ಮೈಲಾರ ಮಹದೇವ

ನಮ್ಮ ಭಾರತ ಐಶ್ವರ್ಯದ ಬೀಡು. ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಹಲವಾರು ಪರಕೀಯರು ಭಾರತದ ಮೇಲೆ ಆಗಾಗ ದಾಳಿಮಾಡಿದರು. ಬ್ರಿಟಿಷರು ಇತ್ತೀಚಿನ ಆಕ್ರಮಣಕಾರರು. ಅವರ ಆಡಳಿತದಲ್ಲಿ ದೇಶ ಸರ್ವ ರೀತಿಯಲ್ಲಿ ಹಾಳಾಗುತ್ತ ನಡೆಯಿತು. ಅವರನ್ನು ಹೊರ ಹಾಕುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ಅನೇಕ ಭಾರತದ ವೀರರು ಇದಕ್ಕೆ ಅಂಜದೆ, ಅಳುಕದೆ ದಿಟ್ಟತನದಿಂದ ಹೋರಾಡಿದರು. ಅವರನಲ್ಲಿ ಗುಂಡಿನೇಟಿಗೆ ಬಲಿಯಾದವರು ಅನೇಕರು! ಗಲ್ಲಿಗೇರಿಸಲ್ಪಟ್ಟವರು ಹಲವರು!

ಮೋಟೇಬೆನ್ನೂರಿನ ಮೈಲಾರ ಮಹದೇವ ಇವರಲ್ಲಿ ಅಗ್ರಗಣ್ಯ. ಕೊನೆಯ ಉಸಿರಿರುವವರೆಗೂ ಹೋರಾಡಿ ಪ್ರಾಣ ಅರ್ಪಿಸಿದ ಅಮರ ವೀರಕೇಸರಿ ಮಹದೇವ!

ಮಣ್ಣಿನ ಮಗ

೧೯೧೧ರ ಜೂನ್ ತಿಂಗಳು ಎಂಟನೆಯ ದಿನಾಂಕ ಧಾರವಾಡ ಜಿಲ್ಲೆಯಲ್ಲಿಯ ಮೋಟೇಬೆನ್ನೂರಿನಲ್ಲಿ ಮಹದೇವ ಒಂದು ಮಧ್ಯಮ ತರಗತಿಯ ರೈತ ಕುಟುಂಬದಲ್ಲಿ ಜನಿಸಿದನು; ಮಣ್ಣಿನ ಮಗನಾಗಿ ಬೆಳೆದನು. ಅಂತೆಯೇ ಅವನಲ್ಲಿ ಮಣ್ಣಿನ ಮಕ್ಕಳಲ್ಲಿ ಎಂದಿನಿಂದಲೂ ಮೈಗೂಡಿಬಂದ ಸಹಿಷ್ಣುತೆ, ತಾಳ್ಮೆ, ಶಾಂತಿ, ಸೇವಾಭಾವನೆ, ದಿಟ್ಟತನ, ಪರೋಪಕಾರಬುದ್ಧಿ, ರಾಷ್ಟ್ರಾಭಿಮಾನಗಳು ಒಂದುಗೂಡಿದ್ದವು.

ಮೈಲಾರ ಮನೆತನದ ಮಾರ್ತಾಂಡಪ್ಪ ಮತ್ತು ಬಸಮ್ಮ, ಮಹದೇವನ ತಂದೆ ತಾಯಿಗಳು. ನಾಲ್ವರು ಗಂಡುಮಕ್ಕಳಲ್ಲಿ ಮಹದೇವನೇ ಹಿರಿಯನು. ಉಜ್ವಲ ದೇಶಾಭಿಮಾನ ತಾಯಿಯ ಬಳುವಳಿ. ವೀರಮಾತೆ ಆಜೀವಪರ್ಯಂತ ಖಾದಿ ಧಾರಿಯಾಗಿದ್ದಳಲ್ಲದೆ, ಸೆರೆಮನೆಯ ವಾಸದ ಸವಿಯನ್ನೂ ಉಂಡಿದ್ದಳು.

ಹತ್ತು-ಹನ್ನೆರಡರ ಕಿರಿವಯಸ್ಸಿನಲ್ಲಿಯೇ ಮಹದೇವನಲ್ಲಿ ರಾಷ್ಟ್ರಾಭಿಮಾನ ಉಕ್ಕಿ ತುಳುಕಾಡುತ್ತಿತ್ತು. ಇಂಗ್ಲಿಷ್ ಕಲಿತು ಮಗನು ದೊಡ್ಡ ಸರ್ಕಾರಿ ಹುದ್ದೆ ಅಲಂಕರಿಸಬೇಕೆಂದು ಹಿರಿಯರ ಇಚ್ಛೆ. ಇದ್ದೂರಿನಲ್ಲಿಯೇ ಒಂದು ಖಾಸಗಿ ಶಾಲೆಗೆ ಮಹದೇವನು ಸೇರಿಸಲ್ಪಟ್ಟನು. ಒಂದು ದಿನ ದೇಶಭಕ್ತರೊಬ್ಬರ ಭಾಷಣ ಕೇಳಿ ಧರಿಸುತ್ತಿದ್ದ ಪರದೇಶಿಯ ಟೊಪ್ಪಿಗೆಯನ್ನು ದೂರ ಬಿಸಾಡಿದನು. ಇದು ಮಹದೇವನ ದೇಶಾಭಿಮಾನದ ಪ್ರಥಮ ಮೆಟ್ಟಿಲು. ಅವನಿಗೆ ಹದಿನಮೂರನೆಯ ವಯಸ್ಸಿ ನಲ್ಲಿಯೇ ಮನೆಯವರು ಮದುವೆ ಮಾಡಿದರು. ಮನೆಯಲ್ಲಿಯೇ ಇದ್ದ ಸೊಸೆ ಸಿದ್ದಮ್ಮ ಹಾಗೂ ಮಹದೇವ ಸತಿಪತಿಗಳಾದರು.

ಮುಂದಿನ ನಾಲ್ಕಾರು ವರ್ಷಗಳು ಮಹದೇವನ ಬಾಳಿನಲ್ಲಿ ಮಹತ್ವದ ವರ್ಷಗಳು. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹತ್ತಿರದ ಊರಾದ ಹಾಂಸಭಾವಿಗೆ ಹೋದನು. ಆ ದಿನಗಳಲ್ಲಿ ಹಾಂಸಭಾವಿಯ ಇಂಗ್ಲಿಷ್ ಶಾಲೆ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮನೋವೃತ್ತಿ ಹುಟ್ಟಿಸಲಿಕ್ಕೆ ಪ್ರಖ್ಯಾತವಾಗಿತ್ತು.

’ದೇಶಕ್ಕಾಗಿ ಮೀಸಲು’

ದೇಶದಲ್ಲೆಲ್ಲ ಅಶಾಂತಿ, ಅತೃಪ್ತಿಗಳ ಜ್ವಾಲೆಗಳು ಹೊತ್ತಿಕೊಂಡ ಆ ಕಾಲದಲ್ಲಿ ದೇಶಾಭಿಮಾನ ಅಂಕುರಗೊಂಡ ಎಳೆಯ ಮಹದೇವನಿಗೆ ಅದರಿಂದ ಅಲಿಪ್ತನಾಗಿ ಉಳಿಯಲು ಸಾಧ್ಯವಾಗಲಿಲ್ಲ.

’ಭಾರತದಲ್ಲಿ ಆಳರಸರು ಏರ್ಪಾಡುಮಾಡಿದ ಶಿಕ್ಷಣ, ರಾಷ್ಟ್ರಪೋಷಣೆಗೆ ಉಚಿತವಾದುದುದಲ್ಲ. ಅದರಿಂದ ತರುಣರು ತೇಜಃಪುಂಜರಾಗಿ ಬೆಳೆಯುವುದರ ಬದಲು ತೇಜೋಹೀನ ರಾಗಿ, ಇನ್ನೂ ಹೆಚ್ಚಿನ ಅಧೋಗತಿಗೆ ಇಳಿಯುವರು.’

ಹಲವು ನಾಯಕರು ಈ ರೀತಿ ಹೇಳಿದ್ದನ್ನು ಮಹದೇವ ಕೇಳಿದ್ದನು. ಅವನು ಒಂದು ನಿರ್ಣಯಕ್ಕೆ ಬಂದ. ಶಾಲೆಗೆ ಶರಣುಹೊಡೆದನು. ’ದೇಶಕ್ಕಾಗಿ ಈ ದೇಹ ಮೀಸಲು’ ಎಂದು ಅಂದೇ ನಿಶ್ಚಯಿಸಿದನು.

ಅಷ್ಟು ಸಣ್ಣವಯಸ್ಸಿನಲ್ಲಿಯೇ ಗಾಂಧೀಜಿ ಸಾರಿದ ದೇಶ ಕಟ್ಟುವ ಕಾರ್ಯಕ್ರಮದಲ್ಲಿ ಪಾಲಿಗೊಂಡನು. ಖಾದಿಯ ಗಂಟು ಹೆಗಲ ಮೇಲೆ ಬಂತು. ಹಳ್ಳಿ ಹಳ್ಳಿಗೆ ನಡೆದುಕೊಂಡೆ ಹೋಗಿ ಖಾದಿ ಪ್ರಚಾರ ಮಾಡಿದನು. ದೇಶದ ದಾರಿದ್ರ್ಯ ನಿವಾರಣೆಗೆ ಖಾದಿಯು ಒಂದು ಬ್ರಹ್ಮಾಸ್ತ್ರ ಎನಿಸಿತವನಿಗೆ.

’ಖಾದಿ ಹೊತ್ತು ಮಾರಿದರೆ ಸಾಲದು,  ನೂಲು ತೆಗೆಯ ಬೇಕು; ನೇಯ್ಗೆ ಕಲಿಯಬೇಕು; ಸ್ವತಃ ಬಟ್ಟೆ ಸಿದ್ಧಪಡಿಸಬೇಕು.’ ಮಹದೇವನ ಮನೋಬಯಕೆಯದು.

ವಿಜಾಪುರ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿಗೆ ಸೇರಿದ ಕಲಾದಿಗಿಯು ಖಾದಿಯ ಹುಟ್ಟುವಳಿಯ ಕೇಂದ್ರವಾಗಿತ್ತಾಗ. ಮನೆಯವರಿಗೆ ತಿಳಿಯದಂತೆ ಮಹದೇವ ಅಲ್ಲಿಗೆ ಹೋಗಿ ಒಂದು ವರ್ಷದಲ್ಲಿ ನೇಯ್ಗೆಯಲ್ಲಿ ನೈಪುಣ್ಯ ಸಾಧಿಸಿದನು.

ಶಾಲೆಯಲ್ಲಿ ಕಲಿಯುವುದನ್ನು ಬಿಟ್ಟು ಮಾಯವಾದ ಮಹದೇವನನ್ನು ಮನೆಯವರು ಹುಡುಕಿ ತಂದು ವ್ಯಾಪಾರಕ್ಕೆ ಹಚ್ಚಿದರು. ಮಹದೇವನ ಸರಳ ಮನಸ್ಸಿಗೆ ವ್ಯಾಪಾರ

ಹಿಡಿಸಲಿಲ್ಲ. ಹೃದಯದಲ್ಲಿ ಹೊತ್ತಿ ಬಡವಾಗ್ನಿಯಾಗಿದ್ದ ದೇಶಾಭಿ ಮಾನ ಅವನನ್ನು ದೇಶಸೇವೆಯತ್ತ ಸೆಳೆಯುತ್ತಿತ್ತು.

ಪುನಃ ಮಹದೇವ ಮನೆಯಿಂದ ಹೊರಬಿದ್ದ. ನೇರವಾಗಿ ಧಾರವಾಡಕ್ಕೆ ನಡೆದನು. ಧಾರವಾಡವು ಮೊದಲಿನಿಂದಲೂ ರಾಷ್ಟ್ರೀಯ ಕಿಡಿ ಹೊತ್ತಿಸಿದ ಪಟ್ಟಣ. ಅಲ್ಲಿ ಹಲವಾರು ರಾಷ್ಟ್ರೀಯ ಸಂಸ್ಥೆಗಳು ಕಾರ್ಯಮಾಡುತ್ತಿದ್ದವು. ಹಲವು ಮುಖಂಡರೂ ಅಲ್ಲಿದ್ದರು.

ದೃಢ ನಿರ್ಧಾರ

’ವಜ್ರದೇಹಿಯೇ ನಿಜವಾದ ಸ್ವಾತಂತ್ರ್ಯ ಯೋಧನಾಗಬಲ್ಲ’ ಎಂದು ನಂಬಿ ಮಹದೇವ ಪ್ರಾರಂಭದಲ್ಲಿ ವ್ಯಾಯಾಮದ ಕಡೆಗೆ ವಿಶೇಷ ಗಮನ ಹರಿಸಿದನು. ಭಾರತೀಯ ತರುಣ ಸಂಘವನ್ನು ಸೇರಿ, ಅಲ್ಲಿಗೆ ಬರುತ್ತಿದ್ದ ಹಲವಾರು ಭಾರತೀಯ ಮುಖಂಡರ ದರ್ಶನದಿಂದ ಹರ್ಷಿತನಾಗಿ, ಅವರ ಸಂದೇಶ ಕೇಳಿ ಚೇತನ ಗೊಂಡನು. ಖ್ಯಾತ ರಾಷ್ಟ್ರೀಯ ಮುಖಂಡ ಜಯರಾಮದಾಸ ದೌಲತ್ತ ರಾಮರ ಭಾಷಣ ಮಹದೇವನ ಮೇಲೆ ಭಾರೀ ಪರಿಣಾಮ ಮಾಡಿತು. ಅಂದೇ ನಿರ್ಧರಿಸಿದನು”:

’ಈ ದೇಹ ಭಾರತದ ಸೇವೆಗೆ ಮೀಸಲು. ತಾಯ್ನಾಡಿನ ಬಂಧವಿಮೋಚನೆಯ ಕೆಲಸದಲ್ಲಿ ನಾನು ಹಿಂದುಳಿಯಲಾರೆ.’

ಗಾಂಧೀ ಆಶ್ರಮದಲ್ಲಿ

ಮನೆಯವರು ಮಹದೇವನನ್ನು ಹುಡುಕುತ್ತಲೇ ಇದ್ದರು. ಧಾರವಾಡದಲ್ಲಿರುವುದರ ಸುಳಿವು ಅವರಿಗೆ ಹತ್ತಿತೆಂದು ತಿಳಿದೊಡನೆಯೇ ಮಹದೇವನು ಅಲ್ಲಿಂದ ಬೇರೆಡೆಗೆ ಹೊರಟು ಹೋಗಲು ನಿಶ್ಚಯಿಸಿದನು.

ಹಾಗಾದರೆ ಎಲ್ಲಿಗೆ ಹೋಗುವುದು?

ಸಾಬರಮತಿಯಲ್ಲಿಯ ಗಾಂಧೀಜಿ ಆಶ್ರಮಕ್ಕೆ ಹೋಗಬೇಕು!

ಅದು ಹೇಗೆ ಸಾಧ್ಯ? ತನ್ನಂಥ ಸಾಮಾನ್ಯ ತರುಣ, ಸಾವಿರಾರು ಮೈಲುಗಳಾಚೆಗಿರುವ ಅಲ್ಲಿಗೆ ಹೇಗೆ ಹೋಗು ವುದು? ಅಲ್ಲಿ ತನ್ನ ನುಡಿಯಿಲ್ಲ. ಹೋದ ಮೇಲೆ ಆಶ್ರಮದಲ್ಲಿ ಸೇರಿಸದಿದ್ದರೆ ಮುಂದೇನು?

ಹಲವಾರು ಪ್ರಶ್ನೆಗಳು ಮಹದೇವನನ್ನು ಕಾಡಿದವು.

ಅದೃಷ್ಟ ಆಸರೆಗೆ ಒದಗಿಬಂತು. ಅದೇ ಸುಮಾರಿಗೆ ಕರ್ನಾಟಕದಿಂದ ಒಬ್ಬಿಬ್ಬರು ಸ್ವಯಂಸೇವಕರನ್ನು ತರಬೇತಿಗೆ ಕಳುಹಿಸಿಕೊಡಬೇಕೆಂದು ಸಾಬರಮತಿ ಆಶ್ರಮದಿಂದ ಕರೆ ಬಂದಿತು. ಕರ್ನಾಟಕದ ಕಾಂಗ್ರೆಸ್ ಮುಖಂಡರ ನೆರವಿನಿಂದ ಮಹದೇವ ಸಾಬರಮತಿಗೆ ಪ್ರಯಾಣ ಬೆಳೆಸಿದನು.

ಅಷ್ಟು ಸಣ್ಣ ವಯಸ್ಸಿನಲ್ಲಿ ಆಶ್ರಮದ ಕಠೋರ ವಿಧಿ ನಿಯಮಗಳಿಗೆ ಒಗ್ಗಿಯಾನೇ ಎಂದು ಗಾಂಧೀಜಿ ಅನು ಮಾನಿಸಿದರು; ಬಗೆಬಗೆಯಾಗಿ ಪ್ರಶ್ನಿಸಿದರು; ಪರೀಕ್ಷಿಸಿದರು. ಗಾಂಧೀಜಿಯ ಒರೆಗಲ್ಲಿಗೆ ಮಹದೇವ ಹತ್ತಿದನು. ಗಾಂಧೀಜಿಗೆ ಅಪರಿಮಿತ ಆನಂದವಾಯಿತು. ಬೆನ್ನುತಟ್ಟಿ ನಸುನಕ್ಕು ಆಶ್ರಮದಲ್ಲಿ ಇರಲು ಅನುಮತಿಯನ್ನಿತ್ತರು.

ದಂಡೀ ಸತ್ಯಾಗ್ರಹದಲ್ಲಿ ಕನ್ನಡ ವೀರ

ದೇಶದಲ್ಲಿ ಸರ್ಕಾರಕ್ಕೆ ಕಂದಾಯ ಕೊಡುವುದಿಲ್ಲ ಎಂದು ಸತ್ಯಾಗ್ರಹ ಹೂಡಲು ನಿರ್ಧರಿಸಲಾಯಿತು. ಅಲ್ಲದೆ ಆಗಿನ ನಿಯಮದ ಪ್ರಕಾರ ಸರ್ಕಾರದ ಅಪ್ಪಣೆ ಇಲ್ಲದೆ ಉಪ್ಪನ್ನು ತಯಾರು ಮಾಡುವಂತಿರಲಿಲ್ಲ. ಈ ನಿಯಮವನ್ನೂ ಮುರಿಯಲು ನಾಯಕರು ನಿರ್ಧರಿಸಿದರು. ಸ್ವತಃ ಗಾಂಧೀಜಿ ಇತಿಹಾಸ ಪ್ರಸಿದ್ಧ ದಂಡಿಯ ಸತ್ಯಾಗ್ರಹವನ್ನು ಕೈಗೊಳ್ಳಲು ಮುಂದೆ ಬಂದರು. ಅವರೇ ಖುದ್ದಾಗಿ ಈ ಸತ್ಯಾಗ್ರಹಕ್ಕೆ ೭೯ ಯೋಧರನ್ನು ಆಯ್ಕೆಮಾಡಿದರು. ಅವರಲ್ಲಿ ಮಹದೇವನೂ ಒಬ್ಬ. ಕನ್ನಡನಾಡಿನ ಏಕಮೇವ ಪ್ರತಿನಿಧಿಯಾಗಿ ಮಹದೇವನಿಗೆ ಚರಿತ್ರಾರ್ಹ ಸತ್ಯಾಗ್ರಹದಲ್ಲಿ ಭಾಗವಹಿಸಿಸುವ ಭಾಗ್ಯ ದೊರೆತಿತ್ತು. ಆಗ ಮಹದೇವನಿಗೆ ಹದಿನೆಂಟೇ ವರ್ಷಗಳು. ಎಲ್ಲ ಸತ್ಯಾಗ್ರಹಿಗಳಲ್ಲಿ ಅವನೇ ಚಿಕ್ಕವನು.

 

ಗಾಂಧೀಜಿ ಮಹದೇವನಿಗೆ ಬೆನ್ನುತಟ್ಟಿ ಆಶ್ರಮದಲ್ಲಿ ಇರಲು ಅನುಮತಿ ಕೊಟ್ಟರು.

೧೯೩೦ರ ಮಾರ್ಚ್ ತಿಂಗಳು ಹನ್ನೆರಡನೆಯ ದಿನ ಬೆಳಗ್ಗೆ ಗಾಂಧೀಜಿ ಸಾಬರಮತಿ ಆಶ್ರಮದಿಂದ ದಂಡೀ ಎಂಬ ಸ್ಥಳಕ್ಕೆ ನಡೆದುಕೊಂಡು ಹೊರಟರು. ೨೪೧ ಮೈಲಿ ದೂರ, ದಿನಕ್ಕೆ ೧೫-೨೦ ಮೈಲಿ ನಡಿಗೆ. ಇಪ್ಪತ್ತೈದು ದಿನ ಕಾಲು ನಡಿಗೆಯಿಂದ  ಹೊರಟು ದಂಡಿಗೆ ಸತ್ಯಾಗ್ರಹಿಗಳ ತಂಡ ಏಪ್ರಿಲ್ ಆರರಂದು ತಲುಪಿತು. ಪ್ರತಿಯೊಬ್ಬರೂ ಉಪ್ಪಿನ ಉಂಡೆ ಕೈಗೆತ್ತಿಕೊಂಡು ಉಪ್ಪಿನ ಕಾಯ್ದೆಯನ್ನು ಮುರಿದರು. ಅಂದಿನಿಂದ ಉಪ್ಪಿನ ಸತ್ಯಾಗ್ರಹ ಭಾರತದ ತುಂಬೆಲ್ಲ ವ್ಯಾಪಿಸಿತು. ದಿನದಿನವೂ ಉಪ್ಪನ್ನು ಸಿದ್ಧಪಡಿಸಿ ಅದನ್ನು ಮೆರವಣಿಗೆಯಲ್ಲಿ ಒಯ್ದು ಜನತೆಗೆ ಹಂಚುವ ಕಾರ್ಯವು ಉತ್ಸಾಹದಿಂದ ಮುಂದುವರಿಯಿತು. ಉಪ್ಪಿನ ಸತ್ಯಾಗ್ರಹದಲ್ಲಿ ತೊಡಗಿದವರನ್ನು ಸರ್ಕಾರ ಬಂಧಿಸಲು ನಿಶ್ಚಯಿಸಿ ಮೇ ಐದನೆಯ ದಿನಾಂಕ ಗಾಂಧೀಜಿಯನ್ನೂ ಎಲ್ಲ ಸತ್ಯಾಗ್ರಹಿ ಗಳನ್ನೂ ಬಂಧಿಸಿದರು. ಎಲ್ಲರಂತೆ ಮಹದೇವನಿಗೂ ಆರು ತಿಂಗಳು ಸಶ್ರಮ ಶಿಕ್ಷೆ ವಿಧಿಸಲಾಯಿತು. ಅದು ಅವನಿಗೆ ಪ್ರಥಮತಃ ದೊರೆತ ಆಳರಸರ ಸೆರೆಮನೆಯ ಆತಿಥ್ಯ.

ತಾಯಿ-ಮಗ-ಸೊಸೆ ಎಲ್ಲ ಸ್ವಾತಂತ್ರ್ಯ ಸೇನೆಯಲ್ಲಿ

ಬಿಡುಗಡೆಯನಂತರ ಮಹದೇವ ತಾಯ್ನಾಡಿಗೆ ಮರಳಿ ಬಂದನು. ವರದಾನದಿಯ ದಂಡೆಯ ಮೇಲಿರುವ ಹಾವೇರಿ ತಾಲೂಕಿನ ಕೊರಡೂರಿನಲ್ಲಿ ಚಿಕ್ಕ ಆಶ್ರಮವನ್ನು ಸ್ಥಾಪಿಸಿ ಸಾಬರಮತಿಯಲ್ಲಿ ಕಲಿತು ಬಂದ ಕಾರ್ಯಕ್ರಮಗಳನ್ನು ಮುಂದುವರೆಸಲು ನಿಶ್ಚಯಿಸಿದನು. ಸೌಭಾಗ್ಯವತಿ ಸಿದ್ದಮ್ಮನಿಗೂ ರಾಷ್ಟ್ರೀಯ ದೀಕ್ಷೆ ಕೊಡಿಸಬೇಕೆಂದು ಮಹದೇವ ಬಯಸಿ, ಗಾಂಧೀಜಿ ಆಶ್ರಮಕ್ಕೆ ಅವಳನ್ನು ಕಳುಹಿಸಲು ನಿಶ್ಚಯಿಸಿ, ಸ್ವತಃ ಕರೆದೊಯ್ದನು. ತೀರ ಚಿಕ್ಕ ವಯಸ್ಸಿನ ಸಿದ್ದಮ್ಮನ್ನು ಕಂಡು ಗಾಂಧೀಜಿ, “ಉಂಡು ತಿಂದು ಜೊತೆಯವರೊಂದಿಗೆ ಆಟವಾಡಿಕೊಂಡಿರುವುದನ್ನು ಬಿಟ್ಟು ಆಶ್ರಮದ ಕಷ್ಟಗಳನ್ನು ಅನುಭವಿಸಲು ಏಕೆ ಬಂದೆ?” ಎಂದು ತಮಾಷೆ ಮಾಡಿದರು. ಸಿದ್ದಮ್ಮ ಸಾಬರಮತಿಯ ಮಹಿಳಾ ಆಶ್ರಮಕ್ಕೆ ಸೇರಿ ಅಲ್ಲಿಯ ಕಾರ್ಯರೂಪಗಳಲ್ಲಿ ಭಾಗವಹಿಸಿದರು.

ಸೌಭಾಗ್ಯವತಿಯನ್ನು ಸಾಬರಮತಿಯಲ್ಲಿ ಬಿಟ್ಟು ಮಹ ದೇವನು ಕರ್ನಾಟಕಕ್ಕೆ ಮರಳಿ ಬಂದು, ಚಳವಳಿಯ ಸಂಘಟನೆ ಮಾಡಲು ಪ್ರಾರಂಭಿಸಿದ. ಹೆಣ್ಣು ಮಕ್ಕಳ ಜಾಗೃತಿ ಅದರಲ್ಲಿ ಪ್ರಾಮುಖ್ಯವಾಗಿತ್ತು. ಪರಿಣಾಮವಾಗಿ, ಅನೇಕ ಹೆಣ್ಣುಮಕ್ಕಳು ಬಗಲಲ್ಲಿ ಕೂಸುಗಳನ್ನಿರಿಸಿಕೊಂಡು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ಜಯಘೋಷ ಮಾಡುತ್ತ ಚಳಚವಳಿಯಲ್ಲಿ ಭಾಗವಹಿಸಿ, ಶಿಕ್ಷೆಗೊಂಡು ಕಾರಾಗೃಹ ಸೇರಿದರು.

೧೯೩೨ ರಲ್ಲಿ ಕಾಯಿದೆ ಭಂಗ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಮಹದೇವನಿಗೆ ಎರಡನೆಯ ಸಲ ಆರು ತಿಂಗಳು ಶಿಕ್ಷೆಯಾಗಿ ಪುನಃ ಸೆರೆಮನೆ ಸೇರಬೇಕಾಗಿ ಬಂತು. ಶಿಕ್ಷೆ ಮುಗಿಸಿದ ಮಹದೇವನ ಬಿಡುಗಡೆಯಾದಾಗ ಕಾಯಿದೆ ಭಂಗ ಚಳವಳಿ ನಿಂತಿರಲಿಲ್ಲ. ಮರುವರ್ಷ ೧೯೩೩ ರಲ್ಲಿ ಮಹದೇವನ ಮಾತೆ, ಶ್ರೀಮತಿ ಬಸಮ್ಮ ಚಳವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋದರು.

ಸ್ವಾತಂತ್ರ್ಯದ ಚಳವಳಿ ಬೇರೆಬೇರೆ ರೂಪಗಳನ್ನು ತಾಳುತ್ತಿತ್ತು. ಆದರೆ ಹೋರಾಟ ನಡೆಯುತ್ತಲೇ ಇತ್ತು. ಸಾಬರ ಮತಿ ಆಶ್ರಮದಲ್ಲಿ ಸೌಭಾಗ್ಯವತಿ ಸಿದ್ದಮ್ಮನೂ ಕರ್ನಾಟಕದಲ್ಲಿ ಮಹದೇವನೂ ಚಳವಳಿಯಲ್ಲಿ ಭಾಗವಹಿಸಿದರು. ಪ್ರತಿ ಯೊಬ್ಬರಿಗೂ ಆರಾರು ತಿಂಗಳು ಶಿಕ್ಷೆಯಾಗಿ ಸಿದ್ದಮ್ಮ ಅಹಮದಾಬಾದ್ ಸೆರೆಮನೆಗೂ ಮಹದೇವ ಹಿಂಡಲಗಿ ಸೆರೆಮನೆಗೂ ಕಳುಹಿಸಲ್ಪಟ್ಟರು.

ಹರಿಜನೋದ್ದದ್ಧಾರಕ್ಕಾಗಿ ಗಾಂಧೀಜಿ ೧೯೩೪ ರಲ್ಲಿ ಭಾರತದಲ್ಲೆಲ್ಲ ಪ್ರವಾಸ ಕೈಗೊಂಡಿದ್ದರು. ಕರ್ನಾಟಕದಲ್ಲಿಯೂ ಅವರಿಗೆ ಅಪೂರ್ವ ಸ್ವಾಗತ ದೊರೆಯಿತು. ಆಗ ಗಾಂಧೀಜಿ ಮೋಟೆಬೆನ್ನೂರಿಗೂ ಭೇಟಿಕೊಟ್ಟರು. ಹೊರಡುವಾಗ ಸಿದ್ದಮ್ಮ ನನ್ನು ಸಂಗಡ ಕರೆದುಕೊಂಡು ಹೋದರು. ಗಾಂಧೀಜಿ ಬೆಳಗಾವಿಗೆ ಹೋದಾಗ ಹಿಂಡಲಗಿ ಜೈಲಿಗೂ ಭೇಟಿಕೊಟ್ಟು, ತಮ್ಮ ಆಪ್ತ ಕಾರ್ಯದರ್ಶಿಯಾಗಿದ್ದ ಮಹದೇವ ದೇಸಾಯಿ ಹಾಗೂ ನೆಚ್ಚಿನ ಶಿಷ್ಯ ಮೈಲಾರ ಮಹದೇವ ಇಬ್ಬರನ್ನೂ ಕಂಡು ಕ್ಷೇಮ ಸಮಾಚಾರ ವಿಚಾರಿಸಿದರು.

ಬಿಡುಗಡೆಯನಂತರ  ಮಹದೇವ ತಾತ್ಪೂರ್ವಿಕವಾಗಿ ಕೊರಡೂರಿನ ಆಶ್ರಮವನ್ನು ಮುಚ್ಚಿ ನೆರೆ ಗ್ರಾಮವಾದ ಹೊಸರಿತ್ತಿಯಲ್ಲಿಯ ಗಾಂಧೀ ಆಶ್ರಮದಲ್ಲಿ ಸೇರಿ ಸಮಾಜವನ್ನು ಮುನ್ನಡೆಸುವ ಕಾರ್ಯಕ್ರಮಗಳನ್ನು ಮುಂದುವರಿಸಿದನು.

ಗ್ರಾಮಸೇವಾಶ್ರಮ

ಹರಿಜನ ಸೇವೆಯೆಂದರೆ ಮಹದೇವನಿಗೆ ಅತ್ಯಂತ ಆದರ ಮತ್ತು ಆಸಕ್ತಿ. ಸಿದ್ದಮ್ಮ ಕೆಲದಿನ ಹುಬ್ಬಳ್ಳಿಯ ಹರಿಜನ ಬಾಲಿಕಾಶ್ರಮದಲ್ಲಿ ಮಹದೇವನ ಸಲಹೆಯ ಮೇರೆಗೆ ಇದ್ದು ಬಾಲಿಕೆಯರ ಶಿಕ್ಷಣದಲ್ಲಿ ತರಬೇತಿ ಪಡೆದಳು. ಮಹದೇವನು ೧೯೩೫ರಲ್ಲಿ ಬೆಂಗಳೂರಿಗೆ ಪ್ರೊಫೆಸರ್ ಕೆ. ವಿ. ಅಯ್ಯರಲ್ಲಿಗೆ ವ್ಯಾಯಾಮ ಶಿಕ್ಷಣ ಪಡೆಯಲು ಹೋದನು. ಕೆಲವು ತಿಂಗಳು ಅಲ್ಲಿದ್ದು ಉತ್ತಮ ದೇಹ ಸಂಪತ್ತಿನ ಜೊತೆಗೆ ಸ್ವಲ್ಪ ವೈದ್ಯಕೀಯ ಜ್ಞಾನವನ್ನೂ ಪಡೆದನು.

ಬೆಂಗಳೂರಿನಿಂದ ಮರಳಿ ಬಂದ ಮೇಲೆ ಕೊರಡೂರಿ ನಲ್ಲಿಯೇ ಗ್ರಾಮಸೇವಾಶ್ರಮ ಪುನಃ ಸ್ಥಾಪಿಸಿ ಗಂಡಹೆಂಡಿರು ಸಂಚಾಲಕರಾಗಿ ಕಾರ್ಯ ಮುಂದುವರಿಸಿದರು. ಗ್ರಾಮಸೇವಾ ಶ್ರಮದಲ್ಲಿ ಖಾದಿ, ವ್ಯಾಯಾಮ ಶಿಕ್ಷಣ, ಸಾಕ್ಷರತೆ, ಕಾಂಗ್ರೆಸ್ ತತ್ವ ಪ್ರಚಾರ, ಗ್ರಾಮಕೈಗಾರಿಕೆ ಹಾಗೂ ಔಷಧೋಪಚಾರ ಹೀಗೆ ಬೇರೆಬೇರೆ ವಿಭಾಗಗಳಿದ್ದವು. ಕೊರಡೂರಿನ ಗ್ರಾಮಸೇವಾಶ್ರಮದಲ್ಲಿ ಹಲವಾರು ಕಾರ್ಯಕರ್ತೃಗಳು ಶಿಕ್ಷಣ ಪಡೆದರು; ಅಲ್ಲಿ ನೂರಾರು ಹಳ್ಳಿಯ ಮಕ್ಕಳಿಗೆ ಬೌದ್ಧಿಕ ಹಾಗೂ ಶಾರೀರಿಕ ಶಿಕ್ಷಣ ದೊರೆಯಿತು. ಹಳ್ಳಿಯ ನಿರಕ್ಷರಿಗಳನೇಕರಿಗೆ ಅಕ್ಷರಾಭ್ಯಾಸ ನಡೆಯಿತು. ಗಾಂಧೀ ತತ್ವಗಳು ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಬಳಕೆಯಲ್ಲಿ ಬಂದವು. ಹಲವಾರು ಹಳ್ಳಿಗರಿಗೆ ಉಚಿತ ಔಷಧೋಪಚಾರ ನಡೆಯಿತು. ಎಷ್ಟೋ ಮಂದಿ ಬಿಸಿ ರಕ್ತದ ತರುಣರು ಮಹದೇವನ ಮುಂದಾಳುತನ ಸ್ವೀಕರಿಸಿ ರಾಷ್ಟ್ರದ ಕಾರ್ಯಗಳಿಗೆ ಅಣಿಯಾದರು.

ಗ್ರಾಮಸೇವಾಶ್ರಮ ಶಿಸ್ತಿನ ಆಗರವಾಗಿತ್ತು. ಸ್ವಾವಲಂಬನ, ಸ್ವದೇಶಿ ವ್ರತಗಳು ಅದರ ಆಧಾರ ಸ್ತಂಭಗಳಾಗಿದ್ದವು. ದಿನವೂ. ಬೆಳ್ಳಿ ಮೂಡುತ್ತಿದ್ದಾಗಲೇ ಎಲ್ಲರೂ ಏಳುತ್ತಿದ್ದರು. ಪ್ರಾತ ರ್ವಿಧಿಗಳನ್ನು ತೀರಿಸಿಕೊಂಡು, ಹೊತ್ತು ಮೂಡುವ ಪೂರ್ವದಲ್ಲಿಯೇ ನದಿಯ ಸ್ನಾನ ತೀರಿಸಿಕೊಂಡು ತಮ್ಮ ಕಾರ್ಯಗಳಿಗೆ ಅಣಿಯಾಗುತ್ತಿದ್ದರು. ಉಡಿಗೆತೊಡಿಗೆ, ಆಹಾರವಿಹಾರಗಳು ತೀರಾ ಸರಳ. ಖಾದಿಯೇ ಎಲ್ಲರ ಉಡುಪು-ಅದೂ ಕೂಡ ಸ್ವಯಂ ಸಿದ್ಧಪಡಿಸಿದ್ದು. ಸತ್ವಯುತ ಆಹಾರ ವಸ್ತುಗಳಾದ ಬೇಯಿಸಿದ ಹಿಟ್ಟು, ಕುಟ್ಟಿದ ಅಕ್ಕಿ, ಸೊಪ್ಪಿನ ಪಲ್ಲೆ, ಹಾಲು ಹೈನಗಳಿಂದಲೇ ಪ್ರತಿನಿತ್ಯದ ಆಹಾರ ಸಿದ್ಧವಾಗುತ್ತಿತ್ತು. ಮಹದೇವ ಇತರ ಆಶ್ರಮವಾಸಿಗಳಿಗಿಂತ ಇನ್ನೂ ಒಂದು ಹೆಜ್ಜೆ ಮುಂದಿದ್ದನು. ಅವನು ಉಪ್ಪು, ಖಾರ, ಹುಳಿ, ಒಗ್ಗರಣೆಗಳಿಲ್ಲದ ಸಾತ್ವಿಕ ಆಹಾರ ಮಾತ್ರ ಸ್ವೀಕರಿಸುತ್ತಿದ್ದನು. ದಿನವೂ ಬೇವಿನ ರಸವನ್ನು ಕುಡಿಯುತ್ತಿದ್ದನು.

ಮಹದೇವ ಗುಣಾಢ್ಯ; ನಿರ್ಮಲ ಶಾಂತಮೂರ್ತಿ. ಅವನನ್ನು ನೋಡಿದವರಿಗೆ ಒಮ್ಮೆಲೆ ಆತ್ಮೀಯತೆಯ ಭಾವನೆ ಹುಟ್ಟುತ್ತಿತ್ತು. ಅವನ ದೇಹ ಬೆಟ್ಟು ಕಚ್ಚಿಸುವಂಥದು; ಗರಡಿಸಾಧನೆ ಮಾಡಿ ದೇಹವನ್ನು ಹಿಡಿತದಲ್ಲಿಟ್ಟುಕೊಂಡ ಒಂದು ತೆರನಾದ ಮಧುರ ಕಠೋರತೆಯು ಅಂಗಾಂಗಗಳಲ್ಲಿ ಎದ್ದು ಕಾಣುತ್ತಿತ್ತು. ತಂದೆಯ ಆಜಾನುಬಾಹು ದೇಹ ಹಾಗೂ ತಾಯಿಯ ಸುಕೋಮಲ ಭಾವಗಳು ಅವನಲ್ಲಿ ಒಂದುಗೂಡಿದ್ದವು. ಚೌಕಾದ ದೇಹಾಕೃತಿ; ಅಗಲವಾದ ಮುಖ; ನಸುದುಂಡಾದ ಮೂಗು; ಮುಖದಲ್ಲೆಲ್ಲ ಆಕರ್ಷಕವಾಗಿ ಎದ್ದು ನಿಂತ ವಿಶಾಲ ಕಣ್ಣುಗಳು; ಗೌರ ವರ್ಣ. ಮೈಯಲ್ಲಿ ಯಾವಾಗಲೂ ಶೋಭಿಸುತ್ತಿದ್ದುದು ಕೈನೂಲಿನ ಖಾದಿ ಬಟ್ಟೆ. ನಯವಿನಯದ ಮಾತು. ಸಹೋದ್ಯೋಗಿಗಳಲ್ಲಿ ಮಧುರ ಬಾಂಧವ್ಯ; ದೀನದಲಿತರಲ್ಲಿ ಪ್ರೀತಿ ಹಾಗೂ ಅಂತಃಕರಣ. ಕಾಯಕವೇ ಕೈಲಾಸವೆಂದು ನೆರೆ ನಂಬಿದ್ದ. ಅವನ ಪಾಲಿಗೆ ಕೆಲಸಗಳಲ್ಲಿ ಮೇಲು ಕೀಳುಗಳಿರಲಿಲ್ಲ. ಅಂತೆಯೇ ಖಾದಿ ಹೊತ್ತು, ಮನೆ ಮನೆಗೂ ಅದರ ದಿವ್ಯ ಸಂದೇಶ ಮುಟ್ಟಿಸಿ, ಪ್ರತಿಯೊಬ್ಬರ ಹೃದಯ ತಟ್ಟಿ, ಅಲ್ಲಿ ಖಾದಿಗೆ ಒಂದು ಸ್ಥಾನ ಕಲ್ಪಿಸಿದ್ದ.

ವೈಯಕ್ತಿಕ ಸತ್ಯಾಗ್ರಹ

ಸಮಾಜಸೇವೆಯ ಕೆಲಸಗಳ ಜೊತೆಗೆ ಕಾಂಗ್ರೆಸ್ ಪ್ರಚಾರವನ್ನೂ ಮಹದೇವ ಪರಿಣಾಮಕಾರಿಯಾಗಿ ಮಾಡುತ್ತಿದ್ದ. ಯಾವ ಅಧಿಕಾರ ಸ್ಥಾನಕ್ಕೂ ಆಸೆ ಪಡದೆ ಅನಾಮಧೇಯ ಸೇವಕನಾಗಿ ಸೇವೆ ಸಲ್ಲಿಸಬೇಕೆಂಬ ಹೆಬ್ಬಯಕೆಯನ್ನೇ ಸದಾ ಮೆಲುಕು ಹಾಕುತ್ತಿದ್ದರೂ ಜನತೆ ಅವನನ್ನು ಒತ್ತಾಯಿಸಿ ೧೯೪೦ ರಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಗೌರವಿಸಿತು.

ಮಹದೇವ ತಾಲೂಕಿನ ಕಾಂಗ್ರೆಸ್ ಸೂತ್ರಗಳನ್ನು ಕೈಗೆತ್ತಿಕೊಂಡಾಗ ದೇಶದಲ್ಲಿನ ಪರಿಸ್ಥಿತಿ ತೀರ ಸೂಕ್ಷ್ಮವಿತ್ತು. ೧೯೩೯ ರಿಂದ ಕೆಲವು ಪ್ರಾಂತಗಳಲ್ಲಿ ಕಾಂಗ್ರೆಸ್ ಪಕ್ಷದ ಮಂತ್ರಿಮಂಡಲಗಳಿದ್ದವು. ಯುರೋಪ್ ಖಂಡದಲ್ಲಿ ಪ್ರಾರಂಭ ವಾದ ಯುದ್ಧದಲ್ಲಿ ತಮ್ಮನ್ನು ಕೇಳದೆ ಭಾರತದ ಸರ್ಕಾರ ಸೇರಿತೆಂದು ಈ ಮಂತ್ರಿಮಂಡಲಗಳು ರಾಜೀನಾಮೆ ಕೊಟ್ಟವು. ಕಾಂಗ್ರೆಸಿಗರು ಅಸಹಕಾರ ನಡೆಸಿದ್ದರೂ ಆಳರಸರು ಯುದ್ಧ ನೆರವಿಗೆ ಸಾಧ್ಯವಿದ್ದುದನ್ನೆಲ್ಲ ನಡೆಸಿಯೇ ಇದ್ದರು. ಒತ್ತಾಯ ದಿಂದ ಯುದ್ಧ ನಿಧಿ ಕೂಡಿಸುತ್ತಿದ್ದರು; ಜನರಿಗೆ ಆಸೆ ತೋರಿಸಿ, ಆಮಿಷ ಒಡ್ಡಿ ಸೈನ್ಯಕ್ಕೆ ಸೇರಿಸುತ್ತಿದ್ದರು.

 

ದಂಡೀಯಾತ್ರೆಯಲ್ಲಿ ಗಾಂಧೀಜಿಯವರೊಂದಿಗೆ.

ಕಾಂಗ್ರೆಸ್ಸಿಗೆ ಪುನಃ ಅಸಹಕಾರ ಚಳವಳಿ ಪ್ರಾರಂಭಿಸದೆ ನಿರ್ವಾಹವೇ ಉಳಿಯಲಿಲ್ಲ. ವೈಯಕ್ತಿಕ ಸತ್ಯಾಗ್ರಹ ನಡೆಸುವು ದೆಂದೂ ತೀರ್ಮಾನವಾಯಿತು. ಎಲ್ಲರಿಗೂ ಈ ಸತ್ಯಾಗ್ರಹ ಮಾಡುವ ಅಧಿಕಾರವಿರಲಿಲ್ಲ. ಸತ್ಯಾಗ್ರಹ ಮಾಡಲಿಕ್ಕೆ ಆಜ್ಞೆ ಕೊಡುವುದು ಸ್ವತಃ ಗಾಂಧೀಜಿಗೆ ಸೇರಿತ್ತು. ನಿಜವಾಸದ ಸತ್ಯಾಗ್ರಹಿಯೇ ಈ  ಸತ್ಯಾಗ್ರಹಕ್ಕೆ ಅರ್ಹನಾಗಿದ್ದನು. ನಿಷ್ಠಾವಂತ ಕಾಂಗ್ರೆಸ್ಸಿಗರನ್ನು ಬಿಟ್ಟು ಬೇರೆಯವರಿಗೆ ಆ ಭಾಗ್ಯ ಲಭಿಸಲು ಸಾಧ್ಯವಿರಲಿಲ್ಲ. ಸ್ವತಃ ನೂಲದವರನ್ನು ಈ ಕೆಲಸಕ್ಕೆ ಆರಿಸುತ್ತಿರಲಿಲ್ಲ. ಪ್ರಬಲ ಸಾಮ್ರಾಜ್ಯದ ಸರ್ವಶಕ್ತಿಯನ್ನೂ ಎದುರಿಸಲು ಸತ್ಯಾಗ್ರಹಿಗಳ ನೈತಿಕ ಬಲವೇ ಈ ಸತ್ಯಾಗ್ರಹದ ಶಕ್ತಿಯಾಗಿತ್ತು. ಸತ್ಯಾಗ್ರಹಿಗಳು ಸತ್ಯಾಗ್ರಹದ ವಿಷಯವನ್ನು ಮೊದಲೇ ಸರ್ಕಾರಕ್ಕೆ ತಿಳಿಸಿ ಯುದ್ಧ ವಿರೋಧಿ ಭಾಷಣ ಮಾಡಿ, ಸೆರೆಮನೆ ಸೇರಬೇಕಾಗಿತ್ತು.

ಮೊದಲನೆಯ ತಂಡದಲ್ಲಿಯೇ ಸತ್ಯಾಗ್ರಹ ಕೈಕೊಳ್ಳಲು ಮಹದೇವನಿಗೆ ಅಪ್ಪಣೆ ದೊರೆಯಿತು. ಈ ಸತ್ಯಾಗ್ರಹ ಮಾಡಿದ್ದಕ್ಕಾಗಿ ಅವನಿಗೆ ಒಂದು ವರ್ಷ ಶಿಕ್ಷೆಯಾಯಿತು.

ಹೃದಯಾಂತರಾಳದಲ್ಲಿ ಹುದುಗಿದ್ದ ಸೇವಾಭಾವನೆ, ಕಾರ್ಯಾಶಕ್ತಿ, ಉಜ್ವಲ ರಾಷ್ಟ್ರಪ್ರೇಮಗಳಿಂದಾಗಿ ಸತ್ಯಾಗ್ರಹ ಮಾಡುವುದೆಂದರೆ ಮಹದೇವನಿಗೆ ಸುಲಭವಾಗಿತ್ತು. ಒಮ್ಮೆಯೂ ಹಿಂಜರಿಯಲಿಲ್ಲ, ಹಿಂದು ಮುಂದು ನೋಡಲಿಲ್ಲ; ನೆಪ ಒಡ್ಡಿ ತಪ್ಪಿಸಕೊಳ್ಳಲಿಲ್ಲ. ಸೆರೆಮನೆಯೆಂದರೆ ನಗುನಗುತ್ತ ಅಡಿಯಿಡುತ್ತಿದ್ದನು.

ಸ್ವತಃ ಗಾಂಧೀಜಿಯ ಸನ್ನಿಧಿಯಲ್ಲಿ ಕೆಲದಿನ ಕಳೆದುದರ ಪರಿಣಾಮವಾಗಿ ಗಾಂಧೀಜಿಯನ್ನು ಅರ್ಥಮಾಡಿಕೊಳ್ಳಲಿಕ್ಕೆ ಮಹದೇವನಿಗೆ ವಿಶೇಷ ಕಷ್ಟವಾಗುತ್ತಿರಲಿಲ್ಲ. ಗಾಂಧೀಜಿ ಹೇಳುತ್ತಿದ್ದುದು ತಪ್ಪೋ ಒಪ್ಪೋ ಮಹದೇವ ಅದನ್ನು ಒಮ್ಮೆಯೂ ಒರೆಗೆ ಹಚ್ಚಿದವನಲ್ಲ. ಏನನ್ನಾದರೂ ಹೇಳುವಾಗ ಗಾಂಧೀಜಿ ಸಾಧಕಬಾಧಕ ವಿಚಾರಿಸಿಯೇ ಹೇಳುತ್ತಾರೆಂದು ಅವನ ಬಲವಾದ ನಂಬುಗೆ. ಅವರ ಆಜ್ಞೆಗೆ ಶಿರಬಾಗುವುದು ಮಾತ್ರ ಅವನ ಪಾಲಿನ ಕರ್ತವ್ಯವಾಗಿತ್ತು. ಗಾಂಧೀಜಿ ಹೇಳಿದ್ದೇ ಅವನಿಗೆ ವೇದವಾಕ್ಯ. ಗಾಂಧೀಜಿ ಒಬ್ಬ ಸೇನಾಪತಿ; ಮಹದೇವ ಒಬ್ಬ ನಿಷ್ಠಾವಂತ ಯೋಧ! ಗಾಂಧೀಜಿಯ ಜೀವದುಸಿರಾದ ಸತ್ಯ, ಅಹಿಂಸೆ, ಸತ್ಯಾಗ್ರಹಗಳು ಮಹದೇವನ ಬಾಳಿನ ಉಸಿರಾಗಿದ್ದವು.

’ಅಪಜಯ, ಅಸಾಧ್ಯತೆಗಳು ಸತ್ಯಾಗ್ರಹಿಗೆ ಸಲ್ಲವು; ಎಂಬ ನುಡಿಯನ್ನು  ಮಹದೇವ ಸತ್ಯಮಾಡಿ ತೋರಿಸಲು ಹೆಣಗಿ ದನು. ಅವನ ಬಾಳು ಸತ್ಯಾಗ್ರಹದ ಒಂದು ಕಿರಿ ಹೊತ್ತಿಗೆಯಾಯಿತು. ’ಮನಸ್ಸಿದ್ದಲ್ಲಿ  ಮಹದೇವ’ ಎಂಬ ಕನ್ನಡದ ಗಾದೆಗೆ ಮೈಲಾರ ಮಹದೇವನ ಚರಿತ್ರೆಯೇ ಕೈಗನ್ನಡಿ.

ಕಟ್ಟಕಡೆಯ ಹೋರಾಟ

ಬ್ರಿಟಿಷರು ಭಾರತದಲ್ಲಿ ಉಳಿದಿರುವವರೆಗೆ ಭಾರತೀಯರ ಉದ್ಧಾರ ಸಾಧ್ಯವಿಲ್ಲವೆಂದು ೧೯೪೨ ರಲ್ಲಿ ಕಾಂಗ್ರೆಸ್ ನಿರ್ಧರಿಸಿತು. ಅವರನ್ನು ಹೊರಗೆ ಹಾಕಿಯೇ ತೀರಬೇಕೆಂಬ ದಿಟ್ಟ ನಿಲುವು ತಳೆಯಿತು.

೧೯೪೨ ರ ಆಗಸ್ಟ್ ತಿಂಗಳು ಎಂಟನೆಯ ದಿನ.

ಅಖಿಲಭಾರತ ಕಾಂಗ್ರೆಸ್ ಸಭೆ ಮುಂಬಯಿಯಲ್ಲಿ ಸೇರಿತು. ಬ್ರಿಟಿಷರು ಭಾರತದಿಂದ ಕಾಲುಕೀಳುವಂತೆ ಮಾಡಲೇ ಬೇಕು ಎಂದು ತೀರ್ಮಾನವಾಯಿತು. ಅದಕ್ಕಾಗಿ ಉಗ್ರ ಚಳವಳಿ ಪ್ರಾರಂಭಿಸಬೇಕೆಂದು ಎಲ್ಲರೂ ಇಚ್ಛೆ ಪಟ್ಟರು.

ಅದಕ್ಕೆ ಗಾಂಧೀಜಿಯೇ ನಾಯಕರು. ಮೊದಲು ಮಾತುಕತೆ, ತದನಂತರ ಚಳವಳಿ ಎಂದು ಗೊತ್ತಾಯಿತು. ಆದರೆ ಆಳರಸರು ಇದಕ್ಕೆ ಆಸ್ಪದ ಕೊಡದೆ ಮರುದಿನ ನಸುಕಿನಲ್ಲಿಯೇ ಗಾಂಧೀಜಿಯನ್ನೊಳಗೊಂಡು ಕಾಂಗ್ರೆಸ್ ನಾಯಕರನ್ನು ಸೆರೆ ಹಿಡಿದು ಅಜ್ಞಾತ ಸ್ಥಳಕ್ಕೆ ಒಯ್ದರು.

ಗಾಂಧೀಜಿ ಇದನ್ನು ಮುಂದಾಗಿಯೇ ತಿಳಿದಿದ್ದರು. ಹಿಂದಿನ ದಿನವೇ ಹೇಳಬೇಕಾದುದನ್ನೆಲ್ಲ ಹೇಳಿದ್ದರು. ಬ್ರಿಟಿಷರಿಗೆ ’ಚಲೇಜಾವ್’-ತಳಕಿತ್ತಿರೆಂದು ಆಜ್ಞೆ ವಿಧಿಸಿದ್ದರು. ಅನುಯಾಯಿಗಳಿಗೆಲ್ಲ ’ಮಾಡಿ ಇಲ್ಲವೆ ಮಡಿ’ ಮಂತ್ರ ಕಿವಿ ಯಲ್ಲಿ ಊದಿದ್ದರು.

ಕರ್ನಾಟಕಕ್ಕೆ ’ಗಾಂಧೀ ಪ್ರಾಂತ’ವೆಂದು ಎಂದಿನಿಂದಲೂ ಖ್ಯಾತಿ; ಎಲ್ಲ ಸ್ವಾತಂತ್ರ್ಯ ಸಮರಗಳಲ್ಲಿ ಭಾಗವಹಿಸಿ ತನ್ನ ಪಾಲಿನ ಕಾರ್ಯನಿರ್ವಹಣೆಯನ್ನು ಎದೆಗಾರಿಕೆಯಿಂದ ಪೂರೈಸಿಕೊಟ್ಟ ಕರ್ನಾಟಕವು ಕೊನೆಯ ಸಂಗ್ರಾಮದಲ್ಲಿ ಹಿಂದು ಳಿಯಲು ಸಾಧ್ಯವೆ? ಕೊನೆಯ ಸಂಗ್ರಾಮದ ಕರೆ ಹಳ್ಳಿಹಳ್ಳಿಗೆ ಕಾಳ್ಗಿಚ್ಚಿನಂತೆ ಹಬ್ಬಿತು. ಸರ್ವತ್ಯಾಗಮಾಡಿ, ಪ್ರಸಂಗಬಿದ್ದರೆ ಬಲಿದಾನಗೈದು ಮುಂದಿನ ಪೀಳಿಗೆಗಾದರೂ ಸ್ವಾತಂತ್ರ್ಯ ಒದಗಿಸಿಕೊಡಲು ಜನ ಕಂಕಣ ಕಟ್ಟಿ ನಿಂತರು.

ಗಾಂಧೀಜಿ ಕರೆನೀಡಿದ ಸಮರದಲ್ಲಿ ದಬ್ಬಾಳಿಕೆ, ಹಿಂಸೆಗಳಿಗೆ ಎಡೆಯಿರಲಿಲ್ಲ. ಆದರೆ ನಾಯಕರೆಲ್ಲ ಸೆರೆಮನೆಗೆ ಹೋದನಂತರ ಜನತೆ ಬ್ರಿಟಿಷರಿಗೆ ಆಡಳಿತ ನಡೆಸದಂತೆ ಮಾಡಬೇಕೆಂದು ತನಗೆ ಸಾಧ್ಯವಾದಂತೆ ಹೋರಾಡಿತು. ಅನೇಕರು ಸರ್ಕಾರಿ ಕೆಲಸಗಳಿಗೆ ರಾಜೀನಾಮೆ ಕೊಟ್ಟರು. ಸರ್ಕಾರೀ ಕಟ್ಟಡ, ರೈಲ್ವೆನಿಲ್ಮನೆಗಳು ಅಗ್ನಿನಾರಾಯಣನಿಗೆ ಆಹುತಿಯಾದವು. ಸಂಪರ್ಕಸಾಧನಗಳು ಕಡಿಯಲ್ಪಟ್ಟವು. ಅಂಚೆ ಹಾಗೂ ಸರ್ಕಾರೀ ಕಾಗದ ಪತ್ರಗಳನ್ನು ಜನ ಸುಟ್ಟರು. ಅನೇಕ ಕಡೆಗಳಲ್ಲಿ ಆಡಳಿತ ಕುಸಿಯಿತು. ರೊಚ್ಚಿಗೆದ್ದ ಆಡಳಿತಗಾರರು ಸಿಕ್ಕಂತೆ ಚಳವಳಿಗಾರರ ಬೇಟೆಯಾಡಿದರು. ಲಾಠಿ ಛಾರ್ಜು, ಗೋಲಿಬಾರು ನಿತ್ಯದ ಮಾತಾದವು. ಹಲ ವೆಡೆಗಳಲ್ಲಿ ವಿಮಾನಗಳಿಂದ ಬಾಂಬು ಸುರಿಸಲಾಯಿತು. ಅನೇಕರು ಜೀವ ಕಳೆದುಕೊಂಡರು. ಸೆರೆಮನೆಗಳೆಲ್ಲ ತುಂಬಿ ತುಳುಕಾಡಿದವು.

ಕಬೀರ ತಂಡ

ವೀರ ಸತ್ಯಾಗ್ರಹಿ, ಅಹಿಂಸೆಯ ದೂತ, ಉಗ್ರ ದೇಶಾಭಿಮಾನಿ ಮಹದೇವ ಚಿಂತಿಸಿದನು. ಗಾಂಧೀಜಿಯ ಅಣತಿ ತಲೆಯಲ್ಲಿ ಗುಂಯ್ಗುಡುತ್ತಿತ್ತು. ತಂಡ ಕಟ್ಟಿ ತಲೆಮರೆಸಿಕೊಂಡು ಪ್ರತಿಭಟಿಸದೆ ಬೇರೆ ಮಾರ್ಗವಿರಲಿಲ್ಲ. ಮಹದೇವ ಹಲವು ಸಂಗಾತಿಗಳನ್ನು ಸೇರಿಸಿ ಒಂದು ತಂಡ ಕಟ್ಟಿ ಅದಕ್ಕೆ ’ಕಬೀರ’ ಎಂಬ ಗುಪ್ತನಾಮವನ್ನಿರಿಸಿ, ಚಳವಳಿ ಉಗ್ರಗೊಳಿಸಲು ಅಣಿಮಾಡಿಕೊಂಡನು. ಅನೇಕ ಮಂದಿ ವೀರ ತರುಣರು ಅವರೊಂದಿಗೆ ಸೇರಿಕೊಂಡರು.

ಹದಿನೆಂಟು-ಇಪ್ಪತ್ತು ಜನರ ಊಟ ತಿಂಡಿಗಳ ನಿರ್ವಹಣೆ, ಅವರು ಇರಲು ಸ್ಥಳ ಹುಡುಕುವುದು ಎಲ್ಲ ಭಾರ ಹೊತ್ತ ಮಹದೇವ ಅನುಭವಿಸಿದ ಸಂಕಟ, ತೊಂದರೆ ವರ್ಣಿಸಲಸದಳ. ಬೆನ್ನಹಿಂದೆಯೇ ಪೋಲೀಸರ ಬಿಗಿ ಕಾವಲು. ಅವರು ವಾಸಾಗಿದ್ದ ಸ್ಥಳದ ಗುರುತು ಪೋಲೀಸರಿಗೆ ಹತ್ತಿದೆಯೆಂದು ತಿಳಿದೊಡನೆಯೇ ವಿಳಂಬ ಮಾಡದೆ ಬೇರೆಡೆಗೆ ಓಡಬೇಕಾಗಿತ್ತು. ಖರ್ಚಿಗೆ ಹಣ? ದೇಶಾಭಿಮಾನಿಗಳ ಬಳಿಗೆ ಹೋಗಿ ಕೂಡಿಸಬೇಕಾಗಿತ್ತು. ರೈಲು, ಬಸ್ಸುಗಳಲ್ಲಿ ಪ್ರಯಾಣ ಮಾಡುವಂತಿರಲಿಲ್ಲ. ಹಾಗೆ ಮಾಡಿದರೆ ಗುರುತು ಹತ್ತಿ ಬಿಡುತ್ತಿತ್ತು. ಕಾಲು ನಡಿಗೆಯಿಂದಲೋ ಸೈಕಲ್ ತುಳಿದೋ ಇಡೀ ಇರುಳು ಪ್ರಯಾಣ ಮಾಡಿದ ದೃಷ್ಟಾಂತಗಳು ಅನೇಕ.

ತಲೆಮರೆಸಿಕೊಂಡ ಕಾರ್ಯಕರ್ತರಿಗೆ ಒದಗಿದ ತೊಂದರೆ ಅಷ್ಟಿಷ್ಟಲ್ಲ. ಅಡವಿಯಲ್ಲಿಯೇ ಅವರ ವಾಸ, ವಿಶ್ರಾಂತಿ; ಗುಡ್ಡಗಳ ಗವಿಗಳಲ್ಲಿಯೂ ಕೆಲದಿನ ತಂಗಿದ್ದರು. ದೊಡ್ಡದೊಡ್ಡ ರಕ್ಕಸಬಾಳೆಯ ಕಂಟೆಗಳ ಕೆಳಗೆ ನೆಲ ಅಗಿದು ಅಲ್ಲಿ ತಂಗು ತ್ತಿದ್ದರು. ಊಟಕ್ಕೂ ಅದೇ ಗತಿ. ಹೊತ್ತಿಗೆ ಸರಿಯಗಿ ಊಟ ಮಾಡಿದ್ದು ಗೊತ್ತೇ ಇಲ್ಲ. ಅವರಿವರು ಏನಾದರೂ ತಿನ್ನಲು ಕೊಟ್ಟಾಗಲೇ ಹಸಿವೆಯ ಹಿಂಗು. ತಿಂಡಿ ತಿಂದೇ ಬದುಕಿದ ದಿನಗಳು ಅನೇಕ. ಉಪಪವಾಸ ಮಾಡುವುದು ಆಗಾಗ ಅನಿವಾರ್ಯವಾಗುತ್ತಿತ್ತು. ಕುಡಿಯಲು ನೀರು ಸಿಕ್ಕದೆ, ಕೈಕಾಲು ತೊಳೆಯಲೂ ನೀರಿಲ್ಲದೆ ಹಾಗೆಯೇ ಕೆಲಸಮಯ ತಳ್ಳುತ್ತಿದ್ದುದು ತೀರ ಸಾಮಾನ್ಯ. ಭೂಮಿಯೇ ಹಾಸಿಗೆ! ಆಕಾಶವೇ ಹೊದ್ದಿಕೆ!

ಸಾಹಸ

ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ಕಾರ್ಯಕ್ರಮಗಳು ಜರಗುತ್ತಿದ್ದರೂ ಸವಣೂರು ರೈಲ್ವೆ ನಿಲ್ದಾಣದಿಂದ ಟಪ್ಪಾಲು ತುಂಬಿಕೊಂಡು ಬರುತ್ತಿದ್ದ ಬಸ್ಸಿನಲ್ಲಿನ ಟಪ್ಪಾಲು ದೋಚಿದ್ದು ಪ್ರಥಮ ದಿಟ್ಟಕಾರ್ಯ. ತಂಡದಲ್ಲಿದ್ದ ಒಬ್ಬ ಬಸ್ಸಿನಲ್ಲಿಯೇ ಕುಳಿತು ಬಂದ. ಮಹದೇವಬನೊಬ್ಬನೇ ಆಯಕಟ್ಟಿನ ಸ್ಥಳದಲ್ಲಿ ಕಲ್ಲು, ರಕ್ಕಸಬಾಳೆಗಡ್ಡೆ ಒಟ್ಟಿ ಅರೆಕ್ಷಣದಲ್ಲಿ ಮಾರ್ಗದಲ್ಲಿ ತಡೆ ಏರ್ಪಡಿಸಿದನು. ಬಸ್ಸಿನಲ್ಲಿದ್ದವ ಬಸ್ಸು ನಿಲ್ಲಿಸಲು ನೆರವಾದ. ಮಹದೇವನೂ ಸಂಗಡಿಗನೂ ಟಪ್ಪಾಲು ದೋಚಿಕೊಂಡು ಅಡ್ಡದಾರಿ ಬಿದ್ದು ಮಿಂಚಿನ ವೇಗದಲ್ಲಿ ಮಾಯವಾದರು. ಇಬ್ಬರಲ್ಲಿಯೂ ಆಯುಧವೇನೂ ಇರಲಿಲ್ಲ. ಆದರೆ ಬಸ್ಸನ್ನು ತಡೆದು ಟಪ್ಪಾಲು ಕಸಿದು ತಪ್ಪಿಸಿಕೊಂಡು ಹೋದರು.

ಮುಂದೆ ಕೆಲದಿನಗಳಲ್ಲಿಯೇ ಗದಗ-ಶಿರಹಟ್ಟಿ ಟಪ್ಪಾಲನ್ನ ಕಲ್ಲಮುಳಗುಂದದ ಬಳಿಯಲ್ಲಿ ಬಸ್ಸು ನಿಲ್ಲಿಸಿ ಅಪಹರಿಸ ಲಾಯಿತು. ಹಳ್ಳಿಗಳಲ್ಲಿ ಸರ್ಕಾರೀ ಚಾವಡಿಗಳನ್ನು ಸುಡುವುದು, ಜನತೆಯನ್ನು ಜಾಗೃತಗೊಳಿಸಿ ಸರ್ಕಾರಕ್ಕೆ ಸಹಕಾರ ಕೊಡ ದಂತೆ ಪ್ರೇರೇಪಿಸುವುದು ಇವೇ ಮೊದಲಾದವುಗಳು ಸಾಮಾನ್ಯ ಕಾರ್ಯಗಳಾಗಿದ್ದವು.

ಸವಣೂರು ರೈಲು ನಿಲ್ದಾಣವನ್ನು ಸುಟ್ಟುದು ಭಾರೀ ಕಲಿತನದ ಕಾರ್ಯ. ರೈಲುನಿಲ್ಮನೆಗಳನ್ನು ಸುಟ್ಟು, ಹಳಿಗಳನ್ನು ಕಿತ್ತು, ತಂತಿಗಳನ್ನು ಕಡಿದು ಸಂಪರ್ಕಕ್ಕೆ ಬಲವಾದ ಅಡ್ಡಿ ತಂದೊಡ್ಡುವುದು ಚಳವಳಿಗಾರರು ಇರಿಸಿಕೊಂಡ ಕಾರ್ಯ ಕ್ರಮದಲ್ಲಿ ಮುಖ್ಯವಾಗಿದ್ದವು. ಬೆಳಗಿನ ಜಾವದಲ್ಲಿ ಸವಣೂರು ನಿಲ್ಮನೆ ಉರಿದುಹೋಯಿತು.

ಹಾವೇರಿ ಹಾಗೂ ಶಿರಹಟ್ಟಿ ತಾಲ್ಲೂಕುಗಳ ಎಲ್ಲ ಹಳ್ಳಿ ಗಳಲ್ಲಿ ನಿತ್ಯ ಪೋಲೀಸಿನವರೂ ಸೈನಿಕರೂ ಶಸ್ತ್ರಧಾರಿಗಳಾಗಿ ತಿರುಗಿ, ಆಗಾಗ ಮುತ್ತಿಗೆ ಹಾಕಿ ಹಳ್ಳಿಗರನ್ನು ಅಂಜಿಸುವುದನ್ನು ಪ್ರಾರಂಭಿಸಿದರು. ಹಳ್ಳಿಗರು ಈ ದಬ್ಬಾಳಿಕೆಗೆ ಅಂಜದಿದ್ದರೂ ಮಹದೇವನ ತಂಡದ ಯಾವ ಕೆಲಸಗಳಿಗೂ ಕೆಲದಿನ ಆಸ್ಪದ ದೊರೆಯದಂತಾಯಿತು. ಸೋಮಾರಿಯಾಗಿ ಕುಳಿತುಕೊಳ್ಳಲು ಇಷ್ಟಪಡದೆ ಮಹದೇವ ಕಾರ್ಯಕ್ಷೇತ್ರವನ್ನು ಅಲ್ಲಿಂದ ತುಂಗಭದ್ರಾ ನದಿಯ ಆಚೆಗಿನ ಹರಪನಹಳ್ಳಿ ತಾಲ್ಲೂಕಿಗೆ ಬದಲಿಸಿದನು.

ಒಂದೆರಡು ದಿನಗಳಲ್ಲಿಯೇ ಹರಿಹರದಿಂದ ಹರಪನ ಹಳ್ಳಿಗೆ ಬರುವ ಬಸ್ಸಿನಲ್ಲಿ ಟಪ್ಪಾಲು ಅಪಹರಿಸಲ್ಪಟ್ಟಿತು. ಇದು ತುಂಬ ಅಪಾಯದ, ಗಂಡಾಂತರದ ಕಾರ್ಯಕ್ರಮವಾಗಿತ್ತು. ಇಬ್ಬರು ಹರಿಹರದಿಂದ ಬಸ್ಸಿನಲ್ಲಿ ಕುಳಿತು ಬಂದರು. ಹತ್ತು ನಿಮಿಷಗಳಲ್ಲಿ ಗಿಡಗಳ ಟೊಂಗೆ ಕಡಿದು ಮಾರ್ಗ ತಡೆ ಹಾಕಲಾಯಿತು. ಡ್ರೈವರ್ ದೂರದಿಂದ ಅದನ್ನು ನೋಡಿದ. ಅವನಿಗೆ ಸಂಚಿನ ಸುಳಿವು ಹತ್ತಿತು. ಹೇಗಾದರೂ ಮಾಡಿ ಪಾರಾಗಲೇಬೇಕೆಂದು ಅಡ್ಡಗಟ್ಟಿದ ತಡೆಯನ್ನು ಲೆಕ್ಕಿಸದೆ ಮಾರ್ಗದ ಅಂಚಿನಲ್ಲಿಯ ಅಲ್ಪ ಸ್ಥಳದಲ್ಲಿಯೇ ತೂರಿ ಪಾರಾಗಬೇಕೆಂದು ರಭಸದಿಂದ ಬಸ್ಸು ಚಲಿಸಿದ. ಬಸ್ಸಿಗೆ ಪಾರಾಗುವುದಾಗಲಿಲ್ಲ; ನಿಂತಿತು. ಟಪ್ಪಾಲಿನ ಅಪಹರಣ ನಡೆಯಿತು. ಆದರೆ ಅಲ್ಲಿಂದ ಪಾರಾಗುವುದು ಸುಲಭವಿರಲಿಲ್ಲ. ಒಬ್ಬ ಎಚ್ಚರ ತಪ್ಪಿ ಬಿದ್ದಿದ್ದ. ಅವನನ್ನು ಹೊತ್ತುಕೊಂಡು ಹೋಗಬೇಕಾಗಿತ್ತು. ಜೊತೆಗಿದ್ದ ನಾಲ್ಕು ಲಾಠಿಗಳದ್ದೇ ಒಂದು ಸಿದಗಿ ಮಾಡಿ ಅದರ ಮೇಲೆ ಅವನನ್ನು ಹಾಕಿ ಅವರು ಓಡಹತ್ತಿದರು. ಅವನು ಸತ್ತಿರುವನೆಂದೇ ಎಲ್ಲರ ಭಾವನೆ. ಶೀಘ್ರದಲ್ಲಿ ಹರಪನಹಳ್ಳಿ ಪೋಲೀಸರಿಗೆ ಸುದ್ದಿ ಹತ್ತಿತು. ಅವರು ಬೆನ್ನಟ್ಟಿ ಬಂದರು. ಸಮೀಪದಲ್ಲಿ ಜೋಳದ ಹೊಲ ವಿತ್ತು. ಪೋಲೀಸರಿಗೆ ಕಾಣುವಂತೆ ಅದರಲ್ಲಿ ಹೊಕ್ಕರು. ’ಇನ್ನೇನು ಸಿಕ್ಕಿಬಿಟ್ಟರು’ ಎಂದು ಪೋಲೀಸರು ರಭಸದಿಂದ ಅತ್ತ ಧಾವಿಸಿದರು. ಮರು ಕ್ಷಣದಲ್ಲಿ ಆ ಎಚ್ಚರದಪ್ಪಿದ ಮನುಷ್ಯನ ಕಾವಲಿಗೆ ಇಬ್ಬರು ಅಲ್ಲಿಯೇ ಉಳಿದು, ಉಳಿದವರೆಲ್ಲರೂ ಕೇಕೆ ಹಾಕುತ್ತ ಆ ಹೊಲದಿಂದ ಹೊರಬಿದ್ದು ಪೋಲೀಸರಿಗೆ ಸ್ಪಷ್ಟವಾಗಿ ಕಾಣುವಂತೆ ಓಡಿದರು. ಅವರು ಓಡಿದ ದಿಕ್ಕಿನಲ್ಲಿಯೇ ಪೋಲೀಸರು ಮುನ್ನುಗ್ಗಿ ಬೆನ್ನಟ್ಟಿದರು. ಪೋಲೀಸರು ಅಲ್ಲಿಂದ ಹೋದಮೇಲೆ, ಎಚ್ಚರದಪ್ಪಿ ಬಿದ್ದವನ ಜೊತೆಗಿದ್ದವರು ಅವನನ್ನು ಒಂದು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಉಪಚರಿಸಿದರು. ಇತ್ತ ಓಡಿಹೋದವರೂ ಪೋಲೀಸರ ಕೈಗೆ ಸಿಕ್ಕದೆ ಪರಾರಿಯಾದರು. ಎಂಥ ಸಮಯಜಾಣ್ಮೆ ಮಹದೇವನದು!

ಕೆಲವೇ ದಿನಗಳಲ್ಲಿ ಒಂದು ಮುತ್ಸದ್ದಿತನದ ಕಾರ್ಯ ನಡೆಯಿತು. ಶಿರಹಟ್ಟಿ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ರೈತರಿಂದ ಸರ್ಕಾರಕ್ಕೆ ಸಲ್ಲುವ ಹಣ ಬಹಳ ಉಳಿದಿತ್ತು. ತಹಶೀಲ್ದಾರರೇ ವಸೂಲಿಗೆ ಸ್ವತಃ ಆ ಹಳ್ಳಿಯಲ್ಲಿ ಬೀಡು ಬಿಟ್ಟಿದ್ದರು. ಈ ಸುದ್ದಿ ತಿಳಿದ ಮಹದೇವ ಅಲ್ಲಿಗೆ ಹೋಗಿ ರೈತರಾರೂ ಸರ್ಕಾರಕ್ಕೆ ಹಣ ಕೊಡಕೂಡದೆಂದು ಬೋಧಿಸಿ, ತಹಶೀಲ್ದಾರರನ್ನು ಘೇರಾವು ಮಾಡಿ ಅವರಿಂದ ಬಾಕಿ ಹಣವೆಲ್ಲ ಸರ್ಕಾರಕ್ಕೆ ಪೂರ್ತಿ ಸಂದಾಯವಾಯಿತೆಂದು ಪಾವತಿ ಕೊಡಿಸಿದನು. ಹೆಬ್ಬಾಳ ಮೊದಲಾದ ಇನ್ನೂ ಕೆಲವು ಹಳ್ಳಿಗಳಲ್ಲಿ ಇದೇ ರೀತಿ ಹಲವಾರು ಕಾರ್ಯಗಳು ನಡೆದವು.

ಪೋಲೀಸರ ಸಿಂಹಸ್ವಪ್ನ

ಮಹದೇವ ಎಂದರೆ ಪೋಲೀಸಿನವರಿಗೆ ಸಿಂಹಸ್ವಪ್ನ. ಬಗೆಬಗೆಯಿಂದ ಚಳವಳಿಗಾರರನ್ನು ಹತ್ತಿಕ್ಕಲು ಯತ್ನಿಸಿದರೂ ಸರ್ಕಾರಕ್ಕೆ ಸಾಧ್ಯವಾಗದೆ ಹೋಯಿತು. ನಿತ್ಯವೂ ಸೈನಿಕರನ್ನು ಹಾಗೂ ಪೋಲೀಸಿನವರನ್ನು ಹೊತ್ತುಕೊಂಡ ವಾಹನಗಳು ಕಾವಲು ತಿರುಗಾಡಿದವು. ಯಾವುದೊಂದು ಸ್ಥಳಕ್ಕೆ ಹೋದರೂ ಅದೇ ಆಗ, ಸ್ವಲ್ಪ ಸಮಯದ ಕೆಳಗೆ ಅಲ್ಲಿಂದ ಚಳವಳಿಗಾರರು ಪಾರಾಗಿಹೋದರೆಂದು ಜನರು ಪೋಲೀಸರಿಗೆ ಮಂಕುಬೂದಿ ಎರಚುತ್ತಿದ್ದರು.

ಮಹದೇವನ ಕಾರ್ಯಗತಿ ತುಂಬ ತ್ವರಿತ ಹಾಗೂ ಚಾಕಚಕ್ಯತೆಯಿಂದ ಕೂಡಿತ್ತು. ಹಳ್ಳಿಗಳಲ್ಲಿ, ಹಳ್ಳಿಗರನ್ನೆಲ್ಲ ಕೂಡಿಸಿ ಅವರೆಲ್ಲರ ಎದುರಿನಲ್ಲಿಯೇ ಸರ್ಕಾರೀ ಕಟ್ಟಡ ಹಾಗೂ ಕಾಗದಗಳನ್ನು ಸುಡುತ್ತಿದ್ದನು. ಮೇಲಾಗಿ ಒಂದೇ ದಿನ ಏಕ ಕಾಲಕ್ಕೆ ಇಪ್ಪತ್ತು-ಮೂವತ್ತು ಮೈಲು ಅಂತರದಲ್ಲಿರುವ ಎರಡು ಸ್ಥಳಗಳಲ್ಲಿ ಕಾರ್ಯಕ್ರಮಗಳು ಏರ್ಪಡುತ್ತಿದ್ದವು. ಅದರಿಂದಾಗಿ ಸರ್ಕಾರಕ್ಕೆ ಇವು ಎರಡು ತಂಡಗಳ ಕಾರ್ಯಕ್ರಮಗಳೇ ಎಂಬ ಅನುಮಾನ ಆಗಾಗ ಬರುತ್ತಿತ್ತು. ಏನೇ ಕಾರ್ಯಕ್ರಮವಿರಲಿ, ಒಂದಿನಿತೂ ವಿಳಂಬವಾಗುತ್ತಿರಲಿಲ್ಲ. ಕ್ಷಣಾರ್ಧದಲ್ಲಿ ಸಂಖ್ಯೆ ಗಳು ಎಣಿಸಿದಂತೆ ಕಾರ್ಯ ಮುಗಿದುಬಿಡುತ್ತಿತ್ತು. ಒಂದು ಭಾಗದಲ್ಲಿ ಕಾರ್ಯ ಪೂರೈಸಿದೊಡನೆ ಕೆಲದಿನ ಅತ್ತ ಸುಳಿವಿಲ್ಲ. ಬಹುದೂರ ಪ್ರಯಾಣ. ಹೊರಟುಹೋಗುವಾಗ ಗುರುತು ಒಂದೂ ಉಳಿಯದಂತೆ ದಕ್ಷತೆ. ಅನುಯಾಯಿಗಳಿಗೂ ಹೋಗಿ ಮುಟ್ಟುವ ತನಕ ಮುಂದಿನ ಸ್ಥಳ ಇಲ್ಲವೆ ಕಾರ್ಯದ ಸುಳಿವಿರುತ್ತಿರಲಿಲ್ಲ.

ಹಾವೇರಿಯಲ್ಲಿ ರೈಲುನಿಲ್ದಾಣದಿಂದ ಅಂಚೆಕಚೇರಿಗೆ ಸಾಗಿಸಲ್ಪಡುತ್ತಿದ್ದ ಟಪ್ಪಾಲು ಅಪಹರಣ ಮಹದೇವನಿಗಲ್ಲದೆ ಇನ್ನಾರಿಗೆ ಸಾಧ್ಯವಿತ್ತು? ಅಂಚೆ ಸಾಗಿಸುತ್ತಿದ್ದ ಜವಾನನನ್ನು ಏಕಾಂಗಿಯಾಗಿ ಕೈ ಸಿಡಿಮದ್ದು ಹಾರಿಸಿ ಗಾಬರಿಗೊಳಿಸಿ, ಟಪ್ಪಾಲು ಚೀಲ ಅಪಹರಿಸಿದ್ದನು. ಹಾವೇರಿಯಿಂದ ಕೊರಡೂರಿನ ತನಕ ಇಪ್ಪತ್ತೈದು ಮೈಲು ದೂರ, ಅಂದು ಮಹದೇವ ಹೊಲಗಳಲ್ಲಿ ಅಡ್ಡ ಬಿದ್ದು ಓಡಿದ್ದ. ಒಗ್ಗಿಹೋಗಿತ್ತು. ತಾಲ್ಲೂಕಿನ ಮುಖ್ಯಸ್ಥಳದಲ್ಲಿ ನಡುಬೀದಿಯಲ್ಲಿ ನಡೆದ ಘಟನೆ ಪೋಲೀಸರಿಗೆ ಅವಮಾನ ಮಾಡಿದಂತೆನಿಸಿತು. ಜನತೆ ಮಹ ದೇವನ ಚಾತುರ್ಯ, ಸಾಹಸ, ಧೈರ್ಯಗಳನ್ನು ಹಾಡಿಹರಿಸಿದ್ದೇ ಹರಿಸಿದ್ದು!

ಬ್ರಿಟಿಷ್ ಸರ್ಕಾರದ ಬೇರುಗಳನ್ನು ಸಡಿಲಿಸಲು ಅಹಿಂಸಾತ್ಮಕವಾಗಿ ಕೈಗೊಂಡ ಕಾರ್ಯಕ್ರಮಗಳಲ್ಲಿ ಜನತೆಗೆ ತೊಂದರೆಯಾಗದೆ ಇರುತ್ತಿರಲಿಲ್ಲ. ಆದರೂ ಸಹಿತ ಮಹದೇವ ತುಂಬಾ ಎಚ್ಚರಿಕೆ ವಹಿಸುತ್ತಿದ್ದನು. ಅಪ್ಪಿ ತಪ್ಪಿ ಅನ್ಯಾಯ ಸಂಭವಿಸಿದಾಗ ಅದನ್ನು ಸರಿಪಡಿಸುವ ತನಕ ಅವನಿಗೆ ಸಮಾಧಾನವಿರುತ್ತಿರಲಿಲ್ಲ.  ಮರೋಳದಲ್ಲಿ ಗೌಡ ಸರ್ಕಾರದ ಪರ; ಸ್ವಾತಂತ್ರ್ಯ ಯೋಧರೆಂದರೆ ಅವನಿಗಾಗದು. ಅಲ್ಲಿ ಕಂದಾಯದ ಹಣದ ಲೂಟಿ ನಡೆದಾಗ ಗೌಡ ಹೆದರಿ, ತನ್ನ ಸ್ವಂತದ ಹಣವನ್ನೂ ಕೊಟ್ಟಿದ್ದನಂತೆ. ಅದು ಅನಂತರ ಮಹದೇವನಿಗೆ ತಿಳಿಯಿತು. ತಾನೇ ಸ್ವತಃ ಗೌಡನಲ್ಲಿಗೆ ಹೋಗಿ ಅವನ ಹಣ ಲೆಕ್ಕಮಾಡಿ ಅವನಿಗೆ ತಲುಪಿಸಿ ಬಂದಿದ್ದನು. ಅದನ್ನೂ ಕೂಡ ಗುಟ್ಟಾಗಿ ಅಲ್ಲ; ಊರಲ್ಲಿ ಎಲ್ಲ ಜನರ ಸಭೆ ಕರೆದು, ಅವರೆಲ್ಲರ ಸಮಕ್ಷಮ ಹಣ ಹಿಂದಿರುಗಿಸಿದ್ದನು. ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದ ಗೌಡನ ದೃಷ್ಟಿ ಅಂದಿನಿಂದ ಬದಲಾಯಿಸಿತು.

ಹೇಗಾದರೂ ಮಾಡಿ ಮಹದೇವನನ್ನೂ ಅವನ ತಂಡವನ್ನೂ ಬಂಧಿಸಲೇಬೇಕೆಂದು ಸರ್ಕಾರ ದೃಢ ಸಂಕಲ್ಪ ಮಾಡಿತು. ಅವನನ್ನು ಹಿಡಿಯಲು ಮಾಹಿತಿ ನೀಡುವವರಿಗೆ ಮೂರು ನೂರು ರೂಪಾಯಿ ಬಹುಮಾನ ಕೂಡ ಸಾರಿತ್ತು.

’ಇದೇ ಕೊನೆಯ ಸ್ವಾತಂತ್ರ್ಯ ಹೋರಾಟವಾಗಬೇಕು’ ಎಂದು ಗಾಂಧೀಜಿ ಅಣತಿ. ಇದನ್ನು ಸತ್ಯವಾಗಿರಿಸಲು ಮಹದೇವನೂ ಅವನ ಸಂಗಡಿಗರೂ ತಮ್ಮ ದೇಹದ ಕೊನೆಯ ರಕ್ತದ ಹನಿ ಸುರಿಸಲು ಪ್ರತಿಜ್ಞೆ ಮಾಡಿದ್ದರು.

ಸರ್ಕಾರದ ಹೊಂಚು

ವರದಾ ನದಿಯ ದಂಡೆಯ ಮೇಲಿರುವ ಹೊಸರಿತ್ತಿಯಲ್ಲಿ ಒಂದು ಕಂದಾಯ ವಸೂಲುಮಾಡುವ ಕೇಂದ್ರವನ್ನು ಆಳರಸರು ಏರ್ಪಡಿಸಿದರು. ಬಹು ದಿನಗಳಿಂದ ಗಾಂಧೀ ಆಶ್ರಮದ ನೆಲೆಯಾಗಿದ್ದ ಜಾಗೃತ ಹಳ್ಳಿ ಹೊಸರಿತ್ತಿ. ಮಹದೇವನ ಕಾರ್ಯಕ್ಷೇತ್ರವಾಗಿದ್ದ ಕೊರಡೂರು ಸಹ ಪಕ್ಕದಲ್ಲಿಯೇ. ಅಲ್ಲಿ ಕಂದಾಯ ಮಸೂಲು ಮಾಡುವ ಕೇಂದ್ರ ತೆರೆಯುವಲ್ಲಿ ಆಳರಸರಿಗೆ ಎದೆಗುದಿಯಿದ್ದರೂ ಮಹಾ ಬುದ್ಧಿ ವಂತಿಕೆಯಿಂದ ವರ್ತಿಸಿದ್ದರು. ದೇಶಾಭಿಮಾನಿಗಳಾದ ಸುತ್ತುಮುತ್ತಲಿನ ಹಳ್ಳಿಗರು ಅಲ್ಲಿ ತೆರೆದ ಕೇಂದ್ರದ ತನಕ ಹೋಗಿ ಹಣಕೊಟ್ಟು ಬರುವುದು ಸ್ವಾಭಿಮಾನಕ್ಕೆ ಭಂಗ ತರುವಂಥದಾಗಿತ್ತು. ಆ ರೀತಿಯಲ್ಲಿ ಅವರ ಸ್ವಾಭಿಮಾನ ಅಣಕಿಸಬೇಕು. ಮೇಲಾಗಿ ಮಹದೇವ ಖಂಡಿತವಾಗಿ ಆ ಕೇಂದ್ರದ ಮೇಲೆ ಹಲ್ಲೆ ಮಾಡಿಯೇ ತೀರುತ್ತಾನೆ, ಆಗ ಅವನ್ನೂ ಅವನ ಸಂಗಡಿಗರನ್ನೂ ಸುತ್ತುಗಟ್ಟಬೇಕು. ಇದು ಸರ್ಕಾರದ ಯೋಜನೆ. ಅಂತೆಯೇ ಯಾವ ಕೇಂದ್ರದಲ್ಲಿಯೂ ಇರಿಸದ ಅಜ್ಜಗಾವಲು ಆ ಕೇಂದ್ರದಲ್ಲಿ ಏರ್ಪಟ್ಟಿತು. ಕರ್ನಾಟಕದ ಪೋಲೀಸರು ದಾಕ್ಷಿಣ್ಯಕ್ಕೆ ಒಳಗಾಗಿ ಚಳವಳಿ ಗಾರರಿಗೆ ನೆರವಾಗಬಹುದೆಂದು ಮಹಾರಾಷ್ಟ್ರದಿಂದ ಪೋಲೀಸ ರನ್ನು ತಂದು ಅಲ್ಲಿರಿಸಿದ್ದರು.

ಹಲವಾರು ಹಳ್ಳಿಗಳಲ್ಲಿಯ ಸರ್ಕಾರೀ ಕಾಗದಗಳ ಹೋಳಿ, ಬಾಲೇ ಹೊಸೂರು, ನಾಗರಮಡು, ಹಾವನೂರು, ಸೂರಣಿಗಿ, ಬಿಜ್ಜೂರು, ಪಡವಿ, ಎಲಗಚ್ಚು, ಕನವಳ್ಳಿ, ನೆಗಳೂರುಗಳಲ್ಲಿ ಚಾವಡಿಗಳ ಭಸ್ಮ; ಹೊನ್ನತ್ತಿಯಲ್ಲಿ ಪೋಲೀಸರನ್ನು ನಿಸ್ಯಶ್ಯಸ್ತ್ರಗೊಳಿಸಿ ಕಂದಾಯದ ಹಣ ಲೂಟಿ; ಕಲ್ಲಮುಳಗುಂದ, ಸವಣೂರು, ಹೊಸರಿತ್ತಿ, ಹರಪನಹಳ್ಳಿ, ಹಾವೇರಿಗಳಲ್ಲಿ ಟಪ್ಪಾಲು ಅಪಹರಣ; ದೋಣಿ, ಡಂಬಳಗಳಲ್ಲಿ ತಾರಿನ ತಂತಿ ಕಡಿದು ಕಂಬ ಉರುಳಿಸುವಿಕೆ; ಯಲವಿಗಿ, ಹತ್ತೀ ಮತ್ತೂರು, ಕರ್ಜಗಿ ರೈಲ್ವೆ ನಿಲ್ದಾಣಗಳನ್ನು ಸುಡುವಿಕೆ; ಬಾಲೇ ಹೊಸೂರಿನಲ್ಲಿ ಗಾಂಜಾದ ಅಂಗಡಿ ಇತಿಶ್ರೀ, ಹೆಬ್ಬಾಳದಲ್ಲಿ ತಹಶೀಲದಾರರಿಗೆ ಮಂಕುಬೂದಿ, ನೆಗಳೂರಿನಲ್ಲಿ ನಡುಹಗಲೇ ಪೋಲೀಸರ ವಾಹನ ಬೆಂಕಿಗಾಹುತಿ, ಹಾವೇರಿಯ ನ್ಯಾಯಾಲಯ ನುಗ್ಗಿ ನ್ಯಾಯಪೀಠ ಅಲಂಕರಿಸಿ, ’ಬ್ರಿಟಿಷರು ಭಾರತದಿಂದ ತಕ್ಷಣ ಹೊರಟುಹೋಗಬೇಕು’ ಎಂಬ ತೀರ್ಪು ನೀಡಿಕೆ, ತಾಲ್ಲೂಕು ಕಚೇರಿಯ ಮೇಲೆ ಝೆಂಡಾ ಏರಿಸುವಿಕೆ ಮೊದಲಾದ ಸುಮಾರು ೭೪ ಕಾರ್ಯಕ್ರಮಗಳನ್ನು ನೆಚ್ಚಿನ ಅನುಯಾಯಿಗಳೊಂದಿಗೆ ನೆರವೇರಿಸಿದ ಮಹದೇವನಿಗೆ ಹೊಸರಿತ್ತಿಯ ಕಂದಾಯ ಹಣ ಅಪಹರಿಸುವುದು ಅಷ್ಟೇನೂ ಕಠಿಣವಾಗಿ ಕಾಣಿಸಲಿಲ್ಲ. ಹೊರಗಿನಿಂದ ಬಂದ ಕಾವಲಿಗಿದ್ದ ಪೋಲೀಸಿನವರ ಬಗ್ಗೆಯೂ ಅಂಜಿಕೆಯೆನಿಸಲಿಲ್ಲ. ಆಡಳಿತ ಗಾರರು ಒಡ್ಡಿದ ಬಲೆಯ ಸಮಾಚಾರ ತಿಳಿದು ನಕ್ಕುಬಿಟ್ಟನು.

ಸೆರೆಮನೆಯಲ್ಲೆ ಗಾಂಧೀಜಿ ಇಪ್ಪತ್ತೊಂದು ದಿನಗಳ ಉಪವಾಸ ಮಾಡಿದ್ದರು. ಅವರ ಉಪವಾಸದನಂತರ ಒಂದು ಅತಿ ಮಹತ್ತರವಾದ ಕಾರ್ಯ ಮಾಡಬೇಕೆಂಬ ಸಂಕಲ್ಪ ಮಾಡಿದ್ದನು; ಅದು ಇದೇ ಏಕಾಗಬಾರದೆಂದು ನಿಶ್ಚಯಿಸಿದನು. ಇದಾದ ನಂತರ ಹಾವೇರಿ ತಾಲ್ಲೂಕು ಕಚೇರಿಯ ಮೇಲೆ ದಂಡಯಾತ್ರೆ ನಡೆಸುವ ಏರ್ಪಾಡಿತ್ತು.

ತಾಯಿಗೆ ಪ್ರಾಣಪುಷ್ಪದ ಅರ್ಪಣೆ

೧೯೪೩ ರ ಏಪ್ರಿಲ್ ತಿಂಗಳ ಒಂದನೆಯ ದಿನಾಂಕ ಹೊಸರಿತ್ತಿಯಲ್ಲಿ ವೀರಭದ್ರ ದೇವರ ಗುಡಿಯ ಹತ್ತಿರ ಕಂದಾಯದ ಹಣದ ಪೆಟ್ಟಿಗೆಯಿರಿಸಿತ್ತು. ಮಹದೇವನು ನಾಲ್ಕೈದು ಜನ ಸಂಗಡಿಗರೊಂದಿಗೆ ಅಲ್ಲಿಗೆ ಬಂದಾಗ ಚುಮುಚುಮು ಬೆಳಗಾಗುವ ಸಮಯ. ಗುಡಿಯಲ್ಲಿ ಆಗ ಇದ್ದವರು ಮೂವರೇ ಮೂವರು ಪೋಲೀಸರು. ಉಳಿದವರೆಲ್ಲ ಹೊಳೆಯ ಕಡೆಗೆ ಹೋಗಿದ್ದರು. ಅದೇ ಒಳ್ಳೆಯ ಸಮಯ ವೆಂದು ಮಹದೇವ ಹಾಗೂ ಅವನ ಸಂಗಡಿಗರು ಮುನ್ನುಗ್ಗಿ ಇಬ್ಬರು ಕಾವಲುಗಾರರ ಮೇಲೆ ಬಿದ್ದು ಅವರನ್ನು ನಿಸ್ಸಹಾಯ ಮಾಡಿದರು. ಗರ್ಭಗುಡಿಯಲ್ಲಿದ್ದ ಪೋಲೀಸನನ್ನು ಮಹದೇವ ಗಮನಿಸದೆ ಇರಲಿಲ್ಲ. ಅವನು ನಿರುಪದ್ರವಿಯೆಂಬಂತೆ ಬಗ್ಗಿ ಬೇಡಿಕೊಂಡ. ಅವನನ್ನು ನಿರ್ಲಕ್ಷಿಸಿದ್ದೇ ಮಹದೇವ ಮಾಡಿದ ಮಹಾಪರಾಧ.

ಕಂದಾಯದ ಹಣದ ಪೆಟ್ಟಿಗೆಗೆ ಮಹದೇವ ಕೈ ಹಾಕಿದನು. ಗರ್ಭಗುಡಿಯಲ್ಲಿ ಬಂದೂಕು ಇತ್ತು. ಅದನ್ನು ಅವರಾರೂ ನೋಡಿರಲಿಲ್ಲ. ಒಂದು ಕ್ಷಣದ ಹಿಂದೆ ಬಗ್ಗಿ ಬೇಡಿಕೊಂಡ ಪೋಲೀಸನೇ ಕೃತಘ್ನತೆಯಿಂದ ಮರುಕ್ಷಣದಲ್ಲಿ ಗುಂಡು ಹಾರಿಸಿದನು. ಮಹದೇವನ ಬೆರಳಿಗೆ ಅದು ತಾಗಿತು. ಮಹದೇವ ಹೊರಳಿ ನೋಡಿದನು. ಕ್ಷಣಾರ್ಧದಲ್ಲಿ ಒಂದರ ಮೇಲೊಂದು ನಾಲ್ಕು ಗುಂಡು ಸೊಂಯ್ಗುಡುತ್ತ ಬಂದು ಎದೆಯಲ್ಲಿ ಸೇರಿದವು. ಸಂಗಡಿಗರು ಮೋಸ ಮಾಡಿದ ಪೋಲೀಸನನ್ನು ದಂಡಿಸಲು ಏರಿಹೋದರು. ಅಂಥ ಸ್ಥಿತಿ ಯಲ್ಲಿಯೂ ಮಹದೇವ, ಅವನ ಮೇಲೆ ಕೈಮಾಡಗೊಡಲಿಲ್ಲ. ಅಹಿಂಸೆಯನ್ನುಳಿದು ಒಂದು ಗೆರೆಯನ್ನೂ ದಾಟಬಾರದೆಂದು ಮೃತ್ಯುಶಯ್ಯೆಯಲ್ಲಿದ್ದರೂ ಎಚ್ಚರಿಸಿದನು. ಅಲ್ಲಿಂದ ಪಾರಾಗಿ ಹೋಗಿ ಅಹಿಂಸಾತ್ಮಕ ಹೋರಾಟ ಮುಂದುವರೆಸಲು ಹೇಳಿ, ನೆಲಕ್ಕೆ ಬಿದ್ದನು. ಜೀವಗಳ್ಳರಾಗಿ ಮಹದೇವನನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗಲು ಸಂಗಡಿಗರು ಇಷ್ಟಪಡಲಿಲ್ಲ. ಗಾಯಗೊಂಡ ಮಹದೇವನನ್ನು ಅಲ್ಲಿಂದ ಸಾಗಿಸಿಕೊಂಡು ಹೋಗಬೇಕೆಂದು ಅವರೆಲ್ಲ ಯತ್ನಿಸುತ್ತಿರುವಾಗಲೇ ಗುಂಡಿನ ಸಪ್ಪಳ ಕೇಳಿ, ಗಾಬರಿಯಾದ ಪೋಲೀಸರು ಹೊಳೆಯಿಂದಲೇ ಗುಂಡಿನ ಸುರಿಮಳೆಗರೆಯುತ್ತ ನುಗ್ಗಿ ಬಂದರು. ಮಹದೇವನ ನೆಚ್ಚಿನ ಅನುಯಾಯಿಗಳಾದ ಕೋಗನೂರಿನ ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳರ, ಗೋಣೆಪ್ಪ ಕಮತದ, ನಾಗರಮಡುವಿನ ಮುದುಕ್ಪಪ್ಪ, ಹಡಪದ ಹಾಗೂ ಹಾಲಗಿಯ ಚಂದೂಸಾಬ ಓಲೆಕಾರ ಇವರಿಗೂ ಗುಂಡಿನೇಟುಗಳು ಬಿದ್ದವು. ಮಹದೇವನ ಪಕ್ಕೆಗೆ ಬಂದೂಕದ ತುದಿಯಿಂದ ತಿವಿದಿದ್ದರು. ಕರುಳು ಹೊರಬಿದ್ದಿದ್ದವು. ನಾಲ್ಕು ಗುಂಡಿನೇಟು ಬಿದ್ದ ತಿರಕಪ್ಪ ಅಲ್ಲಿಯೇ ಪ್ರಾಣ ನೀಗಿದ್ದನು. ಗೋಣೆಪ್ಪನ ಮೂರು ಬೆರಳುಗಳು ಕತ್ತರಿಸಲ್ಪಟ್ಟಿದ್ದವು. ಮುದುಕಪ್ಪನ ಪಾದದಲ್ಲಿ ಒಂದು ಗುಂಡು ಸೇರಿತ್ತು. ಚಂದೂಸಾಬನ ತಲೆ ಒಡೆದು ಹೋಗಿತ್ತು. ಇನ್ನೂ ಒಬ್ಬಿಬ್ಬರಿಗೆ ಗಾಯಗಳಾಗಿದ್ದವು. ಮಹ ದೇವನನ್ನು ತಾಲ್ಲೂಕು ಮುಖ್ಯ ಸ್ಥಳವಾದ ಹಾವೇರಿಗೆ ಸಾಗಿಸುತ್ತಿದ್ದಾಗಲೇ ಆತನ ಪ್ರಾಣ ಹಾರಿಹೋಯಿತು. ವೀರಯ್ಯ ಹಾವೇರಿಯಲ್ಲಿ ಸಾಯಂಕಾಲ ಮರಣವನ್ನಪ್ಪಿದನು.

 

ಮಹದೇವನಿಗೆ ಎದೆಯಲ್ಲಿ ಗುಂಡು ತಾಕಿತು.

ಬಿರುಗಾಳಿಯಂಥ ಬಾಳು ಮೂವತ್ತೆರಡರ ಹರೆಯ ದಲ್ಲಿಯೇ ಕೊನೆಗೊಂಡಿತು. ವೀರಯ್ಯ, ತಿರುಕಪ್ಪ ನಾಯಕನನ್ನು ಅನುಸರಿಸಿ, ಸ್ವಾಮಿಭಕ್ತಿಯ ಘನತೆ ಹೆಚ್ಚಿಸಿದರು. ಮುಂದೆ ನಾಲ್ಕೇ ವರ್ಷಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಈ ಸ್ವಾತಂತ್ರ್ಯ ಮಹದೇವನಂಥ ಹುತಾತ್ಮರದು!

’ಮಹದೇವ ಅಮರ’

ಮಹದೇವನ ಮರಣದ ಸುದ್ದಿಯನ್ನು ಆಲಿಸಿದ ಮಹಾತ್ಮಾ ಗಾಂಧೀಜಿಯವರಿಗೆ ಕೆಲಸಮಯ ಮಾತೇ ಹೊರಡಲಿಲ್ಲ. ಅವನ ಮರಣಕ್ಕಾಗಿ ಮರುಗಿದರು. ಕೆಲ ಸಮಯದನಂತರ ಅವರ ಬಾಯಿಂದ ಈ ಮಾತುಗಳು ಹೊರಬಿದ್ದವು: “ಮಹಾದೇವ ಹುತಾತ್ಮ! ಅವನು ಅಮರ!”