(ಕ್ರಿ. ಶ. ೧೮೬೭ – ೧೯೩೪) (ರೇಡಿಯಂ)

ಪಿಯರ್ ಮತ್ತು ಮೇರಿ ಕ್ಯೂರೀ ದಂಪತಿಗಳ ಹೆಸರುಗಳನ್ನು ವಿಜ್ಞಾನ ಕ್ಷೇತ್ರದಲ್ಲಿ ಯಾವಾಗಲೂ ಒಟ್ಟಿಗೇ ಸ್ಮರಿಸಲಾಗುತ್ತದೆ. ಅವರು ಅಷ್ಟು ಅನ್ಯೋನ್ಯವಾಗಿ ಸಮಶೋಧನ ಕಾರ್ಯಗಳಲ್ಲಿ ನಿರತರಾಗಿದ್ದರು. ಅಂತಲೇ ಅವರು ಸಂಯುಕ್ತವಾಗಿಯೇ ಹಲವಾರು ನೊಬೆಲ್ ಪಾರಿತೋಷಕಗಳನ್ನು ಪಡೆದಿದ್ದಾರೆ.

ಪ್ಯಾರಿಸ್ಸಿನ ಸೊರ್ಬೊನ್ ಎಂಬಲ್ಲಿ ಪ್ರಯೋಗಾಲಯ ಸಹಾಯಕರುಗಳಾಗಿ (ಲ್ಯಾಬೊರೇಟರಿ ಅಸಿಸ್ಟೆಂಟ್ಸ್) ಕಾರ್ಯ ಮಾಡುತ್ತಿದ್ದಾಗ ಪಿಯೆರ್ (೧೮೫೯-೧೯೦೬) ಮತ್ತು ಮೇರಿ (೧೮೬೭-೧೯೩೪) ಅವರುಗಳ ಪರಸ್ಪರ ಪರಿಚಯವಾಯಿತು. ಈ ಪರಿಚಯ ೧೮೯೪ರಲ್ಲಿ ಅವರ ವಿವಾಹಕ್ಕೆ ಕಾರಣವಾಯಿತು. ಬಿಕ್ವೆರೆಲ್ ಎಂಬುವರ ಜೊತೆಗೂಡಿ ಈ ದಂಪತಿಗಳು “ರೇಡಿಯೊ ಆಕ್ಟಿವಿಟಿ ” ಬಗ್ಗೆ ಸಂಶೋಧನೆ ಮಾಡಿದರು. ಅವರು ಸಂಯುಕ್ತವಾಗಿ ಪೊಲೊನಿಯಮ್ ಮತ್ತು ರೇಡಿಯಂ ಕಂಡು ಹಿಡಿದರು. ಈ ಸಂಶೋಧನೆಗಾಗಿ ೧೯೦೩ರಲ್ಲಿ ಮೂವರಿಗೂ ನೊಬೆಲ್ ಪಾರಿತೋಷಕ ನೀಡಲಾಯಿತು.

ಲಾರಿಯೊಂದು ಹಾಯ್ದ ಪರಿಣಾಮವಾಗಿ ಪೀಯೆರ್ ೧೯೦೬ರಲ್ಲಿ ಅಕಾಲಿಕ ದುರ್ಮರಣಕ್ಕೀಡಾದರು. ಆದರೆ ತನ್ನ ಪತಿಯ ಮರಣದಿಂದ ವಿಚಲಿತರಾಗದೆ ಮೇರಿ ಕ್ಯೂರಿ ಸಂಶೋಧನಾ ಕಾರ್ಯವನ್ನು ಮುಂದುವರಿಸಿದರು. ಉಪಜೀವನಕ್ಕಾಗಿ ಆಕೆ ಸೊರ್ಬೊನ್ ನಲ್ಲಿ ಉದ್ಯೋಗ ಪಡೆದರು. ರಸಾಯನಶಾಸ್ತ್ರದಲ್ಲಿ ಆಕೆಯ ಸಂಶೋಧನಾ ಕಾರ್ಯಕ್ಕಾಗಿ ೧೯೧೧ ರಲ್ಲಿ ಅವರಿಗೆ ನೊಬೆಲ್ ಪಾರಿತೋಷಕವನ್ನು ನೀಡಲಾಯಿತು. ಕ್ಯೂರಿ ದಂಪತಿಗಳ ಕಾರ್ಯವನ್ನು ಅವರ ಪುತ್ರಿ ಇರೀನ್ ಮುಂದುವರಿಸಿದಳು. ಈಕೆ ಕೂಡ ತನ್ನ ಪತಿ ಫ್ರೆಡರಿಕ್ ಜೋಲಿಯೊ ಜೊತೆಗೂಡಿ ಕೃತಕ ರೇಡಿಯೊ ಆಕ್ಟಿವಿಟಿಯನ್ನು ಕಂಡು ಹಿಡಿದಳು.