ಏನೆ ಮಾಡುತಲಿರಲಿ,

ಏನೆ ಓದುತಲಿರಲಿ,
ಧ್ಯಾನ ಮಾಡುತ್ತಿರಲಿ,
ಕಾವ್ಯ ಕಟ್ಟುತ್ತಿರಲಿ —
ಚೀಟಿ ಹಂಚಿಕೆಗಾಗಿ
ಟಾಂಗದಲಿ ಓಡುವಾ
ಬ್ಯಾಂಡಿನೋಲಗ ವಾದ್ಯ,
ನಾಗಸ್ವರದ ವಾದ್ಯ,
ಬಿದ್ದ ಕೂಡಲೆ ಕಿವಿಗೆ —
ಏನದ್ಭುತಮ್!
ನನ್ನದೆಯ ತೊಟ್ಟಿಲಿಂ        ೧೦
ಚಂಗನೆಯೆ ಹೊರ ಚಿಮ್ಮಿ
ಕಂದನೊಬ್ಬನು ಕೂಗಿ,
ಕುಣಿದು, ನವಿಲೊಲು ಕೇಗಿ, —
ಬಿಡುವ ಗಂಟೆಯು ಹೊಡೆಯೆ
ಒಡನೆ ಕೇಕೆಯ ಹಾಕಿ
ಶಾಲೆಯಿಂ ಹೊರದುಮುಕಿ
ನಲಿವ ಬಾಲಕರಂತೆ, —
ಕುಣಿಕುಣಿದು ಕೂಗಾಡಿ
ಹಾರಾಡಿ ಚೀರಾಡಿ
ಗಾಂಭೀರ್ಯವೀಡಾಡಿ       ೨೦
ನುಗ್ಗಿ ಬೀದಿಗೆ ಓಡಿ
ಕುದುರೆಗಾಡಿಯ ಹಿಂದೆ
ಧಾವಿಸಲು, ಕೈ ನೀಡಿ
ಚೀಟಿಯೊಂದನು ಬೇಡಿ,
ಮಾತಿಲ್ಲದಂತಾಗಿ
ಮಾನ ಹೋದಂತಾಗಿ
ಕೈಲಾಗದಂತಾಗಿ
ಸೋತು ಸೈವೆರಗಾಗಿ
ನಾಚುವನು ನನ್ನೊಳಿಹ
ಗುರುಪಂಡಿತಂ.   ೩೦
ಪಂಡಿತನು ನಾಚಿದರೆ
ಕವಿಗದೇನು?
ಕೆಲಸವೆಲ್ಲವ ಬಿಟ್ಟು,
ಹೊತ್ತಗೆಯನತ್ತಿಟ್ಟು,
ಸೊಗದ ಹನಿ ತೊಯ್ಯುತಿಹ
ಕಣ್ಣೆವೆಯ ಮುಚದೆಯೆ
ನೋಡುತ್ತ, ದಿಟ್ಟಯೊಳೆ
ಕಂದಂಗೆ ಮುತ್ತಿಟ್ಟು,
ನಲಿಯುವನು ನನ್ನೊಳಿಹ
ಕವಿಯುತಾನು!   ೪೦
“ಕ್ಷುದ್ರ ಬೀದಿಯ ವಾದ್ಯ
ಸಂಸ್ಕ್ರತಿಗೆ ದುರ್ಮೇಧ್ಯ!”
ಎಂದು ಗೌರವವೊರಲಿ
ಹಣೆ ಬಡಿದು ಕೂಗಿದರೆ
ಕವಿಯೆದೆಯ ಹಸುಳೆಗದು
ಲಕ್ಷವೇನು?