ವಯಸ್ಸು ೨೬, ಗಂಡಸು, ಮೂರು ತಿಂಗಳಿನಿಂದ ತಲೆಸುತ್ತು, ತಲೆ ಬಗ್ಗಿಸಿದರೆ, ಕುಳಿತು ಮೇಲೆದ್ದರೆ, ಮಲಗಿದಾಗ ಅಂದರೆ ತಲೆ ಅಲ್ಲಾಡಿಸಿದಾಗ, ತಲೆ ಸುತ್ತಿದ ಹಾಗೆ ಆಗುತ್ತದೆ. ವೈದ್ಯರು ಪರೀಕ್ಷೆ ಮಾಡಿ ನಾರ್ಮಲ್ ಎಂದು ತಿಳಿಸಿದ್ದಾರೆ. ವೈದ್ಯರು ಪರೀಕ್ಷೆ ಮಾಡಿ ರಕ್ತದ ಒತ್ತಡ ನಾರ್ಮಲ್ ಎಂದು ತಿಳಿಸಿದ್ದಾರೆ. ಬ್ರೈನ್ ಟ್ಯೂಮರ್ ಏನಾದರೂ ಇದೆಯೇ ಎಂದು ಮಾನಸಿಕವಾಗಿ ಬಳಲುತ್ತಿದ್ದೇನೆ. ಸ್ಕ್ಯಾನಿಂಗ್ ಮಾಡಿಸಿದರೆ ಖರ್ಚು ಎಷ್ಟಾಬಹುದು? ಮೊದಲು ನನಗೆ ಮೂರ್ಛೆರೋಗವಿತ್ತು. ಮೂರು ವರ್ಷದಿಂದ ಆಯುರ್ವೇದ ಔಷಧ ತೆಗೆದುಕೊಂಡು ಗುಣಮುಖವಾಗಿದ್ದೇನೆ ಆದರೂ ನನಗೆ ಈ ತಲೆ ಸುತ್ತಲಿನಿಂದ ಭಯವಾಗ್ತಾ ಇದೆ.

ನಿಮ್ಮ ಸಮಸ್ಯೆಗೆ ಕೂಡಲೇ ಒಬ್ಬ ನರರೋಗತಜ್ಞರಲ್ಲಿಯೇ ಅಥವಾ ಈ.ಎನ್.ಟಿ. ತಜ್ಞರಲ್ಲಿಯೋ ಪರೀಕ್ಷೆ – ಚಿಕಿತ್ಸೆಯ ಅವಶ್ಯಕತೆಯಿದೆ. ಅಸಡ್ಡೆ ಮಾಡಬೇಡಿ.

ನೀವು ತಿಳಿಸಿದ ರೋಗ ಚಿನ್ಹೆಗಳು ತಲೆಸುತ್ತುವುದ, ತಲೆ ಬಗ್ಗಿಸಿದರೆ, ಕುಳಿತು ಮೇಲೆದ್ದರೆ, ಮಲಗಿದಾಗ,ತಲೆ ಅಲ್ಲಾಡಿಸಿದಾಗ, ತಲೆ ಸುತ್ತುವುದು ಖಂಡಿತಾ ಮೆದುಳಿನ ಮತ್ತು ನರಬಳ್ಳಿಯ ಕಾರ್ಯವೈಖರಿಯ ಲಯಗತಿಯಲ್ಲಿ ಏರುಪೇರಾಗಿರುವುದನ್ನು ಸೂಚಿಸುತ್ತದೆ. ಆದರೆ ನೀವಂದುಕೊಂಡಂತೆ ಮೆದುಳಿನಲ್ಲಿ ಗಡ್ಡೆ ಬೆಳೆಯುತ್ತಿರುವ ಸಾಧ್ಯತೆ ಕಡಿಮೆ. ಏಕೆಂದರೆ ಸಾಮಾನ್ಯವಾಗಿ ಮೆದುಳಿನ ಗಡ್ಡೆ ವಯಸ್ಸು ನಲವತ್ತರಿಂದ ನಲವತ್ತೈದು ಆದ ನಂತರ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇದರಲ್ಲಿ ಮುಖ್ಯ ರೋಗ ಲಕ್ಷಣಗಳೆಂದರೆ ತಲೆಸುತ್ತುವಿಕೆ, ಅಲ್ಲದೆ ಪುಟಿಯುವ ತಲೆನೋವು, ವಾಂತಿಯಾಗುವಿಕೆ, ದೇಹದ ಒಂದು ಭಾಗದಲ್ಲಿ ಕಾಣಿಸಿಕೊಳ್ಳುವ ಮಾಂಸಖಂಡಗಳ ದುರ್ಬಲತೆ, ನಡೆಯುವಾಗಲ ಜೋಲಿ, ದೃಷ್ಟಿ ಮಾಂದ್ಯ ಇತ್ಯಾದಿ, ಅದಲ್ಲದೆ ಕೆಲವರಲ್ಲಿ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗುವುದುಂಟು. ವ್ಯಕ್ತಿ ಮಂಕಾಗುವುದು ಅಥವಾ ಅಸಂಬದ್ಧವಾಗಿ ವರ್ತಿಸುವುದು. ಇವೆಲ್ಲಾ ರೋಗಚಿನ್ಹೆಗಳು ಸಂಯುಕ್ತವಾಗಿಯೂ ಕಾಣಿಸಿಕೊಳ್ಳಬಹುದು. ಅಥವಾ ಒಂದೆರಡು ರೋಗಚಿನ್ಹೆಗಳು ಪ್ರಕಟವಾಗಬಹುದು. ಇವೆಲ್ಲಾ ಸಮಸ್ಯೆ ನನಗಿಲ್ಲ ಎಂದು ಅಸಡ್ಡೆ ಮಾತ್ರ ಮಾಡಬೇಡಿ. ಯಾವತ್ತೂ ನರರೋಗ ತಜ್ಞರ ಅಭಿಪ್ರಾಯ ಅಗತ್ಯ.

ಮೆದುಳಿಗೆ ಬರಬೇಕಾದ ರಕ್ತ ಸಂಚಾರದ ಗತಿಯಲ್ಲಿ ವ್ಯತ್ಯಾಸವಾದಾಗ ಮೆದುಳು ಈ ರೀತಿ ವರ್ತಿಸುವ ಸಾಧ್ಯತೆ ಉಂಟು. ಇದೂ ಸಹ ಹಿರಿಯ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನೊಂದು ಸಾಮಾನ್ಯ ಕಾರಣವೆಂದರೆ ಅದು ಕಿವಿಯ ವಿಭಾಗದಲ್ಲಿ ಕಾಣಿಸಿಕೊಳ್ಳುವ ವ್ಯಾದಿ. ಮೆದುಳಿನಿಂದ ೧೨ ಜೊತೆ ನರಗಳು ಹುಟ್ಟಿಕೊಳ್ಳುತ್ತವೆ. ಇದನ್ನು ನಾವು ಕ್ರೆನಿಯಲ್ ನರಗಳು ಎಂದು ಹೇಳುತ್ತೇವೆ. ಇದರಲ್ಲಿ ಎಂಟನೇ ಜೊತೆಯದು ಸ್ಟೆಟೋಆಕೊಸ್ಟಿಕ್ ನರ ಎಂದು. ಹೆಸರೇ ಸೂಚಿಸುವಂತೆ ಇದು ವ್ಯಕ್ತಿಯ ಶ್ರವಣಶಕ್ತಿ ಹಾಗೂ ಸಮತೋಲನವನ್ನು ಕಾಪಾಡುವ ಕೆಲಸ ಮಾಡುತ್ತದೆ. ಈ ನರ ಒಳಕಿವಿಯಿಂದ ಹೊರಟು ಮೆದುಳಿನಲ್ಲಿ ಶ್ರವಣ ಕೇಂದ್ರದಲ್ಲಿ ಕೊನೆಗೊಳ್ಳುತ್ತದೆ. ಈ ನರಕ್ಕೆ ಊಟ ಉಂಟಾದರೆ, ನಶಿಸುವಿಕೆ ಇದ್ದರೆ ಮತ್ತು ಸೋಂಕು ಉಂಟಾದರೆ, ಅಥವಾ ನರದ ಮೇಲೆ ಸಣ್ಣ ಗಡ್ಡೆ ಆದರೆ, ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ. ಅದರೊಂದಿಗೆ ಕಿವಿಯಲ್ಲಿ ಗುಯ್‌ಗುಟ್ಟುವಿಕೆ ಹಾಗೂ ಕಿವುಡು. ಇದರ ಬಗ್ಗೆ ಪರಿಹಾರವನ್ನು ಇ.ಎನ್‌.ಟಿ. ಶಸ್ತ್ರ ಚಿಕಿತ್ಸಕರನ್ನು ಕಂಡು ಪರೀಕ್ಷಿಸಿಕೊಳ್ಳಿ.

ಸಿ.ಟಿ. ಸ್ಕ್ಯಾನಿಂಗ್ ಅತ್ಯಂತ ಜನಪ್ರಿಯವಾಗುತ್ತಿರುವಂತ ರೋಗ ನಿರ್ಧಾರಕ ಪರೀಕ್ಷೆ. ಖಾಸಗಿ ಪ್ರಯೋಗಾಲಯಗಳಲ್ಲಿ ಸುಮಾರು ೧೨೦೦ ರೂ. ನೀವು ಬೆಂಗಳೂರಿನಲ್ಲಿ ಇರುವುದರಿಂದ ನಿಮ್ಹನ್ಸ್‌ಗೆ ಹೋದರೆ ಅಲ್ಲಿ ತಜ್ಞ ವೈದ್ಯರ ಸಲಹೆ ಸಿಕ್ಕುತ್ತದೆ. ಹಾಗೂ ಕನಿಷ್ಠ ಮೊತ್ತದಲ್ಲಿ ಸ್ಕ್ಯಾನಿಂಗ್ ಸೌಲಭ್ಯವೂ ದೊರಕುತ್ತದೆ. ನಿಮಗೆ ಈ ಹಿಂದೆ ಇದ್ದ ಮೂರ್ಛೆ ರೋಗಕ್ಕೂ ಇಂದಿನ ಈ ಸಮಸ್ಯೆಗೂ ಮೂಲಕಾರಣ ಒಂದೇ ಇರಬಹುದಾಗಿದ್ದು ಅದರ ಪರಿಹಾರಕ್ಕಾಗಿ ನಿಮ್ಹಾನ್ಸ್‌ ಸೂಕ್ತ ಕೇಂದ್ರ. ಮೂರ್ಛೆ ರೋಗಕ್ಕೂ ವೈಜ್ಞಾನಿಕವಾಗಿ ಕ್ರಮ ಬದ್ಧ ಚಿಕಿತ್ಸೆ ಪಡೆಯಿರಿ.