ಮೈಸೂರು ತಾಲೂಕು ಪ್ರವಾಸಿ ತಾಣಗಳು

ಪ್ರತಿಯೊಬ್ಬ ಪ್ರವಾಸಿಯೂ ಭೇಟಿ ನೀಡಲು ಇಚ್ಚಿಸುವ ಮೈಸೂರು ದಸರಾ ಉತ್ಸವಕ್ಕಾಗಿ, ರಾಜಪರಂಪರೆಗಾಗಿ, ಸಂಗೀತ, ಸಾಹಿತ್ಯ, ಕಲೆಗಳ ಪೋಷಣೆಗಾಗಿ, ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳ ಉದ್ಯಮಗಳಿಗಾಗ ಪ್ರಸಿದ್ಧವಾಗಿದೆ. ಮೈಸೂರು ತಾಲ್ಲೂಕಿನ ವಾಯುವ್ಯದಲ್ಲಿ ಕೃಷ್ಣರಾಜನಗರ, ಉತ್ತರದಲ್ಲಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣ, ಪೂರ್ವದಲ್ಲಿ ತಿ. ನರಸೀಪುರ, ದಕ್ಷಿಣದಲ್ಲಿ ನಂಜನಗೂಡು, ಪಶ್ಚಿಮದಲ್ಲಿ ಹುಣಸೂರು ಮತ್ತು ಹೆಚ್‌.ಡಿ.ಕೋಟೆ ತಾಲ್ಲೂಕುಗಳಿವೆ. ಮೈಸೂರು ತಾಲೂಕು ತನ್ನೊಳಗೆ ಮೈಸೂರು ಗ್ರಾಮಾಂತರ ವಲಯ, ಮೈಸೂರು ದಕ್ಷಿಣ ವಲಯ ಹಾಗೂ ಮೈಸೂರು ಉತ್ತರ ವಲಯ ಎಂಬ ಮೂರು ಶೈಕ್ಷಣಿಕ ವಲಯಗಳನ್ನು ಒಳಗೊಂಡಿದೆ.

 

ಮುಖ್ಯ ಮೈಸೂರು ಅರಮನೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೧ ಕಿ.ಮೀ.

 ೧೮೯೭ರಲ್ಲಿ ಕಟ್ಟಲಾರಂಭಿಸಿ ೧೯೧೨ರಲ್ಲಿ ಮುಕ್ತಾಯಗೊಳಿಸಲಾದ ಈ ಅರಮನೆಗೆ ಅಂಬಾವಿಲಾಸ ಅರಮನೆ ಎಂದೂ ಹೆಸರು. ಈ ಅರಮನೆಯು ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿದ್ದು ಇಂಡೋ ಸಾರ್ಸೆನಿಕ್‌ಶೈಲಿಯಲ್ಲಿದೆ.

ಮೈಸೂರು ಅರಮನೆ

ಅರಮನೆಯ ಹೊರಭಿತ್ತಿಗಳಲ್ಲಿ ಹಕ್ಕಿಗಳು, ಪ್ರಾಣಿಗಳು ಹಾಗೂ ಇತರ ಕೆತ್ತನೆ ಇದೆ. ಒಳಭಾಗದ ಮುಚ್ಚಿಗೆಯಲ್ಲಿ ಕೆತ್ತನೆ ಇದೆ. ಅರಮನೆಯ ಪ್ರವೇಶವಾದಂತೆ ಬೊಂಬೆ ತೊಟ್ಟಿಲು ಮೊದಲು ಕಾಣಸಿಗುತ್ತದೆ. ಇಲ್ಲಿ ೧೯ ಮತ್ತು ೨೦ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಪೂರ್ವವಾದ ಕೆತ್ತನೆಯಿರುವ ಕಂಬಗಳಿಂದ ಕೂಡಿದ ವಿಶಾಲವಾದ ಹಾಲ್‌ಗಳು, ದರ್ಬಾರ್‌ಹಾಲ್‌, ಕಲ್ಯಾಣ ಮಂಟಪಗಳು, ಆಯುಧಗಾರಗಳಿವೆ.

ಜೀವಂತ ಎನಿಸುವ ದಸರಾ ಮೆರವಣಿಗೆಯಲ್ಲಿ ಪ್ರತಿರೂಪದ ಬೊಂಬೆಗಳನ್ನು ಬೊಂಬೆಮನೆಯಲ್ಲಿ ನೋಡಬಹುದು. ದಸರಾದ ಸಂದರ್ಭದಲ್ಲಿ ಇಲ್ಲಿ ದೇಶದ ಸುಪ್ರಸಿದ್ಧ ಸಂಗೀತ ಕಛೇರಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ರಾಜ ಮನೆತನದ ಖಾಸಗ ವಸ್ತು ಸಂಗ್ರಹಾಲಯವೂ ಇದೆ. ದಸರಾ ಸಂದರ್ಭದಲ್ಲಿ ಚಿನ್ನದ ಸಿಂಹಾಸನ ಸಾರ್ವಜನಿಕರಿಗಾಗಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಹಾಗೂ ಚಿನ್ನದ ಅಂಬಾರಿಯಲ್ಲಿ ಭುವನೇಶ್ವರಿ ದೇವಿಯ ದಸರಾ ಮೆರವಣಿಗೆ ನಡೆಯುತ್ತದೆ.

ಬೆಳಿಗ್ಗೆ ೧೦:೦೦ರಿಂದ ಸಂಜೆ ೫:೩೦ರ ತನಕ ಅರಮನೆ ವೀಕ್ಷಿಸಲು ಅವಕಾಶವಿದೆ. ಶನಿವಾರ, ಭಾನುವಾರ ಮತ್ತು ಸರಕಾರಿ ರಜಾ ದಿನಗಳಂದು ಸಂಜೆ ೭:೦೦ ಗಂಟೆಯಿಂದ ೮:೦೦ ಗಂಟೆಯವರೆಗೆ ಇಡೀ ಅರಮನೆಗೆ ವಿದ್ಯುದ್ದೀಪಾಲಂಕಾರ ಇರುತ್ತದೆ.

ಜಂಬೂಸವಾರಿ

 

ಜಗನ್ಮೋಹನ ಅರಮನೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೧ ಕಿ.ಮೀ.

ಜಗನ್ಮೋಹನ ಅರಮನೆ

ಮುಖ್ಯ ಅರಮನೆಯ ಪೂರ್ವ ಭಾಗದಲ್ಲಿ ಜಗನ್ಮೋಹನ ಅರಮನೆಯನ್ನು ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌ಆಡಳಿತಾವಧಿಯಲ್ಲಿ ೧೮೬೧ರಲ್ಲಿ ಕಟ್ಟಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆ ಮಾಡಲ್ಪಟ್ಟಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು ೧೯೧೫ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡ ಈ ವಸ್ತು ಸಂಗ್ರಹಾಲಯವನ್ನು ಒಂದು ಸಮಿತಿಗೆ ವಹಿಸಲಾಯಿತು. ನಂತರ ಈ ಅರಮನೆಗೆ ೧೯೫೫ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ಆರ್ಟ್‌‌ಗ್ಯಾಲರಿ ಎಂದು ಹೆಸರು ಬಂದಿತು.

ಈ ಗ್ಯಾಲರಿಯಲ್ಲಿ ಟ್ರಾವೆಂಕೂರಿನ ರಾಜ ರವಿ ವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ, ಜಪಾನ್‌ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೊಗಲ್‌, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಉತ್ತಮ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹ ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ.

೧೦:೦೦ ಗಂಟೆಯಿಂದ ಸಂಜೆ ೫:೩೦ ರವರೆಗೆ ವೀಕ್ಷಣೆಗೆ ಅವಕಾಶವಿದೆ.

 

ರೈಲ್ವೇ ಮ್ಯೂಸಿಯಂ, ರೈಲ್ವೇ ನಿಲ್ದಾಣ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೧ ಕಿ.ಮೀ.

ಉಗಿಬಂಡಿ

ರೈಲ್ವೇ ನಿಲ್ದಾಣ

೧೯೭೯ರಲ್ಲಿ ಮೈಸೂರಿನಲ್ಲಿ ಸ್ಥಾಪಿತವಾದ ರೈಲ್ವೇ ಮ್ಯೂಸಿಯಂ ಭಾರತದಲ್ಲಿ ಪ್ರಪ್ರಥಮ ಎಂಬ ಪಟ್ಟಿಗೆ ಸೇರುತ್ತದೆ. ನಿಲ್ದಾಣದ ಹೊರ ದ್ವಾರದಲ್ಲಿ ವಿಂಟೇಜ್‌ಲೋಕೋಮೋಟಿವ್ಸ್‌ಪ್ರದರ್ಶಿಸಲ್ಪಟ್ಟಿದೆ. ಇಲ್ಲಿರುವ ಚಾಮುಂಡಿ ಗ್ಯಾಲರಿಯಲ್ಲಿ ರೈಲ್ವೆ ಇತಿಹಾಸಕ್ಕೆ ಸಂಬಂಧಿಸಿದ ಪ್ರಖ್ಯಾತ ವರ್ಣಚಿತ್ರಗಳಿವೆ. ಬೇರೆ ಬೇರೆ ಕಾಲದಲ್ಲಿ ಬಳಸುತ್ತಿದ್ದ ವಿವಿಧ ರೀತಿಯ ಬೋಗಿಗಳು, ಎಂಜಿನ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಬ್ಯಾಟರಿ ಚಾಲಿತ ಚಿಕ್ಕ ರೈಲಿನಲ್ಲಿ ಕುಳಿತು ಸಂದರ್ಶಕರು ಸಂಗ್ರಹಾಲಯದ ಮೈದಾನದಲ್ಲಿ ಸವಾರಿ ಮಾಡಬಹುದು. ಮೈಸೂರಿನ ಮಹಾರಾಜರು ಪಯಣಿಸುತ್ತಿದ್ದ ಎರಡು ಬೋಗಿಗಳನ್ನೂ ಶ್ರೀ ರಂಗ ಪೆವಿಲಿಯನ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಇಲ್ಲಿ ಮೊದಲ ಉಗಿಬಂಡಿ ಹಾಗೂ ವಿವಿಧ ಸಿಗ್ನಲ್‌ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಭಾರತದಲ್ಲಿ ರೈಲ್ವೇ ಬೆಳೆವಣಿಗೆಯ ಇತಿಹಾಸ ತಿಳಿಯಬೇಕಾದರೆ ಈ ಮ್ಯೂಸಿಯಂಗೆ ಭೇಟಿ ನೀಡಬೇಕು.

ಮ್ಯೂಸಿಯಂ ಪೂರ್ವಾಹ್ನ ೧೦:೦೦-೧:೩೦ ಹಾಗೂ ಅಪರಾಹ್ನ ೩:೦೦-೫:೦೦ರವರೆಗೆ ತೆರೆದಿರುತ್ತದೆ.

ಪಕ್ಕದಲ್ಲಿಯೇ ಇರುವ ರೈಲ್ವೇ ನಿಲ್ದಾಣವು ಮೈಸೂರನ್ನು ಬೆಂಗಳೂರು, ಚಾಮರಾಜನಗರ ಹಾಗೂ ಹಾಸನಗಳೊಂದಿಗೆ ಬೆಸೆಯುವ ಕೊಂಡಿಯಾಗಿದೆ. ಇಲ್ಲಿಂದ ಮುಂಬೈ, ನವದೆಹಲಿ, ಚೆನ್ನೈ, ಜೋಧಪುರಗಳಿಗೆ ನೇರ ರೈಲು ಸಂಪರ್ಕವಿದೆ.

 

ಮೈಸೂರು ಮೃಗಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೧ ಕಿ.ಮೀ.

ಮೈಸೂರು ಮೃಗಾಲಯ

೧೮೯೨ರಲ್ಲಿ ಅಂದಿನ ಮೈಸೂರು ರಾಜರಾದ ಹತ್ತನೇ ಜಯಚಾಮರಾಜ ಒಡೆಯರ್‌ರವರ ಆಡಳಿತಾವಧಿಯಲ್ಲಿ ಜಯಚಾಮರಾಜೇಂದ್ರ ಮೃಗಾಲಯವು ಪ್ರಾರಂಭವಾಯಿತು. ೧೯೨೦ರವರೆಗೆ ರಾಜ ಪರಿವಾರದವರಿಗೆ ಮಾತ್ರ ಸೀಮಿತವಾಗಿ ನಂತರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಯಿತು. ಸುಮಾರು ೨೫೦ ಎಕರೆ ಪ್ರದೇಶಕ್ಕೆ ಈ ಮೃಗಾಲಯವು ವ್ಯಾಪಿಸಿದೆ.

ಈ ಮೃಗಾಲಯದಲ್ಲಿ ಒರಾಂಗುಟಂನಿಂದ ಕಾಂಗರೂವರೆಗೆ ಸುಮಾರು ೧೫೦೦ ಪ್ರಾಣಿಗಳಿವೆ.

ಈ ಮೃಗಾಲಯದಲ್ಲಿ ಒರಾಂಗುಟಂನಿಂದ ಕಾಂಗರೂವರೆಗೆ ಸುಮಾರು ೧೫೦೦ ಪ್ರಾಣಿಗಳಿವೆ. ದೇಶದಲ್ಲಿ ಪ್ರಪ್ರಥಮವಾಗಿ ಮೈಸೂರು ಮೃಗಾಲಯವು ಗೊರಿಲ್ಲ ಮತ್ತು ಚಿಂಪಾಂಜಿಗಳನ್ನು ಹೊಂದಿದೆ. ಇಲ್ಲಿನ ಆಫ್ರಿಕಾದ ಆನೆಗಳು, ಬಿಳಿ ಹುಲಿ ಮೊದಲಾದ ಅನೇಕ ಪ್ರಾಣಿಗಳನ್ನು ಆಫ್ರಿಕಾ, ಅಮೇರಿಕಾ ಮತ್ತು ಆಸ್ಟ್ರೇಲಿಯ ಮೊದಲಾದ ಹೊರದೇಶಗಳಿಂದ ತರಿಸಲಾಗಿದೆ.

ಈ ಮೃಗಾಲಯದಲ್ಲಿ ಪ್ರಾಣೀಗಳ ಸ್ಟಫ್ಡ್‌ಮಾದರಿಗಳಿರುವ ಚಿಕ್ಕ ಮ್ಯೂಸಿಯಂ ಇದೆ. ಸಣ್ಣ ಗ್ರಂಥಾಲಯವಿದೆ. ಇಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಪೋಷಿಸುವ ಯೋಜನೆಯೂ ಇದೆ.

ಪ್ರಾಣಿಗಳ ಬಗ್ಗೆ ಪ್ರೀತಿ, ಕಾಳಜಿ ಬೆಳೆಸವ ಉದ್ದೇಶದಿಂದ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರ ಬಿಡಿಸುವ ಸ್ಪರ್ಧೆಯನ್ನು ಪ್ರತಿ ವರ್ಷವೂ ಮೃಗಾಲಯ ಆಡಳಿತ ವ್ಯವಸ್ಥೆಯಿಂದ ನಡೆಸಲಾಗುತ್ತದೆ.

 

ನ್ಯಾಷನಲ್‌ಮ್ಯೂಸಿಯಂ ಆಫ್ನ್ಯಾಚುರಲ್ ಹಿಸ್ಟರಿ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೨ ಕಿ.ಮೀ.

ನ್ಯಾಷನಲ್‌ ಮ್ಯೂಸಿಯಂ

ರಾಜ್ಯದ ಇತ್ತೀಚಿನ ಭೂವೈಜ್ಞಾನಿಕ ಘಟಕವಾದ ಸಸ್ಯವರ್ಗ ಮತ್ತು ಪ್ರಾಣಿವರ್ಗದ ಸಂಪತ್ತಿನ ಮಾಹಿತಿಯನ್ನು ಒದಗಿಸುವ ಪ್ರಮುಖ ಉದ್ದೇಶದಿಂದ ಮೈಸೂರು ನಗರದಲ್ಲಿ ಮೊದಲು ಸ್ಥಾಪಿಸಲ್ಪಟ್ಟಿತು. ಈ ಮ್ಯೂಸಿಯಂನಲ್ಲಿ ಸಸ್ಯ ಮತ್ತು ಪ್ರಾಣಿವರ್ಗ, ಜೈವಿಕ ಮತ್ತು ಅಜೈವಿಕ ಘಟಕಗಳ ನಡುವೆ ಪರಿಸರದ ಸಮತೋಲನವನ್ನು ಕ್ರಮವಾಗಿ ಪ್ರದರ್ಶನಕ್ಕೆ ಇರಿಸಲಾಗಿದೆ. ಅಲ್ಲದೆ ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಈ ಮ್ಯೂಸಿಯಂನ ಗ್ಯಾಲರಿಯಲ್ಲಿ ಮಾನವ ಮತ್ತು ಪರಿಸರದ ವರ್ಗಗಳು, ಪರಿಸರ ವಿಜ್ಞಾನ, ಭೂಮಿಯ ಕಾಲಕ್ರಮಕ್ಕೆ ಅನುಗುಣವಾಗಿ ಹುಟ್ಟಿದ ಜೀವ ಸಂಕುಲಗಳು, ಜೈವಿಕ ವೈವಿಧ್ಯತೆಯ ಬಗ್ಗೆ ಹಾಗೂ ಸಂರಕ್ಷಣೆಯ ಬಗ್ಗೆ ಮಾದರಿಗಳ ಪ್ರದರ್ಶನವಿದೆ. ಇವು ಹೆಚ್ಚಾಗಿ ಪಶ್ಚಿಮ ಘಟ್ಟದಲ್ಲಿ ದೊರೆಯುವ ಜೀವ ಸಂಕುಲಗಳನ್ನು ಒಳಗೊಂಡಿವೆ. ವಿವಿಧ ವಯಸ್ಸಿನ ಮಕ್ಕಳ ಹಾಗೂ ವಯಸ್ಕರ ಕುತೂಹಲವನ್ನು ತಣಿಸಲು ನವೀನ ಉಪಕರಣಗಳಿವೆ.

ದೃಕ್‌ಶ್ರವಣ ಮಾಧ್ಯಮವನ್ನು ಈ ಮ್ಯೂಸಿಯಂನಲ್ಲಿ ಬಳಸುತ್ತಿದ್ದು, ತಾವೇ ಪ್ರಯೋಗ ಮಾಡಲು ಹೆಚ್ಚು ಅವಕಾಶ ನೀಡಲಾಗುತ್ತದೆ.

ಪೂರ್ವಾಹ್ನ ೧೦:೦೦ ರಿಂದ ಸಂಜೆ ೫:೦೦ ರ ತನಕ ವೀಕ್ಷಣೆಗೆ ಅವಕಾಶವಿದೆ. ಮಂಗಳವಾರ ರಜಾ.

 

ಸೈಂಟ್‌ಫಿಲೋಮಿನಾಸ್‌ ಚರ್ಚ್‌

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೧ ಕಿ.ಮೀ.

ಸೈಂಟ್‌ ಫಿಲೋಮಿನಾಸ್‌ ಚರ್ಚ್‌

೧೭೫ ಅಡಿ ಎತ್ತರದ ಜೋಡಿ ಗೋಪುರಗಳಿಂದ ಕೂಡಿದ ಈ ಚರ್ಚ್‌ನ್ನು ಫ್ರೆಂಚ್‌ವಾಸ್ತುಶಿಲ್ಪಿಗಳು ಗಾಥಿಕ್‌ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌೧೯೩೩ರಲ್ಲಿ ಇದರ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. ಇಲ್ಲಿ ಗ್ರೀಸ್‌ದೇಶದ ಮೂರನೆಯ ಶತಮಾನದ ಸಂತ ಫಿಲೋಮಿನಾರ ವಿಗ್ರಹವಿದೆ. ಬಣ್ಣದ ಗಾಜಿನ ಕಿಟಕಿಗಳಲ್ಲಿ ಕ್ರಿಸ್ತನ ಜನನ, ಕೊನೆಯ ಔತಣ, ಕ್ರಿಸ್ತನನ್ನು ಶಿಲುಬೆಗೇರಿಸುವುದೇ ಮೊದಲಾದ ಚಿತ್ರಗಳಿವೆ.

 

ಪ್ರಾಚ್ಯ ಸಂಶೋಧನಾ ಸಂಸ್ಥೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೩ ಕಿ.ಮೀ.

ಪ್ರಾಚ್ಯ ಸಂಶೋಧನಾ ಸಂಸ್ಥೆಯು ೧೮೯೧ರಲ್ಲಿ ಚಾಮರಾಜ ಒಡೆಯರ್‌ರವರ ಸೂಚನೆಯ ಮೇರೆಗೆ ಆರಂಭವಾಯಿತು. ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಲಭ್ಯವಿರುವ ಅಪರೂಪದ ಹಸ್ತಪ್ರತಿಗಳನ್ನು ಸಂಪಾದಿಸಿ, ಪ್ರಕಟಿಸುತ್ತದೆ. ಇಲ್ಲಿ ೩೩೦೦೦ದಷ್ಟು ತಾಳೆಗರಿ ಲೇಖನಗಳ ಸಂಗ್ರಹವಿದೆ. ಇದುವರೆಗೆ ೨೦೦ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರತರಲಾಗಿದೆ. ಇದು ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಕಛೇರಿಯಾದ ಕ್ರಾಫರ್ಡ್‌‌ಹಾಲ್‌ಗೆ ಸಮೀಪದಲ್ಲಿದೆ.

 

ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೪ ಕಿ.ಮೀ.

ಕ್ರಾಫರ್ಡ್‌ಹಾಲ್‌

ಮೈಸೂರು ವಿಶ್ವವಿದ್ಯಾನಿಲಯವು ೧೯೧೬ ಜುಲೈ ೧೭ ರಂದು ಮೈಸೂರಿನ ಆಗಿನ ದಿವಾನರಾಗಿದ್ದ ಸರ್‌ಎಂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತಾವಧಿಯಲ್ಲಿ ಸ್ಥಾಪಿಸಲ್ಪಟ್ಟಿತು. ಪ್ರಾರಂಭದಲ್ಲಿ ವಿಜ್ಞಾನ, ಕಲೆ, ವೈದ್ಯಕೀಯ ಹಾಗೂ ತಂತ್ರಜ್ಞಾನ ನಾಲ್ಕು ವಿಭಾಗದಲ್ಲಿ ಶಿಕ್ಷಣ ನೀಡಲು ಆರಂಭಿಸಿದರು. ವಿಶ್ವವಿದ್ಯಾನಿಲಯದಲ್ಲಿ ೨೮ ಬೋಧನಾ ಶಾಖೆಗಳಲ್ಲಿ ಅಧ್ಯಯನ ಪ್ರಾರಂಭಸಿ ಪ್ರತ್ಯೇಕ ಪರೀಕ್ಷಾ ಮಂಡಳಿಯನ್ನು ರಚಿಸಲಾಯಿತು. ೧೯೧೬ರಲ್ಲಿ ಆಡಳಿತಕ್ಕೆ ೧೨ ಇತರ ಸಂಸ್ಥೆಗಳಿದ್ದವು.

೧೯೬೦ರಲ್ಲಿ ಕುಕ್ಕರಹಳ್ಳಿ ಕೆರೆಯ ಪಶ್ಚಿಮಕ್ಕಿರುವ ಈಗಿನ ೭೩೯ ಎಕರೆಗಳ ಕ್ಯಾಂಪಸ್‌ನಲ್ಲಿ ಕಾರ್ಯಾರಂಭ ಮಾಡಲಾರಂಭಿಸಿತು. ಕುವೆಂಪುರವರು ಈ ಕ್ಯಾಂಪಸ್‌ನ್ನು ಮಾನಸಗಂಗೋತ್ರಿ ಎಂದು ಕರೆದರು. ಹಾಸನದ ಹೇಮಗಂಗೋತ್ರಿಯಲ್ಲಿ ಹಾಗೂ ಮಂಡ್ಯದ ತೂಬಿನಕೆರೆಯಲ್ಲಿ ಶ್ರೀ ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ ಪದವಿ ಕೇಂದ್ರವನ್ನು ಸ್ಥಾಪಿಸಲಾಯಿತು. ದೇಶದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಹಾಗೂ ಅನಂತಮೂರ್ತಿಯವರು ಇಲ್ಲಿ ಪ್ರಾಧ್ಯಾಪಕರಾಗಿದ್ದರು. ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಎಸ್‌ರಾಧಾಕೃಷ್ಣನ್‌ರವರು ಕೂಡಾ ಇಲ್ಲಿ ಪ್ರಾಧ್ಯಾಪಕರಾಗಿದ್ದರು.

 

ಜಾನಪದ ವಸ್ತು ಸಂಗ್ರಹಾಲಯ, ಮಾನಸಗಂಗೋತ್ರಿ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೪ ಕಿ.ಮೀ.

ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಜಯಲಕ್ಷ್ಮಿ ಅಮ್ಮಣ್ಣಿಯವರ ಅರಮನೆ ಕಟ್ಟಡದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಿಂದ ಜನಪದ ವಸ್ತುಗಳನ್ನು ಸಂಗ್ರಹಿಸಿ ಇಲ್ಲಿ ಇಡಲಾಗಿದೆ. ಚಾಮರಾಜ ಒಡೆಯರ್‌ತಮ್ಮ ಮಗಳಿಗಾಗಿ ೧೯೦೫ರಲ್ಲ ಕಟ್ಟಿಸಿದ ಈ ಅರಮನೆಯು ಅದರ ವಾಸ್ತುಶಿಲ್ಪದ ವಿಶೇಷತೆಗಾಗಿಯೂ ಗಮನ ಸೆಳೆಯುತ್ತದೆ. ಈ ಮ್ಯೂಸಿಯಂ ಪೂವಾಹ್ನ ೧೦:೦೦ ರಿಂದ ಸಂಜೆ ೫:೦೦ ಗಂಟೆಯವರೆಗೂ ತೆರೆದಿರುತ್ತದೆ. ಭಾನುವಾರ ರಜಾದಿನ.

 

ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ

ವೆಲಿಂಗ್‌ಟನ್‌ಹೌಸ್‌ಕಟ್ಟಡದಲ್ಲಿರುವ ಈ ಸಂಗ್ರಹಾಲಯದಲ್ಲಿ ಬೇರೆ ಬೇರೆ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ರಾಷ್ಟ್ರೀಯ ಜಾನಪದ ಕಲಾ ಸಂಗ್ರಹಾಲಯವೂ ಇದೇ ಕಟ್ಟಡದಲ್ಲಿದೆ. ಇದರಲ್ಲಿ ಉನ್ನತ ಶಿಖರ ಹಿಮಾಲಯ, ಪೂರ್ವ ರಾಜ್ಯಗಳ ನೈಸರ್ಗಿಕ ಸಂಪತ್ತು, ಪಾಟ್‌, ವರ್ಲಿ, ಮಧುಬನಿ, ಪ್ರತಿಬಿಂಬಿಸುವ ಚಿತ್ರಗಳಿವೆ. ಮೊದಲ ಮಹಡಿಯಲ್ಲಿ ರಾಜ್ಯದ ಕಲೆಗಳನ್ನು ಬಿಂಬಿಸುವ ಸಂಗ್ರಹಾಲಯವಿದೆ. (ಕೆ.ಎಸ್‌.ಆರ್‌.ಟಿ.ಸಿ. ಬಸ್‌ನಿಲ್ದಾಣದ ಸಮೀಪವಿದೆ).

ವೆಲಿಂಗ್‌ಟನ್‌ ಹೌಸ್‌

 

ಚಾಮುಂಡಿ ಬೆಟ್ಟ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೧೫ ಕಿ.ಮೀ.

ಚಾಮುಂಡಿಬೆಟ್ಟ ೭೯ ಕೋಟಿ ವರ್ಷಗಳಷ್ಟು ಹಳೆಯದು

ಚಾಮುಂಡೇಶ್ವರಿ ದೇವಾಲಯ

೧೫೦ಮೀ ಎತ್ತರದ ಈ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಾಲಯವಿದೆ. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಬಹುದಾದ ೧೦೫೦ ಮೆಟ್ಟಿಲುಗಳ ಕಾಲುದಾರಿಯಿದೆ. ಈ ಬೆಟ್ಟ ೭೯ ಕೋಟಿ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ೧೮೨೭ರಲ್ಲಿ ಕಟ್ಟಲಾದ ಚಾಮುಂಡೇಶ್ವರಿ ದೇವಾಲಯಕ್ಕೆ ಏಳು ಅಂತಸ್ತುಗಳ ಗೋಪುರವಿದೆ. ದೇವಸ್ಥಾನದ ಹಾದಿಯಲ್ಲಿ ಮಹಿಷಾಸುರ ವಿಗ್ರಹವನ್ನು ನೋಡಬಹುದು. ಬೆಟ್ಟದ ನಡುಭಾಗದಲ್ಲಿರುವ ಏಕಶಲಾ ನಂದಿ ವಿಗ್ರಹವು ತನ್ನ ಕೆತ್ತನೆಗಾಗಿ, ಗಂಭೀರ ಮುದ್ರೆಗಾಗಿ ಪ್ರಸಿದ್ಧವಾಗಿದೆ. ಬೆಟ್ಟವು ಮೈಸೂರಿನಿಂದ ೧೪ ಕಿ.ಮೀ.ಗಳಷ್ಟು ದೂರವಿದೆ. ಬೆಟ್ಟದ ಸುತ್ತಲಿನ ಅರಣ್ಯವನ್ನು ರಕ್ಷಿತಾರಣ್ಯ ಎಂದು ಘೋಷಿಸಲಾಗಿದೆ.

ಈ ಬೆಟ್ಟದಲ್ಲಿ ಸಸ್ಯವರ್ಗವು ೪೪೨ ಹೂ ಬಿಡುವ ಸಸ್ಯ ಪ್ರಬೇಧಗಳನ್ನೊಳಗೊಂಡಿದೆ. ಇದರೊಂದಿಗೆ ೩೯ ಜಾತಿಯ ಪಕ್ಷಿಗಳನ್ನು ಹಾಘೂ ಚಿರತೆ, ಹಾವು ಮುಂತಾದ ಪ್ರಾಣಿಗಳ ಇರುವಿಕೆಯನ್ನು ಗುರುತಿಸಲಾಗಿದೆ. ಬೆಟ್ಟದ ಮೇಲಿನ ಅರಣ್ಯವನ್ನು ಸಂರಕ್ಷಿತ ವಲಯವೆಂದು ಘೋಷಿಸಲಾಗಿದೆ.

ಬೆಟ್ಟದಲ್ಲಿ ರಾಜೇಂದ್ರವಿಲಾಸ ಮ್ಯೂಸಿಯಂ, ದೇವಿಕೆರೆ, ನಂದಿ, ಮಹಿಷಾಸುರ ಪ್ರತಿಮೆಗಳನ್ನು ನೋಡಬಹುದು.

 

ಕಾರಂಜಿಕೆರೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೩ ಕಿ.ಮೀ.

ಕಾರಂಜಿಕೆರೆ

ಮೈಸೂರಿನಿಂದ ಚಾಮುಂಡಿ ಬೆಟ್ಟದ ಕಡೆಗೆ ಹೋಗುವಾಗ ಮೈಸೂರು ಮೃಗಾಲಯದ ಬಳಿಕ ರಸ್ತೆಯ ಎಡಭಾಗದಲ್ಲಿ ಕಾರಂಜಿಕೆರೆ ಇದೆ. ಸುಮಾರು ೯೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆಯನ್ನು ಈಗ ವಿಹಾರ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ. ವಿವಿಧ ಪಕ್ಷಿಗಳಿಗೆ ಆಶ್ರಯತಾಣವಾಗಿರುವ ಈ ಕೆರೆ ಚಿಟ್ಟೆಗಳ ಉದ್ಯಾನವನವೂ ಹೌದು. ಇಲ್ಲಿ ದೋಣಿವಿಹಾರ ಸೌಲಭ್ಯವೂ ಇದೆ. ಮಂಗಳವಾರ ರಜಾದಿನ. ಉಳಿದಂತೆ ಬೆಳಗ್ಗೆ ೧೦:೦೦ ರಿಂದ ಸಂಜೆ ೫:೦೦ ರ ತನಕ ಪ್ರವೇಶವಿದೆ.

 

ಲಿಂಗಾಂಬುದಿ ಕೆರೆ

ಮೈಸೂರಿನ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ೨೫೦ಕ್ಕೂ ಹೆಚ್ಚು ಪ್ರಬೇಧಗಳ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಇಲ್ಲಿರುವ ಮೂಲಿಕಾ ವನವು ಸಂಶೋಧನಾ ವಿದ್ಯಾರ್ಥಿಗಳ ಆಸಕ್ತಿಯ ತಾಣ. ಕೆರೆಯ ಸುತ್ತಲೂ ನಡೆಯಲು ಅನುಕೂಲವಿರುವ ಕಾಲುದಾರಿಯಿದೆ.

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೭ ಕಿ.ಮೀ.

ಲಿಂಗಾಂಬುಧಿ ಕೆರೆ

 

ಕುಕ್ಕರಹಳ್ಳಿ ಕೆರೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೫ ಕಿ.ಮೀ.

ಕುಕ್ಕರಹಳ್ಳಿ ಕೆರೆ

 ಹುಣಸೂರು ರಸ್ತೆಗೆ ಹೊಂದಿಕೊಂಡಂತಿರುವ ಕುಕ್ಕರಹಳ್ಳಿ ಕೆರೆ ೨೪೦ ಎಕರೆ ಪ್ರದೇಶ ಆವರಿಸಿಕೊಂಡಿದೆ. ಐದು ಕಿ.ಮೀ. ಸುತ್ತಳತೆಯ ಈ ಕೆರೆ ಮುಂಜಾನೆ ಹಾಗೂ ಸಂಜೆಯ ಅವಧಿಯಲ್ಲಿ ವಾಕಿಂಗ್‌ಹೋಗುವವರ ಪ್ರಿಯ ತಾಣವಾಗಿದೆ. ಈ ಕೆರೆಗೆ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಕೆಲವು ಅಪರೂಪದ ಹಕ್ಕಿಗಳನ್ನು ಕೂಡ ಇಲ್ಲಿ ನೋಡಬಹುದಾಗಿದೆ. ಪಕ್ಷಿತಜ್ಞರಿಗೆ ಇದೊಂದು ಬಹಳ ಆಸಕ್ತಿದಾಯಕವಾದ ತಾಣ. ಈ ಕೆರೆ ರಾಷ್ಟ್ರಕವಿ ಕುವೆಂಪುರವರ ಸ್ಫೂರ್ತಿಯ ತಾಣವಾಗಿತ್ತು.

 

ವಸ್ತುಪ್ರದರ್ಶನ

ವಸ್ತು ಪ್ರದರ್ಶನ

ದಸರಾ ಹಬ್ಬದ ಸಮಯದಲ್ಲಿ ಮೈಸೂರಿನಲ್ಲಿ ಒಂದು ಬೃಹತ್‌ವಸ್ತು ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಇಲ್ಲಿ ಕರ್ನಾಟಕದ ಇತಿಹಾಸವನ್ನು ಹೇಳುವ, ಶಿಕ್ಷಣ, ಕಲೆ, ಸಂಶೋಧನೆ ಕೈಗಾರಿಕೆಗಳಲ್ಲಾಗಿರುವ ಪ್ರಗತಿಯನ್ನು ಬಿಂಬಿಸುವ, ಸಾಹಿತ್ಯ, ಸಾಂಸ್ಕೃತಿಕ ಬೆಳೆವಣಿಗೆಗಳನ್ನು ಪ್ರತಿನಿಧಿಸುವ ಪ್ರದರ್ಶನಗಳಿರುತ್ತದೆ. ಆಹಾರ ಮೇಳ, ಮಕ್ಕಳಿಗಾಗಿ ವಿವಿಧ ಆಟೋಟಗಳು, ಮನರಂಜನಾ ಪಾರ್ಕ್, ವಿವಿಧ ವಸ್ತುಗಳ ಮಾರಾಟ ಮಳಿಗೆಗಳಿಂದ ಕೂಡಿದ ಈ ವಸ್ತು ಪ್ರದರ್ಶನ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

 

ರಂಗಾಯಣ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೫ ಕಿ.ಮೀ.

ಕಲಾ ಮಂದಿರದ ಆವರಣದಲ್ಲಿರುವ ರಂಗಾಯಣ ರಂಗ ಚಟುವಟಿಕೆಗಳಿಗೆ ಹೆಸರಾಗಿದೆ. ದೇಶವಿದೇಶಗಳ ನಾಟಕಕಾರರ ನಾಟಕಗಳನ್ನು ಪ್ರದರ್ಶಿಸುವ ಈ ಕೇಂದ್ರ ಮಕ್ಕಳ ನಾಟಕಗಳ ಕುರಿತಂತೆ ಸ್ವೀಡನ್‌ದೇಶದ ಸಹಕಾರದೊಂದಿಗೆ ವಿಶೇಷ ಕೆಲಸ ಮಾಡುತ್ತಿದೆ. ಇಲ್ಲಿ ಹಮ್ಮಿಕೊಳ್ಳಲಾಗುವ ಮಕ್ಕಳ ಬೇಸಿಗೆ ಶಿಬಿರಗಳು ಬಹಳ ಪ್ರಸಿದ್ಧವಾಗಿವೆ. ರಂಗತರಬೇತಿ ನೀಡುವ ಅನೇಕ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ.

 

ಆಕ್ವಾಡಕ್ಟ್‌ (ಮೇಲ್ಗಾಲುವೆ)

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೭ ಕಿ.ಮೀ.

ಆಕ್ವಾಡಕ್ಟ್‌

ಇವು ಒಂದು ಎತ್ತರದ ಪ್ರದೇಶದಿಂದ ಇನ್ನೊಂದು ಎತ್ತರದ ಪ್ರದೇಶಕ್ಕೆ ನೀರನ್ನು ಸಾಗಿಸಲು ಮಾಡಿದ ಕೃತಕ ಕಾಲುವೆಗಳು. ಭೂಮಿಯ ಮೇಲೆ ರಚಿಸುವ ಕೃತಕ ಕಾಲುವೆಗಳ ಬದಲಾಗಿ ಕಂಬಗಳ ಮೇಲೆ ನಿಲ್ಲಿಸಿದ ಸಿಮೆಂಟ್‌ಕಾಲುವೆ ಮೂಲಕ ಇಲ್ಲಿ ನೀರನ್ನು ಹರಿಸಲಾಗುತ್ತದೆ. ಮೈಸೂರಿನಿಂದ ನಂಜನಗೂಡಿಗೆ ಹೋಗವ ರಸ್ತೆಯಲ್ಲಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಇವುಗಳನ್ನು ಕಾಣಬಹುದು. ಪುರಾತನ ರೋಮನ್‌ಸಾಮ್ರಾಜ್ಯದಲ್ಲಿ ಇಂತಹ ಕಾಲುವೆಗಳ ಬಳಕೆ ಇತ್ತು ಎಂದು ತಿಳಿದುಬರುತ್ತದೆ.

 

ಬೋನ್ಸಾಯ್‌ ಗಾರ್ಡನ್‌

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೫ ಕಿ.ಮೀ.

ಬೋನ್ಸಾಯ್‌ ಗಾರ್ಡನ್‌

ಮೈಸೂರಿನಿಂದ ನಂಜನಗೂಡಿಗೆ ಪ್ರಯಾಣಿಸುವ ರಸ್ತೆಯ ಬಲಭಾಗದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬೋನ್ಸಾಯ್‌ಗಾರ್ಡನ್‌ಇದೆ. ಸಂಗೀತ ಚಿಕಿತ್ಸೆಯಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು ಸ್ಥಾಪಿಸಿರುವ ಮ್ಯೂಸಿಯಂ, ನಾದಮಂಟಪ ಹಾಗೂ ವೆಂಕಟೇಶ್ವರ ದೇವಾಲಯಗಳು ನೋಡಬೇಕಾದ ಸ್ಥಳಗಳು. ಇಲ್ಲಿರುವ ಬೋನ್ಸಾಯ್‌(ಕುಬ್ಜ ಮರಗಳು) ತೋಟ ಬಹಳ ಪ್ರಸಿದ್ಧ.

 

ಸಿ.ಎಫ್.ಟಿ.ಆರ್.ಐ.

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೩ ಕಿ.ಮೀ.

ಸಿ.ಎಫ್‌.ಟಿ.ಆರ್‌.ಐ.

ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ೧೯೫೦ರಲ್ಲಿ ಸ್ಥಾಪಿತವಾಯಿತು. ಈ ಸಂಸ್ಥೆಯನ್ನು ಚೆಲುವಾಂಬಾ ಅರಮನೆ ಆವರಣದಲ್ಲಿ ಆರಂಭಿಸಿಲಾಯಿತು. ಆಹಾರೋತ್ಪಾದನೆ, ಬಳಕೆ, ಆಹಾರ ಸಂಸ್ಕರಣೆ, ಸಂರಕ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವ ಈ ಸಂಸ್ಥೆ ತಯಾರಿಸಿದ ಶಕ್ತಿವರ್ಧಕ ಆಹಾರವನ್ನು ಶಾಲಾ ಮಕ್ಕಳಿಗೆ ನೀಡಲಾಗುತ್ತಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಸಂಸ್ಥೆಯಲ್ಲಿ ಆಹಾರ ತಂತ್ರಜ್ಞಾನ ಸಂಶೋಧನೆ ಕುರಿತಂತೆ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನೂ ಹೊಂದಿದೆ.

 

ಬಾಲಭವನ – ಬನ್ನಿಮಂಟಪ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ: ೩ ಕಿ.ಮೀ.

ಬಾಲಭವನ-ಬನ್ನಿಮಂಟಪ

ಬನ್ನಿಮಂಟಪದಲ್ಲಿರುವ ಬಾಲಭವನ ಆವರಣದಲ್ಲಿ ಮಕ್ಕಳ ರೈಲು ಇದೆ. ಇಲ್ಲಿ ಮಕ್ಕಳಿಗಾಗಿ ವಿವಿಧ ಸಹಪಠ್ಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಬೇಸಿಗೆ ಶಿಬಿರಗಳನ್ನು ಸಂಘಟಿಸಲಾಗುತ್ತದೆ. ಬಾಲಭವನದ ಪಕ್ಕ ಇರುವ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯುತ್ತದೆ.

ದಸರಾ ಮೆರವಣಿಗೆ ಇಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ಆಯ್ಕೆ ಮಾಡಿದ ಜಿಲ್ಲೆಯ ಬಾಲ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸುತ್ತಾರೆ.

 

ಮೈಸೂರು ನಗರ ಪ್ರದಕ್ಷಿಣೆ

ಪುರಭವನ, ದೊಡ್ಡಗಡಿಯಾರ, ಚಿಕ್ಕಗಡಿಯಾರ, ಕೆ.ಎಸ್‌.ಆರ್‌.ಟಿ.ಸಿ. ಬಸ್‌ನಿಲ್ದಾಣ, ಕೆ.ಆರ್‌.ಸರ್ಕಲ್‌, ಸಯಾಜಿ ರಾವ್‌ರಸ್ತೆ, ಚಾಮುಂಡಿವಿಹಾರ ಸ್ಟೇಡಿಯಂ, ಹಾಲಿನ ಡೈರಿ, ಡಯಟ್‌ವಸಂತ ಮಹಲ್‌, ದಸರಾ ವಸ್ತು ಪ್ರದರ್ಶನ ಆವರಣ, ಗನ್‌ಹೌಸ್‌, ೧೦೦ ಅಡಿ ಜೋಡಿ ರಸ್ತೆ, ಜಿಲ್ಲಾಧಿಕಾರಿಗಳ ಕಛೇರಿ, ಕ್ರಾಫರ್ಡ್‌ಹಾಲ್‌, ಓವಲ್‌ಮೈದಾನ, ಆರ್‌.ಐ.ಇ., ವಾಕ್‌ಶ್ರವಣ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಗಾಂಧೀಭವನ, ಕ್ರಿಕೆಟ್‌ಸ್ಟೇಡಿಯಂ, ಓಪನ್‌ಏರ್‌ಥಿಯೇಟರ್‌, ರಾಮಕೃಷ್ಣಾಶ್ರಮ, ಕಲಾಮಂದಿರ, ಆಕಾಶವಾಣಿ, ಸಿ.ಎಫ್‌.ಟಿ.ಆರ್‌.ಐ, ಕೆ.ಆರ್‌. ಆಸ್ಪತ್ರೆ, ದೇವರಾಜ ಅರಸು ರಸ್ತೆ, ಅಗ್ನಿಶಾಮಕ ದಳ ಕಛೇರಿ, ಇನ್ಫೋಸಿಸ್‌, ಆರ್‌ಬಿಐ ನೋಟು ಮುದ್ರಣಾಲಯ, ಇಸ್ಕಾನ್‌. ಮೈಸೂರು ನಗರದಲ್ಲಿ ಸಂಚರಿಸುವಾಗ ಪಾರಂಪರಿಕ ಕಟ್ಟಡಗಳನ್ನೊಳಗೊಂಡ ಮೇಲ್ಕಂಡ ಸ್ಥಳಗಳನ್ನು ನೋಡಬಹುದು.