ಮೈಸೂರಿನ ಇತಿಹಾಸ

೧೯೪೭ ರವರೆಗೂ ಒಡೆಯರ ವಂಶದ ಆಳ್ವಿಕೆಗೆ ಒಳಪಟ್ಟಿದ್ದ ಮೈಸೂರು ರಾಜ್ಯಕ್ಕೆ ಮೈಸೂರು ರಾಜಧಾನಿಯಾಗಿತ್ತು. ಹಿಂದೂ ಪುರಾಣಗಳ ಪ್ರಕಾರ ಮಹಿಷಾಸರ ಎಂಬ ದಾನವನಿಂದ ಈ ಸ್ಥಳಕ್ಕೆ ಮಹಿಷೂರು ಎಂಬ ಹೆಸರು ಬಂದಿತು ಹಾಗೂ ಬಳಿಕ ಅದೇ ಮೈಸೂರು ಆಯಿತು ಎಂದು ಪ್ರತೀತಿಯಿದೆ. ಮಹಿಷಾಸುರನನ್ನು ವಧಿಸಿದ ದೇವಿ ಚಾಮುಂಡೇಶ್ವರಿ ದೇವಾಲಯವು ಚಾಮುಂಡಿ ಬೆಟ್ಟದ ಮೇಲಿದೆ. ಮೈಸೂರನ್ನು ಆಳಿದ ಯದುವಂಶದ ಒಡೆಯರು ಕಲೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಇದರಿಂದಲೇ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಿನ ಮೈಸೂರು ನಗರವು ೧೫ನೆಯ ಶತಮಾನದವರೆಗೂ ಪುರಗೆರೆ ಎಂಬ ಹೆಸರು ಪಡೆದಿತ್ತು. ೧೬ನೇ ಶತಮಾನದಲ್ಲಿ ಮೂರನೆಯ ಚಾಮರಾಜ ಒಡೆಯರು ಮಹಿಷೂರು ಕೋಟೆಯನ್ನು ಕಟ್ಟಿಸಿ ಅದನ್ನು ತಮ್ಮ ಮಗ ನಾಲ್ಕನೆಯ ಚಾಮರಾಜ ಒಡೆಯರಿಗೆ ಬಿಟ್ಟುಕೊಟ್ಟರು. ಆಗ ಪುರಗೆರೆಯನ್ನು ಮಹಿಷೂರು ಎಂಬ ಹೆಸರಿನಿಂದ ಗುರುತಿಸಲಾಯಿತು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಒಡೆಯರು ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ಸ್ವತಂತ್ರರಾದರು. ೧೮ನೆಯ ಶತಮಾನದಲ್ಲಿ ಅಲ್ಪ ಕಾಲದ ಹೈದರಾಲಿ ಹಾಗೂ ಟಿಪ್ಪುಸುಲ್ತಾನ್‌ಕೂಡಾ ಮೈಸೂರು ರಾಜ್ಯವನ್ನು ಆಳಿರುತ್ತಾರೆ. ಟಿಪ್ಪುಸುಲ್ತಾನನ ಪತನದ ಬಳಿಕ ಮೈಸೂರಿನಲ್ಲಿ ಒಡೆಯರ ಆಳ್ವಿಕೆಯೇ ಮುಂದುವರಿಯಿತು.

ಗಂಗರ ಲಾಂಛನ

ಮೈಸೂರಿನ ಅರಸರ ಲಾಂಛನ

 

ಮೈಸೂರು ಪ್ರಾಂತ್ಯವನ್ನು ಆಳಿದ ವಿವಿಧ ರಾಜಮನೆತನಗಳು

ಮೈಸೂರು ಪ್ರಾಂತ್ಯವನ್ನು ಆಳಿದ ವಿವಿಧ ರಾಜಮನೆತನಗಳು

ಕ್ರಿಶ ೦೩೨೫ – ಕ್ರಿಶ ೯೯೯ – ತಲಕಾಡಿನ ಗಂಗರು

ಕ್ರಿಶ ೧೦೦೦ – ಕ್ರಿಶ ೧೧೦೦ – ಚೋಳರು

ಕ್ರಿಶ ೧೧೦೦ – ಕ್ರಿಶ ೧೩೪೬ – ಹೊಯ್ಸಳರು

ಕ್ರಿಶ ೧೩೩೬ – ಕ್ರಿಶ ೧೫೬೫ – ವಿಜಯನಗರದ ಅರಸರು

ಕ್ರಿಶ ೧೩೯೯ – ಕ್ರಿಶ ೧೭೬೧ – ಮೈಸೂರಿನ ಒಡೆಯರು

ಕ್ರಿಶ ೧೭೬೧ – ಕ್ರಿಶ ೧೭೯೯ – ಹೈದರಾಲಿ ಹಾಗೂ ಟಿಪ್ಪುಸುಲ್ತಾನ

ಕ್ರಿಶ ೧೮೦೦ – ಕ್ರಿಶ ೧೮೩೧ – ಮೈಸೂರಿನ ಒಡೆಯರು

ಕ್ರಿಶ ೧೮೩೧ – ಕ್ರಿಶ ೧೮೮೧ – ಬ್ರಿಟೀಷರು

ಕ್ರಿಶ ೧೮೮೧ – ಕ್ರಿಶ ೧೯೪೭ – ಮೈಸೂರಿನ ಒಡೆಯರು

ಹೀಗೆ ಮೈಸೂರು ತನ್ನದೇ ಆದ ಸುದೀರ್ಘ ಪರಂಪರೆನ್ನು ಹೊಂದಿದೆ. ಸುಮಾರು ಎರಡು ಸಾವಿರ ವರ್ಷಗಳ ಐತಿಹಾಸಿಕ ಪರಂಪರೆ, ಉದಾತ್ತ ಸಾಂಸ್ಕೃತಿಕ ಮೌಲ್ಯಗಳನ್ನು ಆಳವಾಗಿ ಮೈಗೂಡಿಸಿಕೊಂಡು ಖ್ಯಾತಿ ಪಡೆದಿದೆ. ಮೈಸೂರು ಜಿಲ್ಲೆಯಾದ್ಯಂತ ಅನೇಕ ರಾಜ ಮನೆತನಗಳು, ಸಂಸ್ಥಾನಗಳು ಜಿಲ್ಲೆಯಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಜಿಲ್ಲೆಯ ನದಿಗಳು ನೈಸರ್ಗಿಕ ಸಂಪನ್ಮೂಲವನ್ನು ಹೆಚ್ಚಿಸಿದೆ. ಜಿಲ್ಲೆಯ ಮೈಸೂರು ವಿಶ್ವವಿದ್ಯಾಲಯವು ರಾಜ್ಯಕ್ಕಲ್ಲದೇ ರಾಷ್ಟ್ರಕ್ಕೆ ಸಾಹಿತಿಗಳು, ಲೇಖಕರು, ವಿಜ್ಞಾನಿಗಳು, ಕವಿಗಳು ಮೊದಲಾದ ಪ್ರಮುಖರನ್ನು ನೀಡಿದೆ. ಮೈಸೂರಿನ ದಸರಾ ವಿಜಯದಶಮಿಯ ಮೆರವಣಿಗೆ ವಿಶ್ವವಿಖ್ಯಾತವಾದದ್ದು.

 

ಜಿಲ್ಲೆಯ ಭೌಗೋಳಕ ಹಿನ್ನೆಲೆ

 

ದಖ್ಖನ್‌ಪ್ರಸ್ಥಭೂಮಿಯ ಮೇಲಿರುವ ಮೈಸೂರು ಅಗ್ನಿಶಿಲೆ ಮತ್ತು ರೂಪಾಂತರ ಶಿಲೆಗಳಿಂದ ಕೂಡಿದೆ. ಜಿಲ್ಲೆಯ ಪಶ್ಚಿಮಕ್ಕೆ ಕೊಡಗು, ಉತ್ತರಕ್ಕೆ ಮಂಡ್ಯ, ಆಗ್ನೇಯ ದಿಕ್ಕಿಗೆ ತಮಿಳುನಾಡು, ವಾಯುವ್ಯಕ್ಕೆ ಹಾಸನ ಹಾಗೂ ನೈಋತ್ಯಕ್ಕೆ ಕೇರಳಗಳಿವೆ. ೧೧’೩೦’ ಉತ್ತರ ಅಕ್ಷಾಂಶದಿಂದ ೧೨’೫೦’ ಉತ್ತರ ಅಕ್ಷಾಂಶ ಹಾಗೂ ೭೫’೪೫’ ಪೂರ್ವ ರೇಖಾಂಶದಿಂದ ೭೭’೪೫’ ಪೂರ್ವ ರೇಖಾಂಶದವರೆಗಿನ ೬೮೫೪ ಚ.ಕಿ.ಮೀ. ಭೂಪ್ರದೇಶದಲ್ಲಿದೆ. ಸಮುದ್ರ ಮಟ್ಟದಿಂದ ಸರಾಸರಿ ೭೦೦ ರಿಂದ ೯೦೦ ಮೀಟರ್‌ಗಳಷ್ಟು ಎತ್ತರ ಪ್ರದೇಶದಲ್ಲಿರುವ ಈ ಜಿಲ್ಲೆ ವಾರ್ಷಿಕವಾಗಿ ಸರಾಸರಿ ೮೯ ಮಿ.ಮೀ. ನಷ್ಟು ಮಳೆ ಪಡೆಉತ್ತದೆ. ಸಾಮಾನ್ಯ ಉಷ್ಣಾಂಶವು ಚಳಿಗಾಲದಲ್ಲಿ ೧೧ ಡಿಗ್ರಿಯಿಂದ ಬೇಸಿಗೆ ಕಾಲದಲ್ಲಿ ೩೮ ಡಿಗ್ರಿಗಳ ಸೆಲ್ಶಿಯಸ್‌ತನಕವೂ ಇರುತ್ತದೆ. ಉತ್ತರ ಪಶ್ಚಿಮ ಮತ್ತು ಪೂರ್ವಭಾಗಗಳ ಮೂಲಕ ಹರಿಯುವ ಕಾವೇರಿ ಜಿಲ್ಲೆಯ ಮುಖ್ಯ ನದಿಯಾಗಿದ್ದು ಕಪಿಲ, ಲಕ್ಷ್ಮಣ ತೀರ್ಥ ಹಾಗೂ ಲೋಕಪಾವನಿ ಇತರ ಪ್ರಮುಖ ನದಿಗಳು.

 

ವಿಸ್ತೀರ್ಣ ಮತ್ತು ಜನಸಂಖ್ಯೆ

ಮೈಸೂರು ಜಿಲ್ಲೆ

ಮೈಸೂರು ಜಿಲ್ಲೆಯ ಭೂವಿಸ್ತೀರ್ಣ ೬೨೬೮ ಚದರ ಕಿಮೀ ಆಗಿದೆ ಮತ್ತು ೨೦೦೧ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯು ೨೬,೪೧,೦೨೭ ಆಗಿದ್ದು ಕರ್ನಾಟಕದ ಜನಸಂಖ್ಯೆಯಾದ ೫೨೯ ಲಕ್ಷಗಳ ಶೇ. ೪.೯೯ ಆಗಿದೆ. ಮೈಸೂರು ತಾಲೂಕು ೭ ಕಂದಾಯ ತಾಲೂಕುಗಳನ್ನು ಹಾಗೂ ೯ ಶೈಕ್ಷಣಿಕ ವಲಯಗಳನ್ನು ಹೊಂದಿದೆ.