ಕೋಟಿ ಕೋಟಿ ದೂರದಿಂದ

ಹೊಂಬಿಸಿಲಿದು ಬಂದಿದೆ;
ಸೂರ್ಯದೇವನಿಂದ, ಕಂದ,
ಚುಂಬನವನು ತಂದಿದೆ!
ಪೂರ್ವದುದಯಗಿರಿಯನೇರಿ,
ಕಂದರಗಳನಿರದೆ ಹಾರಿ,
ಸಾಂದ್ರವಿಪಿನಗಳನು ತೋರಿ
ಹಸುಳೆಬಿಸಿಲು ಬಂದಿದೆ:
ಕಂದ, ಮಿಹಿರದೇವನಿಂದ
ಮಿಸುನಿ ಕೃಪೆಯ ತಂದಿದೆ. ೧೦

ಮಿರುಗಿ ಮೆರೆಯೆ ನೀರ ಪರಿಧಿ,
ನಿದ್ದೆಯಿಂದ ಎದ್ದ ಭರದಿ
ಉಚ್ಛ್ವಾಸಿಸೆ ನೀಲ ಶರಧಿ,
ಕನಕ ಕಿರಣ ಲೋಲರು
ತೆರೆಯ ತುದಿಯನೇರಿ ಇಳಿದು,
ನೊರೆಯುರುಳಿಯೊಳಾಡಿ ತುಳಿದು,
ಕಡಲ ದಾಂಟಿ, ನಿನ್ನನೊಲಿದು
ಬಂದಿಹರದೊ ಬಾಲರು!
ಬೆಟ್ಟದುದಿಯ ಕೋಡನೇರಿ
ಮುಂಬಿಸಿಲಿನ ಬರವ ಹಾರಿ            ೨೦

ಕುಳಿತ ಹುಲಿಯ ಬಣ್ಣ ಹೀರಿ
ಕದಿರ ಚವರಿ ಬಂದಿದೆ;
ಗೂಡಿನೆಡೆಗೆ ತಾಯಿಹಕ್ಕಿ
ಹಾರಿಬರಲು ಹರುಷವುಕ್ಕಿ
ಕೊಕ್ಕನದರ ಕೊಕ್ಕಿಗಿಕ್ಕಿ
ಮೇವು ಕೊಳುವ ಚುಕ್ಕಿಚುಕ್ಕಿ
ಮರಿಗಳೆದೆಗೆ ಮುತ್ತನಿಕ್ಕಿ
ಅವುಗಳೊಲವ ತಂದಿದೆ!

ಹಳದಿ ಪೈರು ಬೆಳೆದು ನಿಂತ
ಗದ್ದೆ ಬೈಲುಗಳ ಅನಂತ
ವಿಸ್ತಾರದ ಸಂಚಾರದ
ಸಿರಿಯನೆಲ್ಲ ತಂದಿದೆ!
ಇದಿರುಗೊಳಲು ನಡೆಯೊ, ಕಂದ!
ದೇವಕೃಪೆಯ ನಿನಗೆ ತಂದ
ರಶ್ಮಿರೂಪಿ ಮಿತ್ರವೃಂದ
ಬಾಗಿಲ ಬಳಿ ಬಂದಿದೆ!       ೩೦