ಬಾಲಕ ಮಿಥಿಲಾಶರಣ ಬಾಲ್ಯದಿಂದಲೂ ಮೇಧಾವಿ. ಪ್ರಾಥಮಿಕ ವಿದ್ಯಾಭ್ಯಾಸ ಚಿರಗಾಂವ್‌ನಲ್ಲಿ ಮುಗಿಯಿತು. ತಂದೆಯವರಿಗೆ ಹುಡುಗನು ಚೆನ್ನಾಗಿ ಓದಿ ಮುಂದೆ ಡೆಪ್ಯುಟಿ ಕಲೆಕ್ಟರ್ ಆಗಬೇಕೆಂಬ ಆಸೆ. ಆದರಿಂದಾಗಿ ಝಾನ್ಸಿಯಲ್ಲಿ ಮ್ಯಾಕ್‌ಡೊನಾಲ್ಡ್ ಪ್ರೌಢಶಾಲೆಗೆ ಸೇರಿಸಿದರು. ಆದರೆ ಹುಡುಗನಿಗೆ ಶಾಲೆಯ ವ್ಯಾಸಂಗಕ್ಕಿಂತ ಗಾಳೀಪಟ ಹಾರಿಸುವುದು, ಗಾಲಿ ಓಡಿಸುವುದು, ಚಿನ್ನಿದಾಂಡು ಆಡುವುದು ಮತ್ತು ನಾಟಕಗಳನ್ನು ನೋಡುವುದರಲ್ಲಿ ಹೆಚ್ಚು ಆಸಕ್ತಿ. ಇದರಿಂದಾಗಿ ಶಾಲೆಯ ವ್ಯಾಸಂಗದಲ್ಲಿ ಹುಡುಗ ಹಿಂದೆ ಬಿದ್ದ.

ತಂದೆಯವರಿಗೆ ವಿಚಾರ ತಿಳಿದು ಬಹಳ ಯೋಚನೆ ಯಾಯಿತು. ಅವರು ಒಂದು ಸಲ ಹುಡುಗನನ್ನು ವಿಚಾರಿಸಲು ತಾವೇ ಶಾಲೆಗೆ ಬಂದರು. ಶಾಲೆ ಮುಗಿದು ಬಹಳ ಹೊತ್ತಾಗಿದ್ದರೂ ಹುಡುಗ ಮನೆಗೆ ಬಂದಿರಲಿಲ್ಲ.

ಓದಿನಲ್ಲಿ ಮೈಮರೆತ ಹುಡುಗ

ಬಾಲಕ ಮಿಥಿಲಾಶರಣನಿಗೆ ವೀರರಸ ಪ್ರಧಾನವಾದ ಗೀತೆಗಳೆಂದರೆ ಪಂಚಪ್ರಾಣ. ಅವುಗಳನ್ನು ಓದಲು ಅವನ ಮನಸ್ಸು ಸದಾ ಹಾತೊರೆಯುತ್ತಿತ್ತು. ಅವುಗಳನ್ನು ಪಡೆಯಲು ದಿನವಿಡೀ ಪ್ರಯತ್ನ ಪಡುತ್ತಿದ್ದುದೂ ಉಂಟು. ಒಂದು ವೇಳೆ ಸಿಕ್ಕಿತೆಂದರೆ ಅದನ್ನು ಮನೆಗೆ ತಂದು ಓದುವಷ್ಟು ತಾಳ್ಮೆಯಿಲ್ಲ. ಅದು ಸಿಕ್ಕಿದ ಕೂಡಲೇ ರಸ್ತೆಯ ಬದಿಯಲ್ಲೋ ಯಾವುದೋ ಜಗುಲಿಯ ಮೇಲೋ ಅಥವಾ ಮರದ ಕೆಳಗೋ ಕುಳಿತು ಓದಲು ತೊಡಗುತ್ತಿದ್ದನು. ಕೆಲವೊಮ್ಮೆ ಗಟ್ಟಿಯಾಗಿ ಹಾಡಲೂ ಪ್ರಾರಂಭಿಸುತ್ತಿದ್ದನು.

ತಮ್ಮ ಮಗನ ಸ್ವಭಾವವನ್ನು ತಿಳಿದ ತಂದೆಯವರು ಅವನನ್ನು ಹುಡುಕುತ್ತಾ ಹೊರಟರು. ಶಾಲೆಯ ಹತ್ತಿರ ಒಂದು ಅರಳೀ ಮರದ ಕೆಳಗೆ ಓದುತ್ತ ಕುಳಿತಿರುವ ತಮ್ಮ ಮಗನನ್ನು ನೋಡಿದರು. ಅವನ ಹತ್ತಿರಕ್ಕೆ ಹೋದರೂ ಹುಡುಗನಿಗೆ ತಿಳಿಯಲಿಲ್ಲ. ಕೊಂಚ ಹೊತ್ತು ಹಾಗೆಯೇ ನಿಂತು ಯೋಚಿಸಿದ ತಂದೆಯವರು ಪ್ರೀತಿ ಯಿಂದ ಮಗನ ಬೆನ್ನನ್ನು ನೇವರಿಸಿ, ಅವನ ಕೈಯಿಂದ ಪುಸ್ತಕ ತೆಗೆದುಕೊಂಡು ನೋಡಿದರು.

ಹುಡುಗನು ತಂದೆಯವರನ್ನು ನೋಡಿ ತಕ್ಷಣವೇ ಗಡಿಬಿಡಿಯಿಂದ ಎದ್ದು ನಿಂತು ಅವರ ಕಾಲು ಮುಟ್ಟಿ ನಮಸ್ಕರಿಸಿದ. ತಂದೆಯವರು ಬೈಯಬಹುದೆಂಬ ಭಯ ಹುಡುಗನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆದರೆ ತಂದೆಯವರು ಅದನ್ನು ಗಮನಿಸಿ ನಕ್ಕು, ಪ್ರೀತಿಯಿಂದ ಹುಡುಗನ ತಲೆಯನ್ನು ಸವರಿ ಮನೆಗೆ ಕರೆತಂದರು.

ಮನೆಯಲ್ಲಿ ತುಂಬ ವಿನಯದಿಂದ ಹುಡುಗನು ತಂದೆಯವರ ಮುಂದೆ ನಿಂತು, ‘ತನಗೆ ಶಾಲೆಯ ಪಾಠಕ್ರಮದಲ್ಲಿ ಆಸಕ್ತಿ ಇಲ್ಲ’ ಎಂದು ಹೇಳಿದ. ತಂದೆಯವರು ಯಾವ ಮಾತೂ ಆಡದ ಮಗನ ಮುಖವನ್ನು ಒಂದು ಬಾರಿ ನೊಡಿ ಮುಗುಳ್ನಕ್ಕು ಸುಮ್ಮನಾದರು. ಅಲ್ಲಿಗೆ ಬಾಲಕ ಮಿಥಿಲಾಶರಣನ ಶಾಲೆಯ ಜೀವನ ಮುಗಿಯಿತು.

ತಂದೆ-ತಾಯಿ

ಮೈಥಿಲೀಶರಣರು ೧೮೮೬ರ ಆಗಸ್ಟ್ ೩ ರಂದು ಝಾನ್ಸಿ ಜಿಲ್ಲೆಯ ಚಿರಗಾಂವ್ ಎಂಬ ಹಳ್ಳಿಯಲ್ಲಿ ಹುಟ್ಟಿ ದರು. ಇವರ ಕುಲದೇವತೆ ಸೀತೆ. ಆದ್ದರಿಂದ ಇವರಿಗೆ ‘ಮಿಥಿಲಾಧಿಪ ನಂದಿನೀಶರಣ’ ಎಂದು ನಾಮಕರಣ ಮಾಡಲಾಯಿತು. ಮನೆಯಲ್ಲಿ ಪ್ರೀತಿಯಿಂದ ಇವರು ‘ಮಿಥಿಲಾಶರಣ’ರಾಗಿ ಆಮೇಲೆ ‘ಮೈಥಿಲೀಶರಣ’ರಾದರು. ಕಾಲಾಂತರದಲ್ಲಿ ‘ಮೈಥಿಲೀಶರಣ’ ಎಂಬ ಹೆಸರೇ ಸ್ಥಿರವಾಯಿತು.

ಮೈಥಿಲೀಶರಣರ ತಂದೆ ಸೇಠ್ ರಾಮಚರಣ್; ತಾಯಿ ಸರಯೂ ದೇವಿ. ಸೇಠ್ ರಾಮಚರಣರು ದೊಡ್ಡ ದೈವಭಕ್ತರು. ತುಲಸೀದಾಸರ ‘ರಾಮಚರಿತ ಮಾನಸ’, ‘ವಿನಯಪತ್ರಿಕಾ’ ಮತ್ತು ‘ಅಧ್ಯಾತ್ಮರಾಮಾಯಣ’ಗಳ ಸಪ್ತಾಹ ಪಾರಾಯಣ ಅವರ ಮನೆಯಲ್ಲಿ ಮತ್ತೆಮತ್ತೆ ನಡೆಯುತ್ತಿತ್ತು. ಹಿಂದೀ ಸಾಹಿತ್ಯ ಮತ್ತು ಸಂಗೀತದಲ್ಲಿ ರಾಮಚರಣರಿಗೆ ವಿಶೇಷ ಆಸಕ್ತಿ. ಅವರು ಸ್ವತಃ ಕವಿಗಳು. ‘ಕನಕ ಲತಾ’ ಎಂಬ ಕಾವ್ಯನಾಮದಲ್ಲಿ ಕವಿತೆಗಳನ್ನು ರಚಿಸುತ್ತಿದ್ದರು.

ಅರಳೀಮರದ ಕೆಳಗೆ ಹುಡುಗ ಓದುತ್ತ ಕುಳಿತಿದ್ದ

ಭಕ್ತಿ ಮತ್ತು ಸಾಹಿತ್ಯಗಳ ಸಂಗಮವಾಗಿದ್ದ ರಾಮಚರಣ ಸೇಠರ ಮನೆಯು ಯಾವಾಗಲೂ ಭಕ್ತರು ಮತ್ತು ಸಾಹಿತ್ಯ ಪ್ರೇಮಿಗಳಿಂದ ತುಂಬಿರುತ್ತಿತ್ತು. ಈ ಪವಿತ್ರ ವಾತಾವರಣದಿಮದಾಗಿ ಅವರ ಮನೆಯು ಜನರಿಗೆ ಆದರ ಮತ್ತು ಪ್ರೀತಿಯ ತೌರಾಗಿತ್ತು.

ಸೇಠ್ ರಾಮಚರಣರಿಗೆ ಮಹಾರಾಮದಾಸ್, ರಾಮಕಿಶೋರ್, ಮೈಥಿಲೀಶರಣ, ಸಿಯಾರಾಮಶರಣ ಮತ್ತು ಚಾರುಶೀಲಾಶರಣ ಎಂಬ ಐವರು ಪುತ್ರರು. ಇವರಲ್ಲಿ ಮೈಥಿಲೀಶರಣ ಮೂರನೇ ಮಗ.

ಇವರನ್ನು ಮತ್ತು ಸಿಯಾರಾಮಶರಣರನ್ನು ಬಿಟ್ಟು ಉಳಿದವರು ವಂಶಪಾರಂಪರ್ಯವಾಗಿ ಬಂದ ಲೇವಾದೇವಿ ಮತ್ತು ವ್ಯವಸಾಯವನ್ನು ಅವಲಂಬಿಸಿದರು. ಮೈಥಿಲೀಶರಣ ಮತ್ತು ಸಿಯಾರಾಮಶರಣರು ಕಾವ್ಯವನ್ನೇ ತಮ್ಮ ಬದುಕನ್ನಾಗಿ ಮಾಡಿಕೊಂಡರು.

ತಂದೆ-ತಾಯಿಯರ ಪ್ರಭಾವ

ಮೈಥಿಲೀಶರಣ ಗುಪ್ತರ ತಾಯಿ ಸರಯೂ ದೇವಿ ವಾತ್ಸಲ್ಯಮಯಿ. ಅವರಿಗೆ ಧರ್ಮದಲ್ಲಿ ಬಹಳ ಶ್ರದ್ಧೆ. ಯಾವಾಗಲೂ ಒಂದಲ್ಲ ಒಂದು ವ್ರತ ಹಿಡಿಯುತ್ತಿದ್ದರು. ಮೈಥಿಲೀಶರಣರಿಗೆ ನಮ್ಮ ತಾಯಿ ಹಿಡಿದ ಎಲ್ಲ ವ್ರತಗಳ ಹೆಸರು ಮರೆತಿದ್ದರೂ ಅವರು ಕೊಡುತ್ತಿದ್ದ ಪ್ರಸಾದ ಮಾತ್ರ ಕೊನೆಯವರಿಗೂ ಜ್ಞಾಪಕವಿತ್ತು.

ಬಾಲಕರಾಗಿದ್ದಾಗ ಅವರ ತಾಯಿ ಒಂದು ವ್ರತವನ್ನು ಹಿಡಿದರೆಂದರೆ ಅದು ಮುಗಿದು ತಾಯಿ ಕೊಡುವ ಪ್ರಸಾದಕ್ಕಾಗಿ ಕಾದಿರುತ್ತಿದ್ದ ನೆನಪು ಮೈಥಿಲೀಶರಣರ ಮನಸ್ಸಿನಲ್ಲಿ ಎಂದೂ ಹಸಿರಾಗಿತ್ತು.

ಸರಿಯೂ ದೇವಿಯವರು ಅಷ್ಟು ದೊಡ್ಡ ಮನೆಯ ಒಡತಿಯೆಂದು ಒಂದು ದಿನವೂ ಕುಳಿತವರಲ್ಲ. ಅವರು ಮನೆಯವರ ಮತ್ತು ಮನೆಗೆ ಬಂದ ಅತಿಥಿಗಳ ಸೇವೆಯಲ್ಲೇ ಆನಂದ ಪಡುವ ತೃಪ್ತಜೀವಿ. ಮನೆ ಕೆಲಸದಿಂದ ಬಿಡುವು ಸಿಕ್ಕಾಗಲೆಲ್ಲಾ ರಾಮಾಯಣವನ್ನು ಓದುತ್ತಿದ್ದರು. ತಾಯಿ ಯವರ ಗುಣಗಳಿಂದಾಗಿ ಮೈಥಿಲೀಶರಣರ ಜೀವನದಲ್ಲಿ ಹೆಂಗಸರ ಬಗೆಗೆ ಗಾಢವಾದ ಗೌರವ ಮೂಡಿಬಂದಿತು.

ತಂದೆ ರಾಮಚರಣ ಸೇಠರ ಪ್ರಭಾವವೂ ಮೈಥಿಲೀ ಶರಣರ ವ್ಯಕ್ತಿತ್ವವನ್ನು ನಿರ್ಮಿಸಲು ಬಹಳ ಮಟ್ಟಿಗೆ ಕಾರಣವಾಯಿತು. ತಂದೆಯವರು ಚಿರಗಾಂವ್‌ನ ಸುತ್ತ ಮುತ್ತಲ್ಲೆಲ್ಲಾ ತಮ್ಮ ಉದಾರ ಮತ್ತು ಆದರ್ಶಮಯ ಜೀವನದಿಂದಾಗಿ ಬಹಳ ಜನಪ್ರಿಯರಾಗಿದ್ದರು. ತಮ್ಮ ಲೇವಾದೇವಿಯಲ್ಲೂ ಬಹಳ ಸೌಜನ್ಯ ಮತ್ತು ಔದಾರ್ಯ ವನ್ನು ತೋರಿಸುವ ಮನೋಧರ್ಮ ಅವರದು.

ಅತಿಥಿ ಸತ್ಕಾರವೆಂದರೆ ಅವರಿಗೆ ಬಹಳ ಸಂಭ್ರಮ. ಅತಿಥಿಗಳಿಗೆ ಊಟ-ಉಪಚಾರಗಳಾದ ಮೇಲೆ ತಮ್ಮ ಕಾವ್ಯಗಳನ್ನು ಓದಿ ಅವರಿಂದ ಕಾವ್ಯಗಳನ್ನು ಓದಿಸಿ ಆನಂದ ಪಡುತ್ತಿದ್ದರು. ಅವರಲ್ಲಿಗೆ ಬರುವ ಅತಿಥಿಗಳಿಗೆ ಎಲ್ಲ ರೀತಿಯಲ್ಲೂ ರಸದೌತಣ. ಕುಲದೇವತೆ ಸೀತೆಯ ಧ್ಯಾನ ವಿಲ್ಲದೆ ಅವರು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ತಂದೆಯವರಂತೆ, ಮಗ ಮೈಥಿಲೀಶರಣರೂ ದೈವ ಭಕ್ತಿ, ಸಾಹಿತ್ಯದಲ್ಲಿ ಅಭಿರುಚಿ, ಜನರಲ್ಲಿ ಸ್ನೇಹ ಮತ್ತು ಆದರ ಹಾಗೂ ತಮ್ಮ ವಿಚಾರದಲ್ಲಿ ದೃಢತೆಯನ್ನು ಮೈಗೂಡಿಸಿಕೊಂಡರು.

ತಂದೆ-ತಾಯಿಯರ ವಾತ್ಸಲ್ಯದಲ್ಲಿ ಹೆಚ್ಚು ದಿನಗಳು ಬಾಳುವ ಸದವಕಾಶ ಮೈಥಿಲೀಶರಣರಿಗೆ ಉಳಿಯಲಿಲ್ಲ. ಅವರಿಗೆ ಹದಿನೇಳು ವರ್ಷವಾಗಿದ್ದಾಗ ಅವರ ತಂದೆ ಸ್ವರ್ಗಸ್ಥರಾದರು. ಇದಾದ ಎರಡು ವರ್ಷಗಳಲ್ಲೇ ತಾಯಿಯವರೂ ತೀರಿಕೊಂಡರು.

ಅಲ್ಲಿಂದ ಮುಂದೆ ಮೈಥಿಲೀಶರಣರಿಗೆ ಅವರ ಚಿಕ್ಕಪ್ಪ ಭಗವಾನ್‌ದಾಸರೇ ಪೋಷಕರಾದರು. ಗೃಹಕೃತ್ಯದ ಅನೇಕ ತೊಂದರೆಗಳಿದ್ದರೂ ಚಿಕ್ಕಪ್ಪನವರು ಮೈಥಿಲೀಶರಣರ ಸಾಹಿತ್ಯಾಭ್ಯಾಸಕ್ಕೆ ಎಲ್ಲ ಅನುಕೂಲ ಒದಗಿಸಿಕೊಟ್ಟರು. ಅಲ್ಲದೆ ಆರ್ಥಿಕ ಮುಗ್ಗಟ್ಟಿನಲ್ಲೂ ‘ಜಯದ್ರಥ ವಧ್’ ಮುಂತಾದ ಕಾವ್ಯಗಳನ್ನು ಪ್ರಕಟಿಸಿದರು.

ವಿದ್ಯಾಭ್ಯಾಸ

ಮೈಥಿಲೀಶರಣರ ಪ್ರಾಥಮಿಕ ವಿದ್ಯಾಭ್ಯಾಸವು ಚಿರಂಗಾವ್‌ನ ಒಂದು ಸಣ್ಣ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಇಲ್ಲೇ ಅವರಿಗೆ ಮುನ್‌ಶಿ ಅಜಮೇರಿ ಎಂಬ ಒಬ್ಬ ಸಾಹಿತಿ ಪರಿಚಯವಾಯಿತು. ಅಜಮೇರಿಯವರು ಮೈಥಿಲೀಶರಣರಿಗಿಂತ ಮೂರು ತರಗತಿಗಳು ಮುಂದಿದ್ದರು.

ಅವರು ಮುಸ್ಲಿಮರಾದರೂ ಬಹಳ ದೊಡ್ಡ ವೈಷ್ಣವ ಭಕ್ತರು. ಅನೇಕ ಹಿಂದಿ ಕವಿತೆಗಳು ಮತ್ತು ಸಂಸ್ಕೃತ ಶ್ಲೋಕಗಳನ್ನು ಅವರು ಬಾಯಿಪಾಠ ಮಾಡಿದ್ದರು. ಅಜಮೇರಿಯವರ ಈ ಬಾಲ್ಯ ಸ್ನೇಹದಿಂದಾಗಿ ಮೈಥಿಲೀಶರಣರ ಹೃದಯ ದಲ್ಲಿ ಕಾವ್ಯ ಬೀಜ ಅಂಕುರಿಸಿತು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದನಂತರ ಮೈಥಿಲೀಶರಣರು ಚಿರಗಾಂವ್‌ನಿಂದ ಸ್ವಲ್ಪ ದೂರದಲ್ಲಿದ್ದ ಝಾನ್ಸಿಯಲ್ಲಿ ಮ್ಯಾಕ್‌ಡೊನಾಲ್ಡ್ ಪ್ರೌಢಶಾಲೆಗೆ ಸೇರಿದರು.

ಆದರೆ ಆಗ ಅವರಿಗೆ ಪಾಠಕ್ಕಿಂತ ಆಟದ ಮೇಲೇ ಹೆಚ್ಚು ಮನಸ್ಸಿತ್ತು. ಅಲ್ಲದೆ ‘ಆಲ್ಹಾ, ಎಂಬ ಬಗೆಯ ಗೀತೆಗಳ ಗೀಳಿನಿಂದಾಗಿ ಅವರ ಓದು ಮುಗ್ಗರಿಸಿತು. ಹೀಗಾಗಿ ಪ್ರೌಢಶಾಲಾ ವಿದ್ಯಾಭ್ಯಾಸ ಪೂರ್ಣಗೊಳಿಸದೆ ಮೈಥಿಲೀ ಶರಣರು ಚಿರಗಾಂವ್‌ಗೆ ಮರಳಿದರು.

ಮನೆಯಲ್ಲಿಯೇ ತಂದೆಯವರು ಮಗನ ಸಂಸ್ಕೃತ ಮತ್ತು ಹಿಂದಿಯ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿದರು. ತಂದೆಯ ನಿಧನದ ತರುವಾಯ ಚಿಕ್ಕಪ್ಪನವರು ಮೈಥಿಲೀ ಶರಣರ ವಿದ್ಯಾಭ್ಯಾಸಕ್ಕೆ ಗಮನ ಕೊಟ್ಟರು. ಆದ್ದರಿಂದ ಮನೆಯಲ್ಲೇ ಇದ್ದು ಮೈಥಿಲೀಶರಣರು ಹಿಂದಿ, ಸಂಸ್ಕೃತ, ಬಂಗಾಳಿ, ಉರ್ದು, ಮರಾಠಿ ಮತ್ತು ಇಂಗ್ಲಿಷ್ ಭಾಷೆ ಗಳನ್ನು ಕಲಿತರು.

ಹೃದಯವಂತಿಕೆಯ ಆವರಣ

ಮೈಥಿಲೀಶರಣರಿಗೆ ಆಗಿನ ಕಾಲದ ಪದ್ಧತಿಯಂತೆ ಅವರ ಚಿಕ್ಕಂದಿನಲ್ಲೇ ಮದುವೆ ಆಯಿತು. ಆದರೆ ದಾಂಪತ್ಯ ಜೀವನ ಅಷ್ಟು ಸುಖಮಯವಾಗಿರಲಿಲ್ಲ. ಜೀವನದಲ್ಲಿ ಅವರಿಗೆ ಮೂರು ಮದುವೆಗಳಾದವು. ಆದರೆ ಅವರಿಗೆ ಆದ ಮಕ್ಕಳಲ್ಲಿ ಉಳಿದವನೊಬ್ಬನೇ – ಊರ್ಮಿಲಾಚರಣ.

ಮೈಥಿಲೀಶರಣರ ಮನೆ ತುಂಬಿದ ಮನೆ. ಅವರದು ಅವಿಭಕ್ತ ಕುಟುಂಬ. ಈ ಇಪ್ಪತ್ತನೇ ಶತಮಾನದಲ್ಲೂ ಅವಿಭಕ್ತ ಕುಟುಂಬಿಯಾಗಿ ಮೆರೆದ ಗುಪ್ತರ ಬಾಳು ಅನೇಕರಿಗೆ ಒಂದು ಕೌತುಕದ ಸಂಗತಿ. ಅಂತೆಯೇ ಅವರ ಚಿಕ್ಕಪ್ಪ ಮತ್ತು ಅಣ್ಣತಮ್ಮಂದಿರೂ ಕುಟುಂಬದ ಹೊಣೆಯನ್ನು ಹೊರುವುದರಲ್ಲಿ ಎಂದಿಗೂ ಗೊಣಗಿದ ವರಲ್ಲ. ಅವರೆಲ್ಲ ಮನೆಯ ವ್ಯಾಪಾರ ವಹಿವಾಟುಗಳನ್ನು ತಾವೇ ವಹಿಸಿಕೊಂಡು ಇವರಿಗೆ ಮತ್ತು ಇವರ ತಮ್ಮ ಸಿಯಾರಾಮ ಶರಣರಿಗೆ ಸಾಹಿತ್ಯಸಾಧನೆ ಮಾಡಲು ಎಲ್ಲಾ ಅನುಕೂಲಗಳನ್ನೂ ಮಾಡಿಕೊಟ್ಟರು. ಎಂದಮಾತ್ರಕ್ಕೆ ಮೈಥಿಲೀಶರಣರು ನಿತ್ಯಜೀವನದಲ್ಲಿ ಅನಾಸಕ್ತರೆಂದಾಗಲೀ ಅಥವ ಹೊಸತನ್ನು ಬರಮಾಡಿಕೊಳ್ಳುವುದರಲ್ಲಿ ಹಿಂಜರಿ ಯುತ್ತಿದ್ದರೆಂದಾಗಲೀ ಹೇಳುವಂತಿಲ್ಲ. ಮನೆಯ ವಹಿವಾಟು, ಕಸಬು ಮತ್ತು ಕೃಷಿ ಎಲ್ಲದರಲ್ಲೂ ಅವರಿಗೆ ಆಸಕ್ತಿ. ಅದರ ಬಗ್ಗೆ ಅವರ ಸಲಹೆ ಮನೆಯ ಎಲ್ಲರಿಗೂ ಬೇಕು. ಹಳತು, ಹೊಸತು ಇವೆರಡರ ಸಂಗಮ ಅವರ ವ್ಯಕ್ತಿತ್ವದ ವೈಶಿಷ್ಟ್ಯ. ಆದರೂ ಹಿಂದಿನ ಕಾಲದ್ದು ಎಂದರೆ ಅವರಿಗೆ ಒಲವು ಹೆಚ್ಚು.

ಚಿರಂಗಾವ್‌ನಲ್ಲಿ ಮೈಥಿಲೀಶರಣರ ಮನೆ ಎಂದರೆ ಒಂದು ಧರ್ಮಛತ್ರ. ಇಂಥ ದೊಡ್ಡ ಕವಿಯ ಮನೆಗೆ ಹೋಗಲು ಯಾವ ರೀತಿಯ ಪೂರ್ವಸೂಚನೆ ಅಥವ ಅನುಮತಿಯಾಗಲೀ ಬೇಕಿರಲಿಲ್ಲ. ಕೆಲವೊಮ್ಮೆ ಅವರ ಮನೆಯಲ್ಲಿ ಅತಿಥಿಗಳ ಸಂಖ್ಯೆ ಎಷ್ಟೆಂಬುದು ಊಟಕ್ಕೆ ಕುಳಿತಾಗಲೇ ಗೊತ್ತಾಗಬೇಕು. ಅವರ ಮನೆಯಲ್ಲಿ ಅಂದಿನ ಹಿರಿಯ ಸಾಹಿತಿಗಳು ಮತ್ತು ರಾಜಕೀಯದಲ್ಲಿನ ಗಣ್ಯವ್ಯಕ್ತಿ ಗಳಲ್ಲಿ ಅತಿಥ್ಯ ಸ್ವೀಕರಿಸದವರು ಅತಿವಿರಳ. ಪ್ರೇಮ್‌ಚಂದ್, ಜೈನೇಂದ್ರ ಕುಮಾರ್, ಮಹಾದೇವಿ ವರ್ಮ, ಗಾಂಧೀಜಿ, ಜವಾಹರ್‌ಲಾಲ್ ನೆಹರು, ವಿನೋಬಾ ಭಾವೆ, ಡಾಕ್ಟರ್ ಕೇಸ್ಕರ್, ಗಣೇಶ ಶಂಕರ ವಿದ್ಯಾರ್ಥಿ ಮುಂತಾದ ಅನೇಕರು ಮೈಥಿಲೀಶರಣರ ಮನೆಯ ಆತಿಥ್ಯದ ಸವಿಯನ್ನುಂಡವರು.

ಕಾವ್ಯ ಜೀವನ

ಗುಪ್ತರ ತಂದೆಯವರ ಕಾಲದಿಂದಲೂ ಅವರ ಮನೆಯು ಸಾಹಿತ್ಯ, ಸಂಗೀತ ಮತ್ತು ಭಕ್ತಿಯ ತ್ರಿವೇಣಿ ಸಂಗಮ, ತಂದೆಯವರ ಕಾವ್ಯ ಪ್ರತಿಭೆ, ಸರಳ ಸಜ್ಜನಿಕೆ, ಭಕ್ತಿ ಮತ್ತು ನಮ್ಮಾ ಸ್ವಭಾವ ಗುಪ್ತರಿಗೆ ಉತ್ತರಾಧಿಕಾರವಾಗಿ ದಕ್ಕಿದವು. ಕಾವ್ಯಮಯ ಪರಿಸರದಲ್ಲಿ ಬೆಳೆದ ಗುಪ್ತರಿಗೆ ಎಳೆಯ ವಯಸ್ಸಿನಲ್ಲಿಯೇ ಕಾವ್ಯದೇವಿಯು ಒಲಿದದ್ದು ಆಶ್ಚರ್ಯವೇನಲ್ಲ.

ಒಮ್ಮೆ ತಮ್ಮ ಒಂದು ಪುಸ್ತಕವನ್ನು ತೆಗೆದುಕೊಂಡಾಗ ಅವರ ತಂದೆಯವರಿಗೆ ಅದರಲ್ಲಿ ಹೊಸ ಬರಹದ ಒಂದು ಪದ್ಯ ಕಣ್ಣಿಗೆ ಬಿತ್ತು. ಅದು ಶ್ರೀರಾಮನನ್ನು ಕುರಿತ ಒಂದು ಭಕ್ತಿಯ ಪದ್ಯ. ಆ ಪದ್ಯ ತಮ್ಮ ಮಗ ಮೈಥಿಲೀಶರಣನು ಬರೆದದ್ದೆಂದು ತಿಳಿದಾಗ ಅವರಿಗೆ ಆದ ಆನಂದ ಹೇಳತೀರದು. ಆ ಪದ್ಯ ಬರೆದಾಗ ಮೈಥಿಲೀಶರಣ ಇನ್ನೂ ಶಾಲಾ ಬಾಲಕ. ಕೂಡಲೇ ತಂದೆ ರಾಮಚರಣರು ಮಗನನ್ನು ಬಳಿ ಕರೆದು ಶ್ರೇಷ್ಠ ಕವಿಯಾಗು ಎಂದು ಮನಸಾರೆ ಹರಸಿದರು.

ತಂದೆಯವರ ನಲ್ಮೆಯ ಆಶೀರ್ವಾದ ಗುಪ್ತರಿಗೆ ಕಾವ್ಯ ಜೀವನ ಪ್ರವೇಶಕ್ಕೆ ನಾಂದಿಯಾಯಿತು. ಇವರ ಕವಿತೆಗಳನ್ನು ಪ್ರಾರಂಭದಲ್ಲಿ ಓದಿ, ತಿದ್ದಿ ಒಂದು ರೂಪ ಕೊಡಲು ಇವರ ಮಿತ್ರರಾದ ಮುನ್‌ಶಿ ಅಜಮೇರಿಯವರು ದೊರೆತದ್ದು ಒಂದು ಭಾಗ್ಯವೇ ಸರಿ.

ಗುಪ್ತರು ಮೊದಲಿಗೆ ‘ರಸಿಕೇಶ’, ‘ರಸಿಕೇಂದ್ರ’, ‘ಮಧುಪ’ ಎಂಬ ಕಾವ್ಯನಾಮ ಗಳಿಂದ ಬ್ರಜ ಭಾಷೆಯಲ್ಲಿ ಕವಿತೆಗಳನ್ನು ಬರೆದರು. ಆ ಹೊತ್ತಿಗೆ ಸರಿಯಾಗಿ ಮಹಾವೀರ ಪ್ರಸಾದ ದ್ವಿವೇದಿ ಎಂಬ ಮಹನೀಯರು ಹಿಂದಿ ಸಾಹಿತ್ಯದಲ್ಲಿ ಒಂದು ಹೊಸ ಯುಗವನ್ನು ಪ್ರಾರಂಭಿಸಿದ್ದರು. ಬ್ರಜ ಭಾಷೆಗೆ ಬದಲಾಗಿ ಜನಭಾಷೆ ಯಾದ ಖಡೀಬೋಲಿ ಹಿಂದಿಯೇ ಕಾವ್ಯಭಾಷೆ ಯಾಗಬೇಕೆಂಬುದು ಅವರ ದೃಢ ನಿಲವು. ಇಂಥ ಮಹನೀಯರ ಪರಿಚಯಭಾಗ್ಯ ಗುಪ್ತರಿಗೆ ಝಾನ್ಸಿಯಲ್ಲಿ ದೊರೆಯಿತು. ದ್ವಿವೇದಿಯವರ ಒತ್ತಾಯದ ಫಲವಾಗಿ ಗುಪ್ತರು ಖಡೀಬೋಲಿಯಲ್ಲೇ ಕವಿತೆ ಬರೆಯಲು ಪ್ರಾರಂಭಿಸಿದರು. ದ್ವಿವೇದಿಯವರು ಅವುಗಳನ್ನು ಓದಿ, ತಿದ್ದಿ ತಮ್ಮ ಪತ್ರಿಕೆಯಾದ ‘ಸರಸ್ವತೀ’ ಪತ್ರಿಕೆಯಲ್ಲಿ ಪ್ರಕಟಿಸತೊಡಗಿದರು. ಅಂದಿನಿಂದ ದ್ವಿವೇದಿಯವರೇ ಗುಪ್ತರ ಕಾವ್ಯ ಗುರುಗಳಾದರು.

ಕಾವ್ಯ ಪ್ರಪಂಚ

ಮೈಥಿಲೀಶರಣರು ಸಂಪ್ರದಾಯವಾದಿಗಳು. ಪ್ರಾಚೀನ ಪರಂಪರೆ ಮತ್ತು ಸಂಸ್ಕೃತಿಯ ಆರಾಧಕರು. ಕವಿಗೆ ಕೃಷ್ಣನ ಕಥೆಗಿಂತಲೂ ರಾಮನ ಗುಣಗಾನ ಮಾಡುವುದರಲ್ಲಿ ಹೆಚ್ಚು ಆನಂದ. ರಾಮಾಯಣದ ಕಥೆಯನ್ನು ಹೇಳುವುದರಲ್ಲಿರುವ ತನ್ಮಯತೆ ಭಾರತದ ಕಥೆಯನ್ನು ಹೇಳುವುದರಲ್ಲಿಲ್ಲ. ಅವರಿಗೆ ತಮ್ಮ ಸ್ವಂತ ಜೀವನದ ಸುಖ ದುಃಖಗಳನ್ನು ಕಾವ್ಯದ ಚೌಕಟ್ಟಿನಲ್ಲಿ ಹೇಳುವುದಕ್ಕಿಂತ ಪುರಾಣಪುರುಷರ ಪುಣ್ಯಪ್ರದ ಕಥೆಗಳನ್ನು ಹಾಡುವುದು ಹೆಚ್ಚು ಪ್ರಿಯವಾಗಿತ್ತು.

ಗುಪ್ತರಿಗೆ ಚಿಕ್ಕಂದಿನಿಂದಲೂ ಹಿರಿಯರಿಂದ ದೊರೆತ ಭಕ್ತಿ ಮತ್ತು ಕಾವ್ಯಪ್ರೇಮಗಳ ಜೊತೆಗೆ ಭಗವಾನ್ ಬುದ್ಧರ ಜೀವನ ಮತ್ತು ಗಾಂಧೀಜಿಯವರ ಆದರ್ಶಗಳು ದಾರಿ ದೀಪವಾದವು. ಆ ದಿನಗಳಲ್ಲಿ ಗಾಂಧೀಜಿಯವರು ಸಮಾಜದಲ್ಲಿ ಉಪೇಕ್ಷಿತರಾದ ಅಸ್ಪೃಶ್ಯರ ಏಳಿಗೆಗೆ ಟೊಂಕಕಟ್ಟಿದ್ದರು.

ಅದೇ ರೀತಿ ಸಾಹಿತ್ಯದಲ್ಲಿ ಶ್ರೇಷ್ಠ ಕವಿಗಳಿಂದ ಉಪೇಕ್ಷಿತರಾದ ಪಾತ್ರಗಳ ಉದ್ಧಾರಕ್ಕೆ ಕವಿ ರವೀಂದ್ರನಾಥ ಠಾಕೂರರು ಕರೆ ಕೊಟ್ಟರು. ಈ ಇಬ್ಬರು ಮಹನೀಯರುಗಳ ಕರೆಯು ಮೈಥಿಲೀಶರಣರಿಗೆ ಪ್ರೇರಣಾ ದಾಯಕವಾಯಿತು.

ಮೈಥಿಲೀಶರಣರು ಸುಮಾರು ನಲವತ್ತೈದಕ್ಕೂ ಹೆಚ್ಚಿನ ಕಾವ್ಯಗಳನ್ನು ರಚಿಸಿದರು. ಇವುಗಳಲ್ಲಿ ಆರು ಬೇರೆ ಭಾಷೆಗಳಿಂದ ಮಾಡಿದ ಅನುವಾದಗಳು. ಪಾರಸೀ ಭಾಷೆಯ ಜಗತ್ಪ್ರಸಿದ್ಧ ಕವಿಯಾದ ಉಮ್ಮರ್ ಖಯ್ಯಾಂನ ಪದ್ಯಗಳನ್ನು ಅವುಗಳ ಇಂಗ್ಲಿಷ್ ಅನುವಾದದ ಆಧಾರದ ಮೇಲೆ ಹಿಂದಿಯಲ್ಲಿ ರೂಪಾಂತರಿಸಿದರು. ಸಂಸ್ಕೃತದ ಮಹಾಕವಿ ಭಾಸನಿಂದ ರಚಿತವಾದ ‘ಸ್ವಪ್ನ ವಾಸವ ದತ್ತಮ್’ ಎಂಬ ನಾಟಕವನ್ನು ಅನುವಾದಿಸಿದರು. ಈ ಅನುವಾದಗಳಲ್ಲಿ ಮೂಲ ಕೃತಿಗಳ ಹಿರಿಮೆಯು ಜೀವಂತ ವಾಗಿ ಮೂಡಿಬಂದಿದೆ.

ಮೈಥಿಲೀಶರಣರ ನಿಜವಾದ ಕಾವ್ಯ ಪ್ರತಿಭೆಯ ಸ್ವರೂಪವು ಅನುವಾದಗಳಿಗಿಂತ ಸ್ವಂತ ರಚನೆಗಳಲ್ಲಿ ಮೈದೋರಿದೆ. ಅವರ ಕಾವ್ಯ ಶೈಲಿಯಲ್ಲಿ ಪ್ರಬಂಧ ಪಟುತ್ವವಿದೆ. ಕಥನ ಕೌಶಲವಿದೆ, ನಿರೂಪಣಾ ನೈಪುಣ್ಯ ವಿದೆ. ಗುಪ್ತರ ಲೇಖನಿಯಿಂದ ಒಡಮೂಡಿದ ಸ್ವಂತ ಕಾವ್ಯಗಳು ಸುಮಾರು ನಲವತ್ತು. ಅವುಗಳಲ್ಲಿ ಅನೇಕ ಗುಣಗಳಿಂದಾಗಿ ಪ್ರಸಿದ್ಧವಾದವು – ‘ರಂಗ್ ಮೆ ಭಂಗ್’, ‘ಜಯದ್ರಥ ವಧ್’, ‘ಭಾರತ್ ಭಾರತೀ’, ‘ಶಕುಂತಲಾ’, ‘ಪಂಚವಟೀ’, ‘ಸೈರಂಧ್ರೀ’, ‘ಸಾಕೇತ್’, ‘ಯಶೋಧರಾ’, ‘ದ್ವಾಪರ್’, ‘ನಹುಷ್’, ‘ಹಿಡಿಂಬಾ’, ‘ಜಯ ಭಾರತ್’ ಮತ್ತು ‘ವಿಷ್ಣುಪ್ರಿಯಾ’.

‘ರಂಗ್ ಮೆ ಭಂಗ್’ ಕಾವ್ಯದಿಂದ ‘ವಿಷ್ಣುಪ್ರಿಯಾ’ ದವರೆಗೂ ಸುಮಾರು ಇಪ್ಪತ್ತೈದು ಪ್ರಬಂಧ ಕಾವ್ಯಗಳನ್ನು ಮೈಥಿಲೀಶರಣರು ರಚಿಸಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಬಂಧ ಕಾವ್ಯಗಳನ್ನು ಬರೆದ ಕವಿ ಹಿಂದಿಯಲ್ಲಿ ಬೇರೊಬ್ಬರಿಲ್ಲ. ಈ ಪ್ರಬಂಧ ಕಾವ್ಯಗಳಲ್ಲಿ ಭಾರತೀಯ ಸಂಸ್ಕೃತಿಯ ಉಜ್ವಲ ರೂಪ ಎದ್ದು ಕಾಣುತ್ತದೆ.

ಭಾರತೀಯ ಜನಜೀವನದ ಆಚಾರ ವಿಚಾರಗಳ, ವ್ಯವಹಾರ ಸಂಪ್ರದಾಯಗಳ ನೈಜ ನಿರೂಪಣೆಯಿದೆ ; ಹಾಗೂ ಕವಿಯ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಸಾಹಿತ್ಯಕ ವಿಚಾರಗಳ ಪ್ರತಿಪಾದನೆಯಿದೆ.

ಮೈಥಿಲೀಶರಣರ ಕಾವ್ಯ ಭಾರತೀಯ ಸಂಸ್ಕೃತಿಯ ಪುನರುತ್ಥಾನದ ಪ್ರಯತ್ನ ; ಪ್ರಾಚೀನ ಸಂಸ್ಕೃತಿಯ ಆಧುನಿಕ ಗೀತೆ; ರಾಷ್ಟ್ರೀಯತೆಗಾಗಿ ಹೊಸ ಆಹ್ವಾನ; ಹೆಣ್ಣಿನ ಹಿರಿಮೆಯ ಹಾಡು; ಅವರ ಕಾವ್ಯ ಗಾಂಧೀ ವಿಚಾರದ ಸಾಹಿತ್ಯ ಸಂಸ್ಕರಣ.

ಭಕ್ತ ಕವಿ

ಗುಪ್ತರು ಶ್ರೀರಾಮನ ಅನನ್ಯ ಉಪಾಸಕರು. ರಾಮಾಯಣವೇ ಅವರ ಜೀವನದ ಉಸಿರು. ಆದರೂ ರಾಮ ಮತ್ತು ರಾಮಾಯಣದ ಉಪಾಸನೆಯಲ್ಲಿ ತನ್ಮಯರಾದ ಕವಿ ಮೈಥಿಲೀಶರಣರು ರಾಮನ ಕಥೆಯನ್ನು ಹಾಗೆಯೇ ತೆಗೆದುಕೊಳ್ಳದೆ ಹೊಸ ರೀತಿಯಲ್ಲಿ ಚಿತ್ರಿಸಿದ್ದಾರೆ. ರಾಮಾಯಣದ ಪಾತ್ರಗಳನ್ನು ತಮ್ಮದೇ ಆದ ಕಣ್ಣಿನಿಂದ ನೋಡಿ ಅವುಗಳಲ್ಲಿ ಹೊಸ ಜೀವಕಳೆ ತುಂಬಿದ್ದಾರೆ. ಇದಕ್ಕೆ ಹಿಂದೆ ಹಿಂದಿಯಲ್ಲಿ ತುಲಸೀದಾಸರು ರಾಮನನ್ನು ಭಗವಂತನೆಂದೂ, ಭಕ್ತರಿಗೆ ಆಶ್ರಯ ಎಂದೂ ಚಿತ್ರಿಸಿದ್ದರು. ಆದರೆ ಗುಪ್ತರು ‘ಸಾಕೇತ್’ದಲ್ಲಿ ರಾಮನನ್ನು ಯುಗ ಪುರುಷನನ್ನಾಗಿ, ಆದರ್ಶ ವ್ಯಕ್ತಿಯನ್ನಾಗಿ ಚಿತ್ರಿಸಿದ್ದಾರೆ. ಮೈಥಿಲೀಶರಣರ ಶ್ರೀರಾಮನು ಮೋಕ್ಷದ ಸಂದೇಶವನ್ನು ತಂದವನಲ್ಲ. ಇಲ್ಲಿ ಶ್ರೀರಾಮನು ಧರೆಯನ್ನೇ ಸ್ವರ್ಗವನ್ನಾಗಿ ಮಾಡಲು ನಿಂತ ಪುರುಷೋತ್ತಮ.

ಉಪೇಕ್ಷಿತ ಪಾತ್ರಗಳ ಕವಿ

ರಾಮಾಯಣ ಮತ್ತು ಮಹಾಭಾರತದಂಥ ಶ್ರೇಷ್ಠ ಗ್ರಂಥಗಳಲ್ಲಿ ಅವುಗಳ ಕವಿಗಳು ಕೆಲವು ಪಾತ್ರಗಳಲ್ಲಿ ಹಿರಿಮೆ ಇದ್ದರೂ ಅವುಗಳ ಬಗ್ಗೆ ಹೆಚ್ಚಾಗಿ ಗಮನ ಕೊಡದೆ ಹೋಗಿದ್ದಾರೆ.

ರಾಮಾಯಣದಲ್ಲಿ ಲಕ್ಷ್ಮಣನ ಸಹಧರ್ಮಿಣಿ ಊರ್ಮಿಳೆಯ ಬಗೆಗೆ ಮೂಲ ಕವಿ ಏನನ್ನೂ ಹೇಳುವು ದಿಲ್ಲ. ಲಕ್ಷ್ಮಣನು ಶ್ರೀರಾಮನ ಜೊತೆಗೆ ಕಾಡಿಗೆ ಹೊರಟು ಹೋದಾಗ ಅವನ ಹೆಂಡತಿ ಊರ್ಮಿಳೆ ಸಂನ್ಯಾಸಿನಿ ಯಂತೆ ಅರಮನೆಯಲ್ಲಿ ಬಾಳಿದಳು.

ಅಂತೆಯೇ ಬುದ್ಧನ ಮಡದಿ ಯಶೋಧರೆಯನ್ನೂ ಪ್ರಾಚೀನ ಕವಿಗಳು ಮರೆತರು. ಇಂಥ ಪಾತ್ರಗಳ ಹಿರಿಮೆಯ ಕಡೆ ಗುಪ್ತರು ಗಮನ ಕೊಟ್ಟರು.

ಬಂಗಾಳಿ ಭಾಷೆಯಿಂದ ‘ಮೇಘನಾದ ವಧ್’ ಎಂಬ ಕಾವ್ಯವನ್ನು ಅನುವಾದ ಮಾಡಿ ರಾವಣನ ಮಗ ಇಂದ್ರಜಿತುವಿನ ಪಾತ್ರದ ಔನ್ನತ್ಯವನ್ನು ಎತ್ತಿ ನಿಲ್ಲಿಸಿದರು. ‘ಸಾಕೇತ್’ದಲ್ಲಿ ಕವಿ ಮೈಥಿಲೀಶರಣರು ಊರ್ಮಿಳೆಯ ದುಃಖವನ್ನೂ ಹಿರಿಮೆಯನ್ನೂ ತೋರಿಸಿ ದ್ದಾರೆ.

‘ಯಶೋಧರಾ’ ಎಂಬ ಕಾವ್ಯದಲ್ಲಿ ಗೌತಮ ಬುದ್ಧನ ಪತ್ನಿ ಯಶೋಧರೆಯ ಕರುಣಾಪೂರ್ಣ ಜೀವನದ ಕಥೆಯಿದೆ. ಯಶೋಧರೆಯ ಮಾನಸಿಕ ವೇದನೆ, ಸಹನೆ, ತ್ಯಾಗ, ತಪಸ್ಸು ಮತ್ತು ಬಲಿದಾನವನ್ನು ಹೃದಯಂಗಮ ವಾಗಿ ಚಿತ್ರಿಸಿದ್ದಾರೆ. ‘ಸೆರಗಿನಲ್ಲಿ ಹಾಲು, ಕಣ್ಣಿನಲ್ಲಿ ನೀರು’ ಇರುವ ಯಶೋಧರೆ ವಾತ್ಸಲ್ಯಮಯಿ ತಾಯಿ ಮತ್ತು ಮಮತೆಯ ಮಡದಿಯಾದ ಹೆಣ್ಣಿನ ಪ್ರತೀಕ.

ವಿಧೃತೆ ಭಾಗವತದಲ್ಲಿರುವ ಮತ್ತೊಂದು ಉಪೇಕ್ಷಿತ ಪಾತ್ರ. ಈಕೆಯ ಪಾತ್ರವನ್ನು ‘ದ್ವಾಪರ್’ ಕಾವ್ಯದಲ್ಲಿ ನಿರೂಪಿಸಿ ಮೈಥಿಲೀಶರಣರು ಹೆಣ್ಣಿಗೆ ಆತ್ಮಗೌರವದ ಕಿರೀಟವನ್ನೇ ತೊಡಿಸಿದ್ದಾರೆ. ಹೆಣ್ಣು ಇತರರ ದಯೆಯ ನೆರಳಲ್ಲಿ ಬಾಳಬೇಕಾಗಿಲ್ಲ ; ತನ್ನ ನ್ಯಾಯವಾದ ಸ್ಥಾನಕ್ಕಾಗಿ   ಹೋರಾಡಿ ಅದನ್ನು ಪಡೆಯಬೇಕೆಂದು ಆಕೆಯ ಬಾಯಿಂದ ಸ್ಪಷ್ಟಪಡಿಸಿದ್ದಾರೆ.

‘ಹಿಡಿಂಬಾ’ ಎಂಬ ಕಾವ್ಯದಲ್ಲಿ ಮಹಾಭಾರತದ ಹಿಡಿಂಬಾ ಎಂಬ ರಾಕ್ಷಸಿಯನ್ನು ಮಾನವೀಯಳನ್ನಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಮನಸ್ಸಿನ ವಿವಿಧ ಭಾವನೆಗಳನ್ನು ಹಿಡಿಂಬೆಯ ಪಾತ್ರ ನಿರೂಪಣೆಯಲ್ಲಿ ಚಿತ್ರಿಸಿ ಸ್ವಾಭಾವಿಕ ರೂಪ ನೀಡಿದ್ದಾರೆ.

ಹೀಗೆ ಮೈಥಿಲೀಶರಣರು ಸಾಮಾನ್ಯವಾಗಿ ಉಪೇಕ್ಷಿತ ವಾದ ಪಾತ್ರಗಳನ್ನು ಸಹಜ ಸಹಾನುಭೂತಿಯಿಂದ ನೋಡಿದರು.

ವಿಶ್ವಬಂಧು ಕವಿ

ಮೈಥಿಲೀಶರಣರ ಕಾವ್ಯಗ್ರಂಥಗಳ ಅವಲೋಕನ ದಿಂದ ಅವರು ರಾಮನ ಅನನ್ಯ ಉಪಾಸಕರೆಂದು ಎದ್ದು ಕಾಣುತ್ತದೆ. ಆದರೆ ಶ್ರೀರಾಮನ ಬಗ್ಗೆ ಇದ್ದ ಶ್ರದ್ಧೆ ಅನ್ಯಮತಗಳ ವಿಚಾರದಲ್ಲಿ ಅವರಲ್ಲಿ ಅಸಹನೆಯನ್ನುಂಟು ಮಾಡಲಿಲ್ಲ.

ಶ್ರೀರಾಮನ ಚರಣಗಳಲ್ಲಿ ಸದಾ ನಮಿಸುವ ಕವಿಗೆ ಬೇರೆ ದೇವರುಗಳಲ್ಲೂ, ಧರ್ಮಗಳಲ್ಲೂ ಶ್ರದ್ಧೆ. ಶ್ರೀರಾಮನ ಕಥೆಗೆ ಸಂಬಂಧಿಸಿದ ‘ಪಂಚವಟೀ’, ‘ಸಾಕೇತ್’ ಮುಂತಾದ ಕಾವ್ಯಗಳನ್ನು ಬರೆದ ಮೈಥಿಲೀಶರಣರೇ ‘ದ್ವಾಪರ’ದಲ್ಲಿ ಶ್ರೀಕೃಷ್ಣನಲ್ಲಿ ಭಕ್ತಿಯನ್ನು ಅರ್ಪಿಸಿದರು.

ಬೌದ್ಧರ ಕರುಣೆಯ ಮಹಿಮೆಯನ್ನು ಹಾಡಲು ‘ಅನಘ್’, ‘ಯಶೋಧರಾ’, ‘ಕುಣಾಲ್‌ಗೀತ್’ ಕಾವ್ಯಗಳನ್ನು ರಚಿಸಿದರು. ಸಿಖ್ಖರ ಗುರುಗಳ ಆದರ್ಶವನ್ನು ‘ಗುರುಕುಲ್’ ಎಂಬ ಗ್ರಂಥದಲ್ಲಿ ಹಾಡಿ ತೋರಿದರು ; ಮುಸಲ್ಮಾನರ ಚಾರಿತ್ರಿಕ ಶ್ರೇಷ್ಠತೆ, ಸಹನಶೀಲತೆಯನ್ನು ನಿರೂಪಿಸಲು ಕರುಣರಸ ಪ್ರಧಾನವಾದ ‘ಕಾಬಾ ಔರ್ ಕರ್ಬಲಾ’ ಕಾವ್ಯ ಬರೆದರು.  ‘ವಿಶ್ವವೇದನಾ’ ಎಂಬ ಕಾವ್ಯದಲ್ಲಿ ರಾಷ್ಟ್ರೀಯತೆಯ ಎಲ್ಲೆಯನ್ನೂ ದಾಟಿ ವಿಶ್ವಪ್ರೇಮದ ಹಾಡನ್ನು ಹಾಡಿ ವಿಶ್ವಬಂಧುವಾದರು.

ರಾಜಕೀಯ ಪ್ರಜ್ಞೆಯ ಕವಿ

ಮೈಥಿಲೀಶರಣರು ಕಾವ್ಯಾರಂಭ ಮಾಡಿದ ವೇಳೆ ಭಾರತದಲ್ಲಿ ಕ್ರಾಂತಿಯ ಕಾಲ, ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸುಧಾರಣೆಗೆ ಕ್ರಾಂತಿಯ ಕಹಳೆ ಮೊಳಗುತ್ತಿತ್ತು. ದೇಶದ ಏಳಿಗೆಗಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ಪಣವನ್ನಾಗಿಟ್ಟು ಶ್ರಮಿಸುತ್ತಿದ್ದರು. ಆ ಸಮಯದಲ್ಲಿ ಬಂದ ಎಲ್ಲ ಕವಿಗಳಂತೆಯೇ ಮೈಥಿಲೀಶರಣರ ಮೇಲೂ ಅಂದಿನ ರಾಜಕೀಯ ಸ್ಥಿತಿಯ ಪ್ರಭಾವ ಬಿದ್ದಿತು.

ಗಾಂಧೀಜಿಯವರಿಂದ ಅವರು ಬಹಳ ಮಟ್ಟಿಗೆ ಪ್ರಭಾವಿತರಾಗಿ, ಅವರ ಸಿದ್ಧಾಂತಗಳನ್ನು ಸಾಹಿತ್ಯದಲ್ಲಿ ಪ್ರಚಾರ ಮಾಡಲು ಪ್ರಾರಂಭ ಮಾಡಿದರು. ಗಾಂಧೀಜಿಯವರಿಗೆ ತಮ್ಮ ಸಿದ್ಧಾಂತಗಳನ್ನು ಹಿಂದಿ ಸಾಹಿತ್ಯದಲ್ಲಿ ಪ್ರಚಾರ ಮಾಡಲು ಪ್ರೇಮಚಂದರು ಮತ್ತು ಮೈಥಿಲೀಶರಣರು ಎರಡು ಭುಜಗಳಂತಿದ್ದರು.

ಮೈಥಿಲೀಶರಣರ ರಾಜಕೀಯ ವಿಚಾರಗಳು ‘ವನ ವೈಭವ್’, ‘ಬಕ ಸಂಹಾರ್’, ‘ಪಂಚವಟೀ’, ‘ಭಾರತ್ ಭಾರತೀ’, ‘ಮಂಗಲ್‌ಘಟ್’, ‘ಅನಘ್’, ‘ಸಾಕೇತ್’ ಮತ್ತು ‘ಸ್ವದೇಶ್ ಸಂಗೀತ್’ ಮುಂತಾದ ಕಾವ್ಯಗಳಲ್ಲಿ ಹರಡಿದ ಮುತ್ತುಗಳಾಗಿವೆ.

ಅವರ ‘ಭಾರತ್ ಭಾರತೀ’ ಕಾವ್ಯವಂತೂ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ನವಯುವಕರ ಗೀತೆಯಾಗಿತ್ತು. ಅಂದಿನ ಯುವಕರು ಅದನ್ನು ತಮ್ಮ ಕಿಸೆಯೊಳಗೇ ಇಟ್ಟುಕೊಂಡು ಓಡಾಡುತ್ತಿದ್ದರು

೧೯೨೧ ರಿಂದ ೧೯೪೭ ರವರೆಗೆ ಗಾಂಧೀಜಿ ಯವರು ನಡೆಸಿದ ಎಲ್ಲ ಆಂದೋಳನದ ಧ್ವನಿಯನ್ನು ನಾವು ಗುಪ್ತರ ಕಾವ್ಯದಲ್ಲಿ ಕೇಳಬಹುದು. ‘ಅನಘ್’ ಕಾವ್ಯ ದಲ್ಲಂತೂ ‘ಮಘ’ನು ಗಾಂಧೀಜಿಯವರ ಪ್ರತಿಮೂರ್ತಿ ಯಾಗಿದ್ದಾನೆ. ಧರಣಿ, ಮುಷ್ಕರ, ಮದ್ಯಪಾನ ನಿಷೇಧ, ಅಹಿಂಸೆ, ಹರಿಜನೋದ್ಧಾರ, ಹಳ್ಳಿಯ ಕಡೆ ನಡೆ ಮುಂತಾದ ಕ್ರಾಂತಿಯ ಎಲ್ಲ ಹೆಜ್ಜೆಗಳ ಗುರುತೂ ಅಲ್ಲಿದೆ.

ಕಾರಾಗೃಹದಲ್ಲಿ ಕವಿ

ಅಂದಿನ ದಿನಗಳಲ್ಲಿ ದೇಶಾದ್ಯಂತವೂ ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆ ಹಬ್ಬಿತ್ತು. ಅದರ ಕಾವು ಭಾವುಕ ಕವಿಯಾದ ಮೈಥಿಲೀಶರಣರಿಗೂ ತಗುಲಿತು. ಅವರ ರಾಷ್ಟ್ರ ಪ್ರೇಮ ಕಾವ್ಯದಲ್ಲಿ ರೂಪ ತಾಳಿದ್ದು ಮಾತ್ರವಲ್ಲ, ಕೃತಿಯಲ್ಲಿಯೂ ರೂಪ ತಾಳಿತು. ೧೯೪೧ ರ ಆಂದೋ ಲನದಲ್ಲಿ ಭಾಗವಹಿಸಿದರು. ಬ್ರಿಟಿಷ್ ಸರ್ಕಾರವು ಅವರನ್ನು ಅವರ ಅಣ್ಣ ರಾಮಕಿಶೋರರೊಡನೆ ಸೆರೆ ಹಿಡಿಯಿತು. ಮೊದಲು ಅವರನ್ನು ಝಾನ್ಸಿಯ ಬಂದೀ ಖಾನೆಯಲ್ಲೇ ಇಡಲಾಯಿತು. ಕೆಲವು ದಿನಗಳ ಅನಂತರ ಅವರನ್ನು ಆಗ್ರಾದ ಬಂದೀಖಾನೆಗೆ ಕರೆದೊಯ್ದು ಇಡಲಾಯಿತು.

ಆಗ್ರಾದ ಸೆರೆಮನೆಯ ಜೀವನ ಕವಿಯ ಜೀವನದಲ್ಲಿ ಒಂದು ಹೊಸ ಅಧ್ಯಾಯದ ಪ್ರಾರಂಭಕ್ಕೆ ಕಾರಣವಾಯಿತು. ಆಗ್ರಾ ಬಂದೀಖಾನೆಯಲ್ಲಿ ದೇಶದ ಹಿರಿಯ ಮುಖಂಡರ ಸಾಮೀಪ್ಯ ಪರಿಚಯವಾಯಿತು. ಇದೇ ಬಂದೀ ಖಾನೆ ಯಲ್ಲಿ ಇವರೊಂದಿಗೆ ಆಚಾರ್ಯ ನರೇಂದ್ರದೇವ್, ಪಂಡಿತ್ ಶ್ರೀಕೃಷ್ಣದತ್ತ ಪಾಲೀವಾಲ, ಡಾಕ್ಟರ್ ಕೇಸ್ಕರ್, ಮಹೇಂದ್ರಜೀ ಮುಂತಾದ ಅನೇಕ ಧುರೀಣ ರಾಜಕೀಯ ಕಾರ್ಯಕರ್ತರಿದ್ದರು. ಈ ವಾತಾವರಣದಿಂದಾಗಿ ಮೈಥಿಲೀ ಶರಣರು ಸಂಪೂರ್ಣವಾಗಿ ಗಾಂಧೀ ಭಕ್ತರಾದರು.

ಬಂದೀಖಾನೆಯಲ್ಲಿ ಪ್ರತಿದಿನ ಸುಮಾರು ಎಂಟು ಗಂಟೆ ಗಳ ಕಾಲ ಚರಖಾದಲ್ಲಿ ನೂಲುತ್ತಿದ್ದರು. ಸುಮಾರು ಏಳು ತಿಂಗಳ ಕಾಲ ಮೈಥಿಲೀಶರಣರು ಸೆರೆಮನೆಯ ವಾಸವನ್ನು ಅನುಭವಿಸಿದರು. ಇಲ್ಲಿಯೂ ಅವರ ಚಿಂತನ ಮತ್ತು ಕಾವ್ಯಾಭ್ಯಾಸ ಅವರನ್ನು ಬಿಡಲಿಲ್ಲ. ಬಂದೀಖಾನೆ ಯಲ್ಲಿ ಮೈಥಿಲೀಶರಣರನ್ನು ಕಂಡರೆ ಎಲ್ಲರಿಗೂ ಒಂದು ಬಗೆಯ ಗೌರವ, ಪ್ರೀತಿ. ಬಂದೀಖಾನೆಯಲ್ಲಿದ್ದಾಗಲೇ ಬಂದ ಇವರ ಹುಟ್ಟಿದ ಹಬ್ಬದಂದು ಮಹೇಂದ್ರಜೀಯವರ ಪ್ರಯತ್ನದಿಂದಾಗಿ ಒಂದು ಅಭಿನಂದನ ಗ್ರಂಥವನ್ನು ಅವರಿಗೆ ಸಮರ್ಪಿಸಲಾಯಿತು. ಇದರಲ್ಲಿ ಅನೇಕ ರಾಜಕೀಯ ಸೆರೆ ಯಾಳುಗಳು ಲೇಖನಗಳನ್ನು ಬರೆದರು. ಅಂದಿನ ಸಭೆಯಲ್ಲಿ ಆಚಾರ್ಯ ನರೇಂದ್ರ ದೇವರೇ ಸ್ವತಃ ಎಲ್ಲರ ಮುಂದೆ ಗ್ರಂಥವನ್ನು ಓದಿ ಬಿಡುಗಡೆ ಮಾಡಿದರು.

ಕವಿತೆಯೇ ಬದುಕಿನ ಉಸಿರು

ಕಾವ್ಯಾಭ್ಯಾಸ, ಕಾವ್ಯರಚನೆ ಮೈಥಿಲೀಶರಣರಿಗೆ ಚಿಕ್ಕಂದಿನಿಂದಲೂ ಬದುಕಿನ ಉಸಿರು. ಅದೇ ಅವರ ಬದುಕು. ಶಾಲೆಯ ದಿನಗಳಲ್ಲಿ ‘ಆಲ್ಹಾ’ ಗೀತೆಗಳನ್ನು ಓದುವ ಆಸಕ್ತಿ ಪಾಠ ಪ್ರವಚನಗಳಿಗಿಂತ ಹೆಚ್ಚಾಗಿ, ವ್ಯಾಸಂಗಕ್ಕೆ ಬಾಧಕವಾಯಿತು. ಆದರೆ ಶಾಲೆಯ ವ್ಯಾಸಂಗ ನಿಂತರೂ ಮೈಥಿಲೀಶರಣರ ಕಾವ್ಯಾಭ್ಯಾಸ ಮಾತ್ರ ನಿಲ್ಲಲಿಲ್ಲ. ಇದೇ ಕಾವ್ಯದೇವಿಯ ಸೇವೆಯಿಂದ ಅವರು ಮುಂದೆ ಗೌರವದ ಗೌರೀಶಂಕರವನ್ನೇರಿದರು.

ಮೈಥಿಲೀಶರಣರ ಪ್ರತಿಯೊಂದು ದಿನವೂ ಕಾವ್ಯ ರಚನೆ ಇಲ್ಲವೇ ಆಟ – ಇವೆರಡರಲ್ಲೇ ಕಳೆಯಿತು. ಹುಡುಗರಾಗಿದ್ದಾಗ ಚಿನ್ನಿಕೋಲು, ಗಾಳೀಪಟ, ಚೆಂಡು, ಬುಗರಿ ಮುಂತಾದ ಆಟಗಳಲ್ಲಿ ಸಮಯ ಕಳೆದರೆ, ವಯಸ್ಸಾದ ಮೇಲೆ ಗುಪ್ತರಿಗೆ ಪಗಡೆ ಆಟದಲ್ಲಿ ಆಸಕ್ತಿ ಹೆಚ್ಚಾಯಿತು. ಆಟದಲ್ಲೂ ಕವಿತೆ; ಕವಿತೆಯಲ್ಲೂ ಆಟ. ಅವರು ಮಾಡುತ್ತಿದ್ದ ಭಾಷಣ, ಕಳುಹಿಸುತ್ತಿದ್ದ ಸಂದೇಶ ಎಲ್ಲವೂ ಕವಿತೆಯಲ್ಲೇ. ಇತರರು ಕವಿತೆಯನ್ನು ಬರೆದರೆ ಇವರು ಕವಿತೆಯನ್ನು ಬಾಳಿದರು.

ಹನ್ನೆರಡು ವರ್ಷ ಅವರು ರಾಜ್ಯಸಭೆಯ ಸದಸ್ಯ ರಾಗಿದ್ದರು. ಈ ಅವಧಿಯಲ್ಲಿ ಹಲವು ಬಾರಿ ರಾಜ್ಯ ಸಭೆಯಲ್ಲಿ ಕವಿತೆಯಲ್ಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಖ್ಯಾತಿಯ ಮೆಟ್ಟಿಲ ಮೇಲೆ

ಮೈಥಿಲೀಶರಣರ ಕಾವ್ಯರಚನೆಯ ಪ್ರಾರಂಭದಿಂದಲೇ ಯಶಸ್ಸು ಅವರನ್ನು ಅರಸಿಬಂದಿತು. ಪ್ರಸಿದ್ಧಿಗಾಗಿ ಅವರು ಎಂದೂ ಪ್ರಯತ್ನ ಪಟ್ಟವರಲ್ಲ. ಅವರಿಗೆ ಅದು ಅಷ್ಟಾಗಿ ಬೇಕಿರಲಿಲ್ಲ. ಆದರೆ ಪ್ರಸಿದ್ಧಿ ತಾನಾಗಿಯೇ ಅವರನ್ನು ಹಿಂಬಾಲಿಸಿ ವರಿಸಿತು. ಇದಕ್ಕೆ ಅವರ ಕಾವ್ಯದ ಹಿರಿಮೆಯೇ ಕಾರಣ.

ಅವರ ಕಾವ್ಯವು ಸರ್ವಜಯ ಹಿತಾಯ, ಸರ್ವಜನ ಸುಖಾಯ’ವಾಗಿದ್ದು ಎಳೆಯರಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ರಸದೌತಣ. ೧೯೩೬ರಲ್ಲಿ ಅವರಿಗೆ ಐವತ್ತು ವರ್ಷ ತುಂಬಿದಾಗ ಚಿರಗಾಂವ್‌ನಲ್ಲಿ ಅವರ ಹುಟ್ಟಿದ ಹಬ್ಬವನ್ನು ಬಹಳ ಅದ್ಧೂರಿಯಿಂದ ಆಚರಿಸಲಾಯಿತು.

ಇದಾದ ನಂತರ ವಾರಾಣಸಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು. ಅಂದು ಗಾಂಧಿಜೀಯವರು  ಮೈಥಿಲೀಶರಣರಿಗೆ ಒಂದು ಹಸ್ತಲಿಖಿತ ಅಭಿನಂದನ ಗ್ರಂಥವನ್ನು ಅರ್ಪಿಸಿದರು. ೧೯೩೭ ರಲ್ಲಿ ಇವರ ‘ಸಾಕೇತ್’ ಮಹಾಕಾವ್ಯಕ್ಕೆ ಪ್ರಯಾಗದ ಹಿಂದಿ ಸಾಹಿತ್ಯ ಸಮ್ಮೇಳನವು ‘ಮಂಗಲಾಪ್ರಸಾದ ಪಾರಿತೋಷಕ’ವನ್ನು ನೀಡಿತು. ೧೯೪೬ರಲ್ಲಿ ಅದೇ ಸಾಹಿತ್ಯ ಸಮ್ಮೇಳನವು ಕರಾಚಿ ಅಧಿವೇಶನದಲ್ಲಿ ‘ಸಾಹಿತ್ಯ ವಾಚಸ್ಪತಿ’ ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿತು. ಇದಾದ ಕೆಲವು ದಿನಗಳಲ್ಲಿ ಕವಿವರ್ಯ ಮೈಥಿಲೀಶರಣರ ಅರವತ್ತನೆಯ ಹುಟ್ಟಿದ ಹಬ್ಬವನ್ನು ವಾರಾಣಸಿಯಲ್ಲಿ ಆಚರಿಸಲಾಯಿತು. ಮೈಥಿಲೀ ಶರಣರಿಗೆ ಆಗ್ರಾ ಮತ್ತು ಕಾಶೀ ವಿಶ್ವವಿದ್ಯಾಲಯಗಳು ಗೌರವ ಡಿ. ಲಿಟ್. ಪ್ರಶಸ್ತಿಯನ್ನು ನೀಡಿದವು.

೧೯೫೨ ರಲ್ಲಿ ಭಾರತದ ರಾಜ್ಯಸಭೆಗೆ ಗೌರವ ಸದಸ್ಯರಾಗಿ ಆಯ್ಕೆ ಯಾದರು. ಈ ಗೌರವಕ್ಕಾಗಿ ಪ್ರಯಾಗದ ಸುಮಾರು ೨೫೦ ಪ್ರಸಿದ್ಧ ಸಾಹಿತಿಗಳು ಸೇರಿ ಅವರನ್ನು ಅಭಿನಂದಿಸಿದರು. ಹನ್ನೆರಡು ವರ್ಷಕಾಲ ಅವಿಚ್ಛಿನ್ನವಾಗಿ ರಾಜ್ಯಸಭೆಯ ಸದಸ್ಯರಾಗಿ ಹಿಂದಿ ಭಾಷೆಯ ಏಳಿಗೆಗಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದರು. ಇವರ ಸಾಹಿತ್ಯ ಸೇವೆಗೆ ಮನ್ನಣೆ ನೀಡಿ ಭಾರತ ಸರ್ಕಾರವು ಇವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿತು.

ಸೆರೆಮನೆಯಲ್ಲಿ ಕವಿ

ವ್ಯಕ್ತಿತ್ವ

ಮೈಥಿಲೀಶರಣರ ಆಂತರಿಕ ಮತ್ತು ಬಾಹ್ಯ ವ್ಯಕ್ತಿತ್ವ ವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ನಿರಾಡಂಬರ, ಸರಳತೆಯೇ ಅವರ ಜೀವನದ ವೈಶಿಷ್ಟ್ಯ ಎನ್ನಬೇಕು. ಉಡುಪು, ಊಟ, ತಿಂಡಿ, ವ್ಯವಹಾರ, ನಡೆನುಡಿ ಮತ್ತು ಅವರ ಸಾಹಿತ್ಯ ಎಲ್ಲದರಲ್ಲಿ ಎದ್ದುಕಾಣುತ್ತಿದ್ದ ಗುಣವೆಂದರೆ ಸರಳತೆ, ನಿರಾಡಂಬರ.

ಮೊದಲ ನೋಟಕ್ಕೆ ಅವರು ಒಬ್ಬ ಹಳ್ಳಿಯ ರೈತನಂತೆ ಕಾಣುತ್ತಿದ್ದರು. ಒರಟಾದ ಕಚ್ಚೆಪಂಚೆ, ಹಳ್ಳಿಯ ಪೇಟ ಇಲ್ಲವೆ ಗಾಂಧೀ ಟೋಪಿ – ರಾಜ್ಯಸಭೆಯಲ್ಲಾಗಲೀ ಕವಿಗೋಷ್ಠಿಯಲ್ಲಾಗಲೀ ಇದೇ ಅವರ ಉಡುಪು.

ಒಮ್ಮೆ ಜೈನೇಂದ್ರ ಕುಮಾರರು ಮೈಥಿಲೀಶರಣರನ್ನು ಕಾಣುವ ಹಂಬಲದಿಂದ ಚಿರಗಾಂವ್ ಅವರ ಮನೆಗೆ ಹೋದರು. ಅಲ್ಲಿ ರಾಷ್ಟ್ರಕವಿ ಮೈಥಿಲೀಶರಣರನ್ನು ಕಂಡು ಮಾತನಾಡುವ ಬಗೆ ಹೇಗೆಂದು ಯೋಚಿಸುತ್ತಾ ಕೊಂಚಕಾಲ ನಿಂತರು.

ಅಲ್ಲೇ ಒಂದು ಬೇವಿನ ಮರಕ್ಕೆ ಕಟ್ಟಿದ್ದ ಒಂದು ಸಣ್ಣ ಮಣೆಯ ಉಯ್ಯಾಲೆ ಮೇಲೆ ಓರ್ವ ಕೃಶಕಾಯ, ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕುಳಿತು ತೂಗಿಕೊಳ್ಳುತ್ತಿ ದ್ದರು. ಅವರು ಮಂಡಿಯವರೆಗೆ ಗೋಣಿ ಚೀಲದಂತಹ ಒಂದು ಮಾಸಲು ಖದ್ದರ್ ಪಂಚೆ ಉಟ್ಟಿದ್ದರು. ಜೈನೇಂದ್ರರು ಯಾರನ್ನು, ಹೇಗೆ ವಿಚಾರಿಸಿ ತಮ್ಮ ಪರಿಚಯ ಹೇಳುವುದೆಂದು ಯೋಚಿಸುತ್ತಾ ನಿಂತರು. ಅಷ್ಟರಲ್ಲಿ ಸಿಯಾರಾಮಶರಣರು ಬಂದು ಅವರನ್ನು ವಿಚಾರಿಸಿ ಉಯ್ಯಾಲೆ ಮೇಲೆ ಕುಳಿತವರೇ ಮೈಥಿಲೀಶರಣ ರೆಂದು ಪರಿಚಯ ಮಾಡಿಕೊಟ್ಟಾಗಲಂತೂ ಜೈನೇಂದ್ರರಿಗೆ ನಂಬುವುದೇ ಕಷ್ಟವಾಯಿತು.

ರಾಷ್ಟ್ರದ ಒಬ್ಬ ಹಿರಿಯ ಕವಿ ಹೀಗಿರಬಹುದೆಂದು ಅವರು ಊಹಿಸಿಯೂ ಇರಲಿಲ್ಲ. ಮೈಥಿಲೀಶರಣರ ಮಾತಿನ ಸರಳತೆಯ ಸವಿಯನ್ನುಂಡ ಮೇಲಂತೂ ಅವರ ಆಶ್ಚರ್ಯಕ್ಕೆ ಮಿತಿಯೇ ಇಲ್ಲದಂತಾ ಯಿತು.

ಮೈಥಿಲೀಶರಣರು ಸ್ಫುರದ್ರೂಪಿಗಳೂ ಅಲ್ಲ ; ಅಲ್ಲದೆ ತಮ್ಮ ಇದ್ದ ರೂಪವನ್ನು ಬೇರೆಯವರಿಗಾಗಿ ಆಕರ್ಷಕವಾಗಿ ಮಾಡಲು ಯತ್ನಿಸಿದವರೂ ಅಲ್ಲ. ಬಾಚಲಾಗದಂಥ ತಲೆ ಕೂದಲು, ಒರಟು ಮೀಸೆ, ಬಹಳ ಸಾಧಾರಣ ಹಳ್ಳಿಯವನ ಉಡುಗೆ ಇವುಗಳಿಂದ ಅವರು, ನಾನು ಅನ್ಯರಿಂದ ಬೇರೆ ಯಲ್ಲ, ಯಾವ ಹೆಚ್ಚಿನ ಗೌರವವೂ ಅಗತ್ಯವಲ್ಲ, ನಾನು ಎಲ್ಲರಂತೆ ಸಾಧಾರಣ ಮನುಷ್ಯ ಎಂದು ಸಾರುವಂತಿದ್ದರು. ಅವರ ಆಹಾರವೂ ಬಹು ಸರಳ.

ಪ್ರತಿನಿತ್ಯ ಒಂದು ಬಾರಿಯಾದರೂ ತಮ್ಮ ಮನೆಯ ಹಸು ಕರುಗಳನ್ನು ನೋಡಿ ಅವುಗಳ ಮೈದಡವಿ ಬರುವುದು ಅವರಿಗೆ ವಾಡಿಕೆ. ಸಮಯ ದೊರೆತಾಗಲೆಲ್ಲಾ ಮನೆ ಯವರು, ಅತಿಥಿಗಳು ಎಲ್ಲರೊಡನೆ ಸರಸ ಸೌಜನ್ಯದಿಂದ ಮಾತಾಡುವ ಸ್ವಭಾವ.

ವ್ಯವಹಾರ ಕುಶಲತೆ

ಸಂಪ್ರದಾಯ ಪ್ರಿಯರಾದ ಮೈಥಿಲೀಶರಣರು ವ್ಯಾವ ಹಾರಿಕ ಜಗತ್ತಿನಲ್ಲಿ ಹಿಂದುಳಿದವರಲ್ಲ. ಅವರು ಕಾವ್ಯರಚನೆ ಯಲ್ಲಿ ನಿಪುಣರಂತೆ ಹೊಸಹೊಸ ಯಂತ್ರಗಳ ಬಗ್ಗೆಯೂ ತಿಳುವಳಿಕೆ ಹೊಂದಿದ್ದರು. ತಮ್ಮ ವೈಯುಕ್ತಿಕ ಲಾಭಕ್ಕಾಗಿ ಅವರು ಎಂದೂ ಪ್ರಯತ್ನಪಟ್ಟವರಲ್ಲ. ಹಾಗೆಂದು ತಮ್ಮಲ್ಲಿ ರುವ ಮುದ್ರಣಾಲಯದ ಯಾವುದೇ ಸಾಮಾನು ಮಾತ್ರವೇ ಅಲ್ಲ, ಕೊನೆಗೆ ಮನೆಯಲ್ಲಿರುವ ಹಳೆಯ ಸೈಕಲಿನ ಬಿಡಿ ಭಾಗವನ್ನೂ ವ್ಯರ್ಥವಾಗಿ ಬಿಸಾಡಿದವರಲ್ಲ. ಅವರ ದೃಷ್ಟಿ ಯಲ್ಲಿ ಯಾವುದೂ ನಿಷ್ಪ್ರಯೋಜಕವಲ್ಲ.

ವೈಷ್ಣವ ಸಂಪ್ರದಾಯದ ರಾಮಭಕ್ತ ಕವಿಗಳಾದ ಅವರು ಹೊರಗಡೆ ಎಲ್ಲೂ ಸತ್ಕಾರಕೂಟಗಳು ಮತ್ತು ಭೋಜನಕೂಟಗಳಿಗೆ ಹೋಗದೆ ಇರುವವರಲ್ಲ. ಆಧುನಿಕ ಉಡುಪು ಧರಿಸಿದವರ ಮಧ್ಯದಲ್ಲಿಯೂ ತಮ್ಮ ನಿರಾ ಡಂಬರವಾದ ಉಡುಗೆ ತೊಡುಗೆಯಲ್ಲೇ ಹೋದರೂ ತಾವೇ ಖುದ್ದಾಗಿ ಓಡಾಡಿ ಎಲ್ಲರ ಸಂಕೋಚವನ್ನೂ ದೂರ ಮಾಡುತ್ತಿದ್ದರು. ಎಲ್ಲರಲ್ಲೂ ಬೆರೆತು, ನಕ್ಕು, ತಾವಾಗಿ ಮಾತನಾಡಿಸಿ ಒಂದು ರೀತಿ ಮಧುರವಾದ ಆತ್ಮೀಯ ವಾತಾವರಣವನ್ನೇ ನಿರ್ಮಿಸುತ್ತಿದ್ದರು.

ಮುಗ್ಧ ಹೃದಯಿ

ನಿಜವಾದ ಕವಿಯು ಹೊಗಳಿಕೆ-ತೆಗಳಿಕೆಯಿಂದ ದೂರವಾದವನು, ದೇವರು ಅವನಿಗೆ ಸ್ಫೂರ್ತಿಕೊಟ್ಟಾಗ ಅವನ ಬಾಯಿಂದ ಅಮೃತದ ಹೊಳೆಯೇ ಹರಿಯುತ್ತದೆ ಎಂದು ಒಮ್ಮೆ ಗುಪ್ತರಿಗೆ ಅಭಿನಂದನ ಗ್ರಂಥವನ್ನು ಸಮರ್ಪಿ ಸುತ್ತಾ ಗಾಂಧೀಜಿಯವರು ನುಡಿದರು. ಗುಪ್ತರು ಈ ಅರ್ಥದಲ್ಲಿ ನಿಜವಾದ ಕವಿಗಳು. ಅವರು ಬೇರೆಯವರನ್ನು ತೆಗಳುವುದಿರಲಿ, ತಮ್ಮನ್ನು ಬೇರೆಯವರು ಹೊಗಳುವುದನ್ನು ಅವರು ಸಹಿಸುತ್ತಿರಲಿಲ್ಲ.

ಹಿಂದಿ ಸಾಹಿತ್ಯದಲ್ಲಿ ರಾಷ್ಟ್ರಕವಿಯೆಂದು ಮಾನ್ಯರಾಗಿ ದ್ದರೂ ಮೈಥಿಲೀಶರಣ ಗುಪ್ತರು ತಾವು ತಮ್ಮ ಹಿಂದೆ ಬರುವವರ ಜಯಘೋಷ ಮಾಡುವ ಹರಕಾರರೆಂದು ಹೇಳಿಕೊಳ್ಳುತ್ತಿದ್ದರು. ಹೊಸ ಪೀಳಿಗೆಯ ಕವಿಗಳನ್ನು ಪ್ರೋತ್ಸಾಹಿಸಲು ಇದಕ್ಕಿಂತ ಬೇರೆ ಯಾವ ಮಾರ್ಗವು ತಾನೇ ಇದ್ದೀತು?

ಯಾರಾದರೂ ಅವರ ಸನ್ಮಾನದ ವಿಷಯವಾಗಿ ಮಾತನಾಡತೊಡಗಿದರೆ ಗುಪ್ತರು ಕೂಡಲೇ ಅವರಿಗೆ ಹೇಳುತ್ತಿದ್ದರು: “ಸ್ವಾಮೀ, ನನಗಂತೂ ಬಹಳಷ್ಟು ಸನ್ಮಾನ ವಾಗಿದೆ. ಈಗ ಬೇರೆ ಒಬ್ಬ ಹೊಸ ಕವಿಯ ಸನ್ಮಾನ ವಾಗಲಿ.”

ಹಿಂದಿಯ ಹಿರಿಯ ಕವಯಿತ್ರಿಯರಾದ ಮಹಾದೇವಿ ವರ್ಮರು ಗುಪ್ತರ ಸರಳ ಹೃದಯವನ್ನು ಉಲ್ಲೇಖಿಸುತ್ತಾ ಒಂದು ಪ್ರಸಂಗವನ್ನು ವಿವರಿಸಿದ್ದಾರೆ. ಒಂದು ಸಲ ‘ಸಾಹಿತ್ಯಕಾರ ಸಂಸದ’ಕ್ಕಾಗಿ ಕಾಶಿಯಲ್ಲಿ ಗಂಗಾ ನದಿಯ ದಡದಲ್ಲಿ ಒಂದು ಮನೆಯನ್ನು ಖರೀದಿ ಮಾಡಬೇಕಾಗಿತ್ತು. ಆ ಮನೆಯನ್ನು ಒಮ್ಮೆ ಗುಪ್ತರಿಗೆ ತೋರಿಸಲು ಮಹಾದೇವಿ ಯವರು ಅವರನ್ನು ಜೊತೆಗೆ ಕರೆದುಕೊಂಡು ಹೊರಟರು.

ದಾರಿಯಲ್ಲಿ ಗುಪ್ತರೇ, “ನಿಮಗೆ ಮನೆಯ ವ್ಯಾಪಾರದ ವಿಷಯ ಏನೂ ತಿಳಿಯದು. ನೀವು ಸುಮ್ಮನಿರಿ. ನಾನೇ ಎಲ್ಲಾ ಮಾತನಾಡಿ ಮನೆಗೆ ಸರಿಯಾದ ಬೆಲೆ ನಿಗದಿ ಮಾಡುತ್ತೇನೆ” ಎಂದು ಮಹಾದೇವಿಯವರಿಗೆ ಹೇಳುತ್ತಾ ಹೊರಟರು. ಆದರೆ ಗಂಗಾನದಿಯ ದಂಡೆಯಮೇಲೆ ಇದ್ದ ಆ ಮನೆಯ ಹತ್ತಿರ ಹೋಗುತ್ತಿದ್ದಂತೇ ಗುಪ್ತರು ಆ ಸುರಮ್ಯ ವಾತಾವರಣಕ್ಕೆ ಮಾರುಹೋಗಿ ಹಾಗೇ ಕೊಂಚ ಕಾಲ ಸುಮ್ಮನೆ ನಿಂತರು.

ಮುಂದೆ ಮನೆಯ ಮಾಲೀಕ ರೊಡನೆ ಮಾತನಾಡು ವಾಗ ತಾವಾಗಿಯೇ ಆ ಮನೆಯನ್ನು ಮಕ್ಕಳಂತೆ ಮತ್ತೆಮತ್ತೆ ಹೊಗಳ ತೊಡಗಿದರು. ಇದರ ಪರಿಣಾಮದಿಂದ ಆ ಮನೆಗೆ ಮಹಾದೇವಿಯವರು ಮನಸ್ಸಿನಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಬೆಲೆ ತೆರ ಬೇಕಾಯಿತು.

ಮೈಥಿಲೀಶರಣರದು ಮಗುವಿನ ಮನಸ್ಸು. ಹೊರಗಿನ ಜಗತ್ತಿಗೆ ರಾಷ್ಟ್ರಕವಿ, ಸಂಸತ್ತಿನ ಸದಸ್ಯ ಮುಂತಾಗಿ ಎಷ್ಟೇ ದೊಡ್ಡ ವ್ಯಕ್ತಿ ಎನಿಸಿದ್ದರೂ ವೈಯುಕ್ತಿಕ ಜೀವನದಲ್ಲಿ ಯಾವ ಬಿಗುಮಾನವೂ ಇಲ್ಲದ ಅವರಲ್ಲಿ ಎಲ್ಲರಿಗೂ ಸಲಿಗೆ. ಇದಕ್ಕೆ ಅವರ ಪ್ರೀತಿ ಮತ್ತು ಸೌಹಾರ್ದದ ವ್ಯವಹಾರವೇ ಕಾರಣ.

ಅವರ ಬೈಠಕ್ ಖಾನೆಯಲ್ಲಿ ಸಾಹಿತಿಗಳು, ಸಮಾಜ ಸುಧಾರಕರು, ವ್ಯಾಪಾರಿಗಳು, ಕಾರ್ಖಾನೆಯ ಕೆಲಸಗಾರರು, ಪೊಲೀಸ್ ಅಧಿಕಾರಿಗಳು, ಹೀಗೆ ಎಲ್ಲ ತರಹದ ಜನರೂ ಸೇರುತ್ತಿದ್ದುದು ಉಂಟು. ಅಲ್ಲಿ ಗಾಂಧೀ ವಾದಿಯೂ ಇರುತ್ತಿದ್ದ, ಕ್ರಾಂತಿವಾದಿಗೂ ಸಹ ಅಲ್ಲೇ ನಿರಾತಂಕ. ಪರಿಚಿತ_ಅಪರಿಚಿತ ಎಲ್ಲ ಅತಿಥಿಗಳೂ ಅಲ್ಲಿ ದೇವತೆಗಳಾಗಿಬಿಡುತ್ತಿದ್ದರು. ಎಲ್ಲರ ಸಮಸ್ಯೆಗಳು, ಪೇಚುಗಳನ್ನು ಕೇಳಿ ಸಮಾಧಾನ ಹೇಳುವ ತಾಳ್ಮೆ ಅವರಲ್ಲಿತ್ತು.

ರಸ್ತೆಯಲ್ಲಿ ಹೊರಟರೆಂದರೆ ಎಲ್ಲರಿಗೂ ನಮಸ್ಕಾರಕ್ಕೆ ಪ್ರತಿಯಾಗಿ ಪ್ರೀತಿಯಿಂದ ನಮಸ್ಕಾರ ಹೇಳಿ ಅವರ ಕುಶಲ ವಿಚಾರಿಸುತ್ತಾ ಹೋಗುವ ಸೌಜನ್ಯ ಅವರದು. ಹಾಗೇ ಯಾರದೋ ಕಟ್ಟುತ್ತಿರುವ ಮನೆಯನ್ನು ಹೋಗಿ ನೋಡುವುದು, ಮತ್ತೊಬ್ಬರ ಅಂಗಡಿಯನ್ನು ವೀಕ್ಷಿಸುವುದು, ಇನ್ನೊಂದು ಕಡೆ ಮನೆಯ ವಾಲುತ್ತಿರುವ ಸೂರು ಕಂಡರೆ ಅದನ್ನು ಸರಿಪಡಿಸುವ ಸಲಹೆ ನೀಡುವುದು ಅವರ ನಿತ್ಯ ಜೀವನ. ಹೀಗೆ ಮಾಡುವಾಗ ಆ ಕೆಲಸಗಳು ತಮ್ಮ ಮನೆಯ ಒಬ್ಬ ಆತ್ಮೀಯರಿಗೆ ಸಂಬಂಧ ಪಟ್ಟಂತೆ ನುಡಿಯುತ್ತಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿ ಅವರ ಸರಳತೆ ಮತ್ತು ಸೌಜನ್ಯಗಳು ಅವರಿಗೆ ಒಂದು ವಿಶಿಷ್ಟ ಗೌರವದ ಮೆರುಗನ್ನೇ ನೀಡಿತು. ಕೆಲವೊಮ್ಮೆ ಅವರ ಕಾವ್ಯವನ್ನು ವ್ಯರ್ಥ ಮತ್ತು ನಿರರ್ಥಕವೆಂದು ಹಲಕೆಲವು ಟೀಕೆಗಳು ಕೇಳಿ ಬಂದರೂ ಗುಪ್ತರು ಅದನ್ನು ಕಡೆಗಣಿಸಿದರು.

ಪರಿಚಿತರು ಯಾರಾದರೂ ಇಂಥ ಕೆಟ್ಟ ಟೀಕೆಗಳನ್ನು ಚರ್ಚಿಸಿದಾಗ ಅವರು ಮುಗುಳ್ನಗೆ ಬೀರಿ ಸುಮ್ಮನಾಗಿಬಿಡುತ್ತಿದ್ದರು. ಅಥವಾ, ಅದಕ್ಕೆ ಉತ್ತರವಾಗಿ, ‘ಬರೆದಿರಬಹುದು, ನನಗೆ ಜ್ಞಾಪಕವಿಲ್ಲ’ ಎಂದೋ ಅಥವಾ, ‘ಸರಿ, ನಾನು ನನ್ನ ಕೆಲಸ ಮಾಡಿದೆ, ಅವರು ತಮ್ಮ ಕೆಲಸ ಮಾಡಿದ್ದಾರೆ’ ಎಂದೋ ಹೇಳಿ ಸುಮ್ಮನಾಗಿಬಿಡುತ್ತಿದ್ದರು.

ಕವಿ ಸಂತರು

೧೯೪೬ ರ ಡಿಸೆಂಬರಿನಲ್ಲಿ ಮೈಥಿಲೀಶರಣ ಗುಪ್ತರು ನಿಧನರಾದರು. ಅವರ ಸಾವಿನೊಂದಿಗೆ ಹಿಂದಿ ಸಾಹಿತ್ಯ ದಲ್ಲಿ ಒಂದು ಯುಗ ಮುಗಿಯಿತು.

ಮೈಥಿಲೀಶರಣ ಗುಪ್ತರು ಕವಿ ಮಾತ್ರವೇ ಅಲ್ಲ, ಭಾರತೀಯ ಸಂಸ್ಕೃತಿಯ ಏಳಿಗೆಗಾಗಿ ದುಡಿದ ಸಂತರು. ಆಧುನಿಕ ಹಿಂದಿ ಭಾಷೆಯ ವಸಂತ ಋತುವಿನಲ್ಲಿ ಇಂಚರ ನುಡಿದ ಕೋಗಿಲೆ. ಅವರ ಜೀವನ ಧನ್ಯ. ಅವರ ಸಾಹಿತ್ಯದ ಸ್ಮರಣೆ ಲೋಕಕ್ಕೆ ಪಾವನ ; ಈ ಸಾಕೇತ ಸಂತನ ಜೀವನ ಹಿಂದಿ ಜನತೆಗೆ, ಸಾಹಿತ್ಯಕ್ಕೆ ಸಂಜೀವಿನಿ.