ವಿಶ್ವಕರ್ಮರ ವಿಶ್ವಧರ್ಮ (ಮೂರುಜಾವಿ ದೇವರ ಪರಂಪರೆಯ ವಿಶ್ವಧರ್ಮ)

ವಿಶ್ವಕರ್ಮರ ವಿಶ್ವಧರ್ಮ (ಮೂರುಜಾವಿ ದೇವರ ಪರಂಪರೆಯ ವಿಶ್ವಧರ್ಮ), ವಿಶ್ವಕರ್ಮ ಸಮಾಜದರ್ಶನ – ವಾರ್ಷಿಕ ವಿಶೇಷಾಂಕ ೧೯೯೮. ಆಚರಣೆಯನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಡಾ. ವ್ಹಿ.ಜಿ. ತುಳಸಿಗೇರಿ, ಧಾರವಾಡ ಅವರು ಹೀಗೆ ವಿವರಿಸುತ್ತಾರೆ.

ವಿಶ್ವಧರ್ಮ ಕಲ್ಪನಾತೀತವಾದ ಧರ್ಮವೇನಲ್ಲ. ಕಲ್ಪನೆಯ ಪರಿಧಿಯೊಳಗೆ ಇರುವ ಧರ್ಮ ಭೂತದಲ್ಲಿ ಎಲ್ಲೋ ಅಡಗಿತ್ತು ಇತ್ತಿತ್ತಲಾಗಿ ಅಲ್ಲಿ ಇಲ್ಲಿ ಎಲ್ಲ ಕಡೆಗೂ ಸದ್ದು ಮಾಡುತ್ತಲಿದೆ. ವಿಕಿರಣದಿಂದ ಭೌತವಸ್ತುವಿನ ಮೂಲ ಕಣಗಳು ಪರಸ್ಪರ ಒಂದಕ್ಕೊಂದು ಡಿಕ್ಕಿ ಹೊಡೆಯುವುದರಿಂದ ಉಂಟಾಗುವ ಪರಿಣಾಮವೇ ಭೌತಶಾಸ್ತ್ರದ ಚಮತ್ಕಾರಗಳು. ಇವುಗಳ ಅಭ್ಯಾಸಕ್ಕೆ ಕ್ವಾಂಟಮ್‌ ಶಾಸ್ತ್ರ ಅತ್ಯುಪಯುಕ್ತ. ಇದೊಂದು ಸೀಮಿತ ಅಭ್ಯಾಸ, ಭೌತಶಾಸ್ತ್ರದ ಇನ್ನೊಂದು ಮುಖ ಖಗೋಲಶಾಸ್ತ್ರ. ಇಡೀ ವಿಶ್ವದಲ್ಲಿ ಕಾಣುವ ಚಮತ್ಕಾರಗಳ ಅಭ್ಯಾಸಕ್ಕೆ ಕ್ವಾಂಟಮ್‌ ಶಾಸ್ತ್ರ ಮೂಲ. ಆದರೆ ಇಲ್ಲಿ ಕ್ಷೇತ್ರ-ಕ್ಷೇತ್ರಗಳ ಚಲನೆಯಿಂದ ಪರಸ್ಪರ ಡಿಕ್ಕಿ ಹೊಡೆಯುವುದರಿಂದ ಉಂಟಾಗುವಂಥವುಗಳು. ಕ್ವಾಂಟಮ್‌ ಶಾಸ್ತ್ರ ಸಾವಿರದ ಒಂಬೈನೂರರಲ್ಲಿ ಜನ್ಮವೆತ್ತಿ, ಬೆಳೆಯುತ್ತ ನಡೆದಿದೆ. ಮಾನವನ ಲಕ್ಷ್ಯ ಈಗ ಕಣಗಳಿಂದ ಕ್ಷೇತ್ರಕ್ಕೂ, ಅಂದರೆ ಸಣ್ಣ ಅತಿ ಸಣ್ಣ ಕಣಗಳಿಂದ ಅನಂತರ ಅಭ್ಯಾಸಕ್ಕೆ ಕಾಲಿಟ್ಟಿದೆ. ಈ ಅನಂತರ ಅಭ್ಯಾಸಕ್ಕೆ ಮಾನವನು ಸಂಕುಚಿತವಾಗಿ ಉಳಿದರೆ ಸಾಲದು. ಹೀಗಾಗಿ ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಿರುವ ಮನುಷ್ಯರು ಪರಸ್ಪರ ಸಮೀಪಕ್ಕೆ ಬರುತ್ತಿರುವರು. ಇದೊಂದು ಆರೋಗ್ಯಕರ ಬೆಳವಣಿಗೆ ಎಂದೇ ಹೇಳಬಹು೭ದು.. ಈ ಬೆಳವಣಿಗೆ ಮನುಷ್ಯನ ಹೃದಯದಲ್ಲಿನ ಆಂತರಿಕ ಬೆಳವಣಿಗೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಅನಂತರದ ವಿಚಾರ, ಕಲ್ಪನೆಯ ಹಸುಗೂಸು ಅನಿಸಿದರೂ ಅದೊಂದು ಇರುವಂಥದ್ದು ಸತ್ಯವಾದದ್ದು. ಈ ಸತ್ಯಶೋಧನೆ ಮನುಷ್ಯನನ್ನು ಹಾಗೆ ಮುಂದುವರೆಸಿಕೊಂಡು ಹೋಗುವಂಥದು. ಕಾರಣ ಅದು ಅನಂತವಾದದ್ದು. ತತ್ವಶಾಸ್ತ್ರ ಅಥವಾ ಅಧ್ಯಾತ್ಮ, ಪಂಡಿತರ ಪರಿಕಲ್ಪನೆಯಲ್ಲಿ ಅನಂತದಲ್ಲಿರುವ ಸತ್ಯವನ್ನು ದೇವರು ಎಂದು ಕರೆದರು. ಜನರ ಕಲ್ಪನೆಯಲ್ಲಿ ಯಾವುದು ಇರಲಾರದ್ದೋ ಅದು ಇರುವಂಥದ್ದು, ಅದು ಸತ್ಯವಾಗಿದ್ದು ಅದನ್ನೇ ದೇವರು ಎಂದು ಸಂಭೋದಿಸಿದರು. ಇದು ಸತ್ಯವಾದದ್ದು, ನಿತ್ಯವಾದದ್ದು. ಅದಕ್ಕಾಗಿ ಮಹಾತ್ಮರು ಹಂಬಲಿಸಿದ್ದಾರೆ. ಜನರು ಪ್ರಯತ್ನಪಟ್ಟಿದ್ದಾರೆ. ಆದರೆ ಪಡೆದವರೆಷ್ಟು! ಅದು ನನಗೆ ತಿಳಿಯದು. ಇಂಥ ಸತ್ಯವನ್ನು ಅರಿಯಲು ಒಂದು ಚೌಕಟ್ಟುಬೇಕು, ಮಾರ್ಗಬೇಕು, ಈ ಮಾರ್ಗವನ್ನು ಧರ್ಮ ಶಬ್ದದಿಂದ ಕರೆದರೆ ತಪ್ಪಾಗಲಾರದು. ಸತ್ಯ ಎರಡಲ್ಲ ಒಂದು. ಮಾನವರೆಲ್ಲ ಬೆರೆ ಅಲ್ಲ ಒಂದಲು. ನಮ್ಮೆಲ್ಲ ಮಾನವರಿಗೆ ಒಂದು ಧರ್ಮ, ಒಂದು ಸತ್ಯ, ಇದನ್ನೇ ವಿಶ್ವಕರ್ಮ ಎಂದು ವ್ಯಾಖ್ಯಾನಿಸಿದರೆ ತಪ್ಪಾಗಲಾರದು. ಆ ಒಂದು ಸತ್ಯ (Ultilmate Truth) ವನ್ನು ಅರಿಯಲು, ಪಡೆಯಲು ಸಾಧಕನಿಗೆ ವಿಶ್ವಧರ್ಮ ಒಂದು ಊರುಗೋಲು, ಇದರರ್ಥ ಮಾನವನು ಸಂಕುಚಿತತನವನ್ನು ಬಿಟ್ಟು ಅನಂತನಾಗಬೇಕು. ಆವಾಗಲೇ ಸತ್ಯದರ್ಶನ.

ಈ ಮೇಲೆ ಕಾಣಿಸಿದ ವಿಚಾರಗಳು ಸಾವಿರದ ಒಂಬೈನೂರರಿಂದ ಖಚಿತವಾದ ವೈಜ್ಞಾನಿಕ ಆಧಾರದ ತಳಹದಿಯಿಂದ ಉದಯಿಸಿದವುಗಳು ಎಂದು ಯಾರೂ ಮೂಗುಮುರಿಯಲುಬಾರದು. ನಮ್ಮ ದೇಶ ಹೆಮ್ಮೆಪಡುವಂಥ ದೇಶ, ಕಾರಣ ಇದು ಅಮೂಲ್ಯ ಅಧ್ಯಾತ್ಮಿಕ ಗಣಿಗಳಿಂದ ತುಂಬಿ ತುಳುಕುವ ನಾಡು. ಒಂದು ವೇಳೆ ಪುನರ್ ಜನ್ಮವೊಂದು ಇದ್ದುದಾದರೆ ಪುನಃ ಈ ನಾಡಿನಲ್ಲಿ ಜನ್ಮ ತಾಳಬೇಕೆಂದು ಹಂಬಲಿಸಬಹುದಾದ ನಾಡು. ಮೇಲೆ ಹೊರಹೊಮ್ಮಿದ, ಉದಹರಿಸಿದ ವಿಚಾರಗಳು ವೇದ-ಉಪನಿಷತ್‌ಗಳಲ್ಲಿ ತುಂಬಿ ತುಳುಕುತ್ತಿವೆ. ಜೀವ-ಪರಮಾತ್ಮ-ಮನುಷ್ಯ-ವಿಶ್ವ-ಸತ್ಯಗಳ ಸಂಬಂಧಗಳ ಬಗ್ಗೆ ಖಚಿತವಾಗಿ ಹೇಳುವಂಥ ಉದ್ಗ್ರಂಥಗಳು ವೇದಗಳು. ಈಗ ಕಂಡು ಬರುವ ವೈಜ್ಞಾನಿಕ ಅವಿಷ್ಕಾರಗಳ ಉಲ್ಲೇಖವನ್ನು ವೇದಗಳಲ್ಲಿ ಕಾಣಬಹುದಾಗಿದೆ. ಆದರೆ ಎಂಥ ವಿಜ್ಞಾನವಿತ್ತು. ಅದರ ಸೂತ್ರಗಳ ಬಗ್ಗೆ ಖಚಿತವಾದ ವಿವರಗಳು ಹಾಗೂ ಅವುಗಳಲ್ಲಿನ ವೈಜ್ಞಾನಿಕ ತಂತ್ರಗಳು ಸುಮಾರು ಹದಿನೆಂಟು ಹತ್ತೊಂಬತ್ತನೆಯ ಶತಮಾನದವರೆಗೂ ಯಾರಿಗೂ ತಿಳಿದಿದ್ದಿಲ್ಲ, ಅಲ್ಲವೇ? ಹೀಗಾಗಿ ವೇದಗಳಲ್ಲಿನ ವಿಜ್ಞಾನ ವಾಸ್ತವಿಕವೆಂದು ತಿಳಿದರೆ ವೇದ ಕಾಲದಲ್ಲಿ ಅರಿಸ್ಟಾಟಲ್‌ನಿಂದ ಗೆಲಿಲಿಯೋನವರೆಗೆ ಸೂರ್ಯನು ಭೂಮಿಯ ಸುತ್ತ ತಿರುಗುತ್ತಿರಲಿಲ್ಲ. ವೇದಗಳು ನಮ್ಮ ದೇಶದ ಸಂಸ್ಕೃತಿಯ ಮೂಲ ಆಧಾರವೆಂದು ಇಟ್ಟುಕೊಳ್ಳೋಣ. ಅವುಗಳ ಬಗ್ಗೆ ಅದರ ಇಟ್ಟು ಕೊಳ್ಳೋಣ, ಇಷ್ಟು ಹೆಮ್ಮೆ ಇಟ್ಟುಕೊಂಡ ದೇಶವು ಸೂರ್ಯನು ಭೂಮಿಯ ಸುತ್ತ ತಿರುಗುತ್ತಾನೆಂಬ ಅಸತ್ಯವನ್ನು ಎದೆ ತಟ್ಟಿ ಎಲ್ಲಿಯೂ ಅಲ್ಲಗಳೆದಿಲ್ಲ.

ಸೂರ್ಯನ ಸುತ್ತ ಭೂಮಿ ತಿರುಗುತ್ತದೆಂದು ಖಚಿತವಾದ ಪ್ರಯೋಗದಿಂದ ವಿಜ್ಞಾನಿ ಗೆಲಿಲಿಯೋ ತೋರಿಸಿಕೊಟ್ಟರೂ ಯಾರೂ ನಂಬಲಿಲ್ಲ. ಅಷ್ಟೇ ಅಲ್ಲ, ಅವನನ್ನು ಜೈಲಿನಲ್ಲಿ ಇಟ್ಟು ಸಾಯಿಸಲಾಯಿತು. ವೇದಗಳಲ್ಲಿ ವಿಜ್ಞಾನ ಇತ್ತು. ಇದೆ ಎಂದು ತುಳುಸಿಗೇರಿ ಅವರು ನಂಬುತ್ತಾರೆ. ಕಾಲ ಕಳೆದಂತೆ ಅವುಗಳನ್ನು ಅರ್ಥೈಸುವ ಶಕ್ತಿ ಜನರಲ್ಲಿ ಕಡಿಮೆಯಾಗಿರಬೇಕು. ಇತ್ತೀಚಿನ ವೈಜ್ಞಾನಿಕ ಬೆಳವಣಿಗೆ ಕೇವಲ ಭೂಮಿಗೆ ಸೀಮಿತವಾಗಿರದೇ ನಮ್ಮ ಸೂರ್ಯಮಂಡಲ ಹಾಗೂ ವಿಶ್ವದ ಸೂರ್ಯ ಮಂಡಲಗಳಿಗೆ ವಿಸ್ತರಿಸಿದೆ. ಇದೊಂದು ಆರೋಗ್ಯಕರ ಬೆಳವಣಿಗೆ ಎಂದೇ ಹೇಳಬಹುದು. ಕಾರಣ ಮಾನವನು ತನ್ನಷ್ಟಕ್ಕೆ ತನ್ನ ಸಮಾಜಕ್ಕೆ, ದೇಶಕ್ಕೆ ಸೀಮಿತನಾಗಿರದೇ ಇಡೀ ಅನಂತದ ವಿಶ್ವದ ಕಡೆಗೆ ಅವನ ದೃಷ್ಟಿ ವಿಶಾಲವಾಗುತ್ತ ನಡೆದಿದೆ. ಇದರರ್ಥ ಅವನಲ್ಲಿರುವ ಸಂಕುಚಿತತನ ವಿಶಾಲ ಜಗತ್ತಿನೊಡನೆ, ವಿಶ್ವದೊಡನೆ ವಿಶಾಲವಾಗುತ್ತ ನಡೆದಿದೆ. ವಿಕಸಿತಗೊಂಡ ಅವನ ಮನಸ್ಸು ವಿಶ್ವಧರ್ಮ, ಒಂದು ಸತ್ಯದ ಕಡೆಗೆ ಹೋಗುತ್ತಿರುವುದು ಯಾರಿಗೆ ಸಂತೋವಾಗಲಿಕ್ಕಿಲ್ಲ!

ವೇದಗಳು ಅತಿ ಪುರಾತನವು. ಆ ಸಮಯದಲ್ಲಿ ವಿಶ್ವಧರ್ಮದ ಸತ್ಯಾನ್ವೇಷಣೆ ನಡೆದಿತ್ತು ಎಂದು ಭಾವಿಸೋಣ. ವೇದಗಳು ಎಷ್ಟು ವರ್ಷಗಳ ಹಿಂದೆ ಇದ್ದವು ಎಂಬುದು ಮುಖ್ಯವಲ್ಲ. ವೇದಕಾಲವೊಂದಿತ್ತು. ವೇದಗಳು ಇದ್ದವು ಅನ್ನುವುದಕ್ಕೆ ಈಗ ಲಭ್ಯವಿರುವ ವೇದಗಳೇ ಸಾಕ್ಷಿ. ಆದರೆ ಇತಿಹಾಸದ ಪುಟಗಳನ್ನು ಇಣುಕಿದಾಗ ವೇದಕಾಲ ಹಾಗೂ ಬುದ್ಧನಕಾಲ ಈ ಮಧ್ಯಂತರದಲ್ಲಿ ವಿಶ್ವಧರ್ಮ ಹಾಗೂ ಸತ್ಯದ ಅನ್ವೇಷಣೆ ಎಲ್ಲಿಯೂ ಕಂಡು ಬರುವುದಿಲ್ಲ. ಈ ವಿಚಾರಗಳಿಗೆ ರೆಕ್ಕೆ ಬಂದದ್ದು ಬುದ್ಧನ ಕಾಲದಲ್ಲಿ ಹಾಗೂ ತದನಂತರ ವಿಶ್ವಧರ್ಮ ಹಾಗೂ ಸತ್ಯಾನ್ವೇಷಣೆ ಜನರ ಮೇಲೆ ಎಷ್ಟು ಪರಿಣಾಮ ಬೀರಿತೆಂದರೆ ಇಡೀ ಜಗತ್ತನ್ನೇ ಬೌದ್ಧ ಧರ್ಮ ವ್ಯಾಪಿಸಿತು. ತದನಂತರ ಈ ವಿಚಾರಗಳ ಮಂಥನ, ಕಾರ್ಯಾಚರಣೆ ಹನ್ನೆರಡನೆಯ ಶತಮಾನದಲ್ಲಿ ನಡೆದು ಹೋದ ಶರಣರ ಕ್ರಾಂತಿಯ ಕಹಳೆಯಲ್ಲಿ ಕಂಡು ಬರುತ್ತದೆ. ಶಂಕರ, ಮಧ್ವ ಹಾಗೂ ರಾಮಾನುಜಾಚಾರ್ಯರ ತತ್ವಗಳು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಪ್ರತಿಪಾದಿಸಿದ ಧರ್ಮಗಳಾಗಿದ್ದು ಅವು ನಿರ್ದಿಷ್ಟ ಜನರಿಗೆ ಸೀಮಿತವಾದವು. ಕೆಲ ಜನರ ದೃಷ್ಟಿಯಲ್ಲಿ ಹಿಂದೂ ಧರ್ಮ ಕೇವಲ ಕಲ್ಪನೆಯ ಹಸುಗೂಸು.

ಹೀಗಾಗಿ ವಿಶ್ವಧರ್ಮ ಸತ್ಯದ ಅನ್ವೇಷಣೆ ಇತಿಹಾಸದಲ್ಲಿ ಒಮ್ಮೆ ಕಂಡು, ಒಮ್ಮೆ ಕಾಣದಂತೆ ಇದ್ದು ಇತ್ತಿತ್ತಲಾಗಿ ಅದು ಸ್ಪಷ್ಟವಾಗಿ ಗೋಚರಿಸುತ್ತಿರುವುದು ಸಂತೋಷದ ಸಂಗತಿಯೆ. ತುಳುಸಿಗೇರಿ ಅವರು ಪ್ರಾರಂಭದಲ್ಲಿ ಪ್ರತಿಪಾದಿಸಿದ್ದು ಅದು ಕೇವಲ ಊಹೆ ಯಾಗಿರದೆ ಕಣ್ಣುಬಿಟ್ಟಲ್ಲಿ ಅದನ್ನು ಖಚಿತಪಡಿಸಲು ಸಾಧ್ಯ.

ಇಷ್ಟೆಲ್ಲ ಓದಿದ ಮೇಲೆ ಮುಂದೆ ತುಳುಸಿಗೇರಿ ಏನು ಬರೆಯಬಹುದು ಎಂಬುದನ್ನು ತಾವೆಲ್ಲರೂ ಊಹಿಸಬಹುದು. ವಿಶ್ವ ಧರ್ಮಕ್ಕೂ, ವಿಶ್ವಕರ್ಮರಿಗೂ ಯಾವ ಸಂಬಂಧ ಕಲ್ಪಿಸಬಹುದು ಎಂಬುದನ್ನು ಯೋಚಿಸುತ್ತಿರಬಹುದು. ಮೊದಲನೆಯದಾಗಿ ನಾನು ಕೇಳುವ ಪ್ರಶ್ನೆ ವಿಶ್ವಕರ್ಮರಿಗೆ ಯಾವ ಧರ್ಮವಿದೆ? ಯಾವ ದೇವರಿದೆ? ಯಾವ ಜನಾಂಗಕ್ಕೆ ಧರ್ಮದ ತಳಹದಿ ಇಲ್ಲ, ದೇವರಿಲ್ಲ ಆ ಜನಾಂಗ ಬದುಕಲಿಕ್ಕೆ ಸಾಧ್ಯವಿಲ್ಲ. ಆದರೆ ಈ ದಿನ ಆ ಜನಾಂಗ ಬದುಕಿದೆ. ಹಾಗಾದರೆ ಈ ಜನಾಂಗಕ್ಕೆ ಒಂದು ದರ್ಮ ಹಾಗೂ ಒಂದು ದೇವರು ಇರಬೇಕಲ್ಲ!

ಈಗ ಒಂದೊಂದು ಪಂಗಡಕ್ಕೆ ಒಂದೊಂದು ಧರ್ಮ ಹಾಗೂ ಅವರೇ ನಿರ್ಮಿಸಿಕೊಂಡ ದೇವರುಗಳು ಅಥವಾ ದೇವತೆಗಳು ಉಂಟು. ಎಷ್ಟೋ ಪಂಗಡಗಳು ನಮ್ಮ ದೇಶದಲ್ಲಿವೆ. ಇವುಗಳ ಪರವಾಗಿ ನೂರೊಂಟು ಧರ್ಮಗಳು, ನೂರೆಂಟು ದೇವ-ದೇವತೆಗಳು ಉದ್ಭವಿಸಿವೆ.

ವಿಶ್ವಕರ್ಮರ ಕಡೆಗೆ ಸ್ವಲ್ಪ ಲಕ್ಷ್ಯ ಹರಿಸಿದರೆ ಕಂಡು ಬರುವುದೇನೆಂದರೆ ಎಲ್ಲಾ ಧರ್ಮಗಳನ್ನು, ಎಲ್ಲ ದೇವ-ದೇವತೆಗಳನ್ನು ತಮ್ಮೊಳು ಹುದುಗಿಸಿಕೊಂಡು ಮುನ್ನಡೆದ ಜನಾಂಗ, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿರುವ (In Diversity) ಜನಾಂಗ ಮುಂದಡಿ ಇಟ್ಟಿದೆ ಎಂದರೆ ಈ ಏಕತೆಯಲ್ಲಿ ಒಂದು ಧರ್ಮ, ಕಂಡರೂ ಕಾಣದಂತಿರುವ ಒಂದು ಧರ್ಮ, ಒಂದು ಸತ್ಯ ಅವರಲ್ಲಿ ಇರಲೇಬೇಕು ಎಂಬುದನ್ನು ದೃಢವಾಗಿ ಹೇಳಬಯಸುತ್ತೇನೆ. ಆ ಜನಾಂಗವೇ ವಿಶ್ವಕರ್ಮರು, ಅವರ ಧರ್ಮ ವಿಶ್ವಧರ್ಮ. ಈ ಧರ್ಮಕ್ಕೊಂದು ವಿಶ್ವಸತ್ಯ, ಒಂದು ಸತ್ಯ.

ವೈದಿಕ ಅಥವಾ ಹಿಂದುಧರ್ಮವನ್ನು ಕಾಣಬೇಕಾದರೆ ನಮ್ಮ ದೇಶದ ದಕ್ಷಿಣ ಭಾಗಕ್ಕೆ ಬಂದರೆ ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಹಿಂದೂ ಧರ್ಮದ ಸಂಸ್ಕೃತಿ ಅಚ್ಚಳಿಯದೆ ಉಳಿದಿದೆ ಹಾಗೂ ಬೆಳೆದಿದೆ. ಸಾವಿರಾರು ವರ್ಷಗಳ ಹಿಂದೆ ಆರ್ಯರು ಭಾರತ ದೇಶಕ್ಕೆ ಬಂದರು, ಆರ್ಯ ಸಂಸ್ಕೃತಿಯನ್ನು ಬಿತ್ತಿದರು. ಅವರು ಇಲ್ಲಿಗೆ ಬಂದರು ಎಂದ ಮೇಲೆ ಅವರು ಬರುವ ಮುಂಚೆ ಭಾರತ ದೇಶದಲ್ಲಿ ಜನ ಇರಬೇಕು, ಅವರದೇ ಆದ ಸಂಸ್ಕೃತಿಯೂ ಇರಬೇಕು ಎಂದರ್ಥವಲ್ಲವೇ? ಪ್ರಚಲಿತವಿರುವ ಇತಿಹಾಸ ತಜ್ಞರ ಪ್ರಕಾರ ದ್ರಾವಿಡ ಸಂಸ್ಕೃತಿಯೆಂದು ಈಗಲೂ ಹೆಮ್ಮೆಪಟ್ಟುಕೊಳ್ಳುತ್ತಾರೆ. ಹಾಗಾದರೆ ವಿಶ್ವಕರ್ಮರ ಸಂಸ್ಕೃತಿ ಯಾವುದು? ಇವರದು ಆರ್ಯರ ಸಂಸ್ಕೃತಿಯೇ ಅಥವಾ ಬೇರೆ ಸಂಸ್ಕೃತಿಯೇ? ವೈದಿಕ ಕಾಲದ ಪೂರ್ವದಲ್ಲಿ ಸೈಂಧವ ಸಂಸ್ಕೃತಿಗೆ ಸೇರಿದವರೇ? ಅಹುದು ಎಂದು ಎಷ್ಟೋ ಇತಿಹಾಸ ತಜ್ಞರ ಅಭಿಪ್ರಾಯ. ಈ ಅಭಿಪ್ರಾಯಕ್ಕೆ ಅಂಟಿಕೊಂಡರೆ ವಿಶ್ವಕರ್ಮರ ಜನಾಂಗ ಆರ್ಯರಕ್ಕಿಂತಲೂ ಭಿನ್ನ ಹಾಗೂ ಮುಂದುವರೆದ ಜನಾಂಗವೆಂದು ಸ್ಪಷ್ಟವಾಗಿ ತಿಳಿಸಬಯಸುತ್ತೇನೆ, ಹಾಗಾದರೆ ವೇದಗಳು ಆರ್ಯರು ಭಾರತಕ್ಕೆ ಬರುವ ಮುಂಚೆಯೇ ಇದ್ದುವೆ? ಇದ್ದುವೆಂದಾದರೆ ಆರ್ಯರು ಅವುಗಳನ್ನು ತಮ್ಮದಾಗಿಸಿಕೊಂಡರೆ? ಕಾರಣ ನಾಲ್ಕು ವೇದಗಳಲ್ಲಿ ಅಥರ್ವಣ ವೇದವಂತೂ ಸಂಪೂರ್ಣವಾಗಿ ವಿಶ್ವಕರ್ಮರಿಂದಲೇ ಬರೆಯಲ್ಪಟ್ಟ ವೇದವೆಂದು ಸ್ಪಷ್ಟವಾಗಿ ಹೇಳಬಯಸುತ್ತೇನೆ.

ಇಷ್ಟು ಅಖಂಡವಾಗಿ ಬೆಳೆದು, ಬದುಕಿಬಂದ ವಿಶ್ವಕರ್ಮ ಸಮಾಜ ಇಂದು ಅಷ್ಟೇ ಪ್ರಖರತೆಯಲ್ಲಿದೆ ಎಂದು ನಾವೆಲ್ಲ ವಿಶ್ವಕರ್ಮರು ಹೆಮ್ಮೆಪಟ್ಟುಕೊಳ್ಳುವಂಥಹದು. ಒಂದು ಧರ್ಮ, ಒಂದು ಸತ್ಯ ಪ್ರತಿಪಾದಿಸಿದ ದ್ಯೋತಕವಾಗಿ ವಿಶ್ವಕರ್ಮ ಸಮಾಜದಲ್ಲಿ ಆಗಿ ಹೋದ ಮಹಾಪುರುಷರು, ಪವಾಡ ಪುರುಷರೇ ಸಾಕ್ಷಿ. ಅಂಥ ಪವಾಡ ಪುರುಷರ ನೆನಪಿಗಾಗಿ ಇಂದಿಗೂ ಸಾಕ್ಷಿಭೂತವಾಗಿ ನಿಂತಿರುವ ವಿಶ್ವಕರ್ಮರ ಮಠಗಳು, ಗುಡಿಗಳೇ ಸಾಕ್ಷಿ. ಈ ಕ್ಷೇತ್ರಗಳಿಗೆ ಯಾರಾದರೂ ಭೇಟಿಕೊಟ್ಟರೆ ಒಂದು ಧರ್ಮ, ಒಂದು ಸತ್ಯ ಅರಿವು ಯಾರಿಗಾದರೂ ಖಚಿತವಾಗುತ್ತದೆ.

ಕೆಲವರು ದೇವರನ್ನು ಗಂಡಾಗಿ ಪೂಜಿಸಿದರೆ ಕೆಲವರು ಹೆಣ್ಣಾಗಿ ಪೂಜಿಸುತ್ತಾ ಬಂದಿದ್ದಾರೆ. ನನ್ನ ದೃಷ್ಟಿಯಲ್ಲಿ ದೇವರು ಗಂಡೂ ಅಲ್ಲ ಹೆಣ್ಣೂ ಅಲ್ಲ. ತುಳುಸಿಗೇರಿ ಮೊದಲೆ ತಿಳಿಸಿದಂತೆ ಯಾವುದು ಏನು ಇಲ್ಲವೊ ಅದು ಇರಲು ಸಾಧ್ಯ, ಅದು ಸತ್ಯ, ನಿತ್ಯವಾದದ್ದು, ಅದನ್ನೇ ದೇವರೆಂದರು ಕರೆದಿರುವರು. ಈಗೊಂದು ವಸ್ತು ಚಲನರಹಿತ ಸ್ಥಿತಿಯಲ್ಲಿದೆ ಎಂದು ತಿಳಿಯೋಣ. ಅದಕ್ಕೆ ಚಾಲನೆಕೊಟ್ಟಾಗ ಬೇಕಾದ ಕೆಲಸ ಮಾಡುವ ತಾಕತ್ತು ಬರುತ್ತದೆ. ಹೀಗಾಗಿ ಯಾವುದು ಏನು ಅಲ್ಲವೊ ಅದು ಚಲನೆಗೊಂಡಾಗ ಕ್ರಿಯಾತ್ಮಕವಾಗುತ್ತದೆ. ಇದನ್ನು ಕೆಲವರು ಶಕ್ತಿ, ದೇವಿ ಎಂದು ಕರೆದು ಪೂಜಿಸತೊಡಗಿದರು. ಈ ದೇವಿಯ ರೂಪಗಳು ನಮ್ಮಿಂದ ನೂರೆಂಟು ರೂಪಗಳನ್ನು ತಾಳಿದವು. ವಿಶ್ವಕರ್ಮರಿಗೆ ಈ ಶಕ್ತಿ ಶ್ರೀ ಕಾಳಿಕಾಮಾತೆಯಾಗಿ ಹೊರಹೊಮ್ಮಿದಳು. ಅವಳನ್ನೆ ಆರಾಧ್ಯದೇವತೆಯಾಗಿ ಪೂಜಿಸತೊಡಗಿದ್ದಂತೂ ಯಾರಾದರೂ ಕಾಣಲು ಸಾಧ್ಯ. ದೇವರನ್ನು ಗಂಡಾಗಿ ಕಂಡವರು ವಿಶ್ವಕರ್ಮನೆಂದು ಪೂಜಿಸತೊಡಗಿದರು. ವಿಶ್ವಕರ್ಮನೂ ಒಂದೆ, ಕಾಳಿಮಾತೆಯೂ ಒಂದೆ, ದೇವರನ್ನು ಪರಬ್ರಹ್ಮನೆಂದು ಹೆಸರಿಬಹುದಾಗಿದೆ. ಪರಬ್ರಹ್ಮನು ಗಂಡಾದರೆ ವಿಶ್ವಕರ್ಮನು ಹೆಣ್ಣಾದರೆ ಶ್ರೀ ಕಾಳಿಕಾ ಮಾತೆಯಾಗುತ್ತಾಳೆ. ಹೇಳಬೇಕಾದ ತಾತ್ಪರ್ಯ ಇಷ್ಟೆ, ವಿಶ್ವಕರ್ಮರು ಕಾಳಿಕಾಮಾತೆಯನ್ನಾಗಲಿ ಅಥವಾ ವಿಶ್ವಕರ್ಮನನ್ನಾಗಲೀ ಪೂಜಿಸಿದರೆ, ಆ ಮೂಲ ಏನೂ ಅಲ್ಲದ ಸತ್ಯವನ್ನೇ ಪೂಜಿಸುತ್ತಾರೆಂಬುದು ಸ್ಪಷ್ಟವಾಗುವುದಿಲ್ಲವೆ?

ಹೀಗಾಗಿ, ವೇದಕಾಲಕ್ಕಿಂತಲೂ ಮುಂಚಿನ ಕಾಲವನ್ನು ವಿಶ್ವಕರ್ಮರ ಮೂಲಕಾಲವೆಂದು ಬಗೆದರೆ, ಅಲ್ಲಿಂದ ಇಲ್ಲಿಯವರೆಗೆ ಅಖಂಡವಾಗಿ ಬಾಳುತ್ತ ಬಂದಿರುವ ಜನಾಂಗವನ್ನು ವಿಶ್ವಕರ್ಮರೆಂದು ಕರೆದರೆ ತಪ್ಪಾಗಲಿಕ್ಕಿಲ್ಲ. ಕಾಳಿಕಾಮಾತೆಯನ್ನೋ ಅಥವಾ ವಿಶ್ವಕರ್ಮನನ್ನೋ ಪೂಜಿಸುವ ವಿಶ್ವಕರ್ಮರು ಶೈವಸಂಪ್ರದಾಯಕ್ಕೆ ಸೇರಿದವರೆಂದು ತುಳುಸಿಗೇರಿ ಅವರು ಸ್ಪಷ್ಟಪಡಿಸುತ್ತಾರೆ. ನಾವೆಲ್ಲ ವಿಶ್ವಕರ್ಮರು ಇದನ್ನೇ ಜಪಿಸಬೇಕು, ಅದನ್ನೇ ಮೂಲ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.

ಇಷ್ಟು ಶ್ರೇಷ್ಠ ಜನಾಂಗ ಅಖಂಡವಾಗಿ ಬಾಳಿನುದ್ದಕ್ಕೂ ಏರು-ಪೇರುಗಳನ್ನು ಕಂಡು ಬದುಕುಳಿದದ್ದು ಒಂದು ಆಶ್ಚರ್ಯವೆ! ಇದನ್ನು ಸಂರಕ್ಷಿಸಿದವರು ವಿಶ್ವಕರ್ಮ ಮಠಗಳು ಹಾಗೂ ಹಲವಾರು ವಿಶ್ವಕರ್ಮ ಸಂಘ ಸಂಸ್ಥೆಗಳು. ಹೀಗೆ ಮೂರುಜಾವಿ ದೇವರ ಪರಂಪರೆಯೂ ಮುಂದುವರಿದುಕೊಂಡು ಬಂದಿದೆ.

ಮೂರುಜಾವ ಮಠಾಧೀಶರು ಮತ್ತು ಮಠಗಳ ಪರಂಪರೆ ಮತ್ತು ಅದರ ಮಹತ್ವ ಹಾಗೂ ಜನಸಾಮಾನ್ಯರೊಡನೆ ಒಡನಾಟ

ಕರ್ನಾಟಕದಲ್ಲಿ ಮೂರುಜಾವಿ ಮಠಗಳು ಮತ್ತು ಗುರುಗಳು

೧. ಅಂತರವಳ್ಳಿ
೨. ಬಂಕಾಪುರ
೩. ಹುಬ್ಬಳ್ಳಿ
೪. ವಿಜಾಪುರ (ಮೂರಣಕೇರಿ)
೫. ವಿಜಾಪುರ (ಗ್ಯಾಂಗ್‌ಬಾವಡಿ)
೬. ಆಲಮೇಲ
೭. ಸಿಂದಗಿ
೮. ಇಂಡಿ
೯. ಅಫಜಲಪುರ
೧೦. ಕೋರವಾರ
೧೧. ಮಡ್ಡಿಮಣ್ಣೂರು
೧೨. ಬಂಟನೂರು
೧೩. ಬರಡೋಲ
೧೪. ದೇವರಹಿಪ್ಪರಗಿ
೧೫. ಬೀಳಗಿ
೧೬. ಕಡೂರು
೧೭. ಭಾದ್ರಗಟ್ಟಿ (ಚಿತ್ರದುರ್ಗ ಜಿಲ್ಲೆ)
೧೮. ಮಾಯಾಕೊಂಡ (ದಾವಣಗೆರೆ ತಾಲೂಕು)
೧೯. ಬೆಳಲಗೇರಿ (ಶಿವಮೊಗ್ಗ ಜಿಲ್ಲೆ, ಚೆನ್ನಗಿರಿ ತಾಲೂಕು)
೨೦. ಮುಗುಟಖಾನ ಹುಬ್ಬಳ್ಳಿ
೨೧. ಶಿವಮೊಗ್ಗ
೨೨. ಮುದ್ದಾಬಳ್ಳಿ (ಚೆನ್ನಗಿರಿ ತಾಲೂಕು) ಮುಂತಾದ ಕಡೆಗಳಲ್ಲಿ ಮೂರುಜಾವ ಮಠಗಳಿವೆ.

ಮೂರುಜಾವ ಮಠಗಳ ಪರಂಪರೆ ಮತ್ತು ಮಹತ್ವ

. ಮೂರುಜಾವ ಮಠ (ಮೂರಣಕೇರಿ)

ಇಲ್ಲಿ ಪೂಜ್ಯಶ್ರೀಶ್ರೀಶ್ರೀ ನೀಲಕಂಠ ಮಹಾಸ್ವಾಮಿಗಳು ನಾಗೇಂದ್ರ ಸ್ವಾಮಿ ಮೂರುಜಾವ ಮಠ ಇವರು ಧಾರ್ಮಿಕ ಸಂಸ್ಕಾರಗಳನ್ನು ಮಾಡುತ್ತ ಮೂರುಜಾವಿ ದೇವರ ಜಾತ್ರೆ ಮಾಡುತ್ತಾರೆ.

ಈ ಮಠವು ಆದಿಲ್‌ಶಾಹಿ ಅರಸರ ಗೌರವಕ್ಕೆ ಪಾತ್ರವಾಗಿದೆ.

. ಮೂರುಜಾವ ಮಠ (ಗ್ಯಾಂಗಬಾವಡಿ)

ವಿಜಾಪುರ. ಇಲ್ಲಿ ಪೂಜ್ಯ ಶ್ರೀಶ್ರೀ ಮೌನೇಂದ್ರ ಮಹಾಸ್ವಾಮಿಗಳು. ಜ. ಮೂರುಜಾವದ ಮಠ ಹಾಗೂ ಪೂಜ್ಯ ಶ್ರೀಶ್ರೀಶ್ರೀ ಮಹೇಂದ್ರ ಮಹಾಸ್ವಾಮಿಗಳು ಶೇಷೇಂದ್ರಸ್ವಾಮಿ ಮೂರುಜಾವದಮಠ.

ಇಲ್ಲಿ ಪೂಜ್ಯಶ್ರೀಶ್ರೀಶ್ರೀ ಮಹೇಂದ್ರಸ್ವಾಮೀಜಿಯ ಅಜ್ಜರಾದ ಪರಮಪೂಜ್ಯ ಶ್ರೀಶ್ರೀಶ್ರೀ ಜಯೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆಚರಿಸುತ್ತಾರೆ.

ಆರಾಧನಾ ಸಂದರ್ಭದಲ್ಲಿ ಹಲವಾರು ಗಣ್ಯರಿಗೆ ಸನ್ಮಾನ, ಕಲಾವಿದರಿಗೆ, ಇತರ ಕ್ಷೇತ್ರಗಳಲ್ಲಿ ದುಡಿದ ಸಮಾಜ ಬಾಂಧವರಿಗೂ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ನಿಬಂಧ ಸ್ಪರ್ಧೆ, ಕಲಾಪ್ರದರ್ಶನ, ಧರ್ಮಚಿಂತನಕಾರರಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ಮಾಡುತ್ತಾರೆ.

ಅನ್ನದಾಸೋಹ, ಜ್ಞಾನ ದಾಸೋಹವನ್ನು ಆರಾಧನಾ ಕಾರ್ಯಕ್ರಮದಲ್ಲಿ ನಡೆಸಲಾಗುತ್ತದೆ.

. ಆಲಮೇಲ ಪೂಜ್ಯಶ್ರೀಶ್ರೀಶ್ರೀ ಮೋಹನಾಚಾರ್ಯರು
ಧಾರ್ಮಿಕ ಕಾರ್ಯ ಮತ್ತು ಸಾಮಾಜಿಕ ಕಾರ್ಯವನ್ನು ಮಾಡುತ್ತಾರೆ.

. ಕೋರವಾರ ಶ್ರೀಶ್ರೀಶ್ರೀ ಫಣೀಂದ್ರ ಮಹಾಸ್ವಾಮಿಗಳು
ಧಾರ್ಮಿಕ ಕಾರ್ಯ ಮತ್ತು ಸಮಾಜದ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ.

. ಶ್ರೀಶ್ರೀಶ್ರೀ ಚಿಕ್ಕೇಂದ್ರಸ್ವಾಮಿಗಳು, ಅಫಜಲ್ಪುರ
ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

. ಮಡ್ಡಿಮಣ್ಣೂರು ಶ್ರೀಶ್ರೀಶ್ರೀ ನೀಲಕಂಠಸ್ವಾಮಿಗಳು
ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸದಾನಿರತರು.

. ಬಂಟನೂರು ಶ್ರೀಶ್ರೀಶ್ರೀ ಶ್ರೀಶೈಲಸ್ವಾಮಿ
ಧಾರ್ಮಿಕ ಕಾರ್ಯಗಳಲ್ಲಿ ನಿರತರು ಸಮಾಜದ ಏಳಿಗೆಗೆ ಪರಿಶ್ರಮ.

. ಬೀಳಗಿ ಶ್ರೀಶ್ರೀಶ್ರೀ ಕಲ್ಲಯ್ಯಸ್ವಾಮಿಗಳು
ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಚಟುವಟಿಕೆ ನಿರತರು.

. ಬರಡೋಲ ಶ್ರೀಶ್ರೀಶ್ರೀ ಮೌನೇಶ್ವರ ಸ್ವಾಮಿಗಳು

ಸಮಾಜಮುಖಿಯಾಗಿ ವೃದ್ಧಾಶ್ರಮ, ದಾಸೋಹ, ಧಾರ್ಮಿಕ ಚಟುವಟಿಕೆ ಹಾಗೂ ಹಲವಾರು ಉತ್ಸವಗಳಲ್ಲಿ ಸಕ್ರಿಯ ಭಾಗವಹಿಸುತ್ತಾರೆ.

ಮೂರುಜಾವಿ ದೇವರ ಪರಂಪರೆಯ ಈಗಿನ ಸ್ಥಿತಿಗತಿ

ಕರ್ನಾಟಕದ ಮಧ್ಯಯುಗದ ಇತಿಹಾಸದಲ್ಲಿ ವಿಶ್ವಬ್ರಾಹ್ಮಣರ ವಂಶ ವೈಭವವು ಹೇಗೆ ಪ್ರಜ್ವಲಿಸಿ ಕರಗುತ್ತ ಬಂದಿತ್ತೆಂಬುದು ಕಾಳಾಮುಖ ರಾಜಗುರುಗಳ ಮಹಿಮೆ, ವಿದ್ಯೆ, ತಪಸ್ಸು, ಲೋಕಕಲ್ಯಾಣ ಕಾರ್ಯಗಳಿಂದ ವಿದಿತವಾಗುತ್ತದೆ. ಈ ಗುರು ಪರಂಪರೆಯು ಇಂದಿಗೂ ಅಸ್ತಿತ್ವದಲ್ಲಿದ್ದರೂ ಸಹ ಬಹು ಜನರಿಗೆ ಆ ವಿಷಯವು ತಿಳಿದಿಲ್ಲ ಎಂಬ ವಿಷಯವನ್ನು ಹಿಂದೆಯೇ ಪರಿಚಯಲಾಗಿದೆ. ಕರ್ನಾಟಕದ ಸುಮಾರು ಒಂದು ಸಾವಿರ ವರ್ಷಗಳ ಶಿಲಾಶಾಸನಗಳನ್ನು ನಾವು ಪರಿಶೀಲಿಸಿದರೆ ಈ ಮಹತ್ತರ ತಪಸ್ಸಿನ ತೇಜ ಮಹಿಮೆ ಕಣ್ಣು ಕುಕ್ಕಿಸುವಂಥದಿದ್ದು. ಹದಿನೈದನೆಯ ಶತಮಾನದ ನಂತರ ಈ ಗುರು ಪರಂಪರೆಯೇ ಮಾಯವಾಯಿತು ಎನ್ನುವಷ್ಟರವರೆಗೆ ಪ್ರಭಾವವು ಇಳಿಮುಖವಾಗಿ ಎಷ್ಟೋ ಜನರು ಈ ಕಾಳಾಮುಖ ರಾಜ ಗುರುಗಳೇ ಇತಿಹಾಸದಿಂದ ಮಾಯವಾಗಿ ಹೋದರೆಂದು ತಪ್ಪಾಗಿ ಬರೆಯುತ್ತಿದ್ದಾರೆ. ಈ ಗುರುಗಳು ೬೪ ವಿದ್ಯೆಗಳಲ್ಲಿ ಪರಿಣಿತರಾಗಿದ್ದರು. ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆಯನ್ನು ತಮ್ಮ ತಪಃಶಕ್ತಿಯ ಪ್ರಭಾವದಿಂದ ಶಾಪ, ಅನುಗ್ರಹ ಶಕ್ತಿಯುಳ್ಳವರಾಗಿ ಸಮಾಜದಲ್ಲಿ ಸದಾಚಾರ, ನೀತಿಗಳು ಉಳಿಯುವಂತೆ ಪ್ರಯತ್ನಿಸುತ್ತಿದ್ದರು. ಆದ್ದರಿಂದಲೇ ಸರ್ವರೂ ಅವರಿಗೆ ಭಯ ಭಕ್ತಿಗಳಿಂದ ನಡೆದುಕೊಳ್ಳುತ್ತಿದ್ದರು. ಇಂಥ ಕಾಳಾಮುಖ ರಾಜಗುರುಗಳ ಸಂತತಿಯವರು ಇಂದಿಗೂ ಇದ್ದಾರೆ. ಈ ಸಂತತಿಯ ಗುರುಗಳು ಮೂರುಜಾವದ ಸ್ವಾಮಿಗಳೆಂದೂ, ಕಾಳಹಸ್ತಾಚಾರ್ಯ ವಂಶಜರಾದ ಆನೇಗುಂದಿ ಪೀಠಾಧೀಕಾರಿಗಳೆಂದೂ ಕರೆಯಲ್ಪಡುತ್ತಿದ್ದು. ಇಂದಿಗೂ ಅಲ್ಲಲ್ಲಿ ಈ ಮಠಗಳಲ್ಲಿ ಇದ್ದಾರೆ. ಆದರೆ ಇವರೆಲ್ಲರೂ ಸಂಸಾರಿಗರೆಂಬುದು ಮರೆಯುವಂತಿಲ್ಲ.

ಈ ಗುರುಗಳು ಸನ್ಯಾಸಿಗಳಾಗದೇ ಸಂತತಿಯನ್ನು ಮುಂದುವರೆಸುತ್ತ ತಮ್ಮ ಪೀಠದ ಪರಂಪರೆಯನ್ನು ಮುಂದುವರೆಸಿದ್ದಾರೆ. ವಿಶ್ವಕರ್ಮ ಸಮಾಜವು ದಿನದಿನಕ್ಕೆ ಅಲ್ಪಸಂಖ್ಯಾತರದ್ದಾಗುತ್ತ ನಡೆದಿರುವುದರಿಂದ ಈ ಮಠಗಳೂ ರಾಜಾಶ್ರಯವಿಲ್ಲದೆ, ಶೂರರ, ವಿಚಾರವಂತರ ಆಶ್ರಯವಿಲ್ಲದೇ ತನ್ನ ಮೊದಲಿನ ವೈಭವದ ತೇಜವನ್ನು ಕಳೆದುಕೊಳ್ಳುತ್ತ ನಡೆದಿವೆ. ಇದು ವಿಶ್ವಕರ್ಮರ ವಂಶ ವೈಭವದ ಅವನತಿಯನ್ನು ದುರವಸ್ಥೆಯನ್ನು ತೋರಿಸುತ್ತದೆ. ಆದರೆ ಇಂದಿಗೂ ಈ ಸಂಪ್ರದಾಯದ ಗುರುಗಳು ಸಕಲ ವಿದ್ಯೆಗಳನ್ನು ತಪಶ್ಯಕ್ತಿಯನ್ನು ಪಡೆದು ಪವಾಡ ಪುರುಷರಾಗಿದ್ದು ಸಮಾಜದ ಪ್ರಚಾರವಿಲ್ಲದ ಬೂದಿಮುಚ್ಚಿದ ಕೆಂಡದಂತೆ ಅಜ್ಞಾತರಾಗಿದ್ದಾರೆ.

ಈ ಪರಂಪರೆಯ ಗುರುಗಳು ಒಂದು ಕಾಲದಲ್ಲಿ ರಾಜಗುರುಗಳಾಗಿ ಮರ್ಯಾದೆಯನ್ನು ಸಕಲ ಸಂಪತ್ತನ್ನು ಪಡೆದು ಸಮಾಜವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದ್ದರು. ಆದರೆ ಇದು ರಾಜಾಶ್ರಯವಿಲ್ಲ, ಸರ್ಕಾರದ ಆರ್ಥಿಕ ನೆರವು ಈ ಮಠ ಪರಂಪರೆಯವರಿಗಿಲ್ಲ. ಆದರೂ ಈ ಪರಂಪರೆಯ ಗುರುಗಳು ತಮ್ಮ ಬದುಕಿನ ನಿರ್ವಹಣೆಗಾಗಿ ಹೆಚ್ಚಿನ ಪರಿಶ್ರಮಪಡಬೇಕಾದ ಸ್ಥಿತಿಗತಿ ಇಂದು ಇದೆ. ಆದರೂ ಅವರು ಧೈರ್ಯಗೆಡದೆ ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಹಗಲಿರುಳು ಪರಿಶ್ರಮಮಿಸುತ್ತಿದ್ದಾರೆ. ಧಾರ್ಮಿಕ ವೃತ್ತಿಯೊಂದಿಗೆ ಜೀವಿಸುತ್ತಿದ್ದಾರೆ.

ಈ ಪರಂಪರೆಯ ಗುರುಗಳು ಸಮಾಜದ ಒಗ್ಗಟ್ಟಿಗಾಗಿ ಹಾಗೂ ಪ್ರಗತಿಗಾಗಿ ತಮ್ಮ ತನುಮನಧನದಿಂದ ಪರಿಶ್ರಮಿಸುತ್ತಾರೆ. ಆರ್ಥಿಕ ತೊಂದರೆ ಇದ್ದಾಗಲೂ ಸಹಿತ ಸಮಾಜದ ಒಗ್ಗಟಿಗಾಗಿ ಜಾತ್ರೆ, ಉತ್ಸವ ಹಾಗೂ ಆರಾಧನಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. ಕಲೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹಿಸುತ್ತಾರೆ. ಸಮಾಜ ಸುಧಾರಣೆಗೆ ಪರಿಶ್ರಮಿಸಿದವರನ್ನು ಗೌರವಿಸುತ್ತವೆ. ಇವರ ಈ ಎಲ್ಲಾ ಕಾರ್ಯಗಳು ಇನ್ನೂ ಸುಗಮವಾಗಿ ನಿರಂತರವಾಗಿ ಸಾಗಲು ಸರಕಾರದ ಹಾಗೂ ಸಮಾಜ ಬಾಂಧವರ ಸಹಾಯ ಸಹಕಾರ ಈ ಪರಂಪರೆಗೆ ದೊರೆತ್ತಿದ್ದೇ ಆದರೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸರ್ವಾಂಗೀಣ ಪ್ರಗತಿಗಾಗಿ ಈ ಪರಂಪರೆಯ ಗುರುಗಳು ಇನ್ನಷ್ಟು ಸಾಧಿಸಲು ಕಾರಣವಾಗುತ್ತದೆ. ಇಂತಹ ಭವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಗುರುಗಳೆಲ್ಲರೂ ಅಭಿನಂದನಾರ್ಹರಾಗಿದ್ದಾರೆ.

ಹೀಗೆ ಮೂರುಜಾವಿ ದೇವರ ಪರಂಪರೆಯು ಮುಂದುವರೆದುಕೊಂಡು ಬಂದಿದೆ.