ಸೂಚನೆ ||
ವರ ಚಂದ್ರುಹಾಸನಂ ಪ್ರೀತಿಯಿಂದೊಡಗೊಂಡು |
ಶರಧಿಯ ಮಧ್ಯದೊಳ್ ಬಕದಾಲ್ಬ್ಯನಂ ಕಂಡು |
ಮರಳಿ ಕೃಷ್ಣಾರ್ಜುನರ್ ಸಿಂಧುದೇಶದ ಮೇಲೆ ಗಜನಗರಿಗೈತಂದರು ||

ಕೇಳ್ದೆಲಾ ನರನಾಥ ಪಾರ್ಥಂಗೆ ನಾರದಂ |
ಪೇಳ್ದ ವೃತ್ತಾಂತಮಂ ಬಳಿಕ ಸಂತೋಷಮಂ |
ತಾಳ್ದು ಕುಂತೀಸುತಂ ಚಂದ್ರಹಾಸ ಪುರಾಭಿಮುಖಮಾಗಿ ನಡೆಯುತಿರಲು ||
ಆಳ್ದೋರಿ  ತಮತಮಗೆ ಭೂಪಾಲರೈದೆ ಕೆಂ |
ದೂಳ್ದೇವಲೋಕಮಂ ಕಿತ್ತೆತ್ತಿಕೊಂಡೊಯ್ದು |
ದಾಳ್ದುದಿನ್ನೇನಂಬುಧಿಯೊಳವನಿತಳಮೆಂಬ ತೆರನಾಗಿ ಪದಹತಿಯೊಳು ||೧||

ಬರುತಿರ್ದುದರ್ಜುನನ ಸೈನಿಕಂ ಕುಂತಳ ನ |
ಗರಿಗಾಗಿ ಜನಮೇಜಯಕ್ಷಿತಪ ಕೇಳಿತ್ತ |
ನರನ ವಾಜಿಗಳೂರ ಪೊರವಳಯಮುಪವನದ ನಡುವೆ ತಮ್ಮಿಚ್ಛೆಯಿಂದೆ ||
ತಿರುಗುತಿರೆ ಕಂಡವರ್ ಕೌತುಕಮಿದೆಂದು ಬಂ |
ದೊರೆಯೆ ಪದ್ಮಾಕ್ಷಮಕರಧ್ವಜರ್ ಪಿಡಿದವರ |
ಶಿರದ ಪಟ್ಟದ ಲಿಪಿಯನೋದಿ ವಿಸ್ಮತರಾಗಿ ತಂದೆಗೊಪ್ಪಿಸಿ ನುಡಿದರು ||೨||

ಜೀಯ ಬಿನ್ನಪವನವಧಸಿಳೆಯಮೇಲೆ ಕೌಂ ||
ತೇಯನ ಮಹಾಧ್ವರದ ವಾಜಿಗಳ್ ತಿರುಗಿ ತರು |
ವಾಯೊಳಿಲ್ಲಿಗೆ ಬಂದೊಡಾವು ಕಟ್ಟಿದೆವಿನ್ನು ಬಿಡಿಸಿಕೊಂಬತಿಬಲರನು |
ಸಾಯಕದ ಮೊನೆಯೊಳೈಸಲೆ ಕಾಣಬೇಕೆನಲ್ |
ಪ್ರೀಯದಿಂ ತನಯರಂ ತೆಗೆದಪ್ಪಿ ತಾನಭಿ |
ಪ್ರಾಯಮಂ ತಿಳಿದು ಹರ್ಷಿತನಾಗಿ ಚಂದ್ರಹಾಸಂ ನಯದೊಳಿಂತೆಂದನು ||೩||

ಮಕ್ಕಳಿರ ಕೇಳಿ ತಾನಾಬಾಲ್ಯದಿಂದೆ ಬಿಡ |
ದಕ್ಕರಿಂ ಚಿತ್ತದೊಳ್ ಧಾನಿಸುವ ದೇವ ನಿನಿ |
ತಕ್ಕೆ ಮೈದೋರುವಂ ಪಾರ್ಥನ ಸಹಾಯಕೈತಂದು ನಮಗರಿವೆನಿದನು ||
ಸಿಕ್ಕಿದೊಡೆ ಕೃಷ್ಣದರ್ಶನದ ಪುಣ್ಯವೆ ಸಾಕು |
ಮಿಕ್ಕಸುಕೃತಧ ಗಸಣಿಯೇಕಿನ್ನು ಧರ್ಮಾಧ್ವ |
ರಕ್ಕೆ ತಿರುಗುವ ಕುದುರೆಗಳನಿಲ್ಲಿ ಕಟ್ಟಿದೊಡೆ ಪುರುಷಾರ್ಥಮೇನೆಂದನು ||೪||

ಧರಣಿಯೊಳ್ ಪ್ರತ್ಯಕ್ಷಧರ್ಮದಾಕೃತಿ ಯುಧಿ |
ಷ್ಠರಭೂಪನಾತನ ಹಯಂಗಳಂ  ತಡೆದಪರೆ |
ಪಿರಿದಾಯಸದೊಳವರ್ ಪಾಲಿಸಿದರಿನ್ನೆಗಂ ದಶಮಾಸದಿಂದೆ ಮೇಲೆ ||
ಅರೆದಿಂಗಳಾದುದಿನ್ನಿಹುದು ಪಕ್ಷತ್ರಯಂ |
ಬರಿಸಕಲ್ಲಿಂದ ಮುಂದಿಲ್ಲಿ ಸಿಕ್ಕಿರ್ದೊಡ |
ಧ್ವರಮುಳಿವುದದರಿಂದ ನೀವೆ ರಕ್ಷಿಸಿ ಪಾಂಡವಂಗೆ ಕೊಟ್ಟಪುದೆಂದನು ||೫||

ತನ್ನ ಹೇಳಿಕೆಯೊಳಲ್ಲದೆ ಕೃಷ್ಣಫಲ್ಗುಣ |
ರ್ಗಿನ್ನು ಸಿಕ್ಕಿದ ಹರಿಗಳಂ ಬಿಡದೆ ಭೂಮಿಯೊಳ್ |
ಸನ್ನದ್ಧರಾಗಿ ಪಾಲಿಸಿ ನೀವು ಯಜ್ಞಕಾಲಕೆ ಧರ್ಮಜಂಗೆ ಕುಡಲು ||
ಉನ್ನತದ ಸುಕೃತಮಾದಪುದು ನಮಗೆಂದು ಸಂ |
ಪನ್ನಮತಿ ಚಂದ್ರಹಾಸಂ ನಿಜ ಕುಮಾರರಂ |
ಮನ್ನಿಸಿ ತುರಂಗ ರಕ್ಷೆಗೆ ಕಳುಹಿ ಬಲಸಹಿತ ಪೊಳಲ ಪೊರಗಿರುತಿರ್ದನು ||೬||

ತುರಂಗಂಗಳಂ ಬಿಟ್ಟದರ ಕೂಡೆ ಸೇನೆಸಹಿ |
ತಿರದೆ ಪದ್ಮಾಕ್ಷ  ಮಕರಧ್ವಜರ್ ಪೋದ ಬಳಿ |
ಕರವಿಂದನಾಭದರ್ಶನಕೆ ಲೋಲುಪನಾಗಿ ಚಂದ್ರಹಾಸಂ ಮುದದೊಳು ||
ಪುರದ ಹೊರವಳೆಯದೊಳ್ ಸೇನೆಯಂ ಕೂಡಿಕೊಂ |
ಡಿರುತಿರ್ದನನ್ನೆಗಂ ಮೇರೆದಪ್ಪಿದ ಮಹಾ |
ಶರಧಿಯಂತರ್ಜುನನ ಮೋಹರಂ ತಲೆದೋರಿತೆತ್ತಣಾಶ್ಚರ್ಯಮೆನಲು ||೭||

ಸಮತಳಿಸಿ ಫಲುಗುಣನ ಸೇನೆ ಬಹುದಂ ಕಂಡು |
ಸಮರಕಭಿಮುಖನಾಗಿ ತನ್ನ ಮೋಹರಸಹಿತ |
ಸಮಚಂದ್ರಹಾಸನೈತರಲಾಗ ಮುರಹರಂ ಸಕಲ ಭೂಪಾಲಕರನು ||
ಕ್ರಮದಿಂದೆ ನಿಲ್ಲಿಸಿ ಪಾರ್ಥಂಗೆ ಸಾರಥಿಯಾಗಿ |
ಕಮಲ ಸುಗದಾ ಶಂಖ ಚಕ್ರದ ಚತುರ್ಭುಜದ |
ಕಮನೀಯ ರೂಪಮಂ ಕೈಕೊಂಡು ಬಿಟ್ಟನಾತನ ಸಮ್ಮುಖಕೆ ರಥವನು ||೮||

ನೋಡಿದೈ ಪಾರ್ಥ ವೈಷ್ಣವ ಶಿರೋಮಣಿಯನೆನೆ |
ಮೂಡಿಮುಳುಗುವ ಮಾಧವ ಧ್ಯಾನಚೇತನದ |
ಸೂಡಿದ ಮುಕುಂದಪಾದಾಬ್ಜ ತುಲಸೀಪೂತಮಸ್ತಕದ ಸತ್ತ್ವಗುಣದೆ ||
ಬೀಡೆನಿಪ ಕಲಿ ಚಂದ್ರಹಾಸನಂ ಕಂಡು ತಾ |
ಮಾಡಿದಗ್ಗದಪುಣ್ಯದಿಂ ಜನ್ಮಸಫಲವಾ |
ಯ್ತಾಡಲೇನೆಲೆದೇವ ತನ್ನ ಬಿನ್ನಪವನವಧರಿಸೆಂದನಿಂದ್ರಸೂನು ||೯||

ಜ್ಞಾನವೃದ್ಧಂ ತಪೋವೃದ್ಧಂ ವಯೋವೃದ್ಧ |
ನೀನರೇಶ್ವರನೀತನೊಳ್ ಕಾದಿ ಜಯಿಸುವ ವಿ |
ಧಾನವೆಂತೆನಗೆ ಬೆಸಸೆಂದರ್ಜುನಂ ಕೇಳ್ದೊಡಸುರಾರಿ ಕುರಣದಿಂದೆ ||
ಧ್ಯಾನಿಸುವನಾ ಬಾಲ್ಯದಿಂದೆನ್ನನೀತಂಗೆ |
ತಾನೊಲಿದೆನೆಂದು ನಿಜರೂಪಮಂ ತೋರಲಾ |
ಭೂನಾಥನಂಬುಜಾಕ್ಷನ ದಿವ್ಯಮೂರ್ತಿಯಂ ಕಂಡು ಪುಳಕಿತನಾದನು ||೧೦||

ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ |
ಪೊಂಬಟ್ಟೆಯಂ ತಾಳ್ದು ಕೌಸ್ತುಭದ ಶೋಭಾವ |
ಲಂಬದಿಂ ಸರ್ವಾಭರಣ ವಿಭೂಪಿತನಾಗಿ ದಿವ್ಯಮಾಲೆಗಳನಾಂತು ||
ತುಂಬಿದವಯವದ ಲಾವಣ್ಯಲಹರಿಗಳ ವಿಸ |
ಟಂಬರಿವ ಕೂರಣರಸವೆಳನಗೆಯ ಸಿರಿಮೊಗದ |
ಶಂಬರಾರಿಯ ಪಿತಂ ಪಾರ್ಥನ ರಥಾಗ್ರದೊಳ್ ಕಣ್ಗೆಸೆದನಾ ನೃಪತಿಯ ||೧೧||

ಕಂಗಳ ನಿರೀಕ್ಷಣದ ಸೌಖ್ಯಮಂ ಸೂಸುವುದ |
ಕಂಗಳ ಪೊನಲ್ತಟೆಯ ಹರ್ಷದಿಂದೇಳ್ವ ಪುಳ |
ಕಂಗಳ ನೆಗಳ್ಕೆಯಂ ಭಯಭರಿತಭಕ್ತಿ  ಭಾವಿಸೆ ರಥವನಿಳಿದು ಬಂದು ||
ಮಂಗಳ ಪವಿತ್ರ ಕೋಮಲ ಪಾದಪದ್ಮಯು |
ಗ್ಮಂಗಳ ಸವಿಪದೊಳ್ ಚಂದ್ರಹಾಸಂ ಪ್ರಣಾ|
ಮಂಗಳ ವಿಧಾನಮಂ ಮಾಡುತಿರೆ ಹರಿ ತೆಗೆದು ಬಿಗಿದಪ್ಪದಂ ಕೃಪೆಯೊಳು ||೧೨||

ಅಸುರಾರಿ ಬಳಿಕರ್ಜುನನ ವದನಮಂ ನೋಡಿ |
ನಸುನಗುತ  ನುಡಿದನೇತಕೆ ಸಮ್ಮನಿಹೆ ಧರ್ಮಿ |
ಶಶಿಹಾಸನತಿಬಲಂ ಪರಿಣತಂ ಧ್ರುವಸನ್ನಿಭಂ ತನಗೆ ಭಕ್ತನಿವನು ||
ಒಸೆದು ನೀನಾಲಂಗಿಸೆನೆ ದೇವ ನಿಮ್ಮಡಿಗ |
ಳುಸಿರಿದುವಲಾ ತನ್ನ ಮಾರ್ಗಗತಿ ಲೇಸನ್ಯ |
ರೆಸಗುವಂದದೊಳಚರಿಸೆ ಭಯಾವಹಮೆಂದು ಭೀಷ್ಮಸಂಗರದೊಳೆನಗೆ ||೧೩||

ಅದರಿಂದೆ ಕಾಳೆಗವೆ ತನಗೆ ಕರ್ತವ್ಯವಿ |
ಪದದೊಳಾಲಿಂಗನಮುಚಿತಮಲ್ಲ ವೃದ್ಧನಹ |
ನದರಿಂದೆ ಬೇಕಾದೊಡೀತಂಗೆ ವಂದಿಸುವೆನೆನೆ ತನ್ನ ಕಿಂಕರರ್ಗೆ |
ಮುದದೊಳೆರಗಿದೊಡೆ ಮೇಣವರನಪ್ಪಿದೊಡೆ ತ |
ಪ್ಪದು ಮಾನವರ್ಗೆ ಕಾಪಿಲ ಗೋ ಸಹಸ್ರ ದಾ |
ನದ ಪುಣ್ಯಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಹೇಳೆಂದನು ||೧೪||

ತನ್ನ ಶರಣರ ಜೀವನವೆ ತನಗೆ ಜೀವನಂ |
ತನ್ನ ಶರಣರ್ ಬೇರೆ ತಿಳಿಯೆ ತಾಂ ಬೇರಲ್ಲ |
ತನ್ನ ಶರಣರ ಹೃದಯಕಮಲದೊಳ್ ಪ್ರತ್ಯಕ್ಷಮಾಗಿ ತಾನಿರುತಿರ್ಪೆನು ||
ನಿನ್ನ  ತೆರದಿಂ ಮರುಳರಾರುಂಟು ಲೋಕದೊಳ್ |
ನಿನ್ನ ತೆರದಿಂದೀತನೆನಗೆ ಬೇಕಾದವಂ |
ನಿನ್ನ ತೆರನೇನೆಂದು ಜರೆದು ಕೌಂತೇಯನಂ ಕೇಳ್ದನಸುರಾರಿ ನಗುತೆ ||೧೫||

ಭೂಪಾಲ ಕೇಳ್ ಬಳಿಕ ಫಲುಗುಣಂ ಕೃಷ್ಣನ ನಿ |
ರೂಪಮಂ ಕೈಕೊಂಡು ಹರ್ಷದಿಂದಾಗ ನಿ |
ಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಂಗೈಯಲು ||
ಆ ಪೊಡವಿಪತಿ ನುಡಿದನೆಲೆ ಪಾರ್ಥ ಕದನ ದಾ |
ಳಾಪಮಂ ನಿನ್ನೊಡನೆ ಮಾಡಿದೊಡೆ ನೃಪಮಖಂ |
ಲೋಪಮಹುದೆಂದು ಕಳುಹಿದೆನೆನ್ನ ತನುಜರಂ ತುರುಗ ರಕ್ಷಾರ್ಥಮಾಗಿ ||೧೬||

ಹಲವು ಮಾತುಗಳೇಕೆ ನಮಗೆ ನಿಮಗಾಶ್ರಯಂ |
ಜಲಜಾಕ್ಷನಾಗಿರ್ದ ಬಳಿಕಾವಧರ್ಮಕಾ |
ಶಲಮಕಟ ಸಾಕಿನ್ನು ಪಾರ್ಥ ನಿನ್ನಶ್ವಂಗಳಂ ತರಿಸಿ ಕುಡುವೆವೆನುತೆ ||
ಬಲಸಹಿತ ಕುದುರೆಕಾವಲ್ಗೆ ಪೋಗಿಹ ಸುತರ ||
ಬಳಿಗೆ ಚರರಂ ಕಳುಹಿ ಕರೆಸಲವರೈತಂದು |
ಫಲುಗುಣನ ವಾಜಿಗಳನ್ನೊಪ್ಪಿಸಿ ಮುರಾರಿಯಂ ಕಂಡರತಿಭಕ್ತಿಯಿಂದೆ ||೧೭||

ನರನೊಡನೆ ಸಖ್ಯಮಾದುದು ಬಳಿಕ ಬಂದ ನೃಪ |
ವರರೆಲ್ಲರಂ ಪ್ರಿಯದೊಳಾದರಿಸಿದಂ ಕೂಡೆ |
ಹರಿಯನತಿಭಕ್ತಿಯಿಂದೈದೆ ಕೊಂಡಾಡಿದಂ ನಿರುಪಮ ಸ್ತುತಿಗಳಿಂದೆ |
ಪರಿಪರಿಯ ಗುಡಿ ತೋರಣಾವಳಿಯ ರಚನೆ ಮಿಗೆ |
ಪುರಕೆ ಬಿಜಯಂಗೈಸಿ ತಂದನುತ್ಸವದಿಂದೆ |
ಸಿರಿಯನುರೆ ವಿಸ್ತರಿಸಿ ಭೂಪುರಂದರನಂತೆ ಚಂದ್ರಹಾಸಂ ಮೆರೆದನು ||೧೮||

ಇಂದುಹಾಸಾಶ್ರಯದೊಳಿರ್ದಖಿಲ ಪುರಜನಂ |
ಕಂದರ್ಪ ತಾತನಂ ಕಂಡು ಕೃತಕೃತ್ಯಮಾ |
ಯ್ತಿಂದಿರಾ ವಲ್ಲಭನ ಸಂದರ್ಶನಕೆ ದುಷ್ಟಬುದ್ಧಿ ನಿಜ ಸೂನುಸಹಿತ ||
ಬಂದು ನಿರ್ಧೂತ ಕಿಲ್ಬಿಷನಾದನಾಗಳೈ |
ತಂದು ಗಾಲವನಸುರಮರ್ದನನ ಪಾದಾರ |
ವಿಂದಮಂ ವಿವಿಧಾಗಮೋಕ್ಷದಿಂ ಪೂಜಿಸಿದನತಿ ಭಕ್ತಿಭಾವದಿಂದೆ ||೧೯||

ಪ್ರೀತಿಯಿಂ ಚಂದ್ರಹಾಸಂ ತನ್ನ ರಾಜ್ಯಮಂ |
ಪೀತಾಂಬರನ ಚರಣ ಸರಸಿರುಹಕರ್ಪಿಸಿದ |
ನಾತಂ ಧನಂಜಯನ ಸಮ್ಮತದೊಳೆಸೆದು ವಿಷಯಾ ಕುಮಾರಂಗೆ ಕೊಟ್ಟು ||
ಖ್ಯಾತಮಾದಕಿಳ ವಸ್ತುಗಳೊಡನೆ ಗಜಪುರಕೆ |
ದೂತರಂ ಕಳುಹಿ ಸತ್ಕೃತನಾಗಿ ಭೂಪತಿ |
ವ್ರಾತ ಸಹಿತಲ್ಲಿ ಮೂರಿರುಳಿರ್ದು ಪೊರಮಟ್ಟನೈದೆ ಕುದುರೆಗಳ ಕೂಡೆ ||೨೦||

ಮುಪ್ಪಾದೆನೆಲೆಮಗನೆ ಕೃಷ್ಣದರ್ಶನದಿಂದೆ |
ತಪ್ಪದೆನಗಿನ್ನು ಮೋಕ್ಷದ ಲಾಭಮಸುರಾರಿ |
ಗೊಪ್ಪಿಸುವೆ ನೀತನುವನಿವರಧ್ವರಂ ಮುಗಿದ ಬಳಿಕ ವನಕಾಂ ಪೋಪೆನು ||
ಬಪ್ಪುದಿಲ್ಲದರಿಂದೆ ನಗರಕರಸಾಗಿ ಸುಖ |
ಮಿಪ್ಪುದೆಂದಿರಿಸಿ ನಿಜ ತನಯರಂ ಶರಧಿಗೆಣಿ |
ಯಪ್ಪ ವಾಹಿನಿಯೊಡನೆ ಪೊರಮಟ್ಟನಾ  ಚಂದ್ರಹಾಸನರ್ಜುನನ ಕೂಡೆ ||೨೧||

ಪುತ್ರಸಂಪದಮಾಯುರಾರೋಗ್ಯ ಮರಿವು ಶತ |
ಪತ್ರನಾಭನ ಭಕ್ತಿ ದೃಢವಾಗಲೀತನ ಚ |
ರಿತ್ರಮಂ ಕೇಳ್ದವರ್ಗಂದು ಹರಿ ವರವನಿತ್ತಾತನಂ ಕೂಡಿಕೊಂಡು ||
ಸುತ್ರಾಮ ಸುತನ ಕುದುರೆಗಳೊಡನೆ ತೆರಳ್ದಂ |
ಧರಿತ್ರಿಯೊಳ್ ದೇಶದೇಶದೊಳಿರ್ದ ಭುಜಬಲಿ |
ಕ್ಷಿತ್ರಿಯೋತ್ತಮರಂಜಿ ತುರಗಂಗಳಂ ತಡೆಯದಭಿನಮಿಸಿ ಬಿಡುತಿರ್ದರು ||೨೨||

ರಾಯ ಕೇಳಾಶ್ಚರ್ಯಮಂ ಬಳಿಕ ವಾಜಿಗಳ್ |
ವಾಯುವೇಗದೊಳೈದಿ ಬಡಗಣ ಪಯೋನಿಧಿಯ |
ತೋಯಮಂ ಪೊಕ್ಕು ನಡೆದುವು ಕೂಡೆ ಸಾಗರದ ವಾರಿಯೊಳ್ ಕಾಲಿಡುವೊಡೆ ||
ದಾಯಮಂ ಕಾಣದೆ ಧನಂಜಯಾದಿಗಳದಕು ||
ಪಾಯಮಿನ್ನೇನೆಂದು ಬೆಸಗೊಂಡೊಡಂಬುಜ ದ |
ಳಾಯತಾಕ್ಷಂ ಪೇಳ್ದನಿಂತೆಂದು ನೆರೆದಿರ್ದ ಸಕಲ ಭೂಪಾಲಕರ್ಗೆ ||೨೩||

ಶುಭ್ರವಾಹನ  ಮಯೂರಧ್ವಜ ಪ್ರದ್ಯುಮ್ಮ |
ಬಭ್ರುವಾಹನ ಹಂಸಕೇತು ನೃಪರಿವರೈವ |
ರಭ್ರವಾಹನನಂತೆ ಸರ್ವತ್ರ ಗಮನದ ವರೂಥದ ಮಹಾವೀರರು ||
ವಿಭ್ರಾಜಿಸುವ ಸಮುದ್ರದ ಮೇಲೆ ನಡೆವ ಸುಗ |
ತಿ ಭ್ರಷ್ಟರಲ್ಲೆಂದು ರುಕ್ಮಿಣೀಮುಖಪಂಕ |
ಜ ಭ್ರಮರನಾಪಂಚರಥಿಕರಂ ಕೂಡಿಕೊಂಡಂಬುನಿಧಿಯಂ ಪೊಕ್ಕನು ||೨೪||

ಸಾಗರದ ನಡುವೆ ಕುರ್ವಕೆ ವರ ಹಯಂಗಳತಿ |
ವೇಗದಿಂದೈದಲದರೊಡನೆ ಪಾರ್ಥಾದಿಗಳ್ |
ಪೋಗಿ ಬಕದಾಲ್ಬ್ಯರುಷಿಯಂ ಕಂಡರಲ್ಲಿ ಕಣ್ಣಿವೆಗಳಂ ಮುಚ್ಚಿಕೊಂಡು ||
ಯೋಗದಿಂದಿರುತಿರ್ದನಧ್ರುವದ ಕಾಯಮಂ |
ಸಾಗಿಸಲದೇಕೆಂದು ಕೊಳೆತೊಣಗಿ ಛಿದ್ರಂಗ |
ಳಾದ ಸೆಲದಿಗಳಿಕ್ಕಿದಾಲದೆಲೆಯಂ ತನ್ನತಲೆಮರೆಗೆ ಕುಯ್ಯೊಳಾಂತು ||೨೫||

ಸ್ಯಂದನಂಗಳನಿಳಿದು ವಿನಯದಿಂದೆಚ್ಚರಿಸಿ |
ವಂದಿಸಿದೊಡರ್ಜುನಾದಿಗಳನಾ ಮುನಿವರಂ |
ಕಂದೆರೆದು ಕಂಡು ಪುರುಷೋತ್ತಮಂ ಕ್ಷಣಿಕರಿವರೈವರಂ ಕೂಡಿಕೊಂಡು ||
ಬಂದನೀ ಮಂಡಲದೊಳಿರವಿಲ್ಲ ತನಗಿನ್ನು |
ಮುಂದೆ ಸುಖಮಾಗದಲ್ಪಾಯುಷದೊಳೇಗೈವೆ |
ನೆಂದು ಬಕದಾಲ್ಭ್ಯಋಷಿ ನುಡಿಯೆ ವಿಸ್ಮಿತನಾಗಿ ಫಲುಗುಣಂ ಬೆಸಗೊಂಡನು ||೨೬||

ಮೊಳಕಾಲ್ಗಳೆಡೆಯೊಳುದ್ಭವಿಸಿರ್ದ ಕಿಂಶುಕಂ |
ಗಳ ಮೇಲೆ ಗೂಡಿಕ್ಕಿ ಬಾಳ್ದಪುವು ಪಕ್ಷಿಗಳ |
ಬಳಗಂಗಳೊರಸಿಕೊಂಬುವು ತೀಟೆಗಳನಂಗದೊಳ್ ಬಂದು ಮೃಗತತಿಗಳು ||
ಬಳೆದಿಹವು ಸುತ್ತಲುಂ ಪುತ್ತುಗಳ್ ನಿಮ್ಮತೋ |
ಳ್ಗಳ ಬಳಿಯೊಳಾಡುವುವು ಸರ್ಪಂಗಳಿರಲೊಂದು |
ನಿಳಯಮಂ ಮಾಡದೇತಕೆ ಕಯ್ಯೊಳೀಪತ್ರವೆಂದು ಪಾರ್ಥಂ ಕೇಳ್ದನು ||೨೭||

ಮುನಿ ಕಿರೀಟಿಯ ನುಡಿಗೆ ನಸುನಗುತೆ ದುಃಖ ಭಾ |
ಜನವಲಾ ಸ್ತ್ರೀಪರಿಗ್ರಹಮದಂ ಪೋಷಿಸುವ |
ಮನುಜನೆಣಿಸುವನೆ ಕೃತ್ಯಾಕೃತ್ಯಮಂ ಬಳಿಕ ಮೋಕ್ಷಮೆತ್ತಣದವಂಗೆ ||
ಕನಸಿನ ಸುಖಕ್ಕೆಳಿಸ ಬಿದ್ದಪನಧೋಗತಿಗೆ |
ಜನನ ಮರಣಂಗಳ ಬಳಲ್ಕೆ ಬೆಂಬಿಡದಿಹುದು ||
ವನಿತೆಯರ ತೊಡಕಿಂದೆ ಕೆಡುತಿಹುದು ಲೋಕಮದನೇವಣ್ಣಿಸುವೆನೆಂದನು ||೨೮||

ಮಡದಿ ಮಗ ಮೊಮ್ಮಂದಿರಂ ಸಾಗಿಸುವೆನೆಂತೂ |
ಪೊಡವಿ ಬೆಳಸಾಳ್ಕೆ ಸಿರಿ ಕೀಲಾರಮನೆಗಳಿಸಿ |
ದೊಡವೆಗಳ ನಾರೈವೆನೆಂತೂ ವೇದಾದಿ ಶಾಸ್ತ್ರಂಗಳಂ ಪಠನದಿಂದೆ ||
ಕಡೆಗಾಣಿಸುವೆನೆಂತೂ ತಾನೆಂದು  ಬಾಳುವೆಗೆ |
ಬಿಡದೆ ಚಿಂತಿಸಿ ತಾಪಕೊಳಗಾಗಿ ಧರ್ಮದೊಳ್ |
ನಡೆಯದಾಶಾಪಾದಿಂದೆ ನಂಸಾರದೊಳ್ ಕೆಡುತಿಹುದು ಜಗವೆಂದನು ||೨೯||

ಅಂತಾಗಿ ದಾರಸಂಗ್ರಹ ಪರ್ಣಶಾಲೆಗಳ |
ನಿಂತೊಲ್ಲದಚಿರ ಕಾಲದೊಳಳಿವ ಕಾಯಮಿದ |
ಕೆಂತಿರ್ದೊಡೇನೆಂದು ತಲೆಗೆ ತರಗೆಲೆವಿಡಿದು ತಾಂ ಪೊತ್ತುಗಳೆವೆನೆನಲು ||
ಕುಂತೀಸುತಂ ಮತ್ತೆ ಕೇಳ್ದನಲ್ಪಾಯುಷ |
ಮಂ ತಳೆವುದೀಮಹಾತ್ಮರಿಗೇಕೆ ಶಿವಶಿವಾ ||
ಪಿಂತೇ ಸುದಿನಮಾದುದೆಂದಿನಿಂದೀಪತ್ರವಿಹುದು ಮಸ್ತಕದೊಳೆಂದು ||೩೦||

ಅತ್ಯಲ್ಪರಾಗಿ ಮಾರ್ಕಂಡೇಯ ರೋಮಶರ್ |
ಪ್ರತ್ಯೇಕರಳಿದರಿವರೆನಿಬರೆಂದರಿಯೆ ನಾಂ |
ಸತ್ಯಲೋಕವನಾಳ್ದರಿಪ್ಪತ್ತು ಕಮಲಸಂಭವರಿನಿತರೊಳ್ ಮಡಿದರು ||
ಕ್ಷಿತ್ಯಾದಿಗಳ್ ಜಲಮಯಂಗಳಪ್ಪಂದಾದಿ |
ಪತ್ಯದ ಚತುರ್ವದನರವಸಾನವಾದಂದು |
ನಿತ್ಯಮಾಗಿರವು ಪದವಿಗಳೆಂದು ತಾನಿಲ್ಲಿ ಬಯಲೊಳಿದ್ದಪೆನೆಂದನು ||೩೧||

ಬಾರಿಬಾರಿಗೆ ಜಲಪ್ರಳಯಂಗಳಾಗಲ್ಕೆ |
ಭೂರಿಶಾಖೆಗಳಿಂದೆ ತಳಿತಸೆವುದೊಂದುವಟ |
ಭೂರುಹವದರದೊಂದೆಲೆಯಮೇಲೆ ತನ್ನ ಮೃದು ಪದಕಮಲದುಂಗುಟವನು ||
ಚಾರುತರ ಕರ ತಾಮರಸದಿಂದೆ ಪಿಡಿದು ವದ |
ನಾರವಿಂದದೊಳಿಟ್ಟು ನಗುತಳುತೆ ಲೀಲೆಯಿಂ ||
ದೋರಂತೆ ಮಲಗಿಕೊಂಡಿಹನೋರ್ವಬಾಲಕಂ ತಾನಾತನಂ ಕಂಡೆನು ||೩೨||

ಅಂದು ಸಲಿಲದೊಳಾಳ್ದತನಗಾಲದೆಲೆಯಮೇ |
ಲೊಂದೊಂದುಬಾರಿ ಬಾಲಕನಾಗಿ ಮೈದೋರಿ |
ನಿಂದು ಮಾತಾಡಿಸದೆ ನೋಡದೆ ವಿಚಾರಿಸದೆ ದೂರದೂರದೊಳಿರ್ಪನು ||
ಇಂದು ನಿಮೈವರಂ ಕೂಡಿಕೊಂಡಿಲ್ಲಿಗೈ |
ತಂದು ಕರುಣಿಸಿದನೀಹರಿ ಕೃಷ್ಣರೂಪದಿಂ |
ಸಂದುದಿನ್ನೀತನೆ ಸದಾಶ್ರಯಂ ಮರೆವುಗುವೊಡೆನಗೆಂದು ಮುನಿ ನುಡಿದನು ||೩೩||

ಬಕದಾಲ್ಭ್ಯಮಿನಿ ಬಳಿಕ ಕೃಷ್ಣನಂ ನೋಡಿ ಬಾ |
ಲಕನಾದ ರೂಪಮಂ ವಟಪತ್ರಶಯನದೊಳ್ |
ಸಕಲ ಜಗಮಳಿವಂದು ತನಗೆ ಕಾಣಿಸಿದೆಯಲ್ಲದೆ ರಮಾರಮಣನಾಗಿ ||
ಪ್ರಕಟಿತದ ಧಮಾ ಸಂತತಿಗಳಂ ಪಾಲಿಸುವ |
ಸುಕುಮಾರ ಮೂರ್ತಿಯಂ ಕೃಷೆಯಿಂದೆ ನಿನ್ನ ಸೇ |
ವಕ ಜನಕೆ ತೋರುವಂತೆನಗೆ ತೋರಿದುದಿಲ್ಲ ತಾನಿನ್ನು ಬಿಡೆನೆಂದನು ||೩೪||

ಜನಪ ಕೇಳಿಂತೆಂದು ಹರ್ಷದಿಂ ಬಕದಾಲ್ಭ್ಯ |
ಮುನಿ ಬಂದು ಕೃಷ್ಣನಂ ತಕ್ಕೈಸಿ ಮತ್ತೆ ಪಾ |
ರ್ಥನ ಕೂಡೆ ಪೇಳ್ದಂ ಸದಾವಾಸಕೀಹರಿಯ ದೇಹವಿದು ಗೇಹಮೆನಗೆ ||
ಅನುಕೂಲೆಯಾದ ಸತಿ ಮುಕ್ತಿಯಲ್ಲದೆ ಬೇರೆ |
ಮನೆಯಿಲ್ಲ ಮಡದಿಯಿಲ್ಲದಕಾಗಿ ತಾನೀಸು |
ದಿನಮಿಲ್ಲಿ ತಲೆಗೆ ತರಗೆಲೆವಿಡಿದುಕೊಂಡಿರ್ದೆನೆನಲರ್ಜುನಂ ನುಡಿದನು ||೩೫||

ಇಪ್ಪತ್ತು ಕಮಲಜರ ಬಾಳ್ಕೆಯಂ ಕಂಡ ನಿಮ |
ಗೊಪ್ಪದೆ ಗುರುತ್ವಂ ಮಹಾಪುರಷರೀಸುದಿನ |
ಮಿಪ್ಪುದಚ್ಚರಿಯಲಾ ಶಿವಶಿವಾ ನೀವೆ ನಮ್ಮೆಲ್ಲರ್ಗೆ ಪೂಜ್ಯರೆಂದು ||
ತಪ್ಪನೀಕ್ಷಿಸಲಾಗದರಸನ  ಮಖಂ  ಸಫಲ |
ಮುಪ್ಪುದಿನ್ನೆಂದು ನರನಭಿವಂದಿಸಲ್ಕೆ ನಮ |
ಗರ್ಪ್ಪಿಸದಿರೊಂದು ಗರ್ವದ ಭಾವಮಂ ಕೃಷ್ಣನಿರಲೆಂದು ಮುನಿ ನುಡಿದನು ||೩೬||

ಸರ್ವವೇದದ ಮೂಲನೀ ಕೃಷ್ಣ ನಾವಂಗೆ |
ಗರ್ವಮಿನ್ನೆಲೆ ಪಾರ್ಥ ಕೇಳಾದೊಡೀ ಕಡಲ |
ಕುರ್ವದೊಳ್ ಗಾನಿರುತಿರಲ್ಮಹಾ ಕಲ್ಪದೊಳ್ ಪದ್ಮಾಭಿಧಾನದಿಂದೆ ||
ಉರ್ವನಾಲ್ವತ್ತನೆಯ ವಾರುಷಿಕನಾಗಿಹ ಚ |
ತುರ್ವದನನಿಲ್ಲಿಗೆ ಮರಾಳವಾಹನದೊಳ |
ಕ್ಕರ್ವೆರಸಿ ಬಂದೆನ್ನ ಮುಂದೆ ನಿಂದಾಗಳಧ್ಯಕ್ಷತೆಯೊಳಿಂತೆಂದನು ||೩೭||

ಎಲೆವಿಪ್ರ ನೀನಾರದೇತಕೀ ಪರ್ಣಮಂ |
ತಲೆಗೆ ಪಿಡಿದಿಹೆ ಘೋರತಪಮೇಕದಂ ಬಯಕೆ |
ಸಲೆ ಮೆಚ್ಚಿ ಬಂದೆನಾ ಕಮಲಜನುಸಿರ್ದೊಡಿತ್ತವೆನೀಗ ವರವನೆನಲು ||
ತೊಲಗತ್ತ ಸಾರ್ ನಿನ್ನತೆರದ ನಾಲ್ಮೊಗದರಂ |
ಪಲಬರಂ ಕಂಡರಿವೆನೆಗೀವುದಂ ಮತ್ತೆ |
ಕೆಲಬರ್ಗೆ ಕೊಟ್ಟು ಕಳೆ ಪೋಗೆಂದು ನಾನೆಂದೆನಾ ಪದ್ಮಸಂಭವನೊಳು ||೩೮||

ಆನೆಂದುದಂ ಕೇಳ್ದು ಗರ್ವದಿಂದಾ ಪದ್ಮ |
ಸೂನು ತೋರಿಸು ತನ್ನ ತೆರದ ನಾಲ್ಮೊಗದರಂ |
ನೀನೆಂದು ಪೇಳ್ವನ್ನೆಗಂ ಬಂದುದೊಂದು ಸುಳಿಗಾಳಿ ಧರೆ ನಡುಗುವಂತೆ ||
ನಾನಾಧ್ರುಮಂಗಳಂ ಕಿತ್ತೆತ್ತಿ ಮಿಗೆ ವಿರ್ದು |
ಬಾನೆಡೆಗೆ ನಮ್ಮಿರ್ವರಂ ಕೊಡಡರ್ದುದದ ||
ನೇನೆಂಬೆನದ್ಬುತವನೆಲೆ ಪಾರ್ಥ ತೊಳಸಿತಜಾಂಡ ಶತಕೋಟಿಗಳನು ||೩೯||

ತೀವಿದೌದುಂಬರ ದ್ರುಮದ ಫಲದಂತೆ ರಾ |
ಜೀವ ನಾಭನ ಮೆಯ್ಯೊಳಿಡಿದಿಹವಜಾಂಡಂಗ |
ಳಾ ವಾಯುವಶದಿಂದೆ ತೊಳಲಿದೆವು ಪೊಕ್ಕೆ ವೊಂದರೊಳಷ್ಟಮುಖವಿರಿಂಚಿ ||
ಜೀವಜಾಲದ ಸೃಷ್ಟಿಗೊಡೆಯನಾಗಿರ್ದವನು |
ನಾವಿರ್ವರುಂ ಬರಲ್ ಕಂಡು ವಿಸ್ಮಿತನಾಗಿ |
ನೀವದಾರೆತ್ತಣಿಂದೈದಿದಿರಿ ನಿಮ್ಮ ಪೆಸರೇನೆಂದು ಬೆಸಗೊಂಡನು ||೪೦||

*ಚತುರಾಸ್ಯನಾ ಸತ್ಯಲೋಕದಿಂ ಬಂದೆನೀ |
ವ್ರತಿ ಶಿಷ್ಯನೆನಗೆ ಬಕದಾಲ್ಭ್ಯನೆಂಬವನೆಂದು |
ಶತಪತ್ರಜಂ ಪೇಳ್ದೊಡಪಹಾಸಮಂ ಮಾಡುತಷ್ಟವದನದ ವಿರಿಂಚಿ |
ಅತಿಗರ್ವಭಾವದಿಂ ನೀನಜಂ ಶಿಷ್ಯನಿವ |
ನತುಳರೈ ಗುರು ಶಿಷ್ಯರಿರ್ವರುಂ ನಿಮ್ಮ ಸಂ |
ಸ್ಕೃತಿಗೆ ಶೌಚಕ ಸಲಿಲದೂಳಿಗದ ವಟುಗಳಿಹರೆಮ್ಮೊಳ್ ಕೆಲಬರೆಂದನು ||೪೧||

ಇನಿತು ಗರ್ವದೊಳಷ್ಟವದನದ ವಿರಿಂಚಿ ನುಡಿ |
ವನಿತರೊಳ್ ಪೊರೆಯೊಳಿಹ ನಾವು ಸಹಿತಾತನಂ |
ಫನ ರಭಸದಿಂದೆ ಸುಳಿಗಾಳಿ ಕೊಂಡೊಯ್ದುದಾಗಸತಿಕಠೋರದಿಂದೆ ||
ಅನಿಲವಶದೊಳ್ ಪೋಗಿ ಮೂವರುಂ ಮತ್ತೊಂದು |
ವನಜಭವಲೋಕಮಂ ಕಂಡೆವಲ್ಲಿಯ ಪುಣ್ಯ |
ಜನರೆಮ್ಮ ನೆತ್ತಣ ವಿಕಾರಿಗಳ್ ನೀವೆಂದು ನಗುತೆ ಕೊಂಡಾಡಿಸಿದರು ||೪೨||

ಅಲ್ಲಿ ಷೋಡಸಮುಖದ ಬೊಮ್ಮನಂ ಕಂಡವನ |
ಮೆಲ್ಲಡಿಗೆ ಸಮಿಸೆ ಗರ್ವದೊಳವಂ ನುಡಿಸದಿರೆ |
ತಲ್ಲಣಿಸಿ ನಾವಂಜಲವನ ಪೊರೆಯವರೆಮ್ಮ ನಾರೆಂದು ಬೆಸಗೊಳಲ್ಕೆ ||
ಬಲ್ಲೊಡಷ್ಟಾನನ  ಚತುರ್ವದನ ಬಕದಾಲ್ಭ್ಯ |
ರಿಲ್ಲಿಗರಿಯದೆ ಬಂದೆವಂದು ನಾವುಸಿರಲ್ಲೆ |
ಮಲ್ಲಿಗೆಯಲರ್ಗೆದರಿಂದಂತಟ್ಟ ಹಾಸದಿಂ ನಗುತಿರ್ದನಾ ವಿರಿಂಚಿ ||೪೩||

ಈ ವಿರಿಂಚಿಗಳನೀಕ್ಷಿಸಿ ತನ್ನ ಮಹಿಮೆಯನ |
ದೇವಣ್ಣಿಸುವೆನೆಂದು ಕೆಲದವರೊಳಾಡುವ ಕ |
ಲಾವಕ್ತ್ರನಂ ಮತ್ತೆ ಸುಳಿಗಾಳಿ ಕೊಂಡಡರ್ದುದು ನಭಸ್ಥಳಕ ಬಳಿಕ ||
ಮೂವತ್ತೆರಡು ಮೊಗದ ಕಮಲಜನ ಲೋಕಮಂ |
ನಾವು  ತಲೆಕೆಳಗಾಗಿ ನಾಲ್ವರುಂ ಪುಗಲೆಮ್ಮ |
ನಾ ವಿಧಾತ್ರಂ ಕಂಡು  ಕರುಣದಿಂದ ಕೇಳ್ದೊಡಾವಿನಿತೆಲ್ಲಮಂ ಪೇಳ್ದೆವು ||೪೪||

ಏತಕೈತಂದಿರಿಲ್ಲಿಗೆ ರವಿಯ ಮುಂದೆ ಖ |
ದ್ಯೋತಂಗಳೆಸೆದಪುನೆ ತನಗೆ ಸರಿಯಾರೆಂಬ |
ಮಾತು ಮುಗಿಯದ ಮುನ್ನ ಕೊಂಡೆದ್ದುದಾವರ್ತ ಮಾರುತಂ ನಾವು ಬಳಿಕ ||
ಆತನಂ ಕೂಡಿಕೊಂಡರುವತ್ತುನಾಲ್ಕು ಮುಖ |
ದಾತನಂ ಕಂಡೆವಾತನ ಗರ್ವದಿಂದೆ ಮುಂ |
ದೀತೆರದೊಳಿಮ್ಮಡಿಸಿದಾಸ್ಯದ ವಿರಿಂಚಿಗಳ ಲೋಕಂಗಳಂ ಕಂಡೆವು ||೪೫||

ತೊಳಲಿದೆವು ಪಾರ್ಥ ಕೇಳಿಂತು ನಾವೆಲ್ಲರುಂ |
ಬಳಿಕ ಸಾವಿರ ಮೊಗದೊಳೆಸೆವ ಪರಮೇಷ್ಠಿಯಂ |
ಬಳಸಿದ ಸಮಸ್ತ ಸುರಮುನಿಗಳ ಪೊಗಳ್ವ ಸನಕಾದಿಗಳ ಗಡಣದೊಡನೆ ||
ನಳಿನಸಖ ಶತಕೋಟಿ ತೇಜದಿಂ ತೊಳತೊಳಗಿ |
ಬೆಳಗುತಿರಲಾವಿನಿಬರುಂ ಪೋಗಿ ಕಾಣಲ್ಕೆ |
ಬಳಲಿದಿರಿದೇಕೆ ಬಂದಿರಿ ನಿಮ್ಮ ಕರುಣದಿಂದಿಹೆನೆಂದು ಸೈತಿಟ್ಟನು ||೪೬||

ನಿಮ್ಮ ದೆಸೆಯಿಂದೈಸಲೇ ತನಗೆ ಸಂತತಂ |
ಸುಮ್ಮಾನ ಮಹುದೆಂದು ಮಿಗೆ ಸುಪ್ರಸನ್ನತೆಯೊ |
ಳೆಮ್ಮನೆಲ್ಲರನಾದರಿಸಿ ನಿಗರ್ವಿಕೆಯಿಂ ಸಹಸ್ರ ವದನಂ ಕಳುಹಲು ||
ಹೆಮ್ಮೆಗಳ ನುಳಿದು ವಿಸ್ಮಿತರಾದರವರನ್ನೆ |
ಗಂ ಮೊದಲದೆಂತಿರುತಿರ್ದರಂತೆ ಕನಸೆನಲ್ ತೋರ್ಪ |
ತಮ್ಮ ಲೋಕಂಗಳಿಗೆ ಬಂದಿರ್ದರಾನೆಂದಿನವೊಲಿರ್ದೆ ನೀಕಡಲೊಳು ||೪೭||

ಅದರಿಂದೆ ಕೋವಿದರ್ ಗರ್ವಮಂ ಮಾಡಲಾ |
ಗದು ಪಾರ್ಥ ತಾನಂದು ಸಂಧಿಸಿದ ಸಾಸಿರಮೊ |
ಗದ ಪುರುಷನೀತನಲ್ಲವೆ ಕೃಷ್ಣರೂಪದಿಂ ಕಾಣಿಸುವನೀ ಜಗದೊಳು ||
ಉದದಿ ಮಧ್ಯದೊಳಿನ್ನೆಗಂ ಭಜಿಸುತಿರ್ದೊಡಾ |
ದುದು ಸಫಲಮೆಂದು ಬಕದಾಲ್ಭ್ಯಮಿನಿ ನುಡಿಯಲ್ಕೆ |
ಮುದದಿಂದೆ ಕೇಳ್ದು ವಿಸ್ಮಿತರಾಗಿ ಸಂಭಾವಿಸಿದರರ್ಜುನಾದಿ ನೃಪರು || ೪೮||

ಶ್ರೀಕಮಲಲೋಚನಂ ಬಕದಾಲ್ಭ್ಯನಂ ಬಳಿಕ |
ಭೂಕಾಂತನಧ್ವರಕೆ ನೀವು ಬಿಜಯಂಗೈಯ |
ಬೇಕೆಂದೊಡಂಬಡಿಸಿ ವಾಜಿಸಹಿತಂಬುಧಿಯ ತಡಿಗೆ ಬಂದಾ ಋಷಿಯನು ||
ಲೋಕಮರಿಯಲ್ಕೆ ಶಿಬಿಕಾರೋಹಣಂಗೈಸ |
ಲಾಕುದುರೆಗಳ್ ತಿರುಗಿ ಸಿಂಧುದೇಶಕೆ ಬರಲ |
ನೇಕ ಪೃಥ್ವೀಪಾಲರೊಡನೆ ಕೃಷ್ಣಾರ್ಜುನರ್ ನಡೆತಂದರುತ್ಸವದೊಳು ||೪೯||

ಪೃಥಿವೀಂದ್ರ ಕೇಳ್ ಸಿಂದೂದೇಶದೊಳೆಸೆವ ಜಯ |
ದ್ರಥನ ಪಟ್ಟಣಕೆ ನಡೆತಂದರರ್ಜುನ ದೈತ್ಯ |
ಮಥನರೀ ವಾರ್ತೆಯಂ ಕೇಳ್ದನತಿಬಾಲನಾಗಿಹ ದುಶ್ಯಳೆಯ ತನುಜನು ||
ವ್ಯಥಿಸಿ ಮೈಮರೆದನೋಲಗದ ಮಂತ್ರಿಗಳೆಣಿಕೆ |
ಶಿಥಿಲಮಾದುದು ಪುರಂ ತಲ್ಲಣಿಸುತಿರ್ದುದೀ |
ಕಥನಮಂ ಧೃತರಾಷ್ಟ್ರಸುತೆಗರಿಪಲಿದಿರಾಗಿ ಪೊರಮಟ್ಟಳುರೆ ಬೆದರ್ದು ||೫೦||

ಎಲ್ಲ ಬಹನರ್ಜುನನ ರಥದಮೇಲಸುರಹರ |
ನಲ್ಲಗೈತಂದು ಚೀರಿದಳೆಲೆ ಜಗನ್ನಾಥ |
ಮಲ್ಲ ಮರ್ದನ ಮಾನಿನಿಯ ಮೊರೆಯಲಾಲಿಸಂಧಿ ಸವ್ಯಸಾಚಿ ತನ್ನ ||
ವಲ್ಲಭನ ಪಗೆಯೆಂದು ಕೊಂದ ನಿಹುದೊಂದು ಶಿಶು |
ತಲ್ಲಣಿಸುತಿದೆ ಕಾಯಬೇಕೆನೆ ಧನಂಜಯಂ |
ನಿಲ್ಲದೆ ಮರೂಥದಿಂದಿಳಿದು ಬಂದಾಕೆಗಭಿನಮಿಸಿ ಬಳಿಕಿಂತೆಂದನು ||೫೧||

ತಾಯೆ ಪಗೆಗೊಂಡು ನಾ ನಿನಗಂದು ಮಾಡಿದ |
ನ್ಯಾಯಮಂ ಸೈರಿಪುದು ನಿನ್ನ ತನುಜಾತನಂ |
ನೋಯಿಸುವನಲ್ಲ ರಾಜ್ಯವನಗಣಿತಾಶ್ವ ಮದಕರಿಗಳಂ ಕೊಟ್ಟು ನಿನಗೆ ||
ರಾಯನ ಮಹಾಧ್ವರಕೆ ಕೂಡಿಕೊಂಡೊಯ್ವೆನೆನ |
ಲಾಯತಾಂಬಕಿ ಮತ್ತೆ ಶೋಕವಿಮ್ಮಡಿಸೆ ನಾ |
ರಾಯಣನ ಪದ ಕಮಲದೊಳ್ ಪೊರಳಿ ಕಡಲಿಡುವ ಕಂಬನಿಯೊಳಿಂತೆಂದಳು ||೫೨||

ಪ್ರಾಣಿಗಳ ಹೃದಯದೊಳ್ ದೇವ ನೀನಿರ್ಪುದಂ |
ಮಾಣಿಸುವೆ ನತರ ದುಃಖಾಕುಲವನೆಂಬುದಂ |
ಕಾಣಿಸದೆ ದ್ರೌಪದಿಯ ಮಾನವಂ ಕಾಯ್ದಂದು ಶೋಕಾಗ್ನಿ ಸುಡವುದೆಂದು ||
ಮೇಣಿದಂ ಬಿನ್ನೈಸಲೇಕಿನ್ನು ಸಲೆ ಸುಖ |
ಶ್ರೇಣಿಯಂ ನೆನೆದ ಮಾತ್ರದೊಳೀವೆ ನಿನ್ನ ಕ |
ಲ್ಯಾಣ ಮೂರ್ತಿಯ ದರ್ಶನದೊಳಾಂ ಕೃತಾರ್ಥೆಯಲ್ಲವೆ ಸಲಹಬೇಕೆಂದಳು ||೫೩||

ದೇವ ತನಗೊಡಹುಟ್ಟಿದವಳೆಂದು ನರನೆನ್ನ |
ನಾವ ತೆರದಿಂ ಕರೆವನದ್ವರಕೆ ಬರಲಪ್ಪು |
ದೇ ವಿಧವೆ ಹಯ ಹಸ್ತಿಗಳ ನಿತ್ತೊಡಾಳ್ವರಾರ್ ಪತಿಪುತ್ರರಿಲ್ಲ  ತನಗೆ ||
ಕಾವುದತಿಬಾಲನಾಗಿಹ ಶಿಶುವನೆಂದು ನಾ |
ನಾ ವಿಧದ ಶೋಕದಿ ನಳಲ್ವ ದುಶ್ಯಳೆಯಂ ಕೃ |
ಪಾವನಧಿ ಪಿಡಿದೆತ್ತಿ ಸಂತವಿಸಿ ನಗರಮಂ ಪೊಕ್ಕಂ ಕಿರಿಟ ಸಹಿತ ||೫೪||

ಬಳಿಕ ದುಶ್ಯಳೆ ಕಾಣಿಸಿದೊಡಾ  ಕುಮಾರಂಗೆ |
ನಳಿನಾಕ್ಷನಭಯಮಂ ಕೊಟ್ಟು ಸಂತೈಸಿ ಕರ |
ತಳದಿಂದೆ ಮೈದಡವಿದಂ ಕೂಡೆ ಕಂಡುದು ಸಮಸ್ತಜನಮಘರಿಪುವನು ||
ಪೊಳಲೊಳ್ ನೆಗಳ್ದುವುತ್ಸವದ ಗುಡಿ ತೋರಣಂ |
ಮೊಳಗಿದುವು ವಿವಿಧ ವಾದ್ಯಧ್ವನಿಗಳಾಗ ಮಂ |
ಗಳ ನೃತ್ತ ಗೀತಂಗಳೆಸಗಿದುವು ಹರಿ ಪಾರ್ಥರಲ್ಲಿ ಸತ್ಕೃತರಾದರು ||೫೫||

ಮರುಗಿ ಕಂಬನಿದುಂಬಿ ಮಾಡಿದ ವಿಘಾತಿಯಂ |
ಮರೆದು ಸುತನಂ ಕೂಡಿಕೊಂಡು ನೃಪನಧ್ವರಕೆ |
ಪೊರಮಟ್ಟು ಬಂದು ಕಾಂಬುದು ಕುಂತಿದೇವಿ ಪಾಂಚಾಲತನುಜೆಯರನೆಂದು ||
ನೆರೆ ನರಂ ಸಂತೈಸೆ ಬಳಿಕ ದುಶ್ಯಳೆ ಶೌರಿ ||
ಗೆರಗಿ ಭಕ್ತರ ಬೆಳವಿಗೆಗಳ ನೊಸೆದಾವಾವ |
ತೆರದಿಂದೆ ಮಾಡುವಂತೆನ್ನನುದ್ಧರಿಸೆಂದು ನಿರ್ಗಮನಕನುವಾದಳು ||೫೬||

ಸುವಸ್ತುಸಹಿತಾಕೆಯಂ ಕೂಡಿಕೊಂ |
ಡೆಲ್ಲಾಮಹೀಶ್ವರ್ ವೆರಸಿ ಗಜಪುರಕಾಗಿ |
ನಿಲ್ಲದೈತಂದು ಯೋಜನಮಾತ್ರದೊಳ್ ನಿಂದು ವತ್ಸರಂ ತುಂಬಿತೆಂದು ||
ಉಲ್ಲಾಸದಿಂ ಕಿರೀಟಿಗೆ ನಿರೂಪಿಸಿ ತಾನೆ |
ಸಲ್ಲಲಿತ ಹರಿಗಳಂ ಪಿಡಿದು ಕಟ್ಟಿದ ನಿಳಾ |
ವಲ್ಲಭರ ಮುಂದೆ ಕಾರುಣ್ಯದಿಂ ದೇವನಗರೀಶ ಲಕ್ಷ್ಮೀಕಾಂತನು ||೫೭||