ಕೊಳ್ಳೆಗಾಲ ತಾಲ್ಲೂಕಿನ ಮುಡಿಗುಂಡಂನಲ್ಲಿ ೨೮-೮-೧೯೩೦ ರಂದು ಜನಿಸಿದ ಮಹದೇವಪ್ಪನವರ ತಂದೆ ಸುಬ್ಬಪ್ಪನವರು ಹಾರ್ಮೋನಿಯಂ ವಿದ್ವಾಂಸರಾಗಿದ್ದು ಅನೇಕ ನಾಟಕಗಳಿಗೆ ವಾದ್ಯ ಸಹಕಾರ ನೀಡುತ್ತಿದ್ದರು. ಈ ಪ್ರವೃತ್ತಿಯೇ ಬಾಲಕ ಮಹದೇವಪ್ಪನವರಲ್ಲೂ ಪ್ರಭಾವ ಬೀರಿತು. ರಂಗಭೂಮಿಯ ಸೆಳೆತ ಆದಮ್ಯವಾಗಿ ನಾಟಕದಲ್ಲಿ ಪಾತ್ರವಹಿಸಲು ಬೇಕಾಗುವಷ್ಟು ಸಂಗೀತವನ್ನು ಸಿದ್ಧಶೆಟ್ಟಿಯವರಿಂದ ಕಲಿತು  ಗಾಯಕ ನಟನಾಗಿ ಪಾತ್ರವಹಿಸಿದರು. ನಂತರ ಎಂ.ಡಿ. ನಾರಾಯಣಸ್ವಾಮಿ ಅವರಲ್ಲಿ ಪಿಟೀಲನ್ನು ಟಿ. ಪುಟ್ಟಸ್ವಾಮಯ್ಯನವರಲ್ಲಿ ಗಾಯನವನ್ನೂ ಅಭ್ಯಾಸ ಮಾಡಿದರು. ಪಿಟೀಲು ವಾದನದಲ್ಲಿ ಅದ್ವಿತೀಯ ಸಾಧನೆ ಮಾಡಿ ಪಿಟೀಲು ಮಹದೇವಪ್ಪ ಎಂದೇ ಖ್ಯಾತರಾದರು.

ಆಕಾಶವಾಣಿ – ದೂರದರ್ಶನ ಮಾಧ್ಯಮಗಳಲ್ಲಿ ಇವರ ತನಿ ವಾದನವೂ ಪುತ್ರರಾದ ಎಂ. ನಾಗರಾಜ್‌, ಡಾ||ಎಂ. ಮಂಜುನಾಥ್‌ ಅವರೊಡನೆ ನುಡಿಸುವ ಪಿಟೀಲು ತ್ರಯ ಕಾರ್ಯಕ್ರಮಗಳೂ ಜನಪ್ರಿಯವಾಗಿ ನಡೆಯುತ್ತಿರುತ್ತವೆ. ನಾಡಿನಲ್ಲೂ ಹೊರ ನಾಡುಗಳಲ್ಲಿಯೂ ಅಸಂಖ್ಯ ಕಛೇರಿಗಳನ್ನು ನಡೆಸಿರುವ ಹಿರಿಮೆಗೆ ಪಾತ್ರರು. ಪಕ್ಕವಾದ್ಯಗಾರರಾಗಿಯೂ, ತನಿವಾದಕರಾಗಿಯೂ ಇವರ ಕೊಡುಗೆ ಮಹತ್ತರವಾದುದು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ವಿಭಾಗದಲ್ಲಿ ಪಿಟೀಲು ಅಧ್ಯಾಪಕರಾಗಿ ಕಾಲು ಶತಮಾನ ಕಾಲ ಸೇವೆ ಸಲ್ಲಿಸಿದ್ದಾರೆ. ಮೈಸೂರಿನ ಜೆ.ಎ.ಎಸ್‌.ಎಸ್‌. ಸಂಸ್ಥೆ ನಡೆಸುವ ಸಂಗೀತ ಸಮ್ಮೇಳನದಲ್ಲಿ ಇವರ ಪಾತ್ರ ಹಿರಿದಾದುದು. ಹಾಗೆಯೇ ಅನೇಕ ಸಂಘ-ಸಂಸ್ಥೆಗಳೊಡನೆ ಸಂಪರ್ಕವಿರಿಸಿಕೊಂಡು ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವಾ ನಿರತರಾಗಿದ್ದಾರೆ.

‘ರಾಜ್ಯೋತ್ಸವ ಪ್ರಶಸ್ತಿ’, ‘ಚೌಡಯ್ಯ ಸ್ಮಾರಕ ಪ್ರಶಸ್ತಿ’, ಮೈಸೂರಿನ ದತ್ತಪೀಠದ’ ಆಸ್ಥಾನ ವಿದ್ವಾನ್‌’, ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತದಲ್ಲಿ ಶ್ರೀಯುತರು ಸಲ್ಲಿಸಿರುವ ಸೇವೆಗಾಗಿ ಸನ್ಮಾನ; ಜೆ.ಎಸ್‌.ಎಸ್‌. ಸಭೆಯ ರಾಷ್ಟ್ರೀಯ ಸಂಗೀತ ಸಮ್ಮೇಳನಾಧ್ಯಕ್ಷರಾಗಿ ‘ಸಂಗೀತ ವಿದ್ಯಾನಿಧಿ’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಹೀಗೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿರುವ ಮಹದೇವಪ್ಪನವರು ಮೈಸೂರಿನ ಎಲ್ಲಾ ವೀರಶೈವ ಮಠಗಳಿಂದಲೂ ಗೌರವಿಸಲ್ಪಟ್ಟಿದ್ದಾರೆ.