ಧೂಳಾಟವಾಡುವುದ ಕಲಿಸೆನಗೆ, ಕಂದ,

ಬಳಲಿ ಬಂದಿಹೆ ಜಗದ ಮರುಲು ರಣದಿಂದ! ಹೇಮರತುನದ ರಾಶಿಯಾನಂದ ಸಾಕು,
ಕೆಂಧೂಳಿಯಾ ಸಿರಿಯ ಶುಭಶೋಕ ಬೇಕು.
ಕೈ ಬೆರಳ ಜರಡಿಯೊಳು ಕೇರುವುದ ಧೂಳ
ಮರೆತಿಹೆನು ಬೋಧಿಸೈ ಎನಗದನು, ಬಾಲ!
ಪೀಡಿಸುವ ಕಾಲನಂ ಪೀಡಿಸುವ ನಿನ್ನ
ಗೂಢಲೀಲಾಮೃತವ ನೀಡಿ ಸಲಹೆನ್ನ!
ನೈರ್ಮಲ್ಯದಿಂಪೆನಗೆ ಸಾಕಿನ್ನು ಸಾಕು,
ಮಣ್ಣಿಡಿದ ಮುಗುದತೆಯ ಮಾಧ್ಯುರ್ಯ ಬೇಕು:
ಕೋಲ ಕುದುರೆಯ ಮಾಡಿ ಹೊಡೆವುದನು ಕಲಿಸು,
ಲೀಲೆಯಿಂ ಕರ್ಮಗಳನೇಳಿಪುದ ಕಲಿಸು;
ಕೋಕಿಲೆಯನಣಕಿಸುವ ಕಂಠವನು ಕಲಿಸು;
ಚೇತನವ ಜಡದೊಳಗೆ ಕಾಣುವುದ ಕಲಿಸು;
ನೀಲ ನಿರ್ಮಲನಭದ ನೀರದವ ನೋಡಿ
ಮಾತಾಡಿ ಕರೆಕರೆವೆ ಕೈ ನೀಡಿ ಓಡಿ!
ನಿನ್ನ ಕೇಕೆಯೊಳಿಹುದು ಸರ್ವಾಧಿಕಾರ;
ನಿನ್ನಾಜ್ಞೆ ಮೀರದೈ ವಿಶ್ವದಾಧಾರ!
ನಿನ್ನ ನಿರ್ಲಕ್ಷತೆಯ ಧೈರ್ಯವೆನಗಿರಲಿ!
ನಿನ್ನ ಮಂಗಳ ಮುಕುತಿಯಾನಂದ ಬರಲಿ!