ಪೀಠಿಕೆ :

ಕರ್ನಾಟಕದ ಜನಪ್ರಿಯ ದೇವತೆಗಳಲ್ಲಿ ಮೈಲಾರನೂ ಒಬ್ಬ ಹಾಗೂ ಪ್ರಮುಖ. ಈತನ ಜನಪ್ರಿಯತೆ ಎಷ್ಟೆಂದರೆ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಸಮಾಜದ ಎಲ್ಲ ವರ್ಗದ ಜನರು ಈತನ ಭಕ್ತರಾಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ, ಗೋವಾ, ಮಧ್ಯಪ್ರದೇಶಗಳವರೆಗೆ ಈತನ ದೇವಸ್ಥಾನಗಳು ಸಂಪ್ರದಾಯಗಳು ಹರಡಿಕೊಂಡಿವೆ. ಈತ ಕರ್ನಾಟಕದ ಪಿಂಬೀರ ಎಂಬ ಊರಿನವನೆಂದೂ ಮನೆವೆಗ್ಗಡೆ ಚಟ್ಟಪ ಎಂಬ ವ್ಯಕ್ತಿಯಿಂದ ಪ್ರಸಿಐಡಗೆ ಬಂದನೆಂದೂ ಪ್ರಾಯಶ ಈತ ಕವಿ ಬ್ರಹ್ಮಶಿವನಿಗೆ ಸ್ವಲ್ಪ ಹಿಂದೆ ಬಾಳಿದವನಿರಬೇಕೆಂದೂ ನಮ್ಮ ವಿದ್ವಾಂಸರು ತರ್ಕಿಸಿದ್ದಾರೆ. ಮಹಾರಾಷ್ಟ್ರದ ವಿದ್ವಾಂಸರು ಈ ಅಭಿಪ್ರಾಯವನ್ನು ಒಪ್ಪುತ್ತಾರೆ.

ಮೈಲಾರನ ಕುರಿತಾಗಿ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಗ್ರಂಥ ರಚನೆಯಾಗಿದೆ. ಆದರೆ ಎರಡೂ ಭಾಷೆಯಲ್ಲಿ ಪ್ರಕಟವಾಗಿರುವ ಈತನ ಚರಿತ್ರೆಗಳಲ್ಲಿ ಏಕಾಭಿಪ್ರಾಯವಿಲ್ಲದಿರುವದು ಗಮನಾರ್ಹವಾಗಿದೆ. ಸಂಸ್ಕೃತ ಗ್ರಂಥಗಳ ಪ್ರಕಾರ, ಮೈಲಾರನು ಮಣಿ ಮಲ್ಲರೆಂಬ ದೈತ್ಯರನ್ನು ಸಂಹರಿಸಬಂದ ಭೈರವ ರೂಪೀ ಸಾಕ್ಷಾತ್ ಶಿವನಾಗಿದ್ದನೆ. ಕನ್ನಡ ಕೃತಿಗಳು ಭೈರವರೂಪಿ ಶಿವನನ್ನು ಮೈಲಾರನೆಂದು ಒಪ್ಪಿಕೊಂಡೂ ಚಾರಿತ್ರ್ಯಹೀನ ಚರಿತ್ರ ಮೈಲಾರನೊಬ್ಬ ಬೇರೆ ಇದ್ದುದನ್ನು ಅವು ಸೂಚಿಸುತ್ತವೆ. ಈ ಮೈಲಾರ ಒಬ್ಬ ಪತಿತೆ ಜೈನ, ಕಲಿತನದಿಂದ ಕಾದು ಸತ್ತ ವೀರ, ಮೈಲಾರ ಕರ್ನಾಟಕದವನು ಎಂಬ ಅಭಿಪ್ರಾಯ ಜನಜನಿತವಿರುವುದರಿಂದ, ಕರ್ನಾಟಕದಲ್ಲಿಯೇ ಈತನ ಪಿಂಬೇರ ಎಂಬ ಊರನ್ನು ಹುಡುಕುವ ಪ್ರಯತ್ನಗಳು ನಡೆದಿರುವುದರಿಂದ ಕರ್ನಾಟಕದ ಈ ದೈವತದ ಕುರಿತು ಕನ್ನಡ ಕೃತಿಗಳು ಕೊಡುವ ಚಿತ್ರವೇ ಹೆಚ್ಚು ವಿಶ್ವಸನೀಯ ಎನ್ನಬೇಕಾಗುತ್ತದೆ. ಶಿವ ಮೈಲಾರನಿಗಿಂತ ಭಿನ್ನವಾಗಿ ನಿಲ್ಲುವ ಈತನನ್ನು ಬಸವಾದಿ ವಚನಕಾರರು ನಿಂದಿಸುವರೂ, ಈತನ ನಿಂದ್ಯವ್ಯಕ್ತಿತ್ವವನ್ನು ಬ್ರಹ್ಮಶಿವ, ಮಲ್ಲಿಕಾರ್ಜುನ ಮುಂತಾದ ಕಲಿಗಳು ಸಮರ್ಥಿಸುವದೂ ಇದನ್ನು ನೋಡಿದರೆ ಈತನ ಜೈನನೋ ಕೃತಿಮನೋ ಅಂತೂ ಕುದ್ರ ವ್ಯಕ್ತಿತ್ವದ ಐತಿಹಾಸಿಕ ಮನುಷ್ಯನೆಂಬುದು ಖಚಿತವಾಗುತ್ತದೆ.

ಇಬ್ಬರು ಮೈಲಾರ :

ಮೈಲಾರಲಿಂಗನ ಪರಿವಾರದೇವತೆಗಳ ಕುರಿತು ನಾನು ಪ್ರಬಂಧ ಮಂಡಿಸಬೇಕಿದೆ. ಆದರೆ ಮೈಲಾರನ ಮೂಲ ಮೂರ್ತಿಯ ಚರಿತ್ರೆ ಸ್ಪಷ್ಟವಾಗಿದೆ ಆತನ ಪರಿವಾರದ ಕುರಿತು ಮಾತನಾಡುವದು ಅಸಹಜವಾಗುತ್ತದೆ. ಅಂತೆಯೇ ಮೈಲಾರನ ನಿಜವ್ಯಕ್ತಿತ್ವವನ್ನು ಪ್ರಥಮದಲ್ಲಿ ಪರಿಶೀಲಿಸಿ ಮುಂದುವರೆಯಲಾಗಿದೆ.

ಮಲ್ಲಿಕಾರ್ಜನ ಕವಿ ಬರೆದ ಶಂಕರದಾಸಿಮಯ್ಯನ ಪುರಾಣದಲ್ಲಿ ಶಂಕರ ದಾಸಿಮಯ್ಯ ಮೈಲಾರನ ಪಿಂಬೀರಕ್ಕೆ ಬಂದು, ಶಿವನೇ ಮೈಲಾರನೆಂದು ವಾದಿಸುವ ಗೊರವರ ಗುರುವಿಗೆ “ಸಹಜವೆ ಮಲ್ಲಾಸುರನ ಕೊಂದ ಹರನೆಂದಾವರಿಯವೇ ಮಲ್ಲಹರನೀ ಮೈಲಾರ ಪುಸಿ ಪುಸಿ ಬಿಡು ಬಿಡು ಇವಂ ಉಗ್ರ ಗ್ರಹ ನಿಜಂ ಕೇಳಿವನ ವರ್ತಕದ ಹದನಂ.. ಎಂಬ ಹರ ಮೈಲಾರನಿಗೆ ಭಿನ್ನವಾದ ‘ಮೈಲಾರನ’ ಪೂರ್ವೋತ್ತರವನ್ನು ಬಯಲುಗೊಳಿಸುತ್ತಾನೆ. ಶಿವನೇ ಮೈಲಾರನೆಂಬುದು ಸುಳ್ಳಲ್ಲ, ಅದನ್ನು ನಾವು ಬರೆದು ಬಲ್ಲೆವು, ಆದರೆ ಈ ಮೈಲಾರ (ಪಂಬೀರದ) ಶಿವನಲ್ಲ ಇವನೊಬ್ಬ ಉಗ್ರಗ್ರಹ, ಭೂತ ಎಂದು ಶಂಕರದಾಸಿಮಯ್ಯ ನುಡಿಯಬೇಕಾದರೆ, ಪತಿತಿವಾದ ಜೈನ ಆತನನ್ನು ಜರಿಯಬೇಕಾದರೆ ಶಿವಮೈಲಾರನೇ ಬೇರೆ, ಭೂತಮೈಲಾರನೇ ಬೇರೆ ಎಂಬುದು ನಿಚ್ಚಳವಾಗುತ್ತದೆ. ಹೀಗೆ ನಮ್ಮಲ್ಲಿ ಮೈಲಾರರು ಇಬ್ಬರು.

೧. ‘ಮಲ್ಲಾರಿ ಮಹಾತ್ಮ’ ಮುಂತಾದ ಸಂಸ್ಕೃತ ಗ್ರಂಥಗಳು ಹೇಳುವಂತೆ ಮಣಿ ಮಲ್ಲಾಸುರರ ವಧೆಗೆ ಮಾರ್ತಾಂಡ ಭೈರವನಾಗಿ ಅವತರಿಸಿಬಂದ ಶಿವನು ಒಬ್ಬ ಮೈಲಾರ. ಈತನನ್ನು ‘ಪುರಾಣ ಮೈಲಾರ’ ಎಂದು ಕರೆಯಬಹುದು. ಕಪಾಲ, ಡಮರುಗ, ತ್ರಿಶೂಲ ಧಾರಿಯಾಗಿ ಮತ್ತು ಲಿಂಗರೂಪದಲ್ಲಿ (ಸ್ವಯಂಭೂಲಿಂಗ) ಪೂಜಿಸಲ್ಪಡುವ ಈತನ ಮಡದಿ ಗಂಗಿಮಾಳಮ್ಮ, ತುಪ್ಪದ ಮಾಳಮ್ಮ ಎಂಬ ಹೆಸರುಗಳ ಪಾರ್ವತಿ ಈತನ ನೆಲೆ ಮಣಿಶೂಲ ಪರ್ವತ, ಈತನ ವಾಹನ ನಾಯಿ.

೨. ‘ಶಂಕರ ದಾಸಿಮಯ್ಯನ ಪುರಾಣ’ ಮುಂತಾದ ಕನ್ನಡ ಕೃತಿಗಳು ತಿಳಿಸುವಂತೆ ಕ್ಷತ್ರಿಯನಾಗಿ ಹುಟ್ಟಿ ಜೈನಧರ್ಮ ದೀಕ್ಷಿತನಾಗಿ ಮಾಳೆ ಎಂಬ ಕುರುಬಿತಿಗೆ ಆಸೆಪಟ್ಟವನು ಇನ್ನೊಬ್ಬ ಮೈಲಾರ, ಪುರಾಣಮೈಲಾರನಿಗಿಂತ ಭಿನ್ನವಾದ ಈತ ಐತಿಹಾಸಿಕ ವ್ಯಕ್ತಿಯಾದುದರಿಂದ ಈತನು ‘ಮಾನುಷ ಮೈಲಾರ’ ಎಂದು ಕರೆಯಬಹುದು. ಆಶ್ವಾರೋಹಿಯಾಗಿ ಈತನ ಜೊತೆಗೆ ಕುಳಿತಿರುವ ಹೆಂಗಸು ‘ತುರಂಗಬಾಲೆ’ ಎಂಬ ಕುರುಬಿತಿ ಮಾಳಮ್ಮ. ಈತನ ಸೆಲೆ ಪಿಂಬೀರ ಇಲ್ಲವೆ ಪೆಂಬರ ಎಂಬ ಊರು. ಈತನ ವಾಹನ ಕುದುರೆ.

ಹೆಸರಿನ ಸಾಮ್ಯ ಬಿಟ್ಟರೆ ಪುರಾಣ ಮೈಲಾರನಿಗೂ ಚರಿತ್ರ ಮೈಲಾರನಿಗೂ ಯಾವುದೇ ಸಂಬಂಧವಿಲ್ಲ. ಚರಿತ್ರೆಯಂತೆ ಚಾರಿತ್ರ್ಯವೂ ಬೇರೆಯಾಗಿದೆ. ಮೂಲತಃ ಚಾರಿತ್ರ್ಯಹೀನವಾದ ಚರಿತ್ರ ಮೈಲಾರನನ್ನು ಪುರಾಣ ಮೈಲಾರನೊಂದಿಗೆ ಸಮೀಕರಿಸಲು ಆತನ ಭಕ್ತರು ಪ್ರಯತ್ನಪಟ್ಟಂತಿದೆ. ಇದು ಅಸಂಭವವಲ್ಲ. ಚರಿತ್ರೆಯ ವ್ಯಕ್ತಿಗಳು ಕಾಲಾಂತರದಲ್ಲಿ ತಮ್ಮ ಅನುಯಾಯಿಗಳ ಮೂಲಕ ದೈವಿರೂಪ ಪಡೆದುಕೊಳ್ಳುವುದು ಸಾಮಾನ್ಯ. ೧೬ನೆಯ ಶತಮಾನದ ಚಾರಿತ್ರಿಕ ವ್ಯಕ್ತಿ ಕೊಡೇಕಲ್ ಬಸವಣ್ಣನನ್ನು ೧೨ನೆಯ ಶತಮಾನದ ಕಲ್ಯಾಣ ಬಸವಣ್ಣನೊಂದಿಗೆ ಸಮೀಕರಿಸಿ ಅವನೇ ಇವನೆಂಬ ಭ್ರಮೆ ಹುಟ್ಟಿಸುವ ಕತೆ ಕಾವ್ಯಗಳನ್ನು ಕೊಡೆಕಲ್ ಸಂಪ್ರದಾಯದಲ್ಲಿ ಇವತ್ತಿಗೂ ನೋಡಬಹುದು.

ಹೀಗೆ ಮೈಲಾರನ ಸಂಪ್ರದಾಯ ಒಂದೇ ಆಗಿ ತೋರಿತ್ತಿದ್ದರೂ ವಾಸ್ತವವಾಗಿ ಈ ಸಂಪ್ರದಾಯದಲ್ಲಿ ದೇವರಾಗಿ ಪೂಜಿಗೊಳ್ಳುತ್ತ ಬಂದಿರುವ ಮೈಲಾರರು ಇಬ್ಬರು. ಕರ್ತೃಗದ್ದಿಗೆಯ ಮೂಲ ದೇವರೇ ಇಬ್ಬರಾದ ಮೇಲೆ ಅವರ ಪರಿವಾರ ದೇವತೆಗಳಲ್ಲಿ ಇಬ್ಬಗೆ ಕಾಣಿಸಿಕೊಳ್ಳಲೇಬೇಕು. ಪುರಾಣ ಹಾಗೂ ಚರಿತ್ರ ಮೈಲಾರರ ಸ್ಪಷ್ಟಭೇದ ಅವರವರ ಪರಿವಾರದಲ್ಲಿ ಸಹಜವಾಗಿ ಒಡೆದು ಕಾಣುತ್ತಿದೆ.

ಪರಿವಾರ ದೇವತೆಗಳು : ಸೂರ್ಯನ ಸುತ್ತ ಸುತ್ತುವ ಗ್ರಹಗಳಂತೆ ದೇವರ ಸುತ್ತ ಆತನ ಪರಿವಾರ. ಸ್ವಭಾವತಃ ಸಂಘಜೀವಿಯಾದ ಮನುಷ್ಯ ತನ್ನ ಪರಿಸರ, ಕೌಟುಂಬಿಕ ಪರಿವಾರವನ್ನು ದೇವರಿಗೂ ಅನ್ವಯಿಸಿ ಪ್ರಾಚೀನದಿಂದಲೂ ಪೂಜಿಸುತ್ತ ಬಂದಿದ್ದಾನೆ. ಎಲ್ಲ ದೇವರುಗಳಂತೆ ಮೈಲಾರದೇವರ ಪರಿವಾರವಾದರೂ ದೊಡ್ಡದು. ಮೈಲಾರನೆಂದರೆ ಶಿವನೇ ಎಂಬ ಭಾವನೆ. ಆತನ ಭಕ್ತದಲ್ಲಿ ಬೇರೂರಿರುವುದರಿಂದ ಶಿವನ ಪರಿವಾರವೆಲ್ಲ ಮೈಲಾರನ ಪರಿವಾರವಾಗಿ ಮೈಲಾರನ ದೇವಸ್ಥಾನಗಳಲ್ಲಿ ಎಡಪಡೆದು ಪೂಜೆಗೊಳ್ಳುತ್ತಿದೆ. ಪುರಾಣ ಮೈಲಾರನೊಂದಿಗೆ ಸಮೀಕರಿಸಲ್ಪಟ್ಟ ಮಾನುಷ ಮೈಲಾರನ ಪರಿವಾರವೂ ಈ ದೇವಸ್ಥಾನಗಳಲ್ಲಿ ಅಪ್ರತ್ಯೇಕವಾಗಿ ಪ್ರವೇಶ ಪಡೆದಿದೆ. ಮೈಲಾರನೆಂಬ ದೇವತೆಯ ಒಟ್ಟು ಪರಿವಾರ ಹೀಗಿದೆ.

ತುಪ್ಪದ ಮಾಳಮ್ಮ ಕುರುಬಿತಿ ಮಾಳಮ್ಮ

೧. ಹೆಗ್ಗಡೆ ಪ್ರಧಾನಿ ಮನೆವೆಗ್ಗಡೆ ಚಟ್ಟಪ

೨. ಚಿಕ್ಕಯ್ಯ (ಷಣ್ಮುಖ)

೩. ದೊಡ್ಡಯ್ಯ (ಗಣಪತಿ)

೪. ನಾಯಿ

೫. ಕುದುರೆ

೬. ಜುಂಜಪ್ಪ

ಮೇಲಿನವರಲ್ಲದೆ ಮೈಲಾರನ ಕೆಲವು ದೇವಸ್ಥಾನಗಳಲ್ಲಿ ಸರ್ಪ, ವೀರಭದ್ರ, ಕನ್ನೆಮ್ಮ, ಚೌಡಮ್ಮ, ಹನುಮಂತ ಮುಂತಾದ ಪರಿವಾರ ದೇವತೆಗಳು ಪೂಜೆ ಗೊಳ್ಳುತ್ತಾರೆ ಎಂದು ಕೇಳಿದ್ದೇನೆ. ಬಹುಶಃ ಈ ಪಟ್ಟಿ ಇನ್ನೂ ಬೆಳೆಯಬಹುದು. ಆದರೆ ಮೇಲೆ ಕಾಣಿಸಿದ ಮೈಲಾರನ ಪ್ರಮುಖ ಪರಿವಾರವನ್ನು ಮಾತ್ರ ಇಲ್ಲಿ ಲಕ್ಷಿಸಲಾಗಿದೆ.

. ತುಪ್ಪದ ಮಾಳಮ್ಮ ಕುರುಬಿತಿ ಮಾಳಮ್ಮ : ಮಾಳಚಿ ಮಾಲತಿ, ಮಾಲ್ಹಸಾ, ಮಾಳಮ್ಮ, ಗಂಗಿಮಾಳಮ್ಮ ತುಪ್ಪದ ಮಾಳಮ್ಮ, ಕುರುಬಿತಿ ಮಾಳಮ್ಮ ಮುಂತಾದ ಹೆಸರುಗಳಿಂದ ಕರೆಯಲಾಗುವ ಈಕೆ ಶಿವ ಮೈಲಾರನ ಪತ್ನಿಯೆಂದು ಮೈಲಾರನ ಭಕ್ತರು ಭಾವಿಸುತ್ತಾರೆ. ನಾವು ಮೇಲೆ ನೋಡಿದಂತೆ ಮೈಲಾರರು ಇಬ್ಬರು ಹಾಗೆಯೇ ಅವರ ಪತ್ನಿಯರೂ ಇಬ್ಬರು. ಇವರ ಹೆಸರುಗಳು ಅನಂತವಾಗಿದ್ದರೂ ಇವರ ಕುರಿತಾಗಿ ಇರುವ ಪುರಾಣ, ಕಾವ್ಯ ಐತಿಹ್ಯಗಳ ಹಿನ್ನೆಲೆಯಲ್ಲಿ ಇಬ್ಬರು ಮಾಳಮ್ಮರನ್ನು ನಾನಿಲ್ಲ ಗುರುತಿಸಿದ್ದೇನೆ. ಅವರೇ ತುಪ್ಪದ ಮಾಳಮ್ಮ ಮತ್ತು ಕುರುಬಿತಿ ಮಾಳಮ್ಮ, ತುಪ್ಪದ ಮಾಳಮ್ಮನಿಗೆ ಗಂಗಿಮಾಳಮ್ಮನೆಂದೂ, ಕುರುಬಿತಿ ಮಾಳಮ್ಮನಿಗೆ ತುರಂಗಬಾಯೆಂದೂ ಪರ್ಯಾಯ ಹೆಸರುಗಳಿವೆ. ತುಪ್ಪದ ಮಾಳಮ್ಮ, ಗಂಗಿಮಾಳಮ್ಮ ಬೇರೆ ಬೇರೆ ಎನ್ನುವವರೂ ಇದ್ದಾರೆ. ಹೆಸರು ಬೇರೆಯಾದರೂ ಆಕೆ ಸಾಕ್ಷಾತ್ ಪಾರ್ವತಿಯ ಪ್ರತಿರೂಪ ಎಂಬ ಭಕ್ತರ ಕಲ್ಪನೆಗೆ ಧಕ್ಕೆ ಇಲ್ಲ. ಹೀಗೆ ತುಪ್ಪದ ಮಾಳಮ್ಮ ಪುರಾಣ ಮೈಲಾರ ಅರ್ಥಾತ್ ಭೈರವರೂಪೀ ಶಿವನ ಪತ್ನಿಯಾಗಿದ್ದರೆ, ಕುರುಬಿತಿ ಮಾಳಮ್ಮ ಚರಿತ್ರ ಮೈಲಾರ ಅರ್ಥಾತ್ ಚಾರಿತ್ರ್ಯಹೀನ ಮೈಲಾರನ ಮೋಹದ ಹೆಂಗಸು (ಮಡದಿ) ಆಗಿದ್ದಾಳೆ. ಕುರುಬಿತಿ ಮಾಳಮ್ಮ ಪುರಾಣ ಮೈಲಾರನ ಎರಡನೆಯ ಪತ್ನಿ ಎಂಬ ಕಲ್ಪನೆ ಹೇಗೋ ಬೆಳೆದುಬಂದಿದೆ. ‘ಶಂಕರದಾಸಿಮಯ್ಯ ಪುರಾಣ’ ದಲ್ಲಿ ಗೊರವ ಗುರುವು ಶಂಕರದಾಸಿಮಯ್ಯರೊಂದಿಗೆ ಶಿವನೇ ಮೈಲಾರನೆಂದು ವಾದಿಸುತ್ತ ಶಬರ ವೇಷದ ಮೈಲಾರನ ಎರಡನೆಯ ಹೆಂಡತಿ ಈ ಕುರುಬತಿ ಎಂದು ಹೇಳಿದಾಗ ಶಂಕರದಾಸಿಮಯ್ಯ ಅದನ್ನು ಹುಸಿಯೆಂದು ತಿರಸ್ಕರಿಸುತ್ತಾನೆ. ಪತಿತ ಜೈನ ಮಲ್ಲಿದೇವನ ವಶೀಕರಣಕ್ಕೆ ಒಳಗಾಗಿ, ಅವನೊಂದಿಗೆ ಓಡಿಹೋಗುವಾಗ ಹಾದಿಯಲ್ಲಿ ಅವಳ ಗಂಡ ಹಾಗೂ ಕೆಲವು ಬೇಡ ಕೈಯಲ್ಲಿ ಸಿಕ್ಕು ಸತ್ತವಳು (ಮಲ್ಲಿದೇವನೆಂಬ ಮೈಲಾರನೊಂದಿಗೆ) ಈ ಕುರುಬತಿ ಮಾಳಮ್ಮ ಎಂಬುದು ಶಂಕರದಾಸಿಮಯ್ಯ ಹೇಳುವ ಕತೆಯಲ್ಲಿ ನಮಗೆ ಗೊತ್ತಾಗುತ್ತದೆ. ಕುರುಬತಿ ಮಾಳಮ್ಮ ಪುರಾಣ ಮೈಲಾರ ಅರ್ಥಾತ್ ಶಿವನ ಪತ್ನಿಯಲ್ಲ ಎಂಬುದಕ್ಕೆ ‘ಅಂ. ದಾ. ಪುರಾಣ’ ಮಹತ್ವದ ಸಾಕ್ಷಿಯಾಗಿದೆ. ಆದುದರಿಂದ ಗಂಗಿಮಾಳಮ್ಮನೊಂದಿಗೆ ಎರಡನೆಯ ಪತ್ನಿಯನ್ನು ತರಬೇಕೆಂಬ ಉದ್ದೇಶದಿಂದ ಶಿವನು ಗೊರವನ ವೇಷ ತಾಳಿ ಕುರುಬಿತಿ ಮಾಳಮ್ಮನನ್ನು ವರಿಸಿದ ಕತೆ ಶುದ್ದ ಪೌರಾಣಿಕವಾಗಿದೆ ಎಂದು ಹೇಳಬಹುದು. ತಾವು ಶಿವನ ಅನುಯಾಯಿಗಳು, ನಾಯಿಗಳು ಎಂಬುದನ್ನು ಸ್ಥಾಪಿಸಲು ಈ ಕತೆ ಹುಟ್ಟಿತೇನೋ. ಕುರುಬತಿಯ ಐವರು ಅಣ್ಣಂದಿರು ಗೊರವ ವೇಷದ ಶಿವನಿಗೆ ತಮ್ಮ ತಂಗಿಯನ್ನು ಕೊಡಲೊಪ್ಪದಾದಾಗ ಶಿವನು ಅವರಿಗೆ ಮೂರು ಮೂರು ಕವಡೆ, ಐದೈದು ಡಮರುಗ, ಬಟ್ಟಲು ಕೊಟ್ಟು ಸೇವೆ ಮಾಡಹಚ್ಚಿದ ಕತೆ ಅಲ್ಲಿಯೇ ಬರುತ್ತದೆ. ಇವತ್ತಿಗೂ ಅವರು ನಾಯಿಯ ಹಾಗೆ ಬೊಗಳುತ್ತ ದೋಣಿ ಸೇವೆ ಮಾಡುವದಿದೆ. ಅವರ ಶಿವ (ಮೈಲಾರ) ಭಕ್ತಿಮೂಲಕ್ಕೆ ಈ ಕತೆ ಒಳ್ಳೆಯ ಉದಾಹರಣೆಯಾಗಬಹುದಾದರೂ ವಾಸ್ತವವಾಗಿ ಕುರುಬತಿ ಮಾಳಮ್ಮನಿಗೂ ಶಿವನಿಗೂ ಯಾವ ಸಂಬಂಧವಿಲ್ಲ, ಗಂಗಿಮಾಳಮ್ಮ, ತುಪ್ಪದ ಮಾಳಮ್ಮನೆಂದು ವರ್ಣಿತಳಾದ ಪಾರ್ವತಿ ನಿಸ್ಸಂದೇಹವಾಗಿ ಶಿವ – ಮೈಲಾರನ ಪತ್ನಿ.

ಹಿಂದಕ್ಕೆ ಮಣಿಶೂಲ ಎಂಬ ಪರ್ವತದಲ್ಲಿ ಮಣಿ ಮತ್ತು ಮಲ್ಲ ಎಂಬ ಅಸುರರು ಅದೇ ಪರ್ವತದಲ್ಲೆ ತಪಸ್ಸಿಗೆ ತೊಡಗಿದ್ದ. ಸಪ್ತಋಷಿಗಳನ್ನು ಕಾಡತೊಡಗಿದರಂತೆ ಅವರ ಉಪಟಳವನ್ನು ತಗ್ಗಿಸಲು ದೇವತೆಗಳಿಂದ ಸ್ವತಃ ವಿಷ್ಣುವಿನಿಂದ ಆಗಲಿಲ್ಲ. ಆಗ ಅವರೆಲ್ಲ ಸೇರಿ ಶಿವನಲ್ಲಿಗೆ ಬಂದು ಮೊರೆಯಿಟ್ಟರು. ಮಣಿ-ಮಲ್ಲಾಸುರರ ದೌರ್ಜನ್ಯವನ್ನು ಕೇಳಿ ಕುಪಿತನಾದ ಶಿವನು ತನ್ನ ಜಡೆಯನ್ನು ಸಿಟ್ಟಿನಿಂದ ನೆಲಕ್ಕೆ ಅಪ್ಪಳಿಸುತ್ತಾನೆ. ಅವನ ಜಡೆಯಿಂದ ಉಗ್ರವಾದ ಶಕ್ತಿದೇವತೆಯೋರ್ವಳು ಎದ್ದು ಬರುತ್ತಾಳೆ. ನೋಡಲು ಭಯಂಕರವಾಗಿದ್ದ ಆಕೆಯ ಕೋಪವನ್ನು ಶಮನಗೊಳಿಸಲು ದೇವಾನುದೇವತೆಗಳು ಆಕೆಗೆ ತುಪ್ಪದ ಅಭಿಷೇಕ ಮಾಡುತ್ತಾರೆ. ಆಗ ದೇವತೆ ಶಾಂತಳಾಗುತ್ತಾಳೆ. ಹೀಗೆ ಕೋಪೋದ್ರಿಕ್ತ ದೇವತೆಯನ್ನು ತುಪ್ಪದ ಅಭಿಷೇಕದಿಂದ ಶಾಂತಗೊಳಿಸಿದ ಕಾರಣವಾಗಿ ಆ ದೇವತೆಗೆ ತುಪ್ಪದ ಮಾರಿ ತುಪ್ಪದ ಮಾಳವ್ವ ಎಂಬ ಹೆಸರು ಬಿದ್ದಿತೆಂದು ಹೇಳಲಾಗುತ್ತದೆ. ಗುರುತು ಮಾರಿ ಎಂಬ ಆಕೆಯ ಹೆಸರಾದರೂ ಇದೇ ಅರ್ಥದ್ದು (ತುಪ್ಪ – ಘೈತ+ಮಾರಿ-ಘೈತಮಾರಿ-ಗುರುತಮಾರಿ)

ಈ ತುಪ್ಪದ ಮಾರಿ ಇಲ್ಲವೆ ತುಪ್ಪದ ಮಾಳಿಯೊಂದಿಗೆ ದೇವ ಸೈನ್ಯದೊಂದಿಗೆ ನಂದೀಶ್ವರ, ಷಣ್ಮುಖ, ಗಣಪತಿ, ವಿಷ್ಣುವನೊಂದಿಗೆ ಮಾರ್ತಾಂಡ ಭೈರವನ ರೂಪ ಧರಿಸಿ ಹೊರಟ ಶಿವನು ಮಣಿಮಲ್ಲಾಸುರರನ್ನು ಸಂಹರಿಸಿ ಅದೇ ಮಣಿಶೂಲ ಪರ್ವತದಲ್ಲಿ ನೆಲೆನಿಲ್ಲುತ್ತಾನೆ. ತುಪ್ಪದ ಮಾಳಮ್ಮನಾಗಿ ಅವತರಿಸಿದ್ದು ಪಾರ್ವತಿಯ ಅದೇ ಹೆಸರಿನಿಂದ ಶಿವ-ಮೈಲಾರನ ಜೊತೆಯಾಗುತ್ತಾಳೆ.

ತುಪ್ಪದ ಮಾಳಮ್ಮ ಅರ್ಥಾತ್ ಪಾರ್ವತಿಗೆ ಗಂಗಿಮಾಳಮ್ಮನೆಂಬ ಹೆಸರು ಬರಲೂ ಕಾರಣವಿದೆ. ಶಿವನೊಂದಿಗೆ ಯುದ್ಧಸಂದರ್ಭದಲ್ಲಿ ಮಲ್ಲಾಸುರನು ಶಿವನ ಪತ್ನಿಯರನ್ನು ನೋಡಿ ಅವರನ್ನು ಹಿಡಿಯಲು ಕೈಚಾಚಿದನಂತೆ. ಹೆದರಿದ ಪಾರ್ವತಿ (ಮಾಳಮ್ಮ) ಗಂಗೆಯರು ಪರಸ್ಪರ ಅಪ್ಪಿಕೊಂಡ ಕಾರಣವಾಗಿ ಏಕಶರೀರ ಪಡೆದು ಗಂಗಿಮಾಳಮ್ಮರಾದರೆಂದು ಚಿತ್ರದುರ್ಗ ಜಿಲ್ಲೆಯ ಮೈಲಾರಪುರದ ಸ್ಥಳಪುರಾಣ ಆಧರಿಸಿ ಶ್ರೀ ರಾ. ಪುಟ್ಟರಾಜು ಬರೆದಿದ್ದಾರೆ (ನೋಡಿ. ಶ್ರೀ ಮೈಲಾರಲಿಂಗೇಶ್ವರ ಮಹಿಮೆ).

ಪುರಾಣ ಮೈಲಾರನ ಪತ್ನಿ ತುಪ್ಪದ ಮಾಳಮ್ಮ ಹಾಗೂ ಚರಿತ್ರ ಮೈಲಾರನ ಪತ್ನಿ ಕುರುಬತಿ ಮಾಳಮ್ಮರ ವಿಗ್ರಹಗಳು ಮೈಲಾರನ ದೇವಸ್ಥಾನಗಳಲ್ಲಿ ಪ್ರಮುಖವಾಗಿ ಗೋಚರಿಸುತ್ತವೆ. ಕುರುಬತಿ ಮಾಳಮ್ಮ ಚರಿತ್ರ ಮೈಲಾರನೊಂದಿಗೆ ಕುದುರೆಯೇರಿ ಕುಳಿತ (ಹಿಂದುಗಡೆ) ವಿಗ್ರಹಗಳು ಮೈಲಾರನ ದೇವಸ್ಥಾನಗಳಲ್ಲಿ ಸಾಮಾನ್ಯ, ಕುದುರೆ (ತುರಂಗ) ಯೇರಿದ ಕಾರಣವಾಗಿಯೇ ಏನೋ ಈಕೆಗೆ ‘ತುರಂಗಬಾಲೆ’ ಎಂಬ ಹೆಸರು ಬಿದ್ದಿದೆ. ತುಪ್ಪದ ಮಾಳಮ್ಮನ ಪದ್ಮಾಸನ ಭಂಗಿಯ ಉಗ್ರಮೂರ್ತಿಯಲ್ಲದೆ, ಕಪಾಲ, ಡಮರುಗ, ತ್ರಿಶೂಲಧಾರಿ ಶಿವ (ಭೈರವ) ನೊಂದಿಗೆ ಕೈಯಲ್ಲಿ ಹೂ ಹಿಡಿದು, ವರದ ಹಸ್ತ ತೆರೆದು ಕುಳಿತ ತುಪ್ಪದ ಮಾಳಮ್ಮನ ಇನ್ನೊಂದು ರೂಪವಾದ ಗಂಗಿಮಾಳಮ್ಮನ ವಿಗ್ರಹವುಂಟು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ, ಧಾರವಾಡ ಜಿಲ್ಲೆಯ ದೇವರಗುಡ್ಡ, ಬೆಳಗಾವಿ ಜಿಲ್ಲೆಯ ಮಗಸೂಳಿ, ಕಲಬುರ್ಗಿ ಜಿಲ್ಲೆಯ ಮೈಲಾಪುರ, ಚಿತ್ರದುರ್ಗ ಜಿಲ್ಲೆಯ ಮೈಲಾರಪುರ, ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ಮುಂತಾದ ಮೈಲಾರನ ಕ್ಷೇತ್ರಗಳಲ್ಲಿ ಈ ತೆರನ ವಿಗ್ರಹಗಳಿರುವುದನ್ನು ನೋಡಬಹುದಾಗಿದೆ.

ದೇವರ ಹಿಪ್ಪರಗಿಯ ಮೈಲಾರನ ದೇವಸ್ಥಾನದಲ್ಲಿ ತುಪ್ಪದ ಮಾಳಮ್ಮನ ವಿಗ್ರಹವಲ್ಲದೆ, ಅಶ್ವಾರೋಹಿ ಮೈಲಾರನ ಬೆನ್ನ ಹಿಂದೆ ಕುಳಿತ ಈ ಕುರುಬತಿ ಮಾಳಮ್ಮನ ವಿಗ್ರಹವೂ ಇದೆ. ಈಕೆ ಹನುಗುಂದ ತಾಲೂಕಿನ (ವಿಜಾಪುರ ಜಿಲ್ಲೆ) ಸೂಳೇಭಾವಿಯ ಊರಿನವಳೆಂದೂ, ಈಕೆಯ ಪತಿ ಮೊದಲು ಹಿಪ್ಪರಗಿಯ ಮಲ್ಲಸರ್ಜನೆಂದೂ ಹೇಳುತ್ತಾರೆ. ಮಲ್ಲಸರ್ಜ ತನ್ನ ವೈರಿ ಕನಮಡಿ (ಬಿಜಾಪುರ – ತಿಕೋಟಾ ರಸ್ತೆಯಲ್ಲಿನ ಊರು) ಧರೆಯಯ್ಯಾನನ್ನು ದಂಡಿಸಲು ತನ್ಮೂಲಕ ಅವನಿಂದ ತನಗಾಗುತ್ತಿದ್ದ ಉಪದ್ರವವನ್ನು ತಗ್ಗಿಸಿಕೊಳ್ಳಲು ಚಟ್ಟರಕಿ (ದೇವರ ಹಿಪ್ಪರಗಿಗೆ ೧೫ ಕಿ. ಮಿ. ದೂರ) ರಾವುತರಾಯನನ್ನು ಕರೆಸಿಕೊಂಡನಂತೆ. ತಾನು ಬೇಡಿದ್ದನ್ನು ಕೊಡುವುದಾದರೆ ಧರೆಯಯ್ಯನ ಮೇಲೆ ಏರಿಹೋಗುವುದಾಗಿ ವೀರ ರಾವುತ ನುಡಿದನಂತೆ, ಮಲ್ಲಸರ್ಜ ಅದಕ್ಕೆ ಒಪ್ಪಿದ್ದ, ರಾವುತ ತನ್ನ ಕರ್ತವ್ಯ ಪೂರೈಸಿದ ಮಲ್ಲಸರ್ಜ ಏನು ಬೇಕು ಬೇಕು ಎಂದ, ರಾವುತ ಮಲ್ಲಸರ್ಜನ ಹೆಂಡತಿ ಮಾಳಮ್ಮನನ್ನು ಬೇಡಿದ. ಮಾತು ಕೊಟ್ಟ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟುಕೊಂಡ ಮಲ್ಲಸರ್ಜ ರಾವುತನಿಗೆ ಹೀಗೆ ಹೇಳಿದನಂತೆ ‘ಏಳುಕೋಟಿ ಜನ’ ಏಳುಕೋಟಿ ಡೊಳ್ಳು ಕೂಡಬೇಕು. ಗುಬ್ಬಿ ಚಿಂವ್ ಚಿಂವ್ ಅನ್ನುವುದರೊಳಗೆ ಅಕ್ಕಿಕಾಳು ಬೀಳಬೇಕು. ಏಳುಕೋಟಿ ಡೋಳ್ಳು, ಜನ ಕೂಡಲಿಲ್ಲ. ನಸುಕು ಹರಿಯುವದರೊಳಗೆ ರಾವುತ ಮಾಳವ್ವರ ಮದುವೆಯಾಗಲಿಲ್ಲ. ಎಂದು ದೇವರ ಹಿಪ್ಪರಗಿ ಮೈಲಾರನ ಭಕ್ತರು ಹೇಳುತ್ತಾರೆ. ಅವರ ಮದುವೆಯಾಗಲಿಲ್ಲ ಎಂದು ದೇವರ ಹಿಪ್ಪರಗಿ ಮೈಲಾರನ ಭಕ್ತರು ಭಕ್ತರು ಹೇಳುತ್ತಾರೆ. ಅವರ ಮದುವೆ ಆಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ ರಾವುತನ ಜೊತೆಗೆ ಕುದುರೆ ಏರಿದ ಮಾಳಮ್ಮ ಮಾತ್ರ ದೇವರ ಹಿಪ್ಪರಗಿಯ ಮೈಲಾರನ ಗುಡಿಯಲ್ಲಿ ನಿತ್ಯಪೂಜೆಗೊಳ್ಳುತ್ತಿದ್ದಾಳೆ. ಇಲ್ಲಿನ ಮೈಲಾರನ ಭಕ್ತರಿಗೆ ಮೈಲಾರನೆಂದರೆ ರಾವುತ ಕುರುಬತಿ ಮಾಳಮ್ಮನೆಂದರೆ ಮಲ್ಲಸರ್ಜನ ಹೆಂಡತಿಯಾಗಿದ್ದ ಮಾಳಮ್ಮ.

ಮೈಲಾರ – ಮಾಳವ್ವರ ಜನಜನಿತ ಕತೆಗೆ ಈ ಕತೆ ಸ್ವಲ್ಪ ಭಿನ್ನವಾಗಿ ತೋರುತ್ತದೆ. ಗಮನೀಯ ಅಂಶವೆಂದರೆ ದೇವರ ಹಿಪ್ಪರಗಿಯ ಮೈಲಾರ – ಮಾಳವ್ವರ ಕತೆಯಲ್ಲಿ ಅವರ ಚಾರಿತ್ರಿಕತೆ, ಪ್ರಾದೇಶಿಕತೆ, ದಟ್ಟವಾಗಿ ಕಣ್ಣಿಗೆ ಹೊಡೆಯುತ್ತದೆ. ಹಿಪ್ಪರಗಿಯ ಮಲ್ಲಸರ್ಜ, ಚಟ್ಟರಕಿಯ ಮೈಲಾರ (ರಾವುತ), ಸೂಳೇಭಾವಿಯ ಮಾಳಮ್ಮ, ಕನಮಡಿಯ ಧರೆಯಯ್ಯ ಹೀಗೆ ಎಲ್ಲರೂ ಚರಿತ್ರೆಯ ವ್ಯಕ್ತಿಗಳೇ.

ಕೆಲವು ತಿಂಗಳುಗಳು ಹಿಂದೆ ಧಾರವಾಡದಲ್ಲಿ ನಡೆದ ಐದನೆಯ ‘ಕರ್ನಾಟಕ ಇತಿಹಾಸ ಪರಿಷತ್ ೨ನಲ್ಲಿ (1985) ಹಿಪ್ಪರಗಿ ರಾವುತರಾಯನ ಮೇಲೆ ಒಂದು ಪ್ರಬಂಧ ಮಂಡಿಸಿದ್ದೆ. ಮೈಲಾರನ ಪಿಂಬೇರ ಎಂಬ ಊರು ಈ ಹಿಪ್ಪರಗಿ ಆಗಿರಬಹುದೇ? ಎಂದು ಅಲ್ಲಿ ನನ್ನ ಅನುಮಾನಗಳನ್ನು ಸಾಧಾರಣವಾಗಿ ಚರ್ಚಿಸಿದ್ದೆ. ಪಿಂಬೇರ – ಪಿಂಬರ – ಪಿಪ್ಪರ + ಕೆಯ್-ಪಿಪ್ಪರಗಿ-ಹಿಪ್ಪರಗಿ ಆಗಿರಬೇಕು ಎಂದು ಈಗಲೂ ನನಗೆ ಅನಿಸುತ್ತದೆ. ಈ ಊರಲ್ಲಿ ಹರಡಿಕೊಂಡಿರುವ ಮೈಲಾರ (ರಾವುತ) ಮಾಳಮ್ಮರ ದಟ್ಟ ಚಾರಿತ್ರಿಕ ವಿವರಗಳು ನನ್ನ ಅನುಮಾನಗಳನ್ನು ಬೆಂಬಲಿಸುತ್ತಿವೆ. ಶಂಕರದಾಸಿಮಯ್ಯನಿಗೆ ಕಲ್ಯಾಣ-ನವಿಲೆಯ ನಡುವೆ ಎದುರಾದ ಈ ಹಿಪ್ಪರಗಿಯೇ ಆಗಿರುವ ಸಾಧ್ಯತೆ ಇದೆ.

ಹೆಗ್ಗಡೆ ಪ್ರಧಾನಿ ಮನೆವೆಗ್ಗಡೆ ಚಟ್ಟಪ : ಮೈಲಾರನ ಪರಿವಾರ ದೇವತೆಗಳಲ್ಲಿ ಗಂಗಿಮಾಳಮ್ಮನ (ತುಪ್ಪದ ಮಾಳಮ್ಮ), ಕುರುಬತಿ ಮಾಳಮ್ಮ (ತುರಂಗಬಾಲೆ) ರಷ್ಟೇ ಜನಪ್ರಿಯ ದೈವತೆ ಈ ಹೆಗ್ಗಡೆ ಪ್ರಧಾನಿ. ಮೈಲಾರನ ದೇವಸ್ಥಾನಗಳ ಎದುರಿಗೆ ಈತನ ದೇವಸ್ಥಾನ ಇಲ್ಲವೆ ಮೂರ್ತಿಗಳನ್ನು ಸಾಮಾನ್ಯವಾಗಿ ನೋಡಬಹುದಾಗಿದೆ. ಪುರಾಣ, ಮೈಲಾರ, ಚರಿತ್ರ ಮೈಲಾರ, ತುಪ್ಪದ ಮಾಳಮ್ಮ, ಕುರುಬತಿ ಮಾಳಮ್ಮರ ಸಮೀಕರಣದಂತೆ ಹೆಗ್ಗಡೆ ಪ್ರಧಾನಿ ಮನೆವಗ್ಗಡೆ ಚಟ್ಟಪರ ಸಮೀಕರಣವಾಗಿರಬಹುದೇ? ಎಂಬ ಅನುಮಾನ ಕಾಡುತ್ತದೆ. ಹೆಗ್ಗಡೆ ಪ್ರಧಾನಿ ಸಾಕ್ಷಾತ್ ವಿಷ್ಣುವೆಂದು ಮೈಲಾರನ ಭಕ್ತರ ನಂಬುಗೆ. ಮಣಿಮಲ್ಲಾಸುರರ ವಧೆಗೆ ಮಾರ್ತಾಂಡ ಭೈರವನ ವೇಷ ಧರಿಸಿದ ಶಿವನು ಅವರೊಂದಿಗೆ ಯುದ್ಧಕ್ಕೂ ಬಂದಾಗ ಶಿವನೊಂದಿಗೆ ವಿಷ್ಣುವೂ ದೇವಸೈನ್ಯದ ಮುಖ್ಯಸ್ಥನಾಗಿ ಬರುತ್ತಾರೆ. ಇದು ಪುರಾಣದ ಮಾತಾದರೆ ಮೈಲಾರ ಮಾಳಚಿಯರನ್ನು ಪ್ರಸಿದ್ಧಿಗೆ ತಂದ (ಬ್ರಹ್ಮಶಿವ ಹೇಳುವಂತೆ) ಮನೆವೆಗ್ಗಡೆ ಚಟ್ಟಪ ಐತಿಹಾಸಿಕ ವ್ಯಕ್ತಿಯಾಗಿರಬೇಕೆಂದು ವಿದ್ವಾಂಸರು ಉಹಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗ ಸೂಗೂರು ತಾಲೂಕಿನ ಜಾವೂರು ಗ್ರಾಮದ ಶಾಸನೋಕ್ತ ಮನೆವೆಗ್ಗಡೆ ಚಟ್ಟಪ ಈತನಾಗಿರಬೇಕೆಂದು ಡಾ. ಕೆ. ವಿ. ರಮೇಶ ತಿಳಿಸಿದ್ದಾರೆ. ಇದು ಇನ್ನೂ ನಿರ್ಣಯವಾಗಬೇಕಾದ ವಿಚಾರಬೇಕೆಂದು ಬ್ರಹ್ಮಶಿವನಿಗಿಂತ ಸ್ವಲ್ಪ ಹಿಂದೆ ಮನೆವೆಗ್ಗಡೆ ಚಟ್ಟಪ ಬಾಳಿರಬೇಕೆಂದು ಹೇಳುವಲ್ಲಿ ಸತ್ಯಾಂಶವಿದೆ. ಹೆಗ್ಗಡೆ (ಪ್ರಧಾನಿ) – ಮನೆವೆಗ್ಗಡೆ (ಚಟ್ಟಪ) ಎಂಬ ಹೆಸರುಗಳಲ್ಲಿ ಪ್ರಧಾನವಾಗಿ ಕೇಳಿಸುವ ಹೆಗ್ಗಡೆ ಚರಿತ್ರೆಮೈಲಾರನನ್ನು ಜನಪ್ರಿಯಗೊಳಿಸಿದ ಚಟ್ಟಪನನ್ನು ಸೂಚಿಸುತ್ತಿರುವಂತಿದೆ. ಈತ ವೈಷ್ಣವನಾಗಿರಬಹುದೆ? ಎಂಬುದನ್ನು ಶೋಧಿಸಬೇಕಾಗಿದೆ. ಮೈಲಾರನ ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ಹೆಗ್ಗಡೆ ಪ್ರಧಾನಿ ಸಾಕ್ಷಾತ್ ವಿಷ್ಣುವಿನ ಪ್ರತಿರೂಪವಾಗಿರುವದು, ಈತನೊಂದಿಗೆ ಮನೆವೆಗ್ಗಡೆ ಚಟ್ಟಪ ಸಮೀಕರಣವಾಗಿರುವ ಸಾಧ್ಯತೆಯಿರುವದು ಈ ಅಂಶಗಳು ಮನೆವೆಗ್ಗಡೆ ಚಟ್ಟಪ ವೈಷ್ಣವ ಸಂಪ್ರದಾಯನಾಗಿರುವ ಸಾಧ್ಯತೆ ಇದೆ.

ದೇವರ ಹಿಪ್ಪರಗಿಯ ಮೈಲಾರನ ದೇವಸ್ಥಾನ (ಊರ ಹೊರಗಿನ) ಎದುರಿಗೆ ಹೆಗ್ಗಡೆ ಪ್ರಾಧಾನಿಯ ಗುಡಿ ಇದೆ. ಆತನ ವಿಗ್ರಹವಿಲ್ಲ. ಈ ಹೆಗ್ಗಡೆ ಪ್ರಧಾನಿ ಹಿಪ್ಪರಗಿಗೆ ಸಮೀಪವಿರುವ (ಸು. ೧೫ ಕಿ.ಮೀ.) ಚಟ್ಟರಕಿಯವನಿರಬೇಕು? ಹಿಪ್ಪರಗಿಯ ರಾಹುತ ಅರ್ಥಾತ್ ಮೈಲಾರ ಚಟ್ಟರಕಿಯವನೆಂದು ಈ ಭಾಗದ ಮೈಲಾರನ ಭಕ್ತರ ಅಚ್ಚಲ ನಂಬುಗೆ. ಯಾದಗಿರಿ ತಾಲೂಕು ಮೈಲಾರನ ಹಾಡುಗಳಲ್ಲಿ ಚಟ್ಟರಕಿಯ ಪ್ರಸ್ತಾಪವಿದೆ. ಅದರಲ್ಲಿ ಮೈಲಾರ ಚಟ್ಟರಕಿಯವನೆಂದು ಹೇಳಲಾಗಿದೆ. ಅಲ್ಲಿ ಈತ ಅರಸನಾಗಿದ್ದನಂತೆ. ಈ ಅರಸನಿಗೆ ಅಢಣತ ಮೈಲಾರನ ಅಂತಃಪುರದ ಅಧ್ಯಕ್ಷನಾಗಿ (-ಮನೆವೆಗ್ಗಡೆ) ಚಟ್ಟಪ ಚಟ್ಟರಕಿಯಲ್ಲಿದ್ದನೆ? ಚಟ್ಟರಸನ ಕೆಯ್ ಚಟ್ಟರಕಿಯಾಗಿರಬಹುದೇ? ಇದು ಒಂದು ಊಹೆ ಮಾತ್ರ. ಮೈಲಾರನ ಪಿಂಬೇರವೇ ರಾಹುತನ ಈ ಹಿಪ್ಪರಗಿಯಾಗಿರಬೇಕೆಂದು ನನಗೆನಿಸುವದರಿಂದ ಚಟ್ಟರಕಿ ಚಟ್ಟಪನಿಂದ ಹೆಸರಾಗಿರಬೇಕೆಂದೂ, ಬ್ರಹ್ಮಶಿವ ಹೇಳುವ ಮನೆವೆಗ್ಗಡ ಚಟ್ಟಪ ಈತನೇ ಇರಬೇಕೆಂದು ನನಗೆ ತೋರುತ್ತದೆ.

ಚಿತ್ರದುರ್ಗ ಜಿಲ್ಲೆಯ ಮೈಲಾರಪುರದ ಮೈಲಾರನ ದೇವಸ್ಥಾನದಲ್ಲಿ ಜಟಾಧಾರಿ ತಪಸ್ವಿಯ ರೂಪದಲ್ಲಿ ಹೆಗ್ಗಪ್ಪ (ಹೆಗ್ಗಡೆ ಪ್ರಧಾನಿ) ಪೂಜೆಗೊಳ್ಳುತ್ತಿರುವದು ಕುತೂಹಲಕರವಾಗಿದೆ. ಮೈಲಾರನ ದರುಶನಕ್ಕೆ ಬಂದ ಜನ ತಂತಮ್ಮ ಊರುಗಳಿಗೆ ಹೋದನಂತರವೂ ತಮ್ಮ ತಮ್ಮ ಮನೆಗಳಲ್ಲಿ ಹೆಗ್ಗಪ್ಪನ ಪೂಜೆ ಮಾಡುವದಿದೆಯಂತೆ. ಇದು ತಮ್ಮೊಡನೆ ತಮ್ಮೂರಿಗೆ ಬಂದ ಮೈಲಾರನ್ನು ಆತನ ಪ್ರಧಾನಿ ಹೆಗ್ಗಪ್ಪ (ಈತನನ್ನು ವಿಷ್ಣುವೆಂದೇ ಅವರು ತಿಳಿಯುತ್ತಾರೆ)ನ ಮೂಲಕ ಹಿಂತಿರುಗಿ ಕಳುಹಿಸುವದು ಎಂದು ಹೇಳುತ್ತಾರೆ ಎಂದು ರ. ಪುಟ್ಟರಾಜು ಎಂಬುವರು ಬರೆದಿದ್ದಾರೆ (ನೋಡಿ _ ಶ್ರೀ ಮೈಲಾರ ಲಿಂಗೇಶ್ವರ ಮಹಿಮೆ).

ಮೈಲಾರನಿದ್ದಲ್ಲಿ ಆತನ ಪ್ರಧಾನಿ ಹೆಗ್ಗಪ್ಪ ಇಲ್ಲವೆ ಹೆಗ್ಗಡೆ (ಪ್ರಧಾನಿ ಹೆಗ್ಗಡೆ ಮನೆವೆಗ್ಗಡೆ ಚಟ್ಟಪ) ಇರಲೇಬೇಕು. ಮೈಲಾರ – ಮಾಳಚಿಯರಷ್ಟೇ (ಚಾರಿತ್ರಿಕ) ಪ್ರಾಚೀನನೂ, ಜನಪ್ರಿಯನೂ ಆದ ಈತನ ದೇವಾಲಯಗಳು, ವಿಗ್ರಹಗಳು ಕರ್ನಾಟಕದ ಎಲ್ಲ ಮೈಲಾರ ಸಂಪ್ರದಾಯದ ಊರುಗಳಲ್ಲಿವೆ. ವಿಷ್ಣುವನ್ನು ಹೋಲುವ ಹೆಗ್ಗಪ್ಪನೆಂಬ ಹೆಗ್ಗಡೆ ಪ್ರಧಾನಿಯ ಸುಂದರ ಶಿಲ್ಪವೊಂದು ಅಥಣಿ ತಾಲೂಕು ಮಂಗಸೂಳಿಯ ಮೈಲಾರನ ದೇವಸ್ಥಾನ ಸಂಕೀರ್ಣದಲ್ಲಿ ಇದೆ ಎಂದು ಕೇಳಿದ್ದೇನೆ.

ಚಿಕ್ಕಯ್ಯ (ಷಣ್ಮುಖ) : ಶಿವನ ಮಗನಾದ ಷಣ್ಮುಖನನ್ನು ಮೈಲಾರನ ಸಂಪ್ರದಾಯದಲ್ಲಿ ಚಿಕ್ಕಯ್ಯನೆಂಬ ಹೆಸರಿನಿಂದ ಪೂಜಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಮೈಲಾರ ಪುರದಲ್ಲಿ ಮೈಲಾರ – ಮಾಳಮ್ಮರೊಂದಿಗೆ ಷಣ್ಮುಖನ ಮೂರ್ತಿ ಇದೆ ಎಂದು ಕೇಳಿದ್ದೇನೆ.

ಸಪ್ತಋಷಿಗಳಿಗೆ ಕಾಟ ಕೊಡುತ್ತಿದ್ದ ಮಣಿಮಾಲ್ಲಾಸುರರನ್ನು ವಧಿಸಲು ಶಿವನು ಮಾರ್ತಾಂಡ ಭೈರವನಾಗಿ ತನ್ನ ದೇವತಾ ಸೈನ್ಯದೊಂದಿಗೆ ಮಣಿಶೂಲ ಪರ್ವತಕ್ಕೆ ಬರುತ್ತಾರೆ. ಮಲ್ಲಾಸುರನು ತನ್ನ ಕಡೆಯಿಂದ ಖಡ್ಗದಂಷ್ಟ್ರನೆಂಬ ಸೇನಾನಿಗೆ ಯುದ್ಧದ ಮುಖಂಡತ್ವವನ್ನು ವಹಿಸಿಕೊಡುತ್ತಾನೆ. ಆಗ ಭೈರವ ರೂಪಿ ಶಿವನು ತನ್ನ ಮಗನಾದ ಷಣ್ಮುಖನು ವೀರಾವೇಶದಿಂದ ಹೋರಾಡಿ, ಖಡ್ಗದಂಷ್ಟ್ರನನ್ನು ಕೊಂದು ರಾಕ್ಷಸ ಸೈನ್ಯವನ್ನು ಓಡಿಸುತ್ತಾನೆ. ಪುರಾಣಗಳಲ್ಲಿ, ಸ್ಥಳಪುರಾಣಗಳಲ್ಲಿ ಈ ಕತೆ ಬರುತ್ತದೆ.

ಮಲ್ಲಾಸುರನನ್ನು ಕೊಂದು ಶಿವ ಮೈಲಾರನಾದಂತೆ, ಖಡ್ಗದಂಷ್ಟ್ರನನ್ನು ಕೊಂದ ಷಣ್ಮುಖನು ಚಿಕ್ಕಯ್ಯನಾಗಿ ಮೈಲಾರನ ದೇವಸ್ಥಾನಗಳಲ್ಲಿ ಸ್ಥಾಪಿತನಾಗಿದ್ದಾನೆ. ಶಿವನ ಮಕ್ಕಳೆಲ್ಲ ಷಣ್ಮುಖ ಗಣಪತಿಗಿಂತ ಹಿರಯನಾಗಿದ್ದರೂ ಈತ ಇಲ್ಲಿ ಚಿಕ್ಕ ಅಯ್ಯನೇ. ಮೈಲಾರ – ಗಂಗಿಮಾಳಮ್ಮರ ಉತ್ಸವಕಾಲದಲ್ಲಿ ಆ ಉತ್ಸವ ಮೂರ್ತಿಗಳ ಮುಂಭಾಗದಲ್ಲಿ ಈತನನ್ನು ಇಟ್ಟು ಪೂಜಿಸಲಾಗುತ್ತಿದೆ. ಮಣಿ-ಮಲ್ಲಾಸುರ ವಧೆಯಲ್ಲಿ ಶಿವ-ಪಾರ್ವತಿಯರೊಂದಿಗೆ ಮುಂದಾಗಿ ಪಾಲ್ಗೊಂಡಿದ್ದರಿಂದ ಶಿವ-ಮೈಲಾರನ ಪರಿವಾರದಲ್ಲಿ ಷಣ್ಮುಖನನ್ನು ಈ ರೀತಿ ಮುಂದಿಟ್ಟು ಪೂಜಿಸುತ್ತಿರುವಂತೆ ಕಾಣುತ್ತದೆ. ಉತ್ತರ ಕರ್ನಾಟಕ ಭಾಗದ ಮೈಲಾರನ ಕ್ಷೇತ್ರಗಳಲ್ಲಿ ಷಣ್ಮುಖ (ಚಿಕ್ಕಯ್ಯ)ನ ವಿಗ್ರಹಗಳು ಅತ್ಯಂತ ವಿರಳವಾಗಿ ಗೋಚರಿಸುತ್ತವೆ. ಧಾರವಾಡ ಜಿಲ್ಲೆಯ ದೇವರಗುಡ್ಡದಲ್ಲಿ ಈತನ ಒಂದು ವಿಗ್ರಹವಿರುವುದಾಗಿ ಹೇಳುತ್ತಾರೆ.

ಷಣ್ಮುಖ ಶಿವನ ಮಗನಾದುದರಿಂದ ಈತನನ್ನು ಪುರಾಣ ಮೈಲಾರನ ಪರಿವಾರ-ದೇವತೆ ಎಂದು ಕರೆಯಬಹುದು. ಚರಿತ್ರೆ ಮೈಲಾರನಿಗೂ ಈತನಿಗೂ ಯಾವುದೇ ಸಂಬಂಧವಿಲ್ಲ. ಚರಿತ್ರೆ ಮೈಲಾರನಿಗೆ ಮಕ್ಕಳಿದ್ದರೆ ಇನ್ನೊಂದು ಸಮೀಕರಣ ಕಾಣಿಸಿಕೊಳ್ಳುತ್ತಿತ್ತೇನೋ.

ಗಣಪತಿ (ದೊಡ್ಡಯ್ಯ) : ಶಿವನ ಇನ್ನೊಬ್ಬ ಮಗ ಗಣಪತಿ, ಮೈಲಾರನ ಪರಿವಾರದಲ್ಲಿ ಪೂಜೆಗೊಳ್ಳುತ್ತಿರುವ ಇನ್ನೊಬ್ಬ ದೈವತ. ವಿಷ್ಣುನಿವಾರಕ, ಸಿದ್ದಿವಿನಾಯಕನೆಂದು ಭಾರತೀಯರಿಂದ ಅಗ್ರಪೂಜೆ ಪಡೆಯುವ ಈತನಿಗೆ ಷಣ್ಮುಖನಷ್ಟೇ ಮಹತ್ವದ ಸ್ಥಾನ, ಮೈಲಾರನ ದೇವಸ್ಥಾನಗಳಲ್ಲಿ ಷಣ್ಮುಖ ಚಿಕ್ಕಯ್ಯನಾದರೆ ಗಣಪತಿ ದೊಡ್ಡಯ್ಯ.

ಮಲ್ಲಾಸುರನ ಸೇನಾನಿ ಖಡ್ಗದಂಷ್ಟ್ರನನ್ನು ಷಣ್ಮುಖನು ವಧಿಸಿದರೆ, ಅವನ ಇನ್ನೊಬ್ಬ ಸೇನಾನಿ ಉರ್ಕಾಮುಖನೆಂಬ ರಾಕ್ಷಸನನ್ನು ಗಣಪತಿಯು ಸಂಹರಿಸಿದನೆಂದು ಪುರಾಣಗಳು ಹೇಳುತ್ತವೆ. ಚಿತ್ರದುರ್ಗ ಜಿಲ್ಲೆಯ ಮೈಲಾರಪುರದಲ್ಲಿ ಷಣ್ಮುಖನ ವಿಗ್ರಹದೊಂದಿಗೆ ಗಣಪತಿಯ ವಿಗ್ರಹವೂ ಇದೆಯೆಂದು ತಿಳಿದುಬರುತ್ತದೆ. ಮೂರಡಿ ಎತ್ತರದ ಪುರಾತನ ವಿಗ್ರಹದ ಹಿಂದೆ ಪ್ರಭಾವಳಿ, ಪಕ್ಕದಲ್ಲಿ ಈತನ ವಾಹನವಾದ ಇಲಿ ಇದೆ ಎಂದು ರ. ಪುಟ್ಟರಾಜು ‘ಶ್ರೀ ಮೈಲಾರಲಿಂಗೇಶ್ವರರ ಮಹಿಮೆ’ ಎಂಬ ತಮ್ಮ ಪುಸ್ತಿಕೆಯಲ್ಲಿ ತಿಳಿಸಿದ್ದಾರೆ.

ನಾಯಿ ಮತ್ತು ಕುದುರೆ :

ತುಪ್ಪದ ಮಾಳಮ್ಮ, ಕುರುಬತಿ ಮಾಳಮ್ಮ, ಹೆಗ್ಗಡೆ ಪ್ರಧಾನಿ, ಮನೆವೆಗ್ಗಡೆ ಚಟ್ಟಪ, ಷಣ್ಮುಖ, ಗಣಪತಿ ಮೊದಲಾದವರು ಮೈಲಾರ ಸಂಪ್ರದಾಯದ ಮೈಲಾರರ ದೇವಪರಿವಾರವಾದರೆ, ನಾಯಿ ಮತ್ತು ಕುದುರೆಗಳು ಆ ಸಂಪ್ರದಾಯದ ಅವರುಗಳ ಪ್ರಾಣಿದೇವತಾ ಪರಿವಾರವಾಗಿದೆ. ಶಿವನ ಮೂಲಕ ಆತನ ವಾಹನವಾದ ನಂದಿಗೆ ಪೂಜೆ ಸಲ್ಲುವಂತೆ ಮೈಲಾರರ ಮೂಲಕ ಅವರವರ ವಾಹನಗಳಿಗೆ ಮೈಲಾರನ ಭಕ್ತರಿಂದ ಪೂಜೆ ಪುರಸ್ಕಾರಗಳು ನಡೆಯುತ್ತಿರುವದು ಸಹಜವಾಗಿದೆ.

ನಾವು ಹಿಂದೆ ಗಮನಿಸಿದಂತೆ ಮೈಲಾರರು ಇಬ್ಬರು. ಅಂತೆಯೇ ಅವರವರಿಗೆ ಸೇರಿರುವ, ಸೇರಬೇಕಾದ ವಾಹನಗಳೂ ಎರಡು. ಪುರಾಣ ಮೈಲಾರನ ವಾಹನ ನಾಯಿಯಾಗಿದ್ದರೆ, ಚರಿತ್ರೆ ಮೈಲಾರನ ವಾಹನ ಕುದುರೆಯಾಗಿದೆ. ನನ್ನ ಈ ಅಖೈರು ನಿರ್ಣಯಕ್ಕೆ ಮೈಲಾರ ಸಂಪ್ರದಾಯದ ಕೆತ-ಕಾವ್ಯ-ಪುರಾಣಗಳ ಉಲ್ಲೇಖಗಳು ಉಪಷ್ಟಂಭಕವಾಗಿವೆ.

ಪುರಾಣ ಮೈಲಾರನ ಅಂದರೆ ಭೈರವ ರೂಪೀ ಶಿವನ ಪ್ರಸ್ತಾಪ ಬರುವ ಎಲ್ಲ ಸಂದರ್ಭಗಳಲ್ಲಿ ನಾಯಿ ವಾಹನದ ಪ್ರಸ್ತಾಪವಿದೆ. ‘ಅನುಭವ ಶಿಖಾಮಣಿ’ಯಲ್ಲಿ ಒಂದೇ ಕಡೆಗೆ ‘ಗಹಿರ’ ಎಂಬ ಕುಬೇರನ ಕುದುರೆ ಮೈಲಾರನ ವಾಹನವಾಯಿತೆಂಬ ಉಲ್ಲೇಖ ಬರುತ್ತಿದ್ದರೂ ಈ ಮೈಲಾರ ಶಿವನಲ್ಲ, ಶಿವನಿಗೆ ಸತ್ತಿಗೆ ಹಿಡಿಯುವ ಕಾಯಕದಲ್ಲಿದ್ದ ಸೇವಕನೆಂಬುದನ್ನು ಮರೆಯುವಂತಿಲ್ಲ. ಹೀಗೆ ಹೇಳುವಲ್ಲಿ, ಅನುಭಬ ಶಿಖಾಮಣಿ ಕರ್ತೃ ಇಬ್ಬರು ಮೈಲಾರರನ್ನು ಪರ್ಯಾಯವಾಗಿ ಸೂಚಿಸಿದಂತೆಯೂ ಆಗಿದೆ, ಶಿವ-ಮೈಲಾರನ ವಾಹನ ಕುದುರೆಯಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತ. ಬೇರೊಬ್ಬ ಮೈಲಾರ (ಅವನನ್ನೇ ನಾವು ಚರಿತ್ರೆ ಮೈಲಾರ ಎಂದು ಗ್ರಹಿಸಿದ್ದು)ನ ವಾಹನ ಕುದುರೆ ಎಂಬುದನ್ನು ತಿಳಿಸಿದಂತೆಯೂ ಆಗಿದೆ.

ಭೈರವನ ವಾಹನ ನಾಯಿ ಎಂಬುದು ಜನಜನಿತವಿದೆ. ನಾಯಿಯನ್ನು ‘ಮಲ್ಲಯ್ಯನೆಂದೇ ಉತ್ತರ ಕರ್ನಾಟಕದ ಕಡೆಗೆ ಸಂಭೋಧಿಸುತ್ತಾರೆ. ಮಲ್ಲಯ್ಯ ಅಂದರೆ ಪುರಾಣ ಮೈಲಾರನ ಭಕ್ತರಾದ ಗೊರವರು (ಈ ಗೊರವರು ತಮ್ಮ ಮೈಲಾರ ಶಿವನೇ ಎಂದು ಸ್ಥಾಪಿಸುವದರಿಂದ ಉದಾ : ಶಂ. ದಾ. ಪುರಾಣ ಅವರನ್ನು ಇಲ್ಲಿ ಪುರಾಣ ಮೈಲಾರನ ಭಕ್ತರೆಂದೇ ಕರೆದದ್ದು) – ತಮ್ಮನ್ನು ಶಿವ (ಮೈಲಾರ) ನ ನಾಯಿಗಳೆಂದು ಕರೆದು ಕೊಳ್ಳುವದು ಪ್ರಸಿದ್ಧವಾಗಿದೆ. ‘ಮೈಲಾರನ ಪೂಜಿಸಿ ನಾಯಾಗಿ ಬಗಳುವದ ಕಂಡೆ’ ಎನ್ನುತ್ತಾನೆ ಬಸವಣ್ಣ. ಚೆನ್ನಬಸವಣ್ಣ ತನ್ನ ಒಂದು ವಚನದಲ್ಲಿ ‘ಮೈಲಾರನಾರಾಧಿಸಿ ಕುರುಳ ಬೆರಳ ಕಡಿಸಿಕೊಂಡು ನಾಯಾಗಿ ಬಗಳುತ್ತಿಪ್ಪರಯ್ಯ’ ಎಂದು ನುಡಿದಿದ್ದಾನೆ. ಶಂ. ದಾ. ಪುರಾಣದಲ್ಲಿ ಗೊರವರ ಗುರು ಶಂಕರದಾಸಿಮಯ್ಯನಿಗೆ ಹೇಳುವ ಶಿವ ಮೈಲಾರನ ಕತೆಯಲ್ಲಿ ಶಿವನು ಶಬರ ವೇಷ ಧರಿಸಿ ಮಲ್ಲನೆಂಬ ಮಾಡಿ ಮೃಗರೂಪಿ ರಾಕ್ಷಸನನ್ನು ಕೊಲ್ಲಲು ನಾಲ್ಕು ವೇದಗಳನ್ನೇ ನಾಯಿಗಳಾಗಿ ಮಾಡಿಕೊಂಡು ಹೊರಟ ವಿಚಾರ ಬಂದಿದೆ. ‘ಅನುಭಬ ಶಿಖಾಮಣಿ’ಯ ಮೈಲಾರ ಲಿಂಗನ ಕಥೆಯಲ್ಲಿಯಂತೂ ನಾಯಿಗಳ ಉಲ್ಲೇಖ ಮತ್ತೆ ಮತ್ತೆ ಬರುತ್ತದೆ. ಮಣಿಮೈಲ್ಲಾಸುರನೆಂಬ ರಾಕ್ಷಸನಲ್ಲಿ ಏಳುಕೋಟಿ ನಾಯಿಸೈನ್ಯವಿತ್ತು ಎಂದು ಅಲ್ಲಿ ಹೇಳಲಾಗಿದೆ. ಭೈರವ ರೂಪಿ ಶಿವನ ಏಳುಕೋಟಿ ದೇವತಾಸೈನ್ಯ ಅವನ ಉಗ್ರನೇತ್ರದಿಂದ ಉಂಟಾದ ನಾಯಿ ಸೈನ್ಯವೆಂದು ಕೆಲವು ಐತಿಹ್ಯಗಳು ಹೇಳುತ್ತವೆ. ಮೈಲಾರನ ಭಕ್ತರು ಈ ವಿಚಾರವನ್ನೇ ಸಮರ್ಥಿಸುತ್ತಾರೆ. ಕುರುಬತಿ ಮಾಳಮ್ಮನನ್ನು ವರಿಸುವ ಸಂದರ್ಭದಲ್ಲಿ ಶಿವ-ಮೈಲಾರ ಕುರುಬತಿಯ ಅಣ್ಣಂದಿರನ್ನು ನಾಯಿಗಳಾಗಿ ಮಾಡಿದ ಸೂಚನೆ ಇದೆ. ಕುರುಬತಿಯನ್ನು ಕರಿನಾಯಿ ಮಾಡಿಕೊಂಡು ಹೋದ ಎಂದು ಹೇಳಲಾಗಿದೆ. ಹೀಗೆ ನಾಯಿಗಳ ಪ್ರಸ್ತಾಪ ಪುರಾಣ ಮೈಲಾರನಿಗೆ ಸಂಬಂಧಿಸಿಯೇ ಬರುವದರಿಂದ ನಾಯಿ ಆತನ ವಾಹನವೆಂದೋ, ಸೇವಕನೆಂದೋ ಕರೆಯಬಹುದು. ಗೋರವರು ತಮ್ಮನ್ನು ನಾಯಿಗಳೆಂದು ಕರೆದುಕೊಳ್ಳುವಲ್ಲಿ ಅವರ ಶಿವನ ‘ಅನುಯಾಯಿ’ ತ್ವ ಅವರು ಹೇಳಿಕೊಳ್ಳುವ ‘ನಾಯಿ’ ಪದದಲ್ಲಿ ಅಪಭ್ರಂಶವಾಗಿ ಸೇರಿಕೊಂಡಿರಬಹುದು. ಅಲ್ಲದೆ ಕುರುಬರ ಅಪ್ರೇಷ್ಟನಂತೆ ಅವರ ಬೆನ್ನ ಹಿಂದೆ ಚಲಿಸುವ, ಕುರಿಗಳನ್ನು ರಕ್ಷಿಸುವ ನೆಚ್ಚಿನ ಬಂಟ ಈ ಮೂಕಪ್ರಾಣಿ ನಾಯಿಯಾಗಿದ್ದು ಅದರ ನಿಷ್ಠೆ, ಪ್ರಾಮಾಣಿಕತೆ, ಸೇವಕ ಭಾವದ ಪ್ರತೀಕವಾಗಿ ತಾವು ಶಿವ (ಮೈಲಾರ)ನಿಗೆ ನಾಯಿಗಳೆಂದೂ ಕುರುಬರು (ಆ ಮೇಲೆ ಇತರರು) ಕರೆದುಕೊಂಡಿರಬಹುದು. ಹೀಗೆ ನಾಯಿ ಪುರಾಣಮೈಲಾರನ ವಾಹನವಾಗಿ, ಈ ವಾಹನವೇ ಗೊರವರು ತಾವಾಗಿ ನಾಯಿ ಮೈಲಾರನ ಸಂಪ್ರದಾಯದಲ್ಲಿ ಬಳಕೆಯಲ್ಲಿದೆ, ಮೈಲಾರನ ಭಕ್ತರಿಂದ ನಿತ್ಯ ಪೂಜೆಗೊಳ್ಳುತ್ತಿದೆ. ಕರ್ನಾಟಕದ ಮೈಲಾರನ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ನಾಯಿಯ ವಿಗ್ರಹ ನೋಡಲು ಸಿಗುತ್ತದೆ.

ನಾಯಿಯಂತೆ ಕುದುರೆ ಪುರಾಣಮೈಲಾರನ ವಾಹನ ಎಂದು ಹೇಳಲು ಆಧಾರಗಳಿಲ್ಲ. ಮೈಲಾರನ ಸಂಪ್ರದಾಯದಲ್ಲಿ ನಾಯಿಯಷ್ಟೇ ಪ್ರಮುಖವಾಗಿ, ಒಂದು ಕೈ ಮಿಗಿಲಾಗಿ ಅರ್ಚನೆಗೊಳ್ಳುವ, ಎದ್ದುಕಾಣುವ ಕುದುರೆ ಚರಿತ್ರಮೈಲಾರನ ವಾಹನವೆಂದು ತಿಳಿಯಲು ಸಾಧ್ಯವಿದೆ. ಚರಿತ್ರಮೈಲಾರ ತನ್ನ ನೈತಿಕ ಅಥಃಪತನ ಕಾರಣವಾಗಿ ಪತನ ಹೊಂದಿದ್ದರೂ ಮುಖ್ಯವಾಗಿ ಆ ಕಾರಣಕ್ಕಾಗಿಯೇ ವೀರಶೈವ ವಚನಕಾರರು, ಕವಿಗಳಿಂದ, ಜೈನ ಕವಿಗಳಿಂದ ನಿಂದಿಸಲ್ಪಡುತ್ತಿದ್ದರೂ ಆತ ಸತ್ತಿದ್ದು ಕಲಿತನದಿಂದ ಹೋರಾಡುತ್ತ ಎಂಬುದನ್ನು ಸೂಚಿಸಲು ಅವರು ಮರೆತಿಲ್ಲ. ‘ವೀರದೊಳುಕ್ಕಿ ಮಚ್ಚರಿಸಿ ಕೋಪದಿ’ ಕಾದು ಸತ್ತ ವೀರ ಎಂದು ಬ್ರಹ್ಮಶಿವನೂ, ‘ರಣ ಮೈಲಾರ’ ಎಂದು ಕುಮಾರವ್ಯಾಸನೂ ಕರೆಯಬೇಕಾದರೆ ಕುರುಬತಿಯನ್ನು ಓಡಿಸಿಕೊಂಡು ಹೋಗುವ ಸಾಹಸವನ್ನು ಮೈಲಾರ ಮರೆಯಬೇಕಾದರೆ ಈತ ವೀರನೆಂಬುದು ಸುಳ್ಳಲ್ಲ. ವೀರನ ಕಲಿತನದ ಉತ್ಸಾಹಕ್ಕೆ ಮಹತ್ವಾಕಂಕ್ಷೆಯ ವೇಗಕ್ಕೆ ಇನ್ನೊಂದು ಹೆಸರು ಕುದುರೆ. ದೇ. ಹಿಪ್ಪರಗಿ ಮೈಲಾರನಿಗೆ ರಾಹೈಹನೆಂಬ ಪರ್ಯಾಯ ಹೆಸರಿರುವುದನ್ನು ಹಿಂದೆ ಕಾಣಿಸಿದ್ದೇವೆ. ‘ರಾಹುತ’ ಎಂದರೆ ಅಶ್ವಾರೋಹಿ ಅರ್ಥಾತ್ ಕುದುರೆ ಸವಾರ ಎಂದರ್ಥ. ಈತನೊಂದಿಗೆ ಕುದುರೆ ಏರಿದ ಹೆಂಗಸು ಮಾಳಮ್ಮನ ಇನ್ನೊಂದು ಹಸರು ತುರಂಗಬಾರೆ. ಈ ‘ತುರಂಗ’ (ತುರಂಗ) ಕುದುರೆಯನ್ನೂ ಸೂಚಿಸುತ್ತಿದ್ದು, ಕುದುರೆ ಏರುವವ ರಾಹುತನಾದರೆ, ರಾಹುತನ (ಮೈಲಾರನ) ಕುದುರೆ ಏರಿ ಅವನ ಹಿಂದೆ ಕುಳಿತು ಕೊಳ್ಳುವವಳು ತುರಂಗ ಬಾಲೆ. ಅನ್ವಥಣಕ ಹೆಸರಿನ ಅರ್ಥಪೂರ್ಣ ಜೋಡಿ ಇದು. ಈ ಜೋಡಿಯ ಹಿತ್ತಾಳೆ ಇಲ್ಲವೆ ಕಲ್ಲಿನ ಶಿಲ್ಪಗಳು ಮೈಲಾರನ ಎಲ್ಲ ದೇವಸ್ಥಾನಗಳಲ್ಲಿ ಸಹಜವಾಗಿ ನಮ್ಮ ಕಣ್ಣಿಗೆ ಬೀಳುತ್ತವೆ. ಮೈಲಾರನ ಉತ್ಸವದಲ್ಲಿ ಮೈಲಾರನೊಂದಿಗೆ ಕುದುರೆಯು ಮೆರವಣಿಗೆ ತೆಗೆಸಿಕೊಳ್ಳುವದು ಸ್ವಾರಸ್ಯಕರವಾಗಿದೆ.

ಜುಂಜಪ್ಪ :

ಕಾಡುಗೊಲ್ಲರ ಕುಲಗುರುವಾದ ಜುಂಜಪ್ಪ ದೇವತೆಯು ಮೈಲಾರನ ಸಂಪ್ರದಾಯದಲ್ಲಿ ಕಾಣಿಸಿಕೊಳ್ಳುವದು ಕುತೂಹಲಕರವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಈತನ ಪ್ರಾಬಲ್ಯವಿರುವುದರಿಂದಲೋ ಏನೋ ಆ ಭಾಗದ ಮೈಲಾರನ ದೇವಸ್ಥಾನಗಳಲ್ಲಿ ಈತನ ವಿಗ್ರಹಗಳಿವೆ.

ಜುಂಜಪ್ಪನು ಶಿವನ ಮಗನಾದ ವೀರಭದ್ರನ ಅವತಾರ, ದುಷ್ಟರನ್ನು ಶಿಕ್ಷಿಸಿ ಗೊಲ್ಲಕುಲದವರನ್ನು ರಕ್ಷಿಸಿ ಮಹಿಮೆ ಮೆರೆಯಲು ಬಂದವನು ಎಂದು ಈತನ ಭಕ್ತರಾದ ಕಾಡುಗೊಲ್ಲರು ನಂಬುತ್ತಾರೆ. ತಮ್ಮ ಯಾದವ ಕುಲದವರೆಂದು, ಕೃಷ್ಣನ ಪರಂಪರೆಗೆ ಸೇರಿದವರೆಂದು ಕರೆದುಕೊಳ್ಳುತ್ತಾರೆ. ಆದರೆ ಅವರು ಆರಾಧಿಸುವ ದೇವರುಗಳೆಲ್ಲ ಶೈವ ಸಂಪ್ರದಾಯಕ್ಕೆ ಸೇರಿರುವದು ಆಶ್ಚರ್ಯಕರವಾಗಿದೆ. ಜುಂಜಪ್ಪನೇ ಸ್ವತಃ ಶೈವ ಮೂಲ (ವೀರಭದ್ರನ ಅವತಾರ) ದವನಾಗಿರುವದು ಗಮನಾರ್ಹ. ಗೊಲ್ಲರ ಕುಲಗುರು ಜುಂಜಪ್ಪ ವೀರಭದ್ರನ ಅವತಾರವಾಗಿರುವ, ವೀರಭದ್ರನ ಮೂಲಕ ಶಿವನನ್ನು ನಂಬುವಂತೆ ಗೊಲ್ಲರು ಕೃಷ್ಣನನ್ನು ನಂಬುವದೂ ಈ ಅಂಶಗಳು ಕಾಡುಗೊಲ್ಲರ ಜುಂಜಪ್ಪನ ಸಂಪ್ರದಾಯದ ಶೈವ – ವೈಷ್ಣವ ಸಮನ್ವಯವನ್ನು ಸಾರುತ್ತಿರುವಂತಿದೆ. ಶಿವನನ್ನು ಮೈಲಾರನೆಂದೇ ಆತನ ಭಕ್ತರು ಭಾವಿಸಿರುವದೂ, ಆ ಶಿವನಿಗೆ ಪ್ರಧಾನಿಯಾಗಿ ವಿಷ್ಣುವನ್ನು ಅವರು ಜೋಡಿಸಿರುವದನ್ನು ನೋಡಿದರೆ ಮೈಲಾರನ ಸಂಪ್ರದಾಯವಾದರೂ ಶೈವ-ವೈಷ್ಣವಗಳ ಸಂಗಮವೆಂದೇ ಹೇಳಬೇಕಾಗುತ್ತದೆ. ಬಹುಶಃ ಈ ಸಮನ್ವಯ, ಸಂಗಮ ಗುಣದ ಕಾರಣವಾಗಿಯೇ ಏನೋ ಎರಡೂ ಸಂಪ್ರದಾಯಗಳಲ್ಲಿ ದೇವರುಗಳ ಕೊಡುಕೊಳೆ ನಡೆದಿದೆ. ಮೈಲಾರನ ಸಂಪ್ರದಾಯದಲ್ಲಿ (ಪ್ರಮುಖವಾಗಿ ದಕ್ಷಿಣ ಕರ್ನಾಟಕದಲ್ಲಿ) ಜುಂಜಪ್ಪನ ಪ್ರವೇಶವಾಗಿ ಆತನ ಶಿಲ್ಪಗಳು ಮೈಲಾರನ ದೇವಸ್ಥಾನಗಳನ್ನು ಅಲಂಕರಿಸಿದ್ದರೆ, ಮೈಲಾರನ ಹೆಸರುಗಳು ಜುಂಜಪ್ಪನ ಮನೆತನದವರಲ್ಲಿಡಲ್ಪಟ್ಟಿವೆ. ಉದಾಹರಣೆಗೆ : ಜುಂಜಪ್ಪನ ಇಬ್ಬರು ತಮ್ಮಂದಿರಲ್ಲಿ ಒಬ್ಬ ಮೈಲಣ್ಣ, ಜುಂಜಪ್ಪನ ಹೇರಿಯ ಹೆಸರು ವೈಲ.

ಕಳವೇರಹಳ್ಳಿ (ಶಿರಾ ತಾ 🙂 ಕೆಂಪಮಲ್ಮೇಗೌಡ – ಚನ್ನಮ್ಮರ ನಾಲ್ವರು ಮಕ್ಕಳನ್ನಿ ಹಿರಿಯನಾಗಿ ಹುಟ್ಟಿದ ಜುಂಜಪ್ಪ, ಮನೆತನದ ಬಡತನವನ್ನು, ಏಳುಜನ ಸೋದರ ಮಾವಂದಿರ ಕಿರುಕುಳವನ್ನು ಸಹಿಸುತ್ತ ಬೆಳೆದು ಮಹಿಮಾನ್ವಿತನಾದನು. ಕುಟುಂಬದ ಕೀರ್ತಿ ಮತ್ತು ಶ್ರೀಮಂತಿಕೆಯನ್ನು ಸ್ವಪ್ನಯತ್ನದಿಂದ ಹೆಚ್ಚಿಸಿದವನು. ಏಳು ಮಂದಿ ಸೋದರ ಮಾವಂದಿರು ಈತನನ್ನು ಅಸಾಧ್ಯ ರೀತಿಯಲ್ಲಿ ಕಾಡಿವದನ್ನು ಕಾಣುವಾಗಲೆಲ್ಲ ನಮಗೆ ಕೃಷ್ಣನನ್ನು ಕಂಸ ಕಾಡುದುದೇ ನೆನಪಾಗುತ್ತದೆ. ಕಾಡುಗೊಲ್ಲರು ಅಂತೆಯೇ ಜುಂಜಪ್ಪ ಕೃಷ್ಣನ ಯಾದವ ಕುಲದವರಲ್ಲವೆ.

ಕಾಡುಗೊಲ್ಲರಂತೆ ಕುರುಬರಾದರೂ ತಂತಮ್ಮ ಪ್ರಾಣಿಗಳೊಂದಿಗೆ ಕಾಡಿನಲ್ಲಿ ಜೀವಿಸುವ, ಅಲೆಯುವ ಜನಾಂಗದವರಾಗಿದ್ದು ಯಾವುದೋ ಒಂದು ಘಟ್ಟದಲ್ಲಿ ಸಂಧಿಸಿದ ಈ ಸಂಪ್ರದಾಯಗಳ ಮೂಲಕ ಮೈಲಾರ ಮತ್ತು ಜುಂಜಪ್ಪ ಹತ್ತಿರಬಂದರೆ? ಹೆಗ್ಗಡೆ ಪ್ರಧಾನಿ ಅರ್ಥಾತ್ ಮನೆವಗ್ಗಡೆ ಚಟ್ಟಪ (?) ನು ಮೈಲಾರನಿಗೆ ಬಾಗಿದಂತೆ, ಜುಂಜಪ್ಪ ಶೈವ-ವೈಷ್ಣವ ಮಿಶ್ರಣದ ವಿಲಕ್ಷಣ ವ್ಯಕ್ತಿತ್ವದ ಚಾರಿತ್ರಿಕ ವ್ಯಕ್ತಿ ಮೈಲಾರ ದೇವರಿಗೆ ಬಾಗಿ ಬಂದನೆ? ಜುಂಜಪ್ಪ ಮತ್ತು ಮೈಲಾರ ಈ ಎರಡೂ ಸಂಪ್ರದಾಯಗಳ ಸಂಬಂಧ ಸ್ವರೂಪದ ಬಗೆಗೆ ಹೆಚ್ಚಿನ ಶೋಧನ, ಅಧ್ಯಯನ ನಡೆಯಬೇಕಾಗಿದೆ.

ಜುಂಜಪ್ಪನೆಂಬ ಪರಿವಾರದೇವತೆಯ ಮೂಲಕ ಈ ಪ್ರಬಂಧವನ್ನು ಮುಗಿಸಬಹುದಾಗಿದೆ. ಮೈಲಾರನ ಸಮಸ್ತ ಪರಿವಾರದ ಸಮಗ್ರ ಪರಿಚಯ ಇಲ್ಲಿ ನಡೆದಿಲ್ಲ. ಈ ಪ್ರಬಂಧದ ಮಿತಿಯಲ್ಲಿ ಅದು ಸಾಧ್ಯವೂ ಅಲ್ಲ. ಮೈಲಾರನ ಪರಿವಾರ ದೇವತೆಗಳ ಕುರಿತಾದ ಹೊಸ ನೋಟ, ಸ್ಥೂಲ ವಿವೇಚನೆ ಇಲ್ಲಿದೆ.