕರಾಚಾರ್ಯರು ತಾವು ಕರ್ನಾಟಕಕ್ಕೆ ಹೋಗುವುದಾಗಿ ಹೇಳಿದೆ. ಶಂಕರಾಚಾರ್ಯರು ತಾವು ಕರ್ನಾಟಕಕ್ಕೆ ಹೋಗುವುದಾಗಿ ಹೇಳಿದಾಗ ಕಾಪಾಲಿಕರು ಹೆಚ್ಚು. ಆದ್ದರಿಂದ ಹೋಗಬೇಡ ಎಂದು ವಿದರ್ಭದ ದೊರೆ ಸೂಚಿಸಿದಂತೆ ಮಾಧವ ವಿದ್ಯಾರಣ್ಯರ (೧೪ನೆಯ ಶತಮಾನ) ಶಂಕರ ದಿಗ್ವಿಜಯವು ಹೇಳುತ್ತದೆ. ಯಶಸ್ತಿಲಕರ ಚಂಪುವಿನಲ್ಲಿ ತಮ್ಮ ದೇಹದ ಮಾಂಸವನ್ನೇ ಮಾರುತ್ತಿದ್ದ ಮಹಾವ್ರತಿಗಳ ಪ್ರಸ್ತಾಪವಿದೆ. ಈ ಮಹಾವ್ರತಿಗಳನ್ನು ಚೆನ್ನಬಸವಣ್ಣನವರೂ ಹೆಸರಿಸುತ್ತಾರೆ. ಕಾಪಾಲಿಕರಿಗೆ ‘ಮಹಾವ್ರತಿ’ ಎಂಬುದು ಮತ್ತೊಂದು ಹೆಸರು ಅಷ್ಟೆ. ಇವರ ಸಿದ್ಧಾಂತವನ್ನು ಸೋಮ ಸಿದ್ಧಾಂತ ಎಂದು ಕರೆಯುವುದುಂಟು. ಉಮಾಸಮೇತನಾದ ಶಿವನನ್ನು ಆರಾಧಿಸಿ ತತ್ಫಲವಾದ ಪುಣ್ಯದಿಂದ ಕೈಲಾಸವನ್ನು ಸೇರಿ ಅಲ್ಲಿ ಉಮೆಯಷ್ಟೇ ಸುಂದರಿಯಾದ ಸ್ತ್ರೀಯೊಡನೆ ವಿಹರಿಸುವುದು ಇವರ ಗುರಿ. ನರಕಪಾಲ, ಖಟ್ಟಾಂಗಗಳು ಇವರ ಪ್ರಮುಖ ಚಿಹ್ನೆ.

ಕಾಪಾಲಿಕ ಪಂಥದ ಮೂಲ ಸೂತ್ರವು ತನಿಯಾದ ದೈವಕ್ಕೆ ತನಿಯಾದ ಶ್ರದ್ಧಾಭಕ್ತಿಯಲ್ಲಿದೆ. ಕಾಪಾಲಿಕರ ದೈವವು ಸಾಮಾನ್ಯವಾಗಿ ಶಿವನೆಂದು ಪರಿಗಣಿಸಲ್ಪಟ್ಟಿದ್ದರೂ ಅವನು ಉಗ್ರಭೈರವನ ಸ್ವರೂಪದಲ್ಲಿರುವನು. ಇವರ ಆಚರಣಾ ವಿಧಿಗಳ ಗುರಿಯು ಪೂಜ್ಯ ಹಾಗೂ ಪೂಜಕರ ಅನುಭಾವಿಕ ಮಿಲನವಾಗಿದೆ. ಡೇವಿಡ್‌ ಎನ್‌. ಲೋರೆಂಜನ್‌ರವರು ಹೇಳುವಂತೆ ಈ ಮಿಲನ ಫಲವು ಎರಡು ಬಗೆಯದಾಗಿದೆ.

ಭಕ್ತನು ಅಲೆಮಾನುಷವಾದ ಅದ್ಭುತ ಶಕ್ತಿಗಳನ್ನು ಸಿದ್ಧಿಯನ್ನು ಪಡೆಯುವನು. ಭಕ್ತನು ಮುಕ್ತಿಯನ್ನು ಹೊಂದಿ ಅಲೌಖಿಕ ಆನಂದದಲ್ಲಿ ಲೀನವಾಗುವನು. ಕಾಪಾಲಿಕರು ತಾಂತ್ರಿಕ ಶೈವಪಂಥೀಯರಾದುದರಿಂದ ಮಧು, ಮಾಂಸ, ಮೀನು, ಮುದ್ರಾ ಹಾಗೂ ಮೈಥುನಗಳೆಂಬ ಪಂಚ ‘ಮ’ ಕಾರಗಳೊಡನೆ ಸಂಬಂಧ ಹೊಂದಿರುವರು ಮೊದಲ ನಾಲ್ಕು ಉತ್ತೇಜಕಗಳಾಗಿದ್ದು ಕೊನೆಯದಾದ ಮೈಥುನಕ್ಕೆ ಅವರನ್ನು ಇವು ಅಣಿಗೊಳಿಸುತ್ತವೆ. ‘ಕುಲಾವರ್ಣವ ತಂತ್ರ’ವು (V. 79-80) ಮಧ್ಯವು ಶಕ್ತಿಯೆಂದು ಮಾಂಸವು ಶಿವನೆಂದೂ ಇವುಗಳನ್ನು ಅನುಭೋಗಿಸುವವನು ಸ್ವತಃ ಭೈರವನೇ ಆಗಿರುವನೆಂದೂ ಈ ಎರಡರ ಸಂಯೋಗದಿಂದ ಉದ್ಭವವಾಗುವ ಪರಮಾನಂದವೇ ಮೋಕ್ಷವೆಂದು ಹೇಳುತ್ತದೆ. ತಾಂತ್ರಿಕ ಪಂಥಗಳಲ್ಲಿ ಬಹಳಷ್ಟು ಹಠಯೋಗಕ್ಕೆ ಪ್ರಾಧಾನ್ಯ ಕೊಟ್ಟಿದ್ದು ಕಾಪಾಲಿಕರು ಅದಕ್ಕೆ ಹೊರತಾಗಿರುವಂತೆ ತೋರಿಬರುವುದಿಲ್ಲ. ಕಾಪಾಲಿಕರು ಮಾಯ, ಮಂತ್ರ ಹಾಗೂ ಸಿದ್ಧಿಗಳ ಸಂಪಾದನೆಯಲ್ಲಿ ತಲ್ಲೀನರಾದಂತೆ ಕಂಡುಬರುತ್ತದೆ. ಅಷ್ಟ ಮಹಾಸಿದ್ಧಿಗಳನ್ನು (ಅಣಿಮಾನ್‌, ಲಘಿಮಾನ್‌, ಗರಿಮಾನ್‌, ಮಹಿಮಾನ್‌, ಈಶಿತ್ವ, ಪ್ರಾಕಾಮ್ಯ, ವಾಶಿತ್ವ, ಕಾಮಾವಾಸಾಯಿತ್ವ) ಪಡೆಯುವುದು ಅವನ ಸಾಧನೆಯ ಪ್ರಧಾನ ಗುರಿಗಳಲ್ಲಿ ಒಂದಾಗಿದೆ.

ಕರ್ನಾಟಕದಲ್ಲಿ ಹನ್ನೆರಡನೆ ಶತಮಾನಕ್ಕೆ ಹಿಂದೆಯೇ ಕಾಪಾಲಿಕರು ಇದ್ದಿರಬಹುದು. ಕಾಪಾಲಿಕರು ಶೈವಶಾಖೆಗೆ ಸೇರಿದವರಾದರೂ ಅವರ ಉಗ್ರ ಖಂಡನೆ ಹನ್ನೆರಡನೆ ಶತಮಾನದ ವಚನಕಾರರಿಂದ ಆಗಿದೆ. ಅವರ ವಾಮಮಾರ್ಗೀಯ ಆಚರಣೆಗಳು, ಭೀಭತ್ರ್ಯ ವರ್ತನೆಗಳು ವಚನಕಾರರು ಅವರನ್ನು ಉಗ್ರವಾಗಿ ಟೀಕಿಸಲು ಕಾರಣಗಳಾಗಿರಬೇಕು. ಹಠಯೋಗ ಸಾಧನೆಯಲ್ಲಿ, ವಜ್ರ ಶರೀರಯಾಗುವುದರಲ್ಲಿ ವಿಶೇಷ ಆಸಕ್ತರಾದ ಕಾಪಾಲಿಕರನ್ನು ಅಲ್ಲಮಪ್ರಭು ದೇವರು ಟೀಕಿಸಿದ್ದಾರೆ.

ಕಾಪಾಲಿಕರಿಗೆ ಭಕ್ತಮಾರ್ಗದಲ್ಲಿ ವಿಶ್ವಾಸವಿದ್ದರೂ ಅವರಿಗೆ ವೈಯಕ್ತಿಕ ಸಾಧನೆಯಲ್ಲಿಯೇ ಹೆಚ್ಚು ನಂಬಿಕೆ. ಈ ಸಾಧನೆಗಾಗಿಯೇ ಅವರು ಜನವಿದೂರವಾದ ಕಾಡನ್ನು ಆಶ್ರಯಿಸಿದರು. ಜನಸಂಪರ್ಕದಿಂದ ದೂರವಾಗಿ ನಿಂತು ಹಠಯೋಗ ಸಿದ್ಧಿಗಳ ಪ್ರಾಪ್ತಿಗಾಗಿ ಅವರು ಅನುಸರಿಸಿದ ಮಾರ್ಗ ಸಮಾಜದಿಂದ ಅವರು ಇನ್ನಷ್ಟು ದೂರ ಸರಿಯುವಂತೆ ಮಾಡಿತು.ವರ್ಣಾಶ್ರಮಧರ್ಮವನ್ನು ಟೀಕಿಸಿದುದರಿಂದ ಅವರು ಪುರೋಹಿತ ವರ್ಗದ ತಿರಸ್ಕಾರಕ್ಕೂ ಪಾತ್ರರಾದರು. ವಿದ್ಯಾದಾನ, ದೇವಾಲಯಗಳ ನಿರ್ಮಾಣ ಇತ್ಯಾದಿ ಸಾಮಾಜಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ತೋರಿಸಿದ ಕಾಲಾಮುಖರು ರಾಜಪೂಜಿತರೂ ಜನಾನುರಾಗಿಗಳೂ ಆಗಿ ಕಾಪಾಲಿಕ ಪಂಥನ ಅಳಿವಿಗೆ ಬಹುಶಃ ಕಾರಣರಾದರೇನೋ! ಡೇವಿಡ್‌ ಎನ್‌. ಲೋರೆಂಜನ್‌ರವರು ಅಭಿಪ್ರಾಯಪಡುವಂತೆ ೧೪ನೇ ಶತಮಾನದ ಸುಮಾರಿಗೆ ಹೇಳ ಹೆಸರಿಲ್ಲದಂತಾಗಿರಬಹುದು. ಈ ಪಂಥವು ಬಹುಶಃ ಬೇರೆ ಶೈವ ತಾಂತ್ರಿಕ ಶಾಖೆಗಳಾದ ಗಾಣಾಪಥ ಹಾಗೂ ಅಘೋರಿಗಳ ಜೊತೆ ಸೇರ್ಪಡೆಯಾಗಿರಬಹುದು ಎಂದು ದ ಕಾಪಾಲಿಕಾಸ್‌ ಅಂಡ್‌ ಕಾಲಾಮುಖಾಸ್‌ ಕೃತಿಯಲ್ಲಿ ಲೋರೆಂಜನರು ಹೇಳಿದ್ದಾರೆ.

ಶಾಕ್ತಮತ

ನಾವು ವ್ಯವಹಾರದಲ್ಲಿ ಶಕ್ತಿಯೆಂಬ ಪದವನ್ನು ಧಾರಾಳವಾಗಿ ಉಪಯೋಗಿಸುತ್ತೇವೆ. ಸಾಮಾನ್ಯವಾಗಿ ಶಕ್ತಿ ಎಂಬ ಪದಕ್ಕೆ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯ ಎಂದು ಅಭಿಪ್ರಾಯವಿರುತ್ತದೆ. ಪ್ರಕೃತದಲ್ಲಿ ಶಿವ ಮತ್ತು ಶಕ್ತಿ ಇವರು ತತ್ತ್ವತಃ ಅಭಿನ್ನರಾಗಿದ್ದರೂ ವಿಶ್ವ ವ್ಯಾಪಾರದಲ್ಲಿ ಶಕ್ತಿಗೆ ಪ್ರಾಧಾನ್ಯ ಉಂಟು. ಶಿವಪಾರಮ್ಮವನ್ನು ಮುಖ್ಯವಾಗಿಟ್ಟುಕೊಂಡು ತತ್ವವಿಚಾರವನ್ನು ಮಾಡುವ ಸಂಪ್ರದಾಯಕ್ಕೆ ಶೈವಮತವೆಂದು ಅಭಿಪ್ರಾಐವಿದೆ. ಶಕ್ತಿಗೆ ಪಾರಮ್ಯವನ್ನು ಎಣಿಸಿ ವಿಚಾರ ಮಾಡಸು ದೃಷ್ಟಿಯಿಂದ ಶಾಕ್ತಮತ ಎನಿಸುತ್ತದೆ. ಈ ಶಕ್ತಿಯನ್ನು ತ್ರಿಪುರಾ, ಕುಂಡಿಲಿನೀ, ಲಲಿತಾ, ಮಾಲಿನೀ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ತ್ರಿಪುರಾ ಮಹೋಪನಿಷತ್ತಿನಲ್ಲಿ “ತ್ರಿಸ್ರಃಪುರಃ ತ್ರಿಪಥಾ ವಿಶ್ಚರ್ಷಣೀ” ಈ ಸಮಸ್ತವಾದ ವಿಶ್ವಕ್ಕೂ ಸೃಷ್ಟಿಕರ್ತೆ ಎಂಬ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ.

ಕಾಲಿಕಾ ಪುರಾಣದಲ್ಲಿ ಶಕ್ತಿ ಸಮಷ್ಟಿ ಮತ್ತು ವ್ಯಷ್ಟಿಯ ದೃಷ್ಟಿಯಿಂದ ವ್ಯವರಿಸಿರುತ್ತೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಮೂರುಜಾವಿ ಪಂಥ ಬಹುಪಂಥೀಯ ಅನುಸಂಧಾನವನ್ನು ಹೊಂದಿದೆ. ಲಾಕುಳ ಶೈವ, ಕಾಳಾಮುಖ, ಕಾಪಾಲಿಕ ಶಾಕ್ತಮತ ಇವು ಎಲ್ಲವೂಗಳಲ್ಲಿ ಶಿವ ಮತ್ತು ಶಕ್ತಿನ್ನು ಏಕೋಭಾವದಿಂದ ಆಚರಿಸುವ ಮನೋಭಾವವುಳ್ಳದಾಗಿದೆ. ಕಾಪಾಲಿಕ ಪಂಥವು ಉಗ್ರಕಾಳಿಯ ರೂಪ ಮತ್ತು ಭೈರವನಲ್ಲಿ ನಂಬಿಕೆಯಿಟ್ಟಿದೆ. ಕಾಳಾಮುಖ ಸಾಮ್ಯಕಾಳಿಕಾರಾಧನೆ ಮತ್ತು ವಿಶಿಷ್ಟ ವ್ರತಾಚಾರಣೆಯಲ್ಲಿ ನಂಬಿಕೆ ಇರಿಸಿರುವುದು. ಕಾಳಾಮುಖ, ಶಾಕ್ತಮತವು ಮರುಜಾವ ಪಂಥವು ಹೆಚ್ಚು ಅನುಸರಿಸುತ್ತದೆ. ಕಾಪಾಲಿಕ ಪಂಥವು ಮರುಜಾವಿ ಪಂಥದಲ್ಲಿ ಆಚರಣೆಯಲಿಲ್ಲ.

ಹನ್ನೊಂದನೆಯ ಶತಮಾನ ಮತ್ತು ಹನ್ನೆರಡನೆ ಶತಮಾನ ಪ್ರಾರಂಭ ಕಾಲ ಸ್ಥಿತಿಗತಿ

ಹನ್ನೊಂದನೆಯ ಶತಮಾನದ ಆಗ್ಗೆ ಸಮಾಜದಲ್ಲಿ ವ್ಯಾಪಕವಾದ ಬದಲಾವಣೆಗಳು ರೂಪಗೊಂಡಿದ್ದವು. ವೆಂಗಿ ಮಂಡಲದಲ್ಲಿ ಸಿಂಹಾಸನಕ್ಕೆ ಅನರ್ಹನಾಗಿದ್ದರೂ, ಜನರು – ರಾಜಕಾರಣಿಗಳು ಒಂದೇ ಸಮನೆ ಅರಸನನ್ನು ವಿರೋಧಿಸಿ ಪದಚ್ಯುತನನ್ನಾಗಿ ಒಂದೇ ಸಮನೆ ಅರಸನನ್ನು ವಿರೋಧಿಸಿ ಪದಚ್ಯುತನನ್ನಾಗಿ ಮಾಡುತ್ತಿದ್ದರೂ, ಸ್ವಲಾಭ ಪರರಾದ ಜನರ ನೆರವಿನಿಂದ ಅರಸೊತ್ತಿಗೆಯನ್ನು ಬಾರಿ ಬಾರಿಗೂ ಪಡೆದುಕೊಳ್ಳುತ್ತಿದ್ದ ರಾಜ ರಾಜ ನರೇಂದ್ರನ ಅವನ ವ್ಯವಹಾರದಿಂದ ವೆಂಗಿ ಮಂಡಲದಲ್ಲಿ ಮಾತ್ರವೇ ಅಲ್ಲದೆ ನೆರೆಹೊರೆಯ ರಾಜ್ಯಗಳಲ್ಲೂ ಅವನ ಹೋರಾಟದ ಪ್ರಭಾವ ಬಿದ್ದಿತ್ತು ರಾಜರಾಜ ನರೇಂದ್ರನ ಮಲತಾಯಿಯ ಮಗನಾಗಿದ್ದ ವಿಜಯಾದಿತ್ಯನು ಆತನಿಗೆ ಬಲವಾದ ವಿರೋಧಿಯಾಗಿದ್ದು ವೆಂಗಿ ಮಂಡಲದ ಅರಸನಾಗಿ ಕೂರುತ್ತಿದ್ದ ಈ ರೀತಿಯ ಹೋರಾಟಗಳು ಕ್ರಿ.ಶ. ೧೦೨೦ ರಿಂದ ೧೦೫೧ರವರೆಗೆ ನಿರಂತರವಾಗಿ ಸಾಗಿತ್ತು. ಪದಚ್ಯುತನಾದಾಗಲೆಲ್ಲಾ ರಾಜ ರಾಜ ನರೇಂದ್ರ ತನ್ನ ತಾತನ ಮತ್ತು ಸೋದರ ಮಾವನಾದ ಚೋಳ ಭೂಪಾಲರ ನೇರವನ್ನು ಕೋರುತ್ತಾ ಓಡಿ ಬರುತ್ತಿದ್ದ. ಬಾದಾಮಿಯ ಚಾಲುಕ್ಯರು ವಿಜಯಾದಿತ್ಯನಿಗೆ ನೆರವಾಗಿ ನಿಂತಿದ್ದರು. ಅವರ ರಾಝ್ಯದಲ್ಲೂ ತೊಂದರೆಗಳಿಗೆ ಕೊನೆ ಮೊದಲಿಲ್ಲ. ಮೊದಲಿಗೆ ನಿರಂಕುಶನಾಗಿದ್ದ ಅರಸನು ಈಗ ತನ್ನ ಬೆಂಬಲಿಸುವವರನ್ನು ಬಹುವಾಗಿ ಆಶ್ರಯಿಸಿ ಸಿಂಹಾಸನಾಧಿಕಾರವನ್ನು ವಶಪಡಿಸಿಕೊಳ್ಳಬೇಕಾಗಿತ್ತು. ಅರ್ಹತೆಯು ಎರಡನೆಯ ಸ್ಥಾನಕ್ಕಿಳಿದು ಆಕಾಂಕ್ಷೆ ಮೊದಲ ಸ್ಥಾನವನ್ನು ಆಕ್ರಮಿಸಿತ್ತು. ಆದ್ದರಿಂದ ‘ಕುಲ ಬ್ರಾಹ್ಮಣ’ರೆಂಬ ಸಮಯ ಸಾಧಕರ ಗುಂಪೊಂದು ರೂಪಗೊಂಡಿತ್ತು. ಇವರು ತಮ್ಮ ಕುಟುಂಬದ ಹೆಣ್ಣನ್ನು ಅರಸನಿಗೆ ಒಪ್ಪಿಸಿ ತನ್ಮೂಲಕ ರಾಜ ಬಾಂಧವ್ಯವನ್ನು ಪಡೆದುಕೊಂಡು ರಾಜ್ಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದು ಇವರ ವೃತ್ತಿಯಾಗಿತ್ತು. ಇದರ ಫಲವಾಗಿ ಸಪ್ತರ್ಷಿ ಗೋತ್ರಜರು ಉಚ್ಛ್ರಾಯ ಸ್ಥಿತಿಗೆ ಬಂದು ಇತರರನ್ನೆಲ್ಲಾ ಹೀನಾಯಾನ ಸ್ಥಿತಿಗೆ ತಳ್ಳುವ ಪ್ರಯತ್ನ ನಡೆಸುತ್ತಿದ್ದರು. ಇನ್ನೊಂದು ಕಡೆ ಜೈನ ಅರಸರು ವೈದಿಕ ಮತದವರನ್ನು ದ್ವೇಷಿಸುತ್ತಿದ್ದರು.

ಚಿಕ್ಕೇಶ್ವರರು ಇದ್ದ ವಾತಾವರಣ ಇಂತಿತ್ತು! ಜೈನರಿಗೆ ಇವರೆಂದರೆ ಆಗುತ್ತಿರಲಿಲ್ಲ. ವೈದಿಕಾರಾದವರಿಗೆ ಇವರು ಅಸೂಯೆಯ ಕಾರಣವಾಗಿದ್ದರು. ಆದರೂ ಎಂದೂ ತಾವಾಗಿಯೇ ಅವರ ಯರೊಂಗೂ ಹೆಚ್ಚು ವ್ಯವಹಾರವನ್ನು ಬೆಳಸುತ್ತಿರಲಿಲ್ಲ. ಚೋಳ, ಚಾಳುಕ್ಯ, ರಾಷ್ಟ್ರಕೂಟರ ರಾಜ್ಯಗಳು ಶಿಲ್ಪಬ್ರಾಹ್ಮಣರ ವರ್ಚಸ್ಸು ಇಳಿಮುಖದಲ್ಲಿ ಸಾಗಿತ್ತು. ಕಾಶಿಯಿಂದ ಧರ್ಮಪಾಲರ ಮಕ್ಕಳಾದ ಇಂದ್ರ ಸೇನಾದಿಗಳು ಮತ್ತು ಅವರ ವೃತ್ತಿ ಬಾಂಧವರು ಬಂದು ದಕ್ಷಿಣಾ ಪಥದಲ್ಲಿ ನೆಲೆಸಿದ್ದು ಒಂದು ಶತಮಾನವೆ ಕಳೆದಿತ್ತು. ಅವರ ವಿಶೇಷ ಸ್ಥಾನವನ್ನು ಹೊಸ ಪೀಳಿಗೆಯ ಅರಸರು ತಮ್ಮ ರಾಜಕೀಯ ಚದುರಂಗದಲ್ಲಿ ಇಲ್ಲವಾಗಿಸಿದ್ದು, ತಮಗೆ ಅನೇಕ ರೀತಿಗಳಲ್ಲಿ ಬೆಂಬಲಿಗರಾಗಿ ನಿಲ್ಲುತ್ತಿದ್ದ ಸಪ್ತರ್ಷಿ ಗೋತ್ರಜರಾಗಿದ್ದ ಬ್ರಾಹ್ಮಣರ ಪರವಾಗಿ ವೃದ್ಧಿಗೊಂಡಿತ್ತು. ಶಿಲ್ಪಾದಿಗಳನ್ನು ‘ಕೇವಲ’ ಲೌಕಿಕ ಜೀವನದ ಪ್ರಮುಖ ಸಾಧನಗಳೆಂದು ಮಾತ್ರವೇ ಗೌರವಿಸುವ ಭಾವನೆ ವ್ಯಾಪಕವಾಗಿ ಬೆಳೆಯುತ್ತಿತ್ತು. ವೃತ್ತಿಗಳು ಉಚ್ಛ್ರಾಯದಲ್ಲಿದ್ದುದರಿಂದ ಶಿಲ್ಪಿಗಳು ಆರ್ಥಿಕವಾಗಿ ಒಳ್ಳೆಯ ಹಂತದಲ್ಲಿದ್ದರು. ಸಮಾಜದಲ್ಲಿ ಸತ್ವವನ್ನು, ಸ್ವ-ಶಕ್ತಿಯನ್ನು ಅರಸಿ ಗೌರವಿಸುವ ಪ್ರವೃತ್ತಿ ಲೋಪಿಸಿತ್ತು. ವೇದ- ಆಗಮಗಳು ಭಿನ್ನವೆಂದು ಹೇಳಿ ಸಮಾಜವನ್ನು ಒಡೆಯುವ ಕೆಲಸ ಆಗಲೇ ಆರಂಭವಾಗಿತ್ತು.

ನಿಯಮಿತ ರೂಪದಲ್ಲಿ ಮರುಜಾವಿಧೀಶಕರು ಶಿಷ್ಯರಿಗೆ ಪ್ರವಚನವನ್ನು ಹೇಳುತ್ತ ಅವರ ಏಳಿಗೆಗೆ ಶ್ರಮಿಸುತ್ತಿದ್ದರು.

ಚಿಕ್ಕೇಶ್ವರರ ಪವಾಡಗಳು

೧. ತೀರ್ಥಕ್ಷೇತ್ರ ಸಂದರ್ಶನಕ್ಕೆ ಶಿಷ್ಯರೊಡನೆ ಹೋಗುತ್ತಿದ್ದಾಗ ಪಲ್ಲಕ್ಕಿಯ ಪ್ರಯಾಣ ಸಾಕಾಗಿದೆ ಎಂದು ಎದುರಿಗೆ ಬಂದು ನಿಂತ ಹುಲಿಯ ಬೆನ್ನೇರಿ ಕುಳಿತು ಪ್ರಯಮಾಣ ಮಾಡಿದರು.

೨. ಗುರು ಪೂಜೆಯಲ್ಲಿ ಮಗ್ನರಾಗಿದ್ದವರ ಮಗನು ಸುಳಿಯಲ್ಲಿ ಐಕ್ಯನಾದವನನ್ನು ಬದುಕಿಸಿದರು.

೩. ಅಮರಸಿಂಹ ವಿಶ್ವಬ್ರಾಹ್ಮಣ ನಿಂದನೆಯಿಂದ ಕುಷ್ಠವ್ಯಾದಿಗೆ ತುತ್ತಾಗಿ ಮತ್ತು “ಮೂಲಸ್ತಂಭ” ಮಹಾಪುರಾಣವನ್ನು ಬರೆದು ವಿಶ್ವಕರ್ಮನ ಮತ್ತು ವಿಶ್ವಬ್ರಾಹ್ಮಣರ ವಿಶೇಷತೆ ಸಾರಿ ಪ್ರಾಯಶ್ಚಿತ ಮಾಡಿಕೊಂಡನು.

೪. ಶ್ರೀ ಚಿಕ್ಕೇಶ್ವರರು (ಮೂರುಜಾವಿ ದೇವರು) ಮೂರುಜಾವ ಸೂರ್ಯನನ್ನು ಮೂರುಜಾವಕ್ಕೆ ತಂದು ನಿಲ್ಲಿಸಿ ಮೂರುಜಾವಧೀಶ್ವರಾದರು.

೫. ಏಕಾಂತರಾಮಯ್ಯನ ಶಿರವನ್ನು ಕೂಡಿಸಿ ಪ್ರಾಣ ದಾನ ಮಾಡಿ ಮಹಿಮಾಪುರುಷರಾದರು.

೬. ಗಿಂಡಿಹಳ್ಳದ ಮಹಿಮೆ.

ಮೂರುಜಾವಧೀಶರು ಹಲವಾರು ಭಕ್ತಿಯ ಪವಾಡ ಮಾಡಿ ತಮ್ಮ ಸ್ಥಾನಮಾನವನ್ನು ಸಮಾಜದಲ್ಲಿ ಗುರುತಿಸಿಕೊಂಡರು. ಇಲ್ಲಿ ಜೈನ, ಶೈವ ಹೋರಾಟದ ನೆಲೆಗಳನ್ನು ನಾವು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಸಮನ್ವಯತೆಯಿಂದ ಚಿಕ್ಕೇಶ್ವರರು ಪವಾಡದ ಮೂಲಕ ತಮ್ಮ ಸ್ಥಾನವನ್ನು ಗುರುತಿಸಿಕೊಂಡರು.

ಏಕಾಂತರಾಮಯ್ಯ ಐತಿಹ್ಯ ಹಿನ್ನೆಲೆ ಹಾಗೂ ವಿಶ್ವಕರ್ಮ ಸಮಾಜದ ಗುರುಗಳಾದ ಮೂರುಜಾವಿಧೀಶರಿಗೂ ಇರುವ ಸಂಬಂಧ

ಡಾ. ಎಂ.ಎಂ. ಕಲಬುರ್ಗಿ ಅವರು ಸಂಪಾದಿಸಿರುವ “ಧಾರವಾಡ ಜಿಲ್ಲೆಯ ಶಾಸನಸೂಚಿ” ಎಂಬ ಕೃತಿಯಲ್ಲಿ ಅಬ್ಬಲೂರು ಶಾಸನದ ವಿವರಗಳು ಹೀಗಿವೆ.

ಕ್ರಿ.ಶ. ೧೧೩೩ರಲ್ಲಿ ಕಲ್ಯಾಣಿ ಚಾಲುಕ್ಯರ ತೈಲಪ ಮೂರನೇ ಅರಸನ ಕಾಲದಲ್ಲಿ ಸೋಮೇಶ್ವರ ದೇವಾಲಯದ ಕಟ್ಟೆಯ ಗೋಢೆ ಬಲಗಡೆ ಹೀಗೆ ಉಲ್ಲೇಖವಿದೆ. “ಶ್ರೀ ಬ್ರಹ್ಮೇಶ್ವರ ದೇವರಲ್ಲಿ ಏಕಾಂತದ ರಾಮಯ್ಯ ಬಸದಿಯ ಜಿನನೊಡ್ಡವಾಗಿ ತಲೆಯನರಿದ ಹಡೆದದಾವು ಸಂಕಗಾವುಂಡ ಬಸದಿಯ ನೊಡೆಯಹುಲೀಯದೆ ಆಳು ಕುದುರೆಯನೊಡ್ಡಿರಲು ಏಕಾಂತ ರಾಮಯ್ಯ ಕಾದಿಗೆಲ್ಲು ಜಿನನೊಡೆದು ಲಿಂಗಮಂ ಪ್ರತಿಷ್ಠೆ ಮಾಡಿದಂ ಎಂದು ಉಲ್ಲೇಖವಿದೆ.

ಸೋಮೇಶ್ವರ ದೇವಾಲಯದ ಒಳಮಂಟಪದ ಬಾಗಿಲ ಎಡಗಡೆ ಕಲ್ಯಾಣ ಚಾಲುಕ್ಯ ತೈಲ ಮೂರನೇ ಅರಸನ ಕಾಲದ ಕ್ರಿ.ಶ. ೧೨೦೦ರಲ್ಲಿಯ ಶಾಸನದಲ್ಲಿ ಯೆ(ಏ) ಕಾಂತದ ರಾಮಯ್ಯಂಗಳು ಜಿನನ ಲಿಂಗ ಪ್ರತಿಷ್ಠೆಯಂ ಮಾಡಿದ ಠಾವು ಎಂದು ಉಲ್ಲೇಖವಿದೆ.

ಕಲ್ಯಾಣ ಚಾಲುಕ್ಯ ತೈಲ ಮೂರನೇ ಅರಸನ ಕಾಲ ಕ್ರಿ.ಶ. ೧೨೦೦. ಈ ಕಾಲದಲ್ಲಿ ಸೋಮೇಶ್ವರ ದೇವಾಲಯದ ಒಳಮಂಟಪದ ಬಾಗಿಲ ಬಲಗಡೆಯ ಶಾಸನ ಉಲ್ಲೇಖ ಹೀಗಿದೆ. ‘ಶ್ರೀಮದ್‌ ಏಕಾಮತ ರಾಮಯ್ಯಂಗೆ ಸಂಕಗೌಂಡನ ಓಲೆಯ ಕುಡುವ ಠಾಮ ಎಂಬ ಉಲ್ಲೇಖವಿದೆ.

ಕಲಚೂರಿ ಬಿಜ್ಜಳ ಮತ್ತು ಕಲ್ಯಾಣಿ ಚಾಳುಕ್ಯ ಸೋಮೇಶ್ವರನ ಕಾಲ ಕ್ರಿ.ಶ. ಸುಮಾರು ೧೨೦೦ ಬ್ರಹ್ಮೇಶ್ವರ ದೇವಾಲಯದ ಒಳಗೋಡೆಯಲ್ಲಿ ಬರೆದ ಶಾಸನ ಉಲ್ಲೇಖ ಹೀಗಿದೆ.

ಏಕಾಂತರಾಮಯ್ಯ ಜೈನರೊಂದಿಗೆ ವಾದಕ್ಕೆ ನಿಂತು ಶಿರಸ್ಸು ಪವಾಡ ಮೆರೆದ ಘಟನೆ. ಇಲ್ಲಿ ಬೇರೆ ಶರಣರ ಹೆಸರುಗಳು ಇವೆ.

ಶಾಂತನಿರಂಜನ ವಿರಚಿತ ಅಬ್ಬಲೂರು ಚರಿತೆಯಲ್ಲಿ ಏಕಾಂತ ರಾಮಯ್ಯನ ಶಪಥ ನೆರವೇರಲು ಕಾರಣಕರ್ತನಾದ ಸೂರ್ಯನನ್ನೇ ತಡೆಹಿಡಿದು ನಿಲ್ಲಿಸಿದ ಅತ್ಯಂತ ಮಹಿಮಾನ್ವಿತನಾದ ಅಂತರವಳ್ಳಿಯ ಚಿಕ್ಕೇಶ ಗುರು ಅಥವಾ ಮೂರುಜಾವದಯ್ಯನ ಪ್ರಸ್ತಾಪ ಶಾಸನದಲ್ಲಿ ಇಲ್ಲ. ಆದರೆ ವೀರಶೈವಾಮೃತ ಮಹಾಪುರಾಣದಲ್ಲಿ ಮಾತ್ರ ಮೂರುಜಾವದಯ್ಯನ ಪ್ರಸ್ತಾಪವಿದೆ. ಮೂರುಜಾವದಯ್ಯನ ಉಲ್ಲೇಖ ಹಿರೇಮಗಲಗೇರಿ ಶಾಸನ (ಕ್ರಿ.ಶ. ೧೧೭೪ ಸಾಸನ ಅಪ್ರಕಟಿತ) ರಟ್ಟಿಹಳ್ಳಿಯ ಶಾಸನ (ಕ್ರಿ.ಶ. ೧೨೩೮ ಶಾಸನ ಅಪ್ರಕಟಿತ) * ಇವುಗಳಲ್ಲಿ ಮೂರುಜಾವಿಧೀಶರ ಉಲ್ಲೇಖವಿದೆ ಎಂಬುದನ್ನು ಅಬ್ಬಲೂರು ಚರಿತೆಯಲ್ಲಿ ಕಾಣುತ್ತೇವೆ.

ಅಬ್ಬಲೂರು ಚರಿತೆಯಲ್ಲಿ ಏಕಾಂತರಾಮಯ್ಯನು ಬ್ರಹ್ಮೇಶ ದೇವಾಲಯವನ್ನು ಪ್ರವೇಶಿಸಿ ಪೂಜೆಯಿಲ್ಲದೆ ಪಾಳು ಬಿದ್ದಿದ್ದ ದೇವಾಲಯವನ್ನು ಶುದ್ಧಿಗೊಳಿಸಿ ಪೂಜೆ ಮಾಡುತ್ತಿದ್ದನು. ಆಗ ಶಿವಭಕ್ತನೊಬ್ಬನು ಬಂದು ಅಬ್ಬಲೂರಿನ ಶ್ರಾವಕರು ಶಿವಭಕ್ತರಾರನ್ನು ಆ ಊರಿಗೆ ಪ್ರವೇಶಿಸಿದಂತೆ ತಡೆದಿದ್ದಾರೆ ಎಂದು ಹೇಳಿದನು. ಅದನ್ನು ಕೇಳಿದ ಕೆಲವು ಜೈನರು ಬಂದು ಆ ದೇಗುಲದಲ್ಲಿ ವಾಸ ಮಾಡಿದರೆ ದೋಷ ಬರುವುದೆಂದು ತಿಳಿಸಿ ಶಿವನಿಂದೆ ಮಾಡಿದರು. ಅದನ್ನು ಪ್ರತಿಭಟಿಸಿದ ಏಕಾಂತರಾಮಯ್ಯನು ವಾದ ಮಾಡಿ ಶಿವಪಾರಮ್ಯಕ್ಕಾಗಿ ತನ್ನ ಶಿರವನ್ನು ಪಣವಾಗಿ ಒಡ್ಡುವೆನೆಂದು ಶಪಥ ಮಾಡುತ್ತಾನೆ. ಇದು ಶಾಸನದಲ್ಲಿ ಸಂಕನಗೌಡನು ಕೆಲವು ಜೈನರೊಡನೆ ಬಂದು ಶಿವಲಿಂಗದೆದರುರು ಜಿನಪಾರಮ್ಯವನ್ನು ಘೋಷಿಸಿ ಏಕಾಂತರಾಮಯ್ಯನು ಶಪಥ ಮಾಡುವುದಕ್ಕೆ ಕಾರಣನಾಗಿದ್ದಾನೆ.

ಏಕಾಂತರಾಮಯ್ಯನ ಪಣದಂತೆ ಆತನ ಶಿರವನ್ನು ಪುಲಿಗೆರೆಯ ಹೊನ್ನಿ ತಂದೆಗಳು ಪುಲಿಗೆರೆಯ ಸೋಮನಾಥ, ಅಣ್ಣಿಗೆರೆಯ ಅಮೃತೇಶ, ಕಪ್ಪಡಿಯ ಸಂಗಮನಾಥ, ಕೆಂಭಾವಿಯ ಭೋಗೇಶ್ವರ, ಸೊನ್ನಲಿಗೆಯ ಸಿದ್ಧರಾಮೇಶ್ವರ, ಆವುಂಡದ ನಾಗನಾಥ ಕೊನೆಯದಾಗಿ ಹಂಪಿಯ ವಿರೂಪಾಕ್ಷ ಅಲ್ಲಿಂದ ಅಂತರವಳ್ಳಿಯ ಚಿಕ್ಕೇಶ್ವರ (ಮೂರುಜಾವಧೀಶ್ವರ) ಗುರುಗಳೊಂದಿಗೆ ಅಬ್ಬಲೂರಿನ ಬ್ರಹ್ಮೇಶ್ವರ ದೇವಾಲಯಕ್ಕೆ ಬರುವನು.

ಪುಲಿಗೆರೆಯ ಹೊನ್ನಯ್ಯ ಚಿಕ್ಕೇಶ್ವರರಲ್ಲಿ (ಮೂರುಜಾವಿಧೀಶರಲ್ಲಿ) ಹೀಗೆ ಪ್ರಾರ್ಥಿಸುತ್ತಾನೆ. ಮೂರುಜಾವಿದೇವರ ಚರಿತ್ರೆಯಲ್ಲಿ “ಗೌತಮಾಶ್ರಮದಲ್ಲಿ ರುದ್ರಾಕ್ಷಿ, ಶಿಖೆ, ಸೂತ್ತರ, ಗಂಧಾಕ್ಷತೆಗಳಿಂದ ಸಾಲಂಕೃತರಾಗಿ ಶೋಭಾಯಮಾನರಾಗಿರುವ ಚಿಕ್ಕೇಶ್ವರ ಗುರುಸ್ವಾಮಿಗಳೇ ನಿಮಗೆ ವಂದನೆ ಮೇಘವಾಹನ ಚಕ್ರೇಶ, ಶೈವೋದ್ಧಾರಕ ಶಿರೋಮಣಿ, ಏಕಾಂತ ರಾಮನ ತಲೆ ಕಾಪಾಡಿದ ಚಿಕ್ಕೇಶ್ವರ ನಿಮ್ಮ ಕರದಲ್ಲಿಯ ಸ್ಥೂಲವು ನಿಜ ಭಕ್ತರ ಪಾಲಿಗೆ ಕಪಾವಾರಿಧಿ, ನಿಂದಕರಿಗೆ ಅದು ತ್ರಿಶೂಲ ಪಂಚವಕ್ತ್ರೇಶ್ವರಾನ್ವಯ ಅಂತರವಳ್ಳಿ ಪುರಪತಿ ಚಿಕ್ಕೇಶ್ವರ. ಏಕಾಂತರಾಮಯ್ಯನ ಗುರು. ಯಾರ ದರ್ಶನವು ನೂರು ಜನ್ಮಗಳಲ್ಲಿ ಸಾಧ್ಯವಿಲ್ಲವೋ ಅಂತಹ ಸೂರ್ಯನಾರಾಯಣನ ಸಾಕ್ಷಾತ್ಕಾರಗೊಳಿಸಿಕೊಟ್ಟ ಮಹನೀಯ. ಈ ಚರಿತ್ರಾರ್ಹ ಘಟನೆಯಿಂದ ತಾವು ಎಲ್ಲಾ ಶೈವರ ಪಾಲಿಗೆ ನಿಜ ಈಶ್ವರನಾಗಿ ನಿಂತಿದ್ದೀರಿ. ನಿಮ್ಮ ಸಾನಿಧ್ಯವೇ ಸಕಲ ಅಪಜಯ ಪಾಪಗಳ ನಾಶವನ್ನುಂಟುಮಾಡುತ್ತದೆ. ಇಳೆಯಲ್ಲಿ ನಿಮ್ಮನ್ನು ಮೀರಿಸಿದ ದೇವರಿಲ್ಲ. ನೀವೇ ಈಗ ನಮ್ಮನ್ನು ಕಾಪಾಡಬೇಕು” ಎಂದು ಪುಲಿಗೆರೆಯ ಹೊನ್ನಯ್ಯ ಇತರ ಭಕ್ತರೊಂದಿಗೆ ಹೇಳಿದನು. ನಂತರ “ಸ್ವಾಮಿ ನಿಮ್ಮ ಅನುಜ್ಞೆಯ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ತಾವೇ ಬಂದು ಅಬ್ಬರೂರಿನಲ್ಲಿ ನಿಮ್ಮ ಶಿಷ್ಯ ಏಕಾಂತ ರಾಮಯ್ಯನಿಗೆ ಮರುಜೀವವನ್ನು ಕರುಣಿಸಬೇಕು ಎಂದು ಪ್ರಾರ್ಥಿಸಿದರು.

ಮೂರುಜಾವಧೀಶರು ಅಬ್ಬಲೂರಿನ ಬ್ರಹ್ಮೇಶ್ವರ ದೇವಾಲಯವನ್ನು ಪ್ರವೇಶಿಸಿದರು. ಜೈನರೆಲ್ಲರೂ ಮೌನವಾಗಿ ಕುಳಿತಿದ್ದರು. ಶೈವರು ಕುತೂಹಲ ಗ್ರಸ್ತರಾಗಿದ್ದರು. ಚಿಕ್ಕೇಶ್ವರರ (ಮೂರುಜಾವದೀಶರ) ಸೂಚನೆಯಂತೆ ಏಕಾಂತ ರಾಮಯ್ಯನ ಮುಂಡವನನು ಬ್ರಹ್ಮೇಶ್ವರನ ಮುಂದಿರಿಸಿ ಅದಕ್ಕೆ ರುಂಡವನ್ನು ಜೋಡಿಸಿ ಕಾವಿಬಟ್ಟೆಯನ್ನು ಹೊದಿಸಿ ಬ್ರಹ್ಮೇಶ್ವರನಿಗೆ ಆರತಿಯನ್ನು ಬೆಳಗುವಂತೆ ತಿಳಿಸಿ ಮೂರುಜಾವಿ ದೇವರು ಧ್ಯಾನಾಸಕ್ತರಾದರು. ಕೆಲವು ನಿಮಿಷಗಳ ನಂತರ ಹೊನ್ನಯ್ಯನನ್ನು ಕರೆದು ತೀರ್ಥ, ಪ್ರಸಾದಗಳನ್ನು ಏಕಾಂತರಾಮನ ಬಾಯಲ್ಲಿ ಇರಿಸಲು ತಿಳಿಸಿದರು. ಮತ್ತೆ ನಾಲ್ಕೈದು ನಿಮಿಷಗಳ ಧ್ಯಾನ. ಅಲ್ಲಿದ್ದ ಭಕ್ತರೆಲ್ಲರೂ ಶಿವನಾಮ ಸಂಕೀರ್ತನೆಗೆ ತೊಡಗಿದರು. ಈ ನಾಮ ಸಂಕೀರ್ತನೆಯ ಮಧ್ಯೆ ಹೊನ್ನಯ್ಯನಿಗೆ ಏಕಾಂತ ರಾಮಯ್ಯನ ಮೇಲೆ ಹೊದಿಸಿರುವ ಕಾವಿಬಟ್ಟೆಯನ್ನು ತೆಗೆಯಲು ತಿಳಿಸಿದರು. ಹೊನ್ಯಯ್ಯ ಸೂಚನೆಯನ್ನು ಅನುಸರಿಸಿದಾಗ ಏಕಾಂತ ರಾಮಯ್ಯನು ಕೈಗಳನ್ನು ಜೋಡಿಸಿ ನಮಸ್ಕರಿಸುವಂತೆ ಇದ್ದು ತುಟಿಗಳು ಚಲಿಸುತ್ತಿದ್ದವು. ಮರುಘಳಿಗೆಯೇ ಏಕಾಂತ ರಾಮಯ್ಯ ಎದ್ದು ತಾನು ಶಿವನಾಮ ಸಂಕೀರ್ತನೆಯನ್ನು ಮಾಡ ತೊಡಗಿದ. ಇದನ್ನು ಕಂಡ ಶೈವರ ಆನಂದಕ್ಕೆ ಮೇರೆ ಇರಲಿಲ್ಲ.

ಹೊನ್ನಯ್ಯನು ಏಕಾಂತ ರಾಮಯ್ಯನನ್ನು ಅಪ್ಯಾಯಮಾನವಾಗಿ ಅಪ್ಪಿ, ಮೂರುಜಾವದೀಶರ ಬಳಿಗೆ ಕರೆತಂದು “ಅಂದು ನೀನು ಇಳೆಯಲ್ಲಿ ಅವತರಿಸುವಂತೆ ಆಶೀರ್ವದಿಸಿದ ಗುರುರಾಯ, ಕಾರಣ ಜನ್ಮ ನೀನೆಂದು ಹೇಳಿ ಜ್ಞಾನವನ್ನು ಒದಗಿಸಿದ ಮಹಾಗುರು. ಇಂದು ನಿನ್ನನ್ನು ಇಳೆಯಲ್ಲಿ ಮಹಾಮಹಿಮೆ ಪುರುಷರಲ್ಲಿ ಒಬ್ಬನನ್ನಾಗಿ ಮಾಡಿದ ಸಾಕ್ಷಾತ್‌ ಪರಮಶಿವಮೂರ್ತಿ ಇವರೇ! ಸೂರ್ಯನನ್ನು ಮೂರುಜಾವಕ್ಕೆ ತಂದು ನಿಲ್ಲಿಸಿದ ಮಹಾಮಹಿಮಾ ಮೂರ್ತಿ ಮೂರುಜಾವಿ ದೇವರು ಇವರೇ!”

ಏಕಾಂತ ರಾಮಯ್ಯನು ಗುರುವನ್ನು ಕಂಡು ಸಾಷ್ಟಾಂಗ ನಮಸ್ಕಾರ ಮಾಡಿ ಗುರುಸ್ತುತಿ ನಡೆಸಿದ ಜೈನ ಮತ್ತು ಶೈವರಲ್ಲಿ ದೊಡ್ಡ ಕ್ರಾಂತಿಯೊಂದು ಜರುಗಿತು. ಅಬ್ಬಲೂರಿನ ಪಾಳೆಯಗಾರನಾಗಿದ್ದ ಶಂಕಪಾಲನೆಗೆ ಉಳಿಗಾಲವಿಲ್ಲದೆ ಆತನ ಮಡದಿಯರು ಅವನ ಪ್ರಾಣ ಭಿಕ್ಷೆಗಾಗಿ ಎಲ್ಲರಲ್ಲೂ ಸೆರಗೊಡ್ಡಿ ಬೇಡಿದರು. ಕೊನೆಗೆ ಅವರು ಶೈವರಾಗಿ ಪರಿವರ್ತನೆಗೊಂಡರು. ಹೀಗೆ ಮೂರುಜಾವಿ ದೇವರು ತಮ್ಮ ಮಹಿಮೆಯನ್ನು ತೋರಿದರು.

ಮೂರುಜಾವಿದೇವರ ಸಂಪ್ರದಾಯ ಸಂಸ್ಕಾರಗಳು ಮತ್ತು ಆಚರಣೆಗಳು

ಇಂದಿನ ಈ ಕಾಲದಲ್ಲಿ ಹದಿನಾರು ಪೂರ್ವ ಸಂಸ್ಕಾರಗಳಲ್ಲಿ ಮುಖ್ಯವಾಗಿ ಕೇವಲ ಉಪನಯನ ಮತ್ತು ವಿವಾಹಗಳು ಮಾತ್ರ ಜರುಗುತ್ತಿರುವುದನ್ನು ನಾವು ಕಾಣುತ್ತೇವೆ. ಪ್ರಾಯಶಃ ಇತರ ಎಲ್ಲಾ ಸಂಸ್ಕಾರಗಳನ್ನು ಕೈಬಿಡಲಾಗಿದೆ. ಇವುಗಳಲ್ಲೂ ಚಪ್ಪರ, ವಾದ್ಯ ಮೆರವಣಿಗೆ, ಆಭರಣ, ವಸ್ತ್ರಾಲಂಕಾರ, ಊಟ, ಉಪಚಾರ ಇತ್ಯಾದಿ ಆಡಂಬರಗಳ ಕಡೆಗೆ ಜನರ ದೃಷ್ಟಿ ಇದೆಯೇ ಹೊರತು ಈ ಸಂಸ್ಕಾರಗಳ ಮೂಲ ಉದ್ದೇಶವೇನು, ವಿವಿಧ ಕರ್ಮಭಾಗಗಳ ಅರ್ಥವೇನು, ಅವುಗಳನ್ನು ಮಾಡುವ ಸರಿಯಾದ ಕ್ರಮವೇನು, ಅವುಗಳ ದೃಷ್ಟ ಹಾಗೂ ಅದೃಷ್ಟ ಫಲಗಳೇನು ಇತ್ಯಾದಿ ಮುಖ್ಯ ವಿಚಾರಗಳ ಕುರಿತು ಯಾರೊಬ್ಬನು ಆಲೋಚಿಸುವುದಿಲ್ಲ. ಆದರೆ ಕೆಲವೇ ಜನರಿಗಾದರೂ ಇವುಗಳ ಕುರಿತು ಆಸಕ್ತಿ ಇರಬಹುದು. ದೇಶ, ಕಾಲ, ಪರಿಸ್ಥಿತಿ, ವಾತಾವರಣ ಮುಂತಾದವುಗಳನ್ನು ಹೊಂದಿಕೊಂಡು, ಇಂದಿನ ಈ ಪರಿಸರದಲ್ಲಿ ಹಿಂದಿ ಆ ಕಾಲದ ಅದೇ ಕ್ರಮಗಳನ್ನು ಸ್ವಲ್ಪವೂ ನ್ಯೂನ್ಯತೆ ಇಲ್ಲದೆ ಅದೇ ರೀತಿಯಲ್ಲಿ ಹಾಗೆಯೇ ಅನುಸರಿಸುವುದು ದುಃಸಾಧ್ಯವೆನಿಸಿದರೂ ಈ ಸಂಸ್ಕಾರಗಳ ಮೂಲಕ ಉದ್ದೇಶ, ವಿಧಿ ವಿಧಾನ, ಪರಿಣಾಮ, ಫಲ ಮುಂತಾದವುಗಳ ಸ್ಥೂಲ ಪರಿಚಯವಿದ್ದು ಅವುಗಳನ್ನು ಆಚರಿಸಿದರೆ ಮಾಡಿದ ಕರ್ಮವು ಸಾರ್ಥಕವಾದೀತು.

ಸಂಸ್ಕಾರ ಎಂದರೆ ಶಾಸ್ತ್ರೋಕ್ತ ವಿಧಿಯಿಂದ ಸಂಸ್ಕರಿಸುವುದು, ಪರಿಷ್ಕರಿಸುವುದು, ಶುದ್ಧೀಕರಿಸುವುದು. ಅರ್ಹತೆಯನ್ನು ತರುವುದು ಇತ್ಯಾದಿ ಅರ್ಥವಾಗುತ್ತದೆ. ಉಪನಯನ, ವಿವಾಹ ಮೊದಲಾದ ಯಾವುದೇ ಸಂಸ್ಕಾರವಾದರೂ ಆರಂಭದಲ್ಲಿ ದೇವತಾ ಪ್ರತಿಷ್ಠೆ ಮಾಡಲಾಗುತ್ತದೆ. ಇದರಲ್ಲಿ ಗಣಪತಿ ಪೂಜನ, ಪುಣ್ಯಾಹವಾಚನ, ಮಾತೃಕಾಪೂಜನ, ನಾಂದೀಶ್ರಾದ್ಧ, ಮಂಟಪದೇವತಾ ಪ್ರತಿಷ್ಠಾ ಮುಂತಾದ ಕರ್ಮ ಭಾಗಗಳು ಅಂತರ್ಗತವಾಗಿವೆ.

ಇನ್ನೂ ಈ ಗುರುಗಳು ಧಾರ್ಮಿಕ ಷೋಡಸ ಸಂಸ್ಕಾರಗಳಾದ ಗರ್ಭಾಧಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಉಪನಯನ, ಮಹಾನಾಮ್ಮಿ, ಮಹಾವ್ರತ, ಉಪನಿಷದ್‌ವ್ರತ, ಕೇಶಾಂತ, ಗೋದಾನ, ಸಮಾವರ್ತನ, ವಿವಾಹ ಷೋಡಸಂಸ್ಕಾರಗಳನ್ನು ಮಾಡಿಸುತ್ತಾರೆ. ಇವುಗಳ ಜೊತೆಯಲ್ಲಿಯೇ ಮಣಿಸಿದ್ಧಿ, ಮಂತ್ರಸಿದ್ಧಿ, ಔಷಧಿಸಿದ್ಧಿ ಮಾಡಿಕೊಳ್ಳಬೇಕೆಂದು ಹೇಳಲಾಗಿದೆ. ಇವು ಎಲ್ಲವುಗಳನ್ನು ಮೂರುಜಾವಿ ದೇವರ ಪರಂಪರೆಯ ಸಂಪ್ರದಾಯ ಸಂಸ್ಕಾರಗಳನ್ನು ಆಚರಿಸುತ್ತಾರೆ.

ವಿಶ್ವಬ್ರಾಹ್ಮಣರ (ಮೂರುಜಾವಿ ದೇವರ ಪರಂಪರೆ) ಆಚರಣೆಗಳು

ವಿಶ್ವಬ್ರಾಹ್ಮಣರ (ಮೂರುಜಾವಿ ದೇವರ ಪರಂಪರೆ), ವಿಶ್ವಕರ್ಮ ಸಮಾಜದರ್ಶನ-ವಾರ್ಷಿಕ ವಿಶೇಷಾಂಕ ೧೯೯೮. ಆಚರಣೆಯ ನ್ನು ಬಿ. ಶ್ರೀಧರ ಆಚಾರ್ಯ, ಇನ್ನಂಜೆ ಅವರು ಹೀಗೆ ವಿವರಿಸುತ್ತಾರೆ.

“ವಿಶಂತಿ ಸರ್ವಕರ್ಮಸು ವಿಶ್ವೇ ವಿಶ್ವೇ, ಚ ತೇ ಬ್ರಾಹ್ಮಣಾಶ್ಚ ವಿಶ್ವಬ್ರಾಹ್ಮಣಾಃ” ದೇವಯಜ್ಞೀಯರು ಶಿಲ್ಪ ಕರ್ಮಿಗಳಾಗಿದ್ದು ಅದರಲ್ಲಿ ಯಾರಿಗೆ ಗತಿ ಇರುವುದೋ ಅಂಥ ಬ್ರಾಹ್ಮಣ ವರ್ಗಕ್ಕೆ ‘ವಿಶ್ವಬ್ರಾಹ್ಮಣ’ ಎಂದು ಹೆಸರು. ದೇವಬ್ರಾಹ್ಮಣ, ವಿಶ್ವಕರ್ಮ ಬ್ರಾಹ್ಮಣ, ಪಂಚಾಲಬ್ರಾಹ್ಮಣ, ರಥಕಾರಬ್ರಾಹ್ಮಣ, ಪೌರಷೇಯಬ್ರಾಹ್ಮಣ, ಕರ್ಮಠೀಯ ಬ್ರಾಹ್ಮಣ, ಸ್ಥಪತಿ, ದೈವಜ್ಞ, ಜಾಂಗಿಡಾಬ್ರಾಹ್ಮಣ, ಕೋಕಾಸ ಬ್ರಾಹ್ಮಣ, ಇತ್ಯಾದಿಗಳು ಪರ್ಯಾಯ ನಾಮಗಳು.

“ಶಿಲ್ಪಂ ಅಧ್ಯಯನಂ ನಾಮವತ್ತಂ ಬ್ರಾಹ್ಮಣ ಲಕ್ಷಣಂ” ಶಿಲ್ಪ ಮತ್ತು ಅಧ್ಯಯನಗಳು ಬ್ರಾಹ್ಮಣರ ವೃತ್ತಿ. ಕೇವಲ ಯಜನಯಾಜನ, ಅಧ್ಯಯನ, ಅಧ್ಯಾಪನಾದಿಗಳನ್ನು ಪ್ರಧಾನ ವೃತ್ತಿಯಾಗಿಟ್ಟುಕೊಂಡು ಹಾರುವರು ಆರ್ಷೇಯ ಬ್ರಾಹ್ಮಣರು. ಶಿಲ್ಪಕರ್ಮದೊಂದಿಗೆ ಅಧ್ಯಯನಾದಿಗಳನ್ನು ಪ್ರಧಾನ ವೃತ್ತಿಯಾಗಿಟ್ಟುಕೊಂಡ ವಿಶ್ವಕರ್ಮರು ಪೌರುಷೇಯ ಬ್ರಾಹ್ಮಣರು. ಹಾರುವರು ಸಂಸ್ಕೃತೀಕರಣಗೊಂಡು ಬ್ರಾಹ್ಮಣರೆನಿಸಿಕೊಂಡರು. ಸಂಜ್ಞಾರ್ಥ ತತ್ವಕೋಶದಲ್ಲಿ ಹೇಳಿದ ಪಂಚವಿಧ ಬ್ರಾಹ್ಮಣರಲ್ಲಿ ಪ್ರಪ್ರಥಮವಾಗಿ ಕಂಡು ಬರುವ ಹೆಸರೇ ದೇವಬ್ರಾಹ್ಮಣ. “ಪಂಚಭಿಃ ಶಿಲ್ಪೈಃ ಜಗತ್‌ ಅಲಂಕುರ್ವಂತಿ ತೇ ಪಂಚಾಲಃ”. ಪಂಚವೃತ್ತಿಗಳಿಂದ ಲೋಕೋಪಕಾರ ಮಾಡುವ ವಿಶ್ವಕರ್ಮರಿಗೆ ಪಂಚಾಲಬ್ರಾಹ್ಮಣ ಎಂಬುದು ಅನ್ವರ್ಥನಾಮ.

ಆಚಾರಃ ಪರಮೋಧರ್ಮಃ ಆಚಾರ ಪರಮಂ ತಪಃ |
ಆಚಾರಃ ಪರಮ ಜ್ಞಾನಮಾಚಾರಾತ್ಕಿಂ ಸಾಧ್ಯತೆ ||

ಆಚಾರವೇ ಶ್ರೇಷ್ಠವಾದ ಧರ್ಮ, ತಪಸ್ಸು ಮತ್ತು ಜ್ಞಾನ ಆಚಾರದಿಂದ ಎಲ್ಲವೂ ಸಾಧ್ಯ. ನಂಬಿಕೆ ಮತ್ತು ಆಚರಣೆಗಳು ಧರ್ಮದ ಅಂತರ್ಗತ ಭಾಗಗಳು. ಇವು ಧರ್ಮದ ಎರಡು ಕಣ್ಣುಗಳಿದ್ದಂತೆ. ಪ್ರತಿಯೊಂದು ಧರ್ಮ ಅತಿಮಾನುಷ ಶಕ್ತಿಯ ಬಗ್ಗೆ ತಳೆದ ಮಾನಸಿಕ ಧೋರಣೆ ಸಾಮಾನ್ಯವಾಗಿ ನಂಬಿಕೆ ಮತ್ತು ಆಚರಣೆಗಳ ರೂಪದಲ್ಲಿ ಪ್ರಕಟವಾಗುತ್ತದೆ. ನಂಬಿಕೆ ಭಾವನೆಗೆ ಸಂಬಂಧಿಸಿದ್ದು. ಆಚರಣೆಗೆ ಕ್ರಿಯೆಗೆ ಸಂಬಂಧಿಸಿದ್ದು.

ಶ್ರಾದ್ಧ ಮಾಡಿದರೆ ಪಿತೃಗಳಿಗೆ ಮೋಕ್ಷ ದೊರೆಯುತ್ತದೆ ಎಂಬ ಭಾವನೆ ನಂಬಿಕೆ. ಸತ್ತವರಿಗಾಗಿ ಮಾಡುವ ಶ್ರಾದ್ಧಕ್ರಿಯೆ ನಂಬಿಕೆ. ಸತ್ತವರಿಗಾಗಿ ಮಾಡುವ ಶ್ರಾದ್ಧಕ್ರಿಯೆ ಆಚರಣೆ. ಸಾಮೂಹಿಕ ಅನುಷ್ಠಾನಗಳನ್ನು ಆಚರಣೆ ಎನ್ನಬಹುದು. ವೈಯುಕ್ತಿಕತೆಯನ್ನು ಹೋಗಲಾಡಿಸಿ ಸಾಮೂಹಿಕತೆಯನ್ನು ಸ್ಥಾಪಿಸುವುದು ಆಚರಣೆಗಳ ಹಲವು ಉದ್ದೇಶಗಳಲ್ಲಿ ಒಂಲದು. ದೇಹದ ಕೊಳೆಯನ್ನು ತೊಳೆಯಲು ಮಾಡುವ ಸ್ನಾನ ಆಚರಣೆಯಲ್ಲ. ಪುಣ್ಯ ಸಂಪಾದನೆಯ ಅಲೌಕಿಕ ಉದ್ದೇಶದಿಂದ ತೀರ್ಥಕ್ಷೇತ್ರದಲ್ಲಿ ಮಾಡುವ ಸ್ನಾನ ಆಚರಣೆ. ಆದುದರಿಂದ ಅಲೌಕಿಕ ಆಸಕ್ತಿಯ ಪವಿತ್ರ ಉದ್ದೇಶದಿಂದ ಮಾಡುವ ಕ್ರಿಯೆಗಳೇ ಆಚರಣೆಗಳು.

“ಧಾರ್ಯ ಅನೇನ ಲೋಕಃ ಇತಿ ಧರ್ಮಃ” ಜಗತ್ತಿನ ಉನ್ನತಿ ಅವನತಿಗಳಿಗೆ ಕಾರಣೀಭೂತವಾದ ಗುಣವೇ ಧರ್ಮ. ಮಾನವ ಶಾಸ್ತ್ರದ ಪ್ರಕಾರ “ಮಾನವನು ಅತಿಮಾನುಷ ಶಕ್ತಿಯೊಡನೆ ಮಾಡಿಕೊಂಡ ಹೊಂದಾಣಿಕೆಯ ಫಲವೇ ಧರ್ಮ ಅಥವಾ ಕಣ್ಣಿಗೆ ಕಾಣದ ಕೈಗೆ ನಿಲುಕದ ಅಲೌಕಿಕ ಶಕ್ತಿಯೊಡನೆ ಮಾಡಿಕೊಂಡ ಅನುಸಂಧಾನದ ಫಲವೇ ಧರ್ಮ”. ಧರ್ಮ ಶ್ರದ್ಧೆಯಿಲ್ಲದಿದ್ದರೆ ಪರಿಪೂರ್ಣ ವ್ಯಕ್ತಿತ್ವವನ್ನು ಸಾಧಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಪ್ರಸಿದ್ಧ ಮನಶ್ಯಾಸ್ತ್ರಜ್ಞಝಾಂಗ್‌ ಎಂಬುವನ ಅಭಿಪ್ರಾಯ. ಇದರಿಂದ ಮಾನವ ಜೀವನದಲ್ಲಿ ಧರ್ಮ ಹೇಗೆ ಅನಿವಾರ್ಯವಾಗಿದೆ ಎಂಬುದು ತಿಳಿಯುತ್ತದೆ.

“ಹೀನಂ ದೂಷಯತಿ” ಎಂದರೆ ಹೀನವಾದುದನ್ನು ದೂಷಿಸುವುದೇ ಹಿಂದೂಧರ್ಮ. ವಿಶ್ವಬ್ರಾಹ್ಮಣರ ಗೋತ್ರರ್ಷಿಗಳಲ್ಲಿ ಓರ್ವನಿಂದ ಪ್ರಣೀತವಾದ ಈ ಧರ್ಮಕ್ಕೆ ಸನಾತನ ಎಂಬ ಇನ್ನೊಂದು ಹೆಸರೂ ಇದೆ.

ಸತ್ಯಂ ಬ್ರೂಯಾತ್ಪ್ರಿಯಂ ಬ್ರೂಯಾತ್ ಬ್ರೂಯಾತ್ಸತ್ಯಮಪ್ರಿಯಂ |
ಪ್ರಿಯಂ ಚಾನೃತಂ ಬ್ರೂಯಾತ್ಏಷ್ಯಧರ್ಮ ಸನಾತನಃ |
ಸನಾಆತನೋತಿ ಅತಿ ಸನಾತನಃ ||

ಶಾಶ್ವತವಾದ ಸುಖವನ್ನು ಬಿತ್ತರಿಸುವುದರಿಂದ ಇದಕ್ಕೆ ಸನಾತನ ಎಂಬುದು ಅನ್ವರ್ಥನಾಮ. ವಿಶ್ವಬ್ರಾಹ್ಮಣರು ಪಂಚಶಿಲ್ಪಗಳಿಂದ ವಿಶ್ವದ ಕಲ್ಯಾಣವನ್ನು ಸಾಧಿಸುತ್ತ ಬಂದಿದ್ದಾರೆ. ವಿಶ್ವದ ಸುಖಕ್ಕಾಗಿ ಕೆಲಸ ಮಾಡುವುದು ವಿಶ್ವಕರ್ಮ ಧರ್ಮ.

ಸತ್ಯವಾನ್ಬ್ರಹ್ಮಚಾರೀ ಶುದ್ಧಾತ್ಮ ವಿಜಿತೇಂದ್ರಿಯಃ |
ಸರ್ವಜೀವ ದಯಾಳುರ್ಯಃ ಸಃ ಭವೇತ್ವಿಶ್ವ ಬ್ರಾಹ್ಮಣಃ ||

ವಿಶ್ವಬ್ರಾಹ್ಮಣನು ಸತ್ಯವಂತನೂ ಬ್ರಹ್ಮಚಾರಿಯೂ ಶುದ್ಧಾತ್ಮನೂ ಇಂದ್ರಿಯನಿಗ್ರಹಿಯೂ ಸರ್ವಜೀವಿಗಳಲ್ಲಿ ದಯೆಯುಳ್ಳವನೂ ಆಗಿರಬೇಕು. “ಹೇಳುವುದ ಶಾಸ್ತ್ರ, ಇಕ್ಕುವುದು, ಗಾಳ” ಎಂಬಂತೆ ಆಗಬಾರದು. ಈ ಎಲ್ಲ ಗುಣಗಳು ವಿಶ್ವಬ್ರಾಹ್ಮಣರ ಆಚರಣೆಗಳಲ್ಲಿ ಕಂಡು ಬರಬೇಕು.

“ಆಚಾರೋಹಿ ಪ್ರಥಮೋ ಧರ್ಮಃ” ಎಂಬುದು ಶ್ರುತಿವಾಕ್ಯ. ವಿಶ್ವ ಬ್ರಾಹ್ಮಣರು ಪ್ರಾಚೀನ ಕಾಲದಿಂದಲೂ ಆಚಾರವಂತರಾಗಿದ್ದರು ಎಂಬುದಕ್ಕೆ ಅವರ “ಆಚಾರಿ” ಮತ್ತು “ಆಚಾರ್ಯ” ಎಂಬ ಉಪನಾಮಗಳೇ ಸಾಕ್ಷಿ. “ಆಕಾರೋ ಆಗಮಾರ್ಥಂಚ ಚಕಾರೋ ಸರ್ವಶಾಸ್ತ್ರ ಕೋವಿದಃ ರಿಕಾರೋ ದೇವತೋತ್ಪತ್ತಿಃ ಆಚಾರೀ ಅಕ್ಷರ ತ್ರಯಂ”. ಆಗಮಾರ್ಥವನ್ನು ಅರಿತವನು, ಸರ್ವಶಾಸ್ತ್ರ ಕೋವಿದನು, ದೇವತಾದಿ ವಿಗ್ರಹಗಳನ್ನು ನಿರ್ಮಿಸುವನು ಆಚಾರಿ, “ಆಚಾರೋ ಅಸ್ಯ ಆಸ್ತಿ ಇತಿ” ಅಂದರೆ ಶಾಸ್ತ್ರೋಕ್ತವಾದ ಕಕರ್ಮಾಚರಣೆಯುಳ್ಳವನು, ಸದಾಚಾರ ಸಂಪನ್ನನಾದವನು ಆಚರಿ.

“ಸ್ಥಪತಿ ಸ್ಥಾಪಕಶ್ಚೈವೇತ್ಯಾಚಾರ್ಯೋ ವಿಶ್ವಕರ್ಮಣಃ” ಎಂದು ಸ್ಕಂದಪುರಾಣದ ನಾಗರಖಂಡ ಹೇಳಿದೆ. ಸ್ಥಪತಿ, ಸ್ಥಾಪಕ, ಆಚಾರ್ಯ ವಿಶ್ವಕರ್ಮರ ಅಭಿದಾನಗಳು. “ಅಚಿನೋತಿ ಚ ಶಾಸ್ತ್ರಾರ್ಥಂ ಆಚಾರೇ ಸ್ಥಾಪಯುತ್ಯಪಿ | ಸ್ವಯಾಮಾಚರತೇ ಯುಸ್ಮಾತ್‌ ತಸ್ಮಾದಾಚಾರ್ಯ ಉಚ್ಯತೆ || ” ಶಾಸ್ತ್ರದ ಅರ್ಥವನ್ನು ಅರಿತು, ಸ್ವತಃ ಆಚರಿಸಿ, ಇತರರನ್ನು ಆಚರಣೆಯಲ್ಲಿ ತೊಡಗಿಸುವವನು ಆಚಾರ್ಯ. ಆಚಾರ್ಯನೆಂದರೆ ಗುರು. ಒಂದು ಕಾಲದಲ್ಲಿ ವಿಶ್ವಬ್ರಾಹ್ಮಣರು “ಜಗದ್ಗುರು” ಎಂಬ ವಿಶಿಷ್ಟಾಭಿದಾನವನ್ನು ಪಡೆದು ಮೆರೆದಿದ್ದರು ಎಂಬುದು ಸರ್ವವಿಧಿತ. ಗುರು ಎಂಬರ್ಥದ “ಓಜ” ಎಂಬ ವಿಶ್ವಬ್ರಾಹ್ಮಣರ ಉಪನಾಮವೇ ಇದಕ್ಕೆ ಸಾಕ್ಷಿ.

ನಿತ್ಯ ಸಂಧ್ಯಾವಂದನೆ ವಿಶ್ವಬ್ರಾಹ್ಮಣರ ಆಚರಣೆಗಳಲ್ಲಿ ಒಂದು. ಸಂಧ್ಯಾವಂದನೆಯಲ್ಲಿ ಜಪಿಸಬೇಕಾದ ಗಾಯತ್ರಿ ಮಂತ್ರ ಮಹತ್ವಪೂರ್ಣವಾಗಿದೆ. “ಗಾಯಂತಂ ಭಕ್ತಂ ಯಾತ್ರಾಯತೇ ಸಾ ಗಾಯತ್ರಿಮನನಾತ್‌ ತ್ರಾಯತೇ” ಮನನ ಮಾಡುವುದರಿಂದ ಯಾವುದು ನಮ್ಮನ್ನು ರಕ್ಷಿಸುವುದೋ ಅದೇ ಮಂತ್ರ. ಜಪಿಸುವವನನ್ನು ಗಾಯತ್ರಿ ಮಂತ್ರ ಸದಾ ರಕ್ಷಿಸುತ್ತದೆ. ಈ ಗಾಯತ್ರಿ ಮಂತ್ರದಲ್ಲಿ ಬರುವ ಸವಿತೃ ಬೇರೆ ಯಾರೂ ಅಲ್ಲ. “ಯೋನಃ ಪಿತಾ ಜನಿತಾ ಧಾತಾ ವಿಧಾತಾ ಪರಮೋತ ಸಂದೃಕ್‌” ಎಂದು ಋಗ್ವೇದವು ವರ್ಣಿಸಿದ ವಿಶ್ವಕರ್ಮನೇ ಆಗಿದ್ದಾನೆ.

ಪ್ರಾಣಾಯಾಮ ಸಂಧ್ಯಾವಂದನೆಯ ಒಂದು ಅಂಗ. ಇದರ ಅನುಷ್ಠಾನದಿಂದ ಆಯುಷ್ಯ ವರ್ಧಿಸುತ್ತದೆ. ಭಸ್ಮಧಾರಣೆಯಿಂದ ಪಾಪ, ರೋಗಗಳು ನಾಶವಾಗುತ್ತವೆ. “ಜಹತಿ ಪಾಪಂ” ಪಾಪ ನಾಶ ಮಾಡುವುದರಿಂದ ಈ ಸಂಧ್ಯಾವಂದನೆಗೆ ಜಪ ಎಂಬ ಇನ್ನೊಂದು ಹೆಸರು ಪ್ರಚಲಿತವಾಗಿದೆ.

ಜಕರೋ ಜನ್ಮ ವಿಚ್ಛೇದಃ ಪ್ರಕಾರಃ ಪಾಪನಾಶಕಃ |
ತಸ್ಮಾಜ್ಜಪ ಇತಿಪ್ರೋಕ್ತಃ ಜನ್ಮ ಪಾಪ ವಿನಾಶಕಃ |

ಸಂಸಾರ ತಪ್ಪಿಸಿ ಪಾಪ ಪರಿಹರಿಸುವ ಭಗವಂತನ ಧ್ಯಾನವೇ ಜಪ ಎಂದೆನಿಸುವುದು.

ವಿಶ್ವಬ್ರಾಹ್ಮಣರು ತಮ್ಮ ಕುಲದೇವತೆ ಕಾಳಿಕಾಂಬೆಯನ್ನು ಪ್ರತಿದಿನ ಪೂಜಿಸುವ ಪದ್ಧತಿ ಇಂದಿಗೂ ಜೀವಂತವಾಗಿದೆ. ಕಾ(ಲೀ) ಇವರಿಗೆ ತಾಯಿಯಾದರೆ ಕಃ (ವಿಶ್ವಕರ್ಮ) ತಂದೆ-ಉಪಾಕರ್ಮ, ಶ್ರೀ ವಿಶ್ವಕರ್ಮ ಪೂಜೆ, ಆಯುಧ ಪೂಜೆ ಇತ್ಯಾದಿ ವಿಶ್ವಬ್ರಾಹ್ಮಣರು ವರ್ಷಕ್ಕೊಮ್ಮೆ ಮಾಡುವ ಸಾಮೂಹಿಕ ಆಚರಣೆಗಳು. ಸಾಮಾಜಿಕ ಭಾವೈಕ್ಯದ ದೃಷ್ಟಿಯಿಂದ ಈ ಆಚರಣೆಗಳು ಅನಿವಾರ್ಯವಾಗಬೇಕು. ವಿಶ್ವಬ್ರಾಹ್ಮಣರ ವಿಶಿಷ್ಟ ಹಬ್ಬ ನವರಾತ್ರಿ. ಇದೇ ಕರ್ಣಾಟಕದ ನಾಡಹಬ್ಬವೆಂದು ಸರ್ವವಿಧಿತ.

ಗರ್ಭಾದಾನಂ ಪುಂಸವನಂ ಸೀಮಂತೋ ಜಾತ ಕರ್ಮಚ |
ನಾಮಕ್ರಿಯಾ ನಿಷ್ಕ್ರಮಣೋನ್ನಪ್ರಾಶನಂ ವಚನಕ್ರಿಯಾ ||
ಕರ್ಣವೇದೋ ವ್ರತಾದೇಶೋ ವೇದಾರಂಭ ಕ್ರಿಯಾವಿಧಿಃ |
ಕೇಶಾಂತಃ ಸ್ನಾನಮುದ್ವಾಹೋ ವಿವಾಹಾಗ್ನಿ ಪರಿಗ್ರಹಃ ||
ಚಿತಾಗ್ನಿ ಸಂಗ್ರಹಶ್ಚೈವ ಸಂಸ್ಕಾರಾಃ ಷೋಡಶ ಸ್ಮೃತಾಃ ||

ಈ ಷೋಡಶ ಸಂಸ್ಕಾರಗಳು ವಿಶ್ವಬ್ರಾಹ್ಮಣರ ಆಚರಣೆಗಳಲ್ಲಿ ಸೇರಿವೆ.

“ಸ್ವಜಾತಿಯವರಿಂದಲ್ಲದೆ ಅನ್ಯರಿಂದ ಊಟ ತಿಂಡಿ ಸ್ವೀಕರಿಸುವುದಿಲ್ಲ. ಅವರಲ್ಲಿ ಮಧು ಮಾಂಸ ಪದ್ಧತಿ ಇಲ್ಲ. ಬ್ರಾಹ್ಮಣರಿಗಿಂತ ವರಿಷ್ಠಕುಲ” ಎಂದು ವಿವಿಧ ಗೆಜೆಟ್‌ಯರ್ಗಳಲ್ಲಿರುವ ಉಲ್ಲೇಖಗಳು ವಿಶ್ವಬ್ರಾಹ್ಮಣರ ಆಚಾರ ವಿಚಾರಗಳು ಹೇಗಿದ್ದವು ಎಂಬುದನ್ನು ಸಾರುತ್ತವೆ.

ಶೂದ್ರ ಕೋಟಿ ಸಹಸ್ರಾಣಾಂ ಏಕ ವಿಪ್ರಃ ಪ್ರತಿಷ್ಠಿತಃ |
ವಿಪ್ರಕೋಠಿ ಸಹಸ್ರಾಣಾಂ ಏಕಶಿಲ್ಪೀ ಪ್ರತಿಷ್ಠಿತಃ ||

ಶಿಲ್ಪಶಾಸ್ತ್ರದ ಶಿಲ್ಪಿ ಪೂಜನ ವಿಧಿಯಲ್ಲಿ ಕೋಟಿ ವಿಪ್ರರಿಗೆ ಒಬ್ಬ ಶಿಲ್ಪಿ (ವಿಶ್ವ) ಬ್ರಾಹ್ಮಣ ಸಮ ಎಂದು ಹೇಳಲಾಗಿದೆ. ಇದರಿಂದ ವಿಶ್ವ ಬ್ರಾಹ್ಮಣರ ಯೋಗ್ಯತೆಯೇನೆಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಇದಕ್ಕೆ ಅನುಗುಣವಾಗಿ ವಿಶ್ವಬ್ರಾಹ್ಮಣರ ಆಚರಣೆಗಳು ಇರಬೇಕೇ ವಿನಾ ಬ್ರಾಹ್ಮಣೋಚಿತವಲ್ಲದ ಅನ್ಯ ಆಚರಣೆಗಳು ವಿಶ್ವಕರ್ಮರಿಗೆ ಸುತರಾಂ ಭೂಷಣವಲ್ಲ.

ಇದಲ್ಲದೆ ವಿಶ್ವಕರ್ಮ, ಕಾಳಿಕಾದೇವಿ, ಮೂರು ಜಾವಧೀಶರು, ಶಿವ, ಮೌನೇಶ್ವರ, ವೀರಭದ್ರ ದೇವರು ಈ ಎಲ್ಲಾ ದೇವಾನುದೇವತೆಗಳನ್ನು ಆರಾಧಿಸುತ್ತಾರೆ ಮತ್ತು ಭಾರತೀಯ ಸಂಸ್ಕೃತಿಯ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಜಾತ್ರೆ, ಮಹೋತ್ಸವ, ಆರಾಧನೆಗಳನ್ನು ಮಾಡುತ್ತಾರೆ.