ಬಹುಬೇಗ ಕಿತ್ತು ಬಳಸುವ ಸೊಪ್ಪು ತರಕಾರಿಗಳಲ್ಲಿ ಮೆಂತ್ಯದ ಸೊಪ್ಪು ಒಂದಾಗಿದೆ. ಈ ಸೊಪ್ಪು ಪೌಷ್ಟಿಕವಿರುವುದರ ಜೊತೆಗೆ ರುಚಿಕರವಿರುತ್ತದೆ.

ಪೌಷ್ಟಿಕ ಗುಣಗಳು : ಇದು ಉತ್ತಮ ಪೌಷ್ಟಿಕ ಗುಣ ಹೊಂದಿದೆ. ಇದನ್ನು ಯಥೇಚ್ಛವಾಗಿ ಬಳಸಿ ಪೌಷ್ಟಿಕಗಳನ್ನು ಹೊಂದಬಹುದು.

೧೦೦ ಗ್ರಾಂ ದಂಟುಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ ೮೬.೧ ಗ್ರಾಂ
ಶರ್ಕರಪಿಷ್ಟ ೬.೦ ಗ್ರಾಂ
ಪ್ರೊಟೀನ್ ೪.೪ ಗ್ರಾಂ
ಕೊಬ್ಬು ೦.೯ ಗ್ರಾಂ
ಒಟ್ಟು ಖನಿಜ ಪದಾರ್ಥ ೧.೭೫ ಗ್ರಾಂ
ನಿಕೋಟಿನಿಕ್ ಆಮ್ಲ ೭೦ ಮಿ.ಗ್ರಾಂ
ನಾರು ಪದಾರ್ಥ ೧.೦ ಗ್ರಾಂ
ಕ್ಯಾಲ್ಸಿಯಂ ೦.೪೭ ಗ್ರಾಂ
’ಎ’ ಜೀವಸತ್ವ ೩೯೦೦ ಐಯು
ರೈಬೋಪ್ಲೇವಿನ್ ೭೦ ಮಿ.ಗ್ರಾಂ
’ಸಿ’ ಜೀವಸತ್ವ ೫೪ ಮಿ.ಗ್ರಾಂ
ಕ್ಯಾಲೋರಿಗಳು ೬೭ ಮಿ.ಗ್ರಾಂ

ಔಷಧೀಯ ಗುಣಗಳು : ಮೆಂತ್ಯದ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದರಿಂದ ಶರೀರ ಬಲಗೊಳ್ಳುವುದಲ್ಲದೆ ಮಲಬದ್ದತೆ ದೂರವಾಗುತ್ತದೆ; ಪಚನಕಾರ್ಯ ಸುಗಮಗೊಳ್ಳುತ್ತದೆ. ಗುಲ್ಮ ಮತ್ತು ಮೇದೋಜೀರಕಾಂಗಗಳೂ ಸಹ ಬಲಗೊಳ್ಳುತ್ತವೆ. ಸೊಪ್ಪನ್ನು ನುಣ್ಣಗೆ ಅರೆದು ಊತವಿರುವ ಭಾಗದ ಮೇಲೆ ಹರಡಿ ಕಟ್ಟಿದಲ್ಲಿ ನೋವು ಕಡಿಮೆಯಾಗುತ್ತದೆ. ಸಕ್ಕರೆ ಕಾಯಿಲೆಯಿಂದ ನರಳುತ್ತಿರುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಮೆಂತ್ಯವನ್ನು ಬೇಧಿ, ಆಮಶಂಕೆ ಮತ್ತು ಹೊಟ್ಟೆ ನೋವಿನಿಂದ ನರಳುತ್ತಿರುವವರಿಗೆ ನಿರ್ದೇಶಿಸುತ್ತಾರೆ; ಮೆಂತ್ಯದ ಕಾಳನ್ನು ತಣ್ಣೀರಿನಲ್ಲಿ ಅರೆದು ತಲೆಗೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದಲ್ಲಿ ತಲೆಯಲ್ಲಿನ ಹೊಟ್ಟು ನಿವಾರಣೆಯಾಗುತ್ತದೆ. ಅದರಿಂದ ಕೂದಲು ಉದುರುವುದು ತಪ್ಪುತ್ತದೆ. ಸೊಪ್ಪನ್ನು ತುಪ್ಪದೊಂದಿಗೆ ಹುರಿದು ಸೇವಿಸುತ್ತಿದ್ದರೆ ಪಿತ್ತ ಕಡಿಮೆಯಾಗುತ್ತದೆ. ಮೆಂತ್ಯದ ಕಾಳುಗಳ ಪುಡಿಯನ್ನು ಮುಖಕ್ಕೆ ಹಚ್ಚಿ ತೊಳೆದರೆ ಮುಖ ಕಾಂತಿ ಹೆಚ್ಚಾಗುತ್ತದೆ; ಚರ್ಮ ಸುಕ್ಕು ಗಟ್ಟುವುದಿಲ್ಲ. ಕಾಳುಗಳಲ್ಲಿ ಡಯಾಸ್ಜೊನಿಸ್ ಮತ್ತು ಸ್ಟೆರಾಯ್ಡ್ ಪದಾರ್ಥಗಳಿದ್ದು ಸಂತಾನ ನಿರೋಧಕ ಗುಳಿಗೆಗಳಲ್ಲಿ ಉಪಯೋಗಿಸುತ್ತಾರೆ.

ಉಗಮ ಮತ್ತು ಹಂಚಿಕೆ : ಇದರ ತವರೂರು ಯೂರೋಪ್ ಹಾಗೂ ಎಥಿಯೋಪಿಯಾ ಎನ್ನಲಾಗಿದೆ. ನಮ್ಮಲ್ಲಿ ಎಲ್ಲಾ ಕಡೆ ಇದು ಜನಪ್ರಿಯ ಸೊಪ್ಪು ತರಕಾರಿಯಾಗಿದೆ.

ಸಸ್ಯ ವರ್ಣನೆ : ಮೆಂತ್ಯ ಲೆಗ್ಯೂಮಿನೋಸೀ ಕುಟುಂಬದ ಫ್ಯಾಬೇಸೀ ಉಪಕುಟುಂಬಕ್ಕೆ ಸೇರಿದ ವಾರ್ಷಿಕ ಮೂಲಿಕೆ. ಇದು ಸಣಕಲಾದ, ಗಿಡ್ಡ ಸಸ್ಯ, ಕಾಂಡ ಬಲಹೀನ, ಹೆಚ್ಚು ಎಂದರೆ ೧೫-೨೦ ಸೆಂ.ಮೀ. ಎತ್ತರ ಬೆಳೆಯುತ್ತದೆ. ಎಲೆಗಳಿಗೆ ಉದ್ದವಾದ ತೊಟ್ಟು ಇರುತ್ತದೆ. ಬಿಡಿ ಎಲೆಗಳಲ್ಲಿ ಮೂರು ಉತಪತ್ರಗಳಿರುತ್ತವೆ. ಉಪ ಎಲೆಗಳು ಅಂಡಾಕಾರವಿದ್ದು, ಅಂಚು ಒಡೆದಿರುವುದಿಲ್ಲ. ಎಲೆಗಳು ಹಸುರುಬಣ್ಣದ್ದಿರುತ್ತವೆ. ಹೂವು ದ್ವಿಲಿಂಗಿಗಳು, ಇದು ಸ್ವ-ಪರಾಗಸ್ಪರ್ಶದ ಬೆಳೆ, ಕಾಯಿಗಳು ತೀರಾ ಸಣಕಲಾಗಿ, ಉದ್ದನಾಗಿರುತ್ತವೆ. ಬಲಿತ ಕಾಳು ಹಳದಿ ಬಣ್ಣದ್ದಿರುತ್ತವೆ. ಸಸ್ಯಭಾಗಗಳು ವಿಶಿಷ್ಟ ಕಂಪಿನಿಂದ ಕೂಡಿರುತ್ತವೆ.

ಹವಾಗುಣ : ಇದು ತಂಪು ಹವಾಗುಣವನ್ನು ಬಯಸುವ ಬೆಳೆಯಾಗಿದೆ. ಹೆಪ್ಪುಗಟ್ಟುವ ಹವಾಗುಣ ಇರುವುದು ಅಥವಾ ಹಿಮಸುರಿಯುವ ಶೈತ್ಯಹವೆ ಇದ್ದರೂ ಇದು ತಡೆದುಕೊಳ್ಳಬಲ್ಲದು. ವರ್ಷದ ಎಲ್ಲಾ ಕಾಲಗಳಲ್ಲಿ ಬೆಳೆಯಬಹುದಾದರೂ ನಮ್ಮ ರಾಜ್ಯದಲ್ಲಿ ಆಗಸ್ಟ್ ಮಧ್ಯಭಾಗದಿಂದ ನವೆಂಬರ್ ಮಧ್ಯಭಾಗದವರೆಗೆ ಬಿತ್ತನೆಗೆ ಬಹುಸೂಕ್ತ ಕಾಲವಾಗಿರುತ್ತದೆ. ಉತ್ತರಭಾರತದಲ್ಲಿ ಬೀಜ ಮಾಡುವುದಿದ್ದರೆ ಸೆಪ್ಟೆಂಬರ್ – ನವೆಂಬರ್‌ಮತ್ತು ಸೊಪ್ಪಿಗಾದರೆ ಮಾರ್ಚ್ ತಿಂಗಳು ಸೂಕ್ತವಿರುತ್ತವೆ. ಎತ್ತರದ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಮಾರ್ಚ್- ಏಪ್ರಿಲ್ ಮತ್ತು ಅಕ್ಟೋಬರ್ ಸೂಕ್ತವಿರುತ್ತವೆ.

ಭೂಗುಣ : ಇದನ್ನು ಎಲ್ಲಾ ತೆರನಾದ ಮಣ್ಣುಗಳಲ್ಲಿ ಬೆಳೆಯ ಬಹುದಾದರೂ ಮರಳು ಮಿಶ್ರಿತಗೋಡು ಮಣ್ಣು ಹೆಚ್ಚು ಸೂಕ್ತ. ನೀರು ಬಸಿಯುವುದು ಬಹು ಮುಖ್ಯ. ಜೌಗಿಲ್ಲದ ಹಾಗೂ ಸಾರವತ್ತಾದ ಮೆಕ್ಕಲೂ ಇಲ್ಲವೇ ಜೇಡಿ ಮಣ್ಣಿನಲ್ಲಿ ಅಧಿಕ ಇಳುವರಿ ಸಾಧ್ಯ.

ತಳಿಗಳು

. ಪೂಸಾಅರ್ಲಿಬಂಚಿಂಗ್ : ಇದು ಹೊಸದೆಹಲಿಯಲ್ಲಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೊಡುಗೆ; ಬಹುಬೇಗ ಕೊಯ್ಲಿಗೆ ಬರುವ ಸುಧಾರಿತ ತಳಿ. ಇದರ ಸಸಿಗಳು ನೆಟ್ಟಗಿರುತ್ತವೆ. ಬೆಳೆಯ ಅವಧಿಯಲ್ಲಿ ೨-೩ ಕೊಯ್ಲು ಸಾಧ್ಯ.

. ಕಸೂರಿ : ಇದಕ್ಕೆ ಚಂಪ ಎಂಬ ಹೆಸರಿದೆ. ಇದರ ಸೊಪ್ಪು ಸುವಾಸನೆಯಿಂದ ಕೂಡಿರುತ್ತದೆ. ಇದು ತಡವಾಗಿ ಹೂವು ಬಿಡುವ ತಳಿ. ಎಲೆಗಳು ಒತ್ತಾಗಿ ಪೋಣಿಸಿದಂತೆ ಕಾಣುತ್ತವೆ. ಬೆಳೆಯ ಅವಧಿಯಲ್ಲಿ ೫-೬ ಕೊಯ್ಲುಗಳಿದ್ದು ಅಧಿಕ ಇಳುವರಿ ಸಾಧ್ಯ.

. ಮಾರ್ವಾರಿ : ಸುವಾಸನಾಭರಿತ ತಳಿ.

. ನಂಬರ್ ೪೭: ಇದು ಮಹಾರಾಷ್ಟ್ರದ ತಳಿ. ಇದರಲ್ಲಿ ಎಲೆಗಳು ದೊಡ್ಡವಿದ್ದು, ರಸವತ್ತಾಗಿರುತ್ತವೆ; ಅಧಿಕ ಪ್ರಮಾಣದ ’ಸಿ’ ಜೀವಸತ್ವ ಇರುತ್ತದೆ.

ಇ.ಸಿ.೪೯೧೧, ಲ್ಯಾಮ್‌ಸೆಲೆಕ್ಷನ್-೧ ಮುಂತಾದುವುಗಳೂ ಸಹ ಬೇಸಾಯದಲ್ಲಿ ಕಂಡುಬರುತ್ತವೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಪೂರ್ಣ ಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣಪ್ರಮಾಣ ರಂಜಕಾಂಶಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ಅನುಕೂಲಕ್ಕೆ ತಕ್ಕಂತೆ ೩ ಮೀಟರ್ ಉದ್ದ ಮತ್ತು ೨ ಮೀಟರ್ ಅಗಲ ಇರುವಂತೆ ಮಡಿಗಳನ್ನು ತಯಾರಿಸಿ ಬೀಜವನ್ನು ಸಮನಾಗಿ ಚೆಲ್ಲಿ ಬಿತ್ತಬೇಕು. ಬೀಜ ಮೊಳೆಯಲು ೫-೬ ದಿನ ಬೇಕು. ಹೆಕ್ಟೇರಿಗೆ ೪೦ ಕಿ.ಗ್ರಾಂ ಬಿತ್ತನೆ ಕಾಳು ಬೇಕಾಗುತ್ತವೆ.

ಗೊಬ್ಬರ : ಈ ಬೆಳೆಗೆ ಹೆಚ್ಚಿನ ಪ್ರಮಾಣದ ಗೊಬ್ಬರವೇನೂ ಬೇಕಾಗಿಲ್ಲ. ಹೆಕ್ಟೇರಿಗೆ ೧೨.೫ ಟನ್ ತಿಪ್ಪೆಗೊಬ್ಬರ, ೧೦೦ ಕಿ.ಗ್ರಾಂ ಸಾರಜನಕ ಮತ್ತು ೫೦ ಕಿ.ಗ್ರಾಂ ರಂಜಕಾಂಶಗಳನ್ನು ಶಿಫಾರಸು ಮಾಡಿದೆ.

ನೀರಾವರಿ : ಹವಾ ಮತ್ತು ಭೂಗುಣಗಳನ್ನನುಸರಿಸಿ ೪-೫ ದಿನಗಳಿಗೊಮ್ಮೆ ನೀರು ಹಾಯಿಸಬೇಕಾಗುತ್ತದೆ.

ಅಂತರಬೇಸಾಯ ಮತ್ತು ಕಳೆ ಹತೋಟಿ: ಬಿತ್ತನೆಯಾದ ೧೫-೨೦ ದಿನಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು. ಮಣ್ಣನ್ನು ಹಗುರವಾಗಿ ಸಡಿಲಿಸಿ ಕಳೆಗಳನ್ನು ಕಿತ್ತು ಹಾಕಬೇಕು.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ೨೦-೩೦ ದಿನಗಳಲ್ಲಿ ಸಸಿಗಳು ಸುಮಾರು ೨೦-೨೫ ಸೆಂ.ಮೀ. ಎತ್ತರವಿದ್ದು ಕಟಾವಿಗೆ ಸಿದ್ಧವಿರುತ್ತವೆ. ಹೆಕ್ಟೇರಿಗೆ ೧೦ ರಿಂದ ೧೨.೫ ಟನ್ ಇಳುವರಿ ಸಾಧ್ಯ.

ಕೊಳೆ ಬೆಳೆ : ಮೆಂತ್ಯದ ಸೊಪ್ಪಿನಲ್ಲಿ ಮೊದಲ ಕಟಾವು ಆದನಂತರ ಹೊಸ ಚಿಗುರು ತಳ್ಳುತ್ತದೆ. ಹೀಗೆ ಸುಮಾರು ೪ ರಿಂದ ೬ ಕೊಯ್ಲುಗಳು ಸಾಧ್ಯ. ಪ್ರತಿ ಸಾರಿ ಸೊಪ್ಪನ್ನು ಕೊಯ್ಲು ಮಾಡಿದ ನಂತರ ಹೆಕ್ಟೇರಿಗೆ ೨೦ ಕಿ.ಗ್ರಾಂ. ಸಾರಜನಕವನ್ನು ಕೊಟ್ಟು ನೀರು ಹಾಯಿಸಬೇಕು.

ಕೀಟ ಮತ್ತು ರೋಗಗಳು

೧. ಮುಖ್ಯ ಕೀಟಗಳಲ್ಲಿ ಸಸ್ಯಹೇನು ಮತ್ತು ಎಲೆ ತಿನ್ನುವ ಕಂಬಳಿ ಹುಳುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಮಿ.ಲೀ. ಮ್ಯಾಲಾಥಿಯಾನ್ ಕೀಟನಾಶಕ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು.

೨. ತುಪ್ಪುಳಿನ ರೋಗ ತಗುಲಿದ ಸಸ್ಯಭಾಗಗಳು ನೀರಿನಲ್ಲಿ ತೊಯ್ದಂತೆ ಕಾಣುವುದು. ಅದರಿಂದ ಅವುಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ತೀವ್ರ ಹಾನಿ ಇದ್ದಾಗ ಇಡೀ ಬೆಳೆಯೇ ಹಾಳಾಗಬಹುದು. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೩೦ ಗ್ರಾಂ ಢೈಥೇನ್ ಜಡ್ ೭೮ ಶಿಲೀಂಧ್ರನಾಶಕವನ್ನು ಬೆರೆಸಿ ಸಿಂಪಡಿಸಬೇಕು.

೩. ಎಲೆಚುಕ್ಕೆ ರೋಗ ಕಾಣಿಸಿಕೊಂಡಾಗ ಎಲೆಗಳ ಮೇಲೆಲ್ಲಾ ಸಣ್ಣ ಸಣ್ಣ ಚುಕ್ಕೆಗಳಿದ್ದು ಸೊಪ್ಪು ನೋಡಲು ವಿಕಾರವಾಗಿರುತ್ತದೆ. ಅಂತಹ ಸೊಪ್ಪಿಗೆ ಸರಿಯಾದ ಬೆಲೆ ಸಿಗಲಾರದು.

೪. ಬೂದಿರೋಗ ತಗುಲಿದಾಗ ಸಸ್ಯಭಾಗಗಳ ಮೇಲೆಲ್ಲಾ ಬೂದಿಯಂತಹ ನವಿರಾದ ಧೂಳು ಕುಳಿತಿರುತ್ತದೆ. ಅಂತಹ ಸೊಪ್ಪು ಮಂಕಾಗಿದ್ದು ತಿನ್ನಲು ಬರುವುದಿಲ್ಲ. ಬಿಳಿ ತುಕ್ಕು ಪೀಡಿತ ಗಿಡಗಳಲ್ಲಿ ಬಿಳಿಯ ತುಕ್ಕು ಅಥವಾ ಚುಕ್ಕೆಗಳು ಕಂಡುಬರುತ್ತವೆ. ಅಂತಹ ಎಲೆಗಳು ನೋಡಲು ವಿಕಾರವಾಗಿದ್ದು, ಗುಣಮಟ್ಟ ಕೆಳ ದರ್ಜೆಯದಿರುತ್ತದೆ. ಇವೆಲ್ಲವೂ ಶಿಲೀಂಧ್ರ ರೋಗಗಳೇ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಗ್ರಾಮ ಜೈನೆಬ್ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು. ಬಿಳಿ ತುಕ್ಕು ರೋಗಕ್ಕೆ ಬೆಳೆ ಪರಿವರ್ತನೆ ಅನುಸರಿಸುವುದು ಒಳ್ಳೆಯದು.

ಬೀಜೋತ್ಪಾದನೆ : ಮೈದಾನ ಪ್ರದೇಶಗಳಲ್ಲಿ ಅಧಿಕ ಕಾಳು ಸಿಗುತ್ತವೆ. ಇದು ಸ್ವ-ಪರಾಗಸ್ಪರ್ಶದ ಬೆಳೆ. ಬಿತ್ತನೆ ಮಾಡಿದ ಸುಮಾರು ೧೫೦ ರಿಂದ ೧೬೦ ದಿನಗಳಲ್ಲಿ ಬೀಜ ಅಥವಾ ಕಾಳು ಬಲಿತು ಪಕ್ವಗೊಳ್ಳುತ್ತವೆ. ಕೂಳೆಬೆಳೆಗಳನ್ನು ತೆಗೆಯದೆ ಹಾಗೆಯೇ ಬಿಟ್ಟಲ್ಲಿ ಹೆಚ್ಚು ಕಾಳು ಸಾಧ್ಯ. ಮಂತ್ಯದ ಬೆಳೆಯಲ್ಲಿ ಕಾಡು ಮೆಂತ್ಯ, ಕುದುರೆ ಮಸಾಲೆ ಮುಂತಾದ ಅನ್ಯ ಬಗೆ ಗಿಡಗಳು ಕಂಡುಬರುತ್ತವೆ. ಅವುಗಳನ್ನು ಕಿತ್ತುಹಾಕಬೇಕು. ಪೂಸಾ ಅರ‍್ಲಿ ಬಂಚಿಂಗ್ ತಳಿಯಲ್ಲಿ ಹೆಕ್ಟೇರಿಗೆ ಸುಮಾರು ೧.೨ ರಿಂದ ೧.೫ ಟನ್ ಮತ್ತು ಕಸೂರಿ ತಳಿಯಲ್ಲಿ ಹೆಕ್ಟೇರಿಗೆ ಸುಮಾರು ೬೦೦ ರಿಂದ ೭೦೦ ಕಿ.ಗ್ರಾಂ ಕಾಳು ಸಾಧ್ಯ.

* * *