ಎಲ್ಲಿಂದ ನೀ ಬರುವೆ?

ಎಲ್ಲಿಗೋಡುತಲಿರುವೆ?
ಆರನೀ ಪರಿ ಕರೆವೆ?
ಏಕಿಂತು ಮೊರೆವೆ? — ಓ ಮುದ್ದು ತೊರೆಯೆ!

ಹೋಗುವೆಯ ಬಹು ದೂರ
ಸೇರಬೇಕೆಂದಾರ?
ನಿನ್ನ ಪಾರಾವಾರ
ಇನ್ನೆಷ್ಟು ದೂರ? — ಓ ಮುದ್ದು ತೊರೆಯೆ!

ನಿನ್ನನಾಲಿಸೆ ಬಂದೆ;
ನಿನ್ನಲ್ಲಿಗೈತಂದೆ;
ನಿನ್ನಬಳಿಯೊಳು ನಿಂದೆ;
ಮಾತಾಡು ಎಂದೆ; — ಓ ಮುದ್ದು ತೊರೆಯೆ!

ನಿನ್ನಾಟವನು ನೋಡಿ,
ನಿನ್ನೊಡನೆ ನಲಿದಾಡಿ
ನಿನ್ನಂದದೊಳೆ ಹಾಡಿ
ನಿನಗೆನ್ನ ನೀಡಿ — ಓ ಮುದ್ದು ತೊರೆಯೆ!
ನಿನ್ನೊಳಾನೊಂದಾಗಿ
ನಡೆಯೆ ನಾನಹೆ ಭೋಗಿ
ನಲಿವೆ ದುಃಖವ ನೀಗಿ
ನೀ ಸಲಿಲಯೋಗಿ! — ಓ ಮುದ್ದು ತೊರೆಯೆ!

ಹೋಗಿ ಬರುವೆನು, ತೊರೆಯೆ!
ಯೋಗಿ, ನಿನ್ನಂ ಮರೆಯೆ!
ನಿನ್ನಂತೆ ನಾ ಕರೆವೆ;
ನಿನ್ನಂತೆ ಹರಿವೆ! — ಓ ಮುದ್ದು ತೊರೆಯೆ!