ಹಕ್ಕಿಗಳೆ ಕಾಡಿನೊಳಗಲೆದಾಡಿ ಹೋಗಿ,

ಪಕ್ಕಗಳ ಬಡಿಬಡಿದು ಬೇಸರವ ನೀಗಿ;
ತಳಿರಿಂದ ತಳಿರೆಡೆಗೆ ಹಾಡಿ ಹಾರಾಡಿ
ಬಳಲಿ ಬಹ ಜನಪದಕೆ ಸಂತಸವ ನೀಡಿ.

ಹಣ್ಣಾದ ಫಲಗಳನು ಹಾರಾಡಿ ತಿನ್ನಿ
ಕಣ್ಣಿಗಿನ ಮರೆಯಾಗುವಾಮುನ್ನ ಬನ್ನಿ
ನಿಮ್ಮನಾ ಕಳುಹಿಪುದು ಹಿರಿಗೆಲಸಕಲ್ಲ;
ನಿಮ್ಮಾಟ ನೀವಾಡಿ ಬಂದುಬಿಡಿ ಎಲ್ಲ.

ನಿಮ್ಮನೇ ಹಾರೈಸುತಿಹರೊಡನೆ ಕೂಡಿ;
ಸಮ್ಮತಿಸದವರೊಡನೆ ಹೋರಾಟ ಬೇಡಿ.
ಹಿರಿಗೆಲಸವಿಹರೊಡನೆ ಸಂಗೀತ ಬೇಡಿ.
ಸಿರಿಯವರ ಕೊಂದಿಹಳು ಲೋಭವಿಷವೂಡಿ.

ವ್ಯಾಧರಿಹರವರ ಸಹವಾಸ ನಿಮಗಲ್ಲ:
ಹೋದ ಹೃದಯರ ಸಂಗ ನಿಮಗೊಳ್ಳಿತಲ್ಲ.
ಪಂಡಿತರ ಬಲೆಯೊಳಗೆ ಸಿಲುಕದಿರಿ ನೀವು:
ಖಂಡಿಪರು ಶೋಧಿಸಲು; ನಿಮಗಹುದು ಸಾವು!