ಹೈದ್ರಾಬಾದ್‌ ಕರ್ನಾಟಕ ಭಾಗದ ಕಲ್ಬುರ್ಗಿ ಮಹಾ ನಗರದಲ್ಲಿ ತಬಲಾದ ವಾದನವನ್ನು ಪ್ರಚಾರ ಮಾಡುತ್ತ, ಕಾಲೇಜಿನಲ್ಲಿ ತಬಲಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಕಲಾ ಸೇವೆಯಲ್ಲಿ ನಿರತರಾಗಿರುವ ಉಸ್ತಾದ್‌ ಮೆಹಮೂದ್‌ ಮಿಯಾ ಅವರು ನಾಡಿನ ತಬಲಾ ವಾದಕರಲ್ಲೊಬ್ಬರು. ದಿನಾಂಕ ೧೦-೫-೧೯೫೫ ರಂದು ಗುಲ್ಬರ್ಗಾದ ಸಂಗೀತ ಮನೆತನದ ಸದ್ವಂಶದಲ್ಲಿ ಉಸ್ತಾದ್‌ ಮೆಹಮೂದ್‌ ಮಿಯಾರವರ ಜನನವಾಯಿತು. ಇವರ ತಂದೆ ಉಸ್ತಾದ್‌ ಅಬ್ದುಲ್‌ ಹಮೀದ್‌ ಮಾಸ್ಟರ್ ಮಿಯಾರವರು ಭಾರತದ ಹಿರಿಯ ಹಾಗೂ ಹೆಸರಾಂತ ತಬಲಾ ವಾದಕರಾಗಿದ್ದ ಉಸ್ತಾದ್‌ ಸರದಾರ್ ಅಲಿಖಾನ್‌ರವರ ಶಿಷ್ಯರಾಗಿದ್ದವರು. ಹುಟ್ಟಿದ ಮಗುವಿನ ಕಿವಿಯಲ್ಲಿ ತಬಲಾ ನಾದದ ತರಂಗವನ್ನೇ ತುಂಬಿಸಿ ಉಸ್ತಾದ್‌ ಅಲಿಖಾನರು ಈ ಶಿಶುವಿಗೆ ಸಂಗೀತ ಶಿಕ್ಷಣದ ಭದ್ರ ಬುನಾದಿಯನ್ನೇ ಹಾಕಿದರು. ಐದು ವರ್ಷದ ಮಗುವಾಗಿದ್ದಾಗಿನಿಂದಲೇ ತಂದೆ ಹಮೀದ್‌ ಮಿಯಾರವರು ಮಗನಿಗೆ ತಬಲಾ ವಾದನ ಶಿಕ್ಷಣ ಆರಂಭಿಸಿದರು. ತನ್ನ ಏಳನೆಯ ಎಳೆಯ ವಯಸ್ಸಿನಲ್ಲೇ ಈ ಬಾಲಕ ಆಗಿನ ಪ್ರಧಾನ ಮಂತ್ರಿಯಾಗಿದ್ದ  ಪಂ. ಜವಾಹರಲಾಲ್‌ ನೆಹರೂ ಅವರ ಸಮ್ಮುಖದಲ್ಲಿ ತಂದೆಯೊಡನೆ ಪ್ರಪ್ರಥಮವಾಗಿ ವೇದಿಕೆ ಏರಿ ಅವರ ಜೊತೆ ತಬಲಾ ಸಾಥಿ ನೀಡಿದ ಬಾಲ ಪ್ರತಿಭೆ ಪ್ರಶಂಸೆಗೆ ಪಾತ್ರರಾದರು.

ತಮ್ಮ ೧೫ನೇ ವಯಸ್ಸಿನಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ನಾಟಕ ಕಂಪೆನಿಯಲ್ಲಿ ವೃತ್ತಿ ಜೀವನ ಆರಂಭಿಸಿ ತಬಲಾ ವಾದಕರಾಗಿ ಕಾರ್ಯನಿರ್ವಹಿಸಿ ಮುಂದೆ ಉತ್ತರ ಕರ್ನಾಟಕದ ಅನೇಕ ನಾಟಕ ಕಂಪನಿಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಇವರ ವಿಶೇಷ ಬಾಜ್‌ ಎಂದರೆ ಬಲಗೈಯಿಂದ ಡಕ್ಕವನ್ನು ನುಡಿಸಿ ಹಾಡು ಮತ್ತು ನೃತ್ಯದ ಲಯಕ್ಕನುಗುಣವಾಗಿ ಅದನ್ನು ೧೫ ರಿಂದ ೨೦ ಅಡಿ ಮೇಲಕ್ಕೆ ಹಾರಿಸಿ ಅದನ್ನು ಯಥಾಸ್ಥಾನಕ್ಕೆ ಇಳಿಸುತ್ತಿದ್ದ ಕೈಚಳಕ ಅದ್ಭುತವಾದ ಸಾಧನೆಯಾಗಿದೆ.

ರಾಷ್ಟ್ರದ ಅನೇಕ ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿರುವ ಉಸ್ತಾದ್‌ ಮಿಯಾರವರು ಉಸ್ತಾದ್‌  ಬಿಸ್ಮಿಲ್ಲಾಖಾನ್‌, ಡಾ. ಬಸವರಾಜ ರಾಜಗುರು, ಸಿದ್ಧರಾಮ ಜಂಬಲದಿನ್ನಿ, ಬಾಳಪ್ಪ ಹುಕ್ಕೇರಿ, ತಾರಾ ಕುಲಕರ್ಣಿ, ಗಝಲ್‌ ಗಾಯಕ ಉಸ್ತಾದ್‌ ತಯ್ಯಾಬ್‌ ಅಲಿ ಸಾಹೇಬ ಅವರುಗಳ ಗಾಯನ ಕಛೇರಿಗಳಲ್ಲಿ ತಬಲಾ ಸಾಥಿ ಮಾಡಿದ್ದಾರೆ.

ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮಕ ಗಂಗಸಿರಿ ಮಹಿಳಾ ಮಹಾ ವಿದ್ಯಾಲಯದಲ್ಲಿ ತಬಲಾ ಉಪನ್ಯಾಸಕ ಸೇವೆಯಲ್ಲಿದ್ದು ಪ್ರಸ್ತುತ ಅಲ್ಲಿ ಆಯ್ಕೆ ದರ್ಜೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಬಲಾ ವಾದನ ವೈಖರಿಯ ಬಗ್ಗೆ ಸ್ಥಳೀಯ ಪತ್ರಿಕೆಗಳು ಮುಕ್ತ ಕಂಠದಿಂದ ಪ್ರಶಂಸೆ ಮಾಡಿವೆ. ಇವರ ಸುಪುತ್ರ ಮಹಮ್ಮದ್‌ ಮುಖೀಮ ಕಮಿಯಾ ಅವರೇ ಅಲ್ಲದೆ ಕುಪ್ಪೇಂದ್ರ ಬಡಿಗೇರ, ಭಾನುದಾಸ ಕುಲಕರ್ಣಿ, ದತ್ತು ಅಗ್ರವಾಲ್‌ ಮುಂತಾದ ತಬಲಾ ವಾದಕರು ಇವರ ಗರಡಿಯಲ್ಲೇ ಪಳಗಿದವರು.

ಪ್ರಸಿದ್ಧ ಖ್ಯಾತ ಗಾಯಕಿ ತಾರಾ ಕುಲಕರ್ಣಿಯವರ ಜೊತೆಗೂಡಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ಅನೇಕ ಶಿಷ್ಯರಿಗೆ ವಿದ್ಯಾದಾನ ಮಾಡುತ್ತಿರುವ ಉಸ್ತಾದ್‌ ಮೆಹಮೂದ್‌ ಮಿಯಾರವರ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩ನೇ ಸಾಲಿನ, ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.