Categories
e-ದಿನ

ಮೇ-09

ಪ್ರಮುಖಘಟನಾವಳಿಗಳು:

1662: ಮಿಸ್ಟರ್ ಪಂಚ್ ಎಂದು ಪ್ರಖ್ಯಾತಗೊಂಡ ಬೊಂಬೆ ರೂಪದ ಪ್ರದರ್ಶನವು ಮೊಟ್ಟ ಮೊದಲ ಬಾರಿಗೆ ಇಂಗ್ಲೆಂಡಿನಲ್ಲಿ ಜರುಗಿತು.

1873: ವಿಯೆನ್ನಾ ಶೇರುಮಾರುಕಟ್ಟೆಯಲ್ಲಿನ ಕುಸಿತು ಬಹು ದೀರ್ಘ ಕಾಲದ ಅರ್ಥಿಕ ಕುಸಿತಕ್ಕೆ ಮುನ್ನುಡಿ ಬರೆಯಿತು.

1874: ಕುದುರೆಗಳ ಮೂಲಕ ಚಲಿಸುವ ಬಸ್ ಪಯಣ ಎರಡು ಮಾರ್ಗಗಳಲ್ಲಿ ಮುಂಬೈನಲ್ಲಿ ಆರಂಭಗೊಂಡಿತು.

1942: ಹೋಲೋಕಾಸ್ಟ್ ಹತ್ಯಾಖಾಂಡದಲ್ಲಿ ಉಕ್ರೇನಿನ ಪೋಡೋಲಿಯನ್ ಪಟ್ಟಣದಲ್ಲಿ 588 ಜ್ಯೂ ಜನಾಂಗೀಯರನ್ನು ಹತ್ಯೆ ಮಾಡಲಾಯಿತು. ಬೆಲಾರಸ್ನಲ್ಲಿನ ಜೋಲುಡೆಕ್ ಘೆಟ್ಟೋ ಪಟ್ಟಣವನ್ನು ನಾಶಪಡಿಸಿ ಅಲ್ಲಿನ ಜನರೆಲ್ಲರನ್ನೂ ಹತ್ಯೆ ಇಲ್ಲವೇ ಗಡೀಪಾರು ಮಾಡಲಾಯಿತು.

1984: ಭಾರತದ ಫು ದೋರ್ಜಿ ಆಮ್ಲಜನಕ ಇಲ್ಲದೆಯೇ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯರೆನಿಸಿದರು.

2006: ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-1′ ಯೋಜನೆಗಾಗಿ ಭಾರತದ ಬಾಹ್ಯಾಕಾಶ ಸಂಸ್ಥೆ ‘ಇಸ್ರೋ’ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಒಪ್ಪಂದಕ್ಕೆ ಸಹಿ ಮಾಡಿದವು.

2007: ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

2008: ವಿಶ್ವ ಚೆಸ್ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅವರು ‘ಚೆಸ್ ಆಸ್ಕರ್’ ಪ್ರಶಸ್ತಿಯನ್ನು ಐದನೇ ಬಾರಿ ಪಡೆದರು. 2007ರಲ್ಲಿ ಆನಂದ್ ತೋರಿದ ಶ್ರೇಷ್ಠ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಆನಂದ್ ಈ ಮೊದಲು 1997, 1998, 2003 ಹಾಗೂ 2004ರಲ್ಲಿ ಸಹಾ ಈ ಗೌರವ ಪಡೆದಿದ್ದರು.

2009: ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿತು.

2015: ರಷ್ಯಾವು ತನ್ನ ವಿಶ್ವ ಮಹಾಯುದ್ಧದ ವಿಜಯದ 70ನೇ ವಾರ್ಷಿಕೋತ್ಸವದ ಅಂಗವಾಗಿ ಬೃಹತ್ ಮಿಲಿಟರಿ ಕವಾಯತನ್ನು ನಡೆಸಿತು.

ಪ್ರಮುಖಜನನ/ಮರಣ:

1540: ಮೇವಾರದ ದೊರೆ ರಜಪೂತ ವಂಶಸ್ಥ ಮಹಾರಾಣಾ ಪ್ರತಾಪ್ ಸಿಂಗ್ ಸಿಸೋಡಿಯಾ ಅವರು ರಾಜಾಸ್ಥಾನ ಕುಂಭಾಲ್ಘರ್ ಕೋಟೆಯಲ್ಲಿ ಜನಿಸಿದರು.

1800: ಅಮೆರಿಕದ ಗುಲಾಮೀ ಪದ್ಧತಿ ವಿರೋಧಿ ಹೋರಾಟಗಾರ ಜಾನ್ ಬ್ರೌನ್ ಅವರು ಕನೆಕ್ಟಿಕಟ್ ಬಳಿಯ ಟಾರ್ರಿಂಗ್ ಟನ್ ಎಂಬಲ್ಲಿ ಜನಿಸಿದರು. ಗುಲಾಮೀ ಪದ್ಧತಿಯನ್ನು ಹೋಗಲಾಡಿಸಲು ಇವರು ನಡೆಸಿದ ಪ್ರಯತ್ನಗಳು ಅಮೆರಿಕದ ಅಂತರ್ಯುದ್ಧಕ್ಕೆ ಪ್ರಮುಖ ಕಾರಣಗಳಾದವು.

1866: ಸ್ವಾತಂತ್ರ್ಯ ಹೋರಾಟಗಾರ, ಅರ್ಥಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಗೋಖಲೆ ಅವರು ಬಾಂಬೆ ಪ್ರೆಸಿಡೆನ್ಸಿಯ ರತ್ನಗಿರಿ ಜಿಲ್ಲೆಯ ಕೊತ್ಲುಕ್ ಎಂಬಲ್ಲಿ ಜನಿಸಿದರು. ಭಾರತದ ರಾಷ್ಟ್ರೀಯ ನಾಯಕರಾದ ಇವರು ರಾಷ್ಟ್ರದ ಅತ್ಯಂತ ದುರ್ಬಲ ವರ್ಗದ ಜನರ ಏಳಿಗೆಗಾಗಿ ಸರ್ವೆಂಟ್ಸ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು. ಜೊತೆಗೆ ಪುಣೆಯಲ್ಲಿ ರಾನಡೆ ಇನ್ ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಸ್ಥಾಪಿಸಿದರು.

1908: ಕನ್ನಡದ ಸಾಹಿತಿ, ಹೋರಾಟಗಾರ, ಸಾಂಸ್ಕೃತಿಕ ರಾಯಭಾರಿ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ.ನ.ಕೃ) ಅವರು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜನಿಸಿದರು. 250 ವೈವಿಧ್ಯಮಯ ಕೃತಿಗಳನ್ನು ರಚಿಸಿದ ಇವರು ಕರ್ನಾಟಕದ ಸಾಂಸ್ಕೃತಿಕ ವರ್ಗದ ಎಲ್ಲ ರೀತಿಯ ಕಲಾವಿದರೊಂದಿಗೆ ಸಂಪರ್ಕ ಹೊಂದಿ ಕನ್ನಡ ನಾಡಿನ ಅಭಿವೃದ್ಧಿಗೆ ಮಹತ್ವದ ಕೆಲಸ ಮಾಡಿದರು. 42ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿತ್ತು.

1927: ಜರ್ಮನ್ ರಸಾಯನ ಶಾಸ್ತ್ರಜ್ಞರಾದ ಮ್ಯಾನ್ಫ್ರೆಡ್ ಎಲ್ಗೆನ್ ಅವರು ಬೋಖುಮ್ ಎಂಬಲ್ಲಿ ಜನಿಸಿದರು. ಶೀಘ್ರಗತಿಯ ರಾಸಾಯನಿಕ ಪ್ರತಿಕ್ರಿಯೆಗಳ ಕುರಿತಾದ ಸಂಶೋಧನೆಗಾಗಿ ಇವರಿಗೆ 1967 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತು.

1954: ನೃತ್ಯ ಕಲಾವಿದೆ, ಅಭಿನೇತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲ್ಲಿಕಾ ಸಾರಾಭಾಯಿ ಅವರು ಅಹಮದಾಬಾದಿನಲ್ಲಿ ಜನಿಸಿದರು. ಕುಚ್ಚಿಪುಡಿ ಮತ್ತು ಭರತನಾಟ್ಯ ಕಲಾವಿದರಾದ ಇವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಮತ್ತಿತರ ಗೌರವಗಳು ಸಂದಿವೆ.

1931: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಆಲ್ಬರ್ಟ್ ಅಬ್ರಹಾಂ ಮೈಖೇಲ್ ಸನ್ ಅವರು ಕ್ಯಾಲಿಫೋರ್ನಿಯಾದ ಪೆಸಡೆನ ಎಂಬಲ್ಲಿ ನಿಧನರಾದರು. ‘ಮೆಷರ್ಮೆಂಟ್ ಆಫ್ ಸ್ಪೀಡ್ ಆಫ್ ಲೈಟ್’ ಕುರಿತಾದ ಸಂಶೋಧನೆಗಾಗಿ ಇವರು 1907ರಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರಗಳಿಸಿ, ವಿಜ್ಞಾನಕ್ಕಾಗಿ ನೊಬೆಲ್ ಪುರಸ್ಕಾರ ಗಳಿಸಿದ ಪ್ರಥಮ ಅಮೆರಿಕದ ವಿಜ್ಞಾನಿ ಎನಿಸಿದರು.

1959: ಸಮಾಜದಲ್ಲಿ ಶಿಕ್ಷಣಕ್ರಾಂತಿಗಾಗಿ ಶ್ರಮಿಸಿ, ರಾಯತ್ ಎಡುಕೇಶನ್ ಸೊಸೈಟ್ ಪ್ರಾರಂಭಿಸಿದ ಕರ್ಮವೀರ್ ಬಾವುರಾವ್ ಪಾಟೀಲ್ ತಮ್ಮ 71ನೇ ವಯಸ್ಸಿನಲ್ಲಿ ಮಹಾರಾಷ್ಟ್ರದಲ್ಲಿ ನಿಧನರಾದರು. ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1986: ಮೊಟ್ಟಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಹಿಲೇರಿ-ತೇನ್ಸಿಂಗ್ ಜೋಡಿಯ ತೇನ್ಸಿಂಗ್ ನೋರ್ಗೆ ಅವರು ತಮ್ಮ 72ನೆಯ ವಯಸ್ಸಿನಲ್ಲಿ ಡಾರ್ಜಿಲಿಂಗಿನಲ್ಲಿ ನಿಧನರಾದರು.

1998: ಪ್ರಖ್ಯಾತ ಗಾಯಕ ಮತ್ತು ನಟ ತಲತ್ ಮಹಮೂದ್ ಅವರು ತಮ್ಮ 74ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

2014: ಆಂಧ್ರಪ್ರದೇಶದ 12ನೇ ಮುಖ್ಯಮಂತ್ರಿಗಳಾಗಿದ್ದ ನಡುರುಮಲ್ಲಿ ಜನಾರ್ಧನ ರೆಡ್ಡಿ ಅವರು ಹೈದರಾಬಾದಿನಲ್ಲಿ ನಿಧನರಾದರು.