Categories
e-ದಿನ

ಮೇ-07

ಪ್ರಮುಖಘಟನಾವಳಿಗಳು:

1846: ಅಮೆರಿಕದ ಬಹಳ ಕಾಲದಿಂದ ಉಳಿದಿರುವ ಪತ್ರಿಕೆಯಾದ ಕೇಂಬ್ರಿಡ್ಜ್ ಕ್ರಾನಿಕಲ್ ಪತ್ರಿಕೆಯು ಮೊಟ್ಟ ಮೊದಲ ಬಾರಿಗೆ ಪ್ರಕಟಗೊಂಡಿತು.

1888: ಜಾರ್ಜ್ ಈಸ್ಟ್ ಮನ್ ಮೊದಲ ಬಾರಿಗೆ ಅಮೆರಿಕನ್ ಮಾರುಕಟ್ಟೆಗೆ ಕೊಡಕ್ ಕ್ಯಾಮರಾವನ್ನು ಪರಿಚಯಿಸಿದರು.

1895: ಅಲೆಗ್ಸಾಂಡರ್ ಸ್ಟೆಪಾನೋವಿಕ್ ಪೊಪೋವ್ ಅವರು ತಮ್ಮ ಲೈಟ್ನಿಂಗ್ ಡಿಟೆಕ್ಟರ್ ಅನ್ನು ಪ್ರದರ್ಶಿಸಿದರು. ಇದು ಪ್ರಾರಂಭಿಕ ಮಾದರಿಯ ರೇಡಿಯೋ ಡಿಟೆಕ್ಟರ್ ಆಗಿತ್ತು.

1945: ಎರಡನೇ ವಿಶ್ವಮಹಾಯುದ್ಧದಲ್ಲಿ ಜನರಲ್ ಆಲ್ಫ್ರೆಡ್ ಅವರು ಯಾವುದೇ ಷರತ್ತೂ ಇಲ್ಲದೆ ಜರ್ಮನಿಯ ಕಡೆಯ ಶರಣಾಗತಿ ಪತ್ರಕ್ಕೆ ಫ್ರಾನ್ಸ್ ದೇಶದ ರೀಮ್ಸ್ ಎಂಬಲ್ಲಿ ಸಹಿ ಮಾಡಿದರು.

1946: ಮುಂದೆ ಸೋನಿ ಎಂದು ಪ್ರಖ್ಯಾತಗೊಂಡ ‘ಟೋಕಿಯೋ ಟೆಲಿಕಮ್ಮ್ಯೂನಿಕೇಶನ್ಸ್’ ಸಂಸ್ಥೆಯು 20 ಜನ ಸಿಬ್ಬಂದಿಯೊಂದಿಗೆ ಆರಂಭಗೊಂಡಿತು.

1947: ಮೂವತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಸಿ.ಕೆ. ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ಆರಂಭಗೊಂಡಿತು.

1952: ಎಲ್ಲ ಆಧುನಿಕ ಕಂಪ್ಯೂಟರುಗಳಿಗೆ ಮೂಲವಾದ ಇಂಟಿಗ್ರೇಟೆಡ್ ಸರ್ಕ್ಯೂಟ್ ಚಿಂತನೆಯನ್ನು ಜೆಫರಿ ಡಮ್ಮರ್ ಅವರು ಮೊದಲ ಬಾರಿಗೆ ಪ್ರಕಟಿಸಿದರು.

1957: ಮೂವತ್ತೊಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕೆ.ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಆರಂಭಗೊಂಡಿತು.

1976: ‘ಹೊಂಡಾ ಅಕ್ಕಾರ್ಡ್’ ಕಾರು ಬಿಡುಗಡೆಗೊಂಡಿತು.

1994: ಕಳುವುಗೊಂಡಿದ್ದ ಎಡ್ವರ್ಡ್ ಮುಂಚ್ ಅವರ ‘ದಿ ಸ್ಕ್ರೀಮ್’ ಎಂಬ ಪ್ರಸಿದ್ಧ ಚಿತ್ರವನ್ನು ಯಾವುದೇ ರೀತಿಯ ಹಾನಿಯೂ ಇಲ್ಲದಂತೆ ಪುನಃವಶಪಡಿಸಿಕೊಳ್ಳಲಾಯಿತು.

2000: ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷರಾದರು.

2007: ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವಾರ್ಷಿಕೋತ್ಸವದ ಅಂಗವಾಗಿ ಮೀರತ್ತಿನಿಂದ ದೆಹಲಿಗೆ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಹೊರಟ 10,000ಕ್ಕೂ ಹೆಚ್ಚು ಯುವಕರ ‘ಯಾತ್ರೆ’ಗೆ ಮೀರತ್ತಿನಲ್ಲಿ ಚಾಲನೆ ನೀಡಲಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರು ಮೊದಲ ‘ವಿಶ್ವ ಆರ್ಥಿಕ ಪ್ರಶಸ್ತಿ’ಗೆ ಆಯ್ಕೆಯಾದರು. ಅರ್ಥ ವ್ಯವಸ್ಥೆ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿನ ಮೂಲಭೂತ ಸಮಸ್ಯೆಗಳ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜರ್ಮನ್ ಮಾಜಿ ಚಾನ್ಸಲರ್ ಹೆಲ್ಮಂಡ್ ಶ್ಮಿಂಡ್ ಅವರೊಂದಿಗೆ ಸೇನ್ ಅವರನ್ನು ಜಂಟಿಯಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2008: ಭೂ ಮೇಲ್ಮೈಯಿಂದ ಮೇಲ್ಮೈಗೆ 3000 ಕಿ.ಮೀ. ದೂರದವರೆಗೆ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ಅಗ್ನಿ- 3 ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒರಿಸ್ಸಾ ಕರಾವಳಿಯ ವ್ಹೀಲರ್ಸ್ ದ್ವೀಪದಿಂದ ನಡೆಸಲಾಯಿತು.

2009: ಧಾರವಾಡದ ವ್ಯಂಗ್ಯಚಿತ್ರ ಕಲಾವಿದ ಪ್ರಭಾಕರ ರಾವ್ ಬೈಲ್ ಅವರಿಗೆ ಬೆಂಗಳೂರಿನ ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಸ್ಥೆ ನೀಡುವ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಲಭಿಸಿತು.

ಪ್ರಮುಖಜನನ/ಮರಣ:

1861: ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ವಿಜ್ಞಾನ, ಶಿಕ್ಷಣ, ಆಧ್ಯಾತ್ಮ, ಮಾನವೀಯತೆ ಈ ಸಕಲತೆಗಳಲ್ಲೂ ಮೇಳೈಸಿದ ಅಪೂರ್ವ ವ್ಯಕ್ತಿ ನೊಬೆಲ್ ಸಾಹಿತ್ಯ ಪುರಸ್ಕೃತ, ಶಾಂತಿ ನಿಕೇತನ ಸ್ಥಾಪಕ ರಬೀಂದ್ರನಾಥ ಠಾಗೂರ್ ಅವರು ಕೋಲ್ಕತ್ತಾದಲ್ಲಿ ಜನಿಸಿದರು. ಇವರಿಗೆ 1913 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1867: ನೊಬೆಲ್ ಸಾಹಿತ್ಯ ಪುರಸ್ಕೃತ ಪೋಲೆಂಡ್ ದೇಶದ ಕವಿ ವ್ಲಾಡಿಸ್ಲಾವ್ ರೆಮೆಂಟ್ ಅವರು ಕೊಬಿಯೆಲೆ ವಿಯೇಲ್ಕಿ ಎಂಬಲ್ಲಿ ಜನಿಸಿದರು.

1871: ಸುಪ್ರಸಿದ್ಧ ವಿದ್ವಾಂಸರೂ, ತತ್ತ್ವಜ್ಞಾನಿಗಳೂ, ಪ್ರಾಧ್ಯಾಪಕರೂ ಆದ ಪ್ರೊ. ಎಂ. ಹಿರಿಯಣ್ಣನವರು ಮೈಸೂರಿನಲ್ಲಿ ಜನಿಸಿದರು. ಹಿರಿಯಣ್ಣನವರಿಗೆ ಹಲವಾರು ವಿದ್ವಾಂಸರ ಪರಿಷತ್ತುಗಳು ಮತ್ತು ಸಮ್ಮೇಳನಗಳು ಅಧ್ಯಕ್ಷ ಪದವಿಯನ್ನು ಸಲ್ಲಿಸಿ ಗೌರವ ತೋರಿ ಸನ್ಮಾನಿಸಿದ್ದವು. ಸಂಸ್ಕೃತ ಅಕಾಡಮಿಯಿಂದ ‘ಸಂಸ್ಕೃತ ಸೇವಾಧುರೀಣ’ ಎಂಬ ಪ್ರಶಂಸೆ ಸಂದಿತ್ತು.

1880: ಭಾರತೀಯ ದರ್ಶನ ಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ ಪಾಂಡುರಂಗ ವಾಮನ್ ಕಾನೆ ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಜನಿಸಿದರು. ಇವರಿಗೆ 1963 ವರ್ಷದಲ್ಲಿ ಭಾರತ ರತ್ನ ಪುರಸ್ಕಾರವಿತ್ತು ಗೌರವಿಸಲಾಗಿತ್ತು.

1893: ‘ಹೊಯಿಸಳ’ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದ ಅರಗ ಲಕ್ಷ್ಮಣರಾಯರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಜನಿಸಿದರು.

1912: ಪ್ರಸಿದ್ಧ ಗುಜರಾತಿ ಸಾಹಿತಿ ಪನ್ನಾಲಾಲ್ ಪಟೇಲ್ ರಾಜಾಸ್ಥಾನದ ದುಂಗಾರ್ಪುರ್ ಎಂಬಲ್ಲಿ ಜನಿಸಿದರು. ಜ್ಞಾನಪೀಠ ಪುರಸ್ಕಾರ, ಸಾಹಿತ್ಯ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1939: ಕೆನಡ-ಅಮೆರಿಕದ ಜೀವವಿಜ್ಞಾನಿ ಸಿಡ್ನಿ ಆಲ್ಟ್ ಮ್ಯಾನ್ ಅವರು ಕೆನಡಾದ ಮಾಂಟ್ರಿಯಲ್ ಎಂಬಲ್ಲಿ ಜನಿಸಿದರು. ‘ಕ್ಯಾಟಾಲಿಕ್ ಪ್ರಾಪರ್ಟಿಸ್ ಆಫ್ ಆರ್.ಎನ್.ಎ’ ಸಂಶೋಧನೆಗಾಗಿ ಇವರಿಗೆ 1989 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

192: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರು ಬ್ರಿಟಿಷರಿಂದ ಅಮಾನುಷ ರೀತಿಯಲ್ಲಿ ಕೊಲ್ಲಲ್ಪಟ್ಟರು.

1971: ‘ಡಿ.ಎಲ್.ಎನ್’ ಎಂದೇ ಪ್ರಖ್ಯಾತರಾದ ವಿದ್ವಾಂಸ, ಸಂಶೋಧಕ, ಸಾಹಿತಿ ಪ್ರೊ. ಡಿ. ಎಲ್. ನರಸಿಂಹಾಚಾರ್ಯ ನಿಧನರಾದರು.

1998: ದಕ್ಷಿಣ ಆಫ್ರಿಕ-ಇಂಗ್ಲಿಷ್ ಭೌತವಿಜ್ಞಾನಿ ಅಲ್ಲನ್ ಮೆಕ್ಲಿಯಾಡ್ ಕಾರ್ಮ್ಯಾಕ್ ಅವರು ಅಮೆರಿಕದ ಮೆಸ್ಸಚುಸೆಟ್ಸ್ ಎಂಬಲ್ಲಿ ನಿಧನರಾದರು. ‘ಎಕ್ಸ್-ರೇ ಕಂಪ್ಯೂಟೆಡ್ ಟೊಮೋಗ್ರಫಿ’ ಕುರಿತಾದ ಸಂಶೋಧನೆಗೆ ಇವರಿಗೆ 1979 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2011: ಕೆನಡಾದ ಭೌತವಿಜ್ಞಾನಿ ವಿಲ್ಲರ್ಡ್ ಬೋಯ್ಲೆ ಅವರು ನೋವಾ ಸ್ಕೋಟಿಯಾ ಬಳಿಯ ವ್ಯಾಲೇಸ್ ಎಂಬಲ್ಲಿ ನಿಧನರಾದರು. ಇವರಿಗೆ ಇಮೆಜಿಂಗ್ ಸೆಮಿ ಕಂಡಕ್ಟರ್ ಸರ್ಕ್ಯೂಟ್ ಸಂಶೋಧನೆಗಾಗಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.