ಹಿಂದಿನಾ ಶುಭದಿನಗಳನು ಮನಕೆ ತಂದು

ಚಂದದಿಂ ಬಂದಿಹುದು ಎಳಬಿಸಿಲು ಇಂದು !
ಚೆಂದಳಿರ ಕೂಡಾಡಿ ಕರೆವುದೈತಂದು
“ಕಂದ ಬಾ! ಕಂದ ಬಾ! ಬಾ ಬಂಧು!” ಎಂದು.

ಅಂದಿನಾ ಸಿರಿಯೆಲ್ಲವನು ಸೂರೆಮಾಡಿ
ಅಂದಿನಾ ತರಳತೆಯ ಕುಸುಮಗಳ ಕೂಡಿ
ಬಂಧುರದ ನೆನವರಿಕೆಯನು ದಾರ ಮಾಡಿ
“ಕಂದ ಬಾ!” ಎನುತಲಿದೆ ಮಾಲೆಯನು ನೀಡಿ !

“ಧೂಳಾಟ ಆಡೋಣ ನೀ ಬಾರೊ, ಚಂದು,
ಕಾಳಿಂಗನೆಂಬಾಳ ಗುದ್ದೋಣ ಇಂದು;
ಬಾಲೆಯ ಹಣ್ಗಳ ಚನ್ನಾಗಿ ತಿಂದು
ಜೋಲುವ ಹೂಗಳ ಕೊಯ್ಯೋಣ” ಎಂದು!

ತೊಳಲುವ ತೊರೆಯನು ನೆನಪಿಗೆ ತಂದು
“ಗೆಳೆಯ ಬಾ! ಆಡೋಣ! ಬೆಳಗಾಯ್ತು!” ಎಂದು
ನಳಿದೋಳಿನಿಂದೆನ್ನ ಬಿಗಿಯಪ್ಪಿ ನಿಂದು
ಒಲಿಯುತಿದೆ ಅಂದಿನಾ ಎಳಬಿಸಿಲು ಇಂದು!