ಜನನ: ೨೫-೧೦-೧೯೩೬ ಮೈಸೂರಿನಲ್ಲಿ

ಮನೆತನ: ಸುಪ್ರಸಿದ್ಧ ಸಂಗೀತ ವಿದ್ವಾಂಸರ ಮನೆತನ. ತಾತ ತಾಳಬ್ರಹ್ಮ ಆ.ವಿ. ಚಿಕ್ಕರಾಮರಾಯರು. ತಾಯಿ ಕಮಲಮ್ಮ ಸಹ ಗಾಯಕಿ. ತಂದೆ ಜೆ.ಪಿ. ಸುಬ್ಬರಾಯರು. ಮಗ ರಾಜು ಅನಂತಸ್ವಾಮಿ ಇಂದು ಮುಂಚೂಣಿಯಲ್ಲಿರುವ ಗಾಯಕ-ನಟ.

ಗುರುಪರಂಪರೆ: ತಾತ ಚಿಕ್ಕರಾಮರಾಯರು, ತಾಯಿ ಕಮಲಮ್ಮ ಹಾಡುತ್ತಿದ್ದ ಶಾಸ್ತ್ರೀಯ ಹಾಗೂ ಸಂಪ್ರದಾಯ ಗೀತೆಗಳೇ ಇವರ ಗಾಯನಾಭ್ಯಾಸಕ್ಕೆ ಸ್ಫೂರ್ತಿ, ಸ್ವಾಧ್ಯಾಯಿ, ಸ್ವಲ್ಪ ಸಮಯ ಕೃಷ್ಣಮೂರ್ತಿಯವರಲ್ಲಿ ಹಾಡುಗಾರಿಕೆ, ಹಾಗೂ ಪಲ್ಲಡಂ ನಾಗರಾಜರಾಯರ ಬಳಿ ಕೊಳಲು ವಾದನ ಅಭ್ಯಸಿಸಿದರೂ ಪೂರ್ಣವಾಗಲಿಲ್ಲ. ಆದರೆ ಸ್ವಂತ ಪರಿಶ್ರಮದಿಂದ ಹಾರ್ಮೋನಿಯಂ, ತಬಲ, ಢೋಲಕ್ ಹಾಗೂ ಮ್ಯಾಂಡೊಲಿನ್ ನುಡಿಸುತ್ತಿದ್ದರು.

ಸಾಧನೆ: ಮೊಟ್ಟಮೊದಲ ಕಾರ್ಯಕ್ರಮ ಮಹಾರಾಜ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪುರವರ ಸಮ್ಮುಖದಲ್ಲಿ ಅಲ್ಲಿಂದ ಅವರು ಎಂದೂ ಹಿಂದಿರುಗಿ ನೋಡಲಿಲ್ಲ. ಪಿ. ಕಾಳಿಂಗರಾಯರ ಗಾಯನದ ಮೋಡಿಗೆ ಸಿಲುಕಿ ಪ್ರಭಾವಿತರಾಗಿ ಅವರಂತೆಯೆ ಹಾಡಲು ಅನುಕರಿಸಿ-ತಾವೇ ಗೀತೆಗಳಿಗೆ ರಾಗ ಸಂಯೋಜನೆ ಮಾಡಲು ಆರಂಭಿಸಿದರು. ದ.ರಾ. ಬೇಂದ್ರೆಯವರ ಗಂಗಾವತರಣ ಗೀತೆಗೆ ರಾಗ ಸಂಯೋಜಿಸಿ ಕಾಳಿಂಗರಾಯರ ಪ್ರಶಂಸೆಗೆ ಪಾತ್ರರಾದರು. ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಎಲ್.ಆರ್.ಡಿ.ಇ. ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಇವರ ಕಾರ್ಯವ್ಯಾಪ್ತಿ ವಿಸ್ತರಿಸಿತು. ದಿನಕ್ಕೊಂದು ಕಾರ್ಯಕ್ರಮದಂತೆ ಸುತ್ತಮುತ್ತಲಿನ ಎಲ್ಲ ವೇದಿಕೆಗಳಲ್ಲಿ ಸುಗಮ ಸಂಗೀತದ ಕಂಪನ್ನು ಬೀರಿದರು. ಸುಗಮ ಸಂಗೀತ ಪ್ರಕಾರಕ್ಕೆ ಜೀವ ತುಂಬಿದರು.

ಇವರ ರಾಗ ಸಂಯೋಜನೆಯಲ್ಲಿ ಬೇಂದ್ರೆಯವರ ನಾಕುತಂತಿ, ಅಡಿಗರ ಮೋಹನ ಮುರಲಿ, ಜಿ.ಎಸ್.ಎಸ್. ರವರ ’ಎದೆ ತುಂಬಿ ಹಾಡಿದೆನು’, ರಾಜರತ್ನಂರವರ ರತ್ನನ ಪದಗಳು, ಕೈಲಾಸಂರವರ ಗೀತೆಗಳು ಹೊರಹೊಮ್ಮಿ ಅತ್ಯಂತ ಜನಪ್ರಿಯವಾದದ್ದಲ್ಲದೆ ಸುಗಮ ಸಂಗೀತ ಕ್ಷೇತ್ರದಲ್ಲಿ ಒಂದು ಹೊಸ ಅಲೆಯನ್ನೆ ಎಬ್ಬಿಸಿತು.

ನಿಸ್ಸಾರ್ ಅಹಮದ್‌ ರವರ ’ನಿತ್ಯೋತ್ಸ” ಕವನ ಸಂಕಲನಕ್ಕೆ ರಾಗ ಸಂಯೋಜಿಸಿ ಹಾಡಿ ಮೊದಲ ಧ್ವನಿ ಸುರುಳಿ ತಂದ ಹೆಗ್ಗಳಿಕೆ ಅನಂತಸ್ವಾಮಿಯವರದು. ೧೯೮೫ರಲ್ಲಿ ೯೫ ದಿನಗಳ ಅಮೇರಿಕಾ ಪ್ರವಾಸ ಮಾಡಿ ಕನ್ನಡ ಗೀತೆಗಳ ಗಾಯನದ ಕಂಪನ್ನು ಹರಡಿದ ಮೊದಲ ಕಲಾವಿದ ಎನ್ನಿಸಿಕೊಂಡವರು. ವಿಜಯದಶಮಿಯಂದು ಹುಟ್ಟಿದ ಅನಂತನನ್ನು ಎಲ್ಲರೂ ’ದೊರೆ’ಯೆಂದೇ ಕರೆದರು. ಈ ದೊರೆ ಮುಂದೆ ಸುಗಮ ಸಂಗೀತ ಕ್ಷೇತ್ರದ ಅನಭಿಷಿಕ್ತ ದೊರೆಯಾಗಿ ಮೆರೆದರು.

ಪ್ರಶಸ್ತಿ-ಸನ್ಮಾನ: ಅನಂತ ಭಾವ ಚಕ್ರವರ್ತಿ, ಸುಗಮ ಸಂಗೀತದ ದೊರೆ, ಗಾನ ಗಾರುಡಿಗ, ಬೆಂಗಳೂರು ಗಾಯನ ಸಮಾಜದ ವರ್ಷದ ಕಲಾವಿದ, ೧೯೮೩-೮೪ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೮೬ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿದೆ.

ಸರಳ ಹಾಗೂ ಸ್ನೇಹ ಜೀವಿ ಅನಂತಸ್ವಾಮಿ ೯-೧-೧೯೯೫ರಂದು ನಿಧನರಾದರು.