ಮೊರಿಯಾ !

ಅದು ಹಡಗಿನ ಹೆಸರು. ಭಾರತದ ಸ್ವಾತಂತ್ಯ್ರಕ್ಕಾಗಿ ನಿರ್ಭಯವಾಗಿ ಹೋರಾಡುತ್ತಿದ್ದ ವೀರ ಸಾವರ್‌ಕರರನ್ನು ಲಂಡನ್ನಿನಿಂದ ಭಾರತದತ್ತ ಹೊತ್ತು ತರುವ ಪುಣ್ಯವೂ ಅದಕ್ಕೊಮ್ಮೆ ಸಿಕ್ಕಿತ್ತು. ವಿದೇಶದಲ್ಲಿ ಬಂಧಿಸಿದ್ದ ವೀರನನ್ನು ವಿಚಾರಣೆಗೆಂದು ಭಾರತಕ್ಕೆ ಕರೆತರಬೇಕಾಗಿದ್ದ ಸಂದರ್ಭವದು.

೧೯೧೦ರ ಜುಲೈ ಮೊದಲ ದಿನ. ಭಾರತದ ಕಡೆಗೆ ಆ ಹಡಗು ಹೊರಟಿದೆ.

ಸ್ವಾತಂತ್ಯ್ರವೀರನ ಬಿಡುಗಡೆಯ ಕನಸು

ಇತ್ತ ಪ್ಯಾರಿಸ್‌ನಲ್ಲಿ ಒಬ್ಬ ಕ್ರಾಂತಿಮಣಿ ಮತ್ತು ಒಬ್ಬ ಋಷೀಜಿ ಏನೋ ಸಂಚು ನಡೆಸಿದ್ದಾರೆ. ಏನಾದರೂ ಮಾಡಿ ಸಾವರ್‌ಕರರನ್ನು ಬಂಧನದಿಂದ ಬಿಡಿಸಬೇಕು. ಹಡಗು ಭಾರತ ತಲುಪುವವರೆಗೆ ಸುಮ್ಮನೆ ಕುಳಿತಿರಬಾರದು.

ಆ ಕ್ರಾಂತಿಕಾರಿಣಿಗೆ ಸುಮಾರು ಐವತ್ತು ವರ್ಷಗಳು. ಜೊತೆಯಲ್ಲಿದ್ದ ಋಷೀಜಿಗೆ ಮೂವತೈದು ವರ್ಷಗಳೂ ತುಂಬಿಲ್ಲವೆನ್ನಬೇಕು. ಹುಲುಸಾಗಿ ಬೆಳೆಸಿದ್ದ ಗಡ್ಡ-ಮೀಸೆಗಳಿಂದಾಗಿ ಆ ಅಡ್ಡ ಹೆಸರು- ಋಷೀಜಿ. ನಿಜ. ನಾಮಧೇಯ ವಿ.ವಿ.ಎಸ್. ಅಯ್ಯರ್.ಜುಲೈ ೮ ರಂದು ಬೆಳಗ್ಗೆ.

ಸಾವರ್‌ಕರ್‌ ಕಾವಲುಗಾರರ ಕಣ್ಣುತಪ್ಪಿಸಿ ಚಲಿಸುತ್ತಿರುವ ಹಡಗಿನಿಂದ ಸಮುದ್ರಕ್ಕೆ ಜಿಗಿಯುತ್ತಾರೆ. ಸಮುದ್ರವನ್ನು ಈಜಿ ದಡದತ್ತ ಬರುತ್ತಾರೆ. ಅವರಿಗೆ ರಕ್ಷಣೆ ನೀಡಲು ಗೋಪ್ಯವಾಗಿ ಸರ್ವಸಿದ್ಧತೆಗಳು ನಡೆದಿವೆ. ಸಮುದ್ರ ದಡದಲ್ಲಿ ಆ ವೀರನ ನಿರೀಕ್ಷಣೆಯಲ್ಲಿ ನಿಂತಿರುವ ವಾಹನವೊಂದರಲ್ಲಿ ಆ ಕ್ರಾಂತಿಕಾರಿಣಿ ಮತ್ತು ಇತರ ಸಂಗಡಿಗರು ಕಾದು ಕುಳಿತಿದ್ದಾರೆ. ಸಾವರ್‌ಕರ್‌ ದಡಕ್ಕೆ ಬರುತ್ತಿದ್ದಂತೆಯೇ ಆ ಮಹಿಳೆ ಮತ್ತು ಇತರರು ದಣಿದಿದ್ದ ಆ ವೀರನನ್ನು ಕರೆತಂದು ವಾಹನದಲ್ಲಿ ಕೂರಿಸಿಕೊಂಡು ಹೊರಟೇಬಿಡುತ್ತಾರೆ. ಆಯಿತು, ಸಾವರ್‌ಕರ್‌ ಬಂಧನ ಮುಕ್ತರಾದರು. ಸರ್ವಸ್ವತಂತ್ರರಾಗಿ ಬಿಟ್ಟರು.

“ಸ್ವಾತಂತ್ಯ್ರ ಲಕ್ಷ್ಮೀ ಕೀ- ಜೈ” ಎಂಬ ಘೋಷಣೆ ಎಲ್ಲೆಲ್ಲೂ.

ಆದರೆ ಅದು ಕನಸು.

ಕನಸು ಕನಸಾಗಿಯೇ ಉಳಿಯಿತಲ್ಲ !

ಆ ಕ್ರಾಂತಿಕಾರಿಣಿ, ಋಷೀಜಿ ಮತ್ತು ಸಂಗಡಿಗರು ಮಾರ್ಸೇಲ್ಸ್ ಬಂದರಿನ ಬಳಿಗೆ ಬರುವ ವೇಳೆಗೆ ಎಲ್ಲವೂ ಕೈ ಮಿಂಚಿಹೋಗಿತ್ತು. ಹಡಗಿನಿಂದ ಸಮುದ್ರಕ್ಕೆ ಧುಮುಕಿ ದಡದತ್ತ ಈಜಿದ ಸಾವರ್‌ಕರರನ್ನು ಪೊಲೀಸರು ಮತ್ತೆ ಮೋಸದಿಂದ ಬಂಧಿಸಿ ಹಡಗಿಗೇ ಸೆಳೆದುಕೊಂಡು ಹೋಗಿದ್ದರು. ಎಷ್ಟೋ ವಾರಗಳಿಂದ ಹಾಕಿಕೊಂಡಿದ್ದ ಯೋಜನೆಗಳೆಲ್ಲವೂ ಕ್ಷಣದಲ್ಲಿ ಬುಡಮೇಲಾಗಿದ್ದವು. ಮನೆಗೆ ಹೊತ್ತು ತಂದಿದ್ದು ಸಾವರ್‌ಕರರನ್ನಲ್ಲ; ಆ ವೀರನಿಗಿಂದ ಹೆಚ್ಚು ತೂಕವಿದ್ದ ನಿರಾಶೆ, ಅಸಫಲತೆಗಳ ಮೂಟೆಯನ್ನು.

ಪ್ಯಾರಿಸ್‌ನ ಅನೇಕ ಸುಸಜ್ಜಿತ ಮನೆಗಳಲ್ಲಿ ಆಕೆಯದೂ ಒಂದು. ಭವ್ಯವಾದ, ವಿಶಾಲವಾದ ಮನೆ. ನಡುಮನೆಯಲ್ಲಿ ವ್ಯವಸ್ಥಿತವಾಗಿ ಜೋಡಿಸಿದ್ದ ಪೀಠೋಪಕರಣಗಳು, ಮೂಲೆಯಲ್ಲಿ ನಿಲುವು ಗನ್ನಡಿ.

ಆಕೆ ನೇರವಾಗಿ ಬಂದು ನಿಲುವು ಗನ್ನಡಿ ಮುಂದೆ ನಿಂತಳು. ಮುಖ ಕಳೆಗುಂದಿದೆ. ಆಗಲೆ ಇದ್ದ ಉತ್ಸಾಹ ಈಗ ಇಲ್ಲ. ಸ್ವಲ್ಪ ತಡಮಾಡಿ ಹೋಗುವ ವೇಳೆಗೆ ಸಾವರ್‌ಕರರ್ ಮತ್ತೆ ಬಂಧಿಯಾಗಿದ್ದರು ಎಂಬುದನ್ನು ನಂಬುವುದಾದರೂ ಹೇಗೆ?

ಸೋಲುಗಳೇ ವಿಜಯಕ್ಕೆ ಸೋಪಾನ ಮಾರ್ಗ

ಪ್ರತಿಬಿಂಬವೇ ಆಕೆಗೆ ಮತ್ತೆ ಹುರುಪು ತುಂಬಿತು. “ಅಯ್ಯೋ ಹುಚ್ಚು ಹೆಂಗಸೇ, ಧೃತಿಗೆಡಬೇಡ. ನಿನ್ನ ಹೆಸರು ಮೇಡಂ ಕಾಮಾ ಎಂಬುದನ್ನು ಮರೆಯಬೇಡ. ಸೋಲುಗಳೇ ವಿಜಯಕ್ಕೆ ಸೋಪಾನ ಮಾರ್ಗ. ಆಗಿದ್ದನ್ನು ಮರೆತು ಆಗಬೇಕಾಗಿರುವುದನ್ನು ಯೋಚಿಸು”.

"ಸೋಲುಗಳೇ ವಿಜಯಕ್ಕೆ ಸೋಪಾನ ಮಾರ್ಗ"

ಆಕೆ ಬಂದು ಕುರ್ಚಿಯಲ್ಲಿ ಕುಳಿತಳು. ಸಾವರ್‌ಕರರನ್ನು ಬಿಡಿಸುವ ಬಗ್ಗೆ ಬೇರೆ ಪ್ರಯತ್ನ ನಡೆಸಬೇಕೆಂದುಕೊಂಡಳು. ದೇಶಭಕ್ತರಾಗಿದ್ದ ಮುಂಬಯಿಯ ಒಬ್ಬ ಪ್ರಸಿದ್ಧ ವಕೀಲರಿಗೆ ಆ ಕುರಿತು ವಿಚಾರಣೆ ನಡೆಸಲು ತಂತಿ ಕೊಟ್ಟಳು. ಮೇಡಂ ಕಾಮಾಳ ರಕ್ತದ ಕಣಕಣದಲ್ಲೂ ಸ್ವಾತಂತ್ಯ್ರದಾಹ ಅಡಗಿತ್ತು. ಬ್ರಿಟಿಷರ ಕಾಲ್ತುಳಿತದ ಅಡಿ ನುಜ್ಜುಗುಜ್ಜಾಗುತ್ತಿದ್ದ ಭಾರತೀಯರನ್ನು ದಾಸ್ಯಮುಕ್ತರನ್ನಾಗಿ ಮಾಡಬೇಕೆಂಬ ದೃಢ ಸಂಕಲ್ಪ ಆಕೆಯ ನರನಾಡಿಗಳಲ್ಲಿತ್ತು.

ದಬ್ಬಾಳಿಕೆ ಹೊತ್ತಿಸಿದ ಜ್ವಾಲೆ

ಮೇಡಂ ಕಾಮಾ ಹುಟ್ಟು ಕ್ರಾಂತಿಕಾರಿಣಿಯಲ್ಲ. ಹಿಂಸೆಯ ಬಗ್ಗೆ ಮಾತನಾಡುವುದನ್ನೇ ಮೊದಮೊದಲು ಆಕೆ ವಿರೋಧಿಸುತ್ತಿದ್ದಳು. ಜನ ಸರ್ಕಾರದ ವಿರುದ್ಧ ಬಂಡಾಯವೇಳುವುದನ್ನು ಅಥವಾ ಗಲಭೆ ಮಾಡುವುದನ್ನು ಖಂಡಿಸುತ್ತಿದ್ದಳು. ಆದರೆ ದಿನಗಳೆದಂತೆ ಇಂಗ್ಲಿಷರ ನಿರಂಕುಶ ಪ್ರಭುತ್ವದ ಬಗ್ಗೆ ಅರಿತಳು. ಹೃದಯ ರಹಿತ ಆಡಳಿತಕ್ಕೆ ಕಳಶಪ್ರಾಯವಾಗಿದೆ ಆಷಾಢಭೂತಿತನ! ಭಾರತೀಯರು ಅನುಭವಿಸುತ್ತಿದ್ದ ಮೂಕವೇದನೆ ಅರ್ಥವಾಗುತ್ತಿದ್ದಂತೆ ಮೇಡಂ ಕಾಮಾಳಲ್ಲಿ ಕ್ರಾಂತಿಯ ಕಿಡಿ ಕಾಣಿಸಿಕೊಂಡು ಕ್ರಮೇಣ ಆ ಕ್ರಾಂತಿಜ್ವಾಲೆ ಕಾಳ್ಗಿಚ್ಚಿನಂತೆ ಭುಗಿಲೇಳಲು ಮೊದಲಾಗಿತ್ತು. ವಿದೇಶದಲ್ಲಿ ಕುಳಿತೇ ಭಾರತೀಯರಿಗೆ ಅಸಹಕಾರ ಚಳವಳಿಯ ಪ್ರವಚನ ನೀಡಿದ ಕ್ರಾಂತಿಮಾತೆ ಆಕೆ.

ಜಾಣೆ ಮುನ್ನಿ

ಮೇಡಂ ಕಾಮಾ ಜನಿಸಿದ್ದು ೧೮೬೧ರ ಸೆಪ್ಟೆಂಬರ್ ೨೪ ರಂದು. ಜನ್ಮ ಸ್ಥಳ ಮುಂಬಯಿ. ಪ್ರೇಮ್‌ಜಿ ಸೊಹ್ರಾಬ್‌ಜಿ ಪಟೇಲ್ ಎಂದರೆ ಮುಂಬಯಿಯಲ್ಲಿ ಹೆಸರುವಾಸಿ. ದೊಡ್ಡ ವ್ಯಾಪಾರಸ್ಥರು ಹಾಗೂ ಐಶ್ವರ್ಯವಂತರು. ಸಂಸಾರವೂ ಅಷ್ಟೇ ದೊಡ್ಡದು. ಅವರಿಗೆ ಒಂಬತ್ತು ಜನ ಮಕ್ಕಳು. ಮುಂದೊಮ್ಮೆ ಬ್ರಿಟಿಷ್‌ ಸರ್ಕಾರವನ್ನೇ ತಲ್ಲಣಗೊಳಿಸಿದ ಮೇಡಂ ರುಸ್ತುಂ ಭಿಕಾಜಿ ಕಾಮಾ ಆ ಒಂಬತ್ತು ಮಂದಿಯಲ್ಲಿ ಒಬ್ಬಳು. ತಂದೆ ಪ್ರೇಮ್‌ಜಿ ಸೊಹ್ರಾಬ್‌ಜಿ ಪಟೇಲ್ ಅತಿಮುದ್ದಿನಿಂದ ಮಗುವನ್ನು ಸಾಕಿದರ. “ಮುನ್ನಿ” ಎಂದು ಕರೆದರು. ಚಿಕ್ಕ ವಯಸ್ಸಿನಲ್ಲೇ ಮುನ್ನಿಯನ್ನು ಮುಂಬಯಿಯ ಅಲೆಕ್ಸಾಂಡ್ರ ಪಾರ್ಸಿ ಬಾಲಕಿಯರ ಶಾಲೆಗೆ ಸೇರಿಸಿದ್ದೂ ಆಯಿತು.

ಮುನ್ನಿ ಅತಿ ಜಾಣೆ. ಶಾಲೆಯಲ್ಲಿ ಎಲ್ಲದರಲ್ಲೂ ಪ್ರಥಮ ಸ್ಥಾನ. ಪ್ರತಿದಿನದ ಪಾಠ ಪ್ರವಚನಗಳನ್ನು ಪೂರೈಸದೇ ರಾತ್ರಿ ಊಟ ಮಾಡುತ್ತಿರಲಿಲ್ಲ. ಮನೆಯಲ್ಲಿ ಮಾಡಲು ಕೊಟ್ಟ ಪಾಠಗಳನ್ನು ಬರೆದು ಸಿದ್ಧಪಡಿಸದೇ ನಿದ್ರೆ ಮಾಡುತ್ತಿರಲಿಲ್ಲ. ಹೀಗಾಗಿ ಎಲ್ಲ ವಿಷಯಗಳಲ್ಲೂ ಅಂಕ ಹೆಚ್ಚು-ಹೆಚ್ಚು; ಎಲ್ಲ ಗುರುಗಳಿಗೂ ಮುನ್ನಿ ಅಚ್ಚು-ಮೆಚ್ಚು.

ಆ ಚಿಕ್ಕ ವಯಸ್ಸಿನಲ್ಲೇ ಅನೇಕ ಭಾಷೆಗಳಲ್ಲಿ ಪ್ರವೀಣತೆ ಪಡೆಯಬೇಕೆಂಬ ಆಸೆ ಮುನ್ನಿಗೆ. ಹುಡುಗಿಯಾಗಿದ್ದಾಗಲೇ ಭಾರತದ ಸ್ವಾತಂತ್ಯ್ರ ಹೋರಾಟದಲ್ಲಿ ಹೆಚ್ಚಿನ ಆಸ್ಥೆ. ದೇಶಕ್ಕಾಗಿ ಜೀವ ತೆತ್ತ ಹುತಾತ್ಮರನ್ನು ಪೂಜಿಸುತ್ತಿದ್ದಳು. ನಾಡಿಗಾಗಿ ದುಡಿಯುವವರನ್ನು ಗೌರವಿಸುತ್ತಿದ್ದಳು.

ಆಕೆಯ ಚಟುವಟಿಕೆಗಳು ತಂದೆಗೆ ತಲೆನೋವು ತರಿಸಿದವು. ಮಗಳನ್ನು ಸ್ವಾತಂತ್ಯ್ರ ಹೋರಾಟಕ್ಕೆ ಮಾತ್ರ ಬಿಡಬಾರದೆಂಬ ಯೋಚನೆ ಪ್ರೇಮ್‌ಜಿ ಸೋಹ್ರಾಬ್‌ಜಿ ಪಟೇಲರದು.

ಸ್ವಾತಂತ್ಯ್ರ ಹೋರಾಟಕ್ಕೆ ಸೇರದಂತೆ

ಏನು ಮಾಡಿದರೆ ಸರಿಯಾದೀತು?

ಮದುವೆ?

ಹೌದು, ವಿವಾಹ ಮಾಡಿಬಿಟ್ಟರೆ ಈಗಿನಷ್ಟು ಸ್ವತಂತ್ರವಾಗಿರಲು ಸಾಧ್ಯವಿಲ್ಲವಾಗುತ್ತದೆ.

ಸೂಕ್ತನಾದ ವ್ಯಕ್ತಿಯನ್ನು ಹುಡುಕಿ ತಂದರು ಅಳಿಯನನ್ನಾಗಿಸಿಕೊಳ್ಳಲು; ಮಗಳನ್ನು ರಾಜಕೀಯದಿಂದ ದೂರವಿರಿಸಲು! ಆತನ ಹೆಸರು ರುಸ್ತುಂ ಕೆ. ಆರ್. ಕಾಮಾ. ಸಮಾಜ ಸೇವಕ ಮತ್ತು ರಾಜಕೀಯರಲ್ಲಿ ಹೆಸರು ಮಾಡಿದ್ದವ. ಬ್ರಿಟಿಷರ ಆಳ್ವಿಕೆಯ ಬಗ್ಗೆ ವಿಶ್ವಾಸ ಹೊಂದಿದ್ದವ. ವೃತ್ತಿಯಲ್ಲಿ ವಕೀಲ. ಇಂಥವನು ಸ್ವಾತಂತ್ಯ್ರದಾಹವಿಲ್ಲದ್ದ ಸಿಂಹಿಣಿಯ ಬಗ್ಗೆ ತಿಳಿದಿದ್ದೂ ಮದುವೆಯಾಗಬಯಸಿದ್ದು ಸೋಜಿಗದ ವಿಷಯ. ನಿಜಕ್ಕೈ ಆತ ರುಸ್ತುಮ್‌ನೇ ಸೈ!

೧೮೮೫ ಆಗಸ್ಟ್‌ ೩ ರಂದು ಮದುವೆ ವಿಜೃಂಭಣೆಯಿಂದ ನಡೆದು ಹೋಯಿತು.

ಎರಡು ದಿನಗಳ ಮಟ್ಟಿಗೆ ಸ್ತಬ್ಧವಾಗಿದ್ದ ಮೇಡಂ ಕಾಮಾಳ ರಾಜಕೀಯ ಚಟುವಟಿಕೆಗಳು ಮೂರನೆಯ ದಿನದಿಂದ ಮತ್ತೆ ಪ್ರಾರಂಭವಾದವು. ತಂದೆ ತನಗಿದ್ದ ತಲೆ ನೋವನ್ನು ಮಗಳ ಜೊತೆ ಅಳಿಯನಿಗೆ ಧಾರೆಯೆರೆದಿದ್ದರು.

ಇಬ್ಬರಲ್ಲಿಯೇ ಎರಡು ಪಕ್ಷಗಳು.

ಮೇಡಂ ಕಾಮಾಳಿಗೆ ಅನುರೂಪನಾದ ಗಂಡನೇನೋ ದೊರೆತಿದ್ದ. ಶ್ರೀಮಂತಿಕೆಯಲ್ಲಿ, ಬುದ್ಧಿಯಲ್ಲಿ, ಚಾತುರ್ಯದಲ್ಲಿ ಸತಿಪತಿಯರು ಒಬ್ಬರಿಗೊಬ್ಬರು ಹೇಳಿಮಾಡಿಸಿದಂಥ ಅಪೂರ್ವ ಜೋಡಿ. ಆದರೆ ಆಂಗ್ಲರ ಆಳ್ವಿಕೆಯ ಬಗ್ಗೆ ಮಾತ್ರ ಅವರಿಬ್ಬರ ಅಭಿಪ್ರಾಯಗಳು ಬೇರೆಬೇರೆ.

ಇಂಗ್ಲೆಂಡೇ ಸ್ವರ್ಗವೆಂದು ತಿಳಿದಿದ್ದ ಗಂಡನಿಗೆ ಇಂಗ್ಲಿಷಿನವನೇ ಪ್ರತ್ಯಕ್ಷ ದೇವರು. ಆಂಗ್ಲರ ಆಳ್ವಿಕೆಯನ್ನು ಮೀರಿಸಬಲ್ಲ ಅಥವಾ ಅದಕ್ಕೆ ಸಾಟಿಯಾಗಬಲ್ಲ ಯಾವ ಶಕ್ತಿಯೂ ಇಲ್ಲ ಎಂದು ಆತನ ಮತ.

ಆದರೆ ಕಾಮಾಳ ದೃಷ್ಟಿಯಲ್ಲಿ ಬ್ರಿಟಿಷರು ಭಾರತದ ರಕ್ತವನ್ನೇ ಹೀರುತ್ತಿದ್ದ ಘಾತುಕರು; ಶರೀರ ಮೂಳೆ ಮೂಳೆ ಬಿಟ್ಟುಕೊಳ್ಳುವವರೆಗೆ ಭಾರತೀಯರ ರಕ್ತ ಕುಡಿಯಲು ಇಲ್ಲಿಗೆ ಅತಿಕ್ರಮಿಸಿ ಬಂದ ನಯವಂಚಕರು, ದುರಾಚಾರಿಗಳು.

ಬ್ರಿಟಿಷರ ಗೊಡ್ಡು ಆದರ್ಶಗಳಿಗೆ ತಲೆ ಬಾಗಿದ್ದ ಗಂಡನಿಂದ ನಿರೀಕ್ಷಿಸಿದಂತೆಯೇ ಮೇಡಂ ಕಾಮಾಳಿಗೆ ತೊಂದರೆ ಪ್ರಾರಂಭವಾಯಿತು. ಸ್ವಾತಂತ್ಯ್ರ  ಚಳುವಳಿಯಲ್ಲಿ ಭಾಗಿಯಾಗಬಾರದೆಂದು ಮಡದಿಯನ್ನು ಎಚ್ಚರಿಸಿದ. ಆದರೆ ಗಂಡನ ಕಡ್ಡಾಯ, ನಿರ್ಬಂಧಗಳು ಕಾಮಾಳ ಮೇಲೆ ಕಿಂಚಿತ್ ಪರಿಣಾಮವನ್ನೂ ಬೀರಲಿಲ್ಲ. ಹೀಗಾಗಿ ಮನೆಯಲ್ಲೇ ಎರಡು ಪಕ್ಷಗಳಾದವು. ಸತಿ ಭಾರತೀಯರ ಪರ; ಪತಿ ಬ್ರಿಟಿಷರ ಪರ! ಭಾರತವನ್ನು ದಾಸ್ಯ ಮುಕ್ತಗೊಳಿಸುವುದೇ ಕಾಮಾಳ ಪವಿತ್ರ ಧ್ಯೇಯವಾದಾಗ ಮನೆ ಒಂದು ಪುಟ್ಟ ರಣರಂಗವಾಯಿತು. ವೈವಾಹಿಕ ಜೀವನದಲ್ಲಿ ಸುಖ ಸಿಕ್ಕದೆ ಹೋಯಿತು. ಸಂತ ಮೀರಾ ದೇವ ಗಿರಿಧರನಿಗಾಗಿ ವೈಭವದ ಸಂಸಾರವನ್ನು, ಪತಿಯನ್ನು ತೊರೆದು ಬಂದಂತೆ ಮೇಡಂ ಕಾಮಾ ತಾಯಿ ಭಾರತಿಯನ್ನು ಪರಕೀಯರ ಆಳ್ವಿಕೆಯಿಂದ ಬಿಡುಗಡೆ ಮಾಡಲು ಸಿರಿವಂತ ಪತಿಯ ಸ್ಥಾನ-ಮಾನಗಳನ್ನು ಮರೆತಳು.

ಪ್ಲೇಗಿನೊಡನೆ ಸೆಣಸಾಟ

ಇದೇ ಸಮಯದಲ್ಲಿ ಮುಂಬಯಿಯನ್ನು ಪ್ಲೇಗ್ ಬೇನೆ ಆವರಿಸಿತು. ಈ ಮಾರಿ ರೋಗಕ್ಕೆ ಜನ ತುತ್ತಾಗುತ್ತಾ ಹೋದಾಗ ಮೇಡಂ ಕಾಮಾ ಜೀವನ ಮೇಲಿನ ಹಂಗು ತೊರೆದು ಹಗಲಿರುಳೂ ಜನಸೇವೆಯಲ್ಲಿ ನಿರತಳಾದಳು. ದಾದಿಯಾಗಿ ಜನರನ್ನು ಪೋಷಿಸಿದಳು; ತಾಯಿಯಾಗಿ ಆರೈಕೆ ಮಾಡಿದಳು. ಇದರಿಂದಾಗಿ ಸಾಯಬೇಕಿದ್ದ ಸಾವಿರಾರು ಮಂದಿ ಮತ್ತೆ ಜೀವ ಪಡೆದರು. ನೀರು ದಾಹವಿದ್ದ ರೋಗಿಗಳು ಗುಣಮುಖರಾಗುತ್ತಿದ್ದಂತೆ ಅವರಲ್ಲಿ ಸ್ವಾತಂತ್ಯ್ರದಾಹವನ್ನು ಕೆರಳಿಸಿದಳು. ನಿದ್ರಾಹಾರಗಳನ್ನು ಬಿಟ್ಟು ರೋಗಿಗಳ ಶುಶ್ರೂಷೆಯಲ್ಲಿ ತೊಡಗಿದ್ದ ಕಾಮಾಳಿಗೂ ಪ್ಲೇಗ್‌ ಬೇನೆ ತಗುಲಿತು. ಆದರೆ ಆ ಸಿಂಹಿಣಿಯ ಬಳಿಗೆ ಬರಲು ಯಮನಿಗೂ ಹೆದರಿಕೆ. ಆಕೆ ಚೇತರಿಸಿಕೊಂಡರೂ ಮೊದಲಿನ ಶಕ್ತಿ, ಚೈತನ್ಯಗಳು ಬಂದಿರಲಿಲ್ಲ. ಪೂರ್ಣ ಆರೋಗ್ಯ ಪಡೆಯಲೇಬೇಕೆಂದು ಬಂಧುಗಳು-ಸ್ನೇಹಿತರು ಒತ್ತಾಯಿಸಿ ಆಕೆಯನ್ನು ೧೯೦೨ ರಲ್ಲಿ ಯೂರೋಪಿಗೆ ಕಳುಹಿಸಿ ಕೊಟ್ಟರು.

ಲಂಡನ್ನಿನಲ್ಲಿ

ಜರ್ಮನಿ, ಸ್ಕಾಟ್‌ಲೆಂಡ್, ಫ್ರಾನ್ಸ ಮೊದಲಾದ ದೇಶಗಳಲ್ಲಿ ಸುಮಾರು ಒಂದೊಂದು ವರ್ಷಕಾಲ ಕಲೆದ ಕಾಮಾ ಲಂಡನ್‌ ಮುಟ್ಟಿದ್ದು ೧೯೦೫ ರಲ್ಲಿ. ಒಂದು ಶಸ್ತ್ರ ಚಿಕಿತ್ಸೆ ಆದ ನಂತರ ಮತ್ತೆ ಮೊದಲಿನ ಶಕ್ತಿ, ಚೈತನ್ಯಗಳು ಮೂಡಿದವು. ಭಾರತದಲ್ಲಿ ಬಹು ಗೌರವ ಪಡೆದ ನಾಯಕರಾದ ದಾದಾಭಾಯಿ ನವರೋಜಿ ಆಗ ಇಂಗ್ಲೆಂಡಿನಲ್ಲಿದ್ದರು. ಅವರ ಆಪ್ತ ಕಾರ್ಯದರ್ಶಿಯಾಗಿ ಒಂದೂವರೆ ವರ್ಷಕಾಲ ಸೇವೆ ಸಲ್ಲಿಸುವ ವೇಳೆಗೆ ಮೇಡಂ ಕಾಮಾಳಿಗೆ ಅನೇಕ ರಾಷ್ಟ್ರಭಕ್ತರ ಮತ್ತು ಸಾಹಿತಿಗಳ ಸಂಪರ್ಕ ದೊರಕಿತ್ತು.

ಧ್ವಜಕ್ಕೆ ವಂದನೆ ಸಲ್ಲಿಸಿ

೧೯೦೭ ರ ಆಗಷ್ಟ್‌ ಮೂರನೆಯ ವಾರ. ಜರ್ಮನಿಯ ಸ್ಪಟ್‌ಗಾರ್ಟ್‌‌ನಲ್ಲಿ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನ ನಡೆಯುತ್ತದೆ ಎಂಬ ವಿಷಯ ತಿಳಿದು ಬಂದಿತು. ಭಾರತದ ಗುಲಾಮಗಿರಿಯ ಪರಿಸ್ಥಿತಿಯನ್ನು ಲೋಕದೆದುರು ಮಂಡಿಸಲು ಒಂದು ಸುಸಮಯ ಸಿಕ್ಕಿದಂತಾಯಿತು ಕಾಮಾಳಿಗೆ. ಜಗತ್ತಿನ ನಾನಾ ರಾಷ್ಟ್ರಗಳಿಂದ ಆಗಮಿಸಿದ್ದ ಪ್ರತಿನಿಧಿಗಳ ಸಂಖ್ಯೆ ಒಂದು ಸಹಸ್ರ. ಭಾರತದ ಹೆಸರು ಬಂದಾಗ ಕಾಮಾ ವೇದಿಕೆ ಹತ್ತಿ ನಿಂತಳು. ವರ್ಣರಂಜಿತ ಸೀರೆ; ಆಕರ್ಷಕ ನಿಲುವು; ಗಂಭೀರವಾದ ಮುಖ್ಯ. ಪ್ರತಿನಿಧಿಗಳೆಲ್ಲ “ಇವಳೊಬ್ಬ ಭಾರತದ ರಾಜಕುಮಾರಿ” ಎಂದುಕೊಂಡರು.

ಮೂಕವೇದನೆ ಅನುಭವಿಸುತ್ತಿದ್ದ ಲಕ್ಷಾಂತರ ಭಾರತೀಯರ ಕಷ್ಟ ಕಾರ್ಪಣ್ಯಗಳ ಬಗ್ಗೆ ಮೇಡಂ ಕಾಮಾ ಪ್ರಸ್ತಾಪಿಸಿದಳು.

“ಮಾನವ ಜನಾಂಗದ ಐದರಲ್ಲೊಂದು ಪಾಲು ಭಾರತದಲ್ಲಿದ್ದಾರೆ. ಇವರನ್ನು ದಾಸ್ಯದಿಂದ ಮುಕ್ತಗೊಳಿಸಲು ಜಗತ್ತಿನ ಸ್ವಾತಂತ್ಯ್ರ ಪ್ರೇಮಿಗಳೆಲ್ಲರೂ ಸಹಕರಿಸಬೇಕು” ಎಂಬ ನಿರ್ಣಯವನ್ನು ದಿಟ್ಟವಾಗಿ ಮಂಡಿಸಿದಳು. ವರ್ಷಂಪ್ರತಿ ಮೂವತ್ತೈದು ದಶಲಕ್ಷ ಪೌಂಡಗಳಷ್ಟು ಹಣವನ್ನು ಭಾರತದಿಂದ ಲೂಟಿ ಹೊಡೆಯುತ್ತಿದ್ದ ಬ್ರಿಟಿಷ್ ಸರ್ಕಾರವನ್ನು ಖಂಡಿಸಿದಳು. ಭಾರತೀಯರ ರಕ್ತವನ್ನೇ ಹೀರುತ್ತಿದ್ದ ಆ ನಿರಂಕುಶ ಸಾರ್ವಭೌಮರಿಂದಾಗಿ ದಿನೇ ದಿನೇ ಭಾರತ ಆರ್ಥಿಕವಾಗಿ ಬಲಹೀನವಾಗುತ್ತ ಹೋಗುತ್ತಿದ್ದ ವಿಷಯ ವಿವರಿಸಿದಳು. ಭಾಷಣದ ಕೊನೆಯಲ್ಲಿ ಭಾರತೀಯ ಧ್ವಜವನ್ನು ಬಿಚ್ಚಿಹಿಡಿದು,

“ಈ ಧ್ವಜ ಭಾರತದ ಸ್ವಾತಂತ್ಯ್ರದ ಪ್ರತೀಕ. ನೋಡಿ, ಇದು ನವೋದಯ! ಹುತಾತ್ಮರಾದ ಭಾರತೀಯ ಯುವಕರ ರಕ್ತದಿಂದ ಇದು ಪಾವನವಾಗಿದೆ. ಮಹಾಶಯರೇ, ಮೇಲೇಳಿ; ಭಾರತೀಯ ಸ್ವತಂತ್ಯ್ರದ ಈ ಧ್ವಜಕ್ಕೆ ವಂದನೆ ಸಲ್ಲಿಸಿ. ಭಾರತದ ವಿಮೋಚನೆಗೆ ತಾವೆಲ್ಲರೂ ನೆರವಾಗಬೇಕು; ಈ ಧ್ವಜದ ಸಾಕ್ಷಿಯಾಗಿ ನಾನು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ” ಎಂದಳು.

ಸಭೆಗೆ ಸಭೆಯೇ ಮಂತ್ರಮುಗ್ಧವಾಗಿ ಮೇಲೆದ್ದು ಆ ಧ್ವಜಕ್ಕೆ ಗೌರವ ಸಲ್ಲಿಸಿತು. ವಿದೇಶವೊಂದರಲ್ಲಿ ಅಂತರರಾಷ್ಟ್ರೀಯ ಪ್ರತಿನಿಧಿಗಳ ಎದುರು ಭಾರತದ ಧ್ವಜವನ್ನು ಮೊದಲ ಬಾರಿಗೆ ಹಾರಾಡಿಸಿದ ಮಹಿಳೆ ಮೇಡಂ ಕಾಮಾ !

“ನನಗೆ ನನ್ನ ರಾಷ್ಟ್ರಧ್ವಜದಡಿಯೇ ಮಾತಾಡಿ ರೂಢಿ” ಎಂದು ಹೇಳಿದ ಆಕೆ ಯಾವ ಸಮಾರಂಭದಲ್ಲಿ ಮಾತನಾಡಬೇಕಿದ್ದರೂ ಮೊದಲು ಧ್ವಜವನ್ನು ಹಾರಿಸುತ್ತಿದ್ದಳು.

ಪಾವನ ಧ್ವಜ

ಮೇಡಂ ಕಾಮಾ, ವೀರ ಸಾವರ್‌ಕರ್ ಮತ್ತು ಇನ್ನೂ ಕೆಲ ದೇಶಭಕ್ತರು ಸೇರಿ ಆ ತ್ರಿವರ್ಣ ಧ್ವಜವನ್ನು ರಚಿಸಿದ್ದುದು ೧೯೦೫ ರಲ್ಲಿ. ಅದು ಮೊದಲ ಬಾರಿಗೆ ೧೯೦೫ ರಲ್ಲಿ ಬರ್ಲಿನ್‌ನಲ್ಲಿ, ಅನಂತರ ೧೯೦೭ ರಲ್ಲಿ ಬಂಗಾಳದಲ್ಲಿ ಹಾರಾಡಿತು.

ಆ ತ್ರಿವರ್ಣ ಧ್ವಜದಲ್ಲಿದ್ದುದು ಹಸಿರು, ಕೇಸರಿ ಮತ್ತು ಕೆಂಪು ಅಡ್ಡಪಟ್ಟಿಗಳು. ಮೇಲಿದ್ದ ಹಸಿರು ಪಟ್ಟಿಯಲ್ಲಿ ವಿಕಸಿಸುವ ಹಂತದಲ್ಲಿವೆ ಎಂಟು ಕಮಲಗಳು. ಅವು ಭಾರತದಲ್ಲಿ ಆಗ ಇದ್ದ ಎಂಟು ಪ್ರಾಂತಗಳ ಸಂಕೇತ. ಮಧ್ಯದ ಕೇಸರಿ ಪಟ್ಟಿಯಲ್ಲಿರುವ ದೇವನಾಗರಿ ಲಿಪಿಯ ಅಕ್ಷರಗಳನ್ನು “ವಂದೇ ಮಾತರಂ” ಎಂದು ಓದಿದರೆ ತಾಯಿ ಭಾರತಾಂಬೆಗೆ ವಂದಿಸಿದಂತಾಗುತ್ತದೆ. ಅಡಿಯಲ್ಲಿದ್ದ ಕೆಂಪು ಪಟ್ಟಿಯಲ್ಲಿ ಬಲಭಾಗಕ್ಕೆ ಬಾಲಚಂದ್ರನಿದ್ದರೆ ಎಡಭಾಗಕ್ಕೆ ರವಿ ಮೂಡಿ ನಿಂತಿದ್ದಾನೆ. ಕೆಂಪು ಶಕ್ತಿ ಪ್ರತೀಕವಾಗಿ, ಕೇಸರಿ ವಿಜಯದ ಪ್ರತೀಕವಾದರೆ, ಧೈರ್ಯೋತ್ಸಾಹಗಳಿಗೆ ಹಸಿರು ಪ್ರತೀಕವಾಗಿ ನಿಲ್ಲುತ್ತದೆ. “ಈ ಧ್ವಜದ ನಮೂನೆ ತಯಾರಿಸಿದ ವ್ಯಕ್ತಿ ಓರ್ವ ಶ್ರೇಷ್ಠ ನಿಸ್ವಾರ್ಥಿ ಭಾರತೀಯ ತರುಣ ದೇಶಭಕ್ತ” ಎಂದು ಶ್ರೀಮತಿ ಕಾಮಾ ಸಾರಿದ್ದು ವೀರ ಸಾವರ್‌ಕರರನ್ನು ಕುರಿತು.

ಅಮೆರಿಕರಲ್ಲಿ

ಜರ್ಮನಿಯ ಸಮ್ಮೇಳನ ಮುಗಿದ ನಂತರ ಆಕೆ ಅಮೆರಿಕೆಗೆ ಬಂದಳು. ತಾನು ಮಾಡುತ್ತಿದ್ದ ಪವಿತ್ರ ಕಾರ್ಯಕ್ಕಾಗಿ ಅಲ್ಲಿಯ ಜನರ ಬೆಂಬಲವನ್ನು ಗಳಿಸಲು ಒಂದು ಚಳವಳಿಯನ್ನೇ ಹೂಡಬೇಕಾಯಿತು. ನ್ಯೂಯಾರ್ಕಿನಲ್ಲಿ ಆಕೆಯನ್ನು ಸಂದರ್ಶಿಸಿದ ಪತ್ರಕರ್ತರು ಆಕೆಯ ಗುರಿಯ ಬಗ್ಗೆ ವಿಚಾರಿಸಿ ಶ್ಲಾಘಿಸಿದರು. ಹಸಿವಿನಿಂದ ಕಂಗಾಲಾಗುತ್ತಿದ್ದರೂ ಅನಕ್ಷರಸ್ಥರಾಗಿದ್ದರೂ ಲಕ್ಷಾಂತರ ಮಂದಿ ದೇಶಪ್ರೇಮಿಗಗಳು ಭಾರತದಲ್ಲಿರುವುದಾಗಿ ಆಕೆ ಪತ್ರಕರ್ತರಿಗೆ ತಿಳಿಸಿದಳು. ಸ್ವಾತಂತ್ಯ್ರ, ಸಮಾನತೆ ಮತ್ತು ಸೋದರತ್ವವನ್ನು ಹೊಂದಿ ಕೆಲವೇ ವರ್ಷಗಳಲ್ಲಿ ದಾಸ್ಯ ಮುಕ್ತರಾಗುತ್ತೇವೆ ಎಂದ ಮೇಡಂ ಕಾಮಾಳ ದನಿಯಲ್ಲಿ ವಿಶ್ವಾಸ ಮತ್ತು ಭರವಸೆಗಳು ತುಂಬಿದ್ದವು.

೧೯೦೭ ರ ಅಕ್ಟೋಬರ್ ೨೮. ವಾಲ್ಡಾಫ್ ಆಸ್ಟ್ರೀಯಾ ಹೋಟೆಲಿನಲ್ಲಿ ಮಿನರ್ವ ಕ್ಲಬ್ಬಿನವರು ಏರ್ಪಡಿಸಿದ್ದ ಒಂದು ಸಭೆ. ಮೇಡಂ ಕಾಮಾಳಿಂದ ಭಾಷಣ. ಆಕೆ ಮಾತನಾಡುತ್ತ ಭಾರತದಲ್ಲಿ ರಾಜಕೀಯವಾಗಿ ಮತ ಚಲಾಯಿಸುವ ಹಕ್ಕು ಭಾರತೀಯರಿಗೆ ದೊರೆಯಬೇಕೆಂಬುದಾಗಿ ಹೇಳಿದಳು.

“ಇಲ್ಲಿನ ಜನಕ್ಕೆ ರಷ್ಯದ ಬಗ್ಗೆ ತಿಳಿದಿರಬಹುದು. ಆದರೆ ಭಾರತದ ಸ್ಥಿತಿಗತಿಗಳ ಬಗ್ಗೆ ಹೆಚ್ಚು ಪರಿಚಯ ಇರಲಾರದು. ಭಾರತದ ಬುದ್ಧಿಜೀವಿಗಳನ್ನು ಹಾಳು ಮಾಡುವ ಅಥವಾ ಜೈಲುಗಳಿಗೆ ಕಳುಹಿಸಿಕೊಡುವ ಧೋರಣೆ ಅನುಸರಿಸುತ್ತಿದೆ ಬ್ರಿಟಿಷ್‌ ಸರ್ಕಾರ. ಜನರಿಗೆ ಚಿತ್ರಹಿಂಸೆ ನೀಡಿ ಬಂದೀಖಾನೆಯ ಆಸ್ಪತ್ರೆಗಳಿಗೆ ಅಟ್ಟುತ್ತಿದ್ದಾರೆ. ನಮಗೆ ಶಾಂತವಾದ ವಾತಾವರಣ ಬೇಕು; ಆದರೆ ರಕ್ತಕ್ರಾಂತಿ ಬೇಡ. ಅಹಿಂಸಾ ಮಾರ್ಗದಲ್ಲಿಯೇ ಸಾಧ್ಯವಾದಷ್ಟೂ ನಡೆದು ನಿರಂಕುಶ ಪ್ರಭುತ್ವವನ್ನು ಎತ್ತಿ ಒಗೆಯುವ ವಿಧಾನವನ್ನು ಒತ್ತಿ ಹೇಳಬೇಕಾಗಿದೆ ಭಾರತೀಯರೆಲ್ಲರಿಗೆ” ಎಂದಳು. ಆಕೆ ಹಲವಾರು ಸ್ಥಳಗಳಲ್ಲಿ ಭಾಷಣಗಳನ್ನು ಮಾಡಿದಳು. ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ಭಾರತಾಂಬೆ ತನ್ನ ಪರವಾಗಿ ಕಳುಹಿಸಿಕೊಟ್ಟಿದ್ದ ರಾಯಭಾರಿ ಮೇಡಂ ಕಾಮಾ ಎನ್ನಬಹುದು.

ಮುಂದೆ ನಡೆ, ಗೆಳೆಯ

೧೯೦೮ರಲ್ಲಿ ಲಂಡನಿಗೆ ಹಿಂದಿರುಗಿದ ಕಾಮಾ “ಭಾರತ ಭವನ”ದಲ್ಲಿ ಒಂದು ಸಭೆಯನ್ನುದ್ದೇಶಿಸಿ ಮಾತನಾಡಿದಳು. ಆಕೆಯ ಭಾಷಣವನ್ನು ಕರಪತ್ರಗಳಲ್ಲಿ ಪ್ರಕಟಿಸಲಾಯಿತು. ಅಧಿಕ ಸಂಖ್ಯೆಯಲ್ಲಿ ಅವು ಭಾರತವನ್ನು ಸೇರಿದವು. ಈ ಕರಪತ್ರಗಳು ಕ್ರಾಂತಿಧರ್ಮದ ತಿರುಳನ್ನು ಸಾರಾಂಶ ರೂಪದಲ್ಲಿ ತಿಳಿಸಿದ್ದವು.

ಅಹಿಂಸೆಯೇ ಪರಮ ಧರ್ಮ, ನಿಜ. ಆದರೆ ಯಾರೇ ಆಗಲಿ ಅಕಾರಣವಾಗಿ ಬಲಪ್ರಯೋಗ ಮಾಡಿದಾಗ ಅದನ್ನು ಪ್ರತಿಭಟಿಸಬೇಕಾಗುತ್ತದೆ. ಹಿಂಸೆಗೆ ಪ್ರತಿಹಿಂಸೆ ಇರಲೇಬೇಕು. ನಿರಂಕುಶ ಪ್ರಭುತ್ವದ ಬಗ್ಗೆ ಈ ಬಗೆಯ ಧೋರಣೆಯನ್ನೇ ತಾಳಬೇಕು. ಈ ರೀತಿಯಾಗಿ ಯಾವ ಕೆಲಸವೇ ಮಾಡಿದರೂ ಅದು ಸರಿಯಾಗಿ ಇರುತ್ತದೆ. ವಿದೇಶೀ ಪ್ರಭುತ್ವದ ವಿರುದ್ಧ ಒಂದು ಪ್ರಬಲವಾದ ಕ್ರಾಂತಿ ಹೂಡುವುದೇ ದೇಶಭಕ್ತಿ. ತನ್ನನ್ನು ತಾನು ದೇಶಕ್ಕೆ ಸಮರ್ಪಿಸಿಕೊಳ್ಳುವುದುರಲ್ಲಿ ಜೀವನ ಸಾರ್ಥಕತೆ ಅಡಗಿದೆ ಎಂದಳು ಕಾಮಾ. ದೇಶದ ಯುವಕರಿಗೆ ನೀಡಿದ ಒಂದು ಸಂದೇಶದಲ್ಲಿ.

"ಭಾರತೀಯ ಸ್ವಾತಂತ್ಯ್ರದ ಈ ಧ್ವಜಕ್ಕೆ ವಂದನೆ ಸಲ್ಲಿಸಿ"

“ಮುಂದೆ ನಡೆ ಗೆಳೆಯ, ಮುಂದೆ ನಡೆ, ಬ್ರಿಟಿಷರ ದಬ್ಬಾಳಿಕೆಯ ಕಾಲ್ತುಳಿತಕ್ಕೆ ಸಿಕ್ಕಿದ್ದಾರೆ ಭಾರತಾಂಬೆಯ ಮಕ್ಕಳು. ಅಸಹಾಯಕರಾಗಿ ಅಧೋಗತಿಗೆ ಇಳಿಯುತ್ತಿರುವ ಅವರನ್ನು ಸ್ವರಾಜ್ಯದ ಸುಪ್ಪತ್ತಿಗೆಯ ಕಡೆಗೆ ಕರೆದುಕೊಂಡು ನಡೆ, ಮುಂದೆ ನಡೆ. ನಾವೆಲ್ಲ ಭಾರತಕ್ಕಾಗಿ, ಭಾರತ ಭಾರತೀಯರಿಗಾಗಿ ಎಂಬುದೇ ನಮ್ಮ ಧ್ಯೇಯವಾಗಲಿ” ಎಂದು ಕರೆನೀಡಿದಳು.

ಹಿಂದೂಗಳನ್ನೇ ಆಗಲಿ, ಮುಸ್ಲಿಮರನ್ನೇ ಆಗಲಿ, ಉದ್ದೇಶಿಸಿ ಮಾತನಾಡುವಾಗ ಆಕೆ ಒಗ್ಗಟ್ಟಿನ ಸಂದೇಶವನ್ನು ಸಾರುತ್ತಿದ್ದಳು. ಜಾತಿಯ ಪ್ರಶ್ನೆಯನ್ನು ದೂರ ಮಾಡಬೇಕು. ನಾವೆಲ್ಲ ಭಾರತೀಯರು. ಒಂದೇ ಮನೆಯವರು. ಭ್ರಾತೃತ್ವದ ಮನೋಭಾವ ಬೆಳೆಸಿಕೊಂಡು ಏಕತೆಯನ್ನು ಸಾಧಿಸಬೇಕೆಂಬ ಆಸೆ ಕಾಮಾಳದು. ಬ್ರಿಟಿಷರು ತಾವಾಗಿಯೇ ಕೈಯೆತ್ತಿ ಎಂಥ ದೊಡ್ಡ ಹುದ್ದೆ ಕೊಡಲು ಬಂದರೂ ಒಪ್ಪಿಕೊಳ್ಳಬೇಡಿ ಎಂಬ ಎಚ್ಚರಿಕೆ ಬೇರೆ. ಸ್ವತಃ ಜೀವಿಸುವುದು ಕಲಿತು, ದೇಶದ ವಾಣಿಜ್ಯ ವ್ಯವಹಾರಗಳನ್ನು, ಕೈಗಾರಿಕೆಗಳನ್ನು, ಕಲೆಗಳನ್ನು ವೃದ್ಧಿಪಡಿಸಿಕೊಂಡು ಎಲ್ಲದರಲ್ಲೂ ಭಾರತೀಯತೆಯನ್ನು ತುಂಬಬೇಕೆಂಬ ಕರೆ ನೀಡಿದಳು.

ಫ್ರಾನ್ಸಿಗೆ

ದಾದಾಭಾಯಿ ನವರೋಜಿಯವರ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಆಕೆ ಅನೇಕ ಕಡೆ ಭಾಷಣಗಳನ್ನು ಮಾಡಿದ್ದಳು. ಭಾರತದ ಸ್ವಾತಂತ್ಯ್ರಕ್ಕಾಗಿ ಹೋರಾಡುವ ಒಳ್ಳೆಯ ವಾಗ್ಮಿ ಎಂಬ ಕೀರ್ತಿ ಆಗಲೇ ದೊರಕಿತ್ತು. ಸಿಂಹದ ಗುಹೆಯಲ್ಲೇ ಅದರೊಡನೆ ಹೋರಾಡುವ ಆಕೆಯನ್ನು ಕಂಡು ಲಂಡನ್ನಿನ ಜನತೆಗೆ ಪರಮಾಶ್ಚರ್ಯ. ಮೇಡಂ ಕಾಮಾಳ ಕೀರ್ತಿ ಹೆಚ್ಚಿದಷ್ಟೂ ತಮಗೆ ಕೇಡು ತಪ್ಪಿದ್ದಲ್ಲ ಎಂದು ಹೆದರಿದ ಬ್ರಿಟಿಷ್ ಸರ್ಕಾರ, ಆಕೆಯನ್ನು ಲಂಡನ್‌ ಬಿಟ್ಟು ಹೊರಡುವಂತೆ ಬೆದರಿಸಿತು. ಸರ್ಕಾರವನ್ನು ಧಿಕ್ಕರಿಸಿ ನಿಂತಳು ಕಾಮಾ. ಆದರೆ ಆಕೆಯನ್ನು ಕೊಲ್ಲಲು ಕೆಲವು ಅಧಿಕಾರಿಗಳು ಪ್ರಯತ್ನಿಸಿದಾಗ ಗುಟ್ಟಾಗಿ ಇಂಗ್ಲಿಷ್ ಕಾಲುವೆಯನ್ನು ದಾಟಿ ಫ್ರಾನ್ಸಿಗೆ ತಪ್ಪಿಸಿಕೊಂಡು ಹೋದಳು.

ಫ್ರಾನ್ಸಿನ ಸಮಾಜವಾದಿ ಮುಂದಾಳುಗಳಿಂದ ಮೇಡಂ ಕಾಮಾಳಿಗೆ ಹಾರ್ದಿಕವಾದ ಸ್ವಾಗತ. ಭಾರತದ ಪ್ರತಿನಿಧಿಗಳು ವಿದೇಶದ ಯಾವ ಮೂಲೆಗೆ ಹೋದರೂ ಅಲ್ಲಿನ ಜನ ಆತ್ಮೀಯವಾಗಿ ಬರಮಾಡಿಕೊಳ್ಳುವುದಕ್ಕೆ ಕಾರಣ ಲೋಕೋತ್ತರವಾಗಿ ಹರಡಿರುವ ಭಾರತದ ಸಂಸ್ಕೃತಿ.

ಬನ್ನಿಬರಬೇಡಿ !

ಫ್ರಾನ್ಸಿನಲ್ಲಿ ಮೇಡಂ ಕಾಮಾ ವಾಸವಾಗಿದ್ದ ಮನೆ ಕೆಲವೇ ದಿನಗಳಲ್ಲಿ ಬೇರೆ ಬೇರೆ ರಾಷ್ಟ್ರಗಳ ಕ್ರಾಂತಿಕಾರಿಗಳಿರುವ ರಹಸ್ಯಮಯ ದುರ್ಗವಾಯಿತು. ಭಾರತದ “ಸೇನಾಪತಿ” ಬಾಪಟ್‌, ಹೇಮಚಂದ್ರ ದಾಸ್ ಮೊದಲಾದವರಷ್ಟೇ ಅಲ್ಲದೆ ರಷ್ಯದ ಕ್ರಾಂತಿಪುರುಷ ಲೆನಿನ್ ಮೊದಲಾದವರೂ ಮೇಡಂ ಕಾಮಾಳ ಮನೆಗೆ ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಸ್ವಾತಂತ್ಯ್ರವೀರ ಸಾವರ್‌ಕರರಿಂದಲೇ ಆಕೆಗೆ ಸದಾ ಶಾಂತಿ ಮತ್ತು ಸ್ಫೂರ್ತಿ. ಫ್ರಾನ್ಸಿನಲ್ಲನ ಆಕೆಯ ಚಟುವಟಿಕೆಗಳನ್ನು ಕಂಡು ಬ್ರಿಟಿಷ್ ಸರ್ಕಾರ ತಲ್ಲಣಗೊಂಡಿತು. ಭಾರತಕ್ಕೆ ದಯಮಾಡಿ ಹಿಂದಕ್ಕೆ ಬರಬೇಕೆಂದು ಕೇಳಿಕೊಂಡಿತು. ಆಕೆಯನ್ನು ಸ್ವದೇಶಕ್ಕೆ ಕಳಿಸಿಕೊಡುವಂತೆ ಫ್ರೆಂಚ್ ಸರ್ಕಾರವನ್ನೂ ಪ್ರಾರ್ಥಿಸಿತು ಬ್ರಿಟಿಷ್ ಸರ್ಕಾರ. ಆದರೆ ಕಾಮಾ ಭಾರತಕ್ಕೆ ವಾಪಾಸಾಗಲು ಒಪ್ಪಲಿಲ್ಲ. ಫ್ರೆಂಚ್‌ ಸರ್ಕಾರವೂ ಬ್ರಿಟಿಷರ ಮಾತನ್ನು ತಿರಸ್ಕರಿಸಿದಾಗ ಬ್ರಿಟಿಷ್ ಸರ್ಕಾರಕ್ಕೆ ಅಪಾರವಾದ ಅವಮಾನ. “ದ್ರಾಕ್ಷಿ ಹಣ್ಣು ಹುಳಿ; ತನಗೆ ಬೇಡ” ಎಂದ ನರಿಯಂತೆ ಬ್ರಿಟಿಷ್ ಸರ್ಕಾರ ಮೇಡಂ ಕಾಮಾಳಿಗೆ ಮತ್ತೆಂದೂ ಭಾರತಕ್ಕೆ ಬರಬಾರದೆಂದು ಬಹಿಷ್ಕಾರ ಹಾಕಿತು! ಅಷ್ಟೇ ಅಲ್ಲ, ಭಾರತದಲ್ಲಿ ಆಕೆಯದಾಗಿದ್ದ ಸುಮಾರು ಒಂದು ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಆಸ್ತಿಯನ್ನು ಜಪ್ತಿ ಮಾಡಿ ಬ್ರಿಟಿಷ್‌ ಸರ್ಕಾರವೇ ನುಂಗಿ ಹಾಕಿತು.

ಆಪತ್ತೇ ನೆರಳು!

ಈ ಘಟನೆಗಳಿಂದಾಗಿ ಮೇಡಂ ಕಾಮಾಳ ಹೆಸರಿಗೆ ಮೆರಗು ಹೆಚ್ಚಿದಂತಾಯಿತು. ಆಕೆ ಓಡಾಡದ ದೂರದ ದೇಶಗಳಲ್ಲೂ ಆಕೆಯ ಶೌರ್ಯ, ಸಾಹಸಗಳ ಕೀರ್ತಿ ಹಬ್ಬಿತು. ಅನಂತರವೇ ೧೯೦೭ ರಲ್ಲಿ ಜರ್ಮನಿಯ ಸ್ಟಟ್‌ಗಾರ್ಟ್‌‌ನಲ್ಲಿ ಈ ಮೊದಲು ವಿವರಿಸಿದ ಸಮ್ಮೇಳನ ನಡೆದಿದ್ದು. ಆಗಂತೂ ಅಂತರರಾಷ್ಟ್ರೀಯ ವ್ಯಕ್ತಿಯಾದಳು ಆಕೆ. ಜರ್ಮನಿಯಿಂದ ಅಮೆರಿಕಕ್ಕೆ ತೆರಳಿ, ಅಲ್ಲಿನ ಅನೇಕ ವೇದಿಕೆಗಳ ಮೇಲೆ ಭಾರತದ ಆಗಿನ ದುಃಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಕಾಮಾ, ೧೯೦೮ ರಲ್ಲಿ ಲಂಡನಿಗೆ ಹಿಂದಕ್ಕೆ ಹೋದಳು. ಆ ವೇಳೆಗೆ ಅಲ್ಲಿದ್ದ ಭಾರತ ಭವನ ಭಾರತದ ಸ್ವಾತಂತ್ಯ್ರ ಹೋರಾಟದ ಒಂದು ಕುಲುಮೆಯಾಗಿತ್ತು. ಶ್ಯಾಮ್‌ಜಿ ಕೃಷ್ಣವರ್ಮ, ಸರ್ದಾರ್ ಸಿಂಗ್ ರಾಣಾ ಮೊದಲಾದ ಕ್ರಾಂತಿ ಜೀವಿಗಳು ಕ್ರಾಂತಿ ಜ್ವಾಲೆಯನ್ನು ಭುಗಿಲೆಬ್ಬಿಸಿದ್ದರು. ತನ್ನ ಜೀವನವನ್ನು ತಾಯ್ನಾಡಿಗಾಗಿ ಮುಡಿಪಾಗಿಡಲು, ದೇಶವನ್ನು ಪರಕೀಯರಿಂದ ಬಿಡುಗಡೆ ಮಾಡಿಸಲು ಚಿಕ್ಕಂದಿನಲ್ಲೇ ನಿರ್ಧರಿಸಿದ್ದ ಕಾಮಾ ಲಂಡನಿನಲ್ಲಿ ಕ್ರಮಬದ್ಧವಾಗಿ ಕೆಲಸ ಮುಂದುವರಿಸಿದಳು. ಐರ್ಲೆಂಡ್‌, ರಷ್ಯಾ, ಈಜಿಪ್ಟ್ ಮತ್ತು ಜರ್ಮನಿಯ ರಾಷ್ಟ್ರವಾದಿಗಳೊಡನೆ ಸಂಪರ್ಕ ಹೊಂದಿದ್ದಳು. ಅವರಿಗೆ ಕ್ರಿಸ್ಮಸ್ ಉಡುಗೊರೆಗಳು ಎಂಬ ನೆಪದಲ್ಲಿ, ಆಟಿಕೆಗಳನ್ನು ಕಳುಹಿಸುವ ಸೋಗು ಹಾಕಿ ಪಿಸ್ತೂಲುಗಳನ್ನು ಕೊಡುತ್ತಿದ್ದಳು; ಹಣ ಕೊಡುತ್ತಿದ್ದಳು.

ಲಂಡನ್ನಿನಲ್ಲಿದ್ದ ಕ್ರಾಂತಿಜೀವಿಗಳ ಚಟುವಟಿಕೆಗಳು ಹೆಚ್ಚಿದಂತೆಲ್ಲ ಅವರಿಗೆ ಗುಪ್ತಚರರಿಂದ ತೊಂದರೆಯೂ ಹೆಚ್ಚಿತು. ಕೊನೆಗೆ ಗತ್ಯಂತರವಿಲ್ಲದೆ ಲಂಡನ್ ತೊರೆಯಬೇಕಾಯಿತು. ಶ್ಯಾಮ್‌ಜಿ ಕೃಷ್ಣವರ್ಮ, ಸರ್ದಾರ್‌ಸಿಂಗ್ ರಾಣಾ ಮೊದಲಾದ ಕೆಲವರು ಪ್ಯಾರಿಸ್‌ಗೆ ಬಂದರು.

ಮೇಡಂ ಕಾಮಾಳ ಸಾಹಸಗಳು ಹೆಚ್ಚುತ್ತಾ ಹೋಗಿ ಆಕೆಯ ಹೆಸರು ಲಂಡನ್ನಿನಲ್ಲಿ ಬಾಯಿ ಮಾತಾಯಿತು. ತಮ್ಮ ಸರ್ಕಾರವನ್ನೇ ಕೊತ್ತೊಗೆಯಲಿರುವ ಮಾರಕವಾದ ಕ್ರಾಂತಿಕಾರಿಣಿ ಎಂದು ಬ್ರಿಟಿಷ್ ಸರ್ಕಾರ ನಡುಗಿತು. ಗೂಢಚಾರರು ಆಕೆಯನ್ನು ನೆರಳಿನಂತೆ ಹಿಂಬಾಲಿಸುತ್ತಿದ್ದರು. ಯಾವ ಕ್ಷಣದಲ್ಲಿ ಬೇಕಾದರೂ ಆಪತ್ತು ಸಂಭವಿಸಬಹುದಾಗಿದ್ದ ಸ್ಥಿತಿ ಆಗಿನದು.

ಲಂಡನ್ನನ್ನು ತೊರೆದು ಪ್ಯಾರಿಸ್‌ಗೆ ಹೋಗುವುದೇ ಕ್ಷೇಮಕರ ಎಂದು ನಿರ್ಧರಿಸಿದ ಕಾಮಾ ೧೯೦೯ ರ ಮೇ ೧ ರಂದು ಪ್ಯಾರಿಸ್‌ಗೆ ಬಂದಳು.

ಪತ್ರಿಕೆಗಳ ಜಗತ್ತಿನಲ್ಲಿ

ಅನಿವಾರ್ಯ ಪರಿಸ್ಥಿತಿಗಳಿಂದಾಗಿ, ಭಾರತದ ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತ ವಿದೇಶಗಳಲ್ಲಿ ನೆಲಸಿದ್ದ ಅನೇಕ ರಾಷ್ಟ್ರಭಕ್ತರು ಪ್ರಾರಿಸ್‌ನಲ್ಲಿ ಒಂಡುಗೂಡುತ್ತ ಹೋದರು. ಆ ಗುಂಪಿಗೆ ಮೇಡಂ ಕಾಮಾಳೂ ಸೇರಿಕೊಂಡಳು. ಅಷ್ಟುಮಂದಿ ಕ್ರಾಂತಿಜೀವಿಗಳು ಒಂದು ಕಡೆ ಬಂದು ನೆಲಸಿದಾಗ ಏನಾದರೂ ವಿಶೇಷಗಳು ನಡೆಯಲೇಬೇಕಲ್ಲವೇ? ಹಾಗೆಯೇ ಒಂದು ಕ್ರಾಂತಿಕಾರಿ ಪತ್ರಿಕೆ ಹುಟ್ಟಿಕೊಂಡಿತು. ಪತ್ರಿಕೆಯ ಹೆಸರು “ವಂದೇ ಮಾತರಂ”.

ಪತ್ರಿಕೆಯ ಸಂಪಾದಕತ್ವ ವಹಿಸಿಕೊಳ್ಳಲು ಸಮರ್ಥರಾದವರು ಒಬ್ಬರು ಬೇಕಿತ್ತು. ಭಯವನ್ನೇ ಅರಿಯದ ಹಿರಿಯ ಕ್ರಾಂತಿಕಾರರಾದ ಲಾಲಾ ಹರದಯಾಳ್ ಅವರಿಗೆ ಸಂಪಾದಕನ ಪಟ್ಟಕಟ್ಟಲು ನಿರ್ಧರಿಸಲಾಯಿತು. ಹರದಯಾಳರು ಇಂಗ್ಲೆಂಡಿನಿಂದ ಫ್ರಾನ್ಸಿಗೆ ಬರಲು ಸಂತಸದಿಂದ ಒಪ್ಪಿದರು. ಸೆಪ್ಟೆಂಬರ್ ೧೯೦೯ ರಲ್ಲಿ ಮೊದಲ ಸಂಚಿಕೆಯ ಮೊದಲ ಕಿಡಿಗಳು ಹಾರಿದವು. “ವಂದೇ ಮಾತರಂ” ಪ್ರಕಟಿಸಿ, ಪ್ರತಿಗಳನ್ನು ವಿತರಣೆ ಮಾಡಲು ಮೇಡಂ ಕಾಮಾಳಿಗೆ ದಿನದ ೨೪ ಗಂಟೆಗಳು ಸಾಲದಾದವು.

ಇಷ್ಟು ಕೆಲಸಗಳಲ್ಲಿ ತೊಡಗಿದ್ದರೂ ತಾನು ದುಡಿಯುತ್ತಿರುವುದು ಸಾಲದು ಎಂಬ ಭಾವನೆ ಕಾಮಾಳಿಗೆ. ತನ್ನ ರಕ್ತದ ಪ್ರತಿ ಕಣದಲ್ಲಿರುವ ಶಕ್ತಿಯನ್ನೂ ಭಾರತಾಂಬೆಗಾಗಿ ಮೀಸಲಿಟ್ಟಿದ್ದಳು.

“ವಂದೇ ಮಾತರಂ” ಜೊತೆಗೆ ಕ್ರಾಂತಿಕಿಡಿಗಳನ್ನು ಚೆಲ್ಲುವ “ಮದನ್ ತಲವಾರ್” ಎಂಬ ಮತ್ತೊಂದು ಪತ್ರಿಕೆ ಪ್ರಾರಂಭವಾಯಿತು. ಹುತಾತ್ಮ ಮದನ್‌ಲಾಲ್ ಧಿಂಗ್ರನ ನೆನಪಿಗಾಗಿ ಆರಂಭಿಸಿದ ಪತ್ರಿಕೆಯದು. ಬರ್ಲಿನ್‌ನಿಂದ ಅದನ್ನು ಪ್ರಕಟಿಸುತ್ತಿದ್ದಳು ಮೇಡಂ ಕಾಮಾ.

ಇದೇ ಸಮಯಕ್ಕೆ ಸರಿಯಾಗಿ ವೀರ ಸಾವರ್‌ಕರ್‌ ಮೇಡಂ ಕಾಮಾಳ ಮನೆಗೆ ಬಂದರು. ನಿರಂತರ ಪರಿಶ್ರಮದಿಂದಾಗಿ ಲಂಡನ್ನಿನಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಸ್ವಲ್ಪ ಆರೋಗ್ಯ ಸುಧಾರಿಸಲೆಂದು ಸಾವರ್‌ಕರ್ ಪ್ಯಾರಿಸ್‌ಗೆ ಬಂದಿದ್ದರು.

ಬ್ರಿಟಿಷ್ ಸರ್ಕಾರಕ್ಕೆ ಡಿಗ್ಭ್ರಮೆ

ಮೇಡಂ ಕಾಮಾಳ ಆರೈಕೆಯಲ್ಲಿ ಸಾವರ್‌ಕರ್‌ ಬಹು ಬೇಗ ಚೇತರಿಸಿಕೊಂಡರು. ಶ್ಯಾಮಜಿ, ರಾಣಾ, ಹರದಯಾಳ್, ವೀರೇಂದ್ರನಾಥ ಮುಂತಾದ ಆಪ್ತರ ನೆರವು ಬೇರೆ ಸಿಕ್ಕಿತ್ತು. “ವಂದೇ ಮಾತರಂ” ಮತ್ತು “ಮದನ್‌ ತಲವಾರ್‌” ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಸ್ವಲ್ಪ ಬಿಡುವೂ ಕಾಣಿಸಿತ್ತು. ಅಲ್ಲಿನ ಭಾರತೀಯರ ಸಂಪರ್ಕ, ಸಂಘಟನೆ, ಭಾರತಕ್ಕೆ ಶಸ್ತ್ರಾಸ್ತ್ರಗಳ ರವಾನೆ ಮೊದಲಾದ ಕೆಲಸಗಳು ನಿರಂತರವಾಗಿ ಸಾಗಿದ್ದವು.

೧೯೧೦ರ ಜನವರಿಯಿಂದ ಆಗಸ್ಟ್‌ವರೆಗಿನ “ವಂದೇ ಮಾತರಂ” ಸಂಚಿಕೆಗಳು ಗುಪ್ತವಾಗಿ ಜಿನೀವಾದಲ್ಲಿಸ ಪ್ರಕಟವಾದವು. ಬ್ರಿಟಿಷ್‌ ಸರ್ಕಾರಕ್ಕೆ ಜಿನೀವಾ ಮೇಲೆ ಕಣ್ಣು ಬಿತ್ತು. ತಕ್ಷಣ ಸಂಚಿಕೆ ಪ್ರಕಟವಾಗುವ ಸ್ಥಳವನ್ನು ಹಾಲೆಂಡ್‌ಗೆ ಸ್ಥಳಾಂತರಿಸಲಾಯಿತು.

೧೯೧೨ ರ ಮೇ ತಿಂಗಳು. “ವಂದೇ ಮಾತರಂ” ಸಂಚಿಕೆಯ ಪ್ರತಿಗಳನ್ನು ಆಕ್ಸ್‌ಫರ್ಡ್‌‌ನಿಂದ ಭಾರತಕ್ಕೆ ಕಳುಹಿಸಲು ಚಾಣಾಕ್ಷತನ ಬಳಸಿದರೂ ಸಫಲವಾಗದೆ ಹೋಯಿತು. “ವಂದೇ ಮಾತರಂ” ಪ್ರತಿಗಳು ಮ್ತು ಕೆಲವು ಕರಪತ್ರಗಳು ಭಾರತದ ವಿವಿಧ ಮೂಲೆಗಳಲ್ಲಿದ್ದ ಕ್ರಾಂತಿಕಾರಿಗಳಿಗೆ ದೊರೆಯುವ ಬದಲು ಬ್ರಿಟಿಷ್ ಸರ್ಕಾರದ ವಶವಾಗಿದ್ದವು. ಸಂಚಿಕೆಗಳನ್ನು ಗುಪ್ತವಾಗಿ ಪ್ರಕಟಿಸುವುದಕ್ಕಿಂತ ಕಷ್ಟದ ಕೆಲಸ ಅವುಗಳನ್ನು ಗೋಪ್ಯವಾಗಿಯೇ ರವಾನೆ ಮಾಡುವುದು. ಇಂಥ ತೊಂದರೆಗಳಲ್ಲೂ “ವಂದೇ ಮಾತರಂ” ಪ್ರತಿಗಳು ಹೇಗೋ ಭಾರತೀಯ ವೀರಪುರುಷರ ಕೈ ತಲುಪಿರುತ್ತಿದ್ದವು. ಕ್ರಾಂತಿಕಾರಿ ಸಾಹಿತ್ಯದ ಕಳ್ಳಸಾಗಾಣಿಕೆಯನ್ನು ಹೇಗೆ ತಡೆಗಟ್ಟಬೇಕೆಂಬುದೇ ಬ್ರಿಟಿಷ್ ಸರ್ಕಾರಕ್ಕೆ ತಿಳಿಯದೆ ಹೋಯಿತು. ಬ್ರಿಟಿಷ್‌ ಅಧಿಕಾರಿಗಳು ತಲೆಯ ಮೇಲೆ ಕೈ ಹೊತ್ತರು.

೧೯೧೩ರ ಮೇ ೩೦ ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಭಾರತದ ಕಾರ್ಯದರ್ಶಿಯಾಗಿದ್ದವರಿಗೆ ಒಂದು ದೂರು ಬಂದಿತ್ತು. ಪತ್ರ ಬರೆದಿದ್ದವರು “ಡೈರೆಕ್ಟರ್ ಆಫ್ ಕ್ರಿಮಿನಲ್ ಇನ್‌ವೆಸ್ಟಿಗೇಷನ್, ಸಿಮ್ಲಾ” ಅವರು. ಹಾಲೆಂಡಿನ ಸರ್ಕಾರಕ್ಕೆ “ವಂದೇ ಮಾತರಂ” ಪ್ರಕಟವಾಗುತ್ತಿರುವುದರ ಬಗ್ಗೆ ದೂರು ಕೊಡಬೇಕೆಂದು ಡೈರಕ್ಟರ್ ಅಭಿಪ್ರಾಯಪಟ್ಟಿದ್ದರು. ಬ್ರಿಟಿಷ್ ಸರ್ಕಾರ ಮೂರು ವಾರಗಳ ಕಾಲ ಯೋಚಿಸಿತು. ಮೇಡಂ ಕಾಮಾ ಬಗ್ಗೆ ಡಚ್ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ, ಮನವಿ ಸಲ್ಲಿಸುವುದರಲ್ಲಿ ಅರ್ಥವಿಲ್ಲ ಎಂದು ಬ್ರಿಟಿಷ್ ಸರ್ಕಾರ ತೆಪ್ಪಗಾಯಿತು.

ಒಂದಲ್ಲ, ಹತ್ತು ರೀತಿಗಳಲ್ಲಿ ಹೋರಾಟ

ವಿದೇಶದಲ್ಲಿ ಮೇಡಂ ಕಾಮಾ ಇದ್ದರೂ ಭಾರತದ ಜನರ ಮೇಲೆ ಆಕೆಯ ಪ್ರಭಾವ ಕಡಿಮೆ ಆಗಲಿಲ್ಲ. ಲಾಲಾ ಲಜಪತರಾಯರು ಭಾರತದ ಸ್ವಾತಂತ್ಯ್ರಕ್ಕಾಗಿ ದಿಟ್ಟತನದಿಂದ ಹೋರಾಡುತ್ತಿದ್ದ ಧೀರ. ೧೯೦೭ ರಲ್ಲಿ ಅವರನ್ನು ಗಡೀಪಾರು ಮಾಡಿದಾಗ ಮೇಡಂ ಕಾಮಾ ಕೊಟ್ಟ ಕರೆ ಭಾರತದ ಕ್ರಾಂತಿಕಾರಿಗಳ ರಕ್ತವನ್ನು ಬಿಸಿ ಮಾಡಿತ್ತು. ಎಲ್ಲೆಲ್ಲೂ ಜನ ದಂಗೆಯೆದ್ದರು. ಭಾರತದಿಂದ ಹೊರಡುವ ಬ್ರಿಟಿಷ್ ನೌಕೆಗಳಲ್ಲಿ ಗಡೀ ಪಾರಾಗುವ ಕ್ರಾಂತಿಕಾರರ ಸಂಖ್ಯೆಯೂ ಹೆಚ್ಚಿತ್ತು. ಕೇವಲ ಕರೆಗಳನ್ನು ನೀಡುವುದರಲ್ಲೇ ಆಕೆ ತೃಪ್ತಿ ಕಾಣಲಿಲ್ಲ. ಭಾರತೀಯ ಕ್ರಾಂತಿಕಾರಿಗಳಿಗೆ ಶಿಕ್ಷಣ ನೀಡಿ ಬಾಂಬ್‌ಗಳ ತಯಾರಿಕೆಯನ್ನು ಪ್ರಾರಂಭ ಮಾಡಿಸಿದಳು. ಶ್ಯಾಮ್‌ಜಿ ಕೃಷ್ಣವರ್ಮರ “ಇಂಡಿಯನ್ ಸೋಷಿಯಾಲಜಿಸ್ಟ್‌” ಪತ್ರಿಕೆಯ ಮೂಲಕ ಆಕೆಯ ಕರೆ ಭಾರತವನ್ನು ಮುಟ್ಟುತ್ತಿದ್ದಂತೆ ದೇಶದ ವಿವಿಧ ಭಾಗಗಳಲ್ಲಿ ಬಾಂಬ್‌ಗಳು ಸ್ಫೋಟಿಸಿದವು. ಹಣವನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಗುಟ್ಟಾಗಿ ಭಾರತಕ್ಕೆ ಕಳುಹಿಸಿಕೊಡುತ್ತಿದ್ದಳು.

೧೯೦೮ ರಲ್ಲಿ ಸಾವರ್‌ಕರ್‌ ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮದ ಬಂಗಾರದ ಹಬ್ಬದ ನೆನಪಿಗಾಗಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ೧೮೫೭ರ ಆ ಸಂಗ್ರಾಮದಲ್ಲಿ ಜೀವ ತೆತ್ತು ಹುತಾತ್ಮರಾದವರ ಸಂಸಾರಗಳಿಗೆ ಸಹಾಯವಾಗಲೆಂದು ಮೇಡಂ ಕಾಮಾ ಧಾರಾಳವಾಗಿ ಹಣವನ್ನು ಕಳುಹಿಸಿ ಕೊಟ್ಟಿದ್ದಳು.

ಸಾವರ್‌ಕರ್ ಬರೆದಿದ್ದು “೧೮೫೭ ರ ಭಾರತೀಯ ಸ್ವಾತಂತ್ಯ್ರ ಸಮರ” ಅಚ್ಚಾಗುವ ಮೊದಲೇ ಬ್ರಿಟಿಷ್ ಸರ್ಕಾರ ಅದರ ಮೇಲೆ ನಿಷೇಧಾಜ್ಞೆ ತಂದಿತು. ಅಂಥ ಸಮಯದಲ್ಲಿ ಮುಂದೆ ಬಂದ ಮೇಡಂ ಕಾಮಾ ಆ ಪುಸ್ತಕವನ್ನು ಪ್ರಕಟಿಸಿದಳು. ಸೂಕ್ತವಾಗಿ ವಿತರಣೆ ಮಾಡಲು ರಹಸ್ಯ ಮಾರ್ಗಗಳನ್ನೂ ಬಳಸಿದಳು.

ಭಾರತೀಯ ಕ್ರಾಂತಿಕಾರಿಗಳಿಗೆ ಆ ಪುಸ್ತಕ ರಾಮಾಯಣ ಮಹಾಭಾರತಗಳಂಥ ಪವಿತ್ರ ಗ್ರಂಥವಾಯಿತು. ಶ್ರೀಮತಿ ಕಾಮಾ ಮತ್ತು ಎಂ.ಪಿ.ಟಿ. ಆಚಾರ್ಯರು ಅದನ್ನು ಇಂಗ್ಲಿಷ್‌ನಿಂದ ಫ್ರೆಂಚ್‌ ಭಾಷೆಗೆ ಅನುವಾದಿಸಿ ಪ್ರಕಟಿಸಿದರು. ಆ ಪುಸ್ತಕ ಅನಂತರದ ಮುದ್ರಣಗಳು ಕಂಡಿದ್ದು ಲಾಲಾ ಹರದಯಾಳ್‌, ಸುಭಾಷ್‌ಚಂದ್ರಬೋಸ್‌, ಭಗತ್‌ಸಿಂಗ್ ಮೊದಲಾದವರಿಂದ.

ಈಜಿಪ್ಟಿನ ಉಳಿದರ್ಧ ಎಲ್ಲಿ?”

ರಾಷ್ಟ್ರದ ಪ್ರಗತಿಯಲ್ಲಿ ಸ್ತ್ರೀಯರದೂ ಮುಖ್ಯ ಪಾತ್ರ ಎಂದ ಮೇಡಂ ಕಾಮಾ ಎಲ್ಲ ಕಷ್ಟನಷ್ಟನಗಳನ್ನು, ಜವಾಬ್ದಾರಿಗಳನ್ನು ಸ್ತ್ರೀಯರೂ ಹಂಚಿಕೊಳ್ಳಬೇಕೆಂದಳು.

ಈಜಿಪ್ಟಿನ ರಾಷ್ಟ್ರೀಯ ಸಮ್ಮೇಳನ (೧೯೧೦) ದಲ್ಲಿ ಮಾತನಾಡುತ್ತಾ,

“ಇಲ್ಲಿ ಈಜಿಪ್ಟಿನ ಅರ್ಧಭಾಗವನ್ನಷ್ಟೇ ಪ್ರತಿನಿಧಿಸಿ ಬಂದಿರುವವರನ್ನು ಕಾಣುತ್ತಿರುವೆ. ಸಭೆಯಲ್ಲಿ ಕೇವಲ ಪುರುಷರು ಮಾತ್ರ ತುಂಬಿದ್ದಾರೆ. ಈಜಿಪ್ಟಿನ ಉಳಿದರ್ಧ ಭಾಗ ಎಲ್ಲಿ?”

“ಈಜಿಪ್ಟಿನ ಪುತ್ರರೇ, ನಿಮ್ಮ ತಾಯಂದಿರೆಲ್ಲಿ? ನಿಮ್ಮ ತಂಗಿಯರೆಲ್ಲಿ?….. ತೊಟ್ಟಿಲು ತೂಗುವ ಕೈಯೇ ವ್ಯಕ್ತಿಯನ್ನು ರೂಪಿಸುವ ಕೈ ಎಂಬುದನ್ನು ಮರೆಯಬೇಡಿ. ದೇಶವನ್ನು ಕಟ್ಟಬೇಕಾದರೆ ಸ್ತ್ರೀಯರ ಪಾತ್ರವೂ ಮುಖ್ಯವಾದದ್ದು ಎಂಬುದನ್ನು ಮರೆಯಬೇಡಿ” ಎಂದಳು.

ಯುದ್ಧದಲ್ಲಿ ಭಾಗವಹಿಸಬೇಡಿ

೧೯೧೮ ರಲ್ಲಿ ಪ್ರಥಮ ವಿಶ್ವ ಸಮರ ಆರಂಭವಾದಾಗ ಕಾಮಾಳ ಸ್ವಾತಂತ್ಯ್ರ ಆಂದೋಲನ ತೀವ್ರವಾಯಿತು. ಬ್ರಿಟಿಷರ ನಿರಂಕುಶ ಪ್ರಭುತ್ವವನ್ನು ಖಂಡಿಸಿ ಬರೆದಿದ್ದ ಉಗ್ರ ಲೇಖನಗಳಲ್ಲಿದ್ದ ಕಾವು ಹೆಚ್ಚುತ್ತಾ ಹೋಯಿತು.

ಬ್ರಿಟಿಷರ ಪರವಾಗಿ ಯುದ್ಧ ಮಾಡುತ್ತಿದ್ದ ಭಾರತೀಯ ಸೈನಿಕರನ್ನು ಕುರಿತು, “ಭಾರತಾಂಬೆಯ ಕಂದಗಳೇ, ಮೋಸಹೋಗುತ್ತಿದ್ದೀರಿ. ಈ ಯುದ್ಧದಲ್ಲಿ ಭಾಗವಹಿಸಬೇಡಿ. ನೀವು ಕಾದಾಡಿ ಮಡಿಯಲು ಹೋಗುತ್ತಿರುವುದು ಭಾರತಕ್ಕಾಗಿ ಅಲ್ಲ; ಬ್ರಿಟಿಷರಿಗಾಗಿ. ನಮ್ಮ ತಾಯಿಯ ಕೈಗಳಿಗೆ ಬ್ರಿಟಿಷರು ತೊಡಗಿಸಿರುವ ಕೋಳಗಳನ್ನು ಕಳಚುವ ಬಗ್ಗೆ ಯೋಚಿಸಿ. ಬ್ರಿಟಿಷರಿಗೆ ನೆರವು ನೀಡಿದರೆ ಕೋಳಗಳನ್ನು ಬಿಗಿಗೊಳಿಸಿದಂತಾದೀತು” ಎಂದು ಎಚ್ಚರಿಕೆ ನೀಡಿದಳು. 

"ನಿಮ್ಮ ತಾಯಿಯನ್ನು ಸೆರೆ ಇಟ್ಟವರಿಗಾಗಿ ಹೋರಾಡುತ್ತೀರಾ?

ಮಾರ್ಸೇಲ್ಸ್‌ನ ಸೈನಿಕ ಬಿಡಾರಗಳಿಗೆ ಆಕೆಯೇ ಸ್ವತಃ ಭೇಟಿ ಕೊಡುತ್ತಿದ್ದಳು. ಅಲ್ಲಿ ಭಾರತೀಯ ಸೈನಿಕರನ್ನು ಭೇಟಿ ಮಾಡಿ ಯುದ್ಧದಿಂದ ದೂರವಿರಲು ತಿಳಿಸುತ್ತಿದ್ದಳು. “ನಿಮ್ಮ ತಾಯಿಯನ್ನು ಸೆರೆ ಇಟ್ಟವರಿಗಾಗಿ ಹೋರಾಡುತ್ತೀರಾ?” ಎಂದು ಪ್ರಶ್ನಿಸಿದಳು. ಶಸ್ತ್ರಾಸ್ತ್ರಗಳನ್ನು ಹಿಂದಕ್ಕೆ ಕೊಟ್ಟು ಬಿಡಿ ಎಂದು ಬೋಧಿಸುತ್ತಿದ್ದಳು.

ಫ್ರೆಂಚ್‌ ಸರ್ಕಾರ ಬ್ರಿಟಿಷರ ಪರ. ಅಂದ ಮೇಲೆ ಮೇಡಂ ಕಾಮಾಳ ಈ ಬಗೆಯ ಪ್ರಚಾರ ಕಾರ್ಯಕ್ರಮದಿಂದ ಆ ಸರ್ಕಾರಕ್ಕೆ ಅಸಮಾಧಾನವಾಗಿರಲೇಬೇಕು. ಬ್ರಿಟಿಷರನ್ನು ಕುರಿತು ನೀವು ಅಪಪ್ರಚಾರ ಮಾಡುತ್ತಿದ್ದೀರಿ ಎಂದು ಮೇಡಂ ಕಾಮಾಳಿಗೆ ಎಚ್ಚರಿಗೆ ಕೊಟ್ಟಿತು ಫ್ರೆಂಚ್ ಸರ್ಕಾರ.

ಒಂದು ಅಪ್ಪಣೆ ಚೀಟಿ

ವಿದೇಶವೊಂದರಲ್ಲಿ ಕುಳಿತೇ ತಮ್ಮನ್ನು ಆಟವಾಡಿಸುತ್ತಿದ್ದ ಕೇವಲ ಒಂದು ಹೆಣ್ಣಿನ ಮೇಲೆ ಕ್ರಮ ಕೈಗೊಳ್ಳುವುದು ಸಾಧ್ಯವಾಗಲಿಲ್ಲವಲ್ಲ ಎಂಬ ನಾಚಿಕೆ ಬ್ರಿಟಿಷರಿಗೆ. ಆಕೆಯನ್ನು ಭಾರತಕ್ಕಾದರೂ ಕರೆಸಿ ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದು ಯೋಚಿಸಿತು.

ಮತ್ತೆಂದೂ ಭಾರತಕ್ಕೆ ಬರಬಾರದೆಂದು ಮೇಡಂ ಕಾಮಾಳಿಗೆ ಹಾಕಿದ್ದ ಬಹಿಷ್ಕಾರ ಮರೆತು ಮತ್ತೊಮ್ಮೆ ಆಹ್ವಾನಿಸಿತು. ಆಕೆಯನ್ನು ಕಳುಹಿಸಿಕೊಡಲು ಫ್ರೆಂಚ್ ಸರ್ಕಾರವೇ ಒಪ್ಪಲಿಲ್ಲ. ಬದಲಿಗೆ ಕೆಲವು ನಿರ್ಬಂಧಗಳ ಮೇಲೆ ಪ್ಯಾರಿಸ್‌ಗೆ ದೂರವಾಗಿ ಮೇಡಂ ಕಾಮಾಳನ್ನು ಇರಿಸಿತು.

ಯುದ್ಧ ಪ್ರಾರಂಭವಾದ ಅನಂತರ ಯಾವ ವಿದೇಶೀಯನನ್ನೂ ಪ್ಯಾರಿಸ್‌ನಲ್ಲಿ ಇರಗೊಡುತ್ತಿರಲಿಲ್ಲ. ಹಾಗೆ ಯಾರಾದರೂ ಇರಬೇಕಾದರೆ ಅನುಮತಿ (ಲೈಸೆನ್ಸ್‌) ಪಡೆಯಬೇಕಿತ್ತು.

ಕಾಮಾಳಿಗೆ ಕೊಟ್ಟ ಅಪ್ಪಣೆ ಚೀಟಿಯಲ್ಲಿ ಆಕೆ ಬ್ರಿಟಿಷರ ಅಧೀನದಲ್ಲಿರುವ ಪ್ರಜೆ ಎಂದು ನಮೂದಿಸಿದ್ದರು. ಮೇಡಂಗೆ ಆಶ್ಚರ್ಯ. ತಾನು ಭಾರತದ ಸ್ವತಂತ್ರ ಪ್ರಜೆ ಎಂದು ಸಾರಿಕೊಂಡಳು.

ಅಪ್ಪಣೆ ಚೀಟಿ ಪಡೆಯದಿದ್ದವರನ್ನು ಜೈಲಿಗೆಳೆದುಕೊಂಡು ಹೋಗುತ್ತಿದ್ದರು. ಬೇರೆ ರೀತಿಯಲ್ಲಿ ಬರೆದ ಅಪ್ಪಣೆ ಚೀಟಿ ದೊರೆಯುವುದು ಕಷ್ಟ ಎನ್ನಿಸಿದಾಗ ಮೇಡಂ ಕಾಮಾ ತನ್ನ ಪಾಲಿಗೆ ಸಿಕ್ಕಿದ್ದ ಚೀಟಿಯನ್ನೇ ಸ್ವೀಕರಿಸಿದಳು. ಅದೂ ಒಂದು ಬರೆಯ ಮೋಜೆನ್ನಿಸಿತು. ಚೀಟಿಯಲ್ಲಿರುವುದು ಏನಾದರೇನೆಂತೆ? ತಾನು ಅದೇ ಸ್ಥಳದಲ್ಲಿ ಇರುವಂತಾದರೆ ಸಾಕು. ತನ್ನ ಚಟುವಟಿಕೆಗಳಿಗೆ ಅಡ್ಡಿ ಇದಗದಿದ್ದರೆ ತುಂಬ ಸಂತಸವೇ ಸರಿ.

ಯುದ್ಧ ಮುಗಿಯುವವರೆಗೆ ಆಕೆ ತನ್ನ ಎಲ್ಲ ಚಟುವಟಿಕೆಗಳನ್ನೂ ನಿಲ್ಲಿಸಬೇಕೆಂಬ ಹೊಸ ತೀರ್ಮಾನವನ್ನು ತಿಳಿಸಿತು.ಸರ್ಕಾರ. ೧೯೧೪ ರ ನವೆಂಬರ್ ಮೊದಲ ದಿನದಿಂದ ಮೇಡಂ ಕಾಮಾಳ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಹೊರಿಸಲಾಯಿತು. ಆಕೆ ಪ್ರತಿ ವಾರಕ್ಕೊಮ್ಮೆ ಪೋಲಿಸಿನವರಿಗೆ ಹಾಜರಿ ಕೊಟ್ಟು ಬರಬೇಕಿತ್ತು.

ಜಿನೀವಾದಲ್ಲಿದ್ದ ಯುದ್ಧ ಖೈದಿಗಳ ಕಷ್ಟಸುಖ ವಿಚಾರಿಸಿಕೊಳ್ಳಬೇಕೆಂದು ಕಾಮಾ ಪ್ರಯತ್ನಪಟ್ಟಳು. ಆದರೆ ಫ್ರೆಂಚ್ ಸರ್ಕಾರ ಅನುಮತಿ ಕೊಡಲಿಲ್ಲ. ಯುದ್ಧ ಮುಗಿಯುವವರೆಗೆ ಒಂದು ರೀತಿಯ ಬಂಧನ ಎಂದೇ ಹೇಳಬೇಕು.

ಯುದ್ಧ ಮುಗಿಯುತ್ತಿದ್ದಂತೆಯೇ ಸರ್ಕಾರ ಆಕೆಯ ಮೇಲೆ ಹೊರಿಸಿದ್ದ ನಿರ್ಬಂಧಗಳನ್ನು ತೆಗೆದು ಹಾಕಿತು. ಮೇಡಂ ಕಾಮಾ ಪ್ಯಾರಿಸ್‌ನಲ್ಲಿದ್ದ ಮನೆಗೆ ಮರಳಿದಳು.

ತನ್ನ ಮೇಲೆ ಸರ್ಕಾರ ಹಾಕಿದ್ದ ಷರತ್ತುಗಳನ್ನು ತೆಗೆದ ಕೂಡಲೇ ಮೇಡಂಗೆ ಮತ್ತೆ ಉಸಿರಾಡುವಂತಾಯಿತು. ಮೊದಲಿನಷ್ಟೇ ಸ್ವತಂತ್ರವಾಗ ರಾಜಕೀಯ ಚಟುವಟಿಕೆಗಳಲ್ಲಿ ಮುಳುಗಿದಳು.

ಮೇಡಂ ಕಾಮಾ ಎಂದರೆ ಸಾಹಸಕ್ಕೆ ಮತ್ತೊಂದು ಹೆಸರು ಎನ್ನುವಂತೆ ದೇಶ ವಿದೇಶಗಳಲ್ಲಿ ಆಕೆಯ ಖ್ಯಾತಿ ಹಬ್ಬಿತ್ತು. ಎಲ್ಲೆಡೆಗಳಲ್ಲಿ ಸ್ವಾತಂತ್ಯ್ರಪ್ರಿಯರು ಮತ್ತು ಕ್ರಾಂತಿಕಾರರಿಗೆ ಆಕೆಯ ಹೆಸರೆಂದರೆ ಬಹು ಗೌರವ. ಚೀನಾದಂತಹ ಪೂರ್ವ ದೇಶಗಳವರು, ಈಜಿಪ್ಟಿನವರು, ತುರ್ಕಿಯವರು, ಪಾರ್ಸಿಗಳು ಎಲ್ಲರಿಂದ ಮೆಚ್ಚಿಕೆ ಪಡೆದ ಧೀರೆ ಆಕೆ. ಆ ದೇಶಗಳ ಕ್ರಾಂತಿಕಾರಿಗಳು ಸಹಾಯ, ಸಲಹೆಗಳಿಗಾಗಿ ಆಕೆಯನ್ನು ಆಶ್ರಯಿಸುತ್ತಿದ್ದರು. ಮೇಡಂ ಕಾಮಾಳ ಆರೋಗ್ಯ ಆಗಿಂದಾಗೆ ಕೆಡುತ್ತಲಿತ್ತು ಸದಾ ಕ್ರಾಂತಿ ಮಂತ್ರವನ್ನೇ ಜಪಿಸುತ್ತಿದ್ದ ಆ ಕ್ರಾಂತಿ ಮಣಿ ತನ್ನ ಆರೋಗ್ಯದ ಕಡೆ ಗಮನವನ್ನೇ ಕೊಡುತ್ತಿರಲಿಲ್ಲ. ಮೊದಲ ಮಹಾಯುದ್ಧ ಮುಗಿದ ನಂತರವೂ ಸ್ವಾತಂತ್ಯ್ರದ ಹೋರಾಟದಲ್ಲಿಯೇ ಹಲವು ವರ್ಷಗಳು ಕಳೆದವು. ದೇಹಶಕ್ತಿಯೂ ಕ್ಷೀಣವಾಗುತ್ತ ಹೋಯಿತು. ಆ ವೇಳೆಗೆ ವಯಸ್ಸು ೭೦ ದಾಟಿತ್ತು.

ಮತ್ತೆ ತನ್ನ ನೆಚ್ಚಿನ ತಾಯ್ನಾಡಿಗೆ

ಭಾರತಕ್ಕೆ ವಾಪಸಾಗಿ ಕೊನೆಯ ಕೆಲವು ದಿನಗಳನ್ನು ತಾಯ್ನಾಡಿನಲ್ಲಿ ಕಳೆಯಬೇಕೆಂದು ಹಂಬಲಿಸಿದಳು. ಅದಕ್ಕೆ ಬ್ರಿಟಿಷ್ ಸರ್ಕಾರದ ಅನುಮತಿ ಬೇಕಿತ್ತು. ಸರ್ ಕೋವಾಸ್‌ಜಿ ಜಹಂಗೀರ್ ಈ ವಿಷಯ ಕುರಿತು ಗೃಹ ಖಾತೆಯಲ್ಲಿ ಪ್ರಸ್ತಾಪಿಸಿದರು. ತುಂಬ ಮಾತುಕತೆಗಳಾದವು. ಕೊನೆಗೂ ಬ್ರಿಟಿಷ್ ಸರ್ಕಾರ ಒಪ್ಪಿತು.

ಆದರೆ ಒಂದು ಷರತ್ತು; ಇನ್ನು ಮುಂದೆ ಸ್ವಾತಂತ್ಯ್ರ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದು ಕೊಡಬೇಕು. ಕ್ರಾಂತಿಕಾರಿಗಳ ಜೊತೆ ಯಾವ ಸಂಪರ್ಕವೂ ಇಟ್ಟುಕೊಳ್ಳಬಾರದು.

ಮೊದಲಿಗೆ ಮೇಡಂ ಕಾಮಾ ಒಪ್ಪಲಿಲ್ಲ. ಆದರೆ ಸ್ನಾಹಿತರ, ಬಂಧುಗಳ ಒತ್ತಾಯದ ಮೇರೆಗೆ ಒಪ್ಪಿಕೊಳ್ಳಲೇ ಬೇಕಾಯಿತು. ತನ್ನ ಮೇಲೆ ಯಾರಾದರೂ ಕರಾರು, ಷರತ್ತುಗಳನ್ನು ಹಾಕಿದಾಗ ಅವುಗಳನ್ನು ಧಿಕ್ಕರಿಸಿ ನಿಲ್ಲುವ ಪ್ರವೃತ್ತಿ ಆಕೆಯದು.

ಸುಮಾರು ಮೂವತ್ತನಾಲ್ಕು ವರ್ಷಗಳ ಹಿಂದೆ ತಾರುಣ್ಯದಲ್ಲಿ ಮೇಡಂ ಕಾಮಾ ಭಾರತವನ್ನು ಬಿಟ್ಟು ಹೊರಟಿದ್ದಳು. ತಾರುಣ್ಯ-ಮಧ್ಯ ವಯಸ್ಸು ಎಲ್ಲ ದೇಶದ ಸೇವೆಗಾಗಿ, ಧೀರ ಹೋರಾಟಕ್ಕಾಗಿ ಮುಡಿಪಾಗಿದ್ದವು. ಈಗ ದೇಹಕ್ಕೆ ಎಪ್ಪತ್ತು ವರ್ಷಗಳಾಗಿದ್ದವು. ಆದರೆ ಮನಸ್ಸು ಇನ್ನೂ ಸ್ವಾತಂತ್ಯ್ರದ ಬಯಕೆಯಿಂದ, ಹೋರಾಟದ ಉತ್ಸಾಹದಿಂದ ಪುಟಿಯುತ್ತಿತ್ತು. ಇಂತಹ ಸ್ಥಿತಿಯಲ್ಲಿ ಆಕೆ ತಾಯ್ನಾಡಿಗೆ ಹೊರಟಳು. ಭಾರತಕ್ಕೆ ಬರುತ್ತಿದ್ದಂತೆಯೇ ತುಂಬಾ ಅನಾರೋಗ್ಯಕ್ಕೆ ಒಳಗಾಗಿದ್ದಳು. ಹಾಸಿಗೆಯಿಂದ ಏಳುವ ಸ್ಥಿತಿಯಲ್ಲೂ ಇರಲಿಲ್ಲ.

ತಾಯ್ನಾಡಿನ ಗಾಳಿಯಲ್ಲಿ ಉಸಿರು ಸೇರಿಹೋಯಿತು

ತಾನು ಹುಟ್ಟಿದ ಮುಂಬಯಿಗೆ ಮತ್ತೆ ಬಂದ ಕೂಡಲೇ ಕಾಮಾಳಿಗೆ ಅತೀವವಾದ ತೃಪ್ತಿ ಮತ್ತು ಸಮಾಧಾನ.

ಆಕೆಯನ್ನು ಮುಂಬಯಿ ಬಂದರಿನಿಂದ ನೇರವಾಗಿ “ಪೆಟಿಟ್ ಹಾಸ್ಪಿಟಲ್” ಎಂಬ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಂಟು ತಿಂಗಳ ಕಾಲ ಆಕೆಯ ಜೀವ ಸಾವು ಬದುಕುಗಳ ನಡುವೆ ಜೋಕಾಲಿಯಾಡಿತು.

೧೯೩೬ ರ ಆಗಸ್ಟ್ ೧೩ ರಂದು ಮೇಡಂ ಕಾಮಾ ಕಣ್ಮರೆಯಾದಳು. ಭಾರತದ ಸ್ವಾತಂತ್ಯ್ರಕ್ಕಾಗಿ ಆಕೆ ಹೋರಾಡಿದ್ದಳು. ಆ ಸ್ವಾತಂತ್ಯ್ರ ಆಕೆ ತೀರಿಕೊಂಡ ಹನ್ನೊಂದು ವರ್ಷಗಳ ತರುವಾಯ ಉದಯವಾಯಿತು.

ಸ್ವಾತಂತ್ಯ್ರ ಕಳೆದುಕೊಂಡರೆ ಸದಾಚಾರ ಕಳೆದುಕೊಂಡಂತೆ

ಹೊರದೇಶದಲ್ಲಿ ಕುಳಿತೇ ಭಾರತವನ್ನು ಸ್ವತಂತ್ರಗೊಳಿಸಿದಲು ಶ್ರಮಿಸಿದ ಕಾಮಾಳ ಜೀವನ ಒಂದು ವಿಧದಲ್ಲಿ ಅಜ್ಞಾತವಾಸವೇ. ತನ್ನ ಇಡೀ ಜೀವನದನ್ನು ತಾಯ್ನಾಡಿಗೇ ಅರ್ಪಿಸಿಕೊಂಡಳು. ಬದುಕಿನ ಕೊನೆಯ ಕ್ಷಣದವರೆಗೂ “ದಾಸ್ಯಮುಕ್ತರಾಗಲು ಎಲ್ಲ ತೊಂದರೆಗಳ್ನನೂ ಧಿಕ್ಕರಿಸಿ ನಿಲ್ಲಿ” ಎಂದು ಸಾರಿ ಸಾರಿ ಹೇಳಿದಳು. “ಸ್ವಾತಂತ್ಯ್ರ ಕಳೆದುಕೊಂಡವನು ಸದಾಚಾರ ಕಳೆದುಕೊಳ್ಳುತ್ತಾನೆ. ದಬ್ಬಾಳಿಕೆಯನ್ನು ವಿರೋಧಿಸಿದರೆ ದೇವರ ಅಪ್ಪಣೆಯನ್ನು ಪಾಲಿಸಿದಂತೆ” ಎಂದು ಮೇಡಂ ಕಾಮಾ ನುಡಿದಳು; ನುಡಿದಂತೆ ನಡೆದಳು.