ಮೇಘಪುರದೊಳಗಿರುವರಾರಮ್ಮಾ!

ಹೋಗಿ ಬರುವೆನು ನಾನೆನ್ನ ಕಳುಹಿಸಮ್ಮಾ!

ಮಳೆ ಬರುವ ಕಾಲದೊಳು
ತಳಿಸುತಿಳಿಯುವ ಹನಿಯ
ತೇರೇರಿ ವೈಭವದಿ
ಸಾರಿ ಬಂದೆಮ್ಮಿಳೆಗೆ
ಚೆಲುವ ತಂಬುವರು.

ಎಲೆಗಳಲಿ ಕುಣಿಯುತ್ತ
ಸುಮಗಳಲಿ ನಲಿಯುತ್ತ
ತೊರೆಗಳಲಿ ಗಳಪುತ್ತ
ಇಳೆಯ ಮೋಹಿಸುವರಾ
ಲಲಿತ ಬಾಲಕರು.

ಉಕ್ಕುವಾ ತಳಿರಾಗಿ
ಹಕ್ಕಿಯಿಂಚರವಾಗಿ
ಬಗೆಬಗೆಯ ಲೀಲೆಯಲಿ
ಚಿಗಿದು ತುಂಬುವರಿಳೆಯ
ಮುಗಿಲ ಬಾಲಕರು.

ಮನೆಯ ಹೆಂಚಿನ ಮೇಲೆ
ಹನಿಯ ದನಿಯಲಿ ಮೊರೆದು
ಕುಣಿದಾಡುವರು ಕರೆದು.
ಮನೆಯನಗಲರೆ ಅವರು!
ನನಗೇಕೆ ತಡೆಯು?

ಕಿರುಮಾಡಿನಂಗಳಕೆ
ಝರಿಯಂತೆ ಸುರಿಯುವರು;
ತೊರೆ ಹರಿವ ತೊದಲಿಂದ
ಓಡುವರು ಕರೆದೆನ್ನ
ಬರವ ಹಾರೈಸಿ!

ಸ್ವಾಗತವೀಯುವೆನವರಿಗೆ ಅಮ್ಮಾ!
ಮೇಘಪುರದ ಬಾಲಕರೈತರಲವಮ್ಮಾ!

ಅರಿಯೆನವರೆಂತಿಹರೊ!
ಅವರ ದನಿಯನು ಕೇಳಿ
ಅವರಿರುವರೆಂದರಿತೆ
ಕರೆದು ಆ ಗೆಳೆಯರನು
ಸರಸವಾಡುವೆನು.

ನೀರ್ ದನಿಯಾ ನಾ ಕೇಳಿ
ಹನಿಗಳಲಿ ಅವಿತಿಹರು
ಆ ಗೆಳೆಯರೆಂದರಿತು
ಕೈ ನೀಡಿ ಹಿಡಿಯಲಾ
ಹನಿಯೊಳವರಿಲ್ಲ!

ಮುಗಿಲ ಬಾಲರ ಗುಂಪು
ಮಲೆಯ ನೆತ್ತಿಯಿನಿಳಿದು
ಕಾಡ ಮೇಲಾಡುತಿರೆ —
ಮಗುವೆ ಹೋಗದಿರೆಂದು
ಅಗಲಿಕೆಯ ತರುವೆ.

ತೊರೆಗಳಲಿ ನಲಿವರೆಂ —
ದರಿತು ನಾನಲೆಗಳೊಳು
ಸರಸವಾಡಲು ಬಯಸೆ,
ಅರಿಯದವ ನೀನೆಂದು
ಬರಿದೆ ಬೆದರಿಸುವೆ.

ಗೆಳೆಯರನು ಕರೆಯೆ ನಾ
ಕೈ ಚಾಚಿ ಕೊರಳೆತ್ತಿ
ಓ ಬನ್ನಿ ಬನ್ನಿರೆನೆ
ನುಡಿಯದೆಯೆ ನಡೆವರಾ
ಕಡಲ ಮನೆಗೆ.

ಏತಕೈತಹರಿಲ್ಲಿಗವರಮ್ಮಾ?
ಭೂತಳವದೇನವರದೇನಮ್ಮಾ?

ವಿಜಯಯಾತ್ರೆಗೆ ಬಹರೊ?
ಈ ಜಗದ ಮಕ್ಕಳನು
ಕೂಡಿಯಾಡಲು ಬಹರೊ?
ಅಹುದಾದರೆನಗೇಕೆ
ಇಹದ ಸೆರೆ, ತಾಯೆ?

ಅವರಿಗಿಹ ಸ್ವಾತಂತ್ರ್ಯ
ನನಗಿಲ್ಲವೇಕಮ್ಮ?
ಅವರಿಗಿಮ್ಮಡಿ ಧೈರ್ಯ
ನನಗಿಹುದು; ನಿನ್ನೊಲುಮೆ
ನನಗೆ ಸೆರೆಯಮ್ಮ.

ಮುಗಿಲ ಬಾಲಕನಾಗಿ
ಹಗಲೆಲ್ಲ ಅಲೆಯುವೆನು.
ನಗ ಶೃಂಗಗಳ ಚರಿಸಿ
ನೆಗೆದಾಡಿ ಸಂಜೆಯೊಳು
ಮಗುವಾಗಿ ಬರುವೆ.

ನಿನ್ನ ಕರಗಳು, ತಾಯೆ,
ನನ್ನ ಸೆರೆಗೈದಿಹವು.
ಇನ್ನು ನಾನದ ಸಹಿಸೆ!
ಲೋಕವಿದು ಸಾಕು ಆ
ನಾಕ ಬೇಕಮ್ಮಾ.

ಗೆಳೆಯರೆನ್ನವರಮ್ಮಾ
ಮುಗಿಲ ಮಕ್ಕಳ ಗುಂಪು.
ಅವರ ದನಿ ಬಲು ಇಂಪು,
ಅವರ ಮೆಯ್‌ ಬಲು ತಂಪು,
ಒಡನಾಟ ಸೊಂಪು.

ಮೇಘಪುರವದು ನಮ್ಮ ಊರಮ್ಮಾ;
ಆಗಸದ ಮಕ್ಕಳಾಂದಹೃದಯರಮ್ಮಾ!