ತಾಯಿಯೊಡನಾಡುವುದು ಇಂತುಟೆಂದು

ಬೋಧಿಸುವುದೆನಗೆ ಬೇಡ;
ಕ್ರಮವಿಲ್ಲದಲೆ ಮನಬಂದವೊಲು
ಆಡುವುದ ಬಲ್ಲೆ ನಾನು!

ಯಮನಿಯಮ ಬೇಡ, ಆಚಾರ ಬೇಡ,
ಆಟವನು ಕಸಬಾಗಿ ಮಾಡಬೇಡ.
ತಾಯಿ ಗುರುವಲ್ಲ! ವಾತ್ಸಲ್ಯಕೆಂದೂ
ನಿಯಮ ನಿರ್ಬಂಧವಿಲ್ಲ!

ಮಂತ್ರೋಪದೇಶವೆನಗೇಕೆ ಬೇಡ:
ಲೀಲೆಯಿದು ವಿದ್ಯೆಯಲ್ಲ !
ಮುಕ್ತಚೈತನ್ಯದಿಂ ಪೊರಮಡುವ ಲೀಲೆಯಂ
ಮಂಧಿಪೆಯ ಜಡ ಶಾಸ್ತ್ರ ನಿಯಮದಿಂದ?

ಆಡುವೆನು ನಾನೆನ್ನ ತಾಯ ಕೂಡೆ
ಶಾಸ್ತ್ರಗಳ ಮೂಲೆಗೊತ್ತಿ !
ನುಡಿಗೆ ಬಂದುದ ಪಾಡಿ ಮನಕೆ ಬಂದುದ ಮಾಡಿ
ನಲಿಯುವೆನು ನಾನೆನ್ನ ತಾಯ ಕೂಡಿ !