ಸೂಚನೆ ||
ಧರಣಿಪಾಗ್ರಣಿ ಯುಧಿಷ್ಠಿರ ಮಹೀವಲ್ಲಭಂ |
ತುರಗ ಮೇಧಾಧ್ವರವನೈದೆ ವಿಸ್ತರಿಸಿದಂ |
ಭರತ ನಳ ನಹುಷಾದಿ ಪೃಥ್ವೀಶರೀತಂಗೆ ಪಾಸಟಿಯೆ ಪೇಳೆನಲ್ಕೆ ||

ಜನಮೇಜಯಕ್ಷಿತಿಪ ಕೇಳ್ ಬಳಿಕ ದೈತ್ಯ ಭಂ |
ಜನನಖಿಳ ಭೂಪಾಲರಂ ನಾಗಪುರಕೆ ಯೋ |
ಜನದಳತೆಯೊಳ್ ನಿಲಿಸಿ ಬೇರೆಬೇರವರವರ ಪಡೆಗಳಂ ಪಙ್ಕ್ತಿಗೊಳಿಸಿ ||
ತನತನಗೆ ಗಂಧ  ಮಾಲ್ಯಾಂಬರಾಭರಣ ನೂ |
ತನ ವಿಭವದಿಂದೆ ಬಹುದೆಂದು ನೇಮಿಸಿ ಧರ್ಮ |
ತನಯನಂ ಕಾಣಬೇಕೆಂಬ ಲವಲವಿಕೆಯಿಂ ಮುಂದೆ ಬಿಜಯಂಗೈದನು ||೧||

ಸುರನದಿಯ ತಡಿಯ ಪುಣ್ಯಕ್ಷೇತ್ರದೊಳ್ ಸುವಿ |
ಸ್ತರದ ಮಣಿಮಂಟಪದೊಳಖಿಳ ಮಿನಿಗಣದೊಡನೆ |
ಬರಿಸದಿಂದೊಡಲ ದಂಡಿಸಿ ನೆಲದಮೇಲೆ ಕುಳ್ಳಿರ್ದು ಯಮ ನಿಯಮದಿಂದೆ ||
ಪರಮ ದೀಕ್ಷಾವಿಧಿಯನನುಕರಿಸಿ ಸಾಧಿಯರ |
ನೆರವಿಯೊಳೆರೆವ ಪತ್ನಿವೆರಸಿ ತೊಳಗುವ ಯುಧಿ |
ಷ್ಠಿರ ಭೂಪನಂ ಕಂಡನಸುರಾರಿ ವಂದಿಸಿತು ತತ್ಸಭೆ ಮುರಾಂತಕಂಗೆ ||೨||

ಯದುಕುಲಾಗ್ರಣಿ ಬಳಿಕ ಭೀಮನಂ ಬಿಗಿಯಪ್ಪಿ |
ವಿದುರ ಧೃತರಾಷ್ಟ್ರ ಮಾದ್ರೇಯರಂ ತಕ್ಕೈಸಿ |
ಮುದದಿಂದೆ ದೇವಕಿ ಯಶೋದೆಯರ್ಗಭಿವಂದನಂಗೈದು ಪೃಥೆಗೆ ನಮಿಸಿ ||
ಪದುಳವಿಟ್ಟೈಯದೆ ಗಾಂಧಾರಿಯಂ ಬಂದು ದ್ರೌ |
ಪದಿ ಸುಭದ್ರೆಯರಂಘ್ರಿಗೆರಗಿದೊಡೆಮಣಿದೆತ್ತಿ |
ತದನಂತರದೊಳಖಿಳ ಮುನಿಗಳ್ಗೆ ವಂದಿಸಿ ನಗುತೆ ನೃಪತಿಗಿಂತೆಂದನು ||೩||

ಅರಸ ನಿನ್ನಧ್ವರದ ವಾಜಿ ಭೂವಲಯಮಂ |
ತಿರುಗಿ ಬಂದುದು ವರ್ಷಮಾತ್ರದೊಳ್ ಮೇದಿನಿಯ |
ನರಪತಿಗಳೆಲ್ಲರುಂ ನಡೆತಂದರೊಡನೆ ಪಾರ್ಥ ಪ್ರತಾಪದ ಹರಹಿಗೆ |
ಧರಣಿ ಸಾಲದು ನೆರಪಿದೊಡವೆಗಮರಾಚಲಂ |
ಸರಿಯಲ್ಲ ಬಕದಾಲ್ಭ್ಯಕಾದಿ ಮುನಿ ನಿಕರಮಿದೆ |
ದೊರೆಯದಿಹ ಸಂಭಾರಮಿಲ್ಲ ನಡೆಸಿನ್ನು ಯಜ್ಞವನೆಂದು ಹರಿ ನುಡಿದನು ||೪||

ಆ ಮುರಾಂತಕನ ಮಾತಂ ಕೇಳ್ದು ಹರಿಸದಿಂ |
ಭೂಮಿಪತಿ ನುಡಿದನೆಲೆ ದೇವ ತವ ಕಾರುಣ್ಯ |
ಜೀಮೂತಮಿರೆ ಬಳೆಯದಿರ್ದಪುದೆ ಪಾರ್ಥ ಪ್ರತಾಪದವೊಲಂ ತಿಳಿಯಲು |
ರೋಮ ರೋಮದೊಳಿಡಿದಜಾಂಡ ಕೋಟಿಗಳಿಹ ಮ |
ಹಾ ಮಹಿಮೆ ತಾನೆತ್ತ ನರನ ಸಂಗಡ ತಿರುಗು |
ವೀ ಮನುಜತನವೆತ್ತ ಭಕ್ತರಂ ಪಾಲಿಪುದೆ ನಿನ್ನ ಬಾಳುವೆಯೆಂದನು ||೫||

ದೇವ ಸಾಕಿನ್ನದರ ಮಾತೆಮ್ಮ ಪಂಚಕದ |
ಜೀವನಂ ನಿಮ್ಮ ದೈಸಲೆ ಬಾಹ್ಯವೇತಕೆ ಧ |
ರಾವಲಯದರಸುಗಳನೆಂತು ಜಯಿಸಿದಿರೆಂಬ ವಿವರಮಂ ಪೇಳ್ವುದೆಂದು ||
ಭೂವಲ್ಲಭಂ ಕೇಳ್ದೊಡಿಂದಿರಾಪತಿ ಹಸ್ತಿ |
ನಾವತಿಯ ನಗರಮಂ ಪೊರಮಟ್ಟು ಮಗುಳಲ್ಲಿ |
ಗಾ ವಾಜಿಗಳ್ ಬಂದು ಪುಗುವಿನಂ ನಡೆದ ವೃತ್ತಾಂತಮಂ ವಿವರಿಸಿದನು ||೬||

ವಾಜಿ ಸಹಿತರ್ಜುನಂ ಪೊರಮಟ್ಟನಂದು ವಿ |
ಭ್ರಾಜಿಸುವ ಜೈತ್ರದೊಳ್ ಕೂಡೆ ಮಾಹಿಷ್ಮತಿಗೆ |
ರಾಜನಹ ನೀಲಧ್ವಜಂ ತುರಗಮಂ ತಡೆದನಗ್ನಿಯ ಸಹಾಯದಿಂದೆ ||
ಈ ಜಿಷ್ಣು ಸಂಗರದೊಳಾತನಂ ಜಯಿಸಲಾ |
ವ್ಯಾಜದಿಂ ಬಂದುದು ಸರಿದ್ವರೆಯ ಶಾಪಂ ಮ |
ಹಾ ಜವದೊಳಲ್ಲಿಂದೆ ಪೋಗಿ ತಿರುಗಿತು ಹಯಂ ಬಳಕ ವಿಂಧ್ಯಾಚಲದೊಳು ||೭||

ಆನಗದ ಪೆಣ್ಗಳಿಂ ಪಣ್ಗಗಳಿಂ ನಿರ್ಝರದ |
ಪಾನೀಯದಿಂಪಿನಿಂ ತಂಪಿನಿಂ ಕುಸುಮ ಗಂ |
ಧಾನಿಲನ ಕಂಪಿಂದೆ ಪೆಂಪಿಂದೆ ನೆಲವೇರಿ ಚಂಡಿಯ ವಿಶಾಪದಿಂದೆ ||
ಸೇನೆ ವಿಸ್ಮಯದೊಡನೆ ಹಯದೊಡನೆ ಮುಂದೆ ಸು |
ಮ್ಮಾನದಿಂ ನಡೆಯಲ್ಕೆ ತಡೆಯಲ್ಕೆ ಸಂಗರದೊ |
ಳೀನರಂ ಜಯಿಸಿದಂ ಚಲದಿಂದೆ ಬಲದಿಂದೆ ಹಂಸಧ್ವಜನ ಸುತರನು ||೮||

ಜನಪ ಕೇಳಾ ಘರ್ಮಕಾಲದೊಳ್ ತುಹಿನ ಗಿರಿ |
ತನುಜೆಯ ತಪೋವನದ ವಿಘ್ನಂಗಳಂ ಕಳೆದ |
ವನಿತಾ ಮಯದ ರಾಜ್ಯದೊಳ್ ಪ್ರಮೀಳೆಯ ನೊಡಂಬಡಿಸಿ ಗಜಪುರಕೆ ಕಳುಹಿ ||
ದನುಜೇಂದ್ರ ಭೀಷಣನಾಕ್ರಮಿಸಿ ಬಭ್ರುವಾ |
ಹನನ ಪಟ್ಟಣಕೆ ನಿಜ ಹಯದೊಡನೆ ಬಂದನ |
ರ್ಜುನನಬ್ದಋತುವಿನೋಳ್ ಮೇಘರವಮಂ ಮಿಗುವ ವಾದ್ಯ ನಿರ್ಘೋಷದಿಂದೆ ||೯||

ಮಣಿಪುರಕೆ ಬಂದುದಾ ಸಮಯದೊಳ್ ಕುದುರೆ ಫಲ |
ಗುಣನಲ್ಲಿ ಮಡಿದನಾತ್ಮಜನಿಂದೆ ಬಳಿಕದಂ |
ಘಣಿರಾಜ ತನುಜೆ ಪರಿಹರಿಸಿದಳ್ ಮುಂದೆ ನಡೆಯಲ್ ತಾಮ್ರಕೇತು ತಡೆದು ||
ರಣದೊಳೆಮ್ಮೆಲ್ಲರಂ ಗೆಲ್ಲೊಡಾತನ ಪಿತಂ |
ಗುಣನಿಧಿ ಮಯೂರಧ್ವಜಂ ತನ್ನ ಯಜ್ಞಮಂ |
ಗಣಿಸದೆಮಗೊಪ್ಪಸಿ ತುರಂಗಸಹಿತೈತಂದನರಸ ಕೇಳ್ ಕೌತುಕವನು ||೧೦||

ಆ ಮಯೂರಧ್ವಜಂ ಹರಿ ಸಹಿತ ನಡೆಯೆ ನಿ |
ಸ್ಸೀಮನಹ ವೀರವರ್ಮಂ ತಡೆಯೆ ಬಿಡಿಸಲು |
ದ್ದಾಮ ವಾಜಿಗಳೈದಿ ಚಂದ್ರಹಾಸನ ಪುರಕೆ ಕಣ್ಗೆ  ಗೋಚರಿಸದಿರಲು ||
ಪ್ರೇಮದಿಂ ನಾರದ ಮುನೀಶ್ವರಂ ಬಂದು ಸು |
ತ್ರಾಮ ಸುತನೊಳ್ ಕೂಡೆ ವಿಸ್ತರದೆ ವೈಷ್ಣವ ಶಿ |
ರೋಮಣಿಯ ಕಥೆವೇಳೆ ತತ್ಪುರಕೈದಿ ನಲಿದೈದುದಿನಮಿರ್ದನು ||೧೧||

ಶೈಶಿರದ ಕಾಲದೊಳ್ ಕಲಿ ಚಂದ್ರಹಾಸನಂ |
ಮೈಸಿರಿಯೊಳೊಳಗೊಂಡು ಬಕದಾಲ್ಭ್ಯನಂ ಕಂಡು |
ಕೈಸಾರ್ದ ಹರಿಸದಿಂ ಸಿಂಧುದೇಶದ ಮೇಲೆ ಮಖ ಸಮಯಕಿಲ್ಲಿಗಾಗಿ ||
ಜೈಸಿ ಬಂದೆವು ನಿನ್ನನುಜ್ಞೆಯೊಳ್ ಗಡ ಕಳುಹಿ |
ದೈಸು ವೀರರ್ಕಳುಂ ಸುಖದೊಳೈತಂದರೊ |
ತ್ತೈಸಿದಗಣಿತ ವಸ್ತು ಸಹಿತಖಿಳ ನೃಪರೊಡನೆ ಬಹಳ ವಿಭವದೊಳೆಂದನು ||೧೨||

ಭೂಮಂಡಲದೊಳಿಂದು ಮಖ ಹಯಂ ತಿರುಗಿದ ಮ |
ಹಾ ಮಹೀಶ್ವರರೊಡನೆ ಬಂದ ವೃತ್ತಾಂತಮಂ |
ದಾಮೋದರಂ ಪೇಳ್ದು ರಾಯನಂ ಬೀಳ್ಕೊಂಡು ತನ್ನ ಮಂದಿರಕೆ ಬಳಿಕ ||
ಭೀಮನಂ ಕೈವಿಡಿದುಕೊಂಡು ನಡೆತರೆ ಸತ್ಯ |
ಭಾಮಾದಿ ರಾಣಿವಾಸಂಗಳಿದಿರಾಗಿ ಸು |
ಪ್ರೇಮದಿಂದಾರತಿಗಳಂ ಕೊಂಡು ಬಂದು ನಗುತಾತ್ಮಪತಿಯಂ ಕಂಡರು ||೧೩||

ಮಡದಿಯರ ಮಧ್ಯದೊಳ್ ಸತ್ಯಭಾಮಾ ದೇವಿ |
ನುಡಿದಳೆಲೆ ದೇವ ನಮಗಹಳು ಸೋದರಿ ಕುಬ್ಜೆ |
ಪೊಡವಿಯೊಳ್ ಫಲುಗುಣಂ ತುರಗ ರಕ್ಷೆಗೆ ಪೋದ ಪ್ರಮೀಲೆ ನಿಮಗೆ ||
ಒಡಹುಟ್ಟಿದವಳಾದಳಿನ್ನೇನೆನಲ್ಕವಳ |
ಮುಡಿಯಮಾತಂ ಕೇಳ್ದು ಮೊಳೆವ ನಸುನಗೆಯ ಬೆ |
ಳ್ಪಿಡಿಯೆ ಕಮಲಾಂಬಕಂ ಪವಮಾನ ನಂದನನ ಮೊಗನೋಡುತಿಂತೆಂದನು ||೧೪||

ಸಂತತಿಗೆ ಸಂತತಿಗಳಾದುವಿನ್ನೇನದರ ||
ಚಿಂತೆ ಬಾಲ್ಯವೆ ನಮಗೆ ಭೀಮ ನೋಡೀಗ ನ |
ಮ್ಮಂತರವ ನರಿಯದಿವಳೆಂದ ಕಟಕಿಯ ಮಾತನೆಂದು ಮುರಹರನೊರೆದೊಡೆ ||
ಅಂತಹುದು ಪುಸಿಯಲ್ಲ ತರಳತನದೊಳ್ ಪುರಷ |
ರೆಂತಾದೊಡಂ ನಡೆವರೀ ಧರ್ಮಜನ ಪುರದೊ |
ಳಿಂತು ಮಾರ್ಗಿಗಳಾಗದಿರಬಹುದೆ ಹೇಳೆಂದಳಾ ಸತ್ಯಭಾಮೆ ನಗುತೆ ||೧೫||

ಪ್ರಾಣೇಶ್ವರಿಯ ನುಡಿಗೆ ನಸುನಗುತೆ ಮತ್ತುಳಿದ |
ರಾಣಿಯರ ಸರಸೋಕ್ತಿಗಳ ನಾಲಿಸುತೆ ಚಕ್ರ |
ಪಾಣಿ ಮಾರುತಿ ಸಹಿತ ಭವನದೊಳ್ ಕುಳ್ಳಿರ್ದು ಸುಖದೊಳಿರಲಾಪದದೊಳು ||
ಕ್ಷೆಣೀಂದ್ರರೊಡಗೂಡಿ ಫಲಗುಣಂ ಭೂ ವರನ |
ಕಾಣಿಕೆಗೆ ನಗರದ ಸಮೀಪಕೈತಂದನಾ |
ವಾಣಿಯಂ ದಾರುಕಂ ಬಂದು ಬಿನ್ನೈಸಲ್ಕೆ ಪೊರಮಟ್ಟನರಮನೆಯನು ||೧೬||

ಬಂದನಧ್ವರ ಶಾಲೆಗಸುರಾರಿ ಮತ್ತೆ ಯಮ |
ನಂದನಂಗಿಲ್ಲಿಹುದು ನೀನಖಿಳ  ಭೂಪಾಲ |
ವೃಂದಮಂ ಬಕದಾಲ್ಭ್ಯಮುನಿಪನಂ ನಾವಿದಿರ್ಗೊಂಡು ಬಹೆವೆಂದುಸಿರ್ದು |
ಮುಂದೆ ಧೃತರಾಷ್ಟ್ರವಿದುರಾದಿ ವೃದ್ಧರ್ ಮಹೀ |
ವೃಂದಾರಕ ಪ್ರತತಿ ಸಹಿತ ಪೊರಮಟ್ಟು ನಡೆ |
ತಂದನುತ್ಸವದಿಂದೆ ಬರಲೈದೆ ಸಕಲ ಜನಮೆಂದು ನೇಮಿಸಿ ಮುದದೊಳು ||೧೭||

ಅಸುರಹರನಾಜ್ಞೆಯಿಂದಾಗ ಪಟ್ಟಣದೊಳಗೆ |
ಪೊಸತಾಯ್ತು ಗುಡಿ ತೋರಣದ ರಚನೆ ಬೀದಿಗಳೊ |
ಳೆಸೆದುವು ಸುಮಂಗಳ ದ್ರವ್ಯಂಗಳೊಪ್ಪಿದುವು ಪನ್ನೀರಚಳೆಯಂಗಳು ||
ಮುಸುಕಿದವು ಧೂಪ ವಾಸನೆಗಳಿಡಿದುದು ವಿವಿಧ |
ಕುಸುಮ ಗಂಧೋತ್ಕರಂ ಘನ ಸಾರ ಕುಂಕುಮದ |
ಕೆಸರುಗಳ ಪರಿಮಳಂ ತೀಡಿದುದು ಕಪ್ಪುರದ ಸೊಡರ್ಗಂಪು ರಂಜಿಸಿದುದು ||೧೮||

ಪೊರಮಟ್ಟುದಖಿಳ ಪುರಜನಮೈದೆ ಸಿಂಗರದ |
ಮೆರಹುಗಳ ಮೌಳಿಯಿಂ ಮೇಳವದ ರಚನೆಗಳ |
ತರತರದ ವಿದ್ಯಾ ವಿನೋದದಿಂ ನಟ ನರ್ತಕೀ ಜನದ ಗೀತದಿಂದೆ ||
ತುರುಗಿದ ಮೃದಂಗಾದಿ ವಾದ್ಯಧ್ವನಿಗಳಿಂದೆ |
ಮಿರುಗುವ ವಿಲಾಸಿನಿಯರೋಳಿಯಿಂ ಮಾರ್ಗದೊಳ್ |
ತೆರಪಿಲ್ಲೆನಲ್ಕೆ ವೈಭವದಿಂದೆ ಪಾರ್ಥನನಿದಿರ್ಗೊಂಬ ಸಂಭ್ರಮದೊಳು ||೧೯||

ದಂತಿಗಳ ಮೇಲೆ ದೇವಕಿ ಯಶೋದಾದೇವಿ |
ಕುಂತಿಯರ್ ಪೊರಮಟ್ಟರದರ ಬಳಿವಿಡಿದು ಸೀ |
ಮಂತಿನೀ ಗಣಸಹಿತ ರುಕ್ಮಿಣಿಯ ದಂಡಿಗೆ ತೆರಳ್ದುದತಿ ವಿಭವದಿಂದೆ ||
ತಿಂತಿಣಿಸಿ ಗಗನದೊಳ್ ತುಂಬಿಗಳ್ ಕಾರಮುಗಿ |
ಲಂತೆ ನವ ಪಾರಿಜಾತದ ಕುಸುಮ ಪರಿಮಳಕೆ |
ಸಂತತಂ ಮುಸುಕಲಂದಣದೊಳೈದಿದಳಾಳಿಯರ್‌ವೆರಸಿ  ಸತ್ಯಭಾಮೆ ||೨೦||

ಜಾಂಬುವತಿ ಮೊದಲಾದ ಪಂಕರುಹ ಪತ್ರಾಯ |
ತಾಂಬಕನ ರಾಣಿಯರ್ ಪರಿಪರಿಯೊಳೆಸೆವ ದಿ |
ವ್ಯಾಂಬರ ಸುಗಂಧ ಮಾಲ್ಯಾಭರಣ ಮುಕ್ತಾವಳಿಗಳ ಸಿಂಗರವನಾಂತು ||
ತಾಂಬೂಲ ರಾಗರಸದೊಳ್ ಪಿಡಿದ ಲಲಿತ ವ |
ದನಾಂಬುಜದ ಕಾಂತಿಗಳ ಕಳೆವೆತ್ತು ತಮತಮಗೆ |
ಜಾಂಬೂನದಾಲಂಕೃತಾಂದೋಳಿಕಾರೋಹಣಂಗೈದು ಪೊರಮಟ್ಟರು ||೨೧||

ಇಟ್ಟಣಿಸಿತಮರೇಂದ್ರತನಯನನಿದಿರ್ಗೊಂಬ |
ಬಟ್ಟಯೊಳ್ ನಾರೀಸಮೂಹಮೊರಸೊರಸಿನೊಳ್ |
ತೊಟ್ಟಮೈದೊಡಿಗೆಗಳ ಮಸೆದ ಪೊಂಬುಡಿಯಂತೆ ಕುಂಕುಮ ರಜಂಗಳುಗಲು ||
ಕಟ್ಟಿರ್ದ ಹಾರಾದಿಗಳ್ ಪರಿದುದಿರ್ವವೊಲ್ |
ದಿಟ್ಟಿಗೊನೆಗಳ ಕಾಂತಿ ಸೂಸುತಿರೆ ತನುರುಚಿಯೊ |
ಳುಟ್ಟ ವಸನ ದ್ಯುತಿ ವಿರಾಜಿಸುತ್ತಿರೆ ಹಾವಭಾವದ ವಿಲಾಸದಿಂದೆ ||೨೨||

ಬಂದುದು ಮಹಾಜನಂ ಬಹಳ ವೈಭವದಿಂದೆ |
ನಿಂದುದು  ಚತುರ್ಬಲಂ ಕೆಲಕೆಲದೊಳೊಡ್ಡಾಗಿ |
ಸಂದಿಸಿದರಿವರವರ್ ಬಳಿಕಶ್ವಯುಗ ಸಹಿತ ನಡೆದು ಬಹ ಫಲುಗುಣಂಗೆ ||
ಚಂದನದ ಮುತ್ತಿನಕ್ಷತೆಯ ಕುಂಕುಮ ಮಿಶ್ರ |
ದಿಂದೆ ದಧಿ ಲಾಜ ದೂರ್ವಾಂಕುರಗಳಿಂದೆಸೆವ |
ಪೊಂದಳಿಗೆವಿಡಿದಾರತಿಯನೆತ್ತಿ ಮುತ್ತುಗಳ ಸೇಸೆದಳಿದರ್ ಸತಿಯರು ||೨೩||

ವಿಜಯ ಹರಿಸುತ ಯೌವನಾಶ್ವ ಸಾತ್ಯಕಿ ವೃಷ |
ಧ್ವಜ ಸಾಂಬ ಕೃತವರ್ಮ ಹೈಡಿಂಬಿ ಸಾಲ್ವಾವ |
ರಜ ಸುವೇಗಾನಿರುದ್ಧಾದಿಗಳ್ ಧೃತರಾಷ್ಟ್ರಭೂಪನಂ ಕಂಡು ಬಳಿಕ |
ಅಜವಾಹನ ಧ್ವಜ ಮಯೂರಧ್ವಜಾರುಣ |
ಧ್ವಜ ಚಂದ್ರಹಾಸ ನೀಲಧ್ವಜ ಧನಂಜಯಾ |
ತ್ಮಜ ವೀರವರ್ಮ ಪ್ರಮುಖರಾದ ರಾಯರಂ ಕಾಣಿಸಿದರುಚಿತದಿಂದೆ ||೨೪||

ವಂದನೀಯರ್ಗೆ ವಂದಿಸಿ ವಂದಿಸುವ ಜನದ |
ವಂದನೆಗಳಂ ಕೊಂಡು ಸಮಬಂಧುಗಳನಪ್ಪಿ |
ಸಂದರ್ಶನೋತ್ಸವದೊಳನ್ಯೋನ್ಯ ಸಂಭಾಷಣೆಗಳಿಂದೆ ಮುದಿತರಾಗಿ ||
ವಂದಿಸಿದರೆಲ್ಲರುಂ ಬಕದಾಲ್ಭ್ಯಮುನಿ ಬಳಿ |
ಕಂದಣಂಗಳನಿಳಿದು ಮುರಹರನ ನೇಮದಿಂ |
ಬಂದರಧ್ವರಶಾಲೆಗರಸನಂ ಕಾಣಲ್ಕೆ ಗೋಧೂಳಿಲಗ್ನಮಾಗೆ ||೨೫||

ತರತರದ ಛತ್ರ ಚಾಮರಂಗಳ ವಿಡಾಯಿಗಳ |
ಪರಿಪರಿಯ ಸಿಂದ ಸೀಗುರಿ ಪತಾಕಾವಳಿಯ |
ಮೊರೆಮೊರೆವ ವಿವಿಧ ವಾದ್ಯಧ್ವನಿಯ ವಂದಿ ಮಾಗಧರ ಜಯಜಯ ನಿನದದ ||
ಸರಸತರ ಸಂಗೀತ ನರ್ತನದ ಮೇಳವದ |
ನೆರೆನೆರೆದ  ಚತುರಂಗದೊಡ್ಡುಗಳ ಸಂದಣಿಯ |
ದೊರೆದೊರೆಗಳೈತಂದರುತ್ಸವದೊಳರಸನಂ ಕಾಣಲಚ್ಯುತನ ಕೂಡೆ ||೨೬||

ಮುಂದೆ ಕುದುರೆಗಳದರ ಬಳಿಯೊಳ್ ಸಮಸ್ತ ಯದು |
ವೃಂದದೊಡಗೂಡಿ ತಾನೆಡಬಲದೊಳಮರೇಂದ್ರ |
ನಂದನ ವೃಷಭಧ್ವಜರ್ ಪಿಂತೆ ಹಂಸಧ್ವಜ ಮಯೂರಧ್ವಜಾದಿ ನೃಪರು ||
ಸಂದಣಿಸಿ ಗೋಧೂಳಿ ಲಗ್ನದೊಳ್ ಭೂಪನಂ |
ಸಂಧಿಸುವ ಮಾಳ್ಕೆಯಿಂ ಕಪ್ಪುರದ ತೈಲಂಗ |
ಳಿಂದುರಿವ ಬೊಂಬಾಳ ಶತಕೋಟಿಗಳ್ ಪಿಡಿಯಲಸುರಹರನೈತಂದನು ||೨೭||

ಕರ್ಣದೊಳ್ ಕೇಳಬಹುದಲ್ಲದಕ್ಷಿಯೊಳನಿಮಿ |
ಷರ್ನೋಡಲಳವಹುದೆ ತುರಗಮೇಧಂಗಳನ |
ಹರ್ನಿಶಾ ವಲ್ಲಭರ ಕುಲದ ಭೂಪಾಲಕರ್ ಮಾಡಿದರ್ ಪಲಬರವರು ||
ನಿರ್ಣಯವೆ ಹರಿಯೊಡನೆ ಸಿರಿಸಹಿತ ಧರೆಗೆ ಪಯ |
ದರ್ಣವಂ ಬಂದಪುದೊ ಶಿವಶಿವಾ ಪೊಸತಿದಂ |
ವರ್ಣಿಸುವ ಕವಿ ಯಾವನೆನೆ ವಾಜಿಗಳ ಕೂಡೆ ನಡೆತಂದರವನೀಶರು ||೨೮||

ಯಾಜಮಾನ್ಯದೊಳೆಸೆವ ಭೂಪಾಲನಂ ಕಂಡು ||
ವಾಜಿಗಳನೊಪ್ಪಿಸಿ ಪದಾಂಬುಜಕೆ ಪೊಡಮಟ್ಟೊ |
ಡಾ ಜಿಷ್ಣುವಂ ತೆಗೆದು ತಕ್ಕೈಸಿ ಕರ್ಣಜ ಪ್ರದ್ಯುಮ್ನಕಾದಿಗಳನು ||
ತೇಜದಿಂದವನೀಶ್ವರಂ ಮನ್ನಿಸಿದ ಬಳಿಕ |
ರಾಜೀವ ಲೋಚನಂ ಕಾಣಿಸಿದನರಸಂಗೆ |
ರಾಜಮೌಳಿಗಳಾದ ಹಂಸಧ್ವಜಪ್ರಮುಖ ದೇಶಾಧಿವಲ್ಲಭರನು ||೨೯||

ಈತಂ ಕಣಾ ರಾಜಹಂಸ ಹಂಸಧ್ವಜಂ |
ಖ್ಯಾತನೀತಂ ವೀರ ವೀರವರ್ಮಾವನಿಪ |
ನೀತಂ ನೃಪಾಲ ರತ್ನಾಭರಣ ಮಧ್ಯನಾಯಕ ನೀಲ ನೀಲಕೇತು ||
ಈತಂ ವಿರೋಧಿ ಬಲ ವನ ಶಿಖಿ ಶಿಖಿಧ್ವಜಂ |
ಭೂತಳ ಸ್ಥಿತಿ ಚಂದ್ರಚಂದ್ರಹಾಸಕ್ಷ್ಮೇಂದ್ರ |
ನೀತನೀತಂ ದಿವಿಜ ಪತಿಯ ಸುತ ಸುತ ಬಭ್ರುವಾಹನಂ ನೋಡೆಂದನು ||೩೦||

ಏರಿಸಿ ನುಡಿವುದಿಲ್ಲ ತನಗೆ ಸಮವೆನಿಸುವರ್ |
ಮೀರಿದ ಪರಾಕ್ರಮಿಗಳಿವರನುಪಚರಿಸೆಂದು |
ಬೇರೆಬೇರಾ ನೃಪರನವರವರ ಸುತಸಹೋದರ ಮುಖ್ಯ ಮಂತ್ರಿಗಳನು |
ಮಾರೊಡ್ಡಿದಮರಾದ್ರಿಯಂತೆ ರಾಶಿಗಳಾಗೆ |
ಹೇರಿ ತಂದೊಡವೆಯಂ ವಿವಿಧ ರತ್ನಂಗಳಂ |
ತೋರಿಸಿ ಸುವಸ್ತುಗಳನೊಪ್ಪಿಸಿದನರಸಂಗೆ ದಾನವಧ್ವಂಸಿ ನಗುತೆ ||೩೧||

ಬಳಿಕಾ ಸಮಸ್ತ ಭೂಪಾಲರಸುರಾರಿಯಂ |
ಬಳಸಿ ನಿಂದೆಲೆ ದೇವ ನಿನ್ನ ದರ್ಶನಮಾಯ್ತು |
ನಳಿನಭವ ವಿಂಶತಿಯೊಳಿರ್ದ ಬಕದಾಲ್ಭ್ಯಮುನಿಯಂ ಕಂಡೆವಚ್ಚರಿಯೊಳು ||
ಇಳೆಯ ದೇಸದ ವೈಭವಂಗಳಂ ಹರಿಯೊಡನೆ |
ತೊಳಲಿ ನೋಡಿದೆವಧ್ವರಕೆ ಬಂದೆವೀ ಪುಣ್ಯ |
ನಿಳಯನಹ ಧರ್ಮಜನನೀಕ್ಷಿಸಿದೆವಿನಿತರಿಂ ಕೃತಕೃತ್ಯರಾವೆಂದರು ||೩೨||

ಎನಲವರ ನುಡಿಗಳ್ಗೆ ನಸುನಗುತೆ ಮುರಹರಂ |
ವಿನಯದಿಂದರಸಂಗೆ ನೇಮಿಸಿದೊಡಾ ಸಕಲ |
ಜನಪತಿಗಳಂ ಧರಾವಲ್ಲಭಂ ಸತ್ಕರಿಸಿ ವಿವಿಧೋಪಚಾರದಿಂದೆ ||
ಮನವೊಲಿದು ಬಕಕಾಲ್ಭ್ಯನಂ ಪೂಜೆಗೈದಖಿಳ |
ಮುನಿಗಳಂ ಕೂಡಿಕೊಂಡಧ್ವರೋಪಕ್ರಮಕೆ |
ವಿನುತ ಸಂಕಲ್ಪಮಂ ಮಾಡಿ  ರಚಿಸಿದನಿಷ್ಟಿಕಾಚಯನಮಂ ಕ್ರಮದೊಳು ||೩೩||

ಕ್ಷೇತ್ರಮಂ ನೆಲೆಗೈದು ವೃಷಭಂಗಳಂಪೂಡಿ |
ವೇತ್ರಮಂ ಪಿಡಿಯೆ ನೃಪನೋಷದಿಗಳಂ ಕಮಲ |
ನೇತ್ರ ತಾಳ್ದಿರೆ ಕುಂತಿ ದೇವಕಿ ಯಶೋದೆಯರ್ ಕೃಷ್ಣಾದಿ ಪೃಥ್ವೀಶರು ||
ಧಾತ್ರೀಸುರರ್ ನಾರಿಯರ್ ವೆರಸಿ ಕನಕಮಯ |
ಪಾತ್ರೆಯೊಳ್ ಕರ್ಪೂರ ಚಂದನ ಜನವನೊಡನೆ |
ಸೂತ್ರವಿಧಿಗಳ ಮಂತ್ರಪಾಠದಿಂ ತಳಿಯೆ ಶೋಧಿಸಿದರುಕ್ತಸ್ಥಳವನು ||೩೪||

ಶ್ರುತಿಮಂತ್ರವಿಧಿಗಳಿಂ ವ್ಯಾಸ ಬಕದಾಲ್ಭ್ಯರನು |
ಮತದಿಂದೆ ಬುಧರಿಟ್ಟಿಗೆಗಳ ನಳವಡಿಸಿದರ್ |
ಕ್ಷಿತಿಯೊಳ್ ಸುಪರ್ಣಾಕೃತಿಯ ವೇದಿಯಂ ಚತುರ್ ವ್ಯೂಹದೊಳ್ ನಿಲಿಸಿ ನಾಲ್ಕು ||
ಶತವನುದರಾನನಂಗಳ್ಗೆ ತೆಂಕಣ ಗರಿಯ |
ಚಿತೆಗೆ ನೂರರಮೇಲೆ ನಾಲ್ವತ್ತು ನಾಲ್ಕನಾ |
ಪ್ರತಿಯೊಳುತ್ತರ ಪಕ್ಷಕನಿತುಮಂ ಪುಚ್ಛಕೆಪ್ಪತ್ತೊಂದನೊಂದಿಸಿದರು ||೩೫||

ಮೊದಲೊಂದನಿಟ್ಟಿಗೆಯ ನಿಮ್ಮಡಿಸಲೆರಡನೆಯ |
ದದ ನಿಮ್ಮಡಿಸಲುರೆ ವಿರಾಜಿಸಿತು ಮೂರನೆಯ |
ದದ ನಿಮ್ಮಡಿಸಲಾಯ್ತು ನಾಲ್ಕನೆಯದದ ನಿಮ್ಮಡಿಸಲೆಸೆದುದೈದನೆಯದು ||
ಪುದಿದಿಂತು ಮರೆದುದು ಸುಪರ್ಣ ಪಂಚಕದ ಯಾ |
ಗದ ವೇದಿಗಳ್ಮಹಾಮಂಟಪವನೈದೆ ರಚಿ |
ಸಿದರೆಂಟು ಬಾಗಿಲ್ಗಳಿಂ ಕೂಡಿ ತೋರಣ ಪತಾಕೆಗಳ ವಿಸ್ತರದೊಳು ||೩೬||

ಇಷ್ಟಕಾಚಯನದಿಂ ರಾಜಿಸಿತು ಬಳಸಿ ಪರಿ |
ಶಿಷ್ಟದಿಂದೊಪ್ಪಿದುವು ಪಲವು ವೇದಿಗಳೆಸೆದು |
ವಷ್ಟಕುಂಡದ ರಚನೆ ಪಾಲಾಶಮೇಳು ಖಾದಿರಮಾರು ಬಿಲ್ವಮೈದು ||
ದೃಷ್ಟ ಮಾದುನ್ನತ ಶ್ಲೇಷ್ಮಾತಕಂ ಮೂರ |
ಧಿಷ್ಠಿತದ ಯೂಪಮಿಂತೇಕವಿಂಶಶಿಗಳು |
ತ್ಕೃಷ್ಟ ತ್ರಿವೃತ್ಸೂತ್ರ ಭೂಷಿತ ಚಷಾಲದಿಂ ಮೆರದುವಾ ಮಂಟಪದೊಳು ||೩೭||

ವಿಹಿತ ಸಂಸ್ಥಾಪಿತ  ಮಖಾವಳಿಗಂಳಿದೆ ಶತ |
ಜುಹುಗಳಿಂ  ವೈಕಂತದ ಷಷ್ಟಿ ಸ್ರುಕ್ಸ್ರುಪ ನಿ |
ವಹದಿಂದೆ ಗೋಚರ್ಮ ಲೋಹಿತ ದುಲೂಖಲದ ಸೋಮವಲ್ಲಿಯ ಮುಸಲದ ||
ವಿಹರಿಸುವ ದರ್ಭಾಸ್ತರಣದ ಚಮಸಾದಿಗಳ |
ಬಹು ಸಾಧನಂಗಳಿಂದ ಭೂರಿ ಸಂಭಾರ ಸಂ |
ಗ್ರಹದಿಂದೆ ಬೇಕಾದ ವಸ್ತುಸಂಜಾತದಿಂ ಮಖಶಾಲೆ ಕಣ್ಗೆಸೆದುದು ||೩೮||

ವರಿಸಿ ಬಕದಾಲ್ಭ್ಯನಂ ಬ್ರಹ್ಮತ್ವಕಿರಿಸಿದರ್ |
ವರ ಮುನಿಪನಾ ವ್ಯಾಸನಾಚಾರ್ಯನಾದ ನ |
ಧ್ವರಿಯು ಮೊದಲಾದ ಋತ್ವಿಜರಾಗೆ ವಾಮದೇವ ವಶಿಷ್ಟ ಗೌತಮಾತ್ರಿ ||
ವರ ಪರಾಶರ ಭರದ್ವಾಜ ಕೌಂಡಿನ್ಯ ಭಾ |
ಗುರಿ ಜಾಮದಗ್ನ್ಯಗಾಲವ ಜಾತಕರ್ಣ ಸೌ |
ಭರಿ ಸುಮಂತ ಕಹೋಳದೈಭ್ಯ ರೋಮಶ ಮುಖ್ಯಮುನಿಗಳಾ ಕ್ರತುವರದೊಳು ||೩೯||

ರಕ್ಷೆಘ್ನಮಂತ್ರದಿಂದೆಂಟು ಬಾಗಿಲ್ಗಳಂ |
ರಕ್ಷಿಸುವರಾಗಿ ವಿಶ್ವಾಮಿತ್ರ ಭೃಗು ವಾಯು |
ಭಕ್ಷಕ ಪುಲಸ್ತ್ಯರ್ ಮಧುಚ್ಛಂದ ಧೌಮ್ಯೋಪಮನ್ಯುಕ ಕಪಿಲ ನೇತ್ರರು ||
ಅಕ್ಷಯ ತಪೋಧನ ವರ ಮುನಿಗಳೆಲ್ಲರುಂ |
ಲಕ್ಷಿತದ ಪೂಜೆಗಳನನುಕರಿಸಲನಿಬರ ಸ |
ಮಕ್ಷದೊಳ್ ಧರ್ಮಜಂ ಮೃಗಶೃಂಗ ಧರನಾಗಿ ಯಾಜಮಾನ್ಯದೊಳೆಸೆದನು ||೪೦||

ವ್ಯಾಸಮುನಿ ಬಳಿಕಲ್ಲಿ ನುಡಿದನವನೀಶಂಗೆ |
ಭಾಸುರ ಸಭಾವಲಯದೊಳ್ ಮೆರೆವ ದಿವ್ಯ ಸಿಂ |
ಹಾಸನಾರೂಢನಾಗಿಹ ಮುಕುಂದಾದಿ ಭೂಪಾಲರ್ಗೆ ವಿನಯದಿಂದೆ |
ಈ ಸಮಯದೊಳ್ ಚತುಷ್ಷಷ್ಟಿ ದಂಪತಿಗಳ್ ವಿ |
ಲಾಸದಿಂದಮಲ ಕಲಶಂಗಳಂ ತುಂಬಿ ಗಂ |
ಗಾ ಸರಿತ್ತೋಯಮಂ ಕೊಂಡು ಬರವೇಳ್ಪುದರಸನ ಮಖನಿಮಿತ್ತಕಾಗಿ ||೪೧||

ಜನಪ ಕೇಳ್ ವ್ಯಾಸಮುನಿ ವಾಕ್ಯಮಂ ಕೇಳ್ದು  ಬಳಿ |
ಕನಸೂಯೆ  ಸಹಿತತ್ರಿ ಮೇಣರುಂಧತಿ ಸಹಿತ |
ಮುನಿ ವಸಿಷ್ಠಂ ಶೌರಿ ತಾನೆ ರುಕ್ಮಿಣಿಸಹಿತ ಪಾರ್ಥಂ ಸುಭದ್ರೆಸಹಿತ ||
ದನುಜಾರಿಸೂನು ಮಾಯಾವತಿ ಸಹಿತ ಮುದದೊ |
ಳನಿರದ್ಧನುಷೆಸಹಿತ ಮಾರುತಿ ಹಿಡಿಂಬಿ ಸಹಿ |
ತಿನಸುತನ ಕುವರಂ ಪ್ರಭದ್ರೆ ಸಹಿತಮಲ ಕಲಶಂಗಳಂ ಪೊತ್ತೆಸೆದರು ||೪೨||

ಲಲನೆ ಲೀಲಾವತಿ ಸಹಿತ ಮಯೂರಧ್ವಜಂ |
ವಿಲಸಿತ ಸುನಂದೆ ಬಳಿವಿಡಿಯೆ ನೀಲಧ್ವಜಂ |
ಲಲಿತ ಪ್ರಭಾವತಿವೆರಸಿ ಯೌವನಾಶ್ವ ನನುಸಾಲ್ವಂಧಮಿಲ್ಲೆಗೂಡಿ ||
ಉಳಿದ ಹಂಸಧ್ವಜ ಕಿರೀಟಿಸುತ ಶಶಿಹಾಸ |
ಕಲಿ ವೀರವರ್ಮ ತಾಮ್ರಧ್ವಜಾದ್ಯವನಿಪರ್ |
ಸಲೆ ತಮ್ಮತಮ್ಮ ಕಾಂತೆಯರೊಡನೆ ಸಲಿಲ ಕಲಶಂಗಳಂ ತಾಳ್ದೆಸೆದರು ||೪೩||

ದೊರೆದೊರೆಗಳೆಲ್ಲರುಂ ತಮ್ಮ ತಮ್ಮರಸಿಯರ್ |
ವೆರಸಿ ಗಂಗಾ ತಟಕೆ ಮುಸುಕಿದ  ಸುಪಲ್ಲವೋ |
ತ್ಕರದ ಪೊಂಗಲಸಂಗಳಂ ಕೊಂಡು ನಡೆಯಲವರವರ ಮೈಗಾವಲ್ಗಳ ||
ಪರಿವಾರದಿಂದೆ ಪಾರ್ವರ ಮಂತ್ರಘೋಷದಿಂ ||
ನೆರೆದಿಹ ಮಹಾಜನದ ಸಂದಣಿಗಳಿಂ ಪಾಠ ||
ಕರ ನೃತ್ಯ ವಾದ್ಯಗೀತಂಗಳ ವಿಲಾಸದಿಂದುತ್ಸವಂ ಚೆಲ್ವಾದುದು ||೪೪||

ಆನೆಗಳ ಮೇಲೆ  ಕುವರಿಯರಿರ್ದು ಮುತ್ತುಗಳ |
ಸೋನೆಗಳನಡಿಗಡಿಗೆ ಸೂಸುತಿರೆ ಮನ್ಮಥನ |
ಸೇನೆಗಳ ತರದಿಂದೆ ನೃಪ ಸತಿಯರೂಳಿಗದ ತರಳೆಯರ್ ಕಂಗೊಳಿಸಲು ||
ನಾನಾ ವಿಧದೊಳೆಸೆವ ಶೃಂಗಾರವಿಭವದಿಂ |
ಭೂ ನುತಾಶ್ಚರ್ಯಮಾಗಿರೆ ಜಲಾಗಮಕೆ ಹರಿ |
ತಾನೆ ಬರೆ ಮೊಳಗಿದುವು ದೇವದುಂದುಭಿ ಕರೆದುದರಲ ಮಳೆ ಗಗನದಿಂದೆ ||೪೫||

ದೇವ ದೇವರ ದೇವನೆಂಬುದಂ ಮಾನುಷ್ಯ |
ಭಾವದಿಂ ಲಕ್ಷ್ಮೀವಿಲಾಸನೆಂದೆಂಬುದಂ |
ಗೋವಳಯರೊಡನಾಟದಿಂದೆ ನೀಗಾಡಿದಂತೀಗ ಪದ ನಖದೊಳೊಗೆದು ||
ಪಾವನವೆನಿಸುವ ಗಂಗಾಜಲವನೆತ್ತುವ  ಮ |
ಹಾ ವಿಭುವಿನೆಸೆವ ಲೀಲೆಗೆ ಕೈಮುಗಿದು ಕುಂತಿ |
ದೇವಕಿಯರಚ್ಯುತನ ವಸನಮಂ ಪಿಡಿದು ರುಕ್ಮಿಣಿಯ ಸೆರಗಂ ಬಿಗಿದರು ||೪೬||

ನೋಡಿದಂ ನಾರದ ಮುನೀಂದ್ರ ನೀ ಕೌತುಕವ |
ನಾಡಿದಂ ಸತ್ಯಭಾಮೆಯ ಮನೆಗೆ ಬಂದು ನೀಂ |
ಮಾಡುವುಜ್ಜಗಮಿದೇನೆಲೆ ದೇವಿ ಮಂದಿರದೊಳಧ್ಯರಾರಂಭಕೀಗ ||
ಆಡಂಬರದೊಳಂಬು ಕಲಶಂಗಳಂ ಪಿಡಿಯೆ |
ಕೂಡಿದ ಚತುಷ್ಷಷ್ಟಿದಂಪತಿಗಳೊಗ್ಗಿನೊಳ್ |
ಗಾಡಿ ಮಿಗೆ ರುಕ್ಮಿಣಿ ವಿರಾಜಿಸುವಳೇವೇಳ್ವೆನವಳ ಭಾಗ್ಯವನೆಂದನು ||೪೭||

ಛತ್ರಚಾಮರ ಧೂಪ ಗಂಧ ಕುಸುಮಾವಳಿಯ |
ಚಿತ್ರವೈಭವದಿಂದೆ ದಂಪತಿಗಳಾಗಿ ಬಹು |
ಪುತ್ರಪೌತ್ರರ್ವೆರಸಿ ಕೈವಾರಿಸುವ ಸಕಲ ಜನದ ಸನ್ಮಾನದಿಂದೆ ||
ಅತ್ರಿ ಮೊದಲಾದ ಋಷಿಗಳ ಮುಂದೆ ನೆರೆದಿಹ ಧ |
ರಿತ್ರಿಯೆ ಸಮಸ್ತ ರಾಜೋತ್ತಮರ ನಡುವೆ ಶತ |
ಪತ್ರನೇತ್ರನ ಬಳಿಯೆ ರಂಜಿಸುವ ರುಕ್ಮಿಣಿಯ  ಭಾಗ್ಯಮದನೇಂವೊಗಳ್ವೆನು ||೪೮||

ಉರ್ವ ಮೋಹನ ರಾಣಿ ಕೃಷ್ಣಂಗೆ ನಾನೆಂದು |
ಗರ್ವಿಸುವೆ ಬರಿದೆ ರುಕ್ಮಿಣಿಯಂತೆ ಶೌರಿ ಸಹಿ |
ತುರ್ವಿಪನ ಯಜ್ಞದೊಳ್ ದಂಪತಿಗಳಾಗಿರ್ದವರ್ಗೆ ದುರ್ಲಭಮಿದೆನಲು ||
ಗೀರ್ವಾಣ ನದಿಯ ಸಲಿಲಾಗಮಕೆ ಪೊರಮಟ್ಟು |
ಸರ್ವ ಸಂಭ್ರಮದಿಂದೆ ವರ್ತಿಸದೆ ಮನೆಯೊಳಿಹ |
ನಿರ್ವಾಹಮೇನೆಂದು ನಾರದಂ ಕೇಳ್ದೊಡಾ ದೇವಿ ನಗುತಿಂತೆಂದಳು ||೪೯||

ಮುನಿಪ ನೀನರಿಯದವನಂತೀಗ ಬಂದೆನ್ನ |
ಮನವ ನಾರೈದು ಕೇಳ್ದಪೆ ದನುಜರಿಪು ತನ್ನ |
ಮನೆಯೊಳಿರ್ದಪನೆಂದು ಸತ್ಯಭಾಮಾದೇವಿ ಕೃಷ್ಣನಂ ತೋರಿಸಲ್ಕೆ ||
ಜನಪತಿಯ ಮುಂದೆ ರುಕ್ಮಣಿ  ಸಹಿತ ತೊಳಗುತಿಹ |
ವನಜಾಕ್ಷನಂ ಕಂಡೆನಲ್ಲಿ ಮೇಣಿಲ್ಲಿ ಮೋ |
ಹನ ರೂಪನಾಗಿ ಕಂಗೊಳಿಸುತಿರ್ದಪನೆಂದು ನಾರದಂ ಬೆರಗಾದನು ||೫೦||

ನಾಂ ಬಂದ ಬಗೆಯನರಿದಿಲ್ಲ ನೀನಿಹೆ ಸಾಕ |
ದೇ ಬಯಲ್ಗೀ ಮನುಜ ಲೀಲೆ ನಿನಗೆಂದು ಪೀ |
ತಾಂಬರಂಗಭಿನಮಿಸಿ ಬೀಳ್ಕೊಂಡು  ನಾರದಂ ಪೊರಮಟ್ಟು ವಹಿಲದಿಂದೆ ||
ಜಾಂಬುವತಿಯಾಲಯಕೆ ನಡೆತಂದು ತಾಯೆ ಕಮ |
ಲಾಂಬಕಂ ನೃಪನ ಮಖಕರಸಿಯರ್ವೆರಸಿ ಗಂ |
ಗಾಂಬುವಂತಹನಲ್ಲಿ ಸಂಭ್ರಮದೊಳೇಕೆ ಪೋಗದೆ ಮನೆಯೊಳಿಹೆಯೆಂದನು ||೫೧||

ಎಂದೊಡೆ ಮುನೀಂದ್ರ ನಾವೆಲ್ಲರುಂ ನಿಮಿಷಮರ |
ವಿಂದದಳನೇತ್ರನನಗಲ್ದು ಜೀವಿಸಲರಿಯೆ |
ವಿಂದೆಮ್ಮ ಮನೆಯೊಳಿರ್ದ ಪನಾತನೊಳ್ಳಿದನೊಳೆನಗೆ ಮತ್ಸರಮಿದೇಕೆ ||
ತಂದೆ ನಿನ್ನಾಟಮಂ ಬಲ್ಲೆನೆನೆ ಜಾಂಬುವತಿ |
ಯಂ ದೇವಋಷಿ ಪರಸಿ ಬೀಳ್ಕೊಂಡು ರಾಣಿಯರ |
ಮಂದಿರದೊಳೆಲ್ಲಿಯುಂ ಕೃಷ್ಣನಿಹನೆಂದರಿದು ಮಖಶಾಲೆಗೈತಂದನು ||೫೨||

ಅಲ್ಲಿಂದ ನಾರದಂ ಮತ್ತೆ ಬಂದಿಲ್ಲಿ ಭೂ |
ವಲ್ಲಭನ  ಮುಂದೆ ರುಕ್ಮಿಣಿ ಸಹಿತ ಕಟ್ಟಿರ್ದ |
ಪಲ್ಲವದ ಪೊಂಗಳಸಮಂ ತಾಳ್ದು ಋತ್ವಿಜರ  ಮುನಿಗಣದ ನೃಪ ನಿಕರದ ||
ಎಲ್ಲಾಜನಂಗಳ ಪೊಗಳ್ಕೆಯಂ ಕೈಕೊಂಬ |
ಸಲ್ಲಾಪದಿಂದೆಸೆಯುತಿರೆ ಕಂಡು ಬೆರಗಾಗಿ |
ನಿಲ್ಲದೆ  ನಿಗಮ ಸೂಕ್ತದಿಂ ನುತಿಸಿದಂ ದೇವಪುರದ ಲಕ್ಷ್ಮೀಪತಿಯನು ||೫೩||