ಬಂಗಾಳದಲ್ಲಿ ವಸಂತ ಪಂಚಮಿಯೆಂದರೆ ವೈಭವದ ಹಬ್ಬ. ವಿದ್ಯೆ, ಸಂಗೀತ, ಕಲೆಗಳ ದೇವತೆ ಸರಸ್ವತಿಯನ್ನು ಪೂಜಿಸಿ ಆರಾಧಿಸುವ ದಿನವೂ ಅದೇ. ನಮ್ಮಲ್ಲಿ ಗಣೇಶನ ಉತ್ಸವ, ಸಮಾರಂಭಗಳನ್ನೇರ್ಪಡಿಸುವಂತೆ ಸರಸ್ವತಿಗೆ ಸಂಭ್ರಮದ ಪೂಜೆ.

ಚಂದಾ ಪಡೆಯಲು ಹುಂಡಿಯನ್ನು ಹಿಡಿದು ಹುಡುಗರ ತಂಡ ಎಂದಿನಂತೆ ಹೊರಟಿತು. ತಮ್ಮ ಸ್ಥಳದ ಗಣ್ಯವ್ಯಕ್ತಿಯೊಬ್ಬರನ್ನು ಕಂಡು ಸರಸ್ವತಿ ಪೂಜೆಗೆಂದು ಚಂದಾ ಕೇಳಿದರು.

ಸರಸ್ವತಿಯ ಪೂಜೆ-ಹೇಗೆ?

“ಹೌದು ನೀವು ಪೂಜೇನ ಹೇಗೆ ಮಾಡ್ತೀರಿ?” ಆ ಹಿರಿಯರ ಪ್ರಶ್ನೆಯಿಂದ ಹುಡುಗರಿಗೆ ಆಶ್ಚರ್ಯವಾಯಿತು. ಹುಡುಗರ ತಂಡದ ಮುಖಂಡ ಧೈರ್ಯ ತಂದುಕೊಂಡು ನುಡಿದ:

“ನಾವು ಸರಸ್ವತಿಯ ವಿಗ್ರಹವನ್ನು ತಂದಿದೇವೆ, ಸಾರ್. ಪುರೋಹಿತರು ಬಂದು ಪೂಜೆ ಮಾಡಿ ಹೋಗ್ತಾರೆ. ಸಂಜೆಗೆ ಧ್ವನಿವರ್ಧಕದ ವ್ಯವಸ್ಥೆಯನ್ನು ಮಾಡಿದ್ದೇವೆ. ಸಂಗೀತವಿದೆ, ನಾಟಕವಿದೆ. ನಾವು ಹೀಗೆ ಪೂಜೆಯನ್ನು ಆಚರಿಸುತ್ತಿದ್ದೇವೆ. ಇದಕ್ಕೆಲ್ಲಾ….”

“ಓಹೋ, ಹೀಗೋ ನೀವು ಪೂಜೆ ಮಾಡುವುದು! ಬನ್ನಿ, ನಾನು ವಿದ್ಯಾದೇವತೆಯನ್ನು ಹೇಗೆ ಪೂಜೆ ಮಾಡುತ್ತೇನೆ ಎನ್ನುವುದನ್ನು ತೋರಿಸುತ್ತೇನೆ” ಎಂದು ಅವರು ಹುಡುಗರನ್ನು ಮಹಡಿಯ ಮೇಲಿದ್ದ ತಮ್ಮ ವ್ಯಾಸಂಗ ಕೋಣೆಗೆ ಕರೆದುಕೊಂಡು ಹೋದರು.

ಆ ಹುಡುಗರು ಅಲ್ಲಿ ಕಂಡದ್ದೇನು? ಕಪಾಟಿನ ಭರ್ತಿ ಪುಸ್ತಕಗಳು-ಅದೂ ಸಹಸ್ರಾರು ಸಂಖ್ಯೆಯಲ್ಲಿ. ಇನ್ನು ಆ ಗ್ರಂಥಗಳ ಭಾಷೆ-ಇಂಗ್ಲಿಷ್, ಫ್ರೆಂಚ್, ಜರ್ಮನ್ ಮತ್ತು ಸಂಸ್ಕೃತ. ವಿಜ್ಞಾನವನ್ನು ಕುರಿತ ಪುಸ್ತಕಗಳೇ ಹೆಚ್ಚು. ಇತಿಹಾಸ, ಅರ್ಥಶಾಸ್ತ್ರ, ಧರ್ಮದರ್ಶನ – ಹೀಗೆ ಉಳಿದವುಗಳ ವಿಷಯ ವೈವಿಧ್ಯ!

ಅವರ ವ್ಯಾಸಂಗದ ಮೇಜಿನ ಮೇಲೂ ಹತ್ತಾರು ಪುಸ್ತಕಗಳು, ಬರೆಯುವ ಕಾಗದ, ಲೇಖನಿ, ಸೀಸದಕಡ್ಡಿ, ಆ ಗಣ್ಯರು ಯಾವುದೋ ಗಾಢ ಅಧ್ಯಯನದಲ್ಲಿ ತೊಡಗಿದ್ದಂತೆ ಅಲ್ಲಿನ ವ್ಯವಸ್ಥೆ ಸೂಚಿಸುತ್ತಿತ್ತು. ಹುಡುಗರು ಒಂದು ಕ್ಷಣ ಬೆಕ್ಕಸ ಬೆರಗಾಗಿ ನಿಂತರು.

“ಹುಂ, ನೋಡಿದಿರಾ! ಕಷ್ಟಪಟ್ಟು ಓದಿದರೆ, ಅದೆ ನೀವು ಸರಸ್ವತಿಯನ್ನು ಪೂಜಿಸುವ ಅತ್ಯುತ್ತಮ ಮಾರ್ಗ” ಹುಡುಗರಿಗೆ ಆ ಹಿರಿಯರು ಹೇಳಿದರು.

"ಕಷ್ಟಪಟ್ಟು ಓದಿದರೆ ಅದೇ ನೀವು ಸರಸ್ವತಿಯನ್ನು ಪೂಜಿಸುವ ಅತ್ಯುತ್ತಮ ಮಾರ್ಗ".

ಇಂಥ ಮುತ್ತಿನಂತಹ ಮಾತುಗಳನ್ನಾಡಿದ ಮಹಾನು ಭಾವರು ಯಾರು ಗೊತ್ತೇ? ಡಾ. ಮೇಘನಾದ ಸಹಾ. ಭಾರತದ ಪ್ರಗತಿಗಾಗಿ ವಿವಿಧ ರೀತಿಗಳಲ್ಲಿ ದುಡಿದುದಲ್ಲದೇ ನಮ್ಮ ನಾಡಿನ ವಿಖ್ಯಾತ ವಿಜ್ಞಾನಿಗಳಲ್ಲೊಬ್ಬರೆನಿಸಿದವರು ಡಾ. ಸಹಾ.

ಶಾಲೆ

ಮೇಘನಾದ ಸಹಾ ಢಾಕಾ ಜಿಲ್ಲೆಯ ಶಿಯೋರಟಾಲಿ ಎಂಬ ಹಳ್ಳಿಯಲ್ಲಿ 1893ರ ಅಕ್ಟೋಬರ್ 6ರಂದು ಜನಿಸಿದರು. ತಂದೆ ಜಗನ್ನಾಥ ಸಹಾ, ತಾಯಿ ಭುವನೇಶ್ವರಿ ದೇವಿ. ಐದು ಗಂಡುಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿದ್ದ ಜಗನ್ನಾಥರ ಸಂಸಾರದಲ್ಲಿ ಮೇಘನಾದ ಐದನೆಯವರು.

ಜಗನ್ನಾಥರು ಆ ಹಳ್ಳಿಯಲ್ಲಿ ಕಿರಾಣಿ ಅಂಗಡಿಯನ್ನಿಟ್ಟುಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದರು. ಈ ಅಂಗಡಿಯಿಂದ ಬರುತ್ತಿದ್ದ ಆದಾಯ ಬಹಳ ಕಡಮೆ.

ಮೇಘನಾದನಿಗೆ ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭವಾಯಿತು. ಶಾಲೆಯಿಲ್ಲದ ವೇಳೆಯಲ್ಲಿ ಬಾಲಕ ಮೇಘನಾದ ತಂದೆಗೆ ಅಂಗಡಿಯಲ್ಲಿ ನೆರವಾಗುತ್ತಿದ್ದ. ಜಗನ್ನಾಥ ಸಹಾಗೆ ಮಗನಿಗೆ ತಮ್ಮ ವ್ಯಾಪಾರದಲ್ಲಿ ತರಬೇತಿ ಕೊಡಬೇಕೆಂದು ಬಯಕೆ. ಅಲ್ಲದೆ ಇಂಗ್ಲಿಷ್ ವಿದ್ಯಾಭ್ಯಾಸವೆಂದರೆ ಮೂವತ್ತು ಮೈಲಿ ದೂರದ ಢಾಕಾ ಶಾಲೆಗೆ ಹುಡುಗನನ್ನು ಕಳುಹಿಸಬೇಕು. ಚಿಕ್ಕ ಹುಡುಗನನ್ನು ಅಷ್ಟು ದೂರ ಕಳುಹಿಸಲು ಮನಸ್ಸು ಬಾರದು. ಅಷ್ಟೊಂದು ವೆಚ್ಚ ವಹಿಸಲು ಅವರಲ್ಲಿ ಹಣವೂ ಸಾಲದು.

ಆದರೆ ಪ್ರಾಥಮಿಕ ಶಾಲೆಯಲ್ಲಿ ಮೇಘನಾದನ ಜಾಣ್ಮೆ ಹಾಗೂ ಶ್ರದ್ಧೆ ಉಪಾಧ್ಯಾಯರೆಲ್ಲರ ಮನಸೆಳೆಯಿತು. ಮೇಘನಾದನ ವ್ಯಾಸಂಗವನ್ನು ಮುಂದುವರಿಸುವಂತೆ ಅವರೆಲ್ಲ ಜಗನ್ನಾಥ ಸಹಾ ಅವರನ್ನು ಒತ್ತಾಯಿಸಿದರು. ಮೇಘನಾದನ ಅಣ್ಣನಿಗೂ ತಮ್ಮನನ್ನು ಓದಿಸಬೇಕೆಂಬ ಆಸೆ.

ಮೇಘನಾದ ಮಾಧ್ಯಮಿಕ ಶಾಲೆ ಸೇರಬೇಕೆಂದರೆ ಅಲ್ಲಿಗೆ ಏಳು ಮೈಲಿ ದೂರದಲ್ಲಿದ್ದ ಸಿಮೂಲಿಯ ಎಂಬ ಹಳ್ಳಿಗೆ ಹೋಗಬೇಕಿತ್ತು. ಪ್ರತಿನಿತ್ಯ ಪುಟ್ಟ ಬಾಲಕ ಹದಿನಾಲ್ಕು ಮೈಲಿ ನಡೆಯುವುದು ಸಾಧ್ಯವೇ? ಕೊನೆಗೆ ಸಿಮೂಲಿಯಲ್ಲಿ ವೈದ್ಯರಾಗಿದ್ದ ಅನಂತಕುಮಾರ ಮೇಘನಾದನನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳಲು ಒಪ್ಪಿದರು.

ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿ ಢಾಕಾ ಜಿಲ್ಲೆಗೇ ಮೇಘನಾದನದು ಪ್ರಥಮ ಸ್ಥಾನ. ಇದರಿಂದ ಅವನಿಗೆ ವಿದ್ಯಾರ್ಥಿ ವೇತನ ದೊರಕಿತು. ಮುಂದೆ ಅವನು ಢಾಕಾ ಕೊಲಿಜೆಯೇಟ್ ಶಾಲೆಯನ್ನು ಸೇರಿ (1905) ಅತ್ಯುತ್ತಮ ವಿದ್ಯಾರ್ಥಿಯೆನಿಸಿಕೊಂಡ. ಈಗ ಅವನಿಗೆ ಶಾಲೆಗೆ ಶುಲ್ಕನೀಡುವುದರಿಂದಲೂ ವಿನಾಯಿತಿ ದೊರೆಯಿತು. ಜೊತೆಗೆ ವ್ಯಾಸಂಗ ವೇತನವೂ ಲಭಿಸಿತು.

ವಿಘ್ನ-ಪರಿಹಾರ

ಇನ್ನೇನು ಎಲ್ಲವೂ ಸುಗಮವಾಯಿತು ಎನ್ನುವಷ್ಟರಲ್ಲಿ ಕಷ್ಟ ಪರಂಪರೆಯ ಸಾಲು ಮೇಘನಾದನ ಮುಂದೆ ಸಿದ್ಧವಾಗಿ ನಿಂತಿತು. ಆಗಿನ ಬ್ರಿಟಿಷ್ ಸರಕಾರ ಬಂಗಾಳವನ್ನು ವಿಭಜಿಸಿತು. ಈ ವಿಭಜನೆಯನ್ನು ಜನತೆ ಪ್ರತಿಭಟಿಸಿತು. ಸ್ವದೇಶಿ ಚಳವಳಿ ಆರಂಭವಾಯಿತು. ಇದಕ್ಕಾಗಿ ಸರ್ಕಾರ ಅನೇಕ ವಿದ್ಯಾರ್ಥಿಗಳನ್ನು ಶಾಲಾ ಕಾಲೇಜುಗಳಿಂದ ಹೊರಕ್ಕೆ ಹಾಕಿತು. ಮೇಘನಾದನಿಗೂ ಈ ಶಿಕ್ಷೆ ವಿಧಿಸಲಾಯಿತು. ಅವನ ವಿದ್ಯಾರ್ಥಿ ವೇತನವೂ ನಿಂತಿತು.

ಮೇಘನಾದನನ್ನು ಯಾವ ಸರ್ಕಾರಿ ಶಾಲೆಯೂ ಸೇರಿಸಿಕೊಳ್ಳುವಂತಿರಲಿಲ್ಲ. ಈ ಸಂದಿಗ್ಧದ ಕಾರ್ಮುಗಿಲಿನಲ್ಲಿ ಬೆಳ್ಳಿ ಅಂಚಿನ ಬೆಳಕು ಮೂಡಿತು. ಢಾಕಾದ ಕಿಶೋರಿಲಾಲ್ ಜ್ಯೂಬಿಲಿ ಶಾಲೆ ಮೇಘನಾದನನ್ನು ಸೇರಿಸಿಕೊಂಡು ವ್ಯಾಸಂಗ ವೇತನವನ್ನೂ ನೀಡಿತು.

ಅಧ್ಯಯನದ ವೈವಿಧ್ಯ

ಕೆಲವು ತಿಂಗಳ ಬಳಿಕ ಮೇಘನಾದ ಢಾಕಾ ಬ್ಯಾಪ್ಟಿಸ್ಟ್ ಮಿಷನ್ನಿನ ಬೈಬಲ್ ತರಗತಿಗೆ ಸೇರಿದ. ಇದರಿಂದ ಕೆಲವರಿಗೆ ಆಶ್ಚರ್ಯ. ಮತ್ತೆ ಕೆಲವರಿಗೆ ಆತಂಕ. ಮೇಘನಾದ ಮತಾಂತರ ಹೋಂದುವನೇ? ವಾಸ್ತವವಾಗಿ ಮೇಘನಾದನ ಉದ್ದೇಶವೇ ಬೇರೆ ಇತ್ತು. ಧಾರ್ಮಿಕ ಗ್ರಂಥಗಳು, ಅತ್ಯಂತ ಪ್ರಾಚೀನ ವಿಜ್ಞಾನವೆನಿಸಿರುವ ಖಗೋಳಶಾಸ್ತ್ರದ ಬಗೆಗೆ ಮಾಹಿತಿ ನೀಡಬಲ್ಲವು. ವಿಜ್ಞಾನ, ಚರಿತ್ರೆಯ ಅಭ್ಯಾಸಗಳಿಗೆ ಇದರಿಂದ ಪ್ರಯೋಜವಿದೆ. ಈ ದೃಷ್ಟಿಯಿಂದ ಮೇಘನಾದನಿಗೆ ಚರಿತ್ರೆಯ ಅಧ್ಯಯನದಲ್ಲಿ ಅತ್ಯಾಸಕ್ತಿ. ಹಿಂದೂಧರ್ಮದ ಜೊತೆಗೆ ಕ್ರೈಸ್ತ, ಬೌದ್ಧ, ಜೈನ ಮತ್ತು ಇಸ್ಲಾಂ ಮತಗಳನ್ನು ಮೇಘನಾದ ಅಭ್ಯಾಸ ಮಾಡಿದ. ಅಖಿಲ ಬಂಗಾಳಿ ಬೈಬಲ್ ಪರೀಕ್ಷೆಯಲ್ಲಿ ಈ ಶಾಲಾ ಬಾಲಕ ತನ್ನ ಸ್ಪರ್ಧಿಗಳಾದ ಹಲವಾರು ಕಾಲೇಜು ವಿದ್ಯಾರ್ಥಿಗಳನ್ನು ಸೋಲಿಸಿ ಪ್ರಪ್ರಥಮ ಸ್ಥಾನ ಗಳಿಸಿದ.

ಮೇಘನಾದನಿಗೆ ತನ್ನ ಅಧ್ಯಯನದಲ್ಲಿ ಎಂದೂ ಅತ್ಯಂತ ಶ್ರದ್ಧೆ. ತನ್ನ ವ್ಯಾಸಂಗ ವಿಷಯವನ್ನು ಕೂಲಂಕುಷವಾಗಿ ತಿಳಿಯುವ ತಡೆಯಲಾರದ ತವಕ ಅವನದು. ತಾನು ಹಿಡಿದ ಕೆಲಸದಲ್ಲಿ ನಿಷ್ಠೆಯಿಂದ ಕಾರ್ಯತತ್ಪರನಾಗುವುದು ಮೇಘನಾದನ ಶ್ರೇಷ್ಠ ಗುಣಗಳಲ್ಲೊಂದು.

೧೯೦೯ನೇ ವರ್ಷ ಎಂಟ್ರೆನ್ಸ್‌ಪರೀಕ್ಷೆಯಲ್ಲಿ ಇಡೀ ಪೂರ್ವ ಬಂಗಾಳಕ್ಕೆ ಪ್ರಥಮ ಸ್ಥಾನದಲ್ಲಿ ಮೇಘನಾದ ಉತ್ತೀರ್ಣನಾದ. ಗಣಿತ ಶಾಸ್ತ್ರದಲ್ಲೂ ಪ್ರಥಮ ಸ್ಥಾನವನ್ನು ಗಳಿಸಿದ.

ಇಂಟರ್ ಮೀಡಿಯೇಟ್ ಪರೀಕ್ಷೆಗೆ ಭೌತ, ರಸಾಯನ, ಗಣಿತ ಶಾಸ್ತ್ರಗಳು ಮತ್ತು ಜರ್ಮನ್ ಭಾಷೆ ವಿಶೇಷ ಅಧ್ಯಯನದ ವಿಷಯಗಳಾಗಿದ್ದವು. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಮೇಘನಾದ ರಸಾಯನ ಮತ್ತು ಗಣಿತ ಶಾಸ್ತ್ರದಲ್ಲಿ ಪ್ರಥಮ ಸ್ಥಾನಗಳಿಸಿದರೂ ಒಟ್ಟಂಕದಲ್ಲಿ ಅವರಿಗೆ ಮೂರನೆಯ ಸ್ಥಾನ ದೊರಕಿತು.

೧೯೧೧ರಲ್ಲಿ ಮೇಘನಾದ ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿ ಗಣಿತ ಶಾಸ್ತ್ರದಲ್ಲಿ ಆನರ್ಸ್‌ವ್ಯಾಸಂಗವನ್ನು ಆರಂಭಿಸಿದರು. ಆನಂತರ ಮಾಸ್ಟರ್ ಪದವಿಗೆ ಅಧ್ಯಯನವನ್ನು ಮುಂದುವರಿಸಿದರು. ಈ ಎರಡೂ ಪರೀಕ್ಷೆಗಳಲ್ಲಿ ಅವರು ವಿಶ್ವವಿದ್ಯಾನಿಲಯಕ್ಕೇ ಎರಡನೇ ಸ್ಥಾನವನ್ನು ಗಿಟ್ಟಿಸಿದರು.

ಶಿಷ್ಯರ ಪುಣ್ಯ – ಗುರುಗಳ ಭಾಗ್ಯ

ಮೇಘನಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುತ್ತಿದ್ದ ಕಾಲವನ್ನು ಸುವರ್ಣ ಕಾಲವೆಂದರೆ ತಪ್ಪಾಗಲಾರದು. ಕಾಲೇಜಿನಲ್ಲಿ ಆಗ ಅವರು ಕಲಿತ ವಿದ್ಯೆ, ಪಡೆದ ಸುಖ ಮುಂದೆ ಇವರ ಬದುಕನ್ನು ರೂಪಿಸಿತು ಎನ್ನಬಹುದು. ಮುಂದೆ ತಮ್ಮ ಬುದ್ಧಿಶಕ್ತಿಯಿಂದ ಇಡೀ ಭಾರತದಲ್ಲಿ ಪ್ರಸಿದ್ಧರಾದ ಸತ್ಯೇಂದ್ರನಾಥ ಬೋಸ್, ನಿಖಿಲ್ ರಂಜಾನ್ ಸೇನ್, ಜೆ.ಸಿ.ಘೋಷ್, ಜೆ.ಎನ್. ಮುಖರ್ಜಿ ಇವರೆಲ್ಲ ಮೇಘನಾದರ ಸಹಪಾಠಿಗಳು. ನೇತಾಜಿ ಸುಭಾಷ್ ಚಂದ್ರಬೋಸ್ ಇವರಿಗಿಂತ ಮೂರು ವರ್ಷ ಕಿರಿಯರು. ಅವರ ಸೋದರ ಶರತ್‌ಚಂದ್ರ ಬೋಸ್ ಮೇಘನಾದರ ಸಮಕಾಲೀನರು.

ಈ ತರುಣರ ತಂಡಕ್ಕೆ ಆಗ ವಿದ್ಯೆಯನ್ನು ಕಲಿಸುತ್ತಿದ್ದ ಅಧ್ಯಾಪಕರೇನು ಸಾಮಾನ್ಯರೇ? ಜಗದೀಶಚಂದ್ರ ಬೋಸರು ಭೌತಶಾಸ್ತ್ರವನ್ನೂ, ಆಚಾರ್ಯ ಪ್ರಫುಲ್ಲಚಂದ್ರ ರಾಯ್ ರಸಾಯನ ಶಾಸ್ತ್ರವನ್ನೂ ಅವರಿಗೆ ಬೋಧಿಸುತ್ತಿದ್ದರು. ಭಾರತದ ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಹಿರಿಮೆ-ಗರಿಮೆಯನ್ನು ಗಳಿಸಿದ ಈ ಬೋಧಕರು ಮಹಾ ರಾಷ್ಟ್ರೀಯವಾದಿಗಳೂ ಆಗಿದ್ದು, ತಮ್ಮ ವಿದ್ಯಾರ್ಥಿಗಳಿಗೆ ಬದುಕಿನ ಉತ್ತಮ ಮೌಲ್ಯಗಳ ಬಗೆಗೆ, ನಿಶ್ಚಿತ ಗುರಿಯನ್ನೂ ಸ್ಫೂರ್ತಿಯನ್ನೂ ನೀಡುವ ಮಾರ್ಗದರ್ಶಿಗಳಾಗಿದ್ದರು.

ವಿಜ್ಞಾನಕ್ಕೆ ಮುಡಿಪು

ಮೇಘನಾದರ ಮಿತ್ರರಲ್ಲಿ ಸುಭಾಷ್‌ಚಂದ್ರ ಬೋಸ್, “ಬಾಘಾ ಜತೀನ್” ಮತ್ತು ಕುಸ್ತಿಪಟು ಪುಲಿನ್‌ದಾಸ್ ಸೇರಿದ್ದರು. ಹುಲಿಯೊಡನೆ ಹೋರಾಡಿ ಕೇವಲ ಚಾಕುವೊಂದರಿಂದ ಅದನ್ನು ಕೊಂದ ಸಾಹಸಿ ಜತೀನ್. ಆಗ ಬ್ರಿಟಿಷ್ ಸಿಂಹದ ವಿರುದ್ಧ ಬಂಡಾಯವೇಳಲು ಸನ್ನಾಹ ನಡೆಸುತ್ತಿದ್ದ. ಪುಲಿನ್‌ದಾಸ್‌ವ್ಯಾಯಾಮ ಶಾಲೆಯೊಂದನ್ನು ನಡೆಸುತ್ತಿದ್ದರು. ವ್ಯಾಯಾಮ, ಕತ್ತಿವರಸೆ, ಕುಸ್ತಿ ಮೊದಲಾದವುಗಳನ್ನು ಅಲ್ಲಿ ಹೇಳಿಕೊಡುತ್ತಿದ್ದರು. ಜೊತೆಗೆ ಯುವಕ, ಯುವತಿಯರಿಗೆ ರಾಷ್ಟ್ರೀಯ ಭಾವನೆ ಕುರಿತು ಅಭಿಮಾನ ತುಂಬುತ್ತಿದ್ದರು. ಪೊಲೀಸರು ಮತ್ತು ಬ್ರಿಟಿಷ್ ಸರಕಾರದ ಗೂಢಚಾರರಿಗೆ ಈ ವ್ಯಾಯಾಮ ಶಾಲೆಯ ಮೇಲೆ ಒಂದು ಕಣ್ಣು.

ಇಂತಹ ಉತ್ಸಾಹಿ ರಾಷ್ಟ್ರೀಯವಾದಿಗಳು ಮತ್ತು ಕ್ರಾಂತಿಕಾರಿ ವ್ಯಕ್ತಿಗಳ ನಿಕಟ ಸಂಪರ್ಕ ಹೊಂದಿದ್ದರೂ ಮೇಘನಾದ ಅವರ ಕಾರ್ಯಕಲಾಪಗಳಲ್ಲಿ ಆಸ್ಥೆ ವಹಿಸಲಿಲ್ಲ. ಕಾರಣವಿಷ್ಟೆ. ಒಂದು, ಬಡತನದ ಕಡಿವಾಣ ಅವರನ್ನು ಕಟ್ಟಿ ಹಾಕಿತ್ತು; ಮತ್ತೊಂದು, ವಿಜ್ಞಾನ ಅಧ್ಯಯನದ ಮೇಲಿನ ಅವರ ಅಪ್ರತಿಮೆ ಪ್ರೇಮ.

ಮನೆಪಾಠದ ಮೇಷ್ಟ್ರು

ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮುಗಿದ ಬಳಿಕ, ಮೇಘನಾದರು “ಫೈನಾನ್ಸ್ ಸರ್ವಿಸ್‌” ಸ್ಪರ್ಧಾ ಪರೀಕ್ಷೆಗೆ ಕುಳಿತುಕೊಳ್ಳಲು ಯತ್ನಿಸಿದರು. ಆದರೆ ಅದರ ಮಿತ್ರರನೇಕರು ಸಕ್ರಿಯ ರಾಷ್ಟ್ರೀಯವಾದಿಗಳೂ ಕ್ರಾಂತಿಕಾರರೂ ಆಗಿರಲಿಲ್ಲವೇ? ಬ್ರಿಟಿಷ್ ಸರಕಾರಕ್ಕೆ ಅಷ್ಟೇ ಕಾರಣ ಸಾಕಾಗಿತ್ತು. ಅದು ಅವರು ಆ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹರಲ್ಲ ಎಂದು ಘೋಷಿಸಿತು.

ಈಗ ಅವರಿಗೆ ಉಳಿದಿದ್ದ ಒಂದೇ ದಾರಿ – ಅಧ್ಯಾಪನ. ಕಲ್ಕತ್ತ ನಗರದ ಮೂಲೆ ಮೂಲೆಗಳಲ್ಲಿ ದೊರಕಿದ ವಿದ್ಯಾರ್ಥಿಗಳಿಗೆ ಮನೆಪಾಠದ ಮೇಷ್ಟ್ರಾಗಿ ತಮ್ಮ ವೃತ್ತಿಯನ್ನು ಅವರು ಆರಂಭಿಸಬೇಕಾದುದು ಅನಿವಾರ್ಯವಾಯಿತು. ಈ ಪಾಠಗಳನ್ನು ಹೇಳಿಕೊಡುವ ಸಲುವಾಗಿ ಹಿಂದಕ್ಕೂ ಮುಂದಕ್ಕೂ ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನಡೆದು ಇಲ್ಲವೇ ಸೈಕಲ್ ಸವಾರರಾಗಿ ಅವರು ನಿತ್ಯ ಯಾತ್ರೆ ನಡೆಸತೊಡಗಿದರು.

೧೯೧೬ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಅಶೊತೋಷ್ ಮುಖರ್ಜಿಯವರು ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕ ಹುದ್ದೆಯನ್ನು ಸಹಾ ಅವರಿಗೆ ನೀಡಿದರು. ಅನಂತರ ಅವರನ್ನು ಭೌತವಿಜ್ಞಾನ ವಿಭಾಗಕ್ಕೆ ವರ್ಗಾಯಿಸಲಾಯಿತು.

ಇದರಿಂದ ಸಹಾ ಅವರು ಸ್ನಾತಕೋತ್ತರ ಪದವಿ ತರಗತಿಗೆ ಭೌತವಿಜ್ಞಾನವನ್ನು ಬೊಧಿಸಬೇಕಾಯಿತು. ಇದು ಅವರಿಗೊಂದು ಸವಾಲಾಯಿತು. ತಮ್ಮ ಡಿಗ್ರಿ ಪರೀಕ್ಷೆಗೆಂದು ಓದಿದ್ದ ಭೌತಶಾಸ್ತ್ರದ ಆಧಾರದ ಮೇಲೆ ಈಗ ಅವರು ವಿಶೇಷ ಅಭ್ಯಾಸ ಮಾಡತೊಡಗಿದರು. ಉತ್ತಮ ಗಣಿತ ಜ್ಞಾನದ ಅಡಿಪಾಯದ ಮೇಲೆ ಭೌತ ವಿಜ್ಞಾನದ ಸೌಧವನ್ನು ನಿರ್ಮಿಸತೊಡಗಿದರು.

ಬೆಳಕು ಬಾಗಿತೆಂದರೆ?

ವಿಖ್ಯಾತ ವಿಜ್ಞಾನಿ ಐಸ್‌ಸ್ಟೈನರ ಹೆಸರನ್ನು ಕೇಳದವರಾರು? ಜರ್ಮನ್ ಭಾಷೆಯಲ್ಲಿ ಐನ್‌ಸ್ಟೈನರ ಸಾಪೇಕ್ಷ ಸಿದ್ಧಾಂತ- “ಥಿಯರಿ ಆಫ್ ರಿಲೆಟಿವಿಟಿ” ಎಂದರೆ ಗಣಿತ ಶಾಸ್ತ್ರದ ದುರ್ಗಮ ದುರ್ಗ, ಕಬ್ಬಿಣದ ಕಡಲೆ. ಮೇಘನಾದರು ಅದನ್ನು ಅತ್ಯಂತ ಸುಲಭವಾಗಿ ಗ್ರಹಿಸಿಕೊಳ್ಳುವ ಸಾಮರ್ಥ್ಯ ಪಡೆದಿದ್ದರು. ಮುಂದೆ ತಮ್ಮ ಸಹೋದ್ಯೋಗಿ ಸತ್ಯೇನ್ ಬೋಸರೊಂದಿಗೆ ಅದಕ್ಕೆ ಸಂಬಂಧಿಸಿದ ಪುಸ್ತಕವನ್ನು ಜರ್ಮನ್ ಭಾಷೆಯಿಂದ ಇಂಗ್ಲಿಷಿಗೆ ತರ್ಜುಮೆ ಮಾಡಿದರು.

ಐನ್‌ಸ್ಟೈನರ ಸಿದ್ಧಾಂತವು ಸರಿಯೆಂದು ೧೯೧೯ರ ಮೇ ೨೯ರ ಸೂರ್ಯಗ್ರಹಣ ಕಾಲದಲ್ಲಿ ಪ್ರಯೋಗಗಳಿಂದ ತಿಳಿದುಬಂದಿತು. ಕಲ್ಕತ್ತದ ಸ್ಟೇಟ್ಸ್‌ಮನ್‌ಪತ್ರಿಕೆಗೆ “ನಕ್ಷತ್ರದಿಂದ ಹೊರಟು ಬೆಳಕು ಸೂರ್ಯನ ಬಳಿ ಬಂದಾಗ ಬಾಗಿತು” ಎಂಬ ಸುದ್ದಿ ತಲುಪಿತು. ಆದರೆ ಈ ಸುದ್ದಿಯ ಅರ್ಥವೇನು? ಮಹತ್ವವೇನು? ಇದರ ಅರ್ಥವನ್ನು ವಿವರಿಸಿ ಪ್ರಕಟಿಸುವ ಪ್ರಯತ್ನವನ್ನು ಪತ್ರಿಕೆ ಮಾಡಿತು. ಇದಕ್ಕೆ ವಿವರಣೆ ನೀಡಬಲ್ಲ ವ್ಯಕ್ತಿಗಾಗಿ ಅವರ ಹುಡುಕಾಡಿದರು. ಅದೃಷ್ಟವಶಾತ್ ಅವರಿಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾ ಅವರ ಭೇಟಿಯಾಯಿತು. ಮಾರನೆಯ ದಿನವೇ “ಬೆಳಕಿನ ಬಾಗುವಿಕೆ”ಯನ್ನು ವಿವರಿಸಿದ ಅವರ ಲೇಖನ ಪ್ರಕಟಗೊಂಡಿತು.

ಬೆಳಕಿನ ಭಾರ!

ಐನ್‌ಸ್ಟೈನ್‌ತಮ್ಮ ಸಾಪೇಕ್ಷ ಸಿದ್ಧಾಂತದಲ್ಲಿ ಮತ್ತೊಂದು ಮಾತು ಹೇಳಿದರು. ಬೆಳಕಿಗೂ ಭಾರವಿದೆ. ಯಾವುದೇ ವಸ್ತುವಿನಂತೆ, ಕಲ್ಲು ಕವಡೆಗಳಂತೆ ಬೆಳಕಿಗೂ ಭಾರವಿದೆಯೆಂದರೆ ಯಾರಿಗೆ ತಾನೇ ಆಶ್ಚರ್ಯವಾಗದು? ಹಾಗಾದರೆ ಬೆಳಕು ಯಾವುದಾದರೊಂದು ವಸ್ತುವಿಗೆ ಡಿಕ್ಕಿ ಹೊಡೆದರೆ ಆ ವಸ್ತುವಿಗೆ ನೂಕಿದಂತೆ ಅಥವಾ ಒತ್ತಡ ಬಿದ್ದ ಹಾಗೆ ಅನುಭವವಾಗಬೇಕು. ಐನ್‌ಸ್ಟೈನ್ ಮತ್ತು ಜೇಮ್ಸ್ ಕ್ಲರ್ಕ್‌ಮ್ಯಾಕ್ಸ್‌ವೆಲ್ ಗಣಿತ ಶಾಸ್ತ್ರದ ಪ್ರಕಾರ ಬೆಳಕಿನ ಈ ಒತ್ತಡವನ್ನು ಲೆಕ್ಕ ಹಾಕಿದರು.

ಆದರೆ ಬೆಳಕಿನ ಒತ್ತಡ ಅತ್ಯಂತ ದುರ್ಬಲವಾದುದು. ಅದನ್ನು ಪ್ರಯೋಗಗಳಿಂದ ಪರೀಕ್ಷಿಸುವುದು ಹೇಗೆ? ಅಮೆರಿಕ ಮತ್ತು ರಷ್ಯದ ವಿಜ್ಞಾನಿಗಳು ಈ ಪ್ರಯೋಗವನ್ನು ನಡೆಸಲು ಪ್ರಯತ್ನಿಸಿ ವಿಫಲರಾದರು. ಇದಕ್ಕೆ ಅಗತ್ಯವಾದ ಅತ್ಯಂತ ಸೂಕ್ಷ್ಮ ಉಪಕರಣವನ್ನು ಯಶಸ್ವಿಯಾಗಿ ತಯಾರಿಸಿದವರಲ್ಲಿ ಮೇಘನಾದ ಮೊದಲನೆಯವರು. ಬೆಳಕಿನ ಒತ್ತಡವನ್ನು ಅಳೆದು ಬೆಳಕಿನ ಒತ್ತಡದ ಸಿದ್ದಾಂತವನ್ನು ಮೇಘನಾದರು ಪುಷ್ಟೀಕರಿಸಿದರು. ಕಲ್ಕತ್ತ ವಿಶ್ವವಿದ್ಯಾನಿಲಯ ಅವರಿಗೆ ೧೯೧೮ರಲ್ಲಿ ಡಾಕ್ಟರ್ ಆಫ್ ಸೈನ್ಸ್ ಪ್ರಶಸ್ತಿಯನ್ನು ನೀಡಿತು.

ಮುಂದೆ ಮೇಘನಾದರ ಸಂಶೋಧನಾ ದೃಷ್ಟಿ ಬೇರೆ ದಿಕ್ಕಿಗೆ ಹರಿಯಿತು. ಸೂರ್ಯ ನಮಗೆಲ್ಲರಿಗೂ ಗೊತ್ತು. ನಕ್ಷತ್ರಗಳನ್ನೂ ನಾವು ಕಾಣಬಲ್ಲೆವು. ಆದರೆ ಅವುಗಳ ರಚನೆ ಹೇಗಿದೆ? ಅವುಗಳ ಶರೀರದಲ್ಲಿ ಅಡಕವಾಗಿರುವುದಾದರೂ ಏನು? ಅವುಗಳ ಹುಟ್ಟು-ಬದುಕು-ಸಾವೆಂತು?

ಬಿಳಿಯ ಬೆಳಕಿನ ಕಿರಣವೊಂದನ್ನು ಮುಪ್ಪಟ್ಟೆ ಗಾಜು ಅಥವಾ “ಪ್ರಿಸಮ್‌”ನ ಮೂಲಕ ಹಾಯಿಸಿದಾಗ ಅದು ವಕ್ರೀಭವನವಾಗಿ ನೇರಳೆ, ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣದ ಕಿರಣಗಳಾಗಿ ವಿಶ್ಲೇಷಣೆ ಹೊಂದುತ್ತದೆ. ಇಡಿಯಾದ ಬಿಳಿಯ ಬೆಳಕು ಬಿಡಿ ಬಿಡಿಯಾಗಿ ಬೇರೆ ಬೇರೆ ಬಣ್ಣದ ಕಿರಣಗಳಾಗಿ ಪರದೆಯ ಮೇಲೆ ಬೀಳುತ್ತದೆ. ಈ ಬಣ್ಣದ ವಿನ್ಯಾಸಕ್ಕೆ ರೋಹಿತ (Spectrum) ವೆನ್ನುತ್ತಾರೆ. ಪ್ರಕೃತಿಯಲ್ಲಿ ನಾವು ಕಾಣುವ ರೋಹಿತವೆಂದರೆ ಕಾಮನಬಿಲ್ಲು. ಹೀಗೆ ಬೆಳಕಿನ ಒಡಲನ್ನು ಒಡೆದು ಕಾಣಿಸುವ ಉಪಕರಣಕ್ಕೆ “ರೋಹಿತ ದರ್ಶಕ” (Spectrometer) ವೆನ್ನುತ್ತಾರೆ.

ವಿಜ್ಞಾನಿಗಳು ಆಮ್ಲಜನಕ, ಜಲಜನಕ, ಕ್ಯಾಲ್ಸಿಯಂ, ಕಬ್ಬಿಣ ಮೊದಲಾದ ವಸ್ತುಗಳನ್ನು ಅವು ಬೆಳಕು ಬೀರುವವರೆಗೆ ದಹನಗೊಳಿಸಿದ್ದಾರೆ. ಹೀಗೆ ಬಂದ ಬೆಳಕನ್ನು ವಿಶ್ಲೇಷಿಸಿದ್ದಾರೆ. ಅವುಗಳ ರೋಹಿತದ ಛಾಯಾಚಿತ್ರ ತೆಗೆದಿದ್ದಾರೆ. ಈಗ ಪ್ರತಿ ವಸ್ತುವನ್ನು ಅದರ ರೋಹಿತವರ್ಣ (Spectralcolour) ಅಥವಾ ರೋಹಿತ ರೇಖೆಯನ್ನು (Spectrallines) ಆಧರಿಸಿ ಗುರುತಿಸುವುದು ಸಾಧ್ಯ. ಆದರೆ ಸೂರ್ಯ ಮತ್ತು ನಕ್ಷತ್ರಗಳ ಕೆಲವೊಂದು ರೋಹಿತ ರೇಖೆಗಳನ್ನು ಅರ್ಥ ಮಾಡಿಕೊಳ್ಳುವುದೂ ವಿವರಿಸುವುದೂ ಕಷ್ಟವಾಯಿತು.

ಆಚಾರ್ಯ ಪ್ರಫುಲ್ಲಚಂದ್ರ ರಾಯ್, ಜಗದೀಶಚಂದ್ರ ಬೋಸ್‌ರಂತಹ ಪೂಜ್ಯ ಗುರುಗಳ ಖ್ಯಾತ ಶಿಷ್ಯ ಮೇಘನಾದ ಸಹಾ.(ಹಿನ್ನೆಲೆ: ಸಹಾ ಇನ್ಸ್‌ಟಿಟ್ಯೂಟ್‌ಆಫ್ ನ್ಯೂಕ್ಲಿಯರ್ ಫಿಸಿಕ್ಸ್)

ಈ ಸಮಸ್ಯೆ ಡಾ. ಸಹಾ ಅವರಿಗೆ ಸವಾಲಾಯಿತು. ಕೊನೆಗೆ ಕೆಲವು ಗಣಿತ ಲೆಕ್ಕಾಚಾರಗಳನ್ನು ಮಾಡಿ ಸಮಸ್ಯೆಯ ಪರಿಹಾರವನ್ನು ಸೂಚಿಸಿದರು.

ಸಾಧಾರಣ ಅನಿಲಗಳು ಅಥವಾ ಬಾಷ್ಟಗಳು ವಿದ್ಯುತ್ತಿನಲ್ಲಿ ತಟಸ್ಥವಾಗಿರುತ್ತವೆ. ಆದರೆ ಸೂರ್ಯನ ಶರೀರದಲ್ಲಿ ದಹಿಸುತ್ತಿರುವ ಅನಿಲಗಳು ಸಾಧಾರಣ ಅನಿಲ ಅಥವಾ ಬಾಷ್ಪಗಳಂತಿರುವುದಿಲ್ಲ. ಸೂರ್ಯನ ಶರೀರದಲ್ಲಿನ ಶಾಖಕ್ಕೆ, ಒತ್ತಡಕ್ಕೆ ಪರಮಾಣಗುಳು ತಮ್ಮ ಸಾಮಾನ್ಯ ಸ್ಥಿತಿಯಲ್ಲಿರಲು ಸಾಧ್ಯವೇ? ಅವು ಒಡೆಯುತ್ತವೆ; ತಮ್ಮ ವಿದ್ಯುತ್ ಸಮತೋಲನ ಸ್ಥಿತಿ ಅಥವಾ ತಟಸ್ಥತೆಯನ್ನು ಕಳೆದುಕೊಳ್ಳತ್ತವೆ. ಆಗ ಅವು ವಿದ್ಯುತ್ ಉದ್ರೇಕ ಹೊಂದುತ್ತವೆ ಅಥವಾ “ಅಯಾನು”ಗಳಾಗುತ್ತವೆ. ಇದನ್ನೇ ಉಷ್ಣ ಅಯಾನು ಪ್ರಕ್ರಿಯೆ (Thermionic effect) ಎನ್ನುತ್ತಾರೆ.

ಮೇಘನಾದ ಸಹ ನಕ್ಷಗಳಲ್ಲಿನ ವಸ್ತುಗಳನ್ನು ಪತ್ತೆ ಹಚ್ಚಲು ಇದರ ಆಧಾರದ ಮೇಲೆ ರೂಪಿತವಾದ ಒಂದು ಪದ್ಧತಿಯನ್ನು ಸೂಚಿಸಿದರು. ಡಾ. ಸಹಾ ತಮ್ಮ ಉಷ್ಣ ಅಯಾನು ಸಿದ್ಧಾಂತವನ್ನು ಲಂಡನ್ನಿನ ಫಿಲಸಾಫಿಕಲ್ ಮ್ಯಾಗಜೀನಿನಲ್ಲಿ ೧೯೨೦ರಲ್ಲಿ ಪ್ರಕಟಿಸಿದರು. ಆಗ ಅವರಿಗಿನ್ನೂ ೨೭ ವರ್ಷ ವಯಸ್ಸು.

ಡಾ. ಸಹಾ ಅವರಿಗೆ ೧೯೧೯ರ ವ್ಯಾಸಂಗ ವೇತನ ಮತ್ತು ಪ್ರಯಾಣ ವೇತನಗಳು ದೊರಕಿ ಅವರು ಯುರೋಪಿಗೆ ಹೋಗಲು ಸಹಾಯವಾಯಿತು.

ಲಂಡನ್‌ನ ಇಂಪೀರಿಯಲ್ ಕಾಲೇಜ್ ಆಫ್ ಸೈನ್ಸ್‌ನ ಪ್ರಾಧ್ಯಾಪಕ ಫೌಲರ್, ರೋಹಿತ ದರ್ಶಕಗಳಲ್ಲಿ ಖ್ಯಾತಿ ಗಳಿಸಿದ ವಿಜ್ಞಾನಿ. ಮಿತ್ರರೊಬ್ಬರ ಸಲಹೆಯಂತೆ ಡಾ|| ಸಹಾ ಫೌಲರ್ ಅವರನ್ನು ಕಂಡರು. ಸಹಾ ಅವರ ಸಂಶೋಧನಾಸಕ್ತಿಯನ್ನು ಕಂಡು ಫೌಲರ್ ಅವರನ್ನು ಸಂಶೋಧಕ ಸಹಾಯಕರನ್ನಾಗಿ ನೇಮಿಸಿಕೊಂಡರು. ಸಹಾ ಅವರಿಗೆ ತಮ್ಮ ಉಷ್ಣ ಅಯಾನು ಸಿದ್ಧಾಂತವನ್ನು ಸ್ಥಿರ ಆಧಾರದ ಮೇಲೆ ಸಂಸ್ಥಾಪಿಸಲು ಈ ಹೊಸ ಪರಿಚಯ ನೆರವಾಯಿತು.

ಸೂರ್ಯನ ಶರೀರದಲ್ಲಿರುವಂತೆಯೇ ನಮ್ಮ ಪ್ರಯೋಗಾಲಯದಲ್ಲಿ ಅಷ್ಟು ಹೆಚ್ಚಿನ ಶಾಖವನ್ನಾಗಲೀ, ಒತ್ತಡವನ್ನಾಗಲೀ ಪಡೆಯಲು ಸಾಧ್ಯವೆ? ಅಂಥ ಶಾಖ, ಒತ್ತಡವನ್ನು ಪಡೆಯುವ ಉಪಕರಣ ಎಲ್ಲುಂಟು? ಕೇಂಬ್ರಿಜ್‌ನ ಖ್ಯಾತ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿಯೂ ಅದು ದೊರೆಯಲಿಲ್ಲ. ಜರ್ಮನಿಯ ಪ್ರಾಧ್ಯಾಪಕ ನರ್ಸ್ಟ್‌ಅವರ ಪ್ರಯೋಗಾಲಯದಲ್ಲೇನಾದರೂ ದೊರಕೀತೆ? ಅಲ್ಲಿ ಪ್ರಯತ್ನಿಸುವಂತೆ ಫೌಲರ್ ಸಹಾಗೆ ಸೂಚಿಸಿದರು.

ಈ ಮಧ್ಯೆ ಮೆಕ್‌ಲೆನಾನ್ ಎಂಬಾತ ಸಹಾ ಅವರ ಉಷ್ಣ ಅಯಾನು ಸಿದ್ಧಾಂತವನ್ನು ಕುರಿತು ಪ್ರಯೋಗಗಳನ್ನು ನಡೆಸಿದ. ಮೆಕ್‌ಲೆನಾನ್ ಪಾದರಸದ ಬಾಷ್ಪವನ್ನು ತನ್ನ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದ. ಸಹಾ ಸೂಚಿಸಿದ್ದಂಥ ರೋಹಿತವನ್ನು ಮೆಕ್‌ಲೆನಾನ್ ಪಡೆಯಲಿಲ್ಲ. ಇದರಿಂದ ಸಹಾ ಸಿದ್ಧಾಂತವು ತಪ್ಪಿರಬೇಕೆಂದು ಅವನು ತೀರ್ಮಾನಿಸಿದ.

ಈ ಸುದ್ದಿ ಸಹಾಗೆ ತಿಳಿಯಿತು. ಅದಕ್ಕೆ ಅವರು ವಿವರಣೆಯನ್ನು ನೀಡಿದರು. ಪ್ರಯೋಗಾಲಯದಲ್ಲಿ ಪಾದರಸವನ್ನು ಅಯಾನುವಾಗಿ ಪರಿವರ್ತಿಸುವುದು ಕಷ್ಟ. ಆದರೆ ಕ್ಷಾರೀಯ ಲೋಹಗಳಾದ ಸೋಡಿಯಂ, ಪೊಟಾಸಿಯಂ ಮೊದಲಾದವುಗಳನ್ನು ಪ್ರಯೋಗಾಲಯದಲ್ಲಿಯೇ ಅಷ್ಟು ಕಷ್ಟಪಡದೆ ಅಯಾವಸ್ಥೆಯಲ್ಲಿ ಪಡೆಯಬಹುದು. ಕೇವಲ ಸಾಧಾರಣ ಶಾಖದಲ್ಲಿಯೇ ರುಬಿಡಿಯಂ, ಕೇಸಿಯಂ ಮೊದಲಾದ ವಸ್ತುಗಳನ್ನು ಅಯಾವಸ್ಥೆಯಲ್ಲಿ ಹೊಂದಬಹುದು.

ಸೂರ್ಯನ ತೀಕ್ಷ್ಣ ಶಾಖದಿಂದ ಈ ವಸ್ತುಗಳು ತಮ್ಮ ಸ್ವಾಭಾವಿಕ ಬೆಳಕನ್ನು ನೀಡುವುದಿಲ್ಲ. ಆದರೆ ಸೂರ್ಯನ ಕಲೆಗಳಲ್ಲಿ ಶಾಖವು ಸ್ವಲ್ಪ ಕಡಿಮೆ ಇರುವುದರಿಂದ ಈ ವಸ್ತುಗಳು ತಮ್ಮ ಸ್ವಾಭಾವಿಕ ಬೆಳಕನ್ನು ಬೀರುವುದು ಸಂಭವನೀಯ ಎಂದು ಸಹಾ ತಿಳಿಸಿದರು. ಅವರ ತರ್ಕ ಸುಳ್ಳಾಗಲಿಲ್ಲ. ಕೇವಲ ಒಂದು ತಿಂಗಳ ಬಳಿಕ ಅಮೆರಿಕದಿಂದ ಪ್ರಾಧ್ಯಾಪಕ ಎಚ್.ಎನ್. ರಸೆಲ್ ಸೂರ್ಯನ ಕಲೆಗಳು ಅಂಥ ಬೆಳಕನ್ನು ನೀಡಿದುವೆಂದು ಡಾ. ಸಹಾ ಅವರಿಗೆ ಪತ್ರ ಬರೆದರು.

ಜರ್ಮನಿಯಲ್ಲಿ

ಈ ವೇಳೆಗೆ ಡಾ. ಸಹ ಜರ್ಮನಿಗೆ ತೆರಳಿದರು. ಅದೇ ತಾನೆ ಮೊದಲನೆಯ ಜಾಗತಿಕ ಯುದ್ಧವು ಮುಗಿದಿದ್ದು ಜರ್ಮನರು ಬ್ರಿಟಿಷರಿಂದ ಪರಾಭವಗೊಂಡಿದ್ದರು. ಸಹಜವಾಗಿಯೇ ಅವರಿಗೆ ಬ್ರಿಟಿಷರನ್ನಾಗಲಿ ಅವರ ಸಹೋದ್ಯೋಗಿಗಳನ್ನಾಗಲಿ ಕಂಡರೆ ಪ್ರೀತಿಯಿರಲಿಲ್ಲ. ತಮ್ಮ ಸ್ಥಾನಮಾನಗಳ ಬಗೆಗೆ ಸಂದೇಶದಿಂದಲೇ ಡಾ. ಸಹಾ ಪ್ರಯೋಗಾಲಯವನ್ನು ಪ್ರವೇಶಿಸಿದರು. ಆದರೆ ಅವರಿಗೆ ಅನಿರೀಕ್ಷಿತ ಆಶ್ಚರ್ಯ ಕಾದಿತ್ತು. ಅವರನ್ನು ಪ್ರಾಧ್ಯಾಪಕ ನರ್ಸ್ಟ್‌ಹೃತ್ಪೂರ್ವಕವಾಗಿ ಸ್ವಾಗತಿಸಿದರು. ತಮ್ಮ ಪ್ರಯೋಗಾಲಯದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿದರು. ಸಹಾ ಅವರ ಪಾಂಡಿತ್ಯ ನರ್ಸ್ಟ್‌ಅವರ ಪ್ರಶಂಸೆಗಳಿಸಿತು.

ಎಲ್ಲಿ ಕೆಲಸ ಮಾಡಬಹುದು?

ಜರ್ಮನಿಯಲ್ಲಿದ್ದ ಡಾ. ಸಹಾ ಅವರನ್ನು ಅದೇ ತಾನೇ ಸ್ಥಾಪಿಸಲಾಗಿದ್ದ ಖೈರಾ ಪ್ರಾಧ್ಯಾಪಕ ಸ್ಥಾನಕ್ಕೆ ಕಲ್ಕತ್ತ ವಿಶ್ವವಿದ್ಯಾನಿಲಯದ ಸರ್ ಆಶುತೋಷ್‌ಮುಖರ್ಜಿ ಆಹ್ವಾನಿಸಿದರು. ಪಂಜಾಬಿನ ಖೈರಾ ಎಸ್ಟೇಟಿನ ಶ್ರೀಗುರು ಪ್ರಸಾದಸಿಂಗ್ ನೀಡಿದ ಪುದುವಟ್ಟಿನಿಂದ ಪ್ರಾಧ್ಯಾಪಕ ಹುದ್ದೆಗೇನೋ ಹಣ ಬಂದಿತು. ಆದರೆ ಉಪಕರಣಗಳು, ಪುಸ್ತಕಗಳು, ಸಹಾಯಕರ ನೇಮಕ ಇವಕ್ಕೆಲ್ಲ ಹಣ ಬೇಡವೇ? ಆಶುತೋಷ್ ಬ್ರಿಟಿಷ್‌ಸರಕಾರ, ಬಂಗಾಳ ಸರಕಾರಗಳಿಗೆ ಕೈಯೊಡ್ಡಿ ವಿಫಲರಾದರು. ಹಣದ ಕೊರತೆ ಡಾ. ಸಹಾ ಅವರ ಸಂಶೋಧನಾ ಕಾರ್ಯಕ್ಕೆ ಅಡಚಣೆಯುಂಟು ಮಾಡಿತು.

ಕೊನೆಗೆ ಪ್ರಾಧ್ಯಾಪಕ ಸಹಾ ೧೯೨೩ರಲ್ಲಿ ಕಲ್ಕತ್ತವನ್ನು ಬಿಟ್ಟು ಅಲಹಾಬಾದಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇರಿದರು. ಆದರೆ ಅವರು ಅಲ್ಲಿ ಕಂಡುದೇನು? ಹಳೆಯ ಪುಸ್ತಕಗಳ ಒಂದು ಪುಸ್ತಕ ಭಂಡಾರ, ಉಪಕರಣಗಳಿಲ್ಲದ ಪ್ರಯೋಗಾಲಯ, ವಿದ್ಯುತ್ ಇಲ್ಲದ ಕಾರ್ಯಾಗಾರ. ಕಲ್ಕತ್ತದಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುತ್ತಿದ್ದರೆ ಇಲ್ಲಿ ಪದವಿ ತರಗತಿಗಳಿಗೂ ಪಾಠ ಹೇಳಿಕೊಡಬೇಕಾಯಿತು. ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಯಿತು ಅವರ ಪರಿಸ್ಥಿತಿ.

ಡಾ. ಸಹಾ ಅವರ ಸಂಶೋಧನಾ ಕಾರ್ಯ ಹಣದ ಕೊರತೆಯಿಂದ ಕ್ಷೀಣಿಸತೊಡಗಿತು. ಪ್ರಯೋಗಾಲಯಕ್ಕಾಗಿ ಸಹಾ ಅವರ ಹಣದ ಬೇಡಿಕೆಯನ್ನು ಸರಕಾರ ತಿರಸ್ಕರಿತು.

ಡಾ. ಸಹಾ ಅವರನ್ನು ೧೯೨೭ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಯಿತು. ಆಗ ಸಂಯುಕ್ತ ಪ್ರಾಂತಗಳ (ಈಗಿನ ಉತ್ತರ ಪ್ರದೇಶದ) ಗರ್ವನರ್ ಆಗಿದ್ದ ಸರ್. ವಿಲಿಯಂ ಮಾರಿಸ್ ಸಹಾ ಅವರ ಆಯ್ಕೆಯನ್ನು ಪ್ರಶಂಸಿಸಿ ಪತ್ರ ಬರೆದರು. ಅದಕ್ಕುತ್ತರವಾಗಿ ವಂದನೆಗಳನ್ನು ಸೂಚಿಸಿದ ಸಹಾ ತಮ್ಮ ಸಂಶೋಧನೆ ಹಣದ ಕೊರತೆಯಿಂದ ಕುಂಟುತ್ತಾ ಸಾಗಿರುವ ವಿಷಯವನ್ನು ಪ್ರಸ್ತಾಪಿಸಿದರು. ಕೂಡಲೇ ಮಾರಿಸ್ ಸಂಶೋಧನೆಗೆಂದು ವರ್ಷಕ್ಕೆ ಐದು ಸಾವಿರ ರೂಪಾಯಿಗಳನ್ನು ನೀಡಿದರು.

ಆದರೂ ಹಣ ಸಾಲದಾಯಿತು. ಭಾರತದಲ್ಲಿ ಸಹಾ ಅವರ ಬೇಡಿಕೆಗೆ ಬೆಲೆ ಸಿಕ್ಕಲಿಲ್ಲ. ಬೇರೆ ದಾರಿ ಕಾಣದೆ ಸಹಾ ರಾಯಲ್ ಸೊಸೈಟಿಗೆ ಬರೆದರು. ರಾಯಲ್‌ಸೊಸೈಟಿ ಸಂಶೋಧನಾ ಉಪಕರಣ ಇನ್ನಿತರ ಸಲಕರಣೆಗಳನ್ನು ಕೊಳ್ಳುವ ಸಲುವಾಗಿ ೧೯೩೨ರಲ್ಲಿ ೧೫೦೦ ಪೌಂಡ್‌ಗಳನ್ನು (ಆಗ ೨೦,೦೦೦ ರೂಪಾಯಿಗಳಿಗೆ ಸಮ) ನೀಡಿತು. ಹತ್ತಾರು ಅಡೆತಡೆಗಳು, ಬಗೆಬಗೆಯ ಬೇಸರಿಕೆಯ ಮಾತುಕತೆಗಳಿಂದ ಧೈರ್ಯಗೆಡದೆ ತಮ್ಮ ಗುರಿ ಮತ್ತು ಕರ್ತವ್ಯ ಪ್ರಜ್ಞೆಯಿಂದ ವಿಮುಖರಾಗದೆ ಈ ದಿನಕ್ಕಾಗಿ ಡಾ. ಸಹಾ ಹನ್ನೆರಡು ವರ್ಷಗಳ ಕಾಲ ಸಹನೆಯ ಸೈರಣೆಗಳಿಂದ ಕಾಯಬೇಕಾಯಿತು.

ವಾತಾವರಣದ ಅಧ್ಯಯನ

ಇದೇ ಸಮಯಕ್ಕೆ ಡಾ. ಸಹಾ ತಮ್ಮ ಸಂಶೋಧನಾ ವಲಯವನ್ನು ವಾತಾವರಣಕ್ಕೂ ಕೊಂಡೊಯ್ದರು. ಭೂಮಿಯಿಂದ ನೂರಾರು ಕಿಲೋಮೀಟರ‍್ಗಳ ಎತ್ತರದಲ್ಲಿ ಅಯಾನಾವಸ್ಥೆಯ ಹಲವಾರು ಗಾಳಿಯ ಸ್ತರಗಳಿರುತ್ತವೆ. ಇದನ್ನೇ ಅಯಾನು ವಲಯ ಅಥವಾ ಅಯಾನು (olonosphore) ಆವರಣ ಅನ್ನುವುದು. ರೇಡಿಯೋ ತರಂಗಗಳು ಅಯಾನು ಆವರಣದಿಂದ ಪ್ರತಿಫಲಿತವಾಗುವುದರಿಂದ ನಮ್ಮ ರೇಡಿಯೋಗಳಲ್ಲಿ ಕಾರ್ಯಕ್ರಮಗಳನ್ನು ಕೇಳಬಹುದು. ಡಾ. ಸಹಾ ಅಲಹಾಬಾದಿನಲ್ಲಿ ಈ ಅಯಾನು ಆವರಣದ ಬಗೆಗೆ ಸಂಶೋಧನೆಯನ್ನು ಆರಂಭಿಸಿದರು.

೧೯೩೮ರಲ್ಲಿ ಡಾ. ಸಹಾ ಭೌತ ವಿಜ್ಞಾನದ ತಾರಕನಾಥ್ ಪಾಲಿತ್ ಪ್ರಾಧ್ಯಾಪಕ ಹುದ್ದೆಯನ್ನು ಒಪ್ಪಿಕೊಂಡು ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಹಿಂತಿರುಗಿದರು. ಭಾರತ ಆಧುನಿಕ ವಿಜ್ಞಾನ ಜಗತ್ತಿನಲ್ಲಿ ಹಿಂದೆ ಬೀಳಬಾರದೆಂಬುದೇ ಆಶಯ.

ನ್ಯೂಕ್ಲಿಯರ್ ವಿಜ್ಞಾನ

ಡಾ. ಸಹಾ ನ್ಯೂಕ್ಲಿಯರ್ ವಿಜ್ಞಾನದಲ್ಲಿ ಕೆಲವೊಂದು ಪ್ರಯೋಗಗಳನ್ನು ನಡೆಸುವ ಆಶಯ ಹೊಂದಿದ್ದರು. ಆದರೆ ನ್ಯೂಕ್ಲಿಯರ್ ಭೌತವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಸೈಕ್ಲೂಟ್ರಾನ್ ಎಂಬ ಸಲಕರಣೆ ಅತ್ಯಗತ್ಯ. ಈ ಸಲಕರಣೆಯಿಂದ ವಸ್ತುವೊಂದರ ಪರಮಾಣುಗಳನ್ನು ಛಿದ್ರಗೊಳಿಸಬಹುದು; ಆ ವಸ್ತುವಿನಿಂದ ಹೊಸ ಮೂಲ ವಸ್ತುಗಳನ್ನು ಪಡೆಯಬಹುದು. ಆದರೆ ಸೈಕ್ಲೂಟ್ರಾನನ್ನು ಸ್ಥಾಪಿಸಲು ಲಕ್ಷಾಂತರ ರೂಪಾಯಿಗಳು ಬೇಕಾಗುತ್ತಿತ್ತು. ಸಹಾ ಅವರ ಯೋಜನೆಗೆ ಜವಾಹರಲಾಲ್ ನೆಹರೂ, ಕಲ್ಕತ್ತ ವಿಶ್ವವಿದ್ಯಾನಿಲಯ, ತಾತಾ ಸಂಸ್ಥೆ ಮತ್ತು ಕೆಲವು ಉದ್ಯಮಿಗಳು ನೆರವಾದರು. ಸೈಕ್ಲೂಟ್ರಾನನ್ನು ಸ್ಥಾಪಿಸುವ ಹೊಣೆಯನ್ನು ಆ ಉಪಕರಣವನ್ನು ಕಂಡು ಹಿಡಿದ ಡಾ| ಲಾರೆನ್ಸ್‌ರ ಬಳಿ ಅಧ್ಯಯನ ನಡೆಸುತ್ತಿದ್ದ ತಮ್ಮ ವಿದ್ಯಾರ್ಥಿ ಡಾ.ಬಿ.ಡಿ. ನಾಗ್‌ಚೌಧರಿ ಅವರಿಗೆ ಸಹಾ ವಹಿಸಿದರು.

ಈ ವೇಳೆಗೆ ಎರಡನೆಯ ಪ್ರಪಂಚ ಯುದ್ಧವು ಆರಂಭವಾಯಿತು. ಇದರಿಂದಾಗಿ ಪರಮಾಣು ವಿಜ್ಞಾನದ ಬಗೆಗೆ ಸುದ್ದಿ ಸಮಾಚಾರಗಳ ವಿನಿಮಯ ಕಷ್ಟಕರವಾಯಿತು. ಅಮೆರಿಕ ಪರಮಾಣು ಬಾಂಬನ್ನು ತಯಾರಿಸುವ ಯೋಜನೆಯಲ್ಲಿ ತೊಡಗಿದ್ದು ಆ ವಿಷಯದಲ್ಲಿ ಅತ್ಯಂತ ಗೋಪ್ಯತೆಯನ್ನು ಕಾಪಾಡಿಕೊಂಡು ಬರುತ್ತಿತ್ತು. ಡಾ. ಸಹಾ ಮತ್ತು ಇನ್ನಿತರ ಕೆಲವು ವಿಜ್ಞಾನಿಗಳ ನಿಯೋಗವೊಂದು 1944ರಲ್ಲಿ ರಷ್ಯ ಮತ್ತು ಅಮೆರಿಕ ದೇಶಗಳನ್ನು ಸುತ್ತಾಡಿ ಬಂದಿತು. ಅಮೆರಿಕದಲ್ಲಿನ ಅವರ ಪ್ರವಾಸ ಕಾಲದಲ್ಲಿ ಆ ದೇಶದ ರಕ್ಷಣಾ ಪೊಲೀಸ್ ದಳ ಮುಖ್ಯವಾಗಿ ಡಾ. ಸಹಾ ಅವರ ಮೇಲೆ ವಿಶೇಷ ಕಾವಲನ್ನೇರ್ಪಡಿಸಿತು ! ಇಷ್ಟೆಲ್ಲಾ ತೊಂದರೆಗಳಿದ್ದರೂ ನಾಗಚೌಧುರಿ ಸೈಕ್ಲೂಟ್ರಾನಿನ ಪ್ರಮುಖ ಭಾಗಗಳನ್ನು ತಂದು ಕಲ್ಕತ್ತೆಯಲ್ಲಿ ಅದನ್ನು ಸ್ಥಾಪಿಸಲು ವ್ಯವಸ್ಥೆ ಮಾಡಿದರು.

ಸೈಕ್ಲೂಟ್ರಾನ್ ರೇಡಿಯೋ ಕ್ಯಾಲ್ಸಿಯಂ, ರೇಡಿಯೋ ರಂಜಕ ಮೊದಲಾದ ಕೃತಕ ರೇಡಿಯೋ ವಿಕಿರಣ ವಸ್ತುಗಳನ್ನು ಉತ್ಪಾದನೆ ಮಾಡುತ್ತದೆ. ಇವುಗಳಿಂದ ಶರೀರದ ಮೇಲಾಗುವ ಪರಿಣಾಮಗಳನ್ನೂ ಕ್ರಿಯೆಯನ್ನೂ ಪರೀಕ್ಷಿಸಲು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದ ಮಾತ್ರ ಸಾಧ್ಯ. ಆ ಕಾಲದಲ್ಲಿ ಇಡೀ ಭಾರತದಲ್ಲೇ ಎಲೆಕ್ಟ್ರಾನ್ ಸೂಕ್ಷ್ಮದರ್ಶಕವಿರಲಿಲ್ಲ.

ಎಲೆಕ್ಟ್ರಾನ್ ಸೂಕ್ಷ್ಮದರ್ಶಿನಿಯನ್ನು ಸಂಯೋಜಿಸಿದವರಲ್ಲೊಬ್ಬರದ ಸ್ಟಾನ್‌ಫರ್ಡ್‌ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಾರ್ಟನ್‌ರವರ ಬಳಿಗೆ ಸಹಾ, ಡಾ.ಎನ್.ಗುಪ್ತಾರವರನ್ನು ೧೯೪೫ರಲ್ಲಿ ಕಳುಹಿಸಿದರು. ಪ್ರಾಧ್ಯಾಪಕ ಡಾ. ಮಾರ್ಟಿನ್‌ರವರ ಸಲಹೆ ಸಹಾಯಗಳಿಂದ ಡಾ. ಗುಪ್ತಾ ಎಲೆಕ್ಟ್ರಾನ್‌ಸೂಕ್ಷ್ಮದರ್ಶಿನಿಯನ್ನು ಸಜ್ಜುಗೊಳಿಸಿ ಭಾರತಕ್ಕೆ ತಂದರು.

ಹೀಗೆ ೧೯೫೦ರಲ್ಲಿ ಇನ್‌ಸ್ಟಿಟ್ಯೂಟ್‌ಆರ್ಫ ನ್ಯೂಕ್ಲಿಯರ್ ಫಿಸಿಕ್ಸ್‌, ಕಲ್ಕತ್ತ ವಿಶ್ವವಿದ್ಯಾನಿಲಯದ ಸೈನ್ಸ್‌ಕಾಲೇಜು ಆವರಣದಲ್ಲಿ ಆರಂಭವಾಯಿತು. ಅನಂತರ ಇದಕ್ಕೆ “ಸಹಾ ಇನ್‌ಸ್ಟಿಟ್ಯೂಟ್‌ಆಫ್ ನ್ಯೂಕ್ಲಿಯರ್ ಫಿಸಿಕ್ಸ್‌” ಎಂದು ಪುನರ್ ನಾಮಕರಣ ಮಾಡಲಾಯಿತು. ಡಾ. ಸಹಾ ತಮ್ಮ ಮುಂದಾಲೋಚನೆಗೆ ಅನುಗುಣವಾಗಿ ಅದರಲ್ಲಿ ನ್ಯೂಕ್ಲಿಯರ್ ಭೌತವಿಜ್ಞಾನ ಮತ್ತು ಜೀವ ಭೌತವಿಜ್ಞಾನವೆಂಬ ಎರಡು ಪ್ರಮುಖ ಸಂಶೋಧನಾ ವಿಭಾಗಗಳನ್ನು ತೆರೆದರು.

ದೇಶ ಸೇವೆಯಲ್ಲಿ ವಿಜ್ಞಾನಿ

ಡಾ. ಸಹಾ ಕೇವಲ ವಿಜ್ಞಾನಿಯಾಗಿ ಪ್ರಯೋಗಾಲಯದಲ್ಲಿ ಬಂಧಿಯಾಗಿರಲಿಲ್ಲ. ಮಾನವನ ಕಷ್ಟ ಕಾರ್ಪಣ್ಯಗಳತ್ತ ಮತ್ತು ರಾಷ್ಟ್ರ ಕಲ್ಯಾಣದತ್ತ ತಮ್ಮ ವಿಚಾರಶಕ್ತಿಯನ್ನು ಕ್ರಿಯಾಶೀಲತೆಯನ್ನೂ ಹರಿಯಬಿಟ್ಟರು. ಭಾರತ ಪ್ರಗತಿ ಪಥದಲ್ಲಿ ಸಾಗಬೇಕಾದರೆ ಅದು ವೈಜ್ಞಾನಿಕ ಸಂಶೋಧನೆಗಳಿಗೆ ಗಮನ ಕೊಡಬೇಕು, ಅಲ್ಲದೆ ವಿಜ್ಞಾನವನ್ನು ಬಳಸಿಕೊಳ್ಳುವ ರೀತಿಗಳಲ್ಲಿ ಸಂಶೋಧನೆಗಳನ್ನು ಮಾಡಬೇಕು ಎಂದು ಅವರು ೧೯೩೮ರ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನದಲ್ಲಿ ಹೇಳಿದರು. ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿ, ವೈಜ್ಞಾನಿಕ ಜ್ಞಾನವನ್ನು ಬಳಸಿ ಇಡೀ ರಾಷ್ಟ್ರದಲ್ಲಿ ಕೈಗಾರಿಕಾ ಕ್ರಾಂತಿಯನ್ನುಂಟು ಮಾಡಬೇಕೆಂಬ ಮಹದಾಸೆ ಅವರದು.

ಪಂಡಿತ ಜವಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯೊಂದನ್ನು ೧೯೩೮ರಲ್ಲಿ ರಚಿಸಲಾಯಿತು. ಡಾ. ಸಹಾ ಎರಡು ಉಪಸಮಿತಿಗಳಲ್ಲಿ ಕೆಲಸ ಮಾಡಿದರು.

ಮೇಘನಾದ ಸಹಾ ಆಚಾರ್ಯ ಪಿ.ಸಿ.ರಾಯ್ ಅವರು ನಡೆಸುತ್ತಿದ್ದ ಸೇವಾಶಿಬಿರದಲ್ಲಿ ಕೆಲಸ ಮಾಡಿದರು.

ಡಾ. ಮೇಘನಾದ ಸಹಾ ಅವರಿಗೆ ಬಾಲ್ಯದಿಂದಲೇ ನದಿಗಳ ಒಡನಾಟ; ಸರಸ-ವಿರಸ. ದಾಮೋದರ ನದಿ ೧೯೩೧ರಲ್ಲಿ ಮಹಾಪೂರದಿಂದ ಉಬ್ಬಿ ಹರಿದಾಗ ಎಂ. ಎಸ್‌.ಸಿ. ಪದವಿಗಾಗಿ ಅಧ್ಯಯನ ನಡೆಸುತ್ತಿದ್ದ ಸಹಾ ಸ್ವಯಂಸೇವಕರಾಗಿ ರಾಷ್ಟ್ರನಾಯಕರ ನೇತೃತ್ವದಲ್ಲಿ ನೆರವು ನೀಡಲು ಮುಂದಾದರು. ಮತ್ತೆ ೧೯೨೨ರಲ್ಲಿ ಉತ್ತರ ಬಂಗಾಳವು ಪ್ರವಾಹಕ್ಕೆ ಸಿಕ್ಕಿ ಸಹಸ್ರಾರು ಜನರು ತೊಂದರೆಗೀಡಾದರು. ಅದೇ ತಾನೇ ಇಂಗ್ಲೆಂಡಿನಿಂದ ಹಿಂತಿರುಗಿದ್ದ ಡಾ. ಸಹಾ ಆಚಾರ್ಯ ಪ್ರಫುಲ್ಲಚಂದ್ರ ರಾಯ್ ನಡೆಸುತ್ತಿದ್ದ ಸೇವಾ ಶಿಬಿರದಲ್ಲಿ ಕೆಲಸ ಮಾಡಿದರು. ಸಹಾ ಪ್ರವಾಹ ಸಂತ್ರಸ್ತರ ನಿಧಿಗಾಗಿ ಪ್ರಚಂಡವಾಗಿ ದುಡಿದು ಇಪ್ಪತ್ತಮೂರು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು.

ಪ್ರವಾಹಗಳು ಬಂದಾಗ ಜನರಿಗೆ ನೆರವು ನೀಡಲು ಶಿಬಿರಗಳನ್ನು ಏರ್ಪಡಿಸುವುದು ಅಗತ್ಯ. ಆದರೆ ಇದಕ್ಕಿಂತ ಮುಖ್ಯವಾದ ಕರ್ತವ್ಯವಿದೆ. ಪ್ರವಾಹಗಳನ್ನು ಹತೋಟಿಯಲ್ಲಿಡಲು ನಾವು ಕ್ರಮ ಕೈಗೊಳ್ಳಬೇಕು ಎಂದು ಹಲವಾರು ಲೇಖನಗಳಲ್ಲಿ ಸಹಾ ಸೂಚಿಸಿದರು. ಅವರ ಒತ್ತಾಯದ ಮೇಲೆ ೧೯೪೨ರಲ್ಲಿ ನದಿ ಸಂಶೋಧನಾಲಯವನ್ನು ಬಂಗಾಳದಲ್ಲಿ ಸ್ಥಾಪಿಸಲಾಯಿತು.

ಮೂರನೆಯ ವರ್ಷವೇ ದಾಮೋದರ ನದಿಯಲ್ಲಿ ಮತ್ತೆ ಮಹಾಪೂರ. ಆಗ ಸರಕಾರವು ಈ ಪ್ರವಾಹಗಳಿಗೆ ಒಂದು ಶಾಶ್ವತ ಪರಿಹಾರವನ್ನು ಹುಡುಕಲು ವಿಚಾರಣಾ ಸಮಿತಿಯೊಂದನ್ನು ರಚಿಸಿತು. ದಾಮೋದರ ನದಿ ಮತ್ತು ಅದರ ಉಪನದಿಗಳಿಗೆ ಅಲ್ಲಲ್ಲಿ ಆಣೆಕಟ್ಟನ್ನು ಹಾಕಿ ಪ್ರವಾಹವನ್ನು ನಿಯಂತ್ರಿಸಬೇಕು, ಆಗ ಬೆಟ್ಟ ಪ್ರದೇಶಗಳಲ್ಲಿ ಸಂಗ್ರಹವಾದ ನೀರು ಜಲಾಶಯಗಳಾಗಿ ಮೈದಾನ ಪ್ರದೇಶಗಳಲ್ಲಿ ಪ್ರವಾಹದ ಪ್ರಭಾವವು ಕಡಮೆಯಾಗುವುದು. ಈ ಜಲಾಶಯಗಳಲ್ಲಿನ ನೀರನ್ನು ವರ್ಷವಿಡೀ ಕೃಷಿಗಾಗಿ ಬಳಸಬಹುದಲ್ಲದೆ ಜಲ ವಿದ್ಯುದಾಗಾರಗಳನ್ನು ರೂಪಿಸಬಹುದು. ಹೀಗೆ ಅಮೆರಿಕದ ಟೆನೆಸಿ ಕಣಿವೆಯ ಮಾದರಿಯಲ್ಲಿ ಡಾ.ಸಹಾ ದಾಮೋದರ ಕಣಿವೆ ಯೋಜನೆಯನ್ನು ತಯಾರಿಸಿದರು. ಸರ್ಕಾರ ಇದನ್ನು ಒಪ್ಪಿ ಕೆಲಸ ಪ್ರಾರಂಭಿಸಿತು.

ವಿಜ್ಞಾನಿಗಳ ಒಕ್ಕೂಟ

ವಿಜ್ಞಾನಿಗಳ ನಡುವೆ ವಿಚಾರ ವಿನಿಮಯ ಮತ್ತು ವೈಜ್ಞಾನಿಕ ವಿಷಯಗಳ ಸಮನ್ವಯವಾದಾಗ ಅದರಿಂದ ರಾಷ್ಟ್ರಕ್ಕೆ ಅಧಿಕ ಲಾಭವುಂಟಾಗುವುದೆಂಬುದು ಡಾ. ಸಹಾ ಅವರ ಅಭಿಪ್ರಾಯ. ಭಾರತೀಯ ವಿಜ್ಞಾನಿಗಳು ದೇಶ ವಿದೇಶಗಳ ವೈಜ್ಞಾನಿಕ ಮುನ್ನಡೆಯನ್ನು ಪರಿಚಯಿಸುವ ಮತ್ತು ಪರಿಶೀಲಿಸುವ ಪ್ರಪ್ರಥಮ ವೇದಿಕೆಯಾಗಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ೧೯೧೩ರಲ್ಲಿ ಸ್ಥಾಪಿತವಾಯಿತು. ಡಾ. ಸಹಾ ೧೯೨೫ರಲ್ಲಿ ಈ ಸಂಸ್ಥೆಯ ಸಮ್ಮೇಳನದ ಭೌತ ಮತ್ತು ಗಣಿತ ಶಾಸ್ತ್ರ ವಿಭಾಗದ ಅಧ್ಯಕ್ಷರಾಗಿದ್ದರು. ಮುಂಬಯಿಯಲ್ಲಿ ನಡೆದ 1934ರ ವಿಜ್ಞಾನ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಡಾ. ಸಹಾ ಉತ್ತರ ಪ್ರದೇಶದಲ್ಲಿ “ಅಕಾಡೆಮಿ ಆಫ್ ಸೈನ್ಸ್” ಎಂಬ ಸಂಸ್ಥೆಯನ್ನು ೧೯೩೪ರಲ್ಲಿ ಸ್ಥಾಪಿಸಿದರು. ಭಾರತೀಯ ವಿಜ್ಞಾನ ಕಾಂಗ್ರೆಸ್ ೧೯೩೪ರ ಅಧಿವೇಶನದಲ್ಲಿ ಅಖಿಲ ಭಾರತ ವ್ಯಾಪ್ತಿಯುಳ್ಳ ವೈಜ್ಞಾನಿಕ ಸಂಸ್ಥೆಯೊಂದನ್ನು ಪ್ರಾರಂಭಿಸುವುದರ ಅಗತ್ಯವನ್ನು ಅವರು ಸೂಚಿಸಿದರು. ಅಂತೆಯೇ ಮಾರನೆಯ ವರ್ಷ “ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌” ಪ್ರಾರಂಭವಾಯಿತು. ಪ್ರಾರಂಭದಲ್ಲಿ ಡಾ. ಸಹಾ ಈ ಸಂಸ್ಥೆಯ ಉಪಾಧ್ಯಕ್ಷರಾಗಿದ್ದು ಅನಂತರ ಅಧ್ಯಕ್ಷರೂ ಆಗಿದ್ದರು.

ಸಹಾ ೧೯೩೮ರಲ್ಲಿ ಕಲ್ಕತ್ತೆಗೆ ಹಿಂದಿರುಗಿದ ಮೇಲೆ ಹಲವಾರು ವೈಜ್ಞಾನಿಕ ಸಂಸ್ಥೆಗಳ ಸ್ಥಾಪನೆಗೂ, ಅವುಗಳ ಏಳಿಗೆಗೆ ಶ್ರಮಿಸಿದರು. ವಿಶ್ವವಿದ್ಯಾನಿಲಯದ ಸಂಶೋಧನಾ ಮನೋಧರ್ಮಕ್ಕೆ ಹೊಸ ತಿರುವನ್ನು ಕೊಟ್ಟರು. ಹೊಸ ಸಂಶೋಧನೆಗಳನ್ನು ಆರಂಭಿಸಲು ಕಾರಣರಾದರು. “ಸೈನ್ಸ್ ಅಸೋಸಿಯೇಷನ್” ಎಂದು ಜನಪ್ರಿಯವಾಗಿರುವ “ಇಂಡಿಯನ್ ಅಸೋಸಿಯೇಷನ್‌ಫಾರ್ ದಿ ಕಲ್ಟಿವೇಷನ್ ಆಪ್ ಸೈನ್ಸ್” ಸಂಸ್ಥೆಯ ಅಧ್ಯಕ್ಷರಾಗಿ ಡಾ. ಸಹಾ 1946ರಲ್ಲಿ ಆಯ್ಕೆಯಾದರು. ಕೂಡಲೇ ಅವರು ಅಲ್ಲಿನ ಸಂಶೋಧನಾ ಕಾರ್ಯಕ್ಕೆ ಇನ್ನೂ ವಿಶಾಲವಾದ ಸ್ಥಳವನ್ನು ಪಡೆಯಲೆತ್ನಿಸಿದರು. ಕೇಂದ್ರ ಮತ್ತು ಬಂಗಾಳ ಸರಕಾರದಿಂದ ಧನಸಹಾಯ ಪಡೆದು ಜಾಧವಪುರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿದರು. ೧೯೫೩ರಿಂದ ತಮ್ಮ ಅಂತ್ಯದವರೆಗೂ ಡಾ. ಸಹಾ ಈ ಸಂಸ್ಥೆಯ ನಿರ್ದೇಶಕರಾಗಿದ್ದರು. ಹೆಚ್ಚಿನ ಸಂಶೋಧಕ ಸಹಾಯಕರನ್ನು ನೇಮಿಸಲು, ಸಂಶೋಧನಾಲಯವನ್ನು ಉತ್ತಮ ಯಂತ್ರೋಪಕರಣಗಳು ಮತ್ತು ಪುಸ್ತಕ ಭಂಡಾರದಿಂದ ಸಜ್ಜುಗೊಳಿಸಲು ಪಂಚವಾರ್ಷಿಕ ಯೋಜನೆಯೊಂದನ್ನು ಅವರು ನಿಯೋಜಿಸಿದರು. ಕೇಂದ್ರ ಸರಕಾರದಿಂದ ಐವತ್ತು ಲಕ್ಷ ರೂಪಾಯಿಗಳ ಧನಸಹಾಯವನ್ನು ಸೈನ್ಸ್ ಅಸೋಸಿಯೇಷನ್‌ಗೆ ದೊರಕಿಸಿಕೊಟ್ಟ ಕೀರ್ತಿ ಅವರದು.

ಜನಸಾಮಾನ್ಯರಿಗೆ ವಿಜ್ಞಾನದ ತಿಳಿವಳಿಕೆ

ವಿಜ್ಞಾನದ ಆಗುಹೋಗುಗಳು ಜನಸಾಮಾನ್ಯರಿಗೆ ಅರಿವಾಗಬೇಕು; ಅದರ ಲಾಭವನ್ನು ಜನತೆ ಪಡೆಯಬೇಕು; ಶ್ರೀಸಾಮಾನ್ಯನಲ್ಲಿ ವೈಜ್ಞಾನಿಕ ಮನೋಧರ್ಮ ಮೊಳೆಯಬೇಕು, ಬೆಳೆಯಬೇಕು-ಇದು ಡಾ. ಸಹಾ ಅವರ ಅಭಿಪ್ರಾಯ. ಅದಕ್ಕಾಗಿ ೧೯೩೫ರಲ್ಲಿ ಅವರು “ಇಂಡಿಯನ್ ಸೈನ್ಸ್ ನ್ಯೂಸ್ ಅಸೋಸಿಯೇಷನ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದರ ವತಿಯಿಂದ “ಸೈನ್ಸ್ ಅಂಡ್ ಕಲ್ಚರ್” ಎಂಬ ಜನಪ್ರಿಯ ವಿಜ್ಞಾನ ಪತ್ರಿಕೆಯನ್ನು ಪ್ರಕಟಿಸತೊಡಗಿದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ವೈಜ್ಞಾನಿಕ ಪ್ರಗತಿಯನ್ನು ನಿಖರವಾಗಿ ಸರಳ ಮತ್ತು ಸುಲಭ ಶೈಲಿಯಲ್ಲಿ ನೀಡುವುದೇ ಈ ಪತ್ರಿಕೆಯ ಉದ್ದೇಶ. ಅದಕ್ಕಾಗಿ ಅವರೇ ನೂರಾರು ಲೇಖನಗಳನ್ನು ಬರೆದರು. ರಾಷ್ಟ್ರೀಯ ಯೋಜನೆ, ಕೈಗಾರಿಕೆ, ವಿಜ್ಞಾನ, ಬೋಧನೆ, ಭೂ-ಭೌತ ವಿಜ್ಞಾನ, ಪ್ರವಾಹ ನಿಯಂತ್ರಣ, ಪರಮಾಣು ಭೌತ ವಿಜ್ಞಾನ, ಕ್ಯಾಲೆಂಡರ್ ಸುಧಾರಣೆ, ಪ್ರಾಚ್ಯಶೋಧನಾ ಶಾಸ್ತ್ರ – ಹೀಗೆ ಅವರ ಆಯ್ಕೆಯ ವಿಷಯಗಳು ವೈವಿಧ್ಯಮಯ! ಇದು ಅವರ ಪಾಂಡಿತ್ಯಕ್ಕೂ ಸ್ಪಷ್ಟ ಪ್ರಮಾಣ.

ವಿಸ್ತಾರವಾದ ಕ್ಷೇತ್ರ

ಡಾ. ಸಹಾ ಅವರಿಗೆ ವಿಜ್ಞಾನದಲ್ಲಿ ಎಷ್ಟು ಆಸ್ಥೆಯಿತ್ತೋ ಧರ್ಮ, ಇತಿಹಾಸ, ಸಂಸ್ಕೃತಿ ನಾಗರಿಕತೆಗಳ ಅಧ್ಯಯನದಲ್ಲೂ ಅಷ್ಟೇ ಆಸಕ್ತಿ. ಪ್ರಾಚೀನ ವೈದ್ಯಶಾಸ್ತ್ರ ಮತ್ತು ಖಗೋಳ ಶಾಸ್ತ್ರದಲ್ಲಿ ಅವರಿಗೆ ಅಪಾರ ಒಲವು. ಪ್ರಾಚೀನ ಇತಿಹಾಸ ಸಂಸ್ಕೃತಿಗಳಲ್ಲಿ ವಿಜ್ಞಾನದ ಅಂಶಗಳನ್ನು ಗುರುತಿಸುವ ಸಂಶೋಧಕ ದೃಷ್ಟಿ ಅವರದು.

ಅಮೆರಿಕದ ಕಾರ್ನೆಗಿ ಟ್ರಸ್ಟ್ ಡಾ. ಸಹಾ ಅವರನ್ನು ಯುರೋಪ್ ಮತ್ತು ಅಮೆರಿಕದಲ್ಲಿ ವೈಜ್ಞಾನಿಕ ಸಂಸ್ಥೆಗಳನ್ನು ಸಂದರ್ಶಿಸಿಕೊಂಡು ಹೋಗಲು ಆಹ್ವಾನಿಸಿತು. ಆ ಸಂದರ್ಭದಲ್ಲಿ ಅವರು ಸ್ವಲ್ಪ ಶ್ರಮವೆನಿಸಿದರೂ ಸಾಧ್ಯವಾದಷ್ಟೂ ಭೂಭಾಗದಲ್ಲಿಯೇ ಪ್ರಯಾಣ ಮಾಡಿದರು. ಏಷ್ಯಾ ಖಂಡದಲ್ಲಿಯೂ ಹಲವಾರು ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಸಂದರ್ಶಿಸಿದರು. ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಗಳ ಅಧ್ಯಯನದಲ್ಲಿ ಅಂಥ ಅದಮ್ಯ ಆಸಕ್ತಿ ಅವರದು.

ಈ ಅಧ್ಯಯನಗಳಿಂದ ಪ್ರಾಚೀನ ಮತ್ತು ಆಧುನಿಕ ಕ್ಯಾಲೆಂಡರುಗಳನ್ನು ಹೋಲಿಸಿ ಅಭ್ಯಾಸ ಮಾಡಿ, ಸುಲಭವೂ ನಿಖರವೂ ಆದ ಕ್ಯಾಲೆಂಡರೊಂದನ್ನು ರೂಪಿಸಲು ಅವರು ಪ್ರಯತ್ನಿಸಿದರು. ಭಾರತ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು ೧೯೫೨ರಲ್ಲಿ ಕ್ಯಾಲೆಂಡರ್ ಸುಧಾರಣಾ ಸಮಿತಿಯನ್ನು ಸಹಾ ಅವರ ಅಧ್ಯಕ್ಷತೆಯಲ್ಲಿ ರಚಿಸಿತು. ಸಹಾ ತಮ್ಮ ವರದಿಯನ್ನು ೧೯೫೫ರಲ್ಲಿ ಸರಕಾರಕ್ಕೆ ಸಲ್ಲಿಸಿದರು. ಈ ವರದಿ ಸಹಾ ಅವರ ಗಣಿತ, ಖಗೋಳಶಾಸ್ತ್ರ ಮತ್ತು ನಾಗರಿಕತೆ, ಇತಿಹಾಸಗಳ ಪಾಂಡಿತ್ಯಪೂರ್ಣ ಜ್ಞಾನಕ್ಕೆ ಸಾಕ್ಷಿಯಾಗಿದೆ.

ರಾಜಕೀಯ ರಂಗದಲ್ಲಿ ಹೆಜ್ಜೆ

ಡಾ. ಸಹಾ ಸುಮಾರು ನಲವತ್ತು ವರುಷಗಳ ಕಾಲ ವಿಜ್ಞಾನ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾಸಕ್ತರಾಗಿದ್ದರು. ಹಲವಾರು ರಾಷ್ಟ್ರೀಯ, ರಾಜಕೀಯ ನಾಯಕರ ನಿಕಟವರ್ತಿಗಳಾಗಿದ್ದರೂ ಶಾಲಾ ಕಾಲೇಜುಗಳಲ್ಲಿ ಹಲವು ಚಳವಳಿಗಳಲ್ಲಿ ಭಾಗವಹಿಸಿದ್ದರೂ ಅವರು ರಾಜಕೀಯ ರಂಗಕ್ಕೆ ಪ್ರವೇಶಿಸಲಿಲ್ಲ. ಆದರೆ ಸಹಾ ರಾಷ್ಟ್ರೀಯವಾದಿಯಾಗಿದ್ದರು. ಅವರು ಹಲವು ವಿದೇಶಿ ಗೌರವ ಪದವಿಗಳನ್ನು ನಿರಾಕರಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ರಾಷ್ಟ್ರೀಯ ಸರಕಾರವು ಭಾರತದ ಔದ್ಯೋಗಿಕ ಮತ್ತು ಕೈಗಾರಿಕಾ ಅಭಿವೃದ್ಧಿಯ ಬಗೆಗೆ ಬ್ರಿಟಿಷ್ ಸರಕಾರದಂತೆ ಉದಾಸೀನ ಪ್ರವೃತ್ತಿಯನ್ನು ತಳೆಯಲಾಗದು ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಹೊಸ ಸರಕಾರದಲ್ಲಿಯೂ ಹಳೆಯದರ ಜಾಡು, ವಾಸನೆ ಮುಂದುವರಿಯುವುದು ಸಹಾ ಅವರ ಸಹನೆಗೆ ಸವಾಲಾಯಿತು. “ಸರಕಾರದಿಂದ ಹೊರಗಿದ್ದು, ಹೆಚ್ಚಿನದೇನನ್ನೂ ಗಳಿಸುವುದಾಗುವುದಿಲ್ಲ. ವಿಜ್ಞಾನ, ವಿದ್ಯಾಭ್ಯಾಸ ಮತ್ತು ಕೈಗಾರಿಕಾ ಯೋಜನೆಗಳಲ್ಲಿ ನಿಮಗಿರುವ ಅನುಭವ ಮತ್ತು ಪರಿಣತಿಯನ್ನು ರಾಷ್ಟ್ರದ ಸೇವೆಗೆ ನೀಡಿರಿ” ಎಂದು ಶರತ್‌ಚಂದ್ರ ಬೋಸ್ ಮೊದಲಾದ ಮಿತ್ರರು ಒತ್ತಾಯ ಮಾಡಿದರು. ರಾಷ್ಟ್ರದ ಪ್ರಗತಿಯ ದೃಷ್ಟಿಯಿಂದ ಈಗ ಅವರು ರಾಜಕೀಯವನ್ನು ಪ್ರವೇಶಿಸುವುದು ಅನಿವಾರ್ಯವಾಯಿತು. ಅವರು ಸ್ವತಂತ್ರ ಸದಸ್ಯರಾಗಿ 1951ರಲ್ಲಿ ಸಂಸತ್ತಿಗೆ ಆಯ್ಕೆಯಾದರು.

ಡಾ. ಸಹಾ ಅವರ ಸೇವೆ ಅಸಮಾನವಾದುದು. ವಿದ್ಯಾಲಯಗಳನ್ನೂ ಸಂಶೋಧನಾಲಯಗಳನ್ನೂ ಸ್ಥಾಪಿಸುವುದು, ವಿಜ್ಞಾನಿಗಳಿಗೆ ಸ್ಫೂರ್ತಿಯನ್ನು ನೀಡುವುದು, ರಾಷ್ಟ್ರೀಯ ಯೋಜನೆಗಳಿಗೆ ಮಾರ್ಗದರ್ಶನ ನೀಡುವುದು ಇವುಗಳಲ್ಲದೆ ಪ್ರವಾಹ ಮೊದಲಾದ ಸಮಯಗಳಲ್ಲಿ ಸಂತ್ರಸ್ಥರಿಗೆ ನೆರವಾಗಲು ಸ್ವಯಂಸೇವಕರಾಗಿ ಸೇವೆ ಸಲ್ಲಿಸುವುದು ಅವರ ಮಾನವೀಯ ಗುಣಗಳಿಗೆ ನಿದರ್ಶನವಾಗಿದೆ. ತಾವು ಖ್ಯಾತಿಯ ಶಿಖರವೇರಿದಾಗಲೂ ಸಾಮಾನ್ಯರ ಸುಖದುಃಖಗಳ ಬಗೆಗೆ ಅವರು ಸದಾ ಸಹಾನುಭೂತಿ ಹೊಂದಿದ್ದರು.

ತಾವೇ ಪಾರ್ಶ್ವವಾಯುವಿನಿಂದ ನರಳುತ್ತಿದ್ದರೂ ೧೯೫೦ರಲ್ಲಿ ಪೂರ್ವ ಬಂಗಾಳದಿಂದ ಬಂದ ನಿರಾಶ್ರಿತರಿಗೆ ಸೌಕರ್ಯವೊದಗಿಸಲು ಅವರು ಶಕ್ತಿ ಮೀರಿ ಶ್ರಮಿಸಿದರು. ತ್ರಿಪುರ ಮೊದಲಾದೆಡೆಗಳಲ್ಲಿ ನಿರಾಶ್ರಿತರ ಶಿಬಿರಗಳನ್ನು ಸಂದರ್ಶಿಸಿ, ನಿರಾಶ್ರಿತರಿಗೆ ಸಿಕ್ಕುತ್ತಿದ್ದ ಸೌಲಭ್ಯಗಳಲ್ಲಿನ ಕೊರತೆಗಳನ್ನು ಸರಕಾರಕ್ಕೆ ಪದೇ ಪದೇ ತಿಳಿಸಿದರು.

ಸಹಾ ಅವರೊಡನೆ ಹಾಸ್ಯಕ್ಕಾಗಿ ಕಾಂಗ್ರೆಸ್ ನಾಯಕರೊಬ್ಬರು, “ವಿಜ್ಞಾನಿಗಳು ವಿಜ್ಞಾನ ಕ್ಷೇತ್ರಕ್ಕೇ ಸೀಮಿತವಾಗಿರಬೇಕು” ಎಂದರು. ಅದಕ್ಕೆ ಸಹಾ “ವಿಜ್ಞಾನಿಗಳು ತಮ್ಮ ವಿಜ್ಞಾನದ ಭವನದಲ್ಲಿಯೇ ಸೇರಿಕೊಂಡಿರುತ್ತಾರೆ ಎಂದು ಆಕ್ಷೇಪಿಸುತ್ತಾರೆ. ನಾನೂ ಹಾಗೆಯೇ ಇದ್ದೆ. ಆದರೆ ಕಾಲ ಬದಲಾಯಿಸಿದೆ. ಇಂದು ರಾಷ್ಟ್ರೀಯ ಯೋಜನೆ ಮತ್ತು ಆಡಳಿತದೊಂದಿಗೆ ವಿಜ್ಞಾನ ನಿಕಟವಾಗಿದೆ. ಆದ್ದರಿಂದಲೇ ನನ್ನ ವೈಜ್ಞಾನಿಕ ತಿಳಿವು ಮತ್ತು ಅನುಭವದಿಂದ ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಕ್ರಮೇಣ ರಾಜಕೀಯಕ್ಕೆ ಸೇರಿದೆ” ಎಂದು ಉತ್ತರಿಸಿದರು.

ಮತ್ತೊಂದು ವಸಂತಪಂಚಮಿ, ಸರಸ್ವತಿ ಪೂಜೆ

ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದೆ. ಫೆಬ್ರವರಿ ೧೬, ೧೯೫೬. ಡಾ. ಸಹಾ ತಮ್ಮ ಕೈಯಲ್ಲಿ ಕೆಲವು ಮುಖ್ಯ ಪತ್ರಗಳನ್ನು ಹಿಡಿದು ಸಂಸತ್ ಭವನದ ಇಳಿಜಾರು ಹಾದಿಯನ್ನು ಹತ್ತಿ ಹೋಗುತ್ತಿದ್ದಾರೆ. ತಲೆಯಲ್ಲಿ ನೂರೆಂಟು ಆಲೋಚನೆಗಳು – ನಿರಾಶ್ರಿತರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ನದಿ ನಿಯಂತ್ರಣ ಸಮಸ್ಯೆ….

ಡಾ. ಸಹಾ ಅವರಿಗೆ ತಲೆ ಸುತ್ತು ಬಂದಂತಾಗಿ ಅಲ್ಲೇ ಕುಸಿದರು. ಜನ ಅವರ ಸುತ್ತ ನೆರೆದರು. ಡಾ. ಸಹಾ ಅವರನ್ನು ಗುರುತಿಸಿದವರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಆ ವೇಳೆಗಾಗಲೇ ಅವರ ಪ್ರಾಣಪಕ್ಷ ಹಾರಿಹೋಗಿತ್ತು.

ಆ ದಿನ ಪಂಚಮಿ, ಸರಸ್ವತಿಯ ಪೂಜೆ!

ಡಾ. ಸಹಾ ತಮ್ಮ ಸ್ವಪ್ರಯತ್ನದಿಂದ ಬಡತನದ ವ್ಯೂಹವನ್ನು ಭೇದಿಸಿ ಖ್ಯಾತಿಯ ಶಿಖರವನ್ನೇರಿದರು. ಅಷ್ಟೆ ಅಲ್ಲ, ಅವರ ಬಳಿಗೆ ಬಂದವರಿಗೆಲ್ಲರಿಗೂ ಅವರದು ಸ್ಫೂರ್ತಿದಾಯಕ ಸಂಸ್ಪರ್ಶ! ಹಿರಿತನದ ಪ್ರಗತಿಪರ ಮಾರ್ಗದರ್ಶನ! ಬಡತನದಲ್ಲಿ ಹುಟ್ಟಿ, ಬೆಳೆದು, ಬಡವರಿಗಾಗಿ ದುಡಿದ, ವಿಜ್ಞಾನಕ್ಕಾಗಿ ತನುಮನ ಧನಗಳನ್ನು ವಿನಿಯೋಗಿಸಿದ ಈ ಸಿರಿವಂತ ಜೀವ ಭಾರತದ ಪ್ರಗತಿಗೆ ನೀಡಿದ ಕಾಣಿಕೆ ಎಷ್ಟು ಅದ್ಭುತ, ಅನುಕರಣೀಯ!