(ಕ್ರಿ.ಶ. ೧೭೯೧-೧೮೬೭) (ವಿದ್ಯುದ್ವಿಜನ ನಿಯಮಗಳು)

ವಿದ್ಯುದ್ವಿಭಜನ ನಿಯಮಗಳನ್ನು ಕಂಡು ಹಿಡಿದು ವಿವ್ವವಿಖ್ಯಾತರಾದ ವಿಜ್ಞಾನಿ ಮೈಕೇಲ್ ಫ್ಯಾರಡೆ ಸೆಪ್ಟೆಂಬರ್ ೨೨, ೧೭೯೧ರಂದು ಕಮ್ಮಾರ ಕುಟುಂಬದಲ್ಲಿ ಜನಿಸಿದರು. ಆತನ ತಂದೆ ಅತ್ಯಂತ ಬಡವ. ಹೊಟ್ಟೆಪಾಡಿಗಾಗಿ ಯಾರ್ಕ್‌ಷೈರಿನಿಂದ ಲಂಡನಿಗೆ ಹೋದ. ಉದರಂಭರಣೆಗಾಗಿ ಫ್ಯಾರಡೆ ಕಿರುವಯಸ್ಸಿನಲೆ ದುಡಿಯಬೇಕಾಯಿತು. ಪುಸ್ತಕ ವ್ಯಾಪಾರಿಯ ಸ್ಟೋರಿನಲ್ಲಿ ಪುಸ್ತಕಗಳಿಗೆ ರಟ್ಟು ಸಾಕುವ ಕೆಲಸ ಸೇರಿದ. ಈ ಉದ್ಯೋಗ ಆತನ ಬದುಕನೆ ಬದಲಿಸಿತು. ಅನಾಯಾಸವಾಗಿ ಕೈಗೆ ಎಟಕುತ್ತಿದ್ದ ಪುಸ್ತಕಗಳ ಪುಟಗಳನ್ನು ತಿರುವಿಹಾಕಿ ಅಪಾರ ಜ್ಞಾನ ಬೆಳೆಸಿಕೊಂಡ. ವಿಜ್ಞಾನದ ಪುಸ್ತಕಗಳನ್ನು ಓದಿದದ ಮೇಲಂತೂ ತಾನೂ ಏನಾದರೂ ಮಾಡಿತೋರಿಸಬೇಕೆಂಬ ಛಲ ಆತನಲ್ಲಿ ಮೂಡಿತು.

ವಿಜ್ಞಾನಿ ಹಂಫ್ರಿ ಡೇವಿ ಯೂರೋಪಿನಲ್ಲಿ ಪ್ರವಾಸ ಕೈಗೊಂಡಿದ್ದಾಗ ಫ್ಯಾರಡೆ ಅವರ ಆಳಾಗಿ ದುಡಿದರು. ಅನೇಕ ವಿಜ್ಞಾನಿಗಳ ಸಂಪರ್ಕ ಪಡೆದರು. ಈ ಅವಧಿಯಲೆ ಆತ ಭೌತವಿಜ್ಞಾನ ಮತ್ತು ರಸಾಯನಶಾಸ್ತ್ರಗಳಲ್ಲಿ ಮೂಲಭೂತ ಸಂಶೋಧನೆಗಳನ್ನು ಮಾಡತೊಡಗಿದರು. ಡೇವಿ ಗಣಿಕೆಲಸಗಾರರಿಗಾಗಿ ತಯಾರಿಸಿದ್ದ ಸುರಕ್ಷತಾ ದೀಪದಲ್ಲಿ ಈತ ಉತ್ತಮ ಸುಧಾರಣೆಗಳನ್ನು ಮಾಡಿಕೊಟ್ಟರು.

ವಿದ್ಯುತ್ತಿನಿಂದ ಕಾಂತ ಶಕ್ತಿಯನ್ನೂ ಕಾಂತ ಶಕ್ತಿಯಿಂದ ವಿದ್ಯುತ್ತನ್ನೂ ಉತ್ಪಾದಿಸಲು, ಎಂದರೆ ಒಂದು ಶಕ್ತಿಯನ್ನು ಅಥವಾ ಬಲವನ್ನು ಇನ್ನೊಂದು ಶಕ್ತಿ ಅಥವಾ ಬಲವಾಗಿ ಪರಿವರ್ತಿಸಲು ಸಾಧ್ಯ ಎಂಬುದನ್ನು ಮೈಕೇಲ್ ಫ್ಯಾರಡೆ ಪ್ರಯೋಗಗಳಿಂದ ತೋರಿಸಿಕೊಟ್ಟರು. ಇದು ಆತನ ಒಂದು ಬಹುದೊಡ್ಡ ಸಾಧನೆ. ವಿದ್ಯುದ್ವಿಭಜನೆಯ ನಿಯಮಗಳನ್ನು ಕಂಡು ಹಿಡಿದದ್ದು ಈತನ ಇನ್ನೊಂದು ಮಹತ್ವದ ಸಾಧನೆ. ಅಲ್ಲದೆ, ಒಳ್ಳೆಯ ಉಕ್ಕನ್ನು ತಯಾರಿಸುವ ಪ್ರಯತ್ನದಲ್ಲೂ ಆತ ತೊಡಗಿದ್ದರು ಮತ್ತು ಅದರಲ್ಲಿ ಒಂದಷ್ಟು ಯಶಸ್ಸು ಸಂಪಾದಿಸಿದ್ದರು.

ಇಂಥ ದೊಡ್ಡ ವಿಜ್ಞಾನಿಯಾಗಿಯೂ ಆತ ಆಡಂಬರದ ಬದುಕು ನಡೆಸಲಿಲ್ಲ. ಮೈಕೇಲ್ ಫ್ಯಾರಡೆ ತೀವ್ರ ಅಸ್ವಸ್ಥತೆಯಿಂದಾಗಿ ಆಗಸ್ಟ್ ೨೫, ೧೮೬೭ರಂದು ನಿಧನ ಹೊಂದಿದರು.