Categories
e-ದಿನ

ಮೇ-12

ಪ್ರಮುಖಘಟನಾವಳಿಗಳು:

304: ರೋಮನ್ ಚಕ್ರವರ್ತಿ ಡಯೋಕ್ಲೆಟಿಯನ್ ಹದಿನಾಲ್ಕು ವರ್ಷದ ಪಂಕ್ರಾಸ್ ಎಂಬ ಬಾಲಕನನ್ನು ಕ್ರಿಶ್ಚಿಯನ್ ಮತಕ್ಕೆ ಸೇರಿದ್ದಕ್ಕಾಗಿ ಶಿರಃಚ್ಛೇದನ ಮಾಡಿಸಿದ.

1797: ಫ್ರಾನ್ಸಿನ ಮೊದಲನೆಯ ನೆಪೋಲಿನ್ ವೆನಿಸ್ ನಗರವನ್ನು ಗೆದ್ದನು.

1926: ಇಟಾಲಿಯನ್ ನಿರ್ಮಿತ ನೋರ್ಗೆ ಆಕಾಶನೌಕೆಯು ಉತ್ತರ ಧ್ರುವದ ಮೇಲೆ ಹಾರಿದ ಪ್ರಥಮ ನೌಕೆ ಎನಿಸಿತು.

1952: ಗಜ ಸಿಂಗ್ ಅವರು ಜೋಧಪುರದ ಮಹಾರಾಜರಾದರು.

1952: ಸ್ವತಂತ್ರ ಭಾರತದ ಮೊತ್ತ ಮೊದಲನೆಯ ಸಂಸತ್ ಅಧಿವೇಶನ ಆರಂಭವಾಯಿತು. ಪಂಡಿತ್ ಜವಾಹರಲಾಲ್ ನೆಹರೂ ಮರುದಿನ ಸರ್ಕಾರವನ್ನು ರಚಿಸಿದರು. ಬಾಬು ರಾಜೇಂದ್ರ ಪ್ರಸಾದ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಕ್ರಮವಾಗಿ ಪ್ರಥಮ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದರು.

1965: ಸೋವಿಯತ್ ಬಾಹ್ಯಾಕಾಶ ನೌಕೆ ಲೂನಾ 5 ಚಂದ್ರನ ಮೇಲೆ ಕುಸಿಯಿತು.

1987: ಭಾರತದ ಎರಡನೆಯ ವಿಮಾನವಾಹಕ ನೌಕೆ ‘ಐ ಎನ್ ಎಸ್ ವಿರಾಟ್’ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು.

2006: ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾಗಿ ಅಗ್ರಹಾರ ಕೃಷ್ಣಮೂರ್ತಿ ಅವರ ಆಯ್ಕೆಯನ್ನು ಕೇಂದ್ರ ಸಂಸ್ಕೃತಿ ನಿರ್ದೇಶನಾಲಯ ಅನುಮೋದಿಸಿತು.

2006: ಕನ್ನಡದ ಹಿರಿಯ ವಿದ್ವಾಂಸ ಡಾ. ಎಲ್. ಬಸವರಾಜು ಅವರು 2005ನೇ ಸಾಲಿನ ‘ಭಾಷಾ ಸಮ್ಮಾನ್’ ಪ್ರಶಸ್ತಿಗೆ ಆಯ್ಕೆಯಾದರು.

2006: ಅಮೆರಿಕದ ಜಸ್ಟಿನ್ ಗಾಟ್ಲಿನ್ ಅವರು ದೋಹಾದಲ್ಲಿ ಐಎಎಎಫ್ ಸೂಪರ್ ಟೂರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು. ಗಾಟ್ಲಿನ್ ಅವರು 100 ಮೀಟರ್ ದೂರವನ್ನು 9.76 ಸೆಕೆಂಡುಗಳಲ್ಲಿ ಕ್ರಮಿಸಿ ಈ ದಾಖಲೆ ಸ್ಥಾಪಿಸಿದರು. ಈ ಹಿಂದೆ ಜಮೈಕಾದ ಅಸಾಫಾ ಪೊವೆಲ್ 9.77 ಸೆಕೆಂಡುಗಳ ದಾಖಲೆ ನಿರ್ಮಿಸಿದ್ದರು.

2008: ಚೀನಾದ ಸಿಚುವಾನ್ ಎಂಬಲ್ಲಿ 8 ಪ್ರಮಾಣದ ಭೂಕಂಪನ ಉಂಟಾಗಿ 69,000 ಜನ ನಿಧನರಾದರು.

2008: ಜೆಸ್ಸಿಕಾಲಾಲ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಮನು ಶರ್ಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು.

2008: ಮಧ್ಯಪ್ರದೇಶದ ಮೊರೆನ ಜಿಲ್ಲೆಯ ಹಾರ್ ಹಳ್ಳಿಯಲ್ಲಿ ಎರಡು ದಿನಗಳಿಂದ ಬಿಸಿಲಿನ ಝಳಕ್ಕೆ ಆರಕ್ಕೂ ಅಧಿಕ ನವಿಲುಗಳು ಸತ್ತವು. ಹಿಂದಿನ ವರ್ಷ ಕೂಡ ಅತಿಯಾದ ಬಿಸಿಲಿಗೆ 61 ನವಿಲುಗಳು ಸತ್ತಿದ್ದವು. ಜಿಲ್ಲೆಯಲ್ಲಿ 72 ಸಾವಿರ ನವಿಲುಗಳಿವೆ ಎಂದು ಅಂದಾಜಿಸಲಾಗಿದೆ.

2016: ಭಾರತದ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷರಾದ ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಂಡರು.

ಪ್ರಮುಖಜನನ/ಮರಣ:

1820: ಆಧುನಿಕ ದಾದಿ ಎಂದು ಪರಿಗಣಿತರಾಗಿರುವ ದಾದಿ, ಸಮಾಜ ಸೇವಾಕರ್ತೆ, ಸಂಖ್ಯಾಶಾಸ್ತ್ರಜ್ಞೆ, ದೀಪಧಾರಿಣಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಫ್ಲಾರೆನ್ಸ್ ನಗರದಲ್ಲಿ ಜನಿಸಿದರು.

1895: ಕೆನಡಾದ ರಸಾಯನ ಶಾಸ್ತ್ರಜ್ಞ ವಿಲ್ಲಿಯಮ್ ಜಿಯಾಯುಕ್ಯು ಅವರು ಕೆನಡಾದ ನಯಾಗರ ಫಾಲ್ಸ್ ಬಳಿಯಲ್ಲಿ ಜನಿಸಿದರು. ಸೊನ್ನೆ ಡಿಗ್ರಿ ಉಷ್ಣಾಂಶದಲ್ಲಿ ವಸ್ತುವಿನ ಗುಣಗಳನ್ನು (ಪ್ರಾಪರ್ಟಿಸ ಆಫ್ ಮ್ಯಾಟರ್ ಇನ್ ಆಬ್ಸಲ್ಯೂಟ್ ಜೀರೋ) ನಿರೂಪಿಸಿದ ಇವರಿಗೆ 1949 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1895: ತತ್ವಜ್ಞಾನಿ, ಉಪನ್ಯಾಸಕ ಮತ್ತು ಬರಹಗಾರ ಜಿಡ್ಡು ಕೃಷ್ಣಮೂರ್ತಿ ಅವರು ಆಂಧ್ರಪ್ರದೇಶದ ಮದನಪಲ್ಲೆ ಎಂಬಲ್ಲಿ ಜನಿಸಿದರು. ಮಾನಸಿಕವಾಗಿ ಕ್ರಾಂತಿ, ಮನಸ್ಸಿನ ಪ್ರಕೃತಿ, ಧ್ಯಾನ, ಪ್ರಶ್ನಿಸಿಕೊಳ್ಳುವಿಕೆ, ಮನುಷ್ಯರ ನಡುವಿನ ಸಂಬಂಧಗಳು ಮತ್ತು ಸಮಾಜದಲ್ಲಿನ ಆಮೂಲಾಗ್ರ ಬದಲಾವಣೆ ಮುಂತಾದ ವಿಚಾರಗಳಲ್ಲಿ ಅವರ ಚಿಂತನೆಗಳು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿವೆ.

1899: ಮೂಗೂರು ಶೈಲಿಯ ಭರತ ನಾಟ್ಯಕ್ಕೆ ಒಂದು ವ್ಯವಸ್ಥೆ ನಿರ್ಮಿಸಿದ ಜೇಜಮ್ಮನವರು ಮೈಸೂರು ಜಿಲ್ಲೆಯ ಮೂಗೂರು ಎಂಬಲ್ಲಿ ಜನಿಸಿದರು. 1963ರ ವರ್ಷದಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿ ಗೌರವ ಇವರಿಗೆ ಸಂದಿತ್ತು.

1910: ಇಂಗ್ಲಿಷ್ ಜೈವಿಕ ವಿಜ್ಞಾನಿ ಡೊರೋತಿ ಹಾಡ್ಜ್ಕಿನ್ ಅವರು ಕೈರೋದಲ್ಲಿ ಜನಿಸಿದರು. ಪ್ರೋಟೀನ್ ಕ್ರಿಸ್ಟಲೋಗ್ರಫಿ ಕುರಿತಾದ ಸಂಶೋಧನೆಗಾಗಿ ಈಕೆಗೆ 1964ರ ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತ್ತು.

1970: ನೊಬೆಲ್ ಪುರಸ್ಕೃತ ಜರ್ಮನ್ ಕವಿ ಮತ್ತು ನಾಟಕಕಾರ ನೆಲ್ಲಿ ಸಾಚ್ಸ್ ಅವರು ಸ್ವೀಡನ್ನಿನ ಸ್ಟಾಕ್ಹೋಮ್ ನಗರದಲ್ಲಿ ನಿಧನರಾದರು.

1994: ‘ಟೆಫ್ಲಾನ್’ ಸಂಶೋಧಕ ರಾಯ್. ಜೆ. ಪ್ಲುಂಕೆಟ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಎರಡನೇ ವಿಶ್ವಸಮರದ ಸಂದರ್ಭದಲ್ಲಿ ಈ ಹೊಸ ಪ್ಲಾಸ್ಟಿಕ್ಕನ್ನು ಲೋಹದ ಉಪಕರಣಗಳ ಸಂರಕ್ಷಣೆಗಾಗಿ ಬಳಸಲಾಯಿತು. ರೇಡಿಯೋ ವಿಕಿರಣ (ರೇಡಿಯಾಕ್ಟಿವ್) ವಸ್ತುಗಳ ಉತ್ಪಾದನೆಯಲ್ಲೂ ಬಳಸಲಾಯಿತು. ಡ್ಯೂಪಾಂಟ್ ಸಂಸ್ಥೆಯು 1960ರಲ್ಲಿ ಟೆಫ್ಲಾನ್ ಬಳಿದ ನಾನ್ ಸ್ಟಿಕ್ ಅಡಿಗೆ ಸಲಕರಣೆಗಳನ್ನು ತನ್ನ ಟ್ರೇಡ್ ಮಾರ್ಕ್ ಹಾಕಿ ಬಿಡುಗಡೆ ಮಾಡಿತು.

2008: ಜಮ್ಮುವಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕೆಜಿಎಫ್ ಇಪ್ಪತ್ತೊಂಬತ್ತರ ಹರಯದ ಯೋಧ ರಘುನಾಥನ್ ಗುಂಡಿನ ದಾಳಿಗೆ ಸಿಲುಕಿ ಸಾವನ್ನಪ್ಪಿದರು.

2009: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಖ್ಯಾತಿ ಪಡೆದಿದ್ದ ಸಖಾನ್ ದೊಸೊವ ತಮ್ಮ 130ನೇ ವಯಸ್ಸಿನಲ್ಲಿ ಲಂಡನ್ನಿನಲ್ಲಿ ನಿಧನರಾದರು. ಜನಗಣತಿಯಿಂದ ಬೆಳಕಿಗೆ ಬಂದ ಮಾಹಿತಿಯಂತೆ ದೊಸೊವ ಜನ್ಮ ದಿನಾಂಕ 27 ನೇ ಮಾರ್ಚ್ 1879 ಎಂದು ಅಧಿಕಾರಿಗಳು ದೃಢಪಡಿಸಿದ್ದಾಗಿ ಡೇಲಿ ಮೇಲ್ ಪತ್ರಿಕೆ ವರದಿ ಮಾಡಿತು.

2016: ಜನಪ್ರಿಯ ವೀಕ್ಷಕವಿವರಣೆಗಾರ ಹಾಗೂ ಕ್ರೀಡಾ ಬರಹಗಾರ ಟೋನಿ ಕೋಜಿಯರ್ ತಮ್ಮ 75ನೇ ವಯಸ್ಸಿನಲ್ಲಿ ಬಾರ್ಬಡೋಸ್ ನಗರದಲ್ಲಿ ನಿಧನರಾದರು.