ಹಿಂದುಸ್ಥಾನಿ ಸಂಗೀತದ ಹಿರಿಯ ತಲೆಮಾರಿನ ಗಾಯಕ ಪಂ. ಮೃತ್ಯುಂಜಯ ಬುವಾ ಪುರಾಣಿಕಮಠರು ಕರ್ನಾಟಕದ ಗ್ವಾಲಿಯರ ಘರಾಣೆಯ ದಿಗ್ಗಜರು. ಗದಗ ಜಿಲ್ಲೆಯಲ್ಲಿ ಹುಟ್ಟಿ ಬೆಳಗಾವಿಯಲ್ಲಿ ನೆಲೆಸಿ ಗಡಿನಾಡು ಭಾಗದಲ್ಲಿ ಹಿಂದುಸ್ಥಾನಿ ಸಂಗೀತವನ್ನು ಪ್ರಸಾರ ಮಾಡಿದವರು ೯೧ ವರ್ಷ ತುಂಬು ಜೀವನ ಬಾಳಿದರು.

ಪಂ. ಮೃತ್ಯುಂಜಯ ಬುವಾ ಅವರು ಜನಿಸಿದ್ದು ೧೯೧೨ರಲ್ಲಿ ಗದಗ ಜಿಲ್ಲೆಯ ಚಂಚಲ ಎಂಬ ಗ್ರಾಮದಲ್ಲಿ. ಅವರ ತಂದೆ ಪ್ರಭುಶಾಸ್ತ್ರಿಗಳು ಸಂಗೀತಗಾರರಾಗಿದ್ದರು. ತಮ್ಮ ಮಕ್ಕಳಾದ ಮೃತ್ಯುಂಜಯ ಹಾಗೂ ಚಂದ್ರಶೇಖರ ಅವರುಗಳು ಸಂಗೀತದಲ್ಲಿ ಹೆಸರು ಪಡೆಯಬೇಕೆಂಬುದು ಅವರ ಸಂಕಲ್ಪವಾಗಿತ್ತು. ಹಾಗಾಗಿ ಅವರು ಇಬ್ಬರೂ ಮಕ್ಕಳನ್ನು ಗದುಗಿಗೆ ಕರೆದುಕೊಂಡು ಬಂದು ಪಂ. ಪಂಚಾಕ್ಷರಿ ಗವಾಯಿಗಳ ಹತ್ತಿರ ಸಂಗೀತ ಕಲಿಯಲು ಏರ್ಪಾಡು ಮಾಡಿದರು. ಹೀಗೆ ಮೃತ್ಯುಂಜಯ ಬುವಾ ಅವರು ೧೨ ವರ್ಷಗಳ ಕಾಲ ಪಂ. ಪಂಚಾಕ್ಷರಿ ಗವಾಯಿಗಳಲ್ಲಿ ಗ್ವಾಲಿಯರ್ ಘರಾಣೆಯ ತಾಲೀಮು ಪಡೆದುಕೊಂಡರು. ನಂತರ ಮೃತ್ಯುಂಜಯ ಬುವಾ ಅವರು ೧೯೬೦ರಲ್ಲಿ ಮುಂಬೈಗೆ ಹೋಗಿ ಖ್ಯಾತ ಸಂಗೀತಗಾರ ಪಂ. ರತ್ನಕಾಂತ ನಾಥಕರ್ ಬುವಾ ಅವರಲ್ಲಿ ಕೆಲವು ವರ್ಷ ಸಂಗೀತ ತರಬೇತಿ ಪಡೆದುಕೊಂಡರು.

ತಮ್ಮ ನಿರಂತರ ರಿಯಾಜ್‌ದಿಂದಾಗಿ ಅವರು ಪ್ರಬುದ್ಧ ಗಾಯಕರೆನಿಸಿದರು. ಅಖಿಲ ಭಾರತ ಗಾಂಧರ್ವ ಮಹಾವಿದ್ಯಾಲಯ ಮಂಡಳದ ‘ಸಂಗೀತ ಅಲಂಕಾರ’ (ಎಂ.ಎ. ಸಂಗೀತಕ್ಕೆ ತತ್ಸಮಾನ) ಪದವಿ ಪಡೆದುಕೊಂಡರು. ಆಕಾಶವಾಣಿ ಕಲಾವಿದರಾಗಿದ್ದ ಅವರು ಅನೇಕ ಸಂಗೀತ ಪರೀಕ್ಷೆಗಳ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬೆಲಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೂಜ್ಯ ಶ್ರೀಮ.ನಿ.ಪ್ರ.ಲಿಂ. ಶಿವಬಸವಸ್ವಾಮಿಗಳ ಅಪ್ಪಣೆಯ ಮೇರೆ ಪಂ. ಮೃತ್ಯುಂಜಯ ಬುವಾ ಅವರು ಬೆಳಗಾವಿಗೆ ಬಂದರು. ಅಲ್ಲಿಯ ಮಾರುತಿ ಗಲ್ಲಿಯಲ್ಲಿ ‘ಸಂಗೀತ ಶಾಲೆ’ ಪ್ರಾರಂಭಿಸಿದರು. ಅನೇಕ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿದರು. ಬೆಳಗಾವಿಯ ಜಿ.ಎ. ಹೈಸ್ಕೂಲಿನಲ್ಲಿ ಅನೇಕ ವರ್ಷ ಸಂಗೀತ ಶಿಕ್ಷಣರಾಗಿ ಸೇವೆ ಸಲ್ಲಿಸಿದರು. ಒಂದು ನೂರು ರಾಗಗಳ ೫೦೦ ಬಂದೀಶಗಳ ಸಂಗೀತ ಭಂಡಾರವೇ ಅವರಾಗಿದ್ದರು. ಬೆಳಗಾವಿಯಲ್ಲಿ ಹಿಂದುಸ್ಥಾನಿ  ಸಂಗೀತ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು ಬರೆದ ‘ಹಿಂದೂಸ್ಥಾನಿ ಸಂಗೀತ’ವೆಂಬ ಪುಸ್ತಕ ಕ.ವಿ.ವಿ. ಧಾರವಾಡ ಸಂಗೀತ ಪಠ್ಯಪುಸ್ತಕವಾಗಿ ಪ್ರಕಟಿಸಿದೆ.

ಶ್ರೀಮತಿ ಜಾನಕಿ ಅಯ್ಯರ್ ವೈದ್ಯ ಚಂದ್ರಶೇಖರ ಪುರಾಣಿಕ ಮಠ ಭರಮಣ್ಣ ಗುರವ, ಪುರುಷೋತ್ತಮ ವಲವಾಳ್ಕರ, ಅಬ್ದುಲ್‌ಗನಿ, ಈಶ್ವರಪ್ಪ ಜಿ. ಮಿಣಚಿ, ಶ್ರೀಮತಿ ಸಗುಣಾಬಾಯಿ ಚಂದಾವರಕರ, ಲೀಲಾವತಿ ಗಣಾಚಾರಿ, ನಿರ್ಮಲಾ ಘಂಟಿ, ನಂದನ ಹೆರ್ಲೇಕರ್ ಮುಂತಾದವರು ಅವರ ಶಿಷ್ಯರಾಗಿದ್ದಾರೆ. ಪಂ. ಮೃತ್ಯುಂಜಯ ಬುವಾ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾತಿಲಕ’ (೧೯೮೫), ಪಂ. ಮಲ್ಲಿಕಾರ್ಜುನ ಮನಸೂರ ಸಂಗೀತ ಸಭಾ ಪುರಸ್ಕಾರ (೧೯೮೬), ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ‘ಪಂಚಾಕ್ಷರ ಪ್ರಶಸ್ತಿ’ (೨೦೦೦), ‘ಡಾ. ಪುಟ್ಟರಾಜ ಸಮ್ಮಾನ’ (೨೦೦೦) ಪ್ರಶಸ್ತಿ ಬಂದಿವೆ.