“ನುಗ್ಗೆಕಾಯಿ, ನುಗ್ಗೆಕಾಯಿ…. ಹತ್ತು ರೂಪಾಯಿಗೆ ಪಾವ್ ಕಿಲೋ (1/4 ಕೆ.ಜಿ.) ನುಗ್ಗೆಕಾಯಿ. ಬಹಳ ರುಚಿ,  ನುಗ್ಗೆಕಾಯಿ ತಗೋರಿ” ಎಂದು ತರಕಾರಿ ಮಾರುವವ ಮನೆ ಮುಂದೆ ನಿಂತು ಕೂಗುತ್ತಿದ್ದ. ನಾನು ಹೊರಗೆ ಬಂದು ನೋಡಿದೆ, ಬಂಡಿ ತುಂಬಾ ತಾಜಾ-ತಾಜಾ ನುಗ್ಗೆಕಾಯಿ ರಾಶಿ ಇತ್ತು. ಏನಪ್ಪ ಇಷ್ಟೊಂದು ನುಗ್ಗೆ ಕಾಯಿ, ಈ ತುಟ್ಟಿ ಬೆಲೆಗೆ ಯಾರು ತಗೊತಾರೆ ಎಂದೆ? ಏನ್ ಸಾರ್; ಒಂದು ತಾಸಿನಲ್ಲಿ ಎಲ್ಲಾ ಮಾರಾಟ ಆಗಿ ಬಿಡುತ್ತೆ, ಎಂದು ಹೇಳಿದ. ನುಗ್ಗೆಕಾಯಿ ರುಚಿಗೆ ಇಷ್ಟೊಂದು ಬೆಲೆ ಕೊಟ್ಟು ಖರೀದಿ ಮಾಡುವಾಗ ನುಗ್ಗೆ ಸೊಪ್ಪಿನ ಔಷಧಿ ಗುಣಕ್ಕೆ ಇನ್ನೆಷ್ಟು ಬೆಲೆ ಕೊಡಬೇಕು ಜನ? ಎಂದು ತಿಳಿಸುವುದೇ ಈ ಲೇಖನದ ಉದ್ದೇಶ.

ಅಮೆರಿಕ ಮೂಲದ ‘ಟ್ರೀಸ್ ಫಾರ ಲೈಫ್’ (Trees for Life) ಎಂಬ ಸಂಸ್ಥೆಯ ಶಾಖೆಯೊಂದು ಪೂರ್ವಭಾರತದ ಒಂದು ಚಿಕ್ಕ ಹಳ್ಳಿಯಲ್ಲಿದೆ. ಬಲಬೀರ ಎಸ್. ಮಾಥೂರ್ ಎಂಬ ನಿಸರ್ಗತಜ್ಞ ಅದರ ಸಂಚಾಲಕರಾಗಿದ್ದಾರೆ. ನುಗ್ಗೆ ಸೊಪ್ಪು ಸುಮಾರು 300 ರೋಗಗಳನ್ನು ತಡೆಯುವ ವಿಶೇಷ ಔಷಧೀಯ ಗುಣವುಳ್ಳದ್ದಾಗಿದೆ ಎಂದು ತಮ್ಮ ಅನುಭವದ ಸಾರವನ್ನು ಅವರು ತಿಳಿಸುತ್ತಾರೆ.

ನುಗ್ಗೆ ಸೊಪ್ಪು ವಿಟಮಿನ್ ‘ಎ’ ಕಣಜ. ಅದು ಅಂಧತ್ವವನ್ನು ತಡೆಯಬಲ್ಲದು. ಅದರಂತೆ ಚರ್ಮರೋಗ, ಭೇದಿ, ಹೃದಯರೋಗ, ಕೀಲುನೋವು ಮುಂತಾದ ರೋಗಗಳನ್ನು ಅದು ನಿವಾರಿಸುತ್ತದೆ ಎಂಬುದು ಮಾಥೂರ್ ಅವರ ಅನುಭವದ ಮಾತು. ಹೈರಾಬಾದಿನ ರಾಷ್ಟ್ರೀಯ ಪೌಷ್ಟಿಕ ವಿಜ್ಞಾನ ಸಂಸ್ಥೆ (National Institute of Nutrition),  ಬ್ರಿಟನ್ನಿನ ಚರ್ಚ್ ವರ್ಲ್ಡ್ ಸರ್ವಿಸಸ್ ಸೊಸೈಟಿ (Church World Services Society),ಲೀಸ್ಟರ್ ವಿಶ್ವವಿದ್ಯಾನಿಲಯದ ಗ್ಲೂಸ್ಟರ್‌ಶೈರ್‌ನ ಕ್ಯಾಂಪ್‌ಡನ್ ಮತ್ತು ಕೊರ್ಲಿವುಡ್ ಆಹಾರ ಸಂಶೋಧನಾ ಸಂಸ್ಥೆಗಳು ನುಗ್ಗೆ ಸೊಪ್ಪಿನ ವೈಜ್ಞಾನಿಕ ವಿಶ್ಲೇಷಣೆ ಮಾಡಿವೆ. ಯೋಗರ್ಟ್ (Yoghurt) (ಮೊಸರಿನಂತಹ ಪದಾರ್ಥ) ನಲ್ಲಿಯ ಪ್ರೋ2 ಪಟ್ಟು, ಲಿಂಬೆ ಹಣ್ಣಿನಲ್ಲಿರುವ ‘ಸಿ’ ಜೀವಸತ್ವದ 7 ಪಟ್ಟು, ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂಗಿಂತ 3 ಪಟ್ಟು, ಗಜ್ಜರಿಗಿಂತ 4 ಪಟ್ಟು ವಿಟಮಿನ್ ‘ಎ’ ಹಾಗೂ ಹಾಲಿನಲ್ಲಿರುವ ಕ್ಯಾಲ್ಸಿಯಮ್‌ಗಿಂತ 4 ಪಟ್ಟು ಹೆಚ್ಚು, ನುಗ್ಗೆ ಸೊಪ್ಪಿನಲ್ಲಿರುವುದನ್ನು ಮೇಲಿನ ಸಂಸ್ಥೆಗಳು ತಿಳಿಸುತ್ತವೆ.

ಮುಂಬೈದ ಸೋಮಯ್ಯ ಟ್ರಸ್ಟ್‌ನ ಅಂಧತ್ವ ನಿವಾರಣಾ ಯೋಜನಾ ನಿರ್ದೇಶಕರಾದ ಕಮಾಂಡರ್ ಕೈಲಾಸ್ ಗಿರಪಾಲಕರ್ ಹಾಗೂ ಬೆಳಗಾವಿ ಕೆಎಲ್‌ಇ ಸಂಸ್ಥೆಯ ಪ್ರಭಾಕರ  ಕೋರೆ, ವೈದ್ಯಕೀಯ ಆಸ್ಪತ್ರೆ ನಿರ್ದೇಶಕರಾದ ಡಾ. ಎಂ.ಬಿ. ಜಾಲಿ ಅವರು ನುಗ್ಗೆ ಸೊಪ್ಪನ್ನು ಮಕ್ಕಳಿಗೆ ಕೊಡುವುದರ ಅವಶ್ಯಕತೆಯನ್ನು ತಿಳಿಸುತ್ತಾರೆ. ವಿಟಮಿನ್ ‘ಎ’ ಕೊರತೆಯಿಂದುಂಟಾಗುವ ಅಂಧತ್ವ ತಡೆಯುವ ಗುಣಧರ್ಮ ಇರುವುದನ್ನು ಅವರು ಹೇಳುತ್ತಾರೆ. ಜಾಗತಿಕ ಮಟ್ಟದಲ್ಲಿ ವಿಟಮಿನ್ ‘ಎ’ ಕೊರತೆಯಿಂದ ನರಳುವ ಮಕ್ಕಳ ಸಂಖ್ಯೆ 124 ದಶಲಕ್ಷ. ಅದರಲ್ಲಿ ಸುಮಾರು 5ದಶಲಕ್ಷ ಮಕ್ಕಳು ಪ್ರತಿ ವರ್ಷ ಅಂಧರಾಗುತ್ತಿದ್ದಾರೆ. ಭಾರತದಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 13,000 ಮಕ್ಕಳು ಪ್ರತಿ ವರ್ಷ ವಿಟಮಿನ್ ‘ಎ’ ಜೀವಸತ್ವ ಕೊರತೆಯಿಂದ ಅಂಧರಾಗುತ್ತಿದ್ದಾರೆ. ಭಾರತದಲ್ಲಿ ಒಟ್ಟು ಅಂಧರ ಸಂಖ್ಯೆ 45 ದಶಲಕ್ಷ ಅಂದರೆ ಒಟ್ಟು ಜನಸಂಖ್ಯೆಯ 0.70 ಪ್ರತಿಶತ.

ನುಗ್ಗೆ ಗಿಡವನ್ನು ಇತ್ತೀಚಿಗೆ ರೈತರು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಮೊರಿಂಗೆಸೀ (Moringaceae) ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಮೊರಿಂಗಾ ಓಲಿಫೆರಾ (Moringa oleifera). ಮನೆ ಅಂಗಳದಲ್ಲಿಯೇ ಜನರು ನುಗ್ಗೆ ಗಿಡ ಬೆಳೆಯುತ್ತಿದ್ದಾರೆ. ದೇಶೀ ತಳಿಯು ಸುಮಾರು 20-30 ಅಡಿ ಎತ್ತರಕ್ಕೆ ಬಹುಶಾಖೆಗಳೊಂದಿಗೆ ಬೆಳೆಯುತ್ತದೆ. ಇತ್ತೀಚಿಗೆ ಹೊಸತಳಿಗಳು ಹುಟ್ಟಿಕೊಂಡಿವೆ. ಇವು ಎತ್ತರ ಮತ್ತು ಗಾತ್ರದಲ್ಲಿ ಮಧ್ಯಮವಾಗಿದ್ದು ಹೆಚ್ಚು ಕಾಯಿಯನ್ನು ಕೊಡುತ್ತವೆ. ಇದರ ತ್ರಿಗರಿ ಸಂಯುಕ್ತ(Tri-pinnately Compound Leaf) ಎಲೆಯ ದಳಗಳು ಚಿಕ್ಕದಾಗಿದ್ದು, ಅಂಡಾಕಾರದ್ದಾಗಿರುತ್ತವೆ. ನುಗ್ಗೆ ಸೊಪ್ಪನ್ನು ಪಲ್ಯ, ಚಟ್ನಿ ಹಾಗೂ ಸಾಂಬಾರುಗಳಲ್ಲಿ ಬಳಸಿ, ಸೇವಿಸಬಹುದು.