‘ನನ್ ಕೂಡೆ ಇನ್ನೇನು ಮಾಡೂಕೆ ಆಗ್ತೆ ? ವಯಸ್ಸಾಯ್ತು, ಇಟ್ ವರ್ಸ ಕಾನ್ ಕಡಿದು,  ಬೇಲಿ ಕಟ್ಟಿ ಭೂಮಿಮಾಡಿ ಜೀವ ಸವೆಸಿದ್ದು ಹೌದು. ಈಗಿನ ಜನಕ್ಕೆ  ಈ ಘಟ್ಟ ಹತ್ತಿ ಬದುಕೂಕೆ ಆಗ್ತಿಲ್ಲೆ! ಮಕ್ಕಳು ಭೂಮಿ ಮಾರ್ತೆ ಅಂದ್ರು….. ಬೇಡ ಅಂಬೂಕೆ ನಾನು ಯಾರು? ನಾಳೆ ಇಲ್ಲಿ ಬದುಕಿ ಸಂಸಾರ ಮಾಡೂರು ಅವ್ರು! ಮನಸ್ಸಿಲ್ಲದವ್ರ ಕಾಡಲ್ಲಿ ಕಟ್‌ಹಾಕಿ ಕೃಷಿ ಮಾಡೂಕೆ ಆಗ್ತೆ? ಹುಟ್ಟಿ ಬೆಳೆದ ಊರು, ಕಟ್ಟಿಕೊಂಡ ಮನೆ ಮಾರೂಕೆ ಬೇಜಾರ್ ಆತ್ತು,  ಆದರೆ ಏನ್  ಮಾಡೂದು?’ ಕೊಲ್ಲೂರಿನ ಮೇಗನಿಯ ಅಜ್ಜ ಕೊಲ್ಲ (೮೮) ಒಂದೇ ಉಸುರಿನಲ್ಲಿ ಊರ ಕತೆ ಹೇಳುತ್ತಿದ್ದರು.

ಮೇಗನಿಯ ೮ ಈಡಿಗ ಕುಟುಂಬಗಳ ೬೫ ಜನ ಊರು ಮಾರಿದ್ದಾರೆ. ೩೫ ಎಕರೆ ಭೂಮಿಯನ್ನು ೯೬ ಲಕ್ಷ ರೂಪಾಯಿಗೆ ಸ್ಥಳೀಯ ಉದ್ಯಮಿ ಖರೀದಿಸಿದ್ದಾರೆ. ಒಪ್ಪಂದಕ್ಕೆ ರುಜು ಬಿದ್ದು ವ್ಯವಹಾರ ಮುಗಿದು ಆಗಲೇ ಎರಡು ವರ್ಷ ಕಳೆದಿದೆ. ಬಡ ಊರಿನ ಸುದ್ದಿ ಮಾಧ್ಯಮದ ಮುಖವಿಲ್ಲದೇ ಹಳಸಿದೆ, ಕೃಷಿ ಭೂಮಿ ಮಾರಾಟ ಹೊಸತಲ್ಲ. ಕೊಳ್ಳುವವರು ಕೆಲವರು, ಮಾರುವವರು ಹಲವರು ಎಂಬುದು ಪ್ರಸ್ತುತ ಸ್ಥಿತಿ. ಸಾಲ ವಿಪರೀತವಾದವರು, ಭೂಮಿಯಿಂದ ಏಳ್ಗೆಯಿಲ್ಲ ಎಂದವರು, ಕೃಷಿ ಮುನ್ನೆಡೆಸಲು ಅಸಾಧ್ಯವಾದವರು ಮಾರುತ್ತಾರೆ. ಮಕ್ಕಳು ನೌಕರಿಗೆ ಸೇರಿ  ಮನೆ ವೃದ್ದಾಶ್ರಮವಾದಾಗ ನಿರ್ಧಾರ ನಡೆದ್ದಿದೆ. ಆದರೆ  ಇಲ್ಲಿ ಹಾಗಲ್ಲ! ಕೃಷಿ ದುಡಿಮೆ, ಕೃಷಿ ಬೆಳೆಯೇ ಲಾಗಾಯ್ತಿನ ಬದುಕಾದವರು, ಕೃಷಿ ಕೆಲಸ ಬಿಟ್ಟು ಬೇರಾವ ಕಾಯಕದಲ್ಲಿ ಪರಿಣಿತಿ ಇಲ್ಲದವರು ಭೂಮಿ ಮಾರಿದ್ದಾರೆ.

ಕಾಡು ನೋಡಿ, ಗುಡ್ಡದ ಎತ್ತರದಲ್ಲಿ ನಿಂತು ಮೇಗನಿ ಸೀಮೆಯ ಸಿರಿ ಆಸ್ವಾದಿಸಬೇಕು. ಅತ್ತಿಗುಡ್ಡೆ, ಗಚ್ಚಿಗೆಬರೆ, ಕುನ್ನಿಕಟ್ಟೆ, ದೇವಕುಂದ ಬೆಟ್ಟಗಳು ಊರು ಸುತ್ತುವರಿದ ಕೋಟೆಗಳು, ಕೊಡಚಾದ್ರಿ ಸೀಮೆಯ ಸೊಬಗು. ಇಂತಹ ಕಾಡೊಳಗೆ ಬೇಸಾಯಕ್ಕೆ ಶತಮಾನದ ಇತಿಹಾಸವಿದೆ. ಕಾಲುದಾರಿಯಲ್ಲಿ ಘಟ್ಟವೇರಿ ಪ್ರಾಣಿಗಳ ಭಯದ ನಡುವೆ ಬದುಕಿದ ಜನಪದ ಮಾರ್ಗ ಒಂದು ಅದ್ಬುತ ಮಹಾಯಾನ!. ಬಾಳೆ, ತೆಂಗು, ಕಬ್ಬು, ತರಕಾರಿ ಎಂದು ಕೌಟುಂಬಿಕ ಅಗತ್ಯಗಳನ್ನು  ನಿಂತ ನೆಲೆಯಲ್ಲಿ ಹುಡುಕಿದ ಸ್ವಾವಲಂಬನೆ ಅದು. ಅಡವಿ ಗಿಡದಲ್ಲಿ ಆಹಾರ, ಆರೋಗ್ಯದ ಪಾಠ ಕಲಿತವರೆಲ್ಲ ಸೇರಿ ಚೆಂದದ ಹಳ್ಳಿ ರೂಪಿಸಿದವರು, ಕುಟುಂಬದ  ಬಳ್ಳಿ ಹಬ್ಬಿಸಿ ಮಣ್ಣಿನ ಹಸಿ ಹಸಿ ಕನಸು ಕಟ್ಟಿದವರು. ಇಂತಹ ಮೇಗನಿ ಊರು ಈಗ ಊರಿನವರದಲ್ಲ !

ಕುಂದಾಪುರ ತಾಲೂಕಿನ ಕೊಲ್ಲೂರಿನ ಪಕ್ಕ ಕಾಶಿ ಹೊಳೆಯಿದೆ. ಇಲ್ಲಿನ ಸೇತುವೆ ದಾಟಿ ಘಟ್ಟದ ಸೀಮೆ ಸಂಪರ್ಕ. ಸಂಪೆ-ಹಳ್ಳಿಬೈಲು-ಕುಮ್‌ಕೋಡು-ಗೋಳಿಗುಡ್ಡೆ ಮುಖೇನ ಮೇಗನಿ ೯ ಕಿಲೋ ಮೀಟರ್ ದೂರ. ಬೇಸಿಗೆಯಲ್ಲಿ ಮಾತ್ರ ವಾಹನ ಸಂಚಾರ. ಫಸ್ಟ್‌ಗೇರ್‌ನಲ್ಲಿ ೫ ಕಿಲೋ ಮೀಟರ್ ಯಾನ! ವಿದ್ಯುತ್ ಇಲ್ಲ, ಶಾಲೆ ಇಲ್ಲ, ಆಸ್ಪತ್ರೆ ಇಲ್ಲ ಹೀಗೆ ಮೂಲಭೂತ ಸೌಕರ್ಯ ವಂಚಿತ ಹಳ್ಳಿ. ಕಳೆದ ಮೂರು ದಶಕಗಳಿಂದ ಸರ್ವಋತು ರಸ್ತೆಗೆ ಹೋರಾಟ. ಮೂಕಾಂಬಿಕಾ ವನ್ಯ ಜೀವಿ ವಲಯದಲ್ಲಿ ಬರುವ ಈ ಪ್ರದೇಶದಲ್ಲಿ ರಸ್ತೆ, ವಿದ್ಯುತ್ ಸಂಪರ್ಕ ಸುಲಭವಲ್ಲ, ಅರಣ್ಯದ ಮುಖೇನ ತಂತಿ-ಮಾರ್ಗ ಬರಬೇಕು. ಕಠಿಣ ವನ್ಯಜೀವಿ ಕಾನೂನು. ಯಾವುದೂ ಕೈಗೂಡಲಿಲ್ಲ,

ರಸ್ತೆ ಇಲ್ಲದ ಕಾರಣಕ್ಕೆ ಗಂಡು ಮಕ್ಕಳಿಗೆ ಹೆಣ್ಣು ಕೊಡುವವರಿಲ್ಲ, ಇಲ್ಲಿನ ಹೆಣ್ಣುಗಳನ್ನು ಮದುವೆಯಾಗಲು ಯಾರೂ ಸಿದ್ದರಿಲ್ಲ. ಕನಿಷ್ಟ ಸೌಲಭ್ಯವಿಲ್ಲದೇ ಹಳ್ಳಿ ಬಳಲಿತು, ಬೋನಿನ ಬದುಕಾಯಿತು.

ಹಳ್ಳಿ ಮಾರಿ ಹಣ ಪಡೆದವರು ಈಗ  ಏಲ್ಲಿದ್ದಾರೆ?  ಏಲ್ಲಿಯೂ ಹೋಗಿಲ್ಲ! ಎಲ್ಲ ಅಲ್ಲೇ ಇದ್ದಾರೆ. ಮೇಗನಿಯ ಕೃಷಿ ಕೂಲಿಗಳಾಗಿ ಬದುಕಿದ್ದಾರೆ !. ತಮ್ಮದೇ ಭೂಮಿಯಲ್ಲಿ ದಿನಗೂಲಿಗೆ ಹೊಸ ಒಡೆಯನ ಕೆಲಸಕ್ಕೆ ಸೇರಿದ್ದಾರೆ. ಈಗ ಇವರ ಮನೆಯೂ ಇವರದಲ್ಲ. ಆದರೆ ಭೂಮಿ ಖರೀದಿಸಿದ ಮಾಲಿಕರು ಮನೆಗಳಲ್ಲಿ ವಾಸ್ತವ್ಯಹೂಡಲು ಅವಕಾಶ ನೀಡಿದ್ದಾರೆ. ಕೃಷಿ ಕೆಲಸ ನಿರ್ವಸುತ್ತ ನೆಮ್ಮದಿ ಕಂಡವರು ಈಗ ಕೂಲಿಯಲ್ಲಿ ಕಾಸು ನೋಡುವಂತಾಗಿದೆ. ಹುಟ್ಟಿ ಬೆಳೆದ ಅದೇ ಮಣ್ಣು, ಅದೇ ಕಾಡು, ನೀರು ನೋಡುತ್ತಿದ್ದರೂ ಒಡೆತನವಿಲ್ಲದ ನೆಲೆಯಲ್ಲಿ ಬದುಕು ಪರಾಧೀನವಾಗಿದೆ.

ಗೋಳಿಗುಡ್ಡೆ ಮೇಗನಿ ಕೆಳಗಿನ ಹಳ್ಳಿ. ಕೃಷಿಗೆ ಕೆಲಸಗಾರರಿಲ್ಲ. ಸಂಪರ್ಕ ರಹಿತ ಇಂತಹ ನೆಲೆಯ ಹೊಸ ತಲೆಮಾರು ಘಟ್ಟದ ಭೂಮಿ ಮಾರಲು ಯೋಚಿಸಿದ ಸಂದರ್ಭಗಳಿವೆ.  ಹಿರಿಯರು ಕಟ್ಟಿದ ಹಳ್ಳಿಯನ್ನು ಹೊಸತಲೆಮಾರು ಹರಾಜಿಗೆ ಒಡ್ಡುವದನ್ನು ಕಲ್ಪಿಸಲೂ ಆಸಾಧ್ಯ. ಈಗ ಮತ್ತಿಷ್ಟು ಗುಡ್ಡಗಳಲ್ಲಿ ‘ಹಳ್ಳಿ ಮಾರಾಟಕ್ಕಿದೆ’ ಬೋರ್ಡು ತಗಲಿಸಿದಂತೆ ಕಾಣುತ್ತಿದೆ. ಕೃಷಿ ತಲ್ಲಣದ ಪರಿಣಾಮಗಳಿವು. ಕತೆ ಇಷ್ಟಕ್ಕೆ ನಿಂತಿಲ್ಲ, ಕುಂದಾಪುರದ ಕಡಲಂಚಿನ ಇಡೀ ಧ್ವೀಪ ಮಾರಾಟ ನಡೆಯುತ್ತ ಒಬ್ಬ ರೈತ ಮಾತ್ರ  ಮಾರಾಟ ಧಿಕ್ಕರಿಸಿ ನಿಂತಿದ್ದಾನೆ. ಉದ್ಯಮಕ್ಕೆ ಅನುಕೂಲತೆ ಇರುವಲ್ಲಿ ಈಗ ಮುಂಗಡ ಬುಕ್ಕಿಂಗ್ ಸಾಗಿದೆ, ಕಡಲ ದಂಡೆಗಳು ಕಾಣದ ಕೈ ಸೇರುತ್ತಿವೆ. ನಮ್ಮ ಹಳ್ಳಿಗಳ ಭವಿಷ್ಯ ಏನಾಗಬಹುದು?