ಈ ಭೂಮಿಯ ಮೇಲೆ ಮೊದಲು ಮಾನವ ಸೃಷ್ಠಿಯೇ ಅಥವಾ ದೈವದ ಸೃಷ್ಠಿಯೇ? ಈ ಪ್ರಶ್ನೆಗೆ ನಮ್ಮ ಸಂಪ್ರದಾಯ ಶರೂರು ಮೊದಲು ದೇವರ ಸೃಷ್ಠಿ

[ನಂತರ ಅವನಿಂದ ಮಾನವನ ಸೃಷ್ಟಿ] ಎಂದು ಹೇಳುತ್ತಾರೆ. ಆದರೆ ವೈಚಾರಿಕವಾಗಿ ನೋಡಿದರೆ ಈ ಭೂಮಿಯಮೇಲೆ ಮಾನವನ ಸೃಷ್ಠಿಯಾಗಿ ನಂತರ ಮಾನವನಿಂದ ನಾನಾ ಬಗೆಯ ದೇವರುಗಳ ಸೃಷ್ಟಿಯಾಗಿದೆ ಎಂದು ಹೇಳಿದರೆ ಹೆಚ್ಚು ಸಮಂಜಸವೆನಿಸುತ್ತದೆ.

ಜನಪದರಿಗೆ ಈ ದೇವರ ಕಲ್ಪನೆ ಮೊದಲು ಅವರ ಮನಸ್ಸನ್ನು ಹೊಕ್ಕಿದ್ದೇಕೆ? ಹಬ್ಬ, ಹುಣ್ಣಿಮೆ, ಜಾತ್ರೆ, ಪೂಜೆ ಇವುಗಳನ್ನೇಕೆ ಸೃಷ್ಟಿಸಿಕೊಂಡ. ಇವುಗಳಿಗೆ ನಿರಾಕಾರವಾದ ಉತ್ತರವನ್ನು ಹೇಳುವುದು ಕಷ್ಟ. ಮಾನವನು ಭೂಮಿಯ ಮೇಲೆ ಬಂದಾಗ ಪ್ರಕೃತಿಯ ವಿಕೋಪವನ್ನು ಕಂಡು ಅವಕ್ಕಾಗಿರಬೇಕು. ಅದಕ್ಕಾಗಿ ಅವುಗಳ ಕರುಣೆ ಮತ್ತು ಪ್ರೀತಿಯ ಸಂಪಾದನೆಗಾಗಿ ದೇವರೆಂಬ ವಸ್ತುವನ್ನು ಸೃಷ್ಟಿಸಿಕೊಂಡಿರಬೇಕು.

ಜನಪದರಲ್ಲಿ ದೈವದ ಬಗೆಗಿನ ನಂಬಿಕೆ ಮೊದಲಿನಿಂದಲೂ ಪರಂಪರಾಗತವಾಗಿ ಸಾಗುತ್ತ ಬಂದು “ಮುನ್ನೂರು ಮುವತ್ತಮೂರುಕೋಟಿ” ದೇವತೆಗಳು ಆಗಿರುವವು. ಸರ್ವವಸ್ತುಗಳಲ್ಲಿಯೂ ಪರಮಾತ್ಮನನ್ನು ಕಾಣುವ ಪ್ರವೃತ್ತಿ ಅವರಲ್ಲಿ ಬೆಳೆದು ಬಂದಿತು. ವಿಶೇಷ ಪೂಜೆಗಳಲ್ಲಿ ಪಶುಬಲಿ, ನರಬಲಿಯನ್ನು ಕೊಡುತ್ತಿದ್ದರು. ಇಂತಹ ಕಾರ್ಯಗಳು ಜನಸಮಸ್ಯೆಯಿಂದಲೇ ನಡೆಯುತ್ತಿದ್ದವು. ಮನೆಯ ದೇವತೆಯ ಹಬ್ಬವನ್ನು ಅವರವರ ಮನೆಯವರೇ ಆಚರಿಸಿದರೂ ಗ್ರಾಮದೇವತೆಯ ಹಬ್ಬವನ್ನು ಇಡೀ ಊರಿಗೆ ಊರೇ ಸೇರಿ ಸಂಭ್ರಮದಿಂದ ಆಚರಿಸುತ್ತದೆ. ವರ್ಷದ ಎಲ್ಲಾ ಕಾಲದಲ್ಲೂ ‘ಕೆಲಸಬೊಗ್ಸೆ’ಗಳಲ್ಲೂ ಕಾಲಕಳೆಯುವುದರಿಂದ ಅವರಿಗೆ ಸುಖಸಂತೋಷ ಸಿಗುವುದು ಇಂತಹ ಸಮಯದಲ್ಲೆ.

ಪಟ್ಟಣದ ಜನರಿಗೆ ಬೇಸರವಾದರೆ ಸಿನೆಮಾ, ಹೋಟಲ್‌ಗಳುಂಟು. ಉಡುಗೆ ತೊಡುಗೆಗಳನ್ನು ದಿನವೂ ಹಾಕುತ್ತಾ ಒಂದು ವಿಧವಾದ ಬಣ್ಣದ ಬದುಕಿನಲ್ಲಿ ಸಾಗುತ್ತಾರೆ. ನಮ್ಮ ಕಡೆ ಒಂದು ಗಾದೆ ಉಂಟು. “ಹಳ್ಳೇರು ಬಲು ಒಳ್ಳೇರು, ಪ್ಯಾಟೀರು ಬಲು ತೀಟೀರು” ಎಂದು ಅಂದರೆ ನಿಜವಾದ ಹಳ್ಳಿಗರಲ್ಲಿ ಮುಕ್ತವಾತಾವರಣವುಂಟು. ಒಂದು ಹೊಸ ಬಟ್ಟೆಯನ್ನು ಹಾಕಬೇಕಾದರೆ ಇಂತಹ ಹಬ್ಬಹರಿದಿನಗಳಲ್ಲೇ ಒಂದು ಒಳ್ಳೆ ಅಡಿಗೆ ಮಾಡಿ ಉಣ್ಣಬೇಕಾದರೆ ಇಂತಹ ಹಬ್ಬಹರಿದಿನಗಳೇ ಬರಬೇಕು. ಬಿಡುವಿಲ್ಲದೇ ದುಡಿಯುವ ಹಳ್ಳಿಯ ಮುಗ್ಧರಿಗೆ ಈ ಹಬ್ಬ ಮತ್ತು ಜಾತ್ರೆಗಳೇ ಉಸಿರಿನ ತಾಣಗಳು.

ಜಾತ್ರೆ ಎಂದರೆ ಕೇವಲ ಉಂಡು ತಿಂದು ಹೊಸ ಬಟ್ಟೆಯನ್ನು ಹಾಕಿಕೊಂಡು ಕುಣಿದು ಕುಪ್ಪಳಿಸುವುದಲ್ಲ. ಅದಕ್ಕೊಂದು ರೀತಿ ನೀತಿ ನಿಯಮಗಳುಂಟು. ಒಂದೊಂದನ್ನು ನಿಯಮಬದ್ದವಾಗಿ ಶಾಸ್ತ್ರೋಕ್ತವಾಗಿ ಆಚರಿಸುತ್ತಾ ಪರಂಪರಾಗತವಾಗಿ ಸಾಗಿ ಬಂದಂತಹ ನಂಬಿಕೆ, ಸಂಪ್ರದಾಯಗಳನ್ನು ಬಿಡದೇ ಆಚರಿಸುತ್ತಾ ಭಯ ಭಕ್ತಿಯಿಂದ ಮಾಡುವಂತಹದ್ದು.

ಗ್ರಾಮದೇವತೆಗಳಾದ ದುರ್ಗಮ್ಮ, ಮಾರಮ್ಮ, ಚೌಡಮ್ಮ, ಭೂತಪ್ಪಗಳ ಜಾತ್ರೆಗಳನ್ನು ಆಚರಿಸುವಂತೆಯೇ ಪುರಾಣ ಮೂಲದ ದೇವತೆಗಳ ಜಾತ್ರೆಗಳನ್ನು ಆಚರಿಸುತ್ತಾರೆ. ನಮ್ಮ ಜನಪದವನ್ನು ದೈವರಲ್ಲಿ ನಂಬಿಕೆಯುಳ್ಳವರು. ದೇವರನ್ನು ಕೇಳದೇ ಯಾವ ಕೆಲಸಕ್ಕೂ ಕೈ ಹಾಕುವುದಿಲ್ಲ. ತಮ್ಮ ಸುಖ ದುಃಖಗಳಿಗೆ ಕಾರಣೀಭೂತನೆಂದರೆ ಈ ಭಗವಂತನೇ ಎಂದು ನಂಬುತ್ತಾರೆ. ತಮ್ಮ ಬೆಳೆಗಳು ಚೆನ್ನಾಗಿರಬೇಕಾದರೆ ತಮ್ಮ ಮಕ್ಕಳು ಸುಖವಾಗಿರಬೇಕಾದರೆ, ತಾವು ಕೈಗೊಳ್ಳುವ ಕೆಲಸಗಳು ನೆರವೇರಬೇಕಾದರೆ ಆ ಭಗವಂತನ ಪ್ರೇರಣೆ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂದು ಘಾಡವಾಗಿ ನಂಬಿರುವವರು. “ಹಿಂದಾಗಿದ್ದ ಹಿರಿಯಾರು ಕೇಳು ಮುಂದೆ ಬರೋದ ದೇವರ ಕೇಳು” ಎಂದು ಅವರು ಹೋಗುವ ಕಡೆಯಲ್ಲೆಲ್ಲ ದೇವರ ಸ್ಮರಣೆಯನ್ನು ಮಾಡೇಮಾಡುತ್ತಾರೆ.

ಒಟ್ಟಿನಲ್ಲಿ ಹಬ್ಬಗಳು ಗ್ರಾಮೀಣ ಜೀವನದ ಸಾಂಸ್ಕೃತಿಕ ಪ್ರೇರಣೆಗಳೆಂದೂ ಜನಪದರ ರಸಿಕತೆಗೂ ಕಲಾಭಿಜ್ಞತೆಗೂ ಹಿಡಿದ ಕನ್ನಡಿಗಳೆಂದು ಹೇಳಬಹುದು. ವರ್ಷಕ್ಕೊಮ್ಮೆ ಬರುವ ಈ ಹಬ್ಬಗಳು ಜೀವನದ ರಸನಿಮಿಷಗಳು. ಬಾಳಿಗೆ ತಂಪೆರೆಯುವ ಅಮೃತದ ಬಿಂದುಗಳು.

ಅಂತೆಯೇ ಹಬ್ಬಕ್ಕೂ ಜಾತ್ರೆಗೂ ನಿಕಟ ಸಂಬಂಧವಿದೆ. ಯಾತ್ರಾ ಎಂಬ ಪದದ ತದ್ಭವ ಜಾತ್ರೆ, ಇತರ ಅರ್ಥಗಳ ಜೊತೆಗೆ ತೀರ್ಥಕ್ಷೇತ್ರ ಪ್ರವಾಸ, ಯಾವುದಾದರೊಂದು ದೇವರ ಹೆಸರಿನಲ್ಲಿ ಆಗಾಗ್ಗೆ ನಡೆಯುವ ಬೇರೆ ಬೇರೆ ಕಡೆಯಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುವ ಹಬ್ಬ, ತೇರು, ಮೆರವಣಿಗೆ ಎಂಬ ಅರ್ಥಗಳನ್ನು ಆ ಪದ ಪಡೆದಿದೆ. ಜಾತ್ರೆ ನಡೆಯುವಾಗಲೆಲ್ಲ ಹಬ್ಬವಿರುತ್ತದೆ. ಹಬ್ಬನಡೆಯುವಾಗ ಜಾತ್ರೆ ಇರಬೇಕೆಂದಿಲ್ಲ. ಗೌರಿ ಗಣೇಶರ ಹಬ್ಬದಲ್ಲಿ ಜಾತ್ರೆ ನಡೆಯುವುದಿಲ್ಲ. ಕೆಲವೊಮ್ಮೆ ಹಬ್ಬವಿಲ್ಲದೆಯೂ ಜಾತ್ರೆ ನಡೆಯುವುದುಂಟು.

ಒಟ್ಟಿನಲ್ಲಿ ಹಬ್ಬಗಳು ದುಷ್ಟಶಕ್ತಿ ನಿವಾರಣವಸದಲ್ಲಿ ಹುಟ್ಟಿಕೊಂಡು ಕಾಲಕ್ರಮೇಣ ಬೇರೆ ಬೇರೆ ಉದ್ದೇಶಗಳು ಸೇರಿಕೊಂಡು ಅವುಗಳನ್ನು ರಾಷ್ಟ್ರೀಯ, ಪ್ರಾದೇಶಿಕ, ಹಾಗೂ ಗ್ರಾಮೀಣ ಹಬ್ಬಗಳ ಗುಂಪಿನಲ್ಲಿ ಬರುವ ‘ಮೈಲಾರ ಲಿಂಗ ಜಾತ್ರೆಯ’ ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿದೆ.

ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಈ ‘ಮೈಲಾರವು’ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತುಂಗಭದ್ರಾ ದಡದ ಮೇಲೆ ಇದೆ. ಇಲ್ಲಿ ನದಿಯ ಪೂರ್ವ ಪಶ್ಚಿಮವಾ ಹಿನಿಯಾಗಿ ಹರಿದಿದೆ. ಇಲ್ಲಿ ಒಂದೆಡೆ ತುಂಗಭದ್ರೆಯ ವಿಶಾಲ ಜಲರಾಶಿ, ಮತ್ತೊಂದೆಡೆ ಘನವಾಗಿ ಬೆಳೆದು ನಿಂತು ಆದರದಿಂದ ಬರಮಾಡಿಕೊಂಡು ಗೌರವದಿಂದ ಬೀಳ್ಕೊಡುತ್ತಿರುವಂತೆ ಕೈ ಬೀಸುತ್ತಾ ವಿರಾಜಿಸುವ ಮಾವಿನತೋಪು, ಪೂರ್ವ ಪಶ್ಚಿಮವಾಗಿ ಹರಿದಿರುವ ನದಿಯಲ್ಲಿ ಸ್ನಾನ ಮಾಡಿದರೆ ಪಾಪವೆಲ್ಲ ಕಳೆದು ಪುನೀತರಾಗುತ್ತಾರೆಂಬ ಪ್ರತೀತಿಯೂ ಇದೆ.

‘ಮೈಲಾರ’ ಎಂಬ ಹೆಸರು ಹೇಗೆ ಬಂದಿತು ಎಂದು ಹಲವಾರು ವಿದ್ವಾಂಸರು ಚರ್ಚಿಸಿದ್ದಾರೆ. ‘ಮೈಲಾರ’ ಎಂಬ ಹೆಸರೇ ಪ್ರಾಚೀನವಾದುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬ್ರಹ್ಮಾಂಡ ಪುರಾಣದ ೧೮ ನೆಯ ಅಧ್ಯಾಯನದಲ್ಲಿ ಈ ಕ್ಷೇತ್ರದ ವರ್ಣನೆ ಇದೆ. ಭಾಗಶಃ ಇಂದು ಭಾರತಾದ್ಯಂತಹ ಏಳುಕೋಟಿ ಭಕ್ತರಿಗೆ ಮೈಲಾರ ಲಿಂಗ ಆರಾಧ್ಯ ದೈವನೆಂದರೂ ಅತಿಶಯೋಕ್ತಿಯಾಗಲಾರದು. ಕಾರಣ ಏಳುಕೋಟಿ ಮಹಾ ಮಂತ್ರಗಳನ್ನು ಜಪಿಸಿ ಬ್ರಹ್ಮನಿಂದ ವರವನ್ನು ಪಡೆದು ಲೋಕ ಕಂಟಕರಾದ ಅಸುರರನ್ನು ತನ್ನ ಏಳು ಕೋಟಿ ದೇವಗಣದಿಂದ ಸಂಹರಿಸಿ ಶಿಷ್ಯರಕ್ಷಕ ದುಷ್ಟ ಶಿಕ್ಷಣನಾದ ಪರಮೇಶ್ವರನಿಗೆ ಏಳುಕೋಟಿ ಎಂಬ ಹೆಸರು ಬರಲು ಕಾರಣವಾಯಿತು.

ಈ ಮೈಲಾರಲಿಂಗ ಸ್ವಾಮಿಯ ಕಲ್ಯಾಣಮಂದಿರವನ್ನು ಹವನದ ಮನೆಯಂತಲೂ ಹೋಮದ ಮನೆಯಂತಲೂ ಕರೆಯುತ್ತಾರೆ. ಈ ಮಂದಿರವನ್ನು ಹಾವೇರಿ ತಾಲೂಕಿನ ಕೊರಡೂರು ಗ್ರಾಮದ ಓರ್ವ ಭಕ್ತಳು ೧೯೦೧ ರಲ್ಲಿ ಕಟ್ಟಿಸಿದಳು. ತೇಗ, ಮತ್ತಿಮರ ಮುಟ್ಯುಗಳಿಂದ ಸುಂದರ ಕೆತ್ತನೆಯಿಂದ ನಿರ್ಮಿಸಲಾಗಿದೆ.

ಪ್ರತಿವರ್ಷ ಮಾಘ ಶುದ್ಧದ ಪೌರ್ಣಿಮೆಯ ದಿನ ನಡೆಯುವ ಜಾತ್ರೆಗೆ ನಾನಾ ಕಡೆಯಿಂದಾಗಿ ಭಕ್ತಾದಿಗಳ ಸಮೂಹವೇ ಬರುತ್ತದೆ. ಎತ್ತಿನ ಗಾಡಿಯಲ್ಲಿ, ಕಾಲ್ನಡೆಗೆಯಲ್ಲಿ ಬರುವರು. ಪೂರ್ವ ದಿಕ್ಕಿನಲ್ಲಿ ಬೆಟ್ಟಗುಡ್ಡಗಳ ಸಾಲು ಸುತ್ತಲೂ ನದಿ ಆದಕ್ಕೆಂದೇ “ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು” ಎಂಬ ನಾಣ್ಣುಡಿ ಪ್ರಚಲಿತವಿದೆ. ಆದರೆ ಈಗ ರಸ್ತೆ ಹಾಗು ಸೇತುವೆಗಳ ನಿರ್ಮಾಣದಿಂದಾಗಿ ಸುತ್ತುವ ಅವಶ್ಯಕತೆ ಇಲ್ಲದಂತಾಗಿದೆ.

ಜಾತ್ರೆ : ಶ್ರೀ ಕ್ಷೇತ್ರದ ಈ ಮೃಣ್ಮಯ ಮೂರ್ತಿಯು ಮಾರ್ಗಶಿರ ಶುದ್ಧ ಚಂಪಾ ಷಷ್ಟಿಯ ದಿನ ಇದನ್ನೆ ಶಿವನ ಜನ್ಮದಿನವೆಂತಲೂ ಭಂಡಾರ ಶ್ರೇಷ್ಠಿಯೆಂತಲೂ ಕರೆಯುವರು. ಈ ಸ್ವಾಮಿಯ ಪೂಜೆ ಪುನಸ್ಕಾರಗಳು ಕಪಿಲ ವಂಶಸ್ಥ ಮನೆತನದವರಿಂದ ನಡೆಯಲ್ಪಡುವವು. ಈ ಮಾರ್ಗಶಿರ ಚಂಪಾ ಷಷ್ಠಿಯ ದಿನದಿಂದ ಕಪಿಲವಂಶದ ಹಿರಿಯ ದಂಪತಿಗಳಿಂದ ಸಹಸ್ರನಾಮದೊಡನೆ ಭಂಡಾರ ಪೂಜೆ ಪ್ರಾರಂಭವಾಗುತ್ತದೆ. ಭಕ್ತರು ಇದನ್ನೇ ಕಡೆಯ ಕಾರ್ತಿಕವೆಂದು ಭಾವಿಸುವರು.

ಶ್ರೀ ಸ್ವಾಮಿಯ ಉತ್ಸವದೊಡನೆ ದೇವಸ್ಥಾನದ ಆವರಣದಲ್ಲಿರುವ ಸಿಂಹಾಸನಕ್ಕೆ ಬರುವನು. ಆ ಸಿಂಹಾಸನದಲ್ಲಿ ಕ್ಷಣಕಾಲ ನಿಂತು ಭಂಡಾರವನ್ನು ಪೂಜೆ ಮಾಡಿ ಸ್ವಾಮಿಯ ಸಮ್ಮುಖದಲ್ಲಿ ಉತ್ಸವದಲ್ಲಿ ಪಾಲ್ಗೊಂಡ ಅನೇಕ ಭಕ್ತಾದಿಗಳಿಗೆ “ಇಲ್ಲಿಂದ ಮುಂದೆ ನಡೆಯುವ ಅಸುರರ ಸಂಹಾರಕ್ಕೆ ಸಿದ್ಧಗೊಳ್ಳಿ” ಎಂದು ಅಪ್ಪಣೆ ಮಾಡಿ ಭಕ್ತರ ತಲೆಯ ಮೇಲೆ ಭಂಡಾರವನ್ನು, ಉಗ್ಗುವರು. ಈ ಬಂದು ಸಂಪ್ರದಾಯದ ಹಿನ್ನೆಲೆ ಈ ರೀತಿ ಇರಬಹುದು.

ಶ್ರೀ ಸ್ವಾಮಿಯು ಅಸುರರ ಸಂಹಾರಕ್ಕೆ ಸಿದ್ದರಾಗಿರಿ ಎಂದು ಅಪ್ಪಣೆ ಮಾಡುವುದು ಅಲ್ಲಿ ನೆರೆದಿರುವ ಭಕ್ತರು ಮತ್ತು ಗೊರವರಿಗೆ, ಇಲ್ಲಿಂದ ಮುಂದೆ ರಥಸಪ್ತಮಿಯಿಂದ ಮಾಘ ಶುದ್ಧ ಹನ್ನೊಂದನೆಯ ದಿನಕ್ಕೆ ರಾಕ್ಷಸರ ಸಂಹಾರವಾಗುತ್ತದೆ. ಆ 11ನೆಯ ದಿನವನ್ನೆ “ಕಡಿಬಿನ ಕಾಳಗ” ವೆಂತಲೂ ಕರೆಯುವರು. ಪಾಲಿಕೆ ಉತ್ಸವದೊಡನೆ ಶ್ರೀ ಸ್ವಾಮಿಯು ಮಲ್ಲಾಸುರರ ಸಂಹಾರಕ್ಕಾಗಿ ಶ್ರೀಕ್ಷೇತ್ರದಿಂದ ಸುಮಾರು ನಾಲ್ಕು ಪರ್ಲಾಂಗ ದೂರವಿರುವ ಡೆಂಕನ ಮರಡಿಗೆ ಹೋಗಿ ಶಿಬಿರ ಹೂಡುತ್ತಾರೆ.

ಡೆಂಕನ ಮರಡಿ : ಇಲ್ಲಿ ಐದು ಎತ್ತರದ ಗುಡ್ಡದಂತಿರುವ ದೊಡ್ಡ ದಿನ್ನೆಗಳುಂಟು. ಈ ದಿನ್ನೆಗಳನ್ನೇ ಭಕ್ತಾದಿಗಳು ಐದು ಜನ ರಾಕ್ಷಸರೆಂದು ಭಾವಿಸುವರು. ಈ ಐದು ಜನ ರಾಕ್ಷಸರಲ್ಲಿ ಈ ಡೆಂಕನು ಎಂಬುವವನೂ ಒಬ್ಬನು. ಒಂದಾನೊಂದು ಕಾಲದಲ್ಲಿ ಶ್ರೀ ಸ್ವಾಮಿಯಿಂದ ಸಂಹಾರಿತನಾದ್ದರಿಂದ ಈ ಸ್ಥಳಕ್ಕೆ ಡೆಂಕನ ಮರಡಿ ಎಂದು ಕರೆಯುವ ಪ್ರತೀತಿ ಇದೆ. ಇದನ್ನು ಅಪ್ಪನ ಮರಡಿ ಎಂತಲೂ ಕರೆಯುವರು.

ಮಣಿಮಲ್ಲದೈತ್ಯರು ಸಾಯುಜ್ಯ ಪಡೆದಿದ್ದು ಪರಮ ಪಾವನವಾದ ಈ ಮರಡಿಯಲ್ಲಿ, ಸುರಾಸುರರ ಸಮರದಲ್ಲಿ ಇದೇ ಸ್ಥಳದಲ್ಲಿ ಮಾರ್ತಾಂಡ ಭೈರವನಾದ ಪರಮೇಶ್ವರನಿಗೂ ಮಣಿಮಲ್ಲ ರಾಕ್ಷಸರಿಗೂ ಖಡಾ-ಖಾಡಿ ಯುದ್ಧವಾದ ನೆಲವೇ ಈ ಡೆಂಕನ ಮರಡಿ. ಮಾರ್ಗಶಿರ ಶುದ್ಧ ಸಪ್ತಮಿಯಿಂದ ಏಕಪ್ರಕಾರವಾಗಿ ಹಗಲು ರಾತ್ರಿಗಳ ಗಣನೆಗಳಿಲ್ಲದೇ ನಡೆದ ಘನ ಘೋರ ಸಂಗ್ರಾಮದ ರಣ ಭೂಮಿಯೇ ಈ ಡೆಂಕನ ಮರಡಿ.

ಮಾರ್ತಾಂಡ ಭೈರವನ ಚದುರಂಗ ಬಲದಿಂದ ನಾಶವಾದ ದೈತ್ಯರ ಹೆಣಗಳು ರಾಶಿರಾಶಿ ಬಿದ್ದುದ್ದನ್ನು ಕಂಡು ವೀರಭದ್ರನು ತನ್ನ ಬಳಗವಾದ ಶಾಖಿಣಿ, ಢಾಖಿಣಿಗಳನ್ನು ಕರೆಯುವನು. ಅವು ಕೋಟ್ಯಾನು ಕೋಟಿ ಹೆಣಗಳನ್ನು ತಿಂದು ತೇಗಿ ಬಿಟ್ಟ ಎಲಬು ಹಂದರದ ರಾಶಿಯೇ ಇಂದಿನ ಡೆಂಕನ ಮರಡಿ.

ಪಲ್ಲಕ್ಕಿಯ ಉತ್ಸವದೊಡನೆ ಸ್ವಾಮಿಯು ತನ್ನ ಸ್ವಕ್ಷೇತ್ರವನ್ನು ಬಿಟ್ಟಾಗ ದೇವಸ್ಥಾನದಲ್ಲಿ ಯಾವ ರೀತಿಯ ಗಂಟೆಯನಿನಾದವಾಗಲಿ ಭಜಂತ್ರಿ, ವಾಲಗ, ನಗಾರಿ, ನಮತ್ತು, ಕಾಳಗಗಳಾಗಲಿ ನಡೆಯದೆ ಸಂಪೂರ್ಣ ನಿಶ್ಶಬ್ಧವಾಗಿರುತ್ತದೆ. ಕಾರಣ ಶ್ರೀ ಕ್ಷೇತ್ರದಲ್ಲಿ ಸ್ವಾಮಿಯು ಇಲ್ಲವೆಂತಲೂ ಭಾವಿಸುವರು. ಸ್ವಾಮಿಯು ಅಸುರರ ಸಂಹಾರಕ್ಕೆ ಹೊರಟಾಗ ಕಡಿಬಿನ ಕಾಳಗದೊಂದಿಗೆ ಅಶ್ವರೂಡ ಸೇವಕರೊಂದಿಗೆ ಆರ್ಭಟದಿಂದ ಅಟ್ಟಹಾಸದಿಂದ ಅನೇಕ ಕಾಳಾಳುಗಳೊಂದಿಗೆ, ದೀವಟಿಗೆ ಸೇವಕರೊಂದಿಗೆ, ಗೊರವಯ್ಯಾಗಳೊಂದಿಗೆ ಚಾಮರವದರೊಂದಿಗೆ, ನಗಾರಿಗಾರರೊಂದಿಗೆ, ಕಾವಲುಗಾರರೊಂದಿಗೆ ಅಸುರರ ಸಂಹಾರಕ್ಕೆ ಧಾವಿಸುತ್ತಾನೆ. ಇಲ್ಲಿ ನಿಜವಾದ ಅಶ್ವಗಳು ಇರದಿದ್ದರೂ ಸಾಂಕೇತಿಕತೆ ಎಂಬಂತೆ ಕೆಲವರು ಭಕ್ತರು ಚಾಟಿಯಿಂದ ತಮ್ಮಕಾಲಿಗೆ ಹೊಡೆದುಕೊಳ್ಳುತ್ತಾ ಹೋಗುತ್ತಾರೆ. ಕೆಲವರು ಭಕ್ತರು ಕೈಯಲ್ಲಿ ಪಂಜನ್ನು ಹಿಡಿದು ಕೊಂಡು ಸ್ವಾಮಿಯೊಡನೆ ಹೋಗುವರು. ಚಾಮರದವರು ಚಾಮರವನ್ನು ಬೀಸುತ್ತಾ ಸಾಗುವರು. ನಗಾರಿಗಾರರು ನಗಾರಿಗಳನ್ನು ಭಾರಿಸುತ್ತಾ ಸಾಗುವರು. ಕೆಲವರು ಗೊರವಯ್ಯಗಳು ಡಮರುಗಳನ್ನು ಭಾರಿಸುತ್ತಾ ನಡೆಯುವರು. ಕಾಲಾಳುಗಳು, ಕಾವಲುಗಾರರು ಹಿಂದೆ ಮುಂದೆ ಜೋರಾಗಿ ಹುಯ್ಯಲೆಬ್ಬಿಸುತ್ತಾ ಯುದ್ಧಕ್ಕೆ ಧಾವಿಸುವರು. ಈ ರೀತಿ ಆರ್ಭಟದೊಂದಿಗೆ ಯುದ್ಧ ಕ್ಷೇತ್ರವಾದ ಡೆಂಕನ ಮರಡಿಯಲ್ಲಿ ಸ್ವಾಮಿಯು 11 ದಿನ ಅಲ್ಲಿಯೋ ನೆಲೆಸುತ್ತಾನೆ. ಈ ರೀತಿ ಸಿದ್ದನಾದ ಸ್ವಾಮಿಯು 11 ದಿವಸ ಉಪವಾಸವಿರುವನು. ಸ್ವಾಮಿಯ ಶಿಬಿರದಲ್ಲಿ ಶಿವಧನಸ್ಸು ಅಲ್ಲೆ ಇರುವುದು ಪ್ರತಿ ನಿತ್ಯ ಮಂಗಳಾರತಿ ನಡೆಯುತ್ತದೆ.

ಹೀಗೆ ಸಾಗುತ್ತಕ್ಕಂತಹ ಯುದ್ಧದ 11ನೆಯ ಕೊನೆಯ ದಿನ ಬೆಳಗಿನ ಜಾವ 4 ಗಂಟೆಗೆ ಮಲ್ಲಾಸುರನ ಸಂಹಾರ ಜರುಗುತ್ತದೆ. ಸುರ್ಯೋದಯದ ಸಮಯಕ್ಕೆ ಸ್ವಾಮಿಯ ಪತ್ನಿ ಗಂಗಾ ಮಾಳಮ್ಮನ ಉತ್ಸವವನ್ನು ಲಕ್ಷಾಂತರ ಭಕ್ತಾದಿಗಳ ನಿಶ್ಶಬ್ದ ಮೆರವಣಿಗೆಯು ಡೆಂಕನ ಮರಡಿಯ ಶಿಬಿರದ ಹತ್ತಿರವಿರುವ ಅಮ್ಮನ ಮರಡಿಗೆ ಬರುತ್ತದೆ.

ಅಮ್ಮನ ಮರಡಿಯು ಡೆಂಕನ ಮರಡಿಯಂತೆ ಒಂದು ಸ್ಥಳ. ಈ ಅಮ್ಮನ ಮರಡಿ ಶ್ರೀ ಸ್ವಾಮಿ ಕ್ಷೇತ್ರ ಮತ್ತು ಡೆಂಕನ ಮರಡಿಯ ನಡುವೆ ಬರುತ್ತದೆ. ಅಮ್ಮನನ್ನು ಅಮ್ಮನ ಮರಡಿಯಲ್ಲಿ ಬಿಟ್ಟು ಅವಳೊಂದಿಗೆ ಬಂದಂತಹ ಭಕ್ತಾದಿಗಳು ಡೆಂಕನ ಮರಡಿಯ ಶಿಬಿರಕ್ಕೆ ಬರುತ್ತಾರೆ. ಅಲ್ಲಿ ನಗಾರಿ, ನವತ್ತು, ಕಹಳೆ, ಕೊಂಬು, ನಪೂರಿ, ಡಮರು, ಗಂಟೆ, ಹಲವಾರು ರಣವಾದ್ಯಗಳು ಮೊಳಗಿಸುತ್ತಾ ಸ್ವಾಮಿಯು ಇಡೀ ಶಿಬಿರವನ್ನು ಪ್ರದಕ್ಷಣೆ ಹಾಕಿ ಶಿಬಿರದ ಕಟ್ಟೆಯ ಮೇಲೆ ಕುಳಿತು ಕೊಳ್ಳುವನು. ಇಲ್ಲಿಗೆ ಮಲ್ಲಾಸುರ ರಾಕ್ಷಸನ ಸಂಹಾರವಾಯಿತೆಂದು ಭಕ್ತಾದಿಗಳೆಲ್ಲರೂ ಭಾವಿಸುವರು. ಕೊನೆಯ ದಿನ ಸುರ್ಯೋದಯಕ್ಕೆ ಮುಂಚೆ ದೈತ್ಯರ ಶಿಬಿರಗಳನ್ನು ಕತ್ತರಿಸಿದ ಕುರುಹು ಪ್ರಕಟಿಸಿದ ತಕ್ಷಣ, ನೆರೆದಿದ್ದ ಭಕ್ತ ವೃಂದ ತಡೆದ ಪ್ರವಾಹ ಒಮ್ಮೆಲೇ ಅಣೆಕಟ್ಟು ವಡೆದಂತೆ ಭೋರ್ಗರೆದು ಉತ್ಸಾಹದ ಚಿಲುಮೆ ಉಕ್ಕಿ ಕೇಕೆ ಹಾಕುವರು.

ತದನಂತರ ಪ್ರಪಂಚಕ್ಕೆ ವೀರಾದಿವೀರ ಮಾರ್ತಾಂಡ ಮೈಲಾರ ಭೈರವಗೆದ್ದನೆಂದು ಶಿವಧನಸ್ಸಿನ ಮೇಲೆ ಶಿವರೂಪಿ ಗೊರವನೊಬ್ಬ ನಿಂತು ಭವಿಷ್ಯಯೊಂದನ್ನು ನುಡಿಯುವನು. ಇದನ್ನು ಕಾರ್ಣೀಕ ಎಂದು ಕರೆಯುತ್ತಾರೆ.

ಕಾರ್ಣೀಕ : ಇದು ಮುಖ್ಯವಾದ ಉತ್ಸವ ಕಾರ್ಣೀಕೋತ್ಸವ. ಇದು ನಡೆಯುವ ಸ್ಥಳವೇ ಕಾರ್ಣೀಕದ ಮೈದಾನ. ಅಮ್ಮನ ಮತ್ತು ಅಪ್ಪನ ಮರಡಿಗಳ ಮಧ್ಯದಲ್ಲಿರುವುದೇ ಕಾರ್ಣೀಕದ ಮೈದಾನ. ಇದು ಒಬ್ಬ ರೈತನಿಗೆ ಸೇರಿದೆ. ಉತ್ಸವದ ಸಮಯದಲ್ಲಿ ಇಲ್ಲಿ ಯಾವ ಬೆಳೆಯೂ ಇರುವುದಿಲ್ಲ. ಒಂದುವೇಳೆ ಇದ್ದರೂ ಅದನ್ನು ನಿರ್ಮೂಲಗೊಳಿಸಿ ಉತ್ಸವಕ್ಕೆ ಆಣೆಮಾಡಿ ಕೊಡುತ್ತಾನೆ.

ಈ ಮೈದಾನದಲ್ಲಿ ಪ್ರತಿವರ್ಷ ಜರುಗುವ ಕಾರ್ಣೀಕೊತ್ಸವದ ದಿನ ಮಾತ್ರ ಸ್ವಾಮಿಯ ಭವಿಷ್ಯ ವಾಣಿಯನ್ನು ಕೇಳಲು ಲಕ್ಷಾಂತರ ಭಕ್ತಾದಿಗಳು ಸೇರುತ್ತಾರೆ. ಇಲ್ಲಿ ವಿವಿಧ ಭಾಷೆ, ಉಡುಪು, ಸಂಸ್ಕೃತಿಯ ಜನರನ್ನು ಕಾಣಬಹುದು. ಇದು ಆಯಸ್ಕಾಂತದಂತೆ ಆಕರ್ಷಣೀಯ ಸ್ಥಳ. ಮೈಲಾರಲಿಂಗ ಸ್ವಾಮಿಯ ಉತ್ಸವ ಮೈದಾನಕ್ಕೆ ಬರುತ್ತದೆ. ನಾಲ್ಕು ಕಡೆಯಿಂದ ಸೇವೆ ಮಾಡುವ ಭಕ್ತಸಮೂಹವು ಹರಿದು ಬರುತ್ತದೆ. ಉತ್ಸವದ ಮುಂಚೂಣಿಯಲ್ಲಿ ಕಾರ್ತೀಕದ ಗೊರವಯ್ಯನು ಶಿವ ಧನಸ್ಸನ್ನು ಹೆಗಲಿಗೇರಿಸಿಕೊಂಡು ಬರುವನು ಅವನ ಹಿಂದೆ ಪಂಚವೀರರು ಸ್ವಾಮಿಯ ಪವಾಡಗಳನ್ನು ಹೊಗಳುತ್ತಾ ಬರುತ್ತಾರೆ. ನಂತರ ಮಂಗಳವಾದ್ಯಗಳು ಭಜನೆ ತಂಡ, ಇವುಗಳ ಮಧ್ಯ ಸುಮಂಗಲೆಯರ ಚಾಮರ ಸೇವೆ ಇತ್ಯಾದಿಗಳು ಬರುತ್ತವೆ. ಉತ್ಸವದ ಎಡಬಲಭಾಗಗಳಲ್ಲಿ ಪಾನಕದ ಗಾಡಿಗಳು ಭಕ್ತರಿಗೆ ದಾಹವನ್ನು ಅಡಗಿಸುತ್ತ ಸಾಲುಗಟ್ಟಿ ಬರುತ್ತವೆ. ಕಿವಿಗವಡುಗಚ್ಚುವಂತೆ ಕೇಳಿ ಬರುವ ಹಷೋದ್ಗಾರಗಳು ಗೊರವಯ್ಯಗಳ ಆವೇಶ ಆರ್ಭಟ, ಹಾರಾಟ, ನಗಾರಿ, ನವತ್ತುಗಳ ಸಿಂಹನಾದ, ಹಲಗೆ ಡೊಳ್ಳುಗಳ ಬಡಿತ, ಕಹಳೆಗಳ ಮೊಳೆತ, ಕುದುರೆ, ನವಿಲುಗಳ ಕುಣಿತ, ದೇವರ ಮೂರ್ತಿಯು ನಿರ್ಧಿಷ್ಟ ಸ್ಥಳದಲ್ಲಿ ಅಲಂಕರಿಸಿದ ನಂತರ ಶಿವಧನಸ್ಸು ಕಾಣಿಸಿಕೊಳ್ಳುತ್ತದೆ. ಅದನ್ನು ಕೆಲ ಭಕ್ತರು ಹಿಡಿದಿರುತ್ತಾರೆ. ಸೇರಿದ ಯಾತ್ರಾರ್ಥಿಗಳು “ಏಳು ಕೋಟಿ ಏಳು ಕೋಟಿ” ಎಂದು ಜಯಕಾರ ಹಾಕುವ ದೃಷ್ಯ ಅತ್ಯಂತ ರೋಮಾಂಚನಕಾರಿಯಾದುದು. ನಂತರ ಕಾರ್ಣೀಕದ ಗೊರವಯ್ಯನು ಧರ್ಮಕರ್ತರ ಆಶೀರ್ವಾದ ಪಡೆದು ಆವೇಶದುಂಬಿ ಧನಸ್ಸನ್ನು ಏರಿ ದಶದಿಕ್ಕುಗಳನ್ನು ವೀಕ್ಷಿಸಿ ‘ಸದ್ದಲೇ’ ಎಂದ ತಕ್ಷಣ ಮೇಲೆ ವಿವರಿಸಿದ ಎಲ್ಲಾ ಶಬ್ದಗಳು, ಆರ್ಭಟಗಳು ಸ್ಥಬ್ಧಗೊಳ್ಳುವವು. ಮಂತ್ರಮುಗ್ಧರಂತೆ ಇಡೀ ಜನ ಕೋಟಿ ಉಸಿರನ್ನೂ ಸಹ ಹೆಚ್ಚು ಆಡದೆ ಅತ್ಯಂತ ಕುತೂಹಲ ಕಾತುರ, ಉದ್ವೇಗದಿಂದ ಜನ ಸಮೂಹ ದೇವ ವಾಣಿಗಾಗಿ ಕಿವಿಗಳನ್ನು ಚುರುಕುಗೊಳಿಸುವರು.

ಎಲ್ಲೊಲ್ಲೂ ನೀರವತೆ. ಸೂಜಿಬಿದ್ದರೂ ಶಬ್ದ ಬರುವಷ್ಟು ನಿಶ್ಶಬ್ದ, ಬಿಲ್ಲೇರಿದ ಕಾರ್ಣೀಕದ ಗೊರವಯ್ಯನ ಕಡೆ ಎಲ್ಲರ ಕಣ್ಣು, ಕಿವಿ ಕೇಂದ್ರಿಕೃತವಾಗಿದೆ. ವಾರ್ಷಿಕದ ಆಗುಹೋಗುಗಳನ್ನು ಕುರಿತಾದ ಒಂದು ವಾಣಿ ಆತನ ಬಾಯಿಯಿಂದ ಹೊರ ಬಿದ್ದದ್ದೇ ತಡ ಆತ ಕೆಳಗೆ ಬೀಳುತ್ತಾನೆ. ಸುತ್ತಲೂ ನಿಂತ ಭಕ್ತ ಸಮೂಹ ಆತನನ್ನು ನೆಲಕ್ಕೆ ಬೀಳದಂತೆ ಹಿಡಿಯುತ್ತಾರೆ. ಈ ಕರ್ಣೀಕಗಳನ್ನು ಒಳಹೊಕ್ಕು ನೋಡಿದಾಗ ಸತ್ಯದ ಅಂಶ ಹೆಚ್ಚಾಗಿರುವುದು ಕಂಡು ಬರುತ್ತದೆ. “ಮರ್ತ್ಯಕ್ಕೆ ಮಬ್ಬುಗವಿಯಿತಲೇ ಪರಾಕು” ಎಂದು ಆಗಿದೆ. ಇದನ್ನು ಬಿಡಿಸಿ ನೋಡಿದರೆ ಈಗಿನ ಪರಿಸ್ಥಿತಿಯಲ್ಲಿ ಆ ಮಾತು ಹೆಚ್ಚು ಅರ್ಥಪೂರ್ಣವಾಗಿದೆ ಎನಿಸುತ್ತದೆ.

ಕಾರ್ಣೀಕದ ನಂತರ ಶ್ರೀ ಸ್ವಾಮಿಯ ದಿಗ್ವಿಜಯದ ಹರ್ಷದಿಂದ ಬರುವಾಗ ದಾರಿಯಲ್ಲಿ ಪತ್ನಿಗಂಗಮಾಳಮ್ಮ ಹರ್ಷದಿಂದ ಎದುರುಗೊಳ್ಳುತ್ತಾಳೆ. ಈ ಯುದ್ಧದ ಪರಿಯನ್ನು ಭಕ್ತರು, ಅದರಲ್ಲಿಯೂ ಗೊರವರು ಕಬ್ಬಿಣದ ಸರಳನ್ನು ಕಾಲಿನಲ್ಲಿ ತೂರಿಸಿ ಎಳೆಯುವುದು. ಬಗಣಿಗೂಟವನ್ನು ಹೊಡೆಯುವುದು. ಮುಳ್ಳಿನ ಮಣಿಗಳನ್ನು ತೋರಿಸಿ ಎಳೆಯುವುದು ಮುಂತಾದ ಪವಾಡಗಳು ನಡೆಯುತ್ತವೆ. ಈ ಉತ್ಸವವು ಮೂಲದೇವಸ್ಥಾನದ ಹತ್ತಿರವಿರುವ ಹೆಗ್ಗಪ್ಪನ ಮಂಡಿಗೆ ಬಂದು ಅಲ್ಲಿ ಮಧ್ಯಾಹ್ನ ಮೂರು ಗಂಟೆಯವರೆಗೆ ಎದುರು ಕಟ್ಟೆಯ ಮೇಲೆ ತಂಗುವುದು. ಅಲ್ಲಿ ಭಾಗವಹಿಸಿದ ಭಕ್ತರ ಅನೇಕ ಸೇವಾ ಕಾರ್ಯಗಳು ಸಾಂಗವಾಗಿ ನೆರವೇರುತ್ತವೆ. ಸುಮಾರು ನಾಲ್ಕು ಗಂಟೆಗೆ ಉತ್ಸವವು ಅಲ್ಲಿಂದ ದೇವಸ್ಥಾನದ ಮಹಾದ್ವಾರದ ಒಳಗೆ ಬಂದು ಪ್ರದಕ್ಷಣೆರೂಡನಾಗಿ ಮೂಲದೇವಸ್ಥಾನದ ಎಡಪಕ್ಕದಲ್ಲಿರುವ ಪತ್ನಿ ಗಂಗಾಮಾಳಮ್ಮನ ದೇವಸ್ಥಾನದ ಮುಂಭಾಗಲಿಗೆ ಬಂದು ನಿಲ್ಲುವುದು. ಅಮ್ಮನ ದೇವಸ್ಥಾನದ ಎದುರುಗಡೆ ಇರುವ ದೀಪಸ್ಥಂಭದ ಮುಂದೆ ಕಟ್ಟಿದ ಕಬ್ಬಿಣದ ಸರಪಳಿಯನ್ನು ಬಾಬುದಾರರಾದ (ಹಕ್ಕುದಾರರು) ಗೊರವಯ್ಯರು ಹರಿದು ಚೂರು ಚೂರು ಮಾಡುವರು. ನಂತರ ದೇವಸ್ಥಾನದ ಗರ್ಭಗುಡಿಗೆ ಉತ್ಸವ ಸಾಗಿಬರುವುದು. ಅಲ್ಲಿ ಅನೇಕ ಮನ್ವಾದಿಗಳಲ್ಲಿ ಪೂಜೆಗಳು ನಡೆಯುವವು.

ಪೂಜೆ : ವರ್ಷದ 12 ತಿಂಗಳೂ ದಿನ ನಿತ್ಯವೂ ಮೈಲಾರಲಿಂಗ ಸ್ವಾಮಿಯ ಪೂಜೆಯು ವಿವಿಧ ರೀತಿಯಲ್ಲಿ ನಡೆಯುತ್ತವೆ. ಪ್ರತಿ ತಿಂಗಳ ಹುಣ್ಣಿಮೆಯ ದಿನಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಭಕ್ತಾದಿಗಳು ತಿಂಗಳದ ಪ್ರತಿ ಭಾನುವಾರ ಅವರವರ ಹರಕೆಯಂತೆ ಅವರವರ ಮುದ್ರಾಧಾರಣೆಗಳನ್ನು ತೆಗೆದುಕೊಂಡು ಅಂದರೆ ಗೊರವಯ್ಯ ಕಂಬಳಿ, ಅಂಗಿ, ದೋಣಿ, ಶ್ರಿಶೂಲ ಎಲಿಸಂಚಿಚಾರದವರು- ಎಲೆ ಅಡಿಕೆ ಸೇವೆ, ದೀವಟಿಗೆಗಾರರು-ಪಂಜು, ಅಶ್ವರೂಡರು, ಚಾಟಿಯಿಂದ ಕಾಲಿಗೆ ವಿಧವಿಧವಾದ ಸೇವೆಗಳನ್ನು ಸಲ್ಲಿಸುವರು. ಮುಖ್ಯವಾಗಿ ಈ ಸೇವೆಗಳು ವಂಶಪಾರಂಪರ್ಯವಾಗಿ ನಡೆಯುವುದಾಗಿದೆ.

ಈ ಸ್ವಾಮಿಯ ಪೂಜೆಪುನಸ್ಕಾರಗಳು ದೇವಾಲಯದ ಶ್ರೀ ಕ್ಷೇತ್ರದಲ್ಲಿ ನೆಲೆಸಿರತಕ್ಕಂತಹ -ಕಪಿಲವಂಶಸ್ಥ ಮನೆತನದವರಿಂದ ನಡೆಯಲ್ಪಡುವುದು. ಈ ಮಾರ್ಗಶಿರ ಚಂಪಾಕ್ಷಷ್ಟಿಯ ದಿನದಿಂದ ಕಪಿಲವಂಶಸ್ಥ ಹಿರಿಯ ದಂಪತಿಗಳಿಂದ ಸಹಸ್ರನಾಮದೊಡನೆ ಭಂಡಾರ ಪೂಜೆ ಪ್ರಾರಂಭವಾಗುತ್ತದೆ. ಭಕ್ತರು ಇದನ್ನು ಕಡೆಯ ಕಾರ್ತೀಕವೆಂದು ಭಾವಿಸುವರು. ಈ ಭಂಡಾರ ಪೂಜೆಯು ಅರ್ಥಾತ್ ಭಂಡಾರವನ್ನು ಸ್ವಾಮಿ ಉತ್ಸವದೊಡನೆ ದೇವಸ್ಥಾನದ ಆವರಣದಲ್ಲಿರುವ ಸ್ವಾಮಿ ಸಿಂಹಾಸನಕ್ಕೆ ತರುವರು. ಭಂಡಾರವನ್ನು ಪೂಜೆ ಮಾಡಿ ಇಲ್ಲಿಂದ ಮುಂದೆ ನಡೆಯುವ ಅಸುರರ ಸಂಹಾರಕ್ಕೆ ಸಿದ್ಧಗೊಳ್ಳಿ ಎಂದು ಭಕ್ತರ ಮೇಲೆ ಉಗ್ಗುವರು.

ದೇವಸ್ಥಾನದಲ್ಲಿ ಪ್ರತಿ ನಿತ್ಯ ಭಕ್ತಾದಿಗಳು ಗೊರವಯ್ಯನ ದೋಣಿಗೆ (ಇದು ಶಿವನ ಅಕ್ಷಯ ಪಾತ್ರೆಯ ಪ್ರತೀಕ) ಹಣ್ಣು, ತುಪ್ಪ, ರೊಟ್ಟಿ ಬುತ್ತಿ ಹಾಕುವರು. ಸಾಮಾನ್ಯವಾಗಿ ಒಂದೊಂದು ದೇವತೆ ಒಂದೊಂದು ಮತ ಪಂಥದವರ ವಿಶೇಷ ಆದರಕ್ಕೆ ಪೂಜೆಗೆ ಪಾತ್ರವಾಗಿ ಅವರವರಿಂದಲೇ ಪೂಜೆಗೊಳ್ಳುವುದನ್ನು ನಾವು ಕಾಣುತ್ತೇವೆ. ಆದರೆ ಈ ವಿಷಯದಲ್ಲಿ ಮೈಲಾರ ಅಪವಾದವೆಂದು ಹೇಳಬಹುದು. ಜಾತಿ, ಕುಲ, ಮತ, ಪಂಥಗಳನ್ನು ಮೀರಿನಿಂತು ಭಿನ್ನ ಭಿನ್ನ ಕುಲದವರ ಭಿನ್ನ ಭಿನ್ನ ಮತ ಪಂಥಗಳ ಅನುಯಾಯಿಗಳಿಗೆ ಇವನು ವಿವಿಧ ಪಂಗಡಗಳ ಜನರು ಕೇವಲ ಇವನ ಮೇಲಿನ ಭಕ್ತಿಯಿಂದ ನೆರೆಯುವುದನ್ನು ನಾವು ಕಾಣಬಹುದು. ಇವನೊಬ್ಬ ಸಾಮಾನ್ಯ ಜನರ ಬಡಜನರ ಆರಾಧ್ಯದೈವ. ಮೇಲು ಕೀಳು ಎನ್ನದೇ ಬಡವ ಬಲ್ಲಿದ ಎನ್ನದೇ ಎಲ್ಲರೂ ಒಂದೇ ಕಡೇ ಸೇರುವ ದೇವರೆಂದರೆ ಈ ಮೈಲಾರಲಿಂಗನೊರ್ವನಿಗೆ ಎಂದು ಹೇಳಿದರೆ ತಪ್ಪಾಗಲಾರದು ಎನಿಸುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ ಇವನೊಬ್ಬ “ಜಾತ್ಯಾತೀತ ದೇವರು” ಎಂದು ಕರೆಯಬಹುದು.

ಪ್ರತಿ ಭಾನುವಾರ ಮತ್ತು ಹುಣ್ಣಿಮೆಗಳಲ್ಲಿ ಶ್ರೀ ಸ್ವಾಮಿಯು ಪಲ್ಲಕ್ಕಿ ಉತ್ಸವದೊಂದಿಗೆ ಪ್ರದಕ್ಷಣರೂಪನಾಗಿ ಅಮ್ಮನ ಗುಡಿಗೆ ಏಕಾಂತ ಸೇವೆಗೆ ಸಾಗುವನು. ಯುಗಾದಿ, ದವನದ ಹುಣ್ಣಿಮೆಯಲ್ಲಿ ನಿತ್ಯದ ಪೂಜೆ. ದವನ ಹುಣ್ಣಿಮೆಯ ನಂತರ ಅಮವಾಸೆಯಾದ ದಶಮದ ದಿನ ಶ್ರೀ ಸ್ವಾಮಿಯು ಉತ್ಸವದೊಂದಿಗೆ ತುಂಗಾತೀರಕ್ಕೆ ಎಲ್ಲಾ ಬಿರುದು ಬಾಹುಲಿಗಳೊಂದಿಗೆ ಹೊರಡುತ್ತಾನೆ. ಅಲ್ಲಿಂದ ಬಂದ ನಂತರ ಆ ದಿನ ಸಾಯಂಕಾಲ ನಾಂದಿ ಸ್ಥಾಪನೆಯಾಗುವುದು. ಪ್ರತಿಯೊಂದು ದ್ವಿದಳ ಧಾನ್ಯಗಳನ್ನು ಮಣ್ಣಿನ ಪರಡೆಯಲ್ಲಿ ಹಾಕುವುದು. ಪ್ರತಿ ನಿತ್ಯ ಮಂಗಳಾರತಿ ಪೂಜೆಯೊಂದಿಗೆ ಅವುಗಳಿಗೆ ನೀರು ಹಾಕುತ್ತಾ ಬರುವುದು. ಯಾವ ಸಸ್ಯವು ಬಲಯುತವಾಗಿ, ಚೆನ್ನಾಗಿ ಬೆಳೆಯುವದೋ ಅದೇ ಧಾನ್ಯವನ್ನು ಹೆಚ್ಚು ಬಿತ್ತುವ ಪರಿಪಾಠವನ್ನು ಹೊಂದಿದ್ದಾರೆ. ಇದನ್ನು ‘ಆಗೀ ಹುಣ್ಣಿಮೆ’ ಎಂತಲೂ ಕರೆಯುವರು.

ಪ್ರತಿವರ್ಷ ವೈಶಾಖಶುದ್ಧ ಪೂರ್ಣಿಮೆಗೆ ಸರಿಯಾಗಿ ಈ ಮಂದಿರದಲ್ಲಿ ದೇವರ ವಿವಾಹ ಕಾರ್ಯಗಳು ಜರಗುವವು. ಈ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಲು ನೂತನ ದಂಪತಿಗಳಾದಿಯಾಗಿ ಅನೇಕ ಭಕ್ತರು ಸೇರುವರು ಶ್ರೀ ಮೈಲಾರಲಿಂಗ, ಗಂಗಿಮಾಳಮ್ಮ ಇವರ ವಿವಾಹ ಕಾರ್ಯಗಳು ಜನಸಾಮಾನ್ಯರ ಪದ್ಧತಿಯಂತೆಯೇ ಜರುಗುವವು.

ಶ್ರೀ ಸ್ವಾಮಿಯ ದೇವಾಲಯಗಳ ನಡುವೆ ಅನೇಕ ಪವಾಡಗಳು ಜರುಗುವವು. ಮಹಾದ್ವಾರದ ಬಳಿಯಲ್ಲಿರುವುದೇ ಓಕುಳಿಕುಂಡ. ಕಾರ್ಣೀಕೋತ್ಸವದ ಮಾರನೇ ದಿನ ಓಕುಳಿ ಉತ್ಸವ ನಡೆಯುತ್ತದೆ. ಇದು ‘ಹೋಳೀ ಹಬ್ಬದಂತೆ’ ಕಾಣುತ್ತದೆ. ನಂತರ ಶ್ರೀ ಸ್ವಾಮಿಯು ತುಂಗಾತೀರಕ್ಕೆ ಹೋಗಿ ಸ್ನಾನಮಾಡಿಕೊಂಡು ಬಂದು ಗುಡಿದುಂಬುವನು.

ವೈಶಾಖಮಾಸದಲ್ಲಿ ಪೂರ್ತಿ ಒಂದು ತಿಂಗಳು ಸ್ವಾಮಿ ಉತ್ಸವ ನಡೆಯುವದು. ಕಾರಣ ಸ್ವಾಮಿಯು ಹೊಸಮದುಮಗನಾಗಿರುವನು. ಕಾರಹುಣ್ಣಿಮೆಗೆ ಸ್ವಾಮಿಯು ಕಂಕಣವಿಸರ್ಜನೆಗೆ ನದಿಗೆ ಹೋಗಿಬರುವನು. ಶ್ರಾವಣದಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುವವು.

ಉಪಸಂಹಾರ :

ಈ ಚಿಕ್ಕ ಪ್ರಭಂದವು ಮೈಲಾರದೇವರ ಜಾತ್ರೆಯ ಮತ್ತು ಪೂಜೆಯ ಕಿರುಪರಿಚಯವಾಗಿದೆ. ಹಿಂದೆ ಇದು ಒಂದು ಚಿಕ್ಕ ಗ್ರಾಮದೇವತೆಯಾಗಿದ್ದು ಅದರ ಪ್ರಭಾವದಿಂದ ಹಲವಾರು ಕಾವ್ಯಗಳು ಸಹಸ್ರಾರು ಭಕ್ತಾದಿಗಳಾದರು.

ವಿವಿಧ ಮತ ಪಂಗಡಗಳವರಿಂದ ಪೂಜಿಸಲ್ಪಡುವದರಿಂದ ಮೈಲಾರನು ಮೇಲು ಕೀಳು ಎನ್ನದೆ ಎಲ್ಲರೂ ಒಟ್ಟಿಗೆ ಸೇರುವದು ಒಂದು ‘ಸಮಾನತೆಯ ಸಂಕೇತ’ ವಾಗಿದೆ. ವಿಶಾಲವಾಗಿದ್ದ ಕನ್ನಡ ನಾಡು ರಾಜಕಾರಣದಿಂದ ಭಾಷೆಗಳ ವ್ಯತ್ಯಾಸಗಳಿಂದಾಗಿ ಎರಡು ನಾಡುಗಳಾಗಿ ವಿಭಾಗವಾಯಿತು. ಭಾಷೆ, ಆಚಾರ, ವಿಚಾರ, ಬೇರೆ ಬೇರೆಯಾದವು. ಆದರೆ ಸಂಸ್ಕೃತಿ ಮಾತ್ರ ಬದಲಾಗಲಿಲ್ಲ. ಕರ್ನಾಟಕ, ಮಹಾರಾಷ್ಟ್ರಗಳಲ್ಲಿಯೂ ಈ ಮೈಲಾರನ ಪೂಜೆ ಭಕ್ತಾದಿಗಳಿದ್ದಾರೆ. ಹಲವಾರು ಕಡೆಗಳಲ್ಲಿ ಇವನ ಹಲವಾರು ಕ್ಷೇತ್ರಗಳು ತಲೆಯೆತ್ತಿನಿಂತಿವೆ. ಭಾಷೆ, ಆಚಾರ, ವಿಚಾರಗಳು ಬದಲಾದರೂ ಮೈಲಾರನ ಭಕ್ತರು ಎಲ್ಲಾ ಕ್ಷೇತ್ರಗಳಿಗೂ ಹೋಗಿ ಬರುತ್ತಾರೆ. ನಾನು ಆದ್ದರಿಂದಲೇ ಈ ಮೈಲಾರನನ್ನು “ಜಾತ್ಯಾತೀತ ದೇವರು” ಎಂದು ಕರೆದಿದ್ದೇನೆ.

ಈ ಕೆಳಗಿನ ಗ್ರಂಥಗಳಿಂದ ಕೆಲವು ಭಾಗಗಳನ್ನು ಆಯ್ದುಕೊಂಡಿದೆ.

1. ಜವರೇಗೌಡ ಜಾನಪದ ಅಧ್ಯಯನ
2. ಬಸವರಾಜ ನೆಲ್ಲಿಸರ ಜಾನಪದ ಸಂಕಲನ
3. ಎಲ್.ಎಸ್. ಕಟ್ಟಿ ಶ್ರೀ ಮೈಲಾರ ಕ್ಷೇತ್ರದರ್ಶನ
4. ಶ್ರೀನಿವಾಸರಿತ್ತಿ ಮೈಲಾರ ದೇವರು.