ಒಬ್ಬ ನಿಜವಾದ ಲೇಖಕನ ಬರಹವೆಲ್ಲ ಒಂದರ್ಥದಲ್ಲಿ ಅವನ ಬದುಕಿನ ಕಥೆಯೇ. ಆದರೆ ನಾವು ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಯಾವ ಒಂದು ಪ್ರಕಾರವನ್ನು ‘ಆತ್ಮಕಥೆ’ ಎಂದು ಗುರುತಿಸುತ್ತೇವೆಯೋ ಅದು ನಿಜವಾಗಿಯೂ ಈ ಬದುಕಿನೊಳಗೆ ಹಾಗೂ ಬದುಕಿನ ಜತೆಗೆ ಬರಹಗಾರನೊಬ್ಬ ಅತ್ಯಂತ ವ್ಯಕ್ತಿನಿಷ್ಠವಾಗಿ ನಿಂತು ತನ್ನನ್ನು ರೂಪಿಸಿದ ಬದುಕನ್ನು ಒಂದು ಬಗೆಯ ಆತ್ಮೀಯತೆಯಲ್ಲಿ ಬಿಚ್ಚಿಡುವ ಅಥವಾ ವ್ಯಾಖ್ಯಾನಿಸುವ ಒಂದು ವಿಧಾನವಾಗಿದೆ.

‘ಆತ್ಮಕಥೆ’ ಅಥವಾ ತನ್ನನ್ನು ತಾನು ಕುರಿತು ಬರೆದುಕೊಳ್ಳುವುದು ಭಾರತೀಯ ಮನೋಧರ್ಮಕ್ಕೆ ಅಷ್ಟು ಹಿತವಾದ ಸಂಗತಿಯಾಗಿಲ್ಲ. ತನ್ನನ್ನು ತಾನು ಲೌಕಿಕವಾಗಿ ಬಚ್ಚಿಟ್ಟುಕೊಳ್ಳುವ ಕ್ರಮಕ್ಕಿಂತ ಸಾಹಿತ್ಯ ಸಂದರ್ಭದಲ್ಲಿ ಭಾರತೀಯ ಮನಸ್ಸು ತನ್ನನ್ನು ಬಿಚ್ಚಿಟ್ಟುಕೊಳ್ಳುವ ಕ್ರಮವನ್ನೇ ಹೆಚ್ಚು ಇಷ್ಟಪಡುತ್ತದೆ. ಸಾಹಿತಿಯಾದವನು, ವಸ್ತುನಿಷ್ಠ ಸಾಹಿತ್ಯ ಪರಂಪರೆಯಲ್ಲಿ ತನ್ನ ಕೃತಿ ನಿರ್ಮಿತಿ ಮಾಡಬೇಕಾಗಿದ್ದ ಅನಿವಾರ್ಯತೆಯಲ್ಲಿ, ತನ್ನನ್ನು ತಾನು ವಸ್ತುವಿನಲ್ಲಿ ಕರಗಿಸಿಕೊಳ್ಳುವ ಹಾಗೂ ತನ್ನದೆನ್ನುವುದೇನಾದರೂ ಇದ್ದರೆ ಅದನ್ನು ತನ್ನ ಕೃತಿಯ ಸಮಯ-ಸಂದರ್ಭ-ಪಾತ್ರಗಳ ಮೂಲಕ ಹೇಗೋ ಅಭಿವ್ಯಕ್ತಪಡಿಸುವ ‘ಅಹಂ ನಿರಸನ’ ಕ್ರಮವನ್ನು ಅಪೇಕ್ಷಿಸುವ ಸಾಹಿತ್ಯ ಸಂದರ್ಭದಲ್ಲಿ, ‘ಆತ್ಮಕಥೆ’ ಎನ್ನುವ ಪ್ರತ್ಯೇಕ ಸಾಹಿತ್ಯ ಪ್ರಕಾರಕ್ಕೆ ಆಸ್ಪದವಿಲ್ಲದೆ ಹೋದದ್ದು ಆಶ್ಚರ್ಯದ ಸಂಗತಿಯೇನಲ್ಲ. ಆದರೆ ಆಧುನಿಕ ಕಾಲದ ಸಾಹಿತ್ಯದಲ್ಲಿ, ಅದರಲ್ಲೂ ಪಶ್ಚಿಮದ ಸಾಹಿತ್ಯ ಪ್ರೇರಣೆಯಿಂದ ಕನ್ನಡದಲ್ಲಿ ಮೂಡಿದ ಹಲವು ಪ್ರಕಾರಗಳಲ್ಲಿ ‘ಆತ್ಮಕಥೆ’ ಕೂಡ ಒಂದು. ಮತ್ತು ಇದು ಈಚೆಗೆ ಕನ್ನಡದ ಹಲವು ಮಹತ್ವದ ಲೇಖಕರಿಂದ ಪರಿಗಣನಾರ್ಹವಾದ ಒಂದು ಪ್ರಕಾರವಾಗಿ ಪರಿಚಿತವಾಗಿದೆ. ಮಾಸ್ತಿಯವರ ‘ಭಾವ’ ಕುವೆಂಪು ಅವರ ‘ನೆನಪಿನ ದೋಣಿಯಲ್ಲಿ’, ಕಾರಂತರ ‘ಹುಚ್ಚುಮನಸ್ಸಿನ ಹತ್ತು ಮುಖಗಳು’, ಬಸವರಾಜ ಕಟ್ಟೀಮನೀಯವರ ‘ಕಾದಂಬರಿಕಾರನ ಕತೆ’, ನವರತ್ನ ರಾಮರಾಯರ ‘ಕೆಲವು ನೆನಪುಗಳು’ ಇವುಗಳನ್ನು ಪ್ರಾತಿನಿಧಿಕವಾಗಿ ಹೆಸರಿಸಬಹುದು. ಇವುಗಳ ಸಾಲಿಗೆ ಇದೀಗ ಪ್ರೊ.ಎ.ಎನ್. ಮೂರ್ತಿರಾಯರ ‘ಸಂಜೆಗಣ್ಣಿನ ಹಿನ್ನೋಟ’ವನ್ನು ಸೇರಿಸಿಕೊಳ್ಳುವುದು ಅಗತ್ಯವಾಗಿದೆ.

‘ಸಂಜೆಗಣ್ಣಿನ ಹಿನ್ನೋಟ’ ಎಂಬ ಕೃತಿ ಪ್ರೊ. ಎ. ಎನ್.ಮೂರ್ತಿರಾಯರು ಬರೆದುಕೊಂಡ ಒಂದು ಸುದೀರ್ಘವಾದ ‘ಆತ್ಮಕಥೆ’ಯಾಗಿದೆ.  ತೊಂಬತ್ತರ ಹೊಸ್ತಿಲನ್ನು ದಾಟಿದ ಈ ಹಿರಿಯರು ತಮ್ಮ ಸಂಜೆಗಣ್ಣನ್ನು, ಕಳೆದ ಸುಮಾರು ಒಂಬತ್ತು  ದಶಕಗಳ ಕಾಲಮಾನದ ತಮ್ಮ ಬದುಕಿನ ಹರಹಿನ ಮೇಲೆ ಹಾಯಿಸಿ, ತಮಗೆ ಕಂಡ ನೋಟದ ಮೂಲಕ ದಾಖಲಿಸಿದ ತುಂಬ ಸ್ವಾರಸ್ಯವಾದ ಅನುಭವಗಳ ಕಥೆ ಇದು. ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರು ಬರೆದು ಮುಗಿಸಿರುವ ಈ ಜೀವನಾವಲೋಕನ, ಸುಮಾರು ಐನೂರು ಪುಟಗಳ ಗಾತ್ರದ ಒಂದು ಬೃಹತ್ ಕೃತಿಯಾಗಿದೆ. ಈ ಕೃತಿಯನ್ನು ಕುರಿತು ಮೂರ್ತಿರಾಯರು “ಇದನ್ನು ‘ಆತ್ಮಕಥೆ’ ಎಂದು ಕರೆಯಬಹುದು. ಆದರೂ ಇದರ ಮುಖ್ಯವಸ್ತು ‘ನಾನು ಬದುಕಿನಲ್ಲಿ ಏನು ಮಾಡಿದೆ’ ಎಂಬುದಲ್ಲ. ಬದುಕು ನನ್ನ ಕಣ್ಣಿಗೆ ಹೇಗೆ ಕಂಡಿತು; ನನ್ನೆದುರಿಗೆ ಕಾಲದಿಂದ ಕಾಲಕ್ಕೆ ಪರಿಸ್ಥಿತಿ ಹೇಗೆ ಬದಲಾಯಿಸಿತು; ಸಂಪ್ರದಾಯವೂ ಪಾಶ್ಚಾತ್ಯ ಮಾದರಿಯ ವಿದ್ಯಾಭ್ಯಾಸವೂ ನನ್ನ ಮೇಲೆ ಉಂಟು ಮಾಡಿದ ಪರಿಣಾಮವೇನು: ಬಂಧುಗಳು, ಮಿತ್ರರು, ಗುರುಗಳು ನನ್ನ ಮೇಲೆ ಮಾಡಿದ ಪ್ರಭಾವ-ಇದನ್ನೆಲ್ಲ ಕಾಣಿಸುವುದು ನನ್ನ ಮುಖ್ಯೋದ್ದೇಶ. ಈ ಉದ್ದೇಶಕ್ಕಾಗಿ ಚೌಕಟ್ಟಾಗಿ ‘ಆತ್ಮಕಥೆ ಬಂದಿದೆ” (ಮುನ್ನುಡಿ) ಎಂದು ಹೇಳಿಕೊಂಡಿದ್ದಾರೆ.

ಪ್ರೊ. ಮೂರ್ತಿರಾಯರು ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಿಗೆ – ಸಾಹಿತ್ಯ ವಿಮರ್ಶೆ, ಪ್ರವಾಸ ಸಾಹಿತ್ಯ, ಅನುವಾದ-ಹೀಗೆ ಹಲವು ಪ್ರಕಾರಗಳಿಗೆ ಮೌಲಿಕವಾದ ಕೊಡುಗೆಯನ್ನು ಸಲ್ಲಿಸಿದ್ದರೂ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭಗಳಲ್ಲಿ ಅವರನ್ನು ನೆನೆಯುವುದು. ಪ್ರಬಂಧ ಸಾಹಿತ್ಯಕ್ಕೆ, ಅಂದರೆ ಲಲಿತ ಪ್ರಬಂಧವೆಂಬ ಪ್ರಕಾರಕ್ಕೆ ಅವರು ಗಳಿಸಿಕೊಟ್ಟ ಸ್ಥಾನಮಾನಗಳಿಗಾಗಿ. ಸಣ್ಣಕತೆಗೆ ಮಾಸ್ತಿಯವರು ಹೇಗೋ ಹಾಗೆ, ಲಲಿತ ಪ್ರಬಂಧಕ್ಕೆ ಒಂದು ವಿಶಿಷ್ಟವಾದ ಚಹರೆಯನ್ನೂ ಘನತೆಯನ್ನೂ ತಂದುಕೊಟ್ಟು ಅದಕ್ಕೊಂದು ಪಂರಪರೆಯನ್ನು ನಿರ್ಮಿಸಿದವರು ಮೂರ್ತಿರಾಯರು. ನವೋದಯ ಸಾಹಿತ್ಯಸಂದರ್ಭದ ರಭಸ-ಉತ್ಸಾಹ-ಆವೇಶಗಳ ಕಾಲದಲ್ಲಿ, ಕವಿತೆ, ಸಣ್ಣಕತೆ, ಕಾದಂಬರಿಗಳಂಥ ಆಕರ್ಷಕವೂ, ಬಹುಜನಪ್ರಿಯವೂ ಆದ ಪ್ರಕಾರಗಳ ಸೆಳೆತದಿಂದ ತಪ್ಪಿಸಿಕೊಂಡು ‘ಲಲಿತ ಪ್ರಬಂಧ’ದಂತಹ ಪ್ರಕಾರಕ್ಕೆ ಒಲಿದದ್ದು ಮೂರ್ತಿರಾಯರ ಮನೋಧರ್ಮಕ್ಕೆ ತಕ್ಕುದಾಗಿಯೇ ಇದೆ. ಯಾಕೆಂದರೆ ಲಲಿತ ಪ್ರಬಂಧವನ್ನು ಬರೆಯುವ ಮನೋಧರ್ಮವಿದೆಯಲ್ಲ ಅದು, ಸಾಹಿತ್ಯ ವಿಮರ್ಶೆಯಲ್ಲಿ ತೊಡಗುವವನ ವಸ್ತುನಿಷ್ಠತೆ ಹಾಗೂ ಕಾವ್ಯ ಬರೆಯುವವನ ಉತ್ಕಟ ತಲ್ಲೀನತೆ ಇವೆರಡರ ಮಧ್ಯಂತರದ್ದು. ಒಂದು ಬಗೆಯ ಆತ್ಮೀಯತೆಯಿಂದ ಬರೆಹಗಾರನ ವ್ಯಕ್ತಿತ್ವದ ಸ್ವಾರಸ್ಯಗಳನ್ನು ಗ್ರಹಿಸುವ ಮನೋಧರ್ಮವೇ ಲಲಿತಪ್ರಬಂಧ ನಿರ್ಮಿತಿಗೆ ಮುಖ್ಯವಾದದ್ದು. ಮೂರ್ತಿರಾಯರೇ ಈ ಕುರಿತು ಒಂದೆಡೆ ಹೇಳುವಂತೆ “ಲಗಾಮುಗಳನ್ನು ಪೂರ್ತಿಯಾಗಿ ಕೈಯಿಂದ ಬಿಡದೆ ಆದರೆ ಸಡಿಲವಾಗಿ ಹಿಡಿದು, ಮನಸ್ಸನ್ನು ಹರಿಯಬಿಟ್ಟು, ಆತ್ಮೀಯನೊಬ್ಬ- ನೊಡನೆ ಆಡಿದ ಮಾತಿನಂತಿರುತ್ತದೆ ಲಲಿತ ಪ್ರಬಂಧ”. ಈ ಮನೋಧರ್ಮದ ಮೂರ್ತಿರಾಯರು ತಮ್ಮ ಸಮೃದ್ಧವಾದ ಲಲಿತ ಪ್ರಬಂಧಗಳ ಮೂಲಕ ಹೇಗೋ ಹಾಗೆ ಇನ್ನಿತರ ಹಲವು ಪ್ರಕಾರಗಳ  ಮೂಲಕವೂ ಹದವಾದ ಮುದವಾದ ಗದ್ಯ ಶೈಲಿಯೊಂದನ್ನು ಆವಿಷ್ಕಾರ ಮಾಡಿಕೊಂಡಿದ್ದಾರೆ. ಇದೇ ಲಕ್ಷಣ ಅವರ ಸಂಜೆಗಣ್ಣಿನ ಹಿನ್ನೋಟ ಎಂಬ ವಿಸ್ತಾರವಾದ ಆತ್ಮಕಥನದಲ್ಲೂ ಕಾಣಿಸಿಕೊಂಡಿದೆ.

‘ಸಂಜೆಗಣ್ಣಿನ ಹಿನ್ನೋಟ’ದ ಮೂಲಕ ಓದುಗರ ಎದುರಿಗೆ ಮೊದಲು ತೆರೆದುಕೊಳ್ಳುವ ದೃಶ್ಯ ಅಕ್ಕಿ ಹೆಬ್ಬಾಳಿನ ನದೀತೀರದ ಪರಿಸರ: ಅತ್ತಿತ್ತ ಬೆಳೆದ ಹಸಿರು ಹೊಲ-ಗದ್ದೆಗಳು; ಅದರ ಬದಿಯ ಗುಡಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳು; ಹಳ್ಳಿಯ ಸಾಮಾಜಿಕ ಜೀವನ;  ಮೂರ್ತಿರಾಯರು ಹುಟ್ಟಿ ಬೆಳೆದ ಆ ಹಳ್ಳಿಯ ಸಾಂಪ್ರದಾಯಿಕ ಬ್ರಾಹ್ಮಣ ಮನೆತನದ ವಿಧಿನಿಷೇಧಗಳ ಲಕ್ಷ ಣ ರೇಖೆಗಳು ಮತ್ತು ಆ ರೇಖೆಗಳ ನಡುವಣದಲ್ಲಿ ಹಲವು ವ್ಯಕ್ತಿಗಳು ಪಟ್ಟ ಪಾಡುಗಳು ಇತ್ಯಾದಿಗಳು. ಆದರೂ ಈ ಗ್ರಾಮೀಣ ಪರಿಸರದ ರಮ್ಯತೆ ಈಗಲೂ ಮೂರ್ತಿರಾಯರಿಗೆ ಹಿತವಾಗಿ ತೋರಿದರೂ, ಇವತ್ತಿನ ಜಟಿಲತೆಯೊಳಗೆ ನಿಂತ ಅವರಿಗೆ ಆ ಬದುಕು ಮತ್ತೆ ಮರುಕಳಿಸಬೇಕೆಂಬ ಹಳಹಳಿಕೆಯೇನೂ ಇಲ್ಲ. ಈ ದೃಷ್ಟಿಯಿಂದ ಮೂರ್ತಿರಾಯರ ಬರೆಹ ಹಿಂದಿನದನ್ನು ನೆನೆದು ಹಂಬಲಿಸುವ ಮತ್ತು ಅದು ಮರುಕಳಿಸಬೇಕೆಂದು ಆಶಿಸುವ ಸ್ವರೂಪದ್ದಲ್ಲ. ಅದು ಅಂದಂದನ್ನು ಅಂದಂದೇ ನೋಡಿ ಅನುಭವಿಸಿ. ಅದರಿಂದ ಪಡೆಯಬೇಕಾದುದನ್ನು ಪಡೆದುಕೊಂಡು ಬಿಡಬೇಕಾದುದನ್ನು ಬಿಟ್ಟು ಮುಂದುವರಿಯುವ ಸ್ಪಷ್ಟವಾದ ವಾಸ್ತವ ಪ್ರಜ್ಞೆಯ ಅಸ್ತಿತ್ವವಾದೀ ನಿಲುವನ್ನು ಎತ್ತಿಹಿಡಿಯುವಂಥದ್ದು. ಈ ನಿಲುವಿಗೆ ತಾನು ನಿಂತ ನೆಲ ಮುಖ್ಯ. ಅದು ಕೊಡುವ ಅನುಭವಗಳು ಮುಖ್ಯ; ಮತ್ತು ಆ ಅನುಭವಗಳಿಂದ ಬದುಕಿಗೆ ಬರುವ ಪರಿಣತಿ ಮುಖ್ಯ. ಆದರೆ ಅದು ತನ್ನ ವರ್ತಮಾನಗಳಿಗೆ ಹೇಗೋ ಹಾಗೆ ತನ್ನ ಗತಕಾಲದ ನೆನಪುಗಳಿಗೆ ಮತ್ತು ನಾಳಿನ ಕನಸುಗಳಿಗೆ ವಿಮುಖವಾದ ಮನಃಸ್ಥಿತಿಯಲ್ಲ. ಈ ನಿಲುವಿನ ಮೂರ್ತಿರಾಯರು ತಮ್ಮ ವರ್ತಮಾನವನ್ನು ನಿಯಂತ್ರಿಸುವ ಸಾಂಪ್ರದಾಯಿಕ ಆಚರಣೆಗಳನ್ನು ಎಲ್ಲೂ ಒಂದು ಬಗೆಯ ತೋರಿಕೆಯ ಧೀರೋದಾತ್ತತೆಯಿಂದ ಪ್ರತಿಭಟಿಸುವ ಪ್ರದರ್ಶನಕ್ಕೆ ಒಳಗಾಗುವುದಿಲ್ಲ; ಆದರೆ ಸಂಪ್ರದಾಯವನ್ನು ನಮ್ರವಾಗಿ,  ಸಹಜವಾಗಿ ದೃಢವಾಗಿ ನಿರಾಕರಿಸುತ್ತಾರೆ. ಹಲವು ವೇಳೆ ಅದನ್ನು ಸಹಾನುಭೂತಿಯಿಂದ ಕೂಡಾ ನೋಡುತ್ತಾರೆ. ಹಾಗೆಂದು ಸಂಪ್ರದಾಯದ  ಅವಿಚಾರಿತವಾದ ಹಲವು ಆಚಾರಗಳನ್ನು ನಂಬಿಕೆಗಳನ್ನು ಅವರು ಕಣ್ಣುಮಚ್ಚಿಕೊಂಡು ಒಪ್ಪುತ್ತಾರೆಂದು ಅರ್ಥವಲ್ಲ; “ಮತಧರ್ಮಕ್ಕೂ ದೇವರಿಗೂ ಸಂಬಂಧಪಟ್ಟ ಭಕ್ತಿಯ ಆವೇಶ, ಉನ್ಮಾದ ಪರವಶತೆ-ಅದನ್ನು ಹೇಗಾದರೂ ಕರೆಯಿರಿ-ನನಗೆ ಅಂದಿನಿಂದ ಇಂದಿನವರೆಗೆ ಏನೇನೂ ಹಿಡಿಸದು” (ಪು.೨೨) ಎಂದು ಹೇಳುವ ಮೂರ್ತಿರಾಯರು ಸಂಪ್ರದಾಯದಲ್ಲಿ ಒಂದು ಬಗೆಯ ನಿಷ್ಠೆ ಇರುವವರನ್ನು ಆ ಕಾರಣಕ್ಕಾಗಿ ಕೀಳ್ಗಳೆದು ನೋಡುವುದಿಲ್ಲ. ತಾವು ಕೇವಲ “ವ್ಯಕ್ತಿ ಪಾರಮ್ಯಕ್ಕೆ ಮನಸೋತವರಲ್ಲ” (ಪು. ೩೨)ವಾದ ಕಾರಣದಿಂದ “ಸಮರ್ಪಕವಾದ ಕಾರಣಗಳಿದ್ದರೆ ಸಂಪ್ರದಾಯಕ್ಕೆ ರಿಯಾಯಿತಿ ತೋರಿಸುವುದರಲ್ಲಿ ತಪ್ಪೇನೂ ಇಲ್ಲ” (ಪು. ೧೮೬) ಎಂದು ಹೇಳಿಕೊಳ್ಳಲೂ ಅವರು ಹಿಂಜರಿಯುವುದಿಲ್ಲ. ಆದರೆ ಇದನ್ನು ಸಂಪ್ರದಾಯದೊಂದಿಗಿನ ರಾಜಿ ಎಂದೇನೂ ಭಾವಿಸಬೇಕಾಗಿಲ್ಲ. ತಾವು ಸಂಪ್ರದಾಯದ ಗೆರೆಯನ್ನು ದಾಟಲು ಸಾಧ್ಯವಾದ ಮಾತ್ರಕ್ಕೆ ಎಲ್ಲರೂ ಈಗಿಂದೀಗಲೆ ಹಾಗೆ ಮಾಡಬೇಕೆಂದೂ, ಹಾಗೆ ಮಾಡದೆ ಇದ್ದಲ್ಲಿ ಅದೊಂದು ಮಹಾಪರಾಧ ಎಂದೂ ತಿಳಿದವರಲ್ಲ. “ಇದರಿಂದಾಗಿಯೆ ಮಂಗಳಾರತಿಯನ್ನು ತಂದಾಗ ತಂಪಾದ ಜ್ಯೋತಿಯ ಮೇಲೆ ಕೈ ಆಡಿಸಿ ಕಣ್ಣಿಗೆ ಒತ್ತಿಕೊಳ್ಳುವಷ್ಟರ ಮಟ್ಟಿಗೆ ನಾನೂ ಪೂಜೆಯಲ್ಲಿ ಭಾಗವಹಿಸುತ್ತೇನೆ. ಈ ಹಬ್ಬದ ಆಚರಣೆ ನನಗೆ ಹಿತ, ಕಲಾವಂತಿಕೆಗಾಗಿ” (ಪು. ೩೯) ಎಂದೂ, “ಮಂತ್ರವನ್ನು ಹೇಳುವ ಕೇಳುವ ಆಸಕ್ತಿ ಈಗಲೂ ನನ್ನಲ್ಲಿ ಉಳಿದಿದೆ. ನನ್ನ ಮಟ್ಟಿಗೆ ಹೇಳುವುದಾದರೆ (ಅದು) ಒಳ್ಳೆಯ ಉದಾತ್ತ ಸಂಗೀತ ಕೊಡುವ ಆನಂದವನ್ನು ಕೊಡುತ್ತದೆ” (ಪು. ೬೨-೬೩) ಎಂದೂ ಹೇಳುತ್ತಾರೆ.

ಸಂಪ್ರದಾಯದೊಳಗಿರುವ ಮತ-ಧಾರ್ಮಿಕ ಆಚರಣೆಗಳನ್ನು ಬೇರೊಂದು ಕಲಾತ್ಮಕ ನಿಲುವಿನಿಂದ ನೋಡುವ ಮೂರ್ತಿರಾಯರ ಈ ನಿಲುವು, ಸಂಪ್ರದಾಯದ ‘ಜಡತೆ’ಯನ್ನು ತಿರಸ್ಕರಿಸುವ ಒಂದು ಧರ್ಮ ನಿರಪೇಕ್ಷ ವಿಧಾನವಾಗಿದೆ. ಆದರೆ ಸಂಪ್ರದಾಯದ ಹಲವು ಅವಿಚಾರಿತ ಸಂಗತಿಗಳು ಎಷ್ಟೊಂದು ಅಮಾನವೀಯವೂ ಜೀವ ವಿರೋಧಿಯೂ ಆಗಿವೆ ಎಂಬುದನ್ನು ಅವರು ತಮ್ಮ ಎಳೆಯಂದಿನಿಂದಲೆ ಬಲ್ಲರು. ಸಂಪ್ರದಾಯದ ಕ್ರೌರ್ಯವನ್ನು ಕುರಿತು ಮಠಾಧಿಪತಿಗಳ ನಿಲುವುಗಳನ್ನು ಕುರಿತು ಅಧ್ಯಾತ್ಮದ ಹೆಸರಿನಲ್ಲಿ ಈ ಬದುಕನ್ನು ಕೀಳ್ಗಳೆದು ಮಾತನಾಡುವವರನ್ನು ಕುರಿತು ಮೂರ್ತಿರಾಯರು ತುಂಬಾ ವಿಷಾದ ಹಾಗೂ ತಿರಸ್ಕಾರಗಳನ್ನು ಸೂಚಿಸುತ್ತಾರೆ. ಅವರ ಈ ಆತ್ಮಕಥೆಯಲ್ಲಿ ಅಂತಹ ಹಲವು ಪ್ರಸಂಗಗಳನ್ನು ಅವರು ದಾಖಲು ಮಾಡಿದ್ದಾರೆ. ವಾಸ್ತವವಾಗಿ ಇದೇ ಮೂರ್ತಿರಾಯರ ತಾತ್ವಿಕ ನಿಲುವು ಕೂಡಾ ಎಂದು ಹೇಳಬಹುದು. ಬದುಕಿನ ಬಗ್ಗೆ ಗಾಢವಾದ ಪ್ರೀತಿಯುಳ್ಳ ಮತ್ತು ತಕ್ಕ ವೈಚಾರಿಕತೆಯುಳ್ಳ ಮನಸ್ಸಿಗೆ, ತನ್ನ ಜೀವನವನ್ನು ರೂಪಿಸಿಕೊಳ್ಳಲು ದೇವರು, ಧರ್ಮ ಸಂಪ್ರದಾಯಗಳ ಅಗತ್ಯವಾಗಲೀ. ವಿಧಿ ಕರ್ಮ-ಅದೃಷ್ಟಗಳ ಬೆಂಬಲವಾಗಲೀ ಬೇಕಾಗುವುದಿಲ್ಲ. ಇಂಥ ನಿಲುವಿನಲ್ಲಿ ‘ಕ್ರಾಂತಿ’ಯ ಘೋಷಣೆಯಿಲ್ಲ; ಸುಧಾರಕತನದ ಆವೇಶವಿಲ್ಲ; ಅನ್ಯರ ನಂಬಿಕೆಗಳನ್ನು ಲೇವಡಿ ಮಾಡುವ ಸಿನಿಕತನವಿಲ್ಲ; ಇದೊಂದು ಬಗೆಯಲ್ಲಿ ಸೀಮಿತಗಳನ್ನು ದಿಟ್ಟತನದಿಂದ ನಿಶ್ಯಬ್ದವಾಗಿ ದಾಟುವ ಪರಿ.ಬದುಕು ಮಾಗುವ ರೀತಿ.

ಹೀಗೆ ದಾಟುವ ಕ್ರಿಯೆಯ ಲಕ್ಷಣಗಳು ಮೂರ್ತಿರಾಯರಿಗೆ ಅದು ಹೇಗೋ ಅವರ ಎಳವೆಯಲ್ಲಿಯೇ ಕಾಣಿಸಿಕೊಂಡವು. ಆದರೆ ಈ ಲಕ್ಷಣಗಳು ಗಟ್ಟಿಗೊಂಡದ್ದು ಮತ್ತು ನಿಜವಾದ ಪರಿವರ್ತನೆ ಪ್ರಾರಂಭವಾದದ್ದು ಅವರಿಗೆ ದೊರೆತ ಶಿಕ್ಷಣದಿಂದಾಗಿ. ಇದು ಅವರ ಆತ್ಮಕಥೆಯ ಎರಡನೆಯ ಘಟ್ಟ. ಇದರಲ್ಲಿ ಅವರು ಅಕ್ಕಿಹೆಬ್ಬಾಳನ್ನು ಬಿಟ್ಟು ಶಿಕ್ಷಣಕ್ಕಾಗಿ ಮೈಸೂರಿಗೆ ಬಂದ ಮತ್ತು ಶಿಕ್ಷಣದ  ಅನಂತರದ ‘ಉದ್ಯೋಗ ಪರ್ವ’ದ ಸಂಗತಿಗಳಿವೆ. “ನನ್ನಲ್ಲಿ ಪರಿವರ್ತನೆ ಆರಂಭವಾದದ್ದಕ್ಕೆ ಮುಖ್ಯಕಾರಣ, ಬದುಕಿನ ಅನುಭವವಲ್ಲ; ಪುಸ್ತಕಗಳು ಒದಗಿಸಿದ ಅನುಭವ” (ಪು.೧೩೨) ಎಂದು ಬರೆದುಕೊಳ್ಳುತ್ತಾರೆ. ಬದುಕು ಒದಗಿಸಿದ ಅನುಭವಗಳನ್ನು ಕುರಿತು ಆಲೋಚನೆ ಮಾಡುವ ರೀತಿಯನ್ನು ಕಲ್ಪಿಸಿಕೊಟ್ಟದ್ದು ಮತ್ತು ತನ್ನ ಅನುಭವಗಳಿಗೆ ಅಭಿವ್ಯಕ್ತಿಯನ್ನು ನೀಡುವ ಕಲೆಗಾರಿಕೆಯನ್ನು ತಂದುಕೊಟ್ಟದ್ದೂ ವ್ಯಾಪಕವಾದ ಅಧ್ಯಯನವೇ ಎಂಬುದು ಈ ಮಾತಿನಿಂದ ಸೂಚಿತವಾಗುತ್ತದೆ. ಇದರಿಂದಾಗಿ ಕನ್ನಡ ಸಾಹಿತ್ಯವನ್ನು ಅವರು ತಮ್ಮ ಬರಹಗಳಿಂದ ಸಮೃದ್ಧಗೊಳಿಸಿದರು ಮಾತ್ರವಲ್ಲ, ಕನ್ನಡದಲ್ಲಿ ಆ ಕಾರಣದಿಂದ ಸಾಕಷ್ಟು ಮನ್ನಣೆ ಗೌರವಗಳಿಗೂ ಪಾತ್ರರಾದರು. ಆದರೆ ಅವರು ತಮ್ಮ ಬದುಕಿನ ಉದ್ದಕ್ಕೂ ಹೆಚ್ಚೇನೂ ಕಷ್ಟಗಳಿಲ್ಲದೆ, ಸಂಘರ್ಷಗಳಿಲ್ಲದೆ ಉದ್ಯೋಗದ ಹಲವು ಹಂತಗಳನ್ನು ಅಡೆತಡೆಯಿಲ್ಲದೆ ಏರಿ ನಡೆದರು. ಪರೀಕ್ಷೆಯಲ್ಲಿ ತೇರ್ಗಡೆಯಾದ ಒಡನೆಯೇ ಖಾತ್ರಿಯಾಗಿ ದೊರೆತ ಶಿಕ್ಷಕ ವೃತ್ತಿ, ಅದರಲ್ಲಿ ಮುಂದಿನ ದರ್ಜೆಗಳಿಗೆ ಏರಿಕೆಗಳು, ನಡುವೆ ಆಕಾಶವಾಣಿಯ ನಿರ್ದೇಶಕತ್ವ,  ಅನಂತರ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕತ್ವಕ್ಕೆ ಆಹ್ವಾನ. ಹೀಗೆ ಬದುಕಿನಲ್ಲಿ ಯಾವ ಹೇಳಿಕೊಳ್ಳಬಹುದಾದ ತೊಡಕುಗಳೂ ಇಲ್ಲದಂಥವರಿಗೆ, ಆತ್ಮಕಥೆಯ ಮೂಲಕ ಬರೆದುಕೊಳ್ಳಬಹುದಾದ ಅಘಟಿತ ಘಟನೆಗಳಾಗಲೀ, ಸಂಘರ್ಷಗಳಾಲೀ ಧರ್ಮ ಸಂಕಟಗಳಾಗಲೀ ಏನಿರುತ್ತವೆ ಎಂದು ಯಾರಾದರೂ ಪ್ರಶ್ನಿಸಬಹುದು. ನಿಜ. ಮೂರ್ತಿರಾಯರ ಆತ್ಮಕಥೆ ಈ ಪ್ರಶ್ನೆಗೆ ಏನು ಉತ್ತರ ಕೊಡಬಹುದೋ ತಿಳಿಯದು. ಆದರೆ ತಮ್ಮ ಆತ್ಮಕಥೆಯನ್ನು ಬರೆದುಕೊಳ್ಳುವವರಿಗೆ ಹೆಜ್ಜೆಹೆಜ್ಜೆಗೂ ಚಕಿತಗೊಳಿಸುವ, ಧುತ್ತೆಂದು ಎದುರಿಗೆ ಬಂದು ನಿಲ್ಲುವ ಘಟನೆಗಳೂ, ಸವಾಲುಗಳೂ ಇರಲೇಬೇಕೆಂದೇನೂ ಅರ್ಥವಲ್ಲ. ಅಲ್ಲದೆ ಪ್ರತಿಯೊಬ್ಬ ಸೂಕ್ಷ  ಸಂವೇದನಾಶೀಲನಾದ ಮನುಷ್ಯನು ಎದುರಿಸುವ ಸಮಸ್ಯೆಗಳನ್ನು ಹೀಗೇ ಎಂದು ಹೇಳಲು ಬರುವುದಿಲ್ಲ. ಆದರೆ ಒಂದು ಪರಿಣತ ಮನಸ್ಸು ಬದುಕನ್ನು ಎದುರಿಸುವ ಹಾಗೂ ಗ್ರಹಿಸುವ ಕ್ರಮವೂ ಒಳ್ಳೆಯ ಆತ್ಮಕಥನಕ್ಕೆ ವಸ್ತುವಾಗಬಲ್ಲದು ಎನ್ನುವುದಕ್ಕೆ ಮೂರ್ತಿರಾಯರ ‘ಸಂಜೆಗಣ್ಣಿನ ಹಿನ್ನೋಟ’ ಎಂಬ ಈ ಕೃತಿಯೇ ಸಾಕ್ಷಿಯಾಗಿದೆ. ಆದರೆ ಮೂರ್ತಿರಾಯರು ಎದುರಿಸಿದ ಒಂದು ಸಮಸ್ಯೆ ಗಮನಾರ್ಹವಾದುದಾಗಿದೆ. ಅದು ಅವರ ಮಗ ರಾಜು ಅಮೆರಿಕಾ ದೇಶದ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಳ್ಳಲು  ನಿರ್ಧರಿಸಿದಾಗ ಒದಗಿದ ಒಂದು ಸಾಂಸ್ಕೃತಿಕ ಸಂಘರ್ಷ. “ಸಂಪ್ರದಾಯ ಹಾಕಿದ್ದ ಲಕ್ಷ ಣ ರೇಖೆಯನ್ನು ನಾನು ಎಂದೋ ದಾಟಿದ್ದೆ” (ಪು. ೧೩೪) ಎಂದು ಹೇಳಿಕೊಳ್ಳುವ ಮೂರ್ತಿರಾಯರಿಗೆ ಈ ಸಂದರ್ಭ ಅಂತಹ ಸಂಘರ್ಷವನ್ನೇನೂ ಉಂಟು ಮಾಡಿರಲಾರದು ಎಂದೇನೂ ತಿಳಿಯಬೇಕಾಗಿಲ್ಲ. ಆದರೆ ವಾಸ್ತವವಾಗಿ ತಮ್ಮ ಮಗ ವಿದೇಶೀ ಕನ್ಯೆಯನ್ನು ಮದುವೆಮಾಡಿಕೊಳ್ಳಲು ತೀರ್ಮಾನಿಸಿದ್ದು ತಿಳಿದಾಗ ಮೂರ್ತಿರಾಯರಿಗೆ ಆದದ್ದು ಆಘಾತ. ಈ ಸುದ್ದಿ ತಿಳಿದೊಡನೆಯೇ “ನನಗೆ ವಿದ್ಯುತ್ ಷಾಕ್ ಬಡಿದಂತಾಯಿತು. ನಮ್ಮ ಮನೆತನಕ್ಕೆ ಅವಮಾನ. ಇದು ಇತರರಿಗೆ ತಿಳಿಯಬಾರದು” (ಪು. ೩೯೯) ಎಂದು ತಮಗೆ ಅನ್ನಿಸಿತೆಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಕೊಂಚ ಸಾವಧಾನವಾಗಿ ಯೋಚನೆ ಮಾಡಿದ ನಂತರ ಅವರು ಈ ಕುರಿತು ತಮ್ಮ ಬೀಗರಿಗೆ ಬರೆದ ಪತ್ರದಲ್ಲಿ “ಈ ಮದುವೆಯನ್ನು ನಿಷೇಧಿಸುವುದು ನನ್ನಿಂದ ಸಾಧ್ಯವಿಲ್ಲ. ಸಾಧ್ಯವಾದರೂ ನಾನು ಹಾಗೆ ಮಾಡುವವನಲ್ಲ. ಇತರರ ಬದುಕನ್ನು -ಎಡಿಟ್ (edit) ಮಾಡುವ ಜವಾಬ್ದಾರಿಯನ್ನು ನಾನು ಹೊರಲಾರೆ; ಅದು ನ್ಯಾಯವಲ್ಲ ಎಂದು ನಾನು ದೃಢವಾಗಿ ನಂಬಿದ್ದೇನೆ” (ಪು. ೪೦೦) ಎಂದು ತಿಳಿಸುತ್ತಾರೆ. ಈ ಸಂದರ್ಭದಲ್ಲಿಯೂ ಅಷ್ಟೆ. ಲೇಖಕರು ತಮ್ಮ ಎರಡೂ ಪ್ರತಿಕ್ರಿಯೆಗಳನ್ನು ಮಂಡಿಸಿ ತಮ್ಮ ಪ್ರಾಮಾಣಿಕತೆಯನ್ನು ಪ್ರಕಟಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನಿಜವಾದ ಜೀವನ ಚರಿತ್ರೆಯನ್ನು ಬರೆದುಕೊಳ್ಳುವುದು ಎಷ್ಟೊಂದು ಕಷ್ಟ; ತನ್ನನ್ನು ತಾನು ಹೆಜ್ಜೆ ಹೆಜ್ಜೆಗೂ ನಿಕಷಕ್ಕೆ ಒಡ್ಡಿಕೊಳ್ಳಬಲ್ಲವರು ಮಾತ್ರ ತಮ್ಮ ಆತ್ಮಕಥೆಯನ್ನು ಬರೆದುಕೊಳ್ಳಲು ಅರ್ಹರು ಅನ್ನಿಸುವುದು ‘ಸಂಜೆಗಣ್ಣಿನ ಹಿನ್ನೋಟ’ದಂಥ ಕೃತಿಗಳನ್ನು ಓದಿದಾಗ.

ಈ ಆತ್ಮಕಥೆ ತೆರೆದು ತೋರುವ ಇನ್ನೊಂದು ವಿಸ್ತಾರ, ವ್ಯಕ್ತಿಗಳನ್ನು ಕುರಿತದ್ದು. ಮೂರ್ತಿರಾಯರ ನಿಡುಗಾಲದ ಉದ್ದಕ್ಕೂ ಅವರ ಸಂಪರ್ಕಕ್ಕೆ ಬಂದು ಹೋಗುವ ನಂಟರು-ಇಷ್ಟರು; ಹೆಂಡತಿ-ಮಕ್ಕಳು, ಹಿರಿಯರು-ಕಿರಿಯರು ಇತ್ಯಾದಿ. ಅವರಲ್ಲಿ ಎಷ್ಟೋ ಮಂದಿಯನ್ನು ಕುರಿತು ಬರೆಯುವಾಗ ಅಪ್ರಿಯವಾದುದನ್ನೇನಾದರೂ ಹೇಳುವುದು ಅನಿವಾರ್ಯವಾದಾಗ ಲೇಖಕರು ಅವರಿಗೆ ಸಾಂಕೇತಿಕವೋ ಬೇರೆಯದೋ ಆದ ಹೆಸರುಗಳನ್ನು ಘಟನೆಗಳನ್ನು ನಿರೂಪಿಸುತ್ತಾರೆ, ಅವರಿಗೆ ಸಂಬಂಧಿಸಿದವರ‍್ಯಾರಾದರೂ ಇದ್ದರೆ ನೊಂದುಕೊಳ್ಳದಿರಲಿ ಎಂದು. ಇನ್ನು ಕೆಲವರು ನಿಜನಾಮದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು; ಬಿ.ಎಂ.ಶ್ರೀ. ಪ್ರಿನ್ಸಿಪಾಲ್ ರಾಲೋ, ನಾಲ್ವಡಿ ಕೃಷ್ಣರಾಜಒಡೆಯರ್, ಜಿ. ಹನುಮಂತ ರಾಯರು, ಡಿ.ವಿ. ಗುಂಡಪ್ಪ, ಬಿ. ಎಸ್.ಕೇಶವನ್, ಸ್ವಾಮಿ ಶಿವಾನಂದರು- ಹೀಗೆ ಇನ್ನೂ ಹಲವಾರು ವ್ಯಕ್ತಿ ಚಿತ್ರದ ಹೊಳಹುಗಳೂ ಅವರಿಗೆ ಸಂಬಂಧಿಸಿದ ಹಲವು ಪ್ರಸಂಗಗಳ ಉಲ್ಲೇಖಗಳೂ ಈ ಆತ್ಮಚರಿತ್ರೆಯಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ಇಲ್ಲಿ ಹಾಗೆ ಹೊಳೆದು ಹೀಗೆ ಗೆರೆಕೊರೆದು ಮಾಯವಾಗುವ ಎಷ್ಟೋ ವ್ಯಕ್ತಿಗಳ ಚಿತ್ರಗಳನ್ನು, ಮೂರ್ತಿರಾಯರು ತಮ್ಮ ‘ಚಿತ್ರಗಳು-ಪತ್ರಗಳು’ ಎಂಬ ಕೃತಿಯಲ್ಲಿ ವಿವರವಾಗಿ ರೂಪಿಸಿದ್ದಾರೆ. ಆದರೆ ಈ ಕೃತಿಯಲ್ಲಿ ಬರುವ ಅಪ್ರಸಿದ್ಧ ಮಹಾತ್ಮರೊಬ್ಬರ ಕಥೆ (ಪು. ೩೨೯-೩೩೮)ಯಂತೂ ಅಪೂರ್ವವಾದ ವ್ಯಕ್ತಿ ಚಿತ್ರವಾಗಿರುವುದರ ಜತೆಗೆ, ನಿಜವಾದ ಆತ್ಮವಂತಿಕೆಗೆ ಒಡ್ಡಿದ ಸಮರ್ಥ ಪ್ರತೀಕವಾಗಿದೆ. ಮೂರ್ತಿರಾಯರ ಮತ್ತೊಂದು ಕೃತಿ ‘ಅಪರವಯಸ್ಕನ ಅಮೆರಿಕಾಯಾತ್ರೆ’ಯಲ್ಲಿ ಕೂಡಾ ಇಲ್ಲಿ ಸೂಚಿತವಾದ ಎಷ್ಟೋ ಸಂಗತಿಗಳೂ ವಿವರವಾಗಿ ಕಾಣಿಸಿಕೊಂಡಿವೆ. ಹೀಗಾಗಿ ‘ಸಂಜೆಗಣ್ಣಿನ ಹಿನ್ನೋಟ’ದ ಜತೆಗೆ ‘ಚಿತ್ರಗಳು-ಪತ್ರಗಳು’ಮತ್ತು ‘ಅಪರವಯಸ್ಕನ ಅಮೆರಿಕಾ ಯಾತ್ರೆ’ ಎಂಬ ಎರಡು ಕೃತಿಗಳನ್ನು ಕೂಡಿಸಿಕೊಂಡು ನೋಡಿದಾಗ ಮೂರ್ತಿರಾಯರ ಆತ್ಮಕಥೆಯ ನಿಜವಾದ ಹರಹಿನ ಕಲ್ಪನೆಯೊಂದು ನಮಗೆ ಆಗುತ್ತದೆ.

ಒಟ್ಟು ಮೂವತ್ತೆರಡು ಅಧ್ಯಾಯಗಳಲ್ಲಿ ತುಂಬಿಕೊಂಡಿರುವ ಈ ಆತ್ಮಕತೆ ಪರಿಣತವೂ, ಸುಸಂಸ್ಕೃತವೂ, ವಿಚಾರಶೀಲವೂ ಆದ ವ್ಯಕ್ತಿತ್ವವೊಂದು ತಾನು ನಿಂತ ನಿಲುವನ್ನು ಎಲ್ಲಿಯೂ ಬಿಟ್ಟುಕೊಡದೆ ಬದುಕನ್ನು ಅತ್ಯಂತ ಪ್ರೀತಿಯಿಂದ ಕಂಡ ಹಾಗೂ ಗ್ರಹಿಸಿದ ಕ್ರಮವೊಂದರ ಪರಿಚಯ ಮಾಡಿಕೊಡುತ್ತದೆ. ಇಡೀ ಬರೆವಣಿಗೆ ಬಯಲು ನಾಡಿನ ಹೊಳೆಯ ಹಾಗೆ ಸಾವಧಾನಗತಿಯಿಂದ ಸಾಗುತ್ತದೆ. ತನ್ನ ಬರೆಹದ ಬಗ್ಗೆ ಯಾವುದೇ ಭ್ರಮೆಗಳಿಲ್ಲದ, ವಿನಯಶೀಲವಾದ ಸೂಕ್ಷ  ಸಂವೇದನೆ ಉದ್ದಕ್ಕೂ ಕ್ರಿಯಾಶೀಲವಾಗುತ್ತ ‘ಸಂಜೆಗಣ್ಣಿನ ಹಿನ್ನೋಟ’ ಮೂಲಕ ನಮ್ಮೆದುರಿಗೆ ಬಿಚ್ಚಿಕೊಳ್ಳುವ ಬದುಕು ಅತ್ಯಂತ ನಿಚ್ಚಳವಾದುದಾಗಿದೆ. ದೇವರು ಪುನರ್ಜನ್ಮ ಇತ್ಯಾದಿಗಳಲ್ಲಿ ನನಗೆ ನಂಬಿಕೆಯಿಲ್ಲವೆಂದು ಹೇಳಿಕೊಳ್ಳುವ ಮೂರ್ತಿರಾಯರು ಈ ಆತ್ಮಕಥೆಯ ಕೊನೆಯಲ್ಲಿ ‘ಬದುಕಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ’ (ಪು.೪೯೫) ಎನ್ನುತ್ತಾರೆ. ಇದು ಮೂರ್ತಿರಾಯರ ಜೀವನ ದರ್ಶನವನ್ನು ಸಮರ್ಥವಾಗಿ ಸಂಕೇತಿಸುವ ಮಾತಾಗಿದೆ.

ಚದುರಿದ ಚಿಂತನೆಗಳು : ೨೦೦೦