ರೇಡಿಯೋದಲ್ಲಿ ಕೃಷಿರಂಗ ಕಾರ್ಯಕ್ರಮದಲ್ಲಿ ಮಾಮೂಲಿಯಾಗಿ ಇಲಿ ಕೊಲ್ಲುವ ತಂತ್ರದ ಬಗೆಗೆ ಮಾಹಿತಿ ಬಿತ್ತರವಾಗುತ್ತದೆ. ಬಿಲದ ಸನಿಹ ವಿಷದ ಉಂಡೆಗಳನ್ನು ಇಟ್ಟು ಇಲಿ ಕೊಲ್ಲುವ ಉಪಾಯ ಅದು. ಹೊಲ, ಮನೆ, ತೋಟಗಳಲ್ಲಿ ನಿಯಂತ್ರಿಸುವ ವಿವಿಧ ವಿಧಾನಗಳ ಬಗೆಗೆ ಮಾಧ್ಯಮಗಳಂತೂ ಇಂತಹ ಸಾಕಷ್ಟು ಜಾಗೃತಿಯ ಕೆಲಸ ಮಾಡುತ್ತಿವೆ. ಅಸ್ತ್ರಗಳಿಗೆ ಪ್ರತಿ ತಂತ್ರ ಮಾಡಿದಂತೆ ಇಲಿ ಬಾಚಾವಾಗಿ ಬದುಕಿ ಸಂಸಾರ ಬೆಳೆಸುತ್ತದೆ. ಸುಗ್ಗಿಯ ಹೊತ್ತಿಗೆ ತೆನೆ ಕತ್ತರಿಸಿ ಕಾಳು ಸಂಗ್ರಹಿಸುವದು ಬದುಕಿನ ಜಾಣ್ಮೆ. ದಿನಕ್ಕೆ ಅಷ್ಟಷ್ಟು ಕಾಳು ಎಗರಿಸುತ್ತಲೇ ಮಕ್ಕಳು, ಮರಿಮಕ್ಕಳ ಭೂಗತ ಸಂಸಾರ ವೃದ್ಧಿಯಾಗುತ್ತದೆ. ಎಂತಹ ಭದ್ರತೆಯಿದ್ದರೂ ಕಳ್ಳಕಿಂಡಿ ಕೊರೆದು ಕಾಳು ಕದಿಯುವ ವಿದ್ಯೆ ಇವಕ್ಕೆ ಗೊತ್ತು.  ರೈತ ಬೆಳೆದ ಕಾಳುಗಳಲ್ಲಿ ಶೇಕಡಾ ೧೦ಕ್ಕಿಂತ ಹೆಚ್ಚು ಭಾಗ ಇಂತಹ ಜೀವಿಗಳ ಹೊಟ್ಟೆ ಸೇರುತ್ತದೆ !

ಬೆಳೆದ ಧಾನ್ಯ ಬಚಾವು ಮಾಡುವದು ಕಾಳು ಬೆಳೆದಷ್ಟೇ ಮಹತ್ವವಾದುದು. ಇದಕ್ಕೆ  ಸರಕಾರ ಆಹಾರ ಧಾನ್ಯ ಸಂರಕ್ಷಣಾ ಆಂದೋಲನವನ್ನು  ಕೃಷಿ ಇಲಾಖೆಯ ನೇತ್ರತ್ವದಲ್ಲಿ ನಡೆಸುತ್ತಿದೆ. ಧಾನ್ಯ ರಕ್ಷಣೆಗೆ ಸುಧಾರಿತ ಕಣಜ ನಿರ್ಮಿಸಲು ರೈತರಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ ವರ್ಷ ಆಯ್ದ ರೈತರಿಗೆ ಇಲಿ ಬೋನುಗಳನ್ನು ಉಚಿತವಾಗಿ ನೀಡುವ ಯೋಜನೆಗಳಿವೆ! ಕರಪತ್ರ, ತರಬೇತಿ ಮುಖೇನ ಇಲಿ ವಿರುದ್ದ ಕಾರ್ಯಾಚರಣೆಗೆ ಆಡಳಿತ ಯಂತ್ರ ಬಜೆಟ್ ಹಣ ಖರ್ಚು ಮಾಡುತ್ತದೆ. ಆದರೆ ನಮ್ಮ ರೈತರಿಗೆ ಮನೆ ಇಲಿ ನಿಯಂತ್ರಿಸುವಲ್ಲಿ ಇರುವ ಕಾಳಜಿ ಹೊಲಗಳಲ್ಲಿ ಇರುವದಿಲ್ಲ. ಬೆಕ್ಕು ಸಾಕುವದು ಎಲ್ಲರಿಗೂ ತಿಳಿದ ಸರಳ ವಿದ್ಯೆ. ಕೇರೆ ಹಾವುಗಳಿಂದ ನಿಯಂತ್ರಣ ನಡೆಯುತ್ತದೆ. ಆಹಾರ ಸರಪಳಿಯ ಜೀವಲೋಕದ ಸರಳ ತಂತ್ರಗಳನ್ನು  ಪರಿಣಾಮಕಾರಿಯಾಗಿ ಆಹಾರ ಧಾನ್ಯ ಉಳಿಸಲು ರೈತರು ದಾರಿ ಹುಡುಕಿದ ಸೋಜಿಗವಿದೆ. ಗೂಬೆಗಳು ಇಲಿ ನಿಯಂತ್ರಣ ಮಾಡುತ್ತದೆಂದು ಇವುಗಳನ್ನು ಸಾಕಿ ಚೈನಾದಲ್ಲಿ ಇಲಿ ನಿಯಂತ್ರಿಸುವ ಯತ್ನ ನಡೆದಿದೆ! ಅಪಶಕುನದ ಖ್ಯಾತಿಯ ಗೂಬೆಗೆ ಸಂರಕ್ಷಣೆಯ ಯೋಗ ಈ ಕಾರಣಕ್ಕಾದರೂ ಪ್ರಾಪ್ತವಾಗಿದ್ದು  ಖುಷಿಯ ಸಂಗತಿ. ನಮ್ಮ ಮಲೆನಾಡಿನಲ್ಲಿ ಭತ್ತದ ಗದ್ದೆಗಳಲ್ಲಿ ತೂಬರು(ಬೀಡಿ ಎಲೆ) ಗಿಡದ ಗೂಟ ಊರುವ ವಿಶಿಷ್ಟ ಪದ್ದತಿ  ಇದೆ. ರಾತ್ರಿ ‘ಗೂಟದ ಮೇಲೆ ಗುಮ್ಮ(ಗೂಬೆ) ಕೂಡ್ರುತ್ತದೆ, ಅದು ಇಲಿ ಹಿಡಿಯುತ್ತದೆ’ ಎಂದು ರೈತರು ವಿವರಿಸಿದ್ದರು. ಇದನ್ನು ‘ಗುಮ್ಮನ ಗೂಟ’ ಎಂದೇ ಕರೆಯಲಾಗುತ್ತಿತ್ತು.

 

ಭತ್ತದ ಗದ್ದೆಗಳಲ್ಲಿ ಬೇಸಿಗೆಯಲ್ಲಿ ಕೇರೆ ಹಾವುಗಳು ಸಾಕಷ್ಟು ಇರುತ್ತಿದ್ದವು. ನಾವು ಚಿಕ್ಕವರಿದ್ದಾಗ ದಿನದಲ್ಲಿ ಹತ್ತಾರು ಸಾರಿ ಗದ್ದೆ ಬಯಲಲ್ಲಿ ಹಾವು ನೋಡುತ್ತಿದ್ದರಿಂದ ಅದು ನಮ್ಮ ಸಾಕುಪ್ರಾಣಿಯಂತೆ ಭಾವಿಸಿದ್ದೆವು. ಸುಮಾರು ೨೦ ವರ್ಷದ ಹಿಂದೆ ಹಾವುಗೊಲ್ಲರು ಈ ಹಾವು ಹಿಡಿದು ಗದ್ದೆ ಬಯಲಲ್ಲಿ ಚರ್ಮ ಸುಲಿದು ಒಯ್ಯುತ್ತಿದ್ದ ದೃಶ್ಯಗಳು ಕಣ್ಣಿಗೆ ಕಟ್ಟಿದಂತೆ ಇವೆ. ಹಣ ಇಡುವ ಪುಟ್ಟ ಪರ್ಸುಗಳ ತಯಾರಿಕೆಗೆ ಈ ಚರ್ಮ ಬಳಕೆಯಾಗುತ್ತದೆಂದು ಹೇಳುತ್ತಿದ್ದರು. ಅಡಿಕೆ ತೋಟ, ಭತ್ತದ ಗದ್ದೆಗಳ ಒಡನಾಡಿಯಾದ ಕೇರೆಹಾವು ಕಡಿಮೆಯಾದಂತೆ ಇಲಿ ಮೇಳಕ್ಕೆ ರಂಗು ಬಂದಿತು. ಇಲಿ ನಿಯಂತ್ರಿಸುವ ಸರಕಾರಿ ಖರ್ಚಿಗೆ  ಅದು ರಹದಾರಿಯಾಯಿತು.

ಬಿಹಾರದ ಇಲಿ ಕತೆ ಸ್ವಾರಸ್ಯಕರವಾಗಿದೆ. ಅಲ್ಲಿನ ಸರಕಾರದ ಪರಿಶಿಷ್ಟ ಜಾತಿ / ಪಂಗಡಗಳ ಕಲ್ಯಾಣ ಸಚಿವ ಜಿತಿನ್ ರಾಮ್ ಮಂಜ್ಯಿ ಹೊಟೆಲ್‌ಗಳಲ್ಲಿ ಇಲಿ ಮಾಂಸ ಬಳಕೆ ಉತ್ತೇಜನಕ್ಕೆ ವಿಶೇಷ ಯೋಜನೆ ರೂಪಿಸಿದ್ದಾರಂತೆ! ಚಿಕನ್,ಮಟನ್‌ಗಳಂತೆ ಹುರಿದ ಇಲಿಮಾಂಸ ಮಾರುಕಟ್ಟೆಗೆ ತರುವ ಪ್ರಯತ್ನ ಅದು. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್‌ಗಳಲ್ಲಿ ಮುಷಾರಾಸ್ ಎಂಬ ಸಮುದಾಯ ಇಲಿ ತಿನ್ನುತ್ತದೆ. ಬಿಹಾರ್‌ದಲ್ಲಿ ಈ ಸಮುದಾಯದ ೨೫ ಲಕ್ಷ ಜನರಿದ್ದಾರೆ. ಈಗ ಇಲಿ ಮಾಂಸ ಕಿಲೋಗೆ ೧೦ ರೂಪಾಯಿಯಂತೆ ಮಾರಾಟವಾಗುತ್ತಿದೆ. ಬಳಕೆ ಇನ್ನಷ್ಟು ಜಾಸ್ತಿಯಾದರೆ ಬೆಲೆ ೧೦೦ ರೂಪಾಯಿ ಆಗುತ್ತದೆ. ಇದರಿಂದ ಇಲಿ ಬೇಟೆಯಲ್ಲಿ ಪರಿಣಿತವಾದ ಜನಾಂಗದ ಆರ್ಥಿಕ ಶಕ್ತಿ ಉತ್ತಮವಾಗುತ್ತದೆ ಎಂದು ಅಂದಾಜಿಸಲಾಗಿದೆ.

‘ ನಾನು ಬಾಲ್ಯದಿಂದಲೂ ಇಲಿ ಮಾಂಸ ತಿನ್ನುತ್ತಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದೆ’ ಬಿಹಾರ ಸಚಿವ ಜಿತಿನ್‌ರಾಮ್ ಜಾಹೀರಾತಿನಂತೆ ಪತ್ರಿಕಾ ಹೇಳಿಕೆ ನೀಡಿದ್ದಾರೆ! ಆಹಾರ ಸೇವನೆಯಿಂದಾಗುವ ಲಾಭ ಪಟ್ಟಿಮಾಡಿದ್ದಾರೆ, ವೈಜ್ಞಾನಿಕ ಸಂಶೋಧನಾ ವರದಿ ಸಿದ್ದಗೊಳಿಸಲು ಸೂಚಿಸಿದ್ದಾರೆ. ಕೋಳಿ, ಕುರಿ ಸಾಕಣೆ ಮಾದರಿಯಲ್ಲಿ ಇಲಿ ಸಾಕಣೆ ಸ್ವಯಂ ಉದ್ಯೋಗವಾಗಿಸುವ ಉದ್ದೇಶ ಅವರದು. ಇವರ ಕನಸು ನಿಜವಾದರೆ ಇಲಿ ಸಂರಕ್ಷಣೆ-ಸಂಹಾರದ ಉದ್ಯಮಕ್ಕೆ ಬಂಡವಾಳದಾರರು ಬೇಕಾಗಬಹುದು. ಅಷ್ಟೇ ಅಲ್ಲ ಸಾವಯವ ಇಲಿ ಸಾಕಣೆ ತರಬೇತಿಗಳು, ಸಾವಯವ ಇಲಿ  ಮಾಂಸದ ಅಂಗಡಿಗಳು  ತಲೆ ಎತ್ತಬಹುದು!

ಬಿಹಾರದ ವಾರ್ತೆ ಕೇಳಿ ಸ್ವತಃ ಮೂಷಿಕ ವಾಹನ ಕಂಗಾಲಾಗಿರಬಹುದು, ಆದರೆ ಪರಿಸರವಾದಿಗಳಿಗೆ ಸಂತಸ ಸುದ್ದಿ ಫಿಲಿಪೈನ್ಸ್ ಅರಣ್ಯದಿಂದ ಬಿತ್ತರವಾಗಿದೆ. ಅಲ್ಲಿನ ಸಸ್ಯವೊಂದು ಇಲಿ ಹಿಡಿದು ತಿನ್ನುತ್ತದಂತೆ! ಇದನ್ನು ಅಭಿವೃದ್ಧಿಪಡಿಸಿ ಇಲಿ ನಿಯಂತ್ರಿಸಬಹುದು ಎಂದು ಜೀವಶಾಸ್ತ್ರಜ್ಞ ಮೆಕ್‌ಪೆರ್‌ಸನ್ ಹೇಳುತ್ತಾರೆ. ಇಂತಹ ಸಸ್ಯ ವೈಚಿತ್ರ್ಯವನ್ನು ಗುರುತಿಸಿ ಸಂಶೋಧಿಸಲು ಪ್ರೇರಣೆ ನೀಡಿದ ಸರ್ ಡೇವಿಡ್ ಹೆಸರನ್ನು ಸಸ್ಯಕ್ಕೆ ಇಡಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಸಸ್ಯ ಅಭಿವೃದ್ಧಿಯಾದರೆ ಇನ್ನೇನು ನಮ್ಮ ನರ್ಸರಿಗಳಲ್ಲಿ ಇನ್ನು  ‘ಇಲ್ಲಿ ಇಲಿ ತಿನ್ನುವ ಸಸ್ಯ ದೊರೆಯುತ್ತದೆ!’ ಫಲಕಗಳು ಕಾಣಬಹುದು. ‘ಹೊಲದ ಬದುವಿಗೆ ಇಲಿ ಸಸ್ಯ ಬೆಳೆಸಿರಿ !’ ಎಂಬ ಕೃಷಿ ಅರಣ್ಯದ ಸಾಲು ಕೇಳಬಹುದು.