ಮಂಡ್ಯಜಿಲ್ಲೆ

ಮೈಸೂರಿನ ಉತ್ತರಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಕೃಷ್ಣರಾಜ ಸಾಗರ ಅಣೆಕಟ್ಟು ಮೈಸೂರು ನಗರಕ್ಕೆ ಸಮೀಪದಲ್ಲಿದೆ.

ಕೃಷ್ಣರಾಜಸಾಗರ ಅಣೆಕಟ್ಟು

ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ೧೯೨೪ರಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಲಾಯಿತು. ಅಂದಿನ ದಿವಾನರಾಗಿದ್ದ ಭಾರತರತ್ನ ಡಾ. ಸರ್‌ಎಂ. ವಿಶ್ವೇಶ್ವರಯ್ಯರವರು ಮುಖ್ಯ ಅಭಿಯಂತರರಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡವರು. ಅಂದಿನ ಮೈಸೂರು ರಾಜ್ಯದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಹೆಸರಿನಲ್ಲಿ ಅಣೆಕಟ್ಟು ಹೆಸರಿಸಲಾಯಿತು.

 

ಶ್ರೀರಂಗಪಟ್ಟಣ

ಮೈಸೂರಿನಿಂದ ದೂರ: ೧೯ ಕಿ.ಮೀ.

ಶ್ರೀರಂಗಪಟ್ಟಣ ತಾಲ್ಲೂಕು ಕೇಂದ್ರವಾಗಿದ್ದು ಮೈಸೂರಿಗೆ ೧೯ ಕಿ.ಮೀ. ದೂರದಲ್ಲಿದೆ. ಇದು ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು ಇಲ್ಲಿ ಹಿಂದು ಹಾಗೂ ಮುಸಲ್ಮಾನ ರಾಜರ ಆಳ್ವಿಕೆಯನ್ನು ಪ್ರತಿಬಿಂಬಿಸುವ ಅನೇಕ ಸ್ಮಾರಕಗಳು ಇವೆ. ಪಟ್ಟಣವು ಸುತ್ತಲೂ ಕಾವೇರಿ ನದಿಯಿಂದ ಆವರಿಸಲ್ಪಟ್ಟಿದ್ದು ದ್ವೀಪವಾಗಿ ನಿರ್ಮಿಸಲ್ಪಟ್ಟಿದೆ. ೯ನೇ ಶತಮಾನದಲ್ಲಿ ಗಂಗರ ಆಳ್ವಿಕೆಯಲ್ಲಿ ಕಟ್ಟಲಾದ ಶ್ರೀರಂಗನಾಥಸ್ವಾಮಿ ದೇವಾಲಯವು ವಿಜಯನಗರ ಮತ್ತು ಹೊಯ್ಸಳ ಶೈಲಿಯ ಕೆತ್ತನೆಗೆ ಸಾಕ್ಷಿಯಾಗಿದೆ.

ಶ್ರೀರಂಗಪಟ್ಟಣವು ಹೈದರಾಲಿ ಮತ್ತು ಟಿಪ್ಪುಸುಲ್ತಾನರ ರಾಜಧಾನಿಯಾಗಿತ್ತು. ಇಂಡೋ ಇಸ್ಲಾಮಿಕ್‌ಸ್ಮಾರಕಗಳು ಇವರ ಆಡಳಿತ ಕಾಲದಲ್ಲಿ ನಿರ್ಮಿಸಲ್ಪಟ್ಟಿವೆ. ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ, ದರಿಯಾ ದೌಲತ್‌, ಜುಮ್ಮಾ ಮಸೀದಿಗಳು, ಗಾರ್ಡನ್‌, ಕೋಟೆ ಇಲ್ಲಿನ ಆಕರ್ಷಣೆಗಳು.

 

ಚಾಮರಾಜನಗರ ಜಿಲ್ಲೆ

ಶಿವನಸಮುದ್ರ

ಮೈಸೂರಿನ ಟಿ ನರಸೀಪುರದ ತಲಕಾಡಿನ ಸಮೀಪ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶಿವನಸಮುದ್ರ, ಗಗನಚುಕ್ಕಿ, ಭರಚುಕ್ಕಿ, ಪ್ರೇಕ್ಷಣೀಯ ಸ್ಥಳಗಳಿವೆ.

 

ಶಿವನಸಮುದ್ರ

ತಲಕಾಡಿನಿಂದ ದೂರ: ೨೦ ಕಿ.ಮೀ.

ಶಿವನ ಸಮುದ್ರದ ಪ್ರಾಚೀನ ದೇವಾಲಯಗಳು ಶೈವ, ವೈಷ್ಣವ ಮತ್ತು ಶಕ್ತಿ ಪಂಥಗಳ ಪ್ರತೀಕ, ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ವೆಸ್ಲಿ ಸೇತುವೆಯು ಹಿಂದಿನ ಇಂಜಿನಿಯರಿಂಗ್‌ಕೌಶಲಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕಾವೇರಿ ನದಿಯು ಶಿವನಸಮುದ್ರ ದ್ವೀಪ ಪಟ್ಟಣದಲ್ಲಿ ಗಗನಚುಕ್ಕಿ-ಭರಚುಕ್ಕಿ ಎರಡು ಅವಳಿ ಜಲಪಾತಗಳಾಗಿ ಕೆಳಕ್ಕೆ ಧುಮ್ಮಿಕ್ಕುತ್ತವೆ. ಇದು ಸರಾಸರಿ ೮೪೯ ಮೀಟರ್‌ಅಗಲವಾಗಿದ್ದು, ೯೦ ಮೀಟರ್‌ಎತ್ತರದಿಂದ ನೀರು ಕೆಳಕ್ಕೆ ಬೀಳುತ್ತದೆ. ಏಷಿಯಾದ ಎರಡನೇ ದೊಡ್ಡ ಜಲವಿದ್ಯುತ್‌ಸ್ಟೇಷನ್‌ಈ ಜಲಪಾತದಿಂದ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ ತಯಾರಾಗುತ್ತಿದ್ದ ಜಲವಿದ್ಯುತ್‌ಮೊದಲು ಕೋಲಾರದ ಚಿನ್ನದ ಗಣಿಯಲ್ಲಿ ಬಳಸಲು ಪ್ರಾರಂಭವಾಗಿ, ಕೋಲಾರವು ಏಷಿಯಾದಲ್ಲಿ ಜಲವಿದ್ಯುತ್‌ಬಳಸಿದ ಮೊದಲ ಪಟ್ಟಣವೆಂದು ಹೆಸರಾಗಿದೆ. ಜುಲೈನಿಂದ ಅಕ್ಟೋಬರ್‌ವರೆಗೆ ನೀರಿನ ಹರಿವು ನೋಡಲು ರಮಣೀಯವಾಗಿರುತ್ತದೆ.

 

ಕೊಡಗು ಜಿಲ್ಲೆ

ದೂರ: ಪಿರಿಯಾಪಟ್ಟಣದ ಬೈಲಕುಪ್ಪೆಯಿಂದ ೫ ಕಿ.ಮೀ.

ನಿಸರ್ಗಧಾಮ

ಮೈಸೂರಿನ ಪಶ್ಚಿಮಕ್ಕೆ ಕೊಡಗು ಜಿಲ್ಲೆ ಇದ್ದು ಪಿರಿಯಾಪಟ್ಟಣದ ಸಮೀಪ ಕುಶಾಲನಗರ ನಿಸರ್ಗಧಾಮ, ಹಾರಂಗಿ ಅಣೆಕಟ್ಟು ಇವೆ.

ಕುಶಾಲನಗರದಿಂದ ೨ ಕಿ.ಮೀ. ದೂರದಲ್ಲಿ ಪ್ರಕೃತಿಪ್ರಿಯರ ಅಚ್ಚುಮೆಚ್ಚಿನ ದ್ವೀಪ ಪ್ರದೇಶವಾದ ಕಾವೇರಿ ನಿಸರ್ಗಧಾಮವಿದೆ. ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆ ಮೇಲೆ ನಡೆಯುವ ಅನುಭವವೇ ರೋಮಾಂಚನಕಾರಿ. ಬಿದಿರಮೆಳೆಗಳ ನಡುನಡುವೆ ನಿರ್ಮಿಸಲ್ಪಟ್ಟ ಕುಟೀರಗಳು, ತೂಗು ಉಯ್ಯಾಲೆಗಳು, ಸುತ್ತಲಿನ ಪರಿಸರವನ್ನು ಮೇಲಿನಿಂದ ವೀಕ್ಷಿಸಲು ನಿರ್ಮಿಸಿರುವ ಮರದ ಅಟ್ಟಣಿಗೆಗಳು, ಆನೆ ಸವಾರಿ, ದೋಣಿ ವಿಹಾರ ಇಲ್ಲಿನ ವಿಶೇಷಗಳು. ಸಾಕುಪ್ರಾಣಿಗಳಾದ ಜಿಂಕೆ, ಮೊಲಗಳ ಒಡನಾಟ ಮನಸ್ಸಿಗೆ ಮುದ ನೀಡುತ್ತವೆ.

 

ಹಾರಂಗಿ

ದೂರ: ಪಿರಿಯಾಪಟ್ಟಣ ಬೈಲುಕುಪ್ಪೆಯಿಂದ ೧೦ ಕಿ.ಮೀ.

ಕುಶಾಲನಗರದಿಂದ ೮ ಕಿ.ಮೀ. ದೂರದಲ್ಲಿ ಕೊಡಗಿನ ಪ್ರಮುಖ ಜಲಾಶಯವಾದ ಹಾರಂಗಿ ಇದೆ. ನದಿಯ ತಳಮಟ್ಟದಿಂದ ೪೭ ಮೀಟರ್‌ಎತ್ತರದಲ್ಲಿ ಅಣೆಕಟ್ಟು ಇದ್ದು, ೮೪೬ ಮೀಟರ್‌ಉದ್ದವನ್ನು ಹೊಂದಿದೆ. ಅಣೆಕಟ್ಟಿನಿಂದ ನಾಲ್ಕು ದ್ವಾರಗಳಲ್ಲಿ ನೀರು ರಭಸದಿಂದ ಧುಮ್ಮಿಕ್ಕುವ ದೃಶ್ಯ ಮನಮೋಹಕ.

 

ದುಬಾರೆ ಆನೆ ಶಿಬಿರ

ಕಾವೇರಿ ನದಿತೀರದ ದುಬಾರೆ ಆನೆ ಶಿಬಿರದಲ್ಲಿ ಕಾಡಾನೆಗಳನ್ನು ಹಿಡಿದು ಪಳಗಿಸುತ್ತಾರೆ. ಆನೆ ಸವಾರಿ, ದೋಣಿ ವಿಹಾರ ಇಲ್ಲಿನ ಮುಖ್ಯ ಆಕರ್ಷಣೆ, ಮಳೆಗಾಲದ ಕಾವೇರಿ ನದಿಯ ರುದ್ರ ರಮಣೀಯ ದೃಶ್ಯವು ಪ್ರವಾಸಿಗರ ಮನಸೂರೆಗೊಳಿಸುತ್ತದೆ.

ದುಬಾರೆ