ಮೈಸೂರಿನ ಕೃಷ್ಣಮೂರ್ತಿಪುರಂ ಬಡಾವಣೆಗೂ ನನಗೂ ಏನೋ ಒಂದು ಅವಿನಾಬಾಂಧವ್ಯ. ಪ್ರಾಯಶಃ ಅಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ವಾಸವಾಗಿದ್ದುದರ ಪರಿಣಾಮವಿರಬಹುದು. ಅಲ್ಲಿರುವ ಪಾರ್ಕಿನಲ್ಲಿ ಸಾಕಷ್ಟು ಓಡಿಯಾಡಿದ ನೆನಪು.

ಇತ್ತೀಚೆಗೊಮ್ಮೆ ಕೃಷ್ಣಮೂರ್ತಿಪುರಕ್ಕೆ ಹೋಗಿದ್ದೆ. ಆ ಪಾರ್ಕಿನತ್ತ ಕಣ್ಣುಹೊರಳಿಸಿದೆ. ಆ ಪಾರ್ಕಿಗೆ ಮೈಸೂರು ಅನಂತಸ್ವಾಮಿ ಪಾರ್ಕ್ ಎಂಬ ನಾಮಕರಣದೊಂದಿಗೆ ತೂಗಾಡುತ್ತಿದ್ದ ಫಲಕವನ್ನು  ಕಂಡಾಗ ನನ್ನ ಮನಸ್ಸು ಐವತ್ತರ ದಶಕಕ್ಕೆ ಸರಿಯಿತು. ನೆನಪುಗಳ ಪುಟಪುಟಗಳು ತೆರೆದುಕೊಂಡವು. ಐವತ್ತೆರಡರಿಂದ ಐವತ್ತನಾಲ್ಕನೇ ಇಸವಿಯವರೆಗೆ ನಾನು ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು ಸಂಗೀತಪ್ರಿಯಳಾದ ನನಗೆ ಕ್ಲಾಸ್‌ ಇಲ್ಲದ ಹೊತ್ತಿನಲ್ಲೆಲ್ಲ ಹಾಡುವುದೇ ಕೆಲಸ.

ಅದು ಹಿಂದಿ ಚಿತ್ರಗೀತೆಗಳು ರಸಿಕರ ಹೃದಯವನ್ನು ಮೀಟುತ್ತಿದ್ದ ಕಾಲ. ನಾನು ಆಗ ಸದಾ ಹಿಂದೀ ಚಿತ್ರಗೀತೆಗಳನ್ನೇ ಹಾಡುತ್ತಿದ್ದೆ. ಲತಾ ಮಂಗೇಶ್ಕರ್ ನನ್ನ ಅಚ್ಚುಮೆಚ್ಚಿನ ಗಾಯಕಿಯಾಗಿದ್ದುದರಿಂದ ಆಕೆ ಹಾಡಿದ ಹಾಡುಗಳನ್ನೇ ಹಾಡುತ್ತಿದ್ದೆ. ‘ಅಮರ ಭೂಪಾಲಿ’ಯ ‘ಘನಶ್ಯಾಮಸುಂದರ ಶ್ರೀಧರ’ ನನ್ನ ಅಚ್ಚುಮೆಚ್ಚಿನ ಹಾಡಾಗಿತ್ತು. ಒಂದು ದಿನ ಹೀಗೆ ಒಂದಿಬ್ಬರು ಗೆಳತಿಯರೊಂದಿಗೆ ಕಾಲೇಜಿನ ಹೊರಾಂಗಣದ ಮೆಟ್ಟಲಿನ ಮೇಲೆ ಕುಳಿತು ಆ ಹಾಡನ್ನು ಗುನುಗುನಿಸುತ್ತಿದ್ದೆ. ಅಷ್ಟರಲ್ಲಿ ಎಲ್ಲಿಂದಲೋ ಒಬ್ಬ ಹದಿನರು, ಹದಿನೇಳರ ಹುಡುಗ ಕೈಯ್ಯಲ್ಲಿ ಕೊಳಲು ಹಿಡಿದುಕೊಂಡು ಬಂದು ಸ್ವಲ್ಪ ದೂರದಲ್ಲಿ ಕುಳಿತ. ಆ ಹುಡುಗನ ಮುರಳಿಯಿಂದ ಘನಶ್ಯಾಮಸುಂದರ ಅಲೆ ಅಲೆಯಾಗಿ ತೇಲಿ ಬಂತು. ಆ ಹುಡುಗನನ್ನು ನೋಡಿ ನಾನು ನಕ್ಕೆ. ಅವನೂ ನನ್ನ ಕಡೆ ನೋಡಿ ನಕ್ಕ. “ಇನ್ನೊಂದು ಸಾರಿ ಘನಶ್ಯಾಮಸುಂದರ ಹಾಡ್ತೀರಾ?” ಅಂದ ಹಾಡಿದೆ. ಆ ಹಾಡಿನಲ್ಲಿ ಮಧ್ಯೆ ಬರುವ ಆಕಾರವನ್ನು ಮತ್ತೆ ಮತ್ತೆ ಹಾಡಿಸಿ, ಕೊಳಲಿನಲ್ಲಿ ಅದನ್ನು ನುಡಿಸುವ ಪ್ರಯತ್ನ ಪಟ್ಟ. ನಂತರ ಆ ಹುಡುಗ ತನ್ನ ಪರಿಚಯವನ್ನು ಮಾಡಿಕೊಂಡ. ನಾನು ಅನಂತಸ್ವಾಮಿ ಅಂತ. ಯುವರಾಜಾ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಓದುತ್ತಿದ್ದೀನಿ ಅಂತ ಹೇಳಿದ. ನನ್ನ ಅನಂತಸ್ವಾಮಿಯ ಪರಿಚಯವಾದದ್ದು ಹೀಗೆ.

ದಿನಗಳುರುಳಿದಂತೆ ಸಂಗೀತದಲ್ಲಿ ಅನಂತಸ್ವಾಮಿಯ ಬೆಳವಣಿಗೆಯನ್ನು  ನಾನು  ಸಹಜವಾಗಿ ಗಮನಿಸುತ್ತ ಬಂದೆ. ಕೊಳಲು ನುಡಿಸುತ್ತಿದ್ದ ಕೈಗೆ ಮ್ಯಾಂಡೊಲಿನ್‌, ಬಂತು. ತಬಲ, ಢೋಲಕ್‌. ಒಂದೇ ಎರಡೇ, ಹಾರ್ಮೋನಿಯಂ ಕೂಡ ಅವರ ಸಂಗಾತಿಯಾಯಿತು. ಸಂಗೀತದ ಬಗ್ಗೆ ಇಷ್ಟೊಂದು ಆಸಕ್ತಿ ಇರುವ ಈ ಹುಡುಗನ ಪರಿಸರ ಸಹಜವಾಗಿ ಸಂಗೀತಮಯವಾಗಿರಲೇಬೇಕು ಎನ್ನುವುದು ನಂಬಿಕೆ.

ಕರ್ನಾಟಕ ಶಾಸ್ತ್ರೀಯ ಸಂಗೀತದ ರಂಗದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ ಕಲಾವಿದರು ಚಿಕ್ಕರಾಮರಾಯರು. ಇವರು ಮೈಸೂರು ಒಡೆಯರ ಕಾಲದಲ್ಲಿ ರಾಜಾಸ್ಥಾನದ ಸಂಗೀತರತ್ನ ಎನಿಸಿಕೊಂಡವರು. ಇವರ ಮಗಳು ಕಮಲಮ್ಮ. ಕಮಲಮ್ಮ ಮತ್ತು ಜೆ.ಪಿ. ಸುಬ್ಬರಾವ್‌ ದಂಪತಿಗಳ ಸುಪುತ್ರನಾಗಿ ಅನಂತಸ್ವಾಮಿ ಹುಟ್ಟಿದ್ದು ಮೈಸೂರಿನಲ್ಲಿ ೧೯೩೬ರ ಅಕ್ಟೋಬರ್ ೨೫ರಂದು.

ಸಂಗೀತಾಮೃತಪಾನ ಮಗು ಅನಂತಸ್ವಾಮಿಗೆ ಹುಟ್ಟಿನಿಂದಲೇ ಆಗುತ್ತಿತ್ತು. ‘ತಾಳಬ್ರಹ್ಮ’, ಅಭಿಜಾತ ಸಂಗೀತ ಕಲಾವಿದ ಚಿಕ್ಕರಾಮರಾಯರು ಪ್ರತಿದಿನ ಪ್ರಾತಃಕಾಲ ತಂಬೂರಿ ಮೀಟಿ ಶ್ರುತಿ ಸೇರಿಸುತ್ತ ಹಾಡುತ್ತಿದ್ದರೆ ಇಡೀ ವಾತಾವರಣಕ್ಕೆ ಜೀವಕಳೆ ತುಂಬಿದಂತಾಗುತ್ತಿತ್ತು. ನಾದೋಪಾಸನೆಯೇ ಅವರ ಜೀವನದ ಗುರಿಯಾಗಿತ್ತು. ಮಗು ಅನಂತಸ್ವಾಮಿಗೆ ತಾತ ಚಿಕ್ಕರಾಮರಾಯರ ಸಂಗೀತೋಪಾಸನೆಯ ಜೊತೆ ಜೊತೆಗೇ ತಾಯಿ ಕಮಲಮ್ಮನವರು ದಿನವೂ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ದೇವರ ನಾಮಗಳು, ತುಳಸೀ ಪೂಜೆಯ ಹಾಡುಗಳು ಮಗು ಅನಂತಸ್ವಾಮಿಯ ಕಿವಿದೆರೆಗಳನ್ನು ತುಂಬುತ್ತಿದ್ದವು . ಸರ್ಕಾರಿ ಖಜಾನೆಯಲ್ಲಿ ಅಧಿಕಾರಿಯಾಗಿದ್ದ ಅನಂತಸ್ವಾಮಿಯವರ ತಂದೆ ಸುಬ್ಬರಾವ್‌ರವರಿಗೆ ಸಾಹಿತ್ಯ, ಸಂಸ್ಕೃತಿಗಳ ಬಗೆಗೆ ಅಪಾರ ಆಸಕ್ತಿ. ಇಂತಹ ಶ್ರೀಮಂತನ ಹಿನ್ನೆಲೆಯಲ್ಲಿ ಹುಟ್ಟಿದ ಅನಂತಸ್ವಾಮಿಗೆ ಸಂಗೀತವೆ ಉಸಿರಾದದ್ದು ಆಶ್ಚರ್ಯವೇನಲ್ಲ. ಕೋಗಿಲೆಯಲ್ಲಿ ಕೋಗಿಲೆಯಲ್ಲದೆ ಬೇರೇನು ಹುಟ್ಟೀತು?

ಇದರ ಜೊತೆಗೆ ತಾತ ಚಿಕ್ಕರಾಮರಾಯರು ಶಿಷ್ಯರಿಗೆ ಪಾಠ ಹೇಳುತ್ತಿದ್ದುದನ್ನೂ ಗಮನಿಸುತ್ತಿದ್ದ ಪುಟ್ಟ ಬಾಲಕ ಅನಂತಸ್ವಾಮಿ. ಅಲ್ಲದೆ ಚಿಕ್ಕರಾಮರಾಯರ ಮನೆಯಲ್ಲೇ ಒಂದೊಂದು ದಿನ ಒಬ್ಬೊಬ್ಬ ಸಂಗೀತಗಾರರು ಬಂದು ಕಚೇರಿ ಮಾಡಿ, ಹಿರಿಯರ ಆಶೀರ್ವಾದ ಪಡೆಯುತ್ತಿದ್ದರು. ಜೊತೆಗೆ ಪ್ರತಿ ಗುರುವಾರ ಮನೆಯಲ್ಲಿ ಭಜನೆ ಬೇರೆ ನಡೆಯುತ್ತಿತ್ತು.

ಒಂದು ಗುರುವಾರ ಮನೆಯಲ್ಲಿ ಭಜನೆ ಶುರುವಾಗಿದೆ. ಆದರೆ ತಾಳವಾದ್ಯದವರೇ ನಾಪತ್ತೆ. ತಾತ ಚಿಕ್ಕರಾಮರಾಯರಿಗೆ ಎಲ್ಲಿಲ್ಲದ ಕಳವಳ. ಆದರೆ ಅಲ್ಲೆ ಕುಳಿತಿದ್ದ ಆರು ವರ್ಷದ ಮೊಮ್ಮಗ ಖಂಜರಿ ಎತ್ತಿಕೊಂಡು ಧೈರ್ಯವಾಗಿ ನುಡಿಸೇಬಿಟ್ಟ. ತಾತ ಕಣ್ಣರಳಿಸಿ ನೋಡಿ ಮೊಮ್ಮಗನನ್ನು ಬಿಗಿದಪ್ಪಿಕೊಂಡರು. ಮನೆಯಲ್ಲೇ ತಮ್ಮ ಗಾಯನದ ಕುಡಿಯೊಡೆದಿದೆ ಎಂಬುದು ತಾತನಿಗೆ ಅರ್ಥವಾಗಿ ಹೋಯಿತು. ಮಾರನೆಯ ದಿನದಿಂದಲೇ ಚಿಕ್ಕರಾಮರಾಯರ ಶಿಷ್ಯ ಶ್ರೀ ಕೃಷ್ಣಮೂರ್ತಿಯವರಲ್ಲಿ ಬಾಲಕ ಅನಂತಸ್ವಾಮಿಗೆ ಸಂಗೀತಪಾಠ ಆರಂಭವಾಯಿತು. ಆದರೆ ಶಾಸ್ತ್ರೀಯ ಸಂಗೀತದಲ್ಲಿ ವರ್ಣದ ಪಾಠವಾಗುವ ವೇಳೆಗೆ ತಾತ ಚಿಕ್ಕರಾಮಯರು ದೈವಾಧೀನರಾದರು. ಮುಂದೆ ಅನಂತಸ್ವಾಮಿ ಪಲ್ಲಡಂ ನಾಗರಾಜರಾಯರ ಬಳಿ ಕೊಳಲಿನ ಅಭ್ಯಾಸ ಶುರು ಮಾಡಿದರು. ಅದರಲ್ಲಿ ವರ್ಣಪಾಠಕ್ಕೆ ಬರುವ ವೇಳೆಗೆ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಆರಂಭವಾಯಿತು. ಅಲ್ಲಿಗೆ ಶಾಸ್ತ್ರೀಯ ಸಂಗೀತದ ಕಲಿಕೆಗೆ ಪೂರ್ಣವಿರಾಮವಾಯಿತು.

ಆದರೆ ರಕ್ತಗತವಾಗಿ ಬಂದಿದ್ದ ಸಂಗೀತದ ಸೆಲೆ ಧಮನಿಧಮನಿಯಲ್ಲಿ ಹರಿಯುತ್ತಿತ್ತು. ತಾಯಿ ಕಮಲಮ್ಮನವರು ಹಾಡುತ್ತಿದ್ದ ಭಾವಪೂರ್ಣ ಗಾಯನ ಪ್ರಾಯಶಃ ಅನಂತಸ್ವಾಮಿಗೆ ಮೋಡಿ ಮಾಡಿರಬೇಕು. ಆ ಲಘುಶೈಲಿಯ ಗಾಯನ ಅನಂತಸ್ವಾಮಿ ಭಾವಗೀಥಾಗಾಯಕರಾಗಿ ಬೆಳೆಯಲು ಇಂಬುಗೊಟ್ಟಿರಬೇಕು. ಪಂಕಜ ಮಲ್ಲಿಕ್‌, ಸೈಗಲ್‌ರಂಥ ಮಹಾನ್‌ಗಾಯಕರ ಪ್ರಭಾವ, ಸ್ವಾತಂತ್ಯ್ರ ಚಳುವಳಿಯ ಕಾಲದಲ್ಲಿ ಏರ್ಪಾಡಾಗುತ್ತಿದ್ದ ದೇಶಭಕ್ತಿಗೀತೆಗಳ ಪ್ರಭಾವವೂ ಸೇರಿ ಅನಂತಸ್ವಾಮಿ ತನ್ನತನವನ್ನು ಗುರುತಿಸಿಕೊಂಡು ಬೆಳೆಯಲು ಅನುವು ಮಾಡಿಕೊಟ್ಟಿರಬೇಕು. ಅವರ ಬೆಳವಣಿಗೆಯ ಕಾಲದಲ್ಲಿ ಮೋಡಿಮಾಡಿದ ಚಿತ್ರ ಗೀತೆಗಳು ಹಲವಾರು. “ಅಮರ ಭೂಪಾಲಿ”, “ಬೈಜುಬಾವ್ರ”, “ಅನಾರ್ಕಲಿ” ಇತ್ಯಾದಿ ಇತ್ಯಾದಿ. ಎಷ್ಟೊಂದು ಉತ್ಕಂಠತೆಯಿಂದ ಕೊಳಲಿನಲ್ಲಿ ಆ ಚಿತ್ರಗೀತೆಗಳನ್ನು ನುಡಿಸುತ್ತಿದ್ದರೆಂದರೆ ಕೇಳುಗರನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತಿದ್ದರು. ಇದೇ ಸಮಯದಲ್ಲಿ ಆ ಕಾಲದ ಪ್ರಸಿದ್ಧ ಕವಿಗಳ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಎಚ್.ಎಸ್‌. ರಾಮಚಂದ್ರರ ಗಾಯನ ಪ್ರಭಾವವೂ ಅನಂತಸ್ವಾಮಿಯವರ ಮೇಲಾಯಿತು.

ಕೊಳಲಿನಿಂದ ಕೈ ಮ್ಯಾಂಡೊಲಿನ್‌ ಹಿಡಿಯಿತು. ತಬಲ, ಢೋಲಕ್‌, ಹಾರ್ಮೋನಿಯಂ ಎಲ್ಲದರ ಪರಿಚಯವಾಯಿತು ಕೈಗೆ. ಆದರೂ ಕಾಳಿಂಗರಾಯರ ಪರಿಚಯವಾಗುವವರೆಗೂ ಪ್ರಾಯಶಃ ತನ್ನ ನಿರ್ದಿಷ್ಟದಾರಿಯ ಬಗೆಗೆ ಅನಂತಸ್ವಾಮಿಯವರಿಗೇ ನೆಲೆಯಿರಿಲಿಲ್ಲವೆನಿಸುತ್ತದೆ. ಒಮ್ಮೆ ಮಹಾರಾಜ ಕಾಲೇಜಿನ ಸಮಾರಂಭವೊಂದರಲ್ಲಿ ಹಾಡಲು ಬಂದಿದ್ದ ಕಾಳಿಂಗರಾಯರ ಗಾಯನದ ಮೋಡಿಗೆ ಮರುಳಾದ ಅನಂತಸ್ವಾಮಿ ತಟ್ಟನೆ ತನ್ನ ದಾರಿಯನ್ನು ಗುರುತಿಸಿಕೊಂಡುಬಿಟ್ಟರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಯ್ಯ ಬೆಳಂದಿಂಗಲೇ, ಯಾರು ಹಿತವರು ನಿನಗೆ, ಎಂಥ ಗಾಯನದ ವೈಖರಿ. ಹಿಂದಿ ಚಿತ್ರಗೀತೆಗಳ ಮಾಧುರ್ಯಕ್ಕೆ ಮರುಳಾಗಿದ್ದ ಹುಡುಗ ಕನ್ನಡ ಗೀತೆಗಳಿಗೆ ಒಲಿದು ತನ್ನನ್ನು ತಾನೇ ಅರ್ಪಿಸಿಕೊಂಡುಬಿಟ್ಟ. ಅಂದೇ ತನ್ನ ದಾರಿ ತನಗೆ ನಿಚ್ಚಳವಾಯಿತೆಂದು ತಿಳಿದುಕೊಂಡ. ಕಾಳಿಂಗರಾಯರಿಂದ ನೇರ ಶಿಷ್ಯಗಿರಿ ಮಾಡದಿದ್ದರೂ  ಏಕಲವ್ಯನಂತೆ ಕಾಳಿಂಗರಾಯರನ್ನು ಗುರುವಾಗಿ ಸ್ವೀಕರಿಸಿದ ಹುಡುಗ ಅವರ ಹೆಜ್ಜೆಯನ್ನನುಸರಿಸಿ ನಡೆದ. ಹಾಗಾಗಿ ತನ್ನ ಗುರಿಯನ್ನು ಕಂಡುಕೊಂಡ ಹುಡುಗ, ಕಾಳಿಂಗರಾಯರಂತೆ ತಾನೂ ಕನ್ನಡ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ವಾದ್ಯದೊಂದಿಗೆ ಹಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಯ್ತು. ಅನಂತಸ್ವಾಮಿಯವರ ಮೊಟ್ಟಮೊದಲ ಕಾರ್ಯಕ್ರಮ ನಮ್ಮ ಕಾಲೇಜಿನ ಸಭಾಂಗಣ ಅಂದರೆ ಮಹಾರಾಜಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರಕವಿ ಕುವೆಂಪುರವರ ಸಮ್ಮುಖದಲ್ಲಿ ಅವರದೇ ಅಧ್ಯಕ್ಷತೆಯಲ್ಲಿ ಅವರ ರಚನೆಯ ಕೆಲವು ಕವಿತೆಗಳ ಹಾಡುಗಾರಿಕೆ. ಹಿರಿಯ ಕವಿಯ ಆಶೀರ್ವಾದದೊಂದಿಗೆ ಆರಂಭವಾದ ಕವಿತಾ ಗಾಯನ ಕಾರ್ಯಕ್ರಮದಿಂದ ಅನಂತಸ್ವಾಮಿಯವರ ಭಾಗ್ಯದ ಬಾಗಿಲು ತೆರೆಯಿತು. ದಾರಿ ನಿಚ್ಚಳವಾಯಿತು.

ಆದರೆ ಮಗನ ಈ ಪ್ರವೃತ್ತಿಯಿಂದ ತಂದೆಗೆ ಕಳವಳವಾಯಿತು. ಓದಿ, ವ್ಯಾಸಂಗ ಮಾಡಿ ಡಿಗ್ರಿ ಪಡೆದು, ಒಂದು ಕೆಲಸ ಹಿಡಿದು ಜೀವನವನ್ನು  ಸುಗಮವಾಗಿಸಿಕೊಳ್ಳುವ ಬದಲು, ಕೊಳಲು, ತಬಲ, ಹಾಡು, ಹಸೆ, ಆರ್ಕೆಸ್ಟ್ರಾ ಅಂತ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವನೆಂಬ ನೋವು. ಆದರೆ ಆ ನೋವು ಬಹಳ ದಿನ ಉಳಿಯಲಿಲ್ಲ. ಕಾಳಿಂಗರಾಯರ ದೆಸೆಯಿಂದಾಗಿಯೇ, ಮಗನ ಮೇಲಿದ್ದ ಒಂದು ರೀತಿಯ ಭಯ, ಕಳವಳ ಎಲ್ಲ ಹರಿದುಹೋಯಿತು. ಮಗನ ಮೇಲೆ ದೇವಿ ಸರಸ್ವತಿಯ ಆಶೀರ್ವಾದವಿದೆ ಎಂಬ ಅರಿವು ಆ ತಂಧೆಗೆ ಮೂಡಿತು.

ಆ ಪ್ರಸಂಗ ನಡೆದಿದ್ದು ಹೀಗೆ. ಕಾಳಿಂಗರಾಯರು “ಅಬ್ಬಾ ಆ ಹುಡುಗಿ” ಚಿತ್ರಕ್ಕೆ ಸಂಗೀತ ನಿರ್ದೇಶನ ಒಪ್ಪಿಕೊಂಡಿದ್ದರು. ಆ ವೇಳೆಗಾಗಲೇ ಅನಂತಸ್ವಾಮಿಗೆ ಹಲವು ಚಿತ್ರಗಳಿಗೆ ಕೊಳಲು, ಮ್ಯಾಂಡೊಲಿನ್‌ ನುಡಿಸಿದ ಅನುಭವವಿತ್ತು. ಹಾಗಾಗಿ ಈ ಚಿತ್ರಕ್ಕೂ ವಾದ್ಯ ಸಹಕಾರ ನೀಡಲು ಅನಂತ ಸ್ವಾಮಿಯವರಿಗೆ ಕರೆ ಹೋಯಿತು. ಅದೇ ಸಂಧರ್ಭದಲ್ಲೊಂದು ದಿನ, ಬಿಡುವಿನ ವೇಳೆಯಲ್ಲಿ, ಬೇಂದ್ರೆಯವರ “ಇಳಿದು ಬಾ ತಾಯಿ ಇಳಿದು ಬಾ” ಇವನಕ್ಕೆ ತಮ್ಮ ರಾಗ ಸಂಯೋಜನೆಯೊಂದಿಗೆ ಕಾಳಿಂಗರಾಯರ ಮುಂದೆ ಹಾಡಿ ತೋರಿಸಿದರು. ಕಾಳಿಂಗರಾಯರಿಗೆ ಅನಂತಸ್ವಾಮಿಯವರ ಆ ಕವಿತೆಯ ರಾಗ ಸಂಯೋಜನೆ ಬಹಳಷ್ಟು ಮೆಚ್ಚಿಗೆಯಾಗಿಹೋಯ್ತು. “ಅಯ್ಯಾ ದೊರೆ (ಮನೆಯಲ್ಲೂ ಅನಂತ ಸ್ವಾಮಿಯವರನ್ನು ದೊರೆಯೆಂದೇ ಕರೆಯುತ್ತಿದ್ದುದು ಮುದ್ದಿನಿಂದ) ತುಂಬ ಚೆನ್ನಾಗಿ ಟ್ಯೂನ್‌ ಮಾಡಿದ್ದೀಯಾ. ನಿನ್ನ ಈ ಟ್ಯೂನ್‌ ಎಷ್ಟು ಚೆನ್ನಾಗಿದೆ ಅಂದ್ರೆ, ಇನ್ನು ಮುಂದೆ ನನ್ನ ಕಾರ್ಯಕ್ರಮಗಳಲ್ಲಿ ನಾನೂ ಇದನ್ನು ಈ ಟ್ಯೂನಿನಲ್ಲೇ ಹಾಡ್ತೀನಿ”, ಎಂದು ಹಾಡಿ ಹೊಗಳಿದರು. ಮುಂದೆ ಒಂದು ದಿನ ಒಂದು ಸ್ವಾರಸ್ಯಕರ ಘಟನೆ ಸಂಭವಿಸಿತು. ಅಂದು ಏನೋ ಹಬ್ಬವಿರಬೇಕು. ಮನೆಮಂದಿಯೆಲ್ಲ ಕುಳಿತು ಅನಂತಸ್ವಾಮಿಯವರೊಟ್ಟಿಗೆ ರೇಡಿಯೋ ಕೇಳುತ್ತಿದ್ದಾರೆ. ಕಾಳಿಂಗರಾಯರ ಇನಿದನಿಯ ಕಂಠದಲ್ಲಿ ಕನ್ನಡ ಗೀತೆ ಶುರುವಾಯ್ತು. “ಇಳಿದು ಬಾ ತಾಯಿ” ಗೀತೆಯನ್ನು ಅನಂತಸ್ವಾಮಿ ಮಾಡಿದ ಟ್ಯೂನಿನಲ್ಲಿ ಹಾಡುತ್ತಿದ್ದಾರೆ ಕಾಳಿಂಗರಾಯರು. ಹಾಡನ್ನು ಕೇಳುತ್ತಿದ್ದವರೆಲ್ಲರಿಗೂ ಒಮ್ಮೆಲೇ ಮಿಂಚಿನ ಸಂಚಾರವಾದಂತಾಯ್ತು. ಕಾಳಿಂಗರಾಯರಂಥ ಮಹಾನ್‌ ಕಲಾವಿದ ತಮ್ಮ ಮಗ ದೊರೆಯ ಟ್ಯೂನ್‌ ಹಾಡುತ್ತಿದ್ದಾರೆ. ಆಗ ತಂದೆಗೆ ಅರ್ಥವಾಗಿಹೋಯ್ತು. ಮಗ ಸಾಮಾನ್ಯನೇನೂ ಅಲ್ಲ. ಮಗನ ಬದುಕು ಸಂಗೀತದ ಬದುಕೇ ಆದರೆ ಆಗಲಿ ಎಂದು ತೀರ್ಮಾನಿಸಿದ ತಂದೆ “ನೋಡು ದೊರೆ ನಿನಗೆ ಸಂಗೀತವೇ ಬದುಕೆಂದಾದರೆ ಅದನ್ನೇ ಮುಂದುವರಿಸು. ಇಲ್ಲ ಓದಿನ ಕಡೆ ಹೊರಳುವುದಾದರೆ ಅದೂ ಆಗಬಹುದು. ಎರಡಕ್ಕೂ ನನ್ನ ಆಶೀರ್ವಾದವಿದೆ” ಎಂದುಬಿಟ್ಟರು. ಮಗನಿಗೆ ಸ್ವರ್ಗ ಮೂರೇಗೇಣೆನಿಸಿಬಿಟ್ಟಿತು. ಅಂದೇ ಕಾಲೇಜು ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಾಗಿ ಹೋಯಿತು.

“ಅಬ್ಬಾ ಆ ಹುಡುಗಿ” ಚಲನಚಿತ್ರದ ಗೀತೆಗಳ ಧ್ವನಿ ಮುದ್ರಣಕ್ಕೆ ಮದ್ರಾಸಿಗೆ ಹೋದಾಗ ಕಾಳಿಂಗರಾಯರು ಅನಂತಸ್ವಾಮಿಯವರನ್ನು ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್‌ರವರಿಗೆ ಪರಿಚಯಿಸಿದರು. ಚಲನಚಿತ್ರ ಸಂಗೀತದ ರಾಗ ಸಂಯೋಜನೆಯ ಬಗೆಗೆ ಅನುಭವ ಪಡೆಯಲು ಅನಂತಸ್ವಾಮಿಯವರು ಮದ್ರಾಸಿನಲ್ಲೇ ಕೆಲಕಾಲ ನೆಲೆನಿಂತರು. ಅಲ್ಲಿ ಅವರಿಗೆ ಕೈತುಂಬ ಕೆಲಸ. ಹೊಟ್ಟೆ ಬಟ್ಟೆಗೆ ಕೊರತೆ ಇರಲಿಲ್ಲ. ಸಂಪಾದನೆ ಕೂಡ ತುಂಬಾ ಚೆನ್ನಾಗಿಯೇ ಆಗುತಿತ್ತು. ಹೆಸರಾಂತ ಹಲವಾರು ಸಂಗೀತ ನಿರ್ದೇಶಕರೊಡನೆ ಕೆಲಸ ಮಾಡುವ ಅವಕಾಶ. ಆದರೆ ಈ ಅವಕಾಶಗಳೆಲ್ಲ ಬರಿಯ ವಾದ್ಯಗಾರನ ಪಟ್ಟಕ್ಕೇ ಸೀಮಿತವಾಗಿ ಹೊಯ್ತು. ಸಂಪಾದನೆ ಚೆನ್ನಾಗಿದ್ದು ಸಾಕಷ್ಟು ಅವಕಾಶಗಳು ಬರುತ್ತಿದ್ದರೂ ಅನಂತಸ್ವಾಮಿಯವರಿಗೆ ತಾನೇನೋ ಕಳೆದುಕೊಳ್ಳುತ್ತಿರುವೆನೆಂಬ ಭಾವನೆ. ಅಂಥ ಸಮಯದಲ್ಲಿ ಮತ್ತೆ ಮದ್ರಾಸಿನಲ್ಲಿ ಕಾಳಿಂಗರಾಯರ ಭೇಟಿ. ಆಗ ಅನಂತಸ್ವಾಮಿಯವರು ರಾಯರಲ್ಲಿ ತಮ್ಮ ಮನದುಮ್ಮಳವನ್ನು ತೋಡಿಕೊಂಡರು. “ನೀನು ಮೊದಲು ಮದ್ರಾಸು ಬಿಟ್ಟು ಕರ್ನಾಟಕಕ್ಕೆ ಹಿಂದಿರುಗು. ಗಾಯಕನಾಗಿ ನೀನು ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೋ” ಎಂಬ ಆದೇಶ ಕಾಳಿಂಗರಾಯರಿಂದ ಬಂತು. ತನ್ನ ಮನದ ಇಂಗಿತವನ್ನೇ ಕಾಳಿಂಗರಾಯರೂ ನುಡಿದಿದ್ದರಿಂದ ಹಿಂದೂ ಮುಂದೂ ನೋಡದೆ ಅನಂತಸ್ವಾಮಿ ಮದ್ರಾಸಿಗೆ ಕೊನೆಯ ನಮಸ್ಕಾರ ಹಾಕಿ ಮೈಸೂರು ರೈಲು ಹತ್ತೇಬಿಟ್ಟರು.

ಅಂದು ಅನಂತಸ್ವಾಮಿನವರು ಆ ನಿರ್ಧಾರವನ್ನು ತೆಗೆದುಕೊಳ್ಳದಿರುತ್ತಿದ್ದರೆ ಇಂದು ನಮಗೆ ಆ ಗಂಧರ್ವಗಾಯಕ ವಾದ್ಯಗಳ ಮಧ್ಯೆ ಎಲ್ಲೋ ಕಳೆದುಹೋಗುತ್ತಿದ್ದರು. ಹಾಗಾಗದಿದ್ದುದು ಈ ನಾಡಿನ ಪುಣ್ಯ. ಈ ಜನತೆಯ ಪುಣ್ಯ. ಮೈಸೂರಿಗೆ ಬಂದ ಬಳಿಕ ಅನಂತಸ್ವಾಮಿಯವರು ಕರ್ನಾಟಕದ ಮೂಲೆ ಮೂಲೆಗೂ ಆಹ್ವಾನಿತರಾಗಿ ಹೋಗಿ ಕನ್ನಡ ಭಾವಗೀತೆಗಳ ಕಚೇರಿ ನೀಡತೊಡಗಿದರು. ಆ ಕಾಲದಲ್ಲಿ ಕಾಳಿಂಗರಾಯರು ಮತ್ತು ನಾನು ಮಾತ್ರ ಮೂರು ನಾಲ್ಕು ಘಂಟೆಗಳ ಭಾವಗೀತೆಗಳ  ಕಚೇರಿಯನ್ನು ಕೊಡುತ್ತಿದ್ದುದು. ಆ ಪಂಕ್ತಿಗೆ ಅನಂತಸ್ವಾಮಿಯವರೂ ಸೇರಿದರು ಹಾಗೂ ಅತ್ಯಂತ ಜನಪ್ರಿಯ ಗಾಯಕರೆನಿಸಿದರು. ಹೊಸ ಹೊಸ ರಾಗ ಸಂಯೋಜನೆ, ಹಲವಾರು ಯಶಸ್ವೀ ಕಾರ್ಯಕ್ರಮಗಳು. ಈ ಮಧ್ಯೆ ಕವಿತೆಗಳನ್ನು  ಕಲಿಯಬಂದವರಿಗೆ ಪಾಠ. ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿವರ್ಷದ ಯೂತ್‌ ಫೆಸ್ಟಿವಲ್‌ ಸ್ಪರ್ಧೆಗಾಗಿ ಹೊಸ ಹಾಡನ್ನು ಕಲಿಸುವ ಕೈಂಕರ್ಯ ಇವರದೇ. ಹಲವಾರು ಕಾಲೇಜಿನಲ್ಲಿ ಇದೇ ಕಾರಣಕ್ಕಾಗಿ ಆಹ್ವಾನ. ಒಂದೊಂದು ಆಹ್ವಾನವೂ ಅನಂತಸ್ವಾಮಿಯವರಿಗೆ ಒಂದೊಂದು ರೀತಿಯ ಸವಾಲೇ. ಪ್ರತಿಯೊಂದನ್ನೂ ಸ್ವೀಕರಿಸಿ ಯಶಸ್ವಿಯಾದರು.

ಇಂಥ ಅವರ ಗಾಯನದ ಮೋಡಿಯೇ ಮೈಸೂರಿನ ಶ್ರೀ ರಾಘವೇಂದ್ರ ರಾಯರ ಮಗಳು ಶಾಂತಾಳನ್ನು ಮರುಳು ಮಾಡಿದ್ದೆಂದರೆ ಆಶ್ಚರ್ಯವೇನಿಲ್ಲ. ಸುಶಿಕ್ಷಿತ ಹುಡುಗಿ ಶಾಂತ ಎಂ.ಎಸ್ಸಿ ಓದುತ್ತ ಟೈಪಿಂಗೂ ಕಲಿಯುತ್ತಿದ್ದವಳು. ಪರಸ್ಪರ ಪ್ರೀತಿಯ ಸೆಳೆತಕ್ಕೆ ಸಿಕ್ಕಿ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬಾಳಲಾರೆವು ಎನ್ನುವ ತೀರ್ಮಾನಕ್ಕೆ ಬಂದರು ಶಾಂತ ಹಾಗೂ ಅನಂತಸ್ವಾಮಿ. ಆದರೆ ಹುಡುಗಿಯ ತಂದೆ ವಾಸ್ತವವಾದಿ. “ಬರೀ ಹಾಡು ಹೇಳಿಕೊಂಡು ವಾದ್ಯನುಡಿಸುತ್ತ ಬದುಕು ಮಾಡುವವನಿಗೆ ಜೀವನದ ದಾರಿ ಸುಗಮವಲ್ಲ. ಅಂಥವನಿಗೆ ಹೇಗೆ ಹೆಣ್ಣು ಕೊಡೋದೂ? ಯಾವುದಾದರೊಂದು ಸರ್ಕಾರಿ ಕೆಲಸ ಹಿಡಿದರೆ ಅಂಥವನಿಗೆ ಮಗಳನ್ನು ಕೊಡಲು ಅಡ್ಡಿಯಿಲ್ಲ” ಎಂದು ಬಿಟ್ಟರು ರಾಘವೇಂದ್ರರಾಯರು. ಹಾಗಾಗಿ ಅನಂತಸ್ವಾಮಿ ಪ್ರೇಮದಲ್ಲೂ ವಿಜಯ ಸಾಧಿಸಬೇಕೆಂದರೆ ಕೆಲಸ ಹಿಡಿಯುವುದು ಅನಿವಾರ್ಯವಾಯ್ತು. ಸ್ನೇಹಿತರ ಸಲಹೆಯಂತೆ ಅನಂತಸ್ವಾಮಿ ಎಲ್‌.ಆರ್‌.ಡಿ.ಇ. ಸಂಸ್ಥೆಗೆ ಅರ್ಜಿ ಹಾಕಿದರು. ಆ ಸಂಶ್ಥೆಯ ನಿರ್ದೇಶಕರು ಬ್ರಿಗೇಡಿಯರ್ ಚಕ್ರವರ್ತಿ. ಅವರಿಗೆ ಇವರ ಸಂಗೀತ ಮೆಚ್ಚಿಗೆಯಾಯ್ತು. ಕೆಲಸದ ಆರ್ಡರ್ ಕೂಡಲೆ ಕೊಟ್ಟೇಬಿಟ್ಟರು. ಅನಂತಸ್ವಾಮಿಯವರು ಪ್ರೀತಿಸಿದ ಹುಡುಗಿ ಶಾಂತ ಮನತುಂಬಿದಾಕೆ, ಮನೆಯನ್ನೂ ತುಂಬಿದಳು. ಪ್ರೇಮದ ಮಡದಿಯಾದಳು.

ಮೈಸೂರಿನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿತು. ಆಫೀಸ್‌ ಕೆಲಸದ ಜೊತೆಗೆ, ದಿನಕ್ಕೊಂದು ಕಡೆ ಸುಗಮ ಸಂಗೀತದ ಕಾರ್ಯಕ್ರಮ. ಅಭಿಮಾನಿಗಳ ಮಹಾಪೂರ ದಿನದಿನಕ್ಕೂ ಬೆಳೆಯಿತು. ಗಾಯಕ, ಗಾಯಕಿಯರಿಗೆ ನಿರ್ವ್ಯಾಜ್ಯ ಪ್ರೀತಿಯಿಂದ ಸುಗಮ ಸಂಗೀತದ ಪಾಠ. ಅನಂತಸ್ವಾಮಿಯವರೂ ಬೆಳೆಯುತ್ತ ಯುವ ಕಲಾವಿದರನ್ನೂ ಬೆಳೆಸಿದರು. ಇಲ್ಲಿ ಒಂದು ಮಾತನ್ನು ಹೇಳಲೇಬೇಕು.  ಬೆಂಗಳೂರಿನಲ್ಲಿ ಅನಂತಸ್ವಾಮಿಯವರು ಮುಗಿಲೆತ್ತರಕ್ಕೆ ಬೆಳೆಯಲು ಮುಖ್ಯವಾಗಿ ‘ಪ್ರಭಾತ್‌ ಕಲಾವಿದರು’ ಸಂಸ್ಥೆ ಹಾಗೂ ಎಂ.ಎಸ್‌.ಐ.ಎಲ್‌. ಕಾರ್ಯಕ್ರಮಗಳು ಬಹಳ ಸಹಕಾರಿಯಾದವು. ಯಾವುದೇ ಒಂದು ವ್ಯಕ್ತಿ ಬೆಳೆಯಲು ಯೋಗ್ಯತೆಯ ಜೊತೆಗೆ ಪ್ರಚಾರವೂ ಇದ್ದರೆ ಬಹಳ ಬೇಗೆ ಜನಮನವನ್ನು ಮುಟ್ಟುತ್ತದೆ. ಎಂ.ಎಸ್‌. ಐ.ಎಲ್‌.  ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ಅನಂತಸ್ವಾಮಿಯವರ ಜೀವನದಲ್ಲೇ ಅದೊಂದು ಮೈಲಿಗಲ್ಲಾಯಿತು.

ಭಾವಗೀತೆಗಳಿಗಷ್ಟೇ ರಾಗ ಸಂಯೋಜಿಸುತ್ತಿದ್ದ ಅನಂತಸ್ವಾಮಿಯವರಿಗೆ “ಪ್ರಭಾತ್‌ ‌ ಕಲಾವಿದರು” ಸಂಸ್ಥೆಯಿಂದಾಗಿ ನೃತ್ಯ ನಾಟಕಗಳಿಗೆ ಸಂಗೀತ ಸಂಯೋಜಿಸುವ ಅವಕಾಶ ದೊರೆತು ಇಲ್ಲೂ ಅವರು ತಮ್ಮ ಪ್ರತಿಭೆಯನ್ನು ಮೆರೆದರು. ಇಂದಿಗೂ ಕಿಂದರಿ ಜೋಗಿ, ಪುಣ್ಯಕೋಟಿ, ಸಿಂಡ್ರೆಲಾ, ಲವಕುಶ, ಧರ್ಮಭೂಮಿ, ಕರ್ನಾಟಕ ವೈಭವ ಇತ್ಯಾದಿ ಸಾವಿರಾರು ಪ್ರದರ್ಶನಗಳನ್ನು ಕಂಡರೂ ಇನ್ನೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ನೃತ್ಯ ರೂಪಕಗಳು.

ಇಷ್ಟೆಲ್ಲಾ ಯೋಗ್ಯತೆ ಇದ್ದ ಇಂಥ ಅಪ್ರತಿಮ ಪ್ರತಿಭೆಯುಳ್ಳ ಕಲಾವಿದ ಆಕಾಶವಾಣಿಯ ಅಡಿಷನ್‌ನಲ್ಲಿ ಅನುತ್ತೀರ್ಣನಾದದ್ದು ವಿಪರ್ಯಾಸವೇ ಸರಿ. ಅನಂತಸ್ವಾಮಿಯವರು ಇದರಿಂದ ತುಂಬ ನೊಂದಿದ್ದರು. ಈ ವಿಷಯ ಆಗ ಆಕಾಶವಾಣಿಯಲ್ಲೇ ಕೆಲಸ ಮಾಡುತ್ತಿದ್ದ ಎನ್‌.ಎಸ್‌. ಕೃಷ್ಣಮೂರ್ತಿಯವರಿಗೆ ತಿಳಿಯಿತು. ಅವರು ಅನಂತಸ್ವಾಮಿಯವರ ಅಭಿಮಾನಿ. ಹಾಗಾಗಿ ಅದಕ್ಕೊಂದು ಪರಿಹಾರ ಹುಡುಕಿದರು. ಒಂದು ಛೇಂಬರ್ ಕಚೇರಿಯನ್ನು ಗೊತ್ತು ಮಾಡಿದರು. ಅದಕ್ಕೆ ಮುಖ್ಯವಾಗಿ ಆಗ ಆಕಾಶವಾಣಿಯ ನಿರ್ದೇಶಕರಾಗಿದ್ದ ಎ.ಎಂ. ನಟೇಶರವರನ್ನೇ ಆಹ್ವಾನಿಸಿದ್ದರು. ಅವರ ಮುಂದೆ ಗಾಯಕ ಅನಂತಸ್ವಾಮಿ ಹಾಡಿದರು. ನಟೇಶ್‌ರವರಿಗೆ ತುಂಬಾ ಸಂತೋಷವಾಯಿತು. “ಎಲ್ಲಿ ಆಕಾಶವಾಣಿಯಲ್ಲಿ ಹಾಡುವುದಿಲ್ಲವೇನು?” ಎಂದರು. ಆಗ ನಡೆದ ‘ಆಡಿಷನ್‌’ ಪ್ರಸಂಗ ಅವರ ಕಿವಿ ಮುಟ್ಟಿತು. ಆಗ ಅಂದು ಅನಂತಸ್ವಾಮಿಯವರು ಹಾಡಿದ ಸಭಾಕಾರ್ಯಕ್ರಮದ ಧ್ವನಿ ಮುದ್ರಣದ ಆಧಾರದ ಮೇಲೆ ಆಕಾಶವಾಣಿಯ ಅಂಗೀಕೃತ ಕಲಾವಿದರಾಗಿ ಆಕಾಶವಾಣಿ ಅವರನ್ನು ಪರಿಗಣಿಸಲು ನಿರ್ದೇಶಕರದ ಎ.ಎಂ. ನಟೇಶ್‌ ಹಾಗೂ ಎನ್‌.ಎಸ್‌. ಕೃಷ್ಣಮೂರ್ತಿಯವರು ಕಾರಣರಾದರು.

ಅನಂತಸ್ವಾಮಿಯವರು ಅತ್ಯಂತ ಪ್ರತಿಭಾವಂತ ಗಾಯಕ. ಇವರ ಸಂಗೀತ ಸಂಯೋಜನೆಯ ರೀತಿಯೂ ವೈವಿಧ್ಯಮಯವೇ ಡಾ.ಜಿ.ಎಸ್‌.ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು’ಗೀತೆಯನ್ನು ಅಮರವಾಗಿಸಿದ್ದಾರೆ. ಏನದರ ರಾಗ, ಏನದರ ಯೋಗ ಎನ್ನಿಸುತ್ತದೆ. ಅವರ ಕಲ್ಪನೆಯ ಮೂಸೆಯಿಂದ ರಾಗದುಡುಗೆಯನ್ನು ಕೊಟ್ಟು ಬಂದ ಗೀತೆಗಳಿಗೆ ಲೆಕ್ಕವಿಲ್ಲ. ವಚನಗಳು, ದೇವರನಾಮಗಳು, ವಿಡಂಬನಾತ್ಮಕ ಗೀತೆಗಳು, ನವ್ಯಕವನಗಳು ಎಲ್ಲವೂ ಅವರ ಬತ್ತಳಿಕೆಯಲ್ಲಿವೆ. “ಎದೆ ತುಂಬಿ ಹಾಡಿದೆನು” ಗೀತೆಯ ರಾಗ ಸಂಯೋಜಕ “ಕುರಿಗಳು ಸಾರ್ ಕುರಿಗಳು” ಗೀತೆಯನ್ನೂ ಅಷ್ಟೆ ಯಶಸ್ವಿಯಾಗಿ ಹಾಡಿದನೆಂದರೆ ಅವನೆಂಥ ಸೃಷ್ಟ್ಯಾತ್ಮಕ ಕಲಾವಿದನಾಗಿರಬೇಕು?. ನವೋದಯ ನವ್ಯ  ಎಲ್ಲಕ್ಕೂ ಸೈ. ಜೊತೆಗೆ ರತ್ನನ ಪದಗಳಿಗೂ ಸಂಗೀತದ ಸುಂದರ ಕವಚ. ಈತ ಇಂಥ ಕವನಗಳಿಗೆ ರಾಗ ಸಂಯೋಜಿಸಲಾರ ಎಂದು ಹೇಳುವಂತೆಯೇ ಇಲ್ಲ. ಎಲ್ಲ ರೀತಿಯ  ಕವನಗಳೂ ಸಂಯೋಜನೆಯಲ್ಲಿ ಸಾರ್ಥಕತೆ ಪಡೆದವು.

ಸುಗಮ ಸಂಗೀತ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಗೆ ಅಡಿಪಾಯ ಹಾಕಿದವರು ಅನಂತಸ್ವಾಮಿಯವರು. ಅದರ ಪ್ರೇರಣೆ ಪ್ರೊ. ನಿಸಾರ್ ಅಹಮದ್‌ರವರಿಂದ. ಇದನ್ನು ಕ್ಯಾಸೆಟ್‌ ಕ್ರಾಂತಿಯೆಂದೇ ಕರೆಯಬಹುದು. ನಿಸಾರ್ ಅಹಮದ್‌ರವರ ಕವಿತೆಗಳನ್ನೊಳಗೊಂಡ ‘ನಿತ್ಯೋತ್ಸವ’ ಕ್ಯಾಸೆಟ್‌ ಕನ್ನಡ ಭಾವಗೀತೆಗಳ ಮೊಟ್ಟಮೊದಲ ಕ್ಯಾಸೆಟ್‌. ಇದು ಭಾವಗೀತಾ ವಲಯದಲ್ಲೇ ಒಂದು ವಿಕ್ರಮವೆಂದು ಹೇಳಬಹುದು. ಅದರ ಕೀರ್ತಿ ನಿಸಾರ್ ಅಹಮ್ಮದ್‌ ಹಾಗೂ ಅನಂತಸ್ವಾಮಿಯವರಿಗೆ ಸಲ್ಲಬೇಕು. ಇದರಿಂದಾಗಿ ಕವಿ, ಗಾಯಕ ಇಬ್ಬರೂ ಮನೆಮನೆಯನ್ನೂ ಮುಟ್ಟಿದರು. ಮನಮನಗಳನ್ನೂ ತಟ್ಟಿದರು. ಕರ್ನಾಟಕದಲ್ಲಿ ‘ಜೋಗದ ಸಿರಿ ಬೆಳಕಿನಲ್ಲಿ’, ‘ಬೆಣ್ಣೆ ಕದ್ದ ನಮ್ಮ ಕೃಷ್ಣ’, ‘ಕುರಿಗಳು ಸಾರ್ ಕುರಿಗಳು’ ಗೀತೆಗಳನ್ನು ಹಾಡದವರಾರು? ಚಿತ್ರಗೀತೆಗಳ ಪ್ರಾಬಲ್ಯವನ್ನೂ ಮೀರಿ ನಿಂತ ಕ್ಯಾಸೆಟ್‌ ಈ ‘ನಿತ್ಯೋತ್ಸವ’. ಇದರ ನಂತರ ಕ್ಯಾಸೆಟ್‌ ಯುಗವೇ ಪ್ರಾರಂಭವಾಯ್ತು. ಆದರೆ ಅದಕ್ಕೆ ನಾಂದಿಯನ್ನು ಹಾಡಿದವರು ಅನಂತಸ್ವಾಮಿಯವರು.

‘ನಿತ್ಯೋತ್ಸವ’ ಕ್ಯಾಸೆಟ್ಟಿನ ಯಶಸ್ಸಿನಿಂದಾಗಿ ಅನಂಥಸ್ವಾಮಿಯವರು ಇನ್ನೂ ಹಲವಾರು ಕ್ಯಾಸೆಟ್‌ಗಳನ್ನು ಮಾರುಕಟ್ಟೆಗೆ ತಂದರು. ಭಾವಸಂಗಮ, ಕೆಂದಾವರೆ, ನಾಕುತಂತಿ, ದುಂದುಭಿ, ತಾರಕ್ಕ ಬಿಂದಿಗೆ, ದೀಪೋತ್ಸವ, ಹೇಳ್ತೀನಿ ಕೇಳ್ಳಿ, ಸುಮಧುರ ಇತ್ಯಾದಿ ಇತ್ಯಾದಿ ಧ್ವನಿಸುರುಳಿಗಳು ಅವರ ಹೆಸರನ್ನು ಚಿರಂತನವಾಗಿಸುತ್ತ ನಿಂತಿವೆ. ಎಲ್ಲ ಧ್ವನಿಸುರುಳಿಗಳ ಹಾಡುಗಳನ್ನೂ ಅವರೊಬ್ಬರೇ ಹಾಡಿಲ್ಲ. ಅನೇಕ ಯುವಕಲಾವಿದರಿಗೂ ಹಾಡಲು ಅವಕಾಶ ಮಾಡಿಕೊಟ್ಟು, ಅವರುಗಳಿಂದಲೂ ಗೀತೆಗಳನ್ನು ಹಾಡಿಸಿರುವುದು, ಅನಂತಸ್ವಾಮಿಯವರ ಹೃದಯ ವೈಶಾಲತ್ಯಗೆ ಸಾಕ್ಷಿಯಾಗಿದೆ. ಅವರ ದೆಸೆಯಿಂದಾಗಿ ಅನೇಕ ಪ್ರತಿಭಾವಂತರು ಬೆಳಕಿಗೆ ಬರುವಂತಾಯ್ತು.

ಇವರ ಪ್ರತಿಭೆಗಾಗಿ ಇವರಿಗೆ ಅನೇಕ ಸನ್ಮಾನ ಹಾಗೂ ಪ್ರಶಸ್ತಿಗಳು ದೊರೆತಿವೆ. ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಕಲಾತಿಲಕ ಬಿರುದು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಅಮೆರಿಕೆಯ ನೆಲದಲ್ಲಿ ಕನ್ನಡದ ಕಂಪನ್ನು ಹರಡಿದ ಈತನಿಗೆ ಅನಂತಭಾವ ಚಕ್ರವರ್ತಿ, ಗಾನಗಾರುಡಿಗ ಎಂದೆಲ್ಲಾ ಕೊಂಡಾಡಿಬಿಟ್ಟರು. ಕೊಲ್ಲಿರಾಷ್ಟ್ರಗಳಲ್ಲೂ ಇವರು ಕನ್ನಡದ ಪರಿಮಳವನ್ನು ಬೀರಿಬಂದವರು.

ಅನಂತಸ್ವಾಮಿಯವರ ಸ್ನೇಹಪರತೆಯ ಬಗ್ಗೆ ಒಂದು ಮಾತನ್ನು ಹೇಳಲೇಬೇಕು. ನನಗೂ, ನನ್ನ ಪತಿ ಎಸ್‌.ಜಿ. ರಘುರಾಂರವಿಗೂ ಬಹಳ ಬೇಕಾದ ವ್ಯಕ್ತಿ ಅನಂತಸ್ವಾಮಿಯವರು. ಮೈಸೂರಿನಲ್ಲಿ ನಾವು ಅವರು ಕೂಡಿ ಹುಟ್ಟು ಹಾಕಿದ ಸುಗಮ ಸಂಗೀತದ ಏಳಿಗೆಗೇ ಮೀಸಲಾದ ಸಂಸ್ಥೆ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌. ಅದನ್ನು ೧೯೮೫ರಿಂದ ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಆ ಸಂಸ್ಥೆಗೆ ಅನಂತಸ್ವಾಮಿಯವರು ಹಾಡಲು ನಾಲ್ಕು ಬಾರಿ ಬಂದಿದ್ದಾರೆ. ಆ ಮಹಾಕಲಾವಿದನಿಗೆ ಸುಗಮ ಸಂಗೀತಸಿರಿ ಎಂಬ ಬಿರುದನ್ನಿತ್ತು ಗೌರವಿಸಿದೆ ನಮ್ಮ ಸಂಸ್ಥೆ. ಅವರ ಕಾರ್ಯಕ್ರಮವೆಂದರೆ ಜಗನ್ಮೋಹನ ಅರಮನೆಯ ಸಭಾಂಗಣದ ತುಂಬ ಕಿಕ್ಕಿರಿದು ನೆರೆದ ಶ್ರೋತೃವೃಂದ. ಅಂಥ ಮಹಾನ್‌ಗಾಯಕ ಯಾವೊಂದು ಕಾರ್ಯಕ್ರಮಕ್ಕೂ ನಮ್ಮಿಂದ ಎಂದೂ ಒಂದು ಪೈಸೆಯನ್ನೂ ತೆಗೆದುಕೊಂಡಿಲ್ಲ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ಬಲವಂತ ಮಾಡಿದರೆ “ರಘು ಆ ಹಣಾನ ನಿಮ್ಮ ಅಕಾಡೆಮಿಗೆ ಹಾಕಿಕೊಂಡು ಬಿಡು” ಎನ್ನುತ್ತಿದ್ದ ಸ್ನೇಹಿತ.

ಅವರು ಸಂಗೀತ ನೃತ್ಯ ಅಕಾಡೆಮಿಗೆ ಸದಸ್ಯರಾಗಿದ್ದ ಕಾಲದಲ್ಲೇ ಅಕಾಡೆಮಿ ಸುಗಮ ಸಂಗೀತಕ್ಕೂ ಪ್ರಶಸ್ತಿಯನ್ನು ನೀಡಬೇಕೆಂದು ಹೊಡೆದಾಡಿ, ಅದರಲ್ಲಿ ಯಶಸ್ವಿಯಾದದ್ದು. ೧೯೮೧-೧೯೮೨ರ ಮೊಟ್ಟ ಮೊದಲ ಪ್ರಶಸ್ತಿ ನನ್ನ ಪಾಲಿಗೆ ಬಂದಿದೆಯೆಂದು ನನಗೆ ಪತ್ರ ಬರೆದವರೂ ಅವರೇ.

ಇಂಥ ಈ ಸರಳ ಸುಂದರ ಕಲಾವಿದ. ಹೀಗೇ ಇನ್ನೂ ಅನೇಕ ವರ್ಷಗಳು ಹಾಡುತ್ತ ಹಾಡುತ್ತ ಶತಾಯುಷಿ ಆಗಬೇಕಿತ್ತು. ಆದರೆ ವಿಧಿಯ ವಿಪರ್ಯಾಸ. ಸಿರಿಕಂಠದ ಕೋಗಿಲೆಗೆ ವಿಧಿ ಕಂಠವನ್ನು ಕಿತ್ತುಕೊಂಡು ಬಿಡಬೇಕೆ! ಕೊನೆಗಾಲದಲ್ಲಿ, ವಿಧಿಯ ವಿಕಟಾಟ್ಟಹಾಸದ ಮುಂದೆ ಮಾನವ ಏನು ಮಾಡಬಲ್ಲ. ಗಂಟಲಿನ ಕ್ಯಾನ್ಸರ್ ಗೆ ಬಲಿಯಾದ ಜೀವ ೧೯೯೫ರ ಜನವರಿ ೯ರಂದು ತನ್ನ ಕೊನೆಯುಸಿರನ್ನೆಳೆಯಿತು. ಆದರೆ ಅನಂತಸ್ವಾಮಿಯವರು ಬಿಟ್ಟು ಹೋದ ಪರಂಪರೆ ಜೀವಂತವಾಗಿ ನಮ್ಮ ನಡುವೆ ಚಿರಂತವಾಗಿರುತ್ತದೆ. ಅವರ ಪರಂಪರೆಯನ್ನು ಬೆಳೆಸಲು ಅವರ ಮಕ್ಕಳು, ಶಿಷ್ಯಕೋಟಿ ಕರ್ನಾಟಕದ ಉದ್ದಗಲಕ್ಕೂ ಆವರಿಸಿಕೊಂಡಿದ್ದಾರೆ. ಕಲಾವಿದನಿಗೆ ಸಾವಿಲ್ಲ ಎನ್ನುವುದಕ್ಕೆ ಈ ಪರಂಪರೆಯ ಸಾಕ್ಷಿ.