“ಎಂತು ನೀನಿಲ್ಲಿಗೈತಂದೆ, ಮಗುವೆ?

ಚಿಂತೆ ಯಾವುದನು ಕಳೆದಿಂತು ನಗುವೆ?”

ಇಂತು ತಾಯ್ನುಡಿಯೆ ಕುಣಿದಾಡಿಯಾಡಿ
ಇಂತೆಂದಿತಾ ಮಗುವು ಮುಗಿಲ ನೋಡಿ.
“ಉಡುಗಳಾಚೆಯೊಳಿರುವ ಊರೊಳಿರಲು
‘ಹುಡುಗ ಬಾ’ ಎಂಬ ದನಿ ಕೇಳಿ ಬರಲು
ಕರೆವರಾರೆಂದರಿಯೆ ತಿರುಗಿ ನೋಡೆ;
ಧರೆಯ ದನಿಯೊಂದು ಸುಳಿಸುಳಿಯುತಾಡೆ;
ದನಿಯು ಬಹ ದಾರಿಯನು ಹಿಡಿದು ಬಂದೆ;
ಮನದೊಳಾಲೋಚಿಸುತ ನಭದಿ ನಿಂದೆ.
ಅಲ್ಲಿಂದ ನೀನಿರುವ ಮನೆಯ ನೋಡಿ,
ಸಲ್ಲಲಿತ ತಾರೆಗಳ ಸೇತುಮಾಡಿ,
ನೆಗೆನೆಗೆದು ತಾರೆಯಿಂ ತಾರೆಯೆಡೆಗೆ
ಅರಿಯದಂತಿಳಿದೆ ನಾ ನಿನ್ನ ತೊಡಗೆ!