ಸೂಚನೆ ||
ಮಿಗೆ ಮೂಜಗಂ ತಣಿಯೆ ಹಯಮೇಧ ಯಜ್ಞಮಂ |
ಮುಗಿಸಿ ಧರ್ಮಾತ್ಮಜಂ ಕೃಷ್ಣಾದಿ ಸಕಲ ನೃಪ |
ತಿಗಳನವರವರ ನಗರಂಗಳ್ಗೆ ಕಳುಹಿ ಸುಖದಿಂದೆ ರಾಜ್ಯಂ ಗೈದನು ||

ಅರಸ ಕೇಳರುವತ್ತು ನಾಲ್ಕು ದಂಪತಿಗಳ |
ಧ್ವರದ ಋತ್ವಿಕ್ಕುಗಳ್ವೆರಸಿ ವೇದವ್ಯಾಸ |
ಪರಮ ಋಷಿಗಂಗೆಯೊಳ್ ಜಲದೇವತೆಯನರ್ಚಿಸಿದ ಮಂತ್ರಿತೋದಕವನು ||
ವರ ಪುಷ್ಪ ಪಲ್ಲವದ ಪೊಂಗಳಸಮಂ ತುಂಬಿ |
ಕರದೊಳನಸೂಯೆಗೀಯಲ್ಕವಳರುಂಧತಿಯ |
ಶಿರಕೆ ಪೊರಿಸಿದೊಡಾಕೆ ರುಕ್ಮಿಣಿಯ ಸಿರಿಮುಡಿಯೊಳಿರಿಸಿ  ನಗುತಿಂತೆಂದಳು ||೧||

ದೇವಿ ಸಿರಿಮುಡಿಗಲರ್ ಪೊರೆಯಹುದು ನಿನಗೆ ನೀರ್ |
ತೀವಿರ್ದ ಪೊಂಗಳಸಮಿದು ತಿಣ್ಣಮಾಗದೆಂ |
ದಾ ವಶಿಷ್ಠನ ರಮಣಿ ರುಕ್ಮಿಣಿಗೆ ವಿನಯದಿಂ ನುಡಿದೊಡೆ ಸುಭದ್ರೆ ಕೇಳ್ದು ||
ಗೋವರ್ಧನವನಾಂತ ವಿಶ್ವಕುಕ್ಷಿಯ ನೆದೆಯೊ |
ಳಾವಗಂ ಧರಿಸಿಕೊಂಡಿರ್ದ ಮಾನಿನಿಗೆ ಬಿ |
ಣ್ಣಾಪುದು ಪತಿವ್ರತಾಧರ್ಮಮಿದಕಳುಕಲೇತಕೆ ತಾಯೆ ನೀನೆಂದಳು ||೨||

ನಸುನಗುತರುಂಧತಿಗೆ  ಬಳಿಕ ರುಕ್ಮಿಣಿ ನುಡಿದ |
ಳುಸಿರಲಂಜುವೆನೀ ಸುಭದ್ರೆಯ ವಿಶೇಷ ಗುಣ |
ದೆಸಕಮಂ ನಮ್ಮಂತೆ ಬಿಡದೆ ರಮಣನ ನೆದೆಯೊಳಾವಗಂ ಧರಿಸಳೊಮ್ಮೆ ||
ಒಸೆದೊಡೆ ವಿಚಾರಿಸುವಳಲ್ಲದೊಡೆ ವಲ್ಲಭನ |
ಗಸಣಿಯಂ ಪಾರಳ್ ಪತಿವ್ರತಾಧರ್ಮದೊಳ್ |
ಪೊಸತೆಂದು ಸರಸವಂ ಮಾಡುತೈದೆಯರೊಡನೆ ಪೊಂಗಳಸಮಂ ತಾಳ್ದಳು ||೩||

ಅರವತ್ತುನಾಲ್ಕು ದಂಪತಿಗಳೊಪ್ಪೊವ ಗಂಗೆ |
ದೊರೆಯಿಂದೆ ಬಳಿಕ ಮಖ ಮಂಟಪಕೆ ನೀರ್ದುಂಬಿ |
ಮೆರೆವ ಪೊಂಗಳಸಂಗಳಂ ಕೊಂಡು ಬಂದರುತ್ಸವದಿಂದೆ ಮುನಿಗಳೊಡನೆ ||
ಕರೆದುವನಿಬರ ಮೇಲೆ ಮುತ್ತುಗಳ ಸೇಸೆಗಳ್ |
ನೆರೆ ಮೊಳಗಿದುವು ಸಕಲ ವಾದ್ಯಂಗಳಭ್ರದೊಳ್ |
ತುರುಗಿತನಿಮಿಷ ವಿತತಿ ಕೌತುಕಕೆ ನೆರೆದುದು ಮಹಾಜನಂ ಮೇದಿನಿಯೊಳು ||೪||

ಆ ಪುಣ್ಯ ಸಲಿಲದೊಳ್ ಸೇಚನಂಗೈದೆಸೆವ |
ಯೂಪದೊಳ್ ಕಟ್ಟಿ ಪೂಜಿಸಿದ ರಮಲಾಶ್ವಮಂ |
ಭೂಪನುಂ ದ್ರೌಪದಿಯುಮಭಿಷಿಕ್ತರಾದರ್ ಸುಮಂತ್ರಿತ ಜಲಂಗಳಿಂದೆ ||
ವ್ಯಾಪಿಸಿದ ವಿಧಿ ವಿಧಾನಂಗಳಿಂದಾವುದುಂ |
ಲೋಪಮಿಲ್ಲದೆ ನಡೆಯತೊಡಗಿತು ಮಹಾಧ್ವರಂ |
ತಾಪಸ  ಪ್ರತತಿ ಸಂದಿಗ್ಧಂಗಳಂ ತಿಳಿದು ಸಮ್ಮತದೊಳಹುದೆನಲ್ಕೆ ||೫||

ಬಂದ ಮುನಿಗಳ  ಪಾದಮಂ ತೊಳೆದು ಸತ್ಕಾರ |
ದಿಂದೆ ಪೂಜಿಸಿ ನಿವಾಸ ಸ್ಥಾನಮಂ ಕೊಟ್ಟು |
ವಂದಿಸುವ ನಚ್ಯುತಂ ತಾನೆ ಕುಳ್ಳಿರ್ಪೊಡಾಸನವ ನೀವಂ ಸಾತ್ಯಕಿ ||
ಚಂದನ ಸುಕರ್ಪೂರ ಕುಸುಮ ತಾಂಬೂಲಂಗ |
ಳಿಂದಲಂಕರಿಸುವಂ ಪ್ರದ್ಯುಮ್ನರವರವರ ||
ಮಂದಿರಕೆ ಬೇಕಾದ ವಸ್ತುಗಳ ನೊದವಿಸುವನಡಿಗಡಿಗೆ ಸಹದೇವನು ||೬||

ಸಕಲ ಜನ ಜಾಲಮಂ  ತಾರತಮ್ಮನವರಿತು |
ನಕುಲನಾದರಿಸುವಂ ಪಗಲಿರುಳ್ ಪರಿಮಳೋ |
ದಕವ ನಳವಡಿಸುವಂ ಕರ್ಣಸುತನೆಲ್ಲರಾರೈಕೆ ಹೈಡಿಂಬಿಗಾಯ್ತು ||
ಶಕಟ  ಸಂದೋಹದಿಂ  ಪೂಡಿಸುವ ಸಂಭಾರ |
ನಿಕರಕಧಿಪತಿಯಾದನನಿರುದ್ಧನನ್ನವಾ |
ಟಿಕೆಗಳೊಳ್ ಪಾಕಮಂ ಮಾಡಿಸುವ ಮಣಿಹಮಂ ಕೃತವರ್ಮಕಂ ತಾಳ್ದನು ||೭||

ಯೋಜನತ್ರಯದ ಚಪ್ಪರದೊಳೆಡವಿಡದೆ ನಾ |
ನಾ ಜನಕೆ ಬೇಕಾದ ಷಡ್ರಸದ ಶಾಲ್ಯಾನ್ನ |
ಭೋಜನವನೈದೆ ಮಾಡಿಸುತಿಹುದು ಸಾಂಬಾದಿ ಯಾದವರ್ಗಾಯ್ತು ಬಳಿಕ ||
ಶ್ರೀ ಜನಾರ್ದನನ ಸಾನ್ನಿಧ್ಯಮಾಗಿರೆ ಧರ್ಮ |
ಜನ ಮಹಾಧ್ವರಂ ಸಾಂಗಮಾಗದೆ ಮೇಣ್ ಸ |
ರೋಜನಾಭಂ ತಾನೆ ಯಜ್ಞಸ್ವರೂಪನಲ್ಲವೆ ಭೂಪ ಹೇಳೆಂದನು ||೮||

ಸುರೆಯನೊಂದಲ್ಲದೆ ಪಯೋಧಿಗಳನಾರ ನಾ |
ಕರುಷಣಂಗೈದರೆನೆ ಸುರಸಂಗಳೆಸೆಯೆ ಕುಲ |
ಗಿರಿಗಳಂ ನಗುವಂತೆ ಮಿರುಪ ಶಾಲ್ಯೋದನದ ರಾಶಿಗಳ್ ಕಂಗೊಳಿಸಲು ||
ಪರಿಪರಯ ಭಕ್ಷ್ಯ ಪಾಯಸ ವಿವಿಧ ಶಾಕಾದಿ |
ಪರಿಕರಮದೆಂತೊದಗಿದುವೊ ಕೃಷ್ಣಸುರಭಿ ತಾಂ |
ಪೊರೆಯೊಳಿರಲರಿದಾವ್ಯದೆಂಬಿನಂ ತಣಿದುಂಡುರಾಮಖದೊಳಖಿಳ ಜನರು ||೯||

ಊಟದ ಸುಗಂಧಾನುಲೇಪನದ ಕಪ್ಪುರದ  |
ವೀಟಿಕಾವಳಿಯ ಮಾಲ್ಯಾಂಬರ ವಿಭೂಷಣದ |
ವಿಟು ಸಿಂಗರದಿಂಪುವಡೆಯೆ ಮಿಗೆ ಬಯಸಿದ  ಸುವಸ್ತುಗಳನಿತ್ತು ||
ಘಾಟಿಸುವ ಭೀಮ ಫಲ್ಗುಣರ ಸನ್ಮಾನದ ಸ |
ಘಾಟಿಕೆಯ ನೃಪ ಕುಲದ  ಪುಣ್ಯಮುನಿಗಳ ಯಜ್ಞ |
ವಾಟದತಿ ಕೌತುಕದ ಮಾಳ್ಕೆಯಂ ಕಂಡು ನಲಿದಾಡಿತು ಜನಂ  ಮುದದೊಳು ||೧೦||

ಹೇಮ ವಸ್ತ್ರಾಭರಣ ಮುಕ್ತಾಫಲಂಗಳಂ |
ಸಾಮಜ ತುರಂಗ ರಥ ರತ್ನ ಜಾಲಂಗಳಂ |
ಗೋ ಮಹಿಷಿ ದಾಸೀ ನಿಕರಮಂ ಮೃಗಾಜಿನ ಕಂಬಳಾದಿಗಳನು ||
ಚಾಮರ ವ್ಯಜನಾತಪತ್ರ ಯಾನಂಗಳಂ |
ಭೂಮಿಗಳ ನಗುರುಚಂದನ ಮುಖ್ಯವಸ್ತುವಂ |
ಭೀಮ ಫಲ್ಗುಣರಖಿಳ ಯಾಚಕಾವಳಿ ತಣಿಯೆ ಕುಡುತಿರ್ದರಾದರದೊಳು ||೧೧||

ಯಾಗ ದೀಕ್ಷೆಯ ನೃಪಂ ಮಂತ್ರವಾರಿ ಸ್ನಾತ |
ನಾಗಿ ಬಳಿಕನುಪಮ ಸುವರ್ಣಚಯನದ ಪೊರೆಗೆ |
ಪೋಗಿ ಹಯಮಂ ತರಿಸಲುಚ್ಚರಿಸಿ ಯಜ್ಞಪಶುವಾದುದೆಂದಭಿವರ್ಣಿಸೆ |
ಮೇಗೆ ಶ್ರುತಿವಾಕ್ಯಂಗಳಂ ಪಠಿಸುತಿರೆ ಘೋಟ |
ಪೋಗು ನೀನಶ್ವಲೋಕದೊಳಮರಪದಮಪ್ಪು |
ದೀಗ ನಿನಗೆಂದೆಂದುಮಳಿವಿಲ್ಲದುತ್ತಮ ಸ್ವರ್ಗಮಂ ಪಡೆಯೆಂದನು ||೧೨||

ನೃಪನ ಮಾತಂ ಕೇಳ್ದು ವಾಜಿ ತಲೆಗೊಡಹಿ ಮುರ |
ರಿಪುವನೀಕ್ಷಿಸುವಭಿಪ್ರಾಯಮಂ ಮೋದದಿಂ |
ವಿಪುಲ ಮತ ನಕುಲಂಗೆ ಸೂಚಿಸಿದೊಡಾತನದರಿಂಗಿತವನರಿದು ಬಳಿಕ ||
ತಪನಸುತ ನಂದನಂಗೆಂದನವಧರಿಸು ಹಯ |
ಮುಪರಿಲೋಕದೊಳಶ್ವಪದವಿಯಂ ತಾನೊಲ್ಲೆ |
ನುಪಮೆಗೈದದ ಕೃಷ್ಣಸಾಯುಜ್ಯಮಂ ಪಡೆವೆನೆಂದೆಂಬುದೆನ್ನೊಳೆಂದು ||೧೩||

ಫಣಿ ಶಯನ ಸಾನ್ನಿಧ್ಯಮಿಂತಿಲ್ಲದೀಶ್ವರಾ |
ರ್ಪಣಮಲ್ಲದನ್ಯ ಯಜ್ಞಂಗಳೊಳ್ ಮಡಿದ ಪಶು |
ಗಣಕೆ ಮೇಣಾಕರ್ತೃಗಳ್ಗತಿಶಯ ಸ್ವರ್ಗಭೋಗಮಾದಪುದು ನಿನ್ನ ||
ಪ್ರಣುತ ಸತ್ಕ್ರತು ಫಲಂ ಶ್ರೀಕಾಂತನಾ ಕಾ |
ರಣದಿಂದೆ ಕೃಷ್ಣನ ಶರೀರಮಂ ಪೊಗುವೆನೀ |
ಕ್ಷಣದೊಳಿದನೆಲ್ಲರುಂ ನೋಡಲೆನುತಿದೆತುರುಗಮೆಂದು ನಕುಲಂ ನುಡಿದನು ||೧೪||

ತುರಗದಂತರ್ಭಾವಮಂ ತಿಳಿದು ನಕುಲನಿಂ |
ತರಸಂಗೆ ಬಿನ್ನಪಂಗೈದುದಂ ಕೇಳ್ದಖಿಳ |
ಧರಣೀಶ್ವರರ್ ಮುನಿಗಳಂಗನಾನಿಕುರುಂಬ ಮಾಶ್ಚರ್ಯಮಂ ನೋಡಲು ||
ನೆರೆದುದು ಸುಮಂತ್ರಿಸಿದ ಯೂಪದೊಳ್‌ಕಟ್ಟುತ |
ಧ್ವರ ಹಯವ ನಭಿಮಂತ್ರಿಸಿದರಚ್ಯುತನಮುಂದೆ |
ಪರಮಋಷಿಗಳ್ ಬಳಿಕ ಭೀಮನಂ ಕರೆದು ಮುದದಿಂ ಧೌಮ್ಯನಿಂತೆಂದನು ||೧೫||

ಈಕ್ಷಿಪುದು ಸಕಲ ಜನಮೆಲೆ ವೃಕೋದರ ನಾಂ ಪ |
ರೀಕ್ಷೆಯಂ ತೋರಿಸುವೆನೀತುರಂಗಮದೊಳೊಂ |
ದೇಕ್ಷಣಂ ಖಡ್ಗಮಂ ಕೊಂಡು ನಿಶ್ಚಲನಾಗಿ ನಿಲ್ವುದೆಂದಾ ಧೌಮ್ಯನು ||
ಪ್ರೋಕ್ಷಿಸಿ ಕರಾಗ್ರದಿಂ ಪಿಡಿದು ಹಯದೆಡಗಿವಿಯ |
ನಾಕ್ಷೆಭದಿಂ ಸೀಳಿದೊಡೆ ನೆತ್ತರಿಲ್ಲದೆ ಮ |
ಹಾಕ್ಷೀರಧಾರೆ ಪೊರಮಟ್ಟುದು ಸಮಸ್ತಲೋಕಂ ಕಂಡು ಬೆರಗಾಗಲು ||೧೬||

ಮತ್ತೆ ಧೌಮ್ಯಂ ಭೀಮಸೇನನಂ ಕರೆದು ಪುರು |
ಷೋತ್ತಮಂ ಪ್ರೀತನಪ್ಪವೊಲಿನ್ನು ಬಾಳಿಂದ |
ಕತ್ತರಿಸು ಕುದುರೆಯ  ತಲೆಯನೆಂದು ನೇಮಿಸಿದೊಡನಿಲಸುತನಾ ಕ್ಷಣದೊಳು ||
ಒತ್ತಿಡಿದ ವಾದ್ಯಘೋಷದೊಳಮಲ ಬರ್ಹಗಳ |
ಬಿತ್ತರದ ಪರಿಪೂತ ವಾಜಿ ಶಿರಮಂ ಛೇದಿ |
ಸುತ್ತಿರಲದಿಳೆಗೆ ಬೀಳದೆ ನಭಸ್ಥಳಕಡರ್ದಡಗಿತಿನಮಂಡಲದೊಳು ||೧೭||

ಪರಿಶುದ್ಧಮಾಗಿರ್ಪುದೀ ತುರಗಮೆಂದೊರೆದು |
ಹರಿ ಹೊಯ್ದನದರುರಸ್ಥಳದೊಳುರ್ವಿಗೆ ಬಿದ್ದು |
ದಿರದೆ ಪೊರಮಟ್ಟು ಜೀವಾತ್ಮನತಿತೇಜದಿಂದಚ್ಯುತಾಸ್ಯದೊಳಡಗಲು ||
ವರ ಮುನಿಗಳಮಲ ಧಮ್ಮಿದೆಂದರೆಲೆ ಯುಧಿ |
ಷ್ಠಿರ ಪೂರ್ವ ಯುಗದಧ್ವರಂಗಳೊಳ್ ಕಾಣಿವೀ |
ಪರಿ ಪವಿತ್ರದ ಪಶುವನಿದು ನಿನಗೆ ದೊರೆಕೊಂಡು ಕ್ರತು ಸಫಲಮಾಯ್ತೆಂದರು ||೧೮||

ಏವೇಳ್ವೆನಾಶ್ಚರ್ಯಮಂ ಬಳಿಕ ವಾಜಿಯ ಕ |
ಳೇವರಂ ಕರ್ಪೂರಮಾದುದತಿಶುಭ್ರದಿಂ |
ಭಾವಿಸಿ ಮಹಾಮುನಿಗಳಿದುವೆ ಕೃಷ್ಣನ ಮಹಿಮೆಯೆಂದು ವಿಸ್ಮತರಾಗಲು ||
ಭೂವರಂ ಹರಿಸಹಿತ  ಪತ್ನಿಯಂ ಕೂಡಿ ಕೊಂ |
ಡಾವೇಷ್ಟಿಸಿದ ಸಕಲ ಬಾಂಧವರ ಗಡಣದಿಂ |
ಪಾವಕನ  ಮುಂದೆ  ಕುಳ್ಳಿರ್ದನದರಿಂದೆ ಹೋಮಂಗಳಂ ಮಾಡಿಸಲ್ಕೆ ||೧೯||

ಧಾರಿಣಿಗೆ ಕುಪ್ಪಳಿಸಿದಾ ತುರಗದೊಡಲ ಕ |
ರ್ಪೂರಮಂ ಸ್ರುವದಿಂದೆ ಸಂಗ್ರಹಿಸಿ ಶಾಸ್ತ್ರ ಪ್ರ |
ಕಾರದಿಂದಾಗ ವೇದವ್ಯಾಸ ಮುನಿಪನಮರೇಂದ್ರನಂ ಕರೆದು ಬರಿಸಿ ||
ಈ ರಾಜಕುಲತಿಲಕನಧ್ವರದೊಳೀವ ಘನ |
ಸಾರಾಹುತಿಯನಿದ ಸ್ವೀಕರಿಸು ಮುಂದೆ ನಿನ |
ಗಾರು ಕೊಡುವವರಿಲ್ಲ ಕಲಿಯುಗದೊಳೀ ತೆರದೊಳೆನೆ ಶಕ್ರನಿಂತೆಂದನು ||೨೦||

ಸರ್ಪ ನಕ್ಷತ್ರ ಸಂಯುತದ ಗುರುವಾರಮಾ |
ಗಿರ್ಪುದಿಂದೆಲೆ ಮುನೀಶ್ವರ ಮಹೀಪಾಲಂ ಸ |
ಮರ್ಪಿಸುವ ಘನಸಾರಾಹುತಿಯನಗ್ನಿ ಮುಖದಿಂದೆ ನೀನೆನಗಿತ್ತೊಡೆ ||
ದರ್ಪದಿಂ ತೃಪ್ತನಾದಪೆನೆಂದು ಸುರಪನೆ |
ಲ್ಲರ್‌ಪೊಗಳೆ ಪ್ರತ್ಯಕ್ಷಮಾಗಿ ಬಂದಿರಲಾಗ |
ಕರ್ಪೂರಮಂ ಸ್ರುವದೊಳನಲನೊಳ್ ಬೇಳಿದು ವ್ಯಾಸಮುನಿ ಮಂತ್ರದಿಂದೆ ||೨೧||

ಪ್ರತ್ಯಕ್ಷಮಾದ ಶಕ್ರಾದಿ ದೇವತೆಗಳ್ಗೆ |
ಶ್ರುತ್ಯುಕ್ತ ಮಂತ್ರವಿಧಿಗಳ  ವಿಧಾನಂಗಳಿಂ |
ದತ್ಯಧಿಕ ಘನಸಾರದಾಹುತಿಗಳಂ ಯಥಾಕ್ರಮದಿಂದೆ ಹುತವಹನೊಳು ||
ಸತ್ಯ ಸಂಪನ್ನ ವೇದವ್ಯಾಸನೀಯಲ್ಕೆ |
ಸುತ್ಯಾಗದೊಳ್ ಸನವಸಮಯದೊಳ್ ವಿರಚಿಸುವ |
ಕೃತ್ಯಂಗಳಿಂದೆ ನಡೆದುದು ಮಖಂ ತ್ರಿಜಗದ ಚರಾಚರಂ ಮಿಗೆ ತಣಿಯಲು ||೨೨||

ಸಾಕ್ಷಾತ್ಸುಯಜ್ಞ ಸ್ವರೂಪನಂತರ್ಯಾಮಿ |
ಸಾಕ್ಷಿಯಾಗಿರ್ದು ಮಾಡಿಸುವವಂ ಶ್ರೌತ ವಿ |
ದ್ಯಾಕ್ಷಮನೆನಿಪ್ಪ ಧೌಮ್ಯನೆ ಕರ್ಮ ಕರ್ತೃ ವಿಂಶತಿ ಕಮಲ  ಸಂಭವರನು ||
ಈಕ್ಷಿಸಿದ ಬಕದಾಲ್ಭ್ಯನೇ ಬ್ರಹ್ಮನಾಚಾರ್ಯ |
ನೇ ಕ್ಷಿತಿಸುರಾಗ್ರ್ಯ ವೇದವ್ಯಾಸನಧ್ವರಕೆ |
ದೀಕ್ಷಿತನೆ ಯಮಜಂ ಮಹಾಮುನಿಗಳೇ ಋತ್ವಿಜರ್ ಪೋಸತಿದೆನಿಸದಿಹುದೆ ||೨೩||

ಆಹುತಿಗಳಂ ಕೊಂಡು ಮಿಗೆ ತೇಜದಿಂದೊಪ್ಪು |
ವಾ ಹುತವಹ ಜ್ವಾಲೆಗಳ ಪುಣ್ಯದರ್ಶನದೊ |
ಳಾ ಹೋಮಧೂಮ ಸಂಸ್ಪರ್ಶನದೊಳಾ ಕರ್ಮಕೃತ ಸೋಮಪಾನದಿಂದೆ ||
ಆ ಹೋತ್ರದುರು ಮಂತ್ರ ಘೋಷಣಶ್ರವಣದಿಂ |
ದಾ ಹವಿರ್ಗಂಧದಾಘ್ರಾಣದಿಂದಾ ಮಖದೊ |
ಳಾ ಹಿಮಕರಾನ್ವಯ ಲಲಾಮನೆಸೆದಂ  ಪೂತನಾಗಿ ಸಂತೋಷದಿಂದೆ ||೨೪||

ಯಾಗದಿಂ ತಣಿದು ಪಾವನಮಾದುದಿಳೆ ಹವಿ |
ರ್ಭಾಗದಿಂ ತುಷ್ಟಿವಡೆದುದು ದೇವತಾವಳಿ ಸ |
ರಾಗದಿಂದಸುರಾರಿ ಸಂತುಷ್ಟನಾಗಿ ತೆಗೆದಪ್ಪಿ ಭೂಪಾಲಕಂಗೆ ||
ಈಗ ನಿನ್ನಧ್ವರಂ ಸಾಂಗದಿಂ ಸಂಪೂರ್ಣ |
ಮಾಗಿ ಮುಗಿದುದು ಮಾಳ್ಪುದವಭೃತ ಸ್ನಾನಮಂ |
ಭಾಗೀರಥಿಯೊಳೆಂದು ನೇಮಿಸಿದನಖಿಳ ಮುನಿಜನಮೈದೆ ಕೊಂಡಾಡಲು ||೨೫||

ವಿಪ್ರ ವಧೆ ಮೊದಲಾದ ಬಹು ಪಾಪ ಸಂಚಿತಂ |
ಕ್ಷಿಪ್ರದಿಂ ಪೋಗಿ ಪರಿಶುದ್ಧಮಹುದೆಂಬ ವೇ |
ದಪ್ರಮಾಣದ ವಾಜಿಮೇಧಾವಭೃತಮಂ ಮುನೀಶ್ವರರ್ ಮಾಡಿಸಲ್ಕೆ ||
ಸುಪ್ರಸನ್ನತೆಯಿಂದೆ ಸಾನ್ನಿಧ್ಯಮಾಗಿ ಬಿಡ |
ದಪ್ರಮೇಯಂ ತಾನಿರಲ್ಕೆ ನೃಪ ಮೌಳಿ ಪರ |
ಮಪ್ರೀತನಾಗಿ ತೊಳಗಿದನಧ್ವರಂ ಮುಗಿಯೆ ರಾಜ ಮುನಿಗಣದ ನಡುವೆ ||೨೬||

ರಮಣಿಸಹಿತರಸನಭಿಷಿಕ್ತನಾದಂ ಯಥಾ |
ಕ್ರಮದಿಂದೆ ಸೋಮ ಪಾನಂಗೈದರೆಲ್ಲರುಂ |
ವಿಮಲ ಹೋಮಂಗಳ ಪುರೋಡಾಶ ಶೇಷಮಂ ಪ್ರಾಶಿಸಿದರುತ್ಸವದೊಳು ||
ತಮತಮಗೆ ವಂದಿಗಳ್ ಕೊಂಡಾಡೆ ಗಾಯಕೋ |
ತ್ತಮರೊಲಿದು ಪಾಡೆ ನರ್ತನದ ಮೇಳವದ ಸಂ |
ಭ್ರಮದಿಂದೆ ವೀಣಾದಿ ವಾದಿತ್ರ  ಘೋಷಮಂ ಮಾಡೆ ನೃಪವರನೆಸೆದನು ||೨೭||

ವಿನುತ ರತ್ನಾದ್ರಿ ಶಿಖರಸ್ಥಮಾಗಿರುತಿರ್ಪ |
ಕನಕ ವೃಷಮಂ ಕೊಟ್ಟನವನಿಪಂ ಬಕದಾಲ್ಭ್ಯ |
ಮುನಿಗೆ ಬಳಿಕೊಂದೊಂದು ರಥವನೊಂದೊಂದಿಭವನೀರೈದು ವಾಜಿಗಳನು ||
ಅನುಚರ ಚತುಷ್ಟಯವನೊಂದು ಕೊಳಗದ ಮುತ್ತ |
ನನುಪಮ ಸುವರ್ಣ ಶತ ಭಾರಮಂ ನೂರು ಕಾಂ |
ಚನ ವಿಭೂಷಿತ ಸುರಭಿಗಳನಿತ್ತು ಮನ್ನಿಸಿದನಖಿಳ ಋತ್ವಿಕ್ಕುಗಳನು ||೨೮||

ಇಂತಖಿಳ  ಋತ್ವಿಕ್ಕುಗಳ್ಗಿತ್ತು ಮನ್ನಿಸಿದ |
ನಂತಾದರಿಸಿದನೆಲ್ಲಾ ದ್ವಾರ  ಪಾಲಕರ |
ನಂತರಿಸದುಳಿದ ಮುನಿ ನಿಕರಕಿಚ್ಛಾ ದಾನವಂ ಕೊಟ್ಟನುಚಿತಿದಿಂದೆ ||
ತಿಂತಿಣಿಸಿ ನೆರೆದಿಹ ಸಮಸ್ತ ಭೂನಿರ್ಜರರ |
ಸಂತತಿಗಳಂ ತಣಿಸಿದಂ ಮಹಾಧನದಿಂದೆ |
ನಂತರದೊಳರಸುಪಚರಿಸಿದಂ ಚಂದ್ರಹಾಸಾದಿ ಪೃಥ್ವೀಶ್ವರರನು ||೨೯||

ಘೋಟಕ ಸಹಸ್ರಮಂ ಶತಶತ ಗಜಂಗಳಂ |
ಕೋಟಿ ಪರಿಮಿತ ಸುವರ್ಣಂಗಳಂ ಮಣಿಮಯ ಕಿ |
ರೀಟಾದಿ ಭೂಷಣಾವಳಿಗಳಂ ಕೊಟ್ಟಖಿಳ ಭೂಪಾಲರಂ ಮನ್ನಿಸಿ ||
ಪಾಟಿ ಮಿಗೆ ರುಕ್ಮಿಣೀದೇವಿ ಮೊದಲಾಗಿಹ ವ |
ಧೂಟಿಯರ ವರ್ಗಮಂ ನೃಪತಿ ಸತ್ಕರಿಸಿದಂ |
ವಿಟೆನಿಪ ವಿವಿಧ ರತ್ನಾಭರಣ  ರಾಜಿಗಳನಿತ್ತಲಂಕಾರದಿಂದೆ ||೩೦||

ನಯದೊಳರಸಂ ಬಳಿಕ ಮುನಿನಿಕರ  ಭೂಪಾಲ |
ಚಯದಿಂದೆ ಸಕಲ ಜನ ಜಾಲದಿಂದೆಸೆವ ಮಣಿ |
ಮಯ ಸಭಾ ಮಧ್ಯದೊಳ್ ದಿವ್ಯ ಸಿಂಹಾಸನದ ಮೇಲೆ ಮುರಹರನನಿರಿಸಿ ||
ಪ್ರಿಯದಿಂದಲಂಕಾರ ಪೂಜೆಗಳೊಳುಪಚರಿಸಿ |
ಹಮಮೇಧ ಫಲವನಚ್ಚುತ ಕರದೊಳೀಯಲ್ಕೆ |
ಜಯ ಜಯೆಂದುದು ಲೋಕವಲರ ಮಳೆಗರೆದು ಮೊಳಗಿದವು ಸುರದುಂದುಭಿಗಳು |೩೧||

ಬಳಸಿದ ಮಹೀಪಾಲರೊಡಹುಟ್ಟಿದರ್ ಬಂಧು ||
ಬಳಗಂಗಳಖಿಳ ಮುನಿ ಮುಖ್ಯರುಪಚಿತರಾಗೆ |
ನಳಿನಾಂಬಕನ ಕರದೊಳಧ್ವರದ ಸುಕೃತಮಂ ಕೊಟ್ಟು ತನ್ನಮಳ ಮಖಕೆ |
ಕಳಸಮಿಡೆ ಮೂಜಗಂ ಮಿಗೆ ತಣಿದು ಕೊಂಡಾಡ |
ಲುಳಿದ ಯೂಪಂಗಳೊಳ್ ಕಟ್ಟಿರ್ದ ಪಶುಗಳಂ |
ಕಳೆದೆಲ್ಲಮಂ ಬಿಡಿಸಿ ತೊಳಗಿ ಬೆಳಗಿದನಿಂದ್ರ ತೇಜದಿಂ ಮನುಜೇಂದ್ರನು ||೩೨||

ವಾಜಿ ಮೇಧಕ್ರತು ಸಮಾಪ್ತಮಾದುದು ಬಳಿಕ ||
ರಾಜ ಮುನಿನಿಕರಮಂ ಪ್ರಾರ್ಥಿಸಿ ವೃಕೋದರಂ |
ರಾಜಿಸುವ ಕನಕಮಯ ಮಂಡಪದೊಳರುಣ ಕಂಬಳದ ಪಸೆಗಳ ಮಿಸುನಿಯ ||
ಭಾಜನದ ಕೆಲ ಬಲದ ರತ್ನ ದೀಪದ ಪೊನ್ನ |
ಹೂಜಿಗಳ ಪನ್ನೀರ ಪರಿವಿಡಿಯಲೆಡೆಯಾಗೆ |
ಭೋಜನಕೆ ಬೇಕಾದ ಭಕ್ಷ್ಯ ಭೋಜ್ಯಾದಿಗಳನೊದವಿಸಿದನಾದರದೊಳು ||೩೩||

ನಾನಾ ವಿಧದ ರಸದೊಳೆಸೆವ ಪರಿಕರದನ್ನ |
ಪಾನಾದಿ ಭಕ್ಷ್ಯಭೋಜ್ಯಾವಳಿಗಳಿಂದೆ ಪವ |
ಮಾನಾತ್ಮಜಂ ಮಹೀಸುರ ತತಿಯನಾದರಿಸಿ ಭೋಜನಾನಂತರದೊಳು ||
ಭೂನುತ ಸುಂಗದ ಕರ್ದಮದಿಂದೆ ವಿತತ ಪ್ರ |
ಸೂನಾವಳಿಗಳಿಂದೆ ವೀಟಿಕಾ ವಿಭವದಿಂ |
ದಾನಾತಿಸಯದಿಂದೆ ಸತ್ಕರಿಸಿ ತಣಿಪಿದಂ ಪ್ರತಿದಿನಂ ಪ್ರೀತಿಯಿಂದೆ ||೩೪||

ಬಹಳ ಸನ್ಮಾನಮಂ ತಳೆದಖಿಳ ಭೂಸುರ ನಿ |
ವಹಮೈದೆ ಕೊಂಡಾಡಿತಂಬುಜದಳಾಂಬಕನ |
ಮಹಿಮೆಯಂ ಧರ್ಮಜನ ಚರಿತಮಂ ಭೀಮನ ವಿಶೇಷ ಗುಣಮಂ ಪಾರ್ಥನ ||
ವಿಹಿತ ವಿನಯಂಗಳಂ ನಕುಲನ ವಿವೇಕಮಂ |
ಸಹದೇವನುಚಿತಮಂ ಧೌಮ್ಯನ ವಿಚಾರಮಂ |
ಮಹಿಯ ಮನ್ನೆಯರ ಸನ್ಮೈತ್ರಿಯಂ ಮುನಿ ವರಾಧಿಕ್ಯಮಂ ತತ್ಕ್ರತುವನು ||೩೫||

ಬಕದಾಲ್ಭ್ಯ ಮೊದಲಾದ ಋಷಿಗಳಂ ಕೃಷ್ಣಾದಿ |
ಸಕಲ ಭೂಪಾಲರಂ ಕೂಡಿಕೊಂಡವನೀಶ |
ಮುಕುರನಧ್ವರ ಸಭಾಸ್ಥಾನದೊಳ್ ನಾನಾ ಸುಕಥೆಗಳಂ ಕೇಳುತಿರ್ದು ||
ವಿಕಸಿತ ಹೃದಯನಾಗಿ ಮುದದಿಂದೆ ಭೂ ದೇವ |
ನಿಕರಕುಳಿದರ್ಥಂಗಳೆಲ್ಲಮಂ ಚೆಲ್ಲಿ ಸಮ |
ಧಿಕ ವೈಭವಂಗಳಿಂ ನಗರಪ್ರವೇಶಮಂ ಮಾಡಿದಂ ಸಂಭ್ರಮದೊಳು ||೩೬||

ಮೃಷ್ಟ ಭೋಜನದಿಂದೆ ಭೂರಿ ದಕ್ಷಿಣಿಗಳಿಂ |
ದಿಷ್ಟ ದಾನದೊಳಾದ ವಸ್ತು ಸಂಮೋಹದಿಂ |
ತುಷ್ಟಿವಡೆದಖಿಳ ಭೂಸುರ ತತಿ ನರೇಂದ್ರನಂ ಪರಿಸಿ ಬೀಳ್ಕೊಂಡ ಬಳಿಕ ||
ದೃಷ್ಟಿಗಾಶ್ಚರ್ಯಮಾಗಿಹ ಯಜ್ಞಮಂ ಪೊಗಳು |
ತಷ್ಟ ದಿಗ್ವಳಯದಾಶ್ರಮ ಜನಪದಂಗಳ್ಗೆ |
ಹೃಷ್ಟತೆಯೊಳೈದಿದುದು ತಮತಮಗೆ ಪೊತ್ತ ಬಹುಧನದ ಭಾರಂಗಳಿಂದೆ ||೩೭||

ರೋಮಶ ವಶಿಷ್ಠ ಬಕದಾಲ್ಭ್ಯ ವೇದವ್ಯಾಸ ||
ವಾಮದೇವಾದಿ ಮುನಿ ಮುಖ್ಯರವನೀಶನಂ |
ಪ್ರೇಮದಿಂ ಪರಸಿ ಮಾನಿತರಾಗಿ ಬೀಳ್ಕೊಂಡು ತಳರ್ದರಾಶ್ರಮಕೆ ಬಳಿಕ ||
ಭೂಮಿಪತಿಗಳನೆಲ್ಲರಂ ಸಕಲ ಯಾದವ |
ಸ್ತೋಮ ಸಹಿತಂಬುಜದಳಾಕ್ಷನಂ ಸತ್ಕರಿಸಿ |
ಭೀಮ ಪಾರ್ಥರನೊಡನೊಡನೆ ಕಳುಹಿದಂ ಯುಧಿಷ್ಠಿರವನರವರ ನಗರಿಗೆ ||೩೮||

ಸಂಭಾವಿಸಿದನಧ್ವರದೊಳೆಲ್ಲರಂ ಬಳಿಕ |
ಸಂಭೋಗಮರ್ಜುನಂಗಾ ಪ್ರವಿಳೆಯ ಕೂಡೆ |
ಸಂಭವಿಸುವಂತೆ ನೇಮಿಸಿದನಿಭ ನಗರದೊಳ್ ಕುಂತಿ ಸಹಿತನುಜರೊಡನೆ ||
ತೊಂಭತ್ತು ವರುಷಪರಿಯಂತರದೊಳೈದೆ ಸುಖ |
ದಿಂ ಭೂವಲಯದ ಸಾಮ್ರಾಜ್ಯಮಂ ಮಾಡುತಿ |
ರ್ದಂ ಭಾರತಾಗ್ರಣಿ ಯುಧಿಷ್ಠಿರಂ ದೇವಪುರ ಲಕ್ಷ್ಮೀಶನಾಜ್ಞೆಯಿಂದೆ ||೩೯||

ಈ ಚತುರ್ದಶ ಭುವನದೊಳ್ ಪಾಂಡವ ಸ್ಥಾಪ |
ನಾಚಾರ್ಯನೆನಿಸಿಕೊಂಬುದೆ ಪೆರ್ಮೆಯೆಂದು ಮನು |
ಜೋಚಿತದ ಲೀಲೆಯಂ ತಳೆದ ಯಾದವ ಸಾರ್ವಭೌಮಂ ನಿಜಾನತರ್ಗೆ |
ಭೂಚಕ್ರದೊಳ್ ಪಸರಿಸುವ ಕೀರ್ತಿಯಂ ಮಾಡ |
ಲಾಚಂದ್ರಮಾಗಿರ್ಪ ತೆರದಿಂದಲೀ ಮತಿಗೆ |
ಗೋಚರಿಸೆ ಕೃತಿಗೆ  ನಾಯಕನಾದನಮರಪುರದೊಡೆಯ ಲಕ್ಷ್ಮೀಕಾಂತನು ||೪೦||

ಈ ಪರಿಯೊಳಾಶ್ವಮೇಧಿಕದ ವೃತ್ತಾಂತಮಂ |
ತಾಪಸೋತ್ತಮನಾದ ಜೈಮಿನಿ ಮುನೀಶ್ವರಂ |
ಭೂಪಾಲ ತಿಲಕ ಜನಮೇಜಯಂಗೊರೆದ ಸಂಗತಿಗಳಂ ಸಕಲ ಜನಕೆ ||
ವ್ಯಾಪಿಸಿದ ಸುಪ್ರೌಢಿ ಮೆರೆಯೆ ಕನ್ನಡದ ಭಾ |
ಷಾ ಪದ್ಧತಿಯೊಳಣ್ಣಮಾಂಕನ ಕುಮಾರ ಲ |
ಕ್ಷ್ಮೀಪತಿಯ ಮುಖದಿಂದೆ ರಚಿಸಿದಂ ಕೃತಿಯಾಗಿ ಸುರಪುರದ ಲಕ್ಷ್ಮೀಶನು ||೪೧||

ಅಶ್ವಮೇಧಿಕ ಪರ್ವದಮಲ ಸತ್ಕಥೆ ಯೌವ |
ನಾಶ್ವಾದಿ ನೃಪರ ಚರಿತಂಗೇಳ್ದ ಮಾನವ |
ರ್ಗೈಶ್ವರ್ಯಮಾರೋಗ್ಯಮಾಯುಷ್ಯಮಭಿವೃದ್ಧಿ ಕಲಿನಾಶನಂ ಧರೆಯೊಳು ||
ಆಶ್ವೇತ ಕೀರ್ತಿಸುತ ಲಾಭ ಶತ್ರುಕ್ಷಯಂ |
ಶಾಶ್ವತ ಸ್ವರ್ಗ ಭೋಗಂಗಳಾದಪುವು ಸ |
ರ್ವೇಶ್ವರನ ಭಕ್ತಿ ದೊರಕೊಂಡಪುದು ದೇವಪುರ ಲಕ್ಷ್ಮೀಶನಾಜ್ಞೆಯಿಂದೆ ||೪೨||

ಉಪವನ ತಟಾಕ ಪ್ರತಿಷ್ಠೆ ದೇವಾಲಯ |
ಪ್ರಪೆಗಳ ಸಕಲ ದಾನ ಧರ್ಮೋಪಕಾರ ವೇ |
ದ ಪುರಾಣದಪರಿಮಿತವಾದ ಪುಣ್ಯಕ್ಷೇತ್ರ ವಾಸ ತೀರ್ಥಸ್ನಾನದ ||
ಜಪ ಹೋಮ ಸುವ್ರತ ಸಮಾಧಿ ಯೋಗಧಾನ |
ತಪಸುಗಳ ಹರಿಹರಾರ್ಚನೆಯ ಸುಕೃತಂಗಳಾ |
ದಪುದು ಜೈಮಿನಿ ಭಾರತದೊಳೊಂದು ವರ್ಣಮಂ ಪ್ರೀತಿಯಿಂ ಕೇಳ್ದವರ್ಗೆ ||೪೩||

ತೊಳಗುವ ಸುವರ್ಣ ಭೂಷಣದಿಂದೆ ಸೇರಿಸಿದ |
ಲಲಿತ ಮುಕ್ತಾಭರಣದಿಂದೆ ಮಿಗೆ ರಂಜಿಸುವ |
ಪಲವಲಂಕಾರಂಗಳಿಡಿದ ಚೆಲ್ವಿನ ದೇವಪುರದ ಲಕ್ಷ್ಮೀಕಾಂತನ ||
ವಿಲಸಿತದ ಕೃತಿ ಲಲನೆ ಮೃದು ಪದ ವಿಲಾಸದಿಂ |
ಸಲೆ ಸೊಗಸಲಡಿಗಡಿಗೆ ನಡೆಯಲ್ಕೆ ಚಿತ್ತಂಗ |
ಳೊಲಿದೆರಗದಿರ್ದಪುವೆ ಧರೆಯೊಳಗೆ ರಸಿಕರಾಗಿರ್ದ ಭಾವಕ ನಿಕರದ ||೪೪||

ಲೋಕದೊಳಖಿಳ ಪುಣ್ಯ ಕರ್ಮದಿಂ ಧರ್ಮದಿಂ |
ದೇಕಾಗ್ರಮಾಗಿರ್ದ ಯೋಗದಿಂ ಯಾಗದಿಂ |
ಭೂ ಜಕನಕಮಣಿ ಧೇನು ದಾನದಿಂ ಧಾನದಿಂ ಪಡೆವ ಸದ್ಗತಿಯನೀವ ||
ಈ ಕಥೆಯನೊಲವಿಂದೆ ಕೇಳ್ದರ್ಗೆ ಪೇಳ್ದರ್ಗೆ |
ಶೋಕ ಭಯ ದುಃಖ ಸಂತಾಪಮಂ ಪಾಪಮಂ |
ನೂಕಿ ನಿರ್ಮಲತರ ಸುಬುದ್ಧಿಯಂ ಸಿದ್ಧಿಯಂ ಹರಿ ಕೊಡುತಿಹಂ ಕೃಪೆಯೊಳು ||೪೫||

ಪುಣ್ಯಮಿದು ಕೃಷ್ಣ ಚರಿತಾಮೃತಂ ಸುಕವೀಂದ್ರ |
ಗಣ್ಯಮಿದು ಶೃಂಗಾರ ಕುಸುಮ ತರು ತುರುಗಿದಾ |
ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ ||
ಗಣ್ಯಮಿದು ಶಾರದೆಯ ಸನ್ಮೋಹನಾಂಗ ಲಾ |
ವಣ್ಯವಿದು ಭಾವಕರ ಕಿವಿದೊಡವಿಗೊದವಿದ ಹಿ |
ರಣ್ಯಮಿದು ಭೂತಳದೊಳೆನೆ ವಿರರಾಜಿಪುದು ಲಕ್ಷ್ಮೀಪತಿಯ ಕಾವ್ಯರಚನೆ ||೪೬||