ಸೂಚನೆ ||
ನಿದ್ರೆಗೈವಿಂದುಹಾಸನ ಕಂಚುಕದ ಕೊನೆಯೊ |
ಳಿರ್ದ ಪತ್ರವನೋದಿಕೊಂಡು ಚದುರಿಂದದಂ |
ತಿರ್ದ್ದಿ ತನಗಾತನಂ ಕಾಂತನಹ ದಾಯಮಂ ಮಾಡಿದಳ್ ಮಂತ್ರಿಯನುಜೆ ||

ಕುಂತೀಕುಮಾರ ಕೇಳ್ ಚಂದ್ರಹಾಸಂ ಬನದೊ |
ಳಿಂತು ಸುಖನಿದ್ರೆಯಿಂದಿರುತಿರ್ಪ ಸಮಯದೊಳ್ |
ಕುಂತಳೇಂದ್ರಂಗೆ ಚಂಪಕಮಾಲಿನಿನಾಮದೊರ್ವ ಮಗಳುಂಟವಳ್ಗೆ ||
ಸಂತತಂ ಮಂತ್ರಿಸುತೆ ವಿಷಯೆ ಸಖಿಯಾಗಿರ್ಪ |
ಳಂತರಿಸದರಿರ್ವರುಂ ಬಂದರಲ್ಲಿಗೆ ವ |
ಸಂತಕಾಲಂ ಪ್ರಾಪ್ತಮಾಗಿರೆ ಜಲಕ್ರೀಡೆಗಾಳಿಯರ ಗಡಣದಿಂದೆ ||೧||

ಒಚ್ಚೋರೆಗಣ್ಣ ಕೋಮಲೆಯರೊಪ್ಪಿಡಿ ನಡುವಿ |
ನಚ್ಚಿಗದ ಬಾಲಕಿಯರೋರಣದ ಪೊಳೆವಲ್ಲ |
ನಿಚ್ಚಳದ ಕದಪಿನ ನಿತಂಬದಿಯರೊಮ್ಮಾರುವೇಣಿಯ ವಿಲಾಸಿನಿಯರು ||
ಒಚ್ಚತದ ಚೆಲ್ವಿನೆಳೆವಣ್ಗಳುಳ್ಗೈಕೊಳ್ಳ |
ದಚ್ಚರಿಯ ಕಡುಗಕ್ಕಸದ ಬಟ್ಟಬಲ್ಮೊಲೆಯ |
ಪೊಚ್ಚಪೊಸಜೌವನದ ನೀರೆಯರ್ ನಡೆತಂದರೊಗ್ಗಾಗಿ ಸಂಭ್ರಮದೊಳು ||೨||

ಕಲಕೀರವಾಣಿಯರ್ ಕಾಳಾಹಿವೇಣಿಯರ್ |
ಕಲಭ ಮದಯಾನೆಯರ್ ಕಾಯಜ ನಿಧಾನೆಯರ್ |
ಕಲಧೌತ ಗಾತ್ರೆಯರ್ ಕಂಜದಳ ನೇತ್ರಯರ್ ಕಳೆವೆತ್ತ ಕಾಮಿನಿಯರು ||
ಕಲಶಕುಚಯುಗಳೆಯರ್ ಕನಕ ಮಣಿನಿಗಳೆಯರ್ |
ಕಳಕಳಿಪ ವದನೆಯರರ್ ಕುಲಿಶಾಭ ರದನೆಯರ್ ||
ಕಳೆದುಳಿದ ರನ್ನೆಯರ್ ಕಾಂತಿಸಂಪನ್ನೆಯರ್ ನಂದನಕೆ ನಡೆತಂದರು ||೩||

ತಳಿರಡಿಗೆ ತೊಂಡೆವಣ್ ತುಟಿಗೆ ತಾವರೆ ಮೊಗಕೆ |
ಬೆಳಗಾಯಿ ಮೊಲೆಗೆ ನೈದಿಲೆ ಕಣ್ಗೆ ಬಾಲೆ ತೊಡೆ |
ಗೆಳೆವಳ್ಳಿ ಮೈಗೆ ಸಂಪಗೆ ನಾಸಿಕಕ್ಕೆ ಮಲ್ಲಿಗೆ ನಗೆಗೆ ಮೊಲ್ಲೆ ಪಲ್ಗೆ ||
ಅಳಿ ಕುಂತಳಕೆ ನವಿಲ್ ನುಡಿಗಂಚೆ ನಡೆಗೆ ಕೋ |
ಗಿಲೆ ಗಿಳಿಗಳಿಂಚರಕೆ ಸೋಲ್ದವಯವಂಗಳೊಳ್ |
ನೆಲಸಿದುವು ಪೆಣ್ಗಳ್ಗೆ ಸೋಲದವರಾರೆನಲ್ ನಡೆತಂದರಂಗನೆಯರು ||೪||

ಮಿಂಡೆದ ಹೆಣ್ಗಳುಪವನಕೆ ನಡೆತಂದು ಮುಂ |
ಕೊಂಡು ಬಹುವಿಧದ ಚೇಷ್ಟೆಗಳಿಂದೆ ಭುಲ್ಲವಿಸಿ |
ಕಂಡ ಕಂಡ ವನಿಜಾತಂಗಳಂ ಚಿಗುರಿಸಿದರೊಡನೆ ಪೊದೋರಿಸಿದರು ||
ತಂಡತಂಡದೊಳಲ್ಲಿ ಪರಿಪರಿಯ ಲರ್ಗೊಯ್ದು |
ಬೆಂಡಾಗಿ ಬಂದು ನಿರ್ಮಲ ಸರೋವರನು |
ದ್ದಂಡದೊಳ್‌ಪೊಕ್ಕರಂಬುಕ್ರೀಡೆಗಂಗಜನ ಸೊಕ್ಕಾನೆಗಳ ತೆರದೊಳು ||೫||

ನಿರಿ ಗುರುಳ್ಗಳ  ತುಂಬಿಗಳ ಪೊಳೆವ ಲೋಚನದ |
ಮರಿವಿನ ಮೊಗದಲರ್ದಾವರೆಯ ತಿವಳಿಗಳ |
ಕಿರುದೆರೆಯ ಕಂಧರದ ಕಂಬುವಿನ ಘನ ಕುಚಂಗಳ ಕಂಜ ಮುಕುಳಂಗಳ ||
ಪೊರೆವಾರ ಪುಳಿನದ ತನುಚ್ಛವಿಯ ತಿಳಿನೀರ |
ಮೆರೆವ ಮಧ್ಯದ  ಮೃಣಾಳದ ಬಗೆಯ ಭೇದಮಂ |
ಕುರುಪಿಡುವೊಡರಿದೆನಲ್ ಸರಿಸಿಯೊಳ್ ತರಳೆಯರ ಜಲಕೇಳಿ ಕಣ್ಗೆಸೆದುದು ||೬||

ಲಲನೆಯರ್ ತಾವರೆದೆರದ ಮೇಲುದಿನೊಳೆಸೆವ |
ನೆಲೆಮೊಲೆಗಳಲುಗೆ ತಾವರೆದೆರೆದ ಕೈಗಳಿಂ |
ತುಡುಕಿದರ್ ಚೆಳ್ವಕಂಕಣ ರವಂ ಮಿಗೆ ಚೆಲ್ವಕಂಕಣ ರವಂಗಳೊಡನೆ ||
ವಿಲಸಿತದ ಕಾಸಾರದಂಬುಗಳನೆಸೆವ ಜೀ |
ರ್ಕೊಳವಿಗಳ ಕದನ ಕಾಸಾರದಂಬುಗಳವೋ |
ಲಳವಡಿಸಿ ಸರಸಕೇಳಿಗೆ ಪೊಕ್ಕರಡಿಗಡಿಗೆ ಸರಸಕೇಳಿಗೆಯಾಗಲು ||೭||

ಹೊಳೆವ ಹುಬ್ಬುಗಳ ಭಾಸುರ ಚಾಪಲತೆಯ ಮಂ |
ಡಳಿಸಿದುನ್ನತ ಪಯೋಧರದ ಕಡೆಗಣ್ಣ ಚಂ ||
ಚಲದ ಭೂಷಣದ ಘನರವದ ಚಿತ್ರಾಂಗಿಯರ್ ತವೆ ಹಸ್ತದೊಳ್ ತೋಯದ ||
ಮಳೆಗರೆವುದಚ್ಚರಿಯೆ ಪೇಳೆನೆ ಸುವಾರಿಯಂ |
ತುಳುಕಿದರ್ ಬಿಂಕದಿಂದೊರ್ವರೋರ್ವರ ಮೇಲೆ |
ಮೊಲೆಗೆಲದ ಕುಂಕುಮದ ಕದಡರುಣ ಗಿರಿತಟದ ಕೆಂಬೊನಲ್ಗಳವೊಲಾಗೆ ||೮||

ಹರಿಯ ಲೊಚನಮಜಂ ಕುಳ್ಳಿರ್ಪ ತಾಣಮಿಂ |
ದಿರೆಯ ನಿಳಯಂ ದಿವಾಕರನ ಕೆಳೆ ಮನ್ಮಥನ |
ಸರಳ್ಕಾಡಿಗಳಿಕ್ಕೆ ಪರಿಮಳದ ಬೀಡೆನಿಸಿಕೊಂಡು ಸಂಪೂರ್ಣತೆಯೊಳು ||
ಪರಿಶೋಭಿಸಿದುವಲ್ಲಿ ನೆರೆದಿಂಗಳಂ ಪೋಲ್ವ |
ತರುಣಿಯರ ಚೆಲ್ವ ನಗಮೊಗದ ಮುಂದೀಗ ತಾ |
ವರೆಯಾದುವೆಂಬಂತೆ ಪೆಣ್ಗಳಾಸ್ಯಕೆ ಸೋಲ್ದುವಾ ಕೊಳದ ಕಮಲಂಗಳು ||೯||

ಮೇಲಕುಪ್ಪರಿಸಿ ತಲೆಕೆಳಗಾಗಿ ಬಿದ್ದೊಡಂ |
ಲೋಲ ಲೋಚನಕೆ ಪಾಸಟಿಯಾಗದಿರೆ ವಿನ್ಗ |
ಳಾಳದೊಳ್ ಮುಳುಗಿದುವು ಗತಿಗಳ ವಿಲಾಸಮಂ ಕಂಡು ಕಲಹಂಸಂಗಳು ||
ಕಾಲಿಂದ ನಡೆಯಲೊಲ್ಲದೆ ನಭಕೆ ಪಾರಿದುವು |
ಬಾಲೆಯರ ಕಣ್ಣ ಹೊಳಹಿಗೆ ಗಮನದುಜ್ಜುಗಕೆ |
ಸೋಲದವರಾರೆಂಬ ತೆರನಾಗೆ ಸಲಿಲದೊಳ್ ಕ್ರೀಡಿಸಿದರಂಗನೆಯರು ||೧೦||

ಶಿಖರಿ ದಶನ ದ್ಯುತಿಯ ಬೆಳ್ನಗೆಯ ಸೂಸಲೆನೆ |
ನಖ ರುಚಿಯ ತೆರಳಿಕೆಯ ಹೊರಳೀಯೆನೆ ಲೋಚನ ವಿ |
ಶಿಖದ ಮುಮ್ಮೊನೆವೊಗರ ಧಾಳಿಯೆನೆ ಹಾರಮಂ ಪರಿದು ಬೀರ್ದರೊ ಪೇಳೆನೆ |
ಸಖಿಯರಂ ಕೂಡಿಕೊಂಡೊರ್ವರೊರ್ವರ್ಗೆ ಸ |
ಮ್ಮುಖವಾಗಿ ವಿಷಯೆ ಚಂಪಕಮಾಲಿನಿಯರಾಗ |
ಸುಖ ಜಲಕ್ರೀಡೆಯೊಳ್ ಚೆಲ್ವ ತಿಳಿನೀರ ತುಂತುರ್ವನಿಗಳೆಸೆದಿರ್ದುವು ||೧೧||

ಮುದದಿಂದ ವಿಷಯೆ ಚಂಪಕಮಾಲಿನಿಯರೊಡನೆ |
ಸದತಿಯರ್ ನಾನಾಪ್ರಕಾರದಿಂ ಕ್ರೀಡಿಸಿದ |
ರುದಕದೊಳ್ ಬಳಿಕ ತಮ್ಮಾನನ ಶುಧಾಂಶು ಮಂಡಲದ ಬೆಳುದಿಂಗಳಿಂದೆ ||
ಸುದಮಲ ಸರೋವರದ ತೀರದೊಳ್ ಬಳಸಿ ಕ |
ಟ್ಟಿದ ಚಂದ್ರಕಾಂತ ಸೋಪಾನದೊಳೊಸರ್ವ ನೀ |
ರೊದವಿತೆನೆ ಮೈಗಳ್ಗೆ ತಣ್ಣಸಂ ತೋರಲಾ ಕೊಳದಿಂದೆ ಪೊರೆಮಟ್ಟರು ||೧೨||

ಕೂಲವನಡರ್ದು ನನೆದಂಗಳದೊಳ್ ಪೊತ್ತಿದ ದು |
ಕೂಲದೊಳಿರಲ್ಕೆ ತಾಪಸರ ದೃಢಮತಿಗೆ ಪ್ರತಿ |
ಕೂಲ ಕೃತಿಗಳೊ ಮೋಹನದ ರಸದೊಳಾರ್ದತೆಯನಾಂತ ಚೆಲ್ವಿನ ಕಣಿಗಳೊ ||
ಸಾಲ ಮಣಿಮಯದ ಸೋಪಾನದೊಳ್ ನಿಲಿಸಿರ್ದ |
ಸಾಲಭಂಜಿಕೆಗಳೊ ವಿಚಿತ್ರಮೆನೆ ರಂಜಿತ ರ |
ಸಾಲ ಪಲ್ಲವ ಪಾಣಿ ಪಾದ ತಳದಬಲೆಯರ ರೂಪುಗಳ್ ಕಣ್ಗೆಸೆದುವು ||೧೩||

ಅದಟಿಂದೆ ಮನ್ಮಥಂ ತ್ರಿಜಗಮಂ ಗೆಲ್ವೆಡೆಯೊ |
ಳೊದವಿದ ಪಲವು ಕೈದುಗಳನಲ್ಲಿ ಜಾಡಿಸಿ ತೊ |
ಳೆದು ತೀರದೊಳ್ ನಿಲಿಸಿ ಮೇಲಣಿಂದೊರೆಗಳಂ ತುಡಿಸಿದನೊ ಪೇಳೆನಲ್ಕೆ ||
ಉದಕದಿಂ ಪೊರಮಟ್ಟು ನಿಂದ ನೀರೆಯರ ಕಾ |
ಯದ ಬಳಿಯೆ ನನೆದು ನಿಡಿದಾಗಿ ಮಿಡಿಪರಿಯಂತಿ |
ಳಿದು ಜೋಲ್ವ ಕೇಶಪಾಶಂಗಳಾರಾಜಿಸಿದುವೇನೆಂಬೆನಚ್ಚರಿಯನು ||೧೪||

ತೊಳಗುವ ನಿತಂಬ ಗಿರಿಯಿಂದಾಗಸಕೆ ಪರ್ಬಿ |
ದೆಳೆಯವಲ್ಲಿಯ ಮೇಲೆ ನೆಲಸಿದೆಣಿವಕ್ಕಿಗಳ್ |
ಬಳಿವಿಡಿದು ಮದನ ಶಬರನ ಬಲೆಗೆ ಸಿಕ್ಕಿ ನಭಕುಬ್ಬಿಕೊಂಡೇಳ್ವ ತೆರದೆ |
ಸಲಿಲದೊಳ್ ನನೆದ ದೇವಾಂಗದೊಳಡರ್ದ ನೆಲೆ |
ಮೊಲೆಗಳಾರಾಜಿಸೆ ಮೃಗಾಕ್ಷಿಯರ ಚೆಲ್ವು ನಿ |
ಚ್ಚಳದಿಂದೆ ಕಾಣಿಸಿತು ಕಾಸಾರ ತೀರದೊಳ್ ತೀರದೊಳ್ವಿಂದೆ ಮೆರೆದು ||೧೫||

ಹಿಮದಿಂದೆ ತಣ್ಣ ಸಂಪಡೆದಿರ್ದ ಮಾಗಿಯಂ |
ಕ್ರಮದಿಂದೆ ಜಾರಿಸಿ ವಸಂತರ್ತು ತಲೆದೋರ್ಪ |
ಸಮಯದವೊಲೇಣಾಕ್ಷಯರ್ ನನೆದ ಮೈಯೊಳಿಹ ವಸನಂಗಳಂ ಸಡಿಲ್ಚಿ ||
ರಮಣೀಯ ಚಿತ್ರಾವಲಂಬನದ ಶೋಭೆಗಳ |
ಸಮನಿಸಿದ ಚಂದ್ರಿಕೆಯ ಸೊಗಸುವೆಳೆಮಾದಳದ |
ಸುಮನೋನುರಾಗದಿಂ ಪಲವು ಬಣ್ಣಂಗಳಂ ತೆಗೆದುಟ್ಟು ರಂಜಿಸಿದರು ||೧೬||

ತಡಿಗಡರ್ದೊಡನೆ ಮಡಿವರ್ಗಮಂ ತೆಗೆದುಟ್ಟು |
ನಿಡುಗುರುಳ್ಗೆಸೆವ ಧೂಪದ ಪೊಗೆಗಳಂ ಕೊಟ್ಟು |
ತೊಡವೆಲ್ಲಮಂ ತೊಟ್ಟು ಪಣಿಗೆ ತಲಕಮನಿಟ್ಟು ತಿಗುರಿಂದೆ ಸೊಬಗುವಟ್ಟು ||
ಅಡಿಗಲತಿಗೆಯನಕ್ಷಿಗಂಜನವನಲರ್ಗಳಂ |
ಮುಡಿಗೆ ನುಣ್ಗದಪಿಂಗೆ ಮಕರ ಪತ್ರಮನಾಂತು |
ಬಿಡದೆ ಮಧುಪಾನಮಂ ಮಾಡಿ ಕಪ್ಪುರವೀಳೆಯಂಗೊಂಡು ಸೊಗಯಿಸಿದರು ||೧೭||

ಬಳಿಕೊರ್ವರೊರ್ವರಂ ನೋಡುತ್ತೆ ದೂಡುತ್ತೆ |
ನಲವಿಂದೆ ನೃತ್ತಮಂ ಮಾಡುತ್ತೆ ಪಾಡುತ್ತೆ |
ಬಳಸಿ ಸರಸೋಕ್ತಿಗಳನಾಡುತ್ತೆ ತೀಡುತ್ತೆ ಬೆಳ್ನಗೆಯ ಬೆಡಗುಗಳನು ||
ಅಲರ್ಗಳಂ ತೆಗೆತೆಗೆದು ನೀಡುತ್ತೆ ಸೂಡುತ್ತೆ |
ಲಲಿತ ಮಧು ಚಷಕಮಂ ಬೇಡುತ್ತೆ ಕಾಡುತ್ತೆ |
ಕಲೆಗಳ ವಿಲಾಸಮಂ ಪೂಡುತ್ತೆ ಕೂಡುತ್ತೆ ಕಣ್ಗೆಸೆದರೆಳೆವೆಣ್ಗಳು ||೧೮||

ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ |
ಕೇಳಿ ವೆಗ್ಗಳಿಸಿರ್ದ ಸಮಯದೊಳಲರ್ಗೊಯ್ವ |
ಬೇಳಂಬದಿಂದೆ ಕೆಲಸಿಡಿದು ಬಂದಾ ವಿಷಯೆ ಚೂತದ್ರುಮದ ನೆಳಲೊಳು ||
ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ ತಂ |
ಗಾಳಿಗೊಡ್ಡಿದ ಮೆಯ್ಯ ಸೊಗಸಿಂದೆ ಮರೆದು ನಿ |
ದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರಗಾದಳು ||೧೯||

ಲೋಕತ್ರಯಂ ತನಗೆ ವಶವರ್ತಿಯಾದುದಿ ||
ನ್ನೇಕೆ ಧಾವತಿಯೆಂದು ಸುಖದಿಂದೆ ಪವಡಿಸಿದ |
ನೋ ಕಬ್ಬುವಿಲ್ಲನೆನೆ ಬೇಸರದೆ ಬಾಂದಳದೊಳಾವಗಂ ನಡೆವ ಬವಣಿ ||
ಸಾಕೆಂದು ನಿದ್ರೆಗೈದನೊ ಸೋಮನೆನೆ ವನ |
ಶ್ರೀ ಕಾಮಿನಿಯರತಿಶ್ರಮದೊಳೊರಗಿದನೊ ಕುಸು |
ಮಾಕರನೆನಲ್ಕೆ ಮಲಗಿಹ ಚಂದ್ರಹಾಸನಂ ಕಂಡು ವಿಸ್ಮಿತೆಯಾದಳು ||೨೦||

ಒರ್ವರೊರ್ವರನಗಲ್ದಶ್ವಿನೀದೇವತೆಗ |
ಳುರ್ವ ನಳಕೂಬರ ಜಯಂತಾದಿ ಸುರ ತನುಜ |
ರುರ್ವರೆಗದೇಕೆ ಬಹರಿನಶಶಿಗಳಾದೊಡಿಹವುಷ್ಣಶೀತ ದ್ಯುತಿಗಳು ||
ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂ |
ಧರ್ವರೊಳಗಾವನೋ ಮನುಜನಲ್ಲೆಂದವನ |
ಸರ್ವಾಂಗಮಂ ಬಿಡದೆ ನೋಡಿದಳ್ ವಿಷಯೆ ವಿಷಯಾಸಕ್ತೆಯಾಗಿ ಬಳಿಕ ||೨೧||

ಬೆಚ್ಚೆರಳೆಗಂಗಳವನವಯವದ ಚೆಲ್ವಿನೊಳ್ |
ಬೆಚ್ಚುವಂಗಜನಾಗ ಕಿವಿವರೆಗೆ ತೆಗೆದು ತುಂ |
ಬೆಚ್ಚಲರ್ಗೋಲಂತರಂಗದೊಳ್ ನಾಂಟಿದುವು ದಾಂಟಿದುವು ಗರಿಗಳೊಡನೆ ||
ಬೆಚ್ಚನಾದೆದೆಯಿಂದೆ ಕಾತರಿಸಿ ಮುದುಡುಗೊಂ |
ಡೆಚ್ಚರಿಂದೇಳ್ವ ರೋಮಾಂಚನದೊಳಾಸೆ ಮುಂ |
ದೆಚ್ಚೆ ಬೆವರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳ್ವೆನು ||೨೨||

ಸುತ್ತನೋಡುವಳೊಮ್ಮೆ ನೂಪುರವಲುಗದಂತೆ |
ಹತ್ತೆ ಸಾರುವಳೊಮ್ಮೆ ಸೋಂಕಲೆಂತಹುದೆಂದು |
ಮತ್ತೆ ಮುರಿದಪಳೊಮ್ಮೆ ಹಜ್ಜೆಹಜ್ಜೆಯಮೇಲೆ ಸಲ್ವಳಮ್ಮದೆ ನಿಲ್ವಳು ||
ಚಿತ್ತದೊಳ್‌ನಿಶ್ಚೈಸಿ ನೆರೆಯಲೆಳಸುವಳೊಮ್ಮೆ |
ಹೊತ್ತಲ್ಲ ದನುಚಿತಕೆ ಬೆದರಿ ಹಿಂಗುವಳೊಮ್ಮೆ |
ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ನಿಂದಿರ್ದಳಾತನ ಪೊರೆಯೊಳು ||೨೩||

ದಿವಿಜೇಂದ್ರತನಯ ಕೇಳೀ ತೆರೆದೊಳಾಗ ನವ |
ಯುವತಿ ನಿಂದೀಕ್ಷಿಸುತ ಕಂಡಳವನಂಗದೊಳೆ |
ಸೆವ ರುಚಿರ ಕಂಚುಕದ ತುಡಿಸೆರಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು ||
ತವಕದಿಂ ಬಿಟ್ಟು ಮುದ್ರೆಯನೋಸರಿಸಿ ತೆಗೆದು |
ವಿವರದೊಳ್ ತನ್ನ ತಂದೆಯ ಹೆಸರು ಬರೆಹಮಿರೆ |
ಲವಲವಿಕೆ ಮಿಗೆ ನೋಡಿ ಹರ್ಷಪುಳಕದೊಳಂದು ನಿಂದೋದಿಕೊಳುತಿರ್ದಳು ||೨೪||

ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸು |
ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ |
ನೇಮಿಸಿದ ಕಾರ‍್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ ||
ಸೀಮೆಗರಸಾದಪಂ ಸಂದೇಹಮಿಲ್ಲಿದಕೆ |
ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ |
ಥಾಮಿತ್ರನಪ್ಪನೆಂದೀತನಂ ಕಳುಹಿದೆವು ನಿನ್ನ ಬಳಿಗಿದನರಿವುದು ||೨೫||

ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ |
ವಿತ್ತ ವಿದ್ಯಾವಯೋ ವಿಕ್ರಮಂಗಳ ನೀಕ್ಷಿ |
ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನಿದರೊಳೆಮಗೆ ||
ಉತ್ತರೋತ್ತರಮಪ್ಪುದೆಂದು ಬರೆದಿಹ ಲಿಪಿಯ |
ನೆತ್ತಿವಾಚಿಸಿಕೊಂಡು ತರಳಾಕ್ಷಿ ತಾನದಕೆ |
ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು ||೨೬||

ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ |
ಗೀತನರಸಹನೆಂದು ಕುಲಶೀಲ ವಿದ್ಯೆಗಳ |
ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು ||
ಈತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂ |
ದಾ ತಾತನಣ್ಣಂಗೆ ಬರೆಸಿ ಕಳುಹಿದ ಪತ್ರ |
ವೇ ತಪ್ಪದಿದು ವರ್ಣಪಲ್ಲಟದ ಮೋಸವೆಂದೆಬಲೆ ಭಾವಿಸುತಿರ್ದಳು ||೨೭||

ಕಡುಚೆಲ್ವನಾದ ವರನಂ ಕಂಡು ನಿಶ್ಚೈಸಿ |
ತಡೆಯದಿಂದೀತಂಗೆ ವಿಷಯೆ ಮೋಹಿಸುವಂತೆ |
ಕುಡುವುದೆಂದಲ್ಲಿಂದೆ ತನ್ನ ಪಿತನೀತನಂ ಕಳುಹಿದಂ ಸುತನ ಬಳಿಗೆ ||
ಒಡಗೂಡದಿರದೆನ್ನ ಮನದೆಣಿಕೆ ಪತ್ರಿಕೆಯೊ |
ಳೆಡಹಿ ಬರೆದಕ್ಕರದ ಬೀಳಿರ್ದೊಡದರಿಂದೆ |
ಕೆಡುವುದಗ್ಗದ ಕಜ್ಜಮೆಂದಾ ತರುಣಿ ತಾನದಂ ತಿದ್ದಲನುಗೈದಳು ||೨೮||

ತಪ್ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ |
ಗೊಪ್ಪುವ ಯಕಾರಮಂ ಕೆಲಬಲದ ಮಾಮರದೊ |
ಳಿಪ್ಪ ನಿರ‍್ಯಾಸಮಂ ತೆಗೆದು ಕಿರುವೆರಳುಗುರ್ಗೊನೆಯಿಂದೆ ತಿದ್ದಿ ಬರೆದು ||
ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ |
ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲಿರಿಸಿ |
ಸಪ್ಪುಳಾಗದ ತೆರದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು ||೨೯||

ದಿಟ್ಟಿ ಮುರಿಯದು ಕಾಲ್ಗಳಿತ್ತಬಾರವು ಮನಂ |
ನಟ್ಟು ಬೇರೂರಿದುದು ಕಾಮನಂಬಿನ ಗಾಯ |
ವಿಟ್ಟಣಿಸಿತಂಗಲತೆ ಕಾಹೇರಿತೊಡಲೊಳಗೆ ವಿರಹದುರಿ ತಲೆದೋರಿತು ||
ಬಟ್ಟೆವಿಡಿದೊಡನೊಡನೆ ತಿರುತಿರುಗಿ ನೋಡುತಡಿ |
ಯಿಟ್ಟಳೀಚೆಗೆ ಬಳಿಕ ಬೆರಸಿದಳ್ ಕೆಳದಿಯರ |
ತಟ್ಟಿನೊಳ್ ಸಂಭ್ರಮದ ಸಂತಾಪದೆಡೆಯಾಟದಂತರಂಗದ ಬಾಲಕೆ ||೩೦||

ಆಳಿಯರ್ ಕಂಡರೀಕೆಯ ಮೊಗದ ಭಾವಮಂ |
ಕೇಳಿದರಿದೇನೆಲೆ ಮೃಗಾಕ್ಷಿ ತಳುವಿದೆ ಮನದ |
ಬೇಳಂಬಮಾವುದುಕ್ಕುವ ಹರ್ಷರಸದೊಡನೆ ಬೆರಸಿಹುದು ಬೆದರುವೊನಲು ||
ಗಾಳಿ ಪರಿಮಳವನಡಗಿಪುದುಂಟೆ ತನು ಚಿತ್ತ |
ದಾಳಾಪಮಂ ಮಾಜಲರಿದಪುದೆ ಸಾಕಿನ್ನು |
ಹೇಳದೊಡೆ  ಮಾಣಲಂತಸ್ಥಮದು ತಾನೆ ತುಬ್ಬುವುದೆಂದು ನಗುತಿರ್ದರು ||೩೧||

ಕೆಳದಿಯರ ನುಡಿಗೆ ನಸುನಗುತ ನಿಜ ಭಾವಮಂ |
ಮೊಳೆಗಾಣಿಸದೆ ಪುಸಿಗೆ ಸರಸವಾಡುತೆ ಪೊತ್ತು |
ಗಳೆವ ಮಂತ್ರಿಜೆ ಸಹಿತ ತಿರುಗಿದಳ್ ಬನದಿಂದೆ ಮನೆಗೆ ಚಂಪಕಮಾಲಿನಿ ||
ಪೊಳಲೊಳ್ ವಿವಾಹೋತ್ಸವಂಗಳಾ ಸಮಯದೊಳ್ |
ಸುಳಿದುವಗ್ಗದ ಗೀತ ನೃತ್ಯ ವಾದ್ಯಂಗಳಿಂ |
ಕಳಸ ಕನ್ನಡಿಗಳ ವಿಲಾಸದ ಪುರಂಧಿಯರ ಶೋಭನದ ಸುಸ್ವರದೊಳು ||೨೩||

ಪದುಳದಿಂದೈತಂದು ಬಾಲಿಕೆಯರಂ ಕಳುಹಿ |
ಸದನಮಂ ಪೊಕ್ಕಳವನೀಶ್ವರಾತ್ಮಜೆ ಬಳಿಕ |
ಮದುವೆಗಳ ಮಂಗಳೋತ್ಸವದ ಮಧುರ ಸ್ವರಂಗಳನಾಲಿಸುತೆ ಮನದೊಳು ||
ಇದು ಶುಭ ನಿಮಿತ್ತ ಮಿಂದೆನಗೆ ವೈವಾಹದ |
ಭ್ಯುದಯಮಾದಪುದು ಕಾಂತನೊಳಂಬೆಣಿಕೆಯಿಂದೆ |
ಮದನ ಶರದಿಂದೆ ಪೀಡಿತೆಯಾದ ಮಂತ್ರಿಸುತೆ ಮನೆಗೆ ಬರುತಿರ್ದಳಂದು ||೩೩||

ಪುರುಹೂತ ಸಂಭೂತ ಕೇಳ್ ವನದೊಳ್ ವಿಷಯೆ |
ವಿರಹ ತಾಪದೊಳೊಂದು ಗಳಿಗೆಯಂ ಪತ್ತು ಸಾ |
ಸಿರ ಯುಗಕೆ ಸಮಮಾಗಿ ಬಾಪಿಪಳ್ ನಿಂದಲ್ಲಿ ನಿಲ್ಲಳಾರಂ ನೋಡಳು ||
ಪರಿಚಯದಬಲೆಯರ ನಗ್ಗಿಸುವಳಾಪ್ತ ಸಖಿ |
ಯರ ಮಾತನಾಲಿಸಳ್ ಸಂಗರಕೆ ಮೈಗುಡಳ್ |
ಕರೆವ ಪಂಜರದ ಗಿಳಿಯಂ ನುಡಿಸಳೂಡಿಸಳ್ ಸಾಕುವಮಿಗಪಕ್ಷಿಗಳನು ||೩೪||

ಉಣ್ಣಳೊರಗಳ್ ನುಡಿಯಳುಡಳಿಡಳ್ ತುಡುಳುರಿಗೆ |
ತಣ್ಣಸವನರಸುವಳ್ ಕುಮಾರಿ ತನು ತನಗೆ |
ತಿಣ್ಣಮೆಂದಲಸುವಳ್‌ಬಿ ಸುಯ್ವಳೇನಿದೆಂದಂಡಲೆದು ಕೇಳ್ವವರೊಳು ||
ಕಣ್ಣಳವನೊದವಿಪಳ್ ಶೈತ್ಯವಸ್ತುಗಳಿಂದೆ |
ಪಣ್ಣಿದುಪಚಾರಮಂ ಹೃದಯದೊಳ್ ನೀವೊದೆಯ್ದಂ |
ಸುಣ್ಣ ಮರಳ್ವಂತಾದುದೆಂದು ಕಾತರಿಸುವಳಬಲೆ ಕಾಮತಾಪದಿಂದೆ ||೩೫||

ಜಲಯಂತ್ರದೆಡೆಯೊಳ್ ತಳಿರ್ವಸೆಯ ತಾಣದೊಳ್ |
ಮಲಯಜದ ಮಾಡದೊಳ್ ಶಶಿಕಾಂತ ವೇದಿಯೊಳ್ |
ಸುಲಲಿತ ಲತಾಮಂಟಪದೊಳೆಸೆವ ತಂಗೊಳದ ತಡಿಯ ಪುಳಿನಸ್ಥಳದೊಳು ||
ಎಳೆವೆಲರ ತುಂಬಿಗಳ ಪಲ್ಲವದ ಕುಸುಮ ಸಂ |
ಕುಲದ ಹಂಸದ ಗಿಳಿಯ ಕೋಗಿಲೆಯ  ಕರ್ಕಶಕೆ |
ನಿಲಲರಿಯದುಪ್ಪರಿಗೆದುದಿನೆಲೆಯ ಚಂದ್ರಶಾಲೆಗೆ ಬಂದಳಂಬುಜಾಕ್ಷಿ ||೩೬||

ಅಲ್ಲಿ ನಿಜ ಸಖಿಯರಬಲೆಯ ಚಿತ್ತದಾಸರಂ |
ಮೆಲ್ಲಮೆಲ್ಲನೆ ತವಿಲೆಂದುಪಚರಿಸಲವರ |
ಸಲ್ಲಿಲಿತ ಮುಖವಾಣಿ ಲೋಚನ ಭ್ರೂಕುಂತಳಾಧರಂಗಳನೀಕ್ಷಿಸಿ ||
ತಲ್ಲಣಿಸಿ ತಿಂಗಳರಗಿಳಿ ಪೂಸರಲ್ ಕಬ್ಬು |
ವಿಲ್ಲಾರಡಿಗಳೊಳ್ದಳಿರ್ಗಳೆಂದೆಣಿಸಿ ನು |
ಣ್ಗಲ್ಲದೊಳ್ ಕೈಯಿಟ್ಟು ಬೆರಗಾಗಿ ಚಿಂತಿಸುವ ತೆರದೊಳವಳಿರುತಿರ್ದಳು ||೩೭||

ಪಾವಗಿದುಳಿದರಂಟೆ ಹರನ ಕೋಪದೊಳುರಿದು |
ಜೀವಿಸಿದರುಂಟೆ ಕಾಳ್ಕಿಚ್ಚಿನೊಳ್ ಕೆಳೆಗೊಂಡು |
ಬೇವುತಸುವಿಡಿದು ಬಾಳ್ದವರುಂಟೆ ಚಂದ್ರ ಮನ್ಮಥಪವನರಬಲೆಯರ್ಗೆ ||
ಹಾವಳಿಯ ನೊದವಿಸುವೆವೆಂದು ಬದುಕಿದರಲ್ಲ |
ದಾವ ಕರುಣಿಗಳವರ್‌ವಿ ರಹವಿಕೆಯ ಮನವ |
ನಾವರಿಸಲೇನಹುದೊ ಶಿವಶಿವಾ ತಾಳಲರಿದೆಂದೊರ್ವ ಸಖಿ ನುಡಿದಳು ||೩೮||

ಬೆಳವಿಗೆಗೆ ಸುರರೊಂದು ಕಳೆಯನೇಕುಳುಹಿದರೊ |
ಮುಳಿದಂದು ಶಿವನೇಕೆ ಮತ್ತೆ ಕರುಣಿಸಿದನೋ |
ಮೆಲುತ ಮೆಲುತೇಕ ಬಿಟ್ಟುವೊ ಫಣಿಗಳೆಂದು ಶಶಿ ಮದನ ಮಂದಾನಿಲರನು ||
ಸಲೆ ಬೈದು  ಕೋಗಿಲೆಯ ತುಂಬಿಗಳ ಗಿಳಿಯ ಕಳ |
ಕಳಕೆ ವಾಯಸಮಂ ಸರೋಜಮಂ ತನ್ನ ಕರ |
ತಳಮಂ ಜರೆದು ನಿಂದಿಸಿದಳೊರ್ವ ಸಖಿ ಬಾಲೆಯಂ ನೋಡಿ ಬಿಸುಸುಯ್ಯುತೆ ||೩೯||

ಇವಳ ಮನದೆಣಿಕೆ ಕೈಗೂಡಲಾವೆಲ್ಲರುಂ |
ವಿವಿಧ ಕುಸುಮೋತ್ಕರ ಸುಗಂಧಾಕ್ಷತೆಗಳಿಂದೆ |
ನವ ಪಕ್ವಫಕ ಮೋದಕಾದಿ ನೈವೇದ್ಯದಿಂ ಧೂಪ ದೀಪಂಗಳಿಂದೆ ||
ಶಿವನ ವಲ್ಲಭೆಯನರ್ಚಿಸಿ ವರ್ಷವರ್ಷಕು |
ತ್ಸವದಿಂದೆ ನೋಂಪಿಯಂ ಮಾಳ್ಪೆವೆಂದಾ ಸಕಲ |
ಭುವನ ಮಾತೆಯನುಮಾದೇವಿಯಂ ಗೌರಿಯಂ ಪ್ರಾರ್ಥಿಸಿದರಾ  ಸಖಿಯರು ||೪೦||

ಪ್ರಾಸಾದದಗ್ರದೇಳನೆಯ ನೆಲೆಯೊಳ್ಚಂದ್ರ |
ಹಾಸನೈತಹ ಮಾರ್ಗಮಂ ನೋಡುತುಪಚರಿಸು |
ವಾ ಸಖೀಜನದ ನುಡಿಗಳನಾಲಿಸುತೆ ವಿಷಯೆ ಚಿತ್ತದೊಳ್ ತನ್ನ ಪಿತನ ||
ಶಾಸನವನಿಂದು ಮದನಂ ಪಾಲಿಪಂತೆ ನೀಂ |
ಸೂಸು ಕಾರುಣ್ಯವರ್ಷವನೆನ್ನ ಮೇಲೆಂದು |
ಮಾಸು ದತಿ ಭಕ್ತಿಯಿಂ ಬೇಡಿಕೊಳುತಿರ್ದಳಾನತೆಯಾಗಿ ಪಾರ್ವತಿಯನು ||೪೧||

ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ |
ಬುಜ ಮಿತ್ರನಪರಾಹ್ಣಕೈದಲ್ಕೆ ನಿದ್ರೆಯಂ |
ತ್ಯಜಿಸಿ ಮೊಗದೊಳೆದು ಮುಕ್ಕುಳಿಸಿ ಕಪ್ಪುರವೀಳೆಯಂಗೊಂಡು ಬಳಿಕ ಬಿಗಿಸಿ ||
ನಿಜ ವಾಜಿಯಂ ಬಂದಡರ್ದನುಚರರ್ವೆರಸಿ |
ಋಜುವಾದ ಶಕುನಂಗಳಂ ಕೇಳುತೊಲಿದು ಪೌ |
ರ ಜನಮಿವನಾರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತಿರ್ದನು ||೪೨||

ಆ ನಗರದೊಳ್ ಕುಂತಳೇಶ್ವರನು ನಿರ್ಮಲ |
ಜ್ಞಾನದಿಂ ಗಾಲವನ ಸೂಕ್ತಮಂ ಕೇಳುತ ಸ |
ದಾನಂದ ಯೋಗಮಂ ಕೈಕೊಂಡು ದುಷ್ಟಬುದ್ಧಿಗೆ ವಿಚಾರವನೊಪ್ಪಿಸಿ ||
ಧಾನಪರನಾಗಿರ್ಪನದರಿಂದೆ ಪೊಳಲಂ ಪ್ರ |
ಧಾನಿ ಪಾಲಿಪನವಂ ಪೊರಮಟ್ಟಿರಲ್ಕೆ ತ |
ತ್ಸೂನು ಮದನಂ ಧುರಂಧರೆತೆವೆತ್ತಾ ಸಮಯಕೋಲಗದೊಳಿರುತಿರ್ದನು ||೪೩||

ಶ್ರೀಕಂಠನಂ ಕೆಣಕಿ ಮೈಗೆಟ್ಟ ಮದನನಂ ||
ಲೋಕದೊಳ್ ಜರೆವಂತೆ ಶಂಕರ ಪ್ರಿಯನಾಗಿ |
ಸಾಕಾರದಿಂದೆಸೆವ ಮದನನಿವನೆಂಬಂತೆ ರಂಜಿಸುವ ಮಂತ್ರಿಸೂನು ||
ವ್ಯಾಕೀರ್ಣ ರತ್ನರೋಚಿಗಳ ಚಾವಡಿಯ ಚಾ |
ವಿಕರದ ಸಿಂಹಾಸನದೊಳಿರ್ದನಿಕ್ಕಲದ |
ಕೋಕನದ ನೇತ್ರಯರ್ ಚಿಮ್ಮಿಸುವ ಚಾರು ಚಂಚಲ ಚಾಮರಂಗಳಿಂದೆ ||೪೪||

ಉಚಿತದಿಂದೊಪ್ಪುವ ಮಹೀಸುರರ ಭೂಭೂಜರ |
ನಿಚಯದ ನಿಯೋಗಿಗಳ ಗಣಕರ ಪುರೋಹಿತರ |
ವಚನ ಕೋವಿದರ ಕವಿ ಗಮಕಿಗಳ ವಂದಿ ಗಾಯಕ ನಟರ ನರ್ತಕಿಯರ |
ರುಚಿರದಿಂ ಕೃಷ್ಣಚಾರಿತ್ರಮಂ ಸೊಗಸಾಗಿ |
ರಚಿಸುತಿಹ ಭಾವಕರ ಸಂಗೀತಗೋಷ್ಠಿಯಿಂ |
ಸಚಿವ ಸುತನೋಲಗಂ ರಮಣೀಯಮಾಗಿರ್ದುದಿಂದ್ರನಾಸ್ಥಾನದಂತೆ ||೪೫||

ಲೀಲೆ ಮಿಗೆ ನಗರದೊಳ್ ನಡೆತಂದು ಮಂತ್ರಿಸುತ |
ನಾಲಯದ ಮುಂದೆ ವಾಜಿಯನಿಳಿದು ತದ್ದ್ಯಾರ |
ಪಾಲಕರ್ಗಿಂದುಹಾಸಂ ಪೇಳ್ದೊಡವರಂತರಾಂತರದೊಳೆಚ್ಚರಿಸಲು ||
ಏಳನೆಯ ಬಾಗಿಲ ವಿವೇಕನೆಂಬವನಿದಂ |
ಕೇಳಿ ತಾಂ ಪಿಡದ ಶ್ರದ್ಧಾಯಷ್ಟಿಸಹಿತ ಬಂ |
ದೋಲಗದೊಳಿರ್ದ ಮದನಂಗೆ ಬಿನ್ನೈಸಲ್ ಪರಾಕಾದೊಡಿಂತೆಂದನು ||೪೬||

ಅವಧರಿಸು ಜೀಯ ನಿಮ್ಮಯ್ಯಂಗೆ ಕ್ರೋಧನೆಂ |
ಬವನಾಪ್ತನಾಗಿ ಹಿಂಸಾಯುಷ್ಟಿವಿಡಿದು ಸ |
ಲ್ವವನಲಾ ಬಾಗಿಲ್ಗೆ ತನಗಾತನಂತೆ ನಿನ್ನೊಳೆ ಸಲುಗೆಯುಂಟೆ ಬರಿದು ||
ತವ ಭೃತ್ಯನಾಗಿಹೆಂ ಸಾಕದಂತಿರಲಖಿಳ |
ಭುವನಕಧಿಪತಿಯಾದ ಮುರಹರನ ಭಕ್ತನ |
ಲ್ಲವೆ ಚಂದ್ರಹಾಸನಾತನ ಬರವನರಿಪಲೇತಕೆ ಸುಮ್ಮನಿಹೆಯೆಂದನು ||೪೭||

ನೀತಿ ಸಮ್ಮತದಿಂ ವಿವೇಕನಿಂತೆನೆ ಕೇಳ್ದು |
ಶಾತಕುಂಭಾಲಂಕೃತಾಸನವನಿಳಿದು ಹ |
ರ್ಷಾತಿಶಯದಿಂದೆ ಮದನಂ ಚಂದ್ರಹಾಸನನಿದಿರ್ವಂದು ಕಂಡು ನಗುತೆ ||
ಪ್ರೀತಿಯಿಂದಪ್ಪ ಕೈವಿಡಿದೊಡನೆ ಸಭೆಗೆ ತಂ |
ದಾತನಂ ಸತ್ಕರಿಸಿ ಚಂದನಾವತಿಯ ತ |
ದ್ಭೂತಳದ ಮೇಧಾವಿನಿಯ ಕುಳಿಂದನ ಕುಶಲದೇಳ್ಗೆಯಂ ಬೆಸಗೊಂಡನು ||೪೮||

ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದ |
ರ್ಶನಮಿಂದ ಪೂರ್ವಮಾದುದು ಬಂದ ಕಾರ್ಯಮಂ |
ತನಗೊರೆವುದೆಂದು ಮದನಂ ಚಂದ್ರಹಾಸನಂ ಕೇಳ್ದೊಡಾತಂಗೆ ನಿನ್ನ ||
ಜನಕನೆನ್ನಂ ನಿನ್ನ ಬಳಿಗತಿರಹಸ್ಯದಿಂ ||
ದನುಮತಿಸಿ ಕಳುಹಲಾನೈತಂದೆನೆಂದು ಕುರು |
ಪಿನ ಮುದ್ರೆ ಸಹಿತ ನಿಜ ಕರದೊಳಿಹ ಪತ್ರಮಂ ಕೊಟ್ಟನಾತನ ಕೈಯೊಳು ||೪೯||

ಇದ್ದವರ ನಾ ಸಭೆಯೊಳಿರಿಸಿ ಶಶಿಹಾಸನಂ |
ಗದ್ದುಗೆಗೆ ನೆಲೆಗೊಳಿಸಿ ಮದನನಾಸ್ಥಾನದಿಂ |
ದೆದ್ದಮಲನೆಂಬ ತನ್ನನುಜನಂ ಕೂಡಿಕೊಂಡೇಕಾಂತ ಭವನಕೈದಿ ||
ಹೊದ್ದಿಸಿದ ಮುದ್ರೆಯಂ ತೆಗೆದು ಪತ್ರವನೋದಿ |
ತಿದ್ದಿದಕ್ಕರವ ನರಿಯದೆ ನಿಜದ ಬರೆಹಮೆಂ |
ದದ್ದನತಿ ಹರ್ಷಾರ್ಣವದೊಳಾಗ ಶತಯಾಗತನಯ ಕೇಳ್ ಕೌತುಕವನು ||೫೦||

ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ |
ದೀ ಸುವೊಕ್ಕಣಿಗಳ್ ಮಹಾಹಿತಂ ತನಗೀತ ||
ನೀ ಸೀಮೆಗರಸಾದಪಂ ಸರ್ವಥಾಮಿತ್ರನಪ್ಪವಂ ನಿಶ್ಚಯಮಿದು ||
ಮೋಸವೇ ಕುಲಾಚಾರಗತಿಯ ನಾರೈವೊಡೆ ವಿ |
ಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನಿದ |
ಕೋಸರಿಸಲೇಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದನು ||೫೧||

ಮುನ್ನ ತಂದೆಯ ನಿರೂಪದ ಕಾರ್ಯಮದರ ಮೇ |
ಲೆನ್ನಮನವಿವನೊಳಕ್ಕರ್ವೆರಸುತಿದೆ ರೂಪ |
ನುನ್ನಿಸುವೊಡನುಜೆಗೀತಂಗೆ ಪಾಸಟಿ ವಿಚಾರಿಸೆ ಕೃಷ್ಣಭಕ್ತನಿವನು
ಇನ್ನು ಸಂಶಯವಿಲ್ಲವೀಚಂದ್ರಹಾಸಂಗೆ |
ಕನ್ನೆಯ್ದಿಲಂದದಕ್ಷಿಯ ತಂಗಿಯಂ ಕೊಟ್ಟು |
ಮನ್ನಿಸುವೆನೆಂದು ನಿಶ್ಚೈಸಿ ಮದನಂ ಮತ್ತೆ ಬಂದನೋಲಗದ ಸಭೆಗೆ ||೫೨||

ಗಣಿತಜ್ಞರಂ ಕರೆಸಿ ನೋಡಿಸಿದನಾಗಳನು |
ಗುಣಮಾದ ರಾಶಿಕೂಟವನಮಲ ಲಗ್ನಮಂ |
ಗುಣಿಸಿ  ವಿಸ್ತರಿಸಿದರ್ ಬಳಿಕ ಮದನಂ ಮಾಡಿಸಿದನೊಸಗೆಯಂ ಪೊಳಲೊಳು ||
ಅಣಿದುವಭ್ರವನೆಸೆವ ಗುಡಿ ತೋರಣಂಗಳಿ |
ಟ್ಟಿಣಿಸಿದುವು ಬೇಕಾದ ಮಂಗಳ ಸುವಸ್ತುಗಳ್ |
ಮಣಿಮಯದ ವೇದಿಯಂ ವಿರಚಿಸಿದರೊಳ್ಪಿನಿಂ ವೈವಾಹ ಮಂಟಪವನು ||೫೩||

ಬಳಿಕ ಮದನ ಹೇಳಿಕೆಯೊಳಂದು ವಿದಿತ ಮಂ |
ಗಳ ವಿಹಾಹೋಚಿತ ಕ್ರಿಯೆಗಳಂ ವಿರಚಿಸಿದ |
ರಿಳೆಯ ದಿವಿಜರ್ ಪುರಂಧಿಯೆರೈದೆ ಮಜ್ಜನದ ಮಂಡನದ ಮಾಳ್ಕೆಗಳನು ||
ಅಳವಡಿಸಿದರ್ ಪಣಿಯೊಳೆಸೆವ ಬಾಸಿಗದ ಮದ |
ವಳಿಗನಾಗಿರ್ದುಂ ಕುಳಿಂದಜಂ ದೇವಪುರ |
ನಿಳಯ ಲಕ್ಷ್ಮೀಕಾಂತನೊಲವಿಂದೆ ವಿಷಮಮೃತಮಹುದು ಪೊಸತೇನೆನಲ್ಕೆ ||೫೪||