Categories
e-ದಿನ

ಮೇ-10

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 28:ಹ್ಯಾನ್ ರಾಜವಂಶದ ಸಮಯದಲ್ಲಿದ್ದ ಚೀನಾದ ಖಗೋಳಶಾಸ್ತ್ರಜ್ಞರು ಸೂರ್ಯನ ಮೇಲೆ ಪ್ರಥಮ ಬಾರಿಗೆ ಕಲೆಗಳನ್ನು ಗುರುತಿಸಿದರು.

1497: ಅಮೆರಿಗೋ ವೆಸ್ಪುಸ್ಸಿ ಹೊಸ ಪ್ರಪಂಚದೆಡೆಗಿನ ಪಯಣಕ್ಕಾಗಿ ಸ್ಪೇನ್ ದೇಶದ ಕ್ಯಾಡಿಸ್ ಇಂದ ಪಯಣ ಹೊರಟರು.

1774: ಹದಿನಾರನೇ ಲೂಯಿ ಫ್ರಾನ್ಸಿನ ಸಿಂಹಾಸನ ಏರಿದ. ಆತನ ಆಡಳಿತಾವಧಿಯಲ್ಲಿ ಫ್ರೆಂಚ್ ಕ್ರಾಂತಿ ಆರಂಭವಾಯಿತು. 1793ರ ಜನವರಿ 21ರಂದು ಪ್ಯಾರಿಸ್ಸಿನಲ್ಲಿ ಆತನನ್ನು ಗಿಲೋಟಿನ್ ಯಂತ್ರದ ಮೂಲಕ ಕೊಲ್ಲಲಾಯಿತು.

1824: ಲಂಡನ್ನಿನ ‘ದಿ ನ್ಯಾಷನಲ್ ಗ್ಯಾಲರಿ’ ಸಾರ್ವಜನಿಕರಿಗೆ ತೆರೆಯಿತು.

1837: ನ್ಯೂಯಾರ್ಕ್ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿ ನಿರುದ್ಯೋಗ ವಿಪರೀತ ಉಲ್ಬಣಗೊಂಡು ಆರ್ಥಿಕ ದುಃಸ್ಥಿತಿಯನ್ನು ನಿರ್ಮಿಸಿತು.

1857: ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ತಿನಲ್ಲಿ ಆರಂಭಗೊಂಡಿತು. ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು.

1908: ಮೊಟ್ಟ ಮೊದಲಬಾರಿಗೆ ತಾಯಂದಿರ ದಿನವನ್ನು ಅಮೆರಿಕದ ವೆಸ್ಟ್ ವರ್ಜೀನಿಯಾದ ಗ್ರಾಫ್ಟನ್ ಎಂಬಲ್ಲಿ ಆಚರಿಸಲಾಯಿತು.

1924: ಜೆ. ಎಡ್ಗರ್ ಹೂವರ್ ಅವರು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನಿರ್ದೇಶಕರಾಗಿ ನೇಮಕಗೊಂಡರು. ಅವರು 1972ರ ವರ್ಷದಲ್ಲಿ ನಿಧನರಾಗುವವರೆಗೆ ಈ ಜವಾಬ್ಧಾರಿಯನ್ನು ನಿರ್ವಹಿಸಿದರು.

1933: ನಾಜಿಗಳು ಸೆನ್ಸಾರ್ಷಿಪ್ ನಿಟ್ಟಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಪುಸ್ತಕಗಳನ್ನು ಸುಟ್ಟುಹಾಕಿದರು.

1965: ನಲವತ್ತೈದನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕಡೆಂಗೋಡ್ಲು ಶಂಕರಭಟ್ಟರ ಸಮ್ಮೇಳನಾಧ್ಯಕ್ಷತೆಯಲ್ಲಿ ಕಾರವಾರದಲ್ಲಿ ಆರಂಭಗೊಂಡಿತು.

1975: ಸೋನಿ ಸಂಸ್ಥೆಯು ಬೆಟಾಮ್ಯಾಕ್ಸ್ ವಿಡಿಯೋಕ್ಯಾಸೆಟ್ ರೆಕಾರ್ಡರ್ ಅನ್ನು ಜಪಾನಿನಲ್ಲಿ ಬಿಡುಗಡೆ ಮಾಡಿತು.

1993: ಭಾರತದ ಸಂತೋಷ ಯಾದವ್ ಎವರೆಸ್ಟ್ ಪರ್ವತವನ್ನು ಎರಡು ಸಲ ಏರಿದ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಈ ಹಿಂದೆ 1992ರ ಮೇ 12ರಂದು ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದರು.

1994: ನೆಲ್ಸನ್ ಮಂಡೇಲ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಪ್ರಪ್ರಥಮ ಕರಿಯ ವ್ಯಕ್ತಿಯಾದರು.

1997: ಇರಾನಿನ ಖೊರಾಸನ್ ಪ್ರಾಂತ್ಯದಲ್ಲಿ 7.3 ಪ್ರಮಾಣದ ಖಯೇನ್ ಭೂಕಂಪ ಏರ್ಪಟ್ಟು.

1567: ಇರಾನಿನ ಖೊರಾಸನ್ ಪ್ರಾಂತ್ಯದಲ್ಲಿ 7.3 ಪ್ರಮಾಣದ ಖಯೇನ್ ಭೂಕಂಪ ಏರ್ಪಟ್ಟು 1567 ನಿಧನರಾಗಿ, 2,300ಜನ ಗಾಯಗೊಂಡು 50 ಸಾವಿರಕ್ಕೂ ಹೆಚ್ಚು ಜನ ನಿರ್ವಸಿತರಾದರು.

2002: ಎಫ್.ಬಿ.ಐ ಏಜೆಂಟ್ ರಾಬರ್ಟ್ ಹ್ಯಾನ್ಸೆನ್ ಎಂಬಾತ 1.4 ಮಿಲಿಯನ್ ಡಾಲರ್ ಮೌಲ್ಯದ ನಗದು ಮತ್ತು ವಜ್ರಗಳನ್ನು ರಷ್ಯಾದಿಂದ ಲಂಚವಾಗಿ ಸ್ವೀಕರಿಸಿ ಅಮೆರಿಕದ ಗುಟ್ಟುಗಳನ್ನು ಬಿಟ್ಟುಕೊಟ್ಟದ್ದಕ್ಕಾಗಿ, ಪೆರೋಲ್ ಸಾಧ್ಯತೆಯೇ ಇಲ್ಲದ ಹಾಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2007: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸ್ಮರಣಾರ್ಥ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಮ್ಮಿಶ್ರ ಯುಗದಲ್ಲಿರುವ ಭಾರತದಲ್ಲಿ, ಸುಸ್ಥಿರವಾದ ದ್ವಿಪಕ್ಷ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹಾರೈಸಿದರು.

ಪ್ರಮುಖಜನನ/ಮರಣ:

1855: ಭಾರತೀಯ ಆಧ್ಯಾತ್ಮಿಕ ಗುರು ಯುಕ್ತೇಶ್ವರ ಗಿರಿ ಅವರು ಬಂಗಾಳದ ಸೇರಾಂಪುರ್ ಎಂಬಲ್ಲಿ ಜನಿಸಿದರು. ಪರಮಹಂಸ ಯೋಗಾನಂದರ ಗುರುಗಳಾದ ಇವರು ಕ್ರಿಯಾಯೋಗದ ಜನಕರೆಂದು ಪ್ರಸಿದ್ಧರಾಗಿದ್ದಾರೆ.

1878: ಜರ್ಮನಿಯ ರಾಜಕಾರಣಿ, ಪತ್ರಕರ್ತ ಗುಸ್ತಾವ್ ಸ್ಟ್ರೆಸೆಮನ್ ಅವರು ಬರ್ಲಿನ್ ನಗರದಲ್ಲಿ ಜನಿಸಿದರು. ಜರ್ಮನಿ ಮತ್ತು ಫ್ರಾನ್ಸ್ ನಡುವೆ ಶಾಂತಿ ಒಪ್ಪಂದಗಳನ್ನು ಸಾಧ್ಯವಾಗಿಸಿದ ಇವರಿಗೆ 1926 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1927: ಭಾರತೀಯ ಇಂಗ್ಲಿಷ್ ಬರಹಗಾರ್ತಿ ನಯನ್ ತಾರಾ ಸಹಗಲ್ ಅಲಹಾಬಾದಿನಲ್ಲಿ ಜನಿಸಿದರು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಸಂದಿತ್ತು.

1930: ಅಮೆರಿಕದ ಭೌತವಿಜ್ಞಾನಿ ಜಾರ್ಜ್ ಇ. ಸ್ಮಿತ್ ಅವರು ನ್ಯೂಯಾರ್ಕಿನ ವೈಟ್ ಪ್ಲೈನ್ಸ್ ಎಂಬಲ್ಲಿ ಜನಿಸಿದರು. ಇಮೇಜಿಂಗ್ ಸೆಮಿ ಕಂಡಕ್ಟರ್ ಸರ್ಕ್ಯೂಟ್ ಸಂಶೋಧನೆಗಾಗಿ ಇವರಿಗೆ 2009 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1931: ವಿದ್ವಾಂಸ, ಇತಿಹಾಸಜ್ಞ, ಸಂಶೋಧಕ, ಕನ್ನಡ ಹೋರಾಟಗಾರ ಡಾ. ಚಿದಾನಂದಮೂರ್ತಿ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೊಗಲೂರು ಎಂಬಲ್ಲಿ ಜನಿಸಿದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1933: ಕರ್ನಾಟಕದ ಜಾನಪದ ಕಲೆಗಳಲ್ಲಿ ನಶಿಸಿ ಹೋಗಿದ್ದ ಸಲಾಕೆ ಗೊಂಬೆ ಕಲೆಗೆ ಮರುಹುಟ್ಟು ನೀಡಿದ ರಂಗನಾಥರಾವ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡ ಮುದಿಗೆರೆಯಲ್ಲಿ ಜನಿಸಿದರು.

1944: ರಂಗಭೂಮಿ ಮತ್ತು ಚಲನಚಿತ್ರ ನಟ ವಜ್ರಮುನಿ ಬೆಂಗಳೂರಿನ ಕನಕಪಾಳ್ಯದಲ್ಲಿ ಜನಿಸಿದರು. ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ಇವರು ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹಲವು ಚಿತ್ರಗಳ ನಿರ್ಮಾಪಕರೂ ಆಗಿದ್ದ ವಜ್ರಮುನಿ ಅವರಿಗೆ ಉತ್ತಮ ಅಭಿನಯಕ್ಕಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮತ್ತು ಉತ್ತಮ ಚಲನಚಿತ್ರ ಸಾಧಕರಿಗೆ ನೀಡುಲಾಗುತ್ತಿರುವ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳು ಸಂದಿದ್ದವು.

1957: ಕನ್ನಡ ರಂಗಭೂಮಿ, ಚಲನಚಿತ್ರಗಳಲ್ಲಿ ಜನಪ್ರಿಯರಾದ ಉಮಾಶ್ರೀ ಅವರು ರಾಜಕಾರಣಿಗಳಾಗಿ, ಮಂತ್ರಿಗಳಾಗಿ ಸಹಾ ಹೆಸರಾಗಿದ್ದಾರೆ. ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೊಳಗೊಂಡ ಅನೇಕ ಗೌರವಗಳು ಅವರದ್ದಾಗಿವೆ.

1992: ನಂಬರ್ ಥಿಯರಿಯಲ್ಲಿ’ ವಿಶ್ವಪ್ರಸಿದ್ಧರಾದ ಭಾರತೀಯ ಗಣಿತಜ್ಞ ಕೆ.ಜಿ. ರಾಮನಾಥನ್ ಮುಂಬೈನಲ್ಲಿ ನಿಧನರಾದರು. ಇವರಿಗೆ ಪದ್ಮಭೂಷಣ ಗೌರವವೂ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಸಂದಿದ್ದವು.

2002: ಉರ್ದು ಕವಿ ಕೈಫಿ ಅಜ್ಮಿ ಮುಂಬೈಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಇವರು ಬಾಲಿವುಡ್ ನಟಿ ಶಬಾನಾ ಅಜ್ಮಿ ಅವರ ತಂದೆ. ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ರಾಷ್ಟ್ರೀಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

2008: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹಿರಿಯ ಗಾಯಕ, ಕಿರಾಣಾ- ಘರಾಣಾ ಸಂಗೀತ ಪ್ರಕಾರದ ಗುರು ಪಂಡಿತ್ ಫಿರೋಜ್ ದಸ್ತೂರ್ ಅವರು ತಮ್ಮ 89ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಧ್ರುವತಾರೆ ಸವಾಯಿ ಗಂಧರ್ವ ಅವರ ಅನುಯಾಯಿಗಳಲ್ಲಿ ಹಿರಿಯರಾದ ಪಂಡಿತ್ ದಸ್ತೂರ್ ಅವರು ಘರಾಣಾ ಪ್ರಕಾರದಲ್ಲಿ ವಿಖ್ಯಾತಿ ಪಡೆದಿದ್ದರು. ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ಸೇನ್ ಪ್ರಶಸ್ತಿ, ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿಗಳು ಸಂದಿದ್ದವು.